ಆಧುನಿಕ ಕಾವ್ಯ

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಮಲಯಾಳಂನಲ್ಲಿ ರಮ್ಯ ಸಂಪ್ರದಾಯ ರೂಪು ಪಡೆಯಿತು. ವ್ಯಕ್ತಿಯ ಅಂತರಂಗದ ಭಾವಗಳನ್ನು ಹೊರಹೊಮ್ಮಿಸುವ ಭಾವ ಕಾವ್ಯಗಳು, ಖಂಡ ಕಾವ್ಯಗಳು ಈ ಅವಧಿಯಲ್ಲಿ ಕಾಣಿಸಿಕೊಂಡವು. ಆಂಗ್ಲ ಭಾಷೆ ಹಾಗೂ ಸಾಹಿತ್ಯದೊಂದಿಗಿನ ಸಂಸರ್ಗವೇ ಇದಕ್ಕೆ ಮುಖ್ಯ ಕಾರಣ. ಸಿ.ಎಸ್. ಸುಬ್ರಹ್ಮಣ್ಯ ಪೋತ್ತಿಯವರ ಒಂದು ವಿಲಾಪ ಕಾವ್ಯವೇ ಕಾವ್ಯಗಳಲ್ಲಿ ಪ್ರಮುಖವಾದುದು. ೧೯೦೮ರಲ್ಲಿ ಕುಮಾರನಾಶಾನ್ ಪ್ರಕಟಿಸಿದ ‘ವೀಣಪೂವ್’ (ಪತಿತ ಪುಷ್ಪ) ಎಂಬ ಖಂಡಕಾವ್ಯವು ಮಲಯಾಳಂ ಕಾವ್ಯ ಕ್ಷೇತ್ರದಲ್ಲಿ ಆಧುನಿಕತೆಯ ಯುಗವನ್ನು ಉದ್ಘಾಟಿಸಿತು.

ಕುಮಾರನಾಶಾನ್ (೧೮೭೩-೧೯೨೪) ವಳ್ಳತ್ತೋಳ್ ನಾರಾಯಣ ಮೇನೋನ್  (೧೮೭೮-೧೯೫೮). ಉಳ್ಳೂರ್ ಎಸ್. ಪರಮೇಶ್ವರಯ್ಯರ್ (೧೮೭೭-೧೯೪೯) ಎಂಬೀ ಮೂವರು ಮಹಾಕವಿಗಳು ಇಪ್ಪತ್ತನೇ ಶತಮಾನದ ಮಲಯಾಳಂ ಸಾಹಿತ್ಯದ ಅತಿಕಾಯರು. ಈಳವ ಸಮುದಾಯದಲ್ಲಿ ಜನಿಸಿದ ಕುಮಾರನಾಶಾನ್ ಜಾತಿಯ ಕಾರಣದಿಂದಾಗಿ ಅಪಮಾನಗಳನ್ನು ಎದುರಿಸಿದರು. ಈ ಕಾರಣದಿಂದ ಸಾಮಾಜಿಕ ಪರಿವರ್ತನೆಯತ್ತ ತುಡಿಯುವ ಮನಸ್ಥಿತಿಯೊಂದನ್ನು ಇವರ ಕೃತಿಗಳಲ್ಲಿ ಕಾಣಬಹುದು. ವೀಣಪೂವ್‌ನ ನಂತರ ನಳಿನಿ, ಲೀಲ, ಶ್ರೀಬುದ್ಧಚರಿತಂ, ಪ್ರರೋದನಂ, ಚಿಂತಾವಿಷ್ಟಯಾಯ ಸೀತ, ದುರವಸ್ಥ, ಚಂಡಾಲ ಭಿಕ್ಷುಕಿ, ಕರುಣ ಮೊದಲಾದ ಕೃತಿಗಳನ್ನು ರಚಿಸಿದ. ನಂಬೂದಿರಿ ಹುಡುಗಿಗೂ ದಲಿತ ಹುಡುಗನಿಗೂ ನಡೆಯುವ ವಿವಾಹವನ್ನು ಚಿತ್ರಿಸುವ ‘ದುರವಸ್ಥ’ ಸಾಹಿತ್ಯ ಕ್ಷೇತ್ರದಲ್ಲೂ ಸಾಮಾಜಿಕ ಕ್ಷೇತ್ರದಲ್ಲೂ ಒಂದು ತೆರನ ಕೋಲಾಹಲವನ್ನೇ ಸೃಷ್ಟಿಸಿತ್ತು. ‘ಚಂಡಾಲ ಭಿಕ್ಷುಕಿ’ ಜಾತಿ ಸಂಪ್ರದಾಯಕ್ಕೆ ವಿರುದ್ದವಾಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತದೆ. ಕುಮಾರನಾಶಾನ್‌ನ ಕೃತಿಗಳು ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಮಾಜಿಕ ಕ್ಷೇತ್ರದಲ್ಲೂ ಒಂದೇ ತೆರನ ಕ್ರಾಂತಿಯನ್ನು ಹುಟ್ಟು ಹಾಕಿದುವು.

ಮಹಾಕವಿ ವಳ್ಳತ್ತೋಳ್ ೧೯೧೦ರಲ್ಲಿ ತನ್ನ ಕಿವುಡನ್ನು ವಸ್ತುವಾಗಿಸಿ ಬರೆದ ‘ಬಧಿರವಿಲಾಪಂ’ ಮಲಯಾಳಂನ ಅಂತರಂಗದ ಭಾವಗಳನ್ನು ಪ್ರಕಟಿಸುವ ಕಾವ್ಯಗಳಲ್ಲಿಯೇ ಗಮನಾರ್ಹವಾದುದು. ಸಂಸ್ಕೃತದಿಂದ ವಾಲ್ಮೀಕಿ ರಾಮಾಯಣವನ್ನು ಹಾಗೂ ಋಗ್ವೇದವನ್ನು ಅವರು ಮಲಯಾಳಂಗೆ ಅನುವಾದಿಸಿದರು. ಸಾಹಿತ್ಯ ಮಂಜರಿಗಳಲ್ಲಿ ಸಂಕಲಿಸಿದ ಅವರ ಭಾವಗೀತೆಗಳು ಮಲಯಾಳಂ ಕಾವ್ಯ ಕ್ಷೇತ್ರದ ಭಾವಗೀತೆಗಳೆನಿಸಿವೆ. ಮಲಯಾಳಂನಲ್ಲಿ ದೇಸೀ ಪ್ರಜ್ಞೆಯನ್ನು ಕಾವ್ಯದ ಮೂಲಕ ಮೊಳಗಿಸಿದ ಮೊದಲ ಕವಿ. ಅವರ ‘ಎಂಡೆ ಗುರುನಾಥನ್’ (ನನ್ನ ಗುರುದೇವ) ಎಂಬ ಪ್ರಸಿದ್ಧ ಕೃತಿ ಗಾಂಧೀಜಿಯ ಪಾದಗಳಿಗೆ ಸಮರ್ಪಿಸಿದ ಕೀರ್ತನಾ ರೂಪದ ಕಾವ್ಯ. ದೇಶಾಭಿಮಾನವನ್ನು ಪ್ರಚೋದಿಸುವ ಇನ್ನು ಅನೇಕ ಕಾವ್ಯಗಳನ್ನು ಇವರು ರಚಿಸಿದ್ದಾರೆ. ಬದುಕಿನ ಅಂತಿಮ ಘಟ್ಟದಲ್ಲಿ ಅವರಿಗೆ ಸೋವಿಯೆಟ್ ಯೂನಿಯನ್ ಸಂದರ್ಶಿಸಲು ಒಂದು ಅವಕಾಶ ಲಭ್ಯವಾಗಿತ್ತು. ಆ ತರುವಾಯ ಬರೆದ ಕಾವ್ಯಗಳಲ್ಲಿ ಈ ರಾಷ್ಟ್ರದ ಕುರಿತಾಗಿರುವ ಗೌರವ ಪ್ರಕಟಿಸಿದ್ದನ್ನು ಕಾಣಬಹುದು. ವಳ್ಳತ್ತೋಳ್‌ರಂತೆ ಜನಪರ ಆಶಯಗಳೊಡನೆ ಬೆರೆತ ಕವಿ ಮಲಯಾಳಂನಲ್ಲಿ ಇನ್ನೊಬ್ಬರಿಲ್ಲ.

ಮಹಾಕವಿ ಉಳ್ಳೂರ್ ಪುರಾಣಕತೆಗಳನ್ನು ಹಾಗೂ ಚಾರಿತ್ರಿಕ ಸಂಗತಿಗಳನ್ನು ಪ್ರಮುಖ ಆಶಯವಾಗಿರಿಸಿ ಕಾವ್ಯ ರಚಿಸಿದರು. ಅವರ ‘ಕರ್ಣ ಭೂಷಣಂ’ ಮತ್ತು ‘ಪಿಂಗಳ’ ಕೃತಿಗಳು ಅವು ಹೇಳುವ ನೀತಿ ಹಾಗೂ ಸೌಂದರ್ಯಕ್ಕೆ ಹೆಸರಾಗಿವೆ. ಪ್ರೇಮ ಸಂಗೀತವೇ ಮೊದಲಾದ ಇತರ ಲಘು ಕಾವ್ಯಗಳೂ ಕೂಡಾ ಇದೇ ಕಾರಣಕ್ಕಾಗಿ ಪ್ರಸಿದ್ದವಾಗಿವೆ. ಕಾವ್ಯಗಳನ್ನಲ್ಲದೆ ಅನೇಕ ಗದ್ಯ ಕೃತಿಗಳನ್ನೂ ಉಳ್ಳೂರ್ ಬರೆದಿದ್ದಾರೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದುದು ಐದು ಸಂಪುಟಗಳಲ್ಲಿ ಪ್ರಕಟವಾದ ಕೇರಳ ಸಾಹಿತ್ಯ ಚರಿತ್ರೆ.

