ಭರತನಾಟ್ಯದ ವಿವಿಧ ಶೈಲಿಗಳಲ್ಲಿ ಪಂದನಲ್ಲೂರು ಶೈಲಿಯ ಭರತನಾಟ್ಯವೂ ಒಂದು. ತಂಜಾವೂರಿನ ಪಂದನಲ್ಲೂರಿನಲ್ಲಿ ಇದು ರೂಪುಗೊಂಡಿದ್ದರಿಂದಲೇ ಇದಕ್ಕೆ ಈ ಹೆಸರು ಬಂದಿದೆ. ಇದರಲ್ಲಿ ಸಾತ್ವಿಕಾದಿಭಾವಗಳಿಗೇ ಹೆಚ್ಚಿನ ಪ್ರಾಶಸ್ತ್ಯ. ಲಲಿತ್ಯಕ್ಕೇ ಹೆಚ್ಚಿನ ಆದ್ಯತೆ. ತಾಳ-ಲಯಗಳನ್ನೊಳಗೊಂಡ ಶುದ್ಧ ನೃತ್ಯ ಭಾಗಗಳ ಬೆಡಗೂ ಇಲ್ಲಿದೆ. ಅನಗತ್ಯ ಭಂಗಿಗಳ ಹೇರಿಕೆಯಾಗಲೀ ಕಳಪೆ ಅಭಿರುಚಿಗೆ ಒತ್ತು ಕೊಡುವಂತಹ ಅಂಶಗಳಾಗಲೀ ಈ ಶೈಲಿಯಲ್ಲಿ ಇಲ್ಲ ಎಂಬುದು ಈ ಶೈಲಿಯ ಕಲಾವಿದರ ಅಭಿಪ್ರಾಯ. ಕರ್ನಾಟಕದಲ್ಲಿ ಪಂದನಲ್ಲೂರು ಶೈಲಿಯ ನಾಟ್ಯಕಲೆಯನ್ನು ಕಲಿಸಿ ಬೆಳೆಸುತ್ತಿರುವ ಗುರುಗಳ ಪೈಕಿ ಶ್ರೀ ಕೆ. ಮುರಲೀಧರರಾವ್‌ ಅವರು ಪ್ರಮುಖರು.

ಇವರ ಊರು ದಕ್ಷಿಣ ಕನ್ನಡ ಜಿಲ್ಲೆಗೆ ತಾಗಿಕೊಂಡಿರುವ ಕಾಸರಗೋಡು. ೧೯೨೪ರಲ್ಲಿ ಇವರು ಕಾಸರಗೋಡಿನಲ್ಲಿ ಜನಿಸಿದರಾದರೂ ಕಲಾಪ್ರಸಾರಕ್ಕಗಿ ಇವರು ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿ ನೂರಾರು ಉತ್ತಮ ಕಲಾವಿದರುಗಳನ್ನು ರೂಪಿಸಿದ್ದಾರೆ. ಕಲಿಯುವ ಹಂಬಲವಿದ್ದಲ್ಲಿ ಯಾರು, ಯಾವಾಗ, ಯಾವುದೇ ವಿದ್ಯೆಯನ್ನು ಕಲಿತು ಪರಿಣಿತರಾಗಬಹುದು ಎನ್ನುವುದಕ್ಕೆ ಮುರಲೀಧರರಾಯರ ಸಾಧನೆಯೇ ಸಾಕ್ಷಿ. ಎಲ್ಲರಂತಲ್ಲ ರಾಯರು. ಇವರಿಗೆ ಬಾಲ್ಯದಿಂದಲೇ ನೃತ್ಯಕಲೆಯ ಬಗ್ಗೆ ಒಲವು ಮೂಡಿರಲಿಲ್ಲ. ಇವರಿಗೆ ನೃತ್ಯಾಭ್ಯಾಸದ ಗೀಳು ಅಂಟಿದ್ದು ಅವರ ಇಪ್ಪತ್ತೆಂಟನೆಯ ವಯಸ್ಸಿನಲ್ಲಿ. ಅಲ್ಲಿಂದ ಮುಂದೆ, ಹಿಂದೆ ನೋಡದೆ ನಾಟ್ಯಕಲೆಗಾಗಿಯೇ ತಮ್ಮ ಜೀವನವನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡವರು ಮುರಲೀಧರರಾಯರು.

ಕಲೆಯನ್ನೇ ವರಿಸಿದಾತನಿಗೆ ಸಂಸಾರವುಂಟೇ ಎಂಬ ಮಾತು. ಇವರ ವಿಷಯದಲ್ಲಿ ಅಕ್ಷರಶಃ ಸತ್ಯ. ಕಲೆಗೇ ತಮ್ಮ ಬದುಕನ್ನು ಮೀಸಲಿರಿಸಿ ಕಲಾತಪಸ್ಸನ್ನು ನಡೆಸುತ್ತಿರುವ ಬ್ರಹ್ಮಚಾರಿ ಮುರಲೀಧರರಾಯರಿಗೆ ಈಗ ೭೮ ವರ್ಷ ವ;ಯಸ್ಸು ತುಂಬಿದೆ. ತಮ್ಮ ಐವತ್ತು ವರ್ಷಗಳ ನಾಟ್ಯ ಜೀವನದಲ್ಲಿ ಅವರು ಕಂಡುಂಡ ನೋವು-ನಲಿವುಗಳು ಹಲವು. ಹಾಗೆಯೇ ಸಾಧನೆ ಸಿದ್ಧಿಗಳು ಮುಂದಿನ ತಲೆಮಾರಿನವರೆಗೆ ಅಮೂಲ್ಯವಾದವುಗಳಾಗಿವೆ.

