ಐವತ್ತರ ದಶಕದಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಪಿಟೀಲು ಕಲಾವಿದರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಶ್ರೀ ಕೆ.ವಿ. ಐಯ್ಯಂಗಾರ್ ಅಲ್ಲಿ ಸುಮಾರು ೩೭ ವರ್ಷಗಳ ಸೇವೆ ಸಲ್ಲಿಸಿದರು. ಆಕಾಶವಾಣಿಯ ಮದ್ರಾಸ್‌ ಮತ್ತು ಮೈಸೂರು ಕೇಂದ್ರಗಳು ಶ್ರೀಯುತರ ಸೋಲೋ ಪಿಟೀಲು ಕಾರ್ಯಕ್ರಮಗಳನ್ನು ನಿರಂತರ ಪ್ರಸಾರ ಮಾಡುತ್ತಿದ್ದೆವು. ಜೊತೆಗೆ ಕಛೇರಿ ಕಾರ್ಯಕ್ರಮಗಳಲ್ಲೂ ಜನಪ್ರಿಯತೆ ಪಡೆದಿದ್ದ ಐಯ್ಯಂಗಾರ್ ಅವ್ಜರು ತಮ್ಮ ಕಲಾ ಸೇವೆಯ ಬಹುಪಾಲನ್ನು ಆಕಾಶವಾಣಿಗೆ ಮೀಸಲಿಟ್ಟಿದ್ದುದು ವಿಶೇಷ. ಹಿಂದೂಸ್ತಾನೀ ಸಂಗೀತದಲ್ಲೂ ಪಾಂಡಿತ್ಯ ಹೊಂದಿದ್ದ ಈ ಪ್ರತಿಭಾವಂತ ಕಲಾವಿದರು ತಾವು ಸಂಯೋಜಿಸುತ್ತಿದ್ದ ಸಂಗೀತ ರೂಪಕಗಳಿಗೆ ಎರಡೂ ಭಾರತೀಯ ಸಂಗೀತ ಪದ್ಧತಿಗಳನ್ನು ಹದವಾಗಿ ಬೆರೆಸುತ್ತಿದ್ದರು.

‘ಗಾಂಧೀ ಗೀತ’, ದಾಸರೆಂದರೆ ಪುರಂದರ ದಾಸರಯ್ಯ’, ‘ಕರ್ನಾಟಕ ದರ್ಶನ’, ಸ್ವಪ್ನ ಸುಂದರಿ’, ‘ದಿವ್ಯ ಭಾರತ’, ‘ಕನ್ನಡ ಭಾರತಿ’, ‘ಸತ್ಯ ಸಂಭವ’ ಮುಂತಾದ ಅನೇಕ ಪ್ರಬುದ್ಧ ಸಂಗೀತ ರೂಪಕಗಳನ್ನು ಆಕಾಶವಾಣಿಗಾಗಿ ಶ್ರೀಯುತರು ರೂಪಿಸಿದ್ದರು. ಈ ರೂಪಕಗಳು ಆಕಾಶವಾಣಿಯ ಹಲವು ಕೇಂದ್ರಗಳಿಂದ ಪ್ರಸಾರವಾಗುತ್ತಿದ್ದವು. ಇವುಗಳಲ್ಲಿ ಹಲವು ರೂಪಕಗಳ ರಾಗಸಂಯೋಜನೆಯನ್ನು ಪ್ರಸಿದ್ಧ ಕವಿಗಳಾದ ಡಾ. ದ.ರಾ. ಬೇಂದ್ರೆ, ಶ್ರೀ ಎನ್‌.ಕೆ. ಕುಲಕರ್ಣಿ ದಿವಾಕರ್, ಶ್ರೀ ಡಿ.ಪಿ. ಕರ್ಮರ್ಕರ್ ಮುಂತಾದವರು ಪ್ರಶಂಸಿಸಿದ್ದರು. ಜೊತೆಗೆ ಚಂದ್ರಸೇನ ಎನ್ನುವ ಐತಿಹಾಸಿಕ ನಾಟಕಕ್ಕೂ ರಾಜ ಐಯ್ಯಂಗಾರ್ ಸಂಗೀತ ಸಂಯೋಜನೆ ಮಾಡಿದ್ದರು.

ಇವರ ಅಗಾಧವಾದ ಸಂಗೀತ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಅವುಗಳಲ್ಲಿ ‘ಗಾನ ಕಲಾ ಚಂದ್ರ’, ‘ನಾದ ಚಿಂತಾಮಣಿ’, ‘ಸಂಗೀತ ಕಲಾಭೂಷಣ’ ಮುಂತಾದವುಗಳನ್ನು ಇಲ್ಲಿ ಗುರುತಿಸಬಹುದು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೬-೦೭ನೇ ಸಾಲಿನ ತನ್ನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಶ್ರೀ ಕೆ.ವಿ. ರಾಜ ಅಯ್ಯಂಗಾರ್ ಅವರನ್ನು ಗೌರವಿಸಿದೆ.