ನನಗೆ ದೊರೆತಿರುವ ದೊಡ್ಡ ಅಧಿಕಾರ, ಹೆಚ್ಚಿನ ಯಶಸ್ಸು ಇವಕ್ಕೆ ಕಾರಣರಾದವರು ನನ್ನ ಅಣ್ಣ ಅವರ ಪ್ರೀತಿ, ಪ್ರೋತ್ಸಾಹ, ತ್ಯಾಗ ಇವುಗಳ ಬೆಂಬಲ ಇಲ್ಲದೆ ಇದ್ದಲ್ಲಿ ನಾನು ಇಂದು ಈ ಉನ್ನತ ಸ್ಥಿತಿಯಲ್ಲಿ ಇರುತ್ತಿರಲಿಲ್ಲ ’ ಎಂದು ತಮ್ಮ ಅಣ್ಣನನ್ನು ಮೇಲಿಂದ ಮೇಲೆ ನೆನಪಿಗೆ ತಂದುಕೊಂಡು, ಅವರಿಗೆ ತಮ್ಮ ಗೌರವ, ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದರು ಸರ್.ಕೆ. ಶೇಷಾದ್ರಿ ಅಯ್ಯರ್

ಸುಮಾರು ಹದಿನೆಂಟು ವರ್ಷಗಳ ಕಾಲ ಮೈಸೂರು ಸಂಸ್ಥಾನದ ದಿವಾನರಾಗಿ ದಕ್ಷತೆಯಿಂದ ರಾಜ್ಯಾಡಳಿತ ನಡೆಸಿದವರು ಶೇಷಾದ್ರಿ ಅಯ್ಯರ್; ಅಷ್ಟು ಮಾತ್ರವಲ್ಲ, ಉತ್ತಮ ಮಟ್ಟದ ರಾಜ್ಯ ವ್ಯವಹಾರ ನಿಪುಣ ಎಂಬ ಕೀರ್ತಿಯೂ ಅವರದ್ದಾಗಿತ್ತು.

ಮನೆತನ

ಶೇಷಾದ್ರಿ ಅಯ್ಯರ್ ಅವರ ವಂಶದ ಹಿರಿಯರು ಮೊದಲಿಗೆ ವಾಸಮಾಡುತ್ತಾ ಇದ್ದುದು ಇಂದಿನ ತಮಿಳು ನಾಡಿನ ತಂಜಾವೂರು ಜಿಲ್ಲೆಗೆ ಸೇರಿದ ಗಣಪತಿ ಅಗ್ರಹಾರ ಎಂಬ ಹಳ್ಳಿಯಲ್ಲಿ. ಈ ವಂಶದ ಗೌರೀ ಶೇಷಾದ್ರಿ ಅಯ್ಯರ್ ಎಂಬುವರು ಈಗ್ಗೆ ಸುಮಾರು ಇನ್ನೂರು ವರ್ಷಗಳ ಹಿಂದೆ ಎಂದರೆ ೧೭೮೪ರಲ್ಲಿ ತಂಜಾವೂರನ್ನು ಬಿಟ್ಟು ಇಂದಿನ ಕೇರಳ ರಾಜ್ಯಕ್ಕೆ ಸೇರಿದ ಪಾಲಘಾಟ್ ನ ಸಮೀಪದಲ್ಲಿರುವ ಕುಮಾರಪುರಂಗೆ ಬಂದು ನೆಲೆಸಿದರು. ಗೌರೀ ಶೇಷಾದ್ರಿ ಅಯ್ಯರ್ ಅವರು ದಿವಾನ್ ಶೇಷಾದ್ರಿ ಅಯ್ಯರ್ ಅವರಿಂದ ಮೂರನೆಯ ತಲೆಯವರು.

ಶೇಷಾದ್ರಿ ಅಯ್ಯರ್ ಅವರ ತಂದೆ ಅನಂತ ಕೃಷ್ಣ ಅಯ್ಯರ್. ಇವರನ್ನು ಕೃಷ್ಣ ಅಯ್ಯರ್ ಎಂದು ಕರೆಯುವ ರೂಢಿಯೂ ಇತ್ತು. ಇವರು ಕುಮಾರಪುರಂನಿಂದ ಕಲ್ಲೀಕೋಟೆಗೆ ಸ್ಥಳಾಂತರ ಮಾಡಿದರು. ಅಲ್ಲಿನ ನ್ಯಾಯಸ್ಥಾನದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು. ಇವರ ಮೊದಲನೆಯ ಹೆಂಡತಿ ಅನಂತ ನಾರಾಯಣಿ. ೧೮೨೬ರ ಸುಮಾರಿನಲ್ಲಿ ಈಕೆಗೆ ಒಬ್ಬ ಗಂಡು ಮಗ ಹುಟ್ಟಿದ; ಹೆಸರು ವೆಂಕಟ ಸುಬ್ರಹ್ಮಣ್ಯ ಅಯ್ಯರ್. ಈತನ ತಾಯಿ ತೀರಿಕೊಂಡ ಮೇಲೆ ಅನಂತಕೃಷ್ಣ ಅಯ್ಯರ್ ವೆಂಕಟಲಕ್ಷ್ಮೀ ಎಂಬಾಕೆಯನ್ನು ಮದುವೆಯಾದರು. ಇವರಿಬ್ಬರ ಮಗನೇ ಶೇಷಾದ್ರಿ ಅಯ್ಯರ್ – ಜನನ ೧೮೪೫ರ ಜೂನ್ ಒಂದರಂದು, ಕಲ್ಲೀಕೋಟೆಯಲ್ಲಿ.

ತಂದೆಯ ಸ್ಥಾನದಲ್ಲಿ ಅಣ್ಣ

ಶೇಷಾದ್ರಿ ಹುಟ್ಟಿದ ಮೇಲೆ ಅವರ ತಂದೆ ಬಹುಕಾಲ ಬದುಕಲಿಲ್ಲ. ಏಳೆಂಟು ತಿಂಗಳು ಕಳೆಯುವ ಹೊತ್ತಿಗೆ, ೧೮೪೬ರ ಜನವರಿ ತಿಂಗಳಿನಲ್ಲಿ ತೀರಿಕೊಂಡರು. ತಮ್ಮ ವಕೀಲ ಕೆಲಸದ ಸಂಬಂಧದಲ್ಲಿ ಮದರಾಸಿಗೆ ಹೋಗಿದ್ದಾಗ. ಆಗ ಶೇಷಾದ್ರಿಯ ಅಣ್ಣ ವೆಂಕಟ ಸುಬ್ರಹ್ಮಣ್ಯನ ವಯಸ್ಸು ಇಪ್ಪತ್ತು ವರ್ಷ; ಶೇಷಾದ್ರಿಯ ತಾಯಿಯ ವಯಸ್ಸು ಹದಿನೆಂಟು ವರ್ಷ ಮಾತ್ರ. ಅನಂತ ಕೃಷ್ಣ ಅಯ್ಯರ್ ಅವರ ಸಾವಿನಿಂದ ಈ ಸಾಮಾನ್ಯ ವರ್ಗದ ಕುಟುಂಬ ತುಂಬ ಕಷ್ಟಕ್ಕೆ ಸಿಕ್ಕಿತು. ತನ್ನ ಬಲತಾಯಿಯನ್ನೂ ಆಕೆಯ ಎಳೆಯ ಮಗುವನ್ನೂ ಕಾಪಾಡುವ ಹೊಣೆ ತರುಣ ವೆಂಕಟಸುಬ್ರಹ್ಮಣ್ಯ ಅಯ್ಯರ್ ಮೇಲೆ ಬಿತ್ತು. ಆತ ಧೈರ್ಯದಿಂದ  ಈ ಹೊಣೆಯನ್ನು ಹೊತ್ತ.

ಪುಟ್ಟ ಹುಡುಗ ಶೇಷಾದ್ರಿ ಅಯ್ಯರ್ ಅಣ್ಣನೊಡನೆ

ಶೇಷಾದ್ರಿ ಅಯ್ಯರ್ ಗೆ ನಾಲ್ಕು ವರ್ಷ ವಯಸ್ಸಾಗಿದ್ದಾಗ ವೆಂಕಟ ಸುಬ್ರಹ್ಮಣ್ಯ ಅಯ್ಯರ್ ಗೆ ಕಲ್ಲೀಕೋಟೆಯ ಮುನ್ ಸೀಫ್ ಕೋರ್ಟಿನಿಂದ ಕೊಚ್ಚಿಯ ದಂಡಿನ ಪ್ರದೇಶದಲ್ಲಿದ್ದ ಸಬ್ ಕಮೀಷನರ್ ಕೋರ್ಟಿಗೆ ವರ್ಗವಾಯಿತು.

ಪ್ರತಿಭಾವಂತ ವಿದ್ಯಾರ್ಥಿ
ಹೀಗಾಗಿ ಶೇಷಾದ್ರಿ ಅಯ್ಯರ್ ಅವರ ವಿದ್ಯಾಭ್ಯಾಸ ಆರಂಭವಾದದ್ದು ಕೊಚ್ಚಿಯ ದಂಡಿನ ಪ್ರದೇಶದಲ್ಲಿ; ಪಂಡಿತರೊಬ್ಬರು ಮನೆಯ ಜಗಲಿಯ ಮೇಲೆ ನಡೆಸುತ್ತಿದ್ದ ಪಾಠಶಾಲೆಯಲ್ಲಿ. ಅಲ್ಲಿ ಅವರು ತಮಿಳು ಸಂಸ್ಕೃತಗಳನ್ನು  ಕಲಿತರು. ವೇದಾಧ್ಯಯನ ಮಾಡಿದರು. ಅವರ ಇಂಗ್ಲಿಷ್ ವಿದ್ಯಾಭ್ಯಾಸ ಆರಂಭವಾದದ್ದು ೧೮೫೭ರಲ್ಲಿ ಕೊಚ್ಚಿಯ ದಂಡಿನ ಪ್ರದೇಶದಲ್ಲೇ ಇದ್ದ ಫ್ರೀಚರ್ಚ್ ಮಿಷನ್ ಇಂಗ್ಲಿಷ್ ಸ್ಕೂಲಿನಲ್ಲಿ; ಮಾರನೆಯ ವರ್ಷ ಅವರು ಕಲ್ಲೀಕೋಟೆಯ ಪ್ರೊವಿನ್ಷಿಯಲ್ ಪ್ರಾಂತೀಯ ವಿದ್ಯಾಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು.

ಶೇಷಾದ್ರಿ ಅಯ್ಯರ್ ಅವರ ಚುರುಕು ಬುದ್ಧಿ ಈ ಶಾಲೆಯ ಇಂಗ್ಲಿಷ್ ಅಧ್ಯಾಪಕರಾಗಿದ್ದ ಜಾನ್, ಹೊವೆಲ್ ಮತ್ತು ದಾಮೋದರಂ ಪಿಳ್ಳೈ, ಇವರನ್ನು ವಿಶೇಷವಾಗಿ ಆಕರ್ಷಿಸಿತು. ಇವರೂ ತರುಣ ಶೇಷಾದ್ರಿಯನ್ನು ನಾನಾ ವಿಧವಾಗಿ ಪ್ರೋತ್ಸಾಹಿಸಿದರು. ಶೇಷಾದ್ರಿ ಕೂಡ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಪ್ರತಿ ತರಗತಿಯಲ್ಲೂ  ಮೊದಲಿಗನಾಗಿ ಉತ್ತೀರ್ಣನಾದ, ಪ್ರಶಸ್ತಿಗಳನ್ನು ಪಡೆದ. ೧೮೬೩ರಲ್ಲಿ, ಅಂದರೆ ಹದಿನೆಂಟನೆಯ ವಯಸ್ಸಿನಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಇಡೀ ಮದರಾಸು ಪ್ರಾಂತಕ್ಕೇ ಮೊದಲನೆಯವನಾಗಿ ಉತ್ತೀರ್ಣನಾದ.

ತಮ್ಮ ಸುಖ-ದುಃಖಗಳನ್ನು ಲಕ್ಷಿಸದೆ, ಬಾಲಕ ಶೇಷಾದ್ರಿಯನ್ನು ಮುಂದಕ್ಕೆ ತರಬೇಕೆಂದು ಶ್ರಮಿಸುತ್ತಿದ್ದ ಅವರ ತಾಯಿ ಮತ್ತು ಅಣ್ಣ, ಇವರಿಗೆ ಶೇಷಾದ್ರಿಯ ಈ ವಿಜಯ ತುಂಬ ಸಂತೋಷವನ್ನುಂಟು ಮಾಡಿತು. ಅವನಿಗೆ ಕಾಲೇಜು ವಿದ್ಯಾಭ್ಯಾಸ ಕೊಡಿಸಬೇಕೆಂಬ ಆಸೆ ಅವರಲ್ಲಿ ಪ್ರಬಲವಾಯಿತು. ಹಳ್ಳಿಗಾಡಿನಲ್ಲಿದ್ದ ಸಾಮಾನ್ಯವರ್ಗದ ಕುಟುಂಬದವರು. ತಮ್ಮ ಮಕ್ಕಳಿಗೆ ಕಾಲೇಜು ವಿದ್ಯಾಭ್ಯಾಸ ಮಾಡಿಸುವುದು ಆಗಿನ ಕಾಲಕ್ಕೆ ದೊಡ್ಡ ಸಾಹಸವೇ ಆಗಿತ್ತೆನ್ನಬೇಕು. ಏಕೆಂದರೆ ಭಾರತದಲ್ಲಿ ಆಧುನಿಕ ವಿಶ್ವವಿದ್ಯಾನಿಲಯಗಳು ಸ್ಥಾಪಿತವಾಗಿ ಆ ಹೊತ್ತಿಗೆ ಆರೇ ಆರು ವರ್ಷಗಳಾಗಿದ್ದವು. ಕಾಲೇಜುಗಳು ಇದ್ದುದು ಮದರಾಸು, ಮುಂಬಯಿ, ಕಲ್ಕತ್ತಗಳಂತಹ ಮಹಾನಗರಗಳಲ್ಲಿ ಮಾತ್ರ. ತಮ್ಮ ಮಕ್ಕಳನ್ನು ಅಷ್ಟು ದೂರದ ಊರುಗಳಿಗೆ ಕಳುಹಿಸಿ, ಅಲ್ಲಿ ಅವರ ಖರ್ಚು ವೆಚ್ಚಗಳನ್ನು ನಿರ್ವಹಿಸುವುದು ಸಾಮಾನ್ಯ ಜನರಿಗೆ ಅಸಾಧ್ಯವೇ ಆಗಿತ್ತು. ಶೇಷಾದ್ರಿಯ ಕುಟುಂಬದ ಸ್ಥಿತಿಯೂ ಅಷ್ಟೇ.

