ಪ್ರಾಚೀನವಾದ ದ್ರಾವಿಡ ಆಚರಣೆಗಳು, ಸಂಪ್ರದಾಯ ರೂಢಿಯಲ್ಲಿದ್ದ ಕಾಲದ ವರೆಗೂ ಜನರಿಗೆ ಸಂಘಟಿತವಾದ ಆರಾಧನ ಕೇಂದ್ರಗಳ ಅಗತ್ಯ ಕಂಡು ಬರಲಿಲ್ಲ. ಎಂದರೆ ಬೌದ್ಧ – ಜೈನ – ಬ್ರಾಹ್ಮಣ ಮತಗಳ ವ್ಯವಸ್ಥೆಗಳು ಆದರ್ಶಗಳನ್ನು ಅಳವಡಿಸಿ ರೂಪಿಸಿದ ಸಂಸ್ಥೆಗಳು ಅದರ ಸ್ಥಾಪಕರ ನಂಬಿಕೆಗಳು ಪ್ರಚಾರಕ್ಕೆ ಬಂದುವು. ಈ ವಿಷಯದಲ್ಲಿ ಅವರು ತಮ್ಮೊಳಗೆ ಪರಸ್ಪರ ಸ್ಫರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಂಡಿದ್ದರು. ಇತರ ಮತಗಳಿಗೆ ಪ್ರತಿಯಾಗಿ ಅನೇಕ ಹಿಂದೂ ದೇವಾಲಯಗಳು ತಲೆಯೆತ್ತಿದ್ದವು. ಅವು ಕ್ರಮೇಣ ಜನರ ಸಾಂಸ್ಕೃತಿಕ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದವು.

ಕ್ರಿ.ಶ. ಎಂಟನೆಯ ಶತಮಾನದಲ್ಲಿ ಕೇರಳದಲ್ಲಿ ದೇವಾಲಯಗಳನ್ನು ನಿರ್ಮಿಸಲಾರಂಭಿಸಿದರು. ಮಹೋದಯಪುರವನ್ನು ಆಳುತ್ತಿದ್ದ ಕುಲಶೇಖರ ಚಕ್ರವರ್ತಿಗಳ ಕಾಲದಲ್ಲಿ (ಕ್ರಿ.ಶ.೮೦೦-೧೧೦೨) ಈ ಸಂಪ್ರದಾಯ ಅಭಿವೃದ್ದಿ ಹೊಂದಿತು. ಈ ಕಾಲಘಟ್ಟದಲ್ಲಿ ವಾಣಿಜ್ಯ ವ್ಯವಹಾರಗಳ ಅಭಿವೃದ್ದಿ ಹಾಗೂ ವಾಣಿಜ್ಯ ವ್ಯವಹಾರಗಳು ಯಥೇಚ್ಛವಾಗಿ ನಡೆಯುತ್ತಿದ್ದುದರಿಂದ ವ್ಯಾಪಾರೀ ಜನರಲ್ಲಿ ಹಣ ಸಂಗ್ರಹ ಸಮೃದ್ಧವಾಗಿತ್ತು. ಸಮಾಜದ ಶ್ರೀಮಂತ ಜನರು ದೇವಾಲಯಗಳ ನಿರ್ಮಾಣಕ್ಕೆ ಹಣವನ್ನು ದಾನ ನೀಡುವಲ್ಲಿ ಪರಸ್ಪರ ಸ್ಪರ್ಧೆಗಿಳಿದರು. ಈ ಕಾಲಘಟ್ಟದಲ್ಲಿಯೇ ಕೇರಳದ ಬಹುತೇಕ ಹಿಂದೂ ದೇವಾಲಯಗಳು ರೂಪುಗೊಂಡವು. ಕ್ರಿ.ಶ. ೮೨೦-೮೪೪ರವರೆಗೆ ರಾಜ್ಯವಾಳಿದ ರಾಜಶೇಖರವರ್ಮ ಕುಲಶೇಖರನ ಕಾಲದಲ್ಲಿ ಕ್ರಿ.ಶ. ೮೨೩ರಲ್ಲಿ ಕಂಡಿಯೂರ್ ಶಿವದೇವಸ್ಥಾನವನ್ನು ನಿರ್ಮಿಸ ಲಾಯಿತು. ಈ ಬಗೆಗೆ ಶಾಸನವೊಂದು ವಿವರವನ್ನೊದಗಿಸುತ್ತದೆ. ಹಿಂದೂ ಮತವನ್ನು ಹೆಚ್ಚು ಜನಪ್ರಿಯಗೊಳಿಸಲು ಅಧಿಕಾರ ವರ್ಗದವರು ಬೌದ್ಧಮತದಲ್ಲಿ ಪ್ರಚಾರದಲ್ಲಿದ್ದ ಜಾತ್ರೆ, ಮೆರವಣಿಗೆ, ಶಿಕ್ಷಣ ಚಟುವಟಿಕೆ, ಚಿಕಿತ್ಸೆ ಮೊದಲಾದ ಸೇವಾ ಕೈಂಕರ್ಯಗಳನ್ನು ಹಿಂದೂ ಮತದಲ್ಲಿಯೂ ಅಳವಡಿಸಿಕೊಂಡರು. ಈ ವೇಳೆಗಾಗಲೇ ಕ್ರೈಸ್ತ – ಯೆಹೂದಿ – ಇಸ್ಲಾಂ ಮತಗಳು ಸ್ವಯಂ ಆರಾಧನಾ ಕೇಂದ್ರಗಳನ್ನು ಸ್ಥಾಪಿಸಿ ಪ್ರಾದೇಶಿಕವಾಗಿ ಜನರನ್ನು ಆಕರ್ಷಿಸುವ ರೀತಿಯಲ್ಲಿ ಆರಾಧನೆಗಳನ್ನು ರೂಢಿಸಿಕೊಳ್ಳತೊಡಗಿದ್ದರು. ಹೀಗೆ ಧಾರ್ಮಿಕ ಮತ್ತು ಸಾಮಾಜಿಕ ಬದುಕಿನ ಕೇಂದ್ರಬಿಂದುವಾಗಿ ಕ್ರಮೇಣ ಧಾರ್ಮಿಕ ಕೇಂದ್ರಗಳು ರೂಪು ಪಡೆದವು.

ಪೂಜಾ ವಿಗ್ರಹಗಳು

. ಶೈವ ದೇವಾಲಯಗಳು

ಕೇರಳದಲ್ಲಿ ಹಿಂದೂಗಳು ತಮ್ಮ ಆರಾಧನಾ ಸಂಪ್ರದಾಯದಲ್ಲಿ ಎಲ್ಲಾ ಪ್ರಮುಖ ದೇವತೆಗಳೊಂದಿಗೆ ಉಪ ದೇವತೆಗಳನ್ನೂ ಪೂಜಿಸುವುದಿದೆ. ಶಿವ, ವಿಷ್ಣು, ಭಗವತಿ, ಶಾಸ್ತಾವ್, ಸುಬ್ರಹ್ಮಣ್ಯ, ಗಣಪತಿ ಮೊದಲಾದವರು ಪ್ರಧಾನ ದೇವತೆಗಳು. ಈ ದೇವತೆಗಳನ್ನು ಪ್ರತಿಷ್ಠಾಪಿಸಿದ ದೇವಾಲಯಗಳ ನಿರ್ಮಾಣದಲ್ಲಿ ಆಯಾ ಪ್ರದೇಶದ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿರುವುದನ್ನು ಗಮನಿಸಬಹುದು. ಕೋಟ್ಟಯಂ ಜಿಲ್ಲೆಯಲ್ಲಿ ಅನೇಕ ಶಿವ ದೇವಸ್ಥಾನಗಳನ್ನು ಕಾಣಬಹುದು. ಹಾಗೆಯೇ ಆಲಪ್ಪುೞ ಜಿಲ್ಲೆಯಲ್ಲಿ ವಿಷ್ಣು ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ಪ್ರಮುಖವಾದ ಶಾಸ್ತಾವ್ ದೇವಸ್ಥಾನಗಳು ಕೊಲ್ಲಂ, ಕೋಟ್ಟಯಂ, ಪತ್ತನಂತಿಟ್ಟ ಜಿಲ್ಲೆಗಳಲ್ಲಿವೆ.

ತಿರುವನಂತಪುರಂನ ವಲಿಯಶಾಲ, ಶ್ರೀಕಂಠೇಶ್ವರಂ, ಕೊಲ್ಲಂನ ರಾಮೇಶ್ವರ, ಚೆಂಗನ್ನೂರು, ಕವಿಯೂರು, ಕಂಡಿಯೂರು, ತಿರುಕೊರಟ್ಟಿ, ವೈಕ್ಕಂ, ಏಟ್ಟುಮಾನೂರು, ಕಡುತುರುತ್ತಿ, ಕೋಟ್ಟಯಂನ ತಿರುನಕ್ಕರ, ಚಂಗನಾಶ್ಯೇರಿಯ ವಾೞಪಳ್ಳಿ, ಪಾಲಾದ ಕಡಪ್ಪಾಟ್ಟೂರು, ಎರ್ನಾಕುಳಂ, ಪೆರುಮನಂ, ತೃಶ್ಯೂರ್ (ವಡಕ್ಕುನ್ನಾಥನ್) ತೃಕ್ಕಾರಿ ಯೂರ್, ಉದಯಂಪೇರೂರ್, ತಿರುವಂಚಿಕುಳಂ, ಎಲವಂಚೇರಿ (ಶ್ರೀ ಜೇರಪುರಂ ಶಿವ ದೇವಸ್ಥಾನ) ಪಾಲಕ್ಕಾಡಿನ ಕಲ್‌ಪಾತ್ತಿ, ಕೋಝಿಕೋಡಿನ ತಳಿಕ್ಷೇತ್ರಂ, ಕಿಳ್ಳಿ ಕುರಿಶ್ಯಿ ಮಂಗಲಂ, ತೃಕ್ಕಂಡಿಯೂರ್, ತೃಪಙೋಟ್ಟ್, ಕೊಟ್ಟಯೂರ್, ತಳಿಪ್ಪರಂಬ್, ಕಾತ್ತಿರಙಾಡ್ (ವೈದ್ಯನಾಥ ದೇವಸ್ಥಾನ), ಪರಶ್ಯಿನ ಕಡವ್ ಮೊದಲಾದೆಡೆಗಳಲ್ಲಿ ಪ್ರಮುಖ ಶಿವ ದೇವಸ್ಥಾನಗಳಿವೆ. ಆಧುನಿಕ ಕಾಲದಲ್ಲಿ ಶಿವಾರಾಧನೆಗೆ ದೊರೆತ ಪ್ರಾಧಾನ್ಯವನ್ನು ಹೇಳುವಾಗ ಸಮಾಜ ಸುಧಾರಕನಾದ ನಾರಾಯಣಗುರು ಅವರ ಪ್ರಯತ್ನಗಳನ್ನು ನೆನಪಿಸಿ ಕೊಳ್ಳಬಹುದು. ನೈಯಾಟ್ಟಿನ್‌ಕೆರೆ ತಾಲೂಕಿನಲ್ಲಿ ಅರುವಿಪುರುತ್ತ್‌ನಲ್ಲಿರುವ ಶಿವ ದೇವಸ್ಥಾನ ಮತ್ತು ಕಣ್ಣೂರಿನ ಶ್ರೀ ಸುಂದರೇಶ್ವರ ದೇವಾಲಯ ಹಾಗೂ ತಲಶ್ಯೇರಿಯ ಜಗನ್ನಾಥ ದೇವಾಲಯವನ್ನು ಅವರೇ ಸ್ಥಾಪಿಸಿದರು.

