ಇರುಳೆಲ್ಲಾ ಕೆಳಗೆ ಹರಿಯುತ್ತಿದ್ದ ಗಂಗೆಯ ಮೊರೆತಕ್ಕೆ ಹೊಂದಿಕೊಂಡು ಹಾಯಾಗಿ ನಿದ್ದೆ ಮಾಡಿದೆವು. ಗಾಢವಾದ ಇರುಳಿನ ಆ ನಿಶ್ಯಬ್ದತೆಯಲ್ಲಿ ಆ ನದಿಯ ಮೊರೆತವೊಂದೇ ಇಡೀ ಗಂಗೋತ್ರಿಯ ಕಣಿವೆಯ ಅಸ್ತಿತ್ವಕ್ಕೆ ಸಾಕ್ಷಿಯಾಯಿತು.

ಬೆಳಗಾದಾಗ, ಮತ್ತೆ ಆ ಕತ್ತಲೆಯ ಶೂನ್ಯದಿಂದ, ಮಹಾಪರ್ವತಗಳು, ತಮ್ಮ ಸ್ವಸ್ವರೂಪದಿಂದ ಪ್ರತ್ಯಕ್ಷವಾದುವು. ಇರುಳಿನಲ್ಲಿ ಕೇವಲ ನಾದರೂಪವಾಗಿ ಅನುಭವಕ್ಕೆ ಬಂದ ಗಂಗೆ, ಬೆಳಗಿನ ಹೊಂಬಿಸಿಲಿನಲ್ಲಿ ಎಂದಿನಂತೆ, ಮೊರೆ ಮೊರೆತಗಳಿಂದ ಪ್ರವಹಿಸುತ್ತಿತ್ತು. ನಿದ್ದೆ ಎಚ್ಚರಗಳು, ಹಗಲು ರಾತ್ರಿಗಳು, ನಮಗಷ್ಟೆ. ಈ ನದಿ, ಈ ಬೆಟ್ಟ,  ಅವುಗಳ ನಿರಂತರ ಚೈತನ್ಯಕ್ಕೆ ಈ ಎಲ್ಲಾ ದ್ವಂದ್ವಗಳು ಯಾವ ಲೆಕ್ಕ? ಗಂಟು ಮೂಟೆಗಳನ್ನು ಕಟ್ಟಿಕೊಂಡು, ಬಿಸಿ ಬಿಸಿ ಚಹಾ ಕುಡಿದು, ಗಂಗೋತ್ರಿಯ ನದಿ ಪರ್ವತಗಳಿಗೆ ಕೈ ಮುಗಿದು, ಜೀಪುಗಳನ್ನೇರಿ ಭೈರೂನ್‌ಘಾಟನ್ನು ತಲುಪಿದೆವು. ಅಲ್ಲಿಂದ ನಮ್ಮ ಮನೆಯವರು ಕಂಡಿಯಲ್ಲಿ, ನಾನು ಕೋಲೂರಿಕೊಂಡು ಕಾಲುನಡಿಗೆಯಲ್ಲಿ ‘ಲಂಕಾ’ದ ಕಡೆ ಇಳಿತದ ಏರುವೆಯ ದಾರಿಯನ್ನು ಹಿಡಿದೆವು. ಬೆಳಗಿನ ಎಂಟು ಗಂಟೆಯ ಹೊಂಬಿಸಿಲಿನಲ್ಲಿ, ಭೂರ್ಜ ವೃಕ್ಷ ಮತ್ತು ದೇವದಾರು ತರುಗಳು ಕಿಕ್ಕಿರಿದ ಆ ಕಣಿವೆಯ ಒಂದೂವರೆ ಸಾವಿರ ಅಡಿಯ ಅವರೋಹಣದ ದಾರಿಯನ್ನು ಇಳಿದು, ಎರಡೂ ಕಣಿವೆಗಳನ್ನು ಕೂಡಿಸುವ ಮರದ ಸೇತುವೆಯ ಮೂಲಕ, ಇಡೀ ಕಣಿವೆಗೇ ಕಡೆಗೋಲಿಟ್ಟಂತೆ ಮೊರೆಯುವ ಪ್ರವಾಹವನ್ನು ದಾಟಿ, ಮತ್ತೆ ಒಂದು ಸಾವಿರ ಅಡಿಗಳನ್ನು ಕೋಲೂರಿಕೊಂಡು ಹತ್ತಿ ಸುಮಾರು ಹತ್ತು ಗಂಟೆಯ ಹೊತ್ತಿಗೆ ಲಂಕಾಗೆ ಬಂದು, ನಮಗಾಗಿ ಕಾಯುತ್ತಿದ್ದ ಟ್ಯಾಕ್ಸಿಯಲ್ಲಿ ಕುಳಿತೆವು.

ಮುಂದಿನ ನಮ್ಮ ಪ್ರಯಾಣ ಉತ್ತರಕಾಶಿಯ ಮೂಲಕ ಕೇದಾರಕ್ಕೆ. ಗಂಗೋತ್ರಿಯಿಂದ ಕೇದಾರನಾಥ ಒಂದುನೂರಾ ಎಂಭತ್ತು ಕಿಲೋಮೀಟರ್ ದೂರದಲ್ಲಿದೆ. ಅಂದಿನ (೧೮.೫.೧೯೮೪) ಸಂಜೆಯೊಳಗಾಗಿ ಕೇದಾರವನ್ನು ತಲುಪುವುದು ಸಾಧ್ಯವಾಗದ ಸಂಗತಿಯಾದುದರಿಂದ, ಸಂಜೆಯ ವೇಳೆಗೆ ರುದ್ರ ಪ್ರಯಾಗವನ್ನು ತಲುಪಿ ಅಲ್ಲಿ ತಂಗುವುದು ನಮ್ಮ ಉದ್ದೇಶವಾಗಿತ್ತು. ಲಂಕಾದ ೯೩೦೦ ಅಡಿಗಳ ಎತ್ತರದಿಂದ, ಬೆಟ್ಟಗಳಿಂದ ಬೆಟ್ಟಗಳಿಗೆ ಹಾಯುತ್ತಾ, ಗಂಗೆಯ ತೀರದಲ್ಲಿ ಉದ್ದಕ್ಕೂ ಪ್ರಯಾಣ ಮಾಡಿ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಉತ್ತರಕಾಶಿಯನ್ನು ತಲುಪಿದೆವು. ಈಗಾಗಲೇ ‘ರುಚಿಕಂಡ’ ಹೋಟೆಲಿಗೆ ನುಗ್ಗಿ ಪೊಗದಸ್ತಾದ ಭೋಜನ ಮುಗಿಸಿಕೊಂಡು ಉತ್ತರಕಾಶಿಯನ್ನು ಬಿಡುವ ವೇಳೆಗೆ ಗಂಟೆ ಎರಡಾಗಿತ್ತು. ಕಾರು ಮತ್ತೆ ಏರಿಳಿತದ ದಾರಿಗಳಲ್ಲಿ ಧಾವಿಸತೊಡಗಿತು. ದಾರಿಯುದ್ದಕ್ಕೂ ಸಣ್ಣ ಪುಟ್ಟ ಊರುಗಳು; ಊರುಗಳ ದಾರಿಯಲ್ಲಿ ಕಣಿವೆಗಳಲ್ಲಿ ಇಳಿಜಾರುಗಳಲ್ಲಿ ಹೊಲಗಳು; ಕೆಲವೆಡೆ ಪೈರನ್ನು ಕೊಯ್ದು, ಮರಗಳ ಮೇಲೆ ಒಟ್ಟಿದ ಬಣವೆಗಳು; ನಡುನಡುವೆ ಕಂದರಗಳ ದಾರಿಗಳಲ್ಲಿ ಬೆನ್ನಿಗೆ ಬುಟ್ಟಿಕಟ್ಟಿಕೊಂಡು ಕೆಲಸಕ್ಕೆ ಹೊರಟ ಗ್ರಾಮೀಣ ಚೆಲುವೆಯರು. ಅವರೊಬ್ಬೊಬ್ಬರ ಮುಖದಲ್ಲೂ ಅದೇನು ಬಣ್ಣ! ದೃಢವಾದ ಮೈಕಟ್ಟು, ದುಂಡುಮುಖ, ಕೆಂಪು ತುಟಿ, ಗುಲಾಬಿ ಕೆನ್ನೆ, ಜತೆಗೆ ಥಳ ಥಳ ಹೊಳೆಯುವ ಕಣ್ಣುಗಳು. ಈ ಹೆಂಗಸರ ಎದುರಿಗೆ, ಅತ್ಯಂತ ಚೆಲುವೆಯರೆಂದು ನಾವು ಮೆಚ್ಚುವ ನಮ್ಮ ಸಿನಿಮಾ ತಾರೆಯರನ್ನು ನಿವಾಳಿಸಿ ಒಗೆಯಬೇಕು. ಸಣ್ಣ ಮಕ್ಕಳೂ ಅಷ್ಟೇ ಈ ಗುಡ್ಡಗಾಡಿನ ಸಾಮಾನ್ಯ ಜನರ ಈ ಚೆಲುವು ಉದ್ದಕ್ಕೂ ನನ್ನನ್ನು ಬೆರಗಾಗಿಸಿದ ಸಂಗತಿಯಾಗಿತ್ತು. ನಮ್ಮ ವಾಹನ ಬೆಟ್ಟದೆತ್ತರವೊಂದರಲ್ಲಿ ಏದುಸಿರು ಬಿಡುತ್ತಾ, ಮೇಲಿಂದ ಧುಮುಕುವ ಜಲಪಾತದ ಬದಿಗೆ ಶಿಶಿರೋಪಚಾರಕ್ಕೆಂದು ನಿಂತಿತು. ಅಲ್ಲಿ ಜಲಪಾತದ ಬದಿಗೆ ನೀರಿನ ಬಿಂದಿಗೆ ಹಿಡಿದು ಸದೃಢ ಶರೀರದ, ದುಂಡು ಮುಖದ, ಹೊನ್ನಿನ ಬಣ್ಣದ ಚೆಲುವೆಯೊಬ್ಬಳು ನಿಂತಿದ್ದಳು. ಅವಳನ್ನು ನೋಡಿ ನನಗೆ ಅನ್ನಿಸಿತು, ಶಿವನನ್ನು ಮದುವೆಯಾದ ಪಾರ್ವತಿಯೂ ಹೀಗೆಯೇ ಇದ್ದಿರಬೇಕು, ಎಂದು.

ಸಂಜೆ ಆರು ಗಂಟೆಯ ವೇಳೆಗೆ ನಾವು ಶ್ರೀನಗರವನ್ನು ತಲುಪಿದೆವು. ಶ್ರೀನಗರ ತೆಹರಿ – ಘಡವಾಲ್ ಪ್ರದೇಶದ, ಹಿಂದಿನ ಕಾಲದ ರಾಜಧಾನಿಯಾಗಿತ್ತು. ಅಲಕನಂದಾ ನದಿಯ ದಡದಲ್ಲಿರುವ ಈ ಊರಿನಲ್ಲಿ, ಶ್ರೀ ಶಂಕರಾಚಾರ್ಯರು ಹಿಂದೆ ತಾವು ಬದರಿಗೆ ಹೋಗುವ ಮಾರ್ಗದಲ್ಲಿ, ತಾಂತ್ರಿಕ ಪಂಥದೊಂದಿಗೆ ಸಂಬಂಧಿಸಿದ ಶ್ರೀಯಂತ್ರವನ್ನು ಇಲ್ಲಿನ ನದಿಯಲ್ಲಿ ವಿಸರ್ಜಿಸಿದರಂತೆ. ಈಗ ಈ ಊರು ಅತ್ಯಾಧುನಿಕ ಸೌಲಭ್ಯಗಳಿಂದ, ಅನೇಕ ಆಡಳಿತ ಹಾಗೂ ಶಿಕ್ಷಣ ಸಂಸ್ಥೆಗಳಿಂದ, ಯಾವುದೇ ದೊಡ್ಡ ಪೇಟೆ ಅಥವಾ ಪಟ್ಟಣವನ್ನು ನೆನಪಿಗೆ ತರುವಂತಿದೆ.

ಶ್ರೀನಗರದಿಂದ ರುದ್ರ ಪ್ರಯಾಗಕ್ಕೆ ೩೪ ಕಿಲೋಮೀಟರ್ ಮಾತ್ರ. ಆಗಲೇ  ಕಾಡು ಕಣಿವೆಗಳ ಮೇಲೆ ಕವಿಯುತ್ತಿದ್ದ ಕತ್ತಲೆಯ ದಾರಿಯಲ್ಲಿ, ಪರ್ವತಗಳ ಕಡಿದಾದ ಅಂಚುಗಳಲ್ಲಿ ನಮ್ಮ ಚಕ್ರಗಳು ಚಲಿಸತೊಡಗಿದವು. ಅಂಕು-ಡೊಂಕಿನ ಇಳಿತದ ದಾರಿಯಾದುದರಿಂದ, ಪ್ರಯಾಣ ಸ್ವಲ್ಪ ಮಂದಗತಿಯಿಂದಲೇ ಮುಂದುವರಿಯಿತು. ಸುಮಾರು ಒಂದು ಗಂಟೆಯ ನಂತರ ರುದ್ರ ಪ್ರಯಾಗ ಹತ್ತಿರವಾಗತೊಡಗಿದಂತೆ ದೂರದ ಬೆಟ್ಟಗಳ ಮೇಲೆ ಝಗಝಗಿಸುವ ಬೆಳಕಿನ ಸಾಲು ಗೋಚರಿಸತೊಡಗಿತು. ಅದು ಬಹುಶಃ ವಿದ್ಯುದ್ದೀಪರಾಜಿಗಳಿಂದ ಕಿಕ್ಕಿರಿದ ಊರು ಇರಬಹುದೇನೋ ಎಂದು ಭಾವಿಸಿದ ನಮಗೆ, ಇನ್ನಷ್ಟು ಹತ್ತಿರಬಂದಾಗ, ಅದು ಬೆಟ್ಟದ ಮೈಯನ್ನು ಮೇಯುತ್ತಿರುವ ಬೆಂಕಿಯ ಹಿಂಡು ಎನ್ನುವುದು ಖಚಿತವಾಯಿತು. ಆ ದೃಶ್ಯ ಮತ್ತೊಂದು ಬೆಟ್ಟದ ಹಿಂದೆ ಮರೆಯಾದಾಗ, ಎದುರಿಗೆ ದೀಪಗಳ ಹಸೆ ಬರೆದುಕೊಂಡ ರುದ್ರಪ್ರಯಾಗವನ್ನು ನಾವು ಪ್ರವೇಶಿಸಿದ್ದೆವು. ಪ್ರವೇಶದಲ್ಲೇ ಕಾಣುವ ಕಾಲೀ ಕಂಬಳಿವಾಲಾ ಧರ್ಮಶಾಲೆಯ ಬೃಹತ್ತಾದ ಕಟ್ಟಡದ ಮುಂದೆ ನೂರಾರು ವಾಹನಗಳು ಬೀಡುಬಿಟ್ಟಿದ್ದವು. ಆದರೆ ನೂರಾರು ಕೊಠಡಿಗಳಿರುವ ಆ ಧರ್ಮಶಾಲೆಯ ಎಲ್ಲ ಕೋಣೆಗಳೂ ಭರ್ತಿಯಾಗಿ, ಅದರ ಅಂಗಳದಲ್ಲೂ ಜನ – ಗಂಡಸರು, ಹೆಂಗಸರು, ಮಕ್ಕಳು, ಮುದುಕರು – ಚಾಪೆ  ಬಿಡಿಸಿಕೊಂಡು ಮಲಗಿದ್ದರು. ಅರ್ಧ-ಮುಕ್ಕಾಲು ಗಂಟೆ ಸುತ್ತಮುತ್ತ ಪರದಾಡಿದ ನಮಗೆ ತಲೆಯಿಡಲು ನೆಲೆಯೇ ದೊರೆಯದಾಯಿತು. ಅದೂ ಮೇ ತಿಂಗಳಿನಂಥ ಯಾತ್ರೆಯ ಕಾಲದಲ್ಲಿ, ಹರಿದ್ವಾರ-ಹೃಷಿಕೇಶಗಳಿಂದ ಬಂದು, ಬದರಿಗೆ ಮತ್ತೆ ಕೇದಾರಕ್ಕೆ ಹೋಗುವ ದಾರಿಗಳು ಕವಲೊಡೆಯುವ ಕೇಂದ್ರವಾದ ರುದ್ರಪ್ರಯಾಗದಲ್ಲಿ ವಾಸಕ್ಕೆ ಸ್ಥಳ ದೊರೆಯುವುದು ದುಸ್ತರವೇ ಸರಿ. ಕಡೆಗೆ ಊರಿನ ಬಜಾರ್ ಕೇಂದ್ರಕ್ಕೆ ಬಂದು, ಝಗ ಝಗಿಸುವ ಅಂಗಡಿ ಬೀದಿಗಳ ಇಕ್ಕಟ್ಟಿನಲ್ಲಿ ಟ್ಯಾಕ್ಸಿಯನ್ನು ನಿಲ್ಲಿಸಿ ಅಲೆದಾಡಿ, ಹಾಗೂ ಹೀಗೂ ಒಂದಿರುಳು ನಿಲ್ಲಲು ನೆಲೆಯೊಂದನ್ನು ಹುಡುಕಿದೆವು. ಆ ‘ನೆಲೆ’ ಯಾರದೋ ಮನೆಯ ಮೆಲುಪ್ಪರಿಗೆಯ ಅಂಗಳ. ವಾಸ್ತವವಾಗಿ ಅದೊಂದು ಬಾಲ್ಕನಿ. ಅಲ್ಲಿ ಖಾಲಿ ಇದ್ದದ್ದು ದನದ ಕೊಟ್ಟಿಗೆಯಂಥ ಒಂದು ಕೊಠಡಿ. ನಮ್ಮ ಸಾಮಾನುಗಳನ್ನು ಆ ಕೊಠಡಿಯಲ್ಲಿರಿಸಿ ಬೀಗ ಹಾಕಿ, ನಾವೆಲ್ಲಾ ಬಾಲ್ಕನಿಯಲ್ಲಿ ಅದರ ಮಾಲೀಕ ಕೃಪೆಯಿಟ್ಟು ಒದಗಿಸಿದ ಹಗ್ಗದ ಮಂಚಗಳಲ್ಲಿ ಮಲಗಿದೆವು. ಸಮುದ್ರ ಮಟ್ಟದಿಂದ ಕೇವಲ ಎರಡು ಸಾವಿರ ಅಡಿಗಳ ಎತ್ತರದಲ್ಲಿರುವ ಈ ಊರಿನಲ್ಲಿ, ಕಿತ್ತು ತಿನ್ನುವ ಶೆಖೆಯಲ್ಲಿ ನಮಗೆ ಈ ಅಂಗಳವೇ ಅತ್ಯಂತ ಆಪ್ಯಾಯಮಾನವಾಗಿತ್ತು. ಈ ಬಾಲ್ಕನಿಯಲ್ಲಿ ಮಲಗಿ, ಕೆಳಗೆ ಗೊಂದಲದಿಂದ ತುಂಬಿದ ಬಜಾರದ ಮಧ್ಯೆ, ಅಕ್ಕಮಹಾದೇವಿ ಹೇಳಿದಂತೆ, ‘ಸಂತೆಯೊಳಗೊಂದು ಮನೆಯ ಮಾಡಿ’ ನಾವು ಇರುಳನ್ನು ಕಳೆಯಲು ತಯಾರಾದೆವು. ನಾವು ಈ ಅಂಗಳದಲ್ಲಿ ನೆಲೆ ನಿಲ್ಲುವ  ವೇಳೆಗೆ ಅಂದರೆ, ರಾತ್ರಿ ಒಂಭತ್ತೂವರೆಗೆ, ನಲ್ಲಿಯಲ್ಲಿ ನೀರು ನಿಂತುಹೋಯಿತು; ಮತ್ತೆ ಮರುವುದು ಬೆಳಗಿನ ಝಾವ ನಾಲ್ಕು ಗಂಟೆಗೆ. ನಮ್ಮ ‘ಅಂಗಳದ ಮಾಲೀಕ’ ಒದಗಿಸಿದ ಒಂದಷ್ಟು ನೀರು ಕುಡಿದು, ಮೇಲಿಂದ ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿದ ನನಗೆ ಪ್ರಯಾಣದ ಆಯಾಸದಿಂದ ಅದ್ಯಾವಾಗಲೋ ನಿದ್ದೆ ಕವಿದಿತ್ತು. ಮರುದಿನ ಬೆಳಗಿನ ಝಾವ ನಮ್ಮ ಮನೆಯವರು ಎಬ್ಬಿಸಿದಾಗ, ನಲ್ಲಿಯಲ್ಲಿ ನೀರು ಬರಲು ಶುರುವಾಗಿತ್ತು.

ಕಣ್ಣುಜ್ಜಿಕೊಂಡು ನೋಡಿದೆ. ಕೆಳಗಿನ ಪೇಟೆ ಬೀದಿಯಲ್ಲಿ ಇರುಳೆಲ್ಲಾ ತಂಗಿದ್ದ ಯಾತ್ರಿಕರ ಬಸ್ಸುಗಳು ಬದರಿಯ ಕಡೆಗೆ, ಕೇದಾರದ ಕಡೆಗೆ ಹೊರಡಲು ತಯಾರಾಗಿದ್ದುವು. ಸುಮಾರು ಐದು ಗಂಟೆಯ ವೇಳೆಗೆ ಮುಖ ಮಾರ್ಜನಗಳನ್ನು ಮುಗಿಸಿಕೊಂಡು, ರಾತ್ರಿ ನಮಗೆ ತಂಗಲು ಅವಕಾಶ ಮಾಡಿಕೊಟ್ಟ ಬಾಲ್ಕನಿಯ ಬಂಧುವಿಗೆ ನಲವತ್ತು ರೂಪಾಯಿಗಳ ಬಾಡಿಗೆ ತೆತ್ತು, ಕೆಳಗಿಳಿದು ಬಂದು, ಒಂದಷ್ಟು ಚಹಾ ಕುಡಿದು ನಮ್ಮ ಟ್ಯಾಕ್ಸಿಯಲ್ಲಿ ಕುಳಿತೆವು. ರುದ್ರಪ್ರಯಾಗವನ್ನು ಬಿಟ್ಟು ಟ್ಯಾಕ್ಸಿ ಕೇದಾರದ ದಾರಿ ಹಿಡಿಯಿತು. ಮುಂಜಾನೆ ಆಕಾಶದ ಅರುಣಾಚ್ಛಾಯೆಗೆ ಎದುರಾದ ಪರ್ವತಗಳ ಬೃಹದಾಕಾರದ ಮೈಗಳು ಗೆರೆ ಬರೆದು ತಮ್ಮ ಗಾತ್ರವನ್ನು ಪ್ರದರ್ಶಿಸುತ್ತಿದ್ದವು. ಕಣಿವೆ ಕಂದರಗಳಲ್ಲಿ ಹಬ್ಬಿದ ಮಂಜು, ಅದರ ಆಳಗಳನ್ನು ಮರೆ ಮಾಡಿತ್ತು. ಹೋದಂತೆ ಹೋದಂತೆ ಭಾರೀಬೆಟ್ಟಗಳಅಂಚಿನಅನೇಕ ತಿರುವುಗಳನ್ನು ಹಾದು, ಸುತ್ತಿ -ಬಳಸಿ ಏರುತ್ತಿದ್ದ ನಮಗೆ, ಗಿರಿ ಶಿಖರಗಳ ನಡುವೆ ಹಬ್ಬಿದ ಮಬ್ಬಿನಲ್ಲಿ ಮುಖ ತೋರಿಸುತ್ತಿದ್ದ ಸೂರ‍್ಯ, ಚಂದ್ರಸದೃಶನಾಗಿ ಕಾಣುತ್ತಿದ್ದ. ಸುಮಾರು ಎಂಟು ಗಂಟೆಯ ವೇಳೆಗೆ ನಮ್ಮ ಟ್ಯಾಕ್ಸಿ, ಕೇದಾರದ ತಪ್ಪಲಿನಲ್ಲಿರುವ ಗೌರೀಕುಂಡಕ್ಕೆ ಐದು ಮೈಲಿಗಳ ಈಚೆಗಿರುವ ಸೋನ ಪ್ರಯಾಗದಲ್ಲಿ ನಿಂತಿತ್ತು. ಮಂದಾಕಿನೀ ಸೋನಗಂಗಾ ನದಿಗಳ ಸಂಗಮದಲ್ಲಿರುವ ಈ ಪುಟ್ಟ ಊರಿನ ಉಕ್ಕಡದಲ್ಲಿ, ಗೌರೀಕುಂಡಕ್ಕೆ ಹೋಗಲು ಕಾಯಬೇಕು, ಯಾಕೆಂದರೆ, ಸೋನಪ್ರಯಾಗದಿಂದ ಗೌರೀಕುಂಡದ ದಾರಿ ತೀರಾ ಇಕ್ಕಟ್ಟಾದುದರಿಂದ ಆ ಕಡೆಯಿಂದ ವಾಹನಗಳು ಬಂದ ನಂತರವೇ, ಈ ಕಡೆಯಿಂದ ವಾಹನಗಳನ್ನು ಬಿಡುವುದು. ಸುಮಾರು ಅರ್ಧ ಗಂಟೆ ನಾವು ಕಾದ ನಂತರ, ನಮ್ಮ ಇನಾಕ್ಯುಲೇಷನ್ ಸರ್ಟಿಫಿಕೇಟ್‌ಗಳನ್ನು ಆರೋಗ್ಯದ ಇಲಾಖೆಯವರು ಪರಿಶೀಲಿಸಿ, ನಮ್ಮ ವಾಹನದ ಚಲನೆಗೆ ಅನುಮತಿ ನೀಡಿದರು. ಕೆವಲ ಹದಿನೈದು-ಇಪ್ಪತ್ತು ನಿಮಿಷಗಳಲ್ಲಿ ನಾವು ಗೌರೀಕುಂಡವೆಂಬ ಸಣ್ಣ ಊರಿನ, ಇಕ್ಕಟ್ಟಾದ ಬಯಲಲ್ಲಿ ಮಂದಾಕಿನೀ ನದಿಯ  ದಡದಲ್ಲಿ ಗಡಗಡನೆ ನಡುಗುತ್ತ ನಿಂತಿದ್ದೆವು. ನಮ್ಮನ್ನು ಇಳಿಸಿದ ಟ್ಯಾಕ್ಸಿಯವನು, ಮರುದಿನ ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ನಮಗಾಗಿ ಇದೇ ಸ್ಥಳದಲ್ಲಿ ಕಾಯುವುದಾಗಿ ನಮಗೆ ತಿಳಿಸಿ, ಮತ್ತೆ ಸೋನ ಪ್ರಯಾಗದಲ್ಲಿ ಟ್ಯಾಕ್ಸಿಯನ್ನು ನಿಲ್ಲಿಸಿಕೊಂಡಿರಲು ಹೊರಟು ಹೋದನು.

ಗೌರೀಕುಂಡ ಕೇದಾರ ಪರ್ವತದ ನಡುವಿನಲ್ಲಿರುವ ಒಂದು ಹಳ್ಳಿ, ಗೌರೀಕುಂಡ ಎಂದು ಕರೆಯುವ ಬಿಸಿನೀರಿನ ಕುಂಡದ ಸುತ್ತ ಹಬ್ಬಕೊಂಡ ಈ ಹಳ್ಳಿ ಗಲೀಜಿನ ತೌರುಮನೆ. ಕಾಲಿಟ್ಟಲ್ಲಿ ಕೊಚ್ಚೆ. ಈ ಕೊಚ್ಚೆಯ ದಾರಿಯ ಎರಡೂ ಬದಿಗೆ ಹೋಟೆಲು ಜೋಪಡಿಗಳ ಹೊಗೆಯ ಮತ್ತು ತರ ತರದ ವಾಸನೆಗಳ ಹಿಂಸೆ. ಇದರ ನಡುವೆ ಇನ್ನೂ ಸ್ವಲ್ಪ ದೂರ ಇಂಥದೇ ಇಕ್ಕಟ್ಟಾದ ಗಲ್ಲಿಗಳ ಮಧ್ಯೆ ಹೋದರೆ, ತಲುಪುವುದು ಗೌರೀಕುಂಡ ಎಂಬ ಬಿಸಿ ನೀರಿನ ಕೊಳವನ್ನು. ಕೇದಾರ ಪರ್ವತದ ಒಳಗಿನಿಂದ ಒಂದೆಡೆ ಸಹಜವಾಗಿ ಚಿಮ್ಮುವ ಬಿಸಿ ನೀರಿನ ಬುಗ್ಗೆಗೆ ಒಂದು ಕೊಳವನ್ನು ನಿರ್ಮಿಸಲಾಗಿದೆ. ಸುಮಾರು ೩೦x೪೦ ಅಡಿಗಳ, ಕಲ್ಲಿನ ಕಟ್ಟೆಯ ಈ ಕೊಳದಲ್ಲಿ ನಾಲ್ಕು ಅಡಿ ನೀರು ನಿಲ್ಲುತ್ತದೆ. ಒಂದು ಕಡೆಯಿಂದ ಬಂದು, ಇಲ್ಲಿ ಶೇಖರಗೊಂಡ ನೀರು ಮತ್ತೊಂದು ಕಡೆಯಿಂದ ಕೆಳಗಿನ ಮಂದಾಕಿನೀ ನದಿಗೆ ಹರಿದು ಹೋಗುತ್ತದೆ. ನಾವು ಈ ಕೊಳದ ಬಳಿ ಬಂದಾಗ ಸಾಕಷ್ಟು ಸಂಖ್ಯೆಯ ಜನ, ಹೆಂಗಸರು ಗಂಡಸರು ಎನ್ನುವ ಭೇದವಿಲ್ಲದೆ ಯಥಾಶಕ್ತಿಯಾಗಿ ಸ್ನಾನ ಮಾಡುತ್ತಿದ್ದರು. ನಾವೂ ನಿಸ್ಸಂಕೋಚವಾಗಿ ಆ ಕೊಳದೊಳಗೆ ಇಳಿದು ಸುಖೋಷ್ಣವಾದ ನೀರಿನಲ್ಲಿ ಸ್ನಾನ ಮಾಡಿದೆವು. ಸಮುದ್ರದ ಮಟ್ಟದಿಂದ ಏಳು ಸಾವಿರ ಅಡಿ ಎತ್ತರದ,  ಈ ‘ಶೀತವಲಯ’ದಲ್ಲಿ, ಈ ಬಗೆಯ ಬಿಸಿನೀರಿನ ಕೊಳವಿರುವುದು, ಕೇದಾರೇಶ್ವರನ ಕೃಪೆ ಎಂದೇ ಭಕ್ತಾದಿಗಳು ಭಾವಿಸುತ್ತಾರೆ. ಈ ನೀರಿನಲ್ಲಿ ಸ್ನಾನ ಮಾಡುವುದು ಒಂದು ಹಿತವಾದ ಅನುಭವವೇ ಸರಿ. ಈ ಕೊಳ, ಈ ಕೊಳದಲ್ಲಿ ಬೆಳಗಿಂದ ಸ್ನಾನ ಮಾಡುವ ನೂರಾರು ಜನ ಮತ್ತು ಈ ಕೊಳಕ್ಕೆ ಅಂಟಿಕೊಂಡಂತೆಯೇ ಇರುವ ಹೋಟೆಲಂಗಡಿಗಳ ಕೊಳಕು – ಇವುಗಳನ್ನು ನೆನೆದರೆ ಸ್ವಲ್ಪ ಗಾಬರಿಯಾಗುವುದಾದರೂ, ಈ ನಿರಂತರ ಸುಖೋಷ್ಣವಾದ ಈ ನೀರಿನಲ್ಲಿ ಸ್ವಲ್ಪ ಹೊತ್ತು ಹಾಯಾಗಿ ಕೂತಿದ್ದು ಮೇಲೆದ್ದು ಬರುವ ವೇಳೆಗೆ ಪ್ರಾಪ್ತವಾಗುವ ಲವಲವಿಕೆಯ ಮುಂದೆ, ಉಳಿದುದೆಲ್ಲವೂ ಅಮುಖ್ಯವೆನಿಸಿಬಿಡುತ್ತದೆ.

ಪುರಾಣಗಳ ಪ್ರಕಾರ ಕನಖಲ (ಹರಿದ್ವಾರದ ಒಂದು ಭಾಗ) ದ ಹತ್ತಿರ, ತನ್ನ ಪತಿನಿಂದೆಯನ್ನು ಕೇಳಲಾರದೆ ಅಗ್ನಿಗೆ ತನ್ನ ದೇಹವನ್ನು ಆಹುತಿ ಮಾಡಿದ ದಾಕ್ಷಾಯಿಣಿ, ಅನಂತರ ಹಿಮವಂತನ ಮಗಳಾದ ಪಾರ್ವತಿಯಾಗಿ ಹುಟ್ಟಿ,  ಗೌರೀಕುಂಡದ ಈ ಸ್ಥಳದಲ್ಲಿ ಶಿವನನ್ನು ಪತಿಯಾಗಿ ಪಡೆಯಲು ತಪಸ್ಸು  ಮಾಡಿದಳಂತೆ. ಶಿವ-ಪಾರ್ವತಿಯರ ಮದುವೆಯ ನಂತರ, ಪರ್ವತರಾಜನು ತನ್ನ ಮಗಳು ಪಾರ್ವತಿಗೆ ಈ ಕ್ಷೇತ್ರವನ್ನು ಬಳುವಳಿಯಾಗಿ ಕೊಟ್ಟನಂತೆ.

ಗೌರಿಯ ನೆನಪಿನಲ್ಲಿ ಮಿಂದು, ಪಕ್ಕದ ಹೋಟೆಲಿನಲ್ಲಿ ಹೊಟ್ಟೆಗೆ ಒಂದಷ್ಟು ತಿಂದು, ಕೇದಾರದ ಪ್ರಯಾಣಕ್ಕೆ ಮೂರು ಕಂಡಿಗಳನ್ನು ಗೊತ್ತು ಮಾಡಿಕೊಂಡೆವು. ಅಲ್ಲಾದರೂ ಕುದುರೆಯ ಮೇಲೆ ಹೋಗಲು ನಾನು ತೋರಿಸಿದ ಕಾತರಕ್ಕೆ, ನಮ್ಮ ಮನೆಯವರು ಕಡಿವಾಣ ಹಾಕಿ, ನನ್ನನ್ನು ಒಬ್ಬ ಸದೃಢವಾದ ನೇಪಾಳೀ ಕಂಡೀವಾಲನಿಗೆ ಒಪ್ಪಿಸಿದರು. ನನ್ನನ್ನು ಕಂಡಿಯಲ್ಲಿ ಸಾಗಿಸಲು ದೊರೆತ ನೇಪಾಳಿಯವನು, ನಮ್ಮ ಮಾತಿನ ನಡುವೆ ಪ್ರವೇಶಿಸಿ ಕನ್ನಡದಲ್ಲಿ ಮಾತಾಡಿದ್ದನ್ನು ಕೇಳಿ ನನಗೆ ಖುಷಿಯಾಯಿತು. ನೀನು ಕನ್ನಡ ಹೇಗೆ  ಕಲಿತೆ ಎಂದದ್ದಕ್ಕೆ  ಹೀಗೇ ಕರ್ನಾಟಕದಿಂದ ಬರುವ ಯಾತ್ರಿಕರ ಸಹವಾಸದಿಂದ, ಎಂದು ಹರುಕು ಮುರುಕು ಕನ್ನಡದಲ್ಲಿ ಹೇಳಿದ. ಕರ್ನಾಟಕದ, ಅದರಲ್ಲೂ ಉತ್ತರ ಕರ್ನಾಟಕದ ಜನ,  (ಅದರಲ್ಲಿಯೂ ವೀರಶೈವರು) ಕೇದಾರಕ್ಕೆ ಬರುವುದು ಹೆಚ್ಚು. ಯಾಕೆಂದರೆ ಅದು ಅವರ ಪಂಚಪೀಠಗಳಲ್ಲಿ ಒಂದು.

