ಕೆ.ವೆಂಕಟಪ್ಪಕನ್ನಡ ನಾಡಿನ ಬಹು ಶ್ರೇಷ್ಠ ಕಲಾವಿದರು. ಚಿತ್ರ, ಶಿಲ್ಪ, ವೀಣೆ ಮೂರರ ಮೇಲೂ ಅಸಾಧಾರಣ ಪ್ರಭುತ್ವ ಪಡೆದವರು. ವಿಶಿಷ್ಟ ವ್ಯಕ್ತಿತ್ವದ ವೆಂಕಟಪ್ಪನವರು ಮದುವೆಯೂ ಆಗದೆ ಬಾಳನ್ನೆಲ್ಲ ಕಲೆಗೆ ಅರ್ಪಿಸಿದರು.

 ಕೆ. ವೆಂಕಟಪ್ಪ

 

ಕನ್ನಡನಾಡನ್ನು  ಕಲೆಗಳ ಬೀಡೆಂದು ತಾನೆ ಕರೆಯುತ್ತಾರೆ? ಈ ಬೀಡಿಗೆ ಗೂಡಿನಂತಿದ್ದುದು ಮೈಸೂರು ಅರಮನೆ. ಅಲ್ಲಿನ ಅರಸರು ತಲೆಮಾರುಗಳಿಂದ ರಸಿಕರು. ಕಲೆಯ ಎಲ್ಲ ಬಗೆಗಳನ್ನೂ ಉಳಿಸಿಕೊಂಡು ಬೆಳೆಸಿಕೊಂಡು ಬಂದವರು. ನೂರಾರು ಮಂದಿ ಕಲಾವಿದರು ಬದುಕಲು, ಬೆಳೆಯಲು ನೆರವಾದವರು. ಈ ಅರಸರ ಸಾಲಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರಂತೂ ತಾವೇ ಕಲೆಗಾರರಾಗಿದ್ದವರು. ನೆರೆನಾಡುಗಳಿಂದೆಲ್ಲ ಕಲೆಗಾರರನ್ನು ಕರೆಯಿಸಿಕೊಂಡು ಆದರಿಸುತ್ತಿದ್ದರು. ಅವರಿಗೆ ಅಚ್ಚುಮೆಚ್ಚಾಗಿ, ಅವರ ಹತ್ತಿರವೇ ಓಡಿಯಾಡಿ, ಅವರ ಒತ್ತಾಸೆಯನ್ನು ಪಡೆದುಕೊಂಡ ಕಲಾವಿದರೊಬ್ಬರು ಕೃಷ್ಣಪ್ಪ.

ಮನೆತನ

ಅವರ ಮನೆತನದಲ್ಲಿಯೇ ಕಲೆ ಕೈಗೂಡಿದ್ದಿತು. ವೃತ್ತಿಯಲ್ಲಿ ಚಿನ್ನ ಬೆಳ್ಳಿಗಳ ವ್ಯಾಪಾರ; ವಿಗ್ರಹಗಳನ್ನು ಮಾಡುವುದು, ಪುತ್ಥಳಿಗಳನ್ನು ಕಡೆಯುವುದು, ನವುರಾಗಿ ಕುಸುರಿಕೆಲಸ ಮಾಡುವುದು, ಗೆರೆಗಳಲ್ಲಿ ಸೊಗಸಾದ ಚಿತ್ರಗಳನ್ನೂ ಮಂಡಲಗಳನ್ನೂ ಬಿಡಿಸುವುದು ಇವೆಲ್ಲ ಅವರ ಹಿಂದಿನವರು ನಡೆಸಿಕೊಂಡು ಬಂದಿದ್ದವೇ. ಕೃಷ್ಣಪ್ಪನವರೂ ಜಾಣರು, ಈ ಎಲ್ಲ ಕಲಾಭಾಗಗಳಲ್ಲಿಯೂ ನುರಿತವರು. ಅವರನ್ನು ಕಂಡರೆ  ಅರಸರಿಗೆ ತುಂಬ ಆದರ. ಅರಸರನ್ನು ಕಂಡರೆ ಇವರಿಗೆ ತುಂಬ ಭಕ್ತಿ.

ಕೃಷ್ಣಪ್ಪನ ಮೊಮ್ಮಗನೇ ವೆಂಕಟಪ್ಪ. ಲೋಕದಲ್ಲಿ ಕನ್ನಡನಾಡಿಗೆ ಕಲೆಯ ತೌರೂರೆಂಬ ಹೆಸರನ್ನು ಗಳಿಸಿಕೊಟ್ಟ ಕಲಾವಿದ. ಇವರ ತಂದೆಯೂ ಅರಮನೆಯ ಕೆಲಸದಲ್ಲಿದ್ದ ಕಲೆಗಾರರೇ.  ಮುಮ್ಮಡಿಕೃಷ್ಣರಾಜ ಒಡೆಯರ ನಂತರ ಅರಸರಾದ ಚಾಮರಾಜ ಒಡೆಯರ ಕಾಲದಲ್ಲಿದ್ದವರು.

ಕಲೆಯ ಹಿನ್ನೆಲೆ

ಚಾಮರಾಜ ಒಡೆಯರ ಮಗ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರನ್ನು ಕೇಳದಿರುವವರು ಯಾರು? ಅವರನ್ನು ನಮ್ಮ ನಾಡಿನವರು ಮಾತ್ರವಲ್ಲ, ಹೊರಗಿನವರೂ, ಗೌರವದಿಂದ ಕಾಣುತ್ತಿದ್ದರು. ಅವರಿಗೆ ‘ರಾಜರ್ಷಿ’ಯೆಂದೇ ಹೆಸರಾಯಿತು. ಎಂದರೆ ಅಷ್ಟು ಸಾತ್ವಿಕರು. ಮಹಾರಾಜರಾಗಿದ್ದರೂ ಸ್ವಂತ ಜೀವನವನ್ನು ಸಾಧು ಸಂತರಂತೆ ಕಳೆದರು. ಮೇಲಾಗಿ, ತಾವೇ ಕಲಾವಿದರು, ಕಲಾರಸಿಕರು. ವೀಣೆಯನ್ನೂ ಹಲವು ಪಾಶ್ಚಾತ್ಯ ವಾದ್ಯಗಳನ್ನೂ ನುಡಿಸುತ್ತಿದ್ದರು; ಕಲಾಕೃತಿಗಳ ಬಗ್ಗೆ ಪ್ರೌಢ ಪರಿಚಯವನ್ನು ಪಡೆದಿದ್ದರು. ಇಡೀ ದೇಶದ ಕಲಾವಿದರನ್ನೆಲ್ಲ ತಮ್ಮ ಆಸ್ಥಾನಕ್ಕೆ ಬರಮಾಡಿಕೊಂಡು ಗೌರವಿಸುತ್ತಿದ್ದರು.

ಇವರ ಆಳ್ವಿಕೆ ಮೊದಲಾಗುವ ವೇಳೆಗೆ ವೆಂಕಟಪ್ಪ ಇನ್ನೂ ಎಳೆಯ ಹುಡುಗ. ತಂದೆ ಬದುಕಿದ್ದಾಗ ಅವರೊಂದಿಗೆ ಅರಮನೆಯಲ್ಲೆಲ್ಲ ಓಡಾಡಿ, ಅಲ್ಲಿನ ಕಲಾ ಪ್ರಕಾರಗಳನ್ನು ಚೆನ್ನಾಗಿ ಅರಿತುಕೊಂಡಿದ್ದ  ಚುರುಕು ಬುದ್ಧಿಯ ಹುಡುಗ. ಮನೆಯಲ್ಲಿಯೇ ಕಲೆಯ ಹಿನ್ನೆಲೆ; ಈಗ ಅರಮನೆಯ ಕಲೆಯ ಪರಿಸರದಲ್ಲಿ ಬೆಳವಣಿಗೆ; ಹುಡುಗನಿಗಂತೂ ಹುಟ್ಟಿನಿಂದಲೇ ಕಲೆಯ ಮೇಲೆ ಒಲುಮೆ; ಮೇಲಾಗಿ ಹರಿತವಾದ ಬುದ್ಧಿ! ಕೇಳುವುದೇನು? ಮೇಲ್ಮಟ್ಟದ ಕಲೆಗಾರನಾಗುವ ಎಲ್ಲ ಸೂಚನೆಗಳೂ ಈ ಹುಡುಗನಲ್ಲಿ ಎದ್ದು ಕಾಣುತ್ತಿದ್ದವು.

ಇದನ್ನು ಮಹಾರಾಜರೂ ಕಂಡುಕೊಂಡರು. ತಂದೆಯಿಲ್ಲದ ಈ ಬುದ್ಧಿಶಾಲಿಯ ಬೆಳವಣಿಗೆ ತಮ್ಮ ಹೊಣೆಯೆಂದು ಅರಿತುಕೊಂಡರು. ಅವನನ್ನು ಕರೆಯಿಸಿ ಕೊಂಡು, ಪರೀಕ್ಷಿಸಿ, ಅವನಿಂದ ಕಲಾಕೃತಿಗಳನ್ನು ಮಾಡಿಸಿ ಮೆಚ್ಚಿಕೊಂಡರು. ಇನ್ನೂ ಎಳೆಯ ವಯಸ್ಸಾದು ದರಿಂದ ಕಲೆಯ ಬಗ್ಗೆ ಆಧುನಿಕ ಕ್ರಮದಲ್ಲಿ ಶಿಕ್ಷಣವನ್ನು ಈ ಹುಡುಗ ಪಡೆದುಕೊಂಡರೆ ಒಳ್ಳೆಯದೆಂದು ಬಗೆದು, ಅದಕ್ಕೆ ತಕ್ಕ ಏರ್ಪಾಡು ಮಾಡಲು ತಮ್ಮ ಅಧಿಕಾರಿಗಳಿಗೆ ಅಪ್ಪಣೆ ಮಾಡಿದರು.

ಆ ಕಾಲಕ್ಕೆ ದಕ್ಷಿಣ ದೇಶದಲ್ಲೆಲ್ಲ ಈ ರೀತಿಯ ಕಲಾ ಶಿಕ್ಷಣವನ್ನು ಒದಗಿಸುತ್ತಿದ್ದ ಶಾಲೆ ಮದರಾಸಿನಲ್ಲಿ ಮಾತ್ರ ಇದ್ದಿತು. ಮೈಸೂರಿನ ಈ ಹುಡುಗನನ್ನು ಮದರಾಸಿನ ಶಾಲೆಗೆ ಕಳುಹಿಸಲು ಅರಮನೆಯ ಅಧಿಕಾರಿಗಳೇ ಎಲ್ಲ ಏರ್ಪಾಡನ್ನೂ ಮಾಡಿ, ಅರಮನೆಯೇ ಅಲ್ಲಿನ ಎಲ್ಲ ವೆಚ್ಚವನ್ನೂ ವಹಿಸಿಕೊಳ್ಳುವಂತೆ ವ್ಯವಸ್ಥೆ ಮಾಡಿದರು. ವೆಂಕಟಪ್ಪ ಅಲ್ಲಿಗೆ ಹೋಗಿ ಅಲ್ಲಿನ ಕಲಿಕೆಯಲ್ಲಿನ್ನೆಲ್ಲ ಮುಗಿಸಿ ಮೈಸೂರಿಗೆ ಹಿಂದಿರುಗುವಾಗ ಅವನ ವಯಸ್ಸು ಇಪ್ಪತ್ತರ ಸುಮಾರು. ಶಾಲೆಯ ಎಲ್ಲ ಪರೀಕ್ಷೆಗಳಲ್ಲಿಯೂ ಮೊದಲ ವರ್ಗದಲ್ಲೇ ತೇರ್ಗಡೆ ಪಡೆದನೆಂದು ತಿಳಿದು ಮಹಾರಾಜರು ತುಂಬ ಸಂತೋಷಪಟ್ಟರು. ತಾವು ಅಂದುಕೊಂಡಂತೆಯೇ ಹುಡುಗ ಮುಂದೆ ಬರುವನೆಂದು ಗಟ್ಟಿಮಾಡಿಕೊಂಡರು.

ವೆಂಕಟಪ್ಪನನ್ನು ಮಹಾರಾಜರು ಕರೆಯಿಸಿ ಕೊಂಡು, ‘ಏನು ವೆಂಕಟಪ್ಪ, ಕಲಿಯುವುದು ಮುಗಿಯಿತೆ? ಮನಸ್ಸಿಗೆ ಸಮಾಧಾನವಾಯಿತೆ?’ ಎಂದು ಕೇಳಿದರು. ವೆಂಕಟಪ್ಪ ಧೈರ್ಯದಿಂದ, ‘ಮಹಾಸ್ವಾಮಿ, ಕಲಿಯುವುದು ಇನ್ನೂ ಬಹಳ ಇದೆ! ಈಗ ನಾನು ಕಲಿತದ್ದು ಅದರ ಒಂದು ತುಣುಕಷ್ಟೆ!’ ಎಂದು ಉತ್ತರ ಕೊಟ್ಟ.  ಈ ಉತ್ತರ ಮಹಾರಾಜರಿಗೆ ಮೆಚ್ಚಿಗೆಯಾಯಿತು. ‘ಕೆಲವು ವರ್ಷಗಳು ಕಲಿತದ್ದೇ ಸಾಕು, ತಾನು ದಡ ಮುಟ್ಟಿದ್ದೇನೆ, ತನಗೆ ಯಾರೂ ಸರಿಯಿಲ್ಲ’ ಎಂದು ಕೊಳ್ಳುವವರೇ ಬಹು ಮಂದಿ; ಕಲಿತದ್ದು ಅಲ್ಪವಾದರೂ ಹೆಮ್ಮೆ ಬಲವಾಗುವುದು ವಾಡಿಕೆ. ಆದರೆ ಆ ಹುಡುಗನಿಗೆ ‘ಕಲೆಯ ಹರವು ಅಪಾರ’ ಎನ್ನುವ ಅರಿವಿದೆಯಲ್ಲವೆ? ತನ್ನ ಕಲಿಕೆಯ ಬಗ್ಗೆ ನಮ್ರತೆ ಯಿದೆಯಲ್ಲವೆ? ವಂಕಟಪ್ಪನ ಮಾತು ಅರಸರಿಗೆ ಹಿಡಿಸಿ ಅವನ ಮೇಲಿದ್ದ ಪ್ರೀತಿ ಇಮ್ಮಡಿಸಿತು.