ಕೇರಳದ ಶೈವಾರಾಧನೆಯ ಕೇಂದ್ರಗಳಲ್ಲಿ ಈಗ ಒಳಗೊಳ್ಳದಿರುವ ಕೇರಳದ ಸಾಂಸ್ಕೃತಿಕ, ಸಾಮಾಜಿಕ ಬದುಕಿನ ಅವಿನಾಸಂಬಂಧವನ್ನು ಹೊಂದಿರುವ ದೇವಾಲಯ ಕನ್ಯಾಕುಮಾರಿಯ ಶುಚೀಂದ್ರಂನಲ್ಲಿರುವ ಸ್ಥಾಣುನಾಥಸ್ವಾಮಿ ದೇವಾಲಯ. ಇದು ಹಿಂದೆ ಕೇರಳ ರಾಜ್ಯ ದಲ್ಲಿದ್ದು, ಪ್ರಸ್ತುತ ತಮಿಳುನಾಡಿನಲ್ಲಿದೆ.

. ವೈಷ್ಣವ ದೇವಾಲಯಗಳು

ದಕ್ಷಿಣ ಭಾರತದ ಪ್ರಮುಖ ವೈಷ್ಣವ ದೇವಾಲಯಗಳಲ್ಲಿ ಕೆಲವು ಕೇರಳದಲ್ಲಿಯೇ ಇವೆ. ಪ್ರಾಚೀನ ಕಾಲದಲ್ಲಿ ವೈಷ್ಣವ ಭಕ್ತರು ಕೀರ್ತಿಸುವ ಮಲೆನಾಡಿನ ಹದಿಮೂರು  ‘ದಿವ್ಯದೇಶ’ಗಳು ಇಲ್ಲಿಯೇ ಇವೆ. ತಿರುವನಂತಪುರಂನ ಶ್ರೀಪದ್ಮನಾಭಸ್ವಾಮಿ ದೇವಸ್ಥಾನ, ತಿರುವೆಲ್ಲಾದ ದೇವಸ್ಥಾನ, ವರ್ಕಲದ ಜನಾರ್ದನಸ್ವಾಮಿ ದೇವಸ್ಥಾನ, ತಿರುವೆಲ್ಲಾದ ಶ್ರೀವಲ್ಲಭ ದೇವಾಲಯ, ಆರನ್ಮುಳದ ಪಾರ್ಥಸಾರಥಿ ದೇವಸ್ಥಾನ, ತಿರುಚಿಟ್ಟಾಟ್, ತಿರುಪುಲಿಯೂರ್, ತಿರುವಂಚೂರ್ ಮೊದಲಾದೆಡೆಗಳಲ್ಲಿರುವ ವೈಷ್ಣವ ದೇವಾಲಯಗಳು. ಕೋಟ್ಟಯಂ ಜಿಲ್ಲೆಯ ತಿರುವಾರ್‌ಪ್ಪ್, ತೃಕ್ಕೊಡಿತಾನಂ, ಆಲಪುೞ ಜಿಲ್ಲೆಯ ಅಂಬಲಪು, ಎರ್ನಾಕುಳಂ ಜಿಲ್ಲೆಯ ತೃಡ್ಡಾಕ್ಕರ್, ತೃಪ್ಪುಣಿತ್ತುರ, ಪಾಲಕ್ಕಾಡಿನ ಸಮೀಪದ ಕೊಲ್ಲಂ ಕೋಡ್, ಕಾಚ್ಚಾಂಗುರಿಶ್ಯ, ತಿರುಮಿಟ್ಟಕೋಡ್, ಉತ್ತರ ವಯನಾಡಿನ ತಿರುವೆಲ್ಲ ಮೊದಲಾದೆಡೆಗಳಲ್ಲಿರುವ ದೇವಾಲಯಗಳು ಎಲ್ಲವು ಪ್ರಸಿದ್ಧವಾದ ವೈಷ್ಣವ ಕೇಂದ್ರಗಳಾಗಿವೆ. ಇವೆಲ್ಲವುಗಳಿಗಿಂತಲೂ ಹೆಚ್ಚು ವೈಷ್ಣವ ಭಕ್ತರನ್ನು ಆಕರ್ಷಿಸುವ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನವೂ ಕೇರಳದಲ್ಲಿದೆ. ತಿರುವನಂತಪುರಂನ ಅನಂತ ಪದ್ಮನಾಭ ದೇವಾಲಯದ ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿಯೂ ಒಂದು ಪ್ರಾಚೀನ ದೇವಾಲಯವಿದೆ.

ಶ್ರೀಕೃಷ್ಣ, ಪಾರ್ಥಸಾರಥಿ, ನರಸಿಂಹಮೂರ್ತಿ, ವಾಮನ, ಶ್ರೀರಾಮ, ಪರಶುರಾಮ ಹೀಗೆ ಹಲವು ರೂಪಗಳಲ್ಲಿ ವಿಷ್ಣುವಿನ ಆರಾಧನೆಯನ್ನು ಮಾಡಲಾಗುತ್ತದೆ. ಕೇರಳದಲ್ಲಿ ಮುಖ್ಯವಾದ ಶ್ರೀಕೃಷ್ಣ ದೇವಾಲಯಗಳು ಹಲವಿವೆ. ನೈಯ್ಯಟ್ಟಿನ್‌ಕರ, ಮಲಯಿನ್ ಕೀೞ್, ಕರಮಸಿಯಿಲ್ ತ್ರಿವಿಕ್ರಮ ಮಂಗಲಂ, ತೃಪ್ಪರಾಪ್ಪೂರ್, ಕೊಲ್ಲಂ ವಡಯಾಟ್ಟ್ ಕೋಟ, ಮಾವೆಲಿಕರ, ತೊಡುಪುೞ, ಭರಣಙಾನಂ, ಕುಡಮಾಳೂರ್, ಎರ್ನಾಕುಳಂ (ರವಿಪುರಂ), ಚೇಙಮಂಗಲಂ, ತೃಚ್ಚಂಬರಂ, ಕಡಲಾಯಿ (ಚಿರಯ್ಕಲ್), ಕುಂಬಳೆ ಮೊದಲಾದೆಡೆಗಳಲ್ಲಿ ಶ್ರೀಕೃಷ್ಣನ ದೇವಾಲಯಗಳಿವೆ. ಕೋಟ್ಟಯಂನ ಸಮೀಪದ ಅಯ್‌ಮನದ ಚಾತ್ತನ್‌ಕುಳಙರ ದೇವಾಲಯದಲ್ಲಿ ನರಸಿಂಹನ ಪ್ರತಿಷ್ಠೆ ಇದೆ. ಕಣ್ಣೂರು ಜಿಲ್ಲೆಯ ಎರನಲ್ಲೂರಿನ ಕುಪ್ಪತೋದಿನಲ್ಲಿ ನರಸಿಂಹನ ದೇವಾಲಯವಿದೆ. ವೈಕಂನ ಸಮೀಪ ತಿರುಮಣಿ ವೆಂಕಿಟಪುರಂ ತೃಣಯಂ ಕುಡಂ ದೇವಾಲಯ, ಪಾಲಾಗೆ ಸಮೀಪದ ರಾಮಪುರಂ, ತೃಪ್ರಯಾರ್, ಕಡವಲ್ಲೂರ್, ತಲಶ್ಯೇರಿಯ ತಿರುವಙಾಡ್, ದಕ್ಷಿಣ ವಯನಾಡಿನ ಪುಲ್‌ಪುಳ್ಳ, ಧರ್ಮಡದ ಅಂಡಲೂರ್‌ಕಾವ್ ಮೊದಲಾದೆಡೆಗಳಲ್ಲಿ ಶ್ರೀರಾಮನ ದೇವಸ್ಥಾನ ಗಳಿವೆ. ಅಂಡಲೂರ್ ಕಾವಿನ ಶ್ರೀರಾಮನನ್ನು ದೈವತ್ತಾರ್ ಎಂದು ಕರೆಯಲಾಗುತ್ತದೆ. ಈ ದೇವಾಲಯದಲ್ಲಿಯೇ ಲಕ್ಷ್ಮಣ (ಆನೆ ಮಾವುತ), ಹನುಮಂತ, ಸೀತೆ ಮಕ್ಕಳೊಂದಿಗೆ ಪ್ರತಿಷ್ಠಿತರಾಗಿದ್ದಾರೆ. ತೃಶ್ಯೂರ್ ಜಿಲ್ಲೆಯ ತಿರುವೆಲ್ಲಾಮಲ ದೇವಸ್ಥಾನವು ಕೋಟಯಂ ಜಿಲ್ಲೆಯ ವೆನ್ನಿಮಲ ದೇವಸ್ಥಾನವೂ ರಾಮ ಲಕ್ಷ್ಮಣರಿಗೆ ಅರ್ಪಿತವಾಗಿದೆ. ಎರ್ನಾಕುಳಂ ಜಿಲ್ಲೆಯ ಮುಳಿಕುಳದಲ್ಲಿ ಹಾಗೂ ಕೋಟ್ಟಯಂ ಜಿಲ್ಲೆಯಲ್ಲಿನ ತಿರುಮುೞುಕುಳದಲ್ಲೂ ಲಕ್ಷ್ಮಣ ಪ್ರತಿಷ್ಠೆಗಳಿವೆ. ಇರಿಂಜಾಲಕುಡದ ಕೂಡಲ್‌ಮಾಣಿಕ್ಯ ದೇವಾಲಯದಲ್ಲಿ ಭರತ ವಿಗ್ರಹವನ್ನು ಪಡಿಯೂರಿನಲ್ಲಿ ಶತ್ರುಘ್ನ ವಿಗ್ರಹವನ್ನು ಪೂಜಿಸಲಾಗುತ್ತದೆ. ರಾಮಪುರತ್ತ್‌ನ ಶ್ರೀರಾಮನ ದೇವಾಲಯ ಎರಡು ಮೈಲು ಸುತ್ತಳತೆಯಿದೆ. ಕುಡಪ್ಪಳಂ, ಅಮರಕ್ಕರ್, ಮೇತ್ತೀರಿ ಮೊದಲಾದೆಡೆಗಳಲ್ಲಿ ಅನುಕ್ರಮವಾಗಿ ಲಕ್ಷ್ಮಣ, ಭರತ, ಶತ್ರುಘ್ನರನ್ನು ಪ್ರತಿಷ್ಠಾಪಿಸಲಾಗಿದೆ. ವಯನಾಡಿವ ಪುಲ್‌ಪ್ಪಳ್ಳ ದೇವಾಲಯದಲ್ಲಿ ಸೀತೆ ಮತ್ತು ಲವಕುಶರೇ ಪ್ರತಿಷ್ಠಾ ಮೂರ್ತಿಗಳು.

