ಕರ್ನಾಟಕ ಹಾಗೂ ಕೇರಳದ ಪರಂಪಮರಾನುಗತ ಶಾಸ್ತ್ರೀಯ ನೃತ್ಯ ಶೈಲಿಗಳೆರಡರಲ್ಲೂ ಸಾಧನೆಗೈದ ಶ್ರೀ ಕೆ.ಎ.ಕಣ್ಣನ್ ಮಾರಾರ್ ಅವರು ಹಾಸನದಲ್ಲಿನ ತಮ್ಮ ಶ್ರೀ ಶಾಂತಲಾ ಕಲಾಕ್ಷೇತ್ರದ ಮೂಲಕ ಅನೇಕ ನೃತ್ಯಪಟುಗಳನ್ನು ಕ್ಷೇತ್ರಕ್ಕೆ ಪರಿಚಯಿಸಿ ಕಲೆಯ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ.

೧೯೨೬ರಲ್ಲಿ ಕೇರಳದ ಪಯ್ಯನ್ನೂರ್‍ನಲ್ಲಿ ಜನಿಸಿದ ಕಣ್ಣನ್ ಅವರಿಗೆ ಬಾಲ್ಯದ ದಿನಗಳಲ್ಲೇ ಪದ್ಮಶ್ರೀ ಟಿ.ಕೆ. ಚಂದುಪಣಿಕ್ಕರ್ ಅವರಿಂದ ಗುರುಕುಲ ಪದ್ದತಿಯಲ್ಲಿ ೧೨ ವರ್ಷಗಳ ಕಾಲ ಕಥಕ್ಕಳಿಯಲ್ಲಿ ಶಿಕ್ಷಣ ದೊರೆಯಿತು. ೨೦ರ ಹರೆಯದಲ್ಲಿ ಬೆಂಗಳೂರಿಗೆ ಬಂದ ಕಣ್ಣನ್ ಅವರು ಸನಾತನ ಕಲಾಕ್ಷೇತ್ರದ ನಾಟ್ಯಾಚಾರ್ಯ ವಿ.ಎಸ್. ಕೌಶಿಕ್ ಅವರಿಂದ ಭರತನಾಟ್ಯದಲ್ಲಿ ಹೆಚ್ಚಿನ ತರಬೇತು ಪಡೆದರು.

ದೇಶಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯರಾದ ಕಣ್ಣನ್ ಮಾರಾರ್ ಅವರಿಂದ ಕರ್ನಾಟಕದ ಸಹಸ್ರಾರು ನೃತ್ಯಪಟುಗಳು ಶಿಕ್ಷಣ ಪಡೆದಿದ್ದು ಅನೇಕರು ಕರ್ನಾಟಕದ ಪ್ರತಿಷ್ಠಿತ ನೃತ್ಯ ಪರೀಕ್ಷೆಗಳಲ್ಲಿ ಉಚ್ಛಮಟ್ಟದಲ್ಲಿ ತೇರ್ಗಡೆಯಾಗಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ನೃತ್ಯ ಕಲೆಯನ್ನು ಜನಪ್ರಿಯಗೊಳಿಸಲು ತಿಪಟೂರು, ಹಾಸನ, ಬೇಲೂರು, ಚಿಕ್ಕಮಗಳೂರು ಮುಂತಾದ ಕೇಂದ್ರಗಳಲ್ಲಿ ನೃತ್ಯ ಶಿಕ್ಷಣ ಶಾಲೆಗಳನ್ನು ಸ್ಥಾಪಿಸಿ, ನಡೆಸಿಕೊಂಡು ಬಂದ ಶ್ರೇಯಸ್ಸು ಇವರದಾಗಿದೆ.

ಖ್ಯಾತ ಚಿತ್ರ ನಿರ್ದೇಶಕ ಜಿ.ವಿ. ಅಯ್ಯರ್ ಅವರ ’ಆದಿ ಶಂಕರಾಚಾರ್ಯ’ ಚಿತ್ರದ ಮೂಲಕ ತಮ್ಮ ನೃತ್ಯಕಲೆಯನ್ನು ಚಿತ್ರರಂಗದಲ್ಲಿ ಪ್ರದರ್ಶಿಸಿರುವ ಇವರ ಕಲಾಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿರುವ ಇವರನ್ನು ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯು ತನ್ನ ೧೯೯೭-೯೮ನೇ ಸಾಲಿನ ಪ್ರಶಸ್ತಿಯನ್ನಿತ್ತು ಗೌರವಿಸಿದೆ.