ಕೆ.ವಿ.ಪುಟ್ಟಪ್ಪನವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ೨೬,೧೨,೧೯೦೪ ರಂದು ಜನಿಸಿದರು. ತಂದೆ ವೆಂಕಟಪ್ಪ.ತಾಯಿ ಸೀತಮ್ಮ ೧೯೧೮ ರಿಂದ ೧೯೨೬ ರವರೆಗೆ ಮೈಸೂರಿನಲ್ಲಿ ವ್ಯಾಸಂಗಮಾಡಿ ಕನ್ನಡದಲ್ಲಿ ಎಂ.ಎ ಪದವಿ ಪಡೆದರು. ೧೯೨೯ ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ, ೧೯೫೬ ರಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ೧೯೬೦ ರಲ್ಲಿ ನಿವೃತ್ತರಾದರು. ಕನ್ನಡದಲ್ಲಿ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಶ್ರೀರಾಮಾಯಣ ದರ್ಶನಂ, ಮಹಾಕಾವ್ಯಕ್ಕೆ ೧೯೬೮ ರಲ್ಲಿ ಪಡೆದರು. ಇವರ ಕಾವ್ಯನಾಮ ಕುವೆಂಪು. ಕುವೆಂಪುರವರು ತಮ್ಮ ಮೊದಲ ಇಂಗ್ಲಿಷ್ ಪದ್ಯಗಳ ಸಂಕಲನ ಬಿಗಿನರ್ಸ್ ಮ್ಯೂಸ್ ೧೯೨೨ ರಲ್ಲಿ ಕಿಶೋರ ಚಂದ್ರವಾಣಿ ಎಂಬ ಕಾವ್ಯನಾಮದೊಂದಿಗೆ ಪ್ರಕಟಿಸಿದರು.

ವರ್ಡ್ಸ್‌ವತ್, ಶೆಲ್ಲಿ, ಟಾಲ್‌ಸ್ಟಾಯ್, ಮಿಲ್ಟನ್-ರಂತಹ ಕವಿಗಳನ್ನು ಓದಿ ವಿಶ್ವ ಸಾಹಿತ್ಯ ಪ್ರಭಾವಕ್ಕೊಳಗಾದರು. ಇಂಗ್ಲಿಷ್ ಕವನಗಳನ್ನಾದರಿಸಿ ವಿವಿಧ ಲಯದ ಕನ್ನಡ ಕವಿತೆಗಳನ್ನು ರಚಿಸಿದರಲ್ಲದೆ, ಬಿ.ಎ ತರಗತಿಯಲ್ಲಿದ್ದಾಗಲೇ ಕಿಂದರಿಜೋಗಿ ಪ್ರಕಟವಾಯಿತು. ಸಾಹಿತ್ಯ ಪ್ರಕಾರಗಳಾದ -ಕಾವ್ಯ, ಕಥೆ, ಕಾದಂಬರಿ, ನಾಟಕ, ಜೀವನಚರಿತ್ರೆ, ಆತ್ಮಚರಿತ್ರೆ, ಮಹಾಕಾವ್ಯ, ಮಕ್ಕಳ ಸಾಹಿತ್ಯ, ವಿಚಾರವಿಮರ್ಶೆಯಂತಹ ನಾನಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಕಲೆ, ತತ್ವ, ಅಧ್ಯಾತ್ಮ, ಪ್ರಕೃತಿ, ಪ್ರೀತಿ, ದೇವರು, ನಡೆ-ನುಡಿ, ಪುರಾಣ, ಇತಿಹಾಸ, ಸಂಸ್ಕೃತಿ, ವಿಜ್ಞಾನ, ವಿಚಾರ, ಸಾಹಿತ್ಯಮೀಮಾಂಸೆ- ಹೀಗೆ ನಾನಾ ವಿಷಯಗಳು ವಸ್ತುಗಳಾಗಿವೆ. ಇದನ್ನು ಕೊಳಲು, ನವಿಲು, ಪಾಂಚಜನ್ಯ, ಕಲಾಸುಂದರಿ, ಕೃತ್ತಿಕೆ, ಪ್ರೇತಕ್ಯೂ, ಇಕ್ಷುಗಂಗೋತ್ರಿಗಳಲ್ಲಿ, ಕಾಣಬಹುದು. ಮನುಷ್ಯ ಮತ್ತು ಪ್ರಕೃತಿಯ ಸಂಬಂಧ ತನ್ಮಯತೆ, ಸೌಂದರ್ಯ, ಸಾಕ್ಷಾತ್ಕಾರ, ಶಿಶುಸಹಜಮುಗ್ದತೆ, ಬೀಕರತೆ, ಕೋಮಲತೆಗಳು ಹಾಗೂ ಮಾನವಪ್ರೀತಿಯ ನೆಲೆಗಳನ್ನು ಪ್ರೇಮಕಾಶ್ಮೀರ, ಜೇನಾಗುವ, ಚಂದ್ರಮಂಚಕೆ ಬಾ ಚಕೋರಿ, ಯಂತಹ ಕವನ ಸಂಕಲನಗಳಲ್ಲಿ ಕಾಣಬಹುದು.