ಕೇರಳದ ಗೌಡ ಸಾರಸ್ವತರೂ (ಕೊಂಕಣಿ ಬ್ರಾಹ್ಮಣರು) ಕೂಡಾ ವೈಷ್ಣವರೇ. ಅವರು ವಾಸಮಾಡುವೆಡೆಗಳಲ್ಲೆಲ್ಲ ವೈಷ್ಣವಾರಾಧನ ಕೇಂದ್ರಗಳನ್ನು ಕಾಣಬಹುದು. ಆಲಪ್ಪುೞ, ಚೇರ್ತಲ, ತುರವೂರ್ (ವೆಂಕಟಾಚಲಪತಿ ದೇವಸ್ಥಾನ), ಪುರಕ್ಕಾಡ್ (ವೇಣು ಗೋಪಾಲ ಮೂರ್ತಿ ದೇವಸ್ಥಾನ), ಕಾಯಂಕುಳಂ (ವಿಠೋಭ ದೇವಸ್ಥಾನ), ಎರ್ನಾಕುಳಂ, ಮಟ್ಟಾಂಚೇರಿ (ಶ್ರೀ ವೆಂಕಟೇಶ್ವರ ದೇವಸ್ಥಾನ), ಪಳ್ಳುರುತ್ತಿ, ಚೆರಾಯಿ (ಶ್ರೀ ವರಾಹ ದೇವಸ್ಥಾನ), ಮಂಜೇಶ್ವರ (ಭದ್ರನರಸಿಂಹ ಅನಂತೇಶ್ವರ ದೇವಸ್ಥಾನ) ಮೊದಲಾದೆಡೆಗಳಲ್ಲಿರುವ ಪೂಜಾ ವಿಗ್ರಹಗಳು ಗೌಡ ಸಾರಸ್ವತ ಬ್ರಾಹ್ಮಣರ ವೈಷ್ಣವಾರಾಧನೆಯನ್ನು ಸಾರಿ ಹೇಳುತ್ತವೆ.

ಕೇರಳದ ಕೆಲವು ದೇವಸ್ಥಾನಗಳಲ್ಲಿ ಶಿವ ಮತ್ತು ವಿಷ್ಣು ಪ್ರತಿಷ್ಠೆಗಳಿರುವುದನ್ನು  ಕಾಣಬಹುದು. ತಲಪ್ಪಳ್ಳಿ ತಾಲೂಕಿನ ಇರುನಿಲಕ್ಕೋಡ್, ಒಟ್ಟಪ್ಪಾಲಂನ ಸಮೀಪ ತೃಕ್ಕಂಕೋಡ್ ಮೊದಲಾದ ದೇವಸ್ಥಾನಗಳಲ್ಲಿ ಶಂಕರನಾರಾಯಣನ ಪ್ರತಿಷ್ಠೆಯಿದೆ. ಬಹುಶಃ ಇದು ಶೈವ ವೈಷ್ಣವ ಸಮನ್ವಯದ ಸಂಕೇತವಾಗಿರಬಹುದು.

ತಿರುವೆಲ್ಲಾದ ಪರಶುರಾಮ ಪ್ರತಿಷ್ಠೆ, ತೃಕ್ಕಾಕ್ಕರದ ವಾಮನಾವತಾರ ಪ್ರತಿಷ್ಠೆ, ತಿರುವನಂತಪುರ ಮತ್ತು ಗುರುವಾಯೂರುಗಳಲ್ಲಿನ ಉಪ ದೇವಸ್ಥಾನಗಳಲ್ಲಿರುವ ಅನಂತಶಾಯಿ ಪ್ರತಿಷ್ಠೆ, ಅಂಬಲಪುೞ ದೇವಾಲಯದಲ್ಲಿನ ಗುರುವಾಯೂರಪ್ಪನ ಪ್ರತಿಷ್ಠೆ, ಮೊದಲಾದವುಗಳೆಲ್ಲ ವಿಶಿಷ್ಟವಾಗಿ ಹೆಸರಿಸಬಹುದಾದ ದೇವಸ್ಥಾನಗಳು. ಕೊಡಂಗಲ್ಲೂರಿನ ಸಮೀಪ ಅತಿ ಪ್ರಾಚೀನವಾದ ಒಂದು ಶ್ರೀಕೃಷ್ಣ ದೇವಾಲಯ (ತೃಕ್ಕುಲಶೇಖರಪುರಂ) ಇದೆ ಎಂಬ ಸಂಗತಿ ಚರಿತ್ರೆಯಲ್ಲಿದೆ. ವೈಷ್ಣವ ದೇವಾಲಯಗಳಲ್ಲಿಯೂ ಶಿವ ಕ್ಷೇತ್ರಗಳಲ್ಲಿಯೂ ತಿರುವಂಬಾಡಿ ಶ್ರೀಕೃಷ್ಣಸ್ವಾಮಿ ದೇವರ ಸ್ಥಾನ ಉಪದೇವತೆಗಳ ಸ್ಥಾನದಲ್ಲಿದೆ ಎಂಬುದು ಗಮನಾರ್ಹ ಅಂಶ.

. ಭಗವತೀ ದೇವಸ್ಥಾನಗಳು

ಪ್ರಾಚೀನ ಕಾಲದಿಂದಲೇ ಕೇರಳದಲ್ಲಿ  ಭಗವತಿಯ ಆರಾಧನೆ ನಡೆಯುತ್ತಾ ಬಂದಿದೆ. ಭದ್ರಕಾಳಿ, ದುರ್ಗೆ, ಚಾಮುಂಡಿ, ಅನ್ನಪೂರ್ಣೇಶ್ವರಿ, ಪರಮೇಶ್ವರಿ, ತಂಬುರಾಟ್ಟಿ ಇವುಗಳಲ್ಲಿ ಯಾವುದಾದರೂ ಒಂದು ರೂಪದಲ್ಲಿ ಭಗವತಿಯ ಪೂಜೆ ನಡೆಯುತ್ತದೆ. ತಿರುವನಂತಪುರಂನ ಶಂಖುಮುಖಂ, ಆಟ್ಟುಕ್ಕಾಲ್, ಚಿರಯಿನ್‌ಕೀೞೆಲ್ ಶಾರ್‌ಕರ, ಆಟ್ಟಿಂಗಲ್, ಕೊಲ್ಲಂನ ಆನಂದವಲ್ಲೀಶ್ವರಂ, ಪಟ್ಟಾೞಿ, ಮಣ್ಣಡಿ, ಚೇರ್ತಲ, ಕಣಿಚ್ಚು ಕುಳಙರ, ಚೆಟ್ಟಿಕುಳಙರ, ಭರಣಿಕ್ಕಾವ್, ಪನಯನ್ನಾರ್‌ಕಾವ್, ಕುಮಾರನಲ್ಲೂರ್, ತಿರುನಕ್ಕರ, ಮಂಕೊಂಬ್, ಪೆರುನ್ನ, ಚೆರುವಳ್ಳಿ, ಚಿರಕಡವ್, ಕಾಞೆರಪಳ್ಳಿ, (ಮಧುರೈ ಮೀನಾಕ್ಷಿ) ಕೊಡಿಮತ ಫಳ್ಳಿಪುರದ ಭದ್ರಕಾಳಿ, ಚೋಟ್ಟಾನಿಕರ, ಓಕ್ಕೂರು, ಕಲ್ಲಿಲ್, ಕಾರಿಕ್ಕೋಡ್, ಕೊಡುಙಲ್ಲೂರ್ (ಕುರುಂಬಾ ಭಗವತೀ), ಊರಗಂ, (ಅಮ್ಮ ತಿರುವಡಿ) ಚೇರ್‌ಪ್, ಪೞಯನ್ನೂರ್, ಚಿಟ್ಟೂರ್, ನಲ್ಲಪ್ಪಳ್ಳಿ, (ಚುಣಂಗಿ ಭಗವತೀ ), ಪಾಲಪುರ   (ಚಿನ್‌ಕ್ಕತ್ತ್ ಭಗವತೀ), ಪಾಲಕ್ಕಾಡ್ (ವಮೂರ್ ಭಗವತೀ) ಮಲಪುರಂ ಜಿಲ್ಲೆಯ ತಿರುಮಾಂಡಾಕುನ್ನ್, ಕಾಡಾಂಬುೞ, ಕೋಳಿಕೋಡ್ (ವರಯ್ಕಲ್ ಭಗವತೀ), ವಡಗಂ (ಲೋಕನಾರ್ಕಾಟ್), ವಳ್ಳಿಯೂರ್‌ಕಾವ್, ಮರಾೞ (ಕಡಂಬ ಚುೞಲಿ ಭಗವತೀ), ಕೊಡುವಳ್ಳಿ (ಚಿರಕ್ಕಡವ್), ಪೞಯಙಾಡಿ (ಮಾಡಾಯಿಕಾವ್), ಕೋಟ್ಟಯಂ (ಪೋರ್ಕಲಿ ಭಗವತೀ), ವಳರ್‌ಪಟ್ಟಣಂ (ಕಳರಿ ವಾದುಕಲ್) ಚಿರುಕುನ್ನ್ (ಅನ್ನಪೂರ್ಣೇಶ್ವರಿ), ಇಚ್ಚಿಲಂಗೋಡು (ಚಾಮುಂಡಿ), ಪಳ್ಳಿಕುನ್ನ್ (ಮೂಕಾಂಬಿಕ) ಪಾಲಕುನ್ನ್ (ಭಗವತೀ) ಮೊದಲಾದವು ಕೇರಳದ ಮುಖ್ಯ ಭಗವತೀ ಆರಾಧನಾ ಕೇಂದ್ರಗಳಾಗಿವೆ. ಪೂಞಾಟ್ಟಿನಲ್ಲಿ ಒಂದು ಮದುರೈ ಮೀನಾಕ್ಷಿ ದೇವಸ್ಥಾನ ಇದೆ. ತೃಶ್ಯೂರ್ ಪರಮೇಕಾವ್ ಭಗವತೀ ದೇವಸ್ಥಾನವು ತೃಶ್ಯೂರ್‌ಪೂರಂ ನಿಂದಾಗಿ ಪ್ರಖ್ಯಾತವಾಗಿದೆ.

