ಕೆ. ರಾಮಕೋಟೀಶ್ವರ ರಾವ್ಪ್ರತಿಭಾವಂತ ವಿದ್ಯಾರ್ಥಿಯೂ ಸಾಹಿತಿಯೂ ಆಗಿದ್ದ ರಾಮಕೋಟೀಶ್ವರ ರಾಯರು ’ತ್ರಿವೇಣಿ’ ಪತ್ರಿಕೆಯನ್ನು ಸ್ಥಾಪಿಸಿದರು. ಬಡತನ, ಕಷ್ಟ ಇವಕ್ಕೆ ಅಂಜದೆ ಪತ್ರಿಕೆಯನ್ನು ಉಚ್ಚ ಆದರ್ಶಗಳಿಗೆ ಅನುಗುಣವಾಗಿ ನಡೆಸಿ ಪತ್ರಿಕೋದ್ಯಮದ ಘನತೆಯನ್ನು ಹೆಚ್ಚಿಸಿದರು. ಕೈತುಂಬ ಹಣ ತರುತ್ತಿದ್ದ ವಕೀಲಿವೃತ್ತಿಯನ್ನು ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬಿಟ್ಟು  ಸೆರೆಮನೆಯನ್ನು ಪ್ರವೇಶಿಸಿದರು. ಸೌಜನ್ಯ, ಸುಸಂಸ್ಕೃತಿಗಳ ಮೂರ್ತಿ ಆಂಧ್ರ ಪ್ರದೇಶದ ರಾಮಕೋಟೀಶ್ವರ ರಾಯರು.

 

 

ಕೆ. ರಾಮಕೋಟಿಶ್ವರ ರಾವ್

ಅದು ೧೯೦೮ನೆ ಇಸವಿ. ಲೋಕಮಾನ್ಯ ತಿಲಕ್ ಅವರಿಗೆ ಕಾರಾಗೃಹವಾಸ ವಿಧಿಸಿದ್ದನ್ನು ಪ್ರತಿಭಟಿಸಿ ಬ್ರಿಟಿಷರ ವಿರುದ್ಧ ದೇಶದಲ್ಲೆಲ್ಲ ಚಳವಳಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಆಂಧ್ರಪ್ರದೇಶದ ಗುಂಟೂರಿನ ಒಂದು ಶಾಲೆಯ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಅದೇ ಶಾಲೆಯಲ್ಲಿ ಹದಿನಾಲ್ಕು ವರ್ಷದ ಒಬ್ಬ ವಿದ್ಯಾರ್ಥಿ ಮೆಟ್ರಿಕ್ಯುಲೇಷನ್ ಓದುತ್ತಿದ್ದ. ಆ ಮೆರವಣಿಗೆಯಲ್ಲಿ ಅವನು ಶಾಲೆಗೆ ಕಟ್ಟಬೇಕಾಗಿದ್ದ ಎರಡು ತಿಂಗಳ ಹಣವನ್ನು ಎಲ್ಲೋ ಕಳೆದುಕೊಂಡ. ಮೆರವಣಿಗೆ ಮುಗಿದ ಮೇಲೆ ಆ ಬಾಲಕ ಮನೆಗೆ ಬಂದು ತಂದೆಯ ಮುಂದೆ ನಿಂತ.

ತಂದೆ:  ಶಾಲೆಗೆ ಹಣ ಕಟ್ಟಿದೆಯಾ?

ಬಾಲಕ : ಇಲ್ಲ

ತಂದೆ : ಏಕೆ?

ಬಾಲಕ : ತಿಲಕರನ್ನು ಬಂಧಿಸಿದ್ದಕ್ಕಾಗಿ ನಾವೆಲ್ಲ ಮೆರವಣಿಗೆಗೆ ಹೋಗಿದ್ದೆವು. ಅಲ್ಲಿ ಹಣ ಕಳೆದು ಹೋಯ್ತು.

ತಂದೆಯವರು ಇನ್ನೇನು ಹೊಡೆದುಬಿಡುತ್ತಾರೆಂದು ತಿಳಿದುಕೊಂಡಿದ್ದ ಆ ಬಾಲಕ. ಆದರೆ ಹಾಗಾಗಲಿಲ್ಲ. ಬಾಲಕನನ್ನು ತಂದೆ ಬಿಗಿದಪ್ಪಿಕೊಂಡರು.

ತಂದೆ: ಒಳ್ಳೇ ಕೆಲ್ಸಾನೇ ಮಾಡಿದ್ದೀಯಾ. ದುಡ್ಡು ಹೋದ್ರೆ ಹೋಗ್ಲಿ ಬಿಡು.

ಹುಡುಗನ ಸತ್ಯಸಂಧತೆ ತಂದೆಗೆ ಸಂತೋಷವನ್ನು ಉಂಟುಮಾಡಿತು. ದೇಶಭಕ್ತರೂ. ಸುಪ್ರಸಿಧ ನ್ಯಾಯವಾದಿ ಗಳೂ ಆಗಿದ್ದ ಆ ತಂದೆ ವಿಯ್ಯನ್ನಪಂತಲು, ಬಾಲಕ ಕೋಲವೆನ್ನು ರಾಮಕೋಟೀಶ್ವರ ರಾವ್

ಕೋಲವೆನ್ನು ರಾಮಕೋಟೀಶ್ವರ ರಾವ್ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸಾರಾವ್ ಪೇಟೆ ಎಂಬ ಪಟ್ಟಣದಲ್ಲಿ ೧೮೯೪ನೇ ಇಸವಿ ಅಕ್ಟೋಬರ್ ಇಪ್ಪತ್ತರಂದು ಜನಿಸಿದರು. ತಾಯಿ ರುಕ್ಮಿಣಮ್ಮ, ವಿನಯಶೀಲರು, ಹಾಗೂ ಗುರುಹಿರಿಯರಲ್ಲಿ ಭಕ್ತಿಯುಳ್ಳವರು. ಕೋಲವೆನ್ನು ಎಂಬುದು ಒಂದು ಹಳ್ಳಿಯ ಹೆಸರು. ಬಹುಶ: ರಾಮಕೋಟೀಶ್ವರ ರಾವ್ ಅವರ ಪೂರ್ವಿಕರು ಆ ಗ್ರಾಮದಲ್ಲಿ ವಾಸಮಾಡಿದ್ದರಿಂದ ಅವರ ಮನೆತನದ ಹೆಸರು ಕೋಲವೆನ್ನು ಎಂದಾಗಿರ ಬಹುದು.

ಬಾಲ್ಯ

ಬಾಲ್ಯದಲ್ಲಿ ರಾಮಕೋಟೀಶ್ವರ ರಾವ್ ಅವರನ್ನು ತಂದೆತಾಯಿಗಳು ಬಹಳ ಪ್ರೀತಿಸುತ್ತಿದ್ದರು. ರಾಮಕೋಟೀಶ್ವರ ರಾವ್ ಅವರಿಗಿಂತ ಹದಿನಾಲ್ಕು ವರ್ಷ ದೊಡ್ಡವನಾದ ಒಬ್ಬ ಅಣ್ಣನಿದ್ದ. ಅವನು ೧೯೦೪ರಲ್ಲಿ ಹಠಾತ್ತನೆ ನಿಧನನಾದ. ಇದರಿಂದ ವಿಯ್ಯನ್ನಪಂತಲು ಅವರಿಗೆ ಬಹಳ ವ್ಯಥೆಯಾಯಿತು. ರಾಮಕೋಟೀಶ್ವರ ರಾವ್‌ರ ತಾಯಿಗಂತೂ ತನ್ನ ಮಗನನ್ನು ನೋಡದೆ ಒಂದು ಕ್ಷಣವೂ ಇರಲು ಆಗುತ್ತಿರಲಿಲ್ಲ. ಶಾಲೆಗೂ ಹೋಗಬೇಡವೆಂದು ಹೇಳುತ್ತಿದ್ದರು. ಸುಕುಮಾರನಾಗಿ ಬೆಳೆದ ರಾಮಕೋಟೀಶ್ವರ ರಾವ್ ಅವರಲ್ಲಿ ಸುಕುಮಾರ ಚಿತ್ತವೃತ್ತಿ ಕೊನೆಯವರೆಗೂ ಉಳಿದುಬಂತು.

ರಾಮಕೋಟೀಶ್ವರ ರಾವ್ ಅವರ ತಂದೆ ಶುಚಿ, ಶುಭ್ರತೆಗಳಿಗೆ ಬಹಳ ಮಾನ್ಯತೆ ಕೊಡುತ್ತಿದ್ದರು. ಇದೇ ಮಗನಿಗೂ ಅಭ್ಯಾಸವಾಯಿತು. ಚಿಕ್ಕಮಕ್ಕಳೆಂದರೆ ಅವರಿಗೆ ತುಂಬಾ ಪ್ರೀತಿ. ನರಸಾರಾವ್ ಪೇಟೆಯಲ್ಲಿ ಅಗಾಗ ಸಭೆ- ಸಮಾರಂಭಗಳು ನಡೆಯುತ್ತಿದ್ದವು. ತಂದೆಯವರ ಜೊತೆಗೆ ರಾಮಕೋಟೀಶ್ವರ ರಾವ್ ಹೋಗುತ್ತಿದ್ದುದುಂಟು.

ವಿದ್ಯಾಭ್ಯಾಸ

ಹುಟ್ಟೂರಿನಲ್ಲೇ ಪ್ರಾಥಮಿಕ ಶಾಲಾಶಿಕ್ಷಣವನ್ನು ಮುಗಿಸಿದ ಮೇಲೆ ಹೈಸ್ಕೂಲಿಗೆ ಸೇರಲು ರಾಮಕೋಟೀಶ್ವರ ರಾವ್ ಅವರು ಗುಂಟೂರಿಗೆ ಹೋಗಬೇಕಾಯಿತು. ಆಗ ಗುಂಟೂರು ಆಂಧ್ರದಲ್ಲಿ ಒಂದು ಜಿಲ್ಲಾ ಕೇಂದ್ರ. ಅನೇಕ ವಿಧವಾದ ಸಾಹಿತ್ಯಿಕ ಹಾಗೂ ರಾಜಕೀಯ ಚಟುವಟಿಕೆಗಳ ಮುಖ್ಯಸ್ಥಾನ. ಉನ್ನತ ಶಾಲಾಶಿಕ್ಷಣಕ್ಕೆ ಗುಂಟೂರಿಗೆ ಬಂದಮೇಲೆ ರಾಮಕೋಟಿಶ್ವರ ರಾವ್ ಅವರ ಜೀವನಾನುಭವ ವಿಸ್ತಾರಗೊಂಡಿತು. ಅವರು ಅನೇಕ ಕಾರ್ಯಕಲಾಪಗಳಿಗೆ ಅಲ್ಲಿ ಸ್ಫೂರ್ತಿ ಪಡೆದಂತೆ ಆಯಿತು.

ಚಿಕ್ಕವಯಸ್ಸಿನಿಂದಲೇ ರಾಮಕೋಟೀಶ್ವರ ರಾವ್ ಅವರಿಗೆ ಪಠ್ಯಪುಸ್ತಕಗಳನ್ನೇ ಅಲ್ಲದೆ ಇತರ ಅನೇಕ ಪುಸ್ತಕಗಳನ್ನು ಓದಬೇಕೆಂಬ ಆಸಕ್ತಿಯೂ ಇತ್ತು. ಮುಖ್ಯವಾಗಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಇಂಗ್ಲಿಷ್ ಪುಸ್ತಕಗಳನ್ನು ಓದುತ್ತಿದ್ದರು. ಇಂಗ್ಲಿಷ್. ತೆಲುಗು ಇತಿಹಾಸಗಳಲ್ಲಿ ಅವರಿಗೆ ಹೆಚ್ಚು ಅಭಿಮಾನವಿತ್ತು. ಗಣಿತಶಾಸ್ತ್ರ ಎಂದರೆ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಹೈಸ್ಕೂಲ್ ವಿದ್ಯಾರ್ಥಿಯಾಗಿರುವಾಗಲೇ ರಾಮಕೋಟೀಶ್ವರ ರಾವ್‌ರವರು ಈಸೋಪಾನ ನೀತಿ ಕಥೆಗಳು, ರಾಬಿನ್ ಸನ್ ಕ್ರೂಸೋ, ಗಲಿವರ್ಸ್ ಟ್ರಾವೆಲ್ಸ್  ಮುಂತಾದ ಪುಸ್ತಕಗಳನ್ನು ಓದಿದ್ದರು.

