ಮನುಷ್ಯನ ಮನಸ್ಸೇ ಒಂದು ದೇವಸ್ಥಾನ. ಅದರ ಒಳಗಿರುವ ಒಳ್ಳೆಯ ಭಾವನೆ ಎಂಬುದೇ ದೇವರ ಮೂರ್ತಿ. ಅದನ್ನು ಲೋಕಕ್ಕೆ ತೋರಿಸುವ ಪೂಜಾರಿಯೇ ಕಲಾವಿದ; ತೋರಿಸುವುದೇ ಕಲೆ.

ಕಲೆಯಲ್ಲಿ ಅನೇಕ ಬಗೆಗಳಿವೆ. ಚಿತ್ರಕಲೆ, ನೃತ್ಯ, ಶಿಲ್ಪ, ಸಂಗೀತ, ಸಾಹಿತ್ಯ, ನಾಟಕ ಇತ್ಯಾದಿ. ಇವುಗಳಲ್ಲಿ ನಾಟಕ ಕಲೆ ಬಹಳ ವಿಶಿಷ್ಟವಾದದ್ದು. ಅದಕ್ಕೆ ಕಾರಣ; ಅದರಲ್ಲಿ ಅನೇಕ ಕಲೆಗಳು ಸೇರಿವೆ. ನಾಟಕ ಕಲೆಯಲ್ಲಿ ಪ್ರವೀಣನಾಗಬೇಕಾದರೆ ಬಹಳ ಕಷ್ಟಪಡಬೇಕು. ಜೊತೆಗೆ ಭಗವಂತನ ಅನುಗ್ರಹವೂ, ಅದೃಷ್ಟವೂ ಇರಬೇಕು, ಸಂಸ್ಕಾರವೂ ಬೇಕು. ಸಂಸ್ಕಾರ ಎಂದರೆ ನಯಗೊಂಡ, ಪಕ್ವವಾದ ಮನಸ್ಸಿರುವುದು.

ಬಹು ಕಷ್ಟಗಳನ್ನು ಅನುಭವಿಸಿ ಕಲಾವಿದರಾಗಿ ಪ್ರಖ್ಯಾತರಾದವರು ಕರ್ನಾಟಕದಲ್ಲಿ ಅನೇಕರು. ಆದರೂ ನೆನಪಿನಲ್ಲಿ ಉಳಿಯುವಂತಹವರು ಕೆಲವರು ಮಾತ್ರ. ಹಾಗೆ ನೆನಪಿನಲ್ಲುಳಿಯುವವರ ಪೈಕಿ ಕೆ. ಹಿರಣ್ಣಯ್ಯ ನವರೂ ಒಬ್ಬರು. ಹಿರಣ್ಣಯ್ಯನವರೇ ಹೇಳುತ್ತಿದ್ದಂತೆ ಕಲಾವಿದನ ಜೀವನದ ಗುಟ್ಟೆಂದರೆ ಅವನಿಗೆ ಬದುಕಿರುವಾಗ ಮಾರಕ ಮಾಡಿ ಸತ್ತನಂತರ ಸ್ಮಾರಕ ಮಾಡುತ್ತಾರೆ ನಮ್ಮ ಜನ.

ಮನೆತನ

ಕೆ. ಹಿರಣ್ಣಯ್ಯ ಎಂದರೆ ಕಣತ್ತೂರ್ ಹಿರಣ್ಣಯ್ಯ. ತುಮಕೂರು ಜಿಲ್ಲೆಯ ತುರುವೇಕೆರೆ ಬಳಿಯ ಕಣತ್ತೂರು ಎಂಬುದು ಇವರ ಪೂರ್ವಿಕರ ಊರು. ಹಿರಣ್ಣಯ್ಯನವರ ತಂದೆ ಅನಂತರಾಮಯ್ಯನವರು, ತಾಯಿ ಲಕ್ಷ್ಮೀದೇವಮ್ಮ ನವರು. ಇವರು ಬೆಂಗಳೂರಿನಲ್ಲಿ ಶಂಕರಪುರದಲ್ಲಿ ವಾಸವಾಗಿದ್ದರು. ಹಿರಣ್ಣಯ್ಯನವರು ಹುಟ್ಟಿದ್ದು ೧೯೦೫ ರಲ್ಲಿ. ತಂದೆತಾಯಿಯ ಕೊನೆಯ ಮುದ್ದಿನ ಮಗ.

ತಂದೆ ಪೊಲೀಸ್ ಪೇದೆ. ನಾಟಕ ಪ್ರೇಮಿಯೂ ಹೌದು. ತಾಯಿ ಅಂದಿಗೇ ಮೈಸೂರು ಸಂಸ್ಥಾನದ ವಿದ್ಯಾವಂತ ಮಹಿಳೆಯರ ಗುಂಪಿಗೆ ಸೇರಿದವರು. ಅದೂ ಎಫ್. ಎ. ಪರೀಕ್ಷೆ ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ರಾದ ಪ್ರಥಮ ಮಹಿಳೆ.

ಅವರನ್ನು ಅರಮನೆ ಪ್ರೌಢಶಾಲೆ ಯಲ್ಲಿ ಮುಖ್ಯೋ ಪಾಧ್ಯಾಯಿನಿಯಾಗಿ ನೇಮಿಸಿಕೊಳ್ಳ ಲಾಗಿತ್ತು. ಹೆಂಡತಿಗೆ ೧೫೦ ರೂಪಾಯಿ ಸಂಬಳ ; ಗಂಡನಿಗೆ ಮೂರು ರೂಪಾಯಿ ಸಂಬಳ. ಅನಂತ ರಾಮಯ್ಯನವರಿಗೆ ತಮಗೆ ಬರುತ್ತಿದ್ದ ಮೂರು ರೂಪಾಯಿ ಅಷ್ಟೈಶ್ವರ್ಯವೆನಿಸಿತ್ತು.

ಇಂದು ನಾವು ಸ್ತ್ರೀ ಸ್ವಾತಂತ್ರ್ಯವನ್ನು ಕುರಿತು ಮಾತನಾಡುತ್ತಿದ್ದೇವೆ. ೧೯೦೦ರಲ್ಲಿಯೇ ಲಕ್ಷ್ಮೀದೇವಮ್ಮ ನವರಿಗೆ ವಿದ್ಯಾಭ್ಯಾಸ, ಉದ್ಯೋಗ, ಸ್ವಾತಂತ್ರ್ಯಕ್ಕೆ ಅವಕಾಶ ವಾಗಿತ್ತು. ಇದು ಅನಂತರಾಮಯ್ಯನವರ ಸಿರಿವಂತಿಕೆ ; ಹಿರಣ್ಣಯ್ಯನವರ ವಂಶದ ಹಿರಿವಂತಿಕೆಯೂ ಹೌದು.

ಪ್ರತಿದಿನ ಅನಂತರಾಮಯ್ಯನವರು ತಮ್ಮ ಪೊಲೀಸ್ ಪೇದೆಯ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಕರ್ತವ್ಯ ಏನು ಗೊತ್ತೆ? ಪ್ರತಿದಿನ ತಮ್ಮ ಹೆಂಡತಿಯನ್ನು (ಎಂದರೆ ಅರಮನೆ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು) ಶಾಲೆಗೆ, ಅರಮನೆ ಗಾಡಿ ಹತ್ತಿಸಿ ಒಂದು ಸೆಲ್ಯೂಟ್ ಹೊಡೆದು, ಅವರ ಅಂಗರಕ್ಷಕನಾಗಿ ಗಾಡಿಯಲ್ಲಿ ತೆರಳುವುದು ; ಅನಂತರ ಶಾಲೆಯಿಂದ ಬರುವಾಗಲೂ ಅಷ್ಟೆ. ಮನೆಗೆ ಹಿಂತಿರುಗಿದನಂತರವೇ ಪತಿಪತ್ನಿಯರು ! ಲಕ್ಷ್ಮೀದೇವಮ್ಮ ನವರಿಗೆ ಬೇಸರವಾಯಿತು. ತಮ್ಮ ಯಜ ಮಾನರು ರಾಜೀನಾಮೆ ನೀಡುವಂತೆ ಒತ್ತಾಯ ಮಾಡಿ ದರು, ಅತ್ತರು, ಗೋಳಾಡಿದರು. ಆದರೆ ಗಂಡ ಸುತರಾಂ ಒಪ್ಪಲಿಲ್ಲ.

ಕೊನೆಗೆ ಲಕ್ಷ್ಮೀದೇವಮ್ಮನವರೇ ಮಹಾರಾಣಿಯವ ರೊಂದಿಗೆ ತಮಗಾಗುತ್ತಿದ್ದ ಅಸಮಾಧಾನ ತೋಡಿ ಕೊಂಡಾಗ, ಅನಂತರಾಮಯ್ಯನವರನ್ನು ಬೇರೆ ಊರಿಗೆ ವರ್ಗ ಮಾಡಲಾಯಿತು.

ಆ ಊರಿನಲ್ಲಿ ಲಂಚ ತೆಗೆದುಕೊಂಡ ಒಬ್ಬ ಹಿರಿಯ ಅಧಿಕಾರಿಯ ಭ್ರಷ್ಟ ವರ್ತನೆಗೆ ರೋಸಿಹೋಗಿ ಅನಂತ ರಾಮಯ್ಯ ಆ ಅಧಿಕಾರಿಯ ಕಪಾಲಕ್ಕೆ ಹೊಡೆದು, ಕೆಲಸಕ್ಕೆ ಅಂದೇ ರಾಜೀನಾಮೆ ಕೊಟ್ಟು ಹೊರಬಂದು ಬಿಟ್ಟರು.

ಶಾಲೆಯಲ್ಲಿ

ಹಿರಣ್ಣಯ್ಯನವರಿಗೆ ಚಿಕ್ಕವಯಸ್ಸಿನಲ್ಲಿ ಅಕ್ಷರಾಭ್ಯಾಸ ವಾಯಿತು. ಅನಂತರ ಶಾಲೆ ಸೇರಿದರು. ಬೆಂಗಳೂರಿನ ಕೋಟೆ ಮಾಧ್ಯಮಿಕ ಶಾಲೆಯಲ್ಲಿ ಮುಂದಿನ ವಿದ್ಯಾಭ್ಯಾಸ. ಲೋಅರ್ ಸೆಕೆಂಡರಿ ಪರೀಕ್ಷೆ (ಈಗಿನ ಏಳನೆ ತರಗತಿಯ ಪರೀಕ್ಷೆ) ಮೂರು-ನಾಲ್ಕು ದಿನ ನಡೆದಿದ್ದಾಗ ಅವರ ತಾಯಿ ತುಂಬಾ ಕಾಯಿಲೆ ಮಲಗಿದರು. ಹುಡುಗ ಪರೀಕ್ಷೆಗೆ ಹೋಗಲಿಲ್ಲ. ನಾಲ್ಕು ಗೋಡೆಗಳ ಒಳಗಿನ ವಿದ್ಯಾಭ್ಯಾಸ ಅಲ್ಲಿಗೆ ಮುಗಿಯಿತು. ಅನಂತರ ದೈಹಿಕ ಶಿಕ್ಷಣ ಕೆ.ವಿ. ಅಯ್ಯರ್ ಅವರ ಬಳಿ. ಮೈ ದಷ್ಟಪುಷ್ಟವಾಯಿತು. ಇನ್ನುಳಿದ ಜ್ಞಾನಾರ್ಜನೆ ನಾಲ್ಕು ದಿಕ್ಕಿನ ಸಮಾಜದೊಳಗೆ ನಡೆದದ್ದು.

ಮಗ ಹಿರಣ್ಣಯ್ಯನವರು ಪರೀಕ್ಷೆಗೆ ಹೋಗುವಾಗಲ್ಲೆಲ್ಲ ಹೇಳುತ್ತಿದ್ದರು : “ನೋಡು ಮಗೂ, ನೀನು ಹತ್ತು ಬಾರಿ ಬೇಕಾದರೂ ಫೇಲ್ ಆಗು ; ಆದರೆ ಒಮ್ಮೆ ಸಹ ನಿನ್ನ ಅಕ್ಕಪಕ್ಕಕ್ಕೆ ತಿರುಗಿ ಕೂಡ ನೋಡಬೇಡ. ಕಾಪಿ ಮಾಡಲು ಯತ್ನಿಸಬೇಡ. ತನ್ನ ಕಾಲುಗಳ ಮೇಲೆ ನಿಂತಾತ ಹೆಚ್ಚು ದಿನ ನಿಲ್ಲಬಲ್ಲ. ಇನ್ನೊಬ್ಬರ ಕಾಲುಗಳ ಮೇಲೆ ನಿಲ್ಲಲು ಪ್ರಯತ್ನಿಸುವವನು ಕುಸಿದುಬೀಳುವುದು ಖಂಡಿತ.”