ತಿರುವನಂತಪುರಂನ ಆಟ್ಟುಕ್ಕಾಲ್ ಭಗವತೀ ದೇವಸ್ಥಾನವು ಮಹಿಳೆಯರ ಶಬರಿಮಲೆ ಎಂದೇ ಪ್ರಸಿದ್ಧವಾಗಿದೆ.  ಕಾವಿಲಮ್ಮ, ಕಡಲಮ್ಮ, ಪರದೇವತೆ ಎಂಬಿತ್ಯಾದಿ ಸಂಕಲ್ಪಗಳಲ್ಲಿ ಕೇರಳೀಯರ ಆರಾಧನೆಗೆ ಪಾತ್ರಳಾದ ದೇವತೆ ಭಗವತೀ. ಮೇಲುಕೀಳು ಎಂಬ ಭೇದ ಭಾವನೆಯಿಂದಾಗಿ ದೇವಸ್ಥಾನವೋ, ವಿಗ್ರಹವೋ ಇಲ್ಲದೆಯೂ ಭಗವತಿಯನ್ನು ಆರಾಧಿಸುವ ಸಂಪ್ರದಾಯ ಕೇರಳದಲ್ಲಿದೆ. ಜನ ವಸತಿಯ ನಡುವೆ ಅಲ್ಲಲ್ಲಿ ಅವರವರ ಕುಟುಂಬ ದೇವತೆಯಾಗಿ, ಭಗವತೀ ಸ್ಥಾನಗಳಲ್ಲಿ ಪೂಜೆಗೊಳ್ಳುತ್ತಾಳೆ.

. ಶಾಸ್ತಾವ್ ಅಥವಾ ಅಯ್ಯಪ್ಪನ್ ದೇವಸ್ಥಾನಗಳು

ಕೇರಳದ ಹಿಂದೂಗಳ ಆರಾಧನಾ ವಿಗ್ರಹಗಳಲ್ಲಿ ಶಾಸ್ತಾವ್ ಅಥವಾ ಅಯ್ಯಪ್ಪ ಅತ್ಯಂತ ಕುತೂಹಲ ಕೆರಳಿಸುವ ದೇವತೆ. ಅನೇಕ ದೇವಸ್ಥಾನಗಳಲ್ಲಿ ಶಾಸ್ತಾವ್ ಉಪ ಪ್ರತಿಷ್ಠೆ ಯಾದರೂ ಕೆಲವು ದೇವಸ್ಥಾನಗಳು ಅಯ್ಯಪ್ಪನಿಗಾಗಿಯೇ ನಿರ್ಮಿಸಿದವುಗಳು. ಮನುಷ್ಯ ಪ್ರವೇಶವಿಲ್ಲದ ದಟ್ಟಾರಣ್ಯಗಳಲ್ಲೂ ಶಾಸ್ತಾವಿನ ಪ್ರತಿಷ್ಠೆ ಇದೆ. ಆರ್ಯಂಕಾವ್, ಕುಳತ್ತುಪ್ಪುೞ, ಅಚ್ಚನ್ ಕೋವಿಲ್, ಶಬರಿಮಲೈ ಮೊದಲಾದೆಡೆಗಳಲ್ಲೆಲ್ಲ ಬೆಟ್ಟದ ಮೇಲೆ ದಟ್ಟಾರಣ್ಯದ ನಡುವೆ ಶಾಸ್ತಾವ್ ಪ್ರತಿಷ್ಠೆ ಇದೆ. ಶಾಸ್ತಾಂಕೋಟ, ಓಮನಲ್ಲೂರ್, ತಗಳಿ, ತೃಕ್ಕುನ್ನಪ್ಪು, ಪಂದಳಂ, ಎರುಮೇಲಿ, ಪೂತ್ತಾರ್, ದೇವಿಕುಳಂ, ಕುಮರಗಂ, ಕಾರಿಂಕೋಡ್, ಪೆರುಂಬಾವೂರು, ಆರಾಟ್ಟ್‌ಪ್ಪುೞ, ತಿರುವೆಳ್ಳಕ್ಕಾವ್, ತಿರುನಾವಾಯ (ಚಮ್ರವಟ್ಟತ್ತ್ ಅಯ್ಯಪ್ಪನ್‌ಕಾವ್), ಕಣ್ಣೂರು ಚಾಲಾಟ್ಟ್, ಚಂದ್ರಗಿರಿ, ಘ್ರಿಕ್ಕನ್ನಾಡ್ ಮೊದಲಾದೆಡೆ ಗಳಲ್ಲಿಯೂ ಶಾಸ್ತಾವ್ ದೇವಸ್ಥಾನಗಳಿವೆ.

ಅತ್ಯಂತ  ಜನಪ್ರಿಯತೆ ಪಡೆದ ಹಿಂದೂ ದೇವತೆ ಅಯ್ಯಪ್ಪ. ಮತೀಯ ಸಾಮರಸ್ಯದ ಸಂಕೇತವಾಗಿ ಈತ ಆರಾಧನೆಗೊಳ್ಳುತ್ತಾನೆ. ಬುದ್ಧನ ಹೈಂದವ ರೂಪವೇ ಶಾಸ್ತಾವ್ ಎಂಬ ಅಭಿಪ್ರಾಯ ವಿದ್ವಾಂಸರಲ್ಲಿ ಇದೆ. ಬೌದ್ಧಮತವು ಸೋತು ಹಿಂದೂಮತದೊಡನೆ ವಿಲೀನವಾದಾಗ ಬುದ್ಧನೇ ಹಿಂದುವಾಗಿ ಶಾಸ್ತಾವ್ ಎಂಬ ಹೆಸರಿನಲ್ಲಿ ಪೂಜೆ ಗೊಳ್ಳುತ್ತಾನೆಂದು ನಂಬಲಾಗಿದೆ. ಈ ಹೇಳಿಕೆಯನ್ನು ಅನುಕೂಲಿಸುವ ಅನೇಕ ವಾದಗಳು ಹುಟ್ಟಿಕೊಂಡಿವೆ. ಬೌದ್ಧ ಮತಾನುಯಾಯಿಗಳು ಉಳಿದ ಮತೀಯರಿಂದ ದೂರ ಉಳಿಯುವ ಪ್ರಯತ್ನದ ಫಲವಾಗಿ ಗಿರಿ ಕಾನನಗಳಲ್ಲಿ ಶಾಸ್ತಾವನ್ನು ಇರಿಸಿರಬೇಕು. ಬುದ್ಧನಿಗೆ ಪರ್ಯಾಯವಾಗಿ ಶಾಸ್ತಾವ್ ಎಂಬ ಹೆಸರನ್ನು ಅಮರ ಕೋಶದಲ್ಲೂ ಪ್ರಸ್ತಾಪಿಸಲಾಗಿದೆ. ಶಬರಿಮಲೆ ಯಾತ್ರಾರ್ಥಿಗಳು ಹಿಂಸೆ, ಮಾಂಸಾಹಾರ, ಸುಖೋಪಭೋಗಗಳಿಂದ ದೂರ ವಿರುವ ನಿರ್ಬಂಧವನ್ನು ಹೇರಿಕೊಳ್ಳುತ್ತಾರೆ. ಇದು ಬುದ್ಧನ ಅಹಿಂಸಾ ಸಿದ್ಧಾಂತಕ್ಕೆ ಪರ್ಯಾಯವೇ ಆಗಿರಬಹುದು. ವ್ರತದ ವೇಳೆಗೆ ಅಯ್ಯಪ್ಪ ಭಕ್ತರು ಯಾವುದೇ ಜಾತಿ ಭೇದವನ್ನು ಪರಿಗಣಿಸುವುದಿಲ್ಲ. ಅಯ್ಯಪ್ಪ ಭಕ್ತರ  ‘ಶರಣಂ ಅಯ್ಯಪ್ಪಾ’ ಎಂಬ ಕರೆ ಕೂಡಾ ಬೌದ್ಧ ಮತದ ‘ಶರಣಮಂತ್ರವನ್ನೆ’ ಅನುಕರಿಸುತ್ತದೆ. ಶಾಸ್ತಾವನ್ನು ಧರ್ಮಶಾಸ್ತಾವ್ ಎಂದೇ ಕರೆಯಲಾಗುತ್ತದೆ.

ಶಾಸ್ತಾವ್‌ನ ಬೌದ್ಧ ಭಾವನೆಯನ್ನು ಅಲ್ಲಗಳೆಯುವವರು ದಕ್ಷಿಣ ಭಾರತದ ದ್ರಾವಿಡ ದೇವತೆಯಾದ ಅಯ್ಯನಾರನ ಪರಿವರ್ತಿತ ರೂಪವೇ ಅಯ್ಯಪ್ಪ ಎಂದು ವಾದಿಸುವವರೂ ಇದ್ದಾರೆ. ಇವರ ಪ್ರಕಾರ ಆರ್ಯ ದ್ರಾವಿಡ ಸಂಸ್ಕೃತಿಯ ಸಮನ್ವಯದ ಪ್ರತೀಕವೇ ಅಯ್ಯಪ್ಪ ಸಂಪ್ರದಾಯ. ಶಾಸ್ತಾವ್ ವಿಷ್ಣು ಮತ್ತು ಶಿವನ (ಹರಿಹರಪುತ್ರ) ಮಗ. ಆದ್ದರಿಂದ ಹರಿಹರ ಪುತ್ರನೆಂಬ ಹೆಸರಾಯಿತು ಎಂಬ ಕತೆಯಿದೆ. ಶೈವ, ವೈಷ್ಣವ ಸಂಪ್ರದಾಯಗಳ ಸಾಮರಸ್ಯದ ಹೊಳಹು ನೀಡುವುದಲ್ಲದೆ ಎರಡು ಮತಗಳ ಸಾಮರಸ್ಯದಲ್ಲಿ ಬೌದ್ಧಮತ ಗೈರು ಹಾಜರಿ ಯನ್ನು ತಿಳಿಸುತ್ತದೆ. ಚೇರ್ತಲದ ಸಮೀಪವಿರುವ ಕ್ರಿಶ್ಚಿಯನ್ ಆರ್ತುಂಗಲ್ ಚರ್ಚ್, ಎರುಮೇಲಿಯ ವಾವರನ ಮಸೀದಿ, ಶಾಸ್ತಾವ್ ಆರಾಧನೆಗೆ ಸಂಬಂಧಪಟ್ಟುದೇ ಆಗಿದೆ. ನಂತರದ ಕಾಲಘಟ್ಟದಲ್ಲಿ ಶಾಸ್ತಾವಿನ ಖ್ಯಾತಿ ಕೇರಳದ ಸೀಮೆಯನ್ನೂ ಮೀರಿ ತೀರ್ಥಾಟನೆ ಗಾಗಿ ಭಕ್ತರು ವರ್ಷಕ್ಕೊಮ್ಮೆ ವ್ರತಸ್ಥರಾಗಿ ದೇಶ ವಿದೇಶಗಳಿಂದ ಬಂದು ದರ್ಶನ ಪಡೆಯುತ್ತಾರೆ. ದೆಹಲಿ, ಜೆಮ್‌ಷದ್‌ಪುರ. ಬಾಂಬೆ, ಬೆಂಗಳೂರು, ಚೆನ್ನೈ ಮೊದಲಾದ ನಗರಗಳಲ್ಲೆಲ್ಲ ಈಗ ಶಾಸ್ತಾವ್ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ದೇಶ, ವಿದೇಶಗಳ ಅನೇಕ ಸಣ್ಣಪುಟ್ಟ ನಗರ ಪ್ರದೇಶಗಳಲ್ಲೂ ಅಯ್ಯಪ್ಪ ದೇವಾಲಯಗಳು ನಿರ್ಮಾಣವಾಗಿವೆ.

