ಕಲ್ಯಾಣ ಕರ್ನಾಟಕ (ಹೈದ್ರಾಬಾದ ಕರ್ನಾಟಕ)  ಭಾಗದಲ್ಲಿ ತಬಲಾ ವಾದ್ಯಕ್ಕೆ ಜನಪ್ರಿಯತೆ ತಂದು ಕೊಟ್ಟು ಅದು ವ್ಯಾಪಕವಾಗಿ ಪ್ರಚಾರಗೊಳ್ಳಲು ಶ್ರಮವಹಿಸಿ, ಶಿಷ್ಯ ಪರಂಪರೆಯನ್ನು ನಿರ್ಮಿಸಿ, ತಬಲಾ ಸ್ವತಂತ್ರ ವಾದನ (solo play) ಮತ್ತು ಸಾಥ ಸಂಗೀತ (Accompaniment) ದಲ್ಲಿ ಸಮಾನ ಪಾಂಡಿತ್ಯ ಪಡೆದಿದ್ದ ತಬಲಾ ದಿಗ್ಗಜ ಪ್ರೊ. ಕೆ.ಎಸ್‌. ಹಡಪದ ಅವರು ಕರ್ನಾಟಕ ಕಂಡ ಅಪರೂಪದ ಕಲಾವಿದರು.

ಕರವೀರಪ್ಪ ಶಿವಪ್ಪ ಹಡಪದ ಅವರು ಜನಿಸಿದ್ದು ೧೯೩೨ರ ಏಪ್ರಿಲ್‌ ೩೦ ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪುರದಲ್ಲಿ. ಅವರದು ಸಂಗೀತ ಪರಂಪರೆಯ ಮನೆತನ. ಅಜ್ಜ ಚರ್ಮ ವಾದ್ಯ ಪ್ರವೀಣ. ತಂದೆ ಶಿವಪ್ಪ ಕರಡಿ ಮಜಲು ನಿಪುಣ. ಈ ಪರಿಸರದಲ್ಲಿ ಅವರ ಜನನ. ಸಹಜವಾಗಿಯೇ ಚರ್ಮ ವಾದ್ಯದತ್ತ ಒಲವು. ಬಾಲ್ಯದಲ್ಲಿಯೇ ತಬಲಾದಲ್ಲಿ ಕೈ ಚಳಕ.

ಬಾಲ್ಯದ ತಬಲಾ ಪ್ರತಿಭೆಯ ಫಲವಾಗಿ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ ಶಿಷ್ಯತ್ವ ಹತ್ತು ವರ್ಷ (೧೯೪೩ ರಿಂದ ೧೯೫೩) ತಬಲಾ ಅಧ್ಯಯನ. ನಂತರ ತಬಲಾದ ಉಚ್ಚ ಶಿಕ್ಷಣಕ್ಕಾಗಿ ಕಾಶಿಗೆ ಪಯಣ. ಅಲ್ಲಿ ತಬಲಾ ಸಾಮ್ರಾಟ ಪಂ. ಅನೋಖೆಲಾಲ ಮಿಶ್ರಾ ಅವರಲ್ಲಿ ೪ ವರ್ಷ ಸುದೀರ್ಘ ಅಧ್ಯಯನ. ಹೀಗೆ ಒಟ್ಟು ೧೪ ವರ್ಷ ನಿರಂತರ ತಬಲಾ ಅಧ್ಯಯನದ ಫಲವಾಗಿ ಪ್ರಬುದ್ಧ ತಬಲಾ ವಾದಕರೆಂಬ ಹೆಗ್ಗಳಿಕೆ. ಅಖಿಲ ಭಾರತ ಗಾಂಧರ್ವ ಮಹಾ ಮಂಡಳದ ಸಂಗೀತ ಅಲಂಕಾರ ಪದವಿ ಪ್ರಾಪ್ತಿ.