 

ಕೆ. ಮುರಲೀಧರ ರಾವ್‌ ಅವರ ತಂದೆ ಪ್ರಾಥಮಿಕ ಶಾಲೆಯೊಂದರಲ್ಲಿ ಅಧ್ಯಾಪಕರಾಗಿದ್ದವರು. ಚಿಕ್ಕಪ್ಪ ಕೂಡ್ಲು ಮೇಳದಲ್ಲಿದ್ದ ಯಕ್ಷಗಾನ ಕಲಾವಿದರು. ಅದೇ ಅವರ ಕಲೆಯ ಹಿನ್ನೆಲೆ. ತಮ್ಮ ೧೨ನೆಯ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ವಿದ್ಯೆಯೊಂದಿಗೆ ತಮ್ಮ ಅನಾಥ ಪ್ರಜ್ಞೆಯನ್ನು ಮರೆತವರು ರಾಯರು. ತಮ್ಮ ವಿದ್ಯಾಭ್ಯಾಸವನ್ನು ಎಸ್ಸೆಸ್ಸೆಲ್ಸಿಗೇ ಮೊಟಕುಗೊಳಿಸಬೇಕಾಯಿತಾದರೂ ಇವರು ಜೀವನ ಪಾಠಶಾಲೆಯಲ್ಲೇ ಕಲಿತದ್ದು ಹೆಚ್ಚು. ಅವರ ಸತತವಾದ ಅಧ್ಯಯನ, ಕಠಿಣ ಪರಿಶ್ರಮ, ಕಲಾರಂಗದಲ್ಲಿನ ಸೃಜನಶೀಲ ಕೊಡುಗೆಗಳು ಅವರನ್ನು ಎತ್ತರ ಎತ್ತರಕ್ಕೆ ಕೊಂಡೊಯ್ದವು.

ಮಂಗಳೂರಿನಲ್ಲಿದ್ದಾಗ ಮೊದಲಿಗೆ ಶೀಘ್ರಲಿಪಿ, ಬೆರಳಚ್ಚು (typing) ತರಬೇತಿ ಪಡೆದಿದ್ದ ಅವರು ಎಲ್ಲೋ ಗುಮಾಸ್ತರಾಗಿಯೇ, ಬೆರಳಚ್ಚುಗಾರರಾಗಿಯೇ ಇರಬಹುದಾಗಿತ್ತು. ಆದರೆ ಕಲೆ ಅವರನ್ನು ಕೈ ಬೀಸಿ ಕರೆದಿತ್ತು. ರೇಖಾಚಿತ್ರ ಹಾಗೂ ವರ್ಣ ಚಿತ್ರಗಳ ರಚನೆಯಲ್ಲೂ ಇವರದ್ದು ಎತ್ತಿದ ಕೈ. ಛಾಯಾಗ್ರಹಣ ಕಲೆಯನ್ನು ಇವರು ಆಸಕ್ತಿಯಿಂದ ಮೈಗೂಡಿಸಿಕೊಂಡಿದ್ದರು. ಹೀಗಾಗಿ ಈ ವಿವಿಧ ವಿದ್ಯೆಗಳ ಬಲದಿಂದಲೇ ಹೊಸ ಭವಿಷ್ಯವನ್ನು ರೂಪಿಸಿಕೊಳ್ಳುವ ಸಲುವಾಗಿ ಮುಂಬೈಯಲ್ಲೂ ಕೆಲಕಾಲ ನೆಲೆಸಿದ್ದರು. ಮುಂಬಯಿಯಲ್ಲಿ ಇದ್ದಾಗಲೇ ಅವರಿಗೆ ರಾಜನ್‌ಅಯ್ಯರ್ ಎಂಬ ಕಥಕ್ಕಳಿ ನೃತ್ಯಗುರುಗಳ ಪರಿಚಯ ಆಯಿತು. ವಯಸ್ಸಿನಲ್ಲಿ ರಾಯರಿಗಿಂತ ಎರಡು ವರ್ಷ ಹಿರಿಯರಾಗಿದ್ದ ಅಯ್ಯರ್ ಮುರಲೀಧರರಾಯರಿಗೆ ನೃತ್ಯ ಪಾಠ ಆರಂಭಿಸಿದ ಮೊದಲ ಗುರು. ಗುರು-ಶಿಷ್ಯರ ಬಾಂಧವ್ಯದ ಬಂಧನ ಬಿಡದೆ ಭದ್ರವಾಗಿತ್ತು. ಹೀಗಾಗಿ ರಾಜನ್‌ ಅಯ್ಯರ್ ಅವರು ರಾಯರ ಆಹ್ವಾನದ ಮೇರೆಗೆ ಮಂಗಳೂರಿಗೆ ಹೋಗಿ, ಅಲ್ಲಿ ಇಬ್ಬರೂ ಸೇರಿ ‘ಲಲಿತಕಲಾ ಕೇಂದ್ರ’ ನೂತನ ಕಲಾಶಾಲೆ ಸ್ಥಾಪಿಸಿದರು. ಗುರು ಶಿಷ್ಯರ ಈ ಸಂಬಂಧ ಸುಮಾರು ೧೯೬೨ರ ವರೆಗೂ ಮುಂದುವರೆಯಿತು. ಅನಂತರ ನೃತ್ಯಕಲೆಯಲ್ಲಿ ಇನ್ನೂ ಹೆಚ್ಚಿನ ಪರಿಪೂರ್ಣತೆ ಪಡೆಯಲು ಮುರಲೀಧರ ರಾ‌ವ್‌ ಅವರು ಪಂದನಲ್ಲೂರು ಶೈಲಿಯ ನ್ಯಾಸಧಾರಿ ನಾಟ್ಯಕಲಾನಿಧಿ ಚೊಕ್ಕಲಿಂಗಂ ಪಿಳ್ಳೈ ಅವರಲ್ಲಿಗೆ ಹೋಗಿ ಮದರಾಸಿನಲ್ಲಿ ಎರಡು ತಿಂಗಳ ಕಾಲ ಪ್ರಾರಂಭಿಕ ಶಿಕ್ಷಣ ಪಡೆದರು. ನಂತರ ಅವರ ಶಿಷ್ಯ ರಾಜರತ್ನಂ ಪಿಳ್ಳೈ ಎಂಬುವವರು ಕೊಚ್ಚಿನ್‌ನಲ್ಲಿದ್ದರು , ಅವರಿಂದ ಸುಮಾರು ಐದು ವರ್ಷಗಳ ಕಾಲ ಅಂದರೆ ಸುಮಾರು ೧೯೬೨ರಿಂದ ೧೯೬೭ರ ವರೆಗೆ ನಾಟ್ಯಾಭ್ಯಾಸ ಮಾಡಿದರು. ಪ್ರಾಯೋಗಿಕ ಶಿಕ್ಷಣ ಗುರುಗಳಿಂದ ಸಿಕ್ಕಿದರೆ ಶಾಸ್ತ್ರ ಶಿಕ್ಷಣವನ್ನು ರಾಯರು ತಮ್ಮ ಸ್ವಂತ ಅಧ್ಯಯನಶೀಲತೆಯಿಂದ ಪಡೆದುಕೊಂಡರು. ಆಳವಾದ ಶಾಸ್ತ್ರದ ತಿಳುವಳಿಕೆ ಇಲ್ಲದಿದ್ದಲ್ಲಿ ನೃತ್ಯಪ್ರಯೋಗ ಪರಿಣಾಮಕಾರಿಯಾಗಲಾರದೆಂಬುದನ್ನು ಬಲವಾಗಿ ನಂಬಿದ್ದ ಮುರಲೀಧರರಾಯರು ನೃತ್ಯಕಲೆಗೆ ಸಂಬಂಧಿಸಿದ ಎಲ್ಲಾ ಶಾಸ್ತ್ರಗ್ರಂಥಗಳನ್ನು ಆಳವಾಗಿ ಅಭ್ಯಸಿಸಿದರು. ಪರಂಪರೆಯ ಹೆಸರಿನಲ್ಲಿ ಜಡವಾಗಿದ್ದ ಭರತನಾಟ್ಯದಲ್ಲಿ ನವ ಅನ್ವೇಷಣೆ ಮಾಡಿ ತಮ್ಮ ಪ್ರತಿಯೊಂದು ಪ್ರಯೋಗಗಳಲ್ಲೂ ಸ್ವಂತಿಕೆಯನ್ನು ತೋರಿಸಿಕೊಟ್ಟವರು ಮುರಲೀಧರರಾಯರು.