. ಸುಬ್ರಹ್ಮಣ್ಯ ದೇವಸ್ಥಾನಗಳು

ಕೇರಳದ ನಾನಾ ಎಡೆಗಳಲ್ಲಿ ಸುಬ್ರಹ್ಮಣ್ಯ ದೇವಸ್ಥಾನಗಳಿವೆ. ತಿರುವನಂತಪುರದ ತಂಬಾನೂರು, ಬಳ್ಳೂರು, ಉಮಯನಲ್ಲೂರು, ಹರಿಪ್ಪಾಡ್, ಪೆರುನ್ನ, ಕಿಡಙೂರ್, ಮುನ್ನಾರ್, ಉದಯನಾಪುರ, ವೆಟ್ಟಿಲ, ಎಳಂಕುನ್ನಪುೞ, (ವೈಪ್ಪಿಲ್ ದ್ವೀಪ್), ಕೇನಂ ಬಿಳ್ಳಿಮಲ (ಚಿಟ್ಟೂರು ತಾಲೂಕು), ಕರಿಕ್ಕಾಡ್, ಕೊತುಂಬ್, ಪೆರಳಶ್ಯೇರಿ, ಪಯ್ಯನ್ನೂರು. ಕಾಸರಗೋಡಿನ ಮುಳಿಯಾರು ಮೊದಲಾದೆಡೆಗಳಲ್ಲಿ ಪ್ರಸಿದ್ಧ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಗಳಿವೆ. ಕಾಸರಗೋಡಿನ ಮಂಜೇಶ್ವರದಲ್ಲಿರುವ ಅನಂತೇಶ್ವರ ದೇವಸ್ಥಾನದದಲ್ಲಿ ಮೊದಲಿದ್ದುದು ಶೇಷನ ರೂಪದಲ್ಲಿ ಸಂಕಲ್ಪಿಸಿದ ಸುಬ್ರಹ್ಮಣ್ಯ.

ಈಗ ತಮಿಳುನಾಡಿನಲ್ಲಿರುವ ತೆಕ್ಕಲೆಗೆ ಸಮೀಪವಿರುವ ಕುಮಾರಕೋವಿಲ್ ಮೊದಲು ದಕ್ಷಿಣ ಕೇರಳದ ಒಂದು ಪ್ರಖ್ಯಾತ ಸುಬ್ರಹ್ಮಣ್ಯ ದೇವಸ್ಥಾನವಾಗಿತ್ತು. ಕೇರಳೀಯರಾದ ಅನೇಕ ಭಕ್ತರು ಈಗ ಇಲ್ಲಿಗೆ ಭೇಟಿ ನೀಡುವುದು ರೂಢಿಯಾಗಿದೆ. ತಮಿಳುನಾಡಿನ ಪ್ರಮುಖ ಸುಬ್ರಹ್ಮಣ್ಯ ದೇವಸ್ಥಾನಗಳೆಲ್ಲ ಬೆಟ್ಟದ ಮೇಲೆಯೇ ಇವೆ. ಆದರೆ ಕೇರಳದಲ್ಲಿ ಈ ರೀತಿ ಇಲ್ಲ.

ಗಣಪತಿ ದೇವಸ್ಥಾನಗಳು

ಹಲವು ದೇವಸ್ಥಾನಗಳಲ್ಲೆಲ್ಲ ಒಂದು ಉಪದೇವತೆಯಾದ ಗಣಪತಿ ಕೆಲವೇ ಕೆಲವು ದೆವಸ್ಥಾನಗಳಲ್ಲಿ ಪ್ರಮುಖ ದೇವತೆಯಾಗಿ ಪೂಜೆಗೊಳ್ಳುತ್ತಿದ್ದಾನೆ. ತಿರುವನಂತಪುರದ ಪವಿನಙಾಡಿಯ ಗಣಪತಿ ದೇವಸ್ಥಾನವು ಇಂಥವುಗಳಲ್ಲಿ ಒಂದು. ಕೊಟ್ಟಾರಕ್ಕರ, ಕಣಯನ್ನೂರ್, ತೊಡುಪುೞ, ಮಯ್ಯಿಲ್ ಮೊದಲಾದೆಡೆಗಳಲ್ಲಿಯೂ ಗಣಪತಿ ದೇವಸ್ಥಾನ ಗಳಿವೆ. ಮುಖ್ಯ ದೇವತೆಯಾಗಿ ಅಲ್ಲದಿದ್ದರೂ ಉಪ ದೇವತೆಯಾಗಿ ಪೂಜೆಗೊಳ್ಳುವ ಜನರನ್ನು ಆಕರ್ಷಿಸುವ ಅನೇಕ ಗಣಪತಿ ಪ್ರತಿಷ್ಠೆಗಳು ಕೇರಳದಲ್ಲಿವೆ. ವಾೞಪ್ಪಳ್ಳಿಯಲ್ಲಿ ಮುಖ್ಯ ಪ್ರತಿಷ್ಠೆಗಿಂತ ಭಕ್ತರನ್ನು ಆಕರ್ಷಿಸುವುದು ಗಣಪತಿ. ಹಾಗೆಯೇ ಮಧೂರು ಶ್ರೀಅನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಅನಂತೇಶ್ವರನೇ ಮುಖ್ಯ ಪ್ರತಿಷ್ಠೆ. ಆದರೆ  ಮಧೂರು ಮಹಾಗಣಪತಿಯೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತಿ ರುವುದು. ಶಿವ ದೇವಸ್ಥಾನಗಳಲ್ಲೆಲ್ಲಾ ಹಾಗೂ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಗಳಲ್ಲಿ ಉಪ ದೇವತೆಯಾಗಿ ಗಣಪತಿ ಪ್ರತಿಷ್ಠೆಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ.

ಉಪದೇವತೆಗಳು

ಮೇಲೆ ಹೆಸರಿಸಿದ ಪ್ರಮುಖ ದೇವತೆಗಳ ಹೊರತಾಗಿ ಅನೇಕ ಉಪದೇವತೆಗಳನ್ನು ಕೇರಳೀಯರು ಆರಾಧಿಸುತ್ತಾರೆ. ಪರಶುರಾಮ, ಬ್ರಹ್ಮ, ಹನುಮಂತ, ಸರಸ್ವತಿ, ಮಾರಿ ಯಮ್ಮ, ಮಾಡನ್, ಇಂಡಳಯಪ್ಪನ್, ಧನ್ವಂತರಿ, ಆದಿತ್ಯ, ನವಗ್ರಹಗಳು, ವೇಟ್ಟಯ್ಕರು ಮಗನ್, ಗರುಡನ್, ಕ್ಷೇತ್ರಪಾಲನ್ ಅಮ್ಮನ್‌ವಾರು ಮೊದಲಾದ ಉಪದೇವತೆಗಳು ಹಲವಿವೆ.

ಬಹುಶಃ ಪರಶುರಾಮ ದೇವಸ್ಥಾನವಿರುವ ಏಕೈಕ ರಾಜ್ಯ ಕೇರಳ. ತಿರುವನಂತಪುರದ ತಿರುವಲ್ಲಾದಲ್ಲಿ ಪರಶುರಾಮನ ದೇವಸ್ಥಾನವಿದೆ. ಅದೇ ದೇವಸ್ಥಾನದಲ್ಲಿ ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮನಿಗೂ ಒಂದು ದೇವಸ್ಥಾನವಿದೆ. ತಿರುವನಂತಪುರಂನ ಮಿತ್ರಾನಂದಪುರಂ, ವಲಿಯಶಾಲ ಮೊದಲಾದೆಡೆಗಳಲ್ಲಿರುವ ದೇವಸ್ಥಾನಗಳಲ್ಲಿ ಬ್ರಹ್ಮ ಪ್ರತಿಷ್ಠೆಗಳನ್ನು ಕಾಣಬಹುದು. ಚೇಙಮಂಗಲದ ಕೀೞೆತ್ತಳಿಯಲ್ಲಿರುವ ಶಿವ ದೇವಸ್ಥಾನದಲ್ಲಿಯೂ ಬ್ರಹ್ಮನ ಪ್ರತಿಷ್ಠೆಯಿದೆ. ಬ್ರಹ್ಮನ ಪ್ರತಿಷ್ಠೆಯಿರುವ ದೇವಸ್ಥಾನಗಳು ಭಾರತದಲ್ಲಿಯೇ ವಿರಳ.

ತಿರುವನಂತಪುರಂ, ಕವಿಯೂರು, ಎರ್ನಾಕುಳಂ, ತಿರುನಾವಾಯ, ಆಲತ್ತೂರು. ಬೇಕಲ ಕೋಟೆ ಮೊದಲಾದೆಡೆಗಳಲ್ಲಿ ಹನುಮಂತನ ದೇವಸ್ಥಾನಗಳನ್ನು ಕಾಣಬಹುದು. ಎಲ್ಲಾ ಶ್ರೀರಾಮ ದೇವಸ್ಥಾನಗಳಲ್ಲಿಯೂ ಹನುಮಂತನ ವಿಗ್ರಹ ಪ್ರತಿಷ್ಠೆಯಿದೆ. ಭಕ್ತರು ಹನುಮಂತನಿಗೆ ವಿಶೇಷ ಪ್ರಾಧಾನ್ಯವನ್ನು ಕೊಟ್ಟಿದ್ದಾರೆ. ಮೊದಲು ಕೇರಳಕ್ಕೆ ಸೇರಿದ್ದ ಶುಚೀಂದ್ರಂ ದೇವಸ್ಥಾನದಲ್ಲಿ ತುಂಬಾ ದೊಡ್ಡದಾದ ಒಂದು ಹನುಮಂತನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಅದಕ್ಕೆ ನೇರವಾಗಿ ಎದುರುಗಡೆ ಸೀತಾ ರಾಮರ ಪ್ರತಿಷ್ಠೆಯೂ ಇದೆ.