ಅವನೀಂದ್ರರಲ್ಲಿ ಕಲಿಕೆ

ಅವರು ‘ವೆಂಕಟಪ್ಪ  ಈಗೇನು ಮಾಡ ಬೇಕೆಂದಿರುವೆ?’ ಎಂದು ಕೇಳಿದರು. ಅದಕ್ಕೆ ಅವನು ‘ಮಹಾಸ್ವಾಮಿ, ಕಲ್ಕತ್ತ ನಗರದಲ್ಲಿರುವ ಕಲಾಶಾಲೆಯಲ್ಲಿ ಹೆಚ್ಚಿನ ಶಿಕ್ಷಣ ದೊರೆಯುವುದೆಂದು ಕೇಳಿದ್ದೇನೆ. ಅಲ್ಲಿನ ಅಧ್ಯಾಪಕರೂ ತುಂಬ ಹೆಸರು ಪಡೆದವರು ಎಂದು ಹೇಳುತ್ತಾರೆ. ಮಹಾಸ್ವಾಮಿಯವರ ಚಿತ್ತಕ್ಕೆ ಬಂದರೆ, ಅಲ್ಲಿ  ಕೆಲವು ವರ್ಷ ಕಲಿತು ಬರುತ್ತೇನೆ. ಅನಂತರ ತಮ್ಮ ಸೇವೆಯಲ್ಲಿ ತೊಡಗುತ್ತೇನೆ’ ಎಂದ. ಈ ಸೂಚನೆ ಮಹಾರಾಜರಿಗೆ ಒಪ್ಪಿಗೆಯಾಯಿತು. ‘ಹಾಗೇ ಆಗಲಿ ವೆಂಕಟಪ್ಪ, ಎರಡು ವರ್ಷಗಳು ಅಲ್ಲಿ ಕಲಿತು ಬಾ,  ಅನಂತರ ನೋಡೋಣ,’ ಎಂದು ಹೇಳಿ, ತಮ್ಮ ಅಧಿಕಾರಿಗಳನ್ನು ಕರೆಯಿಸಿ ವೆಂಕಟಪ್ಪನನ್ನು ಕಲ್ಕತ್ತ ಕಲಾಶಾಲೆಗೆ ಸೇರಿಸುವ ಏರ್ಪಾಟನ್ನು ಮಾಡಲು ಅಪ್ಪಣೆ ಮಾಡಿದರು. ಕಲ್ಕತ್ತ ನಗರದಲ್ಲಿ ಅವನು ತಂಗಲು, ಅಲ್ಲಿನ ಕಲಾಶಾಲೆಗೆ ಸೇರಲು ಅರಮನೆಯೇ ಎಲ್ಲ ವ್ಯವಸ್ಥೆಯನ್ನೂ ಮಾಡಿತು. ಎರಡು ವರ್ಷಗಳು ಅವನ ವೆಚ್ಚವನ್ನೆಲ್ಲ ಅರಮನೆಯೇ ನೋಡಿಕೊಳ್ಳುವಂತೆಯೂ ಏರ್ಪಾಡು ನಡೆಯಿತು. ವೆಂಕಟಪ್ಪ ಕಲ್ಕತ್ತ ನಗರಕ್ಕೆ ಹೊರಟರು.

ವೆಂಕಟಪ್ಪನವರು ಸೇರಿದ ಕಲಾಶಾಲೆಯ ಮುಖ್ಯಸ್ಥ ಪೆರ್ಸಿ ಬ್ರೌನ್ ಎಂಬಾತ; ಆ ಕಾಲದ ಕಲಾಪ್ರಪಂಚದಲ್ಲಿ ಅವನ ಹೆಸರು ಮನೆಮಾತಾಗಿದ್ದಿತು. ಆ ಶಾಲೆಯಲ್ಲಿ ಅಧ್ಯಾಪಕರಾಗಿದ್ದವರಲ್ಲಿ ಅವನೀಂದ್ರನಾಥ ಠಾಕೂರರು ಒಬ್ಬರು. ಇವರೇ ವೆಂಕಟಪ್ಪನ ಕೈಹಿಡಿದು ನಡೆಸಿದವರು.

ಭಾರತದ ಸುಪ್ರಸಿದ್ಧ ಕವಿ ರವೀಂದ್ರನಾಥ ಠಾಕೂರರ  ಹೆಸರನ್ನು ನೀವು ಕೇಳಿಯೇ ಇದ್ದೀರಿ. ಅವರ ತಂದೆ ಮಹರ್ಷಿ ದೇವೇಂದ್ರನಾಥ ಠಾಕೂರರೂ ಪ್ರಖ್ಯಾತರೇ. ಅವರ ಕಿರಿಯ ಸೋದರ ಗಿರೀಂದ್ರನಾಥ ಠಾಕೂರರ ಮೊಮ್ಮಗನೇ ಈ ಅವನೀಂದ್ರನಾಥರು. ವೆಂಕಟಪ್ಪ ಕಲಾಶಾಲೆಗೆ ಸೇರಿದಾಗಲೇ ಅವನೀಂದ್ರನಾಥರು ಲೋಕಪ್ರಖ್ಯಾತರಾಗಿದ್ದರು. ಕಲಾಶಿಕ್ಷಣದಲ್ಲಂತೂ ಅವರಿಗೆ ಯಾರೂ ಸರಿಗಟ್ಟರು. ಹೀಗಾಗಿ ವೆಂಕಟಪ್ಪನ ಜೊತೆಗೆ ಅವರ ವಿದ್ಯಾರ್ಥಿಗಳಾಗಿದ್ದ ನಂದಲಾಲ ವಸು, ಅಸಿತ ಕುಮಾರ ಹಾಲದಾರ, ಸುರೇಂದ್ರನಾಥ ಗಂಗೂಲಿ, ಶೈಲೇಂದ್ರ ದೇವ, ಕ್ಷಿತೀಂದ್ರ ಮಜೂಮದಾರ ಮೊದಲಾದವರೆಲ್ಲ ಪ್ರಸಿದ್ಧ ಕಲಾವಿದರಾದರು. ಭಾರತೀಯ ಚಿತ್ರಕಲಾ ಪದ್ಧತಿಯ ಹಿರಿಮೆಯನ್ನು ಲೋಕದಲ್ಲೆಲ್ಲ ಸಾರಿದರು.

ಕಲೆಯ ತಪಸ್ಸು

ವೆಂಕಟಪ್ಪ ಕಲ್ಕತ್ತ ಕಲಾಶಾಲೆಯನ್ನು ಸೇರಿದ್ದು ಎರಡು ವರ್ಷಗಳ ಓದಿಗೆಂದು. ಆದರೆ ಅವರು ಅಲ್ಲಿ ಕಳೆದದ್ದು ಒಟ್ಟು ಏಳೂವರೆ ವರ್ಷಗಳು. ಅರಮನೆಯ ಅಧಿಕಾರಿಗಳು ಮೊದಲಿನ ಎರಡು ವರ್ಷಗಳ ಅವಧಿಯನ್ನು  ಅರಸರ ಒಪ್ಪಿಗೆಯ ಮೇಲೆ ವೆಂಕಟಪ್ಪನ ಬಯಕೆಯಂತೆ ಹಿಗ್ಗಿಸಿದರು. ವೆಂಕಟಪ್ಪ ಮೊದಲು ಹೋದದ್ದು ಚಿತ್ರಕಲಾಭ್ಯಾಸಕ್ಕೆಂದೇ.  ಆದರೆ ಅಲ್ಲಿ ಕಲೆಯ ಬೇರೆ ಬೇರೆ ಪ್ರಕಾರಗಳಲ್ಲಿ ಶಿಕ್ಷಣಕ್ಕೆ ಸೌಕರ್ಯ ವಿದ್ದುದರಿಂದ, ವೆಂಕಟಪ್ಪ ಈ ಎಲ್ಲಾ ವಿಭಾಗಗಳಲ್ಲೂ ಪರಿಣತಿಯನ್ನು ಪಡೆದುಕೊಂಡರು. ರೇಖಾಚಿತ್ರ, ವರ್ಣಚಿತ್ರ, ಶಿಲ್ಪವಿನ್ಯಾಸ ಎಲ್ಲವೂ ಅವರ ಅಭ್ಯಾಸದಲ್ಲಿ ಸೇರಿದ್ದುವು.

ಕಲ್ಕತ್ತೆಯಲ್ಲಿ ವೆಂಕಟಪ್ಪ ಇದ್ದದ್ದು ದಕ್ಷಿಣ ಭಾರತದ ಹೋಟೆಲ್ ಒಂದರಲ್ಲಿ. ಅವರು ತಮ್ಮ ಓದು, ಅಭ್ಯಾಸಗಳಲ್ಲೇ ಮುಳುಗಿ ಎಷ್ಟೋ ವೇಳೆ ಹೊತ್ತು ಹೊತ್ತಿನ ಊಟ ತಪ್ಪುತ್ತಿತ್ತು. ನಗರದ ಮನರಂಜನೆಯಾಗಲೀ, ಓರಗೆಯವರೊಂದಿಗೆ ಊರೊಳಗೆ ಅಡ್ಡಾಟವಾಗಲೀ ಅವರ ಆಸಕ್ತಿಯನ್ನು ಸೆಳೆಯಲಿಲ್ಲ. ರಾತ್ರಿ ನಾಲ್ಕೈದು ಗಂಟೆ ನಿದ್ರೆಯನ್ನು ಬಿಟ್ಟರೆ ಉಳಿದೆಲ್ಲ ಕಾಲವೂ ಕಲೆಯ ಕಲಿಕೆಗೇ ಮೀಸಲು; ಅದಕ್ಕೆ ಬೇಕಾದ ಓದು, ಸಿದ್ಧತೆಗಳಿಗೇ ಉಳಿದೆಲ್ಲ ಕಾಲವೂ ಹಿಡಿಸುತ್ತಿತ್ತು. ಹೀಗೆ ಕೆಲಸದಲ್ಲಿ ತೊಡಗಿದರೆಂದರೆ ಅವರಿಗೆ ಊಟ, ತಿಂಡಿಗಳ ಮೇಲೂ ಗಮನ ಹರಿಯುತ್ತಿರಲಿಲ್ಲ. ತಮ್ಮ ಕೆಲಸ ಮುಗಿಸಿ ಹೋಟೆಲಿಗೆ ಹಿಂದಿರುಗುವುದು ಅಲ್ಲಿನ ಊಟದ ಸಮಯ ಮುಗಿದ ಮೇಲೆ. ಆದರೆ ಆ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಮಾಣಿಯೊಬ್ಬ ನರಸಿಂಹನೆಂದು ಅವನ ಹೆಸರು- ಇವರ ಮೇಲಿನ ವಿಶ್ವಾಸದಿಂದ ಇವರ ಊಟವನ್ನು ಒಂದೆಡೆ ಜೋಪಾನವಾಗಿರಿಸಿದ್ದು, ಅವರು ಬಂದ ಮೇಲೆ ಅದನ್ನು ಬೆಚ್ಚಗೆ ಮಾಡಿ ಅವರ ಕೋಣೆಗೊಯ್ದು ಕೊಡುತ್ತಿದ್ದ. ಮುಂದೆ, ಅವರು ಈ ಮಾಣಿಯ ಪ್ಲಾಸ್ಟರ್ ಶಿಲ್ಪವೊಂದನ್ನು ಸಿದ್ಧ ಪಡಿಸಿದರು.

ಅವರು ಕಲಾಶಾಲೆಯಲ್ಲಿದ್ದಾಗ ಗುರುಗಳಾದ ಅವನೀಂದ್ರನಾಥ ಠಾಕೂರರು ಅವರನ್ನು ತುಂಬ ಮೆಚ್ಚಿಕೊಂಡಿದ್ದರು. ಅವರೂ ಕವಿ ರವೀಂದ್ರನಾಥರೂ ಅವರನ್ನು ‘ಅಪ್ಪ’ ಎಂದೇ ಕರೆಯುತ್ತಿದ್ದರು. ವೆಂಕಟಪ್ಪ ಮೈಸೂರಿಗೆ ಹಿಂದಿರುಗಿದ ಮೇಲೂ ಅವರು ಮೈಸೂರೆಂದರೆ ‘ಅಪ್ಪನ ಊರು’ ಎಂದೇ ಜ್ಞಾಪಿಸಿ ಕೊಳ್ಳುತ್ತಿದ್ದರು. ಈ ಕಡೆಯಿಂದ ಯಾರು ಅವರನ್ನು ಕಾಣಲೆಂದು ಹೋದರೂ, ‘ನೀವು ಅಪ್ಪನನ್ನು ಬಲ್ಲಿರಾ? ಅವನು ಹೇಗಿದ್ದಾನೆ?’ ಎಂದು ವಿಚಾರಿಸಿಕೊಳ್ಳುತ್ತಿದ್ದರು. ವೆಂಕಟಪ್ಪನ ‘ಅಸುರಸಾಧನೆ’ ಅವರಲ್ಲಿ ಸೋಜಿಗವನ್ನೂ ಅಕ್ಕರೆಯನ್ನೂ ಮೂಡಿಸಿದ್ದಿತು.

