ಕೇರಳದ ಪ್ರಮುಖ ಭಾಷೆ ಮಲಯಾಳಂ. ಭಾರತದಲ್ಲಿ ಮಲಯಾಳಂ ಮಾತನಾಡುವವರ ಸಂಖ್ಯೆ ಸುಮಾರು ಮೂರು ಕೋಟಿ. ಅವರಲ್ಲಿ ಕೇರಳದಲ್ಲಿರುವವರು ಸುಮಾರು ಎರಡೂವರೆ ಕೋಟಿ. ಭಾರತದ ಜನಸಂಖ್ಯೆಯ ಶೇಕಡಾ ೩.೯೨ರಷ್ಟು ಬರುವ ಜನಸಮುದಾಯದ ಭಾಷೆಯೇ ಮಲಯಾಳಂ. ಆರು ಲಕ್ಷದಷ್ಟು ಕೇರಳೀಯರು ತಮಿಳು ಭಾಷೆ ಮಾತನಾಡುವವರು. ಕೇರಳದಲ್ಲಿ ಶೇಕಡಾ ೯೫.೯೯ರಷ್ಟು ಜನರು ಮಲಯಾಳವನ್ನು, ಶೇಕಡ ೨.೩೯ರಷ್ಟು ಜನರು ತಮಿಳುಭಾಷೆಯನ್ನು ಮಾತನಾಡುವವರಾಗಿದ್ದಾರೆ. ಮಲಯಾಳಂ ಮತ್ತು ತಮಿಳಿಗೆ ಹೊರತಾಗಿ ಹೆಚ್ಚು ಪ್ರಚಾರದಲ್ಲಿರುವ ಭಾಷೆ ಕೊಂಕಣಿ, ತುಳು, ಮತ್ತು ಕನ್ನಡ. ಇತರ ಭಾಷೆಗಳಾದ ತೆಲುಗು, ಮರಾಠಿ, ಗುಜರಾತಿ, ಹಿಂದಿ, ಉರ್ದು ಮೊದಲಾದ ಭಾಷೆಗಳನ್ನು ಮಾತನಾಡುವ ಜನರೂ ಇದ್ದಾರೆ. ಪಾಲಕ್ಕಾಡ್, ಇಡುಕ್ಕಿ, ತಿರುವನಂತಪುರಂ ಮೊದಲಾದ ಜಿಲ್ಲೆಗಳಲ್ಲಿ ತಮಿಳುನಾಡಿನೊಡನೆ ತಾಗಿಕೊಂಡಿರುವ ಭಾಗಗಳಲ್ಲಿ ತಮಿಳು ಭಾಷಿಕರ ಸಂಖ್ಯೆ ಹೆಚ್ಚು. ಕರ್ನಾಟಕದೊಡನೆ ತಾಗಿಕೊಂಡಿರುವ ಪ್ರದೇಶಗಳಾದ ಕಾಸರ ಗೋಡು, ವಯನಾಡು ಭಾಗಗಳಲ್ಲಿ ತುಳು ಕನ್ನಡ ಭಾಷೆಗಳಿಗೆ ಹೆಚ್ಚು ಪ್ರಾಶಸ್ತ್ಯವಿದೆ.

ಭಾಷಾ ಪ್ರಭೇದಗಳು

ಕೇರಳದಲ್ಲಿ ಸಾಮಾನ್ಯವಾಗಿ ಮೂರು ಪ್ರಾದೇಶಿಕ ಭಾಷಾ ಪ್ರಭೇದಗಳಿವೆ ಎಂದು ಹೇಳಬಹುದು. ದಕ್ಷಿಣ, ಉತ್ತರ ಮತ್ತು ಮಧ್ಯ ಕೇರಳದ ಪ್ರದೇಶಗಳ ಹಿನ್ನೆಲೆಯಲ್ಲಿ ಈ ಪ್ರಭೇದಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ತಮಿಳಿನ ಪ್ರಭಾವ ಹೆಚ್ಚಾಗಿರುವ ದಕ್ಷಿಣ ಕೇರಳದ ಭಾಷೆಯನ್ನು ನೆಯ್ಯಟ್ಟಿನ್‌ಕರ ತಾಲೂಕಿನಲ್ಲೂ, ತಿರುವನಂತಪುರಂ ತಾಲೂಕಿನ ದಕ್ಷಿಣ ಭಾಗದಲ್ಲಿಯೂ ಕಾಣಬಹುದು. ತಮಿಳುನಾಡಿನೊಂದಿಗೆ ಸೇರಿಕೊಂಡಿರುವ ಭೌಗೋಳಿಕ ಕಾರಣವಲ್ಲದೆ ಚಾರಿತ್ರಿಕವಾದ ಕಾರಣ ಕೂಡಾ ಈ ದಕ್ಷಿಣ ಭಾಷೆಯು ರೂಪುಗೊಂಡುದರ ಹಿನ್ನೆಲೆಯಲ್ಲಿದೆ. ಅತಿ ಪ್ರಾಚೀನ ಕಾಲದಿಂದಲೇ ಪಾಂಡ್ಯ, ಚೋಳ ಪ್ರಭುತ್ವಗಳಿಗೆ ದಕ್ಷಿಣ ತಿರುವಾಂಕೂರಿನಲ್ಲಿ ಸಾಂಸ್ಕೃತಿಕವೂ, ರಾಜಕೀಯವೂ ಆದ ನಿಯಂತ್ರಣ ಇತ್ತು. ಹನ್ನೊಂದನೆಯ ಶತಮಾನದಲ್ಲಿ ತಿರುವನಂತಪುರದ ದಕ್ಷಿಣ ಭಾಗಗಳು ಬಹುತೇಕ ಚೋಳರ ಆಳ್ವಿಕೆಯ ವ್ಯಾಪ್ತಿಯಲ್ಲಿಯೇ ಇದ್ದವು. ಈ ಕಾರಣದಿಂದ ದಕ್ಷಿಣ ಕೇರಳದ ಭಾಷೆಯಲ್ಲಿ ತಮಿಳಿನ ಪ್ರಭಾವ ಹೆಚ್ಚಾಯಿತು. ತಮಿಳು ಮನೆಮಾತು ಆಗಿರುವ ಅನೇಕ ಜನರು ದಕ್ಷಿಣ ಕೇರಳದಲ್ಲಿದ್ದಾರೆ.

ಉತ್ತರ ಕೇರಳದಲ್ಲಿ ಕಣ್ಣೂರಿನ ಉತ್ತರ ಭಾಗದಲ್ಲಿ ತುಳು, ಕನ್ನಡ ಭಾಷೆಯ ಪ್ರಭಾವಲಯದಲ್ಲಿ ರೂಪು ಪಡೆದ ಮಲಯಾಳಂ ಭಾಷೆಯನ್ನು ಕಾಣಬಹುದು. ಭೌಗೋಳಿಕ ವಾದ ಕಾರಣದಿಂದ ಈ ಪ್ರಭಾವ ಸಹಜವಾಗಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕೇರಳ ಪರಸ್ಪರ ಶತಮಾನಗಳಿಂದ ಬೆಳೆಸಿಕೊಂಡು ಬಂದ ಸಾಂಸ್ಕೃತಿಕ ಬಾಂಧವ್ಯವೇ ಇದಕ್ಕೆ ಮುಖ್ಯವಾದೊಂದು ಕಾರಣ.

