ಉತ್ಸವಗಳ ಕಾರಣಗಳಿಗೆ ಅಲ್ಲವಾದರೂ ಶಿಲ್ಪಕಲೆಗಳ ಕಾರಣಕ್ಕೆ ತೃಶ್ಯೂರಿನ ಅನೇಕ ಇಗರ್ಜಿಗಳು  ಗಮನಾರ್ಹವೆನಿಸಿವೆೆ. ಸುರಾಯಿಗಳು ಅಥವಾ ‘ಕಾಲ್‌ಡಿಯನ್ ಸಿರಿಯನ್ಸ್’ ಎಂಬ ಹೆಸರಿನಿಂದ ಗುರುತಿಸಲಾಗುವ ಕ್ರಿಸ್ಚಿಯನ್ ಸಮುದಾಯಕ್ಕೆ ಸೇರಿದ ದುಃಖ ಮಾತೆಯ ಇಗರ್ಜಿ ಪ್ರಾಚೀನವಾಗಿದೆ. ಕ್ಯಾಥೋಲಿಕರಿಗೂ ಸುರಾಯಿಗಳಿಗೂ ಪರಸ್ಪರ ಈ ಇಗರ್ಜಿಯ ಹೆಸರಿನಲ್ಲಿ ದೀರ್ಘಕಾಲ ಹಕ್ಕಿನ ವಿಷಯದಲ್ಲಿ ವಾದ ವಿವಾದ ನಡೆಯಿತು. ಕ್ಯಾಥೋಲಿಕರು ಇದರಲ್ಲಿ ಪರಾಜಿತರಾದರು. ಆದರೆ ನಗರ ಮಧ್ಯದಲ್ಲಿ ಬೃಹತ್ತಾದ ಒಂದು ಇಗರ್ಜಿಯನ್ನು ನಿರ್ಮಿಸುವುದರ ಮೂಲಕ ಜಯಶಾಲಿಗಳೆನಿಸಿದರು. ‘ಲೇಡಿ ಆಫ್ ಡಾಲರ್ಸ್‌’ ಎಂಬ ಹೆಸರಿನಿಂದ ತಿಳಿಯಲಾಗುವ ಒಂದು ಹೊಸ ಇಗರ್ಜಿ ತೃಶ್ಯೂರಿನಲ್ಲಿದೆ. ಮನೋಹರವಾದ ಬಲಿಪೀಠಗಳು, ಭಿತ್ತಿಚಿತ್ರಗಳು ಗಗನಚುಂಬಿ ಸ್ತಂಭಗಳು ವಿಶೇಷವಾಗಿ ಆಕರ್ಷಿಸುತ್ತವೆ. ಕೇರಳದಲ್ಲಿ ಇದಕ್ಕೆ ಸಮಾನವಾದ ಸುಂದರ ಇಗರ್ಜಿ ಬೇರೊಂದಿಲ್ಲ ಎಂದೇ ಹೇಳಲಾಗುತ್ತದೆ.

ಇತ್ತೀಚೆಗೆ ಆಧುನಿಕ ರೀತಿಯಲ್ಲಿ ನಿರ್ಮಿಸಲಾದ ಊರ್ದ್ ಭದ್ರಾಸನಪಳ್ಳಿಯೂ ಅದರ ಭೂಗರ್ಭ ದೇವಾಲಯವು ಆಕರ್ಷಕವಾಗಿದೆ. ತೃಶ್ಯೂರಿನಿಂದ ಮೂರು ಮೈಲು ಅಂತರದಲ್ಲಿರುವ ಒಲ್ಲೂರು ಫೋರಾನಪಳ್ಳಿ ತೃಶ್ಯೂರಿನ ಸುಂದರ ಸ್ವರೂಪದ ಇಗರ್ಜಿಗಳಲ್ಲಿಯೇ ಗಮನಾರ್ಹವಾಗಿದೆ. ಇಲ್ಲಿ ನಡೆಯುವ ಔತಣಕೂಟದಲ್ಲಿ ಎಲ್ಲಾ ಜಾತಿ ವರ್ಗಗಳ ಜನರು ಭಾಗವಹಿಸುತ್ತಾರೆ ಎಂಬುದು ವಿಶೇಷ. ಇದೇ ಮಾದರಿಯ ಫೋರಾನಪಳ್ಳಿ ಇರಿಂಜಾಲಕೂಡದಲ್ಲಿದೆ. ಕ್ರೈಸ್ತರ ಪ್ರಸಿದ್ಧ ಕೇಂದ್ರವಾದ ಇರಿಂಜಾಲ ಕೂಡದಲ್ಲಿ ಕ್ರಿಸ್‌ಮಸ್ ಸಂದರ್ಭದಲ್ಲಿ ಆಚರಿಸುವ ‘ಪಿಂಡಿಪೆರುನಾಳ್’ ಬಹಳ ಪ್ರಸಿದ್ಧವಾಗಿದೆ. ಅಂಗಡಿ ಹಾಗೂ ಮನೆಗಳಲ್ಲಿ ದೀಪಯುಕ್ತವಾದ ಪಿಂಡಿಗಳನ್ನು ಅಲಂಕರಿಸುವರು. ಪುರಾತನವಾದ ಕ್ರೈಸ್ತ ಕೇಂದ್ರವಾದ ಕುನ್ನಂಕುಳಂನ ಯಾಕೋಬಾಯ್ ವಿಭಾಗದವರ ಆರ್ತಾಟ್ಟುಪಳ್ಳಿಯೂ ಇತಿಹಾಸ ಪ್ರಸಿದ್ಧವಾಗಿದೆ.

ಉತ್ತರ ಕೇರಳದಲ್ಲಿ ಪ್ರಮುಖ ಕ್ರೈಸ್ತ ಕ್ಷೇತ್ರ ಮಯ್ಯಳಿಯ ಪ್ರಾಚೀನ ಕ್ಯಾಥೋಲಿಕ್ ದೇವಾಲಯವಾದ ಸೈಂಟ್ ತ್ರೇಸ್ಯಪಳ್ಳಿ. ಅಕ್ಟೋಬರ್ ೫ ರಿಂದ ೧೫ರವರೆಗೆ ನಡೆಯುವ ಆಚರಣೆಯು ಎಲ್ಲಾ ಸಮುದಾಯದವರು ಭಾಗವಹಿಸುವ ಒಂದು ದೇಶೀಯ ಉತ್ಸವವೆನಿಸಿದೆ. ಮಯ್ಯಳಿಮಾತೆ ಎಂಬ ಹೆಸರಿನಿಂದ ಇಲ್ಲಿ ದೇವತೆ ತ್ರೇಸ್ಯಪುಣ್ಯವತಿ ಪ್ರಸಿದ್ಧಳಾಗಿದ್ದಾಳೆ.

