ಅತ್ಯಂತ ಕಠಿಣ ಗಾಳಿವಾದ್ಯ ಕ್ಲಾರಿಯೋನೆಟ್‌ ವಾದ್ಯವನ್ನು ಕಲಿತು, ಅದರಲ್ಲಿ ವಿಶೇಷ ಸಾಧನೆ ಮಾಡಿ ಹೆಸರು ಸಂಪಾದಿಸಿರುವ ಕಂಪ್ಲಿಯ ಶ್ರೀ ಕೆ. ಹನುಮಂತಪ್ಪ ಕರ್ನಾಟಕದ ಅಪರೂಪದ ಕ್ಲಾರಿಯೋನೆಟ್‌ ವಾದಕರಲ್ಲೊಬ್ಬರು. ೧೯೫೨ರಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಕೊರಚ ಜನಾಂಗದಲ್ಲಿ ಜನಿಸಿದ ಶ್ರೀ ಕೆ. ಹನುಮಂತಪ್ಪ ಅವರಿಗೆ ಸಂಗೀತದಲ್ಲಿ ಆಸಕ್ತಿ ಮೂಡಿಸಿದವರು ಅವರ ತಂದೆ ಶ್ರೀ ಹುಚ್ಚಪ್ಪ. ಜೀವನ ನಿರ್ವಹಣೆಗೆ ತಾವು ಬ್ಯಾಂಡ್ ನುಡಿಸಿದರೂ ತನ್ನ ಮಗ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಪಡೆಯಲೆಂದು ಅವರ ತಂದೆ ಹನುಮಂತಪ್ಪನವರಿಗೆ. ಶ್ರೀ ಹನುಮಂತಪ್ಪ ಶ್ರೀ ಹನುಮಂತಪ್ಪ ಶ್ರೀ ದೊಡ್ಡ ಬಸವಾರ್ಯ ಗವಾಯಿ ಮಲ್ಕಾಪುರ, ಶ್ರೀ ಜಿ. ಎಂ. ಸಿದ್ಧವೀರಯ್ಯ ಗವಾಯಿ ಮುಂತಾದ ವಿದ್ವಾಂಸರ ಬಳಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದರು.

ಸುಮಾರು ಮೂರು ದಶಕಗಳಿಂದಲೂ ಕ್ಲಾರಿಯೋನೆಟ್‌ ವಾದನದಲ್ಲಿ ಪ್ರಬುದ್ಧ ಕಲಾವಿದರೆಂದು ಶ್ರೀ ಹನುಮಂತಪ್ಪ ಪ್ರಖ್ಯಾತರಾಗಿದ್ದಾರೆ. ಗಂಧರ್ವ ಮಹಾವಿದ್ಯಾಲಯ ಮಂಡಳದಲ್ಲಿ ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಹನುಮಂತಪ್ಪ ಧಾರವಾಡ ಆಕಾಶವಾಣಿಯ ‘ಬಿ-ಹೈ’ ಶ್ರೇಣಿ ಕಲಾವಿದ.

ಕ್ಲಾರಿಯೋನೆಟ್‌ ವಾದನವನ್ನೇ ವೃತ್ತಿಯಾಗಿಸಿಕೊಂಡು ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲಿ ನಿರಂತರ ಕಾರ್ಯಕ್ರಮಗಳನ್ನು ನೀಡುತ್ತಾ ತಮ್ಮದೇ ಆದ ಅಭಿಮಾನಿ ಶ್ರೋತೃಗಳನ್ನು ಹೊಂದಿರುವ ಹನುಮಂತಪ್ಪ ಅವರಿಗೆ ‘ಸಂಗೀತ ರತ್ನ’, ‘ಕ್ಲಾರಿಯೋನೆಟ್‌ ವಾದನ ಚತುರ’ ಮುಂತಾದ ಪುರಸ್ಕಾರಗಳು ಸಂದಿವೆ.

ಶ್ರೀ ಕೆ. ಹನುಮಂತಪ್ಪ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೯-೨೦೦೦ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.