ಈ ದಕ್ಷಿಣ ಉತ್ತರ ಭಾಷೆಗಳ ನಡುವೆ ಮಧ್ಯಭಾಷೆ ಪ್ರಚಾರದಲ್ಲಿದೆ. ಸಂಸ್ಕೃತ ಪದಗಳ ಬಾಹುಳ್ಯವೇ ಅದರ ವೈಶಿಷ್ಟ್ಯ. ಭಾರತದ ದಕ್ಷಿಣ ರಾಜ್ಯಗಳಲ್ಲಿ ಸಂಸ್ಕೃತ ಭಾಷೆಗೆ ಹೆಚ್ಚು ಹತ್ತಿರವಾಗಿರುವುದು ಕೇರಳ. ಕೇರಳದ ಸಾಹಿತ್ಯ ಚರಿತ್ರೆಯಲ್ಲಿ ಮಲಯಾಳಂನೊಡನೆ ಸಂಸ್ಕೃತಕ್ಕೂ ಪ್ರಾಧಾನ್ಯ ನೀಡಲೇಬೇಕಾಗಿದೆ. ಏಕೆಂದರೆ ಕೇರಳೀಯರಾದ ಸಂಸ್ಕೃತ ಸಾಹಿತಿಗಳು ಸಂಸ್ಕೃತದೊಡನೆ ಮಲಯಾಳಂ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಸಿದವರೂ ಇದ್ದಾರೆ. ಮಲಯಾಳಂ ಮಾತನಾಡುವ ಎಲ್ಲರೂ ಅನೇಕ ಸಂಸ್ಕೃತ ಪದಗಳನ್ನು ಜೊತೆಗೆ ಸೇರಿಸುತ್ತಾರೆ. ಮಲಯಾಳಂ ಭಾಷೆಯ ಬೆಳವಣಿಗೆಯ ಸಂದರ್ಭದಲ್ಲಿ ಸಂಸ್ಕೃತ ಭಾಷೆಗೂ ಪ್ರಮುಖ ಪಾತ್ರವಿದೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೊಂದಿದೆ. ಮಲಯಾಳಂ ಭಾಷೆಯ ಬೆಳವಣಿಗೆಗೆ ಸಂಸ್ಕೃತ ಹಾಗೂ ಸಮೀಪದ ರಾಜ್ಯಗಳ ಭಾಷೆಗಳು ಮಾತ್ರ ಸಹಾಯ ಮಾಡಿದ್ದಲ್ಲ. ವಿದೇಶೀಯರ ಸಂಸ್ಕೃತಿಯ ಸಂಸರ್ಗದ ಕಾರಣದಿಂದಲೂ ಮಲಯಾಳಂ ಸಂಪನ್ನವಾಗಿದೆ. ಮಲಯಾಳಂ ಪದಗಳಲ್ಲಿ ಅರೇಬಿಕ್, ಪರ್ಶಿಯನ್, ಗ್ರೀಕ್, ಲ್ಯಾಟಿನ್, ಚೈನೀಸ್, ಪೋರ್ಚ್‌ಗೀಸ್, ಡಚ್, ಇಂಗ್ಲಿಷ್ ಪದಗಳು ಸೇರಿಕೊಂಡಿವೆ. ಅನೇಕ ಅರೇಬಿಕ್, ಪರ್ಶಿಯನ್ ಭಾಷಾ ಪದಗಳು ಮಲಯಾಳಂ ಭಾಷೆಯಲ್ಲಿ ಸ್ಥಾನ ಪಡೆದಿವೆ. ಹೊರಗಿನಿಂದ ಬಂದ ಮುಸಲ್ಮಾನ ಸಮುದಾಯಗಳೊಂದಿಗಿನ ಸಂಪರ್ಕವೇ ಇದಕ್ಕೆ ಮುಖ್ಯ ಕಾರಣ. ಪೇಷಂಕಾರ್, ದಿವಾನ್, ಜಮಾಬಂದಿ, ತಹಶಿಲ್ದಾರ್, ಹವಿಲಂದಾರ್, ದಪೇದಾರ್, ಶಿಪಾಯಿ, ಠಾಣ, ಮೊದಲಾದ ಪದಗಳಿಗೆ ರೆವಿನ್ಯೂ ಇಲಾಖೆಯ ವ್ಯವಹಾರದಲ್ಲಿ ಜಾಗ ಪಡೆದಿವೆ. ಹಲವು ವಸ್ತುಗಳ ಹೆಸರು ಚೀನ ಎಂಬ ಪದದೊಡನೆ ಆರಂಭವಾಗುತ್ತದೆ. ಇದಕ್ಕೆ ಕಾರಣ ಚೈನಾದ ಪ್ರಭಾವವೇ ಆಗಿದೆ. ಚೀನಕುೞಲ್  (ಚೀನಿ ಕೊಳಲು), ಚೀನವಲ (ಚೀನಿ ಬಲೆ), ಚೀನ ಮುಳಗ್ (ಚೀನಿ ಮೆಣಸು), ಚೀನಚಟ್ಟಿ  (ಚೀನಿ ಪಾತ್ರೆ), ಚೀನವೆಡಿ (ಚೀನಿ ಪಟಾಕಿ) ಮೊದಲಾದ ಪದಗಳ ಬಳಕೆ ಸಾಮಾನ್ಯವಾಗಿದೆ. ಇಂಗ್ಲಿಷ್ ಪದಗಳು ಮಲಯಾಳಂನಲ್ಲಿ ಬಂದು ಸೇರಿಕೊಂಡು ಮಲಯಾಳಂ ಪದಗಳಂತೆ ಬಳಕೆಗೊಳ್ಳುತ್ತವೆ. ಕೇರಳದಲ್ಲಿ ತಮಿಳಿನಂತೆ ಹಿಂದಿ ಭಾಷೆಯ ಬಗೆಗೆ ವಿರೋಧವಿಲ್ಲ. ಇದಕ್ಕೆ ಕಾರಣ ಮಲಯಾಳವು ಆರಂಭ ಕಾಲದಿಂದಲೇ ಇತರ ಭಾಷೆಗಳನ್ನು ಮುಕ್ತವಾಗಿ ಸ್ವೀಕರಿಸುತ್ತಾ ಬಂದುದೇ ಆಗಿದೆ.

ಲಿಪಿಗಳು

ಪ್ರಾಚೀನ ಕಾಲದಿಂದಲೇ ಮಲಯಾಳಂ ಭಾಷೆಗೆ ಅದರದೇ ಆದ ಲಿಪಿ ಇದೆ. ಅತ್ಯಂತ ಪ್ರಾಚೀನವಾದ ಲಿಪಿಯ ಹೆಸರು ‘ವಟ್ಟೆೞುತ್ತು’. ಇದಕ್ಕೆ ‘ನಾನಂಮೋನಂ’ ಎಂದೂ ಹೆಸರಿದೆ ಎಂದು ಶ್ರೀಧರ ಮೇನೋನ್ ಹೇಳುತ್ತಾರೆ. (೧೯೯೬:೨೨೨) ವೃತ್ತಾಕಾರವಾಗಿರುವ ಬರಹವೇ  ‘ವಟ್ಟೆೞುತ್ತು’. ಕೊಲ್ಲ ವರ್ಷಾರಂಭಕ್ಕೆ ಅಂದರೆ ಕ್ರಿ.ಶ. ೮೨ ಮೊದಲೇ ಅದು ಕೇರಳದೆಲ್ಲೆಡೆ ಪ್ರಚಾರದಲ್ಲಿತ್ತು. ಹತ್ತೊಂಬತ್ತನೆಯ ಶತಮಾನದ ಆರಂಭದ ಕಾಲಘಟ್ಟದಲ್ಲಿಯೂ ಸರಕಾರದ ದಾಖಲೆಗಳೆಲ್ಲ ಇರುವುದು ವಟ್ಟೆೞುತ್ತು ಲಿಪಿಯಲ್ಲಿಯೇ. ಆದರೆ ೧೮-೧೯ನೆಯ ಶತಮಾನದಲ್ಲಿದ್ದುದು ಕೊಲ್ಲಂ ವರ್ಷಾರಂಭದಲ್ಲಿ ಇದ್ದ ವಟ್ಟೆೞುತ್ತು ಅಲ್ಲ. ಅದರಲ್ಲಿ ಸಾಕಷ್ಟು ವ್ಯತ್ಯಾಸವಿದೆ. ವಟ್ಟೆಳುತ್ತುವಿನ ಈ ಹೊಸ ರೂಪಾಂತರಕ್ಕೆ ಕೋಲೆೞುತ್ತು ಎಂದು ಹೆಸರು. ಕೋಲು ಎಂಬ ಪದವು ಆ ಲಿಪಿಯ ಸ್ವರೂಪವನ್ನು ಸೂಚಿಸುತ್ತಿರಬಹುದು.