ಅವರ ಬಾಲ್ಯದಲ್ಲಿಯೇ ಒಂದು ಕಹಿ ಪ್ರಸಂಗ ನಡೆದಿತ್ತು. ಆಗ ಹಿರಣ್ಣಯ್ಯನವರು ಲೋಅರ್ ಸೆಕೆಂಡರಿ ಪರೀಕ್ಷೆಗೆ ಕುಳಿತಿದ್ದರು. ಅದೊಂದು ಕೆಟ್ಟ ದಿನ. ಪರೀಕ್ಷೆ ಯಲ್ಲಿ ಬರೆಯುತ್ತ ಕುಳಿತಿದ್ದ ಹಿರಣ್ಣಯ್ಯನವರಿಗೆ ಸ್ವಲ್ಪ ಕತ್ತು ನೋವಾಯಿತಂತೆ. ಪಾಪ, ಕತ್ತನು ಹೊರಳಿಸಿ ನೋವನ್ನು ಕಡಮೆ ಮಾಡಿಕೊಳ್ಳಲು ಯತ್ನಿಸಿದರು. ಆದರೆ ಪರೀಕ್ಷಕರು, “ಏ, ಕಾಪಿ ಹೊಡೆಯುತ್ತಿದ್ದಿಯೇನೋ ?” ಎಂದರು.

ಹಿರಣ್ಣಯ್ಯನವರು ಎದ್ದುನಿಂತು, ಕೈ ಜೋಡಿಸಿ, “ಇಲ್ಲ ಸಾರ್, ನಾನು ಕಾಪಿ ಹೊಡೆದಿಲ್ಲ, ಹೊಡೆಯುವುದಿಲ್ಲ ; ಕತ್ತು ನೋಯುತ್ತಿತ್ತು, ಅದಕ್ಕೆ ಸ್ವಲ್ವ ತಿರುಗಿಸಿದೆ” ಎಂದರೆ.

“ಸುಳ್ಳು ಹೇಳುತ್ತಿರುವೆ.”

ಹೀಗೇ ವಾಗ್ವಾದ ಬೆಳೆಯಿತು. ಹುಡುಗನ ಮಾತನ್ನು ಪರೀಕ್ಷಕರು ಒಪ್ಪಲಿಲ್ಲ, ಕೊನೆಗೆ ಹುಡುಗ ಸುಳ್ಳು ಅಪವಾದ ಹೊರಬೇಕಾಯಿತಲ್ಲ ಎಂದು ದುಃಖವಾಗಿ ತನ್ನ ಉತ್ತರ ಪತ್ರಿಕೆಯನ್ನು ಕೊಟ್ಟು, “ಎಲ್ಲಾದರೂ ಕಾಪಿ ಮಾಡಿ ದ್ದೇನೆಯೇ ನೋಡಿ” ಎಂದ. ಎರಡು ಉತ್ತರ ಪತ್ರಿಕೆಗಳನ್ನೂ ನೋಡಿದಾಗ, ಕಾಪಿ ಮಾಡಿದುದು ಕಂಡುಬರಲಿಲ್ಲ. ಪರೀಕ್ಷಕರು ಪೆಚ್ಚಾದರು. ಆದರೆ ಹುಡುಗ? ವೃಥಾಪ ವಾದದಿಂದ ನೊಂದು ಕೊನೆಗೆ ಉತ್ತರ ಪತ್ರಿಕೆಯನ್ನು ಹರಿದುಹಾಕಿ ಹೊರಬಂದುಬಿಟ್ಟ. ಬಾಲ್ಯದಿಂದ ನ್ಯಾಯ, ಆತ್ಮಗೌರವಗಳಿಗಾಗಿ ಬದುಕಿದವರು ಹಿರಣ್ಣಯ್ಯ.

ನಾಟಕದ ಪ್ರಪಂಚ

ಅನಂತರಾಮಯ್ಯನವರು ಮಗನಲ್ಲಿ ನಾಟಕದ ಬಗ್ಗೆ ಇದ್ದ ಮುತುವರ್ಜಿ ಕಂಡರು. ಮಗನನ್ನು ಕಟ್ಟಿಹಾಕದೆ ಕಲೆಯ ಕೊಳದಲ್ಲಿ ಈಜಾಡಲು ಬಿಟ್ಟರು. ತಾವೇ ಮಗನನ್ನು ಕರೆದುಕೊಂಡು ಹೋಗಿ ಬೆಂಗಳೂರಿನ ಬಳೇಪೇಟೆಯಲ್ಲಿದ್ದ ರವಳಪ್ಪನವರ ಕಂಪೆನಿ ಮನೆಗೆ ಅಭ್ಯಾಸಕ್ಕಾಗಿ ಬಿಟ್ಟರು. ಸಂಗೀತ, ಅಭಿನಯಗಳಲ್ಲಿ ಚುರು ಕಾಗಿದ್ದ ಹಿರಣ್ಣಯ್ಯನವರು ಆ ಕಂಪೆನಿಯ ‘ದುರ್ಗೇಶ ನಂದಿನಿ’ ಮತ್ತು ‘ಮನ್ಮಥ ವಿಜಯ’ ನಾಟಕಗಳಲ್ಲಿ ಬಾಲಕನ ಪಾತ್ರ ವಹಿಸಲು ಕಲಿಯುತ್ತಿದ್ದರು.

ಹಿರಣ್ಣಯ್ಯನವರಿಗೆ ಏಳು ವರ್ಷವಾಗಿದ್ದಾಗಲೇ ತಾಯಿ ಲಕ್ಷ್ಮೀದೇವಮ್ಮನವರು ಪಾರ್ಶ್ವವಾಯುವಿಗೆ ತುತ್ತಾಗಿ ನಾಲ್ಕು ಮಕ್ಕಳನ್ನು ತಬ್ಬಲಿಗಳನ್ನಾಗಿಸಿ ಇಹಲೋಕವನ್ನು ಬಿಟ್ಟರು.

ಬಂಧುಗಳ, ಬಲ್ಲವರ ಬಲವಂತಕ್ಕೆ ಕಟ್ಟುಬಿದ್ದು ವಿಧಿ ಯಿಲ್ಲದೆ ತಂದೆ ಅನಂತರಾಮಯ್ಯನವರು ಮರು ಮದುವೆಗೆ ಒಪ್ಪಿದರು. ದ್ವಿತೀಯ ಪತ್ನಿ ಸೀತಮ್ಮನವರು ಮಕ್ಕಳಿಗೆ ಮಲತಾಯಿ ಎನಿಸದೆ ಹೆತ್ತ ತಾಯಿಯಂತೆಯೇ ಬಾಳಿದರು.

ನಾಟಕದ ಗೀಳಿಗೆ ಬಿದ್ದ ಹಿರಣ್ಣಯ್ಯನವರು ತಮ್ಮ ಬಹುಕಾಲವನ್ನು ಕಂಪೆನಿ ಮನೆಯಲ್ಲೇ ಕಳೆಯ ತೊಡಗಿದರು. ಮನೆಗೆ ಬರುವುದೇ ಅಪರೂಪವಾಗ ತೊಡಗಿತು. ಗಂಡನ ಮೌನದಿಂದಾಗಿ ಹೆಂಡತಿ ಸೀತಮ್ಮ ಹಿರಣ್ಣಯ್ಯನವರನ್ನು ದಂಡಿಸಲಾರದೆ ಹೋದರು.

ಹಿರಣ್ಣಯ್ಯನವರು ಹೇಳುತ್ತಿದ್ದ ಒಂದು ಮಾತು : “ನಾಲ್ಕು ಗೋಡೆಗಳ ಮಧ್ಯೆ ನಿಂತು ಎಷ್ಟು ಗುದ್ದಾಡಿದರೂ ಒದ್ದಾಡಿದರೂ ಕಲಾವಿದನಾಗಲಾರ. ನಾಲ್ಕು ದಿಕ್ಕುಗಳ ಮಧ್ಯದ ಸಮಾಜವೇ ರಂಗಭೂಮಿ. ಅಲ್ಲಿ ನಡೆಯುವ ಒಂದೊಂದು ಘಟನೆಯೇ ಒಂದೊಂದು ದೃಶ್ಯ. ನಾವು ನೋಡುವ ಪ್ರತಿ ವ್ಯಕ್ತಿಯೂ ಪಾತ್ರಧಾರಿ. ಇದರಲ್ಲಿ ಬೆರೆತು, ಅರಿತು ನುರಿತವನೇ ನಿಜವಾದ ಕಲಾವಿದ.” ಅದರಂತೆ ಅವರು ದೊಂಬರಾಟದ ಕೂಟದಿಂದ ಹಿಡಿದು ದೇವಸ್ಥಾನ ಗಳಲ್ಲಿನ ಭಕ್ತಕೋಟಿಯ ನಾನಾ ಭಾವನೆಗಳನ್ನೆಲ್ಲಾ ಅರಿತು, ಅರಗಿಸಿಕೊಂಡು ಅಭಿನಯಿಸಿ ಅಮರರಾಗುವತ್ತ್ತ ಅಡಿಯಿಡ ತೊಡಗಿದರು. ಹಾರ್ಮೋನಿಯಂ ನುಡಿಸುವುದರಿಂದ ಸಂಗೀತವನ್ನು ಶಾಸ್ತ್ರೋಕ್ತವಾಗಿ ಅಭ್ಯಾಸ ಮಾಡಲು ಬೆಂಗಳೂರು ಚಾಮರಾಜಪೇಟೆಯ ಅಂಧ ಶ್ರೀನಿವಾಸಯ್ಯ ನವರ ಶಿಷ್ಯವೃತ್ತಿಗೆ ಸೇರಿ ಅದರಲ್ಲೂ ಪ್ರೌಢಿಮೆ ಪಡೆಯ ತೊಡಗಿದರು.

ನೊಂದ ಹುಡುಗ ಉತ್ತರ ಪತ್ರಿಕೆಯನ್ನು ಹರಿದು ಹಾಕಿದ.

ಕಷ್ಟಗಳು

ಇದೇ ಸಂದಿಗ್ಧ ಸಮಯದಲ್ಲಿ ಅವರ ತಂದೆಯವರು ಕಾಯಿಲೆಯಿಂದ ಹಾಸಿಗೆ ಹಿಡಿದರು. ಅಪರೂಪಕ್ಕೊಮ್ಮೆ  ಕಂಪೆನಿಯಿಂದ ಮನೆಗೆ ಬರುತ್ತಿದ್ದ ಮಗನನ್ನು, ಅಪ್ಪ ಆ ಸ್ಥಿತಿಯಲ್ಲಿಯೂ ಅಭಿಮಾನದಿಂದ  ಆದರಿಸಿ, ಆನಂದ ದಿಂದ ಆಶೀರ್ವದಿಸುತ್ತಿದ್ದರು. ೧೯೨೫ ರಲ್ಲಿ ಅವರು ಕಣ್ಮುಚ್ಚಿದರು.

ತಂದೆತಾಯಿಯನ್ನು ಕಳೆದುಕೊಂಡು ಅನಾಥರಾದ ಹಿರಣ್ಣಯ್ಯನವರು ಭವಿಷ್ಯದ ಬಾಳಿನ ಗುರಿಯನ್ನು ಅರಸುತ್ತ, ಆಡಿ ಓಡಾಡಿ ಬೆಂಗಳೂರನ್ನು ಬಿಟ್ಟು ಅಂದಿನ ರಾಜಧಾನಿ ಮೈಸೂರಿನತ್ತ ನಡೆದರು. ಕೈಯಲ್ಲಿದ್ದ ಪುಡಿಗಾಸು ಪೂರೈಸುವವರೆಗೂ ತಿರುಗಾಡಿದರು. ಅನಂತರ ನೌಕರಿಗಾಗಿ ನಿತ್ಯ ಅಲೆಯುವುದು, ಸೋತಲ್ಲಿ ಸುಸ್ತಾಗಿ ಮಲಗುವುದು ದಿನಚರಿಯಾಯಿತು.

ಹಾರ್ಮೋನಿಯಂ ಹುಡುಗ

ಮೈಸೂರಿನಲ್ಲಿ ಅಂದಿನಿಂದಲೂ ಜನಪ್ರಿಯವಾದ ಚಲನಚಿತ್ರ ಮಂದಿರವೊಂದಿದೆ ; ಅದೇ ಈಗಿನ ಅಪೇರಾ ಟಾಕೀಸ್. ಆಗ ಇನ್ನೂ ಮೂಕೀ ಚಿತ್ರಗಳೇ ಇದ್ದುದು. ಎಂದರೆ ಬರಿಯ ಚಿತ್ರ ಕಾಣುತ್ತಿತ್ತು; ಸಂಭಾಷಣೆ, ಹಾಡುಗಳು ಕೇಳುತ್ತಿರಲಿಲ್ಲ. ಆದುದರಿಂದ ಚಿತ್ರ ಪ್ರದರ್ಶನ ವೇಳೆಯಲ್ಲಿ ಹಾರ್ಮೋನಿಯಂ ನುಡಿಸುವ ಪದ್ಧತಿ ಇದ್ದು, ಇದು ಚಿತ್ರಕ್ಕೆ ಅಗತ್ಯ ಹಿನ್ನೆಲೆ ಸಂಗೀತ ಎನಿಸಿತ್ತು. ಈ ಅಪೇರಾ ಟಾಕೀಸ್‌ನಲ್ಲಿ ಬೋರ್ಡ್ ಬರೆಯುವ ಮತ್ತು ಟ್ರಾಲಿ ಎಳೆಯುವ ಕೆಲಸ ಸಿಕ್ಕಿತು. ದಿನಕ್ಕೆ ಎರಡು ಆಣೆ (ಈಗಿನ ಹನ್ನೆರಡು ಪೈಸೆ) ಕೂಲಿ ದೊರಕುತ್ತಿತ್ತು. ಅಲ್ಲಿ ಜಿ.ಆರ್. ಸ್ಯಾಂಡೋ ಎಂಬವರು ಗರಡಿ ಇಟ್ಟಿದ್ದರು. ಹುಡುಗ ಹಿರಣ್ಣಯ್ಯ ಅಲ್ಲಿರತೊಡಗಿದ. ಹಿರಣ್ಣಯ್ಯನವರು ಆಗಲೇ ಹಾಡಿನ ಮಟ್ಟು ಮತ್ತು ಹಾರ್ಮೋನಿಯಂ ನುಡಿಸಾಣಿಕೆಯನ್ನು ತೀವ್ರವಾಗಿ ಗಮನಿಸುತ್ತ ಬಂದರು.

