ಹಾರ್ಮೋನಿಯಂ ವಾದಕರಾಗಿ, ಸಂಗೀತ ಶಿಕ್ಷಕರಾಗಿ ಹಾಗೂ ನಾಡಿನ ಹೆಸರಾಂತ ಸಂಗೀತಗಾರರಿಗೆ ಸಮರ್ಥ ಹಾರ್ಮೋನಿಯಂ ಸಾಥಿದಾರರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿ ಧಾರವಾಡದಲ್ಲಿ ನೆಲೆಸಿರುವ ಶ್ರೀ ಕೆ.ಬಿ. ನೀಲಕಂಠಾ ಚಾರ್ಯರು ಕರ್ನಾಟಕದ ಜನಪ್ರಿಯ ಹಾರ್ಮೋನಿಯಂ ವಾದಕರಲ್ಲೊಬ್ಬರಾಗಿದ್ದಾರೆ. ೧೯೨೯ರಲ್ಲಿ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಸೊನ್ನು ಗ್ರಾಮದಲ್ಲಿ ಜನಿಸಿದ ಕೆ.ಬಿ. ನೀಲಕಂಠಾಚಾರ್ ರವರು ಮರೋಳದ ರಾಮ, ಬುವಾ, ನಾಗಭೂಷಣ ಗವಾಯಿ, ಮಂಗೇಶನಾಥ ಗೋವೆಕರ, ಕರೂರ ಗುರು ಬಸವಾರ್ಯ ಹಿರೇಮಠ ಮುಂತಾದ ಗವಾಯಿಗಳಲ್ಲಿ ಸಂಗೀತಾಭ್ಯಾಸ ಮತ್ತು ಹಾರ್ಮೋನಿಯಂ ವಾದನವನ್ನು ಕಲಿತು, ಸಂಗೀತ ವಿಶಾರದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಸರಕಾರಿ ಪದವೀ ಪೂರ್ವ ಕಾಲೇಜಿನಲ್ಲಿ ಪ್ರಥಮ ದರ್ಜೆಯ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಸದ್ಯ ಧಾರವಾಡದಲ್ಲಿ ವಾಸವಾಗಿದ್ದಾರೆ. ಆಕಾಶವಾಣಿ ಕಲಾವಿದರಾದ ಅವರು ನಾಡಿನ ಅನೇಕ ಕಡೆಗಳಲ್ಲಿ ಕಾರ್ಯಕ್ರಮ ನೀಡಿದ್ದಲ್ಲದೇ ನಾಡಿನ ಶ್ರೇಷ್ಠ ಗಾಯಕರಿಗೆ ಹಾರ್ಮೋನಿಯಂ ಸಾಥಿ ನೀಡಿದ್ದಾರೆ. ಅನೇಕ ಖ್ಯಾತ ಶಿಷ್ಯರನ್ನು ತಯಾರು ಮಾಡಿದ್ದಾರೆ.

ಈ ಶ್ರೇಷ್ಠ ಹಾರ್ಮೋನಿಯಂ ಕಲಾವಿದರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೧೯೯೪-೯೫ರ ಪ್ರಶಸ್ತಿ ಮತ್ತು ‘ಕರ್ನಾಟಕ ಕಲಾ ತಿಲಕ’ ಬಿರುದನ್ನು ನೀಡಿ ಗೌರವಿಸಿದೆ.