ಮತ್ತೆ ಮೊದಲನೆಯ ಸ್ಥಾನ

ಹೇಗಾದರೂ ಮಾಡಿ ಶೇಷಾದ್ರಿಯನ್ನು ಮುಂದಕ್ಕೆ ಓದಿಸಲೇಬೇಕೆಂಬ ಅವನ ತಾಯಿ ಮತ್ತು ಅಣ್ಣ ಯೋಚಿಸುತ್ತಿರುವಾಗ,  ಅವರು ತಮ್ಮ ಇಚ್ಛೆಯನ್ನು ನೆರವೇರಿಸಿಕೊಳ್ಳಲು ಸಹಾಯಕವಾದ ಪರಿಸ್ಥಿತಿ ಏರ್ಪಟ್ಟಿತು – ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೊತ್ತ ಮೊದಲನೆಯವನಾಗಿ ತೇರ್ಗಡೆ ಹೊಂದಿದ್ದಕ್ಕಾಗಿ ಶೇಷಾದ್ರಿಗೆ ಕಾನ್ನೋಲಿ ವಿದ್ಯಾರ್ಥಿವೇತನ ದೊರೆಯಿತು. ಕಾಲೇಜು ವಿದ್ಯಾಭ್ಯಾಸಕ್ಕಾಗಿ ಶೇಷಾದ್ರಿಯನ್ನು ಮದರಾಸಿಗೆ ಕಳಿಸಬೇಕೆಂಬ ನಿರ್ಣಯವೂ ಆಯಿತು.

ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಕಲ್ಲೀಕೋಟೆಗೆ ಪೂರ್ವದ ಕರಾವಳಿಯಲ್ಲಿರುವ ಮದರಾಸು ಹತ್ತಿರದ ಸ್ಥಳವೇನೂ ಅಲ್ಲ; ಸುಮಾರು ೭೦೦-೮೦೦ ಕಿಲೋಮೀಟರ್ ದೂರ. ರೈಲು ಪ್ರಯಾಣದ ಸೌಕರ್ಯ ಕೂಡ ಇಲ್ಲದೆ ಇದ್ದ ಆ ಕಾಲದಲ್ಲಿ ಈ ದೂರ ಪ್ರಯಾಣ ಎಷ್ಟು ಕಷ್ಟದಾಯಕವಾಗಿದ್ದಿರಬೇಕು! ಅಂತೂ ಶೇಷಾದ್ರಿ ಮದರಾಸು ಮುಟ್ಟಿ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿಕೊಂಡ. ತನ್ನ ಸೌಜನ್ಯ, ಶ್ರದ್ಧೆ, ಬುದ್ಧಿ ಚಾತುರ್ಯಗಳಿಂದ ಅನೇಕರನ್ನು ಆಕರ್ಷಿಸಿದ. ಉತ್ತಮ ವಿದ್ಯಾರ್ಥಿಯೆಂದು ಹೆಸರು ಗಳಿಸಿದ. ಹಲವಾರು ಬಹುಮಾನಗಳನ್ನೂ ಪ್ರಶಸ್ತಿಗಳನ್ನೂ ದೊರಕಿಸಿಕೊಂಡ. ಗಣಿತಶಾಸ್ತ್ರದಲ್ಲಿ ತುಂಬ ಬುದ್ಧಿವಂತನೆಂಬ ಖ್ಯಾತಿಯನ್ನೂ ಪಡೆದ. ೧೮೬೬ರ ಬಿ.ಎ. ಪರೀಕ್ಷೆಯಲ್ಲಿ ಇಡೀ ವಿಶ್ವವಿದ್ಯಾಲಯಕ್ಕೇ ಮೊದಲಿಗನಾಗಿ ಉತ್ತೀರ್ಣನಾದ.

೧೮೬೫ರಲ್ಲೇ ಅವರ ಮದುವೆ ಕೂಡ ಆಗಿ ಹೋಗಿತ್ತು. ಧರ್ಮಸಂವರ್ಧಿನಿ ಎಂಬ ಹದಿನೈದು ವರ್ಷದ ಕನ್ಯೆಯೊಡನೆ.

ಉದ್ಯೋಗ

ತಮ್ಮನ್ನು ಈವರೆಗೆ ಪ್ರೀತಿಯಿಂದ ಪೋಷಿಸಿ ತಮಗೆ ಉನ್ನತ ವಿದ್ಯಾಭ್ಯಾಸ ಕೊಡಿಸಲು ಶ್ರಮಿಸಿದ ತಮ್ಮ ಅಣ್ಣ ಮತ್ತು ತಾಯಿಯರು ಹೊತ್ತಿದ್ದ ಭಾರವನ್ನು ಆದಷ್ಟು ಬೇಗ ಇಳಿಸುವುದು ತಮ್ಮ ಮೊದಲ ಕೆಲಸವೆಂದು ಶೇಷಾದ್ರಿ ಅಯ್ಯರ್ ಭಾವಿಸಿದರು. ಯಾವುದಾದರೊಂದು ಕೆಲಸಕ್ಕೆ ಸೇರಿ ತಮ್ಮ ಸಂಸಾರ ಸುಗಮವಾಗಿ ನಡೆಯಲು ಸಹಾಯಕರಾಗಬೇಕೆಂದು ಬಯಸಿದರು; ಕೆಲಸ ದೊರಕಿಸಿಕೊಳ್ಳಲು ಪ್ರಯತ್ನಿಸಿದರು. ಕಲ್ಲಿಕೋಟೆಯಲ್ಲೇ ಸರ್ಕಾರಿ ನೌಕರಿ ದೊರೆಯಿತು; ಅಲ್ಲಿನ ಕಲೆಕ್ಟರ್ ಕಛೇರಿಯಲ್ಲಿ ಭಾಷಾಂತರಕಾರನಾಗಿ; ತಿಂಗಳಿಗೆ ೭೦ ರೂಪಾಯಿ ಸಂಬಳದ ಮೇಲೆ.

ಶೇಷಾದ್ರಿ ಅಯ್ಯರ್ ಅವರ ಬುದ್ಧಿಶಕ್ತಿ, ವಿದ್ವತ್ತು, ಕಾರ್ಯದಕ್ಷತೆಗಳಿಗೆ ಹೋಲಿಸಿ ನೋಡಿದರೆ, ಈ ಕೆಲಸ ಅವರಿಗೆ ತುಂಬ ಕೆಳಮಟ್ಟದ್ದೆಂದೇ ಹೇಳಬೇಕು. ಆದರೆ ಆಗಿನ ಕಾಲದಲ್ಲಿ – ಅಂದರೆ ಬ್ರಿಟಿಷ್ ಅಧಿಕಾರಿಗಳ ಆಡಳಿತಕ್ಕೆ, ನಿರ್ಣಯಗಳಿಗೆ ಇದಿರೇ ಇಲ್ಲದಿದ್ದಾಗ, ಸಾಮಾನ್ಯವಾಗಿ ಭಾರತೀಯರಿಗೆ ಮೇಲಿನ ಹಂತದ ಕೆಲಸಗಳು ಒಮ್ಮಿಂದೊಮ್ಮೆಲೇ ಸಿಗುತ್ತಿರಲಿಲ್ಲ. ಅದಕ್ಕಾಗಿಯೇ ಕಾಯಬೇಕಾಗಿತ್ತು – ತಮ್ಮ ಯೋಗ್ಯತೆಯನ್ನು ಗುರುತಿಸಿ, ತಮ್ಮನ್ನು ಪ್ರೋತ್ಸಾಹಿಸಿ ಮೇಲಿನ ಅಧಿಕಾರಿಗಳಿಗೆ ಏರಿಸುವಂಥ ಧಣಿ ದೊರೆಯುವವರೆಗೆ. ಶೇಷಾದ್ರಿ ಅಯ್ಯರ್ ಅವರಿಗೆ ಅಂತಹ ಧಣಿಯ ಪರಿಚಯ ಬಹು ಬೇಗನೆ ದೊರೆಯಿತು. ಅವರ ಅದೃಷ್ಟದ ಬಾಗಿಲು ತೆರೆಯಿತು.

ಭಾಗ್ಯದ ಬಾಗಿಲು

ಪ್ರಚಂಡ ಪ್ರತಿಭಾವಂತರೆಂದೂ ದಕ್ಷ ಆಡಳಿತಗಾರರೆಂದೂ ಖ್ಯಾತರಾಗಿದ್ದ ವ್ಯಕ್ತಿ ರಂಗಾಚಾರ್ಯ. ಅವರಾದರೂ ತಮ್ಮ ಸರ್ಕಾರಿ ಸೇವೆಯನ್ನು ಖಾಯಂ ಆಗಿ ಆರಂಭಿಸಿದ್ದು ಮದರಾಸು ಪ್ರಾಂತ ಸರ್ಕಾರದಲ್ಲಿ. ಸಹಾಯಕ ಗುಮಾಸ್ತೆಯಾಗಿ ಕೆಲಸಕ್ಕೆ ಸೇರಿದ ಒಂಬತ್ತು ವರ್ಷಗಳೊಳಗಾಗಿ ಡೆಪ್ಯುಟಿ ಕಲೆಕ್ಟರ್ ಅಧಿಕಾರಕ್ಕೆ ಏರಿದರು.

ಅವರಿಗೆ ಶೇಷಾದ್ರಿ ಅಯ್ಯರ್ ರವರ ಪರಿಚಯವಾದುದು ಅವರು ಕಲ್ಲೀಕೋಟೆಯಲ್ಲಿ ಈ ಹುದ್ದೆಯಲ್ಲಿದ್ದಾಗಲೇ. ಅಯ್ಯರ್ ಅವರ ಚುರುಕು ಬುದ್ಧಿ, ಕಾರ್ಯಶಕ್ತಿ, ದಕ್ಷತೆಗಳು ಅಚಾರ್ಲು ಅವರ ಮೆಚ್ಚುಗೆಗೆ ಪಾತ್ರವಾದವು. ತಕ್ಕ ಸಂದರ್ಭ ಒದಗಿದಾಗ ಇಂಥ ತರುಣನಿಗೆ ಪ್ರೋತ್ಸಾಹ ಕೊಟ್ಟು ಮುಂದಕ್ಕೆ ತರಬೇಕು ಎನಿಸಿತು ಅವರಿಗೆ. ಅಂತಹ ಸಂದರ್ಭ ಕೂಡ ಬೇಗ ಒದಗಿತು.

ಮೈಸೂರು ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರು ೧೮೬೮ರಲ್ಲಿ ತೀರಿಕೊಂಡರು. ಎಲ್.ಬಿ. ಬೌರಿಂಗ್ ಎಂಬ ಬ್ರಿಟಿಷ್ ಅಧಿಕಾರಿ ಮೈಸೂರು ಸಂಸ್ಥಾನದ ಚೀಫ್ ಕಮೀಷನರ್ ಆಗಿ ಆಡಳಿತ ನಡೆಸುತ್ತ  ಇದ್ದ. ಮಹಾರಾಜರು  ತೀರಿಕೊಂಡ ಮೇಲೆ ಅವರ ಅರಮನೆಯ ವ್ಯವಹಾರಗಳನ್ನು ಸುವ್ಯಸ್ಥಿತಗೊಳಿಸಲು ಉದ್ದೇಶಿಸಿದ. ಈ ಕೆಲಸದಲ್ಲಿ ಸಹಾಯ ಮಾಡಲು ಅವನು ಆರಿಸಿಕೊಂಡಿದ್ದು ಮದರಾಸು ಪ್ರಾಂತದಲ್ಲಿ ಡೆಪ್ಯುಟಿ ಕಲೆಕ್ಟರರಾಗಿದ್ದ ರಂಗಾಚಾರ್ಲು ಅವರನ್ನು. ೧೯೬೮ರ ಜೂನ್ ತಿಂಗಳಲ್ಲಿ ಇವರು ತಮ್ಮ ಹೊಸ ಅಧಿಕಾರವನ್ನು ವಹಿಸಿಕೊಂಡರು. ಒಡನೆಯೇ ಶೇಷಾದ್ರಿ ಅಯ್ಯರ್ ರವರನ್ನು ಮೈಸೂರು ಸಂಸ್ಥಾನದ ಸೇವೆಗೆ ಕರೆಸಿಕೊಳ್ಳಲು ಏರ್ಪಾಡು ಮಾಡಿದರು. ಇದರ ಫಲವಾಗಿ ಶೇಷಾದ್ರಿ ಅಯ್ಯರ್ ಅವರು ಅಷ್ಟಗ್ರಾಮ ಡಿವಿಜನ್ ನ ಅಂದರೆ ಆಗಿನ ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳ ಪ್ರದೇಶದ ಸೂಪರಿಂಟೆಂಡೆಂಟರ ಕಛೇರಿಯ ನ್ಯಾಯಾಂಗ ವಿಭಾಗದ ಶಿರಸ್ತೇದಾರರಾಗಿ ನೇಮಕವಾದರು. ೧೮೬೮ರ ಅಕ್ಟೋಬರ್ ೩೦ರಂದು ಅವರು ಈ ಹೊಸ ಹುದ್ದೆಗೆ ಬಂದರು. ಕೇರಳದಲ್ಲಿ ಹುಟ್ಟಿ, ಮದರಾಸಿನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ ಶೇಷಾದ್ರಿ ಅಯ್ಯರ್ ಮೈಸೂರು ಸಂ‌ಸ್ಥಾನದ ಸೇವೆಗೆ ಬಂದುದು ಹೀಗೆ.