ಬಾಲಕನಲ್ಲಿದ್ದ ತೀವ್ರ ಆಸಕ್ತಿ ಕಂಡ ಅಪೇರಾ ಟಾಕೀಸಿನ ಮಾಲಿಕರು ಸಂತುಷ್ಟರಾಗಿ ಚಿತ್ರ ನಡೆಯುವ ವೇಳೆಯಲ್ಲಿ ಹಾರ್ಮೋನಿಯಂ ನುಡಿಸಲು ಗೊತ್ತುಪಡಿಸಿ ಕೊಂಡರು. ಹಾರ್ಮೋನಿಯಂ ನುಡಿಸುತ್ತ ಅಗತ್ಯವಾದೆಡೆ ಯಲ್ಲಿ ಕೆಲವು ಸಂಭಾಷಣೆಯನ್ನು ಹೇಳಬೇಕು. ಹಿರಣ್ಣಯ್ಯ ನವರಿಗೆ ತಮಿಳು, ತೆಲುಗು, ಕನ್ನಡ, ಇಂಗ್ಲಿಷ್ ಭಾಷೆಗಳು ಬರುತ್ತಿದ್ದು ಹಿಂದಿ ಸಹ ಅಲ್ಪಸ್ವಲ್ಪ ಬರುತ್ತಿತ್ತು. ಆದ್ದರಿಂದ ಅವರು ಆ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದ್ದರು. ಬಾಲಪಾತ್ರಗಳನ್ನೂ ಇವರಿಗೆ ಆಗಾಗ ಕೊಡುತ್ತಿದ್ದರು. ಮಾಡುವ ಕೆಲಸದಲ್ಲಿ ಹೆಚ್ಚು ಶ್ರದ್ಧೆ, ಆಸಕ್ತಿ ಇರುತ್ತಿತ್ತು. ಈಗ ಸಂಬಳವೂ ಬರುತ್ತಿತ್ತು. ಕೈ ತುಂಬ ಹಣ, ಕಷ್ಟಪಟ್ಟು ದುಡಿಯುವಿಕೆ, ಇತರರ ಸಹವಾಸಗಳಿಂದಾಗಿ ಕೆಲವು ದುರ್ವ್ಯಸನಗಳಿಗೆ ಬಲಿಯಾದರು.

ಈ ಸಮಯಕ್ಕೆ ಹಿರಣ್ಣಯ್ಯನವರಿಗೆ ತಮ್ಮ ಅಣ್ಣ ನರಸಿಂಹಯ್ಯನವರು ತೊಂದರೆಗೆ ಸಿಕ್ಕಿದ್ದಾರೆ ಎಂದು ಸುದ್ಧಿ ಬಂದಿತು. ಅಣ್ಣ ತೀರ ಕಷ್ಟದಲ್ಲಿದ್ದರು. ಹಿರಣ್ಣಯ್ಯನವರು ಅವರನ್ನೂ, ಅತ್ತಿಗೆಯನ್ನೂ ಮೈಸೂರಿಗೆ ಕರೆದುಕೊಂಡು ಬಂದರು. ಐದು ರೂಪಾಯಿ ಬಾಡಿಗೆಗೆ ಒಂದು ಕೊಠಡಿ ಯನ್ನು ಗೊತ್ತುಮಾಡಿ, ಅವರನ್ನು ತಮ್ಮೊಡನೆಯೇ ಇರಿಸಿಕೊಂಡರು.

ದಸರಾ ಹಬ್ಬವೆಂದರೆ ಭಾರಿ ಸಂಭ್ರಮ. ಅದೂ ಮೈಸೂರು ಆಗಿನ ರಾಜಧಾನಿ. ಕಲೆ, ಸಾಹಿತ್ಯ, ಸಂಸ್ಕೃತಿಗೆ ಆಗ ರಾಜಾಶ್ರಯವಿತ್ತು; ಜನಾದರಣೆಯೂ ಇತ್ತು. ನಾಟಕಗಳೆಂದರೆ ಜನ ಸಂತೋಷದಿಂದ ಸೇರುತ್ತಿದ್ದರು.

‘ಮದನಮಂಜರಿ’ಯಾಗಿ

ಹಿರಣ್ಣಯ್ಯನವರು ಜೀವನದಲ್ಲಿ ಯಶಸ್ಸು ಗಳಿಸಿದ್ದರೆ ಅದಕ್ಕೆ ಕಾರಣ ಅವರು ತಮ್ಮ ಕೆಲಸದಲ್ಲಿ ತೋರುತ್ತಿದ್ದ ನಿಷ್ಠೆ.

ಒಂದು ದಿನ ಒಂದು ವಿಶೇಷವಾದ ಸಂಗತಿ ನಡೆಯಿತು.

ಗಾನೋಲ್ಲಾಸಿನಿ ನಾಟಕ ಸಭೆ ‘ನಿರುಪಮ’ ಎಂಬ ನಾಟಕವನ್ನು ಆಡಬೇಕಾಗಿತ್ತು. ನಾಟಕ ಮಂದಿರದಲ್ಲಿ ಪ್ರೇಕ್ಷಕರು ಸೇರಿದ್ದರು.

ನಾಟಕದ ಒಂದು ಮುಖ್ಯ ಪಾತ್ರ ಮದನಮಂಜರಿ. ಆ ಪಾತ್ರವನ್ನು ದಾಸಪ್ಪಾಚಾರಿ ಎಂಬವರು ವಹಿಸಬೇಕಾ ಗಿತ್ತು. ಅವರು ಊರಿಗೆ ಹೋದವರು, ನಾಟಕ ಪ್ರಾರಂಭವಾಗುವ ಹೊತ್ತಾದರೂ ಹಿಂದಿರುಗಲೇ ಇಲ್ಲ.

ಕಂಪೆನಿಯ ಯಜಮಾನರಾದ ಶ್ರೀಕಂಠಾಚಾರ್ಯ ರಿಗೆ ಏನು ಮಾಡಲೂ ತೋರಲಿಲ್ಲ. ಕಡೆಗೆ ಹಿರಣ್ಣಯ್ಯ ನವರನ್ನು ಕರೆದು, “ನೀವು ಇವತ್ತು ಮದನಮಂಜರಿಯ ಪಾತ್ರವನ್ನು ಮಾಡಲೇಬೇಕು” ಎಂದರು.

“ಆಗಲಿ ಸ್ವಾಮಿ” ಎಂದರು ಹಿರಣ್ಣಯ್ಯನವರು.

ಒಳಕ್ಕೆ ಹೋದರು, ಹೆಣ್ಣಿನ ವೇಷ ತೊಟ್ಟರು. ನಾಟಕದ ಹಸ್ತಪ್ರತಿಯನ್ನು ತರಿಸಿ ಐದು ನಿಮಿಷ ಪುಟಗಳನ್ನು ತಿರುವಿಹಾಕಿ ತಮ್ಮ ಮಾತುಗಳನ್ನು ನೋಡಿ ಕೊಂಡರು.

ತೆರೆ ಮೇಲಕ್ಕೆ ಹೋಯಿತು. ನಾಟಕ ಪ್ರಾರಂಭ ವಾಯಿತು.

ತಮ್ಮ ಮನೆತನದ ದೇವರು ಲಕ್ಷ್ಮೀನರಸಿಂಹಸ್ವಾಮಿ ಯನ್ನು ಸ್ಮರಿಸಿಕೊಂಡು ಹಿರಣ್ಣಯ್ಯನವರು ರಂಗವನ್ನು ಪ್ರವೇಶಿಸಿದರು. ಅವರ ಅಭಿನಯ ಪ್ರೇಕ್ಷಕರನ್ನು ಮೆಚ್ಚಿಸಿ ಬಿಟ್ಟಿತು. ಶ್ರೀಕಂಠಾಚಾರ್ಯರಿಗೂ ಕಂಪೆನಿಯ ಇತರರಿಗೂ ಆಶ್ಚರ್ಯವೋ ಆಶ್ಚರ್ಯ. ನಾಟಕ ಮುಗಿಯುತ್ತಲೇ ಶ್ರೀಕಂಠಾಚಾರ್ಯರು ಹಿರಣ್ಣಯ್ಯನವರನ್ನು ಅಪ್ಪಿಕೊಂಡು, “ಎಂತಹ ಅದ್ಭುತ ಶಕ್ತಿ ನಿಮ್ಮದು ! ಬಹು ಬೇಗ ನೀವು ತುಂಬಾ ಕೀರ್ತಿ ಪಡೆಯುತ್ತೀರಿ” ಎಂದರು.

ಮುಂದೆ ‘ಸೀತಾಕಲ್ಯಾಣ’ ನಾಟಕದಲ್ಲಿ ಶ್ರೀರಾಮನ ಪಾತ್ರವನ್ನು ಹಿರಣ್ಣಯ್ಯನವರು ಅದ್ಭುತವಾಗಿ ಅಭಿನಯಿಸಿದರು.

ಮದುವೆ

ಕೆಲವು ದಿನಗಳಲ್ಲಿ ಹಿರಣ್ಣಯ್ಯನವರ ಪ್ರತಿಭೆಯನ್ನು ಗುಬ್ಬಿ ವೀರಣ್ಣನವರು ಗುರುತಿಸಿದರು. ಕನ್ನಡ ರಂಗ ಭೂಮಿಯ ಚರಿತ್ರೆಯಲ್ಲಿ ವೀರಣ್ಣನವರದು ಬಹು ದೊಡ್ಡ ಹೆಸರು. ಅವರು ಹಿರಣ್ಣಯ್ಯನವರನ್ನು ತಮ್ಮ ಕಂಪೆನಿಗೆ ಸೇರಿಸಿಕೊಂಡರು. ಅದೇ ತಾನೆ ಗುಬ್ಬಿ ಕಂಪೆನಿ ಕಿರಿಯ ಕಲಾವಿದರ ಶಾಖೆಯನ್ನು ತೆರೆದಿತ್ತು. ಬಾಲಕರ ಪಾತ್ರ ಗಳನ್ನೂ, ಹಾಸ್ಯ ಪಾತ್ರಗಳನ್ನೂ ಹಿರಣ್ಣಯ್ಯನವರು ನಿರ್ವಹಿ ಸುತ್ತಿದ್ದರು. ಹಣದ ಹೊಳೆ ಹರಿಯಿತು. ಹಿರಣ್ಣಯ್ಯನವರು ಪ್ರೌಢ ಅಭಿನಯದಿಂದ ವೀರಣ್ಣನವರ ಮತ್ತು ಜನತೆಯ ಹೃದಯಗಳನ್ನು ಗೆದ್ದರು.

ಕಾಲಾನಂತರದಲ್ಲಿ ಕಿರಿಯ ಕಲಾವಿದರ ಶಾಖೆ ಯನ್ನು ವೀರಣ್ಣನವರು ಮುಚ್ಚುವ ತೀರ್ಮಾನ ಮಾಡಿದರು. ಅದರಲ್ಲಿದ್ದ ಕೆಲವು ಮಂದಿ ಉತ್ತಮ ನಟರನ್ನು ದೊಡ್ಡ ಕಂಪೆನಿಯ ನಟವರ್ಗಕ್ಕೆ ಸೇರಿಸಿಕೊಂಡರು. ಅಂತಹ ನಟರ ಪೈಕಿ ಹಿರಣ್ಣಯ್ಯನವರೂ ಒಬ್ಬರು. ಕಂಪೆನಿ ಉತ್ತಮ ನಟ_ನಟಿಯರನ್ನು ಹೊಂದಿದ್ದು, ನಾಟಕಗಳು ಚೆನ್ನಾಗಿ ನಡೆಯುತ್ತಿದ್ದವು.