ಈ ಮೂವರು ಮಲಯಾಳಂ ಕವಿಗಳನ್ನು ಹೊರತುಪಡಿಸಿದರೂ ಇತರ ಅನೇಕ ಕವಿಗಳು ಮಲಯಾಳಂ ಕಾವ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ನಾಲಪ್ಪಾಡ್ ನಾರಾಯಣ ಮೇನೋನ್, ಕುಟ್ಟಿಪುರತ್ತ್ ಕೇಶವನ್ ನಾಯರ್, ಪಳ್ಳತ್ತ್ ರಾಮ, ಕೆ.ಎಂ ಪಣಿಕ್ಕರ್, ಇಡಪ್ಪಳ್ಳಿ ರಾಘವನ್ ಪಿಳ್ಳೆ, ಚಂಗಂಬುಳ ಕೃಷ್ಣನ್ ಪಿಳ್ಳೆ, ಬಾಲಾಮಣಿಯಮ್ಮ, ವೆಣ್ಣಿಕುಳಂ ಗೋಪಾಲಕುರುಪ್ಪ್, ಜಿ. ಶಂಕರ ಕುರುಪ್ಪ್, ವೈಲೋಪ್ಪಳ್ಳಿ ಶ್ರೀಧರ ಮೇನೋನ್, ಪಿ. ಕುಂಞಾರಾಮನ್ ನಾಯರ್ ಮೊದಲಾದವರು ಅಂಥವರಲ್ಲಿ ಕೆಲವರು. ಮೊತ್ತ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರನಾದ ಜಿ. ಶಂಕರಕುರುಪ್ಪ್ ರಾಷ್ಟ್ರಮಟ್ಟದಲ್ಲಿ ಗಮನಾರ್ಹರೆನಿಸಿದರು. ಮಲಯಾಳಂ ಕಾವ್ಯ ಕ್ಷೇತ್ರದಲ್ಲಿ ಸಂಕೇತಗಳ ಬಳಕೆಯ ಮೂಲಕ ಸಮರ್ಥರಾದ ಮೊದಲ ಕವಿ ಇವರು. ಇತ್ತೀಚಿನ ವರ್ಷಗಳಲ್ಲಿ ಮಲಯಾಳಂ ಕವಿತೆಗಳಲ್ಲಿ ಸಾಕಷ್ಟು ವೈವಿಧ್ಯಮಯವಾದ ಪ್ರಯೋಗಗಳು ನಡೆದಿವೆ. ಪ್ರತಿಪಾದಿಸುವ ಹೊಸ ವಿಷಯಗಳಿಗೆ ಅನುಗುಣವಾಗಿ ಬರವಣಿಗೆಯ ಶೈಲಿ ಬಂಧಗಳನ್ನು ಮಲಯಾಳಂ ಕವಿಗಳು ರೂಪಿಸಿಕೊಳ್ಳುತ್ತಾ ಸಾಗಿ ಬಂದಿದ್ದಾರೆ.

ಗದ್ಯ ಸಾಹಿತ್ಯ

ಮಲಯಾಳಂನ ಗದ್ಯ ಸಾಹಿತ್ಯ ವೈವಿಧ್ಯಮಯವಾಗಿ ಬೆಳೆದು ಬಂದಿದೆ. ಈ ಕ್ಷೇತ್ರದಲ್ಲಿ ಎಸ್.ಕೆ. ಪೊಟ್ಟಕ್ಕಾಡ್, ತಗಳಿ ಶಿವಶಂಕರಪಿಳ್ಳೆ, ಎಂ.ಟಿ. ವಾಸುದೇವನ್ ನಾಯರ್ ಮೊದಲಾದವರಿಗೆ ಜ್ಞಾನಪೀಠ ಪ್ರಶಸ್ತಿಯೂ ಲಭಿಸಿದೆ. ೧೯ನೆಯ ಶತಮಾನದಲ್ಲಿ ಆಂಗ್ಲ ಸಾಹಿತ್ಯದ ಪ್ರಭಾವಲಯದಲ್ಲಿ ಅನೇಕ ಹೊಸ ಪಂಥಗಳು, ಪ್ರಕಾರಗಳು ಮಲಯಾಳಂ ಗದ್ಯ ಪ್ರಕಾರದಲ್ಲಿ ಕಾಣಿಸಿಕೊಂಡಿವೆ. ೧೮೮೭ರಲ್ಲಿ ಟಿ.ಎಂ. ಅಪ್ಪುನೆಡುಙಾಡಿಯವರು ಬರೆದು ಪ್ರಕಟಿಸಿದ ‘ಕುಂದಲತ’ ಮಲಯಾಳಂನ ಮೊತ್ತ ಮೊದಲ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೧೮೮೯ರಲ್ಲಿ ಚಂದುಮೇನೋನ್ ಪ್ರಕಟಿಸಿದ ‘ಇಂದುಲೇಖಾ’ ನಾಯರ್ ಸಮುದಾಯದಲ್ಲಿ ಪ್ರಚಲಿತವಿರುವ ಮರುಮಕ್ಕತ್ತಾಯದ ಹಿನ್ನೆಲೆಯಲ್ಲಿ ರೂಪುಗೊಂಡ ಮೊದಲ ಸಾಮಾಜಿಕ ಕಾದಂಬರಿ. ಹತ್ತೊಂಬತ್ತನೆಯ ಶತಮಾನದ ಕೊನೆಯ ವೇಳೆಗೆ ಸಾಮಾಜಿಕ ಕಾದಂಬರಿಗಳನ್ನು ಬರೆದವರಲ್ಲಿ ಪ್ರಮುಖರಾದವರು ಪೊತ್ತೇರಿ ಕುಞಂಬು (ಸರಸ್ವತೀ ವಿಜಯಂ-೧೮೯೨). ಕೞಕ್ಕೆಪ್ಪಾಟ್ ರಾಮನ್ ಕುಟ್ಟಿಮೇನೋನ್ (ಪರಙೋಡಿ ಪರಿಣಯಂ – ೧೮೯೨) ಜೋಸೆಫ್ ಮುಳಿಯಿಲ್ (ಸುಕುಮಾರಿ-೧೮೯೭). ಕನ್ನಡ ಸಾಹಿತ್ಯವನ್ನು ಗಮನಿಸಿದರೆ ಕಾದಂಬರಿಗಳ ಬರವಣಿಗೆಗೆ ಪ್ರಮುಖ ಚಾಲನೆ ದೊರೆತುದು ೨೦ನೆಯ ಶತಮಾನದ ಆದಿಭಾಗದಿಂದ. ೧೮೯೯ರಲ್ಲಿ ಪ್ರಕಟವಾದ ಗುಲ್ವಾಡಿ ವೆಂಕಟ ರಾಯರ ಇಂದಿರಾಬಾಯಿ ಕನ್ನಡದ ಮೊತ್ತ ಮೊದಲ ಸಾಮಾಜಿಕ ಕಾದಂಬರಿಯಾಗಿದೆ. ೧೮೯೨ರಲ್ಲಿ ಪ್ರಕಟವಾದ ಲಕ್ಷ್ಮಣ ಭೀಮರಾವ್ ಗದಗಕರ ಅವರ ‘ಸೂರ್ಯಕಾಂತ’ ಕಾದಂಬರಿಯ ಮಾದರಿಯಲ್ಲಿದ್ದರೂ ಚಾರಿತ್ರಿಕ ಹಿನ್ನೆಲೆಯಿಂದ ನಿರೂಪಿಸಿದ್ದರಿಂದ ಅದನ್ನು ಸಾಮಾಜಿಕ ಕಾದಂಬರಿ ಎಂದು ಪರಿಗಣಿಸಿರಲಿಲ್ಲ.

ಸಿ.ವಿ. ರಾಮನ್ ಪಿಳ್ಳೆ (೧೮೫೮-೧೯೨೨) ಬರೆದ ಮಾರ್ತಾಂಡ ವರ್ಮ, ಧರ್ಮರಾಜ, ರಾಮರಾಜಾಬಹದೂರ್ ಮೊದಲಾದ ಐತಿಹಾಸಿಕ ಕಾದಂಬರಿಗಳು ಮಹತ್ವದ್ದೆನಿಸಿವೆ. ಅಪ್ಪನ್ ತಂಬುರಾನ್, ಕಪ್ಪನ ಕೃಷ್ಣನ್ ಮೇನೋನ್, ಸರ್ದಾರ್ ಕೆ.ಎಂ. ಪಣಿಕ್ಕರ್ ಮೊದಲಾದವರೂ ಐತಿಹಾಸಿಕ ಕಾದಂಬರಿಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಆ ನಂತರದ ದಿನಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಮುಖ್ಯವಾಗಿ ಕೇಂದ್ರೀಕರಿಸಿಕೊಂಡೇ ಕಾದಂಬರಿಗಳನ್ನು ಬರೆಯಲಾಗಿದೆ. ತಗಳಿ ಶಿವಶಂಕರಪಿಳ್ಳೆ, ಕೇಶವದೇವ್, ವೈಕಂ ಮುಹಮ್ಮದ್ ಬಷೀರ್, ಪಿ.ಸಿ. ಕುಟ್ಟಿಕೃಷ್ಣನ್, ಚೆರುಕಾಡ್, ಎಂ.ಟಿ. ವಾಸುದೇವನ್ ನಾಯರ್ ಮೊದಲಾದವರು ಸಾಮಾಜಿಕವಾಗಿ ಕೆಳಸ್ತರದಲ್ಲಿರುವ ತೋಟಿ ಜನರು, ರಿಕ್ಷಾವಾಲರು, ಕೃಷಿ  ಕಾರ್ಮಿಕರು, ಫ್ಯಾಕ್ಟರಿ ಕಾರ್ಮಿಕರು ಮೊದಲಾದ ಜನವರ್ಗದವರನ್ನು ಕಥಾ ಪಾತ್ರಗಳನ್ನಾಗಿಸಿ ಕಾದಂಬರಿಗಳನ್ನು ಬರೆದಿದ್ದಾರೆ. ಈ ಬರೆಹಗಾರರಲ್ಲಿ ಹಲವರು ಸಣ್ಣ ಕಥಾ ಸಾಹಿತ್ಯಕ್ಕೂ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಆ್ಯಂಟನ್ ಚೆಕಾವ್, ಮೊಪಾಸಾಂಗ್, ಮಾಕ್ಸಿಂ ಗೋರ್ಕಿ ಮೊದಲಾದ ಪಾಶ್ಚಾತ್ಯ ಕತೆಗಾರರ ಪ್ರಭಾವವನ್ನು ರೂಢಿಸಿಕೊಂಡೇ ಮಲಯಾಳಂನ ಕತೆಗಾರರು ಬೆಳೆದಿದ್ದಾರೆ. ಮಲಯಾಳಂ ನಾಟಕ ಸಾಹಿತ್ಯದ ಹಿನ್ನೆಲೆಯಲ್ಲೂ ಆಂಗ್ಲ ನಾಟಕ ಸಾಹಿತ್ಯದ ಪ್ರಭಾವನ್ನು ನಿಚ್ಚಳವಾಗಿ ಗುರುತಿಸಬಹುದಾಗಿದೆ.

ಕನ್ನಡ ನಾಟಕ ರಚನೆಯ ಸಂದರ್ಭದಲ್ಲಿ ಕನ್ನಡ ಚಾರಿತ್ರಿಕ ಘಟನೆಗಳು, ಜಾನಪದ ಕಲಾ ಪ್ರಕಾರಗಳು ಸತ್ವ ನೀಡಿದಂತೆ ಮಲಯಾಳಂ ಸಂದರ್ಭದಲ್ಲಿ ದೇಸೀ ವಿಷಯಗಳು ನಾಟಕ ರಚನೆಗೆ ಪ್ರೇರಕ ಶಕ್ತಿಯಾಗಿ ರೂಪು ನೀಡಿಲ್ಲ. ಅವು ಹೆಚ್ಚು ಸಂಸ್ಕೃತ ನಾಟಕಗಳ ಕಡೆಗೆ ಮುಖ ಮಾಡಿದ್ದುವು. ಎಸ್. ಕೃಷ್ಣನ್ ಪಿಳ್ಳೆಯವರ ನಾಟಕಗಳು ಮಲಯಾಳಂ ನಾಟಕದ ಆಧುನಿಕತೆಗೆ ನಾಂದಿ ಹಾಡಿದವು. ಅವರ ನಾಟಕಗಳು ಸಾಮಾಜಿಕ ಸಮಸ್ಯೆಗಳ ಜೊತೆಗೆ ಕಥಾ ಪಾತ್ರಗಳ ಮಾನಸಿಕ ಸಂಘರ್ಷವನ್ನು ಚಿತ್ರಿಸುತ್ತದೆ.