ಕುವೆಂಪುರವರು ವೈಚಾರಿಕತೆಗೆ ಹೆಚ್ಚು ಮಹತ್ವ ಕೊಟ್ಟವರು. ಮೌಡ್ಯದ ವಿರುದ್ಧ ಜಾತಿ, ಮತ, ಪಂಥ, ವರ್ಗವ್ಯವಸ್ಥೆಯ ಸಂಕುಚಿತ ದೃಷ್ಟಿಕೋನದ ವಿರುದ್ಧದ್ವನಿ ಎತ್ತಿದರು. ‘ಗುಡಿ ಚರ್ಚು ಮಸೀದಿಗಳ ಬಿಟ್ಟುಬನ್ನಿ ಎನ್ನುವುದರ ಮೂಲಕ ಕ್ರಾಂತಿಯನ್ನೇ ಮಾಡುತ್ತಾರೆ. ಇದನ್ನು ಕಲ್ಕಿ, ನನ್ನದೇವರು, ಕೋಗಿಲೆ ಮತ್ತು ಸೋವಿಯಟ್‌ರಷ್ಯಾ, ಗೊಬ್ಬರ, ದಂತಹ ಕವನಗಳಲ್ಲಿ ಕಾಣಬಹುದು.

ಪ್ರಕೃತಿಯನ್ನು ಕುರಿತ ಇವರ ಕವನಗಳು ಕನ್ನಡ ಕಾವ್ಯಕ್ಷೇತ್ರವನ್ನು ವಿಸ್ತರಿಸಿವೆ. ಪ್ರಕೃತಿಯನ್ನು ಕಂಡಕವಿ ಅದನ್ನು ಆಧ್ಯಾತ್ಮ ಪ್ರೇಮರಹಸ್ಯದಿಂದ ದರ್ಶಿಸುತ್ತಾರೆ.

ಕಲ್ಲಲಿ ಮಣ್ಣಲಿ ಹುಲ್ಲಲಿ ಹುಡಿಯಲಿ

ನೀರಿನ ಹನಿಯಲಿ, ಬೆಂಕಿಯ ಕಿಡಿಯಲಿ

ನನ್ನಲಿ-ಎಲ್ಲಿಯು ಚೈತನ್ಯ! (ಶರತ್ಕಾಲದ ಸೂರ್ಯೋದಯದಲಿ)