ಒಂದೇ ಊರಿನಲ್ಲಿ ನಾಟಕಗಳು ಎಷ್ಟು ದಿನ ನಡೆಯ ಬಹುದು ? ಆದುದರಿಂದ ನಾಟಕ ಕಂಪೆನಿಗಳು ಊರೂರಿಗೆ ಹೋಗಿ ಮೊಕ್ಕಾಂ ಹಾಕುತ್ತಿರುತ್ತವೆ. ಹೀಗೆಯೇ ಕ್ಯಾಂಪ್ ಕಡೂರಿಗೆ ಬಂದಿಳಿಯಿತು. ವಾರಕ್ಕೆ ಮೂರು ನಾಟಕಗಳನ್ನಾಡುತ್ತಿದ್ದರು. ಅದೂ ಆಗಿನ ನಾಟಕಗಳು ರಾತ್ರಿ ಹತ್ತು ಗಂಟೆಗೆ ಪ್ರಾರಂಭವಾದರೆ ಬೆಳಗ್ಗೆ ಐದು, ಆರು ಗಂಟೆಗೆ ಮುಗಿಯುತ್ತಿದ್ದುದು. ಕಡೂರು ಆಗ ಜಿಲ್ಲಾ ಕೇಂದ್ರ. ಸಖರಾಯ ಪಟ್ಟಣ ಎಂಬುದೊಂದು ಊರು (ಈಗ ಸಕ್ರೆಪಟ್ಟಣ ಎಂದು ಕರೆಯುತ್ತಾರೆ). ಕಡೂರಿನಿಂದ ಸುಮಾರು ಹನ್ನೆರಡು ಹದಿಮೂರು ಮೈಲಿ ದೂರ.

ಸಕ್ರೆಪಟ್ಟಣದ ಶಾನುಭೋಗ ನಾರಣಪ್ಪ ಮತ್ತು ಅವರ ಪತ್ನಿ ಶೇಷಮ್ಮನವರು ಅಲ್ಲಿಯೇ ಇದ್ದವರು. ಕೆಲವು ಕೆಟ್ಟ ಅಭ್ಯಾಸಗಳಿಗೆ ಬಲಿಯಾದ ನಾರಣಪ್ಪನವರು ತಮ್ಮ ಆಸ್ತಿ ಯನ್ನು ಕಳೆದುಕೊಂಡರು. ಅವರ ಎರಡನೆಯ ಮಗಳು ಶಾರದಮ್ಮ ಇನ್ನೂ ಕೊಡಗೂಸಾಗಿದ್ದಾಗಲೇ ನಾರಣಪ್ಪ ನವರು ದೈವಾಧೀನರಾದರು. ತಾಯಿ, ಮಗಳು ಇಬ್ಬರೇ ಮನೆಯಲ್ಲಿದ್ದವರು. ವಾಸಿಸುತ್ತಿದ್ದ ಮನೆಯೊಂದೇ ಅವರಿಗೆ ಆಧಾರ.

ಆಗಿನ ಕಾಲದಲ್ಲಿ ದೊಡ್ಡ ಹುಡುಗಿಯನ್ನು ಮದುವೆ ಮಾಡದೆ ಮನೆಯಲ್ಲಿಟ್ಟುಕೊಳ್ಳುವುದು ನೀತಿಯಲ್ಲ; ಸಂಪ್ರದಾಯವಲ್ಲ. ಅಂಥವರನ್ನು ಸಮಾಜ ಬಹಿಷ್ಕರಿಸು ತ್ತಿತ್ತು. ಮಗಳಿಗೆ ಮದುವೆ ಮಾಡುವುದು ಅತಿ ದೊಡ್ಡ ಸಮಸ್ಯೆಯಾಗಿ ತೋರಿತು ಶೇಷಮ್ಮನವರಿಗೆ. ಕಾರಣ ಅವರು ಬಾಳಿನ ಸರ್ವಸ್ವವನ್ನೂ ಕಳೆದುಕೊಂಡು ಶೇಷಮ್ಮನವರು ‘ನಿಶ್ಶೇಷಮ್ಮ’ನವರಾಗಿದ್ದರು. ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದರು.

ಅವರ ಮನೆಯ ಎದುರಿಗೆ ಪಟೇಲ್ ಶಿವ ರಾಮಯ್ಯನವರೆಂಬ ಸದ್ಗೃಹಸ್ಥರಿದ್ದರು. ವಿಷಪ್ರಾಶನ ಮಾಡಿಕೊಳ್ಳಲು ನಿಶ್ಚಯಿಸಿದ್ದ ಶೇಷಮ್ಮನವರನ್ನು ತಡೆದು, ಎರಡು ಜೀವಗಳ ಪ್ರಾಣ ಉಳಿಸಿ ಹೇಳಿದರು, “ಭಂಡತನಕ್ಕೆ ಹೆದರಬೇಕೇ ಹೊರತು ಬಡತನಕ್ಕೆ ಹೆದರಬಾರದು ತಾಯೀ. ಈ ಹೆಣ್ಣು ಮಗುವಿಗೆ ಮದುವೆ ಮಾಡುವ ಜವಾಬ್ದಾರಿ ನನಗಿರಲಿ. ಇನ್ನು ಮೂರು ತಿಂಗಳೊಳಗಾಗಿ ನಾನು ಮಾಡುತ್ತೇನೆ. ಧೈರ್ಯ ಗುಂದಬೇಡಿ.” ತಮ್ಮ ಕೆಲಸದ ಮೇಲೆ ಹೋದಲ್ಲೆಲ್ಲ ಶಾರದಮ್ಮನಿಗೆ ವರನನ್ನು ಹುಡುಕುವ ಕೆಲಸವನ್ನು ಇಟ್ಟುಕೊಂಡರು.

ನಾರದನ ಪಾತ್ರದಲ್ಲಿ

‘ಜಗಜ್ಯೋತಿ ಬಸವೇಶ್ವರ’ದಲ್ಲಿ.

ಕಡೂರಿನಲ್ಲಿ ಆಗ ‘ಸಂಪೂರ್ಣ ರಾಮಾಯಣ’ ನಡೆಯುತ್ತಿತ್ತು. ಒಂದು ಶನಿವಾರ ಶಿವರಾಮಯ್ಯನವರು ತಮ್ಮ ಕೆಲಸದ ಮೇಲೆ ಕಡೂರಿಗೆ ಬಂದಾಗ ನಾಟಕ ನೋಡಲು ನಿಂತರು. ಬೆಳಗ್ಗೆ ಕಾಫಿ ಕುಡಿಯಲು ಒಂದು ಹೋಟಲಿಗೆ ಹೋದರು. ಶಿವರಾಮಯ್ಯನವರು ಕುಳಿತಿದ್ದ ಮೇಜಿಗೆದುರಾಗಿ ಹಿರಣ್ಣಯ್ಯನವರು, ಅಚ್ಯತರಾಯರು ಮೊದಲಾದವರು ಕುಳಿತಿದ್ದರು.

‘ಸಂಪೂರ್ಣ ರಾಮಾಯಣ’ ನಾಟಕದಲ್ಲಿ ಹಿರಣ್ಣಯ್ಯ ನವರು ಭರತನಾಗಿ ಮತ್ತು ಆಂಜನೇಯನಾಗಿ ಎರಡು ಪಾತ್ರ ವಹಿಸುತ್ತಿದ್ದರು. ನಾಟಕಕ್ಕೆ ಬಂದವರೆಲ್ಲ ಅವರ ಅಮೋಘ ಅಭಿನಯ ಪ್ರತಿಭೆಯನ್ನು ಶ್ಲಾಘಿಸುವವರೇ. ಶಿವರಾಮಯ್ಯನವರು ಅವರ ಪರಿಚಯ ಮಾಡಿಕೊಂಡರು. ಅವರಿಗೆ ಇನ್ನೂ ಮದುವೆಯಾಗಿಲ್ಲ ಎಂದು ತಿಳಿದು ಸಂತೋಷವಾಯಿತು. ಶಾರದಮ್ಮನ ವಿಷಯ ಹೇಳಿದರು. ಕೆಲವು ದಿನಗಳಲ್ಲಿ ಹಿರಣ್ಣಯ್ಯನವರು ಶಾರದಮ್ಮನನ್ನು ನೋಡಿದುದೂ ಆಯಿತು.

ಮದುವೆಯ ದಿನವನ್ನು ಗೊತ್ತುಪಡಿಸಿದರು. ಹಿರಣ್ಣಯ್ಯನವರ ಮದುವೆ ಗೊತ್ತಾದುದಕ್ಕೆ ಸಂತೋಷ ಗೊಂಡ ಗುಬ್ಬಿವೀರಣ್ಣನವರು ಮದುವೆಗಾಗಿ ಒಂದು ವಿಶೇಷ ಸಹಾಯಾರ್ಥ ನಾಟಕ ಪ್ರದರ್ಶನ ಮಾಡಿ, ಹಣ ಕೂಡಿಸಿಕೊಟ್ಟರು. ೧೯೩೨ ರ ಫೆಬ್ರವರಿ ತಿಂಗಳಿನಲ್ಲಿ ಹಿರಣ್ಣಯ್ಯ_ಶಾರದಮ್ಮ ಇವರ ವಿವಾಹ ನಡೆಯಿತು.

ಒಂದು ಅನುಭವ

ಮದುವೆಯಾದನಂತರ ಕೆಲವು ದಿನಗಳು ಕಳೆದವು. ಅದೊಂದು ದಿನ ರಾತ್ರಿ ಹಿರಣ್ಣಯ್ಯನವರಿಗೆ ತಮ್ಮ ಹೆಂಡತಿ ಯನ್ನು ನೋಡಿಕೊಂಡು ಬರಬೇಕೆಂಬ ಆಸೆಯಾಯಿತು ಪಾಪ. ಮರುದಿನ ಕಂಪೆನಿಗೆ ರಜಾ. ಕಲೆಕ್ಷನ್ ಕಮ್ಮಿ ಆಗಿತ್ತು – ಆ ಹಿಂದಿನ ದಿನ. ನಾಟಕ ಬೇಗಬಿಟ್ಟಿತ್ತು. ಸಕ್ರೆಪಟ್ಟಣಕ್ಕೆ ಹೋಗಿಬರಬೇಕೆಂದು ಕೊಂಡರು. ಅಲ್ಲಿಂದ ಹನ್ನೆರಡು ಮೈಲಿ ದೂರ ತಾನೆ? ಆ ರಾತ್ರಿಯಲ್ಲಿ ಬಸ್ ಎಲ್ಲಿಂದ ಬರಬೇಕು? ನಡೆದೇ ಹೋದರೂ ನಾಲ್ಕು ಗಂಟೆಗಳು ಸಾಕು. ಹೀಗೆಂದುಕೊಂಡ ವರೇ ನಡೆದು ಹೊರಟರು. ಅಂದು ಅಮಾವಾಸ್ಯೆ ಬೇರೆ. ಬೆಳಗಿನ ಸುಮಾರು ಐದು ಗಂಟೆ ಇರಬಹುದು. ನಡೆದು ಆಯಾಸಗೊಂಡಿದ್ದಾರೆ. ಅಷ್ಟು ದೂರದಲ್ಲಿ ಬೆಳ್ಳಗೆ ಯಾರೋ ಕುಳಿತಿರುವಂತೆ ಕಂಡಿತು. ಅಮಾವಾಸ್ಯೆಯ ದಿನ ಮೋಹಿನಿ ಕಾಣಿಸಿಕೊಳ್ಳುವುದೆಂದು ಕೇಳಿದ್ದರು.  ನಾಲ್ಕು ಹೆಜ್ಜೆಯಿಟ್ಟು, ಭಯಗೊಂಡಿದ್ದರೂ ತೋರಿಸಿಕೊಳ್ಳದೆ, “ಯಾರಲ್ಲಿ ?” ಎಂದರು. ಉತ್ತರ ಬರಲಿಲ್ಲ! ನಯವಾಗಿ ಕೇಳಿದರು, “ಯಾರು ? ಯಾರದು?” ಉಹುಂ. ಆತ್ಮೀಯವಾಗಿ ಕೇಳಿದರು. ಇಲ್ಲ ! ಹೆದರಿಬಿಟ್ಟರು. ಜನಿವಾರ ಕೈಯಲ್ಲಿ ಹಿಡಿದವರೇ ಗಾಯತ್ರಿಮಂತ್ರ ಹೇಳಿಕೊಳ್ಳುತ್ತಾ ಒಂದು ಕಲ್ಲು ಬೀಸಿದರು. ಅಲ್ಲಿ ಯಾರೂ ಜಗ್ಗಲಿಲ್ಲ. ಸ್ವಲ್ಪಸ್ವಲ್ಪವೇ ಧೈರ್ಯವಹಿಸಿ, ಒಂದೊಂದೇ ಹೆಜ್ಜೆ ಇಡುತ್ತ ಹತ್ತಿರ ಹತ್ತಿರಕ್ಕೆ ಬಂದು ಬೆಂಕಿಕಡ್ಡಿ ಗೀರಿ ನೋಡಿದರು. ‘ಸಕ್ರೆಪಟ್ಟಣ – ೩ ಮೈಲಿ’ ಎಂದಿದ್ದ ಮೈಲಿಗಲ್ಲು ! ‘ಅಬ್ಬ, ಸದ್ಯ’ ಎಂದು ನಿರಾಳವಾಗಿ ಉಸಿರುಬಿಟ್ಟರು !

