ಜನನ : ೨೨-೧೧-೧೯೨೪ರಂದು ಕಡಬ ಗ್ರಾಮ ಗುಬ್ಬಿ ತಾ|| ತುಮಕೂರು ಜಿಲ್ಲೆ

ಮನೆತನ : ಶಾನುಭೋಗಿಕೆಯ ಮನೆತನ. ತಂದೆ ಕೆ. ಶಾಮರಾವ್ ಶಾನುಭೋಗರು ತಾಯಿ ವೆಂಕಟಲಕ್ಷಮ್ಮ

ಗುರುಪರಂಪರೆ : ಗಮಕಿ ಎಂ. ರಾಘವೇಂದ್ರರಾಯರ ಬಳಿ ಗಮಕ ಶಿಕ್ಷಣ. ಭಾರತ ಬಿಂದೂರಾಯರು, ಕೃಷ್ಣಗಿರಿ ಕೃಷ್ಣರಾಯರು, ಎಂ. ಎಸ್. ಚಂದ್ರಶೇಖರಯ್ಯನವರ ಮಾರ್ಗದರ್ಶನ. ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್, ವಿದ್ವಾನ್ ದೇಶಿಕಾಚಾರ್ಯರ ಬಳಿ ಸಂಗೀತ ಪಾಠ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ತೇರ್ಗಡೆ. ಸಾಮಾನ್ಯ ವಿದ್ಯಾಭ್ಯಾಸ – ಇಂಟರ್ ಮಿಡಿಯಟ್.

ಕ್ಷೇತ್ರ ಸಾಧನೆ : ಕರ್ನಾಟಕ ಗಮಕ ಕಲಾ ಪರಿಷತ್ತು ಸ್ಥಾಪನೆಯಾದಂದಿನಿಂದ ಅದರ ಖಜಾಂಜಿಗಳಾಗಿ ಕೊನೆಯುಸಿರಿನ ತನಕ ಸೇವೆ ಸಲ್ಲಿಸಿದ್ದಾರೆ. ಪರಿಷತ್ತಿನ ಏಳಿಗೆಗಾಗಿ ಶ್ರಮಿಸಿದ್ದಾರೆ. ರಾಜ್ಯದ ನಾನಾ ಭಾಗಗಳಲ್ಲಿ ಸಂಚರಿಸಿ ನೂರಾರು ಕಾವ್ಯ ವಾಚನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಹೆಚ್ಚಿನಂಶ ಷಟ್ಬದೀ ಕಾವ್ಯಗಳೇ ಇವರಿಗೆ ಪ್ರಿಯವಾದರೂ ಸಾಂಗತ್ಯ – ರಗಳೆ, ವಚನ, ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಕಲೆಯನ್ನು ಸಿದ್ಧಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಗಮಕ ತರಗತಿಗಳನ್ನು ನಡೆಸುತ್ತಿದ್ದ ಕಾಲದಲ್ಲಿ ಗಮಕ ಶಿಕ್ಷಣ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಾಚನ ವಿಭಾಗದ ಪರೀಕ್ಷಕರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಗಮಕ ಕಲಾ ಪರಿಷತ್ತಿನ ಪರೀಕ್ಷಾ ಸಮಿತಿಯಲ್ಲೂ ಇವರು ಪರಿವೀಕ್ಷಕರಾಗಿ ಸಹ ದುಡಿದಿದ್ದಾರೆ. ರಾಜಾಜಿನಗರದ ತಮ್ಮ ಮನೆಯಲ್ಲಿ ಗಮಕ ಪ್ರಚಾರ ಮಂಡಲಿಯನ್ನು ಸ್ಥಾಪಿಸಿ ಪ್ರತಿ ತಿಂಗಳೂ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಗಮಕ ತರಗತಿಗಳನ್ನೂ ನಡೆಸಿರುತ್ತಾರೆ. ಸಾಮಾಜಿಕ ಹಾಗೂ ಕಲಾಕ್ಷೇತ್ರಗಳೂ ಸಕ್ರಿಯ ಪಾಲ್ಗೊಳ್ಳುತ್ತಿದ್ದ ಶ್ರೀನಿವಾಸಮೂರ್ತಿಯವರು ಚಾಮರಾಜಪೇಟೆ ಶ್ರೀರಾಮ ಸೇವಾ ಮಂಡಳಿಯ ಸಹ ಕಾರ್ಯದರ್ಶಿಯಾಗಿ, ರವಿ ಕಲಾವಿದರು ನಾಟಕ ಸಂಸ್ಥೆಯ ಸ್ಥಾಪಕ ಸದಸ್ಯರಗಿ ನಾಟಕಗಳಲ್ಲೂ ಪಾತ್ರ ವಹಿಸಿರುತ್ತಾರೆ.

ಪ್ರಶಸ್ತಿ – ಪುರಸ್ಕಾರಗಳು : ತಮ್ಮ ಜೀವಿತ ಕಾಲದಲ್ಲಿ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ಮತ್ತೂರು – ಹೊಸಹಳ್ಳಿ ಗಮಕೋತ್ಸವಗಳಲ್ಲಿ ಸನ್ಮಾನಿತರಾಗಿ ಕಾವ್ಯ ವಾಚನರತ್ನ ಗಮಕ ಕಲಾ ಪುನರ್ವಸು ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಬೆಂಗಳೂರು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಸಾಹಿತ್ಯ ಸಮ್ಮೇಳನದಲ್ಲಿ ಆದಿಚುಂಚನಗಿರಿ ಮಠಾಧೀಶರಿಂದ, ತುಮಕೂರು ಅಮರ ಭಾರತೀ ಕಲಾ ವೃಂದದಿಂದ, ರಾಜಾಜಿನಗರದ ಕನ್ನಡ ಸಹೃದಯ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲ್ಪಟ್ಟಿದ್ದಾರೆ. ಇವರ ಈ ಎಲ್ಲ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೦-೦೧ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.