ಬನಾರಸ (ಕಾಶಿ) ಯಿಂದ ಬಾಗಲಕೋಟೆಗೆ ನಿರ್ಗಮನ. ಮುರನಾಳದ ಪೂಜ್ಯಶ್ರೀ ಗಂಗಾಧರಸ್ವಾಮಿ ಮಹಾ ಪುರುಷರೊಂದಿಗೆ ಸಮಾಗಮ. ಅವರ ಸಿತಾರ ವಾದನಕ್ಕೆ ತಬಲಾ ಸಾಥ್‌ ಸಂಗತ. ತಬಲಾ ಕಲೆಯ ಪ್ರಸಾರಕ್ಕಾಗಿ ೧೯೫೮ರಲ್ಲಿ ಬಾಗಲಕೋಟೆಯಲ್ಲಿ ಗಂಗಾಧರಸ್ವಾಮಿ ಮಹಾ ಪುರುಷರ ಅಮೃತ ಹಸ್ತದಿಂದ ‘ನಟರಾಜ ಸಂಗೀತ ವಿದ್ಯಾಲಯ’ದ ಉದ್ಘಾಟನೆ. ಬಾಗಲಕೋಟೆಯಲ್ಲಿ ೫ ವರ್ಷ ಗದುಗಿನ ವಿಜಯ ಕಲಾಮಂದಿರದಲ್ಲಿ ೪ ವರ್ಷ ನಂತರ ಕಲ್ಬುರ್ಗಿಯ ಪ್ರತಿಷ್ಠಿತ ಶ್ರೀ ಶರಣ ಬಸವೇಶ್ವರ ಕಲಾ ಮಹಾ ವಿದ್ಯಾಲಯದಲ್ಲಿ ತಬಲಾ ಪ್ರಾಧ್ಯಾಪಕರಾಗಿ ೨೦ ವರ್ಷ ಸುದೀರ್ಘ ಸೇವೆ ಸಲ್ಲಿಸಿ ೧೯೯೦ರಲ್ಲಿ ನಿವೃತ್ತಿ ಹೊಂದಿ ಕಲ್ಬುರ್ಗಿಯಲ್ಲಿ ನೆಲೆಸಿ ೧೬ ವರ್ಷ ವಿಶ್ರಾಂತ ಜೀವನ ಸಾಗಿಸಿ ತಮ್ಮ ೭೫ನೇ ವಯಸ್ಸಿನಲ್ಲಿ ದಿ. ೨೭-೧೦-೨೦೦೬ ರಂದು ಹೃದಯಾಘಾತದಿಂದ ನಿಧನ.

ಶರಣ ಬಸವೇಶ್ವರ ಕಲಾ ಮಹಾ ವಿದ್ಯಾಲಯದ ಸಂಗೀತ ಪ್ರಾಧ್ಯಾಪಕ ಹೆಸರಾಂತ ಹಿಂದೂಸ್ಥಾನಿ ಗಾಯಕ ಹಾಗೂ ವಚನ ಸಂಗೀತ ಶಿಲ್ಪಿ. ಪಂ. ಸಿದ್ಧರಾಮ ಜಂಬಲ ದಿನ್ನಿಯರೊಂದಿಗೆ ಸುದೀರ್ಘ ಸೇವೆ. ಕಲ್ಬುರ್ಗಿ ಭಾಗದಲ್ಲಿ ನೆಲೆಸಿ ತಬಲಾದಲ್ಲಿ ಪರಿಶ್ರಮಿಸಿದ ಫಲವಾಗಿ ಇಂದು ಕಲ್ಬುರ್ಗಿ ಭಾಗದ ಮೂಲೆ ಮೂಲೆಯಲ್ಲೂ ಅವರ ಶಿಷ್ಯ ಸಂಪತ್ತು ಸಮೃದ್ಧ, ಪಂಡಿತೋತ್ತಮರಾದ ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಪ್ರಭಾ ಅತ್ರೆ, ಬಾಲೇಖಾನ್‌, ಲಕ್ಷ್ಮಿ ಶಂಕರ, ಸಿದ್ಧರಾಮ ಜಂಬಲ ದಿನ್ನಿ. ಸಿದ್ಧರಾಮ ಸ್ವಾಮಿ ಕೋರವಾರ, ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟೆ ಬಿ.