ಹಿರಣ್ಣಯ್ಯವರು, ಶಾರದಮ್ಮನವರಿಗೆ ಒಬ್ಬನೇ ಮಗ. ಮಗನಿಗೆ ನರಸಿಂಹಮೂರ್ತಿ ಎಂದು ಹೆಸರಿಟ್ಟರು. ನಾಟಕದ ಪ್ರಪಂಚದಲ್ಲಿ ಇವರು ಮಾಸ್ಟರ್ ಹಿರಣ್ಣಯ್ಯ ಎಂದು ಪರಿಚಿತರು. ಇವರು ಹುಟ್ಟಿದ್ದು ೧೯೩೪ ರ ಫೆಬ್ರವರಿ ೧೫ ರಂದು.

ನಾಟಕ-ಚಲನಚಿತ್ರ

ಜೀವನ ಅನೇಕ ದೃಶ್ಯಗಳ ಒಂದು ನಾಟಕ. ಅಲ್ಲಿ ಕೆಳೆಯಾಟ, ನಗೆಯಾಟ, ಗೋಳಾಟ ಇವೆಲ್ಲ ಒಂದೊಂದು ಬಾಳಿನ ಒಂದೊಂದು ದೃಶ್ಯ. ದುಃಖ-ಕಷ್ಟ ಬಂದಾಗ ಸಹನೆಯಿಂದ ವರ್ತಿಸಿ ಬಂದ ಕಷ್ಟವನ್ನು ನಿವಾರಿಸಿ ಕೊಳ್ಳುವುದರಲ್ಲಿ ಯತ್ನಶೀಲನಾದವನು ಬಾಳಿನ ನಾಟಕ ದಲ್ಲಿ ಜಯಶೀಲನಾಗುತ್ತಾನೆ. ಈ ಗುಟ್ಟನ್ನು ಹಿರಣ್ಣಯ್ಯ ನವರು ಚೆನ್ನಾಗಿ ಅರಿತಿದ್ದರು. ಏನೋ ಕಾರಣಗಳಿಂದ ಅವರು ಕಂಪೆನಿಯಿಂದ ಕಂಪೆನಿಗೆ ಹಾರುತ್ತಿದ್ದರು.

ಕೊನೆಗೆ ಸುಬ್ಬಯ್ಯ ನಾಯುಡು ಮತ್ತು ಆರ್. ನಾಗೇಂದ್ರಾಯರ ಕಂಪೆನಿ ಸೇರಿದರು. ಅವರಿಬ್ಬರ ಸಹಬಾಳ್ವೆ, ಸಹಕಾರದಿಂದ ನಡೆಯುತ್ತಿದ್ದ ಕಂಪೆನಿಯಲ್ಲೂ ದುಡಿದು ಶೋಭಿಸಿದರು. ಅವರುಗಳ ಉತ್ಸಾಹ ಪ್ರೋತ್ಸಾಹಗಳಿಂದಲೇ ‘ಆಶಾಪಾಶ’ ಮತ್ತು ‘ರಾಷ್ಟ್ರವೀರ’ ನಾಟಕಗಳನ್ನು ಬರೆದರು. ಆಗ ಆ ನಾಟಕಗಳೇ ‘ದೇವದಾಸಿ’ ಮತ್ತು ‘ಎಚ್ಚಮನಾಯಕ’ ಎಂದಾಗಿವೆ. ಹೀಗೆ ಸಾಹಿತ್ಯ ರಚನೆಯಲ್ಲೂ ಸೈ ಎನಿಸಿ ಕೊಂಡು ಆ ನಾಟಕಗಳನ್ನು ಆಡಿ ಜನಮನ್ನಣೆ ಗಳಿಸಿದರು. ಆ ಪಾಲುದಾರರ ಪ್ರೋತ್ಸಾಹ, ಪ್ರೇರಣೆಯೊಂದಿಗೆ ಮದರಾಸಿನತ್ತ ಪ್ರಯಾಣ ಕೈಗೊಂಡರು.

ಮದರಾಸಿನಲ್ಲಿ ಚಿತ್ರರಂಗ ಹಿರಣ್ಣಯ್ಯನವರನ್ನು ಆದರದಿಂದ ಬರಮಾಡಿಕೊಂಡಿತು. ಕನ್ನಡ, ತೆಲುಗು ಮತ್ತು ತಮಿಳು ಈ ಮೂರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲವರಾದ್ದರಿಂದ ಕೆಲಸ ಅವರಿಗೆ ಕಷ್ಟವೆನಿಸಲಿಲ್ಲ. ತಮ್ಮ ಅಭಿನಯ ಮತ್ತು ಸಾಹಿತ್ಯಪ್ರಜ್ಞೆಯ, ಪಾಂಡಿತ್ಯದ ಪ್ರದರ್ಶನ ಮಾಡಿ ‘ಭಲೆ’ ಎನಿಸಿಕೊಂಡರು.

ಆಗಲೇ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬರಬೇಕೆಂಬ ಆಕಾಂಕ್ಷೆ ಹೊತ್ತುಬರುವ ಅನೇಕರಂತೆ ಬಳ್ಳಾರಿ ಕುಟುಂಬ – ಬಳ್ಳಾರಿ ಲಲಿತಮ್ಮ, ಅವರ ತಂಗಿ ರತ್ನಮಾಲಾ, ಅಕ್ಕ ಸಂಗೀತ ವಿದುಷಿ ವೆಂಕಮ್ಮ ಮತ್ತು ಅಣ್ಣ ಅಮಲ್ದಾಯಿ ವೆಂಕಪ್ಪನವರ ಭೇಟಿಯಾಯಿತು. ಅವರ ಸನ್ಮಿತ್ರರಾದ ಹಿರಣ್ಣಯ್ಯನವರು ಅವರಿಗೆ ಸರ್ವ ರೀತಿಯ ಪ್ರೋತ್ಸಾಹ ಕೊಟ್ಟು ಚಿತ್ರರಂಗಕ್ಕೆ ಅವರನ್ನು ಪರಿಚಯವನ್ನೂ ಮಾಡಿಕೊಡುತ್ತಿದ್ದಾಗಲೇ ಸಂಕಷ್ಟವೊಂದು ಎದುರಾಯಿತು.

ಅದೇ ಸಮಯದಲ್ಲಿ ಜೀವನದ ಮಧುರ ದಿನಗಳನ್ನು ಇನ್ನೇನು ಕಂಡೆ ಎಂದು ಕೊಳ್ಳುತ್ತಿರು ವಾಗಲೇ ಎರಡನೆಯ ಭೀಕರ ಮಹಾಯುದ್ಧ ಪ್ರಾರಂಭ ವಾಯಿತು. ಮದರಾಸನ್ನು ಬಿಡಲೇಬೇಕಾದ ಸಂದರ್ಭ ಒದಗಿಬಂದಾಗ ಅವರಿಗೆ ಎಷ್ಟು ಬೇಸರವಾಗಿರಬೇಡ ? ಆದರೇನು ಮಾಡಲಾಗುತ್ತದೆ? ಅತ್ತೆಯವರು, ಪತ್ನಿ ಮತ್ತು ಮಗುವಿನೊಂದಿಗೆ ಸಕ್ರೆಪಟ್ಟಣಕ್ಕೆ ಬಂದು ನೆಲೆಸಿದರು.

ಹಿರಣ್ಣಯ್ಯನವರ ಮಾವನವರಿಗೆ ಬರುತ್ತಿದ್ದ ಶ್ಯಾನು ಭೋಗಿಕೆ ಆದಾಯವನ್ನು ಇವರ ಹೆಸರಿಗೇ ಬರೆದು ಕೊಟ್ಟಿದ್ದರು ಇವರ ಅತ್ತೆ. ಅವರದಾಗಿ ಒಂದು ಮನೆಯೂ ಇತ್ತು. ಕೈಲಿ ಅಷ್ಟಿಷ್ಟು ಪುಡಿಗಾಸೂ ಇತ್ತು. ಆದರೆ ಸೋಮಾರಿ ಯಾಗಿ ಕುಳಿತುಕೊಂಡಿರುವುದೆಂದರೆ ಹಿರಣ್ಣಯ್ಯನವರಿ ಗಾಗದು. ಈ ಹಿಂದೆ ಅವರು ಸಿದ್ಧಪಡಿಸಿಟ್ಟಿದ್ದ ನಾಟಕ ‘ಕರ್ಮಕನ್ನಡಿ’ಯನ್ನು ಸುಧಾರಿಸಿ ‘ಆಶಾಪಾಶ’ವೆಂದು ಸಿದ್ಧ ಗೊಳಿಸಿಟ್ಟುಕೊಂಡಿದ್ದು, ಕಾಲಕ್ಕನುಗುಣವಾಗಿ ‘ದೇವದಾಸಿ’ ಎಂದು ಪರಿಷ್ಕರಿಸಿಟ್ಟರು.

ಮತ್ತೆ ನಾಟಕರಂಗ

ಮೈಸೂರು ಆಗಿನ ಮೈಸೂರು ಸಂಸ್ಥಾನದ ರಾಜ ಧಾನಿ. ಅಲ್ಲಿ ಕೆಲವು ಮಂದಿ ಉತ್ತಮ ಕಲೋಪಾಸಕರಿದ್ದರು. ಅವರಲ್ಲಿ ಕೆಲವರು ಎಂ.ಎನ್. ಗೋಪಾಲ್, ಶೇಷಾಚಾರ್, ಪಾರ್ಥಸಾರಥಿ, ರಾಮರಾವ್, ಬ್ಯಾಟರಿ ಸುಬ್ಬು, ಡಿಕ್ಕಿ ಮಾಧವರಾವ್ ಮುಂತಾದ ಆತ್ಮೀಯ ಗೆಳೆಯರು. ಇವರೆಲ್ಲ ಎಂ. ಎನ್. ಗೋಪಾಲ್ ಸ್ಟುಡಿಯೋದಲ್ಲಿ ಪ್ರತಿದಿನ ಸೇರುತ್ತಿದ್ದರು. ದಸರಾ ಸಮೀಪಿಸುತ್ತಿತ್ತು. ದಸರಾ ಇನ್ನೂ ನಾಲ್ಕು ತಿಂಗಳಿದೆ ಎನ್ನುವಾಗಲೇ ಜನರಲ್ಲಿ ಎಲ್ಲಿಲ್ಲದ ಸಂಭ್ರಮ, ಉತ್ಸಾಹ ಕಂಡುಬರುತ್ತಿತ್ತು. ಆ ಬಾರಿ ದಸರಾಕ್ಕೆ ಮೈಸೂರಿಗೆ ಯಾವ ನಾಟಕದ ಕಂಪೆನಿಯನ್ನು ಕರೆಸುವು ದೆಂದು ಯೋಚಿಸುತ್ತಿದ್ದು, ಹಿರಣ್ಣಯ್ಯನವರನ್ನು ಕರೆಸಿಕೊಳ್ಳ ಬೇಕೆಂದು ಒಮ್ಮತದ ಅಭಿಪ್ರಾಯಪಟ್ಟರು.

ಸರಿ, ಹಿರಣ್ಣಯ್ಯನವರ ವಿಳಾಸವನ್ನು ಹುಡುಕಿ ಕಾಗದ ಬರೆದರು. ಅವರಿಗೂ ಇಂತಹದೇ ಒಂದು ಅವಕಾಶ ಬೇಕಿತ್ತು.  ಮೈಸೂರಿಗೆ ಬಂದಿಳಿದರು. ‘ಸದಾರಮೆ’ ನಾಟಕವನ್ನು ಸ್ವಲ್ಪ ಪರಿಷ್ಕರಿಸಿ ಇಟ್ಟುಕೊಂಡಿದ್ದರು. ‘ಎಚ್ಚಮನಾಯಕ’ ನಾಟಕವೂ ಇತ್ತು. ಇದೇನೂ ವ್ಯವಸ್ಥಿತ ಕಂಪೆನಿಯಲ್ಲ. ಹಾಗೆ ಹೇಳಬೇಕೆಂದರೆ ಹಿರಣ್ಣಯ್ಯ ನವರೊಬ್ಬರೇ ಅನುಭವೀ ಹಿರಿಯ ನಟ. ಬಳ್ಳಾರಿ ಲಲಿತಮ್ಮ ನವರನ್ನೂ ರತ್ನಮಾಲಾಳನ್ನು ಕರೆಸಿಕೊಳ್ಳಲಾಯಿತು. ಮಾದೇವು ಅಂದಿಗೆ ಸುಪ್ರಸಿದ್ಧ ನೃತ್ಯ ಪಟು. ಮೊದಲು ಪ್ರದರ್ಶಿಸಿದುದು ‘ಸದಾರಮೆ’ ನಾಟಕ. ಅದರಲ್ಲಿ ಹಿರಣ್ಣಯ್ಯ ನವರದು ಆದಿಮೂರ್ತಿ ಮತ್ತು ಮಕ್ಕಳ ಕಳ್ಳನ ಪಾತ್ರ. ನಾಟಕದ ಯಶಸ್ಸು ಏನಾಗುವುದೋ ಎಂದು ಕೊಂಡಿದ್ದರು. ಆದರೆ ಅದು ನಲವತ್ತೆಂಟು ದಿನಗಳವರೆಗೆ ಹೌಸ್‌ಫುಲ್ ಆಗಿ ಓಡಿತು !