ಆಗಾಗ ತಾಯಿಯ ಜೊತೆಗ ಕೋಲವೆನ್ನುರವರು ಪುರಾಣ ಕಥಾಕಾಲಕ್ಷೇಪಗಳಿಗೆ ಹೋಗುತ್ತಿದ್ದರಂತೆ. ನಳಚರಿತ್ರೆ ಮುಂತಾದವುಗಳನ್ನು ಓದುವಾಗ ನಳದಮಯಂತಿಯರ ಕಷ್ಟಗಳನ್ನು ಕೇಳಿ ಮರುಗಿ ರಾಮಕೋಟೀಶ್ವರ ರಾವ್ ಅವರು ಅಳುತ್ತಿದ್ದುದುಂಟು. ಆಗ ಪುರಾಣಪ್ರವಚನಕ್ಕೆ ಸೇರಿದವರು ಇವರನ್ನು ವಿಚಿತ್ರಾಗಿ ನೋಡುತ್ತಿದ್ದರಂತೆ. ಇವರ ಸುಕುಮಾರ ಮನಸ್ಸನ್ನು ನೋಡಿದಾಗ ಅವರಿಗೆ ಆಶ್ಚರ್ಯ. ಇಂತಹ ಪುರಾಣ ಕಥಾಕಾಲಕ್ಷೇಪಗಳಿಂದ ರಾಮಕೋಟೀಶ್ವರ ರಾವ್ ಅವರಿಗೆ ತೆಲುಗು ಸಾಹಿತ್ಯ ಗ್ರಂಥಗಳಲ್ಲಿ ಆಸಕ್ತಿ ಹೆಚ್ಚಾಯಿತು.

ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ರಾಮಾಯಣ ಮತ್ತು ಮಹಾಭಾರತ ಪಠ್ಯವಿಷಯಗಳಲ್ಲಿ ಸೇರಿದ್ದವು. ಪೋತನನ ಭಾಗವತವೂ ಪಠ್ಯವಿಷಯವಾಗಿತ್ತು. ರಾಮಕೋಟೀಶ್ವರ ರಾವ್ ಅವರಿಗೆ ಭಾಗವತದ ಪ್ರಹ್ಲಾದ ಚರಿತ್ರೆ. ಗಜೇಂದ್ರ ಮೋಕ್ಷ, ರುಕ್ಮಿಣೀ ಕಲ್ಯಾಣ ಬಹಳ ಇಷ್ಟವಾದ ಪ್ರಸಂಗಗಳು. ಆಗಾಗ ಶಾಲೆಯಲ್ಲಿ ಭಾಷಣ ಸ್ಪರ್ಧೆಗಳು ನಡೆಯುತ್ತಿದ್ದವು. ತೆಲುಗಿನಲ್ಲೂ. ಇಂಗ್ಲಿಷಿನಲ್ಲೂ ನಡೆಯುತ್ತಿದ್ದ ಈ ಸ್ಪರ್ಧೆಗಳಲ್ಲಿ ರಾಮಕೋಟೀಶ್ವರ ರಾವ್ ಪಾಲ್ಗೊಂಡು ಕೆಲವು ಬಹುಮಾನಗಳನ್ನು ಪಡೆದರು. ಪ್ರತಿವರ್ಷವೂ ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣರಾಗುತ್ತಿದ್ದುದರಿಂದ ಕೆಲವು ಬಹುಮಾನಗಳೂ ಲಭಿಸಿದವು. ಒಂದು ವರ್ಷ ರಾನಡೇ ಅವರ ‘ರೈಸ್ ಆಫ್ ಮರಾಠಾ ಪವರ್’ ಮತ್ತು ಮ್ಯಾಕ್ಸ್‌ಮುಲ್ಲರ್ ಅವರ ಲೈಫ್ ಅಂಡ್ ಟೀಚಿಂಗ್ಸ್ ಆಫ್ ರಾಮಕೃಷ್ಣ ’ ಎಂಬ ಗ್ರಂಥಗಳು ಲಭಿಸಿದವು. ಈ ಗ್ರಂಥಗಳನ್ನು ರಾವ್ ಅವರು ಬಹಳ ಆಸಕ್ತಿಯಿಂದ ಓದಿದರು. ಬಹುಮಾನವಾಗಿ ಪಡೆದ ಗ್ರಂಥಗಳನ್ನು ಓದುವುದರಲ್ಲಿ ಒಂದು ರೀತಿಯ ದಿವ್ಯಾನುಭೂತಿ ಲಭಿಸುತ್ತಿತ್ತು.

ಮೆಟ್ರಿಕ್ಯುಲೇಷನ್ ಓದುತ್ತಿದ್ದಾಗ ಗುಂಟೂರಿನಲ್ಲಿ ವಿದ್ಯಾರ್ಥಿ ಮಹಾಸಭೆಯೊಂದು ನಡೆಯಿತು. ಆ ಸಂದರ್ಭದಲ್ಲಿ ನದಿಗಳ ಪ್ರಾಧಾನ್ಯವನ್ನು ಕುರಿತು ಒಂದು ಭಾಷಣ ಸ್ಪರ್ಧೆಯನ್ನೇರ್ಪಡಿಸಿದ್ದರು. ಇಂಗ್ಲಿಷಿನಲ್ಲಿ ರಾವ್ ಅವರು ಮಾಡಿದ ಭಾಷಣಕ್ಕೆ ಪ್ರಥಮ ಬಹುಮಾನ ಲಭಿಸಿತು. ಇದರಿಂದ ಅವರಲ್ಲಿ ಹೊಸ ಉತ್ಸಾಹ, ಆತ್ಮವಿಶ್ವಾಸ ತುಂಬಿತು. ಆಗಾಗ ರಾವ್ ಅವರು ಕೆಲವು ಉಪಾಧ್ಯಾಯರ ಮತ್ತು ಸ್ನೇಹಿತರ ಪ್ರೋತ್ಸಾಹದಿಂದ ಲೇಖನಗಳನ್ನು ಬರೆಯು ತ್ತಿದ್ದರು.

ಕಾಲೇಜು ಶಿಕ್ಷಣ

ಮೆಟ್ರಿಕ್ಯುಲೇಷನ್ ಮುಗಿದ ನಂತರ ಮಚಲಿಪಟ್ಟಣಕ್ಕೆ ಹೋಗಿ ರಾಮಕೋಟೀಶ್ವರ ರಾವ್ ಅವರು (೧೯೦೯ರಲ್ಲಿ) ನೋಬಲ್ ಕಾಲೇಜಿಗೆ ಸೇರಿದರು. ಚೆನ್ನಾಪ್ರಗಡ ಭಾನುಮೂರ್ತಿಯವರು ಇಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕ ರಾಗಿದ್ದರು. ಅವರೇ ತೆಲುಗು ಪ್ರಬಂಧಗಳ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಇವರು ಸ್ವತ: ಕವಿಗಳೂ ಆಗಿದ್ದರು. ಅವರು ಆಗಾಗ ಓದುತ್ತಿದ್ದ ಪದ್ಯಗಳು ವಿದ್ಯಾರ್ಥಿಗಳಿಗೆ ಬಹಳ ಆಸಕ್ತಿ ಉಂಟುಮಾಡುತ್ತಿದ್ದವು. ಭಾನುಮೂರ್ತಿಯವರ ತರಗತಿಗಳಿಂದ ರಾವ್ ಅವರಿಗೆ ತೆಲುಗಿನಲ್ಲಿ ಹೆಚ್ಚು ಆಸಕ್ತಿ ಮೂಡಿತು. ಇಂಟರ್ ಮೀಡಿಯೆಟ್ ತರಗತಿಯಲ್ಲಿ ರಾಮಕೋಟೀಶ್ವರ ರಾವ್ ಅವರಿಗೆ ಚರಿತ್ರೆ ಹಾಗೂ ತರ್ಕಶಾಸ್ತ್ರಗಳೆಂದರೆ ಅಭಿಮಾನವಿತ್ತು. ಇಂಟರ್ ಓದುವಾಗ ಇಂಗ್ಲಿಷಿನಲ್ಲಿ ನಡೆಯುತ್ತಿದ್ದ ಭಾಷಣ ಸ್ಪರ್ಧೆಗಳಲ್ಲಿ ರಾಮಕೋಟೀಶ್ವರ ರಾವ್ ಅವರು ಪರಿಣತಿಯನ್ನು ಪಡೆದರು. ೧೯೧೧ರಲ್ಲಿ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಸಿದ್ದಲ್ಲದೆ ರಾಮಕೋಟೀಶ್ವರ ರಾವ್ ತೆಲುಗು ನಾಡಿನಲ್ಲೇ ಮೊದಲಸ್ಥಾನದಲ್ಲಿ ಉತ್ತೀರ್ಣರಾಗಿ ಎಲ್ಲರಿಂದ ಪ್ರಶಂಸೆಯನ್ನು ಪಡೆದರು. ಅನಂತರ ೧೯೧೫ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನ ಮೂಲಕ ಪದವೀಧರರಾದರು.

ರಾಮಕೋಟೀಶ್ವರರಾಯರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದುತ್ತಿದ್ದಾಗ ಸ್ಯಾಮ್ಯುಯಲ್ ರಂಗನಾಥನ್ ಎನ್ನುವವರು ಇಂಗ್ಲಿಷ್ ಪ್ರೊಫೆಸರ್. ಎಲ್ಲ ವಿದ್ಯಾರ್ಥಿಗಳಂತೆ ರಾಮಕೋಟೀಶ್ವರರೂ ಪ್ರಬಂಧ ಬರೆದು ಉಪಾಧ್ಯಾಯರಿಗೆ ಕೊಟ್ಟರು. ಅದು ಎಷ್ಟು ಶ್ರೇಷ್ಠವಾದ ಬರಹವಾಗಿತ್ತೆಂದರೆ ಪ್ರೊಫೆಸರ್ ರಂಗನಾಥನ್ ಅವರಿಗೆ ಅದು ರಾಯರೇ ಬರದದ್ದು ಎಂದು ನಂಬುವುದಕ್ಕೆ ಆಗಲಿಲ್ಲ. “ಈ ವಿದ್ಯಾರ್ಥಿಯೇ ಇದನ್ನು ಬರೆದಿದ್ದರೆ ಮೆಕಾಲೆ, ಕಾರ್ಲೈಲ್ ಮೊದಲಾದವರ ಶೈಲಿಯಂತೆ ಇವರ ಶೈಲಿಯೂ ರೂಪುಗೊಳ್ಳುತ್ತಿದೆ’ ಎಂದು ತರಗತಿಯಲ್ಲಿ ಹೇಳಿದರು. (ಮೆಕಾಲೆ, ಕಾರ್ಲೈಲ್ ಇಂಗ್ಲಿಷ್‌ನಲ್ಲಿ ಪ್ರಸಿದ್ಧ ಗದ್ಯ ಬರಹಗಾರರು) ಇನ್ನೂ ಹೈಸ್ಕೂಲಿನಲ್ಲಿದ್ದಾಗಲೇ ರಾಮಕೋಟೀಶ್ವರರಾಯರು ಇಂಗ್ಲಿಷಿನ ಶ್ರೇಷ್ಠ ಬರಹಗಾರರ ಪುಸ್ತಕಗಳನ್ನು ಓದಿದರು. ಶ್ರದ್ಧೆಯಿಂದ ತಮ್ಮ ಭಾಷೆಯನ್ನೂ, ಇಂಗ್ಲಿಷ್ ಭಾಷೆಯನ್ನೂ ಅಭ್ಯಾಸ ಮಾಡಿದರು.

