ಕಳೆದ ಶತಮಾನದಲ್ಲಿ ಭರತನಾಟ್ಯಕ್ಕೆ ಹೆಸರಾದ ಮನೆತನಗಳು ಎರಡು, ಜಟ್ಟಿ ತಾಯಮ್ಮನವರ ಹೆಸರಿನಿಂದಲೇ ಪ್ರಸಿದ್ಧಿ ಪಡೆದ ಮನೆತನ ಒಂದಾದರೆ ಅಷ್ಟೇ ಬೆಡಗಿನಿಂದ, ವಿಶಿಷ್ಟತೆಯಿಂದ ಬೆಳಗಿದ ಮೂಗೂರು ಮನೆತನ ಮತ್ತೊಂದು. ಈ ಮನೆತನದ ಕೀರ್ತಿಪತಾಕೆಯನ್ನು ಹಾರಿಸಿದವರು ಜೇಜಮ್ಮ ತಾಯಮ್ಮನವರಂತೆ ಜೇಜಮ್ಮನವರೂ ಒಡೆಯರ ಆಸ್ಥಾನದಲ್ಲಿ. ಅವರ ಅಭಿನಯ ಅಷ್ಟೆ…. ಏಯೋರಗಳಿಗೆ ಹೆಸರಾಗಿದ್ದವು. ಒಂದೇ ವ್ಯತ್ಯಾಸವೆಂದರೆ ತಾಯಮ್ಮನವರ ಶಿಷ್ಯವರ್ಗ ಶ್ರೀಮಂತ ಎನಿಸಿದರೆ, ಜೇಜಮ್ಮನವರ ಶಿಷ್ಯರಲ್ಲಿ ಹೇಳಿಕೊಳ್ಳುವಂತಹವರು ಒಬ್ಬರೇ ಅವರೇ ಉಡುಪಿಯ ಕೆ.ಬಿ. ಮಾಧವರಾವ್.

ಚಿಕ್ಕಂದಿನಿಂದಲೂ ಯಕ್ಷಗಾನದ ಗೀಳಿಗೆ ಒಳಗಾಗಿ ಆ ಶ್ರೇಷ್ಠ ಮಟ್ಟದ ಜಾನಪದ ಕಲೆಯ ವಿವಿಧ ಅಂಗಗಳಲ್ಲಿ ವಿಶೇಷ ತರಬೇತಿ ಪಡೆದಿರುವ ಮಾಧವರಾವ್ ಮೊದಲಿಗೆ ಭರತನಾಟ್ಯದ ಶಿಕ್ಷಣವನ್ನು ಕೆ.ಎಸ್.ರಾಜಗೋಪಾಲ್‌ರಲ್ಲಿ ಪಡೆದರು. ನಂತರ ತಮ್ಮ ಭರತನಾಟ್ಯ ಶಿಕ್ಷಣವನ್ನು ಮೂಗೂರು ಜೇಜಮ್ಮ ನವರಲ್ಲಿ ಮುಂದುವರಿಸಿ, ತಮ್ಮ ಆಸಕ್ತಿ ಶಿಸ್ತುಗಳಿಂದ ಅವರ ಪಟ್ಟ ಶಿಷ್ಯರೆನಿಸಿದರು. ಇಂದಿಗೂ ತಮ್ಮ ಶ್ರೇಷ್ಟ ಗುರುವಿನ ಹಾದಿಯಲ್ಲಿ ಮುಂದುವರಿದು. ಅವರ ಕೀರ್ತಿಯನ್ನು ಜೀವಂತವಾಗಿರಲು ಶ್ರಮಿಸುತ್ತಿರುವ ಸಾಧಕ ಮಾಧವರಾವ್, ಜೇಜಮ್ಮನವರ ಜೀವಿತ ಕಾಲದಲ್ಲಿ ಹೆಚ್ಚು ಚಟುವಟಿಕೆಗಳಿಂದ ಕೂಡಿದ್ದ ರಾವ್, ತಮ್ಮ ಕಾರ್ಯ ಕ್ಷೇತ್ರವನ್ನು ಉಡುಪಿಯ ಭಾಗಕ್ಕೆ ಸೀಮಿತಗೊಳಿಸಿ, ಅಲ್ಲಿಯೇ “ನೃತ್ಯ ನಿಕೇತನ” ಎಂಬ ಭರತನಾಟ್ಯ ಶಾಲೆಯನ್ನು ಸ್ಥಾಪಿಸಿ, ತನ್ಮೂಲಕ ಹಲವಾರು ಶಿಷ್ಯರ ತಯಾರಿ ಮತ್ತು ಅವರುಗಳ ಪ್ರದರ್ಶನಗಳಿಂದ ತೃಪ್ತಿ ಪಡೆಯುತ್ತಿದ್ದಾರೆ. ತಮ್ಮ ಶಾಲೆಯ ಕಾರ್ಯಕ್ರಮಗಳಲ್ಲದೇ, ಆ ಪರಿಸರದ ಅನೇಕ ವಿದ್ಯಾಸಂಸ್ಥೆಗಳು, ಸಮಾಜಗಳು, ಮತ್ತು ಇತರ ಸಾರ್ವಜನಿಕ ಸಂಸ್ಥೆಗಳ ಆಶ್ರಯದಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.

ಮಾಧವರಾವ್ ನಿಯೋಜಿಸಿದ ನೃತ್ಯ ರೂಪಕ “ಶ್ರೀರಾಮ ಲೀಲಾ” ಜನಪ್ರಿಯತೆಯನ್ನು ಗಳಿಸಿ ವಿವಿಧೆಡೆಗಳಲ್ಲಿ ಪ್ರದರ್ಶಿಸಲಾಗಿದೆ. ಅಂತೆಯೇ ಆಂಗ್ಲ ಚಲನಚಿತ್ರ ಒಂದಕ್ಕೂ ನೃತ್ಯ ನಿದರ್ಶನ ಒದಗಿಸಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಕೊಂಡಿದ್ದಾರೆ.

ಮಾಧವರಾವ್ ಅವರನ್ನು ಅರಸಿ ಹಲವಾರು ಪ್ರಶಸ್ತಿ ಗೌರವಗಳು ಬಂದಿವೆ ಅವುಗಳಲ್ಲಿ ಮಾರುತಿ ಸೇವಾ ಸಮಿತಿಯ “ನಾಟ್ಯ ಚತುರ” ಎಂಬ ಬಿರುದು ಮತ್ತು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ ಮುಖ್ಯವಾದವು.