ಸರ್ಕಾರದಲ್ಲಿ ಪ್ರಗತಿ

ದಕ್ಷ ಅಧಿಕಾರಿ ಎಂದು ಹೆಸರು ಗಳಿಸಿ ಶೇಷಾದ್ರಿ ಅಯ್ಯರ್ ಬೇಗ ಬೇಗ ಮೇಲು ಮೇಲಿನ ಅಧಿಕಾರಗಳಿಗೆ ಏರಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಆದರು; ನ್ಯಾಯಾಂಗ ಶಾಖೆಯ ಅಸಿಸ್ಟೆಂಟ್ ಕಮೀಷನರ್ ಆದರು. ಅರಮನೆಯ ಖರ್ಚು ವೆಚ್ಚಗಳ ನಿಯಂತ್ರಣಾಧಿಕಾರಿಯಾದರು. ಏತನ್ಮಧ್ಯೆ ನ್ಯಾಯಶಾಸ್ತ್ರವನ್ನು ಅಭ್ಯಾಸ ಮಾಡಿ ಮದರಾಸು ವಿಶ್ವವಿದ್ಯಾನಿಲಯ ಬಿ.ಎಲ್. ಪರೀಕ್ಷೆಗೆ ಕಟ್ಟಿ ಉತ್ತೀರ್ಣರಾದರು. ತಾವು ನ್ಯಾಯಾಂಗ ವಿಭಾಗದ ಶಿರಸ್ತೇದಾರರಾಗಿ ಕೆಲಸ ಮಾಡಿದ್ದ ಅಷ್ಟಗ್ರಾಮ ಡಿವಿಜನ್ ನಲ್ಲೇ ಜಿಲ್ಲಾ ನ್ಯಾಯಾಧೀಶರಾದರು.

ಶೇಷಾದ್ರಿ ಅಯ್ಯರ್ ಅವರು ಡೆಪ್ಯುಟಿ ಕಮೀಷನರ್ ಅಂದರೆ ಜಿಲ್ಲಾಧಿಕಾರಿ ಆದದ್ದು ೧೮೭೯ರಲ್ಲಿ. ಆ ಹೊತ್ತಿಗೆ ಅವರು ಮೈಸೂರು ಸಂಸ್ಥಾನಕ್ಕೆ ಸುಮಾರು ಹನ್ನೊಂದು ವರ್ಷ ಸೇವೆ ಸಲ್ಲಿಸಿದ್ದರು. ಮೊದಲು ತುಮಕೂರು ಜಿಲ್ಲೆಯಲ್ಲಿ ಸುಮಾರು ಎರಡು ವರ್ಷಕಾಲ ಜಿಲ್ಲಾಧಿಕಾರಿಯಾಗಿದ್ದ ಮೇಲೆ ಅವರು ಮೈಸೂರು ಜಿಲ್ಲಾಧಿಕಾರಿಯವರು ೧೮೮೧ರಲ್ಲಿ.

೧೮೮೧ನೇ ಇಸವಿ ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಗಮನಾರ್ಹವಾದದ್ದು. ಅದಕ್ಕೆ ೫೦ ವರ್ಷಗಳ ಹಿಂದೆ ಅಂದರೆ ೧೮೩೧ರಲ್ಲಿ ಬ್ರಿಟಿಷ್ ಸರ್ಕಾರ ಮೈಸೂರು ಸಂಸ್ಥಾನದ ಆಡಳಿತವನ್ನು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರವರ ಕೈಯಿಂದ ಕಿತ್ತುಕೊಂಡಿತು; ಅದನ್ನು ತಾನೇ ತನ್ನ ಅಧಿಕಾರಿಗಳ ಮೂಲಕ ನಡೆಸಲಾರಂಭಿಸಿತು. ಇದು ತಪ್ಪಿ ಸಂಸ್ಥಾನದ ಆಳ್ವಿಕೆ, ಮುಮ್ಮಡಿಯವರ ದತ್ತು ಪುತ್ರ, ಚಾಮರಾಜ ಒಡೆಯರ ಕೈಗೆ ಬಂದದ್ದು ೧೮೮೧ರ ಮಾರ್ಚ್ ೨೫ ರಂದು. ಅವರು ಆ ದಿನವೇ ಸಿ. ರಂಗಾಚಾರ್ಲು ಅವರನ್ನು ತಮ್ಮ ದಿವಾನರನ್ನಾಗಿ ಅಂದರೆ ಮುಖ್ಯಮಂತ್ರಿಯಾಗಿ ನೇಮಿಸಿದರು. ಆ ಹೊತ್ತಿಗಾಗಲೇ ರಂಗಾಚಾರ್ಲುರವರು ಸುಮಾರು ೧೩ ವರ್ಷಕಾಲ ಮೈಸೂರು ಸಂಸ್ಥಾನಕ್ಕೆ ಸೇವೆ ಸಲ್ಲಿಸಿದ್ದರು. ಬ್ರಿಟಿಷ್ ಅಧಿಕಾರಿಗಳ ಕೈಕೆಳಗೆ. ಸಂಸ್ಥಾನದ ಆರ್ಥಿಕ ಪರಿಸ್ಥಿತಿ, ಬ್ರಿಟಿಷರ ಆಡಳಿತದ ಬಲಾಬಲಗಳು, ಲೋಪದೋಷಗಳು – ಇವನ್ನು ಚೆನ್ನಾಗಿ ಅರಿತಿದ್ದರು. ಅಲ್ಲದೆ ಸಂಸ್ಥಾನದ ಸ್ಥಿತಿಗತಿಗಳನ್ನು ಉತ್ತಮಗೊಳಿಸಲು ಅಗತ್ಯವಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳೇನು ಎಂಬುದನ್ನು ಆಲೋಚಿಸಿದ್ದರು.

ಕ್ಷಾಮದ ನೆರಳಿನಲ್ಲಿ

ರಂಗಾಚಾರ್ಲು ಅವರು ದಿವಾನರ ಅಧಿಕಾರಕ್ಕೆ ಬಂದಾಗ ಮೈಸೂರು ಸಂಸ್ಥಾನದ ಆರ್ಥಿಕ ಸ್ಥಿತಿ ತುಂಬ ಕೆಟ್ಟಿತ್ತು. ಕಾರಣ, ಅದಕ್ಕೆ ಕೆಲವು ವರ್ಷಗಳ ಹಿಂದೆ ಸಂಸ್ಥಾನದಲ್ಲಿ ಭೀಕರ ಕ್ಷಾಮವುಂಟಾಗಿತ್ತು. ಇದರಿಂದ ಜನರು ಅನುಭವಿಸಬೇಕಾದ ತೊಂದರೆಗಳನ್ನು ಪರಿಹರಿಸಲು ಅಂದಿನ ಆಡಳಿತ ತುಂಬ ಹಣವನ್ನು ಖರ್ಚು ಮಾಡಬೇಕಾಯಿತು. ಇದರ ಪರಿಣಾಮವಾಗಿ ಸಂಸ್ಥಾನದ ಬೊಕ್ಕಸದಲ್ಲಿ ಶೇಖರಿಸಿ ಇಟ್ಟಿದ್ದ ೬೩ ಲಕ್ಷ ರೂಪಾಯಿ ಕರಗಿಹೋಯಿತು ಅಷ್ಟು ಮಾತ್ರವಲ್ಲ – ಮೈಸೂರು ಸರ್ಕಾರ ಬ್ರಿಟಿಷ್ ಸರ್ಕಾರದಿಂದ ೮೦ ಲಕ್ಷ ರೂಪಾಯಿ ಸಾಲ ತೆಗೆದುಕೊಳ್ಳಬೇಕಾಯಿತು. ತೀವ್ರ ಕ್ಷಾಮದ ದುಷ್ಪರಿಣಾಮಗಳನ್ನು ತಡೆಗಟ್ಟಲು ಸರ್ಕಾರ ಧಾರಳವಾಗಿಯೇ ಹಣವನ್ನು ಖರ್ಚು ಮಾಡಿತು. ಆದರೂ ಕ್ಷಾಮದ ಪರಿಣಾಮವಾಗಿ ಹತ್ತು ಲಕ್ಷ ಜನರು ಸತ್ತರು. ಸುಮಾರು ಹತ್ತು ಕೋಟಿ ರೂಪಾಯಿ ಬೆಲೆಯ ಆಸ್ತಿಪಾಸ್ತಿಗಳೂ ನಷ್ಟವಾದವು. ಜನರು ಕಂಗಾಲಾಗಿ ಹೋಗಿದ್ದರು.

ಸನ್ನಿವೇಶ ಹೇಗೆ ದಾರುಣವಾಗಿದ್ದರೂ ದಿವಾನ್ ರಂಗಾಚಾರ್ಲು ಅವರು ಸಂಸ್ಥಾನದ ಸ್ಥಿತಿಗಳನ್ನು ಸುಧಾರಿಸಲು ನಿರ್ಧರಿಸಿದರು. ಬಹುಮುಖ ಪ್ರಗತಿಯನ್ನು ಸಾಧಿಸಲು ಕಾರ್ಯಾರಂಭ ಮಾಡಿದರು. ಈ ಕಾರ್ಯಕ್ರಮಗಳು ಯಶಸ್ವಿಯಾಗಲು ಸಂಸ್ಥಾನದ ಆಡಳಿತ ವಿಧಾನವನ್ನು ಸುವ್ಯವಸ್ಥಿತಗೊಳಿಸಬೇಕಾಗಿತ್ತು. ಅಂದರೆ ಆಡಳಿತಕ್ಕೆ ಸಂಬಂಧಿಸಿದ ಕಾನೂನು, ನಿಯಮಾವಳಿ, ಕಾರ್ಯವಿಧಾನ ಮುಂತಾದುವನ್ನು ಖಚಿತಗೊಳಿಸಬೇಕಾಗಿತ್ತು. ವಿಶಾಲವಾದ ಆಡಳಿತಾನುಭವ ಹಾಗೂ ನಿರಂತರ ಶ್ರಮ ಅವಶ್ಯವಾಗಿತ್ತು ಈ ಕಾರ್ಯಕ್ಕೆ. ಇಂತಹ ಕಾರ್ಯವನ್ನು ವಹಿಸುವುದಾದರೂ ಯಾರಿಗೆ? ರಂಗಾಚಾರ್ಲು ಅವರ ಕಣ್ಣು ಶೇಷಾದ್ರಿ ಅಯ್ಯರ್ ರವರ ಮೇಲೆ ಬಿತ್ತು. ಸರಿ,ತಾವು ದಿವಾನರ ಅಧಿಕಾರವನ್ನು ವಹಿಸಿಕೊಂಡು ಐದು ತಿಂಗಳಾಗುವ ಹೊತ್ತಿಗೆ ಅಂದರೆ ೧೮೮೧ ಆಗಸ್ಟ್ ತಿಂಗಳಿನಲ್ಲಿ ಶೇಷಾದ್ರಿ ಅಯ್ಯರ್ ಅವರನ್ನು ಮೈಸೂರಿನಿಂದ ತಮ್ಮ ಕಛೇರಿಗೆ ವರ್ಗಾಯಿಸಿದರು. ಅವರಿಗೆ ಆ ಕೆಲಸವನ್ನು ವಹಿಸಿದರು. ಅವರಾದರೋ ಆ ಕೆಲಸವನ್ನು ರಂಗಾಚಾರ್ಲು ಅವರ ಮೆಚ್ಚುಗೆಗೆ ಪಾತ್ರವಾಗುವಂತೆ ನಿರ್ವಹಿಸಿದ. ಈ ಅವಧಿಯಲ್ಲಿ ರಂಗಾಚಾರ್ಲು ಅವರ ಆಶೋತ್ತರಗಳು, ಧ್ಯೇಯ, ಧೋರಣೆಗಳು, ಕಾರ್ಯನಿರ್ವಹಣಾ ವಿಧಾನಗಳು – ಇವನ್ನು ವಿವರವಾಗಿ ಅರಿತುಕೊಳ್ಳುವ ಅವಕಾಶ ಶೇಷಾದ್ರಿ ಅಯ್ಯರ್ ಅವರಿಗೆ ದೊರೆಯಿತು. ಅವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ದಿವಾನರ ಮೆಚ್ಚುಗೆಗೆ ಮಾತ್ರವಲ್ಲ. ನಂಬಿಕೆಗೆ ಕೂಡ ಪಾತ್ರರಾದರು.