ನ್ಯಾಯವಾದಿ

೧೯೧೭ರಲ್ಲಿ ಬಿ.ಎಲ್. ಪದವಿಯನ್ನು ಪಡೆದ ಕೋಲವೆನ್ನು ರಾಮಕೋಟೀಶ್ವರರಾವ್ ಅವರು ಸ್ವಂತ ಊರಾದ ನರಸಾರಾವ್ ಪೇಟೆಯಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.

ವಕೀಲಿವೃತ್ತಿಯಲ್ಲಿ ತೊಡಗಿದ್ದ ನಾಲ್ಕು ವರ್ಷಗಳಲ್ಲಿ ರಾಮಕೋಟೀಶ್ವರ ರಾವ್ ಕೆಲವು ಕ್ರಿಯಾತ್ಮಕ ಕೆಲಸಗಳಿಗೆ ಕೈ ಹಾಕಿದರು. ಬೆಲ್ಲಂಕೊಂಡ ರಾಘವರಾವ್ ಎಂಬುವವರ ರೊಂದಿಗೆ ಸೇರಿ ಅವರ ಊರಿನಲ್ಲಿ ಒಂದು ಗ್ರಂಥಾಲಯ ವನ್ನು ಸ್ಥಾಪಿಸಿದರು. ಗ್ರಂಥಾಲಯ ಚಳವಳಿಯಲ್ಲಿದ್ದ ಉತ್ಸಾಹದ ಜೊತೆಗೆ ರಾವ್ ಅವರಿಗೆ ಹೋಂರೂಲ್ ಚಳವಳಿಯ ಬಗೆಗೂ ಅಭಿಮಾನವಿತ್ತು. ವಕೀಲಿ ವೃತಿಯ ಜತೆಯಲ್ಲೇ ಹೋಂರೂಲ್ ಚಳವಳಿಯಲ್ಲೂ ಅವರು ಸಕ್ರಿಯ ಪಾತ್ರವನ್ನು ವಹಿಸಿದರು.

೧೯೧೭ರಲ್ಲಿ ಕಲ್ಕತ್ತದಲ್ಲಿ ನಡೆದ ಕಾಂಗ್ರೆಸ್ ಮಹಾಸಭೆಗೆ ರಾಮಕೋಟೀಶ್ವರರಾವ್ ಅವರೂ ಹೋಗಿದ್ದರು. ಅಲ್ಲಿ ಬಾಲಗಂಗಾಧರ ತಿಲಕ್, ಸುರೇಂದ್ರನಾಥ ಬ್ಯಾನರ್ಜಿ, ಜಗದೀಶ್ ಚಂದ್ರಬೋಸ್ ಮುಂತಾದ ಹಿರಿಯರ ಉಪನ್ಯಾಸಗಳನ್ನು ಕೇಳುವ ಭಾಗ್ಯ ಅವರಿಗೆ ಲಭಿಸಿತು. ವಕೀಲಿವೃತ್ತಿಯಿಂದ ಸ್ವಾತಂತ್ರ್ಯ ಚಳವಳಿಯ ಕಡೆಗೆ ರಾಮಕೋಟೀಶ್ವರರ ಮನಸ್ಸು ಹರಿಯಲು ಈ ಮಹಾಸಭೆ ಸ್ಫೂರ್ತಿನೀಡಿತು.

ಅಧ್ಯಾಪಕರು

ಕೋಲವೆನ್ನು ರಾಮಕೋಟೀಶ್ವರರು ಕೆಲವು ಕಾಲ ಮಚಲಿಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ಉಪ- ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿದರು.

ರಾಷ್ಟ್ರೀಯ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ನಾಲ್ಕು ವರ್ಷಗಳಲ್ಲಿ ರಾವ್ ಅವರು ಬಹಳ ಸಂತೋಷವಾಗಿ ಕಾಲ ಕಳೆದರು. ತಮ್ಮ ಜ್ಞಾನವನ್ನು ವೃದ್ಧಿಪಡಿಸಿಕೊಳ್ಳಲು ಅವರಿಗೆ ಅಧ್ಯಾಪಕರ ಕೆಲಸ ಸಹಾಯಮಾಡಿತು. ಅಸಹಕಾರ ಚಳವಳಿಗಾಗಿ ಶಾಲೆಯ ಓದನ್ನು ನಿಲ್ಲಿಸಿದ ಅನೇಕ ವಿದ್ಯಾರ್ಥಿಗಳು ರಾಷ್ಟ್ರೀಯ ಕಾಲೇಜಿನಲ್ಲಿ ಸೇರುತ್ತಿದ್ದರು. ರಾವ್ ಇತಿಹಾಸ, ರಾಜನೀತಿ, ಅರ್ಥಶಾಸ್ತ್ರಗಳನ್ನು ಬೋಧಿಸುತ್ತಿದ್ದರು. ಶಿಕ್ಷಣದ ಮಾಧ್ಯಮ ತೆಲುಗಾಗಿದ್ದರೂ. ಅಲ್ಲಿಯ ವಿದ್ಯಾರ್ಥಿಗಳು ಇಂಗ್ಲಿಷ್ ಪುಸ್ತಕಗಳನ್ನು ಹೆಚ್ಚಾಗಿ ಅಭ್ಯಸಿಸುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು, ಉನ್ನತ ಮೌಲ್ಯಗಳನ್ನು ಹೆಚ್ಚಿಸಲು ಅಲ್ಲಿಯ ಅಧ್ಯಾಪಕರೂ ಶ್ರಮಿಸುತ್ತಿದ್ದರು.

ರಾಮಕೋಟೀಶ್ವರ ರಾವ್ ರಾಷ್ಟ್ರೀಯ ಕಾಲೇಜಿನಲ್ಲಿ ಇರುವಾಗ ಇಂಗ್ಲಿಷ್ ಸಾಹಿತ್ಯವನ್ನು ಬೋಧಿಸುವ ಹೊಣೆಯನ್ನು ಹೊತ್ತರು. ಸಾಹಿತ್ಯವನ್ನು ಬೋಧಿಸುವುದರ ಜೊತೆಗೆ ಒಳ್ಳೆಯ ಪುಸ್ತಕಗಳನ್ನು ಆರಿಸಿ ವಿದ್ಯಾರ್ಥಿಗಳಿಂದ ಅವುಗಳನ್ನು ಓದಿಸುವುದರಲ್ಲೂ ಅವರು ನಿರತರಾದರು. ಆ ಕಾಲೇಜಿನಲ್ಲಿ ಪ್ರಮೋದಕುಮಾರ್ ಚಟರ್ಜಿಯವರು ಚಿತ್ರಲೇಖನದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಮುಂದೆ ಜ್ಞಾನಪೀಠ ಪ್ರಶಸ್ತಿ ವಿಜೇತರೂ, ಆಂಧ್ರದ ಪ್ರಸಿದ್ಧ ಕವಿಗಳೂ ಆದ ವಿಶ್ವನಾಥ ಸತ್ಯನಾರಾಯಣರವರು ತೆಲುಗು ಭಾಷೆಯನ್ನು ಬೋಧಿಸುತ್ತಿದ್ದರು. ವಿಶ್ವನಾಥರೊಂದಿಗೆ ರಾಮಕೋಟೀಶ್ವರ ರಾವ್‌ರಿಗೆ ಆತ್ಮಿಯತೆ ಇತ್ತು. ವಿಶ್ವನಾಥ ಅವರು ತಾವು ಏನನ್ನು ರಚಿಸಿದರೂ ಅದನ್ನು ಕೋಲವೆನ್ನು ಅವರಿಗೂ ಅಡವಿ ಬಾಪಿರಾಜು ಎಂಬ ಇನ್ನೊಬ್ಬ ಕವಿಗೂ ಓದಿ ಹೇಳುತ್ತಿದ್ದರಂತೆ. ಕಾಲೇಜಿನ ಆವರಣದಲ್ಲೇ ಬೆಳದಿಂಗಳ ರಾತ್ರಿಗಳಲ್ಲಿ ಸಾಹಿತ್ಯ ಸಮಾವೇಶಗಳನ್ನು ಏರ್ಪಡಿಸುತ್ತಿದ್ದರಂತೆ.

ರಾಷ್ಟ್ರೀಯ ಕಾಲೇಜು ಅಸಹಕಾರ ಚಳವಳಿಗೆ ಕಾರ‍್ಯಸ್ಥಾನವಾಗಿರಬೇಕೆಂದು ರಾಮಕೋಟೀಶ್ವರ ರಾವ್ ಬಯಸಿದರು. ಆದರೆ ಕಾಲೇಜಿನ ಕಾರ್ಯನಿರ್ವಾಹಕ ಸಮಿತಿಯವರು ಸರಕಾರದ ಧನವನ್ನು ಸ್ವೀಕರಿಸಲು ಒಪ್ಪಿದ್ದರಿಂದ ಮನಸ್ಸಿಗೆ ಅಸಮಾಧಾನವಾಗಿ ರಾಮ ಕೋಟೀಶ್ವರರಾವ್ ಅವರು ಅಲ್ಲಿಂದ ಹೊರಬಂದು ಪತ್ರಿಕಾರಂಗಕ್ಕಿಳಿದರು. ೧೯೩೩ರಲ್ಲಿ ಅವರಿಗೆ ಮತ್ತೆ ರಾಷ್ಟ್ರೀಯ ಕಾಲೇಜಿನ ಪ್ರಿನ್ಸಿಪಾಲರಾಗಿ ಬರಬೇಕೆಂದು ಆಹ್ವಾನ ಬಂತು. ಆದರೆ ಒಂದು ವರ್ಷ ಮಾತ್ರ ಆ ಹುದ್ದೆಯಲ್ಲಿರಲು ಅವರಿಗೆ ಸಾಧ್ಯವಾಯಿತು. ಮತ್ತೆ ಪ್ರಿನ್ಸಿಪಾಲರ ಹುದ್ದೆಗೆ ರಾಜೀನಾಮೆ ಕೊಟ್ಟು. ಅಧ್ಯಾಪಕವೃತ್ತಿಗೆ ಶಾಶ್ವತವಾಗಿ ಬೀಳ್ಕೊಡುಗೆ ಕೊಟ್ಟರು.

ಪತ್ರಿಕಾ ಪ್ರಪಂಚ

ಕೋಲವೆನ್ನು ರಾಮಕೋಟೀಶ್ವರರಿಗೆ ರಾಷ್ಟ್ರದ ನಾನಾ ಕಡೆಗಳಲ್ಲಿ ಹೆಸರು ಬರುವಂತೆ ಮಾಡಿದ್ದು ಪತ್ರಿಕಾ ಪ್ರಪಂಚ. ಭಾರತದ ಪತ್ರಿಕೋದ್ಯಮ ಇತಿಹಾಸದಲ್ಲಿ ಅವರ ಹೆಸರು ಚಿರಸ್ಮರಣೀಯವಾದುದು. ವಿದ್ಯಾಭ್ಯಾಸದ ಕಾಲದಲ್ಲೇ ರಾವ್ ಅವರಿಗೆ ಪತ್ರಿಕೆಗಳನ್ನು ಶ್ರದ್ಧೆಯಿಂದ ನೋಡುವುದರಲ್ಲಿ ಆಸಕ್ತಿ ಇತ್ತು. ಯುವಕರಾಗಿದ್ದಾಗ, ‘ಕೃಷ್ಣ ಪತ್ರಿಕಾ’ ಪಟ್ಟಾಭಿ ಸೀತಾರಾಮಯ್ಯನವರ ‘ಜನ್ಮಭೂಮಿ’ ಪತ್ರಿಕೆಗಳ ಮೇಲೆ ಅವರಿಗೆ ಹೆಚ್ಚು ಅಭಿಮಾನವಿತ್ತು. ೧೯೨೧ನೆಯ ನವೆಂಬರ್ ತಿಂಗಳಲ್ಲಿ ಆಂಧ್ರಕೇಸರಿ ಪ್ರಕಾಶಂ ಪಂತುಲು ‘ಸ್ವರಾಜ್ಯ’ ಎಂಬ ಆಂಗ್ಲ ದಿನಪತ್ರಿಕೆಯನ್ನು ಪ್ರಾರಂಭಿಸಿದರು. ರಾಮಕೋಟೀಶ್ವರ ರಾವ್ ಅವರು ಅದಕ್ಕೆ ಸಹಾಯಕ ಸಂಪಾದಕರಾದರು. ಆ ಹುದ್ದೆಯಲ್ಲಿ ಅವರು ಎರಡು ವರ್ಷ ಕೆಲಸ ಮಾಡಿದರು.

