ಹಿರಿಯ ನೃತ್ಯ ಗುರುಗಳಾದ ಶ್ರೀ ರಾಧಾಕೃಷ್ಣ ತಂತ್ರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೃತ್ಯ ಕಲೆಯ ಅಭಿವೃದ್ಧಿಗೆ ಅನೇಕ ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಬೆಂಗಳೂರಿನ ಶ್ರೀ ವಿ.ಸಿ. ಲೋಕಯ್ಯನವರಿಂದ ಭರತನಾಟ್ಯ ಮತ್ತು ಹೈದರಾಬಾದಿನ ಪದ್ಮಶ್ರೀ ನಟರಾಜ ರಾಮಕೃಷ್ಣ ಅವರಲ್ಲಿ ಆಂಧ್ರ ಸಂಪ್ರದಾಯ ಮತ್ತು ಕೂಚಿಪುಡಿ ಪ್ರಕಾರಗಳನ್ನು ಶ್ರೀ ತಂತ್ರಿ ಅವರು ಅಭ್ಯಾಸ ಮಾಡಿದ್ದಾರೆ. ಹಲವು ವರ್ಷಗಳ ಕಾಲ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಾ ಜನಮನ್ನಣೆ ಗಳಿಸಿರುವ ಶ್ರೀಯುತರು ದೆಹಲಿಯಲ್ಲಿ ಮಾಜಿ ರಾಷ್ಟ್ರಪತಿ ಡಾ|| ರಾಧಾಕೃಷ್ಣನ್ ಅವರ ಸಮ್ಮುಖದಲ್ಲಿ ನೃತ್ಯ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ನೀಡುವ ಅವಕಾಶವನ್ನು ಪಡೆದಿದ್ದರು.

೧೯೯೦ರಲ್ಲಿ ತಮ್ಮ ರಾಧಾಕೃಷ್ಣ ನೃತ್ಯ ನಿಕೇತನ ಸಂಸ್ಥೆಯನ್ನು ಉಡುಪಿಯಲ್ಲಿ ಸ್ಥಾಪಿಸಿದ ನಂತರ ರಾಧಾಕೃಷ್ಣ ಅವರು ಗುರುವಾಗಿ ತಮ್ಮ ಕೈಂಕರ್ಯವನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿದರು. ಇಲ್ಲಿ ಕಲಿತ ಇವರ ಶಿಷ್ಯರು ಕರ್ನಾಟಕದ ಹಲವು ಭಾಗಗಳ ಜೊತೆಗೆ, ನೆರೆಯ ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ಮತ್ತು ದೂರದ ದೆಹಲಿಯಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಜರ್ಮನಿ ದೇಶದ ಪ್ರವಾಸ ಮಾಡಿ ರಾಧಾಕೃಷ್ಣ ತಂತ್ರಿಯವರು ಅಲ್ಲೂ ನಮ್ಮ ನೃತ್ಯ ಪ್ರಕಾರಗಳ ಸೊಬಗನ್ನು ಪಸರಿಸಿದ್ದಾರೆ. ಕರ್ನಾಟಕ ಸರ್ಕಾರದ ಬಹುತೇಕ ಎಲ್ಲ ಉತ್ಸವಗಳಲ್ಲಿ ರಾಧಾಕೃಷ್ಣ ತಂತ್ರಿಯವರ ನೃತ್ಯ ಶಾಲೆಗೆ ಆಹ್ವಾನ ಇರುತ್ತದೆ. ತಮ್ಮ ಶಾಲೆಯ ಪ್ರತಿಭೆಗಳ ಪ್ರದರ್ಶನಕ್ಕಾಗಿ ರಾಧಾಕೃಷ್ಣ ಅವರು ಚಿಣ್ಣರ ಉತ್ಸವ, ಯುವ ನೃತ್ಯೋತ್ಸವ, ಭರತಮುನಿ ಜಯಂತಿ, ನೃತ್ಯಾರ್ಪಣ, ನೃತ್ಯ ಕೌಸ್ತುಭ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತಾರೆ.

ವಿಶ್ವರೂಪ ದರ್ಶನ, ವಂದೇ ಮಾತರಂ, ಲಯಗತಿ, ನವರಸ, ಜಗನ್ಮೋಹನ ಕೃಷ್ಣ, ಲಕ್ಷ್ಮಿ ಅಷ್ಟಕ ಮುಂತಾದ ನೃತ್ಯ ಬಂಧಗಳನ್ನು ಸಂಯೋಜಿಸಿರುವ ರಾಧಾಕೃಷ್ಣ ಅವರು ಗಣೇಶ ಜನನ, ನವಗ್ರಹ, ಭೃಗುಮಹರ್ಷಿ ಗರ್ವಭಂಗ, ಪುರುಷ ಸೂಕ್ತ, ಶ್ರೀ ಕೃಷ್ಣ ಲೀಲಾ ತರಂಗಿಣಿ, ದ್ವಾದಶ ಸ್ತೋತ್ರ, ಲಕ್ಷ್ಮೀನಾರಾಯಣ ಪರಿಣಯ ಮುಂತಾದ ಉತ್ಕೃಷ್ಟ ರೂಪಕಗಳನ್ನೂ ನಿರ್ದೇಶಿಸಿದ್ದಾರೆ.

ಶ್ರೀ ರಾಧಾಕೃಷ್ಣ ತಂತ್ರಿಯವರಿಗೆ ಮೈಸೂರು ನೃತ್ಯಕಲಾ ಪರಿಷತ್ತಿನಿಂದ ’ನೃತ್ಯ ಕಲಾಸಿಂಧು’ ನೃತ್ಯ ಕಲಾವಿದರ ಸಮಾವೇಶದಲ್ಲಿ ’ನಾಟ್ಯ ಕಲಾ ಪ್ರಪೂರ್ಣ’, ಮೈಸೂರಿನ ಕೃಷ್ಣ ಮಿತ್ರ ಮಂಡಳಿಯವರಿಂದ ’ನೃತ್ಯ ಕಲಾ ಭೂಷಣ’, ವಸುಂಧರಾ ಪರ್ಫಾರ್ಮಿಂಗ್ ಸೆಂಟರ್ ಇವರಿಂದ ’ಕಲಾಶ್ರೀ’ ಮತ್ತು ಪೇಜಾವರ ಸ್ವಾಮೀಜಿಯವರ ೭೫ನೇ ವರ್ಧಂತ್ಯುತ್ಸವದಲ್ಲಿ ’ರಾಮ ವಿಠಲ ಪ್ರಶಸ್ತಿ’ ಮುಂತಾದ ಗೌರವ ಪುರಸ್ಕಾರಗಳು ಲಭಿಸಿವೆ.

ಶ್ರೀ ಕೆ. ರಾಧಾಕೃಷ್ಣ ತಂತ್ರಿಯವರ ನೃತ್ಯ ಕ್ಷೇತ್ರದ ಸೇವೆಯನ್ನು ಗುರುತಿಸಿ ೨೦೦೪-೦೫ರ ಸಾಲಿನ ತನ್ನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.