ಮೈಸೂರು ಸಂಗೀತ ಪರಂಪರೆಯಲ್ಲಿ ಗಣ್ಯವಾದ ಕುಟುಂಬದಲ್ಲಿ ಜನಿಸಿದ ವಾಗೀಶ್‌ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದುದು ವಿದುಷಿ ಹೆಚ್‌.ಎಸ್‌. ಮಹಾಲಕ್ಷ್ಮಿಯವರಲ್ಲಿ ಮುಂದೆ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ದೆಹಲಿ ವಿಶ್ವಿದ್ಯಾಲಯದಿಂದ ಡಾಕ್ಟರೇಟ್‌ ಪದವಿ ಪಡೆದರು. ನಂತರ ಭಾರತೀಯ ವಿದ್ಯಾ ಭವನದ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಡಿಪ್ಲೊಮೋ ಪದವಿಯನ್ನು ಪಡೆದರು.

‘ಎ’ ದರ್ಜೆಯ ಗಾಯಕರಾದ ಇವರ ಗಾಯನ ಆಕಾಶವಾಣಿ – ದೂರದರ್ಶನ ಕೇಂದ್ರಗಳಿಂದಲೂ. ರಾಷ್ಟ್ರೀಯ ಕಾರ್ಯಕ್ರಮಗಳಲ್ಲೂ, ಸಂಗೀತ ಸಮ್ಮೇಳನಗಳಲ್ಲೂ ಕೇಳಿ ಬರುತ್ತಿರುತ್ತದೆ.

ಮುಖ್ಯ ನಿರ್ಮಾಪಕರಾಗಿ ದೆಹಲಿ ಆಕಾಶವಾಣಿ ಕೇಂದ್ರದಿಂದ ಸೇವೆ ಸಲ್ಲಿಸಿದ್ದಾರೆ. ಪ್ರತಿವರ್ಷ ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವದ ಅಂಗವಾಗಿ ಅಹೋರಾತ್ರಿ ಅಖಂಡ ಗಾನಯಜ್ಞವನ್ನು ನಡೆಸಿ ಪುರಂದರದಾಸರಾದಿಯಾಗಿ ಇತರ ವಾಗ್ಗೇಯ ರಚನೆಗಳನ್ನು ಆಳವಡಿಸಿಕೊಂಡು ಜನಪ್ರಿಯಗೊಳಿಸಿದ್ದಾರೆ. ರವೀಂದ್ರ ಸಂಗೀತಕ್ಕೂ ಇವರು ಅವಕಾಶ ನೀಡುತ್ತ ಬಂದಿದ್ದಾರೆ.

ಭಾರತ ಸರ್ಕಾರದ ಐ.ಸಿ.ಸಿ.ಆರ್. ಮತ್ತು ಸಿ.ಸಿ.ಆರ್.ಟಿ. ಸಂಸ್ಥೆಗಳಲ್ಲೂ ಆಕಾಶವಾಣಿಯ ಎಂಎ.ಬಿ. ಯಲ್ಲಿಯೂ ತೀರ್ಪುಗಾರರಾಗಿ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಫ್ರಾನ್ಸ್ ಪ್ರವಾಸ ಮಾಡಿರುವ ಶ್ರೀಯುತರಿಗೆ ‘ಗಾಯಕ ಕಲಾನಿಧಿ’, ‘ಕರ್ನಾಟಕ ಕಲಾಶ್ರೀ’ ಮುಂತಾದ ಗೌರವಗಳು ಲಭಿಸಿವೆ. ಪ್ರಸ್ತುತ ತಿರುಚ್ಚಿ ಆಕಾಶವಾಣಿಯ ನಿಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.