ಸಾಹಸದ ಸಾಧನೆ

ಅವರು ವಿದ್ಯಾರ್ಥಿದೆಶೆಯಲ್ಲಿದ್ದಾಗಲೇ,  ೧೯೦೯ ರಿಂದ ೧೯೧೩ ರವರೆಗೆ ಹೆರಿಂಗ್‌ಹ್ಯಾಮ್ ಎಂಬಾಕೆ ಅಜಂತಾಗುಹೆಗಳ ಒಳಗಿರುವ ವಿಶ್ವವಿಖ್ಯಾತ ಭಿತ್ತಿಚಿತ್ರಗಳ ಪ್ರತಿಕೃತಿಗಳನ್ನು ಸಿದ್ಧಪಡಿಸುವ ಕೆಲಸವನ್ನು ಕೈಗೊಂಡು ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕಲಾವಿದರನ್ನು ಸೂಚಿಸುವಂತೆ ಠಾಕೂರರನ್ನು ಕೇಳಿದರು ಅವನೀಂದ್ರ ನಾಥರು ಒಡನೆಯೇ, ಇಂಥ ಶ್ರಮಸಾಧ್ಯವಾದ ಕೆಲಸವನ್ನುನಿಷ್ಠೆಯಿಂದ ಮಾಡ ಬಲ್ಲವನು ವೆಂಕಟಪ್ಪನೇ!’ ಎಂದರು. ವೆಂಕಟಪ್ಪನವರೂ ಈ ಕೆಲಸವನ್ನು ನಡೆಸಿಕೊಡಲು ಒಪ್ಪಿ ಹೊರಟರು. ಅವರ ನೆರವಿಗೆಂದು ಗುರುಗಳು ತಮ್ಮ ಇತರ ಶಿಷ್ಯರು ನಂದಲಾಲ ವಸು, ಅಸಿತಕುಮಾರ ಹಾಲದಾರ ಮತ್ತು ಸಮರೇಂದ್ರ ನಾಥ ಗುಪ್ತ ಇವರನ್ನೂ ಕಳುಹಿಸಿಕೊಟ್ಟರು. ಈ ಸಂದರ್ಭದಲ್ಲಿ ವೆಂಕಟಪ್ಪನವರು ತಯಾರಿಸಿದ ಪ್ರತಿಕೃತಿಗಳು ಮೂಲದ ವಿವರವನ್ನೂ ವರ್ಣವಿನ್ಯಾಸವನ್ನೂ ಮಾತ್ರವಲ್ಲದೆ ಅಲ್ಲಿನ ರಸವನ್ನೂ ಪ್ರತಿಬಿಂಬಿಸುವಂತಿದ್ದುವು. ಲೇಡಿ ಹೆರಿಂಗ್ ಹ್ಯಾಂ ಈ ಚಿತ್ರಗಳನ್ನೆಲ್ಲ ಇಂಗ್ಲೆಂಡಿಗೆ ಒಯ್ದು ಅದನ್ನು ಪ್ರಕಟಿಸುವ ಸನ್ನಾಹದಲ್ಲಿದ್ದಾಗ ಇವೆಲ್ಲವನ್ನೂ ಇರಿಸಿದ್ದ ಕಟ್ಟಡವು ಬೆಂಕಿಯ ಅನಾಹುತಕ್ಕೆ ತುತ್ತಾಗಿ ಈ ವರ್ಣಚಿತ್ರ ಗಳೆಲ್ಲ ಸುಟ್ಟು ಬೂದಿಯಾದವು! ಕಲಾವಿದನ ತಪಸ್ಸು ಇಷ್ಟರಮಟ್ಟಿಗೆ  ವ್ಯರ್ಥವಾಯಿತು.

ಹೀಗೆ ಕಲ್ಕತ್ತ ಕಲಾಶಾಲೆಯಲ್ಲಿ ಏಳೂವರೆ ವರ್ಷಗಳ ಕಾಲವನ್ನು ಕಳೆದು ಮೈಸೂರಿಗೆ ಹಿಂದಿರುಗಿ ದಾಗ ಕಲಾ ಶಾಲೆಯ ಮುಖ್ಯಸ್ಥನಾಗಿದ್ದ ಪೆರ್ಸಿ ಬ್ರೌನ್ ಸರ್ಕಾರಕ್ಕೆ ಕಾಗದವೊಂದನ್ನು ಬರೆದು ವೆಂಕಟಪ್ಪನನ್ನು ಇನ್ನೂ ಹೆಚ್ಚಿನ ಶಿಕ್ಷಣಕ್ಕೆ ಲಂಡನ್ನಿನ ರಾಯಲ್ ಕಾಲೇಜ್ ಆಫ್ ಫೈನ್ ಆರ್ಟ್ಸ್‌ಗೆ ಕಳುಹಿಸಿಕೊಡಬೇಕೆಂದು ಸೂಚಿಸಿ ದನು. ವೆಂಕಟಪ್ಪ ಮದರಾಸಿನಲ್ಲಿಯೂ ಕಲ್ಕತ್ತದಲ್ಲಿಯೂ ಪಡೆದ ವಿಜಯವನ್ನು ಕಂಡು ಮೆಚ್ಚಿ ಕೊಂಡು ಮೈಸೂರು ಮಹಾರಾಜರು ವೆಂಕಟಪ್ಪನನ್ನು ಲಂಡನ್ನಿಗೆ ಕಳುಹಿಸ ಬೇಕೆಂದು ನಿಶ್ಚಯಿಸಿದರು. ಆದರೆ ಅಷ್ಟರಲ್ಲಿ ವಿಶ್ವ ಸಂಗ್ರಾಮ ಮೊದಲಾಗಿ, ದೇಶ ಬಿಟ್ಟು ಹೊರಗೆ ಹೋಗುವುದು ಕಷ್ಟವಾಯಿತು. ವೆಂಕಟಪ್ಪನವರು ಮೈಸೂರಿನಲ್ಲಿಯೇ ನೆಲೆಸಿದರು.

ಆಗ ಅವರಿಗೆ ಮೂವತ್ತೊಂದು ವರ್ಷ ವಯಸ್ಸು.  ‘ಕಲೆಯ ಕೈ ಹಿಡಿದವನಿಗೆ ಮದುವೆ ಎಂಥದು?’ ಎಂದು ನಿರ್ಧರಿಸಿ ಮದುವೆಯ ಸಲಹೆಗಳನ್ನೆಲ್ಲ ತಳ್ಳಿ ಹಾಕಿದರು. ಕಲೆಯೇ ಅವರ ಪಾಲಿಗೆ ಮಡದಿ, ಮನೆಯ ಗೀಳು, ಗೋಳು ಅಂಟಿದರೆ ಕಲೆಯ ತಪಸ್ಸು ಮುಂದರಿಯು ವುದಿಲ್ಲವೆಂದು ಅವರ ಭಯ. ಹೀಗಾಗಿ ಬಾಳಿನುದ್ದಕ್ಕೂ ಕಟ್ಟುನಿಟ್ಟಾದ ಬ್ರಹ್ಮಚರ್ಯದ ವ್ರತವನ್ನು ಹಿಡಿದು ಏಕಾಂಗಿಯಾಗಿಯೇ ಉಳಿದರು.

‘ವೀಣೆಯ ಹುಚ್ಚು’

ಅವರು ಮೈಸೂರಿನಲ್ಲಿಯೇ ಇರತೊಡಗಿದ ಮೇಲೆ ಆಗಿನ ಅರಮನೆಯ ವಾತಾವರಣದಲ್ಲಿ ತುಂಬ ಸ್ವಾರಸ್ಯವೆನ್ನಬಹುದಾದ ವೀಣೆ ಶೇಷಣ್ಣನವರ ಸಂಪರ್ಕ ಬೆಳೆಯಿತು. ಆ ಕಾಲಕ್ಕೆ ವೀಣೆ ಶೇಷಣ್ಣನವರೆಂದರೆ ದೇಶದೇಶಗಳಲ್ಲೆಲ್ಲ ಪ್ರಸಿದ್ಧಿ;‘ವೀಣೆಯ ಬೆಡಗಿದು ಮೈಸೂರು’ ಎಂದು ಕವಿ ಹಾಡುವಷ್ಟರ ಮಟ್ಟಿಗೆ ಮೈಸೂರಿನ ಈ ವೈಣಿಕನ ಪ್ರಭಾವ ಮೂಡಿದ್ದಿತು. ನಾಲ್ವಡಿ ಕೃಷ್ಣರಾಜರು ಅವರಿಗೆ ‘ವೈಣಿಕ ಶಿಖಾಮಣಿ’ ಎಂಬ ಬಿರುದ ನ್ನಿತ್ತು ಆಸ್ಥಾನ ವಿದ್ವಾಂಸರಿಗೆಲ್ಲ ಹಿರಿಯರನ್ನಾಗಿ ನೇಮಿಸಿದರು. ಇಷ್ಟು ಲೋಕವಿಖ್ಯಾತಿಯನ್ನು ಪಡೆದಿದ್ದರೂ ಅವರದ್ದು ಸರಳಸ್ವಭಾವ; ಅವರ ವೀಣಾವಾದನವಂತೂ ಗಂಧರ್ವಗಾನವೇ. ಅರಮನೆಯಲ್ಲಿಯೇ ಓಡಿಯಾಡುತ್ತಿದ್ದ ವೆಂಕಟಪ್ಪ ಶೇಷಣ್ಣನವರು ವೀಣೆ ನುಡಿಸುವುದನ್ನು ಕೇಳುವ ಅವಕಾಶವನ್ನು ಪಡೆದದ್ದು ಹೆಚ್ಚೇನಲ್ಲ. ಆದರೆ ಒಮ್ಮೆ ಕೇಳಿದೊಡನೆ ಅವರ ಆಸಕ್ತಿ ವೀಣೆಯಲ್ಲಿ ಬೇರೂರಿತು. ಅವರಿಗೆ ಬೇರೇನೂ ಬೇಡವೆನಿಸಿತು. ಶೇಷಣ್ಣನವರಲ್ಲಿ ವೀಣೆ ಕಲಿಯಬೇಕೆಂದು ಸಂಕಲ್ಪಿಸಿದರು.

ಆ ವೇಳೆಗಾಗಲೇ ವೆಂಕಟಪ್ಪನ ಬಳಿಯಲ್ಲಿ ಒಂದು ವೀಣೆಯೂ ಇದ್ದಿತು; ಕಲ್ಕತ್ತೆಯಲ್ಲಿದ್ದಾಗಲೇ ಕೊಂಚ ಮಟ್ಟಿಗೆ ವೀಣೆ ನುಡಿಸುವುದನ್ನು ಕಲಿತೂ ಇದ್ದರು. ಶೇಷಣ್ಣ ನವರ ಸಂಪರ್ಕಕ್ಕೆ ಬಂದನಂತರ ವೀಣೆಯ ಹುಚ್ಚು ಬಲ ವಾಗಿ ಹಿಡಿದು ಚಿತ್ರಕಲೆಯೇ ಹಿಂದಕ್ಕೆ ಸರಿಯಿತು. ಹಗಲೂ ಇರುಳೂ ವೀಣೆಯ ಅಭ್ಯಾಸವೇ ಆಗಿಬಿಟ್ಟಿತು.

ಶೇಷಣ್ಣನವರೂ ವೆಂಕಟಪ್ಪನ ಬುದ್ಧಿಶಕ್ತಿಯನ್ನೂ ಸಾಹಸಪ್ರವೃತ್ತಿಯನ್ನೂ ಸಾಧನೆಯ ನಿಷ್ಠೆಯನ್ನೂ ಮೆಚ್ಚಿ ಕೊಂಡರು. ಉಳಿದ ಶಿಷ್ಯರೆಲ್ಲ ಪಾಠ ಮುಗಿಸಿ ಹೋದ ಮೇಲೆ ವೆಂಕಟಪ್ಪನನ್ನು ಕೂರಿಸಿಕೊಂಡು ವೀಣಾವಾದನದ ಸೂಕ್ಷ್ಮಗಳನ್ನೆಲ್ಲ ಮನದಟ್ಟು ಮಾಡಿಸಿ ಕೊಡುವರು. ತಮಗೆ ತಿಳಿದುದನ್ನೆಲ್ಲ ಮುಚ್ಚು ಮರೆಯಿಲ್ಲದೆ ಈ ಶಿಷ್ಯನಿಗೆ ತಿಳಿಸುವರು. ‘ನನ್ನ ನುಡಿಸುವ ರೀತಿಯ ಸಂಪ್ರದಾಯ ವನ್ನು ಉಳಿಸುವವನು ಈ ಶಿಷ್ಯನೇ’ ಎಂಬ ನಂಬಿಕೆ ಅವರಲ್ಲಿ ಮೂಡಿತು. ಗುರುಗಳ ಈ ವಿಶ್ವಾಸವನ್ನು ಸಾರ್ಥಕ ಗೊಳಿಸುವಂತೆ ಶಿಷ್ಯನೂ ಬೇರೆ ಯಾವ ಯೋಚನೆಯೂ ಇಲ್ಲದೆ ವೀಣಾಭ್ಯಾಸವನ್ನು ಮುಂದರಿಸಿ ಅದರಲ್ಲಿ ವಿಶೇಷ ವಾದ ಪ್ರೌಢಿಮೆಯನ್ನು ಗಳಿಸಿದನು.

ವೆಂಕಟಪ್ಪನವರು ವೀಣೆಯ ಸೊಬಗಿಗೆ ಮಾರು ಹೋಗಿ ಚಿತ್ರಕಲೆಯನ್ನು ಪೂರಾ ಬಿಟ್ಟುಬಿಟ್ಟರು; ತಿಂಗಳುಗಳು, ವರ್ಷಗಳು ಕುಂಚವನ್ನೇ ಹಿಡಿಯುತ್ತಿರಲಿಲ್ಲ. ಸದಾ ವೀಣೆಯ ಅಭ್ಯಾಸವೇ ಆಗಿಬಿಟ್ಟಿತು. ಈ ಸುದ್ದಿ ಗುರುಗಳಾದ ಅವನೀಂದ್ರನಾಥ ಠಾಕೂರರಿಗೆ ಹೇಗೋ ಮುಟ್ಟಿತು. ಅವರು ಕಲ್ಕತ್ತೆಯಿಂದ ವೆಂಕಟಪ್ಪನವರಿಗೆ ಕಾಗದವೊಂದನ್ನು ಬರೆದು, ‘ಏನು ವೆಂಕಟಪ್ಪ, ನೀನು ಚಿತ್ರಕಲೆಯನ್ನು ಕೈಬಿಟ್ಟಿದ್ದೀಯಂತೆ, ದಿಟವೇ? ಹಾಗೆ ಮಾಡಬಾರದು. ಇಷ್ಟು ಶ್ರದ್ಧೆಯಿಂದ ಸಾಧನೆ ಮಾಡಿ ಕಲಿತದ್ದನ್ನು ಬಿಡಬೇಡ. ಚಿತ್ರಕಲೆಯಲ್ಲಿ ನಿನಗೆ  ಒಳ್ಳೆಯ ಭವಿಷ್ಯವಿದೆ’ ಎಂದು ತಿಳಿಸಿದರು. ಅದಕ್ಕೆ ಉತ್ತರವಾಗಿ ವೆಂಕಟಪ್ಪನವರು ವರ್ಣಚಿತ್ರವೊಂದನ್ನು ಸಿದ್ಧಪಡಿಸಿ ಗುರು ಗಳಿಗೆ ಒಪ್ಪಿಸಿದರು. ಈ ಚಿತ್ರದ ಹೆಸರು ‘ವೀಣೆಯ ಹುಚ್ಚು’ ವೀಣೆಯ ಆವೇಶದಿಂದ ಪರವಶರಾಗಿ ಅವನೀಂದ್ರನಾಥ ರಿಂದ ಕಲಿತ ಕಲೆಯನ್ನು ಮೂಲೆಗಿರಿಸಿದ ಪ್ರಸಂಗವನ್ನು ಈ ಚಿತ್ರ ಸೊಗಸಾಗಿ ರೂಪಿಸುತ್ತದೆ.

