ಅಯ್ಯನಾರ್ ಸಂಗೀತ ಕಾಲೇಜಿನಲ್ಲಿ ಸಂಗೀತರತ್ನ ಪಿಟೀಲು ಚೌಡಯ್ಯನವರಲ್ಲಿ ಏಳು ತಂತಿ ಪಿಟೀಲು ವಾದನವನ್ನು ಸುಮಾರು ಹತ್ತು ವರ್ಷಗಳ ಕಾಲ ಸತತವಾಗಿ ಅಭ್ಯಾಸ ಮಾಡಿದವರು ಶ್ರೀ ಕೆ.ಜೆ. ವೆಂಕಟಾಚಾರ್ ಅವರು. ಜೊತೆಗೆ ಪ್ರೊ.ವಿ. ರಾಮರತ್ನಂ ಅವರಲ್ಲಿ ಹಾಡುಗಾರಿಕೆಯ ಅಭ್ಯಾಸ ಕೂಡ ನಿರಂತರ ನಡೆಯುತ್ತಿತ್ತು. ತಾವು ಕಲಿತ ಅಯ್ಯನಾರ್ ಸಂಗೀತ ಶಾಲೆಯಲ್ಲೇ ಅಧ್ಯಾಪಕರಾಗಿ ನೇಮಕಗೊಂಡ ಶ್ರೀಯುತರು ನಂತರ ತಮ್ಮ ಗುರುಗಳ ಸಲಹೆಯ ಮೇರೆಗೆ ಲಲಿತಕಲಾ ಕಾಲೇಜಿನ ಉಪಪ್ರಾಂಶುಪಾಲರಾಗಿ ಸೇವೆ ಮುಂದುವರಿಸಿ ನಂತರ ಪಿಟೀಲು ಚೌಡಯ್ಯನವರ ನಿಧನಾನಂತರ ಪ್ರಾಂಶುಪಾಲರಾಗಿ ನೇಮಕಗೊಂಡರು. ತಮ್ಮ ಗುರು ಪಿಟೀಲು ಚೌಡಯ್ಯನವರ ವಿಶೇಷತೆಯಾದ ಏಳು ತಂತಿ ಪಿಟೀಲುವಾದನದಲ್ಲಿ ಪರಿಣತಿ ಪಡೆದ ವೆಂಕಟಾಚಾರ್ ಅವರು ಗುರುಗಳ ಜೊತೆ ಅನೇಕ ವರ್ಷ ಸಹಕಲಾವಿದರಾಗಿ ವೇದಿಕೆಯನ್ನು ಹಂಚಿಕೊಂಡಿದ್ದರು.

ಆಕಾಶವಾಣಿಯ ‘ಬಿ ಹೈ’ ಶ್ರೇಣಿ’ ಕಲಾವಿದರಾದ ಶ್ರೀ ವೆಂಕಟಾಚಾರ್ ನಾಡಿನ ಅನೇಕ ಹಿರಿಯ ವಿದ್ವಾಂಸರುಗಳಿಗೆ ಪಿಟೀಲು ಪಕ್ಕವಾದ್ಯ ಸಹಕಾರ ನೀಡುತ್ತಾ ದೇಶದ್ಯಾಂತ ಸಂಚರಿಸಿದ್ದಾರೆ. ತಾವು ಉದ್ಯೋಗದಲ್ಲಿದ್ದ ಕಾಲೇಜಿನಲ್ಲಿ ಮತ್ತು ಪ್ರತ್ಯೇಕವಾಗಿ ನೂರಾರು ವಿದ್ಯಾರ್ಥಿಗಳನ್ನು ಹಾಡುಗಾರಿಕೆ ಮತ್ತು ಪಿಟೀಲು ವಾದನದಲ್ಲಿ ತರಬೇತಿ ನೀಡಿದ್ದಾರೆ. ರಾಜ್ಯ ಸರ್ಕಾರ ನಡೆಸುವ ವಿಶೇಷ ಸಂಗೀತ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಶ್ರೀಯುತರ ಸಂಗೀತ ಸೇವೆಯನ್ನು ಗುರುತಿಸಿ ಬೆಂಗಳೂರು ಗಾಯನ ಸಮಾಜ, ವಸುಂಧರ ಪರ್ಫಾರ್ಮಿಂಗ್‌ ಸೆಂಟರ್, ಸಂಗೀತರತ್ನ ಟಿ. ಚೌಡಯ್ಯ ಜನ್ಮಶತಮಾನ್ಯೋತ್ಸವ ಸಮಿತಿ, ಶ್ರೀ ತ್ಯಾಗರಾಜ ಸಂಗೀತಸಭಾ ಚಾರಿಟಬಲ್‌ ಟ್ರಸ್ಟ್‌, ಶ್ರೀ ಪುರಂದರ ತ್ಯಾಗರಾಜ ಆರಾಧನಾ ಮಹೋತ್ಸವ ಸಮಿತಿ, ಗಣಪತಿ ಸಚ್ಚಿದಾನಂದ ಆಶ್ರಮ, ಶ್ರೀ ಮದ್ವಾದಿರಾಜ ಭವನ ಟ್ರಸ್ಟ್‌ ಮುಂತಾದ ಅನೇಕ ಸಂಘ ಸಂಸ್ಥೆಗಳು ಶ್ರೀಯುತರಿಗೆ ಪಿಟೀಲು ವಾದನ ತಿಲಕ; ವರ್ಷದ ಕಲಾವಿದ, ಸಂಗೀತ ಕಲಾತಪಸ್ವಿ, ಆಸ್ಥಾನ ವಿದ್ವಾನ್‌ ಮುಂತಾದ ಬಿರುದುಗಳೊಂದಿಗೆ ಸನ್ಮಾನಿಸಿದ್ದಾರೆ. ಶ್ರೀ ಕೆ.ಜೆ. ವೆಂಕಟಾಚಾರ್ ಅವರ ಸಂಗೀತ ಸಾಧನೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬಹಳ ಅಭಿಮಾನದಿಂದ ೨೦೦೭-೦೮ರ ಸಾಲಿನ ತನ್ನ ವಾರ್ಷಿಕ ಪ್ರಶಸ್ತಿಯನ್ನಿತ್ತು ಗೌರವಿಸಿದೆ.