ಹೆಸರಾಂತ ಯಕ್ಷಗಾನ ಕಲಾವಿದರ ಮನೆತನಕ್ಕೆ ಸೇರಿದ ಕೆ. ಮುರುಳೀಧರರಾವ್ ಇಂದು ಪ್ರಸಿದ್ಧ ನಾಟ್ಯಾಚಾರ್ಯರಾಗಿ ಮೈಸೂರಿನಲ್ಲಿ ನೆಲೆಸಿದ್ದಾರೆ.

೧೯೨೪ರಲ್ಲಿ ಹುಟ್ಟಿದ ಈ ಕಲಾವಿದರು ಇಂಟರ್ ಮೀಡಿಯೇಟ್‌ರವರಿಗೆ ತಮ್ಮ ಸಾಮಾನ್ಯ ವಿದ್ಯಾಭ್ಯಾಸವನ್ನು ಮುಂದುವರಿಸಿ ನಂತರ ನೃತ್ಯ ಕಲೆಯ ಸೊಬಗಿಗೆ ಮನಸೋತು ಅದರ ಅಭ್ಯಾಸಕ್ಕಾಗಿಯೇ ತಮ್ಮ ಇಡೀ ಸಮಯವನ್ನು ಮೀಸಲಾಗಿಟ್ಟರು.

ಭರತ ನಾಟ್ಯದ ಪ್ರಾರಂಭಿಕ ಶಿಕ್ಷಣವನ್ನು ಪಂದನಲ್ಲೂರು ಚೊಕ್ಕಲಿಂಗಂ ಪಿಳ್ಳೆಯವರಲ್ಲಿ ಪಡೆದ ಮುರಳೀಧರರಾವ್ ನಂತರದ ವರ್ಷಗಳಲ್ಲಿ ಎಂ.ಆರ್.ರಾಜರತ್ನಂ ಪಿಳ್ಳೆ ಅವರ ಮಾರ್ಗದರ್ಶನ ಪಡೆದು ಈ ನೃತ್ಯ ಶೈಲಿಯಲ್ಲಿ ಪರಿಗಣಿತರಾದರು.

ಕೇರಳದ ಸುಪ್ರಸಿದ್ಧ ಕಲಾ ಪ್ರಕಾರವಾದ ಕಥಕ್ಕಳಿ ನೃತ್ಯ ಕಲೆಯನ್ನು ಕರಗತ ಮಾಡಿಕೊಳ್ಳುವ ಸಲುವಾಗಿ ಎನ್. ರಾಜನ್ ಅಯ್ಯರ್ ಹಾಗೂ ವಿಜಯಭಾನು ಅವರ ಬಳಿ ಅನೇಕ ವರ್ಷಗಳ ಕಾಲ ಶಿಷ್ಯ ವೃತ್ತಿ ಮಾಡಿ ಕಥಕ್ಕಳಿಯ ನೃತ್ಯಗಳನ್ನು ಅರ್ಥ ಪೂರ್ಣವಾಗಿ ಪ್ರದರ್ಶಿಸುವಂತಾದರು. ೧೯೫೦ರಲ್ಲಿ ಭರತನಾಟ್ಯದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವುದರ ಜೊತೆಗೇ ಅದೇ ವರ್ಷ ಕಥಕ್ಕಳಿ ನೃತ್ಯ ಪ್ರಕಾರದಲ್ಲಿ ರಂಗ ಪ್ರವೇಶ ಕಾರ‍್ಯಕ್ರಮ ನೀಡಿದರು.

ಅಲ್ಲಿಂದ ಮುಂದೆ ಮುರಳೀಧರ ರಾವ್ ಮಹಾರಾಷ್ಟ್ರ ಆಂಧ್ರ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಪ್ರತಿಷ್ಠಿತ ಕಲಾ ಸಭೆಗಳಲ್ಲಿ, ಸಂಸ್ಥೆಗಳಲ್ಲಿ ನೃತ್ಯ ಪ್ರದರ್ಶನ ನೀಡಲಾರಂಭಿಸಿದರು. ಕರ್ನಾಟಕದ ಮುಖ್ಯ ಸಮಾರಂಭಗಳ್ಲಲಿ ಮುರುಳೀಧರರಾವ್ ಅವರ ನೃತ್ಯ ಕಾ ರ್ಯಕ್ರಮಗಳು ನಡೆದು ಜನಮನ್ನಣೆ ಗಳಿಸಿತು. ರಾಜ್ಯದ ಒಳಗೆ ಹಾಗೂ ಹೊರಗೆ ಈ ಕಲಾವಿದರ ಪ್ರತಿಭೆಗೆ ಮನ ಸೋತ ಅನೇಕರು ಮುರಳೀಧರರಾವ್ ಅವರ ಶಿಷ್ಯರಾಗಲು ಬಯಸಿದರು. ಅವರಲ್ಲಿ ಇಂದು ಅನೇಕರಿಗೆ ಮುರಳೀಧರರಾವ್ ನಾಟ್ಯಾಚಾರ್ಯರಾಗಿ ವಿದ್ಯಾದಾನ ಮಾಡಿದ್ದಾರೆ.

ಉಭಯ ನೃತ್ಯ ಪ್ರಕಾರಗಳಲ್ಲಿ ಸುಧೀರ್ಘಕಾಲ ಸೇವೆ ಸಲ್ಲಿಸಿರುವ ಈ ಕಲಾವಿದರಿಗೆ ಅನೇಕ ಸಂಘ-ಸಂಸ್ಥೆಗಳ ಗೌರವಾದರಗಳು ಲಭ್ಯವಾಗಿವೆ.

ಅವುಗಳಲ್ಲಿ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳಲ್ಲದೇ ಪ್ರತಿಷ್ಠಿತ ’ಶಾಂತಲಾ’ ಪ್ರಶಸ್ತಿ ಸಹ ಸೇರಿದೆ.