ಕೇರಳದಲ್ಲಿ ಸರಸ್ವತಿ ದೇವಸ್ಥಾನಗಳು ಅತ್ಯಂತ ವಿರಳ. ಮುನ್ನಾರಿನ ಒಂದು ದೇವಸ್ಥಾನದಲ್ಲಿ ಸರಸ್ವತಿ ಪ್ರತಿಷ್ಠೆ ಇದೆ. ಕೋಟ್ಟಯಂ ಜಿಲ್ಲೆ ಪನಚ್ಚಿಕಾಡಿನಲ್ಲಿರುವ ಸರಸ್ವತೀ ದೇವಸ್ಥಾನ ಪ್ರಸಿದ್ಧವಾಗಿದೆ. ಬಳ್ಳಿಗಳಿಂದಾವರಿಸಿದ ಒಂದು ಜಾಗದಲ್ಲಿ ನೀರಿನ ಅಡಿಯಲ್ಲಿರುವ ಇಲ್ಲಿನ ಪ್ರತಿಷ್ಠೆ ಭಕ್ತರಿಗೆ ನೋಡುವುದು ಕೂಡಾ ಕಷ್ಟ. ಎರ್ನಾಕುಳಂ ಜಿಲ್ಲೆಯ ಪರವೂರಿನಲ್ಲೂ ಒಂದು ಸರಸ್ವತಿ ಮೂಕಾಂಬಿಕಾ ದೇವಸ್ಥಾನವಿದೆ. ಒಂದು ಸರೋವರದ ನಡುವಿನಲ್ಲಿ ಈ ದೇವಸ್ಥಾನವಿದೆ. ನವರಾತ್ರಿಯ ವೇಳೆಗೆ ಸರಸ್ವತಿ ದೇವಸ್ಥಾನಗಳಲ್ಲಿ ಭಕ್ತರು ಬಂದು ಸೇರುತ್ತಾರೆ.

ಆಲಪ್ಪುೞ, ಎರ್ನಾಕುಳಂ, ಆಲತ್ತೂರು (ಮಂಗಲಕ್ಷೇತ್ರ) ತೆನ್ಮಲ, ಹೊಸದುರ್ಗ ಮೊದಲಾದೆಡೆಗಳಲ್ಲಿ ಮಾರಿಯಮ್ಮನ ದೇವಸ್ಥಾನಗಳಿವೆ. ತಿರುವನಂತಪುರ ಮತ್ತಿತರ ದಕ್ಷಿಣ ಕೇರಳದ ಇತರ ಪ್ರದೇಶಗಳಲ್ಲಿ ಚಿಕ್ಕಪುಟ್ಟ ದೇವಸ್ಥಾನಗಳಲ್ಲಿ ‘ಮಾಡನ್’ ಉಪದೇವತೆ ಯಾಗಿ ಪೂಜಿಸಲಾಗುತ್ತದೆ. ಕೊಲ್ಲಂ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇಂಡಳಯಪ್ಪನನ್ನು ಪೂಜಿಸಲಾಗುತ್ತದೆ. ಕೊಟ್ಟಾರಕ್ಕರ ತಾಲೂಕಿನ ನೆಳಿನಲ್ಲೂರ್ ಕೊಲ್ಲಂ ಜಿಲ್ಲೆಗಳಲ್ಲಿ ಊಳೈಕ್ಕೋಡ್ ಮೊದಲಾದೆಡೆಗಳಲ್ಲಿ ಇಂಡಳಯಪ್ಪನ ಪ್ರತಿಷ್ಠೆಗಳಿವೆ. ಇವು ಬಹುಶಃ ಬೌದ್ಧ ಕೇಂದ್ರಗಳಾಗಿರಬೇಕು ಎಂಬ ಅನುಮಾನ ವಿದ್ವಾಂಸ ವಲಯದಲ್ಲಿದೆ. ಆಲಪುೞ ಜಿಲ್ಲೆಯ ಪ್ರಾಯಿಕ್ಕರ ಚೇರ್‌ತ್ತಲಕ್ಕೆ ಸಮೀಪ ಮರುನ್ನೊರ್‌ವಟ್ಟಂ, ಕೋಟ್ಟಯಂನ ಒಳಶ್ಯ ಮೊದಲಾದೆಡೆಗಳಲ್ಲಿ ಧನ್ವಂತರಿ ದೇವಸ್ಥಾನಗಳಿವೆ. ಚಿರಯಿನ್ ಕೀೞ್ ತಾಲೂಕಿನ ಮಡತ್ರ, ಮಾನ್ನಾರ್, ಆದಿತ್ಯಪುರಂ (ಕಡುತುರುತ್ತಿಗೆ ಸಮೀಪ) ಮೊದಲಾದ ಸ್ಥಳಗಳಲ್ಲಿ ಸೂರ್ಯ ದೇವಸ್ಥಾನಗಳಿವೆ. ಸೂರ್ಯ ದೇವಸ್ಥಾನಗಳು ಈ ರಾಜ್ಯದಲ್ಲಿ ಬಹಳ ವಿರಳ.

ಹಲವು ದೇವಸ್ಥಾನಗಳಲ್ಲಿಯೂ ನವಗ್ರಹಗಳನ್ನು ಪೂಜಿಸುತ್ತಾರೆ. ತಿರುವನಂತಪುರಕ್ಕೆ ಸಮೀಪದ ತೊೞುವಂಕೊಡಿನಲ್ಲಿ (ಚಾಮುಂಡಿ ದೇವಸ್ಥಾನ) ಚೇಙಮಂಗಲದ ಕುನ್ನತ್ತಳಿ ಶಿವ ದೇವಸ್ಥಾನದಲ್ಲಿ ಹಾಗೂ ತೃಪ್ಪುಣ್ಣಿತ್ತುರ ಚಕ್ಕಕುಳಙರ ಶಿವ ದೇವಸ್ಥಾನದಲ್ಲಿಯೂ ನವಗ್ರಹಗಳ ಪ್ರತಿಷ್ಠೆ ಇದೆ. ಉತ್ತರ ಕೇರಳದಲ್ಲಿ ಕೆಲವು ದೇವಸ್ಥಾನಗಳಲ್ಲಿ ವೇಟ್ಟಯ್ಕುರು ಮಗನನ್ನು ಪ್ರತಿಷ್ಠಿಸಲಾಗಿದೆ. ಕುಡಮಾಳೂರು ವೇಟ್ಟಯ್ಕುರುಮಗನ ಪ್ರತಿಷ್ಠೆ ಇದೆ. ಕೋಝಿಕೋಡ್ ಜಿಲ್ಲೆಯಲ್ಲಿ ಬಾಲುಶ್ಯೇರಿ ಕೋಟ್ಟ ನಿಲಂಬೂರ್, ಚಿಟ್ಟಾರಿಪ್ಪರಂಬ್, ಚೆರುಕುನ್ನ್, ಪಾಣಪ್ಪುೞು, ಕಡನ್ನಪ್ಪಳ್ಳಿ, ನೀಲೇಶ್ವರಂ ಮೊದಲಾದ ಕಣ್ಣೂರು ಪ್ರದೇಶಗಳಲ್ಲಿ ವೇಟ್ಟೆಯ್ಕುರುಮಗನ್ ದೇವಸ್ಥಾನಗಳಿವೆ. ಸರ್ಪದೋಷದಿಂದ ಮುಕ್ತವಾಗಲು ಭಕ್ತರು ಪ್ರಾರ್ಥಿಸುವ ಒಂದೇ ಒಂದು ಗರುಡ ದೇವಸ್ಥಾನವು (ಗರುಡಕ್ಕಾವ್) ವೆಟ್ಟತ್ತು ಪುಡಿಯಙಾಡಿಯಲ್ಲಿ ತೃಪ್ತಙಾಟ್‌ನಲ್ಲಿದೆ. ಅಜಾನೂರು (ಮಡಿಯನ್ ಕೂಲೇ ದೇವಸ್ಥಾನ), ಉದಿಯನೂರು ಮೊದಲಾದೆಡೆಗಳಲ್ಲಿ ಕ್ಷೇತ್ರಪಾಲ ಕ್ಷೇತ್ರಗಳಿವೆ.

ನಾಗಾರಾಧನೆ

ಈ ಮೇಲೆ ಹೇಳಿದ ದೇವತೆಗಳನ್ನು ಪೂಜಿಸುವುದಲ್ಲದೆ ಇಂದಿಗೂ ಕೇರಳದಲ್ಲಿ ನಾಗಾರಾಧನೆ, ಪಿತೃಪೂಜೆ, ದುರ್ಗಾರಾಧನೆ, ವೃಕ್ಷ ಪೂಜೆ ಮೊದಲಾದವು ಪ್ರಚಲಿತದಲ್ಲಿವೆ. ಈ ಆಚರಣೆಯ ಹಿನ್ನೆಲೆಯಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಕೆಲವು ಆರಾಧನಾ ಕೇಂದ್ರಗಳೂ ಜನ್ಮ ತಾಳಿವೆ.

ನಾಗಾರಾಧನೆಗೂ ವೃಕ್ಷಾರಾಧನೆಗೂ ಸಂಬಂಧವಿದೆ. ಏಕೆಂದರೆ ನಾಗಗಳ ವಾಸಸ್ಥಾನವೇ ಮರಗಳು ತುಂಬಿರುವ ಬನಗಳು. ಕೇರಳವನ್ನು ನಾಗಕೇಂದ್ರವೆಂದೇ ಕರೆಯಲಾಗುತ್ತದೆ. ಕೇರಳ ಭೂಮಂಡಲವನ್ನು ‘ಅಹಿಭೂಮಿ’ಯೆಂದು ಪಶ್ಚಿಮಘಟ್ಟವನ್ನು ‘ಸಹ್ಯಾದ್ರಿ’ (ಸ+ಅಹಿ+ಅದ್ರಿ) ಎಂದೂ ಕರೆಯಲಾಗಿದೆ. ಪೆರುಂಬಾಣಟ್ಟುಪಡ, ಮಣಿಮೇಖಲೈ ಮೊದಲಾದ ತಮಿಳು ಕಾವ್ಯಗಳಲ್ಲಿಯೂ ಕೇರಳವನ್ನು ನಾಗಲೋಕವೆಂದೇ ಪರಾಮರ್ಶಿ ಸಲಾಗಿದೆ. ಇಲ್ಲಿ ನಾಗ ಎಂಬ ಜನವರ್ಗವನ್ನು ಸಹ ಸೂಚಿಸುತ್ತಿರಬಹುದು. ಕೇರಳದ ನಾಗಾರಾಧಕರಾದ ಪ್ರಾಚೀನ ಜನವರ್ಗವನ್ನು ನಾಗರೆಂದು ಕರೆಯಲಾಗುತ್ತಿತ್ತೆಂದು ವಿದ್ವಾಂಸರ ಅಭಿಪ್ರಾಯ. ನಾಗರೇ ಮುಂದೆ ನಾಯನ್ಮಾರರಾದರೆಂಬ ಅಭಿಪ್ರಾಯವೂ ಇದೆ (ವಿಷ್ಣು ನಂಬೂದಿರಿ, ೨೦೦೦ : ೩೬೧). ಅವರು ಸರ್ಪಗಳಿಗೆ ವಾಸಮಾಡಲು ಪ್ರತ್ಯೇಕ ಬನಗಳನ್ನು ರೂಪಿಸಿಕೊಟ್ಟದ್ದಿರಬಹುದು. ವೈದಿಕರ ಆಗಮನದ ತರುವಾಯ ನಾಗರಾಧನೆಯ ವಿಧಾನಗಳಲ್ಲಿ ಬದಲಾವಣೆಗಳೂ ಗೋಚರಿಸಿರಬಹುದು. ಪ್ರಸ್ತುತ ಕೇರಳದಲ್ಲಿ ನಾಗಾ ರಾಧನೆಯ ಹಲವು ವಿಧಾನಗಳನ್ನು ಕಾಣಬಹುದು. ಹಲವು ಜಾತಿ, ಸಮುದಾಯಗಳವರೂ ನಾಗಾರಾಧನೆಯನ್ನು ನಂಬಿಕೊಂಡು ಬಂದಿದ್ದಾರೆ. ಬ್ರಾಹ್ಮಣರ ಸರ್ಪಬಲಿ, ತೆಯ್ಯಂಪಾಡಿಗಳ ನಾಗಪ್ಪಾಟ್, ಮಣ್ಣಾನರ ಕುರುಂತಿನಿಪ್ಪಾಟ್, ಪುಳ್ಳುವ ಜನಾಂಗದವರ ಸರ್ಪಪ್ಪಾಟ್, ಮುನ್ನೂಟ್ಟಾನರು, ವಣ್ಣಾನರು ಪುಲಯರು ಮೊದಲಾದವರು ನಡೆಸುವ ನಾಗ ತೆಯ್ಯಂ ಕೋಲಗಳು ಮೊದಲಾದವುಗಳೆಲ್ಲ ನಾಗಾರಾಧನೆಯ ವಿವಿಧ ರೂಪಗಳಾಗಿವೆ.