ಆ ಹೊತ್ತಿಗೆ ‘ಆಶಾಪಾಶ’ ನಾಟಕವನ್ನು ಇನ್ನೂ ಸುಧಾರಣೆ ಮಾಡಿ ‘ದೇವದಾಸಿ’ ಎಂದು ಹೆಸರಿಟ್ಟಿದ್ದರು. ‘ದೇವದಾಶಿ’ಯ ನಾಜೂಕಯ್ಯನ ಪಾತ್ರದಲ್ಲಿ ಹಿರಣ್ಣಯ್ಯ ನವರು ಮತ್ತೂ ಶೋಭಿಸಿದರು. ಹೇರಳವಾಗಿ ಧನ ಸಂಪಾದನೆಯಾಯಿತು.

‘ಹಿರಣ್ಣಯ್ಯ ಮಿತ್ರಮಂಡಲಿ’ – ‘ವಾಣಿ’

೧೯೪೧ರ ಕಾಲ. ಹಿರಣ್ಣಯ್ಯನವರು ತಮ್ಮ ಒಂದು ಮಹದಾಕಾಂಕ್ಷೆಯನ್ನು ಸಾಧಿಸಿಕೊಂಡರು. ಗುಬ್ಬಿ ಕಂಪೆನಿ ಯಲ್ಲಿದ್ದ ಅಚ್ಯುತರಾಯರೂ ಇವರೊಂದಿಗೆ ಸೇರಿದ್ದರು. ಪ್ರಸಿದ್ಧ ಹಾರ್ಮೋನಿಯಂ ವಾದಕರಾದ ಪಿ. ಕೃಷ್ಣ ರಾಯರೂ ಇದ್ದರು. ವೃತ್ತಿ ನಾಟಕ ಸಂಸ್ಥೆಗಳವರಿಗೂ ‘ಗುರು’ಗಳೆಂದು ಇವರು ಪರಿಚಿತರು. ಈ ಎಲ್ಲ ಮಿತ್ರರ ಶ್ರಮದ, ಹಿರಣ್ಣಯ್ಯನವರ ನಾಯಕತ್ವದ ತಂಡವೇ ‘ಹಿರಣ್ಣಯ್ಯ ಮಿತ್ರ ಮಂಡಳಿ’ ಎನಿಸಿತು. ಆಗತಾನೇ ‘ಟಾಕಿ’ (ಮಾತುಗಳು ಕೇಳಿಸುವ) ಚಿತ್ರಗಳು ಬರತೊಡಗಿದ್ದವು. ಮೈಸೂರಿನಲ್ಲಿ ಜಿ. ಆರ್. ರಾಮಯ್ಯ ಎಂಬ ಶ್ರೀಮಂತ ರೊಬ್ಬರಿದ್ದರು. ಅವರಿಗೆ ಸಿನಿಮಾ ಮತ್ತು ನಾಟಕಗಳಲ್ಲಿ ಪ್ರೀತಿ ಬಹಳ. ಎಂ.ಎನ್. ಗೋಪಾಲ್, ಹಿರಣ್ಣಯ್ಯನವರು ಮತ್ತು ರಾಮಯ್ಯನವರು ಚಲನಚಿತ್ರ ನಿರ್ಮಾಣ ಮಾಡಬಯಸಿ ಕೊಯಮತ್ತೂರಿಗೆ ಹೋದರು. ಮಾಂಬಳ್ಳಿ ಸಾಹುಕಾರ್ ಶಿವಬಸಸ್ವಾಮಿಯವರೂ ಸೇರಿದ್ದರು.

ವಿಖ್ಯಾತ ಪಿಟೀಲು ವಿದ್ವಾಂಸ ಚೌಡಯ್ಯನವರು,  ಹಿರಣ್ಣಯ್ಯನವರು – ಎಲ್ಲ ಸೇರಿ ‘ವಾಣಿ’  ಚಿತ್ರವನ್ನು ತಯಾರಿಸಿದರು. ಈ ಚಿತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯನ ವರದೂ ಒಂದು ಬಾಲಕನ ಪಾತ್ರವಿತ್ತು. ಗೋಪಾಲ್ ಮತ್ತು ಹಿರಣ್ಣಯ್ಯನವರಿಬ್ಬರೂ ‘ಹಿರಣ್ಣಯ್ಯ ಮಿತ್ರ ಮಂಡಳಿ’ ಯನ್ನು ಮುಂದುವರಿಸಿದರು. ಊರಿಂದೂರಿಗೆ ಕಂಪೆನಿ ಮೊಕ್ಕಾಂ ಹಾಕಲಾರಂಭಿಸಿತು. ಮಿತ್ರ ಮಂಡಳಿಗೆ ಭದ್ರ ಬುನಾದಿಯಾಗಿ ಬಳ್ಳಾರಿ ಲಲಿತಮ್ಮನವರೂ ಮತ್ತಿತರ ಸನ್ಮಿತ್ರರೂ ನಿಂತರು. ಮೊದಲು ಸಾಮಾಜಿಕ, ಸಾಂಸಾರಿಕ ಸಮಸ್ಯೆಗಳನ್ನು ಕುರಿತಂತೆ, ನೀತಿಯುತವಾದ ನಾಟಕಗಳನ್ನು ಪ್ರೇಕ್ಷಕರ ಮನಮುಟ್ಟುವಂತೆ ನೀಡುವಲ್ಲಿ ಹಿರಣ್ಣಯ್ಯನವರು ಯಶಸ್ವಿಯಾದರು.

ಅಷ್ಟೇ ಅಲ್ಲ ; ಸಾಹಿತ್ಯದಲ್ಲೂ ಅವರ ಕೈ ಓಡಿತು. ಅವರದು ಹಾಸ್ಯಪ್ರಧಾನ ನಾಟಕಗಳು ಮತ್ತು ಸಾಹಿತ್ಯ. ಅವರ ಹಾಸ್ಯವೆಂದರೆ ಹೊಟ್ಟೆಬಿರಿಯುವಂತೆ ನಗುತ್ತಿದ್ದರು ಜನ. ಆದರೆ ಹಾಸ್ಯದ ಹಿಂದಿನ ಗೂಢಾರ್ಥ ವನ್ನು ಅರಿತರೆ ಕರುಳು ಕಿತ್ತು ಬರುವಂತಹ ಸತ್ಯವಿರುತ್ತಿತ್ತು. ಸತ್ಯವನ್ನು ಸುಲಭವಾಗಿ, ತೀಕ್ಷ್ಣವಾಗಿ, ಹಾಸ್ಯಮಯವಾಗಿ ಹೇಳುತ್ತಿದ್ದುದು ಅವರ ವಿಶೇಷ ಗುಣ. ಆ ಕಾಲಕ್ಕೆ ಇಂತಹ ಔಚಿತ್ಯಪೂರ್ಣ, ವಿಶೇಷ ವಸ್ತು ನಾಟಕದಲ್ಲಿ ಅಪರೂಪ ವೆನಿಸಿದ್ದರಿಂದಲೇ ಅದನ್ನು ನೀಡಿದ ಹಿರಣ್ಣಯ್ಯನವರು ಅಜರಾಮರರೆನಿಸಿದರು. ಅದಕ್ಕೆಂದೇ ಜನತೆ ಅವರಿಗೆ ‘ಕಲ್ಚರ್ಡ್ ಕಮಿಡಿಯನ್’ (ಸುಸಂಸ್ಕೃತ ಹಾಸ್ಯನಟ) ಎಂಬ ಬಿರುದು ಕೊಟ್ಟಿತು.

ಅಘಾತ

ಅವರ ಧರ್ಮಪತ್ನಿ ಶಾರದಮ್ಮನವರು ನಾಟಕರಂಗದ ಗಂಡನೊಂದಿಗೆ ಸಂಸಾರ ನಡೆಸುತ್ತಲೇ, ರಂಗದ ಸುಖ-ದುಃಖವನ್ನು ಚೆನ್ನಾಗಿ ಅರಿತಿದ್ದರು. ಕಾರ್ಯಕಾರಣಗಳ ನಿಮಿತ್ತ ಯಜಮಾನರು ಬಹು ವೇಳೆ ಹೊರಗೇ ಕಳೆಯುತ್ತಿದ್ದ ಕಾರಣ ಅವರಿಗೆ ಎಷ್ಟೋ ವೇಳೆ ಅವರ ದರ್ಶನವೂ ದುರ್ಲಭವಾಗುತ್ತಿತ್ತು. ಈ ಇಬ್ಬರ ಅಭಿಮತ, ‘ತಮ್ಮ ಮಗನಂತೂ ಈ ವೃತ್ತಿಯಿಂದ ದೂರ ಇದ್ದು, ಮರ್ಯಾದೆಯ ಬಾಳು ನಡೆಯಬೇಕು.’ ಆಗಿನ ಕಾಲ ಆದೀಗ ನಾಟಕದ ಜನರೂ ಸುಸಂಸ್ಕೃತ ಮನುಷ್ಯರೇ, ಅವರೂ ಗೌರವಕ್ಕೆ ಪಾತ್ರರಾದವರೇ ಎಂಬ ಭಾವನೆ ಬೇರೂರುತ್ತಿದ್ದ ಸಂಧಿಕಾಲ.

ಈಗ ಕಲಾವಿದನೆಂದರೆ ಮಾನ್ಯತೆ ಇದೆ; ಘನತೆ ಇದೆ. ಇದಕ್ಕೆ ಹಿಂದಿನಿಂದ ತಲೆಮಾರಿನ ಎಷ್ಟೋ ಮಂದಿ ಕಲಾವಿದರು ತಮ್ಮ ರಕ್ತ, ಬೆವರು ಹರಿಸಿದ್ದಾರೆ. ಈಗೀಗ ಸ್ವಲ್ಪ ಮಟ್ಟಿಗೆ ಬುದ್ಧಿವಂತ, ವಿದ್ಯಾವಂತರೂ ಅದರತ್ತ ತಲೆ ಹಾಕುತ್ತಿದ್ದಾರೆ. ಅದಕ್ಕೆ ಕಾರಣ ನಮ್ಮ ಅನೇಕ ಪೂರ್ವಿಕರ ತ್ಯಾಗ.

‘ಸುಧಾರಮೆ’ ನಾಟಕದಲ್ಲಿ ಕಳ್ಳನಾಗಿ.

ಕಂಪೆನಿ ಲಾಭ-ನಷ್ಟದ ತೂಗುಯ್ಯಾಲೆಯಲ್ಲಿ ನಡೆಯ ತೊಡಗಿತು. ಆರ್ಥಿಕವಾಗಿ ಹೇಗೇ ಇರಲಿ, ವೃತ್ತಿ ನಾಟಕಗಳ ದೆಶೆ ಬದಲಾಯಿಸಿದ ಒಂದು ಘನ ಸಾಧನೆ ಹಿರಣ್ಣಯ್ಯನವ ರಿಂದ ನಡೆಯಿತು.

ಹೀಗಿರುವಾಗ ೧೯೪೯ ರ ಜೂನ್ ೨೦ ರಂದು ಹಿರಣ್ಣಯ್ಯನವರ ಪಾಲಿಗೆ ಅತಿ ದೊಡ್ಡ ದುರ್ದಿನ. ಅವರನ್ನು ಅತಿಶಯವಾಗಿ ಪ್ರೀತಿಸಿ, ಅವರ ಯಶಸ್ಸನ್ನು ಅನುದಿನವೂ ಬಯಸಿದ ಭಾಗ್ಯವತಿ ಶಾರದಮ್ಮನವರು ತೀರಿಕೊಂಡರು. ಹಿರಣ್ಣಯ್ಯನವರು ಜೀವನದಲ್ಲಿ ಭಾರಿ ವ್ಯಥೆಗೆ ತುತ್ತಾದರು. ಶಾರದಮ್ಮನವರ ಅಕಾಲ ಮರಣಕ್ಕೆ ಪ್ರಮುಖ ಕಾರಣ ಅವರು ಬಾಳಿನಲ್ಲಿ ಸ್ವಲ್ಪವೇ ಸುಖಪಟ್ಟದ್ದು. ಈ ಕೊರಗಿ ನಿಂದಲೇ ಕೃಶಾಂಗಿಯಾಗಿ, ಅರ್ಧ ಮಾನಸಿಕ ಅಸ್ವಾಸ್ಥ್ಯ ದಿಂದಲೇ ನಿಧನ ಹೊಂದಿದರು.