ಪ್ರಕಾಶಂ ಪಂತಲು ಅವರ ‘ಸ್ವರಾಜ್ಯ’ ಭಾರತದ ಪ್ರಸಿದ್ಧವಾದ ಪತ್ರಿಕೆಗಳಲ್ಲೊಂದು. ಪತ್ರಿಕೋದ್ಯಮದಲ್ಲೇ ಹೊಸ ಮೌಲ್ಯಗಳಿಗೆ ಅಂಕುರಾರ್ಪಣೆ ಮಾಡಿದ ಪತ್ರಿಕೆ ಅದು. ಸ್ವರಾಜ್ಯ ಪತ್ರಿಕೆಯಲ್ಲಿ ಕೋಲವೆನ್ನು ಅವರ ಜತೆಗೆ ಖಾಸಾ ಸುಬ್ಬರಾವ್ ಮತ್ತು ಕೃಪಾನಿಧಿ ಕೆಲಸ ಮಾಡುತ್ತಿದ್ದರು. ಅವರೊಂದಿಗೆ ಕೆಲಸ ಮಾಡಿದುದು ಒಂದು ಮರೆಯಲಾದ ದಿವ್ಯಾನುಭವ ಎನ್ನುತ್ತಾರೆ ರಾಮಕೋಟೀಶ್ವರ ರಾವ್. ಆಗಾಗ ಕೋಲವೆನ್ನು ಅವರೇ ಸಂಪಾದಕೀಯಗಳನ್ನೂ ಬರೆಯುತ್ತಿದ್ದರು. ಪ್ರಕಾಶಂ ಪಂತುಲು ಅವರು ತಮ್ಮ ಆಸ್ತಿಯನ್ನೆಲ್ಲ ಸ್ವರಾಜ್ಯ ಪತ್ರಿಕೆಗಾಗಿಯೇ ವಿನಿಯೋಗಿಸಿದರು. ಆ ಕಾಲದಲ್ಲಿ ಭಾರತದ ಪ್ರಮುಖ ರಾಜಕಾರಣಿ ರಾಜಗೋಪಾಲಚಾರಿ ಅವರು ಆಗಾಗ ಸ್ವರಾಜ್ಯ ಕಚೇರಿಗೆ ಬರುತ್ತಿದ್ದರು.

ಸ್ವರಾಜ್ಯ ಪತ್ರಿಕೆಯಲ್ಲಿ ಹರಿತವಾದ ಲೇಖನಗಳು ಪ್ರಕಟವಾಗುತ್ತಿದ್ದವು. ಅಸಹಕಾರ ಚಳವಳಿಗೆ ಅದು ಬಲಭುಜವಾಗಿ ನಿಂತಿತು. ರಾಜಗೋಪಾಲಚಾರಿಯವರು ಅದರಲ್ಲಿ ಆಗಾಗ ಕಾಂಗ್ರೆಸ್ ರಾಜಕೀಯಗಳನ್ನು ಕುರಿತು ಬರೆಯುತ್ತಿದ್ದರು.

ಸ್ವರಾಜ್ಯ ಪತ್ರಿಕೆಯನ್ನು ಬಿಟ್ಟಮೇಲೆ ಸ್ವಲ್ಪಕಾಲ ಕೋಲವೆನ್ನು ‘ಜಯಂತಿ’ ಎಂಬ ಪತ್ರಿಕೆಯನ್ನು ಹೊರಡಿಸಿದರು. ‘ಕೃಷ್ಣಾ’ ಪತ್ರಿಕೆಯ ಸಂಪಾದಕರಾದ ಮುಟ್ನೂರು ಕೃಷ್ಣಾರಾಯರೊಂದಿಗೆ ಕೋಲವೆನ್ನು ಅವರಿಗೆ ನಿಕಟಸಂಪರ್ಕವಿತ್ತು. ‘ಕೃಷ್ಣಾ’ ಪತ್ರಿಕೆಯ ಕಚೇರಿಯಲ್ಲಿ ಅನೇಕ ಮಹಾನ್ ವ್ಯಕ್ತಿಗಳ ಪರಿಚಯ ಆಗುತ್ತಿತ್ತು. ಆ ಕಾಲದಲ್ಲೇ ರಾಮಕೋಟೀಶ್ವರರಾವ್ ಅವರಿಗೆ ನವ್ಯ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ಒಂದು ಪತ್ರಿಕೆಯನ್ನು ತರಬೇಕೆಂಬ ಆಸೆ ಹುಟ್ಟಿತು. ‘ಜಯಂತಿ’ ಪತ್ರಿಕೆಗೆ ರಾಮಕೋಟೀಶ್ವರ ರಾವ್ ಹಾಗೂ ತೆಲುಗಿನ ಮಹಾಕವಿ ವಿಶ್ವನಾಥ ಸತ್ಯನಾರಾಯಣ ಸಂಪಾದಕರಾಗಿದ್ದರು. ಪತ್ರಿಕೆಯನ್ನು ಜನಪ್ರಿಯಗೊಳಿಸಲು ಇವರಿಬ್ಬರೂ ಮದ್ರಾಸು, ಬರ‍್ಹಾಂಪುರ್.  ಪಾರ್ಲಿಕಿಮಿಡಿ,  ವಿಜಯನಗರ ಮುಂತಾದ ಸ್ಥಳಗಳಲ್ಲಿ ಸಂಚರಿಸಿದರು. ದ್ವೈಮಾಸಿಕವಾಗಿ ‘ಜಯಂತಿ’ ಒಂದು ವರ್ಷ ಮಾತ್ರ ಇತ್ತು. ಯಾವುದಾದರೂ ಪತ್ರಿಕೆಯನ್ನು ಇಂಗ್ಲಿಷಿನಲ್ಲಿ ನಡೆಸಿದರೆ ಅದಕ್ಕೆ ಅಖಿಲಭಾರತವ್ಯಾಪ್ತಿ ಇರುತ್ತದೆಂದು ರಾಮ ಕೋಟೀಶ್ವರರಾಯರಿಗೆ ತೋರಿದುದರಿಂದ ‘ತಿವೇಣಿ’ ಪತ್ರಿಕೆ ಅವತರಿಸಿತು.

ತ್ರಿವೇಣಿ

ಗಂಗಾ ಯಮುನಾ ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಭಾರತದೇಶದ ಧಾರ್ಮಿಕ ಮನೋಭಾವವುಳ್ಳ ಜನರಿಗೆ ಅತ್ಯಂತ ಪವಿತ್ರವಾದುದು. ಭಾರತದ ವಿವಿಧ ಸಂಸ್ಕೃತಿಗಳಿಗೆ ಒಂದು ವೇದಿಕೆಯಾಗಿ, ರಾಮಕೋಟೀಶ್ವರ ರಾವ್ ಅವರು ಇಂಗ್ಲೀಷ್ ಪತ್ರಿಕೆಗೆ ‘ತ್ರಿವೇಣಿ’ ಎಂಬ ಹೆಸರು ಸಾರ್ಥಕ ವಾಯಿತು.

‘ತ್ರಿವೇಣಿ’ ಪತ್ರಿಕೆ ರಾಮಕೋಟೀಶ್ವರರಾಯರಿಗೆ ಅಪಾರ ವಾದ ಹೆಸರನ್ನು ತಂದು ಕೊಟ್ಟಿತು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಅನೇಕ ಮಹಾನಾಯಕರಿಗೆ ಸ್ಫೂರ್ತಿಯನ್ನು ನೀಡಿತು. ೧೯೨೭ರಲ್ಲಿ ತ್ರಿವೇಣಿ ಪತ್ರಿಕೆ ಪ್ರಾರಂಭವಾಯಿತು.

ಬಂದರಿನ ರಾಷ್ಟ್ರೀಯ ಕಾಲೇಜಿನ ಹುದ್ದೆಯನ್ನು ಬಿಟ್ಟಮೇಲೆ ಇನ್ನೇನು ಮಾಡಬೇಕೆಂಬ ಪ್ರಶ್ನೆ ಕೋಲವೆನ್ನು ರಾಮಕೋಟೀಶ್ವರ ರಾವ್ ಅವರಲ್ಲಿ ಉಂಟಾಯಿತು. ಮನಸ್ಸಿಗೆ ತೃಪ್ತಿಯನ್ನು ತರಬೇಕಾದರೆ, ಸ್ವತಂತ್ರ ಜೀವನವನ್ನು ನಡೆಸಬೇಕಾದರೆ ಒಂದು ಪತ್ರಿಕೆಯನ್ನು ಪ್ರಾರಂಭಿಸುವುದು ಒಳ್ಳೆಯದೆಂದು ಅವರಿಗೆ ತೋಚಿತು. ಭಾರತದೇಶದ ವಿವಿಧ ಪ್ರದೇಶಗಳ, ವಿವಿಧ ಭಾಷೆಗಳ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ‘ತ್ರಿವೇಣಿ’ಯನ್ನು ರೂಪಿಸಬೇಕೆಂದು ಅವರು ಬಯಸಿದರು. ಆಗ ನಮ್ಮ ಸಮಾಜ ಒಂದು ನೂತನ ತೇಜಸ್ಸಿನಿಂದಿತ್ತು. ಸಾಹಿತಿಕ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ರಂಗಗಳಲ್ಲೂ ಆಸಕ್ತಿ ಮೂಡಿತ್ತು. ಭಾರತೀಯ ಸಂಸ್ಕೃತಿಯ ವೈವಿಧ್ಯತೆಯಲ್ಲಿರುವ ಏಕತೆಯನ್ನು ಸಾರಬೇಕೆಂಬುದು ‘ತ್ರಿವೇಣಿ’ಯ ಧ್ಯೇಯವಾಗಿತ್ತು. ಯಾವುದೊಂದು ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲದೆ, ಕಲೆ ಸಾಹಿತ್ಯ ಮುಂತಾದವುಗಳ ಸಮನ್ವಯ ದೃಷ್ಟಿ ಈ ಪತ್ರಿಕೆಗೆ ಇತ್ತು. ೧೯೨೭ರಲ್ಲಿ ಮದರಾಸಿನಲ್ಲಿ ಕಾಂಗ್ರ್ರೆಸ್ ಸಭೆ ನಡೆಯುತ್ತಿತ್ತು. ಆಗಲೇ ‘ತ್ರಿವೇಣಿ’ಗೂ ಪ್ರಾರಂಭೋತ್ಸವ ನಡೆಯಿತು. ಮದರಾಸಿನ ಅನೇಕ ಪ್ರಮುಖ ವ್ಯಕ್ತಿಗಳು ಹಾಜರಿದ್ದರು.