ಇಗರ್ಜಿಗಳಲ್ಲಿನ ಆಚರಣೆಗಳು

ಇಗರ್ಜಿಗಳು ಕ್ರಿಶ್ಚಿಯನರ ಬದುಕಿನ ಅವಿಭಾಜ್ಯ ಅಂಗಗಳು. ಬಿಷಪ್ ನಿಯಮಿಸುವ ವಿಕಾರಿಗಳ ಉಸ್ತುವಾರಿಯಲ್ಲಿ ಸಹಾಯಕ ಸಮಿತಿಯ ನೆರವಿನಿಂದ ಇಗರ್ಜಿಗಳ ದೈನಂದಿನ ಚಟುವಟಿಕೆಗಳು ನಡೆಯುತ್ತವೆ. ಸಾಮಾಜಿಕ ಆಚರಣೆಗಳಲ್ಲಿ ಪುರೋಹಿತರುಗಳಿಗೆ ಪ್ರತ್ಯೇಕ ಸ್ಥಾನಮಾನಗಳಿವೆ. ಉತ್ಸವಾಚರಣೆಗಳ ಸಂದರ್ಭದಲ್ಲಿ ಮತ್ತು ಆದಿತ್ಯವಾರಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಅವರವರು ಸದಸ್ಯರಾಗಿರುವ ಇಗರ್ಜಿಗಳಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸುವರು. ಕ್ರಿಶ್ಚಿಯನ್ ದೇವಾಲಯಗಳಲ್ಲಿ ಜೋರಾಗಿ ಕೂಗಿ ಹೇಳುವ ಪ್ರಾರ್ಥನೆಗಳೂ ಇರುತ್ತವೆ. ತಮ್ಮ ತಮ್ಮ ಮನೆಗಳಿಂದ ತಂದ ತೆಂಗಿನೆಣ್ಣೆಯಿಂದ ಬತ್ತಿಗಳನ್ನು ಉರಿಸುವುದು ಭಕ್ತರ ಕರ್ತವ್ಯದ ಭಾಗವೇ ಆಗಿದೆ. ಇಗರ್ಜಿಗಳ ಆರಾಧನೆಯಲ್ಲಿ ಕುಳಿತು ಕೊಂಡು ಮಾಡುವ ಪ್ರಾರ್ಥನೆ ಹಾಗೂ ಧೂಪಗೂಡಿಗೆ ವಿಶೇಷ ಪ್ರಾಧಾನ್ಯವಿದೆ. ಹೆಬ್ಬೆರಳಿನಿಂದ ಹಣೆಯಲ್ಲಿ ಶಿಲುಬೆ ಬರೆದು ಪ್ರಾರ್ಥನೆ ಆರಂಭಿಸಲಾಗುವುದು. ಕ್ಯಾಥೋಲಿಕ್ ಇಗರ್ಜಿಗಳಲ್ಲಿ ಶಿಲುಬೆಯ ಕ್ರಿಸ್ತನನ್ನು ಕಾಣಬಹುದಾದರೂ ಇತರ ಕ್ರಿಶ್ಚಿಯನ್ ಸಮುದಾಯ ಗಳಲ್ಲಿ ಶಿಲುಬೆಯನ್ನು ಮಾತ್ರವೆ ಪೂಜಾದಿ ಸಂದರ್ಭಗಳಲ್ಲಿ ಉಪಯೋಗಿಸುವರು.

ಪ್ರಪಂಚದಾದ್ಯಂತ ಕ್ರಿಶ್ಚಿಯನರು ಆಚರಿಸುವ ಕ್ರಿಸ್‌ಮಸ್ ಮೊದಲಾದ ಹಬ್ಬಗಳಲ್ಲದೆ ಕೇರಳದ ಪ್ರತಿಯೊಂದು ಇಗರ್ಜಿಗಳಲ್ಲಿಯೂ ವಿಶೇಷವಾಗಿ ‘ಪೆರುನಾಳ್’ ಉತ್ಸವವನ್ನು ಪ್ರತೀ ವರ್ಷ ಆಚರಿಸುತ್ತಾರೆ. ಆರಾಧನೆಯ ಬಹುಮುಖ್ಯ ಭಾಗಗಳೆಂದರೆ ಔತಣ ಮತ್ತು ಉಪವಾಸ. ಇಗರ್ಜಿಗಳಲ್ಲಿ ಹೆಚ್ಚಿನವುಗಳಿಗೆ ಸಾಮಾನ್ಯವಾಗಿ ಸೈಂಟ್ ಸೆಬಾಸ್ಟಿಯನ್ ಮತ್ತು ಸೈಂಟ್ ಜಾರ್ಜ್‌ನ ಹೆಸರಿನಲ್ಲಿರುವವುಗಳಿಗೆ ರೋಗ ಪರಿಹಾರ ಶಕ್ತಿಗಳಿವೆ ಎಂಬ ನಂಬಿಕೆಯಿದೆ. ದೈಹಿಕ ಹಾಗೂ ಮಾನಸಿಕವಾದ ಕಾಯಿಲೆಗಳನ್ನು ದಿವ್ಯಾದ್ಭುತ ಶಕ್ತಿಗಳ ಮೂಲಕ ಪರಿಹರಿಸಲು ದೇವರುಗಳಿಗೆ ಸಾಧ್ಯವಿದೆ ಎಂಬುದು ಭಕ್ತರ ದೃಢವಾದ ನಂಬಿಕೆ. ಸಾಂಕ್ರಾಮಿಕ ರೋಗಗಳಿಂದ  ಹಾಗೂ ಅಪಾಯಗಳಿಂದ ಆಶ್ಚರ್ಯಕರವಾಗಿ ಪಾರಾದವರು ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಕೆಡಿಸಿಕೊಂಡವರು ಆರ್ತುಂಗಲ್ ಇಗರ್ಜಿಗೆ ಬರುವವರಲ್ಲಿ ಬಹುತೇಕ ಮಂದಿ ಇರುತ್ತಾರೆ. ಸಮುದ್ರ ತೀರದಿಂದ ಮೊಣಕಾಲಿನಲ್ಲಿ ನಡೆಯುತ್ತಲೋ, ಉರುಳುಸೇವೆ ನಡೆಸಿಯೋ, ಬೆಳ್ಳಿ, ಬಂಗಾರಗಳಲ್ಲಿ ಕೈ, ಕಾಲು ಮೊದಲಾದ ರೂಪುಗಳನ್ನು ಮಾಡಿ ಸಮರ್ಪಿಸುವುದರ ಮೂಲಕವೋ, ಬಿಲ್ಲು ಬಾಣಗಳನ್ನು ಒಪ್ಪಿಸುವುದರ ಮೂಲಕವೋ ಭಕ್ತರು ಸೆಬಾಸ್ಟಿಯನ್‌ನನ್ನು ಪೂಜಿಸುತ್ತಾರೆ. ಎಡತ್ವಾದ ಸೈಂಟ್ ಜಾರ್ಜ್‌ನ ಇಗರ್ಜಿಗೆ ಭಕ್ತರು ಹಣದ ಬದಲಿಗೆ ಬಂಗಾರದ ಹಾವು, ಕಣ್ಣು, ಕಿವಿ ಮೊದಲಾದ ರೂಪಗಳನ್ನು ನಿರ್ಮಿಸಿ ಸಮರ್ಪಿಸುವರು.