ದಿವಾನರಾದ ಮೇಲೆ ರಂಗಾಚಾರ್ಲು ಹೊರಬೇಕಾಗಿ ಬಂದ ವಿಶೇಷ ಜವಾಬ್ದಾರಿ ಮತ್ತು ಅದರ ಫಲವಾದ ವಿಶ್ರಾಂತಿ ಇಲ್ಲದ ದುಡಿಮೆ – ಇವುಗಳಿಂದಾಗಿ ಅವರ ಆರೋಗ್ಯ ಕೆಟ್ಟಿತು. ವಿಶ್ರಾಂತಿ ಮತ್ತು ಚಿಕಿತ್ಸೆಗಾಗಿ ಅವರು ಆಗಾಗ ರಜೆ ತೆಗೆದುಕೊಳ್ಳಬೇಕಾಗುತ್ತಿತ್ತು. ಇಂತಹ ಸಂದರ್ಭಗಳಲ್ಲಿ ಅವರು, ತಮ್ಮ ಸ್ಥಾನದ ಮಾಮೂಲು ಕೆಲಸಗಳನ್ನು ನೋಡಿಕೊಳ್ಳಲು ಶೇಷಾದ್ರಿ ಅಯ್ಯರ್ ಅವರನ್ನು ನೇಮಿಸುತ್ತಿದ್ದರು. ಇದರಿಂದ, ದಿವಾನರ ಅಧಿಕಾರ ಸ್ಥಾನದ ಆಡಳಿತ ಜವಾಬ್ದಾರಿಯ ಪರಿಚಯವೂ ಶೇಷಾದ್ರಿ ಅಯ್ಯರ್ ಅವರಿಗೆ ಆಯಿತು.

ಮೂವತ್ತೆಂಟು ವರ್ಷಕ್ಕೆ ದಿವಾನರು

ದಿವಾನ್ ಪದವಿಗೆ ಬಂದ ಮೇಲೆ ರಂಗಾಚಾರ್ಲು ಅವರು ಬಹುಕಾಲ ಬದುಕಲಿಲ್ಲ. ೧೮೮೩ರ ಜನವರಿ ೨೦ ರಂದು ಅವರು ಮದರಾಸಿನಲ್ಲಿ ತೀರಿಕೊಂಡರು. ಅದಕ್ಕೆ ಕೆಲವು ದಿವಸಗಳ ಮೊದಲು, ತಮ್ಮ ಅನಂತರ ಶೇಷಾದ್ರಿ ಅಯ್ಯರ್ ಅವರನ್ನೇ ದಿವಾನರನ್ನಾಗಿ ಮಾಡಬೇಕೆಂದು ಮಹಾರಾಜರಿಗೆ ಖಚಿತವಾಗಿ ಸಲಹೆ ಮಾಡಿದರು.

ಈ ಸಲಹೆಯನ್ನು ಒಪ್ಪಿಕೊಳ್ಳುವ ಮೊದಲು ಮಹಾರಾಜರು ತಮ್ಮ ಗಮನಕ್ಕೆ ತಂದುಕೊಂಡು ಸಾವಧಾನವಾಗಿ ಪರಿಶೀಲಿಸಬೇಕಾದರೆ ಅಂಶಗಳು ಕೆಲವು ಇದ್ದವು.

ಈ ಪರಿಸ್ಥಿತಿಯಲ್ಲಿ ಯಾರು ದಿವಾನರಾಗಬೇಕೆಂಬ ಬಗೆಗೆ ಒಂದು ನಿರ್ಣಯಕ್ಕೆ ಬರಲು ಮಹಾರಾಜರು ಮೂರು ವಾರ ತೆಗೆದುಕೊಂಡರು. ೧೮೮೩ರ ಫೆಬ್ರವರಿ ೧೨ ರಂದು ಶೇಷಾದ್ರಿ ಅಯ್ಯರ್ ರವರನ್ನು ಮೈಸೂರ ಸಂಸ್ಥಾನದ ದಿವಾನರನ್ನಾಗಿ ನೇಮಿಸಿರುವಾಗಿ ರಾಜಾಜ್ಞೆ ಪ್ರಕಟವಾಯಿತು. ಆಗ ಅವರ ವಯಸ್ಸು ೩೮ ವರ್ಷ. ಅಷ್ಟು ಚಿಕ್ಕ ವಯಸ್ಸಿನಲ್ಲಿ ತಮಗೆ ದಿವಾನಗಿರಿ ದೊರತೀತೆಂದು ಅವರು ನಿರೀಕ್ಷಿಸಿರಲಿಲ್ಲ.  ಅದು ದೊರೆತಾಗ ಅವರ ಮನಸ್ಸಿನಲ್ಲಿ ಒಂದು ಆತಂಕವೂ ಮೂಡಿತು – ಅದೇನೆಂದರೆ ತಮ್ಮ ಸರ್ಕಾರಿ ಸೇವಾ ಅವಧಿ ಮುಗಿಯುವುದಕ್ಕೆ ಇನ್ನೂ ೧೭-೧೮ ವರ್ಷಗಳು ಬೇಕು. ಸಾಮಾನ್ಯವಾಗಿ ದೇಶೀಯ ಸಂಸ್ಥಾನಗಳಲ್ಲಿ ಯಾರೂ ಐದು ವರ್ಷಗಳಿಗಿಂತ ಹೆಚ್ಚಾಗಿ ದಿವಾನರಾಗಿರುತ್ತಿರಲಿಲ್ಲ. ತಮ್ಮ ಈ ಅಧಿಕಾರಾವಧಿಯೂ ೫ ವರ್ಷಕ್ಕೆ ಮುಗಿದರೆ ಮುಂದೇನು ಮಾಡುವುದು? ಒಮ್ಮೆ ದಿವಾನರಾಗಿ ಕೆಲಸ  ಮಾಡಿದ ಮೇಲೆ ಅದಕ್ಕಿಂತ ಕಡಿಮೆ ಅಧಿಕಾರದ ಕೆಲಸಕ್ಕೆ ಹೋಗುವಂತಿರಲಿಲ್ಲ!

ಪುಟ್ಟ ಹುಡುಗ ಶೇಷಾದ್ರಿ ಅಯ್ಯರ್ ಅಣ್ಣನೊಡನೆ

ಶೇಷಾದ್ರಿ ಅಯ್ಯರ್ ತಮ್ಮ ಈ ಸಮಸ್ಯೆಯನ್ನು ಮಹಾರಾಜರ ಮುಂದಿಟ್ಟರು. ಆಗ ಅವರು ನಸುನಕ್ಕು, ’ನಿಮ್ಮ ಮನಸ್ಸಿನಲ್ಲಿ ಅಂತಹ ಹೆದರಿಕೆಗಳನ್ನು ಇಟ್ಟುಕೊಂಡು ಪೇಚಾಡಬೇಡಿ. ನೀವು ಸಂಸ್ಥಾನದ ವ್ಯವಹಾರಗಳನ್ನು ಚೆನ್ನಾಗಿ ನೋಡಿಕೊಂಡರೆ, ನಿಮ್ಮ ಭವಿಷ್ಯದ ವಿಚಾರವಾಗಿ ನೀವು ಆತಂಕಪಟ್ಟುಕೊಳ್ಳಬೇಕಾಗಿಲ್ಲ’ ಎಂದು ಆಶ್ವಾಸನೆ ಕೊಟ್ಟರು.

ಇದರಿಂದ ಶೇಷಾದ್ರಿ ಅಯ್ಯರ್ ಅವರ ಮನಸ್ಸಿಗೆ ಸಮಾಧಾನವಾಯಿತು. ಅತ್ಯಂತ ದಕ್ಷತೆಯಿಂದ ಮಹಾರಾಜರ  ಮೆಚ್ಚುಗೆಗೆ ಪಾತ್ರವಾಗುವಂತೆ ಕೆಲಸ ಮಾಡಬೇಕು ; ಸಂಸ್ಥಾನ ಎಲ್ಲ ರೀತಿಯಲ್ಲೂ ಮುಂದುವರಿಯುವಂತೆ ಮಾಡಬೇಕು ಎಂದು ಅವರು ನಿರ್ಧರಿಸಿದರು. ಇದೇನು ಸುಲಭವಾದ ಕೆಲಸವಾಗಿರಲಿಲ್ಲ. ಆದರೆ ಈ ಕಾರ್ಯದಲ್ಲಿ ಹೇಗೆ ಮುಂದುವರಿಯಬೇಕು ಎಂಬ ಬಗೆಗೆ ದಿವಾನ್ ರಂಗಾಚಾರ್ಲು ಅವರ ಅಭಿಪ್ರಾಯವೇನಿತ್ತು ಎಂಬುದು ಶೇಷಾದ್ರಿ ಅಯ್ಯರ್ ಅವರಿಗೆ ಚೆನ್ನಾಗಿ ಗೊತ್ತಿತ್ತು. ಅವರು ಆ ಮಾರ್ಗದಲ್ಲಿಯೇ ಮುಂದುವರಿದರು.

ಶೇಷಾದ್ರಿ ಅಯ್ಯರ್ ಅವರು ದಿವಾನರಾದೊಡನೆಯೆ ಅವರು ಎದುರಿಸಬೇಕಾದ ದೊಡ್ಡ ಸಮಸ್ಯೆಯೊಂದಿತ್ತು. ಅದೆಂದರೆ ಸಂಸ್ಥಾನದ ದುರ್ಬಲ ಆರ್ಥಿಕ ಸ್ಥಿತಿ. ರಂಗಾಚಾರ್ಲು ಅವರು ದಿವಾನರಾದಾಗ ಕೂಡ ಇಂತಹದೇ ಸ್ಥಿತಿಯಿತ್ತು. ಅವರು ಇದನ್ನು ಸುಧಾರಿಸಲು ಪ್ರಯತ್ನಿಸಿದರು. ಆದರೆ ಅವರ ಅಕಾಲ ಮರಣದಿಂದಾಗಿ ಅವರು ಈ ಕಾರ್ಯವನ್ನು ಮುಂದುವರಿಸಲಾಗಲಿಲ್ಲ. ಆ ಹೊಣೆಗಾರಿಕೆ ಈಗ ಶೇಷಾದ್ರಿ ಅಯ್ಯರ್ ಅವರ ಮೇಲೆ ಬಿತ್ತು. ಅವರು ಅದನ್ನು ದಿಟ್ಟತನದಿಂದಲೂ ಬುದ್ಧಿವಂತಿಕೆಯಿಂದಲೂ ಇದಿರಿಸಿದರು.

ಆದಾಯ – ವೆಚ್ಚ ಸರಿದೂಗಿಸಬೇಕು

ಆ ಕಾಲದಲ್ಲಿ ಮೈಸೂರು ಸಂಸ್ಥಾನದ ವಾರ್ಷಿಕ ಖರ್ಚು, ವಾರ್ಷಿಕ ಆದಾಯ ೮-೯ ಲಕ್ಷ ರೂಪಾಯಿ ಹೆಚ್ಚಾಗಿತ್ತು. ಇದನ್ನು ಸರಿದೂಗಿಸುವುದು ದಿವಾನರ ಮೊದಲ ಕೆಲಸವಾಗಿತ್ತು. ಇದಕ್ಕಾಗಿ ತೆರಿಗೆಯನ್ನು ಹೆಚ್ಚಿಸುವಂತೆಯೂ ಇರಲಿಲ್ಲ. ಏಕೆಂದರೆ ಹಿಂದಿನ ವರ್ಷಗಳ ಕ್ಷಾಮದ ಪರಿಣಾಮವಾಗಿ ಜನರು ಕಂಗಾಲಾಗಿದ್ದರು. ಆ ಹೊತ್ತಿಗಾಗಲೇ ಅನೇಕ ಮಂದಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರನ್ನು ಕೆಲಸದಿಂದ ತೆಗೆದು ಹಾಕಿ ಆದಷ್ಟು ಮಿತವ್ಯಯವನ್ನು ಸಾಧಿಸಿದ್ದು ಆಗಿತ್ತು. ವಾಸ್ತವವಾಗಿ, ದಕ್ಷ ಆಡಳಿತಕ್ಕೆ ಎಷ್ಟು ಮಂದಿ ಅಧಿಕಾರಿಗಳು ಮತ್ತು ನೌಕರರು ಇರಬೇಕೋ ಅಷ್ಟು ಜನರು ಕೂಡ ಆಗ ಸರ್ಕಾರಿ ಸೇವೆಯಲ್ಲಿರಲಿಲ್ಲ. ಆದ್ದರಿಂದ ಈ ಬಾಬಿನಲ್ಲಿ ಮಿತವ್ಯಯವನ್ನು ಸಾಧಿಸುವಂತಿರಲಿಲ್ಲ.