ಒಂದು ಕಾಲದಲ್ಲಿ ಪ್ರತಿಯೊಂದು ಬ್ರಾಹ್ಮಣರ ಹಾಗೂ ಶ್ರೀಮಂತ ನಾಯರು ತರವಾಡು ಮನೆಗಳ ಸಮೀಪದಲ್ಲಿ ನಾಗಬನಗಳು ಇರುತ್ತಿದ್ದವು. ನಾಗರಿಕತೆಯ ಕಾರಣದಿಂದಾಗಿ ಅವುಗಳೆಲ್ಲ ನಾಶವಾಗಿವೆ. ಎಂದರೆ ಪ್ರಮುಖ ದೇವತೆಯಾಗಿಯೋ, ಉಪದೇವತೆಯಾಗಿಯೋ ನಾಗನನ್ನು ಪೂಜಿಸುವ ದೇವಾಲಯಗಳು ಇಂದಿಗೂ ಇವೆ. ಕೇರಳದ ಸುಪ್ರಸಿದ್ಧ ನಾಗ ದೇವಸ್ಥಾನಗಳು ಆಲಪ್ಪುೞ ಜಿಲ್ಲೆಯ ಮಣ್ಣಾರ್ ಶಾಲೆಯಲ್ಲೂ ಕೊಲ್ಲಂ ಜಿಲ್ಲೆಯ ವೆಟ್ಟಿಕಾಡ್‌ಗಳಲ್ಲಿವೆ. ಮಣ್ಣಾರ್ ಶಾಲೆಯಲ್ಲಿ ಮೂವತ್ತು ಸಾವಿರದಷ್ಟು ನಾಗ ವಿಗ್ರಹಗಳಿವೆ. ತ್ರಿಶ್ಶೂರ್ ಜಿಲ್ಲೆಯ ಮಾಳಕ್ಕೆ ಸಮೀಪ ಪಾಂಬುಮೇಕಾಡ್ ನಂಬೂದಿರಿ ಮನೆಯಲ್ಲಿ ಪ್ರಸಿದ್ಧವಾದ ಒಂದು ನಾಗಬನವಿದೆ. ಪಾಂಬುಮೇಕಾಡ್ ನಂಬೂದಿರಿಗಳು ಸರ್ಪಗಳ ಮೇಲೆ ಅಸದೃಶವಾದ ನಿಯಂತ್ರಣವುಳ್ಳವರು. ಪಾಂಬುಮೇಕಾಡಿನ ಮನೆಯನ್ನು ಅಲ್ಲಿನ ಸಂಪತ್ತನ್ನು ಸಂರಕ್ಷಿಸುವುದು ಸರ್ಪಗಳು ಎಂಬ ನಂಬಿಕೆ ಅವರದು.

ನಾಗಬನಗಳಲ್ಲದೆ ಅನೇಕ ದೇವಾಲಯಗಳಲ್ಲಿ ಉಪದೇವತೆಗಳ ರೂಪದಲ್ಲಿಯೂ ನಾಗನನ್ನು ಪೂಜಿಸಲಾಗುತ್ತದೆ. ಎರ್ನಾಕುಳಂನ ಶಿವ ದೇವಸ್ಥಾನದ ಆವರಣದಲ್ಲಿ ಕಂಚಿನಿಂದ ಮಾಡಿದ ವಿಗ್ರಹವಿರುವ ಒಂದು ನಾಗದೇವಸ್ಥಾನವಿದೆ. ಕಣ್ಣೂರು ಜಿಲ್ಲೆಯ ಪೆರಳಶ್ಯೇರಿ ಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಂದು ನಾಗ ಪ್ರತಿಮೆ ಇದೆ. ಮಣ್ಣಾರ್ ಶಾಲೆ ಮತ್ತು ವೆಟ್ಟಿಕ್ಕಾಡ್‌ನಲ್ಲಿಯಂತೆ ಪ್ರಸಿದ್ಧವಾದ ನಾಗಾರಾಧನೆಯ ಕೇಂದ್ರವಿದು. ಕಾಸರಗೋಡು ಜಿಲ್ಲೆಯಲ್ಲಿ ತುಂಬಾ ನಾಗಾರಾಧನೆಯ ಸ್ಥಳಗಳಿವೆ. ಅಲ್ಲೆಲ್ಲ ಹಲವು ತೆರನ ಆಚರಣೆಗಳ ಮೂಲಕ ನಾಗನನ್ನು ಆರಾಧಿಸಲಾಗುತ್ತದೆ. ಸಮೀಪದ ತುಳು ಪ್ರದೇಶಗಳಲ್ಲಿಯೂ ನಾಗಾರಾಧನೆಗೆ ಸಂಬಂಧಿಸಿದಂತೆ ವಿವಿಧ ರೀತಿಯ ಆಚರಣೆಗಳಿವೆ. ಮಂಜೇಶ್ವರ ಶ್ರೀಮದನಂತೇಶ್ವರ ದೇವಾಲಯದಲ್ಲಿ ಸರ್ಪಾರಾಧನೆಗೆ ಪ್ರಾಮುಖ್ಯತೆ ಕೊಡಲಾಗಿದೆ.

ಕನ್ಯಾಕುಮಾರಿ ಜಿಲ್ಲೆಯ ನಾಗರಕೋವಿಲ್ ಎಂಬ ಸ್ಥಳನಾಮಕ್ಕೂ ಕಾರಣವಾದ ಒಂದು ನಾಗದೇವಸ್ಥಾನವೂ ಅಲ್ಲಿ ಇದೆ. ಅದು ಹಿಂದೆ ಒಂದು ಜೈನ ಕೇಂದ್ರವಾಗಿತ್ತು ಎಂದು ನಂಬಲಾಗಿದೆ. ಮಣ್ಣಾರ್ ಶಾಲೆಯ ನಾಗದೇವಸ್ಥಾನದಲ್ಲಿ ಅಲ್ಲಿನ ತರವಾಡು ಮನೆಯ ಪ್ರಾಯಾಧಿಕ್ಯವುಳ್ಳ ಮಹಿಳೆಯೊಬ್ಬಳು ‘ವಲಿಯಮ್ಮ’ ಪೂಜಾವಿಧಿಗಳನ್ನು ನೆರವೇರಿಸುತ್ತಾಳೆ. ನಲವತ್ತೊಂದು ವರ್ಷಗಳಿಗೊಮ್ಮೆ ಇಲ್ಲಿ ಸರ್ಪಪಾಟ್ಟ್, ಸರ್ಪಂತುಳ್ಳಲ್ ನಡೆಯುತ್ತದೆಯಂತೆ. ನಾಗರಾಜ ಮತ್ತು ನಾಗಯಕ್ಷಿಯ ಪ್ರತಿನಿಧಿಗಳಾಗಿ ಕುಣಿಯುವವರು ಅಲ್ಲಿನ ತರವಾಡು ಮನೆಯ ವಲಿಯಮ್ಮ (ದೊಡ್ಡಮ್ಮ) ಮತ್ತು ಚರಿಯಮ್ಮ (ಚಿಕ್ಕಮ್ಮ). ಸಾಮಾನ್ಯವಾಗಿ ಇತರ ನಾಗಾರಾಧನೆಯ ಸಂದರ್ಭಗಳಲ್ಲಿ ನರ್ತಿಸುವವರು ನಾಯರ್ ಸ್ತ್ರೀಯರು.

ಪಿತೃ ಪೂಜೆ

ಪಿತೃ ಪೂಜೆಯು ಕೇರಳದ ಹಿಂದೂಗಳ ಅತಿ ಪ್ರಾಚೀನವಾದ ಒಂದು ಆರಾಧನಾ ಸ್ವರೂಪ. ಪಿತೃಗಳು ಗೋತ್ರಗಳನ್ನು ನೆಲೆಗೊಳಿಸುವವರಾದ್ದರಿಂದ ವಿಶೇಷ ಆಚರಣೆಗಳ ಮೂಲಕ ಅವರನ್ನು ಗೌರವಿಸುವ ಪದ್ಧತಿ ಇತ್ತು. ಪಿತೃಗಳ ಸ್ಮರಣೆಯ ಪ್ರತೀಕವಾಗಿ ವರ್ಷಕ್ಕೊಮ್ಮೆ ಶ್ರಾದ್ಧವನ್ನು ಮಾಡುವ ಸಂಪ್ರದಾಯ ರೂಢಿಯಲ್ಲಿದೆ. ಪಿತೃಗಳಿಗೆ ಶ್ರಾದ್ಧದ ದಿನ ಪಿಂಡ ಪ್ರಧಾನ ಮಾಡಲು ತಿರುವನಂತಪುರಂನ ಸಮೀಪವಿರುವ ತಿರುವಲ್ಲಾದ ಪರಶುರಾಮ ದೇವಸ್ಥಾನದಲ್ಲಿ ಖಾಯಂ ವ್ಯವಸ್ಥೆ ಇದೆ. ದಿವಂಗತರಾದ ಪಿತೃಗಳಿಗೂ  ಅವರ ಬಂಧುಗಳಿಗೆ ಪಿಂಡ ಪ್ರದಾನ ಮಾಡಲು ತಿರುವಲ್ಲಾದ ದೇವಸ್ಥಾನದ ಸನ್ನಿಧಿಯಲ್ಲಿ ತಿರುವನಂತಪುರಂನ ಶಂಖುಮುಖ ಕಡಲ ತೀರದಲ್ಲಿ, ವರ್ಕಲದ ಪಾಪನಾಶಂ ಕಡಲ ತೀರದಲ್ಲಿ ಹಾಗೂ ಕೊಲ್ಲಂ ತಿರುಮುಲ್ಲವಾರಕ್ಕೆ ಕರ್ಕಾಟಕ ಅಮವಾಸ್ಯೆಯ ದಿನದಂದು ಸಾವಿರಾರು ಜನರು ಬರುವುದು ಸಂಪ್ರದಾಯ. ಏಟ್ಟುಮಾನೂರಿಗೆ ಸಮೀಪವಿರುವ ವೇದವ್ಯಾಸಗಿರಿಯಲ್ಲಿ ಕರ್ಕಾಟಕ ಅಮವಾಸ್ಯೆಯಂದು ಬಲಿಯರ್ಪಿಸುವ ಮತ್ತೊಂದು ಸ್ಥಳ. ಇದನ್ನು ಕರ್ನಾಟಕದಲ್ಲಿ ಭೀಮನ ಅಮವಾಸ್ಯೆ ಎಂದು ಆಚರಿಸಲಾಗುತ್ತದೆ. ಕೇರಳದಲ್ಲಿ ಇದನ್ನು ಕರ್ಕಾಟಕ ಅಮವಾಸ್ಯೆ ಎಂದೇ ಕರೆಯಲಾಗುತ್ತದೆ. ಈ ಅಮವಾಸ್ಯೆಯಂದು ಕರ್ನಾಟಕದಲ್ಲಿ ಗಂಡಂದಿರಿಗೆ ಪೂಜೆ ಸಲ್ಲಿಸುವುದು ವೈಶಿಷ್ಠ್ಯವಾದರೆ ಪಿತೃಗಳಿಗೆ ಪಿಂಡ ಪ್ರದಾನ ಮಾಡುವುದು ಕೇರಳದ ವೈಶಿಷ್ಠ್ಯ. ಹಿಂದೂಗಳು ಸಮೂಹಿಕವಾಗಿ ಪಿಂಡ ಪ್ರದಾನ ಮಾಡುವ ಇನ್ನೊಂದು ಸಂದರ್ಭ ಆಲುವಾ ಶಿವರಾತ್ರಿ. ಶಿವರಾತ್ರಿಯ ಮರುದಿವಸ ಬೆಳಗ್ಗೆ ಆಲುವಾದ ಮಳಲ ತೀರದಲ್ಲಿ ಜೊತೆಗೂಡುವ ಭಕ್ತರು ಪಿತೃಗಳಿಗೆ ಪಿಂಡ ಪ್ರದಾನ ಮಾಡುತ್ತಾರೆ.