ಪಾಶ್ಚಾತ್ಯ ಸಾಹಿತ್ಯದ ಪ್ರಭಾವದಲ್ಲಿ ಬೆಳವಣಿಗೆ ಕಂಡ ಇನ್ನೊಂದು ಸಾಹಿತ್ಯ ಪ್ರಕಾರ ವಿಮರ್ಶೆ. ಎ.ಆರ್. ರಾಜರಾಜವರ್ಮ, ಸಾಹಿತ್ಯ ಪಂಚಾನನ ಪಿ.ಕೆ. ನಾರಾಯಣ ಪಿಳ್ಳೆ, ಸ್ವದೇಶಾಭಿಮಾನಿ ರಾಮಕೃಷ್ಣ ಪಿಳ್ಳೆ ಮೊದಲಾದವರು ಮಲಯಾಳಂ ವಿಮರ್ಶೆಗೆ ನಾಂದಿ ಹಾಡಿದವರಲ್ಲಿ ಮೊದಲಿಗರು. ೧೯೧೨ರಲ್ಲಿ ರಾಮಕೃಷ್ಣ ಪಿಳ್ಳೆ ಬರೆದ ‘ಮಾರ್ಕ್ಸ್‌ನ ಜೀವನ ಚರಿತಂ’ ಭಾರತೀಯ ಭಾಷೆಗಳಲ್ಲಿ ಬಂದ ಕಾರ್ಲ್ ಮಾರ್ಕ್ಸ್‌ನ ಕುರಿತ ಮೊದಲ ಗ್ರಂಥಗಳಲ್ಲಿ ಒಂದು. ಮಲಯಾಳಂನಲ್ಲಿ ವಿಮರ್ಶೆ ಸಾಹಿತ್ಯವನ್ನು ಬೆಳೆಸಿದವರಲ್ಲಿ ಕೇಸರಿ ಬಾಲಕೃಷ್ಣ ಪಿಳ್ಳೆ, ಎಂ.ಪಿ. ಪೋಳ್, ಜೋಸೆಫ್ ಮುಂಡಶ್ಯೇರಿ, ಕುಟ್ಟಿಕೃಷ್ಣನ್ ಮಾರಾರ್ ಮೊದಲಾದವರು. ವೈಚಾರಿಕ ಸಾಹಿತ್ಯ, ಜೀವನ ಚರಿತ್ರೆ, ಪ್ರವಾಸ ಸಾಹಿತ್ಯ, ಸಾಹಿತ್ಯ ಚರಿತ್ರೆ ಮೊದಲಾದ ಪ್ರಕಾರಗಳೂ ವ್ಯಾಪಕವಾಗಿ ಬೆಳೆದಿದೆ.

ಕೇರಳ ಮತ್ತು ಸಂಸ್ಕೃತ ಸಾಹಿತ್ಯ

ಸಂಸ್ಕೃತ ಭಾಷೆಗೂ ಕೇರಳದ ಕೊಡುಗೆ ಅಪಾರವಾಗಿದೆ. ಕನ್ನಡಕ್ಕೆ ಹೋಲಿಸಿದರೆ ಮಲಯಾಳಂಗೆ ಸಂಸ್ಕೃತದ ಪ್ರಭಾವ ಅಧಿಕವೆಂದೇ ಹೇಳಬಹುದು. ಸಂಸ್ಕೃತ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇರಳದಲ್ಲಿ ಪ್ರಾಚೀನ ಕಾಲದಿಂದಲೇ ಅಸ್ತಿತ್ವದಲ್ಲಿದ್ದ ಸಂಸ್ಕೃತ ಪಾಠ ಶಾಲೆಗಳು, ಸಭಾ ಮಠಗಳು, ವೈದಿಕ ಕೇಂದ್ರಗಳು ನೀಡಿದ ಕೊಡುಗೆಗಳು ಗಮನಾರ್ಹವಾಗಿವೆ. ನಂಬೂದಿರಿಗಳು, ಅಂಬಲವಾಸಿ ಜನವರ್ಗದವರು – ಅಂದರೆ ದೇವಾಲಯದಲ್ಲಿ ನೆಲೆಸಿರುವ ಜನ ಸಮುದಾಯದವರು – ಈ ನೆಲೆಯಲ್ಲಿ ಶ್ರಮವಹಿಸಿದ್ದಾರೆ. ಸಂಸ್ಕೃತಕ್ಕಾಗಿ ಇತ್ತೀಚೆಗೆ ಆರಂಭಗೊಂಡ ಸಂಸ್ಕೃತ ವಿಶ್ವವಿದ್ಯಾಲಯವೂ ಕಾಲಡಿಯಲ್ಲಿದೆ. ಕಾವ್ಯ, ನಾಟಕ, ದರ್ಶನ ಗ್ರಂಥಗಳು, ಮತೀಯ ಗ್ರಂಥಗಳು, ಶಿಲ್ಪಕಲೆ, ಜ್ಯೋತಿಶ್ಯಾಸ್ತ್ರ ಮೊದಲಾದ ಪ್ರಕಾರಗಳಲ್ಲಿ ಅನೇಕ ಸಂಸ್ಕೃತ ಗ್ರಂಥಗಳು ಕೇರಳದಲ್ಲಿ ರಚನೆಯಾಗಿವೆ.

ಕೊಲ್ಲವರ್ಷ ಆರಂಭವಾಗುವುದಕ್ಕೆ ಪೂರ್ವದಲ್ಲಿಯೇ ಪ್ರತಿಭಾವಂತರಾದ ಸಂಸ್ಕೃತ ವಿದ್ವಾಂಸರು ಕೇರಳದಲ್ಲಿ ಜೀವಿಸಿದ್ದರು. ದಂಡಿ (ಕ್ರಿ.ಶ. ೮ನೇ ಶತಮಾನ) ತನ್ನ ಆವಂತಿ ಸುಂದರೀ ಕತೆಯಲ್ಲಿ ಮಾತೃದತ್ತನ್ ಮತ್ತು ಭವರಾತನ್ ಎಂಬ ಇಬ್ಬರು ಕೇರಳೀಯ ಸಂಸ್ಕೃತ ವಿದ್ವಾಂಸರ ಕುರಿತು ಹೇಳಿದ್ದಾನೆ. ಜ್ಯೋತಿಶ್ಯಾಸ್ತ್ರ ವಿದ್ವಾಂಸನಾದ ವರರುಚಿ  ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ಕೇರಳದಲ್ಲಿ ಜೀವಿಸಿದ್ದ ಎಂದು ಹೇಳಲಾಗುತ್ತದೆ. ಆತ  ‘ವರರುಚಿವಾಕ್ಯಙಳ್’ ಎಂಬ ಹೆಸರಲ್ಲಿ ೨೪೮ ಚಂದ್ರವಾಕ್ಯಗಳನ್ನು ರಚಿಸಿದ. ಸಂಖ್ಯಾ ಸೂಚಕವಾದ ‘ಕಡಪಯಾದಿ’ಯನ್ನು ರೂಪಿಸಿದ್ದೂ ಆತನೇ. ಇನ್ನೊಬ್ಬ ವರರುಚಿಯೂ ಇದ್ದನೆಂದು ಹೇಳಲಾಗುತ್ತದೆ. ಕೇರಳ ದ್ವಾದಶಭವವಾಕ್ಯಾನಿ, ವರರುಚಿಕ ಎಂಬೀ ಎರಡು ಜ್ಯೋತಿಶ್ಯಾಸ್ತ್ರ ಗ್ರಂಥಗಳನ್ನು ಎರಡನೆಯ ವರರುಚಿ ಬರೆದನೆಂದು ತಿಳಿದು ಬರುತ್ತದೆ. ಮಹಾ ಭಾಸ್ಕರೀಯಂ, ಲಘು ಭಾಸ್ಕರೀಯಂ ಮೊದಲಾದವುಗಳ ಕರ್ತೃವಾದ ಭಾಸ್ಕರನೂ ಕೇರಳದವನೇ ಹೌದು. ಆರ್ಯಭಟ ಸಿದ್ಧಾಂತಕ್ಕಿಂತಲೂ ಉತ್ತಮವೆಂದು ಪರಿಗಣಿಸಲಾಗುವ ಪರಹಿತ ಸಿದ್ಧಾಂತವನ್ನು ಜ್ಯೋತಿಶ್ಯಾಸ್ತ್ರದಲ್ಲಿ ಅಳವಡಿಸಿದ ಹರಿದತ್ತನ್ ಕ್ರಿ.ಶ. ೭ನೆಯ ಶತಮಾನದಲ್ಲಿ ಕೇರಳದಲ್ಲಿ ಜೀವಿಸಿದ್ದ. ಆತ ಬರೆದ ‘ಗ್ರಹಚಾರ ನಿಬಂಧನ’ ಎಂಬ ಕೃತಿ ಪರಹಿತ ಸಿದ್ಧಾಂತವನ್ನು ವಿವರಿಸುತ್ತದೆ. ೯ನೆಯ ಶತಮಾನದಲ್ಲಿ ಜೀವಿಸಿದ್ದ ಗೋವಿಂದಸ್ವಾಮಿ ಎಂಬ ಜ್ಯೋತಿಶ್ಯಾಸ್ತ್ರಜ್ಞನು ಮಹಾ ಭಾಸ್ಕರೀಯಕ್ಕೆ ಒಂದು ಭಾಷ್ಯವನ್ನು ಬರೆದಿದ್ದಾನೆ. ಗೋವಿಂದ ಸ್ವಾಮಿಯ ಶಿಷ್ಯನಾದ ಶಂಕರನಾರಾಯಣನ್ ಮಹೋದಯ ಪುರದ ನಕ್ಷತ್ರ ಗೃಹದ ಒಡೆಯನೂ ಆಗಿದ್ದ. ಲಘು ಭಾಸ್ಕರೀಯಕ್ಕೆ ಶಂಕರನಾರಾಯಣನ್ ಕ್ರಿ.ಶ. ೮೬೯ರಲ್ಲಿ ಶಂಕರ ನಾರಾಯಣೀಯ ಎಂಬೊಂದು ವ್ಯಾಖ್ಯಾನವನ್ನು ರಚಿಸಿದ್ದಾನೆ. ಶಬರಭಾಷ್ಯಕ್ಕೆ ಎರಡು ವ್ಯಾಖ್ಯಾನಗಳನ್ನು ರಚಿಸಿದ ಪ್ರಭಾಕರ ಎಂಬ ಮೀಮಾಂಸಕನೂ ಕೇರಳದವನು.