ಮಣರ್‌ಕಾಡಿನಲ್ಲಿ ಯಾಕೋಬಾಯ್ ಸಿರಿಯಾನಿ ಇಗರ್ಜಿಯ ‘ಪೆರುನಾಳ್’ ಉತ್ಸವಕ್ಕೆ ಸಂಬಂಧಿಸಿದಂತೆ ಅನೇಕ ತೆರನ ಆಚರಣೆಗಳಿವೆ. ‘ಪಾಚ್ಚೋರ್‌ನೇರ್ಚೆ’ (ಹಾಲನ್ನದ ಹರಕೆ) ಅವುಗಳಲ್ಲಿ ಪ್ರಮುಖವಾದುದು. ತೆಂಗಿನಕಾಯಿಯ ಹಾಲಿನಲ್ಲಿ ಅಕ್ಕಿಯನ್ನು ಬೇಯಿಸಿ ಕೈಗಾಡಿಗಳಲ್ಲಿ ಹೇರಿಕೊಂಡು ಭಕ್ತರಿರುವೆಡೆಗೆ ಹೋಗಿ ಕೊಡುವುದೇ ‘ಪಾಚ್ಚೋರ್ ನೇರ್ಚೆ’ಯ ವೈಶಿಷ್ಟ್ಯ. ಮನುಷ್ಯನ ರೂಪಗಳು, ಅವಯವಗಳ ರೂಪಗಳು, ಕಾಗೆ, ಇಲಿ, ಆಡು, ಹಾವು, ಮೊದಲಾದ ಮೃಗ, ಪಕ್ಷಿಗಳ ರೂಪಗಳನ್ನು ಬಂಗಾರದಿಂದಲೋ, ಬೆಳ್ಳಿಯಿಂದಲೋ ಮಾಡಿಸಿ ಸಮರ್ಪಿಸುವುದು ಇನ್ನೊಂದು ತೆರನ ಹರಕೆ. ಮಾನಸಿಕ ರೋಗಿಗಳಿಗೆ ಈ ಇಗರ್ಜಿಯು ಒಂದು ಅಭಯತಾಣವೆಂದು ಪ್ರಖ್ಯಾತವಾಗಿದೆ. ಕ್ಷುದ್ರ ದೈವಗಳ ಬಾಧೆಯಿಂದ ಕಷ್ಟ ಅನುಭವಿಸುವವರು ಮೈ ಮರೆತು ಇಗರ್ಜಿಯ ಸಮೀಪ ಕುಣಿಯುತ್ತಾ ಶಿಲುಬೆಗೆ ಪ್ರದಕ್ಷಿಣೆ ಬರುವ ದೃಶ್ಯ, ಇಲ್ಲಿ ಸಾಮಾನ್ಯ. ಮೊಣಕಾಲಲ್ಲಿ ನಡೆದೋ, ಎತ್ತಿನಗಾಡಿಯಲ್ಲಿ ಕುಳಿತೋ ಪ್ರದಕ್ಷಿಣೆ ಬರುವುದೂ ಇದೆ.

ಕುಡಮಾಳೂರು ಇಗರ್ಜಿಯ ಪ್ರಮುಖವಾದ ಒಂದು ಹರಕೆ ಹಾಲು ಪಾಯಸ. ೧೫೧೫ರಲ್ಲಿ ಸಂತತಿಯಿಲ್ಲದ ಚೆಂಬಕಶ್ಯೇರಿ ರಾಜನು ಈ ಹರಕೆಯನ್ನು ಪ್ರಾರಂಭಿಸಿದ. ಅಸ್ತಮಾ, ಹೊಟ್ಟೆನೋವು ಮೊದಲಾದವುಗಳ ಪರಿಹಾರಕ್ಕಾಗಿ ಪ್ರಾರ್ಥಿಸುವ ಭಕ್ತರನ್ನು ಇಲ್ಲಿ ಕಾಣಬಹುದು. ಹಲವು ತೆರನ ಕಾಣಿಕೆಗಳನ್ನು ಸಮರ್ಪಿಸುವುದಲ್ಲದೆ ಎದುರು ಭಾಗದಲ್ಲಿರುವ ಶಿಲುಬೆಯ ಪಕ್ಕದಲ್ಲಿ ಅಂಬೆಗಾಲಿನಲ್ಲಿ ನಡೆದು ಬರುವ ಮೂಲಕ ಪೂಜೆ ಸಲ್ಲಿಸುತ್ತಾರೆ.

ಪುದುಪಳ್ಳಿಯ ಸೈಂಟ್ ಜಾರ್ಜ್‌ನ ಹೆಸರಿನಲ್ಲಿರುವ ಆರ್ಥೋಡೋಕ್ಸ್ ಸಿರಿಯನ್ ದೇವಾಲಯದಲ್ಲಿ ಮೇಷ ಮಾಸದಲ್ಲಿ ಆಚರಿಸುವ ವಾರ್ಷಿಕ ಪೆರನಾಳ್‌ಗೆ ಹರಕೆಯ ರೂಪದಲ್ಲಿ ಭಕ್ತರು ತರುವ ಕೋಳಿಗಳ ಮಾಂಸವನ್ನು ಪಾಕ ಮಾಡಿ ವಿತರಿಸಲಾಗುವುದು. ಇಲ್ಲಿನ ಅನ್ನಕ್ಕೆ (ವಚ್ಚೂಟ್ಟ್) ಔಷಧ ಗುಣವುಂಟೆಂಬ ನಂಬಿಕೆಯಿದೆ. ಕೆಲವು ಭಕ್ತರು ಅದನ್ನು ಒಣಗಿಸಿ ಪುಡಿ ಮಾಡಿ ತೆಗೆದಿರಿಸಿ ಔಷಧಿಯಾಗಿ ಬಳಸುವುದೂ ಇದೆ. ವಿಷಬಾಧೆಗೊಳ ಗಾದವರು, ಮಾನಸಿಕ ರೋಗಿಗಳು, ಕ್ಷುದ್ರದೈವಗಳ ಪೀಡನೆಯಿಂದ ಬಳಲುವವರು ಹೀಗೆ ಮೊದಲಾದವರಿಗೆ ಈ ಇಗರ್ಜಿಯಲ್ಲಿ ಪರಿಹಾರ ದೊರೆಯುತ್ತದೆಂಬ ನಂಬಿಕೆಯಿದೆ. ಕ್ರಿಶ್ಚಿಯನರಲ್ಲದೆ ಇತರ ಜಾತಿ ಸಮುದಾಯಗಳ ಜನರೂ ಇಲ್ಲಿಗೆ ಪರಿಹಾರ ಬಯಸಿ ಬರುತ್ತಾರೆ.

