ಕಲಾವಿದರಾಗಿ, ಗುರುವಾಗಿ, ಸಂಯೋಜಕರಾಗಿ, ನಿರ್ದೇಶಕರಾಗಿ, ವಿಮರ್ಶಕರಾಗಿ, ಬರಹಗಾರರಾಗಿ, ಸಂಘಟಕರಾಗಿ ನೃತ್ಯ ಕ್ಷೇತ್ರದಲ್ಲಿ ಪ್ರೊ. ಕೆ. ರಾಮಮೂರ್ತಿರಾವ್ ಅವರದು ವೈವಿದ್ಯಮಯ ವ್ಯಕ್ತಿತ್ವ ದಿವಂಗತ ಎಂ. ವಿಷ್ಣುದಾಸ್ ಅವರಲ್ಲಿ ಹಲವು ವರ್ಷಗಳ ಕಾಲ ನೃತ್ಯಭ್ಯಾಸ ಮಾಡಿದ ರಾಮಮೂರ್ತಿರಾವ್, ಮೈಸೂರು ಅರಮನೆಯ ರಾಜನರ್ತಕಿ ಪದ್ಮಭೂಷಣ ಡಾ.ಕೆ. ವೆಂಕಟಲಕ್ಷ್ಮಮ್ಮ ಅವರಲ್ಲಿ ರಸಾಭಿನಯದಲ್ಲಿ ತರಬೇತಿ ಪಡೆದಿದ್ದಾರೆ. ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಡೆಸುವ ಭರತನಾಟ್ಯ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಮೂರೂ ಪರೀಕ್ಷೆಗಳಲ್ಲಿ ಶ್ರೇಣಿ ಪಡೆದಿದ್ದ ಪ್ರತಿಭಾವಂತರು ರಾಮಮೂರ್ತಿ.

ಪ್ರದರ್ಶನ ಕಲಾವಿದರಾಗಿ ಬೇಡಿಕೆಯಿದ್ದಾಗಲೇ ತಮ್ಮ ಕ್ಷೇತ್ರವನ್ನು ಬರಹದ ಕಡೆ ವಿಸ್ತರಿಸಿಕೊಂಡ ರಾಮಮೂರ್ತಿಯವರು. ನೃತ್ಯಕ್ಕೆ ಸಂಬಂಧಪಟ್ಟ ಸಾವಿರಾರು ಲೇಖನಗಳನ್ನು ನಾಡಿನ ಜನಪ್ರಿಯ ಪತ್ರಿಕೆಗಳಿಗೆ ಬರೆದಿದ್ದಾರೆ. ಕೆಲವು ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಕೆಲಸ ಮಾಡಿರುವ ಶ್ರೀಯುತರ ಅಂಕಣ ಲೇಖನಗಳು ’ಸಂಗ್ರಹಯೋಗ್ಯ’ ಎಂದು ಹಿರಿಯ ವಿದ್ವಾಂಸರುಗಳಿಂದ ಮೆಚ್ಚುಗೆ ಗಳಿಸಿವೆ. ಪ್ರಜಾವಾಣಿ ದಿನಪತ್ರಿಕೆಯ ಅವರ ವಿಮರ್ಶಾ ಲೇಖನಗಳು ಉದಯೋನ್ಮುಖ ಕಲಾವಿದರಿಗೆ ಮಾರ್ಗದರ್ಶಿಯಾಗಿವೆ. ಇವರ ’ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮ’ ಪುಸ್ತಕವನ್ನು ಸಂಗೀತ ನೃತ್ಯ ಅಕಾಡೆಮಿ ಪ್ರಕಟಿಸಿದೆ. ’ಭರಾಂಜಲಿ’ ವಾರ್ಷಿಕ ಸಂಚಿಕೆಯ ಸಂಪಾದಕರು, ಡಾ. ಎಂ. ಸೂರ್ಯ ಪ್ರಸಾದ್ ಅವರ ’ಗುಣಗ್ರಾಹಿ’ ಸಂಗೀತ ನೃತ್ಯ ಮಾಸಪತ್ರಿಕೆಯ ಸಹ ಸಂಪಾದಕರು, ಕರ್ನಾಟಕ ಸರ್ಕಾರದ ಪಠ್ಯಪುಸ್ತಕ ಸಮಿತಿ ಸದಸ್ಯರು, ಜೂನಿಯರ್ ಗ್ರೇಡ್ ಭರತನಾಟ್ಯ ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ಸಕ್ರಿಯ ಪಾಲು-ಹೀಗೆ ಅವರ ಸೇವಾ ಕ್ಷೇತ್ರ ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. ಹಾಗೆಯೇ ನೃತ್ಯಕ್ಕೆ ಸಂಬಂಧಪಟ್ಟ ಹಾಗೆ ಆಕಾಶವಾಣಿ ಮತ್ತು ದೂರದರ್ಶನಗಳು ರಾಮಮೂರ್ತಿಯವರ ಸೇವೆಯನ್ನು ಬಳಸಿಕೊಳ್ಳುತ್ತಿರುತ್ತವೆ.