ಭಾರತೀಯ ತತ್ವಶಾಸ್ತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ವ್ಯಕ್ತಿ ಶಂಕರಾಚಾರ್ಯ  (೭೮೮-೮೨೦). ಬ್ರಹ್ಮಸೂತ್ರಕ್ಕೆ, ಭಗವದ್ಗೀತೆಗೆ, ಉಪನಿಷತ್ತಿಗೆ ಭಾಷ್ಯವನ್ನು ಬರೆದದ್ದಲ್ಲದೆ ವಿವೇಕ ಚೂಡಾಮಣಿ, ಉಪದೇಶ ಸಹಸ್ರಿ, ಆತ್ಮಬೋಧಂ, ಮೋಹಮುದ್ಗರಂ, ಶಿವಾನಂದ ಲಹರಿ, ಸೌಂದರ್ಯ ಲಹರಿ ಮೊದಲಾದ ಅನೇಕ ಕೃತಿಗಳನ್ನು ಶಂಕರಾಚಾರ್ಯರು ಬರೆದಿದ್ದಾರೆ. ಭಾರತದಲ್ಲಿ ಹುಟ್ಟಿದ ದಾರ್ಶನಿಕರಲ್ಲಿ ಶಂಕರಾಚಾರ್ಯ ಅದ್ವಿತೀಯ. ಅವರ ಅದ್ವೈತ ಸಿದ್ಧಾಂತ ವಿಶ್ವದ ದಾರ್ಶನಿಕ ಚಿಂತನೆಗೆ ಭಾರತ ನೀಡಿದ ಅಮೂಲ್ಯ ಕೊಡುಗೆ ಎಂದೇ ಭಾವಿಸಲಾಗಿದೆ.

ಕ್ರಿ.ಶ. ೯ನೆಯ ಶತಮಾನದಲ್ಲಿ ಸಂಸ್ಕೃತ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ ವಿದ್ವಾಂಸರು ಕೇರಳದಲ್ಲಿ ಜೀವಿಸಿದ್ದರು. ಶಂಕರಾಚಾರ್ಯರ ಸಮಕಾಲೀನನಾದ ಶಕ್ತಿಭದ್ರನ್ ರಚಿಸಿದ ‘ಆಶ್ಚರ್ಯ ಚೂಡಾಮಣಿ’ ಶ್ರೇಷ್ಠವಾದ ಸಂಸ್ಕೃತ ನಾಟಕಗಳಲ್ಲಿ ಒಂದೆನಿಸಿದೆ. ‘ಸುಭದ್ರಾ ಧನಂಜಯಂ’, ‘ತಪತೀ ಸಂವರಣಂ’ ಮೊದಲಾದ ನಾಟಕಗಳನ್ನು ಬರೆದ ಕುಲಶೇಖರನ್, ‘ಮುಕುಂದಮಾಲ’ವನ್ನು ಬರೆದ ಕುಲಶೇಖರ ಆಳ್ವಾರ್, ಮೊದಲಾದ ಪ್ರಮುಖರನ್ನು ಹೆಸರಿಸಬಹುದು. ‘ಯುಧಿಷ್ಠರ ವಿಜಯ’ದ ಕರ್ತೃವಾದ ವಾಸುದೇವ ಭಟ್ಟಾತ್ತಿರಿ, ಕ್ರಮದೀಪಿಕ, ಆಟ ಪ್ರಕಾರ ಮೊದಲಾದವುಗಳನ್ನು ಬರೆದ ತೋಲ ಮೊದಲಾದವರು ಕುಲಶೇಖರನ ಒಡನಾಡಿಗಳಾಗಿದ್ದವರು. ಕುಲಶೇಖರನನ್ನು ಕೀರ್ತಿಸುವ  ‘ಮಹೋದಯಪುರೇಶ ಚರಿತಂ’ ತೋಲನು ಬರೆದ ಮಹಾಕಾವ್ಯ.

ಕೇರಳದಲ್ಲಿ ರಚನೆಗೊಂಡ ಮಹಾಕಾವ್ಯಗಳೂ ಇನ್ನೂ ಅನೇಕವಿವೆ. ಕ್ರಿ.ಶ. ೧೧೦೦ರಲ್ಲಿ ಅತುಲನ್ ಎಂಬ ಕವಿ ಬರೆದ ‘ಮೂಷಕವಂಶಂ’ ಮಹಾಕಾವ್ಯವು ಮೂಷಕ ರಾಜವಂಶದ ಚರಿತ್ರೆಯನ್ನು ತಿಳಿಸುತ್ತದೆ. ಲಕ್ಷ್ಮಿದಾಸನ ‘ಶುಕ ಸಂದೇಶಂ’, ದಾಮೋದರನ ‘ಶಿವ ವಿಲಾಸಂ’ ಶಂಕರನ ‘ಕೃಷಿ ವಿಜಯಂ’ ಸುಕುಮಾರನ ‘ಶ್ರೀಕೃಷ್ಣ ವಿಲಾಸಂ’ ಮೊದಲಾದವು ಕೆಲವು ಪ್ರಸಿದ್ಧ ಕೃತಿಗಳು. ವೇನ್ನಾಡು ರಾಜನಾದ ರವಿವರ್ಮ ಕುಲಶೇಖರನ್ (೧೨೯೯-೧೩೧೪) ‘ಪ್ರದ್ಯುಮ್ನಾಭ್ಯುದಯಂ’ ಎಂಬ ನಾಟಕವನ್ನು ಬರೆದಿದ್ದ. ಅಲಂಕಾರ ಶಾಸ್ತ್ರಗಳಿಗೆ  ಭಾಷ್ಯ ವನ್ನು ಬರೆದ ಸಮುದ್ರಬಂಧನ್ ರವಿವರ್ಮನ ಆಸ್ಥಾನದಲ್ಲಿದ್ದ. ೧೪ನೆಯ ಶತಮಾನದಲ್ಲಿ ರಚಿಸಿದ ‘ಲೀಲಾತಿಲಕಂ’ ಗ್ರಂಥವು ಮಣಿಪ್ರವಾಳವನ್ನು ಕುರಿತು ಸಂಸ್ಕೃತದಲ್ಲಿ ಬರೆದ ಒಂದು ಲಕ್ಷಣ ಗ್ರಂಥ.

ಕೋಝಿಕೋಡಿನ ಸಾಮೂದಿರಿಗಳು ಹಾಗೂ ಇತರ ರಾಜರುಗಳು ಸಂಸ್ಕೃತವನ್ನು ಪ್ರೋತ್ಸಾಹ ಪದಿನೆಟ್ಟರ ಕವಿಕಳ್ (ಹದಿನೆಂಟುವರೆ ಕವಿಗಳು) ಸಾಮೂದಿರಿಯ ಆಸ್ಥಾನದಲ್ಲಿದ್ದರು. ಮಲ್ಲಿಕಾಮಾರುತದ ಕರ್ತೃವಾದ ಉದ್ದಂಡಶಾಸ್ತ್ರಿಗಳು, ವಸುಮತೀಮಾನ ವಿಕ್ರಮವನ್ನು ಬರೆದ ಕಾಕಶ್ಯೇರಿ ಭಟ್ಟತ್ತಿರಿ, ತಂತ್ರ ಸಮುಚ್ಛಯವನ್ನು ರಚಿಸಿದ ಚೇನ್ನಾಸ್ ನಾರಾಯಣನ್ ನಂಬೂದಿರಿ ಮೊದಲಾದವರು ಪದಿನೆಟ್ಟರ ಕವಿಗಳಲ್ಲಿ  ಒಳಗೊಳ್ಳುತ್ತಾರೆ. ಮೀಮಾಂಸಕರಾದ ಪಯ್ಯೂರ್ ಪಟ್ಟೇರಿಗಳು ಹದಿನಾಲ್ಕು, ಹದಿನೈದನೆಯ ಶತಮಾನದಲ್ಲಿ ಜೀವಿಸಿದ್ದರು. ಅವರಲ್ಲಿ ಪ್ರಮುಖನಾದ ಪರಮೇಶ್ವರನು ಮೀಮಾಂಸ ಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದ. ತನ್ನ ಮಲ್ಲಿಕಾಮಾರುತಕ್ಕೆ ಪರಮೇಶ್ವರನ ಅನುಮೋದನೆ ಪಡೆಯಲು ಉದ್ದಂಡಶಾಸ್ತ್ರಿಗಳಂತಹ ವಿದ್ವಾಂಸರೂ ಶ್ರಮಿಸಿದ್ದರೆಂದು ತಿಳಿದು ಬರುತ್ತದೆ. ಮೞಮಂಗಲಂ ನಂಬೂದಿರಿಗಳು ಸಂಸ್ಕೃತವನ್ನು ಪ್ರೋತ್ಸಾಹಿಸಿದ ಇನ್ನೊಂದು ವಿದ್ವಾಂಸ ಕುಟುಂಬ. ಜ್ಯೋತಿಶ್ಯಾಸ್ತ್ರಜ್ಞನಾದ ಶಂಕರನ್, ವ್ಯವಹಾರಮಾಲಾ ಕರ್ತೃವಾದ ನಾರಾಯಣನ್, ಅಶೌಚದೀಪಿಕವನ್ನು ಬರೆದ ಪರಮೇಶ್ವರನ್ ಮೊದಲಾದವರೆಲ್ಲ ಮೞಮಂಗಲಂ ಕುಟುಂಬದ ಸದಸ್ಯರು. ತಂತ್ರ ಸಂಗ್ರಹಂ, ಆರ್ಯಭಟೀಯ ಭಾಷ್ಯಂ, ಗ್ರಹ ನಿರ್ಣಯಂ, ಚಂದ್ರಚ್ಛಾಯಾ ಗಣಿತಂ, ಮೊದಲಾದ ಜ್ಯೋತಿಶ್ಯಾಸ್ತ್ರ ಗ್ರಂಥಗಳನ್ನು ಬರೆದ ನೀಲಕಂಠ ಸೋಮಯಾಜಿ (೧೪೪೪) ತನ್ನ ಗ್ರಹಪರೀಕ್ಷಾ ಕರಣಂ ಎಂಬ ಗ್ರಂಥದಲ್ಲಿ ಗ್ರಹಗಳನ್ನು ವಿವಿಧ ಉಪಕರಣಗಳನ್ನು ಉಪಯೋಗಿಸಿ ವೀಕ್ಷಿಸುವುದು, ಅದರ ಆಧಾರದಿಂದ ವಸ್ತುಗಳನ್ನು ಗಣಿಸುವುದು ಮೊದಲಾದವುಗಳನ್ನು ಕುರಿತು ಶಾಸ್ತ್ರ ವಿಚಾರಗಳನ್ನು ಅದರಲ್ಲಿ ಹೇಳಲಾಗಿದೆ.

