ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಕ್ಷೇತ್ರಕ್ಕೆ ಸಮೀಪದಲ್ಲಿರುವ ಕುಂಜೂರು ಗ್ರಾಮದಲ್ಲಿ ಜನಿಸಿದವರು ಹರಿಶ್ಚಂದ್ರನ್‌. ಸುಪ್ರಸಿದ್ಧ ಯಕ್ಷಗಾನ ಕಲಾವಿದರ ಮನೆತನಕ್ಕೆ ಸೇರಿದ ಇವರ ತಂದೆ ವೆಂಕಪ್ಪಯ್ಯನವರು ಮದ್ದಳೆಯನ್ನು ನುಡಿಸುತ್ತಿದ್ದವರು. ರೈತರಾಗಿ ಜೀವನ ನಡೆಸುತ್ತಿದ್ದರೂ ಕಲಾ ಜೀವನದಲ್ಲಿ ತಮ್ಮನೇ ತೊಡಗಿಸಿಕೊಂಡವರು. ತಾಯಿ ಸೀತಮ್ಮ, ಅಣ್ಣ ಶ್ರೀಧರ ಶಾಸ್ತ್ರಿ ಉತ್ತಮ ಗಾಯಕರಾಗಿದ್ದವರು.

ಬಾಲ್ಯದಲ್ಲಿ ಚಾಮುಂಡೇಶ್ವರಿ ನಾಟಕ ಕಂಪೆನಿಗೆ ಸೇರಿ ನಟರಾಗಿ ಕೆಲಸ ಮಾಡುತ್ತ ಸಂಗೀತ ಮತ್ತು ಮೃದಂಗ ವಾದನದಲ್ಲಿ ಅಭ್ಯಾಸ ಮಾಡಿದರು. ಮುಂದೆ ಸಿ.ಕೆ. ಅಯ್ಯಾಮಣಿ ಅಯ್ಯರ್, ಹೆಚ್‌. ಪುಟ್ಟಾಚಾರ್ ಹಾಗೂ ಎಸ್‌.ವಿ.ಎಸ್‌. ನಾರಾಯಣನ್‌ ಅವರುಗಳಲ್ಲಿ ಶಾಸ್ತ್ರೀಯವಾಗಿ ಮೃದಂಗ ಶಿಕ್ಷಣ ಹೊಂದಿ ಮುಂದೆ ಮೈಸೂರಿಗೆ ವಲಸೆ ಹೋಗಿ ಸತತ ಅಭ್ಯಾಸ ಬಲದಿಂದ ಮೈಸೂರು ವಾಸುದೇವಾಚಾರ್, ಟಿ. ಪುಟ್ಟಸ್ವಾಮಯ್ಯ, ಟಿ. ಚೌಡಯ್ಯ, ಚಿಂತಲಪಲ್ಲಿ ರಾಮಚಂದ್ರರಾವ್‌, ತಿಟ್ಟೆ ಕೃಷ್ಣಯ್ಯಂಗಾರ್ ರಂತಹ ಘಟಾನುಘಟಿ ವಿದ್ವಾಂಸರಿಗೆ ಪಕ್ಕವಾದ್ಯ ನುಡಿಸುವ ಹಂತಕ್ಕೆ ಏರಿದರು.

ಮೈಸೂರು ಆಸ್ಥಾನ ವಿದ್ವಾಂಸರಾಗಿಯೂ ಗೌರವಿಸಲ್ಪಟ್ಟ ಹರಿಶ್ಚಂದ್ರನ್‌ ದಕ್ಷಿಣ ಭಾರತದ ಎಲ್ಲೆಡೆಯೂ ಸಂಚರಿಸಿ ಅನೇಕ ಸಂಗೀತ ದಿಗ್ಗಜಗಳಿಗೆ ಮೃದಂಗ ಸಹಕಾರವಿತ್ತು ಕೀರ್ತಿ ಪಡೆದರು. ಮಂಗಳೂರು ಆಕಾಶವಾಣಿ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಈ ಅವಧಿಯಲ್ಲಿ ಸುಳಾದಿ ಮೂವತ್ತೈದು ತಾಳಗಳಲ್ಲಿ ಲಯವಿನ್ಯಾಸ ಮಾಡಿದುದೇ ಅಲ್ಲದೆ ಸಪ್ತ ಮೃದಂಗ ತರಂಗಿಣಿ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಲಯವಾದ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ, ಪಠ್ಯಕ್ರಮ ಸಮಿತಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಇವರ ಐದು ದಶಕಗಳ ಸೇವೆಯನ್ನು ಗುರುತಿಸಿ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ೨೦೦೩ರಲ್ಲಿ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತು.

ಹರಿಶ್ಚಂದ್ರನ್‌ ಈಗ ನಮ್ಮೊಡನೆ ಇಲ್ಲದಿದ್ದರೂ ಇವರಿಂದ ಶಿಕ್ಷಣ ಪಡೆದ ಲಯವಾದ್ಯ ಪಟುಗಳು ಅವರ ನೆನಪನ್ನು ಚಿರಂತನಗೊಳಿಸುತ್ತಿದ್ದಾರೆ.