ಆದ್ದರಿಂದ ಶೇಷಾದ್ರಿ ಅಯ್ಯರ್, ಸಂಸ್ಥಾನ ಸರ್ಕಾರಕ್ಕೆ ಬರದೆ ತಪ್ಪಿಹೋಗಿದ್ದ ಆದಾಯವನ್ನು ಹಿಂದಕ್ಕೆ ಪಡೆಯಲು ಮತ್ತು ಸಂಸ್ಥಾನ ಬ್ರಿಟಿಷ್ ಸರ್ಕಾರಕ್ಕೆ ಕೊಡಬೇಕಾಗಿದ್ದ ಪೊಗದಿಯ ಹೊರೆ ಏರದಂತೆ ನೋಡಿಕೊಳ್ಳಲು ಪ್ರಯತ್ನಿಸಿದರು. ಇದಲ್ಲದೆ ಇತರ ವಿಧಾನಗಳಿಂದ ಸಂಸ್ಥಾನದ ಉತ್ಪತ್ತಿಯನ್ನು ಅಭಿವೃದ್ಧಿಗೊಳಿಸಿದರು.

ಶೇಷಾದ್ರಿ ಅಯ್ಯರ್ ಅವರು ಅಧಿಕಾರ ವಹಿಸಿಕೊಂಡೊಡನೆಯೇ ಬ್ರಿಟಿಷ್ ಸರ್ಕಾರ ಬೆಂಗಳೂರಿನ ದಂಡಿನ ಪ್ರದೇಶದ ಆಡಳಿತವನ್ನು ತಾನೇ ವಹಿಸಿಕೊಂಡಿತು. ಇದರ ಪರಿಣಾಮವಾಗಿ ಆ  ಪ್ರದೇಶದ ಆಡಳಿತದ ವೆಚ್ಚದ ಅನಂತರ ಸಂಸ್ಥಾನಕ್ಕೆ ಉಳಿಯುತ್ತಿದ್ದ ಹಣ ಅದಕ್ಕೆ ಬರುವುದು ತಪ್ಪಿತು. ಈ ಉಳಿತಾಯವನ್ನು ಸಂಸ್ಥಾನ ಸರ್ಕಾರಕ್ಕೆ ಕೊಡಬೇಕೆಂದು ಶೇಷಾದ್ರಿ ಅಯ್ಯರ್ ಬ್ರಿಟಿಷ್ ಸರ್ಕಾರದೊಡನೆ ಬಲವಾಗಿ ವಾದಿಸಿದರು. ಇದರ ಪರಿಣಾಮವಾಗಿ ಬ್ರಿಟಿಷ್ ಸರ್ಕಾರ ಶೇಷಾದ್ರಿ ಅಯ್ಯರ್ ಅವರ ವಾದವನ್ನು ಒಪ್ಪಿಕೊಂಡಿತು. ಉಳಿತಾಯದ ಹಣವನ್ನು ಸಂಸ್ಥಾನ ಬ್ರಿಟಿಷ್ ಸರ್ಕಾರಕ್ಕೆ ಕೊಡುತ್ತಿದ್ದ ವಾರ್ಷಿಕ ಪೊಗದಿಯ ಲೆಕ್ಕಕ್ಕೆ ಉತ್ತಾರ ಹಾಕಿಕೊಳ್ಳಲು ಒಪ್ಪಿದರು. ಶೇಷಾದ್ರಿ ಅಯ್ಯರ್ ಅವರು ಸಂಸ್ಥಾನದ ಪರವಾಗಿ ಬ್ರಿಟಿಷ್ ಸರ್ಕಾರದೊಡನೆ ನಡೆಸಿದ ಹಲವಾರು ವಾದಗಳಲ್ಲಿ ಇದು ಮೊದಲನೆಯದು; ಇದೇ ಮೊದಲನೆಯ ವಿಜಯವೂ ಆಗಿತ್ತು.

ಮೈಸೂರು ಸಂಸ್ಥಾನ ಬ್ರಿಟಿಷ್ ಸರ್ಕಾರಕ್ಕೆ ಪ್ರತಿ ವರ್ಷ ೨೪.೫ ಲಕ್ಷ ರೂಪಾಯಿ ಪೊಗದಿ ಕೊಡುತ್ತಿತ್ತು. ೧೮೮೬ ರಿಂದ ಇದನ್ನು ೩೫ ಲಕ್ಷಕ್ಕೆ ಏರಿಸಿತ್ತು ಬ್ರಿಟಿಷ್ ಸರ್ಕಾರ. ಸಂಸ್ಥಾನದ  ಆರ್ಥಿಕ ದುರ್ಬಲತೆಯಿಂದಾಗಿ ಈ ಹೊಸ ಹೊರೆ ವಹಿಸಿಕೊಳ್ಳುವುದು ಮೈಸೂರು ಸರ್ಕಾರಕ್ಕೆ ಸಾಧ್ಯವಿಲ್ಲವೆಂದು ಶೇಷಾದ್ರಿ ಅಯ್ಯರ್ ಅವರು  ಅಂಕಿ-ಅಂಶಗಳನ್ನು ಮುಂದಿಟ್ಟು ವಾದಿಸಿದರು. ಈ ವಾದದಲ್ಲೂ ಅವರಿಗೆ ಜಯ ದೊರೆಯಿತು. ೧೮೯೬ರರವರೆಗೆ ಸಂಸ್ಥಾನ  ಹತ್ತೂವರೆ ಲಕ್ಷ ರೂಪಾಯಿಯ ಹೆಚ್ಚುವರಿ ಪೊಗದಿಯನ್ನು ಕೊಡಬೇಕಾಗಿಲ್ಲವೆಂದು ಬ್ರಿಟಿಷ್ ಸರ್ಕಾರ ಒಪ್ಪಿತು.

ಹಾಗೂ ಹೀಗೂ ರಾಜ್ಯಾಡಳಿತ ನಡೆಸಿಕೊಂಡು ಹೋದರೆ ಅದರಿಂದ ಸಂಸ್ಥಾನಕ್ಕಾಗಲೀ ಅದರ ಪ್ರಜೆಗಳಿಗಾಗಲೀ ಲಾಭವಿಲ್ಲ. ಸಂಸ್ಥಾನದ ಸಂದಾಭಿವೃದ್ಧಿಯಾಗಬೇಕು; ಜನಕ್ಕೆ ಹೆಚ್ಚು ಹೆಚ್ಚು ಜೀವನ ಸೌಕರ್ಯ ದೊರೆಯಬೇಕು; ಕ್ಷಾಮ ಡಾಮರಗಳಿಂದ ಅವರಿಗೆ ತಕ್ಕ ರಕ್ಷಣೆ ದೊರೆಯುವ ವ್ಯವಸ್ಥೆಯಿರಬೇಕು ಎಂಬುದು ಶೇಷಾದ್ರಿ ಅಯ್ಯರ್ ಅವರ ಉದ್ದೇಶವಾಗಿತ್ತು. ಆದ್ದರಿಂದ ಅವರು ಅಭಿವೃದ್ಧಿ ಕಾರ್ಯಗಳಿಗೆ ಮನಸ್ಸು ಕೊಟ್ಟರು. ಅಲ್ಲದೆ ಜನರ ಮೇಲೆ ಹೆಚ್ಚಿನ ತೆರಿಗೆ ಹೇರದೆ ಸಂಸ್ಥಾನದ ಆದಾಯವನ್ನು ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನೂ ಕೈಗೊಂಡರು.

ಮೈಸೂರಿನಿಂದ ತಿಪಟೂರಿಗೆ ರೈಲು

’ಧಾತು ಈಶ್ವರ ಕ್ಷಾಮ’ ಅಂದರೆ ೧೮೭೫-೭೭ರ ಮಹಾಕ್ಷಾಮದ ಕಾಲದಲ್ಲಿ ಸಂಸ್ಥಾನದ ಹೊರಗಿನಿಂದ ಆಹಾರ ಪದಾರ್ಥಗಳನ್ನು ತರಿಸಿಕೊಂಡರೂ ಅವನ್ನು ಶೀಘ್ರವಾಗಿ ಒಳನಾಡಿಗೆ ಸಾಗಿಸುವ ಸೌಕರ್ಯವಿರಲಿಲ್ಲ. ಇದರಿಂದಾಗಿ ಅನೇಕರು ಅಹಾರವಿಲ್ಲದೆ ಸತ್ತರು. ಇಂತಹ ದುರಂತವನ್ನು ತಪ್ಪಿಸಲು, ಸಂಸ್ಥಾನದ ವಿವಿಧ ಭಾಗಗಳಲ್ಲಿ ರೈಲು ಮಾರ್ಗ ನಿರ್ಮಿಸುವುದು ಅವಶ್ಯವಾಗಿತ್ತು. ಈ ಅಭಿವೃದ್ಧಿ ಕಾರ್ಯ ಅತ್ಯಾವಶ್ಯಕವೆಂದು ರಂಗಾಚಾರ್ಲು ಅವರು ಸೂಚಿಸಿದ್ದರು. ಹೆಚ್ಚು ಹೆಚ್ಚು ಸಾಗಾಣಿಕೆ ಸೌಲಭ್ಯಗಳು ಏರ್ಪಡುವುದರಿಂದ ಒಳನಾಡಿನಲ್ಲಿ ವ್ಯಾಪಾರವೂ ಕೈಗಾರಿಕೆಗಳೂ ಬೆಳೆದು ಜನರ ಆರ್ಥಿಕ ಸ್ಥಿತಿ-ಗತಿಗಳು ಉತ್ತಮಗೊಳ್ಳುವ ಸಂಭವವೂ ಇತ್ತು. ಆದ್ದರಿಂದ ಶೇಷಾದ್ರಿ ಅಯ್ಯರ್ ಅವರು ರೈಲುಮಾರ್ಗ ವಿಸ್ತರಣೆಗೆ ಮನಸ್ಸು ಕೊಟ್ಟರು. ಆ ಹೊತ್ತಿಗೆ ಮೈಸೂರು ಸರ್ಕಾರ ತನ್ನ ಉಳಿತಾಯವನ್ನೂ ಸಾರ್ವಜನಿಕರಿಂದ ಸಾಲವನ್ನೂ ಉಪಯೋಗಿಸಿಕೊಂಡು ಬೆಂಗಳೂರು ಮಾರ್ಗವಾಗಿ ಮೈಸೂರಿನಿಂದ ತಿಪಟೂರಿನವರೆಗೆ ರೈಲುಮಾರ್ಗವನ್ನು ನಿರ್ಮಿಸಿತು. ಇದನ್ನು ಹರಿಹರದವರೆಗೆ ಮುಂದುವರಿಸುವುದು ಅವಶ್ಯಕವಾಗಿತ್ತು.

ಸರ್ಕಾರದ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದುದರಿಂದ ಈ ಕೆಲಸಕ್ಕೆ ಹಣ ಒದಗಿಸುವುದು ಸಾಧ್ಯವಿರಲಿಲ್ಲ. ಬರಗಾಲದ ಹೊಡೆತಕ್ಕೆ ಸಿಕ್ಕಿದ ಜನ ಕೂಡ ಸರ್ಕಾರಕ್ಕೆ ಸಾಲಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಆದರೂ ಈ ಕೆಲಸ ತಡವಾಗಬಾರದೆಂಬ ಉದ್ದೇಶದಿಂದ ಶೇಷಾದ್ರಿಯ ಅಯ್ಯರ್ ಅವರು ಇಂಡಿಯಾ ಸರ್ಕಾರದ ಸಹಕಾರದಿಂದ ಒಂದು ವ್ಯವಸ್ಥೆ ಮಾಡಿದರು.

ಇದರಂತೆ ಪುಣೆಯಿಂದ ಹರಿಹರದವರೆಗೆ ರೈಲು ಮಾರ್ಗ ನಡೆಸುತ್ತಿದ್ದ ಸದರ್ನ್ ಮಹಾರಾಷ್ಟ್ರ ರೈಲ್ವೆ ಕಂಪೆನಿ, ತಿಪಟೂರಿನಿಂದ ಹರಿಹರದವರೆಗೆ ರೈಲು ಮಾರ್ಗವನ್ನು ಮುಂದುವರಿಸಲು ಅವಶ್ಯಕವಾದ ಹಣವನ್ನು ಮೈಸೂರು ಸರ್ಕಾರಕ್ಕೆ ಸಾಲವಾಗಿ ಕೊಟ್ಟಿತ್ತು ಮತ್ತು ಈ ರೈಲು ಮಾರ್ಗವನ್ನು ನಿರ್ಮಿಸಿದರು. ಅವರು ಕೊಟ್ಟಿದ್ದ ಸಾಲಕ್ಕೆ ಆಧಾರವಾಗಿ ಮೈಸೂರು ಸರ್ಕಾರ ತಾನು ಈಗಾಗಲೇ ನಿರ್ಮಿಸಿ ನಡೆಸುತ್ತಿದ್ದ ಮೈಸೂರು ತಿಪಟೂರು ರೈಲು ಮಾರ್ಗವನ್ನು ಕಂಪೆನಿಗ ವಹಿಸಿದರು. ಮೈಸೂರು ಸರ್ಕಾರ ಬೆಂಗಳೂರಿನಿಂದ ತಿಪಟೂರಿನವರೆಗೆ ನಿರ್ಮಿಸಿದ್ದ ರೈಲ್ವೆ ಮಾರ್ಗಕ್ಕೆ ತಗಲಿದ್ದ ವೆಚ್ಚ ಸುಮಾರು ೬೮ ಲಕ್ಷ ರೂಪಾಯಿಗಳನ್ನು ಕಂಪನಿ ಮೈಸೂರು ಸರ್ಕಾರಕ್ಕೆ ನಗದಾಗಿ ಕೊಟ್ಟಿತು.