ಹದಿನಾರನೆಯ ಶತಮಾನದಲ್ಲಿ ಕೇರಳದಲ್ಲಿ ಜೀವಿಸಿದ್ದ ಇಬ್ಬರು ಪ್ರಮುಖ ವಿದ್ವಾಂಸರು ತೃಕ್ಕಂಡಿಯೂರ್ ಅಚ್ಯುತ ಪಿಶಾರಡಿ ಮತ್ತು ಮೇಲ್ಪತ್ತೂರ್ ನಾರಾಯಣ ಭಟ್ಟಾತ್ತಿರಿ. ಅಚ್ಯುತ ಪಿಶಾರಡಿ ಕರಣೋತ್ತಮಂ, ಉಪರಾಗ ಕ್ರಿಯಾ ಕ್ರಮಂ ಮೊದಲಾದ ಜ್ಯೋತಿಶ್ಯಾಸ್ತ್ರ ಗ್ರಂಥಗಳನ್ನು ಬರೆದರು. ನಾರಾಯಣೀಯಂ, ಪ್ರಕ್ರಿಯಾಸರ್ವಸ್ವಂ ಮೊದಲಾದವು ಮೇಲ್ಪತ್ತೂರಿನ ಪ್ರಮುಖ ಕೃತಿಗಳು. ಕೋಝಿಕೋಡ್, ಕೊಚ್ಚಿ, ಚೆಂಬಕಶ್ಯೇರಿ ಮೊದಲಾದ ರಾಜಮನೆತನಗಳ ಆಶ್ರಿತನಾಗಿದ್ದ ಮೇಲ್ಪತ್ತೂರು ಹಲವು ಚಂಪು ಪ್ರಬಂಧಗಳನ್ನು ಬರೆದಿದ್ದಾನೆ.

ಹದಿನೆಂಟು ಹತ್ತೊಂಬತ್ತನೆಯ ಶತಮಾನಗಳಲ್ಲಿ ತಿರುವಿದಾಂಕೂರು ಹಾಗೂ ಕೊಚ್ಚಿಯ ರಾಜಾಶ್ರಯಗಳಲ್ಲಿ ಸಂಸ್ಕೃತ ಸಾಹಿತ್ಯ ವ್ಯಾಪಕವಾಗಿ ಬೆಳೆಯಿತು. ಮಹಾವಿದ್ವಾಂಸ ಸ್ವಾತಿತಿರುನಾಳ್ ಸಂಸ್ಕೃತದಲ್ಲಿ ಅನೇಕ ಕೀರ್ತನೆಗಳನ್ನು ಬರೆದಿದ್ದಾನೆ. ಕೇರಳವರ್ಮ ವಲಿಯಕೋಯಿ ತಂಬುರಾನ್, ಆತನ ಸಹೋದರಿಯ ಮಗನಾದ ಎ.ಆರ್. ರಾಜರಾಜ ವರ್ಮನೂ ಮಹಾ ವಿದ್ವಾಂಸನಾಗಿದ್ದ. ಕೇರಳವರ್ಮನ ‘ವಿಶಾಖವಿಜಯಂ’, ರಾಜರಾಜ ವರ್ಮನ ‘ಆಂಗಲ ಸಾಮ್ರಾಜ್ಯಂ’ ಜನ ಮಾನ್ಯತೆ ದೊರೆತ ಸಂಸ್ಕೃತ ಮಹಾಕಾವ್ಯಗಳಾಗಿವೆ. ಕೈಕುಳಙರೆ ರಾಮವಾರ್ಯರ್ (೧೮೧೭-೧೯೧೬), ಕೊಚ್ಚಿ ರಾಜನಾದ ರಾಮವರ್ಮ ಪರೀಕ್ಷಿತ ತಂಬುರಾನ್, ಕೊಲ್ಲಂಕೆಟ್ಟು ಗೋಪಾಲನ್ ನಾಯರ್ ಮೊದಲಾದವರು ಇತ್ತೀಚಿನ ಪ್ರಸಿದ್ಧ ಸಂಸ್ಕೃತ ವಿದ್ವಾಂಸರು. ಪಿ.ಸಿ. ದೇವಸ್ಯ ಅವರ ಕ್ರಿಸ್ತುಭಾಗವತಂ, ಕೆ. ಬಾಲರಾಮಪಣಿಕ್ಕರರ ಶ್ರೀನಾರಾಯಣ ವಿಜಯಂ, ಕೆ.ಎಸ್. ಎೞುತ್ತಚ್ಚನ್‌ರ ಕೇರಳೋದಯಂ ಮೊದಲಾದ ಮಹಾಕಾವ್ಯಗಳು ಕೇರಳವು ಸಂಸ್ಕೃತ ಸಾಹಿತ್ಯಕ್ಕೆ ಕೊಟ್ಟ ಅಮೂಲ್ಯವಾದ ಕೊಡುಗೆಗಳಾಗಿವೆ.

ಕೇರಳ ಮತ್ತು ಕನ್ನಡ ಸಾಹಿತ್ಯ

ಕೇರಳ ಹಾಗೂ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಮೌಖಿಕವಾಗಿ ಸಾಂಸ್ಕೃತಿಕ ಸಂವಹನ ನಡೆಯುತ್ತಾ ಇನ್ನೊಂದೆಡೆ ಸ್ವತಂತ್ರವಾಗಿ ಕನ್ನಡ ಮತ್ತು ಮಲಯಾಳಂನಲ್ಲಿ ಸಾಹಿತ್ಯ ರಚನೆಗಳಾಗುತ್ತಿದ್ದವು. ಆದರೆ ೧೭ನೆಯ ಶತಮಾನದಲ್ಲಿ ಈ ಎರಡೂ ಭಾಷೆಯ ಸಾಹಿತ್ಯಗಳ ನಡುವೆ ಬೆಳೆದ ಸಂಬಂಧ ಮಾತ್ರ ಅತ್ಯಂತ ಕುತೂಹಲಕರವಾಗಿದೆ. ಪಾರ್ತಿಸುಬ್ಬ ವಿರಚಿತ ‘ಯಕ್ಷಗಾನ ರಾಮಾಯಣ’ ಪ್ರಸಂಗ ಮತ್ತು ಕೊಟ್ಟಾರಕರ ಮಹಾರಾಜನು ಬರೆದ ‘ಕಥಕಳಿ ರಾಮಾಯಣ’ ಕೃತಿಗಳ ಜೊತೆಗೆ ಪರಸ್ಪರ ಸಾದೃಶ್ಯಗಳಿವೆ. ಇವುಗಳಲ್ಲಿ ಎಷ್ಟೋ ಪದ್ಯಗಳು ಸಮಾನ ಆಶಯ, ವೃತ್ತಬಂಧಗಳಿಂದ ಎರಡೂ ಕೃತಿಗಳಲ್ಲಿ ದಾಖಲಾಗಿವೆ. ಕೆಲವೊಂದು ವೃತ್ತಗಳು ಯಥಾ ಪ್ರಕಾರ ಅನುವಾದ ರೂಪದಲ್ಲಿ ಬಂದಿವೆ. ಎರಡೂ ಕಾವ್ಯಗಳ ಆರಂಭದ ಸ್ತುತಿ ಪದ್ಯಗಳು ಸಮಾನವಾಗಿವೆ.

ಉದಾಹರಣೆಗಾಗಿ ಕೆಲವು ಪದ್ಯಗಳನ್ನು (ಆಟ್ಟಕಥಗಳ್ ಸಂ.ಕೆ. ಗೋಪಾಲಕೃಷ್ಣ ಪಿಳ್ಳೆ ಬಿ.ಎ. ೧೯೫೩) ಪರಿಶೀಲಿಸಬಹುದು.

(ಕಥಕಳಿ: ಪುತ್ರಕಾಮೇಷ್ಟಿ)
ನೃಪತೇ ಮಹಾಭಾಗ ದಶರಥ ಸುಮತೇ|
ಪುತ್ರಕಾಮೇಷ್ಟಿ ಚೆಯ್ದುಕೊಂಡಿದಾ ನೀಂ|
ಅತ್ತ ನಿನ್ಮನೋರಥಂ ಸಾಧಿಕ್ಕುಮಲ್ಲೋ|
ಪುತ್ರರ್ ನಾಲುಪೇರುಂಡಾವುಂ ನಿನಕ್ಕುಡನೇ|
ಚಿತ್ತಪೀಡಯಿನ್ನಿಯೇ ಸ್ವೈರಮಾಯ್ ವಾಳಾಂ||

(ಯಕ್ಷಗಾನದಲ್ಲಿ)
ನೃಪತೇ ಮಹಾರಾಜ ದಶರಥ ಸುಮತೇ
ಪುತ್ರಕಾಮೇಷ್ಟಿಯ ಮಾಡಿದ್ದರಿಂದಲೇ
ಅತ್ತ ನಿನ್ನ ಮನೋರಥ ಸಿದ್ದಿಯಾಯ್ತು
ಪುತ್ರರು ನಾಲ್ವರುದಿಪರೀಗ ನೀ ಕೇಳು
ಚಿತ್ತ ಚಂಚಲ ಬಿಟ್ಟು ಸ್ಥಿರವಾಗಿ ಬಾಳಯ್ಯ||

(ಕಥಕಳಿ : ಸೀತಾಸ್ವಯಂವರದಲ್ಲಿ)
ಮಿತ್ರ ವಂಶಜಾತನಾಯ ದಶರಥನ್ ನೀ
ಸತ್ಯವಾದಿಯೆನ್ನದೋರ್ತು ಇಙು ವನ್ನೇನ್

(ಯಕ್ಷಗಾನ)
ಮಿತ್ರ ವಂಶಜಾತನಾದ ಭೂಮಿಪಾಲ ನೀನು
ಸತ್ಯವಂತನೆಂದು ನಂಬಿ ಬಂದೆನಲ್ಲ

(ಕಥಕಳಿ : ಪಟ್ಟಾಭಿಷೇಕದಲ್ಲಿ)
ಸಖಿ ನೀ ಚೊನ್ನದು ಕೇಟ್ಟ್ ಸಕಲವುಮರಿಞ್ಞಾನ್
ಸಹಿಯಾಯಿ ತೊಟ್ಟುಂ ತನ್ನೆ ಸಂತತಂ ಚಿಂತಿಕ್ಕುಂತೋರುಂ

(ಯಕ್ಷಗಾನ)
ಸಖಿ ನೀ ಪೇಳಿದ ಮಾತು ಸಕಲವೂ ಲೇಸಾಯ್ತು
ಯುಕುತಿಯೇನಿದಕಿನ್ನು ಎನ್ನೊಳ್ ಪೇಳ್ ಕಂಡುದನ್ನು

(ಕಥಕಳಿ)
ಕಿಂತು ಕಾಂತನ್ ಮುನ್ನಂ ತವ ತನುವಲ್ಲೋ ರಂಡುವರಂ
ಎಂದಿನಿನ್ನು ಖೇದಿಕ್ಕುನ್ನು ಇನ್ನದಿನೇ ಚೋದಿಚ್ಚಾಲುಂ

(ಯಕ್ಷಗಾನ)
ಹಿಂದೆ ಮೆಚ್ಚಿನಿನಗೆ ಆ ನರೇಂದ್ರ ಕೊಟ್ಟ ಮಾತೆರಡ
ಇಂದು ಕೇಳು ಕೊಟ್ಟ ಮೇಲೆ ಮುಂದೆ ಪೇಳು ಕಾರ್ಯ ಬಾಲೆ

