ಕರ್ನಾಟಕದ ಕಲಾ ಕ್ಷೇತ್ರಕ್ಕೆ ತಿಲಕಪ್ರಾಯವಾಗಿರುವ ಮೈಸೂರಿನ ಕೆ.ವೆಂಕಟಲಕ್ಷ್ಮಮ್ಮ ಪ್ರಖ್ಯಾತ ’ನಾಟ್ಯ ಸರಸ್ವತಿ’ ಎಂಬ ಬಿರುದಾಂಕಿತ ಜಟ್ಟಿ ತಾಯಮ್ಮನವರ ಶಿಷ್ಯೆ. ಸನ್ ೧೯೦೬ರಲ್ಲಿ ಜನಿಸಿದ ಈಕೆ ನಾಟ್ಯ ಶಾಸ್ತ್ರದಲ್ಲಿ ಪರಿಪೂರ್ಣತೆಯನ್ನು ಗಳಿಸಿಕೊಂಡು ದೇಶದ ಎಲ್ಲೆಡೆಯಲ್ಲೂ ಪುರಸ್ಕೃತರು.

ಸುಮಾರು ಇಪ್ಪತ್ತು ವರ್ಷಗಳ ಕಾಲ ಶಿಷ್ಯ ವೃತ್ತಿಯಲ್ಲಿ ತೊಡಗಿದ್ದ ಇವರು ಸಂಗೀತ, ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಗಳಲ್ಲಿಯೂ ಕೃಷಿ ಮಾಡಿ, ಅದರಿಂದ ತಮ್ಮ ಕಲೆಗೆ ಹೆಚ್ಚು ಮೆರುಗು ಬರುವಂತೆ ಮಾಡಿದ್ದಾರೆ. ಇವರ ಕಲಾ ಸಿದ್ದಿಗೆ ತಲೆದೂಗಿದ ಮೈಸೂರಿನ ಅರಸೊತ್ತಿಗೆ ಇವರನ್ನು ಅರಮನೆಯ ವಿದೂಷಿಯನ್ನಾಗಿ ಮಾಡಿಕೊಂಡಿತ್ತು.

ಮೈಸೂರು ಭರತನಾಟ್ಯ ಪರಂಪರೆಗೆ ಮುಕುಟ ಪ್ರಾಯವಾಗಿರುವ ಇವರ ಅಭಿನಯ ರಸಿಕರ ಹಾಗೂ ಜನಸಾಮಾನ್ಯರ ಮೆಚ್ಚುಗೆ ಪಡೆದಿದೆ. ರಾಜ್ಯ ಸರ್ಕಾರ ಹಾಗೂ ರಾಜ್ಯ ಸಂಗೀತ ನೃತ್ಯ ಅಕಾಡೆಮಿಗಳಲ್ಲದೇ, ಕೇಂದ್ರ, ಸಂಗೀತ ನಾಟಕ ಅಕಾಡೆಮಿಯಿಂದಲೂ ಪುರಸ್ಕೃತರಾಗಿದ್ದಾರೆ. ಅಲ್ಲದೇ ರಾಷ್ಟ್ರದ ಉನ್ನತ ಗೌರವವಾದ ’ಪದ್ಮಭೂಷಣ’ ಪ್ರಶಸ್ತಿಯೂ ಇವರಿಗೆ ಸಂದಿದೆ.

ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟೋರೇಟ್ ಪದವಿಯನ್ನು ಸಂಪಾದಿಸಿರುವ ವೆಂಕಟಲಕ್ಷ್ಮಮ್ಮ ನವರ ಶಿಷ್ಯವೃಂದ ಅಪಾರ. ವಿಶ್ಯವಿದ್ಯಾನಿಲಯದ ಸಂಗೀತ-ನೃತ್ಯ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ದುಡಿದು ಆ ಭಾಗದ ಅಡಿಪಾಯಕ್ಕೂ ಕಾರಣರಾದರು.

ಬೆಂಗಳೂರು ಗಾಯನ ಸಮಾಜದ ವಾರ್ಷಿಕ ಸಮಾರಂಭ ಒಂದರಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ನೃತ್ಯ ಕಲಾವಿದರಲ್ಲಿ ಮೊದಲಿಗರಾದ ವೆಂಕಟಲಕ್ಷ್ಮಮ್ಮನವರಿಗೆ ರಾಜ್ಯ ಸಂಗೀತ -ನಾಟಕ ಅಕೆಡೆಮಿಯು ೧೯೬೧-೬೨ನೇ ಸಾಲಿನ ಪ್ರಶಸ್ತಿಯನ್ನಿತ್ತು ಗೌರವಿಸಿದೆ.