ಕರ್ನಾಟಕದ ಹೆಸರಾಂತ ತಬಲಾ ವಾದಕರಾಗಿರುವ ಕೆ. ಸಿದ್ದೇಶ ಕುಮಾರ ಅವರು ಕನ್ನಡ ನಾಡು ಕಂಡ ಅಪರೂಪದ ಕಲಾವಿದರು. ಹಲವು ಭಾಷೆಗಳನ್ನು ಕಲಿತು ಸಾಹಿತಿಗಳೂ, ಕವಿಗಳೂ ಆಗಿರುವ ಅವರು ಸಂಗೀತ ಹಾಗೂ ಗೀತ ರಚನೆಯಲ್ಲಿ ಹೆಸರು ಪಡೆದಿದ್ದಾರೆ.

ಅವರು ಜನಿಸಿದ್ದು ಹರತನಹಳ್ಳಿಯಲ್ಲಿ. ತಮ್ಮ ಬಾಲ್ಯದಲ್ಲಿಯೇ ಸಂಗೀತದತ್ತ ಒಲವು ಪಡೆದಿರುವ ಅವರು ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ ಶಿಷ್ಯತ್ವ ಹೊಂದಿ ತಬಲಾ ವಾದನದಲ್ಲಿ ವಿಶೇಷ ಪರಿಣತಿ ಪಡೆದುಕೊಂಡಿದ್ದಾರೆ.

ಬೆಂಗಳೂರು ಹಾಗೂ ಚೆನ್ನೈ ಆಕಾಶವಾಣಿ ಕೇಂದ್ರಗಳಲ್ಲಿ ತಬಲಾ ಕಲಾವಿದರಾಗಿ ದೇಶದ ಅನೇಕ ಮಹಾನ್‌ ಸಮರ್ಥವಾಗಿ ತಬಲಾ ಸಾಥ್‌ ನೀಡಿದ ಅಗ್ಗಳಿಕೆ ಅವರದು. ಅನೇಕ ಸಿನೇಮಾ ಸಂಗೀತಕ್ಕೂ ತಬಲಾ, ಢೊಲಕ, ಪಖಮಾಜ್‌ ನುಡಿಸಿದ್ದಾರೆ.

ಅವರ ಸಾಹಿತ್ಯ ಕೃಷಿ ಗಮನಾರ್ಹ. ಅನೇಕ ಲಾವಣಿ ರಚಿಸಿದ್ದಾರೆ. ಸ್ತೋತ್ರಮಾಲಾ, ಸುಪ್ರಭಾತ ರಚನೆ, ಸಂಗೀತ ಸಂಯೋಜಿಸಿದ್ದಾರೆ. ತಮ್ಮ ಗುರುಗಳ ಬಗ್ಗೆ ರಚಿಸಿರುವ ಇವರ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಪುರಾಣ, ಕಥೆ, ಜೀವನ ಚರಿತ್ರೆಯನ್ನು ಸಂಗೀತಕ್ಕೆ ಅಳವಡಿಸಿ ಪ್ರಚುರ ಪಡಿಸುವುದರಲ್ಲಿ ನಿಸ್ಸೀಮರು. ಭಕ್ತಿ, ತತ್ವಪದ, ಲಾವಣಿ, ನಾಮಾವಣಿ ಹಾಗೂ ಅಷ್ಟೋತ್ತರಗಳನ್ನೊಳಗೊಂಡ ಐದು ಪುಸ್ತಕಗಳು ಅವರು ರಚಿಸಿದ್ದಾರೆ. ಅವರು ಅನೇಕ ಸುಪ್ರಭಾತಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಅವರು ರಚನೆ ಸ್ವರ ಸಂಯೋಜಿಸಿರುವ ಎಡೆಯೂರು ಸಿದ್ಧಲಿಂಗೇಶ್ವರ, ಶ್ರೀ ಶೈಲ ಮಲ್ಲಿಕಾರ್ಜುನ ಹಾಗೂ ಪಂಚಾಕ್ಷರಿ ಶಿವಯೋಗಿಗಳ ಸುಪ್ರಭಾತಗಳು ತುಂಬ ಜನಪ್ರಿಯತೆ ಪಡೆದಿವೆ.

ಹೀಗೆ ಶ್ರೇಷ್ಠ ತಬಲಾ ಕಲಾವಿದರಾಗಿ, ದೇಶದ ಹೆಸರಾಂತ ಸಂಗೀತಗಾರರಿಗೆ ತಬಲಾ ಸಾಥ್‌ ನೀಡಿ, ಭಕ್ತಿಪರ ಸಾಹಿತ್ಯ ರಚನೆ, ಸ್ವರ ಸಂಯೋಜನೆ ಜನಾನುರಾಗಿಯಾಗಿರುವ ಶ್ರೀ ಕೆ. ಸಿದ್ದೇಶ ಕುಮಾರ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ (೧೯೯೨-೯೩) ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.