(ಕಥಕಳಿ : ಖರವಧಂನಲ್ಲಿ)
ರಾತ್ರಿಂಚರನಾಥನಾಯೊರುತ್ತನುಂಡವನ್ ತನ್ನೆ
ಹಸ್ತಂಗಳಿರುವದುಂಡು ಪೋಲ್ ಅತ್ರಯುಮಲ್ಲ
ಮಸ್ತಕಂಗಳುಂ ಪತ್ತುಂಡು ಪೋಲ್ ಅವನ್ ಸ್ತ್ರೀಕ್ಕಳೇ
ಅತ್ತಲ್ ವರುತ್ತುನ್ನು ಪೋಲ್ ಸದಾ ಈ ವಿಪಿನೇ
ಆವಾಸಂ ದುಷ್ಕರಂ ಪರಂ||

(ಯಕ್ಷಗಾನ)
ರಾತ್ರಿಂಚರನಾಥನಾಗಿ ಮತ್ತೊಬ್ಬ ಖಳನಿರುವನಂತೆ
ಮಸ್ತಕಂಗಳು ಹತ್ತುಂಟಂತೆ – ಅಷ್ಟಲ್ಲದವಗೆ
ಹಸ್ತಂಗಪ್ಪಳಿತ್ತು ಉಂಟಂತೆ – ಹೆಣ್ಣುಗಳೆಂಬ
ಪಿತ್ತ ತಲೆಗೇರಿಹುದಂತೆ – ಈ ವಿಪಿನದೊ
ಳಿರುವುದು ಕಷ್ಟ ರಾಘವ ||

ಹೀಗೆ ನೂರಾರು ಪದ್ಯಗಳಲ್ಲಿ ಹೋಲಿಕೆಗಳನ್ನು ಗುರುತಿಸಬಹುದು.

ಕನ್ನಡಕ್ಕೆ ಸಹಜವಲ್ಲದ ವೃತ್ತಗಳನ್ನು ಪಾರ್ತಿಸುಬ್ಬನು ಮಲಯಾಳಂನ ಪ್ರಭಾವದಿಂದ ಬರೆದಿದ್ದಾನೆ. ಮಲಯಾಳಂನ ಪುತ್ರಕಾಮೇಷ್ಠಿಯ ವೃತ್ತವೊಂದನ್ನು ಕನ್ನಡದ ಪುತ್ರಕಾ ಮೇಷ್ಠಿಯ ವೃತ್ತದಲ್ಲೂ ಬಳಸಿ ಅನುವಾದಿಸಿದ್ದಾನೆ.

(ಕಥಕಳಿ)
ದಶರಥ ನರಪಾಲನ್ ತಾನ್ ಚೊನ್ನದ್ ಕೇಟ್ಟ ಶೇಷಂ|
ವಿಚಲಿತ ತರುಶೈಲಾಂತಂ ಲೋಲ ಭೂ ಮಂಡಲಂ ತಂ|
ಅರುಣ ವದನರಶ್ಮಿಯುತಂ ಪ್ರೋಜ್ವಲದ್ವಹ್ನಿ ಸ್ವರೂಪಂ
ಕುಶಿಕಸುತ ಮುನೀಶನೋವಂ ಕೋಪಮುಂ ಪೂಂಡು ಚೊನ್ನಾನ್

(ಯಕ್ಷಗಾನ)
ದಶರಥ ನರಪಾಲ ಪೇಳ್ದುದಂ ಕೇಳುತಾಗ
ಎಸೆವರುಣಮುಖೀ ಕ್ರಾಂತೆ ತತ್ಸಭಾ ಮಧ್ಯದೊಳಗೆ
ಉಸಿರಿಡುತಂ ಭುಗಿ ಭುಗಿಲೆನುತಾಚಾರ್ಯ ನನ್ನಿರೀಕ್ಷಿಸುತ್ತ
ಕುಶಿಕ ಜನತಿಕೋಪಾರೂಢಂ ತಾನಾಗಿರ್ದು ಪೇಳ್ದಂ||

ಇಂತಹ ವೃತ್ತಗಳು ಮೂಲ ದ್ರಾವಿಡ ಛಂದಸ್ಸಿನಲ್ಲಿ ಇವೆಯಂತೆ. ಅಲ್ಲಿ ಅವಕ್ಕೆ ‘ಅರುಶೀರಡಿಯ ಆಶರಿಯ ವಿರುತ್ತ’ಗಳೆಂದು ಹೆಸರು. ತಮಿಳು ಕಂಬ ರಾಮಾಯಣ ದಲ್ಲಿರುವಂತಹ ವೃತ್ತಗಳ ಗಣನಿಯಮಗಳನ್ನು ಒಂದಷ್ಟು ಶಿಥಿಲಗೊಳಿಸಿ ಮಲಯಾಳ ಕವಿ ಕಥಕಳಿ ಪ್ರಸಂಗದಲ್ಲಿ ಬರೆದಿದ್ದಾನೆ ಎಂದು ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವು ಮಲಯಾಳಂನ ಕೇಕಯ ಎಂಬ ವೃತ್ತಕ್ಕೆ ಸಮೀಪವಾಗುತ್ತದೆಂದು ಅಭಿಪ್ರಾಯ ಪಟ್ಟಿದ್ದಾರೆ. ಪಾರ್ತಿಸುಬ್ಬನು ಈ ವೃತ್ತಗಳನ್ನು ಸಭಾ ಲಕ್ಷಣದಲ್ಲಿಯೂ ಬಳಸಿದ್ದಾನೆ.

ಮಲಯಾಳಂ ಕಾವ್ಯದಿಂದ ಪ್ರೇರಣೆ ಪಡೆದ ಪಾರ್ತಿಸುಬ್ಬ ರಾಮಾಯಣ ಯಕ್ಷಗಾನ ಪ್ರಸಂಗಗಳಲ್ಲೂ ಯಥಾವತ್ತಾಗಿ ಬಳಸಿಕೊಂಡಿದ್ದಾನೆ. ಹೀಗೆ ಈ ಎರಡೂ ಭಾಷೆ ಸಾಹಿತ್ಯ ಕೃತಿಗಳ ನಡುವೆ ನೇರ ಪ್ರಭಾವ ಪಡೆದ ಸಂದರ್ಭ ಇದೊಂದನ್ನು ಬಿಟ್ಟರೆ ಬೇರೆ ಇಲ್ಲ.

ಕವಿ ಪಾರ್ತಿಸುಬ್ಬನು ಕೇರಳ ಕರ್ನಾಟಕದ ಗಡಿ ಪ್ರದೇಶವಾದ ಕಾಸರಗೋಡಿನ ಕುಂಬಳೆಯವನಾದ್ದರಿಂದ ಮತ್ತು ಕೇರಳದೆಲ್ಲೆಡೆ ಸಂಚರಿಸಿದ್ದರಿಂದ ಈ ತೆರನ ಪ್ರೇರಣೆ ಕವಿ ಸಹಜವಾದುದಾಗಿತ್ತು. ಅನಂತರದ ದಿನಗಳಲ್ಲಿ ಕಾಸರಗೋಡಿನ ಕನ್ನಡ ಕವಿಗಳ ಮೇಲೆ ಮಲಯಾಳಂ ಕೃತಿಗಳ ಪ್ರಭಾವವನ್ನು ಗುರುತಿಸಲು ಬರುವುದಿಲ್ಲ. ಗೋವಿಂದ ಪೈಗಳ ‘ಗೊಲ್ಗೊಥಾ’ ‘ವೈಶಾಖಿ’ ಮೊದಲಾದ ಖಂಡಕಾವ್ಯಗಳ ಮೇಲೆ ಮಲಯಾಳಂನ ಕುಮಾರನ್ ಆಶಾನ್ ಮತ್ತು ವಳ್ಳತೋಳ್ ನಾರಾಯಣ ಮೇನೋನ್‌ರ ಕೃತಿಗಳ ಛಾಯೆಯನ್ನು ಗುರುತಿಸಬಹುದು. ಪೈಗಳ ‘ಗೊಲ್ಗೊಥಾ’ ಮತ್ತು ವಳ್ಳತ್ತೋಳರ ‘ಮಗ್ದಲದ ಮರಿಯಳು’ ಬೈಬಲ್‌ನಿಂದ ಆರಿಸಿದ ಸಂದರ್ಭವನ್ನಾಧರಿಸಿದೆ. ಹಾಗೆಯೇ ಪೈಗಳ ‘ವೈಶಾಖಿ’ ಕುಮಾರನ್ ಆಶಾನರ ‘ಕರುಣ’ ಇವು ಬುದ್ಧನ ಕತೆಯನ್ನಾಧರಿಸಿದ ಕೃತಿಗಳು. ಅಲ್ಲದೆ ಗೋವಿಂದಪೈಗಳ ವಾಸವದತ್ತೆ, ಮಾತಂಗಿ ಎಂಬೀ ಕವಿತೆಗಳು ಕುಮಾರನ್ ಆಶಾನರ ‘ಕರುಣ ಚಂಡಾಲ ಭಿಕ್ಷುಕಿ’ಯ ವಸ್ತುಗಳು ಒಂದೇ ಆಗಿವೆ. ವಸ್ತುವಿನ ಆಯ್ಕೆ ಹಾಗೂ ಕಾವ್ಯದ ಶೈಲಿಯಲ್ಲಿ ಪೈಗಳ ಕೃತಿಗಳಿಗೆ ಮಲಯಾಳಂ ಕೃತಿಗಳೊಂದಿಗೆ ಸಾದೃಶ್ಯ ಮೇಲ್ನೋಟಕ್ಕೆ ಗೋಚರ ವಾಗುತ್ತಿರುವುದು ಸಂಶೋಧನೆಗೆ ಅರ್ಹವಾದ ವಿಷಯ.

ಅನುವಾದ

ಕನ್ನಡ ಮಲಯಾಳಂ ಸಂಬಂಧಕ್ಕೆ ನಾಂದಿ ಹಾಡಿದ್ದು ಅನುವಾದಗಳು. ಕೇಂದ್ರ ಸಾಹಿತ್ಯ ಅಕಾಡೆಮಿ, ದಕ್ಷಿಣ ಭಾರತೀಯ ಭಾಷಾ ಸಂಸ್ಥೆ, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ ಆಶಾನ್ ಮೆಮೋರಿಯಲ್ ಟ್ರಸ್ಟ್, ಕನ್ನಡ ವಿಶ್ವವಿದ್ಯಾಲಯ ಮೊದಲಾದ ಸಂಸ್ಥೆಗಳು ಅನುವಾದಗಳ ಮೂಲಕ ಎರಡೂ ಭಾಷೆಯ ಸಾಹಿತ್ಯಗಳ ನಡುವೆ ಸಂಬಂಧ ಕಲ್ಪಿಸಿವೆ. ಅಲ್ಲದೆ ಅನೇಕರು ವೈಯಕ್ತಿಕವಾಗಿ ಅನುವಾದಗಳನ್ನು ಮಾಡಿ ಈ ಎರಡೂ ಭಾಷೆಗಳ ಸಂಬಂಧ ಹೆಚ್ಚುವಲ್ಲಿ ನೆರವಾಗಿದ್ದಾರೆ.