ಹೀಗೆ ಚಿತ್ರಕಲೆಯ ಅಭ್ಯಾಸ ಮತ್ತೆ ಶುರು ವಾಯಿತು. ಜೀವನೋಪಾಯಕ್ಕೆ ಚಿತ್ರಕಲೆ ಮತ್ತಿತರ ಕಲಾ ಪ್ರಕಾರಗಳು; ವೀಣಾವಾದನ ಮಟ್ಟಿಗೆ ಆತ್ಮಸಂತೋಷಕ್ಕೆ.

ಅರಮನೆಯ ಪರಿಸರದಲ್ಲಿ

ಮಹಾರಾಜರು ವೆಂಕಟಪ್ಪನವರ ಪ್ರತಿಭೆಯನ್ನೂ ಪ್ರಕೃತಿಯನ್ನೂ ಮನಸ್ಸಿಗೆ ತಂದುಕೊಂಡು ಅವರಿಗೆ ಅರಮನೆಯಲ್ಲಿಯೇ ಉದ್ಯೋಗಾವಕಾಶವನ್ನೂ ಸ್ವಾತಂತ್ರ್ಯ ವನ್ನೂ ಒದಗಿಸಿಕೊಟ್ಟರು. ವೆಂಕಟಪ್ಪನವರದು ಮೊದಲಿಂದ ಖಂಡಿತ ಸ್ವಭಾವ; ಯಾರ ದಾಕ್ಷಿಣ್ಯಕ್ಕೂ ಒಳ ಗಾಗದ, ಯಾರ ಅಂಜಿಕೆಗೂ ಸಗ್ಗದ ಪ್ರವೃತ್ತಿ ಅವರದ್ದು. ಬಲಾತ್ಕಾರಕ್ಕೆ ಎಂದೂ ಮಣಿಯುವವರಲ್ಲ; ತಮಗೆ ತಪ್ಪೆಂದು ತೋರಿದುದನ್ನು ಯಾರ ಹಂಗಿಗೂ ಬಗ್ಗದೆ ಕಟು ವಾಗಿ ಖಂಡಿಸುವರು; ತಮಗೆ ಬೇಡವೆನಿಸಿದುದನ್ನು ಯಾರ ಬಯಕೆಗೂ ಮಾಡರು. ಹೀಗಿರುವಾಗ ಅರಮನೆಯ ಅಧಿಕಾರಿಗಳೂ ಸರ್ಕಾರದ ಅಧಿಕಾರಿಗಳೂ ಇವರನ್ನು ಕಂಡು ಮುನಿಸಿಕೊಂಡುದು ಸೋಜಿಗವೇನಲ್ಲ. ಅವರನ್ನು ಕಲ್ಕತ್ತೆಗೆ ಮತ್ತೆ ಕಳುಹಿಸುವ ಪ್ರಯತ್ನದಲ್ಲಿ ಸರ್ಕಾರವೂ ಅರಮನೆಯೂ ಸೋತವು. ಇದರಿಂದ ಅವರಿಗೆ ಮೇಲೆ ಮೇಲೆ ಕಿರುಕುಳಗಳು ಹೆಚ್ಚಿದವು. ಮಹಾರಾಜರು ಇದನ್ನು ಗಮನಿಸಿ, ಅವರ ಕೆಲಸ ಯಾವ ಅಡ್ಡಿ ಆತಂಕಗಳೂ ಇಲ್ಲದೆ, ಅರಮನೆಯಿಂದ ಯಾವ ನಿರ್ಬಂಧವೂ ಇಲ್ಲದೆ ಸಾಗುವುದಕ್ಕೆ ಅಣಿಮಾಡಿಕೊಟ್ಟರು. ನಾಲ್ವಡಿ ಕೃಷ್ಣರಾಜ ಒಡೆಯರ ಕಲಾಭಿಮಾನ ಅಷ್ಟು ನಿರ್ಮಲವಾದುದು, ವ್ಯಕ್ತಿಗೌರವ ಅಷ್ಟು ಖಚಿತವಾದುದು. ಅವರು ಮೈಸೂರಿನ ಭಾಗ್ಯವಿಧಾತರಾಗಿರುವವರೆಗೂ ವೆಂಕಟಪ್ಪನವರು ಅರಮನೆಯ ಪರಿವಾರದಲ್ಲೇ ಸೇರಿದರೂ ಸ್ವತಂತ್ರರಾಗಿ ತಮ್ಮ ಕಲಾವ್ಯವಸಾಯವನ್ನು ಸಾಗಿಸಿಕೊಂಡು ಹೋಗುತ್ತಿದ್ದರು.

ಈ ಅವಧಿಯಲ್ಲಿ ಅವರು ಮಾಡಿ ಮುಗಿಸಿದ ಕಲಾಕೃತಿಗಳು ಲೋಕವಿಖ್ಯಾತವಾದವು. ತಮ್ಮ ದಣಿಯಾದ ನಾಲ್ವಡಿ ಕೃಷ್ಣರಾಜ ಒಡೆಯರ ಭಾವಚಿತ್ರವೊಂದನ್ನು ದಂತಫಲಕದ ಮೇಲೆ ಮೂಡಿಸಿದ್ದಾರೆ; ಸಹಜ ಸುಂದರವಾದ ಕಲಾಕೃತಿಯಿದು. ಹಾಗೆಯೇ ತಮ್ಮ ಗುರುಗಳಾದ ಅವನೀಂದ್ರನಾಥ ಠಾಕೂರರ ಭಾವಚಿತ್ರವನ್ನು ದಂತ ಫಲಕದ ಮೇಲೆ ಬಿಡಿಸಿದ್ದಾರೆ. ದಂತದಂಥ ನುಣುಪಾದ ಮೇಲ್ಮೈ ಮೇಲೆ ವರ್ಣರಂಜಿತ ವ್ಯಕ್ತಿಚಿತ್ರವನ್ನು ಸಿದ್ಧಪಡಿಸುವುದು ತುಂಬ ಕಷ್ಟ. ಇದನ್ನು ಎಷ್ಟು ಯಶಸ್ವಿಯಾಗಿ ನಿರ್ವಹಿಸಿದ್ದಾರೆಂಬುದನ್ನು ನೋಡಿಯೇ ತಿಳಿದುಕೊಳ್ಳಬೇಕು.

ವೀಣೆ ಶೇಷಣ್ಣನವರ ಫ್ಲಾಸ್ಟರ್ ಶಿಲ್ಪಕೃತಿ ಇನ್ನೊಂದು ಅದ್ಭುತ ಕೃತಿ. ವರ್ಷಗಟ್ಟಲೆ ದಿನವೂ ಹಲವು ಗಂಟೆಗಳ ಕಾಲ ಅವರ ಮುಂದೆ ಕೂತು ಕೂತು, ಗುರುಭಕ್ತಿ ಯಿಂದ ಅವರ ಆಕೃತಿಯನ್ನು ತಮ್ಮ ಚಿತ್ತಭಿತ್ತಿಯಲ್ಲಿ ಕಡೆದು ಕೊಂಡು ಅನಂತರ ಈ ಭೌತಿಕ ಶಿಲ್ಪದಲ್ಲಿ ಅದನ್ನು ಇಳಿಸಿರುವುದು ತಟ್ಟನೆ ತಿಳಿಯುತ್ತದೆ. ಈಗ ಈ ಶಿಲ್ಪ ಎಲ್ಲಿದೆಯೋ ತಿಳಿಯದು. ಅದರ ಛಾಯಾ ಚಿತ್ರಗಳು  ಸ್ವಲ್ಪ ಮಟ್ಟಿಗೆ ಉಳಿದುಕೊಂಡಿವೆ.

ಇಂಥದೇ ಇನ್ನೊಂದು ಶಿಲ್ಪ ಮಾಣಿ ನರಸಿಂಹ ನದು. ಇನ್ನೂ ಒಂದು ಎಂದರೆ ಕವಿ ರವೀಂದ್ರನಾಥ ಠಾಕೂರರದ್ದು. ಇವಲ್ಲದೆ ಹಲವಾರು ಪ್ಲಾಸ್ಟರ್ ಶಿಲ್ಪಫಲಕ ಗಳನ್ನೂ ಸಿದ್ಧಪಡಿಸಿದರು. ಬರೋಡ ಮಹಾರಾಜರ ದಂತ ಚಿತ್ರವೊಂದನ್ನೂ ನಿರ್ಮಿಸಿದರು. ಅರಮನೆಗೆ ಸಂಬಂಧಿಸಿದ ಹಲವು ವಿನ್ಯಾಸಗಳನ್ನು ಉಬ್ಬುಶಿಲ್ಪದಲ್ಲಿ ಮೂಡಿಸಿದರು.

ಸ್ವತಂತ್ರ ಮನೋವೃತ್ತಿ

ಈ ಸುಮಾರಿಗೆ ಅವರಿಗೆ ತಾವು ಓದಿದ ಕಲಾ ಶಾಲೆಯಿಂದ ಅದರ ಮುಖ್ಯಸ್ಥರಾಗಲು ಕರೆ ಬಂದಿತು. ವೆಂಕಟಪ್ಪ ಅಲ್ಲಿ ಕಲಿಯುತ್ತಿದ್ದಾಗ ಶಾಲೆಯ ಮುಖ್ಯಸ್ಥನಾಗಿದ್ದ ಪೆರ್ಸಿ ಬ್ರೌನ್ ನಿವೃತ್ತನಾಗುವ ಮೊದಲು, ತನ್ನ ಜಾಗವನ್ನು ತುಂಬಲು ವೆಂಕಟಪ್ಪನೇ ತಕ್ಕವನೆಂದು ಸರ್ಕಾರಕ್ಕೆ  ಸೂಚಿಸಿದರು. ಬಂಗಾಳ ಸರ್ಕಾರ ಅವರ ಸೂಚನೆಯನ್ನು ಒಪ್ಪಿತು. ವೆಂಕಟಪ್ಪನವರಿಗೆ ಸರ್ಕಾರದಿಂದ ಪತ್ರ ಬಂದಿತು; ಮೈಸೂರು ಅರಮನೆಯ ಅಧಿಕಾರಿಗಳೂ ಅವರನ್ನು ಕಳುಹಿಸಲು ಸಿದ್ಧರಿದ್ದರು. ಮಹಾರಾಜರೂ ಅಡ್ಡಿ ಬರಲಿಲ್ಲ ಏಕೆಂದರೆ ಅದು ದೊಡ್ಡ ಹುದ್ದೆ; ಯಾವ ಹಿರಿಯ ಕಲಾವಿದನೂ ಹೆಮ್ಮೆ ಪಡುವಂಥ ಹುದ್ದೆ. ಮತ್ತೆ, ತಿಂಗಳಿಗೆ ಸಾವಿರದ ಎಂಟುನೂರು ರೂಪಾಯಿಗಳ ಸಂಬಳ!

ಆದರೆ ವೆಂಕಟಪ್ಪ ಬಂಗಾಳ ಸರ್ಕಾರಕ್ಕೆ ಉತ್ತರ ಬರೆದು ಈ ಉದ್ಯೋಗವನ್ನು ತಿರಸ್ಕರಿಸಿಬಿಟ್ಟರು. ಅವರ ಉತ್ತರದ ಒಕ್ಕಣೆ ಸ್ವಾರಸ್ಯವಾಗಿದೆ ‘ನೀವು ನನ್ನನ್ನು ಕಲಾವಿದನೆಂದು ಕರೆದು ತಪ್ಪು ಮಾಡಿದ್ದೀರಿ. ನಾನೇನು ಕಲಾವಿದನಲ್ಲ, ಕಲಾವಿದ್ಯಾರ್ಥಿ ಅಷ್ಟೇ. ಬದುಕಿನುದ್ದಕ್ಕೂ ನಾನು ವಿದ್ಯಾರ್ಥಿಯೇ! ಕಲೆಯ ಆಳ ಅಗಲಗಳನ್ನು ತಿಳಿದುಕೊಳ್ಳುವ ಕುತೂಹಲ ನನಗುಂಟು. ಆದ್ದರಿಂದ ನಾನು ಕಲಾ ವಿದ್ಯಾರ್ಥಿಯಾಗಿಯೇ ಬಾಳನ್ನು ಕಳೆಯ ಬೇಕೆಂದಿದ್ದೇನೆ. ಕಲೆಯ ಸಾರವನ್ನು ಅರಿತುಕೊಳ್ಳುವ ಹಿರಿದಾದ ಗುರಿಯನ್ನು ನನ್ನ ಮುಂದೆ ಇರಿಸಿಕೊಂಡಿದ್ದೇನೆ. ನೀವು ನನಗೆ ನೀಡಲಿರುವ ಪ್ರಿನ್ಸಿಪಾಲ್ ಗಿರಿಯ ಉದ್ಯೋಗ ಈ ಗುರಿಯನ್ನು ಮುಟ್ಟಲು ನೆರವಾಗುವುದಿಲ್ಲ,  ಅಡ್ಡಿಯಾಗುತ್ತದೆ. ಸಂಸ್ಥೆಯ ಆಡಳಿತ, ಜವಾಬುದಾರಿ, ಪತ್ರ ವ್ಯವಹಾರ ಇವೆಲ್ಲ ನನ್ನ ಸ್ವಭಾವಕ್ಕೆ ಸರಿಹೋಗುವುದಿಲ್ಲ. ನಾನು ಸಾಧ್ಯವಾದ ಮಟ್ಟಿಗೂ ಸ್ವತಂತ್ರ್ಯವಾಗಿರ ಬೇಕೆನ್ನುವವನು. ಯಾರ ಕಟ್ಟುಪಾಡಿಗೂ ಸಿಗುವವನಲ್ಲ. ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ!’ ಇದಕ್ಕೆ ವಿವರಣೆಯೇನು ಬೇಕು?