ಹಿರಣ್ಣಯ್ಯನವರಿಗಂತೂ ಅದೇ ಕೊರಗು ಹತ್ತಿ ಕೊಂಡಿತು. ಮಗನ ಯೋಗಕ್ಷೇಮದ ಜವಾಬ್ದಾರಿಯನ್ನು ಅವರಿಗೆ ಆತ್ಮೀಯರೂ ಬಂಧುಗಳೂ ಆಗಿದ್ದ ನರಸಿಂಹನ್ ದಂಪತಿಗಳ ಬಳಿ ಒಪ್ಪಿಸಿ ತಮ್ಮ ಎಂದಿನ ವೃತ್ತಿ ಕೈ ಗೊಂಡರು. ಮಾಸ್ಟರ್ ಹಿರಣ್ಣಯ್ಯನವರ ವಿದ್ಯಾಭ್ಯಾಸವು ನಡೆಯುತ್ತಿತ್ತು.

ಮಗನೂ ರಂಗಭೂಮಿಗೆ

ಮಾಸ್ಟರ್ ಹಿರಣ್ಣಯ್ಯ ಸೀನಿಯರ್ ಇಂಟರ್ ಮೀಡಿಯೆಟ್‌ನಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ಮಾತ್ರ ಉತ್ತೀರ್ಣರಾದರು. ಉಳಿದ ವಿಷಯಗಳಿಗೆ ಸೆಪ್ಟೆಂಬರ್‌ನಲ್ಲಿ ಕುಳಿತರು. ಮಧ್ಯೆ ಕೆಲಕಾಲ ರಜೆಯಿತ್ತಾದ್ದರಿಂದ ಹಿರಣ್ಣಯ್ಯ ನವರು ಮಗನನ್ನು ತಮ್ಮೊಂದಿಗೇ ಇರಿಸಿಕೊಂಡರು. ಇವರೆಗೆ ಮಾಸ್ಟರ್ ಹಿರಣ್ಣಯ್ಯ ಹವ್ಯಾಸಿ ಕಲಾವಿದ. ಈಗ ಹಿರಣ್ಣಯ್ಯ ನವರು ತಮ್ಮ ಆರೋಗ್ಯ ಕೆಡುತ್ತಾ ಬಂದ ಕಾರಣ ತಮ್ಮ ನೇತೃತ್ವದಲ್ಲಿ, ತಮಗಿಷ್ಟವಿಲ್ಲದಿದ್ದ ಒಂದು ಕಾರ್ಯವನ್ನು ಮಾಡಿದರು. ಅದೆಂದರೆ ಮಗನನ್ನು ನಾಟಕ ರಂಗಕ್ಕೆ ಎಳೆದದ್ದು. ಅವರೇ ಮಗನಿಗೆ ಪ್ರಥಮ ಗುರುಗಳೂ ಆದರು.

೧೯೫೨ರಿಂದಲೇ ಇದು ಸಾಗಿತು. ೧೯೫೨ ಅಕ್ಟೋಬರ್ ೨೩ ರಂದು ‘ಮಕ್ಮಲ್ ಟೋಪಿ’ ನಾಟಕದ ನಾಣಿ ಪಾತ್ರದೊಂದಿಗೆ ಮಾಸ್ಟರ್ ಹಿರಣ್ಣಯ್ಯನವರ ರಂಗ ಪ್ರವೇಶವಾಯಿತು.

ಮಹಾನಟನ ನಿರ್ಗಮನ

ಬೆಂಗಳೂರು ಕ್ಯಾಂಪನ್ನು ಬಿಡಲು ಹಿರಣ್ಣಯ್ಯನವರಿಗೆ ಇಷ್ಟವಿರಲಿಲ್ಲ. ಆದರೆ ಕೆಲವು ಸನ್ನಿವೇಶಗಳ ಕಾರಣ ಹಾಗೂ ಹಿತೈಷಿಗಳ ಬಲವಂತದ ಮೇರೆಗೆ ಹಾಸನಕ್ಕೆ ಕ್ಯಾಂಪ್ ಹಾಕಲಾಯಿತು. ವಿಶೇಷವೇನೆಂದರೆ ಮೈಸೂರಿನಲ್ಲಿ ಪ್ರಾರಂಭ ವಾದ ‘ಹಿರಣ್ಣಯ್ಯ ಮಿತ್ರ ಮಂಡಳಿ’ಯ ಪ್ರಥಮ ನಾಟಕದ ಕ್ಯಾಂಪ್ ಪ್ರಾರಂಭವಾದುದು ಹಾಸನ ಕ್ಯಾಂಪಿನಿಂದಲೇ. ಈಗ ಅವರ ಬಾಳಿನ ಕಟ್ಟಕಡೆಯ ಕ್ಯಾಂಪ್ ಆಗಲು ಇನ್ನೂ ಒಂದು ಊರು ಮಾತ್ರ ಉಳಿದಿತ್ತು. ಆ ಊರಿಗೆ ಮುನ್ನ, ಬಹುಕಾಲ ನೆಲೆಸಿದ್ದ ಬೆಂಗಳೂರನ್ನು ಬಿಟ್ಟು ಮೈಸೂರು ಸಂಸ್ಥಾನದ ಕಟ್ಟಕಡೆಯ ಕ್ಯಾಂಪ್ ಸಹ ಹಾಸನವೇ ಆಯಿತು.

ಡಿಸೆಂಬರ್, ಜನವರಿಯಲ್ಲಿ ಹಾಸನದ ಕ್ಯಾಂಪನ್ನು (ಜಾತ್ರೆಯ ನಂತರ) ಬಿಟ್ಟು, ಆಗ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗಿನ ರಾಜಧಾನಿ ಮಡಿಕೇರಿಗೆ ಬಂದರು. ದಿನೇದಿನೇ ಮಾನಸಿಕ ವ್ಯಥೆ ಮತ್ತು ದೈಹಿಕ ದುರ್ಬಲತೆ ಹಾಗು ಕೆಲವು ದುರ್ವ್ಯಸನಗಳ ಪರಿಣಾಮವಾಗಿ ಅವರ ಆರೋಗ್ಯ ಕುಂದಿತು.

ಮಡಿಕೇರಿಯಲ್ಲಿ ಅವರು ನಾಟಕದಲ್ಲಿ ಪಾತ್ರ ನಿರ್ವಹಿಸಲು ಅಸಮರ್ಥರೇ ಆಗಿದ್ದರು. ಅವರ ಪಾತ್ರವನ್ನು ಮಗ ವಹಿಸುವಂತಾಯಿತು. ಮೊದಲ ದಿನ ಅವರು ನಿಲ್ಲಲಾಗದೆ, ‘ದೇವದಾಸಿ’ಯ ನಾಜೂಕಯ್ಯನ ಪಾತ್ರವನ್ನು ಕುರ್ಚಿಯ ಮೇಲೆ ಕುಳಿತೇ ನಿರ್ವಹಿಸಿದರು. ಮರುದಿನ ಮಗನನ್ನು ಪಾತ್ರ ವಹಿಸುವಂತೆ ಹೇಳಿದರು. ಜನರ ಒತ್ತಾಯ ಹೆಚ್ಚಿದಾಗ, ಕೊನೆಯ ಎರಡು ದೃಶ್ಯಗಳನ್ನು ಕಷ್ಟಪಟ್ಟು ಅವರೇ ಅಭಿನಯಿಸಿದರು. ಅದೇ ಅವರ ಕಟ್ಟಕಡೆಯ ರಂಗ ಪ್ರವೇಶವಾಯಿತು.

೧೯೫೩, ಮಾರ್ಚ್ ತಿಂಗಳ ೨೧. ಅವರು ನಾಟಕ ದಲ್ಲಿ ಕೊನೆಯದಾಗಿ ಅಭಿನಯಿಸಿದ ನಲವತ್ತೆರಡು ದಿನಗಳ ಬಳಿಕ ರಾತ್ರಿ ೧೧-೫೦ ಗಂಟೆಗೆ ದೈವಾಧೀನರಾದರು. ಆಗ ಅವರಿಗೆ ನಲವತ್ತೆಂಟೇ ವರ್ಷ. ಹಿರಣ್ಣಯ್ಯನವರಿಗೆ ದೈವಜ್ಞಾನ, ಆಧ್ಯಾತ್ಮ ಮತ್ತು ಜ್ಯೋತಿಷ್ಯಗಳಲ್ಲಿ ಅಚಲವಾದ ನಂಬಿಕೆ. ಆ ಬೆಳಿಗ್ಗೆ ಶ್ರೀಕೃಷ್ಣ ಚಕ್ರ ನೋಡಿದ್ದರು. ಅದರಂತೆ ಅಂದು ‘ನರಕಾತ್ಸರ್ವನಾಶನಂ’ ಎಂದಿತ್ತು. ಅವರಿಗೆ ತಿಳಿದು ಹೋಯಿತು ತಮ್ಮ ಬಗ್ಗೆ. ಅದಕ್ಕೆ ಕೆಲವು ದಿನಗಳ ಹಿಂದಿನಿಂದಲೂ ಒಂದು ರೀತಿಯ ವೈರಾಗ್ಯದಿಂದಿರು ತ್ತಿದ್ದರು, ಮಗನ ವಿನಾ ಬೇರೆ ಯಾರೊಂದಿಗೂ ಮಾತೂ ಆಡುತ್ತಿರಲಿಲ್ಲ.

ವ್ಯವಹಾರ ಎಷ್ಟೋ ಅಷ್ಟೆ. ತಾವು ಸಾಯುತ್ತೇ ನೆಂದು ನಂಬಿದ ಅವರು ತಮ್ಮ ಮರಣೋತ್ತರ ಕ್ರಿಯೆಗೆಂದು ೮೦೦ ರೂಪಾಯಿಗಳನ್ನು ಒಂದು ಕವರಿನಲ್ಲಿಟ್ಟು ಒಂದು ಚೀಟಿ ಯನ್ನು ಬರೆದಿಟ್ಟಿದ್ದರು. ‘೨೧-೩-೧೯೫೩, ರಾತ್ರಿ ೧೦ ಘಂಟೆ. ರೂ. ೮೦೦’ ಎಂದಿತ್ತು ಆ ಚೀಟಿಯಲ್ಲಿ. ಅದನ್ನು ತಮ್ಮ ತಲೆದಿಂಬಿನ ಅಡಿಯಲ್ಲಿಟ್ಟುಕೊಂಡಿದ್ದರು.

ನಾಟಕ ಅರ್ಧ ನಡೆದಿತ್ತು, ಅವರ ಮರಣವಾರ್ತೆ ಬಂದಿತು. ಜನರೆಲ್ಲ ತಮ್ಮ ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಯನ್ನರ್ಪಿಸಲು ಮನೆಯತ್ತ ಗುಂಪುಗುಂಪಾಗಿ ಧಾವಿಸಿ ದರು. ಇದೇ ಸಂದರ್ಭದಲ್ಲಿ ಕಂಪೆನಿಯ ಕೆಲಸಗಾರ ನೊಬ್ಬ ಬಂದು ದಿಂಬಿನ ಅಡಿ ಇದ್ದ ಮರಣೋತ್ತರ ಕ್ರಿಯೆಯ ಖರ್ಚಿನ ಹಣವನ್ನು ಹಾರಿಸಿಕೊಂಡು ಹೊರಟು ಹೋದ. ತಲೆದಿಂಬಿ ನಡಿ ಇದ್ದ ಕವರಿನಲ್ಲಿ ಚೀಟಿ ಇತ್ತೇ ವಿನಾ ಹಣ ಕಂಡುಬರಲಿಲ್ಲ ! ಇಂಗ್ಲಿಷ್ ಬರುವ

ವ್ಯಕ್ತಿಯಾಗಿದ್ದಿದ್ದರೆ ಆ ಚೀಟಿಯನ್ನೂ ಅಪಹರಿಸಿ ಬಿಡುತ್ತಿದ್ದರು. ಅದೇನೋ ಚೀಟಿ ಎಂದುಕೊಂಡು ಬಿಟ್ಟಿದ್ದರಿಂದ ಮಗನಿಗೆ ವಿಷಯವಾದರೂ ತಿಳಿಯಿತು. ಅವರ ಅನ್ನವನ್ನು ಸದಾ ಕಾಲ ಉಂಡು, ಅವರ ಅಂತ್ಯಸಂಸ್ಕಾರಕ್ಕೆಂದು ಸಂರಕ್ಷಿಸಲಾ ಗಿದ್ದ ಹಣವನ್ನೂ ಕಳ್ಳತನ ಮಾಡಿದ ದುಷ್ಕರ್ಮಿಯನ್ನು ಏನೆನ್ನಬೇಕು ?