ದಕ್ಷಿಣ ಭಾರತದೆಲ್ಲೆಡೆ ಬ್ರಾಹ್ಮಣರು ಬಳಸುತ್ತಿದ್ದ ಲಿಪಿ ಗ್ರಂಥಲಿಪಿ. ಸಂಸ್ಕೃತ ಹಾಗೂ ಪ್ರಾಕೃತವನ್ನು ಗ್ರಂಥಲಿಪಿಯಲ್ಲಿ ಬರೆಯಲಾಗಿದೆ. ಕ್ರಮೇಣ ಕೇರಳಕ್ಕೆ ಅದು ವ್ಯಾಪಿಸಿತು. ೧೮ನೆಯ ಶತಮಾನದ ವೇಳೆಗೆ ತುಳುನಾಡಿನಲ್ಲಿಯೂ ಕೇರಳದಲ್ಲಿಯೂ ಇದ್ದ ಬ್ರಾಹ್ಮಣರಲ್ಲಿ ಗ್ರಂಥಲಿಪಿ ಪ್ರಚಾರ ಪಡೆಯಿತು. ಅಲ್ಲಿ ‘ವಟ್ಟೆೞುತ್ತು’ವಿನಲ್ಲಿ ಬರೆದ ದಾಖಲೆಗಳಲ್ಲೂ ಸಂಸ್ಕೃತ ಪದಗಳನ್ನು ಬರೆಯಲು ಗ್ರಂಥಲಿಪಿಯನ್ನು ಬಳಸಲಾಯಿತು. ಕ್ರಮೇಣ ಗ್ರಂಥಲಿಪಿ ಹಾಗೂ ವಟ್ಟೆೞುತ್ತು ಪರಿವರ್ತನೆಗೊಂಡಿತು. ವಟ್ಟೆೞುತ್ತುವಿನೊಡನೆ ಗ್ರಂಥಲಿಪಿಯನ್ನು ಹೆಚ್ಚು ಹೆಚ್ಚಾಗಿ ಬಳಸತೊಡಗಿದರು. ಬ್ರಾಹ್ಮಣರ ಲಿಪಿಯಾದದ್ದರಿಂದ ಗ್ರಂಥಲಿಪಿಗೆ ‘ಆರ್ಯಎೞುತ್ತು’ ಎಂಬ ಹೆಸರೂ ಇದೆ. ಪೋರ್ಚುಗೀಸರ ಆಗಮನದಿಂದಾಗಿ ಶೂದ್ರರು ಅದರಲ್ಲೂ ವಿಶೇಷವಾಗಿ ನಾಯನ್ಮಾರರು ಸಂಸ್ಕೃತ ಕಲಿಯಲಾರಂಭಿಸಿದ್ದರಿಂದ ಗ್ರಂಥ ಲಿಪಿಯ ಮೇಲೆ ಬ್ರಾಹ್ಮಣರಿಗಿದ್ದ ಸ್ವಾಮ್ಯಕ್ಕೆ ಧಕ್ಕೆಯೊದಗಿತು. ೧೬ನೆಯ ಶತಮಾನದ ಕೊನೆಗೆ ೧೭ನೆಯ ಶತಮಾನದ ಆರಂಭ ಕಾಲದಲ್ಲಿ ಬದುಕಿದ್ದ ಎೞುತ್ತಚ್ಚನ್ ಗ್ರಂಥಲಿಪಿ ಅಥವಾ ಆರ್ಯಎೞುತ್ತನ್ನು ಬರವಣಿಗೆಗೆ ಬಳಸಿದ. ಗ್ರಂಥಲಿಪಿಯ ಪ್ರಚಾರದಿಂದಾಗಿ ವಟ್ಟೆೞುತ್ತುವಿನ ಪ್ರಾಮುಖ್ಯತೆ ಕಡಿಮೆಯಾಯಿತು. ೧೮ನೆಯ ಶತಮಾನವರೆಗೆ ಕ್ರಿಶ್ಚಿಯನರೂ ೧೯ನೆಯ ಶತಮಾನದವರೆಗೆ ಮುಸಲ್ಮಾನರು ಗ್ರಂಥಲಿಪಿಯನ್ನು ಬಳಸುತ್ತಿರಲಿಲ್ಲ. ಅವರು ಬಳಸುತ್ತಿದ್ದ ಲಿಪಿ ವಟ್ಟೆೞುತ್ತ್. ಇಂದು ಬಳಕೆಯಲ್ಲಿರುವ ಮಲಯಾಳಂ ಲಿಪಿ ರೂಪುಗೊಂಡುದು ಗ್ರಂಥಲಿಪಿಯಿಂದ. ೫೩ ಅಕ್ಷರಗಳಿರುವ ಮಲಯಾಳಂ ಭಾಷೆ ಒಂದು ವೇಳೆ ಇತರ ಭಾಷೆಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ಶಬ್ದ ವೈವಿಧ್ಯಗಳಿಗೆ ಲಿಪಿ ಕಂಡು ಹಿಡಿದಿದೆ ಎಂದು ಹೇಳಬಹುದು.

ಹೀಗೆ ಗ್ರಂಥಲಿಪಿ ರೂಪಾಂತರಗೊಂಡು ಮಲಯಾಳಂ ಬರವಣಿಗೆಗೆ ಬಳಕೆ ಯಾಗುತ್ತಿದ್ದರೂ ಕೇರಳದ ಕೆಲವು ಭಾಗಗಳಲ್ಲಿ ಕೆಲವು ಪ್ರತ್ಯೇಕ ಜನ ಸಮುದಾಯಗಳಲ್ಲಿ ವ್ಯತ್ಯಸ್ಥವಾದ ಲಿಪಿ ಬಳಕೆ ಚಾಲ್ತಿಯಲ್ಲಿದೆ. ಪಾಲಕ್ಕಾಡ್ ಮತ್ತು ತಿರುವನಂತಪುರಂನಲ್ಲಿರುವ ತಮಿಳರು ಮಲಯಾಳಂ ಭಾಷೆಯನ್ನು ಬರೆಯುವುದು ತಮಿಳು ಲಿಪಿಯಲ್ಲಿ. ಮುಸಲ್ಮಾನರು ಅರೆಬಿಕ್ -ಮಲಯಾಳಂ ಲಿಪಿ ಕಂಡುಕೊಂಡಿದ್ದಾರೆ. ಮುಸಲ್ಮಾನ ಮಹಿಳೆಯರಿಗೆ ಶಿಕ್ಷಣ ಕೊಡಲು ಈ ಲಿಪಿಯನ್ನು ವಿಶೇಷವಾಗಿ ಬಳಸಲಾಗುತ್ತಿದೆ. ಅರೇಬಿ-ಮಲಯಾಳಂ ಲಿಪಿಯಲ್ಲಿ ಪತ್ರಿಕೆಗಳೂ ಪ್ರಕಟವಾಗುತ್ತಿವೆ. ವಕ್ಕಂ ಅಬ್ದುಲ್ ಖಾದರ್ ಮೌಲವಿ (೧೮೩೨-೧೯೩೨) ಎಂಬ ಪ್ರಸಿದ್ಧ ಮುಸಲ್ಮಾನ ಸಮಾಜ ಸುಧಾರಕ ‘ಅಲ್-ಇಸ್ಲಾಂ’ ಎಂಬ ಹೆಸರಿನ ಒಂದು ಅರಬಿ-ಮಲಯಾಳಂ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದರು.

ಮಲಯಾಳ ಭಾಷೆ

ದ್ರಾವಿಡ ಭಾಷಾ ಸಮುದಾಯದಲ್ಲಿ ಅತ್ಯಂತ ಕೊನೆಗೆ ರೂಪು ಪಡೆದ ಭಾಷೆ ಮಲಯಾಳಂ. ಒಂದು ಸ್ವತಂತ್ರ ಭಾಷೆಯಾಗಿ ಇದು ರೂಪುಗೊಂಡುದು ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ ಎಂದು ಹೇಳಬಹುದು. ಆ ಕಾಲಘಟ್ಟದವರೆಗೂ ಕೇರಳ ತಮಿಳುನಾಡಿನ ಭಾಗವಾಗಿತ್ತಷ್ಟೆ. ಪರಣರ್, ಇಳಂಗೋ ಅಡಿಗಳು, ಕುಲಶೇಖರ ಆಳ್ವಾರ್ ಮೊದಲಾದ ಪ್ರಖ್ಯಾತ ತಮಿಳು ಕವಿಗಳು ಕೇರಳೀಯರಾಗಿದ್ದರು. ಶಿಲಪ್ಪದಿಕಾರಂ, ಪೆರುಮಾಳ್ ತಿರುಮೊೞಿ ಮೊದಲಾದ ಕಾವ್ಯಗಳು ಕೇರಳದಲ್ಲಿಯೇ ರಚನೆಗೊಂಡವುಗಳು. ಕೇರಳವು ತಮಿಳು ಸಾಹಿತ್ಯಕ್ಕೆ ನೀಡಿದ ಶ್ರೇಷ್ಠ ಕೊಡುಗೆಗಳಿವು. ಮೂಲ ದ್ರಾವಿಡ ಭಾಷೆಯಿಂದ ಹುಟ್ಟಿಕೊಂಡ ಮಲಯಾಳಂ ಆರಂಭ ಕಾಲದಲ್ಲಿ ತಮಿಳು ಪ್ರಭಾವ ವಲಯದಲ್ಲಿಯೇ ಇತ್ತು. ಅದರಿಂದ ಕ್ರಮೇಣ ಬಿಡುಗಡೆಗೊಂಡ ಮಲಯಾಳವು ಆರ್ಯೀಕರಣದ ಪ್ರಾಬಲ್ಯ ಹೆಚ್ಚಿದ್ದರಿಂದ ಸಂಸ್ಕೃತದ ಹಿಡಿತದಲ್ಲಿ ಸಿಕ್ಕಿಕೊಂಡಿತು.