ಹೀಗೆಯೇ ಇತರ ಕೆಲವು ಕಡೆಗಳಿಂದಲೂ ಉನ್ನತ ಹುದ್ದೆಗಳನ್ನು ಅಲಂಕರಿಸಲು ಆಹ್ವಾನಗಳು ಬಂದವು. ವೆಂಕಟಪ್ಪನವರು ಎಲ್ಲವನ್ನೂ ನಿರಾಕರಿಸಿ ಸ್ವತಂತ್ರರಾಗಿ ಉಳಿದುಕೊಂಡರು. ಅದು ಅವರು ಬೆಂಗಳೂರಿಗೆ ಬಂದು ನೆಲೆಸಿದ ಮೇಲೆ ನಡೆದದ್ದು.

ಅವರ ಸ್ವತಂತ್ರ ಮನೋವೃತ್ತಿಗೆ ಸ್ವಾರಸ್ಯವಾದ ನಿದರ್ಶನವೆಂದರೆ ಇದು. ನಾಲ್ವಡಿ ಕೃಷ್ಣರಾಜ ಒಡೆಯರು ಅವರಿಗೆ ಕೆಲವು ಕಲಾಕೃತಿಗಳನ್ನು ಮಾಡಲು ಹೇಳಿದ್ದು ಅದರ ಆರ್ಥಿಕ ಮೌಲ್ಯವನ್ನೂ ನಿರ್ಧರಿಸಿದ್ದರು. ಈ ಕೃತಿಗಳು ಮುಗಿಯುವಷ್ಟರಲ್ಲಿ ಮಹಾರಾಜರು ತೀರಿಕೊಂಡರು. ಮುಂದೆ ಬಂದ ಅರಸರ ಅಧಿಕಾರಿಗಳು ಈ ಕಲಾಕೃತಿಗಳನ್ನು ಕೊಳ್ಳಲು ನಿರಾಕರಿಸಿದರು; ಅವರು ಪಟ್ಟ ಶ್ರಮಕ್ಕೆ ಪ್ರತಿಫಲವಾಗಿ, ಮೊದಲು ನಿರ್ಧರಿಸಿದ ಹಣದಲ್ಲಿ ತೀರ ಕೊಂಚಭಾಗವನ್ನು ಕೊಡುವೆವೆಂದರು. ಹಿಂದಿನ ಮಹಾರಾಜರ ಕೋರಿಕೆಯಂತೆ ತಾವು ಕಲಾಕೃತಿಗಳನ್ನು ಸಿದ್ಧಪಡಿಸಿದುದಾಗಿಯೂ, ಆ ಒಪ್ಪಂದ ವನ್ನು ಈಗ ಪಾಲಿಸದಿದ್ದರೆ ಅವರ ನೆನಪಿಗೆ ಅಪಮಾನ ಮಾಡಿದಂತೆ ಎಂದೂ ವೆಂಕಟಪ್ಪ ವಾದಿಸಿದರು. ಅರಮನೆಯ ಅಧಿಕಾರಿಗಳು ಒಪ್ಪದಿದ್ದಾಗ, ಅರಮನೆಯ ಮೇಲೆ ವೆಂಕಟಪ್ಪ ಮೊಕದ್ದಮೆಯನ್ನು ನ್ಯಾಯಾಲಯದಲ್ಲಿ ಹೂಡಿದರು.

ನೋಡಿದಿರಾ, ಎಷ್ಟು ಧೈರ್ಯ! ಅರಸೊತ್ತಿಗೆ ಇನ್ನೂ ಪ್ರಬಲವಾಗಿದ್ದಾಗಲೇ ನಡೆದ ಪ್ರಸಂಗ ಇದು. ದೇಶದ ಅರಸರನ್ನು ನ್ಯಾಯಾಲಯಕ್ಕೆ ಎಳೆಯುವ ಸಾಹಸ ಮತ್ತೊಬ್ಬರು ಮಾಡಿಯಾರೆ? ಆದರೆ ಆ ಕಾಲದಲ್ಲಿ ಹೀಗೆ ಅರಮನೆಯ ವ್ಯವಹಾರವನ್ನು ರಾಜ್ಯದ್ದೇ ನ್ಯಾಯಾಲಯ ವಿಮರ್ಶೆಗೆ, ಪರಿಶೀಲನೆಗೆ ಎತ್ತಿಕೊಳ್ಳುವ ಹಾಗಿರಲಿಲ್ಲ. ವೆಂಕಟಪ್ಪನವರ ಮನಸ್ಸು ಕಹಿಯಾಯಿತು; ಇನ್ನು ಮೈಸೂರಿನಲ್ಲಿರಬಾರದೆಂದು ನಿಶ್ಚಯಿಸಿ, ತಮ್ಮ ಕಲಾಕೃತಿ ಗಳನ್ನೆಲ್ಲ ಎತ್ತಿಕೊಂಡು ಬೆಂಗಳೂರಿಗೆ ಬಂದು ಮಲ್ಲೇಶ್ವರದ ಅಂಚಿನಲ್ಲಿ ನೆಲೆಸಿದರು. ಅರಮನೆ ತನಗೆ ಕೊಡಲು ಮುಂದೆ ಬಂದ ಹಣವನ್ನೂ ತಿರಸ್ಕರಿಸಿಬಿಟ್ಟರು. ಮತ್ತೆ ಮೈಸೂರಿಗೆ ಹೋಗಲಿಲ್ಲ; ಅರಮನೆಯ ನಂಟನ್ನು ಮುಂದುವರೆಸಲಿಲ್ಲ!

ಬೆಂಗಳೂರಿನಲ್ಲಿ ವಾಸ

ವೆಂಕಟಪ್ಪ ಬೆಂಗಳೂರಿಗೆ ಬಂದದ್ದು ಹೀಗೆ. ಅವರು ಬಂದದ್ದು ೧೯೪೬ ರ ಜುಲೈ ತಿಂಗಳಿನಲ್ಲಿ. ಆಗ ಅವರಿಗೆ ಅರವತ್ತು ವರ್ಷ ವಯಸ್ಸು. ಒಂದು ಸುಸಜ್ಜಿತವಾದ ಕಲಾಶಾಲೆಯನ್ನು ತೆರೆಯುವ ಉದ್ದೇಶ ದಿಂದ ಅವರು ಮಲ್ಲೇಶ್ವರದ ಅಂಚಿನಲ್ಲಿ, ಪ್ರಶಾಂತವಾದ ಒಂದೆಡೆ, ವಿಶಾಲವಾದ ಜಾಗವನ್ನು ಕೊಂಡು ಅಲ್ಲಿ ಕಲಾಭ್ಯಾಸಕ್ಕೆ ತಕ್ಕಂತೆ ಮನೆಯೊಂದನ್ನು ಕಟ್ಟಿಸಿ ಕೊಂಡರು. ತಮ್ಮ ವಾಸಕ್ಕೆಂದೇ ಮನೆಯಾದರೂ, ತಮ್ಮೆಲ್ಲ ಕಲಾಕೃತಿಗಳನ್ನೂ ಬಯಸಿ ಬಂದವರು ನೋಡುವ ಸಲು ವಾಗಿ ‘ಪ್ರದರ್ಶನ ಶಾಲೆ’ ಯನ್ನೂ ಅಲ್ಲಿ ಅಳವಡಿಸಿದರು. ಮೇಲೆ ಎರಡು ಅಂತಸ್ತುಗಳಲ್ಲಿ ಸಂಗೀತ ವಾದ್ಯಶಾಲೆ, ಕಲಾ ಶಿಕ್ಷಣಶಾಲೆಗಳನ್ನು ವ್ಯವಸ್ಥೆ ಮಾಡುವ ಯೋಚನೆ ಯಿಂದ ಪ್ಲಾನೊಂದನ್ನೂ ತಯಾರಿಸಿದರು. ಈ ಯೋಜನೆ ಬರಿಯ ಯೋಜನೆಯಾಗಿ ಉಳಿಯಿತಷ್ಟೆ!

ಬೆಂಗಳೂರಿನ ಈ ಮನೆಯಲ್ಲಿ ಅವರು ವಾಸಮಾಡತೊಡಗಿದ ಮೇಲೆ ತಮ್ಮ ಹಳೆಯ ಕಲಾಕೃತಿ ಗಳ ಮೇಲೆ  ಮತ್ತೊಮ್ಮೆ   ಕೈಯಾಡಿಸಿದರು; ಹೊಸಕೃತಿ ಮಾಡುವ ಗೋಜಿಗೆ ಹೋಗಲಿಲ್ಲ. ಜನರಲ್ಲಿದ್ದ ಅನಾದರ, ಸರ್ಕಾರದ ಆಲಸ್ಯ, ಕಲಾವಿದರೆನಿಸಿಕೊಂಡವರ ಮಾತ್ಸರ್ಯ ಇವುಗಳಿಂದ ಅವರು ಬೇಸರಗೊಂಡರು. ಮೊದಲೇ ಸ್ವತಂತ್ರವಾಗಿದ್ದ ಅವರ ಮನೋವೃತ್ತಿ ಈಗ ನಿಷ್ಠುರವಾಯಿತು. ಒಂಟಿಯಾಗಿಯೇ ಉಳಿದಿದ್ದ ಅವರು ಈಗ ಇತರರ ಸಂಪರ್ಕವನ್ನೂ ದೂರವಿರಿಸಿದರು.

ಬೆಂಗಳೂರಿನಲ್ಲಿ ಇಷ್ಟು ವಿಖ್ಯಾತನಾದ, ಪ್ರತಿಭಾ ಶಾಲಿಯಾದ ಕಲಾವಿದನೊಬ್ಬನಿದ್ದಾನೆ ಎನ್ನುವುದೇ ಬಹಳ ಮಂದಿಗೆ ತಿಳಿಯದಂತೆ ಇಲ್ಲಿ ಸುಮಾರು ಇಪ್ಪತ್ತು ವರ್ಷ ಗಳ ಕಾಲ ವಾಸಮಾಡಿದರು. ಕಡೆಯ ದಿನಗಳಲ್ಲಿ ಸಂಧಿವಾತವೆಂಬ ಬೇನೆ ಅವರ ದೇಹದಲ್ಲಿ ಕಾಲಿಟ್ಟಿತು. ನಿಶ್ಚಿಂತರಾಗಿ ಅವರು ನಡೆಸಿಕೊಂಡು ಹೋಗುತ್ತಿದ್ದ ಕಲಾಭ್ಯಾಸ ಈಗ ಕಷ್ಟವಾಯಿತು. ಕೂಡುವುದು, ಏಳುವುದು, ನಡೆಯುವುದು ದುಸ್ತರವಾಯಿತು. ಆದರೂ ಸ್ವತಂತ್ರ ಮನೋವೃತ್ತಿಯೇನು ಅವರಿಂದ  ಜಾರಲಿಲ್ಲ. ಕಡೆ ಯವರೆಗೂ ಅದನ್ನು ಉಳಿಸಿಕೊಂಡೇ ಬಂದರು.

ಅವರು ಹೀಗೆ ಹಾಸಿಗೆ ಹಿಡಿದಿದ್ದಾಗ ಸರ್ಕಾರ ಅವರನ್ನು ಹಿರಿಯ ಕಲಾವಿದರೆಂದು ಪರಿಗಣಿಸಿತು! ಕೇಂದ್ರದ ಲಲಿತಕಲಾ ಅಕ್ಯಾಡೆಮಿ ಅವರನ್ನು  ಮಹಾಪುರುಷರೆಂದು ಸನ್ಮಾನಿಸಿತು. ರಾಜ ಸರ್ಕಾರ ಅವರ ಕಲಾಕೃತಿಗಳನ್ನು ಕೊಳ್ಳುವ ಮನಸ್ಸು ಮಾಡಿತು. ಅಕ್ಯಾಡೆಮಿಯ ಸನ್ಮಾನಕ್ಕೆ ಅವರು ದಿಲ್ಲಿಗಾಗಲೀ ಮತ್ತೆಲ್ಲಿ ಗಾಗಲೀ ಹೋಗುವ ಸ್ಥಿತಿಯಲ್ಲಿರಲಿಲ್ಲ. ದಿಲ್ಲಿಯಿಂದ ಅಧಿಕಾರಿಗಳು ಅವರ ಮನೆಗೇ ಬಂದು ಅವರು ಇದ್ದಲ್ಲಿಯೇ ಸನ್ಮಾನಿಸಿ ಹೋದರು. ರಾಜ್ಯಸರ್ಕಾರ ಅವರ ಕಲಾಕೃತಿಗಳನ್ನು ಕೊಂಡು ಇವರ ಹೆಸರಿನಲ್ಲಿ ಚಿತ್ರಕಲಾ ಸಂಗ್ರಹ ಶಾಲೆ (ಆರ್ಟ್ ಗ್ಯಾಲರಿ)ಯನ್ನು ವ್ಯವಸ್ಥೆ ಮಾಡಿದ್ದು ಅವರು ತೀರಿಕೊಂಡ ಮೇಲೆ.

ಸರ್ಕಾರದ ಮತ್ತು ಜನಗಳ ದೃಷ್ಟಿಗೆ ಬಿದ್ದಮೇಲೆ ಅವರು ಬಹುದಿನ ಬಾಳಲಿಲ್ಲ. ಸನ್ಮಾನ ಸಮಾರಂಭಗಳ ಗದ್ದಲ ಮುಗಿದೊಡನೆ ತಮ್ಮ ಏಕಾಂತಕ್ಕೆ ಹಿಂತಿರುಗಿ, ಕೆಲ ತಿಂಗಳುಗಳು ತೀರ ಅಸ್ವಸ್ಥರಾಗಿದ್ದು ತೀರಿಕೊಂಡರು.