ಎಚ್. ರೋಬರ್ಟ್ ಅವರು ೧೮೯೯ರಲ್ಲಿ ಜೋಸೆಫ್ ಮುಳಿಯಿಲ್ ಅವರ ‘ಸುಕುಮಾರಿ’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದರು. ಇದು ಮಲಯಾಳಂನಿಂದ ಕನ್ನಡಕ್ಕೆ ಬಂದ ಮೊದಲ ಕೃತಿಯೂ ಹೌದು. ಬಳಿಕ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ತಗಳಿ ಶಿವಶಂಕರ ಪಿಳ್ಳೆ, ವೈಕಂ ಮುಹಮ್ಮದ್ ಬಷೀರ್, ಎಂ. ಟಿ. ವಾಸುದೇವನ್ ನಾಯರ್, ಎಸ್.ಕೆ. ಪೊಟ್ಟಕಾಟ್, ಲಲಿತಾಂಬಿಕ ಅಂತರ್ಜನಂ, ಓ ಚಂದು ಮೇನೋನ್ ಮೊದಲಾದವರ ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗಿವೆ. ವಳ್ಳತ್ತೋಳ್, ಕುಮಾರನ್ ಆಶಾನ್ ಮೊದಲಾದವರ ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗಿವೆ. ವಳ್ಳತ್ತೋಳ್, ಕುಮಾರನ್ ಆಶಾನ್ ಮೊದಲಾದವರ ಕವಿತೆಗಳು ಹಾಗೆಯೇ ಕೆಲವು ಪ್ರಸಿದ್ಧ ಏಕಾಂಕಗಳು ಕನ್ನಡಕ್ಕೆ ಬಂದಿವೆ. ಅಲ್ಲದೆ ಇತ್ತೀಚಿನ ಮಲಯಾಳಂ ಕವಿತೆಗಳು, ಕುಂಜನ್ ನಂಬಿಯಾರರ ತುಳ್ಳಲ್ ಕತೆಗಳು, ಲೀಲಾತಿಲಕಂನಂತಹ ಲಕ್ಷಣ ಗ್ರಂಥಗಳು ಕನ್ನಡಕ್ಕೆ ಅನುವಾದಗೊಂಡಿವೆ. ವೈಕಂ ಮುಹಮ್ಮದ್ ಬಷೀರ್, ಎಂ.ಟಿ. ವಾಸುದೇವನ್ ನಾಯರ್, ಮಾಧವಿಕುಟ್ಟಿ ಮೊದಲಾದವರ ಕತೆಗಳು ಕನ್ನಡಕ್ಕೆ ಬಂದಿವೆ. ಒಂದು ಅಂದಾಜು ಪ್ರಕಾರ ಸುಮಾರು ೩೫೦ಕ್ಕೂ ಹೆಚ್ಚು ಕತೆಗಳು ಕನ್ನಡದಲ್ಲಿ ಪ್ರಕಟವಾಗಿವೆ. (ಆದರೆ ಕನ್ನಡದಿಂದ ಮಲಯಾಳಂಗೆ ಹೋದ ಕತೆಗಳ ಸಂಖ್ಯೆ ಐವತ್ತನ್ನು ಮೀರಲಾರದು ಎನಿಸುತ್ತದೆ) ಇದರಲ್ಲಿ ಬಷೀರರ ಹೆಚ್ಚಿನ ಸಂಖ್ಯೆಯ ಕೃತಿಗಳು ಕನ್ನಡದಲ್ಲಿ ಪ್ರಕಟವಾಗಿವೆ.

ಕನ್ನಡದಿಂದ ಮಲಯಾಳಂಗೆ ಅನುವಾದಗೊಂಡ ಅನೇಕ ಕೃತಿಗಳಿವೆ. ನಿಸರ್ಗ, ರಾಮಾಯಣ, ಚಿರಸ್ಮರಣೆ, ಮೃತ್ಯುಂಜಯ, ವಿವೇಚನೆ, ಸ್ವಾಮಿ ಅಪರಂಪಾರ, ರಂಗಮ್ಮನ ವಠಾರ, ಮರಳಿ ಮಣ್ಣಿಗೆ, ಕುಡಿಯರ ಕೂಸು, ಮೂಕಜ್ಜಿಯ ಕನಸುಗಳು, ಚೋಮನದುಡಿ, ಗೃಹಭಂಗ, ಭಾರತೀಪುರ, ಸಂಸ್ಕಾರ, ಅವಸ್ಥೆ, ಭವ, ಕರ್ವಾಲೋ, ಕಾಡು, ಭುಜಂಗಯ್ಯನ ದಶಾವತಾರಗಳು, ಪರಸಂಗಡದ ಗೆಂಡೆತಿಮ್ಮ, ಫಣಿಯಮ್ಮ, ಚಂದ್ರಗಿರಿಯ ತೀರದಲ್ಲಿ, ಸಿಂಗಾರೆವ್ವ ಮತ್ತು ಅರಮನೆ – ಮೊದಲಾದ ಕಾದಂಬರಿಗಳು ಮಲಯಾಳಂನಲ್ಲಿ ಪ್ರಕಟ ವಾಗಿವೆ. ಅನಂತಮೂರ್ತಿ, ಆಲನಹಳ್ಳಿ ಮೊದಲಾದವರ ಕತೆಗಳೂ ಮಲಯಾಳಂನಲ್ಲಿ ಬೆಳಕು ಕಂಡಿವೆ. ಗೋವಿಂದ ಪೈಯವರ ಎಲ್ಲಾ ಕೃತಿಗಳನ್ನು ಮಲಯಾಳಂನಲ್ಲಿ ಪ್ರಕಟಿಸುವಲ್ಲಿ ಕೇರಳ ಸರ್ಕಾರವೇ ಯೋಜನೆ ರೂಪಿಸಿ ಕಾರ್ಯ ರೂಪಕ್ಕಿಳಿಸಿದೆ. ಬೇಂದ್ರೆ, ಅಡಿಗ ಮೊದಲಾದವರ ಕೆಲವು ಕವಿತೆಗಳು, ಪುರಂದರದಾಸರ ಕೀರ್ತನೆಗಳು, ಕೆಲವು ವಚನಗಳು ಮಲಯಾಳಂಗೆ ಅನುವಾದಗೊಂಡಿವೆ.

ಕೆಲವು ವರ್ಷಗಳ ಹಿಂದೆ ‘ಪುಸ್ತಕ ಪ್ರಪಂಚ’ ಮಾಸಪತ್ರಿಕೆಯು ಬಷೀರರ ಬಗ್ಗೆ ವಿಶೇಷ ಸಂಚಿಕೆಯೊಂದನ್ನು ಹೊರ ತಂದಿತ್ತು. ಮಲಯಾಳಂ ಸಣ್ಣ ಕತೆಗಳಿಗೆ ನೂರು ವರ್ಷ ತುಂಬಿದ ಸವಿ ನೆನಪಿಗಾಗಿ ಕಾಸರಗೋಡಿನಲ್ಲಿ ಅನುವಾದ ಕಾರ್ಯಾಗಾರವೊಂದನ್ನು ೧೯೮೮ರಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಅನೇಕ ಮಲಯಾಳಂ ಕತೆಗಳನ್ನು ಕನ್ನಡಕ್ಕೆ ಅನುವಾದಿಸಲಾಯಿತು. ಅವುಗಳನ್ನು ಕತೆಗಾರರ ಸಂಕ್ಷಿಪ್ತ ಪರಿಚಯದೊಂದಿಗೆ ‘ತರಂಗ’ ವಾರಪತ್ರಿಕೆಯು (೨೮-೦೮-೧೯೮೮) ಮಲಯಾಳಂ ಕಥಾಸಂಚಯ ಎಂಬ ಹೆಸರಿನಲ್ಲಿ ವಿಶೇಷ ಸಂಚಿಕೆಯಾಗಿ ಪ್ರಕಟಿಸಿತ್ತು. ಅಲ್ಲದೆ ಅದೇ ಪತ್ರಿಕೆಯು ಮತ್ತೊಮ್ಮೆ (೦೮-೦೨-೧೯೯೮) ಮಲಯಾಳಂ ಕಥಾಸಂಚಯವನ್ನು ಪ್ರಕಟಿಸಿ ಅನೇಕ ಮಲಯಾಳಂ ಕತೆಗಳನ್ನು ಕನ್ನಡ ಓದುಗರಿಗೆ ಕೊಟ್ಟಿದೆ. ಮಲಯಾಳಂ ಪತ್ರಿಕೆಗಳು ಕನ್ನಡ ಸಾಹಿತ್ಯವನ್ನು ಈ ಮಟ್ಟದಲ್ಲಿ ಪ್ರೋತ್ಸಾಹ ಉದಾಹರಣೆಗಳಿಲ್ಲ. ಮಂಗಳ ವಾರಪತ್ರಿಕೆಯು ಮಲಯಾಳಂನ ಜನಪ್ರಿಯ ಬರಹಗಾರರ ಕಾದಂಬರಿಗಳನ್ನು ಧಾರವಾಹಿಯಾಗಿಯೂ ನಿರಂತರ ಪ್ರಕಟಿಸುತ್ತಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕನ್ನಡ ದೈನಿಕಗಳು ಭಾನುವಾರದ ವಿಶೇಷ ಪುರವಣೆಗಳಲ್ಲಿ ಮಲಯಾಳಂ ಕತೆಗಳನ್ನು ಪ್ರಕಟಿಸುತ್ತಿರುತ್ತವೆ. ಮಲಯಾಳಂನಿಂದ ಕನ್ನಡಕ್ಕೆ ಅನುವಾದ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಕನ್ನಡದಿಂದ ಮಲಯಾಳಂಗೆ ಅನುವಾದಿಸುವ ಕೆಲಸದಲ್ಲಿ ನಿರತರಾದವರ ಸಂಖ್ಯೆ ವಿರಳ.