ಹತ್ತನೆಯ ಶತಮಾನದವರೆಗೂ ಮಲಯಾಳಂನಲ್ಲಿ ಗಮನಾರ್ಹ ಸಾಹಿತ್ಯ ಕೃತಿಗಳು ಹುಟ್ಟಿಕೊಂಡಿಲ್ಲ. ತಮಿಳು ಮತ್ತು ಸಂಸ್ಕೃತ ಪ್ರಭಾವದ ಮೂಲಕ ಮಲಯಾಳಂನಲ್ಲಿ ಸ್ವತಂತ್ರ ಕೃತಿ ರಚನೆಯಾಗತೊಡಗಿತ್ತು. ಪಾಟು ಸಾಹಿತ್ಯವೇ ಮೊದಲು ಕಾಣಿಸಿಕೊಂಡುದು. ಅದರಲ್ಲಿ ತಮಿಳಿನ ಪ್ರಭಾವ ಸುಸ್ಪಷ್ಟ. ರಾಮಚರಿತಂ, ರಾಮಕಥಾಪಾಟು ಮೊದಲಾದ ಕೃತಿಗಳು ಈ ಗುಂಪಿನಲ್ಲಿ ಸೇರುತ್ತವೆ. ರಾಮಚರಿತಂ ಲಭ್ಯವಿರುವ ಅತ್ಯಂತ ಹಳೆಯ ಕೃತಿ ಎಂದು ಚರಿತ್ರೆಕಾರರು ಅಭಿಪ್ರಾಯ ಪಟ್ಟಿದ್ದಾರೆ. ಹದಿನೈದನೆಯ ಶತಮಾನದಲ್ಲಿ ಕಾಣಿಸಿಕೊಂಡ ನಿರಣಂ ಕವಿಗಳ ಕೃತಿಗಳು ತಮಿಳು ಪ್ರಭಾವದಿಂದ ಹೊರ ಬಂದಿಲ್ಲ. ಆದರೂ ಅವುಗಳಲ್ಲಿ ಸಂಸ್ಕೃತ ಪದಗಳೂ ಧಾರಾಳ ಇವೆ. ಕಣ್ಣಶಪಣಿಕ್ಕರರು ಎಂಬ ಹೆಸರಿನಲ್ಲಿ ಪ್ರಸಿದ್ಧರಾದ ನಿರಣಂ ಕವಿಗಳಲ್ಲಿ ಪ್ರಮುಖ ರಾಮಪಣಿಕ್ಕರ್. ಆತನ ರಾಮಾಯಣ ಅತ್ಯಂತ ಪ್ರಸಿದ್ಧವಾಗಿದೆ. ನಿರಣಂ ಕವಿಗಳಲ್ಲೊಬ್ಬನಾದ ಮಾಧವ ಪಣಿಕ್ಕರನು ಭಗವದ್ಗೀತೆ ಯನ್ನು ಮಲಯಾಳಂಗೆ ಅನುವಾದಿಸಿದ ಕವಿ ಎಂಬ ಗೌರವಕ್ಕೆ ಪಾತ್ರನಾದ. ಸಂಸ್ಕೃತ ಮತ್ತು ತಮಿಳಿನ ಪ್ರಭಾವದಲ್ಲಿ ಕುರುಡರಾಗದೆ ಸ್ವತಂತ್ರವಾದ ದಾರಿಯನ್ನು ಕಂಡುಕೊಳ್ಳಬೇಕು ಎಂಬ ರೀತಿಯಲ್ಲಿ ನಿರಣಂ ಕವಿಗಳು ಪ್ರಜ್ಞಾಪೂರ್ವಕವಾಗಿ ಕಾವ್ಯ ರಚಿಸಿದರು.

ಮಣಿಪ್ರವಾಳಂ

ಮಲಯಾಳಂ ಸಾಹಿತ್ಯದಲ್ಲಿ ಸಂಸ್ಕೃತವು ಸಾಧಿಸಿದ ಪ್ರಾಬಲ್ಯದ ಪರಿಣಾಮವಾಗಿ ರೂಪುಗೊಂಡುದುದು ಮಣಿಪ್ರವಾಳ. ಮಲಯಾಳಂ ಸಾಹಿತ್ಯ ಕ್ಷೇತ್ರದಲ್ಲಿ ನಡೆದುಹೋದ ಆರ್ಯ ದ್ರಾವಿಡ ಸಂಕರದ ಗುರುತುಗಳನ್ನು ಮಣಿಪ್ರವಾಳವು ಸೂಚಿಸುತ್ತದೆ. ಹನ್ನೊಂದನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗೆ ಮಣಿಪ್ರವಾಳ ಶೈಲಿಯಲ್ಲಿ ಅನೇಕ ಕೃತಿಗಳು ರಚನೆಯಾದವು. ಆಟ ಪ್ರಕಾರಗಳು, ಕ್ರಮದೀಪಿಕೆ ಮೊದಲಾದ ಕೃತಿಗಳ ಕರ್ತೃವಾದ ತೋಲನ್ ಮಣಿಪ್ರವಾಳ ಕವಿಗಳಲ್ಲಿ ಮೊದಲಿಗ. ಹನ್ನೊಂದನೆಯ ಶತಮಾನದಲ್ಲಿ ರಚನೆಗೊಂಡುದೆಂದು ಭಾವಿಸಲಾದ ವೈಶಿಕತಂತ್ರಂ ಮಣಿಪ್ರವಾಳ ವಿಭಾಗಕ್ಕೆ ಸೇರಿದ ಮೊದಲ ಕಾವ್ಯ. ವೇಶ್ಯಾಧರ್ಮವನ್ನು ತಿಳಿಯ ಹೇಳುವ ಒಂದು ಕೃತಿ ಇದು.

ಮಣಿಪ್ರವಾಳ ಶೈಲಿಯಲ್ಲಿ ಹಲವು ವಿಧಗಳಿವೆ. ಅವುಗಳ ವ್ಯತ್ಯಾಸಗಳೆಲ್ಲವನ್ನು  ‘ಲೀಲಾತಿಲಕಂ’ ಎಂಬ ಲಕ್ಷಣ ಗ್ರಂಥದಲ್ಲಿ ಪ್ರತಿಪಾದಿಸಲಾಗಿದೆ. ಇದಕ್ಕೆ ಮೊದಲು ಪ್ರಚಲಿತ ದಲ್ಲಿದ್ದ ಈ ಶೈಲಿ ಸಾಹಿತ್ಯದಲ್ಲಿ ಪ್ರವೇಶ ಪಡೆದುದು ನಂಬೂದಿರಿಗಳ ಮೂಲಕ. ನಂಬೂದಿರಿ ಬ್ರಾಹ್ಮಣರು ಸಂಸ್ಕೃತ ಪಂಡಿತರು. ಅವರಿಗೆ ಮಲಯಾಳಂ ಭಾಷೆಯಲ್ಲಿದ್ದ ಪ್ರಬುದ್ಧತೆ ತೀರಾ ಕಡಿಮೆಯಾಗಿತ್ತು. ಕೇರಳದ ಸಾಮಾನ್ಯ ಜನರೊಡನೆ  ಬೆರೆಯಬೇಕಾದ ಸಂದರ್ಭದಲ್ಲಿ ಸಂಸ್ಕೃತ ಭಾಷೆಯು ಉಪಯೋಗಕ್ಕೆ ಬರುವುದಿಲ್ಲ ಎಂಬ ವಾಸ್ತವ ಅವರಿಗೆ ತಿಳಿಯಿತು. ಹಾಗಾಗಿ ಸಂಸ್ಕೃತ ಮತ್ತು ಮಲಯಾಳವನ್ನು ಸೇರಿಸಿದ ಒಂದು ಭಾಷೆಯನ್ನು ಅವರು ಉಪಯೋಗಿಸತೊಡಗಿದರು.