ಬಾಲ ಯೇಸುವಿನ ಪ್ರತಿಮೆಗೆ ಪ್ರಸಿದ್ಧವಾದ ಆಲಙಾಡ್ ಬೆಟ್ಟದ ಮೇಲಿನ ಇಗರ್ಜಿಯಲ್ಲಿ ತಮುಕ್ಕ್ ಎಂಬ ಹೆಸರಿನಲ್ಲಿ ಅಕ್ಕಿಹಿಟ್ಟು ಮತ್ತು ಬಾಳೆಹಣ್ಣಿನಿಂದ ವಿಶೇಷವಾದ ಪಾಕ ತಯಾರಿಸಿ ಸಮರ್ಪಿಸುವ ಹರಕೆ ವಿಶಿಷ್ಟವಾದುದು. ಸುಖಪ್ರಸವಕ್ಕಾಗಿ ಈ ಹರಕೆಯನ್ನು ಸಲ್ಲಿಸಲಾಗುತ್ತದೆ. ಅಂಗಮಾಲಿಯ ಸೈಂಟ್ ಜಾರ್ಜ್ ಇಗರ್ಜಿಯಲ್ಲಿ ಈಸ್ಟರ್‌ನ ನಂತರದ ವಾರ ವಾರ್ಷಿಕ ಪೆರುನಾಳ್‌ಗೆ ಬಂದು ಸೇರುವ ತಮಿಳುನಾಡಿನ ಭಕ್ತರು ಸರ್ಪ ಭಯಕ್ಕಾಗಿ ಬೆಳ್ಳಿ ಮತ್ತು ಬಂಗಾರವನ್ನು ಕಾಣಿಕೆಯೊಪ್ಪಿಸುವುದಿದೆ. ಸಮೀಪದ ಅಗಪರಂಬು ಇಗರ್ಜಿಯಲ್ಲಿ ‘ಕಾಲ್ ಕಳುಗುಚೂಟ್’ ಎಂಬುದು ಪ್ರಮುಖ ಹರಕೆ. ಸೈಂಟ್ ಜಾರ್ಜ್‌ನ ಹೆಸರಿನಲ್ಲಿರುವ ಇತರ ಕೆಲವು ಇಗರ್ಜಿಗಳಲ್ಲಿರುವಂತೆ ಇಡಪಳ್ಳಿಯ ಸೈಂಟ್ ಜಾರ್ಜ್ ದೇವಾಲಯದಲ್ಲಿ ಕೋಳಿಯೆ ಬಹುಮುಖ್ಯ ಹರಕೆ. ಮುಳವುಕಾಡ್ ಸೈಂಟ್ ಸಬಾಸ್ಟಿಯನ್ ಇಗರ್ಜಿಯಲ್ಲಿ ಜಾಗರಣೆ ಒಂದು ವಿಶೇಷ ಹರಕೆ. ಜನವರಿ ತಿಂಗಳಲ್ಲಿ ನಡೆಯುವ ವಾರ್ಷಿಕ ಪೆರುನಾಳಿಗೆ ಸಂಬಂಧಿಸಿದಂತೆ ಹಣ, ಅಕ್ಕಿ, ಭತ್ತ, ಕಾಳುವೆಣಸು ಮೊದಲಾದ ವಸ್ತುಗಳನ್ನು ಹರಕೆ ರೂಪದಲ್ಲಿ ಸಲ್ಲಿಸಲಾಗುತ್ತದೆ. ಕೊರಟ್ಟಿಯ ಸೈಂಟ್ ಮೇರೀಸ್ ಇಗರ್ಜಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯುವ ವಾರ್ಷಿಕ ಪೆರುನಾಳ್‌ಗೆ ಜಾತಿ ಮತಗಳ ಭೇದವೆಣಿಸದೆ ಜನರು ಬಂದು ಸೇರುತ್ತಾರೆ. ಕೊರಟ್ಟಿಮುತ್ತಿ ಕೊಡುಙಲ್ಲೂರು ಭಗವತಿಯ ಸಹೋದರಿ ಯಂತೆ. ರಸಬಾಳೆ ಗೊನೆಯನ್ನು ಕೊರಟ್ಟಿಮುತ್ತಿಗೆ ಹರಕೆ ರೂಪದಲ್ಲಿ ಒಪ್ಪಿಸಬೇಕು.

ಇಗರ್ಜಿಗಳಲ್ಲಿ ಹರಕೆ ರೂಪದ ಆಚರಣೆಗಳನ್ನು ಗಮನಿಸಿದಾಗ ಇಲ್ಲಿ ವೈವಿಧ್ಯಮಯ ವಾದ ಹಾಗೂ ವಿಚಿತ್ರವಾದ ಆಚರಣೆಗಳನ್ನು ಕಾಣಬಹುದು. ಇಗರ್ಜಿಗಳಲ್ಲಿನ ಆಚರಣೆಗಳು ಕೇರಳದ ದೇವಾಲಯಗಳ ಆಚರಣೆ ಹಾಗೂ ಹರಕೆಗಳೊಡನೆ ಸಾಮ್ಯವಿರುವುದನ್ನು ಗಮನಿಸಬಹುದು. ಕ್ರಿಶ್ಚಿಯನ್ ಸಮುದಾಯ ಪಾಶ್ಚಾತ್ಯ ಇಗರ್ಜಿಗಳ ಸಂಪ್ರದಾಯಗಳಿಗಿಂತ ಭಿನ್ನವಾಗಿ ಕೇರಳೀಯವಾದ ಅನೇಕ ಸಂಗತಿಗಳ ಮೂಲಕ ಪ್ರತ್ಯೇಕವಾಗಿವೆ. ಇಂದು ಅನೇಕ ಇಗರ್ಜಿಗಳಲ್ಲಿ ವಿಜಯದಶಮಿಯಂದು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವ ಸಂಪ್ರದಾಯವೂ ಚಾಲನೆಗೆ ಬಂದಿದೆ. ಕೇರಳದ ಸಾಂಸ್ಕೃತಿಕ ಪರಿವೇಷ ತೊಟ್ಟ ಇಗರ್ಜಿಗಳು ಕೇರಳ ಸಂಸ್ಕೃತಿಯ ಭಾಗವೇ ಆಗಿ ರೂಪುಗೊಂಡಿವೆಯೆಂಬುದು ಮಾತ್ರ ವಾಸ್ತವ.

ಮಸೀದಿಗಳು

ಮುಸಲ್ಮಾನರು ನೆಲೆಸಿರುವ ಪುಟ್ಟ ಊರುಗಳಲ್ಲಿಯೂ ಮಸೀದಿಗಳನ್ನು ಕಾಣಬಹುದು. ಮುಸಿರಿಸ್‌ನಲ್ಲಿ ಅಂದರೆ ಈಗಿನ ಕೊಡಙಲ್ಲೂರಿನಲ್ಲಿ ಕೇರಳ ಶೈಲಿಯ ಮಸೀದಿಯನ್ನು ಕಾಣಬಹುದು. ಇದನ್ನು ಕೇರಳದ ಮೊದಲ ಮಸೀದಿ ಎಂದು ಹೇಳಲಾಗುತ್ತದೆ. ಮುಸಲ್ಮಾನರ ಸಂಖ್ಯೆ ಹೆಚ್ಚುತ್ತಾ ಕೇರಳದೆಲ್ಲೆಡೆ ವ್ಯಾಪಿಸುತ್ತಿರುವಂತೆ ಮಸೀದಿಗಳ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು. ಕೇರಳದ ಮಸೀದಿಗಳಲ್ಲಿ ಹೆಚ್ಚಿನವು ಉತ್ತರ ಕೇರಳದಲ್ಲಿಯೇ ಇವೆ. ಕೆಲವೆಡೆ ಮಹಾನ್ ವ್ಯಕ್ತಿಗಳ ದರ್ಗಾಗಳೂ ಮಸೀದಿಗಳ ಸಮೀಪ ಇವೆ. ಈ ತೆರನ ದರ್ಗಾಗಳನ್ನು ‘ಜಾರಂ’ ಎಂದು ಹೇಳುವರು. ಅರಬ್ ದೇಶದಿಂದ ಬಂದ ಮಾಲಿಕ್ ಇಬ್‌ನ್-ದೀನಾರ್ ಎಂಬ ಮುಸಲ್ಮಾನ ಸಂತನು ಕೊಡುಙಲ್ಲೂರು, ಕೊಲ್ಲಂ, ಕಾಸರಗೋಡು, ಶ್ರೀಕಂಠಪುರ, ವಳಪಟ್ಟಣಂ, ಮಾಡಾಯಿ, ಧರ್ಮಾಡಂ, ಪಂದಲಾಯಿನಿ ಕೊಲ್ಲಂ, ಚಾಲಿಯಂ ಮೊದಲಾದ ಒಂಭತ್ತು ಸ್ಥಳಗಳಲ್ಲಿ ಮಸೀದಿಗಳನ್ನು ನಿರ್ಮಿಸಿದನು ಎಂದು ತುಹಾಫತ್ ಉಲ್ ಮುಜಾಹಿದ್ ಗ್ರಂಥದಲ್ಲಿ ಹೇಳಿದೆ. ಮಾಲಿಕ್ ದೀನಾರ್‌ನ ಆಗಮನವನ್ನು ಕಾಸರಗೋಡಿನ ಮುಸಲ್ಮಾನರು ಪ್ರತಿವರ್ಷವೂ ಆಚರಿಸುತ್ತಾ ಬಂದಿದ್ದಾರೆ. ಮಾಲಿಕ್ ಇಬನ್ ದೀನಾರನ ನೇರ ಶಿಷ್ಯನಾದ ಮಾಲಿಕ್ ಇಬ್‌ನ್ ಮುಹಮ್ಮದನ ಭೌತಿಕ ಅವಶಿಷ್ಟ್ಯಗಳನ್ನು ಸಮಾಧಿ ವಾಡಿದ ಸ್ಥಳವೂ ಇಲ್ಲಿರುವುದರಿಂದ ಇದೂ ಮುಸಲ್ಮಾ ನರಿಗೆ ಪವಿತ್ರವಾಗಿದೆ.