ಡಿ. ಪಾಠಕ, ಪ್ರಭುದೇವ ಸರ್ದಾರ ಮುಂತಾದ ಸಂಗೀತ ದಿಗ್ಗಜರಿಗೆ ಸಮರ್ಥ ತಬಲಾ ಸಾಥ್‌ ನೀಡಿದ ಧೀಮಂತ. ನಾದಯೋಗಿ ಪರ್ವತೀಕರ ಹಾಗೂ ಹೆಸರಾಂತ ಕ್ಲಾರಿಯೋನೇಟ ವಾದಕ ನರಸಿಂಹಲು ವಡವಾಟಿಯವರೊಂದಿಗೆ ದೇಶದ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳಲ್ಲಿ ತಬಲಾ ಸಾಥ್‌. ಆಕಾಶವಾಣಿ ಹಾಗೂ ದೂರದರ್ಶರನದ ಅಧಿಕೃತ ಕಲಾವಿದರು. ಧಾರವಾಡ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಬೋರ್ಡ್ ಆಫ್‌ ಸ್ಟಡೀಸ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಚೌಡಯ್ಯ ಸ್ಮಾರಕ ಪ್ರಶಸ್ತಿ, ಆಯ್ಕೆ ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಣೆ. ಇವರ ಗುರುವಿನ ಹೆಸರಿನಲ್ಲಿ ಪಂಚಾಕ್ಷರಿ ತಾಲ (೧೫ ಮಾತ್ರಾ), ಕುಮಾರೇಶ ತಾಲ (೧೩ ಮಾತ್ರಾ) ಹಾಗೂ ಪುಟ್ಟರಾಜ ತಾಲ (೧೧ ಮಾತ್ರಾ) ಗಳ ರಚನೆ. ಅನೇಕ ಬೋಲ್‌ಗಳ ನಿರ್ಮಾಣ. ಅವು ಅಚ್ಚು ಕಾಣುವ ಮೊದಲೇ ಕಣ್ಮುಚ್ಚಿದುದು ದುರದೃಷ್ಟಕರ. ಅವರ ಶಿಷ್ಯ ಸಂಪತ್ತು ಅಪಾರ. ಅಂಥವರಲ್ಲಿ ರಾವ್‌ ಸಾಹೇಬ ಮೋರೆ, ಶಂಕರ ಕವಡಿಮಟ್ಟಿ, ರಮೇಶ ಗುಡಿ. ಪ್ರೊ. ಎಂ.ಎಸ್‌. ಪಾಟೀಲ, ಗದಿಗಯ್ಯಸ್ವಾಮಿ ರಾಜೋಳ, ಮಡಿವಾಳಯ್ಯ ಸಾಲಿ, ಬಸವರಾಜ ಬೋರೋಟೆ, ಜಗನ್ನಾಥ ಚಿಂಗಟೆ, ಶಿವಾನಂದ ಮಂಗಲಗಿ, ವೆಂಕಟೇಶ ವಡವಾಟಿ, ಉದಯ ಕುಮಾರ ಹೂಗಾರ, ಶರಣ ಬಸವ ಹಡಪದ (ಮಗ), ಅಶ್ವಿನ ಕುಮಾರ ಪೋತದಾರ, ಶ್ರವಣಕುಮಾರ, ರಾಜಕುಮಾರ ಮುಡುಬಿ, ಪಂಚಾಕ್ಷರಿ ಕಣವಿ, ಪಂಚಾಕ್ಷರಿ ಕುಮಾರ ಬೊಮ್ಮಲಾಪೂರ. ಮುಂತಾದವರು ಉಲ್ಲೇಖನಿಯರು. ಅವರಿಗೆ ದೊರೆತ ಪ್ರಶಸ್ತಿ – ಪುರಸ್ಕಾರಗಳು ಅನೇಕ. ಅಂಥವುಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ನಾದಯೋಗಿ ಪ್ರಶಸ್ತಿ, ತಬಲಾ ವಾದನ ಪ್ರವೀಣ, ತಾಲ ಮಾರ್ತಂಡ ಪ್ರಶಸ್ತಿಗಳು ವಿಶೇಷ ಉಲ್ಲೇಖನೀಯವಾಗಿವೆ.