ಆರಂಭದಲ್ಲಿ ಅದು ತುಂಬಾ ಕೃತಕವಾದ ಭಾಷೆಯೆನಿಸಿತ್ತು. ಸಂಸ್ಕೃತದ ಹಾಗೂ ಮಲಯಾಳಂನ ವ್ಯಾಕರಣ ನಿಯಮಗಳಿಗೆ ಸ್ಪಷ್ಟವಾದ ವ್ಯತ್ಯಾಸಗಳಿವೆಯಲ್ಲ. ಆರಂಭ ಕಾಲದಲ್ಲಿ ಸಂಸ್ಕೃತ ವ್ಯಾಕರಣ ನಿಯಮಗಳನ್ನು ಅನುಸರಿಸಿಯೇ ನಂಬೂದಿರಿಗಳು ಮಲಯಾಳಂ ಭಾಷೆಯನ್ನು ಉಪಯೋಗಿಸತೊಡಗಿದರು. ಕಾಲವು ಗತಿಸಿದಂತೆ ಆ ಕೃತಕ ಶೈಲಿಯಲ್ಲಿ ಬದಲಾವಣೆ ತಲೆದೋರಿತು. ಹಾಗೆ ಶುದ್ಧ ಮಣಿಪ್ರವಾಳ ರೂಪುಗೊಂಡಿತು.

ಪ್ರಾಚೀನ ಮಣಿಪ್ರವಾಳ ಕಾಲದಲ್ಲಿ ಬಂದ ಪ್ರಧಾನ ಕೃತಿಗಳು ‘ವೈಶಿಕತಂತ್ರಂ’, ‘ಚಂದ್ರೋತ್ಸವಂ’, ‘ಉಣ್ಣಿನೀಲಿ ಸಂದೇಶಂ’ ಮೊದಲಾದವುಗಳು.

ಸಾಹಿತ್ಯ

ಎಲ್ಲಾ ಸಾಹಿತ್ಯದ ಆರಂಭದಲ್ಲಿಯೂ ಹಾಡುಗಳ ರಚನೆಗಳನ್ನೇ ಕಾಣುತ್ತೇವೆ. ಮಲಯಾಳಂನ ಸ್ಥಿತಿಯೂ ಇದಕ್ಕೆ ಭಿನ್ನವಲ್ಲ. ಹೀಗಿರುವ ಹಾಡುಗಳಲ್ಲಿ ಅಧಿಕವೂ ಸ್ತೋತ್ರ ರೂಪದಲ್ಲಿವೆ. ಸ್ತೋತ್ರ ರೂಪದ ಹಾಡುಗಳೊಡನೆ ಕೆಲವು ವಿನೋದ ಗಾನಗಳು ಮಲಯಾಳಂನಲ್ಲಿ ರಚನೆಯಾಗಿವೆ. ಇವುಗಳನ್ನು ಹಳ್ಳಿಯ ಹಾಡುಗಳೆಂದೋ (ನಾಡನ್ ಪಾಟ್ಟ್), ಹಳ್ಳಿಗರ ಹಾಡು (ನಾಡೋಡಿ ಪಾಟ್ಟ್)ಗಳೆಂದೋ ಹೇಳಲಾಗುತ್ತದೆ. ಲಿಪಿ ರೂಪದಲ್ಲಿ ದಾಖಲೆ ಮಾಡದೆ ಮೌಖಿಕವಾಗಿಯೇ ಉಳಿದುಕೊಂಡು ಬಂದ ಈ ತೆರನ ಹಾಡುಗಳು ಇಂದಿಗೂ ಅನೇಕ ಇವೆ. ಹಳೆಯ ಹಾಡುಗಳಲ್ಲಿ ಹಲವು ಒಂದೊಂದು ಜಾತಿ ಸಮುದಾಯಗಳ ನಡುವೆ ಪ್ರಚಾರದಲ್ಲಿವೆ. ‘ಪುಳ್ಳವಪ್ಪಾಟ್’ (ಪುಳ್ಳುವರ ಹಾಡು) ಕುರತ್ತಿ ಪ್ಪಾಟ್ಟ್ (ಕೊರವರ ಹಾಡು) ಮೊದಲಾದವುಗಳನ್ನು ಇಲ್ಲಿ ಹೆಸರಿಸಬಹುದು. ಕಾಲ ಗತಿಸಿದಂತೆ ಕ್ರಿಶ್ಚಿಯನರ ‘ಅಡಚ್ಚುತುರಪ್ಪಾಟ್ಟ್’ ಮುಸಲ್ಮಾನರ ಸಮುದಾಯವರ  ‘ಮಾಪ್ಪಿಳಪ್ಪಾಟ್ಟ್’ ಎಂಬಿತ್ಯಾದಿ ಅನೇಕ ಹಾಡುಗಳು ಪ್ರಚಾರದಲ್ಲಿವೆ.

ಪಾಟು ಸಾಹಿತ್ಯ

ವಡಕ್ಕನ್ ಪಾಟ್ಟ್‌ಗಳು

ಮೇಲೆ ಹೆಸರಿಸಿದ ಪಾಟ್ಟುಗಳಲ್ಲದೆ ವಡಕ್ಕನ್ ಪಾಟ್ಟುಗಳು ಎಂದೂ ತೆಕ್ಕನ್ ಪ್ಪಾಟ್‌ಗಳು ಎಂದೂ ಹೆಸರಿಸಲಾಗುವ ಅನೇಕ ಹಾಡುಗಳಿವೆ. ಉತ್ತರ ಮಲಯಾಳಂನಲ್ಲಿ ರೂಪುಗೊಂಡ ಹಾಡುಗಳೇ ವಡಕ್ಕನ್ ಪಾಟ್ಟುಗಳು. ಆರೋಮಲ್ ಚ್ಚೇಕವರ್, ಒದೇನನ್ ಮೊದಲಾದ ವೀರ ಪುರುಷರ ಕತೆಗಳನ್ನು ಹೇಳುವ ಪಾಟ್ಟುಗಳಿವು. ಕೇಳಿಸಿಕೊಳ್ಳಲು ಇಂಪಾದ ಲಯವುಳ್ಳ ಹಾಗೂ ಸಂವಹನ ಸುಲಭವಾದ ಆಶಯಗಳುಳ್ಳ ಪಾಟ್ಟುಗಳಿವು.

ಈ ವಗ ಪೆಣ್ಣುಙಳ್ ಭೂಮಿಲುಂಡೋ
ಮಾನತ್ತೂಣ್ ಎಙಾನುಂ ಪೊಟ್ಟಿವೀಣೋ?
ಭೂಮಿನ್ ತನಿಯೊ ಮುಳಚ್ಚುವನ್ನೋ?
ಎಂದು ನಿರಮೆನ್ನು ಚೊಲ್ಲೇಂಡ್ ಞಾನ್!
ಕುನ್ನತ್ತ್ ಕೊನ್ನಯುಂ ಪೂತ್ತ ಪೋಲೇ
ಇಳಮಾವಿನ್ ತಯ್ಯುಂ ತಳಿರ್ತಪೋಲೆ
ವಯನಾಡನ್ ಮಞಲ್ ಮುರಿಞಪೋಲೇ ……

(ಈ ತೆರನ ಹೆಣ್ಣುಗಳು ಭೂಮಿಯಲ್ಲಿರುವರೋ!
ಆಕಾಶದ ಕಂಬ ಮುರಿದು ಬಿದ್ದುವೋ?
ಭೂಮಿಯಿಂದ ತಾವಾಗಿ ಮೊಳೆತು ಬಂದರೋ
ಯಾವ ಬಣ್ಣವೆಂದು ಹೇಳಲಿ ನಾನು!
ಬೆಟ್ಟದಲ್ಲಿ ಕಕ್ಕೆ ಹೂಬಿಟ್ಟಂತೆ
ಎಳ ಮಾವಿನ ತರುವು ಚಿಗುರಿದಂತೆ
ಎಳಗರಿಯು ಸೋಗೆಯಾದ ಬಣ್ಣದಂತೆ
ವಯನಾಡಿನ ಅರಶಿನವ ತುಂಡರಿಸಿದಂತೆ ……….)

ಒಬ್ಬಾಕೆ ಸುಂದರಿಯ ರೂಪವರ್ಣನೆ ಇದು. ಇದರಂತೆ ಹೃದಯಂಗಮವಾದ ಅನೇಕ ವರ್ಣನೆಗಳು ವಡಕ್ಕನ್ ಪಾಟ್ಟುಗಳಲ್ಲಿವೆ.