ಈ ವ್ಯವಸ್ಥೆಯಿಂದ ತಿಪಟೂರು – ಹರಿಹರ ರೈಲುಮಾರ್ಗ ಶೀಘ್ರವಾಗಿ ರೂಪುಗೊಳ್ಳಲು ಅವಕಾಶ ಏರ್ಪಟ್ಟಿತು. ಹಾಸನ, ಚಿತ್ರದುರ್ಗ ಜಿಲ್ಲೆಗಳ ಅಭಿವೃಧ್ಧಿ ಮಾರ್ಗ ತೆರೆಯಿತು.

ಕಂಪೆನಿ ಕೊಟ್ಟ ೬೮ ಲಕ್ಷ ರೂಪಾಯಿಗಳನ್ನು ಶೇಷಾದ್ರಿ ಅಯ್ಯರ್ ಅವರು ತುಂಬ ವಿಚಕ್ಷಣೆಯಿಂದ ಉಪಯೋಗಿಸಿದರು.  ಅದನ್ನು ಆಡಳಿತದ ಖರ್ಚಿಗಾಗಿ ಬಳಸಿಕೊಳ್ಳಲಿಲ್ಲ. ಇದಕ್ಕೆ ಇನ್ನಷ್ಟು ಹಣ ಸೇರಿಸಿ, ಕ್ಷಾಮ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರದಿಂದ ತೆಗೆದುಕೊಂಡಿದ್ದ ೮೦ ಲಕ್ಷ ರೂಪಾಯಿ ಸಾಲವನ್ನು ತೀರಿಸಿಬಿಟ್ಟರು. ಇದರಿಂದ ಸಾಲದ ಮೇಲೆ ವರ್ಷವರ್ಷವೂ ಕೊಡಬೇಕಾಗಿದ್ದ ನಾಲ್ಕು ಲಕ್ಷ ರೂಪಾಯಿ ಉಳಿಯಿತು.

ಆದಾಯ ಏರಿತು

ಮಹಾಕ್ಷಾಮದ ಪರಿಣಾಮವಾಗಿ ತುಂಬ ಇಳಿದು ಹೋಗಿದ್ದ ಭೂಕಂದಾಯ ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ ಉತ್ತಮಗೊಂಡಿತು. ಇದಕ್ಕೆ ಕಾರಣ ಕ್ಷಾಮದ ನಂತರ ಬೆಳೆಗಳು ಉತ್ತಮಗೊಂಡಿದ್ದು.

ಭೂಕಂದಾಯವಲ್ಲದೆ ಅಬ್ಕಾರಿ, ಅಂದರೆ ಮಾದಕ ಪದಾರ್ಥಗಳ ತಯಾರಿಕೆ ಮತ್ತು ಮಾರಾಟದ ಮೇಲಿನ ತೆರಿಗೆಯಿಂದ ಸರ್ಕಾರಕ್ಕೆ ಆದಾಯ ಬರುತ್ತಿತ್ತು. ಆದರೆ ಈ ಇಲಾಖೆಯ ಕಾರ್ಯವ್ಯವಸ್ಥೆ ಸಮಪರ್ಕವಾಗಿರಲಿಲ್ಲವಾಗಿ, ಮಧ್ಯಸ್ಥಗಾರರ ಕೈವಾಡದಿಂದ, ಈ ಬಾಬಿನಿಂದ ಸರ್ಕಾರಕ್ಕೆ ದೊರೆಯಬೇಕಾದಷ್ಟು ಆದಾಯ ಬರುತ್ತಿರಲಿಲ್ಲ – ಈ ಅಂಶವನ್ನು ಗಮನಿಸಿದ ಶೇಷಾದ್ರಿ ಅಯ್ಯರ್ ಅವರು ಮಾದಕ ವಸ್ತುಗಳ ತಯಾರಿಕೆ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಿ, ಅವುಗಳ ಮೇಲೆ ಸರ್ಕಾರದ ಹಿಡಿತವನ್ನು ಬಲಪಡಿಸಿದರು. ಇದರಿಂದಾಗಿ ಮದ್ಯಪಾನ ಮಾಡುವವರ ಸಂಖ್ಯೆಯಾಗಲೀ ಅವರು ಕುಡಿಯುವ ಮದ್ಯದ ಪ್ರಮಾಣವಾಗಲೀ, ಮದ್ಯದ ಬೆಲೆಯಾಗಲೀ ಹೆಚ್ಚಾಗದೆ ಸರ್ಕಾರಕ್ಕೆ ಬರುತ್ತಿದ್ದ ವರಮಾನ ಮಾತ್ರ ಹೆಚ್ಚಾಯಿತು.

ಕಾಡುಗಳಲ್ಲಿ ಮರಗಳನ್ನು ಮನಸ್ವಿ ಕಡಿಯುತ್ತಿದ್ದುದನ್ನು ತಪ್ಪಿಸಲು ಅರಣ್ಯ ರಕ್ಷಣೆ ಮಾಡಿ, ಹೊಸ ಮರಗಳನ್ನು ಬೆಳೆಸಲು ತಕ್ಕ ವ್ಯವಸ್ಥೆ ಮಾಡಿದ್ದರಿಂದ ಅರಣ್ಯಗಳಿಂದ ಸರ್ಕಾರಕ್ಕೆ ಬರುತ್ತಿದ್ದ ಆದಾಯವೂ ಹೆಚ್ಚಿತು. ಬರಗಾಲದ ಹಾವಳಿಯಿಂದ ರಕ್ಷಿಸುವುದಕ್ಕಾಗಿ, ರೈತರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದಕ್ಕಾಗಿ ಶೇಷಾದ್ರಿ ಅಯ್ಯರ್ ಅವರು ನೀರಾವರಿ ಅಭಿವೃದ್ಧಿಗೆ  ತುಂಬ ಗಮನಕೊಟ್ಟರು. ಕೆರೆಗಳನ್ನು ಕಟ್ಟಿಸಿದರು. ಏತದ ಬಾವಿಯಿಂದ ನೀರಾವರಿ  ಒದಗಿಸಿಕೊಳ್ಳುವವರಿಗೆ  ಉತ್ತೇಜನಕೊಟ್ಟರು. ಮಳೆಯ ಅಭಾವವಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ವಾಣೀವಿಲಾಸ ಸಾಗರದಂತಹ ದೊಡ್ಡ ಜಲಾಶಯದ ನಿರ್ಮಾಣಕ್ಕೆ ಕಾರಣರಾದರು. ವ್ಯವಸಾಯಾಭಿವೃದ್ಧಿಗಾಗಿ ವ್ಯವಸಾಯದ ಇಲಾಖೆಯನ್ನು ಸ್ಥಾಪಿಸಿದರು ರೈತರ ನೆರವಿಗಾಗಿ ವ್ಯವಸಾಯ ಬ್ಯಾಂಕ್ ಗಳನ್ನು ಸ್ಥಾಪಿಸಿದರು. ಕಾಫಿ ತೋಟಗಳ ವಿಸ್ತರಣೆಗೆ ಬೆಂಬಲ ಕೊಟ್ಟರು. ಅಗತ್ಯವಾದ ಅಂಕಿ ಅಂಶಗಳನ್ನು ಸಂಗ್ರಹಿಸಿ ಜಮೀನುಗಳನ್ನು ಅಳತೆ ಮಾಡಿಸಿ ಭೂ ಕಂದಾಯವನ್ನು ನಿಗದಿ ಮಾಡಿ ರೈತರಿಗೆ ಅನುಕೂಲ ಮಾಡಿದರು.

ಹೀಗ ಶೇಷಾದ್ರಿ ಅಯ್ಯರ್ ರವರು ಕೈಗೊಂಡ ನಾನಾ ವಿಧವಾದ ಅಭಿವೃದ್ಧಿ ಕಾರ್ಯಗಳ ಪರಿಣಾಮವಾಗಿ, ಅವರ ಅಧಿಕಾರಾವಧಿಯಲ್ಲಿ ಸಂಸ್ಥಾನದ ಆದಾಯ ನೂರಕ್ಕೆ ಎಂಬತ್ತರಷ್ಟು ಹೆಚ್ಚಿತು. ಇದು ಅವರ ಆಡಳಿತ ದಕ್ಷತೆ, ದೂರದೃಷ್ಟಿಯಿಂದ ಕೂಡಿದ ಕಾರ್ಯಾಚರಣೆಗೆ ಕೈಗನ್ನಡಿ.

ಮೈಸೂರು ಸಂಸ್ಥಾನದಲ್ಲಿ ಖನಿಜ ಸಂಪತ್ತು ಹೇರಳವಾಗಿದೆ ಎಂಬುದನ್ನು ಗಮನಿಸಿದ ಶೇಷಾದ್ರಿ ಅಯ್ಯರ್ ಅವರು ಖನಿಜಗಳು ದೊರೆಯುವ ಪ್ರದೇಶಗಳನ್ನು ಗುರುತಿಸಲು  ಮತ್ತು ಖನಿಜ ಉತ್ಪಾದನೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಭೂಗರ್ಭ ಶೋಧನೆ ಮತ್ತು ಗಣಿ ಇಲಾಖೆಯನ್ನು ಸ್ಥಾಪಿಸಿದರು. ಕೋಲಾರ ಚಿನ್ನದ ಗಣಿ ಕೆಲಸ ಲಾಭದಾಯಕವಾಗಿ ನಡೆದು ಅದರಿಂದ ಸರ್ಕಾರಕ್ಕೆ ರಾಜಾದಾಯ ಸಲ್ಲಲು ಆರಂಭವಾದದ್ದು ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ. ಈ ರಾಜಾದಾಯ ವರ್ಷವರ್ಷಕ್ಕೆ ಏರುತ್ತಾ ಹೋಗಿ ಸರ್ಕಾರದ ವಾರ್ಷಿಕ ಆದಾಯದ ಒಂದು ಗಣನೀಯ ಭಾಗವಾಯಿತು.

ಶಿವನಸಮುದ್ರದ ಜಲವಿದ್ಯುತ್ ಉತ್ಪಾದನಾ ಯೋಜನೆ ಶೇಷಾದ್ರಿ ಅಯ್ಯರ್ ಅವರ ಅದ್ಭುತ ಸಾಧನೆಗಳಲ್ಲಿ ಒಂದು. ಇಡೀ ಭಾರತದಲ್ಲೇ ಮೊಟ್ಟ ಮೊದಲನೆಯದಾದ ಈ ಯೋಜನೆಯನ್ನು ಆದಷ್ಟು ಕಡಿಮೆ ವೆಚ್ಚದಿಂದ, ಅತ್ಯಂತ ಶೀಘ್ರವಾಗಿ ಕಾರ್ಯರೂಪಕ್ಕೆ ತಂದ ಕೀರ್ತಿ ಶೇಷಾದ್ರಿ ಅಯ್ಯರ್ ಅವರದು. ಆಗಿನ ಕಾಲಕ್ಕೆ ವಿದ್ಯುತ್ತನ್ನು ಉತ್ಪಾದಿಸುವ ಸ್ಥಳದಿಂದ ಅದನ್ನು ನಲವತ್ತು ಮೈಲಿಗಳಷ್ಟು ದೂರಕ್ಕೆ ಸಾಗಿಸುವುದೇ ಒಂದು ವಿಶೇಷ ಸಾಧನೆಯಾಗಿತ್ತು.  ಆಗಿನ ಮುಂದುವರೆದ ರಾಷ್ಟ್ರಗಳಲ್ಲಿ ಕೂಡ. ಅಂತಹುದರಲ್ಲಿ ಅದನ್ನು ಶಿವನಸಮುದ್ರದಿಂದ ಕೋಲಾರ ಚಿನ್ನದ ಗಣಿಗಳಿಗೆ ಸುಮಾರು ೧೦೦ ಮೈಲಿ ದೂರಕ್ಕೆ ಸಾಗಿಸುವ ಸಾಹಸ ಮಾಡಿದರು ಶೇಷಾದ್ರಿ ಅಯ್ಯರ್. ಇದರಿಂದ ಚಿನ್ನದ ಗಣಿಗಳ ಉತ್ಪಾದನೆ ಹೆಚ್ಚಲು ಅವಕಾಶವಾಯಿತಲ್ಲದೆ, ವಿದ್ಯುತ್ ಸರಬರಾಜಿನಿಂದ ಸರ್ಕಾರದ ಆದಾಯವೂ ಏರಿತು.

ಜನರ ಸುಖ, ಸಂಪತ್ತಿಗಾಗಿ

ಸರ್ಕಾರದ ಆದಾಯವನ್ನು ಹೆಚ್ಚಿಸುವುದೊಂದೇ ಶೇಷಾದ್ರಿ ಅಯ್ಯರ್ ಅವರ ಧ್ಯೇಯವಾಗಿರಲಿಲ್ಲ. ಸಂಸ್ಥಾನದ ಜನರ ಬಹುಮುಖ ಅಭಿವೃದ್ಧಿ ಅವರ ಗುರಿಯಾಗಿತ್ತು. ಆದ್ದರಿಂದ ಅವರು ವಿದ್ಯಾಭ್ಯಾಸದ ಸೌಕರ್ಯಗಳನ್ನು ಒಳನಾಡಿಗೆ ವಿಸ್ತರಿಸಿದರು. ಹರಿಜನರಿಗಾಗಿ ಶಾಲೆಗಳನ್ನು ಸ್ಥಾಪಿಸಿದರು. ರೈತರು ಕಾರ್ಮಿಕರನ್ನು ಅಕ್ಷರಸ್ಥರನ್ನಾಗಿ ಮಾಡಲು ರಾತ್ರಿ ಶಾಲೆಗಳನ್ನು ಏರ್ಪಡಿಸಿದರು. ವೈದ್ಯಕೀಯ ನೆರವಿನ ಪ್ರಮಾಣ ಹೆಚ್ಚಿಸಿದರು. ಸಂಸ್ಥಾನದ ಎಲ್ಲ ಭಾಗಗಳಲ್ಲೂ ಸುಶಿಕ್ಷಿತ ಸೂಲಗಿತ್ತಿಯರನ್ನು ನೇಮಿಸಲಾಗಿತ್ತು. ಜಿಲ್ಲಾ ಕೇಂದ್ರಗಳಲ್ಲಿ ಹೆಂಗಸರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಆಸ್ಪತ್ರೆಗಳನ್ನು ಸ್ಥಾಪಿಸಲಾಯಿತು. ಅಖಿಲ ಭಾರತ ಖ್ಯಾತಿಯನ್ನು ಗಳಿಸಿದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸ್ಥಾಪಿತವಾದದ್ದು ಕೂಡ ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲೇ.