ಗೌರೀಕುಂಡದಿಂದ ಕೇದಾರ ಹದಿನೈದು ಕಿಲೋಮೀಟರ್‌ಗಳ ದಾರಿ. ಗೌರೀಕುಂಡ ಕೇದಾರ ಪರ್ವತದ ನಟ್ಟ ನಡುವೆ – ಏಳು ಸಾವಿರ ಅಡಿಗಳ ಎತ್ತರದ ಸ್ಥಳ. ಇಲ್ಲಿಂದ. ಕೇದಾರವನ್ನು ತಲುಪಬೇಕಾದರೆ, ಮತ್ತೆ ಸುಮಾರು ಐದು ಸಾವಿರ ಅಡಿಗಳೆತ್ತರವನ್ನು ಏರಬೇಕು. ಈ ಏರುವೆಯ ದಾರಿ, ಉದ್ದಕ್ಕೂ ಮಂದಾಕಿನೀ ನದಿಯ ಅಂಚಿನಲ್ಲೇ ಸಾಗುತ್ತದೆ. ಆದರೆ ಈ ದಾರಿ, ಯಮುನೋತ್ರಿಯ ದಾರಿಗೆ (ಹನುಮಾನ್ ಚಟ್ಟಿಯಿಂದ ಯಮುನೋತ್ರಿಗೆ) ಹೋಲಿಸಿದರೆ, ಎಷ್ಟೋ ಚೆನ್ನಾಗಿದೆ ಎನ್ನಬೇಕು. ಕಡೆಯ ಪಕ್ಷ ನಾಲ್ಕೈದು ಅಡಿ ಅಗಲವಾದ ದಾರಿ ಇದು. ಯಥಾ ಪ್ರಕಾರ ಎರಡೂ ಕಡೆ ಬೃಹದಾಕಾರವಾದ ಪರ್ವತ ಶ್ರೇಣಿಗಳು; ನಡುವಿನ  ಕಣಿವೆಯಲ್ಲಿ ಸತತವಾಗಿ ಮೇಲಿಂದ ಹರಿದು ಧಾವಿಸುವ ಮಂದಾಕಿನಿಯ ಹೊನಲು. ಈ ದಾರಿಯಲ್ಲಿ ಯಮುನೋತ್ರಿಯ ದಾರಿಗಿಂತ ಪ್ರಯಾಣಿಕರ ಗದ್ದಲ ಹೆಚ್ಚು. ಕಂಡಿಗಳಲ್ಲಿ, ದಂಡಿಗಳಲ್ಲಿ, ಕುದುರೆಗಳ ಮೇಲೆ ಮತ್ತು ಕಾಲ್ನಡಿಗೆಯಲ್ಲಿರುವ ಹಾಗೂ ಇಳಿಯುವ ಯಾತ್ರಿಕರು ಬಹುಸಂಖ್ಯೆಯಲ್ಲಿದ್ದರು. ಈ ಹಾದಿಯಲ್ಲಿ, ಕೋಲೂರಿಕೊಂಡು ಕಾಲ್ನಡಿಗೆಯಲ್ಲಿ ಬರುವ ಅನೇಕರ ಮಧ್ಯೆ ಹಲವಾರು ವಿದೇಶೀಯರೂ ಇದ್ದರು. ಅವರೆಲ್ಲ ಯುವಕರು ಮತ್ತು ಯುವತಿಯರು. ಬಗಲಲ್ಲಿ ಕ್ಯಾಮರಾ, ಕಣ್ಣಿಗೆ ಕಪ್ಪು ಕನ್ನಡಕ. ಬೆನ್ನಿಗೆ ಬಿಗಿದುಕೊಂಡ ಮೂಟೆ. ಕೈಯಲ್ಲಿ ಆಸರೆಗಾಗಿ ಕೋಲು ಚಕಚಕನೆ, ನಡೆಯುವ ಅವರ ಗತಿಯಲ್ಲಿ ಉತ್ಸಾಹ ತುಳುಕುತ್ತಿತ್ತು. ಅಲ್ಲಲ್ಲಿ ನಿಂತು ಪ್ರಪಾತದಲ್ಲಿ ನೊರೆಗರೆದು ಉರುಳುವ ಪ್ರವಾಹದತ್ತ  ಕಣ್ಣಾಗುತ್ತ, ಬೆಟ್ಟದೆತ್ತರದಿಂದ ಹಾಲಿಳಿದು ಧುಮುಕಿ ನದಿಗೆ ಸೇರುವ ಜಲಪಾತಗಳ ಎದುರು ಮುಗ್ಧವಾಗಿ ನಿಲ್ಲುತ್ತ, ಶಿಖರಗಳನ್ನು ಕಂಡಲ್ಲಿ ತಟ್ಟನೆ ಕೂತು ಅದರ ಸೊಗಸನ್ನು ಆಸ್ವಾದಿಸುತ್ತ, ಬರುತ್ತಿದ್ದ ಆ ವಿದೇಶೀ ಪ್ರವಾಸಿಗಳಿಗೂ, ಅತ್ತ ಇತ್ತ ನೋಡದೆ, ಎಂದಿಗೆ ಕೇದಾರೇಶ್ವರನ ದಿವ್ಯ ಸನ್ನಿಧಿಯನ್ನು ದರ್ಶಿಸುತ್ತೇವೋ ಎಂಬ ತವಕದಿಂದ, ಭಗವನ್ನಾಮಸ್ಮರಣೆ ಮಾಡುತ್ತಾ ಬೆಟ್ಟವನ್ನೇರುವ ಪುಣ್ಯ ಸಂಪಾದನಾರ್ಥಿಗಳಾದ ನಮ್ಮ ಭಾರತೀಯ ಯಾತ್ರಿಕರಿಗೂ ಇರುವ ವ್ಯತ್ಯಾಸ ನನಗೆ ಎದ್ದು ಕಾಣುವಂತಿತ್ತು. ಹೀಗೆಂದ ಮಾತ್ರಕ್ಕೆ ನಮ್ಮ ಭಾರತೀಯ ಯಾತ್ರಿಕರಿಗೆ ನಿಸರ್ಗದ  ಸೊಗಸಿನ ಕಡೆಗೆ ಕಣ್ಣೇ ಇಲ್ಲವೆಂದೂ, ವಿದೇಶೀ ಪ್ರವಾಸಿಗರಿಗೆ ಮಾತ್ರ ಸೌಂದರ‍್ಯಾನುಭವ ದಾಹ ಕಾಡುತ್ತಿದೆಯೆಂದೂ, ವಸ್ತು ಸಂಗತಿಯನ್ನು ಸರಳೀಕರಿಸಿ ನಾನು ಹೇಳುತ್ತಿಲ್ಲ. ಅಲ್ಲಲ್ಲಿ ಈ ನಮ್ಮ ಜನರೂ ಆಯಾಸ ಪರಿಹಾರಕ್ಕೆ ನಿಂತಾಗ ಅಥವಾ ಕೂತಾಗ ಎರಡೂ ಕಡೆಯ ಪರ್ವತದ ರುದ್ರ ಸೌಂದರ್ಯವನ್ನು, ಕಣಿವೆಯಲ್ಲಿ ಉಲ್ಲಾಸವನ್ನು ಚಿಮ್ಮಿಸುತ್ತಾ ಹರಿಯುವ ಮಂದಾಕಿನಿಯ ಪ್ರವಾಹವನ್ನೂ ಕುತೂಹಲ ವಿಸ್ಮಯ ಗೌರವಗಳಿಂದ ನೋಡುವುದನ್ನು ಗಮನಿಸಿದ್ದೇನೆ. ಈ ಮಹಾಪರ್ವತ, ಈ ಶಿಖರಗಳು, ಈ ಪ್ರವಾಹ ಎಲ್ಲವೂ ಈ ಭಾವುಕರ ಪಾಲಿಗೆ ಕೇದಾರನಾಥನ ಮಹಿಮಾವಿಶೇಷದಂತೆ ತೋರುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. ನನ್ನನ್ನು ಕಾಡುವ ಪ್ರಶ್ನೆ ಎಂದರೆ, ಶತಶತಮಾನಗಳಿಂದಲೂ ಇಷ್ಟೊಂದು ದೇಹಶ್ರಮವನ್ನೂ ಲೆಕ್ಕಿಸದೆ, ಗಂಗೋತ್ರಿ ಯಮುನೋತ್ರಿ ಬದರಿ – ಕೇದಾರಗಳಂಥ ಪರ್ವತಾಗ್ರದ ತೀರ್ಥಕ್ಷೇತ್ರಗಳಿಗೆ ಯಾಕೆ ಹೀಗೆ ನಮ್ಮ ಜನ ಯಾತ್ರೆ ಬರುತ್ತಾರೆ? ಕೇವಲ ದೇವರ ದರ್ಶನಕ್ಕೆ? ಹಾಗೆಂದು ಕೊಂಡರೆ ಅದೂ ನಿಜವಲ್ಲ. ಪುಣ್ಯಸಂಪಾದನೆಗೆ? ಬಹುಶಃ ಅದೂ ಪೂರ್ಣಸತ್ಯವಲ್ಲ. ಆದರೆ ಅವರು ನೇರವಾಗಿ ತಿಳಿಯದ, ಆದರೆ ಅಸ್ಪಷ್ಟವಾಗಿ ಅವರ ಅರಿವಿಗೆ, ಅನುಭವಕ್ಕೆ ಬರುವ ಬೇರೊಂದು ಉದ್ದೇಶವೂ ಈ ಯಾತ್ರೆಗಳಿಗೆ ಇದೆ ಎಂದು ನನ್ನ ಭಾವನೆ. ಅದೇನೆಂದರೆ : ಮೂಲತಃ ಮನುಷ್ಯ ಈ  ನಿಸರ್ಗದ ಶಿಶು; ಒಂದು ಕಾಲಕ್ಕೆ ನಮಗೂ ಈ ನಿಸರ್ಗಕ್ಕೂ ಇದ್ದಂಥ ದಟ್ಟವಾದ ಸಂಬಂಧ, ನಾವು ನಾಗರಿಕರಾಗುತ್ತಾ ಆಗುತ್ತಾ ಎಲ್ಲೋ ಒಂದು ಕಡೆ ಬಿಟ್ಟುಕೊಂಡು, ನಮಗೂ ಅದಕ್ಕೂ ಒಂದು ಕಂದಕವೇರ್ಪಟ್ಟಂತೆ ತೋರುತ್ತದೆ. ಈ ಬಗೆಯ ತೀರ್ಥಯಾತ್ರೆಗಳ ನೆವದಿಂದ ಮನುಷ್ಯ ತನ್ನ ಅಸ್ತಿತ್ವದ ಒಂದು ಭಾಗವಾದ ಈ ಮಹತ್ತಾದ ನಿಸರ್ಗದೊಂದಿಗೆ, ಎಂದೋ ಅಕಸ್ಮಾತ್ತಾಗಿ ಕಳೆದುಕೊಂಡ ಸಂಬಂಧವನ್ನು ಮತ್ತೆ  ಸ್ಥಾಪಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾನೇನೋ; ಆದುದರಿಂದಲೇ ತೀರ್ಥಯಾತ್ರೆಯಂಥ ಧಾರ್ಮಿಕ ಕಾರಣಗಳಿಂದ, ನಮ್ಮ ದೇಶದ ಮಹಾನದಿಗಳನ್ನು,  ಮಹಾಪರ್ವತಗಳನ್ನು, ದಟ್ಟವಾದ ದುರ್ಗಮವಾದ ಅರಣ್ಯಗಳನ್ನು ಹಿಮಾಚ್ಛಾದಿತ ಶಿಖರಗಳನ್ನು ನೋಡುತ್ತ ನೋಡುತ್ತ ಅವನ ಮನಸ್ಸು, ತನ್ನ ಪ್ರಪ್ರಾಚೀನವಾದ ನಿಸರ್ಗಸ್ಮೃತಿಗಳಿಗೆ ಮುಗ್ಧತೆಗೆ, ಪರ್ವತಾರಣ್ಯಗಳ ಸಂದರ್ಶನದಿಂದ ಹುಟ್ಟುವ ಹೊಸ ಜೀವಂತಿಕೆಗೆ ಮರಳುತ್ತದೆ. ಈ ಯಾತ್ರೆಯಿಂದ ಹಿಂದಿರುಗಿ ಆತ ಮತ್ತೆ ತನ್ನ ದೈನಂದಿನ ವ್ಯವಹಾರಗಳಲ್ಲಿ ಮುಳುಗುವವರೆಗಾದರೂ ಆತನ ಮನಸ್ಸು ಒಂದು ಬಗೆಯ ಧನ್ಯತೆಯ ಭಾಗವನ್ನು ಅನುಭವಿಸುವುದು ಖಂಡಿತ.

ಕೇದಾರ ಪರ್ವತದ ಈ ಏರುವ ದಾರಿಯಲ್ಲಿ, ಬೆಟ್ಟದ ಅಂಚಿಗೆ ಒಂದಷ್ಟು ಗೂಡು ಮಾಡಿಕೊಂಡು, ಸಣ್ಣ ಪುಟ್ಟ  ತಡಿಕೆಯ ಆಸರೆಗಳನ್ನು ಕಟ್ಟಿಕೊಂಡು ಎಷ್ಟೋ ಮಂದಿ ಸಾಧು ಸಂತರು ಕೂತಿದ್ದರು. ನಡೆದು ಬರುವ ಯಾತ್ರಿಕರ ಜತೆ ವಿವಿಧ ಪಂಥಗಳಿಗೆ ಸೇರಿದ ಇನ್ನೆಷ್ಟೋ ಸಾಧುಗಳು ಕಾಣಿಸುತ್ತಿದ್ದರು. ಇಡೀ ಭಾರತದ ಮೂಲೆ ಮೂಲೆಗಳಿಂದ ಬಂದ ಜನ, ತಮ್ಮ ತಮ್ಮ ಭಾಷೆ ಹಾಗೂ ವೇಷಗಳಿಂದ ಈ ದೇಶದ ವೈವಿಧ್ಯತೆಯನ್ನೂ ಮತ್ತು ಅವರು ಸಾಗುವ ಗುರಿಯ ಕಾರಣದಿಂದ ಏಕತೆಯನ್ನೂ ಒಟ್ಟಿಗೇ ಪ್ರದರ್ಶಿಸುವಂತೆ ನನಗೆ ತೋರಿತು.

ನಮ್ಮನ್ನು ಹೊತ್ತ ಕಂಡಿಯವರಿಗೆ ಆಯಾಸವಾದ್ದರಿಂದ ನಾವು ಇಳಿದು, ಒಂದಷ್ಟು ದೂರ ನಡೆಯಲು ನಿರ್ಧರಿಸಿದೆವು. ನಮ್ಮ ಕಂಡಿಯವರು ಖಾಲಿ ಬುಟ್ಟಿಗಳನ್ನು ಹೆಗಲಿಗೆ ತಗುಲಿಸಿಕೊಂಡು ಬೀಡಿ ಸೇದುತ್ತ ನಮ್ಮ ಜತೆ ನಡೆಯುತ್ತಿದ್ದರು. ಅಲ್ಲಿ ಒಂದೆಡೆ  ಕುದುರೆಯ ಮೇಲೆ ಕೂತ ಮುದುಕನೊಬ್ಬ ‘ಅರೆ, ಪಕಡೋ ಪಕಡೊ’ (ಹಿಡಿದುಕೋ, ಹಿಡಿದುಕೋ) ಎಂದು ಕಿರುಚುತ್ತಿದ್ದ. ಸಾಮಾನ್ಯವಾಗಿ ಕುದುರೆಯ ಮೇಲೆ ಕೂತವರ ಜತೆಗೆ, ಕುದುರೆಯವನು ಅದರ ಲಗಾಮು ಹಿಡಿದುಕೊಂಡು ಬರುತ್ತಾನೆ. ಇಲ್ಲೇನಾಗಿದೆ ಎಂದರೆ, ಕುದುರೆಯವನು ಒಂದೆಡೆ, ದಾರಿ ಬದಿಗೆ ಮೇಲಿಂದ ಸಣ್ಣಗೆ ಧುಮುಕುವ ಜಲಪಾತದ ಹತ್ತಿರ ನೀರು ಕುಡಿಯಲು ನಿಂತಾಗ, ನಮ್ಮ ಈ ಯಾತ್ರಿಕನನ್ನು ಹೊತ್ತು ಕುದುರೆ ಮುಂದಕ್ಕೆ  ಸಾಗಿದೆ. ಅಷ್ಟೇ ಅಲ್ಲ, ಅದು ಪ್ರಪಾತದ ಅಂಚಿಗೆ ಬಂದು, ಅಲ್ಲಿ ಬೆಳೆದ ಹುಲ್ಲನ್ನು ಹಾಯಾಗಿ ಮೇಯತೊಡಗಿದೆ. ಕುದುರೆಯ ಮೇಲೆ ಕೂತ ನಮ್ಮ ಈ ಅರಕ್ಷಿತ ಯಾತ್ರಿಕನಿಗೆ, ಕುದುರೆ ಪ್ರಪಾತದ ಅಂಚಿಗೆ ಬಂದು ಹುಲ್ಲು ಮೇಯುವಾಗ, ಕೆಳಗೆ ಸಹಸ್ರಾರು ಅಡಿಗಳ ಆಳದಲ್ಲಿ ಹರಿಯುವ ಮಂದಾಕಿನೀ ನದಿಯ ಕಣಿವೆಯನ್ನು ಕಂಡು ಕೈಕಾಲು ನಡುಕ ಬಂದು, ಕುದುರೆಯವನನ್ನು ಕೂಗುತ್ತಿದ್ದಾನೆ. ಅವನೇನಾದರೂ ಕುದುರೆಯಿಂದ ಇಳಿಯಲು ಪ್ರಯತ್ನಿಸಿದನೋ ಅಪಾಯ ಕಟ್ಟಿಟ್ಟದ್ದು. ನಮಗೂ ಅವನ ಅವಸ್ಥೆಯನ್ನು ಕಂಡು ಗಾಬರಿಯಾಯಿತು. ಅಷ್ಟರಲ್ಲಿ ದಾಹ ತೀರಿಸಿಕೊಂಡು ಓಡೋಡಿ ಬಂದ ಕುದುರೆಯವನು, ಪರಿಸ್ಥಿತಿಯನ್ನು ಹತೋಟಿಗೆ ತಂದ.

ಸ್ವಲ್ಪ ಹೊತ್ತಿನಲ್ಲೇ ರಾಮಬಾರ ಎಂಬ ಒಂದು ಹಲಗೆ ಕಾಣಿಸಿತು. ಗೌರೀಕುಂಡದಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಈ ಚಟ್ಟಿಯಲ್ಲಿ ವಿಶ್ರಮಿಸಿಕೊಂಡು ನಾವು ಒಂದಷ್ಟು ಚಾ ಕುಡಿದೆವು. ನಮ್ಮ ಕಂಡಿಯವರು ಊಟ ಮಾಡುತ್ತೇವೆ ಎಂದರು. ಅದಕ್ಕೆ ವ್ಯವಸ್ಥೆ ಮಾಡಿ, ಇನ್ನಷ್ಟು ಹೊತ್ತು ಕಾದ ನಂತರ ನಮ್ಮ ಪಯಣ ಮುಂದುವರಿಯಿತು. ಇಲ್ಲಿಂದ ಮುಂದಣ ದಾರಿ ದಟ್ಟ ಹಸುರಿನ ಬೆಟ್ಟಗಳ ನಡುವೆ. ಅಲ್ಲಲ್ಲಿ ಬೆಟ್ಟದ ಹಸುರಿನ ಮಧ್ಯೆ ಹಾಲು ಹರಿದಂತೆ ಇಳಿಯುವ ಹಲವಾರು ಜಲಪಾತಗಳನ್ನು ಕಾಣುತ್ತಾ, ತಂಪಾದ ಹಾಗೂ ಜೀವಂತಿಕೆಯಿಂದ ಕೂಡಿದ ಗಾಳಿಗೆ ಮೈಯೊಡ್ಡುತ್ತಾ ಮುಂದೆ ಸಾಗಿದೆವು.