ಇವರು ಮಂಗಳೂರಿನಲ್ಲಿದ್ದಾಗ ಹಲವಾರು ನೃತ್ಯರೂಪಕಗಳನ್ನು ಸಂಯೋಜಿಸಿದ್ದರು ನಿಜ. ಆದರೆ ೧೯೮೪ರಲ್ಲಿ ಅವರ ನಿರ್ದೇಶನದಲ್ಲಿ ಮೈಸೂರಿನಲ್ಲಿ ಪ್ರದರ್ಶಿತವಾದ ‘ಪುರಂದರದಾಸರು’ ಎಂಬ ನೃತ್ಯರೂಪಕವಂತೂ ರಾಯರ ನೈಜ ಪ್ರತಿಭೆಗೆ ಹಿಡಿದ ಕನ್ನಡಿಯಂತಿತ್ತು. ಮೂರುಗಂಟೆಗಳ ಅವಧಿಯ ಈ ರೂಪಕದಲ್ಲಿ ಸ್ವತಃ ಮುರಲೀಧರರಾಯರೇ ಪುರಂದರದಾಸರ ಪಾತ್ರ ನಿರ್ವಹಿಸಿ ಪ್ರೇಕ್ಷಕರನ್ನು ತನ್ಮಯಗೊಳಿಸಿದರು. ಸುಮಾರು ಇಪ್ಪತ್ತೈದು ಮಂದಿ ಕಲಾವಿದರಾಗಿದ್‌ದ ಈ ರೂಪಕದಲ್ಲಿ ಒಂದೇ ವೇದಿಕೆ ಮೇಲೆ ಏಕಕಾಲಿಕವಾಗಿ ಮೂರು ಹಂತಗಳಲ್ಲಿ ದೃಶ್ಯಗಳನ್ನು ಪ್ರದರ್ಶಿಸಿದ್ದು ಇಲ್ಲಿಯ ವೈಶಿಷ್ಟ್ಯವಾಗಿತ್ತು.