ಕುವೆಂಪುರವರು ೧೪ ನಾಟಕಗಳನ್ನು ರಚಿಸಿದ್ದಾರೆ. ಅದನ್ನು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ಮಕ್ಕಳನಾಟಕಗಳೆಂದು ವಿಭಾಗಿಸಬಹುದು. ಅವುಗಳಲ್ಲಿ ಪ್ರಮುಖವಾದವು- ಜಲಗಾರ, ಶೂದ್ರತಪಸ್ವಿ, ಶ್ಮಶಾನಕುರುಕ್ಷೇತ್ರಂ, ಬೆರಳ್ಗೆಕೊರಳ್. ಜಲಗಾರ ನಾಟಕದಲ್ಲಿ ಸಂಪ್ರದಾಯದ ಜಡ ಅಂದಸಮಾಜದಲ್ಲಿ ಕರ್ಮಯೋಗಿ ಜಲಗಾರನ ವ್ಯಕ್ತಿತ್ವ ಆದರ್ಶಪ್ರಾಯವಾಗಿದೆ. ಶೂದ್ರತಪಸ್ವಿಯಲ್ಲಿ ಪುರಾಣವಸ್ತುವನ್ನು ಒಪ್ಪಿಕೊಂಡರೂ ಅಲ್ಲಿನ ಮೌಡ್ಯವನ್ನು ತಿರಸ್ಕರಿಸಿ, ತಪಸ್ಸು ಮಹಿಮಾಪೂರ್ಣವಾದದ್ದು ಅದಕ್ಕೆ ಜಾತಿಮತಗಳ ಸೋಂಕಿಲ್ಲ, ಅದು ಯಾರಲ್ಲಿದ್ದರೂ ಪೂಜ್ಯನೀಯ ಎಂಬ ವಿಚಾರವನ್ನು ಪ್ರತಿಪಾದಿಸಲಾಗಿದೆ. ಇವರ ನಾಟಕಗಳಲ್ಲಿ ರಸವತ್ತಾದ ಕಥಾಭಾಗಗಳು, ವಿನೂತನಕಲ್ಪನೆ, ಉತ್ತಮಸಂವಿಧಾನ, ಪಾತ್ರಗಳ ಜೀವಂತಿಕೆ, ಸಮಕಾಲೀನ ಪ್ರಜ್ಞೆಗಳಂತಹ ಅಂಶಗಳಿಂದ ಅತ್ಯುನ್ನತ ಸ್ಥಾನ ಪಡೆದಿವೆ.

ರಸೋವೈಸಃ, ವಿಭೂತಿಪೂಜೆ, ತಪೋನಂದನ, ದ್ರೌಪದಿಯಶ್ರೀಮುಡಿ ಕೃತಿಗಳಲ್ಲಿ ಅವರ ಪ್ರತಿಮಾ, ಪ್ರತಿಕೃತಿ, ದರ್ಶನ ವಿಮರ್ಶೆ, ಕಾವ್ಯಮೀಮಾಂಸೆಯು ಸುಂದರವಾಗಿ ವ್ಯಕ್ತಗೊಂಡಿದೆ. ಇವರ ಕಾದಂಬರಿ ಜಗತ್ತು ವಿಶಿಷ್ಟವಾದುದು. ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಮಹಾಕಾದಂಬರಿಗಳು. ಕನ್ನಡ ಕಾದಂಬರಿ ಸಾಹಿತ್ಯದ ಮೇಲೆ ದಟ್ಟವಾದ ಪ್ರಭಾವ ಬೀರಿದವು. ಇವುಗಳಲ್ಲಿ ಮಲೆನಾಡಿನ ಮನುಷ್ಯ ಜಗತ್ತಿನ ಸಂಕೀರ್ಣ ಬದುಕನ್ನು ಸಮಕಾಲೀನ ಸಾಮಾಜಿಕ ವ್ಯವಸ್ತೆಯನ್ನು ಚಿತ್ರಿಸುವ ಮುಖೇನ ಇವು ಭಾರತೀಯ ಸಾಹಿತ್ಯದ ಪ್ರಮುಖ ದಾಖಲೆಗಳಗಿವೆ. ಮಲೆನಾಡಿನ ಚಿತ್ರಗಳು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದ ಕೃತಿ.