ತೆಕ್ಕನ್ ಪಾಟ್ಟುಗಳು

ದಕ್ಷಿಣ ಮಲಯಾಳದಲ್ಲಿ ರೂಪು ಪಡೆದ ಹಾಡುಗಳನ್ನು ತೆಕ್ಕನ್ ಪಾಟ್ಟುಗಳು ಎಂದು ಹೇಳಲಾಗುತ್ತದೆ. ಈ ಪಾಟ್ಟುಗಳ ಭಾಷೆಯಲ್ಲಿ ತಮಿಳಿನ ಮಿಶ್ರಣವಿದೆ. ದಕ್ಷಿಣ ತಿರುವಿ ದಾಂಕೂರು ತಮಿಳುನಾಡಿನೊಡನೆ ಸೇರಿಕೊಂಡಿರುವುದರಿಂದ ಹೀಗಾಗಿರಬಹುದು. ಇವು ಕೂಡಾ ವೀರಗಾಥೆಗಳೇ. ಈ ಪಾಟ್ಟುಗಳಲ್ಲಿ ಪ್ರಮುಖವಾದುದು ‘ಇರವಿಕುಟ್ಟಿಪ್ಪಿಳ್ಳ ಪೊರ್‌ಪ್ಪಾಟ್ಟ್’.

ಹಿಂದೆ ಹೇಳಿದ ಹಳ್ಳಿಯ ಹಾಡುಗಳಷ್ಟು ಹಳಮೆ ಈ ಹಾಡುಗಳಿಗಿಲ್ಲ. ವಡಕ್ಕನ್ ಪಾಟ್ಟುಗಳು ಹಾಗೂ ತೆಕ್ಕನ್ ಪಾಟ್ಟುಗಳು ನಡೆದ ಘಟನೆಗಳನ್ನು ಕುರಿತಾಗಿ ಹಾಡಿದವುಗಳು.

ಚಂಪು ಮತ್ತು ಸಂದೇಶ ಕಾವ್ಯಗಳು

೧೩ ಮತ್ತು ೧೪ನೆಯ ಶತಮಾನದಲ್ಲಿ ಮಲಯಾಳಂನಲ್ಲಿ ಅನೇಕ ಚಂಪು ಹಾಗೂ ಸಂದೇಶ ಕಾವ್ಯಗಳು ರಚನೆಯಾದವು. ಸಂಸ್ಕೃತ ಮೇಘದೂತದ ಮಾದರಿಯಲ್ಲಿ ರಚಿಸಿದ ಕಾವ್ಯಗಳನ್ನು ಸಂದೇಶ ಕಾವ್ಯಗಳು ಎಂದು ಹೇಳಲಾಗುತ್ತದೆ. ಉಣ್ಣಿಯಾಚ್ಚಿಚರಿತಂ, ಉಣ್ಣಿಚಿರುದೇವಿ ಚರಿತಂ ಮೊದಲಾದ ಚಂಪೂ ಕಾವ್ಯಗಳು ೧೩ನೆಯ ಶತಮಾನದಲ್ಲಿಯೂ ಉಣ್ಣಿಯಾಡಿ ಚರಿತಂ ೧೪ನೆಯ ಶತಮಾನದಲ್ಲಿಯೂ ರಚಿತವಾಯಿತು. ಈ ಕೃತಿಗಳ ನಾಯಿಕೆಯರು ದೇವದಾಸಿಯರು. ಪ್ರಾಚೀನ ಮಣಿಪ್ರವಾಳ ಕಾವ್ಯಗಳಲ್ಲಿ ಪ್ರಸಿದ್ಧವಾದ ಕೃತಿ  ‘ಉಣ್ಣಿನೀಲಿ ಸಂದೇಶ’. ಇದು ಒಂದು ಸಂದೇಶ ಕಾವ್ಯ. ಇದರ ಕರ್ತೃ ಯಾರೆಂದು ತಿಳಿದು ಬಂದಿಲ್ಲ. ಕಾಳಿದಾಸನ ಮೇಘಸಂದೇಶವನ್ನು ಅನುಸರಿಸಿದ ಈ ಕೃತಿ ಕ್ರಿ.ಶ. ೧೩೫೦ಕ್ಕೂ ೧೩೬೫ಕ್ಕೂ ನಡುವೆ ರಚನೆಯಾಗಿರಬಹುದೆಂದು ಅಭಿಪ್ರಾಯ ಪಡಲಾಗಿದೆ. ೧೪೦೦ರ ಸುಮಾರಿನಲ್ಲಿ ರಚಿತವಾದ ಮತ್ತೊಂದು ಕೃತಿ ‘ಕೋಕ ಸಂದೇಶ’. ಮೇದಿನೀ ವೆಣ್ಣಿಲಾವ್ ಎಂಬ ಹೆಸರಿನ ದೇವದಾಸಿ ನಡೆಸಿದ ಚಂದ್ರೋತ್ಸವವನ್ನು ವರ್ಣಿಸುವ ‘ಚಂದ್ರೋತ್ಸವಂ’ ಎಂಬ ಕೃತಿ ೧೫ನೆಯ ಶತಮಾನದಲ್ಲಿ ರಚಿತವಾಯಿತು. ಮಣಿಪ್ರವಾಳವು ಶ್ರೀಮಂತಿಕೆಯಿಂದಲೂ, ವಿಲಾಸದಿಂದಲೂ ಬದುಕನ್ನು ನಡೆಸುವ ಒಂದು ಜನಸಮುದಾಯದ ವಿಲಾಸ ವಿನೋದಗಳನ್ನು ಅನಾವರಣಗೊಳಿಸುವ ಸಾಹಿತ್ಯ ಪಂಥವಾಗಿತ್ತು.

ಸರಿಸುಮಾರು ಇದೇ ಕಾಲಘಟ್ಟದಲ್ಲಿ ಇದಕ್ಕಿಂತಲೂ ಭಿನ್ನವಾಗಿ ಮತ್ತೊಂದು ಪಂಥವೂ ಸಾಹಿತ್ಯದಲ್ಲಿ ಪ್ರಕಟವಾಯಿತು. ಪೌರಾಣಿಕ ಕತೆಗಳನ್ನು ಆಧರಿಸಿ ಭಕ್ತಿ ಭಾವದಿಂದ ಕಾವ್ಯ ರಚನೆ ಮಾಡಲು ಕೆಲವು ಮಂದಿ ಕವಿಗಳು ಮುಂದಾಗಿದ್ದರು. ಅಂಥವರಲ್ಲಿ ಪ್ರಮುಖನಾದವ ಚೆರುಶ್ಯೇರಿ. ಉದಯವರ್ಮನ್ ಕೋಲತ್ತಿರಿ(೧೪೪೬-೧೪೭೫)ಯ ಆಶ್ರಯದಲ್ಲಿದ್ದ ಚೆರುಶ್ಯೇರಿ ರಚಿಸಿದ ‘ಕೃಷ್ಣಗಾಥ’ವು ಶ್ರೀಕೃಷ್ಣನ ಜೀವನ ಚರಿತ್ರೆಯನ್ನು ಸುಂದರವಾದ ಭಾಷೆಯಲ್ಲಿ ಸಾರುತ್ತದೆ. ಸಾಮುದಿರಿಪಾಡನ ಆಸ್ಥಾನದಲ್ಲಿದ್ದ ಹದಿನೆಂಟು ಕವಿಗಳಲ್ಲಿ ಪ್ರಮುಖನಾದ ಪೂನಂ ನಂಬೂದಿರಿ ರಾಮಾಯಣ ಚಂಪುವನ್ನು ಬರೆದ. ಮೞಮಂಗಲ ಎಂಬ ಮತ್ತೊಬ್ಬ ಚಂಪೂ ಕವಿಯೂ ಪ್ರಸಿದ್ಧನಾಗಿದ್ದ. ಕೊಚ್ಚಿರಾಜನಾದ ಕೇಶವರಾಮವರ್ಮನ (೧೫೬೫-೧೬೦೧) ಆಸ್ಥಾನ ಕವಿಯಾಗಿದ್ದ ಮೞಮಂಗಲ ನಾರಾಯಣ ನಂಬೂದಿರಿ ನೈಷದಂ, ರಾಜರತ್ನಾವಲೀಯಂ ಮೊದಲಾದ ಚಂಪೂ ಕೃತಿಗಳನ್ನು ಬರೆದ. ಚಾಕ್ಯಾರರು ತಮ್ಮ ನೃತ್ಯ ರೂಪಕವಾದ ‘ಕೂತ್ತ್’ಗೆ ಈ ಚಂಪೂ ಕೃತಿಗಳನ್ನು ಬಳಸುತ್ತಿದ್ದರು.