ಮಾಡಾಯಿಯ ಮಾಲಿಕ್ ಇಬ್‌ನ್-ದೀನಾರ್ ಮಸೀದಿಯಲ್ಲಿ ಮಕ್ಕದಿಂದ ತಂದು ದೆಂದು ಹೇಳಲಾಗುವ ಒಂದು ಬೆಳ್ಳಗಿನ ಬೆಣ್ಣೆ ಕಲ್ಲಿದೆ. ಮಸೀದಿಯನ್ನು ಈಗ ಪುನರ್ನಿರ್ಮಿಸಲಾಗಿದೆ. ಹಾಗೆಯೇ ಪ್ರವಾದಿಯೊಬ್ಬನ ಸಮಾಧಿಯೂ ಇಲ್ಲಿದೆ. ಕಣ್ಣೂರಿನ ಹಳೆಯ ಜಮಾಲತ್ ಮಸೀದಿಯು ಮಹಮ್ಮದ್ ಮೌಲಾನಾ ಎಂಬ ಒಬ್ಬ ಮುಸಲ್ಮಾನ ಸಂತನ ಸಮಾಧಿಯ ಕಾರಣಕ್ಕಾಗಿ ಪ್ರಸಿದ್ಧವಾಗಿದೆ. ತಲಶ್ಯೇರಿ ನಗರದ ಹೃದಯ ಭಾಗದಲ್ಲಿರುವ ಜುವಾ ಮಸೀದಿಯು ಕೇರಳದ ಪ್ರಖ್ಯಾತವಾದ ಮಸೀದಿಗಳಲ್ಲಿ ಒಂದೆನಿಸಿದೆ. ೧೯ನೆಯ ಶತಮಾನದ ಕೊನೆಯ ಭಾಗದಲ್ಲಿ ನಿರ್ಮಾಣಗೊಂಡ ಈ ಮಸೀದಿಯನ್ನು ಭಾರತೀಯ-ಮಹಮ್ಮದೀಯ ಶೈಲಿಯಲ್ಲಿ ಇತ್ತೀಚೆಗೆ ಪುನರ್ನಿರ್ಮಿಸಲಾಗಿದೆ. ಮಕ್ಕದ ಪವಿತ್ರ ಮಸೀದಿಯ ಮಾದರಿಯಲ್ಲಿ ನಿರ್ಮಿಸಲಾದ ಪಂದಲಾಯಿನಿಕೊಲ್ಲಂನ ಇಬ್‌ನ್-ದೀನಾರ್ ಮಸೀದಿಯ ತಾಮ್ರ ಹೊದಿಸಿದ ಗುಮ್ಮಟವು ಪ್ರಸಿದ್ಧವಾಗಿದೆ. ಹಿಂದಿನ ಕಾಲದಲ್ಲಿ ಆ ದಾರಿಯಾಗಿ ಕಡಲಿನಲ್ಲಿ ಹೋಗುವ ಎಲ್ಲಾ ಅರೇಬಿಯನ್ ಹಡಗುಗಳ ಪ್ರಯಾಣಿಕರ ಗೌರವಕ್ಕೆ ಈ ಗುಮ್ಮಟವು ಪಾತ್ರವಾಗಿತ್ತು.

ಕೋಝಿಕೋಡಿನ ಹಲವು ಮಸೀದಿಗಳಲ್ಲಿ ಎರಡು ಜಮಾಲತ್ ಮಸೀದಿಗಳು-ಷೇಕ್‌ನ ಮಸೀದಿ ಹಾಗೂ ಹಳೆಯ ಮಸೀದಿ-ಪ್ರಸಿದ್ಧವಾಗಿವೆ. ಷೇಕ್ ಮಮ್ಮುಕೋಯ ಎಂಬ ಒಬ್ಬ ಈಜಿಪ್ಟಿಯನ್ ಸಂತನ ಸಮಾಧಿಯಿರುವುದರಿಂದ ಇವುಗಳಲ್ಲಿ ಒಂದನ್ನು ಈ ಸಂತನ ಹೆಸರಿನಿಂದಲೇ ಗುರುತಿಸಲಾಗುತ್ತದೆ. ಕೊಂಡೊಟ್ಟಿ ಮಸೀದಿಗೆ ಹಾಗೂ ಮಂಬುರಂ ಮಸೀದಿಗೆ ಹೋಗುವ ಯಾತ್ರೆಗಳಿಗೆ ಕೊಂಡೊಟ್ಟಿ ನೇರ್ಚೆ (ಹರಕೆ) ಎಂದು ‘ಮಂಬುರಂ’ ಎಂದೂ ಹೆಸರು. ಕೊಂಡೊಟ್ಟಿಯ ಮಸೀದಿಯಲ್ಲಿ ಮುಹಮ್ಮದ್ ಷಾ ತಙಳ್‌ನ ಹಾಗೂ ಮಂಬುರತ್ ಸೆಯ್‌ದ್ ಆಲಿಯ ಮತ್ತು ಆತನ ಎಂಟು ಮಂದಿ ಕುಟುಂಬದ ಸದಸ್ಯರ ಸಮಾಧಿಗಳಿವೆ. ಪೊನ್ನಾನಿಯಲ್ಲಿರುವ ಮಖ್‌ದುಂ ತಙಳ್ ಕೇರಳದ ಎಲ್ಲಾ ಮುಸಲ್ಮಾನರ ಧಾರ್ಮಿಕ ಅಧಿಕಾರಿ. ಈ ಕಾರಣಕ್ಕಾಗಿ ಪೊನ್ನಾನಿಯನ್ನು ಕೇರಳದ ಮುಸಲ್ಮಾನರ ಮಕ್ಕ ಎಂದು ಹೇಳಲಾಗುತ್ತದೆ. ‘ಜಾರತ್ತಿಂಗಲ್ ತಙಳ್’ನ ಭೌತಿಕ ಅವಶಿಷ್ಟ್ಯಗಳ ಸುಂದರ ಸಮಾಧಿಯೂ ಪೊನ್ನಾನಿಯಲ್ಲಿದೆ.