ಆಸ್ತಾನ್ ವಿದ್ವಾನ್ ಎಸ್.ಎನ್. ಮರಿಯಪ್ಪ ಎ.ವಿ. ಕೃಷ್ಣಮೂರ್ತಿ ಮತ್ತು ಲಕ್ಷ್ಮೀಪತಿ ಭಾಗವತರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿರುವ ರಾಮಮೂರ್ತಿಯವರು ನೃತ್ಯಕ್ಕೆ ಹಿನ್ನೆಲೆ ಗಾಯನ ನೀಡುವ ಮೂಲಕ ತಮ್ಮ ಸಂಗೀತ ಪ್ರತಿಭೆಯನ್ನೂ ನೃತ್ಯ ಕ್ಷೇತ್ರಕ್ಕೆ ಅರ್ಪಿಸಿಕೊಂಡಿದ್ದಾರೆ. ಜೊತೆಗೆ ರಾಮಮೂರ್ತಿ ಒಳ್ಳೆಯ ನಟುವಾಂಗ ಕಲಾವಿದರಾಗಿದ್ದು, ನಾಡಿನ ಹೆಸರಾಂತ ನೃತ್ಯ ಕಲಾವಿದರುಗಳಿಗೆ ನಟುವಾಂಗ ನಿರ್ವಹಣೆಯನ್ನೂ ಮಾಡುತ್ತಿರುತ್ತಾರೆ. ಇನ್ನೂ ಉಪನ್ಯಾಸಗಳು, ಕಾರ್ಯಾಗಾರಗಳು, ಶಿಬಿರ ನಿರ್ವಹಣೆಗಳು ಇವೆಲ್ಲಾ ನಿರಂತರ ರಾಮಮೂರ್ತಿಯವರ ಒಡನಾಡಿಗಳು.

ತಮ್ಮದೇ ’ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್‌” ನಡೆಸುತ್ತಿದ್ದು, ರಾಮಮೂರ್ತಿಯವರು ಜೆ.ಎಸ್.ಎಸ್. ಸಂಗೀತ ಸಭಾ ಟ್ರಸ್ಟ್‌ ಡಾ. ವೆಂಕಟಲಕ್ಷ್ಮಮ್ಮ ಸಾಂಸ್ಕೃತಿಕ ಟ್ರಸ್ಟ್ ಭಾರತೀಯ ನೃತ್ಯಕಲಾ ಪರಿಷತ್ತು, ಗಾನಭಾರತೀ ಮುಂತಾದ ಸಾಂಸ್ಕೃತಿಕ ಸಂಸ್ಥೆಗಳ ಕಾರ್ಯಕಾರಿಣಿಯಲ್ಲಿ ದುಡಿಯುತ್ತಿದ್ದಾರೆ.

ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು, ಮಠ ಮಂದಿರಗಳು, ಕಲಾ ತಂಡಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಈಗ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರೊ. ಕೆ. ರಾಮಮೂರ್ತಿರಾವ್ ಅವರಿಗೆ ೨೦೦೫-೦೬ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.