ಪುರಂದರದಾಸರ ಪಾತ್ರ ನಿರ್ವಹಿಸಿದ್ದ ರಾಯರ ತಾದಾತ್ಮ್ಯಭಾವ ಯಾವ ಮಟ್ಟವನ್ನು ಮುಟ್ಟಿತ್ತೆಂದರೆ ಪ್ರದರ್ಶನದ ಅಂತಿಮ ದೃಶ್ಯದಲ್ಲಿ ದಾಸರ ಆತ್ಮ ಶ್ರೀಕೃಷ್ಣನಲ್ಲಿ ಐಕ್ಯವಾದಾಗ ತುಂಬಿದ ಸಭೆಯೇ ಶೋಕಿಸುತ್ತಿತ್ತು. ಆಗ ಹಿರಿಯ ವಿಮರ್ಶಕರು ಹೇಳಿದ ಈ ಮಾತು ಉಲ್ಲೇಖನೀಯ-“ಉತ್ತಮ ಕಲಾವಿದ, ಉತ್ತಮ ಯೋಜಕ, ಉತ್ತಮ ಸಂಘಟಕ ಮತ್ತು ನಿರ್ದೇಶಕ ಏಕವ್ಯಕ್ತಿಯಲ್ಲಿ ಆವಾಹನೆಗೊಂಡಾಗ ಮಾತ್ರವೇ ಈ ಪರಮಸಿದ್ಧಿ ಸಾಧ್ಯ” ಹೌದು ಮುರಲೀಧರರಾಯರು ಒಬ್ಬ ಸವ್ಯಸಾಚಿ. ನೃತ್ಯಕಲೆಗೆ ಪೂರಕವಾಗಿದ್ದ ಇನ್ನಿತರಕ ಎಲ್ಲ ಲಲಿತಕಲೆಗಳೂ ಅವರಿಗೆ ಕರಗತವಾಗಿದೆ.

ಅವರೊಬ್ಬ ಉತ್ತಮ ಚಿತ್ರಕಲಾವಿದರೂ ಹೌದು. ೧೯೬೦-೬೨ರಲ್ಲಿ ಮಂಗಳೂರಿನ ಶಾರದಾಪ್ರೆಸ್‌ ಪ್ರಕಟಿಸಿದ್ದ ಕನ್ನಡ ಭೂಪಟಗಳನ್ನು ಚಿತ್ರಿಸಿದವರು ಇವರೇ. ೧೯೭೧-೭೩ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಗಂಗೋತ್ರಿಯಲ್ಲಿ ಕಿರಿಯರ ವಿಶ್ವಕೋಶ ವಿಭಾಗದಲ್ಲಿ ಚಿತ್ರ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಅಲ್ಲಿ ಅದರ ಸಂಪಾದಕರು ಸೂಚಿಸುವ ಚಿತ್ರ ಮಾತ್ರವಲ್ಲದೆ ಪ್ರಕಟವಾಗುವ ಲೇಖನಗಳಿಗೆ ಪೂರಕವಾದ ಚಿತ್ರ ಬಿಡಿಸುವುದರಲ್ಲೂ ಇವರು ತಮ್ಮ ಪ್ರತಿಭೆ ಮೆರೆಸಿದ್ದರು. ಮೈಸೂರಿನ ಹಲವು ಮಂದಿ ಪ್ರಖ್ಯಾತ ಸಾಹಿತಿಗಳ ಕಾದಂಬರಿಗಳಿಗೆ ಮತ್ತಿತರ ಗ್ರಂಥಗಳಿಗೆ ಮುಖಪುಟ ಚಿತ್ರಗಳನ್ನು ಬರೆದಿರುವ ರಾಯರು ಅತ್ಯುತ್ತಮ ಛಾಯಾಗ್ರಾಹಕರು ಕೂಡ.

ಇವರ ವೈಯ್ಯಕ್ತಿಕ ಗ್ರಂಥ ಭಂಡಾರವೇ ಅವರ ಒಂದು ದೊಡ್ಡ ಆಸ್ತಿ. ಕಲೆ, ವಿಜ್ಞಾನ, ಸಂಗೀತ, ನೃತ್ಯ, ಸಾಹಿತ್ಯಗಳಿಗೆ ಸಂಬಂಧಿಸಿದ ಅಮೂಲ್ಯ ಪುಸ್ತಕಗಳನ್ನೆಲ್ಲ ಅವರು ಸಂಗ್ರಹಿಸಿದ್ದಾರೆ. ತಮ್ಮ ವಿದ್ವತ್‌, ಬೋಧನಾನುಭವ ಮತ್ತು ಜೀವನದರ್ಶನವನ್ನು ಸಂಲಗ್ನಿಸಿ ಅವರು ‘ನೃತ್ಯಲೋಕ’ ಎಂಬ ಬೃಹತ್‌ಶಾಸ್ತ್ರ ಗ್ರಂಥವೊಂದನ್ನು ಬರೆದಿದ್ದಾರೆ. ನೃತ್ಯಕಲೆಯ ಶಾಸ್ತ್ರೀಯ ಪರಂಪರೆ, ಅರ್ವಾಚೀನ ದರ್ಶನ, ಮತ್ತು ಭವಿಷ್ಯದ ಸಾಧ್ಯತೆಗಳ ಚಿತ್ರಣಗಳನ್ನೊಳಗೊಂಡ ಈ ಮೌಲಿಕ ಗ್ರಂಥ ಕನ್ನಡದಲ್ಲಿ ಭರತನಾಟ್ಯದ ಬಗ್ಗೆ ಪ್ರಕಟವಾದ ಒಂದು ಅಪರೂಪದ ಪುಸ್ತಕವಾಗಿದೆ. ಸುಮಾರು ಐದು ನೂರು ಪುಟಗಳ ಈ ಗ್ರಂಥದಲ್ಲಿ ಮುರಲೀಧರರಾಯರೇ ಚಿತ್ರಿಸಿರುವ ಸುಮಾರು ೩೪೫ ರೇಖಾಚಿತ್ರಗಳು ಮಾತ್ರವಲ್ಲದೆ ಅವರೇ ತೆಗೆದಿರುವ ೬೩ ಛಾಯಾಚಿತ್ರಗಳಿವೆ. ಮಂಗಳೂರಿನ ಅತ್ರಿ ಬುಕ್‌ ಸೆಂಟರಿನವರು ಈ ಪುಸ್ತಕವನ್ನು ಪ್ರಕಟಿಸಿದ್ದು ನೃತ್ಯಾಭ್ಯಾಸಿಗಳಿಗೆ ಮಾತ್ರವಲ್ಲದೆ ಇದು ನೃತ್ಯಾಸಕ್ತರಿಗೂ ಉಪಯುಕ್ತ ಗ್ರಂಥವಾಗಿದೆ.