ಮಾರನೆಯ ಬೆಳಗ್ಗೆ, ಮಡಿಕೇರಿಯ ಸಾಹುಕಾರ ರೊಬ್ಬರು ಮಾಸ್ಟರ್ ಹಿರಣ್ಣಯ್ಯನವರ ಕಷ್ಟವನ್ನರಿತು ನೂರು ರೂಪಾಯಿಗಳನ್ನು ನೀಡಿದರು. ‘ಸುಸಂಸ್ಕೃತ ಹಾಸ್ಯನಟ’, ವಿದ್ವತ್ಪೂರ್ಣ ನಾಟಕಾರರ, ಮಹಾನ್ ಕಲಾವಿದ, ವಿನೂತನ ನಾಟಕ ರಂಗ ನಿರ್ಮಾತೃಗಳಲ್ಲಿ ಒಬ್ಬರಾದ ಹಿರಣ್ಣಯ್ಯನವರ ಅಂತ್ಯಸಂಸ್ಕಾರವಾಯಿತು.

ಹಲವಾರು ವರ್ಷಗಳ ಬಳಿಕ ಮಾಸ್ಟರ್ ಹಿರಣ್ಣಯ್ಯ ಆ ಸಾಹುಕಾರರಿಗೆ ಹಣ ಹಿಂದಿರುಗಿಸಲು ಹೋದಾಗ ಅವರು, “ಆ ನೂರು ರೂಪಾಯಿ ಸಾಲವಲ್ಲ. ಹಿರಿಯ ಕಲಾವಿದರಿಂದ ನಾವು ಪಡೆದ ಮನರಂಜನೆಗೆ, ಅವರ ಹಾಸ್ಯಕ್ಕೆ ತೆತ್ತ ಅತಿ ಅಲ್ಪ ಕಾಣಿಕೆ. ಅದನ್ನು ಹಿಂದಿರುಗಿಸಲು ನಿಮಗೆಷ್ಟು ಧೈರ್ಯ? ಹೋಗಿ…..” ಎಂದರು !

ಹಾಸ್ಯ-ವಿಮರ್ಶೆ

ಹಿರಣ್ಣಯ್ಯನವರಿಗೆ ಅಸಮಾನ ಧೈರ್ಯ. ತಪ್ಪು, ಅನ್ಯಾಯ, ಮೂಢನಂಬಿಕೆ ಇವನ್ನು ಎಲ್ಲಿ ಕಂಡರೂ ಟೀಕೆ ಮಾಡುವರು. ಯಾರ ಪದವಿ, ಜಾತಿ, ಹಣ ಕಂಡೂ ಹೆದರುವ ಚೇತನವಲ್ಲ ಅವರದು. ಅವರು ಒಂದು ಮಾತನಾಡಿದರೆ ಯಾರೂ ಅವರತ್ತ ಬೊಟ್ಟು ಮಾಡಿ ಏನೂ ಹೇಳಲು ಆಗುತ್ತಿರಲಿಲ್ಲ; ಮಾತ್ರವಲ್ಲ, ಎಲ್ಲರೂ ಮೆಚ್ಚಿಕೊಳ್ಳಬೇಕು. ತಮ್ಮ ಹಾಸ್ಯದ ಹೊನಲಿನಲ್ಲಿ ಎಲ್ಲರಿಗೂ ಒಂದು ನೂರು ನೀತಿ ಹೇಳುತ್ತಿದ್ದರು. ಅವರದು ತೀಕ್ಷ್ಣ ಹಾಸ್ಯ. ಅವರಷ್ಟೇ ತೀಕ್ಷ್ಣ ಬುದ್ಧಿಯುಳ್ಳವರಾದರೆ ಬಿದ್ದುಬಿದ್ದು ನಗಬೇಕು.

ನಮ್ಮ ಸಾಹಿತ್ಯದಲ್ಲಿ, ನಾಟಕದಲ್ಲಿ ನಗುವುದೇ ಕಡಮೆ. ಹಾಸ್ಯಕ್ಕೆ ಹೆಚ್ಚು ಸ್ಥಾನವಿಲ್ಲ. ಇಲ್ಲೊಬ್ಬ ವಿದೂಷಕ, ಅಲ್ಲೊಬ್ಬ ಶಕಾರ ಇಂತಹ ಪಾತ್ರಗಳಲ್ಲಿ ಒಂದಿಷ್ಟು ಹಾಸ್ಯ. ಹಿರಣ್ಣಯ್ಯ ನವರು ರಂಗಭೂಮಿಗೆ ಹಾಸ್ಯದ ಬೆಳಕನ್ನು ತಂದರು. ಅವರ ನಾಟಕವೆಂದರೆ ಪ್ರೇಕ್ಷಕರಿಗೆ ಹಾಸ್ಯದ ಸಮಾರಾಧನೆ. ನಾಟಕದ ಪ್ರಾರಂಭದಿಂದ ಕಡೆಯವರೆಗೆ ಪಟಪಟನೆ ಹಾಸ್ಯದ ಚಟಾಕಿಗಳು ಸಿಡಿಯುತ್ತಿದ್ದವು. ಆದರೆ ಈ ಹಾಸ್ಯದ ಹಿಂದೆ ಅಂತಃಕರಣವನ್ನು ತಿದ್ದುವ ಶಕ್ತಿ ಇತ್ತು, ಜನ ಜೀವನದ ಸತ್ಯಗಳನ್ನು ಗುರುತಿಸುವಂತೆ ಮಾಡುವ ಮನೋಧರ್ಮವಿತ್ತು. ‘ದೇವದಾಸಿ’ ನಾಟಕದಲ್ಲಿ ವೇಶ್ಯೆಯರ ಸಮಸ್ಯೆ ಪ್ರಧಾನ. ‘ಎಚ್ಚಮನಾಯಕ’ ಐತಿಹಾಸಿಕ ನಾಟಕ.

ಹಿಂದುಗಳೂ ಮುಸ್ಲಿಮರು ಒಬ್ಬ ಭಾರತಮಾತೆಯ ಮಕ್ಕಳು, ಅವರು ಒಟ್ಟಿಗೆ ಕೂಡಿ ಬಾಳದಿದ್ದರೆ ದೇಶಕ್ಕೆ ಹಾನಿ ಎಂಬ ಸತ್ಯವನ್ನು ಹಿರಣ್ಣಯ್ಯ ಸಾರಿದರು. ‘ಮಕ್ಮಲ್ ಟೋಪಿ’ ನಾಟಕದಲ್ಲಿ ಮನೆಯ ಹೊಸ್ತಿಲೊಳಗೆ, ಹೊಸ್ತಿಲಾಚೆ ಹೆಣ್ಣುಗಂಡುಗಳ ಸ್ಥಾನಮಾನಗಳೇನು ಎಂಬ ಪ್ರಶ್ನೆಯನ್ನು ಎತ್ತಿಕೊಂಡರು. ಅವರು ಆಡುತ್ತಿದ್ದ ‘ಪಂಗನಾಮ’ ನಾಟಕದಲ್ಲಿ ಮನುಷ್ಯನಿಗೆ ನಿಜವಾದ ವಿದ್ಯೆ ಎಂದರೆ ಹೆಸರಿನ ಕೊನೆಯಲ್ಲಿ ಸಿಕ್ಕಿಸಿಕೊಳ್ಳುವ ಡಿಗ್ರಿಗಳ ಮಾಲೆಯಲ್ಲ; ನೆರೆಯವರಿಗೆ ಹೊರೆಯಾಗದೆ ಬದುಕಿದ್ದು ಸತ್ತನಂತರವೂ ಜನ ಪ್ರೀತಿ – ಅಭಿಮಾನಗಳಿಂದ ಸ್ಮರಿಸಿಕೊಳ್ಳುವಂತೆ, ಅವರ ನೆನಪಿನಲ್ಲಿ ಬದುಕುವಂತೆ ದಾರಿ ತೋರುವ ಜ್ಞಾನವೇ ನಿಜವಾದ ವಿದ್ಯೆ ಎಂದು ತೋರಿಸಿದರು; ಧಣಿಯ ಆಗ್ರಹ, ನೌಕರರ ಸತ್ಯಾಗ್ರಹ ಮೇರೆ ಮೀರಿದರೆ ರಾಷ್ಟ್ರಕ್ಕಾಗುವ ನಷ್ಟವೇನು ಎಂಬುದನ್ನು ವಿವರಿಸುತಿದ್ದರು.

ಹಿರಣ್ಣಯ್ಯನವರದು ಸರಳ ಸ್ವಭಾವ. ಎಲ್ಲರೊಡನೆ ನಗುನಗುತ್ತ ಬೆರೆಯುವ ವ್ಯಕ್ತಿ ಅವರು. ತಮ್ಮ ಕಂಪೆನಿಯ ಸಹನಟರನ್ನೂ ಉದ್ಯೋಗಿಗಳನ್ನೂ ಅಂತಃಕರಣದಿಂದ ನಡೆಸಿಕೊಂಡವರು. ತಾವು ಕಂಪೆನಿ ಯಜಮಾನರೆಂದು ಅವರು ದೊಡ್ಡಸ್ತಿಕೆ ತೋರಿಸಿಕೊಂಡವರಲ್ಲ. ಅದೊಂದು ದಿನ ರಾತ್ರಿ ಒಂಬತ್ತೂವರೆಗೆ ನಾಟಕ ಮುಗಿಯಿತು. ಅನಂತರ ಎಲ್ಲೋ ಹೋಗಬೇಕಾಗಿತ್ತು. ಆದರೆ ವಿಪರೀತ ಮಳೆ. ಬೇಸರವಾಯಿತು.

ನಾಟಕದಲ್ಲಿ ಪರದೆ ಎಳೆಯು ವವನು ಮತ್ತಿತ್ತರ ಸಣ್ಣಪುಟ್ಟ ನೌಕರರನ್ನೂ, ನಟವರ್ಗದ ವರನ್ನೂ ಕರೆದರು. ಹರಟೆ, ತಮಾಷೆ, ಇಸ್ಪೀಟಾಟಗಳಲ್ಲಿ ಹೊತ್ತು ಹೋದದ್ದೆ ಯಾರಿಗೂ ತಿಳಿಯಲಿಲ್ಲ. ಬೆಳಗಿನ ಜಾವ ಮೂರು ಗಂಟೆಯವರೆಗೆ ಸಂತೋಷವಾಗಿ ಕಾಲ ಕಳೆದರು.

ಅಖಂಡ ಕರ್ನಾಟಕದ ಜನರಿಗೆ ನಗುವುದನ್ನು ತೋರಿಸಿಕೊಟ್ಟು, ನಗಿಸಿ, ತಮ್ಮ ಸ್ವಂತ ಜೀವನದಲ್ಲಿ ಕೇವಲ ದುಃಖವನ್ನೇ, ಕಷ್ಟವನ್ನೇ ಅನುಭವಿಸಿದರೂ ಮತ್ತೊಬ್ಬರಿಗೆ ಸಹಿಯುಣಿಸಿದ ಹಿರಣ್ಣಯ್ಯನವರೇ ಧನ್ಯರು. ಅವರ ತ್ಯಾಗದಿಂದಲೇ ಅವರೂ ಅಜರಾಮರರಾಗಿದ್ದಾರೆ.

ಹೀಗೆನ್ನುತ್ತಿದ್ದರು

ಹಿರಣ್ಣಯ್ಯನವರ ಕೆಲವು ಮಾತುಗಳು ಅಣಿಮುತ್ತು ಗಳು. ಅವುಗಳಿಗೆ ಅರ್ಥಕೊಡುವುದೆಂದರೆ ಬಹಳಷ್ಟು ಅರ್ಥಮಾಡಿಕೊಂಡಿರಬೇಕು. ಕೆಲವು ಹೀಗಿವೆ :

ಜನವೇ ಜೀವ, ಮನವೇ ದೈವ – ನಟನಿಗೆ, ಕವಿಗೆ.

ನಿನ್ನ ಕಲೆಯನ್ನು ಹೊಗಳುವವರೇ ತಾಯಿ, ತೆಗಳುವವರೇ ಗುರು. (ತಾಯಿಗೆ ಮಕ್ಕಳು ಏನು ಮಾಡಿ ದರೂ ಚೆನ್ನ. ಗುರುಗಳು ತಪ್ಪನ್ನು ತಿದ್ದುವವರಾದುದರಿಂದ ಅವರು ಉತ್ತಮ.)

ನಾಟಕದಲ್ಲಿ ಅಭಿನಯ ಕಂಡು ಚಪ್ಪಾಳೆ ತಟ್ಟಿದರೆ ಕಪಾಳಕ್ಕೆ ಹೊಡೆದಂತೆ ; ‘ಒನ್ಸ್ ಮೋರ್ ನಂಬಿದರೆ ನೀನು ನೋ ಮೋರ್’. (ಅದಕ್ಕೆ ಬಲಿ ಬಿದ್ದರೆ ಅಹಂಭಾವ ಬರುತ್ತದೆ. ಅಹಂಭಾವ ಬಂದರೆ ಸರ್ವನಾಶ.)

ಜನ ಹೋಗು ಅನ್ನೋಕೆ ಮುಂಚೆ ಒಳಗೆ ಬಂದವನೇ ನಟ – ಸಾಕು ಅನ್ನೋಕೆ ಮುಂಚೆ ಪೆನ್ನಿಗೆ ಕ್ಯಾಪ್ ಹಾಕುವವನೇ ಕವಿ.