ಕೋಝಿಕೋಡಿನ ವರಯ್ಕಲ್ ಭಗವತಿ ದೇವಸ್ಥಾನದಲ್ಲಿ ತುಲಾಮಾಸದಲ್ಲಿ ಶುಕ್ಲಪಕ್ಷದ ಮೊದಲ ದಿವಸ ಹಿಂದೂಗಳು ಒಂದುಗೂಡಿ ಪಿಂಡ ಪ್ರದಾನ ಮಾಡಿ ಸಮುದ್ರ ಸ್ನಾನ ಮಾಡುವರು. ಕಣ್ಣೂರಿನ ಚಾಲಾಟ್ಟ್ ಶಾಸ್ತಾ ದೇವಸ್ಥಾನವೂ ಪಿತೃ ಪೂಜಾ ಕೇಂದ್ರವೇ ಆಗಿದೆ. ಆ ದೇವಸ್ಥಾನದಲ್ಲಿ ತುಲಾಮಾಸ ಹತ್ತು ದಿನ ಕಳೆದು ಬರುವ ಶುಕ್ಲ ಪ್ರಥಮವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಅಂದು ಚಾಲಾಟ್ಟ್ ಕಡಲ ತೀರದಲ್ಲಿ ಜನರು ಅಮವಾಸ್ಯೆ ಪಿಂಡ ಬಿಡುವರು. ಆಷಾಢದ ಅಮವಾಸ್ಯೆಯಂದು ಪಿಂಡವನ್ನರ್ಪಿಸಿ ಜನರು ಅಲ್ಲಿಗೆ ಬರುವುದು ಹಿಂದಿನಿಂದಲೇ ನಡೆದುಕೊಂಡು ಬಂದ ಪದ್ಧತಿ. ವಯನಾಡು ಜಿಲ್ಲೆಯ ಕಾಡಿನ ನಡುವೆ ಇರುವ ತಿರುನೆಲ್ಲಿ ದೇವಸ್ಥಾನದಲ್ಲಿ ಎಲ್ಲಾ ದಿವಸವೂ ಜನರು ಪಿತೃಗಳಿಗೆ ಪಿಂಡ ಪ್ರದಾನ ಮಾಡುವರು. ಅಲ್ಲಿನ ಪಿಂಡಪ್ಪಾರ್‌ನಲ್ಲಿ ಬೀಳುವ ಪಾಪಾನಾಶಿನಿಯೆಂಬ ತಿರೂರವದಲ್ಲಿ ಜನರು ಪಿಂಡ ಪ್ರದಾನ ಮಾಡುವುದಿದೆ. ಹೀಗೆ ಕೇರಳದಲ್ಲಿ ಅನೇಕ ಸ್ಥಳಗಳಲ್ಲಿ ಪಿತೃ ಪೂಜೆಯ ಪರಂಪರೆ ಪ್ರಚಲಿತದಲ್ಲಿದೆ.

ಗ್ರಾಮ ದೈವೋಪಾಸನೆ

ಕೆಲವೊಂದು ಜನವರ್ಗದಲ್ಲಿ ಗ್ರಾಮ ದೈವೋಪಾಸನೆಗಳು ಪ್ರಚಲಿತದಲ್ಲಿವೆ. ತುಳುನಾಡಿನ ಪ್ರಭಾವದ ಕಾರಣದಿಂದಾಗಿ ಉತ್ತರ ಕೇರಳದ ಹೆಚ್ಚಿನ ಪ್ರದೇಶಗಳಲ್ಲಿ ತೆಯ್ಯಂ ಆರಾಧನೆಯೂ ಜನಪ್ರಿಯವಾಗಿದೆ. ತುಳುನಾಡಿನ ಕಲ್ಕುಡ ದೈವವನ್ನು ಕೇರಳದಲ್ಲಿಯೂ ಆರಾಧಿಸುತ್ತಾರೆ. ಕೇರಳದ ಇತರೆಡೆಗಳಲ್ಲಿ ಆರಾಧಿಸುವ ಚಾತುಕುಟ್ಟಿ ಅಥವಾ ಕುಟ್ಟಿಚಾತ್ತನೇ ಕಲ್ಕುಡ ಎಂಬ ಹೆಸರಲ್ಲಿ ಆರಾಧನೆಗೊಳ್ಳುವುದು. ಕಾಸರಗೋಡಿನ ಬಹುತೇಕ ಎಲ್ಲಾ ಊರುಗಳಲ್ಲಿಯೂ ದೈವ ಸ್ಥಾನಗಳಿವೆ. ಕಣ್ಣೂರು ಜಿಲ್ಲೆಯಲ್ಲಿ ಗ್ರಾಮ ದೈವೋಪಾಸನೆಯ ಅನಿವಾರ್ಯವಾದ ಭಾಗವಾಗಿ ತೆಯ್ಯಟ್ಟಂ ಎಂಬ ಒಂದು ಆಚರಣೆ ಇದೆ. ತೃಪ್ರಯಾಟ್ಟಿ ನಲ್ಲಿರುವ ಕುಟ್ಟಿಚ್ಚಾತ್ತನ ದೇವಸ್ಥಾನವೂ ಪ್ರಸಿದ್ಧವಾಗಿದೆ.

ಗಿರಿ, ವನಗಳಲ್ಲಿ ನೆಲೆಸಿರುವ ಜನವರ್ಗದವರು ವನ ದೇವತೆಗಳನ್ನು ಪೂಜಿಸುವುದ ರೊಂದಿಗೆ ಹಿಂದೂ ದೇವತೆಗಳನ್ನು ಪೂಜಿಸುತ್ತಾರೆ. ಕಾಳಿ, ಮಾರಿಯಮ್ಮ, ಚಪ್ಲಮ್ಮ, ಕರಿಂಕುಟ್ಟಿ, ಚಕ್ಕಿಯಮ್ಮ, ಮಲಂಕಾರಿ, ಕರಿಯಪ್ಪನ್ ಮೊದಲಾದ ದೇವರುಗಳನ್ನು ಅವರು ಪೂಜಿಸುತ್ತಾರೆ. ಇವಲ್ಲದೆ ಕೆಲವು ಗಿರಿಜನರಿಗೆ ಸ್ವಂತ ಮನೆ ದೇವರು ಎಂದು ಪ್ರತ್ಯೇಕ ವಾಗಿಯೇ ಪೂಜೆಗೊಳ್ಳುವ ದೇವರುಗಳಿವೆ. ವಯನಾಡಿನ ಕುರಿಚ್ಯುರಿನಲ್ಲಿ ಬೇಟೆ ದೈವವಾದ ಮುತ್ತಪ್ಪನೇ ಮುಖ್ಯ ದೇವತೆ. ಕರಿಂಬಾಲರು ಪೂಜಿಸುವುದು ಪ್ರೇಮ ದೇವತೆಯಾದ ರತಿ ಮತ್ತು ಕಾಮರನ್ನು, ಪಣಿಯರು ರೌದ್ರರೂಪಿಣಿಯಾದ ಕಾಡು ಭಗವತಿಯನ್ನು ಆರಾಧಿಸುತ್ತಾರೆ. ಕೆಲವು ಗಿರಿವಾಸಿಗಳು ‘ಒಡಿ ವಿದ್ಯೆ’ (ದುರ್ಮಂತ್ರವಾದ)ಯನ್ನು ಕರಗತ ಮಾಡಿಕೊಂಡಿರುತ್ತಾರೆ. ಅದು ಅವರಿಗೆ ಇತರರಿಗೆ ತೊಂದರೆ ಕೊಡಲು ಸಾಮರ್ಥ್ಯವನ್ನು ಕೊಡುತ್ತದೆ ಎಂದು ನಂಬಿದ್ದಾರೆ. ‘ಒಡಿ ವಿದ್ಯೆ’ಯನ್ನೆ ವೃತ್ತಿಯನ್ನಾಗಿಸಿಕೊಂಡವರೂ ಇದ್ದಾರೆ. ಶತ್ರುಗಳಿಗೆದುರಾಗಿ ಕಾರ್ಯ ಪ್ರವೃತ್ತವಾಗುವಂತೆ ಇತರರನ್ನು ಒಡಿಯರು ನಿಯೋಜಿಸುತ್ತಾರೆ. ಹೀಗೆ ಗಿರಿಜನರಲ್ಲಿ ಪ್ರಕೃತಿ ವಸ್ತುಗಳಲ್ಲಿ ದೈವಾಂಶವನ್ನು ಆರೋಪಿಸುವ ರೀತಿ, ದುರ್ಮಂತ ್ರವಾದ, ಬಹು ದೇವತಾರಾಧನೆ ಇಲ್ಲೆಲ್ಲ ಒಂದು ರೀತಿಯ ಧಾರ್ಮಿಕವಾದ ಸಮನ್ವಯವನ್ನು ಕಾಣಬಹುದು.