ಕರ್ನಾಟಕಲ ಪಠ್ಯಪುಸ್ತಕ ನಿರ್ದೇಶನಾಲಯವು ಭರತನಾಟ್ಯ ಮಾಧ್ಯಮಿಕ ದರ್ಜೆಯ ಪಠ್ಯಪುಸ್ತಕ ಹೊರತರುತ್ತಿದ್ದು ಆ ಪಠ್ಯಪುಸ್ತಕ ಸಮಿತಿಯಲ್ಲಿಯೂ ಕಾರ್ಯನಿರ್ವಹಿಸಿರುವ ಮುರಲೀಧರರಾಯರು ಹಲವಾರು ನಿಯತ ಕಾಲಿಕಗಳಿಗಾಗಿ ಹಾಗೂ ವೃತ್ತಪತ್ರಿಕೆಗಳಿಗಾಗಿ ನೃತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ವಿದ್ವತ್‌ದರ್ಜೆ ಪ್ರಾಯೋಗಿಕಕ ಪರೀಕ್ಷೆಗಳಿಗೆ ಹಲವು ಬಾರಿ ಪರೀಕ್ಷಕರಾಗಿ ಕಾರ್ಯನಿರ್ವಹಿಸಿರುವ ಮುರಲೀಧರರಾಯರು ಪರೀಕ್ಷೆಯ ಗುಣಮಟ್ಟವನ್ನು ಕಾಪಾಡುವ ಸಲುವಾಗಿ ತುಂಭ ನಿಷ್ಠುರತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ.

ನಾಟ್ಯಾಚಾರ್ಯ ಕೆ. ಮುರಲೀಧರರಾಯರು ಜ್ಞಾನ ದಾಸೋಹವನ್ನು ನಿರಂತರವಾಗಿ ಶ್ರದ್ಧೆ,ನಿಷ್ಠುರತೆ ಮತ್ತು ನಿಸ್ವಾರ್ಥ ಮನೋಭಾವದಿಂದ ನಡೆಸಿಕೊಂಡು ಬಂದವರು. ಅವರು ಸರಸ್ವತೀ ಆರಾಧಕರೇ ವಿನಃ ಲಕ್ಷ್ಮಿಯ ಆರಾಧನೆ ಮಾಡಲೇ ಇಲ್ಲ. ಪ್ರತಿಯೊಬ್ಬ ಶಿಷ್ಯರನ್ನೂ ತರಬೇತಿಗೊಳಿಸುವಾಗ, ಯಾವುದೇ ರೂಪಕವನ್ನು ಸಂಯೋಜಿಸುವಾಗ ನೃತ್ಯನಾಟಕಗಳನ್ನು  ನಿರ್ದೇಶಿಸುವಾಗ ಒದಗುವ ಅಡೆತಡೆಗಳನ್ನು, ಇತಿಮಿತಿಗಳನ್ನು ಸವಾಲಿನಂತೆ ಸ್ವೀಕರಿಸಿ ತಮ್ಮ ಕಲಾ ಭಿಜ್ಞತೆಯನ್ನು ಪ್ರದರ್ಶನಗಳಲ್ಲಿ ಎತ್ತಿ ಹಿಡಿಯುತ್ತಿದ್ದರು. ೧೯೮೬ರಲ್ಲಿ ಮೈಸೂರಿನಲ್ಲಿ ನವರಸ ರಾಮಾಯಣ ಎಂಬ ನೃತ್ಯರೂಪಕವೊಂದನ್ನು ಅವರು ನಿರ್ದೇಶಿಸಿದ ರೀತಿಯಂತೂ ಅವರ ಸೃಜನಶೀಲತೆ ಹಾಗೂ ಶಿಸ್ತುಬದ್ಧತೆಗೆ ಒಂದು ನಿದರ್ಶನದಂತಿತ್ತು. ಕೇವಲ ಆರು ವಾರಗಳ ಅವಧಿಯಲ್ಲಿ ನೃತ್ಯದ ಮೂಲಭೂತ ಅಂಶಗಳನ್ನು ಅರಿತಿರದ ಹಲವು ಮಂದಿ ಯುವಕಕ ಯುವತಿಯರನ್ನು ಕಲೆ ಹಾಕಿ ಯಶಸ್ವಿ ಕಲಾ ಪ್ರದರ್ಶನವನ್ನು ಕೊಡಿಸಿದ ರೀತಿ ಮೆಚ್ಚುವಂತಿತ್ತು.