೧೯೨೭ನೇ ಡಿಸೆಂಬರ್ ತಿಂಗಳಲ್ಲಿ ‘ತ್ರಿವೇಣಿ’ಯ ಮೊದಲನೆಯ ಸಂಚಿಕೆ ಹೊರಬಂತು. ಆಗಿನಿಂದ ಏಳೆಂಟು ವರ್ಷಗಳು ದ್ವೈಮಾಸಿಕವಾಗಿ ಬಂದ ‘ತ್ರಿವೇಣಿ’ ಅನಂತರ ನಾಲ್ಕು ವರ್ಷ ಮಾಸಪತ್ರಿಕೆಯಾಯಿತು. ಆಮೇಲೆ ತ್ರೈಮಾಸಿಕವಾಗಿ ಇಂದಿಗೂ ಹಾಗೆಯೇ ಬರುತ್ತಿದೆ.

‘ತ್ರಿವೇಣಿ’ಪತ್ರಿಕೆಯಲ್ಲಿ ಭಾರತದ ವಿವಿಧ ಭಾಷೆಗಳಲ್ಲಿ ರೂಪುಗೊಳ್ಳುತ್ತಿದ್ದ ನವ್ಯ ಸಾಹಿತ್ಯ ರೀತಿಗಳಿಗೆ ಪ್ರಾತಿನಿಧ್ಯವಿತ್ತು. ಬೇರೆಬೇರೆ ಭಾಷೆಗಳ ಕಥೆ, ಕಾವ್ಯ, ಸಾಹಿತ್ಯ ವಿಮರ್ಶೆ, ಸಂಗೀತ, ನಾಟ್ಯ ಮುಂತಾದ ವಿಷಯಗಳನ್ನು ಕುರಿತ ಶ್ರೇಷ್ಠ ಪ್ರಬಂಧಗಳು ಪ್ರಕಟವಾಗುತ್ತಿದ್ದವು.

‘ತ್ರಿವೇಣಿ’ಯಲ್ಲಿ ಲೇಖನಗಳನ್ನು ಬರೆದವರಲ್ಲಿ ಭಾರತದ ಹೆಸರಾಂತ ಲೇಖಕರು, ರಾಜಕಾರಣಿಗಳು, ಕವಿಗಳು, ಸಮಾಜಸೇವಕರು, ಶಾಸ್ತ್ರಜ್ಞರು ಮುಂತಾದವರಿದ್ದರು. ಜವಹರ್‌ಲಾಲ್ ನೆಹರು ಅವರು ತಮ್ಮ ಸ್ವಾನುಭವಗಳನ್ನು ಕುರಿತಂತೆ ಎರಡು ಲೇಖನಗಳನ್ನು ಬರೆದರು. ಡಾಕ್ಟರ್ ಎಸ್. ರಾಧಾಕೃಷ್ಣನ್. ಪಟ್ಟಾಭಿಸೀತಾರಾಮಯ್ಯ, ಕೆ.ಎಂ. ಮುನ್ಷಿ ಮೊದಲಾದ ಹಿರಿಯರ ‘ತ್ರಿವೇಣಿ’ಯ ಪ್ರಾರಂಭದ ವರ್ಷಗಳಲ್ಲಿ ಲೇಖನಗಳನ್ನು ಬರೆದರು. ಕನ್ನಡನಾಡಿನ ಹಿರಿಯ ಸಾಹಿತಿಗಳಾದ ಡಿ.ವಿ. ಗುಂಡಪ್ಪ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ.ಕೃ.ಗೋಕಾಕ್ ಮೊದಲಾದವರ ಇಂಗ್ಲಿಷ್ ಲೇಖನಗಳು ‘ತ್ರಿವೇಣಿ’ಯಲ್ಲಿ ಪ್ರಕಟವಾದವು.

ಸಿ. ರಾಜಗೋಪಾಲಚಾರಿಯವರು ಒಂದು ಕಥೆಯನ್ನು, ರಾಜಕೀಯ ಪರಿಸ್ಥಿತಿಯನ್ನು ಕುರಿತ ಒಂದು ಲೇಖನವನ್ನು ಬರೆದರು. ಅಲ್ಲದೆ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಕೆಲವು ಪ್ರಬಂಧಗಳನ್ನೂ ಬರೆದರು.

೧೯೩೪ರಲ್ಲಿ ವಿಶ್ರಾಂತಿಗಾಗಿ ರಾಮಕೋಟೀಶ್ವರ ರಾವ್ ಅವರು ಸ್ವಂತ ಊರಿಗೆ ಹೋದರು. ಆಗ ಮಹಾತ್ಮ ಗಾಂಧಿಯವರು ಹರಿಜನೋದ್ಧರಣ ಚಳವಳಿಯನ್ನು ಪ್ರಚಾರಮಾಡಲು, ಸ್ವಾತಂತ್ರ್ಯ ಚಳವಳಿಯನ್ನು ಜನ ಸಾಮಾನ್ಯರಿಗೆ ತಿಳಿಸಲು ದೇಶಪರ್ಯಟನೆ ಕಾಂiiವನ್ನು ಕೈಗೊಂಡು ಅದರ ಅಂಗವಾಗಿ ಆಂಧ್ರಪ್ರದೇಶಕ್ಕೆ ಬಂದಿದ್ದರು. ಮಚಲಿಪಟ್ಟಣದಲ್ಲಿ ರಾಷ್ಟ್ರೀಯ ಕಾಲೇಜಿಗೆ ಬಂದಿದ್ದಾಗ ರಾಮಕೋಟೀಶ್ವರರಾವ್ ಗಾಂಧೀಜಿಯವರ ದರ್ಶನ ಮಾಡಿದರು. ‘ತ್ರಿವೇಣಿ’ ಪತ್ರಿಕೆಯನ್ನು ತಾವು ಬಿಡದೆ ನೋಡುತ್ತಿರುವುದಾಗಿಯೂ, ಅದು ಶ್ರೇಷ್ಠಮಟ್ಟದ ಪತ್ರಿಕೆಯೆಂದೂ ಮಹಾತ್ಮರು ಪ್ರಶಂಸಿದರು. ಮಹಾತ್ಮರ ಮೆಚ್ಚಿಗೆಯ ಮಾತು ರಾಮಕೋಟೀಶ್ವರರಿಗೆ ಉತ್ತೇಜನ ನೀಡಿತು.

೧೯೩೬ರಲ್ಲಿ ಸುಮಾರಿನಲ್ಲಿ ತೆಲುಗಿನ ಪ್ರಮುಖ ಪತ್ರಿಕೆಯಾದ “ಆಂಧ್ರಪ್ರಭ’ ದಿನಪತ್ರಿಕೆಯಾದಾಗ ಸಂಪಾದಕರ ಹುದ್ದೆಗೆ ಬರುವಂತೆ ರಾಮಕೋಟೀಶ್ವರರಿಗೆ ಆಹ್ವಾನ ಬಂತು. ಆದರೆ ಅದನ್ನು ಅಂಗೀಕರಿಸದೇ ‘ತ್ರಿವೇಣಿ’ಗೇ ತಮ್ಮ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸಿದರು.

ಬೆಂಗಳೂರಿನಲ್ಲಿ ’ತ್ರಿವೇಣಿ’

೧೯೪೧ರ ಸುಮಾರಿನಲ್ಲಿ ಅಚ್ಚಿನ ಕಾಗದದ ಅಭಾವದಿಂದ ‘ತ್ರಿವೇಣಿ’ಯನ್ನು ಮುಂದುವರಿಸುವುದು ಕಷ್ಟವಾಯಿತು. ಅಷ್ಟುಹೊತ್ತಿಗೆ ‘ತ್ರಿವೇಣಿ’ ಮೂರು ತಿಂಗಳಿಗೆ ಒಮ್ಮೆ ಬರುತ್ತಿತ್ತು. ಒಂದು ಸಂದರ್ಭದಲ್ಲಿ ಕಲ್ಲೂರಿ ಸುಬ್ಬರಾವ್ ಎಂಬುವರು ‘ತ್ರಿವೇಣಿ’ಯ ಕಾರ್ಯಸ್ಥಾನವನ್ನು ಮದರಾಸಿನಿಂದ ಬೆಂಗಳೂರಿಗ ವರ್ಗಾಯಿಸಿದರೆ ಒಳ್ಳೆಯದೆಂದು ಸಲಹೆ ಕೊಟ್ಟರು. ಬೆಂಗಳೂರಿನ ಮಿತ್ರರನ್ನಾದರೂ ಭೇಟಿ ಮಾಡಬಹುದೆಂದು ರಾಮಕೋಟೀಶ್ವರರಾವ್ ಅವರು ಬೆಂಗಳೂರಿಗೆ ಬಂದರು. ಅಲ್ಲಿ ರಾವ್ ಅವರ ಪ್ರಯತ್ನಗಳು ಸಫಲಗೊಂಡವು.

ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿ ಕಾರಾಗೃಹ ವಾಸದಲ್ಲಿ ರಾಮಕೋಟೀಶ್ವರರಿಗೆ ಯಾವಾಗಲೂ ‘ತ್ರಿವೇಣಿ’ ಯದೇ ಚಿಂತೆಯಾಗಿತ್ತು. ಅವರು ಸೆರೆಮನೆಯಲ್ಲಿದ್ದಾಗ ಬೆಂಗಳೂರಿನಲ್ಲಿ ‘ತ್ರಿವೇಣಿ’ಯ ಸಹ ಸಂಪಾದಕರಾಗಿದ್ದ ಸಂಪದ್ಗಿರಿರಾಯರು ಪತ್ರಿಕೆಯನ್ನು ನಿರ್ವಹಿಸಿದರು. ೧೯೪೮ರ ಕೊನೆಯವರೆಗೂ ‘ತ್ರಿವೇಣಿ’ ಬೆಂಗಳೂರಿನಿಂದಲೇ ಪ್ರಕಟಿತವಾಗುತ್ತಿತ್ತು. ರಾಮಕೋಟೀಶ್ವರ ರಾವ್ ಅವರು ಅಲ್ಲಿಯವರೆಗೂ ಬೆಂಗಳೂರನ್ನೇ ತಮ್ಮ ವಾಸಸ್ಥಳವನ್ನಾಗಿ ಮಾಡಿಕೊಂಡಿದ್ದರು.

೧೯೫೪ರಲ್ಲಿ ಬೆಂಗಳೂರಿನ ‘ತ್ರಿವೇಣಿ’ಯ ಮಿತ್ರರು ಆ ಪತ್ರಿಕೆಯ ರಜತೋತ್ಸವವನ್ನು ವಿಜೃಂಭಣೆಯಿಂದ ನಡೆಸಿದರು. ಹೀಗೆ ‘ತ್ರಿವೇಣಿ’ಗೆ ಕರ್ನಾಟಕದ ರಾಜಧಾನಿ ಯೊಂದಿಗೆ ನಿಟಕಬಾಂಧವ್ಯ ಬೆಳೆಯಿತು.

ರಾಷ್ಟ್ರೀಯ ಚಳವಳಿ

ಕೋಲವೆನ್ನು ರಾಮಕೋಟೀಶ್ವರರಾವ್ ಅವರು ಭಾರತದ ರಾಷ್ಟ್ರೀಯ ಚಳವಳಿಯಲ್ಲೂ ಸಕ್ರೀಯವಾಗಿ ಭಾಗವಹಿಸಿದ್ದರು. ೧೯೦೮ರಲ್ಲಿ ಬಾಲಗಂಗಾಧರ ತಿಲಕರಿಗೆ ಕಾರಾಗೃಹವಾಸವನ್ನು ವಿರಿಸಿದಾಗ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ರಾಮಕೋಟೀಶ್ವರರಾವ್ ಅವರೂ ಪಾಲ್ಗೊಂಡಿದ್ದರು. ಆಗ ರಾಮಕೋಟೀಶ್ವರರಿಗೆ ಹದಿನಾಲ್ಕು ವರ್ಷ. ಅದಕ್ಕೂ ಮುಂದೆ ಲಾಲಾ ಲಜಪತರಾಯ್ ಅವರಿಗೆ ಶಿಕ್ಷೆ ವಿಧಿಸಿದಾಗ ಮೆಯಿಲ್ ಪತ್ರಿಕೆಯನ್ನು ಬಹಿಷ್ಕರಿಸುವ ಚಳವಳಿಯನ್ನು ನಡೆಸಲಾಯಿತು. ಅದರಲ್ಲೂ ರಾವ್ ಅವರು ಭಾಗವಹಿಸಿದ್ದರು.