ಜನರು ವಾಸ ಮಾಡುವ ಪ್ರದೇಶಗಳನ್ನು ಶುಚಿಯಾಗಿಡುವುದು ಅವರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ತುಂಬ ಮುಖ್ಯವಾದದ್ದೆಂಬುದನ್ನು ಶೇಷಾದ್ರಿ ಅಯ್ಯರ್ ಮನಗಂಡಿದ್ದರು. ಅನೇಕ ಊರುಗಳಲ್ಲಿ ಹೊಸದಾಗಿ ಪುರಸಭೆಗಳನ್ನು ಸ್ಥಾಪಿಸಿದರು. ಪುರಸಭೆಗಳು ತಮ್ಮ ಪ್ರದೇಶವನ್ನು ಹೆಚ್ಚು ಹೆಚ್ಚು ನಿಮ್ಲವಾಗಿಡಲು ಶ್ರದ್ಧೆ ವಹಿಸುವಂತೆ ಮಾಡಿದರು.

ಮೈಸೂರು, ಬೆಂಗಳೂರು ನಗರಗಳಿಗೆ ಶುದ್ಧವಾದ ನೀರಿನ ಸರಬರಾಜು ಮತ್ತು ಚರಂಡಿ ವ್ಯವಸ್ಥೆಗಳನ್ನು ಮಾಡಿದವರೂ ಈ ನಗರಗಳ ವಿಸ್ತರಣೆ ಸಮರ್ಪಕವಾದ ರೀತಿಯಲ್ಲಿ ನಡೆಯುವಂತೆ ನಿಯೋಜಿಸಿದವರೂ ಶೇಷಾದ್ರಿ ಅಯ್ಯರ್ ಅವರೇ. ಬೆಂಗಳೂರಿನ ಬಸವನಗುಡಿ ಮತ್ತು ಮಲ್ಲೇಶ್ವರ ವಿಸ್ತರಣಗಳು ರೂಪುಗೊಂಡಿದ್ದು ಅವರ ಕಾಲದಲ್ಲೇ.

ಅವರು ಕೈಗೊಂಡ ಜನಹಿತ ಕಾರ್ಯಗಳು ಇಷ್ಟು ಮಾತ್ರವಲ್ಲ; ಇನ್ನೂ ಅನೇಕ. ನಮ್ಮ ಜನತೆಯ ಕಲಾ ಸಂಸ್ಕೃತಿಗಳ ರಕ್ಷಣೆ ಅಭಿವೃದ್ಧಿಗಳಲ್ಲಿ ಕೂಡ ಅವರಿಗೆ ಅಪಾರ ಆಸಕ್ತಿಯಿತ್ತು. ಪೂರ್ವಕಾಲದ ದೇವಾಲಯಗಳು, ಇತರ ಕಟ್ಟಡಗಳ ರಕ್ಷಣೆ, ಶಾಸನಗಳ ಸಂಗ್ರಹಣೆ ಮತ್ತು ಪ್ರಕಟಣೆ, ಇತಿಹಾಸ ಸಂಶೋಧನೆ ಮುಂತಾದ ಕಾರ್ಯಗಳನ್ನು ನಡೆಸಲು ಪುರಾತತ್ತ್ವ ಶೋಧನೆ ಇಲಾಖೆಯನ್ನು ಸ್ಥಾಪಿಸಿದರು. ಸಂಸ್ಕೃತ ಮತ್ತು ಕನ್ನಡ ಭಾಷೆಯ ಪ್ರಾಚೀನ ಗ್ರಂಥಗಳ ಹಸ್ತ ಪ್ರತಿಗಳನ್ನು ಸಂಗ್ರಹಿಸಿಡುವ ಪ್ರಕಟಿಸುವ ಉದ್ದೇಶದಿಂದ ಮೈಸೂರಿನಲ್ಲಿ ಓರಿಯಂಟಲ್ ಲೈಬ್ರರಿ (ಈಗ ಇದರ ಹೆಸರು ಓರಿಯೆಂಟಲ್ ರಿಸರ್ಚ್ ಇನ್ ಸ್ಟಿಟ್ಯೂಟ್) ಸ್ಥಾಪಿತವಾದದ್ದು ಕೂಡ ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲೇ.

ಕುಟುಂಬಗಳ ಹಿತರಕ್ಷಣೆ

ಸಮಾಜದಲ್ಲಿ ಬೇರುಬಿಟ್ಟಿದ್ದ ಅಹಿತ ಪದ್ಧತಿ, ಆಚಾರಗಳನ್ನು ನಿವಾರಿಸಲು ತಕ್ಕ ಶಾಸನಗಳನ್ನು ರಚಿಸುವುದು ಸರ್ಕಾರದ ಕರ್ತವ್ಯವೆಂಬುದು ಶೇಷಾದ್ರಿ ಅಯ್ಯರ್ ಅವರ ಅಭಿಪ್ರಾಯವಾಗಿತ್ತು. ಆಗಿನ ಕಾಲದಲ್ಲಿ ಶಿಶುವಿವಾಹ ಅಂದರೆ ೪-೫ ವರ್ಷ ವಯಸ್ಸಿನ  ಮಕ್ಕಳಿಗೆ ಮದುವೆ ಮಾಡುವ ಪದ್ಧತಿಯಿತ್ತು. ೪-೫ ವರ್ಷ ತುಂಬುವುದರೊಳಗಾಗಿ ಅನೇಕ ಮಂದಿ ಹೆಣ್ಣು ಮಕ್ಕಳು ವಿಧವೆಯರೂ ಆಗುತ್ತಿದ್ದರು. ಸುಧಾರಿತ ಜನ ಶಿಶುವಿವಾಹಕ್ಕೆ ವಿರೋಧಿಗಳಾಗಿದ್ದರು. ಇಂತಹ ವಿವಾಹಗಳು ನಿಲ್ಲಬೇಕೆಂದು ಅವರ ವಾದಿಸುತ್ತಿದ್ದರು. ಆದರೆ ಅದೇನೂ ಪರಿಣಾಮಕಾರಿಯಾಗಲಿಲ್ಲ. ಕಾನೂನಿನ ಬೆಂಬಲವಿಲ್ಲದೆ, ಈ ದುಷ್ಟ ಪದ್ಧತಿ ನಿಲ್ಲುವುದಿಲ್ಲವೆಂದು ಭಾವಿಸಿದ ಶೇಷಾದ್ರಿ ಅಯ್ಯರ್ ಅವರು ಶಿಶುವಿವಾಹ ನಿರೋಧಕ ಕಾನೂನನ್ನು ಜಾರಿಗೆ ತಂದರು. ಇದರಿಂದಾಗಿ ಜನ ಶಿಶುವಿವಾಹಗಳನ್ನು ನಿಲ್ಲಿಸಲೇಬೇಕಾಯಿತು. ಆ ಕಾಲಕ್ಕೆ ಬ್ರಿಟಿಷ್ ಇಂಡಿಯಾ ಪ್ರದೇಶದಲ್ಲಿ ಕೂಡ ಇಂತಹ ಕಾನೂನು ಇರಲಿಲ್ಲವೆಂಬುದು ಗಮನಾರ್ಹ.

ಸರ್ಕಾರಿ ನೌಕರರು, ಅದರಲ್ಲಿಯೂ ಕಡಿಮೆ ಸಂಬಳದ ನೌಕರರು ಅಕಾಲ ಮರಣಕ್ಕೆ ತುತ್ತಾದಾಗ ಅಥವಾ ಕೆಲಸದಿಂದ ನಿವೃತ್ತರಾದಾಗ ಅವರ ಸಂಸಾರಗಳು ಹಣವಿಲ್ಲದೆ ಬಹು ಕಷ್ಟ ಸ್ಥಿತಿಗೆ ಸಿಕ್ಕಿಕೊಳ್ಳುತ್ತಿದ್ದವು. ಇದನ್ನು ಗಮನಿಸಿದ ಶೇಷಾದ್ರಿ ಅಯ್ಯರ್ ಅವರು ಅಂತಹ ಕಷ್ಟಗಳ ನಿವಾರಣೆಗಾಗಿ ಸರ್ಕಾರಿ ನೌಕರರರಲ್ಲಿ ಒತ್ತಾಯದ ಜೀವ ವಿಮಾ ಪದ್ಧತಿಯನ್ನು ಆಚರಣೆಗೆ ತಂದರು. ಆ ಕಾಲಕ್ಕೆ ಇಂತಹ ಸೌಲಭ್ಯ ಭಾರತದ ಇನ್ನಾವ ಪ್ರದೇಶದಲ್ಲೂ ಜಾರಿಯಲ್ಲಿರಲಿಲ್ಲ. ಶೇಷಾದ್ರಿ ಅಯ್ಯರ್ ಅವರ ದೂರದೃಷ್ಟಿ, ಬಡವರ ಮೇಲೆ ಅವರಿಗಿದ್ದ ಅನುಕಂಪಗಳಿಗೆ ಇದು ಸಾಕ್ಷಿಯಾಗಿದೆ.

ಗೌರವಗಳು

ವರ್ಷಗಟ್ಟಲೆ ಶ್ರಮಪಟ್ಟಿದ್ದರಿಂದಲೇ ಶೇಷಾದ್ರಿ ಅಯ್ಯರ್ ಅವರ ಆರೋಗ್ಯ ಕೆಡುತ್ತ ಬಂದಿತ್ತು. ತೀವ್ರ ಅನಾರೋಗ್ಯದ ನಿಮಿತ್ತ ೧೯೦೧ ಮಾರ್ಚ್ ೧೮ ರಂದು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟರು.

ದಿವಾನರ ಅಧಿಕಾರಕ್ಕೆ ರಾಜೀನಾಮೆ ಕೊಟ್ಟು ನಿವೃತ್ತರಾದ ಮೇಲೆ ಶೇಷಾದ್ರಿ ಅಯ್ಯರ್ ಅವರು ಬದುಕಿದ್ದು ಕೇವಲ ಆರು ತಿಂಗಳಷ್ಟು ಮಾತ್ರ. ೧೯೦೧ ಸೆಪ್ಟೆಂಬರ್ ೧೩ ರಂದು ಅವರು ತೀರಿಕೊಂಡರು. ಅವರ ಸಾವಿಗಾಗಿ, ಮೈಸೂರಿನ ಜನ, ಮಹಾರಾಣಿ ಇವರು ಮಾತ್ರವಲ್ಲ ಭಾರತದ ವೈಸ್ ರಾಯ್ ಅವರು ಮೊದಲುಗೊಂಡು ಅನೇಕ ವಿದೇಶಿ ಪ್ರಮುಖರೂ ಭಾರತೀಯ ಮುಖಂಡರೂ ಶೋಕಕ್ಕೊಳಗಾದರು. ಶೇಷಾದ್ರಿ ಅಯ್ಯರ್ ಅವರು ಮೈಸೂರು ಸಂಸ್ಥಾನಕ್ಕೆಸಲ್ಲಿಸಿರುವ ಅಪಾರ ಸೇವೆಯನ್ನು ಗಮನಿಸಿ ಅವರ ನೆನಪಿಗಾಗಿ ಉಚಿತ ಸ್ಮಾರಕವನ್ನು ರಚಿಸುವುದು ಅವಶ್ಯಕವೆಂದು ವೈಸ್ ರಾಯ್ ಲಾರ್ಡ್ ಕರ್ಜನ ಅವರೇ ಸೂಚಿಸಿದರು. ಅಷ್ಟು ಮಾತ್ರವಲ್ಲ, ಅದಕ್ಕಾಗಿ ತಾವೇ ಪ್ರಥಮ ವಂತಿಗೆಯನ್ನು ಕೊಟ್ಟರು. ಅನಂತರ ಸ್ಮಾರಕ ರಚನೆಗಾಗಿ ಸಾರ್ವಜನಿಕರಿಂದ ಧನ ಸಂಗ್ರಹ ಮಾಡಿ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಸಾರ್ವಜನಿಕ ಪುಸ್ತಕ ಭಂಡಾರದ ಕಟ್ಟಡದ ಮುಂದಿರುವ ಶೇಷಾದ್ರಿ ಅಯ್ಯರ್ ಅವರ ಪ್ರತಿಮೆಯನ್ನು ಅವರ ಸ್ಮಾರಕವಾಗಿ ಸ್ಥಾಪಿಸಲಾಯಿತು. ವೈಸ್ ರಾಯ್ ಲಾರ್ಡ್ ಹಾರ್ಡಿಂಗ್ ರವರು ೧೯೧೩ರಲ್ಲಿ ಈ ಪ್ರತಿಮೆಯ ಅನಾವರಣ ಮಹೋತ್ಸವವನ್ನು ನೆರವೇರಿಸಿದರು.