ವೆಂಕಟ್ಪಪ್ಪ ಆರ್ಟ್  ಗ್ಯಾಲರಿ

ಅವರ ಕಡೆಗಾಲದಲ್ಲಿ ಅವರನ್ನು ನೋಡಿ ಕೊಳ್ಳುತ್ತಿದ್ದವರು ಅವರ ತಂಗಿ ಮತ್ತು ಆಕೆಯ ಮಕ್ಕಳು ರಾಮರಾಜು. ಅವರು ತೀರಿಕೊಂಡ ಮೇಲೆ ಅವರ ಕಲಾಕೃತಿಗಳನ್ನೆಲ್ಲ ಎಚ್ಚರದಿಂದ ಕಾಯ್ದುಕೊಂಡು, ಸರ್ಕಾರ ದೊಂದಿಗೆ ವ್ಯವಹಾರ ನಡೆಸಿ, ಯೋಗ್ಯವಾದ ವ್ಯವಸ್ಥೆ ಆಗುವ ಭರವಸೆ ಮೂಡಿದೊಡನೆ, ಕಲಾಕೃತಿ ಗಳನ್ನೆಲ್ಲ ರಾಜ್ಯ ಸರ್ಕಾರದ ವಸ್ತು ಸಂಗ್ರಹಾಲಯದ ವಶಕ್ಕೆ ಒಪ್ಪಿಸಿ ದವರು ರಾಮರಾಜು.  ಈಗ ವಸ್ತು ಸಂಗ್ರಹಾಲಯದ ಪಕ್ಕ ದಲ್ಲೇ ಬೇರೆ ಕಟ್ಟಡವೊಂದರಲ್ಲಿ ‘ವೆಂಕಟಪ್ಪ ಆರ್ಟ್ ಗ್ಯಾಲರಿ’ಯನ್ನು ಸಜ್ಜುಗೊಳಿಸಲಾಗಿದೆ. ಅಲ್ಲಿ ವೆಂಕಟಪ್ಪ ನವರ ಪ್ಲಾಸ್ಟರ್ ಶಿಲ್ಪಫಲಕಗಳೂ, ಜಲವರ್ಣ ಚಿತ್ರಗಳೂ, ಅವರು ಬಳಸುತ್ತಿದ್ದ ವೀಣೆಗಳೂ, ಇತರ ಸ್ವಾರಸ್ಯವಾದ ಸ್ವತ್ತು ಗಳೂ ಅಂದವಾಗಿ ಅಣಿಮಾಡಲ್ಪಟ್ಟಿವೆ.

ಪ್ಲಾಸ್ಟರ್ ಶಿಲ್ಪ ಫಲಕಗಳು ಉಬ್ಬು ಚಿತ್ರಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್ ಎಂಬ ಬಿಳಿಮಣ್ಣಿನಿಂದ ಸಿದ್ಧ ಪಡಿಸಿದ ಹಲಗೆಯ ಮೇಲೆ ಸುಮಾರು ಎರಡಂಗುಲಕ್ಕೂ ಕಡಿಮೆ ಉಬ್ಬಿರುವಂತೆ ಹಲವು ದೃಶ್ಯಗಳನ್ನು ಕಡೆದಿರುವುದನ್ನು ಇಲ್ಲಿ ಕಾಣಬಹುದು. ಉಬ್ಬು ತೀರ ಲಘುವಾದುದರಿಂದ ನೆರಳು ಬೆಳಕುಗಳ ಚೆಲ್ಲಾಟ ದೃಶ್ಯಗಳ ಸೊಬಗನ್ನೂ ಸ್ವಾರಸ್ಯವನ್ನೂ ಸ್ಪಷ್ಟಪಡಿಸುತ್ತದೆ. ವೆಂಕಟಪ್ಪನ ವರು ಆರಿಸಿಕೊಂಡಿರುವ ಪ್ರಸಂಗಗಳು; ಶಕುಂತಲೆ ತನ್ನ ಸಾಕುತಂದೆಯಾದ ಕಣ್ವರಿಂದ ಆಶೀರ್ವಾದ ಪಡೆದು ಗಂಡನ ಮನೆಗೆ ಹೊರಡುತ್ತಿರುವುದು, ಏಕಲವ್ಯನು ದ್ರೋಣಾಚಾರ್ಯರ ಪ್ರತಿಕೃತಿಯನ್ನು ತಾನೇ ಮಾಡಿಟ್ಟುಕೊಂಡು ಅದರೆದುರು ತನ್ನ ಬಿಲ್ಲಾಟವನ್ನು ಅಭ್ಯಾಸಮಾಡುತ್ತಿರುವುದು, ಲೋಕವ್ಯವಹಾರವನ್ನು ತ್ಯಾಗಮಾಡಿ ಸಿದ್ಧಾರ್ಥನು ತನ್ನ ತಂದೆಯಾದ ಶುದ್ಧೋದನನ ಅರಮನೆಯಿಂದ ರಾತ್ರಿ ತನ್ನ ಕುದುರೆ ಕಂಥಕದ ಮೇಲೇರಿ ಹೊರಡುತ್ತಿರುವುದು, ದ್ರೋಣಾ ಚಾರ್ಯರು ಕೌರವ-ಪಾಂಡವ ಸೋದರರಿಗೆ ಧನುರ್ವಿದ್ಯೆ ಯನ್ನು ಕಲಿಸುತ್ತಿರುವುದು ಮತ್ತು ಶಿವನ ತಾಂಡವ ಇವು. ಈ ಪ್ರಸಂಗಗಳನ್ನೆಲ್ಲ ಮೂಲದಲ್ಲಿ ಅವರು ಆಳವಾಗಿ ಅಧ್ಯಯನ ಮಾಡಿ ಅದರ ವಿಚಾರವಾಗಿ ಚೆನ್ನಾಗಿ ಆಲೋಚನೆ ಮಾಡಿ, ಅಲ್ಲಿನ ಒಬ್ಬೊಬ್ಬ ವ್ಯಕ್ತಿಯ ಸ್ವಭಾವ ಮನೋಧರ್ಮಗಳು ಹೇಗಿರಬೇಕೆಂಬುದನ್ನು  ಊಹಿಸಿ, ಅನಂತರ ಈ ಫಲಕಗಳಲ್ಲಿ ಕಡೆದಿದ್ದಾರೆ. ಸೂಕ್ಷ್ಮವಾದ ಕೈಕೆಲಸ, ಸ್ಪಷ್ಟವಾದ ಕೌಶಲ, ಅರ್ಥವತ್ತಾದ ವಿನ್ಯಾಸ ಇವು ಈ ಫಲಕಗಳಲ್ಲಿ ಎದ್ದು ಕಾಣುತ್ತವೆ. ವೆಂಕಟಪ್ಪನವರು ತುಂಬ ಕಷ್ಟದಿಂದ ಹಲವು ಕಾಲ ಹೆಣಗಾಡಿ, ಈ ಫಲಕಶಿಲ್ಪ, ವಿಧಾನಗಳನ್ನು ಗಟ್ಟಿ ಮಾಡಿಕೊಂಡಿದ್ದರು.

ಜಲವರ್ಣ ಚಿತ್ರಗಳಲ್ಲಿ ನಿಸರ್ಗ ದೃಶ್ಯಗಳೇ ಹೆಚ್ಚು. ಅದೂ ನೀಲಗಿರಿ ಬೆಟ್ಟದ ಹಿನ್ನೆಲೆಯಲ್ಲಿ ಉದಕಮಂಡಲ, ಕೂನೂರುಗಳಲ್ಲಿ ಆರಿಸಿಕೊಂಡವು. ಈ ಪ್ರದೇಶಗಳಲ್ಲಿ ಅವರು ಸಾವಧಾನವಾಗಿ ತಂಗಿದ್ದು, ಪ್ರಕೃತಿಯ ರೂಪುರೇಷೆಗಳನ್ನು ಚೆನ್ನಾಗಿ ಗಮನಿಸಿ, ಸೂರ್ಯನು ಹುಟ್ಟುವಾಗ ಮುಳುಗುವಾಗ ಪ್ರಕೃತಿಯಲ್ಲಿ ಒದಗುವ ಮಾರ್ಪಾಟುಗಳನ್ನು ಅರಿತುಕೊಂಡು ಅಂಥ ನಿಸರ್ಗದಲ್ಲಿ ಸೇರಿಬಂದ ಮನೆಯ ಸೂರು, ಗಿಡಮರಗಳ ಸಾಲು, ಬೀದಿ ಮೊದಲಾದುವನ್ನು ಚಿತ್ರಿಸಿದ್ದಾರೆ. ಒಂದೊಂದು ಚಿತ್ರವೂ ಪ್ರಕೃತಿಯ ಒಂದೊಂದು ಮನೋಧರ್ಮವನ್ನು, ಒಂದೊಂದು ಪ್ರಕಾರವನ್ನು ಎತ್ತಿತೋರಿಸುತ್ತದೆ. ನಿಸರ್ಗಕ್ಕೆ ಈ ಚಿತ್ರಗಳು ಚಾಚೂ ತಪ್ಪದೆ ಒಪ್ಪವಾಗಿದ್ದರೂ ಈ ಚಿತ್ರಗಳಲ್ಲಿ ಏನೋ ಒಂದು ಅಲೌಕಿಕ ಕಳೆ ತುಂಬಿ ಬಂದಿದೆ. ಅವು ವಾಸ್ತವಿಕವೂ ಹೌದು, ಆಧ್ಯಾತ್ಮಿಕವೂ ಹೌದು, ಎನ್ನುವಂತಿವೆ.

ಅವರೇ ಮಾಡಿದ ವೀಣೆ

ವೀಣೆ ಅವರಿಗೆ ತುಂಬ ಪ್ರಿಯವಾದ ವಾದ್ಯವಷ್ಟೇ. ಆದರೆ ಸಾಮಾನ್ಯವಾಗಿ ಜನ ನುಡಿಸುವ ವೀಣೆ ಸಂಪ್ರದಾಯ ಶುದ್ಧವಾದುದಲ್ಲವೆಂದು ಅವರ ಹಠ. ಶಾಸ್ತ್ರದಲ್ಲಿ ಹೇಳಿರುವಂತೆ ತಾವೇ ಒಂದು ವೀಣೆಯನ್ನು ಸಿದ್ಧಪಡಿಸಿದರು. ಇದು ಸಾಮಾನ್ಯವಾಗಿ ಕಾಣಸಿಗುವ ವೀಣೆಗಿಂತ ದೊಡ್ಡದು, ಉದ್ದವಾದುದು. ಮೀಟಿದರೆ ಶುದ್ಧವಾದ ನಾದಸಂಪತ್ತಿನಿಂದ ಮೊರೆಯುತ್ತದೆ. ಈ ವೀಣೆಯನ್ನೂ ಆರ್ಟ್ ಗ್ಯಾಲರಿಯಲ್ಲಿಟ್ಟಿದ್ದಾರೆ. ಇದಕ್ಕೆ ವಿವರಣೆಗಳನ್ನೂ ಅವರು ಸಿದ್ಧಪಡಿಸಿದ್ದರು, ಇದೂ ಆ ವೀಣೆಯೊಂದಿಗಿದೆ. ಶ್ರುತಿಶುದ್ಧವಾಗಿ, ನಾದಸಂಪತ್ತಿನಿಂದ ತುಂಬಿದ ಈ ವಾದ್ಯ ನೋಡಲೂ ಸರ್ವಾಂಗಸುಂದರ ವಾಗಿದೆ. ವೀಣೆಯನ್ನು ಮಾಡುವಾಗ ಮರವನ್ನು ಆರಿಸಿ ಕೊಳ್ಳುವುದು, ಅದನ್ನು ಹದಮಾಡುವುದು, ಕುಂಭವನ್ನು ತೋಡುವುದು, ದೋಣಿಯನ್ನು ಕಡೆಯುವುದು, ಯಾಳಿಯ ಮುಖವನ್ನು ಮಾಡುವುದು, ಕುದುರೆಯನ್ನು ನಿಲ್ಲಿಸುವುದು ಹೀಗೆ ಒಂದೊಂದು ಹಂತದಲ್ಲಿಯೂ ಅವರ ಕೈವಾಡ, ಮೇಲ್ವಿಚಾರಣೆ ಇರುತ್ತಿದ್ದುವು. ಅವರು ಯಾವುದನ್ನು ಮಾಡಿದರೂ ಹೀಗೆಯೇ ಅಚ್ಚುಕಟ್ಟಾಗಿ ಮಾಡುವರು; ಎಚ್ಚರದಿಂದ ಮಾಡುವರು.