ತುಂಜತ್ತ್ ಎೞುತ್ತಚ್ಚನ್

ಆಧುನಿಕ ಮಲಯಾಳಂನ ಸೃಷ್ಟಿಕರ್ತನೆಂದು ತುಂಜತ್ತ್ ಎೞುತ್ತಚ್ಚನ್ ಪ್ರಸಿದ್ಧ ನಾಗಿದ್ದಾನೆ. ೧೬ನೆಯ ಶತಮಾನದ ಕೊನೆಗೂ ಹಾಗೂ ೧೭ನೆಯ ಶತಮಾನದ ಆರಂಭದಲ್ಲಿಯೂ ಆತ ಜೀವಿಸಿದ್ದಿರಬೇಕು. ಭಕ್ತಿ ಪಂಥದ ಪ್ರಮುಖ ವಕ್ತೃ ಎೞುತ್ತಚ್ಚನ್. ಈತ ಕೇರಳದಲ್ಲಿ ಮನೆ ಮಾತಾದ ಕವಿ. ಕಿಳಿಪಾಟ್ಟು ಎಂಬ ಹೆಸರಿನ ಕಾವ್ಯ ಶಾಖೆಯಲ್ಲಿ ಆತನ ಕೃತಿಗಳನ್ನು ಗುರುತಿಸಲಾಗುತ್ತದೆ. ಆಧ್ಯಾತ್ಮ ರಾಮಾಯಣಂ, ಮಹಾಭಾರತ, ಹರಿನಾಮ ಕೀರ್ತನಂ, ಭಾಗವತಂ, ದೇವೀ ಮಹಾತ್ಮ್ಯಂ ಮೊದಲಾದವು  ಆತನ ಕೃತಿಗಳು. ಕರ್ಕಟಕ ಮಾಸದಲ್ಲಿ ಈತನ ಆಧ್ಯಾತ್ಮ್ಯ ರಾಮಾಯಣವನ್ನು ಕೇರಳೀಯರು ಮನೆ ಮನೆಗಳಲ್ಲಿ ಪಾರಾಯಣ ಮಾಡುತ್ತಾರೆ. ಹಾಗಾಗಿ ಈ ತಿಂಗಳಿಗೆ ರಾಮಾಯಣ ಮಾಸ ಎಂದೇ ಹೆಸರು.

ಭಕ್ತಿ ಪಂಥದ ಮತ್ತೊಬ್ಬ ಗಮನಾರ್ಹ ಕವಿ ಪೂಂತಾನಂ ನಂಬೂದಿರಿ (೧೫೪೯-೧೬೪೦). ಗುರುವಾಯೂರಪ್ಪನ ಭಕ್ತನಾಗಿದ್ದ ಪೂಂತಾನಂ ಕರ್ಣಾಮೃತಂ, ಜ್ಞಾನಪಾನಂ, ಸಂತಾನಗೋಪಾಲಂ ಮೊದಲಾದ ಕೃತಿಗಳನ್ನು ರಚಿಸಿದ.

ಆಟಕಥ

೧೭ನೆಯ ಶತಮಾನದ ಉತ್ತರಾರ್ಧವು ಮಲಯಾಳ ಸಾಹಿತ್ಯದಲ್ಲಿ ಆಟಕಥಗಳ ಕಾಲ. ಕಥಕಳಿ ಎಂಬ ಕಲಾರೂಪದ ಪ್ರಚಾರದ ಅವಶ್ಯಕತೆಗಾಗಿ ರಚಿತವಾದವುಗಳು ಆಟಕಥಗಳು. ಕೋಝಿಕೋಡು ಮತ್ತು ಕೊಟ್ಟಾರಕ್ಕರದ ರಾಜರುಗಳು ಕೃಷ್ಣನಾಟ ಮತ್ತು ರಾಮನಾಟವನ್ನು ಆರಂಭಿಸಿದ್ದರು. ಕೋಟ್ಟಯಂ ತಂಬುರಾನನು ಬಕವಧಂ, ಕಲ್ಯಾಣ ಸೌಗಂಧಿಕಂ, ಕಿವ್ಮಿೂರವಧಂ, ಕಾಲಕೇಯವಧಂ ಮೊದಲಾದವುಗಳನ್ನು ರಚಿಸಿದ. ಆತನ ಕಾಲ ೧೭ನೆಯ ಶತಮಾನದ ಕೊನೆ ಹಾಗೂ ೧೮ನೆಯ ಶತಮಾನದ ಆರಂಭ. ೧೮ನೆಯ ಶತಮಾನದ ಆಟಕಥಾ ಸಾಹಿತ್ಯದಲ್ಲಿ ಗಮನಾರ್ಹವಾದ ಬೆಳವಣಿಗೆ ಕಾಣಿಸಿತು. ನಳಚರಿತಂ ಬರೆದ ಉಣ್ಣಾಯಿ ವಾರಿಯರ್ ಕಥಕಳಿ ಕರ್ತೃಗಳಲ್ಲಿಯೇ ಪ್ರಸಿದ್ಧ. ಆತನ ನಳಚರಿತವನ್ನು ಕಾಳಿದಾಸ ಶಾಕುಂತಲದೊಡನೆ ವಿಮರ್ಶಕರು ತುಲನೆ ಮಾಡಿದ್ದಾರೆ. ಇರಯಿಮ್ಮನ್ ತಂಬಿ, ಧರ್ಮರಾಜ, ಅಶ್ವತಿತಿರುನಾಳ್ ಮೊದಲಾದವರು ಪ್ರಮುಖ ಆಟಕಥಾ ಕರ್ತೃಗಳು.

ಕುಂಜನ್‌ನಂಬ್ಯಾರ್

೧೮ನೆಯ ಶತಮಾನದಲ್ಲಿ ಮಲಯಾಳಂ ಸಾಹಿತ್ಯವನ್ನು ಸಂಪದ್ಭರಿತವನ್ನಾಗಿಸಿದ ಇಬ್ಬರು ಮೇಧಾವಿಗಳು ಕುಂಜನ್ ನಂಬ್ಯಾರ್ ಮತ್ತು ರಾಮಪುರತ್ತ್ ವಾರಿಯರ್. ತುಳ್ಳಲ್ ಹಾಡುಗಳು ನಂಬ್ಯಾರರ ಪ್ರಮುಖ ಕೊಡುಗೆ. ನಂಬ್ಯಾರ್ ಪುರಾಣ ಕತೆಗಳನ್ನು ಆಧರಿಸಿ ಬರೆದ. ಆದರೆ ಸಮಕಾಲೀನ ಕೇರಳ ಸಮಾಜವನ್ನು ವ್ಯಂಗ್ಯ ವಿಡಂಬನೆಗಳಿಗೆ ಗುರಿಮಾಡಿ ಪರಿಣಾಮಕಾರಿಯಾದ ವಿಡಂಬನೆಗಳನ್ನು ಮಾಡುವುದು ನಂಬ್ಯಾರ್‌ರಿಗೆ ಸಾಧ್ಯವಾಯಿತು. ಕಾವ್ಯವನ್ನು ಸಮಾಜ ವಿಮರ್ಶೆಗೆ ಉಪಾಧಿಯನ್ನಾಗಿ ಪರಿವರ್ತಿಸಿದ ಮಲಯಾಳಂ ಕವಿ ಕುಂಜನ್ ನಂಬ್ಯಾರ್. ರಾಮಪುರತ್ತ್ ವಾರಿಯರ್‌ರ ಕುಚೇಲವೃತ್ತಂ ವಂಚಿಪಾಟ್ಟ್ (ದೋಣಿ ಹಾಡು) ಮಲಯಾಳಂನ ಸುಂದರವಾದ ಭಕ್ತಿ ಕಾವ್ಯಗಳಲ್ಲೊಂದೆನಿಸಿದೆ.