ರಾಮಬಾಡ ಅಥವಾ ರಾಮಬಾರದಿಂದ ಸುಮಾರು ಎರಡು ಗಂಟೆಗಳ ಏರುವೆಯ ನಂತರ ಗರುಡ ಚಟ್ಟಿ ಎಂಬ ಸಣ್ಣ ಹಳ್ಳಿಯನ್ನು ತಲುಪಿದೆವು. ಇಲ್ಲಿಂದ ಕೇದಾರಕ್ಕೆ ಕೇವಲ ಮೂರು ಕಿಲೋಮೀಟರ್ ದಾರಿ. ಅಷ್ಟನ್ನು ತುಳಿಯಬೇಕಾದರೆ, ಈ ಬೆಟ್ಟದ ದಾರಿಯಲ್ಲಿ ಕನಿಷ್ಠ ಪಕ್ಷ ಒಂದೂವರೆ ಗಂಟೆಗಳಾದರೂ ಬೇಕು. ಆಗಲೇ ಸಂಜೆ ಬಿಸಿಲಿನಲ್ಲಿ, ಥಟ್ಟನೆ ಕಾಣತೊಡಗಿತು – ದೂರದ ಕೇದಾರೇಶ್ವರನ ದೇವಸ್ಥಾನ ಮತ್ತು ಅದನ್ನು ತನ್ನ ತೊಡೆಯ ಮೇಲೆ  ಕೂರಿಸಿಕೊಂಡು ಮುಗಿಲೆತ್ತರಕ್ಕೂ ಹರಹಿಕೊಂಡ ಮಹಾಪಂತ್ ಪರ್ವತಪಂಕ್ತಿ, ಮಹಾಪಂತ್ ಶಿಖರವನ್ನೂ ಒಳಗೊಂಡು ವಿಸ್ತಾರವಾಗಿ ಹರಹಿಕೊಂಡ ಈ ಕೇದಾರ ಪರ್ವತ ಶ್ರೇಣಿಗಳಿಗೆ, ರುದ್ರಹಿಮಾಲಯ ವೆಂದು ಹೇಳಲಾಗಿದೆ. ಇದನ್ನೇ ಸುಮೇರು ಪರ್ವತವೆಂದೂ ಅಥವಾ ಪಂಚಪರ್ವತವೆಂದೂ ಹೆಸರಿಸಲಾಗಿದೆ. ಪಂಚಪರ್ವತವೆಂದು ಹೆಸರಾದ ಈ ಶ್ರೇಣಿಯಲ್ಲಿ ಐದು ಶಿಖರಗಳಿವೆ. ಅವು ರುದ್ರಹಿಮಾಲಯ, ಬ್ರಹ್ಮಪುರಿ, ವಿಷ್ಣುಪುರಿ, ಉದ್ಗರಿಕಾಂತ ಮತ್ತು ಸ್ವರ್ಗಾರೋಹಿಣಿ. ಮಹಾಭಾರತದ ಪ್ರಕಾರ, ಧರ್ಮರಾಯನು ತನ್ನ ತಮ್ಮಂದಿರೆಲ್ಲ ದೇಹತ್ಯಾಗಮಾಡಿದ ನಂತರ, ತನ್ನ ನೆಚ್ಚಿನ ನಾಯಿಯೊಡನೆ ಸ್ವರ್ಗಕ್ಕೆ ಹೋದದ್ದು, ಸ್ವರ್ಗಾರೋಹಿಣಿ ಎಂಬ ಹೆಸರಿನ ಈ ಶಿಖರದ ಮೂಲಕವೇ.

ಅಗಾಧವಾಗಿ ಹಬ್ಬಿಕೊಂಡ ಪಂಚಪರ್ವತವನ್ನು ನೊಡುತ್ತಾ ಸಾಧ್ಯವಾದಷ್ಟು  ಚುರುಕಾಗಿ ಹೊರಟ ನಾವು, ಸಂಜೆ ಆರು ಗಂಟೆಯ ವೇಳೆಗೆ ಕೇದಾರದ ಉದ್ದವಾದ ಬೀದಿಯ ಇಕ್ಕಟ್ಟಿನಲ್ಲಿದ್ದೆವು. ಸಾಕಷ್ಟು ಅಂಗಡಿ ಮನೆಗಳಿದ್ದ ಬೀದಿಯ ಮೂಲಕ ಕೇದಾರೇಶ್ವರನ ದೇವಸ್ಥಾನದ ಹತ್ತಿರಕ್ಕೆ ಹೋದ ಕೂಡಲೇ, ಅದುವರೆಗೂ ಸೌಮ್ಯವಾಗಿ ಜತೆಗೆ ಬಂದ ಛಳಿ, ಇಲ್ಲಿ ಅತ್ಯಂತ ರಭಸದಿಂದ ಹಸಿದು ನಮ್ಮ ಮೈ ಮೇಲೆ, ಆ ಪರ್ವತದ ಶಿಖರಗಳಿಂದ ಹಾರಿ ಬಂದು ಕೂತ ಹಾಗಾಯಿತು. ಹನ್ನೊಂದು ಸಾವಿರದ ಏಳುನೂರಾ ಐವತ್ಮೂರು ಅಡಿಗಳೆತ್ತರದ ಕೇದಾರದಲ್ಲಿ, ಅದೂ ನಿತ್ಯ ಹಿಮಾಚ್ಛಾದಿತವಾದ ಮಹಾಪಂತ್ ಪರ್ವತದ ಈ ತಪ್ಪಲಿನಲ್ಲಿ, ನಮ್ಮನ್ನು ಗದಗುಟ್ಟಿಸುವ ಚಳಿಯ ಅನುಭವವನ್ನು, ಅಲ್ಲಿಗೆ ಹೋದವರೇ ಬಲ್ಲರು. ಮೇ ತಿಂಗಳ ಮಧ್ಯಭಾಗದಲ್ಲೇ ಈ ಪಾಟಿ ಚಳಿಯಿದ್ದರೆ ಇನ್ನು ನಿಜವಾದ ಚಳಿಗಾಲದಲ್ಲಿ ಅದು ಹೇಗಿದ್ದೀತು ! ಅಕ್ಟೋಬರ್ – ನವೆಂಬರ್‌ನಿಂದ ಹಿಡಿದು ಮಾರ್ಚ್ – ಏಪ್ರಿಲ್‌ವರೆಗೂ ಇಲ್ಲಿ ಒಂದು ನರಪ್ರಾಣಿಯೂ ಇರುವುದಿಲ್ಲವಂತೆ. ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿ, ಉತ್ಸವ ವಿಗ್ರಹದ ಸಮೇತ ಅರ್ಚಕರಾದಿಯಾಗಿ, ಇಡೀ ಈ ಊರಿಗೆ ಊರೇ ಬೆಟ್ಟದ ಬುಡಕ್ಕೆ ಪರಾರಿಯಾಗುತ್ತದಂತೆ. ಆಗ ಇಡೀ ಪ್ರದೇಶದಲ್ಲಿ ದಟ್ಟವಾದ ಹಿಮ, ಹಲವು ತಿಂಗಳ ಕಾಲ ತನ್ನ ಆಧಿಪತ್ಯವನ್ನು ಸ್ಥಾಪಿಸುತ್ತದಂತೆ. ಎಲ್ಲ ಬಗೆಯ ಚಲನೆಗಳೂ ನಿಂತು, ಕಾಲವೇ ಕಾಲುಮುರಿದುಕೊಂಡು ಈ ಹಿಮದಲ್ಲಿ ಹೂತು ಸ್ತಬ್ಧವಾಗುವ ಅನುಭವ ಈ ಪರಿಸರಕ್ಕೆ ಪ್ರಾಪ್ತವಾಗುತ್ತದೆ. ಮತ್ತೆ ಏಪ್ರಿಲ್ ವೇಳೆಗೆ  ಬಂದ ಬಿಸಿಲಿಗೆ ಹಿಮವೆಲ್ಲಾ ಕರಗಿ, ದಾರಿಗಳೆಲ್ಲಾ ತೆರವಾಗಿ, ಅತ್ತಿತ್ತ ನಿಂತ ಗಿಡ-ಮರಗಳೆಲ್ಲಾ ಹಸುರು ಕೊಡವಿಕೊಂಡು ಮೇಲೆದ್ದು, ಊರಿನ ಮನೆಗಳ – ಝೋಪಡಿಗಳ ಛಾವಣಿಗಳೆಲ್ಲಾ ರಿಪೇರಿಯಾಗಿ ಯಥಾಸ್ಥಿತಿಗೆ ಬಂದು, ಕೆಳಗಿನಿಂದ ಅರ್ಚಕರು ಬಂದು ದೇವಸ್ಥಾನದ ಬಾಗಿಲು ತೆರೆದು, ಕೇದಾರನಾಥನು ಭಕ್ತಾದಿಗಳಿಗೆ ಸಂದರ್ಶನ ಕೊಡಲು ಸಿದ್ಧನಾಗಿದ್ದಾನೆಂದು ಘೋಷಿಸಿದ ಕೂಡಲೇ ಮತ್ತೆ ಅಂಗಡಿಯವರು – ಹೋಟೆಲಿನವರು ತಮ್ಮ ವ್ಯವಹಾರಗಳಿಗೆ ತೊಡಗುತ್ತಾರೆ. ಯಾತ್ರಾರ್ಥಿಗಳ ದಂಡು ಭಾರತದ ವಿವಿಧ ಪ್ರಾಂತ್ಯಗಳಿಂದ ಈ ಪರ್ವತದ ಹಾದಿಯನ್ನು ತುಳಿಯುತ್ತಾ ಇಲ್ಲಿಗೆ ಬರುತ್ತದೆ.

ನಾವು ಕೇದಾರವನ್ನು ತಲುಪಿದ ದಿನಕ್ಕೆ (೧೯.೫.೧೯೮೪) ಛಲಿಗಾಲದ ಸ್ತಬ್ಧತೆ ಮುಗಿದು, ಕೇದಾರ ದೇವಾಲಯದ ಬಾಗಿಲು ತೆರೆದು ಕೇವಲ ಎರಡು ವಾರಗಳಾಗಿತ್ತು. ಆಗಲೇ ಕೇದಾರ ಬಹುಸಂಖ್ಯೆಯ ಯಾತ್ರಿಕರಿಂದ ಗಿಜಿಗುಡುತ್ತಿತ್ತು. ಎದುರಿನ  ಕೇದಾರೇಶ್ವರ ದೇವಸ್ಥಾನದ ಅಗಲವಾದ ಜಗುಲಿಯ ಅಂಗಳದಲ್ಲಿ ಸಂಜೆಯ ಪೂಜೆಯನ್ನು ವೀಕ್ಷಿಸಲು, ಆ ಕೊರೆಯುವ ಛಳಿಯಲ್ಲಿ ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದರು. ನಾವು ಮೊದಲು ಆ ರಾತ್ರಿಗೆ ಬೇಕಾದ ಕೊಠಡಿಗಾಗಿ ಪ್ರಯತ್ನಪಟ್ಟು, ದೇವಸ್ಥಾನದ ಹತ್ತಿದಲ್ಲೇ ಒಂದು ನೆಲೆಯನ್ನು ಪಡೆದುಕೊಂಡೆವು. ವಿಸ್ತಾರವಾದ ಒಂದು ಹಾಳುಮನೆಯಲ್ಲಿ ಹಲವಾರು ಬಾಗಿಲುಗಳಲ್ಲಿ ಒಂದು ಬಾಗಿಲನ್ನು ತೆರೆದು, ಶರ್ಮ ಅನ್ನುವವರು ನಮಗಾಗಿ ಒಂದು ಕೊಠಡಿಯನ್ನು ತೆರವು ಮಾಡಿಸಿಕೊಟ್ಟರಲ್ಲದೆ, ನಮಗೆ ತೊಂದರೆಯಾಗದಂತೆ ದೇವರ ದರ್ಶನಕ್ಕೆ ಮತ್ತು ಅರ್ಚನೆಗೆ ವ್ಯವಸ್ಥೆ ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದರು.

ನಾವು ಪ್ರವೇಶಿಸಿದ ಆ ಕೊಠಡಿ ಕಗ್ಗತ್ತಲ ಗವಿಯಾಗಿತ್ತು. ನೆಲದ ಮೇಲೆ ಹಲವಾರು ರಜಾಯಿಗಳನ್ನು ಹಾಸಿ, ಒಂದಷ್ಟನ್ನು ಹೊದ್ದುಕೊಳ್ಳಲು ಇರಿಸಲಾಗಿತ್ತು. ನಾವು ಕಾಲುಗಳ ಮೂಲಕ ಈ ವ್ಯವಸ್ಥೆಯನ್ನು ಅರಿತುಕೊಂಡು, ಪಯಣದ ಆಯಾಸದಿಂದ, ಹಾಸಿದ್ದ ಮೆತ್ತೆಗಳ ಮೇಲೆ ಕೂತು, ಈ ಕೊಠಡಿಗೆ, ಗಾಳಿ ಬೆಳಕು ಬರುವ ವ್ಯವಸ್ಥೆಗಳೇನಾದರೂ ಉಂಟೆ ಎಂದು ಪರಿಶೀಲಿಸತೊಡಗಿದೆವು. ಕಗ್ಗತ್ತಲು, ಮತ್ತು ಅದೆಲ್ಲೋ ಮೊರೆಯುವ ಗಾಳಿಯ ಸದ್ದು – ಇಷ್ಟಲ್ಲದೆ ಇನ್ನೇನೂ ಅರ್ಥವಾಗಲಿಲ್ಲ. ಒಂದೈದು ನಿಮಿಷಗಳ ನಂತರ ಶರ್ಮ ಅವರು ಸೀಮೆ ಎಣ್ಣೆಯ ಬುಡ್ಡಿಯೊಂದನ್ನು ಹಚ್ಚಿಕೊಂಡು ತಂದು, ಈ ನಮ್ಮ ಕೊಠಡಿಯಲ್ಲಿರಿಸಿ, ‘ಈಗ ಏಳೂವರೆಗೆ ಪೂಜೆ  ಶುರುವಾಗುತ್ತದೆ; ದೇವಸ್ಥಾನಕ್ಕೆ ಬಂದು ದರ್ಶನ ಮಾಡಿರಿ; ಮತ್ತೆ ನಾಳೆ ಬೆಳಿಗ್ಗೆ ಐದು ಅಂದರೆ ಐದು ; ತಡ ಮಾಡಿದರೆ ದೊಡ್ಡ ‘ಕ್ಯೂ’ನಲ್ಲಿ ಬಹಳ ಹೊತ್ತು ಕಾಯಬೇಕಾದೀತು’ ಎಂದು ನಮ್ಮ ಮನೆಯವರಿಗೆ ತಿಳಿಸಿ ಹೊರಟು ಹೋದರು.

ಶರ್ಮ ಅವರು ತಂದಿರಿಸಿದ ಸೀಮೆಎಣ್ಣೆಯ ಬುಡ್ಡಿಯ ಬೆಳಕಿನಲ್ಲಿ ನಾವು ಕೂತ ಕೊಠಡಿಯ ವಿಶ್ವರೂಪ ದರ್ಶನವಾಗತೊಡಗಿತು. ಅಡ್ಡ ತೊಲೆಗಳ ಮೇಲೆ ಹಲಗೆಗಳನ್ನು  ಹಾಸಿದ ಛಾವಣಿ; ಛಳಿಗಳಿಗೆ ಕಿರುಗುಟ್ಟುವ ಕಿಟಕಿಯ ಕದಗಳು; ಹಾಕಿದರೆ ಪೂರ್ತಾ ಮುಚ್ಚಿಕೊಳ್ಳದೆ, ಕಂಡಿ ಕಿರಿಯುವ ಬಾಗಿಲುಗಳೂ; ಸ್ವಲ್ಪ ಎಳೆದರೆ ಕಿತ್ತೇ ಬರುತ್ತವೇನೋ ಎಂಬಂಥ ತುಕ್ಕು ಹಿಡಿದ ಚಿಲಕಗಳು; ಬಟ್ಟೆಬರೆಗಳನ್ನು ತಗುಲಿ ಹಾಕೋಣವೆಂದರೆ, ಒಂದು ಮೊಳೆಯೂ ಇಲ್ಲದ ನಿರಾಧಾರವಾದ ಗೋಡೆಗಳು, ಮತ್ತೆ ಜತೆಗೆ ಎಂಥದೋ ಕಮಟು ವಾಸನೆ. ಸಾಕ್ಷಾತ್ ಕೇದಾರನಾಥನ ಅಥವಾ ಪಶುಪತಿಯ ಸಾನ್ನಿಧ್ಯದಲ್ಲಿ ಮನುಷ್ಯರಾದವರಿಗೆ ಇಷ್ಟು ಸಾಕು ಎಂಬಂಥ ವ್ಯವಸ್ಥೆ ನಮ್ಮ ಪಾಲಿಗೆ ದೊರೆಯಿತು. ಯಾತ್ರಿಕರ ಒತ್ತಡದಿಂದಾಗಿ ಈ ಕಾಲಗಳಲ್ಲಿ, ಇದಕ್ಕಿಂತ ಹೆಚ್ಚು ವಾಸಯೋಗ್ಯವಾದ ಕೊಠಡಿಗಳು ದೊರೆಯುವುದು ಕಷ್ಟ. ಹೇಗೋ ಒಂದು ರಾತ್ರಿಯನ್ನು ಕಳೆದರಾಯಿತು, ಎಂದು ಇದ್ದುದರಲ್ಲೇ ಸಮಾಧಾನ ಮಾಡಿಕೊಂಡೆವು.

ನಮ್ಮ ಶ್ರೀಮತಿಯವರು ಲಗುಬಗೆಯಿಂದ ಸಿದ್ಧರಾಗಿ, ಸಂಜೆಯ ಪೂಜೆಯನ್ನು ನೋಡಿಕೊಂಡು ಬರುತ್ತೇವೆಂದು ಹೊರಟರು. ಅವರ ಬಂದ ನಂತರ ಒಂದಷ್ಟು ಗೊಜ್ಜವಲಕ್ಕಿಯನ್ನು ತಿಂದು, ನಮ್ಮ ಜತೆಗೆ ತೆಗೆದುಕೊಂಡು ಹೋಗಿದ್ದ ರಗ್ಗುಗಳನ್ನು, ಆ ಕೊಳಕು ರಜಾಯಿಗಳಿಗೆ ಜೋಡಿಸಿಕೊಂಡು ಮಲಗಿದ್ದೊಂದೇ ಗೊತ್ತು.  ಆ ಕೊಠಡಿಯ ಅನಾನುಕೂಲಗಳಾಗಲೀ, ಕೊಳಕಾಗಲೀ ಅರಿವಿಗೆ ಬಾರದಂಥ ನಿದ್ರೆ  ನಮ್ಮನ್ನು ಕವಿದುಕೊಂಡಿತು. ಬೆಳಗಿನ ಝಾವ ಐದು ಗಂಟೆಗೇ ಎದ್ದು, ಸಿದ್ಧರಾಗಿ, ಛಳಿಯನ್ನೆದುರಿಸಲು ಬಲವಾಗಿ ಹೊದ್ದುಕೊಂಡು, ಎದುರಿಗೇ ಇದ್ದ ದೇವಸ್ಥಾನದ ಅಂಗಳಕ್ಕೆ ಬಂದೆವು. ನೋಡಿದರೆ ಆಗಲೇ ಸಾಕಷ್ಟು ಜನ ‘ಕ್ಯೂ’ನಲ್ಲಿ ಕೂತು ಕಾಯುತ್ತಿದ್ದಾರೆ. ನಾವೂ ಶರ್ಮ ಅವರು ತಂದುಕೊಟ್ಟ ಪೂಜಾಸಾಮಗ್ರಿಗಳ ತಟ್ಟೆಯನ್ನು ಎದುರಿಗಿರಿಸಿಕೊಂಡು ಕ್ಯೂನಲ್ಲಿ ಕೂತೆವು. ಅಲ್ಲಿ ಆಗಲೇ ಕೂತವರ ಪಂಕ್ತಿಯನ್ನು ನೋಡಿದರೆ ದೇವಸ್ಥಾನದ ಒಳಗೆ ನಮಗೆ ಪ್ರವೇಶ ದೊರೆಯಬೇಕಾದರೆ ಕಡೇಪಕ್ಷ ಒಂದೂವರೆ ಗಂಟೆಯಾದರೂ ಕಾಯಬೇಕು ಅನ್ನಿಸಿತು.

