೧೯೩೨ರಲ್ಲಿ ತಮಿಳುನಾಡಿನ ಸೇಲಂನಲ್ಲಿ ಜನಿಸಿದ ಶ್ರೀ ಕೆ. ನಟೇಶ್ ಬಾಲ್ಯದಲ್ಲಿ ಅಲ್ಲಿನ ಕೆ. ಸುಬ್ರಹ್ಮಣ್ಯಂ ಅವರಲ್ಲಿ ಮೃದಂಗ ಅಭ್ಯಾಸ ಮಾಡಿ ತಿರುಪ್ಪಗಳ್, ತಿರುಪ್ಪಾವೆ ಮತ್ತು ಭಜನ್ ಗಳಿಗೆ ಮೃದಂಗ ನುಡಿಸುತ್ತಿದ್ದರು. ನಂತರ ಪ್ರೌಢ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದು ಶ್ರೀ ಸುಬ್ಬು ಅವರಲ್ಲಿ ಶಿಕ್ಷಣ ಮುಂದುವರಿಸಿದರು.

ಅಂದಿನಿಂದ ಅವರ ಮೃದಂಗ ನಿರಂತರ ನುಡಿಯುತ್ತಲೇ ಇದೆ. ಘಟಂ ವಾದನದಲ್ಲೂ ಪರಿಣತಿ ಇರುವ ಶ್ರೀ ನಟೇಶ್, ಪ್ರಖ್ಯಾತ ಮೃದಂಗ ವಿದ್ವಾಂಸರುಗಳಾದ ಎಂ. ಎಲ್. ವೀರಭದ್ರಯ್ಯ, ಹೆಚ್. ಪುಟ್ಟಾಚಾರ್, ಹೆಚ್.ಪಿ. ರಾಮಾಚಾರ್, ಟಿ.ಎ. ಎಸ್. ಮಣಿ, ಎ.ವಿ. ಆನಂದ್, ಎಂ. ಎಸ್. ರಾಮಯ್ಯ, ಸುಬ್ಬು, ಮನ್ನಾರ್‌ಗುಡಿ ಈಶ್ವರನ್ ಮುಂತಾದವರ ಜೊತೆ ಘಟಂ ನುಡಿಸಿದ ಖ್ಯಾತಿಯನ್ನೂ ಪಡೆದಿದ್ದಾರೆ.

ನೃತ್ಯ ಕ್ಷೇತ್ರದ ಹಿರಿಯ ಕಲಾವಿದರುಗಳಾದ ಯು.ಎಸ್. ಕೃಷ್ಣರಾವ್ ದಂಪತಿಗಳು, ಮುತ್ತಪ್ಪ ಪಿಳ್ಳೈ, ಕಿಟ್ಟಪ್ಪ ಪಿಳ್ಳೈ, ಎಚ್.ಆರ್. ಕೇಶವಮೂರ್ತಿ, ವಿ.ಎಸ್.ಕೌಶಿಕ್, ಲೋಕಯ್ಯ, ಉಷಾ ದಾತಾರ್, ಲಲಿತಾ ದೊರೆ, ಶಿವರಾವ್, ರಾಧಾಕೃಷ್ಣ ದಂಪತಿಗಳು, ಪದ್ಮಿನಿರಾವ್ ಮುಂತಾದವರು ನಟೇಶ್ ಅವರ ಮೃದಂಗ ಪಕ್ಕವಾದ್ಯವನ್ನ ಬಳಸಿಕೊಂಡಿದ್ದಾರೆ.

ನಟೇಶ್‌ಅವರ ಸೇವೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಮಠ-ಮಂದಿರಗಳು ’ಮೃದಂಗ ವಾದನ ಪ್ರವೀಣ’, ’ನಾದವಾದ್ಯ ಪ್ರವೀಣ’ ಮುಂತಾದ ಬಿರುದುಗಳನ್ನಿತ್ತು ಗೌರವಿಸಲಾಗಿರುವ ಶ್ರೀಯುತರಿಗೆ ೨೦೦೦-೦೧ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿಯು ಸಂದಿದೆ.