ದರ್ಪ, ದಕ್ಷತೆ, ದೊಡ್ಡತನ

ಶೇಷಾದ್ರಿ ಅಯ್ಯರ್ ಅವರ ಮೈಕಟ್ಟು ಪುಷ್ಪ, ಭವ್ಯ,  ಅವರ ನಡೆ, ನಡವಳಿಕೆ ಎರಡೂ ಗಂಭೀರ. ನೋಡಿದೊಡನೆಯೇ ಗೌರವವನ್ನು ಉಂಟು ಮಾಡುವಂತಹ ವ್ಯಕ್ತಿತ್ವ. ಅವರು ಕಾರ್ಯದಕ್ಷರಾಗಿದ್ದಂತೆ ದರ್ಪ ಶೀಳರೂ ಆಗಿದರು. ಯಾರೇ ಆಗಲಿ, ಅವರು ತಮಗೆ ವಹಿಸಿದ ಕಾರ್ಯವನ್ನು ಗೊತ್ತಾದ ಹೊತ್ತಿಗೆ ಸರಿಯಾಗಿ, ಸಮರ್ಪಕವಾಗಿ ಮಾಡಿ ಮುಗಿಸದೆ ಇದ್ದರೆ ಶೇಷಾದ್ರಿ ಅಯ್ಯರ್ ಅವರಿಗೆ ತುಂಬ ಕೋಪ ಬರುತ್ತಿತ್ತು. ಯಾವ ದಾಕ್ಷಿಣ್ಯಕ್ಕೂ ಒಳಗಾಗದೆ ಅಂತಹವರನ್ನು ಖಂಡಿಸುತ್ತಿದ್ದರು; ದಂಡಿಸುತ್ತಿದ್ದರು.

ಇಂಡಿಯಾ ಸರ್ಕಾರದ ಸೇವೆಯಲ್ಲಿದ್ದು ಮೈಸೂರು ಸರ್ಕಾರಕ್ಕೆ ಎರವಲಾಗಿ ಬಂದಿದ್ದ ಬ್ರಿಟಿಷ್ ಅಧಿಕಾರಿ ಒಬ್ಬ ಇದ್ದ. ಒಂದು ಗೊತ್ತಾದ ಕಾಲಕ್ಕೆ ಸರಿಯಾಗಿ ಮುಗಿಸಿಕೊಡಬೇಕಾದ ಮುಖ್ಯ ಕೆಲಸವನ್ನು ಅವನಿಗೆ ವಹಿಸಲಾಗಿತ್ತು. ಆ ಕೆಲಸ ಎಷ್ಟು ವೇಗವಾಗಿ ನಡೆಯಬೇಕಾಗಿತ್ತೋ ಅಷ್ಟು ವೇಗವಾಗಿ ನಡೆಯುತ್ತಿಲ್ಲವೆಂಬುದನ್ನು ಗಮನಿಸಿ ಶೇಷಾದ್ರಿ ಅಯ್ಯರ್  ಅವರು ಆ ಬ್ರಿಟಿಷ್ ಅಧಿಕಾರಿಯನ್ನು ಕರೆಸಿ, ’ಕೆಲಸ ಏಕೆ ತಡವಾಗುತ್ತದೆ?’ ಎಂದು ಕೇಳೀದರು. ಅವನಿಗೆ ತಾನು ಇಂಗ್ಲಿಷರವನು, ತನಗೆ ಏನನ್ನೂ ಇವರು ಮಾಡಲಾರರು ಎಂಭ ಧೈರ್ಯ, ತಾನು ಸಂಸ್ಥಾನದ ಅತ್ಯುನ್ನತ ಅಧಿಕಾರಿಯಾದ ದಿವಾನರೊಡನೆ ಮಾತನಾಡುತ್ತಿದ್ದೇನೆಂಬುದನ್ನು ಕೂಡ ಲಕ್ಷಿಸದೆ ಆತ, ಅವರ ಮುಖಭಂಗ ಮಾಡುವ ಧಾಟಿಯಲ್ಲಿ, ’ತಡವಾದರೆ ಏನು ಮಾಡುವುದಕ್ಕಾಗುತ್ತದೆ? ನನಗೆ ತಕ್ಕ ಸಹಾಯಕರಿಲ್ಲ, ಸೌಲಭ್ಯಗಳಿಲ್ಲ’ ಎಂದು ಮೂದಲಿಸಿದ.

ಶೇಷಾದ್ರಿ ಅಯ್ಯರ್ ಅವರಿಗೆ ಕೋಪ ಬಂತು ’ ತಪ್ಪು ತನ್ನದಿದ್ದರೂ ಭಾರತೀಯ ದಕ್ಷತೆಯನ್ನು ಹೀಯಾಳಿಸುತ್ತಿದ್ದಾನೆಂದು ಅವರ ನಾಲಿಗೆ ಚುರುಕಾಯಿತು. ಕೆಲಸ ಒಪ್ಪಿಕೊಳ್ಳುವ ಮೊದಲು ಅದನ್ನೆಲ್ಲಾ ಯೋಚಿಸಬೇಕಾಗಿತ್ತು. ಈಗಲಾದರೂ ಸರಿ, ಕೆಲಸವನ್ನು ವೇಗಗೊಳಿಸಿ ಅದನ್ನು ಗೊತ್ತಾದ ಕಾಲಕ್ಕೆ ಸರಿಯಾಗಿ ಮಾಡಿ ಮುಗಿಸುವುದು ನಿನ್ನ ಜವಾಬ್ದಾರಿ ಎಂಬುದನ್ನು ಮರೆಯಬೇಡ’ ಎಂದು ಎಚ್ಚರಿಕೆ ಕೊಟ್ಟರು. ತಾನು ಬಿಳಿಯನೆಂದು ಕೊಬ್ಬು ಆ ಅಧಿಕಾರಿಗೆ.”ನನ್ನ ಕೆಲಸ ನಿಮಗೆ ಸಮರ್ಪಕವಾಗಿ ಕಾಣದಿದ್ದರೆ ನನ್ನನ್ನು ಇಲ್ಲಿಂದ ಬಿಡುಗಡೆ ಮಾಡಿ. ಇಂಡಿಯಾ ಸರ್ಕಾರದಲ್ಲಿ ನನಗಿದ್ದ ಕೆಲಸಕ್ಕೆ ಹಿಂದಿರುಗುತ್ತೇನೆ’ ಎಂದ ರಾಜಠೀವಿಯಿಂದ.

ಈ ಅಹಂಕಾರಿಗೆ ಬುದ್ಧಿ ಕಲಿಸಲೇಬೇಕೆಂದು ನಿರ್ಧರಿಸಿ ಶೇಷಾದ್ರಿ ಅಯ್ಯರ್ ಅವನಿಗೆ , ’ಇಲ್ಲಿಂದ ನಿನ್ನ ಹಳೇ ಕೆಲಸಕ್ಕೆ ಹಿಂದಿರುಗುತ್ತೀಯಾ? ಈಗ ನಿನಗೆ ಕೊಟ್ಟಿರುವ ಕೆಲಸವನ್ನು ನೀನು ಸಮರ್ಪಕವಾಗಿ,ಸಕಾಲದಲ್ಲಿ ಮುಗಿಸದೆ ಇದ್ದರೆ ನೀನು  ಹಿಂದಿರುಗುವುದು ನಿನ್ನ ಹಿಂದಿನ ಕೆಲಸಕ್ಕಲ್ಲ; ನಿನ್ನ ದೇಶಕ್ಕೆ. ನಿನ್ನ ಅದಕ್ಷತೆಯ ವಿಚಾರವಾಗಿ ಇಂಡಿಯ ಸರ್ಕಾರಕ್ಕೆ ಪತ್ರ ಬರೆದು, ನಿನ್ನನ್ನು ಕೆಲಸದಿಂದ ತೆಗೆದುಹಾಕಿಸುತ್ತೇನೆ ’ ಎಂದರು.

ಬಿಳಿಯ ಅಧಿಕಾರಿಗೆ, ಶೇಷಾದ್ರಿ ಅಯ್ಯರ್ ಅವರ ಮಾತಿನ ಬಿಸಿ ತಟ್ಟಿತು. ಅವರ ಸೂಚನೆ ಅಭಿಪ್ರಾಯಗಳನ್ನು ಇಂಡಿಯಾ ಸರ್ಕಾರ ಗೌರವಿಸುವುದೆಂಬುದು ಅವನಿಗೆ ಗೊತ್ತಿತ್ತು. ತನ್ನ ಅಹಂಕಾರವನ್ನು ನುಂಗಿಕೊಂಡು, ’ಆಯಿತು, ಗೊತ್ತಾದ ಹೊತ್ತಿಗೆ ಕೆಲಸ ಮಾಡಿ ಮುಗಿಸಲು ಪ್ರಯತ್ನಿಸುತ್ತೇನೆ’ ಎಂದು ಹೇಳಿ ಹೊರಟ. ಕಾಲಕ್ಕೆ ಸರಿಯಾಗಿ ಕೆಲಸವನ್ನು ಮುಗಿಸಿದ. ಅವನು ಸಮರ್ಪಕವಾಗಿ ಕೆಲಸ ನಡೆಸಿಕೊಟ್ಟ ಮೇಲೆ ಶೇಷಾದ್ರಿ ಅಯ್ಯರ್ ಅವನನ್ನು ಅಭಿನಂದಿಸಿದರು. ದರ್ಪದ ಜೊತೆಗೆ ಅಂತಹ ದೊಡ್ಡತನವೂ ಇತ್ತು ಅವರಿಗೆ. ಅವರ ಈ ದೊಡ್ಡತನವನ್ನು ಗ್ರಹಿಸದ ಕೆಲವರು ಅವರ ದರ್ಪಶೀಲತೆಗಾಗಿ ಅವರನ್ನು ವಿರೋಧಿಸಿದ್ದರೂ ಉಂಟು. ಅಂತಹ ವಿರೋಧಿಗಳನ್ನು ಶೇಷಾದ್ರಿ ಅಯ್ಯರ್ ದಿಟ್ಟತನದಿಂದ ಇದಿರಿಸಿದರು. ಒಂದೆರಡು ಸಂದರ್ಭಗಳಲ್ಲಿ ಅಂತಹವರಿಗೆ ಚುರುಕು ಮುಟ್ಟಿಸಿದ್ದೂ ಉಂಟು. ಅದಕ್ಕಾಗಿ ಕಟು ಟೀಕೆಗೆ ಗುರಿಯಾದದ್ದೂ ಉಂಟು.

ದೇಶಹಿತಕ್ಕಾಗಿ ತಾವು ಕೈಗೊಂಡ ಕಾರ್ಯಗಳು ಶೀಘ್ರವಾಗಿ ಸಮರ್ಪಕವಾಗಿ ನಡೆಯಬೇಕೆಂಬುದು ಅವರ ಅಪೇಕ್ಷೆಯಾಗಿತ್ತು. ಅದಕ್ಕೆ ಅಡ್ಡಿ ಅಡಚಣೆಗಳು ಅವು ಯಾರಿಂದಲೇ ಬರಲಿ, ಸಹಿಸುತ್ತಿರಲಿಲ್ಲ. ಅವರ ದೃಷ್ಟಿ ಯಾವಾಗಲೂ ಜನರ ಮತ್ತು ರಾಜ್ಯದ ಹಿತಸಾಧನೆಯ ಮೇಲಿತ್ತು. ಆ ಧ್ಯೇಯಸಾಧನೆಗಾಗಿ ಅವರು ತಮ್ಮ ಶಕ್ತಿ, ಸಾಮರ್ಥ್ಯ ಮಾತ್ರವಲ್ಲ ಇಡೀ ಜೀವನವನ್ನು ಮುಡಿಪಾಗಿಟ್ಟು ದುಡಿದರು.

ಕೆಲಸ ಸಮರ್ಪಕವಾಗಿ ಮುಗಿಸದಿದ್ದರೆ ನೀನು ಹಿಂದಿರುಗುವುದು ನಿನ್ನ ದೇಶಕ್ಕೆ’

ಆದುದರಿಂದಲೇ ಮೈಸೂರು ಮಹಾರಾಜರು ಅವರಿಗೆ  ’ರಾಜ್ಯಧುರಂಧರ’ ಎಂಬ ಬಿರುದನ್ನು ಕೊಟ್ಟು ಗೌರವಿಸಿದರು. ಅವರಿಗೆ ಬ್ರಿಟಿಷ್ ಸರ್ಕಾರ ಕೊಟ್ಟ ’ಸಿ.ಎಸ್.ಐ, ಕೆ.ಸಿ. ಎಸ್.ಐ., ಸರ್ ಮುಂತಾದ ಪ್ರಶಸ್ತಿಗಳಿಗಿಂತ ಹೆಚ್ಚು ಅರ್ಥಪೂರ್ಣವಾದ ಬಿರುದು ರಾಜಧುರಂಧರ ರಾಜ್ಯಾಡಳಿತ, ಅಭಿವೃದ್ಧಿಗಳ ಹಿರಿಯ ಭಾರವನ್ನು ಯಶಸ್ವಿಯಾಗಿ ಹೊತ್ತ ಮಹನೀಯರು ಶೇಷಾದ್ರಿ ಅಯ್ಯರ್.