ಇಲ್ಲಿ ಪ್ರತಿಯೊಂದೂ ಪಾತ್ರವನ್ನು ಅವರೇ ಶಿಷ್ಯರಿಗೆ ಅಭಿನಯಿಸಿ ತೋರಿಸಿದರು. ಎಳೆಯರನ್ನು  ಕುಣಿಸಿ ತಿದ್ದಿದರು, ಸನ್ನಿವೇಶಗಳ ರಹಸ್ಯವನ್ನು ಮನಮುಟ್ಟುವಂತೆ ಕಥೆ ಹೇಳಿ ಚಿತ್ರಿಸಿದರು. ಮಕ್ಕಳ ಆತ್ಮ ವಿಶ್ವಾಸ ಎತ್ತರಕ್ಕೇರುವಂತೆ ಸ್ಫೂರ್ತಿ ನೀಡಿದರು. ಆದ್ದರಿಂದಲೇ ಪ್ರದರ್ಶನದ ದಿನ ವೃತ್ತಿಕಲಾವಿದರ ಪರಿಪೂರ್ಣತೆಯ ಮಟ್ಟವನ್ನು ಮೀರಿ ಈ ಕಾರ್ಯಕ್ರಮ ಯಶಸ್ಸು ಗಳಿಸಿತ್ತು. ಮುರಲೀಧರರಾಯರು ಮೈಸೂರಿನ ಪುರಂದರ ರೂಪಕದಲ್ಲಿ ಪುರಂದರದಾಸರಾಗಿ ವೇದಿಕೆಯ ಮೇಲೆ ಕಾಣಿಸಿಕೊಂಡದ್ದು ಬಿಟ್ಟರೆ ಇನ್ನೆಲ್ಲೂ ವೇದಿಕೆ ಹತ್ತಿಲ್ಲ. ಆದರೆ ೧೯೭೧ರಲ್ಲಿ ವಿದ್ವತ್‌ ಪರೀಕ್ಷೆಗೆ ಹಾಜರಾದಾಗ ಮಾತ್ರಾ ಅನಿವಾರ್ಯವಾಗಿ ಪರೀಕ್ಷಕರ ಪ್ರಶ್ನೆಗೆ ತಕ್ಕಂತೆ ಕುಣಿಯಲೇಬೇಕಾಯ್ತು. ಅದರಲ್ಲಿ ಪ್ರಥಮ ಸ್ಥಾನವನ್ನೂ ಗಳಿಸಿದ್ದಾಯ್ತು. ಆದರೆ ಪುರುಷರು ಭರತನಾಟ್ಯ ಪ್ರದರ್ಶಿಸುವ ಬಗೆಗೆ ರಾಯರಿಗೆ ಸಮಾಧಾನ ಮಾತ್ರಾ ಇಲ್ಲ. ಪುರುಷರ ಪ್ರದರ್ಶನವನ್ನು ಅವರು  ಪುರಸ್ಕರಿಸುವುದಿಲ್ಲ. ಭರತನಾಟ್ಯ ಸ್ತ್ರೀಯರಿಗೆ ಮಾತ್ರಾ ಯೋಗ್ಯವಾದದ್ದು ಎಂಬುದೇ ಅವರ ಅಭಿಮತ. ಹಾಗಾದರೆ ಗಂಡು ಮಕ್ಕಳು ಏನು ಕಲಿಯಬೇಕು ಎಂಬ ಪ್ರಶ್ನೆಗೆ ಕಥಕ್ಕಳಿ, ಕೂಚಿಪುಡಿ, ಯಕ್ಷಗಾನ ಮುಂತಾದ ಪ್ರಕಾರಗಳು ಇವೆಯಲ್ಲ ಎನ್ನುತ್ತಾರೆ. ಕಲಿತವರು ನೃತ್ಯಗುರುಗಳಾಗಿ ಇತರರಿಗೆ ಕಲಿಸಬೇಕೇ ಹೊರತು ಪ್ರದರ್ಶನಕ್ಕಿಳಿವ ಬಗ್ಗೆ ಅವರು ಮತ ನೀಡುವುದಿಲ್ಲ.

ಮುರಲೀಧರರಾಯರಿಂದ ತರಬೇತಿ ಪಡೆದ ಮಂದಿ ಶಿಷ್ಯರು ಇಂದು ವೃತ್ತಿಪರ ಕಲಾವಿದರಾಗಿದ್ದಕೊಂಡು ಮೈಸೂರು, ಬೆಂಗಳೂರು, ಮಡಿಕೇರಿ, ಸುಳ್ಯ, ಪುತ್ತೂರು ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ ನೃತ್ಯ ತರಗತಿಗಳನ್ನೂ ನಡೆಸುತ್ತಿದ್ದು ಪ್ರದರ್ಶನಗಳನ್ನೂ ನೀಡುತ್ತಿದ್ದು ಮುರಲೀಧರರಾಯರ ಕಲಾ ಪರಂಪರೆಯನ್ನು ಬಳಸಿ ಬೆಳೆಸುತ್ತಿದ್ದಾರೆ. ಮುಖ್ಯವಾಗಿ ಮೈಸೂರಿನ ಡಾ. ವಸುಂಧರಾ ದೊರೆಸ್ವಾಮಿ, ಕೃಪಾ ಫಡ್ಕೆ, ಮಂಗಳೂರಿನ ಶಾರದಾಮಣಿ ಶೇಖರ, ಮಡಿಕೇರಿಯ ಶ್ರೀವಿದ್ಯಾ, ಬೆಂಗಳೂರಿನ ಜ್ಯೋತಿ, ಶುಭಾರಾಣಿ, ಸೀತಾ ಶಶಿಧರ, ನಯನಾ ಮೈಸೂರು ಮುಂತಾದವರು ಮಾತ್ರವಲ್ಲದೆ ಮೈಸೂರಿನವರೇ ಆಗಿದ್ದು ಈಗ ವಿದೇಶದಲ್ಲಿ ನೆಲೆಸಿರುವ ವಾಣಿ ರಮೇಶ್‌, ನಂದಿನೀ ಅಯ್ಯಂಗಾರ್, ಯಮುನಾರಾಣಿ ಮುಂತಾದವರೂ ಮುರಲೀಧರ ರಾಯರ ನಾಟ್ಯಪರಂಪರೆಯನ್ನು ಪಸರಿಸುತ್ತಿದ್ದಾರೆ.