ರಾಮಕೋಟೀಶ್ವರರಾವ್ ವಿದ್ಯಾರ್ಥಿಯಾಗಿದ್ದಾಗ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಲಭಿಸಬೇಕೆಂದೂ, ಸ್ವರಾಜ್ಯ ನಮ್ಮ ಆಜನ್ಮಸಿದ್ಧ ಹಕ್ಕೆಂದು ಸಾರಿದ ಮಹಾನಾಯಕರ ವಾಣಿ ಯುವಜನಾಂಗಕ್ಕೆ ಸ್ಫೂರ್ತಿಯನ್ನು ನೀಡಿತು. ವಂಗದೇಶದ ವಿಭಜನೆ, ಅರವಿಂದರು ನಡೆಸಿದ ‘ವಂದೇಮಾತರಂ’ ಪತ್ರಿಕೆ ಯುವಜನರಲ್ಲಿ ಚೈತನ್ಯವನ್ನು ತುಂಬಿದವು.

ಕೋಲವೆನ್ನು ಅವರಿಗೆ ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ನಾಯಕರೊಂದಿಗೆ ಸಂಪರ್ಕವುಂಟಾಯಿತು. ರಾಷ್ಟ್ರೀಯ ಮಟ್ಟದ ನಾಯಕರಾಗಿದ್ದ ಪಟ್ಟಾಭಿಸೀತಾರಾಮಯ್ಯ ನವರೊಂದಿಗೆ ಅಲ್ಲೇ ಪರಿಚಯವಾಯಿತು. ಅನಂತರ ಕಾಲದಲ್ಲಿ ರಾಮಕೋಟೀಶ್ವರಾಯರ ಮೇಲೆ ಪಟ್ಟಾಭಿ ಅವರು ಅತ್ಯಂತ ವಾತ್ಸಲ್ಯವನ್ನು ತೋರುತ್ತಿದ್ದರು.

೧೯೧೭ರಲ್ಲಿ ಕಲ್ಕತ್ತಾ ನಗರದಲ್ಲಿ ನಡೆದ ಕಾಂಗ್ರೆಸ್ ಮಹಾಸಭೆಗೆ ಹೋದುದು ಕೋಲವೆನ್ನು ಅವರ ರಾಜಕೀಯ ಜೀವನದಲ್ಲಿ ಒಂದು ಮೈಲಿಗಲ್ಲು ಎನ್ನಬಹುದು. ಅಲ್ಲಿ ಬಾಲಗಂಗಾಧರ ತಿಲಕರಂತಹ ಮಹಾ ನಾಯಕರನ್ನು ಸಂದರ್ಶಿಸಿ ಅವರ ಭಾಷಣಗಳನ್ನು ಕೇಳುವ ಅದೃಷ್ಟ ಲಭಿಸಿತು. ವಿದ್ಯಾರ್ಥಿಯಾಗಿರುವಾಗಲೇ ರಾಮಕೋಟೀಶ್ವರ ರಾವ್ ಅವರು ಕಲ್ಕತ್ತಾದಿಂದ ಹೊರಬರುತ್ತಿದ್ದ ‘ಮಾಡರನ್ ರಿವ್ಯೂ ’ ಎಂಬ ಪತ್ರಿಕೆಯನ್ನು ತರಿಸುತ್ತಿದ್ದರಂತೆ.

ಅಸಹಕಾರ ಚಳವಳಿಯಲ್ಲಿ ರಾಮಕೋಟೀಶ್ವರ ರಾವ್ ಅವರು ಭಾಗವಹಿಸಿದ್ದರು. ಗುಂಟೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಸಂಘದ ಪ್ರಕಟಣೆಗಳನ್ನು ನಿರ್ವಹಿಸುವ ಕಾರ್ಯದಲ್ಲಿ ಇವರು ತೊಡಗಿದ್ದರು. ಆಗಿನ ಉತ್ಸಾಹ, ಕಾರ್ಯದೀಕ್ಷೆ ಚಿರಸ್ಮರಣೀಯವಾದವು. ನ್ಯಾಯಾಲಯ ಗಳನ್ನು ಬಹಿಷ್ಕರಿಸಬೇಕೆಂದೂ, ವಿದ್ಯಾರ್ಥಿಗಳು ಶಾಲೆಗಳನ್ನು ಬಿಡಬೇಕೆಂದೂ, ವಿಧಾನಸಭೆಗಳಲ್ಲಿ ಪಾಲ್ಕೊಳ್ಳಬಾರದೆಂದೂ ಗಾಂಧೀಜಿಯವರು ಕರೆ ನೀಡಿದ್ದರು. ಇದನ್ನೇ ತ್ರಿವಿಧ ಬಹಿಷ್ಕಾರ ಎನ್ನಲಾಯಿತು. ರಾಮಕೋಟೀಶ್ವರರಾಯರಿಗೆ ವಕೀಲರಾಗಿ ಸಾಕಷ್ಟು ಸಂಪಾದನೆ ಇತ್ತು. ಆದರೆ ೧೯೨೦ರಲ್ಲಿ ನಡೆದ ನಾಗಪುರ ಕಾಂಗ್ರೆಸ್ ಸಭೆಯ ಅನಂತರ ಅವರು ವಕೀಲಿವೃತ್ತಿಯನ್ನು ಬಿಟ್ಟರು.

೧೯೩೯ರಲ್ಲಿ ಕೋಲವೆನ್ನು ರಾಮಕೋಟೀಶ್ವರರಾವ್‌ರ ಜೀವನದಲ್ಲಿ ಒಂದು ಹೊಸ ತಿರುವು ಬಂದಿತು. ಆ ವರ್ಷ ಒಂದು ಉಪಚುನಾವಣೆಯಲ್ಲಿ ಕೋಲವೆನ್ನು ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಆರಿಸಲಾಯಿತು. ಅದು ಉಪ ಚುನಾವಣೆಯಾದುದರಿಂದ ಎಲ್ಲರ ದೃಷ್ಟಿ ಅದರ ಫಲಿತಾಂಶದ ಮೇಲೆಯೇ ಕೇಂದ್ರೀಕೃತವಾಗಿತ್ತು. ಆ ಚುನಾವಣೆಯಲ್ಲಿ ಕೋಲವೆನ್ನು ಅವರು ಗೆದ್ದರು. ಆದರೆ ವಿಧಾನಸಭೆಯ ಸದಸ್ಯರಾಗಿ ಸ್ವಲ್ಪಕಾಲ ಮಾತ್ರ ಇದ್ದರು. ಎರಡನೆ ಮಹಾಯುದ್ಧದ ಕಾಲದಲ್ಲಿ ಅಸಹಕಾರ ಚಳವಳಿಯ ಅಂಗವಾಗಿ ಸರಕಾರ ರಾಜೀನಾಮೆ ನೀಡಿದ ಕಾರಣ ಕೋಲವೆನ್ನು ಅವರ ಸದಸ್ಯತ್ವವೂ ಅಲ್ಲಿಗೆ ಮುಕ್ತಾಯ ಗೊಂಡಿತು.

ಕಾರಾಗೃಹವಾಸ

ಬ್ರಿಟಿಷರ ವಿರುದ್ಧ ಚಳವಳಿಗಳಲ್ಲಿ ಭಾಗಹಿಸಿದುದಕ್ಕಾಗಿ ರಾಮಕೋಟೀಶ್ವರರಾವ್‌ರನ್ನು ೧೯೪೦ರಲ್ಲಿ ಸೆರೆಮನೆಗೆ ಕಳುಹಿಸಲಾಯಿತು. ವೇಲೂರ ಜೈಲಿನಲ್ಲಿ ಸಿ. ರಾಜಗೋಪಾಲ ಚಾರಿ, ಪಟ್ಟಾಭಿ ಸೀತಾರಾಮಯ್ಯ, ಟಂಗಟೂರಿ ಪ್ರಕಾಶಂ. ಪಂತುಲು, ಬೆಜವಾಡ ಗೋಪಾಲ ರೆಡ್ಡಿ, ವಿ.ವಿ. ಗಿರಿ ಮುಂತಾದ ಮಹಾನಾಯಕರೆಲ್ಲಾ ಇದ್ದರು. ಒಂದು ವರ್ಷ ವೇಲೂರಿನಲ್ಲಿ ಕೋಲವೆನ್ನು ಅವರು ಕಾರಾಗೃಹವಾಸವನ್ನು ಅನುಭವಿಸಿದರು.

ಸೆರೆಮನೆಯಲ್ಲಿದ್ದಾಗ ಕಚಲಬೀಡು ವೆಂಕಟರಮಣಾ

ಚಾರ‍್ಯಲು ಎಂಬುವವರು ಆಂಧ್ರ ಮಹಾಭಾರತದ ಹದಿನೆಂಟು ಪರ್ವಗಳನ್ನೂ ಓದಿಹೇಳಿದ್ದರಂತೆ. ಪ್ರಕಾಶಂ ‘ಪಂತಲು ಸಂಸ್ಕೃತ’ ರಾಮಾಯಣವನ್ನು ಓದುತ್ತಿದ್ದರು. ವೇಲೂರಿನ ಸೆರೆಮನೆಯಿಂದ ಇವರೆಲ್ಲರನ್ನೂ ತಿರುಚಿರಾಪಳ್ಳಿಯ ಸೆರೆಮನೆಗೆ ವರ್ಗಾಯಿಸಲಾಯಿತು. ೧೯೪೧ರ ಅಕ್ಟೋಬರ್ ದಲ್ಲಿ ಕೋಲವೆನ್ನು ಅವರಿಗೂ, ಅವರ ಮಿತ್ರರಿಗೂ ಬಿಡುಗಡೆಯಾಯಿತು.

೧೯೪೨ರಲ್ಲಿ ಕಾಂಗ್ರೆಸ್ ‘ಬ್ರಿಟಿಷರೆ, ಭಾರತದಿಂದ ತೊಲಗಿ’ ಎಂಬ ಚಳುವಳಿಯನ್ನು ಪ್ರಾರಂಭಿಸಿತು. ಚಳವಳಿ ರೂಪುಗೊಳ್ಳುತ್ತಿದ್ದ ಕಾಲದಲ್ಲಿ ಕೋಲವೆನ್ನು ರಾಮ ಕೋಟೀಶ್ವರರಾವ್ ತಮ್ಮ ಜಿಲ್ಲೆಯಲ್ಲೆಲ್ಲ ಸಂಚರಿಸಿ ಕಾಂಗ್ರೆಸ್ ಪಕ್ಷದ ಧ್ಯೇಯಧೋರಣೆಗಳನ್ನು ಪ್ರಚಾರ ಮಾಡಿದರು. ಈ ಚಳವಳಿಯ ಕಾಲದಲ್ಲೇ ೧೯೪೨ರ ಸೆಪ್ಟೆಂಬರ್ ತಿಂಗಳಲ್ಲಿ ರಾವ್ ಅವರನ್ನು ಮತ್ತೆ ಬಂಧಿಸಿ ಇಪ್ಪತ್ತು ತಿಂಗಳ ಕಾಲ ಸೆರೆಮನೆಯಲ್ಲಿಟ್ಟಿತು. ಹೀಗೆ ಸೆರೆಮನೆಯಲ್ಲಿದ್ದ ಕಾಲದಲ್ಲೂ ಅವರ ಮಿತ್ರರು ‘ತ್ರಿವೇಣಿ’ ಪತ್ರಿಕೆಯನ್ನು ಬಿಡದೆ ಪ್ರಕಟಿಸುತ್ತಲೇ ಇದ್ದರು. ರಾಮಕೋಟೀಶ್ವರ ರಾವ್ ಅವರು ಜೈಲಿನಿಂದ ಬಿಡುಗಡೆಯಾದ ಮೇಲೆ ಸ್ವಂತ ಊರಾದ ನರಸಾರಾವ್ ಪೇಟೆಗೆ ಹೋದರು. ಸುಮಾರು ಮೂರು ವರ್ಷ ಬಹು ಶ್ರದ್ಧೆಯಿಂದ ಕಾಂಗ್ರೆಸ್ ಪಕ್ಷದ ಗುರಿಗಳನ್ನು ಅವರು ಜನರಲ್ಲಿ ಪ್ರಚಾರ ಮಾಡಿದರು. ಆದರೂ ೧೯೪೬ನೆಯ ಇಸವಿಯಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಲಿಲ್ಲ.