ಪಾಲಕ್ಕಾಡ್ ಜಿಲ್ಲೆಯ ಪಲ್ಲನ್ ಚಾತ್ತನ್ನೂರಿನಲ್ಲಿ ತೆರುವತ್ತು ಎಂಬೆಡೆಯಲ್ಲಿ ಕೇರಳ ಹಾಗೂ ತಮಿಳುನಾಡುಗಳಿಂದ ಭಕ್ತರನ್ನು ಸೆಳೆಯುವ ಮಸೀದಿಯೊಂದಿದೆ. ಚಾವಕ್ಕಾಡ್ ತಾಲೂಕಿನ ಮಣತ್ತಲದಲ್ಲಿ ಹೈದ್ರೋಸ್ ಕುಟ್ಟಿ ಮೂಪ್ಪರ ಸಮಾಧಿಯೊಂದನ್ನು ಕಾಣ ಬಹುದು. ಮುಸಲ್ಮಾನರು ಬಹುಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಕಣಯನ್ನೂರು ತಾಲೂಕಿನ ಕಾಞಾರಮಟ್ಟದಲ್ಲಿ ಷೇಕ್‌ಪರೀದನ ಸಮಾಧಿಯ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ. ಮಕರಮಾಸ ಒಂದರಂದು ಅಂದರೆ ಶಬರಿಮಲೆಯ ಮಕರ ವಿಳಕ್ಕ್‌ನ ದಿವಸ ಇಲ್ಲಿ ನಡೆಯುವ ವಾರ್ಷಿಕ ಪೆರುನಾಳ್ ಹೆಸರುವಾಸಿಯಾಗಿದೆ. ವಡಕ್ಕಾಂಕೂರ್ ರಾಜನು ಸೈನ್ಯದಲ್ಲಿದ್ದ ಮುಸಲ್ಮಾನರಿಗಾಗಿ ನಿರ್ಮಿಸಿದ ಮಸೀದಿಯೊಂದು ತೊಡುಪುೞದಲ್ಲಿದೆ.

ತಿರುವನಂತಪುರಂನ ಕರಾವಳಿಯಲ್ಲಿರುವ ಬೀಮಾ ಮಸೀದಿ ದಕ್ಷಿಣ ಕೇರಳದ ಪ್ರಮುಖ ಮಸೀದಿಗಳಲ್ಲೊಂದು. ಜಾತಿ, ಮತ ಭೇದವೆಣಿಸದೆ ಸಾವಿರಾರು ಮಂದಿ ಭಕ್ತರು ಬೀಮಾ ಮಸೀದಿಗೆ ಭೇಟಿ ನೀಡುತ್ತಾರೆ. ಪ್ರತಿ ವರ್ಷ ನಡೆಯುವ ಚಂದನಕುಂಬ ಪೆರುನಾಳ್ (ಉರೂಸ್) ಸಾವಿರಾರು ಜನರನ್ನು ಸೆಳೆಯುತ್ತದೆ. ಮಕ್ಕದಿಂದ ಮೆಹಿನ್ ಅಬೂಬಕ್ಕರ್ ‘ಒಲಿಯುಲ್ಲ’ ಎಂಬ ಮಗನೊಡನೆ ಇಲ್ಲಿಗೆ ಬಂದು ನೆಲೆಸಿದ್ದನೆಂದು ನಂಬಿಕೆ. ಸಾದ್ವಿಯೂ ಭಕ್ತೆಯೂ ಆದ ಬೀಮಾಬೀವಿ ಎಂಬ ಮಹಿಳೆಯ ಪುಣ್ಯ ಸ್ಮರಣೆಗಾಗಿ ಈ ಮಸೀದಿಯನ್ನು ಕಟ್ಟಲಾಗಿದೆ. ಬೀಮಾ ಬೀವಿಯ ಮಗನ ಭೌತಿಕ ಅವಶಿಷ್ಟ್ಯಗಳ ಸಮಾಧಿಯ ಸಮೀಪದಲ್ಲಿ ಕಾಲಕ್ರಮೇಣ ಮಸೀದಿಯು ತಲೆಯೆತ್ತಿತ್ತು. ಜಾತಿ ಮತ ಭೇದವೆಣಿಸದೆ ಅಂಗ ವೈಕಲ್ಯ, ಬುದ್ದಿಮಾಂದ್ಯತೆ, ದುಷ್ಟ ಶಕ್ತಿಗಳ ಪೀಡನೆ ಇತ್ಯಾದಿಗಳ ಪರಿಹಾರಕ್ಕಾಗಿ ಈ ಮಸೀದಿಗೆ ಹರಕೆಯೊಪ್ಪಿಸುತ್ತಾರೆ.

ಮುಸಲ್ಮಾನರ ಆಚರಣೆಗಳು

ಕೇರಳದ ಮುಸಲ್ಮಾನರಲ್ಲಿ ಸುನ್ನಿಗಳೇ ಬಹುಸಂಖ್ಯಾತರು. ಮತತತ್ವಗಳ ಸಂಹಿತೆಯ ಪಾರಾಯಣ (ಶಹಾದತ್) ದೈನಂದಿನ ಐದು ಪ್ರಾರ್ಥನೆಗಳು (ನಿಸ್ಕಾರಂ), ರಂಜಾನ್ ಆಚರಣೆ, ಬಡವರಿಗೆ ದಾನ ಮಾಡುವುದು (ಸಕ್ಕಾತ್) ಮಕ್ಕಯಾತ್ರೆ (ಹಜ್) ಎಂಬಿತ್ಯಾದಿ ಮುಸಲ್ಮಾನರ ಪಂಚಧರ್ಮಗಳನ್ನು ಅವರು ನಂಬುತ್ತಾರೆ. ಪ್ರಾರ್ಥನೆಗೆ ಮೊದಲು ದೇಹವನ್ನು ಸ್ವಚ್ಛಗೊಳಸಿ ‘ಒಸು’ ತೆಗೆಯಬೇಕು. ಕುರಾನ್ ಪರಮ ಪ್ರಮಾಣ, ಮೊಹಲ್ಲಾಗಳ ಮುಸಲ್ಮಾನರನ್ನು ಪ್ರತಿನಿಧಿಸುವ ಒಂದು ಸಮಿತಿಗೆ ಮಸೀದಿಯ ಆಡಳಿತಾಧಿಕಾರ. ಇಸ್ಲಾಂನ ವಿಚಾರಗಳಲ್ಲಿ ಸಾಂಪ್ರದಾಯಿಕವಾದ ಶಿಕ್ಷಣ ಪಡೆದ ಮೌಲವಿಗೆ ಮತೀಯ ಹಾಗೂ ಸಾಮುದಾಯಕವಾದ ಆಚರಣೆಗಳ ಜವಾಬ್ದಾರಿಯಿರುತ್ತದೆ. ಆರಾಧನೆಗೆ ಸಂಬಂಧಿಸಿದ ಪ್ರಾರ್ಥನೆಗಳ ನೇತೃತ್ವ ಇಮಾಮ್‌ಗೆ. ಮತ ಪ್ರಚಾರಕನಾದ ಖಲೀಫಾ, ಸಹಾಯಕನಾದ ‘ಮುಕ್ರಿ’ ಎಂಬಿವರೇ ಮಸೀದಿಯ ಇತರ ಅಧಿಕಾರಿಗಳು. ಮಿಕ್ಕ ಮುಸಲ್ಮಾನರು ಶುಕ್ರವಾರದ ಪ್ರಾರ್ಥನೆಗೆ (ಜೂಮ) ಮಸೀದಿಗೆ ಬರುವರು. ಸಾಮಾನ್ಯವಾಗಿ ಪ್ರಾರ್ಥನೆಗಾಗಿ ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ಅವಕಾಶವಿಲ್ಲ. ಇತ್ತೀಚಿಗೆ ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶಾವಕಾಶ ನೀಡಲಾಗಿದೆ. ಸಾಂಪ್ರದಾಯಿಕವಾದ ಪ್ರಾರ್ಥನೆಗಳೆಲ್ಲ ಅರೆಬಿಕ್ ಭಾಷೆಯಲ್ಲಿರುತ್ತದೆ. ಅದನ್ನು ‘ಖುತ್‌ಬ’  ಎನ್ನುತ್ತಾರೆ. ಎಲ್ಲರಿಗೂ ಅರ್ಥವಾಗದ ಕಾರಣ ಅದನ್ನು ಮಲಯಾಳಂ ಭಾಷೆಯಲ್ಲಿ ವಿವರಿಸುವ ವ್ಯವಸ್ಥೆಯೂ ಇರುತ್ತದೆ. ಮಕ್ಕ ಸಂದರ್ಶನವೇ ಕೇರಳದ ಮುಸಲ್ಮಾನರ ಮಹತ್ವಾಕಾಂಕ್ಷೆಯಾಗಿದೆ.