ಸಂಕ್ಷಿಪ್ತ ಭಾರತದೇಶವೇ ಸಮಾವೇಶಗೊಂಡಂತಿದ್ದ ಆ ಜನರ ನಡುವೆ ಕೂತು, ನನ್ನ ಪರಿಸರವನ್ನು ವೀಕ್ಷಿಸಿದೆ. ಮುಂಜಾನೆಯ ಚಿನ್ನದ ಬೆಳಕಿನಲ್ಲಿ ಕೇದಾರನಾಥ ದೇವಸ್ಥಾನವು, ಆಗ ತಾನೆ ಕೆತ್ತಿ ತಂದು ಇರಿಸಿದ ಶಿಲ್ಪಕಲಾ ಕೃತಿಯಿಂತೆ ತೋರುತ್ತಿತ್ತು.  ದೇವಸ್ಥಾನದ ಹಿಂದೆ ಅನತಿ ದೂರದಲ್ಲಿ, ಮಹೋನ್ನತವಾಗಿ ಮತ್ತು ವಿಸ್ತಾರವಾಗಿ ಚಾಚಿಕೊಂಡ ರುದ್ರಹಿಮಾಲಯದ ಪರ್ವತಶ್ರೇಣಿಗಳ ನಿತ್ಯ ಹಿಮಾಚ್ಛಾದಿತವಾದ ಮೈ ಥಳಥಳಿಸುವ ಬಂಗಾರವಾಗಿತ್ತು. ಇಪ್ಪತ್ತೆರಡು ಸಾವಿರದ ನಾನೂರಾಹತ್ತು ಅಡಿಗಳೆತ್ತರದ ಮಹಾಪಂತ್ ಅಥವಾ  ಸುಮೇರು ಪರ್ವತದ ಸೊಂಟದ ಮೇಲೆ, ಹನ್ನೊಂದು ಸಾವಿರದ ಏಳುನೂರಾ ಐವತ್ಮೂರು ಅಡಿಗಳ ಹಂತದಲ್ಲಿರುವ ಕೇದಾರೇಶ್ವರ ದೇವಸ್ಥಾನದ ಅಂಗಳದಲ್ಲಿದ್ದ ಭಕ್ತರು, ಈ ದಿವ್ಯಮನೋಹರ ದೃಶ್ಯವನ್ನು ನೋಡಿ ಮೂಕವಿಸ್ಮಿತರಾಗಿದ್ದರು. ಈ ಸ್ವಲ್ಪ ಕಾಲದ ತನ್ಮಯತೆಯನ್ನು ಕದಡುವಂತೆ, ‘ಕ್ಯೂ’ನಲ್ಲಿ ಕೂತಿದ್ದ ಮುದುಕನೊಬ್ಬನು. ತನ್ನ ಮಕ್ಕಳು ಮೊಮ್ಮಕ್ಕಳ ಸಹಿತ ಭಯಂಕರ ಭಜನೆಯನ್ನು ಶುರುಮಾಡಿದನು. ತಾಳಖಂಜರಿಗಳನ್ನು ಬಾರಿಸುತ್ತ ‘ಓಂ ಶಿವಶಂಕರ, ಹರಹರ ಶಂಕರ’ ಎಂಬ ಸಾಮೂಹಿಕ ಭಜನೆ, ನಮ್ಮಲ್ಲಿ ಭಕ್ತಿ ಭಾವವನ್ನು ಉದ್ದೀಪಿಸುವ ಬದಲು, ಮುಂಜಾನೆಯ ಆ ಬಂಗಾರದ ಬೆಟ್ಟದ ಮಡಿಲಲ್ಲಿ ಧ್ಯಾನವೇ ಮೂರ್ತಗೊಂಡಂತೆ ಕೂತಿದ್ದ ದೇವಸ್ಥಾನದ ಮೌನಕ್ಕೆ ಒಂದು ರೀತಿಯ ಅಪಚಾರವೆಸಗುವಂತೆ ನನಗೆ ತೋರಿತು. ಈ ಭಜನೆ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ, ಬಹುಶಃ ಆ ಛಳಿಯಲ್ಲಿ ಹಾಡುವವರ ಗಂಟಲು ಒಣಗುವ ತನಕ ಸಾಗಿತೆನ್ನಬೇಕು. ಆದರೂ ಈ ಭಜನೆಗೆ, ದೇವಸ್ಥಾನದ ಹೊರ ಅಂಗಳದಲ್ಲಿ ಕೂತ ನಮ್ಮನ್ನು ಛಳಿಯಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ಕೆಲವು ಮಕ್ಕಳಂತೂ ಅಸಾಧ್ಯ ಛಳಿಗೆ ಮರದ ತುದಿಯ ತಳಿರಿನಂತೆ ಗಡ ಗಡನೆ ನಡುಗುತ್ತ ತಮ್ಮ ತಾಯಂದಿರು ಹೊದ್ದ ಶಾಲಿನ ಒಳಗೆ ತೂರುತ್ತಿದ್ದವು. ತಲೆಗಳಿಗೆ ಮುಚ್ಚುಟೋಪಿ, ಮೈಮೇಲೆ ಶಾಲು-ರಗ್ಗುಗಳು, ಕೈಗಳಿಗೆ ಕೈ ಚೀಲ ಇತ್ಯಾದಿಗಳಿಂದ  ದೇವರ ದರ್ಶನಕ್ಕೆ ಕೂತ ಜನ, ವಿಲಕ್ಷಣವಾಗಿ ತೋರುತ್ತಿದ್ದರು. ಈ ಜನಪಂಕ್ತಿಯ ಆಚೆಗೆ, ದೇವಸ್ಥಾನದ ಹೊರ ಅಂಗಳವನ್ನು ಪ್ರವೇಶಿಸುವ ಒಂದು ಕಡೆ, ಕಪ್ಪು ಮೈಯ್ಯ ದಢೂತಿ ಸಾಧುವೊಬ್ಬ ಕೇವಲ ಕೌಪೀನಧಾರಿಯಾಗಿ, ಆ ಕೊರೆವ ಛಳಿಗೂ ತನಗೂ ಏನೇನೂ ಸಂಬಂಧವಿಲ್ಲವೆಂಬಂತೆ ನಿರಾತಂಕವಾಗಿ ಪದ್ಮಾಸನ ಹಾಕಿಕೊಂಡು ಕುಳಿತಿದ್ದ. ಮೈ ತುಂಬ ವಿಭೂತಿಯನ್ನು ಬಳಿದುಕೊಂಡು, ತಲೆಯ ಜಟೆಯನ್ನು ಎತ್ತಿ ಕಟ್ಟಿ, ಹಣೆಗೆ ಕುಂಕುಮದ ಬೊಟ್ಟನ್ನಿರಿಸಿಕೊಂಡು, ನಿಶ್ಚಲವಾದ ಕರಿಯ ಕಲ್ಲುಬಂಡೆಯಂತೆ ಕೂತ ಅವನನ್ನು ನೋಡಿ ನನಗೆ ಆಶ್ಚರ್ಯವಾಯಿತು. ಅವನು ತನ್ನ ಎದುರು ಹಾಸಿಕೊಂಡ ಬಟ್ಟೆಯ ಮೇಲೆ ಭಕ್ತಾದಿಗಳು ಸಲ್ಲಿಸಿದ ಕಾಣಿಕೆಯೂ ಸಾಕಷ್ಟಿತ್ತು.

ಐದೂವರೆಗೆ ಕೂತ ನಮಗೆ, ಸುಮಾರು ಏಳು ಗಂಟೆಯ ವೇಳೆಗೆ ದೇವಸ್ಥಾನದ ಒಳಗೆ ಪ್ರವೇಶ ದೊರೆಯಿತು. ಯಾವುದೇ ನೂಕು ನುಗ್ಗಲಿಗೆ ಅವಕಾಶವಿಲ್ಲದಂತೆ, ಒಂದೊಂದು ಸಂಸಾರದವರನ್ನು, ಒಟ್ಟಿಗೆ ಒಳಗೆ ಬಿಡುವ ವ್ಯವಸ್ಥೆಯಿತ್ತು. ದೇವಸ್ಥಾನದ ಬದಿಗೆ ಹೋದಾಗ, ಆ ಎತ್ತರದಲ್ಲಿ ಅಷ್ಟು ಸೊಗಸಾದ ದೇವಸ್ಥಾನವನ್ನು ನಿರ್ಮಿಸಿದವರ ಬಗೆಗೆ ಗೌರವ ಉಂಟಾಯಿತು. ಪುರಾಣಗಳ ಪ್ರಕಾರ ಮಹರ್ಷಿ ವೇದವ್ಯಾಸರ ಉಪದೇಶದ ಮೇರೆಗೆ ಪಾಂಡವರು ಇಲ್ಲಿಗೆ ಬಂದು ಈ ದೇವಸ್ಥಾನವನ್ನು ನಿರ್ಮಿಸಿದರಂತೆ; ಮತ್ತೊಂದು ಪ್ರತೀತಿಯ ಪ್ರಕಾರ ಆಚಾರ್ಯ ಶಂಕರರು ಈ ದೇವಸ್ಥಾನವನ್ನು ಕಟ್ಟಿಸಿದರಂತೆ. ಆದರೆ ಇದರ ವಾಸ್ತುವನ್ನು ನೋಡಿದರೆ ಮಧ್ಯ ಭಾರತ ಹಾಗೂ ಉತ್ತರ ಖಂಡಗಳ ಶಿಲ್ಪ ಶೈಲಿಯ ಅಪೂರ್ವ ಸಂಗಮದ ಈ ದೇವಸ್ಥಾನ, ಬಹುಶಃ ಹದಿನೈದು ಹದಿನಾರನೆಯ ಶತಮಾನಕ್ಕೆ ಮೊದಲು ರಚಿತವಾದಂತೆ ತೋರುವುದಿಲ್ಲ ಅನ್ನುತ್ತಾರೆ ಚರಿತ್ರಕಾರರು.

ದೇವಸ್ಥಾನದ ಒಳಕ್ಕೆ ಪ್ರವೇಶ ಮಾಡಿದ ಕೂಡಲೇ, ಅತ್ಯಂತ ಬೆಚ್ಚನೆಯ ಗೂಡಿನೊಳಗೆ ಹೊಕ್ಕಂತಾಯಿತು. ದೇವಸ್ಥಾನದ ಒಳಗೋಡೆಗಳಲ್ಲಿ ಪಂಚಪಾಂಡವರ ವಿಗ್ರಹಗಳನ್ನು ಅಳವಡಿಸಲಾಗಿದೆ. ಇನ್ನೂ ಒಂದು ದೊಡ್ಡ ಹೊಸ್ತಿಲನ್ನು ದಾಟಿ ಗರ್ಭಗುಡಿಯ ಒಳಗೆ ಹೋದರೆ ಅಲ್ಲಿದೆ ಕೇದಾರೇಶ್ವರಲಿಂಗ. ಅದರ ಸುತ್ತ ಭಕ್ತಾದಿಗಳು, ತಾವೇ ತಂದ ಅರಿಶಿನ, ಗಂಧ, ಹೂವುಗಳಿಂದ ಕೈಮುಟ್ಟಿ ಪೂಜೆ ಮಾಡುತ್ತಿದ್ದಾರೆ. ತಾವು ತಂದ ಬೆಣ್ಣೆಯನ್ನು ಕೇದಾರೇಶ್ವರನೆಂದು ಹೇಳಲಾದ ಶಿಲಾಖಂಡಕ್ಕೆ ತಿಕ್ಕಿ, ಅರಿಶಿನ- ಕುಂಕುಮ ಹಚ್ಚಿ ಕರ್ಪೂರ ಬೆಳಗುತ್ತಿದ್ದಾರೆ. ತಮ್ಮ ತಮ್ಮ ದೂರದ ಊರುಗಳಿಂದ ಹಗಲೆನ್ನದೆ ಇರುಳೆನ್ನದೆ ಅತ್ಯಂತ ದುರ್ಗಮವಾದ  ಪರ್ವತದ ದಾರಿಗಳನ್ನು ಏರಿ, ಕಡೆಗೂ ಕೇದಾರನಾಥನನ್ನು ಕೈಮುಟ್ಟಿ ಪೂಜಿಸುವ ಸುಯೋಗ ಲಭಿಸಿತಲ್ಲ ಎನ್ನುವ ಧನ್ಯತೆಯೊಂದು ಅನೇಕ ಭಕ್ತಾದಿಗಳ ಮುಖದಲ್ಲಿ ಎದ್ದು ಕಾಣುತ್ತಿತ್ತು; ಕೆಲವರಂತೂ ಕನ್ನಡ ಕವಿ ಹರಿಹರನು ವರ್ಣಿಸುವ ಶಿವಭಕ್ತರಂತೆ, ಗದ್ಗದಿಸುತ್ತ, ಕಂಬನಿಯನ್ನು ಕಣ್ಣಲ್ಲಿ ಮಿನುಗಿಸುತ್ತಿದ್ದರು. ಈ ಭಕ್ತರ ಭಾವನೆಗೆ ನಾನು ನಿಶ್ಯಬ್ದವಾಗಿ ಸ್ಪಂದಿಸಿ ಕ್ಷಣ ಕಾಲ ರೋಮಾಂಚಿತನಾದೆ.

ಕೇದಾರನಾಥ ಅನ್ನುವುದು ವಾಸ್ತವವಾಗಿ ಒಂದು ಮೂರ್ತಿ ಅಲ್ಲ; ಲಿಂಗವೂ ಅಲ್ಲ. ಅದೊಂದು ಶಿಲಾ ಖಂಡ. ಹೊರಗೆ ನಾವು ಕಾಣುವ ಮಹಾ ಪರ್ವತದ ಒಂದು ಸಂಕ್ಷಿಪ್ತ ರೂಪ. ಬೆಟ್ಟವೊಂದರ ಶಿಖರಾಕೃತಿಯ ಮೈಯನ್ನು ಮೂರುನಾಲ್ಕು ಅಡಿಗಳಿಗೆ ಭಟ್ಟಿಯಿಳಿಸಿದರೆ ಹೇಗೋ ಹಾಗಿರುವ ಒಂದು ಶಿಲಾಕೃತಿ. ಅಂದರೆ ಹೊರಗೆ ಕಾಣುವ ಪರ್ವತವನ್ನೇ ಇಲ್ಲಿ ಒಳಗೆ ಸಾಂಕೇತಿಕವಾಗಿ ಪೂಜಿಸುತ್ತಾರೆ ಎಂದಂತಾಯಿತು. ಹರಿದ್ವಾರದಲ್ಲಿ ಇಡೀ ಗಂಗಾನದಿಯನ್ನು ಪೂಜೆ ಮಾಡುವುದರ ಹಿಂದೆ ಯಾವ ಅರ್ಥವಂತಿಕೆ ಇದೆಯೋ ಅದೇ ಇಲ್ಲಿ ಪುನರಾವರ್ತನೆಗೊಂಡಿದೆ ಮಹಾಪರ್ವತವನ್ನೆ ಒಳಗಿನ ಗರ್ಭಗುಡಿಯಲ್ಲಿ ಪ್ರತಿಮೆಯನ್ನಾಗಿ ಭಾವಿಸುವ ಮನೋಧರ್ಮದಲ್ಲಿ. ಈ ಮಹಾಪರ್ವತಗಳೂ, ನದಿಗಳು ಇವೇ ತಾನೆ ನಮ್ಮ ದೇವರುಗಳು?