ಮುರಲೀಧರರಾಯರ ಕಲಾಸಿದ್ಧಿ, ಅವರ ನೃತ್ಯ ಶೈಲಿಯ  ಪ್ರಸಿದ್ಧಿ, ಶಿಕ್ಷಣಕ್ರಮ ಹಾಗೂ ಕಲಾಪ್ರತಿಭೆಯ ಪ್ರಭಾವಳಿಯಿಂದ ಆಕರ್ಷಿತಳಾಗಿ ಇವರ ಬಳಿ ಶಿಷ್ಯವೃತ್ತಿ ಹೊಂದಲು ಆಶಿಸಿ ಬಂದ ಫ್ರೆಂಚ್‌ ತರುಣಿ ಕಾಟಿಯಾ-ಲೇಜೆರೆ (ನಂತರ ಅವಳು ಇಟ್ಟುಕೊಂಡಿದ್ದ ಭಾರತೀಯ ಹೆಸರು ಮನೋಛಾಯಾ) ಎಂಬಾಕೆಯನ್ನು ಕೆಲವೇ ತಿಂಗಳುಗಳಲ್ಲಿ ಅತ್ಯುನ್ನತ ಮಟ್ಟದ ನೃತ್ಯಕಲಾವಿದೆಯಾಗಿ ರೂಪಿಸಿದ ಕೀರ್ತಿ ಕೂಡಾ ಇವರದ್ದಾಗಿದೆ. ಈಗ ಮನೋಛಾಯ ಓರ್ವ ಪರಿಪೂರ್ಣ ಕಲಾವಿದೆಯಾಗಿ ರೂಪುಗೊಂಡಿದ್ದಾಳಲ್ಲದೆ ಭರತನಾಟ್ಯದ ಬಗ್ಗೆ ಫ್ರೆಂಚ್‌ ಭಾಷೆಯಲ್ಲಿ ಆಕೆ ಹಲವಾರು ಸಂಶೋಧನಾ ಗ್ರಂಥಗಳನ್ನು ಬರೆದು ಪ್ರಕಟಿಸಿ ತನ್ನ ಗುರುಗಳಿಗೆ ಆ ಗ್ರಂಥಗಳನ್ನು ಸಮರ್ಪಿಸಿ ಗುರುಗಳಿಗೆ ಹೆಮ್ಮ ತರುವಂತೆ ಮಾಡಿದ್ದಾಳೆ. ಫ್ರೆಂಚ್‌ ಸರ್ಕಾರ ೧೯೮೬ರಲ್ಲಿ ಪ್ಯಾರಿಸ್‌ನಲ್ಲಿ ನಡೆಸಿದ ಇಂಡಿಯಾ ಯೂತ್‌ ಫೆಸ್ಟಿವಲ್‌ನಲ್ಲಿ ಮನೋಛಾಯಳ ನೃತ್ಯಪ್ರದರ್ಶನ ವ್ಯವಸ್ಥೆಗೊಳಿಸಿ ರಾವ್‌ ಅವರನ್ನು ಫ್ರೆಂಚ್‌ ಸರ್ಕಾರ ಅಲ್ಲಿಗೆ ಆಹ್ವಾನಿಸಿತ್ತು. ಅಲ್ಲಿ ಕಾಡಿಯಾ ನೀಡಿದ ತೊಂಬತ್ತು ನಿಮಿಷಗಳ ಕಾರ್ಯಕ್ರಮದ ಬಗ್ಗೆ ಅಲ್ಲಿನ ವೃತ್ತ ಪತ್ರಿಕೆಗಳು ಶ್ಲಾಘಿಸಿ ಬರೆದಿವೆ. ಅನಂತರ ಮತ್ತೆ ೧೯೮೮ರಲ್ಲಿ ಫ್ರಾನ್ಸ್‌, ಜರ್ಮನಿ, ಸ್ವಿಡ್ಜರ್ ಲೆಂಡ್‌ ಮೊದಲಾದ ದೇಶಗಳಲ್ಲೆಲ್ಲಾ ಮನೋಛಾಯಾ ನೃತ್ಯಪ್ರದರ್ಶನ ನೀಡಿ ಜಯಭೇರಿ ಹೊಡೆದಿರುವುದು ಮುರಳೀಧರರಾಯರ ನೃತ್ಯ ಶೈಲಿಯ ಅಂತಸ್ಸತ್ವದ ಹಿರಿಮೆಯಲ್ಲದೆ ಮತ್ತಿನ್ನೇನು? ಯಾವುದೇ ಒಂದು ನೃತ್ಯ ಕಾರ್ಯಕ್ರಮಕ್ಕೆ ಮುನ್ನ ಸತತಾಭ್ಯಾಸವೇ ಮುಖ್ಯ. ಯೋಜನಾಬದ್ಧತೆ, ಉಲ್ಲಾಸ ಪೂರ್ಣ ಪ್ರದರ್ಶನ ಕಾರ್ಯಕ್ರಮದ ಯಶಸ್ಸಿಗೆ ಅತ್ಯಾವಶ್ಯಕವೆಂದು ಶಿಷ್ಯರಿಗೆ ಸದಾ ಕಿವಿ ಮಾತು ಹೇಳುತ್ತಿದ್ದ ರಾಯರು ಪಾತ್ರಗಳಲ್ಲಿ ತಾದಾತ್ಮ್ಯ ಸಿದ್ಧಿಸುವಂತೆ ಮಾಡಿಸುತ್ತಿದ್ದರು ಹಾಗೆಯೇ ಆಯಾಯಾ ಸನ್ನಿವೇಶಗಳಲ್ಲಿನ ಪಾತ್ರ ಪ್ರಜ್ಞೆ ಮೂಡಿಸುವ ಗರಿಷ್ಠ ಪ್ರಯತ್ನ ಮಾಡಿಸುತ್ತಿದ್ದರು. ಸೃಷ್ಟಿಲೀಲೆಯ ತುಂಟ ಕೃಷ್ಣನ ಚೇಷ್ಟೆಗಳಿರಬಹುದು, ಜಯದೇವನ ಅಷ್ಟಪದಿಗಳಲ್ಲಿ ಬರುವ ರಾಧೆಯ ವಿರಹ ತಾಪದ ಚಿತ್ರಣವಿರಬಹುದು. ಪದ ವರ್ಣಗಳಲ್ಲಿನ ನಾಯಿಕೆಯ ವಿವಿಧ ಅವಸ್ಥೆಗಳನ್ನು ವಿವರಿಸುವ ಅಂಶಗಳಿರಬಹುದು ಅಥವಾ ಗಜೇಂದ್ರ ಮೋಕ್ಷ. ಪೂತನಿ ಸಂಹಾರದಂತಹ ಸಂಚಾರೀ ಭಾವಗಳಿರಬಹುದು. ಈ ಎಲ್ಲಾ ಸನ್ನಿವೇಶಗಳ ಚಿತ್ರಣದಲ್ಲೂ ಇವರ ಶಿಷ್ಯರು ಅವುಗಳನ್ನು ವೇದಿಕೆಯ ಮೇಲೆ ಸೃಷ್ಟಿಸುವಾಗ ಸನ್ನವೇಶಕ್ಕೆ ತಕ್ಕಂತೆ ಪ್ರೇಕ್ಷಕರೂ ಆಯಾಯಾ ಪಾತ್ರಗಳೇ ಆಗಿ ರಸಾನುಭವ ಪಡೆಯುವಂತೆ ಮಾಡಿಸುವ ಸಾಮರ್ಥ್ಯ ರಾಯರದ್ದಾಗಿದೆ.