ಕಲಾತಪಸ್ವಿ

ವೆಂಕಟಪ್ಪನವರನ್ನು ತಿಳಿದವರು ‘ಕಲಾತಪಸ್ಸಿ’ ಯೆಂದು ಕರೆದರು. ಇದು ಸರಿಯಾದ ಹೆಸರು. ಅವರು ಬಾಳಿದ ರೀತಿಗೂ ತಳೆದ ನಿಲುವಿಗೂ ಒಪ್ಪುವಂಥದು. ಅವರ ಬದುಕಿನಲ್ಲಿ ಕಲೆಯೊಂದನ್ನು ಬಿಟ್ಟರೆ ಅವರಿಗೆ ಬೇರೆ ಯಾವ ಆಸಕ್ತಿಯೂ ಇರಲಿಲ್ಲ. ಆದರೆ ಕಲೆಯನ್ನು ಅವರು ಲೌಕಿಕ ವ್ಯವಹಾರಕ್ಕೆ ದಾರಿಯೆಂದಾಗಲೀ ಹಣ ಸಂಪಾದಿಸುವುದಕ್ಕೆ ಸಾಧನವೆಂದಾಗಲೀ ಎಂದೂ ಎಣಿಸಿ ರಲಿಲ್ಲ.  ದಿಟವಾಗಿ ಅವರು ಹಣಕ್ಕಾಗಿ ಅಥವಾ ಹೆಸರಿಗಾಗಿ ಎಂದೂ ಏನನ್ನೂ ಮಾಡಿದವರಲ್ಲ. ಕೆಲವು ಆದರ್ಶಗಳನ್ನು ತಮ್ಮೆದುರು ಇರಿಸಿಕೊಂಡು ಅವನ್ನು ಮುಟ್ಟಲು ಬದುಕಿನುದ್ದಕ್ಕೂ ಶ್ರಮಿಸಿದರು; ತಮಗೆ ತಾವೇ ಹಲವು ಬಗೆಯ ಕಟ್ಟುಪಾಡುಗಳನ್ನು ಏರ್ಪಾಟು ಮಾಡಿಕೊಂಡು ತಾವು ದಾರಿ ತಪ್ಪದಂತೆ ನೊಡಿಕೊಂಡರು. ಅವರು ಅನುಸರಿಸುತ್ತಿದ್ದ ನಿಯಮಗಳು ತುಂಬ ಕಠಿಣವಾದುವು ಎಂದು ಜನರು ಭಾವಿಸಿದ್ದರು. ಆದರೆ ಬೇಡವಾದ ಜನರನ್ನು ದೂರವಿರಿಸಲು ಅದೊಂದೇ ಮಾರ್ಗ ಎಂದು ಅವರ ನಂಬಿಕೆ. ನಿಯಮವನ್ನರಿಯದ ಜನ, ಬೇಕಾದಂತೆ ಬಾಳುವ ಕೀಳುಮಟ್ಟದ ಜನ ತಮ್ಮ ನಿಯಮಗಳಿಗೆ ಅಂಜಿ ತಮ್ಮ ಬಳಿ ಬರುವುದಿಲ್ಲ, ತಮ್ಮ ವೇಳೆಯನ್ನು ಹಾಳು ಮಾಡುವುದಿಲ್ಲ, ತಮ್ಮ ಕೆಲಸಕ್ಕೆ ಕಂಟಕರಾಗುವುದಿಲ್ಲ ಎಂದು ವೆಂಕಟಪ್ಪನವರು ಹೇಳುತ್ತಿದ್ದರು.

ಕೆಲವೊಮ್ಮೆ ಈ ನಿಯಮಗಳನ್ನು ಅತಿರೇಕ ವೆಂಬಂತೆ ಅನುಸರಿಸುತ್ತಿದ್ದರು. ಒಂದು ನಿದರ್ಶನ ಸ್ವಾರಸ್ಯ ವಾದುದು.  ಇವರು ‘ಅಂಗುಲಿಪ್ರದಾನ’ ಎಂಬ ಪ್ಲಾಸ್ಟರ್ ಶಿಲ್ಪಫಲಕವೊಂದನ್ನು ಸಿದ್ಧಪಡಿಸಿದ್ದರು. ರಾಮನ ಉಂಗುರ ವನ್ನು ಅವನ ಬಂಟ ಹನುಮಂತನು ಸೀತಾದೇವಿಗೆ ಅಶೋಕವನದಲ್ಲಿ ಕೊಡುತ್ತಿರುವ ಪ್ರಸಂಗ ಇದರಲ್ಲಿ ಚಿತ್ರಿತವಾಗಿದ್ದಿತು. ಅದರ ಛಾಯಾಚಿತ್ರವೊಂದನ್ನು ಬಂಗಾಳಿಯ ‘ಉದ್ಭೋಧನ’ ಎಂಬ ಪತ್ರಿಕೆ ತನ್ನ ಒಂದು ಸಂಚಿಕೆಯಲ್ಲಿ ಅಚ್ಚು ಮಾಡಿತು. ಅಚ್ಚಾದ ಮೇಲೆ ಈ ಚಿತ್ರ ತಿರುಗುಮುರುಗಾಗಿ ಕಾಣುತ್ತಿತ್ತು. ಹನುಮಂತನು ಉಂಗುರ ವನ್ನು ಎಡಗೈಯಿಂದ ಕೊಡುತ್ತಿರುವಂತೆ, ಸೀತಾದೇವಿ ಅದನ್ನು ಎಡಗೈಯಿಂದಲೇ ತೆಗೆದು ಕೊಳ್ಳುತ್ತಿರುವಂತೆ ಕಾಣುತ್ತಿತ್ತು. ವೆಂಕಟಪ್ಪನವರ ಗಮನಕ್ಕೆ ಈ ಪ್ರಕಟಣೆ ಬಂದೊಡನೆ ಸಿಟ್ಟಾದರು. ‘ಇದೇನು ಈ ಪತ್ರಿಕೆಯ ಸಂಪಾದಕರಿಗೆ ಸಭ್ಯತೆಯ ಗಂಧವೇ ಇಲ್ಲವಲ್ಲ! ಚಿತ್ರವನ್ನು ಪ್ರಕಟಣೆಗೆ ಬಯಲುಮಾಡುವ ಮೊದಲು ಅದು ಕಲಾವಿದ ನಿರೂಪಿಸಿದಂತೆಯೇ ಇದೆಯೋ ಹೇಗೆ ಎಂಬುದನ್ನು ಗಮನಿಸಬೇಡವೆ? ಯಾರಾದರೂ ಎಡಗೈಯಿಂದ ರಾಮನ ಉಂಗುರವನ್ನು ಕೊಡುವುದುಂಟೆ ಸೀತಾದೇವಿಯಾದರೂ ಅದನ್ನು ಎಡಗೈಯಿಂದ ತೆಗೆದುಕೊಳ್ಳುವಳೇ? ಭಾರತೀಯ ಸಭ್ಯತೆಯಲ್ಲಿ ಇದು ಅನುಚಿತವೆಂಬುದು ಸಂಪಾದಕರಿಗೆ ತಿಳಿಯದೆ?’  ಹೀಗೆ ದುಗುಡದಿಂದ ಸಂಪಾದಕರಿಗೆ ಪತ್ರ ವೊಂದನ್ನು ಬರೆದರು, ‘ನಿಮ್ಮ ತಪ್ಪಿತವನ್ನು ತಿದ್ದಿಕೊಳ್ಳಿ, ಓದುಗರ ಕ್ಷಮೆ ಬೇಡಿ’ ಎಂದು ಸೂಚಿಸಿದರು.

ಸಂಪಾದಕರು ವೆಂಕಟಪ್ಪನವರ ಪತ್ರವನ್ನು ಗಣನೆಗೆ ತಂದುಕೊಳ್ಳಲಿಲ್ಲ. ಮುಂದಿನ ಸಂಚಿಕೆಯಲ್ಲಿ ತಪ್ಪನ್ನು ಒಪ್ಪಿಕೊಳ್ಳಲೂ ಇಲ್ಲ, ಸರಿಯಾದ ಚಿತ್ರವನ್ನು ಅಚ್ಚು ಮಾಡಲೂ ಇಲ್ಲ. ವೆಂಕಟಪ್ಪನವರು ಇನ್ನೂ ಸಿಟ್ಟಿಗೆದ್ದು, ಇದರಿಂದ ಕಲಾವಿದನಿಗೆ ಅಪಮಾನವಾಗಿದೆ ಯೆಂದೂ ತಮ್ಮ ಚಿತ್ರವನ್ನು ಜನರು ಮೂದಲಿಸುವಂತೆ ಅಚ್ಚು ಮಾಡಿದ್ದಾರೆಂದೂ ಪತ್ರಿಕೆಯ ಸಂಪಾದಕರ ಮೇಲೆ ನ್ಯಾಯಾಲಯದಲ್ಲಿ ತಕರಾರು ಹೂಡಿದರು. ವಿಚಾರಣೆ ನಡೆದು ನ್ಯಾಯಾಲಯವು ವೆಂಕಟಪ್ಪನವರ ವಾದವನ್ನು ಎತ್ತಿಹಿಡಿದು, ಅವರಿಗಾದ ನಷ್ಟವನ್ನು ತುಂಬಿಕೊಡಲು, ಎಂದರೆ ಎರಡು ಸಾವಿರದ ಐನೂರು ರೂಪಾಯಿಗಳನ್ನು ವೆಂಕಟಪ್ಪನವರಿಗೆ ಕೊಡಲು, ಸಂಪಾದಕರಿಗೆ ಅಪ್ಪಣೆ ಮಾಡಿತು. ಪತ್ರಿಕೆಯ ಸಂಪಾದಕರು, ಅಷ್ಟು ಹಣವನ್ನು ಕೊಡಲು ಬಂದಾಗ, ವೆಂಕಟಪ್ಪನವರು, ‘ನನಗೆ ನಿಮ್ಮ ಹಣಬೇಡ; ಹಣಕ್ಕಾಗಿ ನಾನು ವ್ಯವಹಾರ ತೆಗೆಯಲಿಲ್ಲ. ನ್ಯಾಯ ನನ್ನ ಕಡೆ ಇದೆಯೆಂದೂ, ತಪ್ಪು ನಿಮ್ಮದೆಂದೂ ನಿಮಗೆ ತಿಳಿದರೆ ಸಾಕು’ ಎಂದುಬಿಟ್ಟರು.

ವೆಂಕಟಪ್ಪನವರ ನ್ಯಾಯನಿಷ್ಠುರತೆಯ ನಿದರ್ಶನ ಇದು. ತಪ್ಪೆಂದು ತಮಗೆ ಅನಿಸಿದುದನ್ನು ಅದರಿಂದ ತಮಗೆ ಎಷ್ಟೇ ತೊಂದರೆಯಾದರೂ ಮಾಡರು; ತಮ್ಮ ವಿಚಾರವಾಗಿ ತಪ್ಪನ್ನು ಬೇರೆಯವರಲ್ಲಿ ಸಹಿಸರು. ತಾವಾಗಿ ಯಾರನ್ನೂ ಟೀಕಿಸರು, ನಿಂದಿಸರು; ‘ಅವರ ಪಾಡು, ನನಗೇಕೆ?’ ಎಂದು ಸುಮ್ಮನಿರುವರು. ಆದರೆ ತಮಗೆ ಸಂಬಂಧಿಸಿದಂತೆ ಯಾರಾದರೂ ಸರಿಯಾಗಿ ನಡೆದು ಕೊಳ್ಳದಿದ್ದರೆ ಸುಮ್ಮನೆ  ಬಿಡುವವರಲ್ಲ ಈ ಸಂದರ್ಭದಲ್ಲಿ ಇವರು ರಾಜರು, ಇವರು ಶ್ರೀಮಂತರು, ಇವರು ಅಧಿಕಾರಿ ಗಳು, ಇವರು ಸಾಮಾನ್ಯರು ಎಂಬ ಭೇದವೇ ಇಲ್ಲ; ಯಾರಾದರೂ ಇವರಿಗೆ ಸಮನೇ! ಅರಮನೆಯ ಮೇಲೇ ತಕರಾರು ಹೂಡಿದುದನ್ನು ಹಿಂದೆ ಹೇಳಿದೆ.

ವೈಯಕ್ತಿಕವಾಗಿ ಅವರು ಯಾರಿಂದಲೂ ಏನನ್ನೂ ಬಯಸುತ್ತಿರಲಿಲ್ಲವಾದುದರಿಂದ, ತಮ್ಮ ವಿಚಾರ ವಾಗಿ ಏನಾದರೂ ಅಪಚಾರ ನಡೆದರೆ ಅದು ಕಲೆಗೆ ಅಪಚಾರವೆಂದೇ ಅವರು ಬಗೆಯುತ್ತಿದ್ದರು.  ಅದನ್ನು ಅವರು ಎಷ್ಟು ಮಾತ್ರವೂ ಸಹಿಸುತ್ತಿರಲಿಲ್ಲ. ಕಲೆ ಅವರ ಪಾಲಿನ ದೇವತೆ; ಅವರ ಸರ್ವಸ್ವ. ತಾವು ಬದುಕಿನುದ್ದಕ್ಕೂ ಕಲೆಯ ವಿದ್ಯಾರ್ಥಿ, ಕಲಾಸಾಧಕ ಎಂದೇ ನಂಬಿದ್ದರು. ಅವರು ತಮ್ಮನ್ನು ತಾವು ಪತ್ರವ್ಯವಹಾರಗಳಲ್ಲಿ ಕರೆದು ಕೊಳ್ಳುತ್ತಿದ್ದುದೂ ‘ಆರ್ಟ್ ಸ್ಟೂಡೆಂಟ್’ ಎಂದೇ.

ಕಲೆಯನ್ನು ಯಾವ ಅಡ್ಡಿ ಆತಂಕವೂ ಇಲ್ಲದಂತೆ ಅಭ್ಯಾಸ ಮಾಡಲೆಂದೇ ಅವರು ಒಂಟಿಯಾಗಿ ಉಳಿದರು; ನೆಂಟರನ್ನೂ ದೂರ ಮಾಡಿದರು; ಜನರನ್ನು ಹತ್ತಿರ ಸೇರಿಸಲಿಲ್ಲ. ತಪಸ್ಸಿಗೆ ಬೇಕಾದ ಏಕಾಂತವಾಸ, ಏಕಾಗ್ರಚಿತ್ತ, ಎಡೆಬಿಡದ ಅಭ್ಯಾಸ ಇವನ್ನು ಅವರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡರು. ಹಾಗೆಂದೇ ಅವರಿಗೆ ‘ಕಲಾತಪಸ್ವಿ’  ಎನ್ನುವುದು ಸಾರ್ಥಕವಾದ ಹೆಸರಾಯಿತು.

ಶಿಕ್ಷಣದ ಕಷ್ಟ

ಕಲೆಯನ್ನು ಅವರು ತಪಸ್ಸಿನಂತೆ ಬಗೆದುದರಿಂದ ಕಲೆಯ ಅಭ್ಯಾಸ ಸಡಿಲವಾಗಿರಬಾರದು, ಕ್ರಮವಿಲ್ಲದಿರ ಬಾರದು ಎಂದು ಅವರ ಹಠ. ಕಲೆಯನ್ನು ಕಲಿಯುವುದು ಕಷ್ಟವೆಂದೂ, ನಿಷ್ಠೆಯಿಲ್ಲದಿದ್ದರೆ ಅದು ದಕ್ಕುವುದಿಲ್ಲವೆಂದೂ ಅವರು ಮತ್ತೆ ಮತ್ತೆ ಹೇಳುತ್ತಿದ್ದರು. ಸಂಪ್ರದಾಯದಲ್ಲಿ ಶ್ರದ್ಧೆಯಿಲ್ಲದಿದ್ದರೆ ಕಲೆಗೆ ಅರ್ಥವಿಲ್ಲವೆಂದು ಅವರ ವಾದ.

