Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಕೆ.ಪಿ.ಪೂರ್ಣಚಂದ್ರತೇಜಸ್ವಿಯವರು ನವೋದಯದ ನಂತರ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಚಿಂತನಶೀಲ, ವಿಚಾರವಂತ, ವೈಜ್ಞಾನಿಕ ಬರಹಗಾರರೆಂದು ಗುರುತಿಸಲ್ಪಟ್ಟವರು. ಇವರು ೮.೯.೧೯೩೮ ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ-ಕೆ.ವಿ.ಪುಟ್ಟಪ್ಪ ತಾಯಿ-ಹೇಮಾವತಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಇವರು ಕೃಷಿಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಕೆ.ಪಿ.ಪೂರ್ಣಚಂದ್ರತೇಜಸ್ವಿಯವರನ್ನು ನವ್ಯ ಘಟ್ಟದ ತಾತ್ವಿಕ ಸಿದ್ದಾಂತದೊಂದಿಗೆ ಸಮೀಕರಿಸಲಾಗಿದೆ. ಇವರ ಕೃತಿಗಳಲ್ಲಿ ಆಳ ಮತ್ತು ಸಂಕೀರ್ಣತೆಯನ್ನು ಕಾಣಬಹುದು.

ವಿಶ್ವ ಹಾಗೂ ಮಾನವನ ಅಂತರಂಗದ ನಿಗೂಡ ರಹಸ್ಯದಿಂದ ಹಿಡಿದು, ಸಮಾಜ-ವ್ಯಕ್ತಿ ಸಂಬಂಧ, ಮೂಡನಂಬಿಕೆಗಳು, ವಿಜ್ಞಾನ, ಶೋಷಣೆಗಳಂತಹ ಕ್ಲಿಷ್ಠ ವಿಷಯಗಳನ್ನು ಇವರ ಕೃತಿಗಳಲ್ಲಿ ನೋಡಬಹುದು. ಹೀಗಾಗಿ ಹಾಗೆಯೇ ಕೃಷಿ, ಪರಿಸರ, ಮಾನವಶಾಸ್ತ್ರ, ತತ್ವಜ್ಞಾನಗಳಂತಹ ಚಿಂತನೆಯನ್ನೂ ಕಾಣಬಹುದು. ಹೀಗಾಗಿ ನವ್ಯ, ನವ್ಯೋತ್ತರ ಸಾಹಿತ್ಯಗಳ ಅವದಿಯಲ್ಲಿ ಬರೆದವರು ತೇಜಸ್ವಿಯವರು ಸಂಪೂರ್ಣ ಬಿನ್ನವಾದ ಮೌಲ್ಯಗಳ ಸೃಷ್ಟಿ ಮತ್ತು ಅಬಿವ್ಯಕ್ತಿಯ ಮಾರ್ಗವನ್ನು ಕಂಡುಕೊಂಡು ಪ್ರತ್ಯೇಕವಾಗಿ ನಿಲ್ಲುವ ವ್ಯಕ್ತಿಯಾಗುತ್ತಾರೆ. ತೇಜಸ್ವಿಯವರು ತಮ್ಮ ಬರವಣಿಗೆಯನ್ನು- ಕವಿತೆ, ಕಾದಂಬರಿ, ನಾಟಕ, ಕಥೆ, ವೈಜ್ಞಾನಿಕ ಬರಹ ಹೀಗೆ ನಾನಾ ಪ್ರಕಾರಗಳಲ್ಲಿ ಅಬಿವ್ಯಕ್ತಿಸಿದ್ದಾರೆ. ‘ಬೃಹನ್ನಳೆ ಸೋಮುವಿನ ಸ್ವಗತಲಹರಿ ಮತ್ತು ಇತರ ಕಥೆಗಳು ಇವರ ಕವನ ಸಂಗ್ರಹ, ಹುಲಿಯೂರಿನ ಸರಹದ್ದು (೧೯೬೨), ಮತ್ತು ಅಬಚೂರಿನ ಪೋಸ್ಟಾಪೀಸು(೧೯೭೧), ಎರಡೂ ಕಥಾಸಂಕಲನಗಳು. ಯಮಳ ಪ್ರಶ್ನೆ(೧೯೬೪), ಇವರು ಬರೆದ ಏಕೈಕ(ಏಕಾಂತ) ನಾಟಕ, ವ್ಯಕ್ತಿ ವಿಶಿಷ್ಠ ಸಿದ್ಧಾಂತ (೧೯೬೪), ಇದು ಇವರ ವೈಚಾರಿಕ ಪ್ರಬಂಧಗಳ ಸಂಗ್ರಹ. ಸ್ವರೂಪ ಎಂಬ ನೀಳ್ಗತೆಯನ್ನೂ ನಿಗೂಡಮನುಷ್ಯರು(೧೯೭೬) ಎಂಬ ದೀರ್ಘಕಥೆಯನ್ನೂ ಬರೆದಿದ್ದಾರೆ. ಇವರ ಪ್ರಸಿದ್ಧ ಕಾದಂಬರಿಗಳು ಕರ್ವಾಲೋ(೧೯೮೦), ಮತ್ತು ಚಿದಂಬರ ರಹಸ್ಯ(೧೯೮೫), ಜುಗಾರಿಕ್ರಾಸ್, ಪರಿಸರದ ಕಥೆಗಳು, ಅಲೆಮಾರಿಯ ಅಂಡಮಾನ್, ಪ್ಲೇಯಿಂಗ್‌ಸಾಸರ‍್ಸ್, ಬರ್ಡ್ಸ್‌ಆಫ್‌ಸೌತ್‌ಇಂಡಿಯಾ,-ಇವರ ಕೆಲವು ಮಹತ್ವದ ಕೃತಿಗಳು. ತೇಜಸ್ವಿಯವರ ಬಿನ್ನ ನಿಲುವನ್ನು ಅಬಚೂರಿನ ಪೋಸ್ಟಾಪೀಸು, ಕಥಾಸಂಕಲನದ ಪೀಠಿಕೆಯಲ್ಲಿ ಸ್ಪಷ್ಟಪಡಿಸುತ್ತಾರೆ.- “ಲೋಹಿಯಾರವರ ತತ್ವ ಚಿಂತನೆ, ಕುವೆಂಪುರವರ ಕಲಾಸೃಷ್ಠಿ, ಕಾರಂತರ ಜೀವನ ದೃಷ್ಠಿ ಮತ್ತು ಬದುಕಿನ ಪ್ರಯೋಗ ಶೀಲತೆ ಇವು ಮೂರೆ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಪರಿಣಾಮವನ್ನುಂಟುಮಾಡಿದವು……. ಮುಂದುವರೆದು “ಕನ್ನಡ ನವ್ಯ ಸಂಪ್ರದಾಯವನ್ನು ಸಂಪೂರ್ಣವಾಗಿ ತೊರೆದು ಹೊಸದಿಕ್ಕಿನಲ್ಲಿ ನಾವೀಗ ಅನ್ವೇಷಿಸಬೇಕಾಗಿದೆ. ಎನ್ನುತ್ತಾರೆ. ಇದೇ ಸಂಕಲನದ ಅವನತಿ, ಕುಬಿ ಮತ್ತು ಇಯಾಲ, ಹಾಗೂ ತಬರನ ಕಥೆ, ತುಂಬಾ ಪ್ರೌಡ ಸಂವೇದನೆಯನ್ನು ಅಬಿವ್ಯಕ್ತಿಸುತ್ತವೆ.

ಯಮಳ ಪ್ರಶ್ನೆ ಮತ್ತು ಸ್ವರೂಪ- ಪ್ರೇಮ ಮತ್ತು ಸಾವು ಇವುಗಳ ಸಂಬಂಧವೇ ಈ ಕೃತಿಗಳ ಕೇಂದ್ರ ವಸ್ತು. ಪ್ರೇಮ ಕಾಮಗಳ ಸಮಸ್ಯೆಗಿಂತ ಎರಡರಲ್ಲೂ ಪ್ರಧಾನವಾಗಿ ಕಂಡುಬರುವ ಪ್ರಶ್ನೆ ಸಾವಿನದು. ಇವರ ಕಥೆ ಅಬಚೂರಿನ ಪೋಸ್ಟಾಪೀಸು ಚಲನ ಚಿತ್ರವಾಗಿ ೧೯೭೩ ರ ಅತ್ಯುತ್ತಮ ಪ್ರಾಂತೀಯ ಚಿತ್ರಪ್ರಶಸ್ತಿ ಪಡೆದಿದೆ. ತಬರನ ಕಥೆಗೆ ೧೯೮೬ ರಲ್ಲಿ ಸ್ವರ್ಣಕಮಲ ಪ್ರಶಸ್ತಿ ಲಬಿಸಿದೆ. ಕುಬಿ ಮತ್ತು ಇಯಾಲ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ಗಳಿಸಿರುವ ಇವರು ಕನ್ನಡದ ಮಹತ್ವದ ಬರಹಗಾರರಲ್ಲಿ ಒಬ್ಬರಾಗಿದ್ದಾರೆ.