೧೯೯೬ರಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳ ನೆರವಿನೊಂದಿಗೆ ಆಧುನಿಕ ಕವಿತೆ ಹಾಗೂ ಕತೆಗಳ ಪರಸ್ಪರ ಅನುವಾದ ಕಾರ್ಯಾಗಾರವನ್ನು ನಡೆಸಲಾಗಿತ್ತು. ಆಧುನಿಕ ಕವಿತೆಗಳನ್ನು ಪರಸ್ಪರ ಅನುವಾದಿಸುವಲ್ಲಿ ಸಾಹಿತ್ಯ ಸಂಬಂಧಗಳನ್ನು ಹೆಚ್ಚಿಸಲು ಉಪಯುಕ್ತವಾಗುವಂತೆ ಹಮ್ಮಿಕೊಳ್ಳಲಾಗಿತ್ತು. ಎರಡೂ ಭಾಷೆಗಳ ಕವಿಗಳನ್ನು ಒಂದೆಡೆ ಸೇರಿಸಿ, ಸ್ವತಃ ಕವಿಯೇ ತನ್ನ ಕವಿತೆಗಳನ್ನು ವಾಚಿಸಿ ಅನುವಾದಿಸುವ ಕವಿಗೆ ತಿಳಿಯಹೇಳಬೇಕಾಗಿತ್ತು. ಹೀಗೆ ಕವಿಯ ಜೊತೆಗಿನ ಸಂವಾದ, ವ್ಯಕ್ತಿತ್ವ ಇತ್ಯಾದಿಗಳ ಹಿನ್ನೆಲೆಯಲ್ಲಿ ಕವಿತೆಗಳ ಅನುವಾದ ಸಾಧ್ಯವಾಗಿದೆ. ಇಂಗ್ಲಿಷಿನ ಗೈರುಹಾಜರಿಯಲ್ಲಿಯೂ ಎರಡೂ ಭಾರತೀಯ ಭಾಷಿಕರ ನಡುವೆ ಅರ್ಥಪೂರ್ಣ ಸಂವಹನ ಸಾಧ್ಯವಾಗಿದೆ. ಮಲಯಾಳಂ ಕನ್ನಡ ಲಿಪಿಗಳ ನಡುವೆ ಸಂವಹನ ಶೂನ್ಯ. ಆದರೆ ಎರಡೂ ಭಾಷೆಗಳ ವ್ಯಕ್ತಿಗಳ ನಡುವೆ ಮಾತುಗಳು ಸಂವಹನ ಸಾಧಿಸುತ್ತವೆ ಎಂಬುದನ್ನು ಕಮ್ಮಟ ಸಿದ್ಧಪಡಿಸಿದೆ. ಹಂಪಿಯ ಅನುಭವಗಳ ನೆಲೆಯಿಂದ ಅನೇಕ ಮಲಯಾಳಂ ಕವಿಗಳು ಬಳಿಕ ಕವಿತೆಗಳನ್ನು ಬರೆದಿದ್ದಾರೆ. ಹೀಗೆ ಮಲಯಾಳಂ ಪ್ರದೇಶದಲ್ಲಿ ನೆಲೆಸಿದ್ದ ಅವಧಿಯಲ್ಲಿ ಯು.ಆರ್. ಅನಂತಮೂರ್ತಿಯವರು ಬರೆದ ಕವಿತೆಗಳಲ್ಲಿ ಆ ನೆಲದ ಸಾಂಸ್ಕೃತಿಕ ಆವರಣವನ್ನೂ ಗುರುತಿಸಬಹುದು.

ಅನುವಾದಗಳು ನಡೆಯುತ್ತಿದ್ದರೂ ಕನ್ನಡದಿಂದ ಮಲಯಾಳಂ ಭಾಷೆಗೆ ಹೋದುದಕ್ಕಿಂತ ಮಲಯಾಳಂನಿಂದ ಕನ್ನಡಕ್ಕೆ ಬಂದುದೇ ಹೆಚ್ಚು. ಕನ್ನಡ ಸಂಬಂಧದಲ್ಲಿ ಮಲಯಾಳಂ ಅನುವಾದ ಕೃತಿಗಳು ಗಮನಾರ್ಹವಾಗಿದ್ದು ತಗಳಿ, ವಾಸುದೇವನ್ ನಾಯರ್, ಬಷೀರ್ ಮೊದಲಾದವರು ಅನೇಕ ಕನ್ನಡ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ಬಷೀರರ ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾದ ತರುವಾಯದಲ್ಲಿಯೇ, ಕನ್ನಡದಲ್ಲೂ ಮುಸ್ಲಿಂ ಲೇಖಕರು ತಮ್ಮ ಸಾಂಸ್ಕೃತಿಕ ಲೋಕವನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನಾವರಣ ಗೊಳಿಸಿದರು. ಬಷೀರರ ವೈನೋದಿಕ ಶೈಲಿ, ಮುಸಲ್ಮಾನರ ಅಂಧ ಆಚಾರಗಳ ವಿಡಂಬನೆ ಅನೇಕ ಕನ್ನಡ ಓದುಗರ ಆಸಕ್ತಿ ಕೆರಳಿಸಿತ್ತು. ಅಲ್ಲದೆ ಫಕೀರ್ ಮಹಮ್ಮದ್ ಕಟ್ಪಾಡಿ, ಬೋಳುವಾರ್ ಮಹಮ್ಮದ್ ಕುಂಞಾ, ಸಾರಾ ಅಬೂಬಕ್ಕರ್ ಮೊದಲಾದ ಬರೆಹಗಾರರು ಕನ್ನಡದಲ್ಲಿ ಬರೆಯಲು ಬಷೀರರ ಸಾಹಿತ್ಯ ಪ್ರೇರಣೆ ನೀಡಿದೆ ಎಂಬುದನ್ನು ಗಮನಿಸಬೇಕು.

ಆದರೆ ಮಲಯಾಳಂ ಸಾಹಿತ್ಯ ಸಂದರ್ಭದಲ್ಲಿ ಕನ್ನಡದ ಲೇಖಕರು ಇಂತಹ ಪ್ರೇರಣೆ ಯನ್ನು ಪ್ರಭಾವವನ್ನು ಮೂಡಿಸಿದಂತಿಲ್ಲ. ನಿರಂಜನ, ಶಿವರಾಮ ಕಾರಂತ, ಆಲನಹಳ್ಳಿ, ಅನಂತಮೂರ್ತಿ ಮಲಯಾಳಂ ಓದುಗರ ಪ್ರೀತಿಯ ಬರಹಗಾರರು. ಕಮ್ಯೂನಿಸಂನ ಆಕರ್ಷಣೆಯಿಂದ ನಿರಂಜನ ಮೊದಲು ಜನಪ್ರಿಯರಾದರು. ‘ಚಿರಸ್ಮರಣೆ’ ಕೇರಳ ಹಿನ್ನೆಲೆಯುಳ್ಳ ಕೃತಿ. ಶ್ರೀಕೃಷ್ಣ ಆಲನಹಳ್ಳಿಯವರ ಕೃತಿಗಳು ಮಲಯಾಳಂ ವಾರಪತ್ರಿಕೆಗಳಲ್ಲಿ ಅನುವಾದಗೊಂಡು ಪ್ರಕಟವಾಗಿದ್ದವು. ಆ ಕಾರಣಕ್ಕಾಗಿ ಆಲನಹಳ್ಳಿ ಮಲಯಾಳಿ ಓದುಗರ ಮನೆಮಾತಾದರು. ತಮ್ಮ ಸಂಸ್ಕೃತಿಗಿಂತ ಭಿನ್ನವಾದ ಹೊಸ ಸಂಸ್ಕೃತಿಯೊಂದರ ಸಾಹಿತ್ಯವನ್ನು ಮಲಯಾಳಂ ಓದುಗರು ಪ್ರೀತಿಯಿಂದಲೇ ಸ್ವಾಗತಿಸುತ್ತಾರೆ. ಏಕೆಂದರೆ ಕೇರಳದ ಸಂಸ್ಕೃತಿಗಿಂತ ಭಿನ್ನವಾದ ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿ ಅನನ್ಯವಾದುದು. ಹಾಗಾಗಿ ಹೊಸ ಸಂಸ್ಕೃತಿಯ ಬಗೆಗಿನ ಆಕರ್ಷಣೆ ಸಹಜವಾಗಿರುತ್ತದೆ. ಕೇರಳದಲ್ಲಿ ಸಾಕ್ಷರತೆಯ ಪ್ರಮಾಣ ಅಧಿಕವಾಗಿರುವುದರಿಂದ ಅಕ್ಷರ ಮಾಧ್ಯಮ ಪ್ರಭಾವಶಾಲಿಯಾಗಿದೆ. ಅಕ್ಷರಗಳ ಮೂಲಕ ಪ್ರವೇಶ ಪಡೆದ ಯಾವುದೇ ಸಂಸ್ಕೃತಿಗೆ ಕೇರಳದಲ್ಲಿ ಶೀಘ್ರ ಪ್ರಚಾರ, ಜನಪ್ರಿಯತೆ ಲಭಿಸುತ್ತದೆ.

ಒಂದು ಅನುವಾದ ಕೃತಿ ಇನ್ನೊಂದು ಭಾಷೆಯ ಕೃತಿಗೆ ನೇರವಾದ ಪ್ರಭಾವ, ಪ್ರೇರಣೆಗಳನ್ನು ನೀಡದೇ ಇರಬಹುದು. ಆದರೆ ಅವು ಇಡೀ ಸಾಹಿತ್ಯ ಸಂದರ್ಭದಲ್ಲಿ ಬರಹಗಾರನ ಸೂಕ್ಷ್ಮ ಮನಸ್ಸಿನ ಮೇಲೆ ಪರಿಣಾಮ ಬೀರಿರುತ್ತವೆ. ಅವು ಅಭಿವ್ಯಕ್ತಿಗಳಲ್ಲಿ ಗೋಚರಕ್ಕೆ ನಿಲುಕದಿರಬಹುದು.

ಕನ್ನಡ ಮತ್ತು ಮಲಯಾಳಂ ಸಾಹಿತ್ಯ ಸಂಬಂಧ, ಬೇಕಾದ ಮಟ್ಟದಲ್ಲಿ ಆಗಲಿಲ್ಲ. ಒಂದೇ ಒಂದು ಕನ್ನಡ ನಾಟಕ ಮಲಯಾಳಂನಲ್ಲಿ ಪ್ರಕಟವಾಗಿಲ್ಲ. ಕನ್ನಡಕ್ಕೆ ವಿಶಿಷ್ಟವಾದ ವಚನ ಸಾಹಿತ್ಯ, ಅಭಿಜಾತ ಕಾವ್ಯ ಕೃತಿಗಳು, ಆಧುನಿಕ ಕವಿತೆಗಳು, ವಿಮರ್ಶೆ ಮೊದಲಾದ ಪ್ರಕಾರಗಳ ಕೃತಿಗಳು ಮಲಯಾಳಂಗೆ ಹೋಗಲೇಬೇಕಾಗಿದೆ. ಆಗ ಮಾತ್ರ ಮಲಯಾಳಂ ಸಾಹಿತ್ಯ ಕ್ಷೇತ್ರಕ್ಕೆ ಕನ್ನಡದ ಕಂಪು ಕಸುವು ದೊರೆತಂತಾಗಬಹುದು. ಹಾಗೆಯೇ ಮಲಯಾಳಂಗೆ ವಿಶಿಷ್ಟವಾದ ತುಳ್ಳಲ್ ಸಾಹಿತ್ಯ, ಪಾಟ್ಟು ಸಾಹಿತ್ಯ, ವೈವಿಧ್ಯಮಯವಾದ ಸಣ್ಣ ಕಥಾಲೋಕ ಕನ್ನಡಕ್ಕೆ ಬರುವ ಅಗತ್ಯವಿದೆ. ಹಾಗಾದಾಗ ಮಾತ್ರ ಎರಡೂ ಸಾಹಿತ್ಯ ಕ್ಷೇತ್ರಗಳೊಳಗಿನ ಸಂಬಂಧ ಆಯಾ ಭಾಷೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷತೆ ಸಾಧಿಸುವುದು ಸಾಧ್ಯ ಎಂದೆನಿಸುತ್ತದೆ.

 

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)