ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ಅವರಿಂದ ಭರತನಾಟ್ಯ ಮತ್ತು ಕಥಕ್ಕಳಿ, ಶ್ರೀಮತಿ ಎಸ್. ಲಕ್ಷ್ಮಿದೇವಮ್ಮ ಮತ್ತು ಶ್ರೀ ರಾಮಣ್ಣನವರಿಂದ ಜಾನಪದ ನೃತ್ಯಗಳು, ಮಾರ್ತಾಂಡರಾವ್ ಇನಾಮದಾರ ಅವರಿಂದ ಭರತನಾಟ್ಯ ಮತ್ತು ಶ್ರೀಮತಿ ವನಮಾಲಾ ಕುಲಕರ್ಣಿ ಅವರಲ್ಲಿ ಕಥಕ್ ಶೈಲಿಗಳನ್ನು ಅಭ್ಯಾಸ ಮಾಡಿರುವ ಶ್ರೀ ಕೆ.ಜಿ.ಕುಲಕರ್ಣಿ ಗ್ರಾಮೀಣ ಭಾಗದಲ್ಲಿ ನೃತ್ಯ ಮಾಧ್ಯಮವನ್ನು ಜನಪ್ರಿಯಗೊಳಿಸಬೇಕು ಎನ್ನುವ ಉದ್ದೇಶದಿಂದ ತಮ್ಮ ಗುರುಗಳ ಹೆಸರಿನಲ್ಲಿ ’ಕುಲಕರ್ಣಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ಕೇಂದ್ರ’ ಸ್ಥಾಪಿಸಿದರು. ದಾವಣಗೆರೆಯ ನಾಟ್ಯ ಭಾರತಿ ನೃತ್ಯ ಮತ್ತು ಸಂಗೀತ ಕಲಾಕೇಂದ್ರಗಳಲ್ಲಿ ಮತ್ತು ಹಾವೇರಿಯ ಶಾಂತಲಾ ನೃತ್ಯಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ಅನುಭವವನ್ನು ವೃದ್ಧಿಸಿಕೊಂಡರು.

ಧಾರವಾಡ, ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ತರಳಬಾಳು, ಮೈಸೂರು ಮುಂತಾದ ಹಲವು ನಗರಗಳಲ್ಲಿ ಅಸಂಖ್ಯಾತ ಕಾರ್ಯಕ್ರಮಗಳನ್ನು ನೀಡಿರುವ ಕುಲಕರ್ಣಿಯವರು ಶ್ರೇಷ್ಠ ಕವಿಗಳಾದ ದ. ರಾ. ಬೇಂದ್ರೆ, ಕುವೆಂಪು ಮುಂತಾದವರ ಅಪರೂಪದ ಮತ್ತು ಜನಪ್ರಿಯ ಕವಿತೆಗಳನ್ನು ನೃತ್ಯ ಮಾಧ್ಯಮಕ್ಕೆ ಅಳವಡಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ವಚನ ಸಾಹಿತ್ಯವನ್ನೂ ನೃತ್ಯ ಚೌಕಟ್ಟಿಗೆ ಹೊಂದಿಸಿರುವ ಶ್ರೀಯುತರು ಕೆಲವು ಉತ್ತಮ ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ.

ತಮ್ಮ ನೃತ್ಯ ಕ್ಷೇತ್ರದ ಸೇವೆಗಾಗಿ ಅನೇಕ ಸಂಘ ಸಂಸ್ಥೆಗಳಿಂದ ಕಲಾ ಕೌಸ್ತುಭ, ಕಲಾರತ್ನ ನೃತ್ಯಕಲಾ ಸಿಂಧು ಮುಂತಾದ ಪ್ರಶಸ್ತಿಗಳಿಂದ ಸನ್ಮಾನಿಸಲ್ಪಟ್ಟಿರುವ ಶ್ರೀ ಕೆ.ಜಿ ಕುಲಕರ್ಣಿ ಅವರಿಗೆ ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.