ಭಾಷಾಭಿಮಾನಿ

ಆಂಗ್ಲಭಾಷೆಯಲ್ಲಿ ‘ತ್ರಿವೇಣಿ ’ ಪತ್ರಿಕೆಯನ್ನು ನಡೆಸಿದ್ದು ಮಾತ್ರವಲ್ಲದೆ ತೆಲುಗು ಭಾಷಾಪತ್ರಿಕೆಗಳನ್ನು ನಿರ್ವಹಿಸುವುದರಲ್ಲೂ ರಾಮಕೋಟೀಶ್ವರ ರಾವ್ ಒಲವನ್ನು ತೋರಿದರು. ‘ಜಯಂತಿ’ಯನ್ನು ನಡೆಸಿದ್ದು ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಸಮರ್ಥವಾಗಿ ಪಾತ್ರವಹಿಸಿದ ‘ಕೃಷ್ಣಾ ಪತ್ರಿಕೆ ’ ಯ ಉಪಸಂಪಾದಕರಾಗಿ ಅವರು ಮಾಡಿದ ಭಾಷಾಸೇವೆ ಚಿರಸ್ಮರಣೀಯವಾದುವು. ಮದರಾಸಿನ ದಕ್ಷಿಣ ಭಾಷಾಪುಸ್ತಕ ಸಂಸ್ಥೆಯ ತೆಲುಗು ವಿಭಾಗದ ಪ್ರಧಾನ ಸಂಪಾದಕರಾಗಿ ರಾವ್ ಸಲ್ಲಿಸಿದ ಸೇವೆ ಗಮನಾರ್ಹ ವಾದುದು. ಆಂಗ್ಲಭಾಷೆಯಲ್ಲಿ ಹೇಗೋ ಹಾಗೆಯೇ ತೆಲುಗಿನಲ್ಲೂ ವಿದ್ವತ್ಪೂರ್ಣ ರಚನೆಯನ್ನು ಮಾಡುವ ರಾಮಕೋಟೀಶ್ವರರಾವ್‌ರಿಗಿತ್ತು. ಭಾರತದ ರಾಜ್ಯಾಂಗವನ್ನು ತೆಲುಗಿಗೆ ಅನುವಾದ ಮಾಡುವ ಸಮಿತಿಯಲ್ಲಿ ಅವರು ಸದಸ್ಯರಾಗಿದ್ದರು. ಮಹಾರಾಷ್ಟ್ರದ ವೀರರನ್ನು ಕುರಿತ ಅವರ ‘ಮಹಾರಾಷ್ಟ್ರ ವೀರಲು’ ತೆಲುಗು ಗ್ರಂಥವು ವಿಮರ್ಶಕರ ಪ್ರಶಂಸೆಗೆ ಪಾತ್ರವಾಯಿತು. ಒರಿಸ್ಸಾ ರಾಜ್ಯದ ಸಂಬಲ್ ಪುರದಲ್ಲಿ ಆಂಧ್ರರ ಚರಿತ್ರೆ -ಸಂಸ್ಕೃತಿಗಳನ್ನು ಕುರಿತು ಅವರು ಉಪನ್ಯಾಸಗಳನ್ನು ಮಾಡಿದ್ದರು. ೧೯೫೪ರಲ್ಲಿ ಪೂರಿಯಲ್ಲಿ ತೆಲುಗು ಸಂಸ್ಕೃತಿ ಹಾಗೂ ಸಾಹಿತ್ಯಗಳನ್ನು ಕುರಿತು ಕೆಲವು ಉಪನ್ಯಾಸಗಳನ್ನು ಕೊಟ್ಟರು.

ರಾಮಕೋಟೀಶ್ವರರಾವ್‌ರದು ಸೌಜನ್ಯದ ಸ್ವಭಾವ, ಸುಸಂಸ್ಕೃತ ನಡವಳಿಕೆ. ಅವರಿಗೆ ನಾಡಿನುದ್ದಗಲಕ್ಕೂ ಸ್ನೇಹಿತರಿದ್ದರು. ತೆಲುಗು ಕವಿಗಳಲ್ಲಿ ಕಾಟೂರಿ ವೆಂಕಟೇಶ್ವರರಾವ್, ಅಡವಿ ಬಾಪಿರಾಜು, ಬಸವರಾಜು ಅಪ್ಪಾರಾವ್, ರಾಯಿಪ್ಪೋಲು ಸುಬ್ಬರಾವ್ ಇವರೆಲ್ಲ ಅವರ ಸ್ನೇಹಿತರು, ರಾಮಕೋಟೀಶ್ವರರಾವ್‌ರ ತಂದೆಯವರಿಗೆ ನಾಟಕದಲ್ಲಿ ಬಹು ಆಸಕ್ತಿ. ಅನೇಕ ಮಂದಿ ಸುಪ್ರಸಿದ್ಧ ನಟರು ಅವರ ಸ್ನೇಹಿತರು, ಅವರ ಮನೆಗೆ ಬಂದು ಹೋಗುತ್ತಿದ್ದರು. ಹುಡುಗ ರಾಮಕೋಟೀಶ್ವರ ತಂದೆಯ ಜೊತೆಗೆ ನಾಟಕಗಳನ್ನು ನೋಡಲು ಹೋಗುತ್ತಿದ್ದುದು ಉಂಟು. ದೊಡ್ಡವರಾದ ನಂತರವೂ ರಾಯರು ನಾಟಕದಲ್ಲಿ ಆಸಕ್ತಿಯನ್ನು ಉಳಿಸಿಕೊಂಡರು.

ಆಂಧ್ರಭಾಷೆಯ ಮೇಲೆ ಎಷ್ಟು ಗೌರವವಿದ್ದರೂ ಬೇರೆ ಭಾಷೆಗಳನ್ನು ಕುರಿತು ತಿಳಿದುಕೊಳ್ಳಬೇಕೆಂಬುದು ರಾಮಕೋಟೀಶ್ವರ ರಾವ್ ಅವರ ನಿಲುವಾಗಿತ್ತು. ಭಾರತದ ಆದ್ಯಂತ ನಾನಾ ಕಡೆಗಳಲ್ಲಿ ಮಿತ್ರರನ್ನು ಹೊಂದಿದ್ದ ಅವರು ವಿಭಿನ್ನಭಾಷಾ ಸಂಸ್ಕೃತಿಗಳ ಸಮನ್ವಯಕ್ಕೆ ದುಡಿದುದರಲ್ಲಿ ಆಶ್ಚರ್ಯವೇನೂ ಇಲ್ಲ.

ಸ್ವರಾಜ್ಯ ಪತ್ರಿಕೆಯಲ್ಲಿದ್ದಾಗ “ಆಂಧ್ರಕೇಸರಿ’ ಎಂಬ ಬಿರುದನ್ನು ಪಡೆದ ಪ್ರಕಾಶಂ ಪಂತುಲು ಜೊತೆಗೆ ಕಾರ್ಯನಿರ್ವಹಿಸುವ ಅವಕಾಶ ಲಭಿಸಿತು. ಭಾರತೀಯ ಪತ್ರಿಕೋದ್ಯಮದಲ್ಲಿ ಹೆಸರಾಂತ ವ್ಯಕ್ತಿಗಳಾದ ಖಾಸಾ ಸುಬ್ಬರಾವ್, ಕೃಪಾನಿಧಿಗಳ ಸ್ನೇಹ ದೊರೆಯಿತು. ಭಾರತದ ರಾಜಕೀಯ ಭೀಷ್ಮರಾದ ಸಿ. ರಾಜಗೋಪಾಲಚಾರಿಯವರ ಪರಿಚಯವೂ ಆಯಿತು.

ರಾಷ್ಟ್ರೀಯ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ನಾಲ್ಕು ವರ್ಷ ತಮ್ಮ ಜೀವನದಲ್ಲಿ ಮರೆಯಲಾಗದ್ದೆಂದು ಹೇಳುತ್ತಾರೆ ಕೋಲವೆನ್ನು. ಆಗ ಆ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದ ಡಾಕ್ಟರ್ ಬೆಜವಾದ ಗೋಪಾಲರೆಡ್ಡಿಯವರಂತಹವರಿದ್ದರು, ಅಧ್ಯಾಪಕರಾಗಿ ವಿಶ್ವನಾಥ ಸತ್ಯನಾರಾಂiiಣ, ಪ್ರಮೋದಕುಮಾರ್ ಚಟರ್ಜಿ ಮುಂತಾದವರಿದ್ದರು. ವಿಶ್ವನಾಥ ಸತ್ಯನಾರಾಯಣರು ತೆಲುಗಿನ ಆಧುನಿಕ ಕಾವ್ಯಕ್ಷೇತ್ರದಲ್ಲಿ ಬಹಳವಾಗಿ ದುಡಿದವರು. ನೂರಾರು ಗ್ರಂಥಗಳನ್ನು ಬರೆದವರು. ಅವರು ರಚಿಸಿದ ಕೃತಿಗಳನ್ನು ಮೊದಲು ಕೋಲವೆನ್ನು ಹಾಗೂ ಅಡಿವಿ ಬಾಪಿರಾಜುಗಳಿಗೂ ಓದಿ ಹೇಳುತ್ತಿದ್ದರಂತೆ, ವಿಶ್ವನಾಥರ ಜೊತೆಗೂಡಿ ‘ಜಯಂತಿ’ ಪತ್ರಿಕೆಯನ್ನು ಸ್ವಲಕಾಲ ಕೋಲವೆನ್ನು ನಡೆಸಿದರು.

ಪತ್ರಿಕಾಪ್ರಪಂಚಕ್ಕೆ ಕಾಲಿಟ್ಟ ಮೇಲೆ ರಾಮಕೋಟೀಶ್ವರ ರಾವ್‌ರಿಗೆ ಅನೇಕ ಗಣ್ಯವ್ಯಕ್ತಿಗಳ ಪರಿಚಯವಾಯಿತು. ‘ಕೃಷ್ಣಾ ಪತ್ರಿಕೆ’ಯ ಕಚೇರಿಗೆ ಹೋಗುತ್ತಿದ್ದ ಕಾಲದಲ್ಲಿ ಅಲ್ಲಿಗೆ ಬರುತ್ತಿದ್ದ ಅನೇಕರೊಂದಿಗೆ ಸ್ನೇಹವಿತ್ತು.

ಕೋಲವೆನ್ನು ಗಳಿಸಿದ ಗೌರವ ಪ್ರಶಸ್ತಿಗಳು

ಕೋಲವೆನ್ನು ರಾಮಕೋಟೀಶ್ವರ ರಾವ್ ಚಿಕ್ಕ ವಯಸ್ಸಿನಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಶಾಲೆಯಲ್ಲಿ ಓದುತ್ತಿದ್ದ ಕಾಲದಲ್ಲೇ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ತೆಲುಗು ನಾಡಿಗೇ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಕಾಲೇಜಿನಲ್ಲಿ ಓದುವ ಕಾಲದಲ್ಲಿ ಅನೇಕ ಭಾಷಣಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನಗಳನ್ನು ಪಡೆದಿದ್ದರು.  ವಿದ್ಯಾರ್ಥಿ ಯಾಗಿರುವಾಗಲೇ ಉನ್ನತಮಟ್ಟದ ಲೇಖನಗಳನ್ನು ಬರೆಯುವ ಅಭ್ಯಾಸವನ್ನು ಇಟ್ಟುಕೊಂಡಿದ್ದರು.

ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ರಾಷ್ಟ್ರೀಯ ಕಾಲೇಜಿನ ಅಧ್ಯಾಪಕರಾಗಿಯೂ, ಪ್ರಿನ್ಸಿಪಾಲರಾಗಿಯೂ ರಾಮ ಕೋಟೀಶ್ವರ ರಾವ್ ಸಲ್ಲಿಸಿದ ಸೇವೆ ಸ್ಮರಣಾರ್ಹವಾದುದು. ಮದರಾಸಿನಲ್ಲಿ ಆಕಾಶವಾಣಿ ನಿಲಯ ೧೯೩೭ರಲ್ಲಿ ಸ್ಥಾಪಿತವಾಯಿತು. ಅಲ್ಲಿ ಮೊಟ್ಟಮೊದಲನೆಯ ತೆಲಗು ಭಾಷಣವನ್ನು ಗಿಡುಗು ರಾಮಮೂರ್ತಿ ಪಂತುಲು ಮಾಡಿದ್ದರು. ಎರಡನೇ ಭಾಷಣ ಕೋಲವೆನ್ನು ರಾಮಕೋಟೀಶ್ವರರಾವ್‌ರದೇ. ಅವರ ಅಂದಿನ ಭಾಷಣ ಗೃಹಾಲಂಕರಣಕ್ಕೆ ಸಂಂಧಿಸಿದ್ದು.

೧೯೪೧ರ ಡಿಸೆಂಬರ್ ತಿಂಗಳಲ್ಲಿ ಆಂಧ್ರ ಮಹಾಸಭೆ ಎಂಬ ಸಂಘದ ರಜತೋತ್ಸವ ಮದರಾಸಿನಲ್ಲಿ ನಡೆಯಿತು. ಆ ಸಂದರ್ಭದಲ್ಲಿ ನಡೆದ “ಆರ್ಟ್‌ಲವರ್ಸ್’ ಮೀಟಿಂಗ್‌ಗೆ ಕೋಲವೆನ್ನು ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಅನೇಕ ಕವಿಗಳೂ ಪಂಡಿತರೂ ಭಾಗವಹಿಸಿದ್ದರು. ಒರಿಸ್ಸಾ ಮುಂತಾದ ಕಡೆಯಿಂದ ಆಂಧ್ರ ಸಂಸ್ಕೃತಿಯನ್ನು ಕುರಿತ ಉಪನ್ಯಾಸಗಳನ್ನು ಕೊಡುವಂತೆ ಕೋಲವೆನ್ನು ಅವರಿಗೆ ಆಹ್ವಾನಗಳು ಬಂದವು. ಸಂಬಲ್ ಪುರ, ಪೂರಿ ಮುಂತಾದ ಕಡೆ ಅವರು ಭಾಷಣಗಳನ್ನು ನೀಡಿದ್ದರು.

೧೯೫೪ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ನಡೆದ ‘ತ್ರಿವೇಣಿ’ ರಜತೋತ್ಸವ ಸಮಾರಂಭದಲ್ಲಿ ಕೋಲವೆನ್ನು ಅವರನ್ನು ಆದರ ಗೌರವಗಳಿಂದ ಸನ್ಮಾನಿಸಲಾಯಿತು. ೧೯೬೧ರಲ್ಲಿ ನಡೆದ ಮಚಲಿಪಟ್ಟಣದ ರಾಷ್ಟ್ರೀಯ ಕಾಲೇಜಿನ ಸುವರ್ಣ ಮಹೋತ್ಸವದಲ್ಲಿ ಮಾಜಿ ಪ್ರಿನ್ಸಿಪಾಲರಾದ ರಾಮಕೋಟೀಶ್ವರರಾವ್‌ರನ್ನು ಸತ್ಕರಿಸಲಾಯಿತು. ೧೯೬೫ರಲ್ಲಿ ಅಖಿಲ ಭಾರತ ಪತ್ರಿಕೋಧ್ಯಮಿಗಳ ಸಂಘದವರು ತಮ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಮಕೋಟೀಶ್ವರ ರಾಯನ್ನು ಗೌರವಿಸಿದರು. ಆಂಧ್ರ ಪ್ರದೇಶದ ಸಾಹಿತ್ಯ ಅಕಾಡೆಮಿಯವರು ಕೋಲವೆನ್ನು ರಾಮಕೋಟೀಶ್ವರ ರಾವ್ ಅವರಿಗೆ ಗೌರವ ಸದಸ್ಯತ್ವವನ್ನು ಕೊಟ್ಟರು. ಇವೆಲ್ಲ ಅನೇಕ ಕ್ಷೇತ್ರಗಳಲ್ಲಿ ಉನ್ನತಮಟ್ಟದ ಮೌಲ್ಯಗಳಿಗಾಗಿ ದುಡಿದ ಮಹಾನ್ ವ್ಯಕ್ತಿ ಕೋಲವೆನ್ನು ರಾಮಕೋಟೀಶ್ವರ ರಾವ್ ಅವರಿಗೆ ಲಭಿಸಿದ ಕೆಲವು ಗೌರವಗಳು.

ರಾಮಕೋಟೀಶ್ವರರಾವ್ ಅವರು ೧೯೭೦ರಲ್ಲಿ ನಿಧನರಾದರು.

ರಾಮಕೋಟೀಶ್ವರರಾಯರು ನಡೆಸಿದ ‘ತ್ರಿವೇಣಿ’ ಪತ್ರಿಕೆಗೆ ಜವಹರ್ ಲಾಲ್ ನೆಹರು, ರಾಧಾಕೃಷ್ಣನ್, ರಾಜಾಜಿ ಮೊದಲಾದವರು ಲೇಖನಗಳನ್ನು ಬರೆದರೆಂದರೆ ಅದರ ಹಿರಿಮೆ ಗೊತ್ತಾಗುತ್ತದೆ. ಅದನ್ನು ಇಪ್ಪತ್ತು ವರ್ಷಕಾಲ ನಡೆಸಿದ ನಂತರವೂ ಪತ್ರಿಕೆಯು ಹಣಕಾಸಿನ ಮುಗ್ಗಟ್ಟನ್ನು ಎದುರಿಸಬೇಕಾಯಿತು. ಅದನ್ನು ಮುಂದುವರಿಸುವುದೇ ಕಷ್ಟವಾಯಿತು ಎನ್ನುವುದರಿಂದ ಕೋಲವೆನ್ನು ಎಷ್ಟು ಪ್ರಾಮಾಣಿಕೆತೆಯಿಂದ ಪತ್ರಿಕೆಯನ್ನು ನಡೆಸಿದರು ಎಂಬುದು ತಿಳಿಯುತ್ತದೆ. ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಹಲವು ರಾಜ್ಯಗಳ ಮಂತ್ರಿಗಳು ಎಲ್ಲ ರಾಮಕೋಟೀಶ್ವರರಾಯರ ಪರಿಚಯದವರೇ. ಆದರೂ ಅವರು ಯಾರ ಸಹಾಯವನ್ನೂ ಬೇಡಲಿಲ್ಲ. ಸರ್ಕಾರದ ಕೃಪೆಗೆ ಕೈಚಾಚಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಸೆರೆಮನೆ ಕಂಡವರು, ಕೈತುಂಬ ಹಣ ತರುತ್ತಿದ್ದ ವಕೀಲಿವೃತ್ತಿಯನ್ನು ಬಿಟ್ಟು ಕಷ್ಟಪಟ್ಟವರು,  ವಿದ್ವಾಂಸರು, ಚಿಂತನಶೀಲರು -ಅವರನ್ನು ಕಾಂಗ್ರೆಸ್ ಪಕ್ಷ ಚುನಾವಣೆಗೆ ನಿಲ್ಲಿಸಲಿಲ್ಲ. ರಾಜ್ಯಸಭೆಯ ಸದಸ್ಯತ್ವವನ್ನು ಕೊಡಲಿಲ್ಲ.  ರಾಯರು ಬೇಸರ ಪಟ್ಟುಕೊಳ್ಳಲಿಲ್ಲ ಐಶ್ವರ್ಯ ಬಯಸಲಿಲ್ಲ. ತೆಲುಗು ಭಾಷೆಯಲ್ಲಿ ಅವರಿಗೆ ಅಪಾರಪ್ರೇಮ. ಆ ಪ್ರೇಮ ತೆಲುಗು ಭಾಷೆ-ಸಾಹಿತ್ಯಗಳ ಪ್ರಗತಿಗಾಗಿ ಕಾರ್ಯಶೀಲರಾಗಿ ದುಡಿಯುವುದರಲ್ಲಿ ಪ್ರಕಟವಾಯಿತು. ಆದರೆ ಇತರ ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರಿಗೆ ಆಸಕ್ತಿ. ಭಾರತದ ಎಲ್ಲ ಭಾಷೆಗಳಲ್ಲಿನ ಹಲವರು ಹಿರಿಯ ಸಾಹಿತಿಗಳು ಅವರ ಸ್ನೇಹಿತರು. ಇಂಗ್ಲಿಷ್ ಭಾಷೆಯನ್ನು ಬರೆಯುವಾಗ ಸಣ್ಣ ಗೀಟನ್ನು ಉಪಯೋಗಿಸುವುದುಂಟು. ಒಂದು ಭಾಗವನ್ನು ಇನ್ನೊಂದು ಭಾಗದಿಂದ ಬೇರ್ಪಡಿಸುವ ಸಣ್ಣ ಗೀಟಿಗೆ ‘ಡ್ಯಾಷ್’ ಎನ್ನುತ್ತಾರೆ; ಎರಡು ಪದಗಳನ್ನು ಒಂದುಗೂಡಿಸಿ ಒಂದೇ ಪದ ಮಾಡಲು ಬಳಸುವ ಸಣ್ಣ ಗೀಟಿಗೆ ‘ಹೈಫನ್’ ಎನ್ನುತ್ತಾರೆ. ರಾಮಕೋಟೀಶ್ವರರಾವ್ ಅವರು ಭಾರತದಲ್ಲಿ ಅನೇಕ ಭಾಷೆಗಳಿರುವ ವಿಷಯವನ್ನು ಕುರಿತು ಮಾತನಾಡುತ್ತ ಮತ್ತೆಮತ್ತೆ ಹೇಳುತ್ತಿದ್ದರು. ‘ಭಾಷೆ ದೂರಮಾಡುವ ಡ್ಯಾಷ್ ಆಗಬಾರದು. ಹತ್ತಿರ ತರುವ ಹೈಫನ್ ಆಗಬೇಕು” ಭಾಷೆಗಳ ವಿಷಯದಲ್ಲಿ ಇದೇ ವಿವೇಕ. ವಿವೇಚನೆಗಳಿಂದ ನಡೆದುಕೊಳ್ಳುತ್ತಿದ್ದರು.

ವಕೀಲರಾಗಿ, ಪತ್ರಿಕೋದಮಿಯಾಗಿ, ಅಧ್ಯಾಪಕರಾಗಿ, ರಾಷ್ಟ್ರೀಯ ಹೋರಾಟಗಾರರಾಗಿ ಕೋಲವೆನ್ನು ರಾಮ ಕೋಟೀಶ್ವರರಾವ್ ಅವರು ಸಲ್ಲಿಸಿದ ಸೇವೆ ಅಪಾರವಾದುದು. ಅಂತಹ ಮಹಾನುಭಾವರ ನೆನಪೇ ನಮಗೆ ದಾರಿದೀಪ.