ತಿಣ್ಗಕೊಂಡ ಅಥವಾ ಬದುಕಿರುವ ಸಂತರ ಬಗೆಗೆ ಕೇರಳದ ಮುಸಲ್ಮಾನರಿಗೆ ಶ್ರದ್ಧಾ ಭಕ್ತಿಗಳಿವೆ. ಅನುಗ್ರಹಕ್ಕಾಗಿ ಅವರು ಸಂತರನ್ನು ಆರಾಧಿಸುವರು. ಮೇಲೆ ಹೇಳಿದ ಮಸೀದಿಗಳ ‘ಜಾರಂ’ಗಳು ಇಂತಹ ಸಂದರ್ಭಗಳಲ್ಲಿ ಪ್ರಾಮುಖ್ಯ ಪಡೆಯುತ್ತವೆ. ಸಮಸ್ಯೆಗಳು ಎದುರಾ ದಾಗ ಪ್ರವಾದಿಗಳ ನೇರ ಶಿಷ್ಯರೆಂದು ಹೇಳಲಾಗುವ ‘ತಙಳ್’ರನ್ನು ಸಂಪರ್ಕಿಸುವರು. ಮಕ್ಕಳಿಗೆ ಮತೀಯವಾದ ವಿಚಾರಗಳನ್ನು ತಿಳಿಸಿಕೊಡುವ  ಸಲುವಾಗಿ ಎಲ್ಲಾ ಮಸೀದಿಗಳ ಜೊತೆಗೆ ‘ಮದ್ರಸ’ಗಳು ಇರುತ್ತವೆ. ಖುರ್‌ಆನ್ ಪ್ರವಚನ, ಪ್ರಾರ್ಥನಾ ವಿಧಾನ ಮೊದಲಾದ ವಿಚಾರಗಳಲ್ಲಿ ‘ಮದ್ರಸ’ಗಳಲ್ಲಿ ಪ್ರಾಮುಖ್ಯ ನೀಡಲಾಗುತ್ತದೆ. ಮದ್ರಸಗಳದು ಕೇವಲ ಸಾಂಪ್ರದಾಯಿಕ ಶಿಕ್ಷಣ. ಇದನ್ನು ಬದಲಾಯಿಸಿ ಸಮಕಾಲೀನ ದಿನಗಳಿಗೆ ಬೇಕಾದಂತೆ ಹೊಸತಾಗಿ ರೂಪಿಸುವ ಅಗತ್ಯವಿದೆ ಎಂದು ಭಾವಿಸುವ ಮುಸಲ್ಮಾನರೂ ಕೇರಳದಲ್ಲಿದ್ದಾರೆ.

ಯೆಹೂದ್ಯರ ಆರಾಧನಾ ಕೇಂದ್ರಗಳು

ಕೇರಳದ ಕೊಡುಙಲ್ಲೂರಿನಲ್ಲಿ ಮೊತ್ತಮೊದಲು ಯೆಹೂದ್ಯರು ನೆಲೆಸಿದರು. ಯೆಹೂದ್ಯರು ಸಾಂಸ್ಕೃತಿಕವಾಗಿ ಕೇರಳಕ್ಕೆ ಗಣನೀಯ ಪ್ರಭಾವ ಬೀರಿದವರು. ಜನಸಂಖ್ಯಾ ದೃಷ್ಟಿಯಿಂದ ನೋಡಿದರೆ ಇಂದು ತೀರಾ ನಗಣ್ಯರು. ಇವರ ಮೊದಲ ಇಗರ್ಜಿ ಮುಸಿರಿಸ್ ನಲ್ಲಿತ್ತು. ಹಿಂದೆ ಯೆಹೂದ್ಯರ ಶ್ರೀಮಂತ ಮನೆತನಗಳು ಕೇರಳದಲ್ಲಿ ಬಾಳಿ ಬೆಳಗಿವೆ. ಕೇರಳದ ಜನ ಜೀವನದ ಜೊತೆಗೆ ಅವರಿಗೆ ಹಾಸು ಹೊಕ್ಕಾದ ಬಾಂಧವ್ಯವಿತ್ತು. ಅವರು ನೆಲೆಸಿದ ಅನೇಕ ಪ್ರದೇಶಗಳಲ್ಲಿ ಇಗರ್ಜಿಗಳನ್ನು ನಿರ್ಮಿಸಿದ್ದರು. ಇವುಗಳನ್ನು ಸಿನಗಾಗ್(Synagogues)ಗಳೆಂದು ಕರೆಯುತ್ತಾರೆ. ಚಾವಕ್ಕಾಡ್ ಎಂಬಲ್ಲಿ ಯೆಹೂದ್ಯರ ಪ್ರಾಚೀನವಾದ ಆರಾಧನಾಲಯವೊಂದಿತ್ತು. ಯೆಹೂದ್ಯರು ಅತ್ತಿತ್ತ ಚದುರಿ ಹೋಗುವ ವೇಳೆಗೆ ಈಳವ ಕುಟುಂಬವೊಂದಕ್ಕೆ ಮನೆಯೊಂದನ್ನು ಉಂಬಳಿ ನೀಡಿ ರಾತ್ರಿ ದೀಪ ಉರಿಸುವ ವ್ಯವಸ್ಥೆ ಮಾಡಿದ್ದರಂತೆ. ೨೦ನೆಯ ಶತಮಾನದ ಆರಂಭದ ದಶಕಗಳವರೆಗೂ ಆ ಈಳವ ಕುಟುಂಬ ಯೆಹೂದ್ಯರ ಆರಾಧನಾಲಯದಲ್ಲಿ ದೀಪ ಉರಿಸುತ್ತಿದ್ದ ಬಗೆಗೆ ತಿಳಿದುಬರುತ್ತದೆ. ಮಡಾಯಿಯಲ್ಲಿ ಮಾಲಿಕ್-ಇಬ್‌ನ್-ದೀನಾರ್ ಮಸೀದಿಯ ಸಮೀಪ ವಿರುವ ‘ಜೂದ್ ಕುಳಂ’ (ಯೆಹೂದ್ಯ (Judha)ರ ಕೆರೆ) ಎಂಬೊಂದು ಕೆರೆಯಿದೆ. ಹದಿನಾರನೆಯ ಶತಮಾನದಲ್ಲಿದ್ದ ಬರ್ಬೋಸ ಎಂಬ ಪೋರ್ಚುಗೀಸ್ ಅಧಿಕಾರಿಯೊಬ್ಬನು ಇಲ್ಲಿದ್ದ ಒಂದು ಯೆಹೂದ್ಯ ಕಾಲನಿಯ ಬಗೆಗೆ ಬರೆದಿದ್ದಾನೆ.