ಆದರೆ ಪುರಾಣ ಸುಮ್ಮನಿರಬೇಕಲ್ಲ? ವಾಸ್ತವವನ್ನು ಮತ್ತು ಅದರ ಸಮಸ್ತ ಅರ್ಥವಂತಿಕೆಯನ್ನು ಎಂಥದೋ ಕಾಗಕ್ಕ – ಗುಬ್ಬಕ್ಕನ ಕತೆಗೆ ಇಳಿಸುವುದರಲ್ಲಿ ಅದಕ್ಕೆ ಆಸಕ್ತಿ. ಕೇದಾರೇಶ್ವರನೆಂದು ಪೂಜೆಗೊಳ್ಳುವ ಈ ಶಿಲಾಖಂಡ, ಪುರಾಣದ ಕಣ್ಣಿಗೆ ಗೂಳಿಯ ಪೃಷ್ಠದಂತೆ ಭಾಸವಾಯಿತು. ಆ ಗೂಳಿ ಬೇರೆ ಯಾವುದೂ ಅಲ್ಲ, ಸಾಕ್ಷಾತ್ ಶಿವನೇ ಗೂಳಿಯ ಆಕಾರವನ್ನು ತಾಳಿ ಪ್ರಾಚೀನ ಕಾಲದಲ್ಲಿ, ಅಂದರೆ ಪಂಚಪಾಂಡವರು ಈ ಕೇದಾರ ಪರ್ವತಪ್ರಾಂತ್ಯಗಳಿಗೆ ಬಂದ ಕಾಲದಲ್ಲಿ, ಸಂಚರಿಸುತ್ತಿದ್ದನಂತೆ. ಪಾಂಡವರನ್ನು ಕಂಡ ಒಡನೆಯೇ ಈ ಗೂಳಿ ಓಡತೊಡಗಿತು. ಪಾಂಡವರು ಈ ಭಾರೀ ಗೂಳಿಯನ್ನು ಬೆನ್ನಟ್ಟಿ ಅದನ್ನು ಹಿಡಿಯಲು ಪ್ರಯತ್ನಿಸಿದಾಗ, ಗೂಳಿ ಭೂಗರ್ಭವನ್ನು ಪ್ರವೇಶಿಸಲಾಗಿ, ಅದರ ಪೃಷ್ಠ ಭಾಗ ಮಾತ್ರ ಶಿಲಾರೂಪವಾಗಿ ಇಲ್ಲಿ ಉಳಿಯಿತು. ಸಾಕ್ಷಾತ್ ಶಿವನ, ವೃಷಭ ರೂಪದ ಪೃಷ್ಠ ಭಾಗವೇ ಈ ಕೇದಾರೇಶ್ವರ. ಈ ಗೂಳಿಯ ಇನ್ನುಳಿದ ಭಾಗಗಳು ತುಂಗನಾಥದಲ್ಲಿ ಅದರ ಕಾಲುಗಳು, ರುದ್ರನಾಥದಲ್ಲಿ ಅದರ ಮುಖ, ಮಡಮಹೇಶ್ವರದಲ್ಲಿ ಅದರ ಹೊಟ್ಟೆ, ಕಪಾಲೇಶ್ವರದಲ್ಲಿ ಅದರ ಶಿರೋಭಾಗ, ಶಿಲಾರೂಪದಲ್ಲಿ ಕಾಣಿಸಿಕೊಂಡು, ಈ ಕೇದಾರನಾಥನನ್ನೂ ಸೇರಿಸಿಕೊಂಡಂತೆ ಪಂಚ ಕೇದಾರ ಕ್ಷೇತ್ರಗಳಾದವು. ಇದು ಪುರಾಣ ಪ್ರತಿಭೆಯ ನಿರ್ಮಿತಿ. ಇಂಥ ಕತೆಗೆ ಅಳಬೇಕೋ, ನಗಬೇಕೋ ತಿಳಿಯದು.  ಮನುಷ್ಯನಿಗೆ ನಿಸರ್ಗದ ಬಗೆಗಿದ್ದ ಪ್ರೀತಿ, ಭಯ, ಗೌರವ ಭಾವನೆಗಳನ್ನು ಸಂಕೇತಿಸುವ ವಾಸ್ತವಾಂಶವೊಂದನ್ನು ನಮ್ಮ ಪುರಾಣ ಹೇಗೆ ಅರ್ಥಹೀನ ಹಾಗೂ ಕಲ್ಪನಾದರಿದ್ರವಾದ ಒಂದು ಅಸಂಬದ್ಧ ಕಟ್ಟುಕತೆಯ ದುರವಸ್ಥೆಗೆ ಇಳಿಸಿದೆ ಎಂಬುದಕ್ಕೆ ಇದಕ್ಕಿಂತ ಬೇರೆಯ ನಿದರ್ಶನ ಬೇಕಾಗಿಲ್ಲ. ತಮಾಷೆ ಎಂದರೆ, ಶಿವನು ಗೂಳಿಯ ಆಕಾರ ತಾಳಿದ್ದೇಕೆ, ಪಂಚಪಾಂಡವರನ್ನು ನೋಡಿ ಗೂಳಿಯಾಕಾರದ ಶಿವನು ಓಡಿದ್ದೇಕೆ? ಪಾಂಡವರು ಅದನ್ನು ಅಟ್ಟಿಸಿಕೊಂಡು ಹೋದದ್ದೇಕೆ? ಭೂಗರ್ಭವನ್ನು ಪ್ರವೇಶ ಮಾಡಿ ಶಿವವೃಷಭವು ತನ್ನ ಪೃಷ್ಠಭಾಗವನ್ನು ಮಾತ್ರ ಇಲ್ಲಿ ಉಳಿಸಿದ್ದೇಕೆ? ಸಂಪೂರ್ಣ ಮರೆಯಾಗುವಂತೆ ಭೂಮಿಯನ್ನು ಪ್ರವೇಶ ಮಾಡುವುದು ಶಿವನಿಗೆ ಅಸಾಧ್ಯವಾದ ಸಂಗತಿಯಾಗಿತ್ತೆ? ಇಂಥ ಯಾವ ಪ್ರಶ್ನೆಗಳಿಗೂ ಪುರಾಣ ಉತ್ತರಕೊಡುವುದಿಲ್ಲ. ತ್ರಿಕೋನಾಕಾರವಾಗಿ ನಿಂತು ಕೇದಾರೇಶ್ವರನೆಂದು ಪೂಜೆಗೊಳ್ಳುವ ಈ ಶಿಲಾಖಂಡದಲ್ಲಿ, ಬಹಿರಂಗ ನಿಸರ್ಗದ ಸಂಕೇತವನ್ನು ಕಾಣದೆ, ಗೂಳಿಯ ಪೃಷ್ಠವನ್ನು ಕಾಣುವ ನಮ್ಮ ಪುರಾಣಕ್ಕೆ ಏನು ಹೇಳಬೇಕೋ ತಿಳಿಯದು. ಆದರೆ ನಮ್ಮ ಪುರಾಣ ಪ್ರತಿಭೆಯೆಲ್ಲವೂ ಹೀಗೇ ಇದೆ ಎಂದು ಅರ್ಥವಲ್ಲ. ಗಂಗೋತ್ರಿಯ ಹಿಮಧವಳ ಶೃಂಗಗಳಿಂದ ಹರಿದು ಬರುವ ಗಂಗೆಯನ್ನು ಕಂಡು ನಮ್ಮ ಪುರಾಣವು ಕಲ್ಪಿಸಿದ ಭಗೀರಥನ ಕಥಾಪ್ರತಿಮೆ ಎಷ್ಟೊಂದು ಉಜ್ವಲವೂ ಅರ್ಥಪೂರ್ಣವೂ ಆಗಿದೆ. ದೇವಲೋಕದಿಂದ ಗಂಗೆಯನ್ನೆ ಧರೆಗಿಳಿಸಿದ ಮನುಷ್ಯನೊಬ್ಬನ ಮಹಾಸಾಹಸದ ಪ್ರತೀಕವಾಗಿರುವ ಭಗೀರಥನ ಪ್ರಯತ್ನ, ಲೋಕ ಕಲ್ಯಾಣಕರವಾದ ಸಂಗತಿಯಾಗಿ ಎಲ್ಲ ಕಾಲಗಳಿಗೂ ಸಲ್ಲುವಂಥ ಅರ್ಥವಂತಿಕೆಯನ್ನು ಪಡೆದುಕೊಂಡಿದೆ ಎಂಬುದರೊಂದಿಗೆ ಹೋಲಿಸಿದರೆ, ಕೇದಾರೇಶ್ವರನನ್ನು ಕುರಿತು ಹುಟ್ಟಿಕೊಂಡ ಈ ‘ವೃಷಭ ಪೃಷ್ಠಪುರಾಣ’ ಎಷ್ಟೊಂದು ಅರ್ಥಹೀನವೂ, ಪ್ರತಿಭಾದರಿದ್ರವೂ ಆಗಿದೆ ಎಂಬುದನ್ನು ಗುರುತಿಸಬಹುದು.

ನನಗಂತೂ ಕೇದಾರೇಶ್ವರನೆಂದು ಪೂಜೆಗೊಳ್ಳುವ ಪರ್ವತ ಪ್ರತೀಕವನ್ನು ಕಂಡು ತುಂಬ ಸಂತೋಷವಾಯಿತು. ನಮ್ಮ ಮನೆಯವರೂ ಅದನ್ನು ಕೈ ಮುಟ್ಟಿ ಪೂಜಿಸಿದ ನಂತರ, ಒಂದು ಬಗೆಯ ಧನ್ಯತೆಯ ಭಾವದಿಂದ ದೇವಸ್ಥಾನದಿಂದ ಹೊರಕ್ಕೆ ಬಂದೆವು.

ಬೆಳಗಿನ ಬೆಚ್ಚನೆಯ ಬಿಸಿಲು ಇಡೀ ಕೇದಾರವನ್ನು ಆಲಂಗಿಸಿಕೊಂಡಿತ್ತು. ದೇವಸ್ಥಾನದ ಹಿಂದಿನ ಪರ್ವತದ ಮೇಲ್ಭಾಗವೆಲ್ಲಾ ತನ್ನ ಹೊಂಬಣ್ಣವನ್ನು ಹಿಂದೆ ಹಾಕಿ ಬೆಳ್ಳಿಯಾಗತೊಡಗಿತ್ತು. ಕಣ್ಣು ಹರಿಯುವತನಕ ಥಳಥಳಿಸುತ್ತಾ ಹಬ್ಬಿಕೊಂಡ ಆ ಪರ್ವತಗಳು, ಶಿವನ ಅಟ್ಟಹಾಸವನ್ನು ಒಟ್ಟುಗೂಡಿಸಿದಂತೆ ತೋರುತ್ತಿತ್ತು.  ಹಿಮಾಲಯದಲ್ಲಿ ದೇವತೆಗಳೂ, ಅಪ್ಸರೆಯರೂ, ಕಿನ್ನರರೂ ಇದ್ದಾರೆಂಬ ಕವಿಗಳ ವರ್ಣನೆ ನಿಜವಿದ್ದರೂ ಇರಬಹುದು ಅನ್ನಿಸಿತು. ನಾನು ಕಾಣುವ ಆ ಧವಳ ಶಿಖರಗಳ ನಡುವೆ ತೇಲುವ ಮೋಡದಿಂದ ಯಾವಳಾದರೂ ಅಪ್ಸರೆ ಇಳಿದು ಬಂದು ನನ್ನೆದುರು ನರ್ತಿಸಲೂಬಹುದೇನೋ ಅನ್ನಿಸಿತು. ಸಾಕ್ಷಾತ್ ಶಿವನೇ ತನ್ನ ಭೂತಗಣಗಳ ಜತೆಗೆ ಈ ಮಹಾಪರ್ವತಗಳಲ್ಲಿ ವಾಸಿಸುತ್ತಾನೆ ಎಂಬ ನಂಬಿಕೆ, ಈ ಪೆಡಂಭೂತ ಶಿಖರಗಳನ್ನು ನೋಡಿದರೆ ಇನ್ನೂ ದೃಢವಾಗುತ್ತದೆ. ಈ ಹಿಮಾಲಯದಲ್ಲಿ ಎಲ್ಲೊ ಒಂದು ಕಡೆ, ಹರನ ಶಿರಸ್ಸಿನ ಚಂದ್ರನ ಬೆಳದಿಂಗಳ ಕಾಂತಿಯಲ್ಲಿ ಧವಳಾಯಮಾನವಾದ ಕಾಳಿದಾಸನ ಯಕ್ಷನ ಅಲಕಾವತಿ ಇದೆ; ಬೆಟ್ಟದೆತ್ತರಗಳಿಂದ ಧುಮುಕುವ ನಿರ್ಝರಗಳ ಶೀಕರದಿಂದ ದೇವದಾರು ತರುಗಳು ವಿಕಂಪಿಸುತ್ತವೆ; ಶಿವನು ತನ್ನ ಸಹಧರ್ಮಿಣಿಯಾದ ಪಾರ್ವತಿಯ  ಕೈಹಿಡಿದುಕೊಂಡು ಈ ಧವಳ ಪರ್ವತಗಳಲ್ಲಿ ಸಂಚಾರ ಮಾಡುತ್ತಾನೆ. ನಿಮಿಷಕ್ಕೊಮ್ಮೆ ಮುಚ್ಚುವ ಬಿಚ್ಚುವ ಮಂಜು ಮೋಡಗಳ ಹಿಂದೆ, ಯಕ್ಷ ಕಿನ್ನರ ಮಿಥುನಗಳು ಪ್ರೇಮಾಲಾಪದಲ್ಲಿ ತೊಡಗಿವೆ. ಈ ಪರ್ವತದ ಧವಳದರ್ಪಣಗಳಲ್ಲಿ ದೇವತಾಸ್ತ್ರೀಯರು ಮುಖ ನೋಡಿಕೊಂಡು ತಿಲಕ ತಿದ್ದಿಕೊಳ್ಳುತ್ತಾರೆ. ಆಗ ತಾನೇ ಕತ್ತರಿಸಿ ತೆಗೆದ ಗಜದಂತದಂತೆ ಸ್ವಚ್ಛವಾದ ಈ ಪರ್ವತದ ಶೃಂಗಗಳು ಕುಮುದದ ಮೊಗ್ಗುಗಳಂತೆ ರಮ್ಯವಾಗಿದೆ. ಕಾಳಿದಾಸನ ಇಂಥ ವರ್ಣನೆಗಳಿಗೆ ಹಿಮಾಲಯ ಭಾಷ್ಯ ಬರೆಯುತ್ತಲೇ ಇದೆ.

ನಿಸರ್ಗದ ಪ್ರಚಂಡಶಕ್ತಿಯ ಉನ್ಮತ್ತ ಆಭಿವ್ಯಕ್ತಿಯಂತೆ ತೋರುವ ಈ ಎತ್ತರಗಳ ಹಿಮಾಲಯ ಶತಶತಮಾನಗಳಿಂದ, ಕವಿಗಳ, ಸಂತರ, ಕಲಾವಿದರ ಹಾಗೂ ಅಸಂಖ್ಯ ಯಾತ್ರಿಕರ, ಆಕರ್ಷಣೆಯ ಹಾಗೂ ಗೌರವದ ವಸ್ತುವಾಗಿದೆ. ಭಾರತದ ಭೌಗೋಳಿಕ ವೈಶಿಷ್ಟ್ಯವನ್ನು ಮಹತ್ವಪೂರ್ಣವನ್ನಾಗಿ ಮಾಡಿರುವುದು ಹಿಮಾಲಯ. ಭಾರತೀಯರ ಬದುಕನ್ನು ಹಿಮಾಲಯ ರೂಪಿಸಿರುವಷ್ಟರ ಮಟ್ಟಿಗೆ ಜಗತ್ತಿನ ಇನ್ಯಾವ ಪರ್ವತವೂ ರೂಪಿಸಿಲ್ಲ. ನಗಾಧಿರಾಜನೆಂದು ಕಾಳಿದಾಸನಿಂದ ವರ್ಣಿತವಾದ ಈ ಭವ್ಯ ಹಿಮಾಲಯದ ವರ್ಣನೆ ಮೊಟ್ಟಮೊದಲು ಕಾಣಿಸಿಕೊಳ್ಳುವುದು ಋಗ್ವೇದದಲ್ಲಿ. ‘ಕಸ್ಮೈ ದೇವಾಯ ಹವಿಷಾವಿಧೇಮ’ ಎಂದು ಮುಕ್ತಾಯವಾಗುವ ಮಂತ್ರವೊಂದರಲ್ಲಿ. ಹಿಮಾಲಯವನ್ನು ಅಪರಾಶಕ್ತಿಯ ಮಹಿಮಾ ವಿಶೇಷದ ಅಭಿವ್ಯಕ್ತಿ ಎಂದು ಸ್ತುತಿಸಲಾಗಿದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ತನ್ನ ‘ವಿಭೂತಿ’ಯನ್ನು ಕುರಿತು, ಅಂದರೆ ಭಗವತ್ ಶಕ್ತಿ ತನ್ನ ಅತ್ಯಧಿಕ ಪ್ರಮಾಣದಲ್ಲಿ ಎಲ್ಲೆಲ್ಲಿ ಕಾಣಿಸಿಕೊಂಡಿದೆ ಎಂಬುದನ್ನು ಹೇಳುವಾಗ, ‘ಸ್ಥಾವರಾಣಾಂ ಹಿಮಾಲಯ’ ಅನ್ನುತ್ತಾನೆ. ಈ ಜಗತ್ತಿನಲ್ಲಿ ಸ್ಥಾವರ ರೂಪದಲ್ಲಿ ದೈವೀಶಕ್ತಿ ತನ್ನ ವಿಶೇಷ ರೂಪದಲ್ಲಿ ಅಭಿವ್ಯಕ್ತವಾಗಿರುವುದು ಈ ಹಿಮಾಲಯದಲ್ಲಿ ಎಂದು ಈ ಮಾತಿನ ಅರ್ಥ. ಹಿಮಾಲಯ ಸದೃಶವಾದ ಪರ್ವತಗಳು ಈ ಜಗತ್ತಿನಲ್ಲೇ ಇಲ್ಲ. ಇದು ನಾಗರಿಕತೆಯ ಆದಿಮಕಾಲದಿಂದಲೇ ಜನಮನದಲ್ಲಿ ದೈವೀಭಾವನೆಯನ್ನು, ಆಧ್ಯಾತ್ಮಿಕ ಅರ್ಥವಂತಿಕೆಯನ್ನು ಪಡೆದುಕೊಂಡಿದೆ. ಹಿಂದೂಗಳು ಭಾವಿಸುವ ಸ್ವರ್ಗ ಇರುವುದು ಇಲ್ಲಿಯೇ; ಶಿವನ ಆವಾಸವಾದ ಕೈಲಾಸವಿರುವುದು ಇಲ್ಲಿಯೇ. ಹಿಂದೂಗಳು ಕೈಲಾಸವೆಂದು ಕರೆಯುವ ಪರ್ವತವನ್ನೇ ಜೈನರು ಅಷ್ಟಾಪದ ಪರ್ವತ ಎನ್ನುತ್ತಾರೆ; ಸಿಖ್ಖರ ಗುರುವಾದ ಗುರುಗೋವಿಂದಸಿಂಗ್ ಸ್ನಾನಮಾಡಿ ಧ್ಯಾನಮಾಡಿದ ಲೋಕಪಾಲ್ (ಹೇಮಕುಂಡ) ಇರುವುದು ಇಲ್ಲಿಯೆ. ಅತ್ಯಂತ ಪ್ರಾಚೀನ ಕಾಲದಿಂದ ಸ್ತೂಪ ಸಂಘಗಳನ್ನು ಬೌದ್ಧರು ಸ್ಥಾಪಿಸಿದ್ದು ಇಲ್ಲಿಯೇ; ಮಹರ್ಷಿ ವ್ಯಾಸರು ಮಹಾಭಾರತವನ್ನು ಬರೆದದ್ದು ಇಲ್ಲಿಯೇ; ಮಹರ್ಷಿ ವಸಿಷ್ಠರು ತಮ್ಮ ಯೋಗವಾಶಿಷ್ಠ್ಯವನ್ನು ಬರೆದದ್ದು ಇಲ್ಲಿಯೇ; ಪಾಂಡವರು ತಮ್ಮ ಬಾಲ್ಯದ ದಿನಗಳನ್ನು ಕಳೆದದ್ದು, ವನವಾಸದ ಹಲವು ವರ್ಷಗಳನ್ನು ಕಳೆದದ್ದು, ಮತ್ತೆ ಕೊನೆಗೆ ಸ್ವರ್ಗಾರೋಹಣ ಮಾಡಿದ್ದು ಇಲ್ಲಿಯೇ; ಅನೇಕ ಸಾಧು-ಸಂತ ಋಷಿಮುನಿಗಳು, ತಪಸ್ಸು ಮಾಡಿ ಪರಮ ಶಾಂತಿಯನ್ನು ಪಡೆದದ್ದು ಇಲ್ಲಿಯೇ; ಇಂದಿಗೂ ಅನೇಕ ಜ್ಞಾತ ಹಾಗೂ ಅಜ್ಞಾತ ಸಾಧಕರು ತಮ್ಮ ಪರಮಾರ್ಥಪಥವನ್ನು ತುಳಿಯುತ್ತಿರುವುದು ಇಲ್ಲಿಯೇ; ಶ್ರೀ ಶಂಕರಾಚಾರ್ಯರು ಈ ದುರ್ಗಮ ಪ್ರದೇಶಗಳಿಗೆ ಎಂಟನೆ ಶತಮಾನದಷ್ಟು ಹಿಂದೆಯೇ ನಡೆದು ಬಂದು ಪವಿತ್ರಧಾಮಗಳನ್ನು ಸ್ಥಾಪಿಸಿ ತೀರ್ಥಯಾತ್ರೆಗೆ ಒಂದು ಮೂರ್ತರೂಪವನ್ನು ಕೊಟ್ಟಿದ್ದು  ಇಲ್ಲಿಯೇ.

ಶಂಕರಾಚಾರ್ಯರ ನೆನಪು ಬರುವ ವೇಳೆಗೆ ನಾವು, ಕೇದಾರ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿರುವ ಶಂಕರಾಚಾರ್ಯರ ಸಮಾಧಿಯ ಬಳಿ ನಿಂತಿದ್ದೆವು. ಆಚಾರ್ಯ ಶಂಕರರು ತಮ್ಮ ಪಾಂಚಭೌತಿಕ ಶರೀರವನ್ನು ತ್ಯಾಗ ಮಾಡಿದ್ದು ಕೇದಾರದಲ್ಲಿ ಎಂದು ‘ಶಂಕರ ವಿಜಯ’ದಲ್ಲಿ ಉಲ್ಲೇಖಿತವಾಗಿದೆ. ಈಗ ಶಂಕರರ ನೆನಪಿಗೆ, ಒಂದು ಸಣ್ಣ ಮಂದಿರವಿದೆ. ಮಂದಿರದ ಮೇಲೆ ಕಾವಿಯ ಧ್ವಜವೊಂದು ಮಹಾಪಂತ್ ಪರ್ವತದ ಹಿನ್ನೆಲೆಯಲ್ಲಿ ಹಾರಾಡುತ್ತಿದೆ. ಮಂದಿರದ ಒಳಗೆ ಆಚಾರ್ಯ ಶಂಕರರ ಹಾಲುಗಲ್ಲಿನ ವಿಗ್ರಹವಿದೆ. ಈ ಮಂದಿರದ ಹಿಂದೆ ದಟ್ಟ ಹಸುರಿನ ಕಣಿವೆಯೊಂದು ರಹಸ್ಯದಂತೆ ಹರಡಿಕೊಂಡಿದೆ.

ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ಬಿಡಲಾರದ ಮನಸ್ಸಿನಿಂದ ಕೇದಾರದಿಂದ ನಮ್ಮ ಅವರೋಹಣದ  ಪಯಣ ಪ್ರಾರಂಭವಾಯಿತು. ಗರುಡಚಟ್ಟಿ ರಾಂಬಾರಾಗಳ ಮೂಲಕ ಗೌರೀಕುಂಡದ ಕಡೆಗೆ, ನೇಪಾಲೀ ಕೂಲಿಗಳ ಹೆಗಲೇರಿ ಕಂಡಿಯಲ್ಲಿ ಹಿಮ್ಮೊಗವಾಗಿ ಕೂತು ಪ್ರಯಾಣ ಮಾಡಿದ ನಮಗೆ ಬಹು ದೂರದವರೆಗೆ ರುದ್ರ ಹಿಮಾಲಯದ, ಧವಳ ಶೃಂಗಗಳ ದರ್ಶನ ಚೇತೋಹಾರಿಯಾಗಿತ್ತು. ಮತ್ತೆ ಸ್ವಲ್ಪ ಹೊತ್ತಿನಲ್ಲೇ ಆ ದೃಶ್ಯ ಮರೆಯಾಗಿ, ಪಕ್ಕದಲ್ಲಿ ಉದ್ದಕ್ಕೂ ದಟ್ಟ ಹಸುರಿನ  ಬಂಡೆ ಬೆಟ್ಟಗಳ ಕಣಿವೆಯಲ್ಲಿ ದಢದಢ ಧುಮುಕಿ ಹರಿಯುವ ಮಂದಾಕಿನಿಯ ಪ್ರವಾಹ ಸಂಗಾತಿಯಾಯಿತು. ಈ ಬೆಟ್ಟದ ಹೊಳೆಗಳಿಗೆ ಇರುವ ವೇಗ, ಶುಭ್ರತೆ, ಉತ್ಸಾಹ, ಹಾಗು ಉಲ್ಲಾಸ, ಈ ಪರ್ವತಾರಣ್ಯ ಚೇತನದ ಜೀವನೋತ್ಸಾಹದಂತೆ ಭಾಸವಾಗುತ್ತದೆ. ಅವುಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ಒಂದು ಬಗೆಯ ಲವಲವಿಕೆ ತುಂಬಿಕೊಳ್ಳುತ್ತದೆ. ಈ ಬೆಟ್ಟದೆತ್ತರಗಳಲ್ಲಿ ತೀಡುವ ಗಾಳಿ, ಕೋಡುಗಲ್ಲುಗಳಿಂದ ಜಿಂಕೆಯಂತೆ ಚಿಮ್ಮಿ, ಹಾಲಿನಂತೆ ಹರಿಯುವ ಅನೇಕ ಕಿರುಜಲಪಾತಗಳ ಜುಳುಜುಳುನಾದ, ಈ ಎಲ್ಲವೂ ನಿಜವಾದ ಜೀವಂತಿಕೆಯ ಪ್ರತೀಕವಾಗಿದೆ.

ಗರುಡಚಟ್ಟಿಯನ್ನು ದಾಟಿ, ರಾಂಬಾರಾದ ಕಡೆಗೆ ನಮ್ಮ  ಕಂಡಿಯವರು ಕೊಂಚ ವೇಗದಿಂದಲೇ ಹೆಜ್ಜೆ ಹಾಕುತ್ತಿದ್ದರು. ಹತ್ತುವುದಕ್ಕಿಂತ ಇಳಿಯುವುದು ಕೊಂಚ ಸುಲಭವೆಂಬಂತೆ ತೋರಿದರೂ, ಜೋಲಿ ಹೊಡೆಯದಂತೆ, ಮುಗ್ಗರಿಸದಂತೆ ಇಳಿಯುವ ಸಮತೂಕವನ್ನು ಕಾಯ್ದುಕೊಳ್ಳುವುದು ನಿಜವಾಗಿಯೂ ಕಷ್ಟವೇ. ಒಂದೆಡೆ ತೀರಾ ಕಡಿದಾದ ಇಳುಕಲು ಬಂದದ್ದರಿಂದ ನಾವು ಕಂಡಿಯಿಂದ ಇಳಿದು ನಡೆಯಲು ಶುರು ಮಾಡಿದೆವು. ಇಳಿದ ನಂತರ ಸಾಕಷ್ಟು ದೂರ ಸಮತಟ್ಟಾದ ಹಾದಿ ಸಿಕ್ಕಿತು. ಆ ಹಾದಿಯ ಉದ್ದಕ್ಕೂ ಬೆಟ್ಟದ ಅಂಚಿಗೆ ಒಂದು ರೀತಿಯ ತೆರವು ಮಾಡಿಕೊಂಡು,  ಜಗುಲಿ ನಿರ್ಮಿಸಿಕೊಂಡು, ಅದರ ಮೇಲೆ ಬಿದಿರಿನ ಛಾವಣಿ ಹಾಕಿಕೊಂಡು ಹಲವಾರು ಸಾಧು ಸನ್ಯಾಸಿಗಳು ಕೂತಿದ್ದರು. ನಾವು ಇದುವರೆಗೆ ನೋಡಿದ ಬೇರೆಯ ಸ್ಥಳಗಳಲ್ಲಿ ಕಂಡುಬರದಷ್ಟು ಹೆಚ್ಚಿನ ಸಂಖ್ಯೆಯ ಸಾಧುಗಳು ಈ ಕೇದಾರದ ಹಾದಿಯಲ್ಲಿ ಕಾಣಿಸಿದರು. ಶಿವನೇ, ಬೂದಿಬಡಕ ಸನ್ಯಾಸಿಯೂ, ಮಹಾ ಯೋಗಿಯೂ ಆಗಿರುವ ಕಾರಣದಿಂದ, ಈ ಕೇದಾರದ ಹಾದಿ ಈ ಸನ್ಯಾಸಿಗಳಿಗೆ ಇಷ್ಟು ಪ್ರಿಯವಾಗಿದೆಯೋ ಏನೋ. ದಾರಿ ಉದ್ದಕ್ಕೂ, ಮೈತುಂಬ ಬೂದಿ ಬಳಿದುಕೊಂಡು ಕೂತ ಸಾಧುಗಳು; ಎದುರಿನ ಧುನಿಯಲ್ಲಿ ಬೆಂಕಿ ಹೊತ್ತಿಸಿಕೊಂಡು ತದೇಕ ಚಿತ್ತದಿಂದ ಅದನ್ನೇ ನೋಡುತ್ತ ಕುಳಿತ  ಕೆಲವರು ; ಗಾಂಜಾ ಸೇದುತ್ತ, ಕಣ್ಣನ್ನು ಊರ್ಧ್ವ ಲೋಕದ ಕಡೆ ತಿರುಗಿಸಿದವರು; ನೋಡಿದರೆ ಭಯವನ್ನು ಉಂಟು ಮಾಡುವ  ಮೈಕಟ್ಟಿನವರು; ಗಂಟು ಜಡೆಯ ಗೊರವರು; ತ್ರಿಶೂಲಗಳನ್ನು ನೆಟ್ಟು ಎದುರಿನ ತಟ್ಟೆಯಲ್ಲಿ ಕುಂಕುಮವನ್ನು ರಾಶಿ ಹಾಕಿಕೊಂಡು ಕುಳಿತು, ಭಕ್ತಾದಿಗಳನ್ನು ತಮ್ಮ ಕಣ್ಣುಗಳಿಂದಲೇ ಹತ್ತಿರಕ್ಕೆ ಸೆಳೆಯುವಂಥವರು; ಕಣ್‌ಮುಚ್ಚಿ ಸಮಾಧಿಗೆ ಸಂದವರಂತೆ, ನಿಶ್ಚಲವಾದ ಕೊರಡುಗಳಂತೆ ಕೂತವರು; ಕೇವಲ ಕೌಪೀನಧಾರಿಗಳಾಗಿ, ಎದುರಿನ ಬೆಟ್ಟವನ್ನೇ ನೆಟ್ಟ ನೋಟದಿಂದ ನೋಡುತ್ತ ಕುಳಿತವರು; ನಾನಾ ಭಂಗಿಯ, ನಾನಾ ಪಂಥದ, ನಾನಾ ವೇಷದ ಸಾಧುಗಳು ಈ ಬೆಟ್ಟದಂಚಿನ ದಾರಿಯ ಪುಟ್ಟ ಜೋಪಡಿಗಳಲ್ಲಿ ಮನೆ ಮಾಡಿಕೊಂಡಿದ್ದರು. ತಮ್ಮ ಎದುರಿಗೆ ಹಾಸಿದ ಜಿಂಕೆಯ ಚರ್ಮದ ಮೇಲೆ ಅಥವಾ ಪಾತ್ರೆಗಳಲ್ಲಿ ಯಾತ್ರಾರ್ಥಿಗಳು ಯಥಾಶಕ್ತಿ ಸಲ್ಲಿಸಿದ ಕಾಣಿಕೆ ಸಾಕಷ್ಟಿತ್ತು. ಕೆಲವರಂತೂ ‘ಮಹಾರಾಜ್, ಸಾಧೂಕೋ ಕುಚ್ ಪೈಸಾ ದೇವ್’ ಎಂದು ಜೋರಾಗಿಯೇ ಕೇಳುತ್ತಿದ್ದರು. ಇವರಲ್ಲಿ ನಿಜವಾದ ಸನ್ಯಾಸಿಗಳು ಯಾರೋ, ಠಕ್ಕರು ಯಾರೋ ಹೇಗೆ ತಿಳಿಯಬೇಕು? ಅವರಲ್ಲಿ ಹಲವರಂತೂ ಯಾತ್ರೆಯ ಈ ‘ಸೀಸನ್’ದಲ್ಲಿ ‘ಯೋಗದ’ ಅಂಗಡಿಗಳನ್ನು ತೆರೆದು ಕೂತವರೆಂಬುದು ಸ್ಪಷ್ಟವಾಗಿತ್ತು. ಈ ಸನ್ಯಾಸಿಗಳು ತಮ್ಮ ಈ ಕುಟೀರಗಳ ಬಿದಿರು ಕಂಬಗಳ ಮೇಲೆ, ತಟಿಕೆ ಗೋಡೆಗಳ ಮೇಲೆ ಬೇರೆ ಬೇರೆಯ ದೇವರುಗಳ ಫೋಟೋಗಳನ್ನು ತೂಗು ಹಾಕಿಕೊಂಡಿದ್ದರು. ಶಿವ, ಚಾಮುಂಡಿ, ಭೈರವ, ಕಾಳಿ, ಕೃಷ್ಣ – ಹೀಗೆ ಬಗೆಬಗೆಯ ಫೋಟೋಗಳು. ಮತ್ತೆ ಕೆಲವರಂತೂ ಲಕ್ಷ್ಮೀ ಸರಸ್ವತಿ, ರಾಧಾ-ಕೃಷ್ಣ, ಇವರ ಚಿತ್ರವಿರುವ ಕ್ಯಾಲೆಂಡರ್‌ಗಳನ್ನೂ ತೂಗುಹಾಕಿಕೊಂಡಿದ್ದರು. ಇನ್ನೂ ಒಬ್ಬ ಸಾಧುವಿನ ಕುಟೀರ ಕಂಬದಲ್ಲಿ ಗೋಪೀವಸ್ತ್ರಾಪಹರಣದ ಚಿತ್ರವಿದ್ದ ಕ್ಯಾಲೆಂಡರ್ ತೂಗುತ್ತಿತ್ತು! ಗಾಂಜಾ ಸೇದುತ್ತ, ಆ ಕುಟೀರದೊಳಗೆ ಕೂತ ಸಾಧು, ಪಕ್ಕದಲ್ಲೇ ಹಾದು ಹೋಗುವ ಯಾತ್ರಿಕರನ್ನು ಉದ್ದೇಶಿಸಿ ‘ಬೋಲೊ ಕೇದಾರನಾಥ್‌ಜೀ ಕೀ ಜಯ್’ ಎನ್ನುತ್ತಿದ್ದ. ಇನ್ನೊಬ್ಬ ಸಾಧು ಅಡ್ಡವಾಗಿ ನಿಂತು, ನನ್ನನ್ನು ತಡೆದು ‘ಸಿಗರೇಟ್ ಹೈ ಆಪ್ ಕೆ ಪಾಸ್?’ ಎಂದು ಪ್ರಶ್ನಿಸಿದ. ನಾನು ನಕ್ಕು ತಲೆಯಲ್ಲಾಡಿಸಿ ಮುಂದೆ ನಡೆದೆ.

ಸ್ವಲ್ಪ ದೂರ ನಡೆದ ನಂತರ, ಅಲ್ಲೊಂದು ಸರಿಯಾದ ಸ್ಥಳ ನೋಡಿ ಮತ್ತೆ ಕಂಡಿಯಲ್ಲಿ ಕೂರುವ ಸಿದ್ಧತೆ ನಡೆಸಿದೆವು. ಮೊದಲು ನಮ್ಮ ಮನೆಯವರು, ಕಂಡಿಗಳಲ್ಲಿ ಕುಳಿತರು. ನಾನು ಇನ್ನೂ ಸ್ವಲ್ಪ ದೂರ ನಡೆದೇ ಹೋಗುವ ಅಪೇಕ್ಷೆಯಿಂದ ಹಿಂದೆ ಹೊರಟೆ. ಆ ಎತ್ತರದಲ್ಲಿ ಹೊತ್ತು ನಡುಹಗಲನ್ನು ಸಮೀಪಿಸುತ್ತಿದ್ದರೂ ಛಳಿಯ ಕೊರೆತವೇನೂ ಕಡಿಮೆಯಾಗಿರಲಿಲ್ಲ. ಮೈತುಂಬಾ ಶಾಲು ಹೊದ್ದು, ತಲೆಗಳಿಗೆ ಉಣ್ಣೆಯ ಮಫ್ಲರುಗಳನ್ನು ಸುತ್ತಿಕೊಂಡು, ಕಂಡಿಯ ಬಿದಿರು ಬುಟ್ಟಿಗಳಲ್ಲಿ ಮುದುರಿಕೊಂಡು ಕೂತಿದ್ದ ನಮ್ಮ ಮನೆಯವರಿಬ್ಬರೂ ಗ್ರಾಮದೇವತೆಯರಂತೆ ವಿರಾಜಮಾನರಾಗಿದ್ದರು. ನನಗೆ ಒಂದು ಕ್ಷಣ ನಗು ಬಂತು. ನಾನು ಸಹ ಕೋಟು ತೊಟ್ಟು, ಮುಸುಗು ಟೋಪಿ ಹಾಕಿಕೊಂಡದ್ದರಿಂದ, ಕಂಡಿಯಲ್ಲಿ ಕೂತ ಸಮಯದಲ್ಲಿ, ಅವರ ಕಣ್ಣಿಗೆ ಏನೇನೋ ಆಗಿ ಕಾಣಿಸಲು ಸಾಧ್ಯ ಎಂದು ಅಂದುಕೊಳ್ಳುತ್ತಾ ಹಿಂದೆ ನಡೆದೆ.

ರಾಂಬಾರಾ ಹತ್ತಿರ ಬರುವ ವೇಳೆಗೆ, ಮಧ್ಯಾಹ್ನ ಹನ್ನೆರಡೂವರೆಯಾಗಿತ್ತು. ಇಳಿತದ ಹಾದಿಯಾದ್ದರಿಂದ, ಬಹುಶಃ ಮೂರು ಮೂರೂವರೆಯ ಹೊತ್ತಿಗೆ, ಗೌರೀ ಕುಂಡವನ್ನು ತಲುಪಬಹುದೆಂದು ಲೆಕ್ಕ ಹಾಕುತ್ತಾ ರಾಂಬಾರಾದ ಚಹದಂಡಿಯ ಬೆಂಚುಗಳಲ್ಲಿ ಕುಳಿತು ಎಲ್ಲರಿಗೂ ಚಹಾ ತಯಾರಿಸಲು ಹೇಳಿದೆವು. ಈ ಚಹದಂಗಡಿಗಳ ಒಂದು ವಿಶೇಷವೆಂದರೆ, ಯಾರಿಗೆ ಎಷ್ಟು ಚಹ ಬೇಕಾದರೂ, ಆಗಲೇ ಹೊಸದಾಗಿ ತಯಾರಿಸಿ ಕೊಡುತ್ತಾರೆ. ಈ ಪ್ರಯಾಣಗಳಲ್ಲಿ, ನೀರು ಕುಡಿಯುವುದಕ್ಕಿಂತ ಬಿಸಿಬಿಸಿ ಚಹಾ ಕುಡಿಯುವುದು ತುಂಬ ಒಳ್ಳೆಯದು. ‘ಯಾತ್ರಿಕರೇ ಸಾಕಷ್ಟು ನಿಂಬೆಯ ಹಣ್ಣಿನ ರಸವನ್ನು ಸೇವಿಸಿರಿ; ಆರೋಗ್ಯಕ್ಕೆ ಒಳ್ಳೆಯದು’ – ಎಂಬ ಸೂಚನಾಫಲಕಗಳು ದಾರಿಯ ಉದ್ದಕ್ಕೂ ಕಾಣಿಸಿಕೊಳ್ಳುತ್ತವೆ. ಈ ಬೆಟ್ಟದ ದಾರಿಯ ಪ್ರಯಾಣದಲ್ಲಿ ಬರಿ ಹೊಟ್ಟೆಯಲ್ಲಿರುವುದಕ್ಕಿಂತ ಅಪಾಯಕಾರಿಯಾದದ್ದು ಬೇರೊಂದಿಲ್ಲ; ಆಗಾಗ ಏನನ್ನಾದರೂ ತೆಗೆದುಕೊಳ್ಳುತ್ತಲೇ ಇರಬೇಕು – ಎಂದು ಅನುಭವಸ್ಥರು ಹೇಳಿದ ಮಾತನ್ನು ನಾವು ಅಕ್ಷರಶಹ ಪಾಲಿಸುತ್ತಿದ್ದುದರಿಂದ, ಮನೆಯಿಂದ ಮಾಡಿಕೊಂಡು ತಂದ ತಿಂಡಿ ಪದಾರ್ಥಗಳೂ, ಬಿಸ್ಕತ್ತುಗಳೂ ಸದಾ ನಮ್ಮ ಜತೆಗೆ ಸಹಯಾತ್ರಿಯಾಗಿದ್ದುವು.