ಚಿತ್ರಾಂಗದ ಎಂಬ ಖಂಡಕಾವ್ಯವನ್ನು ರಚಿಸಿದ್ದಾರೆ. ಅರ್ಜುನನಿಗೆ ತನ್ನ ಸರ್ವಸ್ವವನ್ನು ಅರ್ಪಿಸಿದ್ದ ಚಿತ್ರಾಂಗದೆ ತನ್ನ ಮಗ ಬಬ್ರುವಾಹನ-ಅರ್ಜುನರ ನಡುವೆ ಯುದ್ಧ ಆಗುತ್ತಿದ್ದಾಗ ಮಧ್ಯೆ ಪ್ರವೇಶಿಸಿ ಹತಳಾಗುವ ಕತೆ ಇಲ್ಲಿ ಕಾವ್ಯಮಯವಾಗಿ ರೂಪಿತವಾಗಿದೆ. ಇಲ್ಲಿನ ಬದುಕು, ಪ್ರೇಮ, ತ್ಯಾಗ, ಪಾತಿವ್ರತ್ಯದ ಮಹತ್ವವು ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ವಿಶಿಷ್ಟವಾಗಿ ಮೂಡಿಬಂದಿದೆ.

‘ಶ್ರೀರಾಮಾಯಣದರ್ಶನಂಈ ಯುಗದ ಮಹಾಕಾವ್ಯ. ಆಧುನಿಕ ಕನ್ನಡ ಸಾಹಿತ್ಯದ ಮೇರುಕೃತಿ. ಭಾರತೀಯ ಸಂಸ್ಕೃತಿಯ ಕಲಾರೂಪ. ವಾಲ್ಮೀಕಿರಾಮಾಯಣ ಪುನರ್ಜನ್ಮಪಡೆದಂತಿದೆ. ಇಲ್ಲಿ ಕವಿಗಿರುವ ಸಕಲಧರ್ಮಗ್ರಂಥಗಳ ತಿಳಿವು, ಭಾರಾತೀಯ ಮತ್ತು ಪಾಶ್ಚಾತ್ಯ ಮಹಾಕಾವ್ಯಗಳ ಪರಿಚಯ, ಮನಃಶಾಸ್ತ್ರಸೌಂದರ್ಯಶಾಸ್ತ್ರ, ಅಸಾಧಾರಣ ಕಲ್ಪನೆ ಪ್ರತಿಭೆ- ಇವು ಮಹಾಕಾವ್ಯವನ್ನು ಜಗತ್ತಿನ ಶ್ರೇಷ್ಟ ಮಹಾಕಾವ್ಯಗಳ ಸಾಲಿನಲ್ಲಿರಿಸಲು ಕಾರಣವಾಗಿವೆ.

ನನ್ನದೇವರು ಮತ್ತು ಇತರ ಕಥೆಗಳು ಸನ್ಯಾಸಿ ಮತ್ತು ಇತರ ಕಥೆಗಳು ಉತ್ತಮ ಕಥಾಸಂಕಲನಗಳಾಗಿವೆ. ಪರಮಹಂಸ-ವಿವೇಕಾನಂದರ ಜೀವನ ಚರಿತ್ರೆಗಳು ಉತ್ತಮ ಗದ್ಯಕೃತಿಗಳು ತಮ್ಮದೇ ಆದ ಆತ್ಮಚರಿತ್ರೆ ‘ನೆನೆಪಿನ ದೋಣಿಯಲ್ಲಿ ಕವಿಯಬದುಕಿನಲ್ಲಿ ಸಂದ ಘಟನಾವಳಿಗಳು ಮತ್ತು ಪ್ರಭಾವಗಳು ಇಲ್ಲಿ ಮೈದಾಳಿವೆ.

ಕೇಂದ್ರಸಾಹಿತ್ಯ ಅಕಾಡಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ, ಪಂಪಪ್ರಶಸ್ತಿ, ಕರ್ನಾಟಕರತ್ನ ಪ್ರಶಸ್ತಿ, ಪಡೆದ ಕುವೆಂಪುರವರು ೧೯೯೪ ರಲ್ಲಿ ಅಸ್ತಂಗತರಾದರು.