ಕೇರಳ ಕಾಳಿದಾಸ ಮತ್ತು ಕೇರಳ ಪಾಣಿನಿ

ಕುಂಜನ್ ನಂಬ್ಯಾರ್‌ನ ಬಳಿಕ ಅಧರ್ ಶತಮಾನ ಕಾಲ ಮಲಯಾಳಂ ಸಾಹಿತ್ಯ ಕ್ಷೇತ್ರದಲ್ಲಿ ಸೃಜನಶೀಲವಾದ ಸಾಹಿತ್ಯ ರಚನೆಗಳು ಯಾವುದೂ ಆಗಿಲ್ಲ. ೧೮೨೯ರಲ್ಲಿ ಸ್ವಾತಿತಿರುನಾಳ್ ಮಹಾರಾಜ ರಾಜ್ಯಾಧಿಕಾರವನ್ನು ಪಡೆದ. ಕಲೆ ಸಾಹಿತ್ಯ ಕ್ಷೇತ್ರಗಳಲ್ಲಿ ಅಸದೃಶವಾದ ಬೆಳವಣಿಗೆ ಸ್ವಾತಿತಿರುನಾಳನ ಆಳ್ವಿಕೆಯ ಕಾಲದಲ್ಲಿ ಆಗಿತ್ತು. ಹಲವು ಭಾಷೆಗಳಲ್ಲಿಯೂ ಸಂಗೀತ ಕೀರ್ತನೆಗಳನ್ನು ಆತ ರಚಿಸಿದ. ಕನ್ನಡದಲ್ಲಿಯೂ ಆತ ಒಂದು ಕೀರ್ತನೆಯನ್ನು ಬರೆದಿದ್ದಾನೆ. ಆತನ ಒಡನಾಡಿಯಾದ ಇರಯಿಮ್ಮನ್‌ತಂಬಿ ಅವನ ಅನುಗ್ರಹಕ್ಕೆ ಒಳಗಾದ ಒಬ್ಬ ಕವಿ. ಇಂಗ್ಲಿಷ್ ಶಿಕ್ಷಣದ ಪ್ರಚಾರ ನಂತರ ಉಂಟಾದ ಸಾಂಸ್ಕೃತಿಕ ನವೋತ್ಥಾನವು ಸ್ವಾತಿತಿರುನಾಳ್‌ರ ಆಳ್ವಿಕೆಯೊಂದಿಗೆ ಆರಂಭವಾಗುತ್ತದೆ. ಕ್ರಿಶ್ಚಿಯನ್ ಮಿಷನರಿಗಳು ಭಾಷೆಯನ್ನು ಕುರಿತಂತೆ ನಡೆಸಿದ ಕೆಲಸಗಳು ಕೇರಳವರ್ಮ ವಲಿಯಕೋಯಿ ತಂಬುರಾನನ ನೇತೃತ್ವದಲ್ಲಿನ ಪಠ್ಯಪುಸ್ತಕ ರಚನಾ ಸಮಿತಿಯ ಕೆಲಸಗಳು ಭಾಷೆಯ ಬೆಳವಣಿಗೆಗೆ ತುಂಬಾ ಕೊಡುಗೆ ನೀಡಿವೆ. ಇಂಗ್ಲಿಷ್, ಸಂಸ್ಕೃತ, ಮಲಯಾಳಂಗಳಲ್ಲಿ ಸಮಾನ ಪಾಂಡಿತ್ಯವನ್ನು ಹೊಂದಿದ ಕೇರಳವರ್ಮ ಒಬ್ಬ ಪ್ರಮುಖ ಕವಿಯೂ ಆಗಿದ್ದ. ಆತನ ‘ಶಾಕುಂತಳ’ ಅನುವಾದ ಹಾಗೂ ‘ಮಯೂರ ಸಂದೇಶ’ ಪ್ರಸಿದ್ಧವಾಗಿದೆ. ಕೇರಳ ಕಾಳಿದಾಸನೆಂದು ಹೆಸರುವಾಸಿ ಯಾಗಿದ್ದ ಈತನ ಸೋದರಳಿಯನಾದ ಏ.ಆರ್. ರಾಜರಾಜವರ್ಮನು ಕೇರಳ ಪಾಣಿನೀಯಂ ಎಂಬ ಭಾಷಾ ವ್ಯಾಕರಣ ಗ್ರಂಥವನ್ನು ರಚಿಸಿ ಕೇರಳ ಪಾಣಿನಿ ಎಂಬ ಹೆಸರು ಪಡೆದ. ಕೇರಳ ಪಾಣಿನಿಯಂ ಅಲ್ಲದೆ ರಾಜಾರಾಜವರ್ಮನು ಭಾಷಾ ಭೂಷಣಂ, ವೃತ್ತ ಮಂಜರಿ ಮೊದಲಾದ ಸಾಹಿತ್ಯ ಶಾಸ್ತ್ರ ಗ್ರಂಥಗಳನ್ನು ಹಾಗೂ ಕಾಳಿದಾಸನ ಕೃತಿಗಳ ಅನುವಾದಗಳನ್ನು ಮಾಡಿ ಪ್ರಕಟಿಸಿದ.

ಕೊಡುಙಲ್ಲೂರ್ ಕವಿಗಳು

ಇದರ ಜೊತೆಗೆ ಮಧ್ಯಕೇರಳದಲ್ಲಿ ಕೊಡುಙಲ್ಲೂರ್ ರಾಜರ ನೇತೃತ್ವದಲ್ಲಿ ಹೊಸತೊಂದು ಸಾಹಿತ್ಯಪಂಥ ರೂಪುಗೊಳ್ಳುತ್ತಿತ್ತು. ಕೊಡುಙಲ್ಲೂರ್ ಅರಮನೆಯ ಕುಞಾಕುಟ್ಟನ್ ತಂಬುರಾನ್ ಅದರ ನೇತೃತ್ವ ವಹಿಸಿದ್ದ. ಈತ ವ್ಯಾಸಭಾರತವನ್ನು ಸಂಪೂರ್ಣ ಮಲಯಾಳಂಗೆ ಭಾಷಾಂತರಿಸಿದ. ಕೇರಳ ವ್ಯಾಸನ್ ಎಂಬ ಕೀರ್ತಿಗೂ ಈತ ಪಾತ್ರನಾದ. ಕೊಡುಙಲ್ಲೂರ್ ಅರಮನೆಯಲ್ಲಿ ಸಮ್ಮೇಳನಗೊಂಡ ಕವಿಗಳಲ್ಲಿ ವೆಣ್ಮಣಿ, ಶಿವೊಳ್ಳಿ, ನಡುವಂ, ಒರವಂಕರ ಮೊದಲಾದ ನಂಬೂದಿರಿ ಕವಿಗಳೂ ಇದ್ದರು. ಈ ನಂಬೂದಿರಿ ಕವಿಗಳನ್ನು ವೆಣ್ಮಣಿ ಕವಿಗಳು ಎಂದು ಕರೆಯುವುದಿದೆ. ಮಲಯಾಳಂಗೆ ಪ್ರಾಮುಖ್ಯ ನೀಡಿ ಒಂದು ಹೊಸ ಮಣಿಪ್ರವಾಳ ಶೈಲಿಯನ್ನೇ ವೆಣ್ಮಣಿ ಕವಿಗಳು ರೂಪಿಸಿದರು. ಆ ಕಾಲಘಟ್ಟದಲ್ಲಿ ಪರಿಶ್ರಮಿಗಳಾದ ಮಲಯಾಳಂ ಕವಿಗಳು ಮಲಯಾಳಂನಲ್ಲಿ ಮಹಾಕಾವ್ಯ ರಚನೆಗೆ ಮುಂದಾದರು. ಅವರಲ್ಲಿ ಅೞಗತ್ತು ಪದ್ಮನಾಭಕುರುಪ್ ಮೊದಲಿಗ. ಆತ ಬರೆದ  ‘ರಾಮಚಂದ್ರ ವಿಲಾಸ ’ ಮಲಯಾಳಂನ ಮೊದಲ ಮಹಾಕಾವ್ಯ. ಉಳ್ಳೂರರ ಉಮಾಕೇರಳಂ, ಪಂದಳಂ ಕೇರಳವರ್ಮನ ‘ರುಕ್ಮಾಂಗದ ಚರಿತಂ’ ವಳ್ಳತ್ತೋಳರ  ‘ಚಿತ್ರೋಗಂ’, ಕೆ.ಸಿ. ಕೇಶವಪಿಳ್ಳೆಯ ‘ಕೇಶವೀಯಂ’ ಮೊದಲಾದವು ಮಲಯಾಳಂನ ಇತರ ಪ್ರಸಿದ್ಧ ಮಹಾಕಾವ್ಯಗಳು.