೧೯೯೦ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕಕ ಕಲಾತಿಲಕ ಪ್ರಶಸ್ತಿ ಬಂದಾಗಲೇ ಆಗಲಿ ಅಥವಾ ೨೦೦೦ನೇ ಇಸವಿಯಲ್ಲಿ ರಾಜ್ಯ ಸರ್ಕಾರದ ಪ್ರತಿಷ್ಠಿತ ಶಾಂತಲಾ ಪ್ರಶಸ್ತಿ ದೊರೆತಾಗಲೇ ಆಗಲಿ ಅವುಗಳಿಗಾಗಿ ಎಂದೂ ಪರಿತಪಿಸದಿದ್ದ ಮುರಲೀಧರರಾಯರು ಸ್ಥಿತಪ್ರಜ್ಞರಂತೆಯೇ ಇದ್ದರು. ಕಷ್ಟ ಬಂದಾಗ ಕುಗ್ಗಿ ಸುಖ ಬಂದಾಗ ಹಿಗ್ಗಿದವರು ಇವರಲ್ಲ. ಹಣ ಮತ್ತು ಕೀರ್ತಿ ಸಂಪಾದನೆಗಾಗಿ ಇವರು ಎಂದೂ ಹಾತೊರೆಯಲಿಲ್ಲ. ಹಣ, ಹೆಸರು ಅಶಾಶ್ವತ. ಕಲೆಯನ್ನು ಉಳಿಸಿ ಬೆಳೆಸಲು ಶಕ್ತಿ ಇರುವವರೆಗೂ ಪ್ರಯತ್ನಿಸುವುದೊಂದೇ ಶಾಶ್ವತವಾದ ಕೆಲಸವೆಂದು ಬಲವಾಗಿ ನಂಬಿರುವ ಅವರು ತಮ್ಮ ಈ ಇಳಿ ವಯಸ್ಸಿನಲ್ಲೂ ಮಡಿಕೇರಿ, ಮಂಗಳೂರು ಹೀಗೆ ಊರಿಂದೂರಿಗೆ ಓಡಾಡುತ್ತಾ ನೃತ್ಯ ಪಾಠ ಹೇಳುತ್ತಿದ್ದಾರೆ.

 

ಹೀಗೆ ನಾಡಿನ ನಾಟ್ಯಪ್ರಪಂಚದಲ್ಲಿ ‘ರಾಯರೆಂದರೆ ಶ್ರೀ ಕೆ. ಮುರಲೀಧರರಾಯರಯ್ಯ’ ಎಂಬ ಏಕಮೇವಾದ್ವಿತೀಯ ಗೌರವಕ್ಕೆ ಇವರು ಪಾತ್ರಾಗಿರುವುದಂತೂ ಸತ್ಯ.