ಸಾಧನೆ : ಕನ್ನಡ ಹಿಂದಿ ಮತ್ತು ಸಂಸ್ಕೃತ ಮೂರು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿರುವ ಹಿರಿಯ ಗಮಕ ವಿದುಷಿ ಶ್ರೀಮತಿ ಕೆ. ಜಯಮ್ಮನವರು ಸರ್ಕಾರ ಪ್ರಾಥಮಿಕ ಶಾಲೆಯಲ್ಲಿ ಸುಮಾರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ನಂತರ ತಮ್ಮ ಬದುಕಿನ ಪೂರ್ಣಾವಧಿಯನ್ನು ಗಮಕ ಕಲೆಗೆ ಮೀಸಲಾಗಿರಿಸಿ ದುಡಿಯುತ್ತಿದ್ದಾರೆ. ಮನೆಯಲ್ಲಿಯೇ ಹಿಂದಿ ಮತ್ತು ಗಮಕ ತರಗತಿಗಳನ್ನು ನಡೆಸುತ್ತಿದ್ದು ಎಲ್ಲಾ ವಯೋಮಾನದ ಆಸಕ್ತರು ಇವರಲ್ಲಿ ಶಿಷ್ಯವೃತ್ತಿ ಮಾಡುತ್ತಿದ್ದಾರೆ. ಮದುವೆಯೆಂಬ ಲೌಕಿಕ ಬಂಧನಕ್ಕೆ ಸಿಲುಕಿಕೊಳ್ಳದೆ ಕಲಾಸೇವೆಯನ್ನೇ ಬದುಕನ್ನಾಗಿಸಿಕೊಂಡವರು. ಗಮಕದಲ್ಲಿ ವಾಚನ – ವ್ಯಾಖ್ಯಾನ ಎರಡರಲ್ಲೂ ಸಿದ್ಧಹಸ್ತರು. ೧೯೬೧ ರಲ್ಲಿ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ಆರಂಭಿಸಿದ ನಿತ್ಯ ಗೀತಾ ಸತ್ಸಂಗ ಕಾರ್ಯಕ್ರಮ ೪೬ ವರ್ಷಗಳು ಕಳೆದರೂ ಇಂದಿಗೂ ನಡೆದುಕೊಂಡು ಬಂದಿದೆ.

ಕುಮಾರವ್ಯಾಸ, ಲಕ್ಷ್ಮೀಶ, ರಾಘವಾಂಕ, ತೊರವೆ ನರಹರಿ ಮುಂತಾದವರ ಪ್ರಾಚೀನ ಕಾವ್ಯಗಳಲ್ಲದೆ, ತಿಮ್ಮಣ್ಣ ಕವಿಯ ಅಷ್ಟಪರ್ವಗಳು, ಶ್ರೀಕಂಠಶಾಸ್ತ್ರಿಗಳ ಶ್ರೀ ಶಂಕರ ವಿಜಯ ಮುಂತಾದ ಕಾವ್ಯಗಳ ಜೊತೆಗೆ, ಪು.ತಿ.ನ., ಮಾಸ್ತಿ, ಕುವೆಂಪು ಅವರ ಕಾವ್ಯಗಳಿಗೂ ಜೀವತುಂಬುವ ಪ್ರತಿಭಾನ್ವಿತರು. ಆಕಾಶವಾಣಿ ಮತ್ತು ಸಭಾಗಳಲ್ಲಿ ತಾವು ವಾಚನ – ವ್ಯಾಖ್ಯಾನ ಮಡುವುದಲ್ಲದೆ ತಮ್ಮಿಂದ ಕಲಿತವರಿಗೂ ವೇದಿಕೆ ಒದಗಿಸುವ ಕೆಲಸವನ್ನು ನಿರಂತರ ಮಾಡುತ್ತಾ ಬಂದಿದ್ದಾರೆ. ಅಲ್ಲದೆ ಆಸಕ್ತರಿಗೆ ಲಲಿತಾ-ವಿಷ್ಣು – ಗೌರಿ – ಶಿವ ಸಹಸ್ರ ನಾಮಗಳು, ಸೌಂದರ್ಯ ಲಹರಿ, ಅಷ್ಟಕಗಳು, ಭಜನೆಗಳು, ಸಂಪ್ರದಾಯ ಹಾಡುಗಳು, ದೇವರನಾಮಗಳನ್ನು ಹೇಳಿಕೊಡುವ ಕಾರ್ಯವನ್ನು ಪ್ರೀತಿಯಿಂದ ಮಾಡುತ್ತಾರೆ.

ಪ್ರಶಸ್ತಿ – ಪುರಸ್ಕಾರ : ಅನೇಕ ಸಂಘ – ಸಂಸ್ಥೆಗಳಿಂದ ಪುರಸ್ಕರಿಸಲ್ಪಟ್ಟಿರುವ ಹಿರಿಯ ಗಮಕ ವಿದುಷಿ ಶ್ರೀಮತಿ ಕೆ. ಜಯಮ್ಮನವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.