ಅಂಗಡಿಯವರು  ಮಾಡಿಕೊಟ್ಟ ಬಿಸಿ ಬಿಸಿ ಚಹಾ ಕುಡಿಯುತ್ತಾ, ಮೇಲಿನ ದಾರಿಯಿಂದ ಬಂದು, ನಾವು ಕೂತ ಚಹದಂಗಡಿಯ ತಿರುವಿನಲ್ಲಿ ಇಳಿದು, ಕೆಳಗಿನ ದಾರಿಯನ್ನು ತುಳಿಯುವ ಯಾತ್ರಿಕರನ್ನು ನೋಡುತ್ತ ಕುಳಿತಿದ್ದೆವು.  ನಾವು ನೋಡುತ್ತಿದ್ದ ಹಾಗೆ, ಮೇಲಿನ ದಾರಿಯಿಂದ ಕುದುರೆಯ ಮೇಲೆ ಕೂತ ಧಡೂತಿ ಹೆಂಗಸೊಬ್ಬಳು, ನಮ್ಮೆದುರಿನ ತಿರುವಿನ ಇಳುಕಲಿನಲ್ಲಿ ಆಯತಪ್ಪಿ ತಾನು ಸವಾರಿ ಮಾಡುತ್ತಿದ್ದ ಕುದುರೆಯಿಂದ ತಲೆಕೆಳಗಾಗಿ ಉರುಳಿದಳು. ನಾವು ನೋಡ ನೋಡುತ್ತಲೇ ಅವಳ ಸೀರೆ, ಕುದುರೆಯ ಮೇಲೆ ಹಾಕಿದ್ದ ಜೀನಿನ ಕೊಂಡಿಗೆ ಸಿಕ್ಕಿ ಎರಡು ಚೂರಾಗಿ ಹೋಯಿತು, ಅವಳ ತಲೆ ದಾರಿಬದಿಯ ಮೊನಚು ಕಲ್ಲಿಗೆ ಬಡಿಯದೆ ಹೋದದ್ದು ಅವಳ ಅದೃಷ್ಟವೇ ಸರಿ. ಕೆಳಗೆ ಬಿದ್ದು ಹೇಗೋ ಸಾವರಿಸಿಕೊಂಡು ಕುಳಿತ ಆಕೆಗೆ ತಾನು ಎಂಥ ಅಪಾಯದಿಂದ ಪಾರಾಗಿದ್ದೇನೆ ಅನ್ನುವುದು ಬಹುಶಃ ಅರ್ಥವಾಗಿರಲಿಲ್ಲ. ಅದನ್ನು ಯೋಚಿಸುವ ಬದಲು, ಆಕೆ ತನ್ನ ಸೀರೆ ಹರಿದು ಹೋದದ್ದನ್ನು ಕುರಿತು, ಜತೆಗೆ ಬರುತ್ತಿದ್ದ ಕುದುರೆಯವನನ್ನು ಹೀನಾಮಾನ ಬಯ್ಯತೊಡಗಿದಳು. ಆದರೆ ಚಹದಂಗಡಿಯವನು ಹೇಳಿದ: ‘ಮಾಜೀ, ಮನೆಗೆ ಹೋದ ಮೇಲೆ ಮೊದಲು ನಾಲ್ಕು ಜನಕ್ಕೆ ಅನ್ನ ಹಾಕಿ; ಯಾಕೆಂದರೆ ಕುದುರೆಯಿಂದ ಬಿದ್ದೂ ಪುಣ್ಯವಶಾತ್ ಉಳಿದುಕೊಂಡಿದ್ದೀರಿ. ಸೀರೆ ಹರಿದರೇನಂತೆ ಮತ್ತೆ ಅದನ್ನು ಹೊಲಿಸಿ ರಿಪೇರಿ ಮಾಡಬಹುದು. ನಿಮ್ಮ ತಲೆಯೇ ಈಗ ಒಡೆದು ಹೋಗಬಹುದಾಗಿತ್ತಲ್ಲ, ಆಗ ಏನು ಮಾಡುತ್ತಿದ್ದಿರಿ?’ ಆಕೆ ಗೊಣಗಿಕೊಂಡು ಕುದುರೆಯ ಹಿಂದೆ ಹೊರಟಳು.

ನಮ್ಮ ಜತೆ ಚಹಾ ಕುಡಿಯುತ್ತಿದ್ದ ಒಬ್ಬರು ಹೇಳಿದರು : ‘ಇದೇನು ಬಿಡಿ. ಈಗ ಎರಡು ದಿನಗಳ ಹಿಂದೆ ಯಮುನೋತ್ರಿಯ ದಾರಿಯಲ್ಲಿ, ಕೂತವನ ಸಮೇತ ಕುದುರೆಯೊಂದು ಪ್ರಪಾತಕ್ಕೆ ಬಿದ್ದು ಹೋಯಿತು; ರುದ್ರಪ್ರಯಾಗದಿಂದ ಬದರಿಗೆ ಹೋಗುವ ತಿರುವಿನಲ್ಲಿ ತುಂಬಿದ ಬಸ್ಸೊಂದು ಅಲಕನಂದಾ ನದಿಯೊಳಗೆ ಬಿದ್ದು ಹೋಯಿತೆಂದು ಯಾರೋ ಹೇಳಿದರು. ಈ ಯಾತ್ರೆಯಲ್ಲಿ ಇವೆಲ್ಲಾ ತೀರಾ ಸಾಮಾನ್ಯ ಸಂಗತಿಗಳು’.

ನಿಜ, ಈ ಯಾತ್ರೆಗಳೆಲ್ಲ ಇಂಥ ಅಪಾಯಗಳಿಂದ ತುಂಬಿದಂಥವೇ. ಎಷ್ಟೋ ವೇಳೆ, ಅಪಾಯ, ಅಪಾಯತರ, ಅಪಾಯತಮ – ಎಂಬ ಈ ಮೂರು ನೆಲೆಗಳಲ್ಲೇ ನಮ್ಮ ಪ್ರಯಾಣ. ಯಾವ ಕ್ಷಣಕ್ಕೆ ಏನಾಗುತ್ತದೋ ಕಂಡವರು ಯಾರು? ನಾವು ಪ್ರಯಾಣ ಮಾಡುತ್ತಿರುವ ಈ ಬೆಟ್ಟದ ಇಕ್ಕಟ್ಟಿನ ದಾರಿ  ಥಟ್ಟನೆ ಕುಸಿದು, ನಾವು ಕೆಳಗಿನ ನದಿಗೆ ನೈವೇದ್ಯವಾಗಬಹುದು; ಅಥವಾ ಬೆಟ್ಟದ ಮೇಲಿನ ಯಾವುದೋ ತಲೆಕೆಟ್ಟ ಬಂಡೆಯೊಂದು ನಮ್ಮ ಮೇಲೆ ಉರುಳಬಹುದು; ಕಂಡಿಯನ್ನು ಹೊತ್ತವನು ಕಾಲು ಜಾರಿ ಕಣಿವೆಗೆ ಬೀಳಬಹುದು; ವೇಗವಾಗಿ ಹೋಗುವ ಬಸ್ಸೋ, ಕಾರೋ ರಸ್ತೆಯ ಅವ್ಯವಸ್ಥೆಯಿಂದಲೋ, ಚಾಲಕನ  ಅನವಧಾನದಿಂದಲೋ, ಸಹಸ್ರಾರು ಅಡಿ ಕೆಳಗಿನ ಪ್ರಪಾತಕ್ಕೆ ಧುಮುಕಬಹುದು. ಸಾಕಷ್ಟು ರಸ್ತೆಗಳನ್ನು ಮಾಡಿ, ಸೇತುವೆಗಳನ್ನು ನಿರ್ಮಿಸಿ,  ನಾಗರಿಕ ಅನುಕೂಲಗಳನ್ನು  ಕಲ್ಪಿಸಿದ ಈ ಕಾಲಗಳಲ್ಲೇ ಅಪಾಯದ ಪ್ರಮಾಣ ಹೀಗಿರುವಾಗ, ಇನ್ನು ಹಿಂದಿನ ಕಾಲಗಳಲ್ಲಿ, ಈ ದಾರಿಗಳನ್ನು ಕೇವಲ ಕಾಲುನಡಿಗೆಯಿಂದ ಕ್ರಮಿಸಬೇಕಾದವರ ಅವಸ್ಥೆ ಹೇಗೆ ಇದ್ದಿತೋ, ಬಲ್ಲವರು ಯಾರು?

ಚಹಾ ಸೇವನೆಯ ನಂತರ ನಮ್ಮ ಕಂಡಿಯವರ ಕಾಲುಗಳು ಚುರುಕಾದವು. ದಟ್ಟ ಹಸುರಿನ ಕಣಿವೆಯ ದಾರಿಯನ್ನು ಹಿಂದೆ ಹಾಕುತ್ತಾ ಗೌರೀಕುಂಡಕ್ಕೆ ಬರುವ ವೇಳೆಗೆ, ಗಂಟೆ ಮೂರೂವರೆಯಾಗಿತ್ತು. ಮತ್ತೊಮ್ಮೆ ಗೌರೀಕುಂಡದ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಆಸೆಯನ್ನು ತಡೆಯಲಾರದೆ ನೀರಿಗೆ ಇಳಿದದ್ದಾಯಿತು. ಆ ಕುಂಡದಲ್ಲಿ ಮಹಾರಾಷ್ಟ್ರದ ಕಡೆಯಿಂದ ಬಂದ ಹೆಂಗಸರೂ, ಮಕ್ಕಳೂ ನಿರಾತಂಕವಾಗಿ ಸ್ನಾನ ಮಾಡುತ್ತಿದ್ದರು. ಒಂದೆಡೆ ನಮ್ಮ ಸ್ನಾನವೂ ಮುಗಿದು, ಮೈಗೆ ಒಂದಷ್ಟು ಲವಲವಿಕೆಯನ್ನು ಪಡೆದುಕೊಂಡು, ಪಕ್ಕದಲ್ಲಿದ್ದ ಹೋಟೆಲಿನಲ್ಲಿ ಊಟವನ್ನು ಮುಗಿಸಲು ಹೊರಟೆವು. ಆಗಲೇ ಸಂಜೆಯಾದ್ದರಿಂದ ನಮ್ಮ ಪಾಲಿಗೆ ದೊರೆತ ಸಾಕಷ್ಟು ತಂಗಳಾದ ಅನ್ನ ಹಾಗೂ ಮೊಸರಿನ ಊಟವನ್ನು ಪೂರೈಸಿಕೊಂಡು, ಗೌರೀಕುಂಡದ ಗಲೀಜು ಗಲ್ಲಿಗಳಲ್ಲಿ, ಎರಡೂ ಕಡೆಯ ಹೋಟಲಂಗಡಿಗಳಲ್ಲಿ ಪೂರಿ ಕರಿಯುವ, ಬೋಂಡಾ ಬೇಯಿಸುವ, ಜಿಲೇಬಿ ತಯಾರಿಸುವ, ಒಗ್ಗರಣೆ ಹಾಕುವ, ಪಾಕಮಯ ರಭಸಗಳ ಹೊಗೆ-ವಾಸನೆಗಳನ್ನು ತೂರಿಕೊಂಡು, ನಮ್ಮ ಟ್ಯಾಕ್ಸಿಯವನು ಕಾದಿರುವುದಾಗಿ ಹೇಳಿದ ಸ್ಥಳವನ್ನು ಪ್ರಯಾಸದಿಂದ ಮತ್ತೆ ಹಚ್ಚಿದೆವು.

ಗೌರೀಕುಂಡದಿಂದ ರುದ್ರಪ್ರಯಾಗಕ್ಕೆ ನಾವು ಹೊರಟಾಗ, ಆಗಲೇ ಸಂಜೆಯ ಐದು ಗಂಟೆಯಾಗಿತ್ತು. ರುದ್ರಪ್ರಯಾಗಕ್ಕೆ ಏನಿಲ್ಲೆಂದರೂ ಮೂರು ಗಂಟೆಗಳ ದಾರಿ. ಗೌರೀಕುಂಡದ ಎತ್ತರದಿಂದ ಸುಮಾರು ಐದು ಸಾವಿರ ಅಡಿಗಳ ಇಳಿತದ ಪ್ರಯಾಣ. ಬೆಟ್ಟದಂಚಿನ ಹಾವು ದಾರಿಗಳಲ್ಲಿ, ಸಂಜೆಯ ಕೆಂಪು ಹಬ್ಬಿಕೊಂಡ ಪರ್ವತಾರಣ್ಯಗಳ ಮಧ್ಯೆ ಹೊರಟ ನಾವು ಸ್ವಲ್ಪ ಹೊತ್ತಿನಲ್ಲೇ ಕತ್ತಲೆಯ ಹುತ್ತವನ್ನು ಹೊಕ್ಕಂತಾಯಿತು. ನಮ್ಮ ವಾಹನದ ದೀಪಗಳ ಬಿಡುಗಣ್ಣ ಚಾಚು ಬೆಳಕಿನಲ್ಲಿ, ಮುಂದೆ ಹೋದಂತೆ ಹೋದಂತೆ ಅಷ್ಟಷ್ಟೆ ತೆರೆದುಕೊಳ್ಳುವ ರಸ್ತೆಯೊಂದೇ ನಮ್ಮ ಪಾಲಿನ ವಾಸ್ತವವಾಗುತ್ತ, ಯಾವ ಎತ್ತರದಲ್ಲಿ, ಯಾವ ಪರ್ವತದ ಕಮರಿಗಳ ಅಪಾಯದ ಅಂಚಿನಲ್ಲಿ ಹೋಗುತ್ತಿದ್ದೇವೆ ಎಂಬ ‘ಸತ್ಯ’ ಕತ್ತಲೆಯಲ್ಲಿ ಮುಚ್ಚಿಹೋಗಿತ್ತು. ಸುಮಾರು ಏಳೂವರೆಯ ಹೊತ್ತಿಗೆ, ನಾವು ಯಾವುದೋ ನದಿಯ ದಡದ ಮೇಲೆ, ಯಾವುದೋ ಬೆಟ್ಟದ ಕೆಳಗಿನ ರಸ್ತೆಯಲ್ಲಿ ಹೋಗುತಿದ್ದೇವೆ ಅನ್ನುವ ಸಂಗತಿ ಹಠಾತ್ತನೆ ಪ್ರತ್ಯಕ್ಷವಾದ ಕಾಡುಕಿಚ್ಚಿನ ಬೆಳಕಿನಲ್ಲಿ ಅರಿವಿಗೆ ಬರತೊಡಗಿತು. ನಾವು ಯಾವ ಬೆಟ್ಟದ ಅಂಚನ್ನು ಆಶ್ರಯಿಸಿ ಪ್ರಯಾಣ ಮಾಡುತ್ತಿದ್ದೆವೋ, ಆ ಬೆಟ್ಟದ ಮೈ ಕಿಚ್ಚಿನಿಂದ ಉರಿಯುತ್ತಿತ್ತು. ಹೊಗೆಯ ಘಾಟುವಾಸನೆ ನಮ್ಮ ಮೂಗಿಗೆ ಬಡಿಯುತ್ತಿತ್ತು; ಬೆಟ್ಟದ ಮೇಲಿನಿಂದ ಕೆಂಡಗಳು ಸಿಡಿದು ದಾರಿಯ ಮೇಲೆ ಉರುಳುತ್ತಿದ್ದವು; ಯಾವ ಕ್ಷಣಕ್ಕೆ ಮೇಲಿಂದ ಹತ್ತಿಕೊಂಡು ಉರಿಯುವ ಮರಗಳು, ದಾರಿಗಡ್ಡಲಾಗಿ ಅಥವಾ ನಮ್ಮ ವಾಹನದ ಮೇಲೆಯೇ ಬೀಳುತ್ತವೋ ಎಂಬ ಭಯ ನಮ್ಮನ್ನು ಕಾಡಿತು.  ಆ ಧಗಧಗ ಪಂಜುರಿವ ಬೆಟ್ಟದ ಬೆಂಕಿಯ ಬೆಳಕಿಗೆ, ನಮ್ಮ ದಾರಿಯ ಕೆಳಗೆ ಹರಿಯುತ್ತಿದ್ದ ಹೊಳೆ ಮತ್ತು ಆ ನದಿಯಾಚೆಗಿನ ಗುಡ್ಡದ ಸಾಲುಗಳು ದೃಗ್ಗೋಚರವಾಗುತ್ತಿದ್ದವು. ಹರಿಯುವ ನದೀಜಲದ ಮೇಲೆ ಆಗಾಗ, ಬೆಟ್ಟದೆತ್ತರಮೇಲಿನ ಕಿಚ್ಚು ಪ್ರತಿಫಲಿಸುತ್ತಿತ್ತು. ಕೆಲವೆಡೆ ದಾರಿಯ ಮೇಲೆ ಉರುಳುತ್ತಿದ್ದ ಕೆಂಡಗಳನ್ನು, ಮತ್ತೆ ಸಣ್ಣಗೆ ಹೊಗೆಯಾಡುತ್ತಾ ಬಿದ್ದಿದ್ದ ಕೊಂಬೆ – ರೆಂಬೆಗಳನ್ನು,  ರುದ್ರಪ್ರಯಾಗದ ಆಡಳಿತಕ್ಕೆ ಸೇರಿದ, ಅಥವಾ ಗ್ರಾಮ ಪಂಚಾಯತಿಗಳ ಕೆಲಸಗಾರರು, ಉದ್ದವಾದ ಕೋಲುಗಳಿಂದ ದಾರಿಬದಿಗೆ ಸರಿಸುತ್ತಾ ಸಂಚರಿಸುವ ವಾಹನಗಳಿಗೆ  ತೆರವು ಮಾಡುತ್ತಿದ್ದರು. ನಮ್ಮ ಟ್ಯಾಕ್ಸಿಯ ಚಾಲಕನಾದರೋ ಅದಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ವಾಹನವನ್ನು ನಡೆಸುತ್ತಿದ್ದನು.

ಜ್ವಾಲಮಾಲಾಮಯವಾದ ದಾರಿಯನ್ನು ಹಿಂದೆ ಹಾಕಿ, ರುದ್ರ ಪ್ರಯಾಗವನ್ನು ನಾವು ತಲುಪಿದಾಗ ರಾತ್ರಿ ಎಂಟೂವರೆ ಗಂಟೆ. ಜನನಿಬಿಡವಾದ ಪೇಟೆಯಲ್ಲೇ ಇದ್ದ ‘ಸರ್ಕಾರೀ ವಿಶ್ರಾಂತಿ ಗೃಹ’ದಲ್ಲಿ, ಸುದೈವದಿಂದೆಂಬಂತೆ, ನಮಗೆ ಉಳಿದುಕೊಳ್ಳಲು ಕೊಠಡಿ ದೊರೆಯಿತು. ಅಂದಿನ ಬೆಳಗಿನಿಂದ (೨೦.೫.೧೯೮೪) ಕೇದಾರದ, ಆ ಹನ್ನೆರಡು ಸಾವಿರ ಅಡಿಗಳೆತ್ತರದಿಂದ ಇಳಿದು, ರಾತ್ರಿಯ ವೇಳೆಗೆ ಹತ್ತು ಸಾವಿರ ಅಡಿಗಳಷ್ಟು ಕೆಳಗೆ ಬಂದು, ಶೆಖೆಯಿಂದ ಬೆವರುತ್ತಾ, ರುದ್ರ ಪ್ರಯಾಗದ ವಿಶ್ರಾಂತಿ ಗೃಹದ, ವಿದ್ಯುತ್ ಬೀಸಣಿಗೆಯ ಕೆಳಗೆ ಮೈಚಾಚಿದ್ದೆವು.