ಜನನ : ೧೫-೯-೧೯೩೭ ರಂದು ತುಮಕೂರಿನಲ್ಲಿ

ಮನೆತನ : ವೈದಿಕ ಸಂಪ್ರದಾಯದ ಆಚಾರ್ಯರ ಮನೆತನ. ದಿವಾನ್ ಪೂರ್ಣಯ್ಯನವರಿಂದ ಸನ್ಮಾನಿಸಲ್ಪಟ್ಟವರು. ತಂದೆ ಕೊರಟಗೆರೆ ಶ್ರೀನಿವಾಸಾಚಾರ್ಯರು ಸಂಸ್ಕೃತ ಪಂಡಿತರು ಹಾಗೂ ಪ್ರವಚನಕಾರರು ತಾಯಿ ಯಮುನಾಬಾಯಿ.

ಶಿಕ್ಷಣ : ಪ್ರಾರಂಭಿಕ ಶಿಕ್ಷಣ ತಂದೆಯವರಿಂದಲೇ, ಅನಂತರ ಹರಿದಾಸ ರತ್ನಮ ಗೆಜ್ಜೆ ಗೋಪಾಲದಾಸರ ಹರಿಕಥೆಗಳನ್ನು ಕೇಳಿ ಪ್ರಭಾವಿತರಾಗಿ ಕೀರ್ತನಾಭ್ಯಾಸಿಗಳಾದರು. ತುಮಕೂರಿನ ಸಂಗೀತ ವಿದ್ವಾಂಸರಾಗಿದ್ದ ಟಿ.ಕೆ. ರಾಮಮೂರ್ತಿಯವರಲ್ಲಿ ಸಂಗೀತ ಶಿಕ್ಷಣ ಪಡೆದು ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ. ಕನ್ನಡ, ಸಂಸ್ಕೃತ ಹಾಗೂ ಹಿಂದಿ ಭಾಷೆಗಳಲ್ಲಿ ಸಮಾನ ಪ್ರಭುತ್ವ ಹೊಂದಿ ಸಂಸ್ಕೃತ, ಭಾಷಾಧ್ಯಯನದ ಮಹಾ ಪ್ರಬಂಧಕ್ಕಾಗಿ ಪಿ.ಹೆಚ್.ಡಿ. ಪದವಿ ಗಳಿಸಿರುತ್ತಾರೆ.

ಕ್ಷೇತ್ರ ಸಾಧನೆ : ೧೯೫೦ ರಲ್ಲಿ ಅಂದರೆ ತಮ್ಮ ೧೩ನೇ ವಯಸ್ಸಿನಲ್ಲೇ ಕೀರ್ತನ ರಂಗ ಪ್ರವೇಶ ಮಾಡಿ ಮೊದಲ ಕಾಯಕ್ರಮವನ್ನು ತುಮಕೂರಿನಲ್ಲಿ ನೀಡಿದರು. ಗುಲ್ಬರ್ಗ ಸ್ವಾತಂತ್ರೋತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತ  ಇಲಾಖಾ ವತಿಯಿಂದ ಕಾರ್ಯಕ್ರಮ ನೀಡಿರುತ್ತಾರೆ. ಅಖಿಲ ಭಾರತ ಹರಿದಾಸ ಸಮ್ಮೇಳನ, ಬೆಂಗಳೂರು, ಮೈಸೂರು, ತುಮಕೂರಿನ ಮಾಧ್ವ, ಸಂಘಗಳಲ್ಲಿ ಇವರ ಪ್ರವಚನಗಳು ಅವ್ಯಾಹತವಾಗಿ ನಡೆದು ಬಂದಿದೆ. ಪ್ರಮುಖವಾಗಿ ಇವರ ’ಶ್ರೀನಿವಾಸ ಕಲ್ಯಾಣ’ ಕಥಾ ನಿರೂಪಣೆ ಅತ್ಯಂತ ಪ್ರಸಿದ್ಧಿ ಅನೇಕ ಬಾರಿ ಸಪ್ತಾಹಗಳನ್ನು ನಡೆಸಿ ಮಂಗಲೋತ್ಸವ ನಡೆಸಿದ್ದಾರೆ. ಕರ್ನಾಟಕ, ಆಂಧ್ರ, ತಮಿಳುನಾಡುಗಳಲ್ಲೂ ಸಂಚರಿಸಿ ಕಥಾ ಕೀರ್ತನ, ಸಂಗೀತ ಕಚೇರಿಗಳ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕರ್ನಾಟಕ ಗಾನಕಲಾ ಪರಿಷತ್ತಿನ ತಜ್ಞರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ತಮ್ಮದೇ ಆದ “ರಾಘವೇಂದ್ರ ಸಂಗೀತ ಸಭಾ” ಸಂಸ್ಥೆಯ ಮೂಲಕ ವಿದ್ಯಾರ್ಥಿಗಳನ್ನು ಸಂಗೀತ-ಕಥಾ ಕೀರ್ತನಗಳಲ್ಲಿ ತಯಾರು ಮಾಡುತ್ತಿರುವುದೇ ಅಲ್ಲದೆ ಅನೇಕ ಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬರುತ್ತಿದ್ದಾರೆ.

’ಸಂಗೀತ ವಿದ್ವಾನ್ ಟಿ.ಕೆ. ರಾಮಮೂರ್ತಿ’ ಶ್ರೀರಾಮಚಾರಿತ್ರ ಮಂಜರಿ, ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ, ಶ್ಲೋಕ ಸಂಗ್ರಹ ಮೊದಲಾದ ಗ್ರಂಥಗಳ ರಚನಾಕಾರರು.

ಪ್ರಶಸ್ತಿ – ಪುರಸ್ಕಾರಗಳು : ಅನೇಕ ಮಾಧ್ವಮಠಗಳು, ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ. ’ಆಧ್ಯಾತ್ಮ ವಿದ್ಯಾ ಪ್ರವಚನ ಚತುರ’, ’ಹರಿದಾಸರ ಸಾಹಿತ್ಯ ಗಾಯನ ಪ್ರವೀಣ’ ಮುಂತಾದ ಬಿರುದುಗಳೂ ಸಂದಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೮-೯೯ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.