ಅವರು ಏಕಾಂಗಿಯಾಗಿ, ನಿಷ್ಠುರರಾಗಿ ಇರುತ್ತಿದ್ದರೆಂದ ಮಾತ್ರಕ್ಕೆ ಅವರು ಕಲೆಯನ್ನು ಯಾರಿಗೂ ಕಲಿಸಬಾರದೆಂದು ನೆನೆಸಿರಲಿಲ್ಲ. ಯಾರಿಗಾದರೂ ಚಿತ್ರಕಲೆ ಯನ್ನು ಹೇಳಿಕೊಡಲು ಸಿದ್ಧರಾಗಿದ್ದರು. ದಿಟವಾಗಿ, ಅಂಥ ವಿದ್ಯಾರ್ಥಿಗಳು ಯಾರಾದರೂ ಬಂದಾರೋ ಎಂದು ಎದುರು ನೋಡುತ್ತಿದ್ದರು. ವಿದ್ಯಾರ್ಥಿಗಳಿಂದ ಅವರು ಹಣ ವನ್ನು ಬಯಸುತ್ತಿರಲಿಲ್ಲ. ಕಲೆಯನ್ನು ಕಲಿಯುವವರಿಗೆ ಮಾರಲಾರೆ ಎನ್ನುತ್ತಿದ್ದರು. ಅವರು ತೆರೆಯಬೇಕೆಂದಿದ್ದ ಕಲಾಶಾಲೆಯಲ್ಲಿ ವಿದ್ಯಾರ್ಥಿ ಯಾವ ಬಗೆಯ ಶುಲ್ಕವನ್ನೂ ತೆರಬೇಕಾದ ಅಗತ್ಯವಿಲ್ಲದಂತೆ ವ್ಯವಸ್ಥೆ ಮಾಡಿದ್ದರು. ಕಲಾಶಿಕ್ಷಣ ಉಚಿತವಾಗಿಯೇ ಇರಬೇಕು  ಎಂದು ಅವರ ತವಕ.

ಹೀಗಾದರೂ ವಿದ್ಯಾರ್ಥಿಗಳೇಕೆ ಅವರ ಸುತ್ತ ನೆರೆಯಲಿಲ್ಲ? ಅದಕ್ಕೆ ಕಾರಣ, ಅವರ ಶಿಕ್ಷಣವಿಧಾನದ ನಿಷ್ಠುರತೆ. ಯಾರಾಗಲೀ ಅವರಲ್ಲಿ ಕಲಿಯಬೇಕೆಂದರೆ ಗೆರೆ ಎಳೆಯುವುದರಿಂದ ಆರಂಭಿಸಬೇಕು, ಅವರು ಹಾಕಿದ ದಾರಿಯಲ್ಲೇ ಇಷ್ಟೂ ತಪ್ಪದೆ ಸಾಗಬೇಕು. ‘ಕಲೆಯ ಗುಟ್ಟು ಬೇಗನೆ ಕೈಗೂಡಲಿ,’ ‘ಕಲಿತದ್ದನ್ನು ಗಳಿಕೆಗೆ ಬಳಸು ವಂತಾಗಲಿ’ ಎಂದು ಮೊದಲಾಗಿ ಆಲೋಚನೆ ಮಾಡಿದರೆ ಕಲೆಯ ಸಿದ್ಧಿ ತುಂಬ ದೂರವೇ. ವಿದ್ಯಾರ್ಥಿಗಳು ಎಷ್ಟೇ ಪ್ರೌಢರಾಗಿರಲಿ, ಮೊದಲು ಎಷ್ಟೇ ಅಭ್ಯಾಸ ಮಾಡಿರಲಿ, ಕೈ ಎಷ್ಟೇ ಕುದುರಿರಲಿ, ವೆಂಕಟಪ್ಪನವರ ಬಳಿ ಬಂದರೆ ನೀಟಾಗಿ ಗೆರೆ ಎಳೆಯುವುದರಿಂದಲೇ ಶುರುಮಾಡಬೇಕು. ಅವರ ದಾರಿಯಲ್ಲಿ ಸುಲಭ, ಶೀಘ್ರ ಎಂಬ ಮಾತುಗಳಿಲ್ಲ.

ತಾವು ಕಲಿತಂತೆಯೇ, ಅಷ್ಟೇ ನಿಷ್ಠೆಯಿಂದ ಅಷ್ಟೇ ಕಷ್ಟಪಟ್ಟು, ಇತರರೂ ಕಲಿಯಲಿ ಎಂದು ಅವರ ಹಂಬಲ. ತಮ್ಮ ಬಳಿ ಬಂದು ಯಾರೂ ಕಲಿಯುವುದಿಲ್ಲವೆಂಬ ದುಗುಡವೂ ಅವರಿಗೆ ಇರಲಿಲ್ಲ. ‘ನಿಷ್ಠೆಯಾಗಲೀ ಆದರ ವಾಗಲೀ ಇಲ್ಲದ ಜನ ಕಲೆಯನ್ನು ಕಲಿಯದಿದ್ದರೆ ಯಾರಿಗೂ ನಷ್ಟವಿಲ್ಲ; ಕಲೆಯನ್ನು  ಪೋಲು ಮಾಡಲಾರೆ’ ಎಂದು ಅವರು ಸಮಾಧಾನದಿಂದಿದ್ದರು. ಕಲಿಯುವು ದಾದರೆ ಸರಿಯಾಗಿ, ಕ್ರಮಬದ್ಧವಾಗಿ, ಬೇರೆ ಯಾವ ವ್ಯಸನವೂ  ಇಲ್ಲದೆ ಕಲಿಯಬೇಕು; ಹಾಗಲ್ಲವಾದರೆ, ಕಲಿಯುವುದೇ ಬೇಡ. ಇದು ಅವರ ದೃಷ್ಟಿ.

ಅವರ ಬಳಿ ಒಬ್ಬ ವಿದ್ಯಾರ್ಥಿಯೂ ಬರಲೇ ಇಲ್ಲ ವೆಂದಲ್ಲ, ಕೆಲವರು ಬಂದು ಅವರ ದಾರಿಯಲ್ಲಿ ಸಾಗಲು ಯತ್ನಿಸಿ ಸಾಗದೆ ಕೈಬಿಟ್ಟರು.  ಮತ್ತೆ ಕೆಲವರು ಉತ್ಸಾಹ ದಿಂದ ಬಂದು ಅವರ ನಿಯಮಗಳಿಗೆ ಬೆಚ್ಚಿಬಿದ್ದು ಹಿಂದಕ್ಕೆ ಸರಿದರು. ಒಬ್ಬ ವಿದ್ಯಾರ್ಥಿ ಮಾತ್ರ ಅವರಂತೆಯೇ ನಿಷ್ಠೆ ಯಿಂದ, ನಿಯಮದಿಂದ ಕೆಲವು ವರ್ಷಗಳ ಕಾಲ ಅವರಲ್ಲಿ  ಶಿಷ್ಯವೃತ್ತಿ ಮಾಡಿದ. ಅವನು ತೆಲುಗು ದೇಶದ ರಾಮಮೋಹನ ಶಾಸ್ತ್ರಿ ಎಂಬಾತ. ಆದರೆ ಪ್ರತಿಭಾ ಶಾಲಿ ಯಾದ ಈತನು ಪ್ರಸಿದ್ಧನಾಗುತ್ತಿರುವಾಗ, ನಡು ವಯಸ್ಸಿನಲ್ಲೇ ತೀರಿಕೊಂಡ!

ಸಂತೋಷಕ್ಕಾಗಿ ವೀಣಾವಾದನ

ಚಿತ್ರಕಲೆಯನ್ನು ಕಲಿಸಲು ಅವರು ಸಿದ್ಧರಾಗಿ ದ್ದರೂ ವೀಣೆಯ ನುಡಿಸಾಣಿಕೆಯನ್ನು ಯಾರಿಗೂ ಕಲಿಸಲು ಒಪ್ಪಲಿಲ್ಲ. ವೈಣಿಕ ಶಿಖಾಮಣಿ ಶೇಷಣ್ಣನವರ ಅಚ್ಚುಮೆಚ್ಚಿನ ಶಿಷ್ಯನೆಂದ ಮೇಲೆ ಅವರ ಪ್ರೌಢಿಮೆಯ ಬಗ್ಗೆ ಹೇಳಬೇಕೆ? ಶೇಷಣ್ಣನವರು ಬದುಕಿದ್ದಾಗ ಆಗಾಗ ಕೆಲವರು ಶಿಷ್ಯರಿಗೆ ವೆಂಕಟಪ್ಪನೇ ಹೇಳಿಕೊಡಲಿ ಎಂದು ಅಪ್ಪಣೆ ಮಾಡುತ್ತಿದ್ದರು. ಅಂಥ ಸಂದರ್ಭಗಳನ್ನು ಬಿಟ್ಟರೆ ಅವರು ವೀಣಾವಾದನವನ್ನು ಯಾರಿಗೂ ಹೇಳಿಕೊಡಲಿಲ್ಲ. ಅದನ್ನು ತಮ್ಮ ಸ್ವಂತ ಸಂತೋಷಕ್ಕಾಗಿಯೇ ಮೀಸಲಾಗಿರಿಸಿ ಕೊಂಡಿದ್ದರು. ಸಭೆಗಳಲ್ಲಿಯೂ ನುಡಿಸುತ್ತಿರಲಿಲ್ಲ. ಯಾರಾದರೂ ರಸಿಕರು ತುಂಬ ಇಷ್ಟಪಟ್ಟರೆ ರಾತ್ರಿ ಊರೆಲ್ಲ ಮಲಗಿದ ಮೇಲೆ ಅವರೆದುರು ಕೆಲವು ಗಂಟೆಗಳ ಕಾಲ ನುಡಿಸುತ್ತಿದ್ದರು. ಅದನ್ನು ಕೇಳಿದವರೇ ಧನ್ಯರು ಎಂದು ಬೇರೆ ಹೇಳಬೇಕೆ? ಅಂಥ ಧನ್ಯರು ತೀರ ವಿರಳರು ಎಂದೂ ಒತ್ತಿ ಹೇಳಬೇಕಾಗಿಲ್ಲ!

ಅವರ ಆದರ್ಶ

ಒಟ್ಟಿನಲ್ಲಿ, ವೆಂಕಟಪ್ಪನವರ ಬದುಕಿನ ತಾತ್ಪರ್ಯ ವೇನು? ಕಲೆಗಾಗಿಯೇ ಮುಡಿಪಿಟ್ಟ ಬದುಕು ಅವರದ್ದು. ಚಿತ್ರ, ಶಿಲ್ಪ, ಸಂಗೀತ ಮೂರೂ ಪ್ರಕಾರಗಳಲ್ಲಿ ಅವರು ಪಡೆದಿದ್ದ ಸಿದ್ಧಿ ಯಾರನ್ನಾದರೂ ಬೆರಗು ಮಾಡುವಂಥದು. ಕಲೆಯೆಂದರೆ ಖುಷಿಗೆ ಸಾಧನ ಎಂದು ಕಲ್ಪನೆಯಿರುವ ಕಾಲದಲ್ಲಿ ಕಲೆಯೆನ್ನುವುದು ತಪಸ್ಸು ಎಂದು ತೋರಿಸಿ ಕೊಟ್ಟವರು ಅವರು. ಬಾಳುವೆಯಲ್ಲಿ ನಿಯಮ ವಿಲ್ಲದೆ ಯಾವ ಸಿದ್ಧಿಯನ್ನೂ ಪಡೆಯುವುದು ಸಾಧ್ಯವಿಲ್ಲ ಎಂದು ಅವರ ಸಂದೇಶ. ಕಾಲದ ನಿಯಮ, ಅಭ್ಯಾಸದ ನಿಯಮ, ಆಹಾರ ವಿಹಾರಗಳ ನಿಯಮ, ವ್ಯವಹಾರದ ನಿಯಮ ಎಲ್ಲವೂ ಕಲೆತರೆ ಬದುಕಿಗೆ ಗುರಿಯೊಂದು ಕಾಣಿಸಿ ಕೊಳ್ಳುತ್ತದೆ. ಹೀಗೆ ಗುರಿ ಕಾಣಿಸಿಕೊಳ್ಳದಿದ್ದರೆ ಬದುಕಿಗೆ ಅರ್ಥವೇನು?

ವೆಂಕಟಪ್ಪನವರು ಬದುಕಿದ ಬಗೆ, ಅವರು ತಮ್ಮ ವೃತ್ತಿಯಲ್ಲಿ ಗಳಿಸಿದ ಯಶಸ್ಸು, ತಮ್ಮ ಸಾಧನೆಗಳಲ್ಲಿ ಪಡೆದ ಜಯ, ತಮ್ಮ ಬಾಳಿನಿಂದ ಕಂಡುಕೊಂಡ ಸಮಾಧಾನ ಇವೆಲ್ಲಕ್ಕೂ ಅವರ ವ್ರತನಿಷ್ಠೆಯೇ ಅಡಿಗಲ್ಲು. ಯಾವುದೋ ಒಂದು ಆದರ್ಶವನ್ನು ಹಿಡಿದು ಅದಕ್ಕಾಗಿ ತಮ್ಮ ಇಡೀ ಜೀವನವನ್ನೇ ಸವೆಸಿದರು. ಜಗತ್ತಿನಲ್ಲಿ ಇಂಥ ಆದರ್ಶವೇ ಕಾಪಾಡುವುದು; ಆದರ್ಶವನ್ನು ಹಿಡಿದು ನಡೆಯುವವರೇ ಇತರರಿಗೆ ದಾರಿದೀಪವಾಗುವರು.