ಪೋರ್ಚುಗೀಸರ ಆಗಮನದ ನಂತರ ಯೆಹೂದ್ಯರು ಕೊಡುಙಲ್ಲೂರು ಬಿಟ್ಟು ಬೇರೆಡೆಗೆ ತಮ್ಮ ನೆಲೆಗಳನ್ನು ಬದಲಾಯಿಸಿದರು. ಬಳಿಕ ಅವರು ಬೇರೆ ಬೇರೆ ಪ್ರದೇಶಗಳಲ್ಲಿ ವಾಸ ಮಾಡಲು ತೊಡಗಿದರು. ಪರವೂರು, ಮಾಳ, ಚೇಙಮಂಗಲಂ, ಎರ್ನಾಕುಳಂ, ಮಟ್ಟಾಂಚೇರಿ ಮೊದಲಾದೆಡೆಗಳಲ್ಲಿನ ಯೆಹೂದ್ಯರ ದೇವಾಲಯಗಳು ಈಗಲೂ ಇವೆ. ಆದರೆ ಯೆಹೂದ್ಯರೇ ಇಲ್ಲದ ಕಾರಣಗಳಿಗಾಗಿ ಇವೆಲ್ಲ ಇಂದು ಕೇವಲ ಚರಿತ್ರೆಯ ಅವಶೇಷಗಳಾಗಿ ಉಳಿದಿವೆ. ಮಟ್ಟಾಂಚೇರಿಯಲ್ಲಿರುವ ಬಿಳಿಯ ಯೆಹೂದ್ಯರ ದೇವಾಲಯ ಗಮನಿಸ ಬೇಕಾದವುಗಳಲ್ಲಿ ಮುಖ್ಯವಾಗಿದೆ. ಜ್ಯೂ ಟೌನ್ ಎಂದು ತಿಳಿಯಲಾಗುವ ನಗರದ ಹೃದಯ ಭಾಗದಲ್ಲಿ ಈ ಇಗರ್ಜಿಯಿದೆ. ಇದರಲ್ಲಿ ಪ್ರಾರ್ಥನೆ ಸಲ್ಲಿಸುವವರು ಸುತ್ತಮುತ್ತ ನೆಲೆಸಿರುವ ಕೆಲವು ಕುಟುಂಬಗಳವರು ಮಾತ್ರ. ಇವುಗಳಲ್ಲಿ ವಿಶೇಷವಾಗಿ ಚೈನಾದಲ್ಲಿ ತಯಾರಿಸಿದ ಕೈಯಲ್ಲಿ ಬರೆದ ಬೇರೆ ಬೇರೆ ಚಿತ್ರಗಳಿರುವ ಇನ್ನೂರ ಐವತ್ತಾರು ಪೋರ್ಸ್‌ಲೈನ್ ಟೈಲ್ಸ್ ಗಳನ್ನು ೧೫೬೭ರಲ್ಲಿ ನಿರ್ಮಿಸಿದ ಈ ಇಗರ್ಜಿಯ ನೆಲಕ್ಕೆ ಹಾಸಲಾಗಿದೆ. ತಿರುವಿದಾಂಕೂರು ಮಹಾರಾಜ ಸಮರ್ಪಿಸಿದ ಚಿನ್ನದ ಕಿರೀಟ, ಬ್ರಿಟಿಷ್ ಅಧಿಕಾರಿ ಕರ್ನಲ್ ಮೆಕಾಲೆ ಕೊಡುಗೆ ನೀಡಿದ ಕೆಲವು ಬೆಳ್ಳಿಯ ದೀಪಗಳು ಈ ಇಗರ್ಜಿಯ ಇತರ ಆಕರ್ಷಣೆಗಳು. ಹಿಬ್ರೂ ಭಾಷೆಯ ಬರವಣಿಗೆಯನ್ನು ಎಲ್ಲಾ ಯೆಹೂದ್ಯರ ದೇವಾಲಯಗಳಲ್ಲಿಯೂ ಕಾಣಬಹುದು.

ಯೆಹೂದ್ಯರ ಮತಾಚಾರಗಳು ‘ಹಳೆಯ ಒಡಂಬಡಿಕೆ’ ಹಾಗೂ ‘ತಾಲ್‌ಮೂದ್’ ಎಂಬ ಪವಿತ್ರ ಗ್ರಂಥಗಳನ್ನನುಸರಿಸಿದೆ. ಅದನ್ನು ಅಕ್ಷರಶಃ ಅನುಸರಿಸಬೇಕೆಂಬ ದೃಢ ನಂಬಿಕೆ ಅವರಿಗಿದೆ. ಬಿಳಿಯ ನಿಲುವಂಗಿ ಧರಿಸಿ ಇಗರ್ಜಿಯ ಮಧ್ಯೆ ಇರುವ ಉಪನ್ಯಾಸ ವೇದಿಕೆಯನ್ನು ಏರಿ ಪ್ರಾರ್ಥನೆ ಸಲ್ಲಿಸಲು ಎಲ್ಲಾ ಯೆಹೂದ್ಯ ಗಂಡಸರಿಗೂ ಅವಕಾಶವಿದೆ. ಮಹಿಳೆಯರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಇರುತ್ತದೆ. ಕಾಲಲ್ಲಿ ಚಪ್ಪಲಿ ಧರಿಸದೆ ತಲೆಗೆ ಮುಸುಕು ಹಾಕಿಯೇ ದೇವಾಲಯ ಪ್ರವೇಶಿಸುವುದು ನಿಯಮ.

ಇತರ ಆರಾಧನಾಲಯಗಳು

ಮೇಲೆ ವಿವರಿಸಿದ ಹಿಂದು, ಮುಸಲ್ಮಾನ, ಕ್ರೈಸ್ತ, ಯೆಹೂದ್ಯರ ಆರಾಧನಾಲಯಗಳಲ್ಲದೆ ಆಲಪ್ಪುೞ, ಮಟ್ಟಾಂಚೇರಿ, ಪಾಲಕ್ಕಾಡ್, ಕಲ್‌ಪ್ಪಟ್ಟ, ಬಂಗ್ರ ಮಂಜೇಶ್ವರ ಮೊದಲಾದ ಪ್ರದೇಶಗಳಲ್ಲಿ ಜೈನಾಲಯಗಳೂ ಇವೆ. ಎರ್ನಾಕುಳಂ ನಗರದ ದಕ್ಷಿಣ ಭಾಗದ ತೇವಾರದಲ್ಲಿ ಸಿಖ್ಖರ ಒಂದು ಗುರುದ್ವಾರವೂ ಇದೆ. ಮತೀಯ ನಂಬಿಕೆಗಳಿಗೆ ಸಂಬಧಿಸಿದಂತೆ ಕೇರಳೀಯರ ಸಾಂಸ್ಕೃತಿಕ ಪರಂಪರೆಯು ಬದುಕಿನಲ್ಲಿ ಶಾಂತಿ, ಸಮಾಧಾನ, ಸೌಹಾರ್ದವನ್ನು ನಿರ್ಮಿಸಿ ಕೊಟ್ಟಿದೆ.

ಸೌಹಾರ್ದ ಬದುಕು

ಪ್ರಾಚೀನ ಕಾಲದಿಂದಲೂ ವಿವಿಧ ಜಾತಿ ಧರ್ಮಗಳಿಗೆ ಸೇರಿದ ಜನರು ತಮತಮಗೆ ಬೇಕಾದ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಾ ಬಂದಿದ್ದರು. ಅಧಿಕಾರದಲ್ಲಿದ್ದ ಯಾವುದೇ ಧರ್ಮಕ್ಕೆ ಸೇರಿದ ಅರಸನಾದರೂ ಇತರ ಧರ್ಮವನ್ನು ಪ್ರೀತಿಯಿಂದ ಕಂಡ ಬಗೆಗೆ ತಿಳಿಯುತ್ತದೆ. ಅನ್ಯ ಧರ್ಮವನ್ನು ಪೋಷಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಂದು ಧರ್ಮೀಯರು ಮುಕ್ತ ಮನಸ್ಸಿನಿಂದ ವ್ಯವಹರಿಸಿರುವುದನ್ನು ಕಾಣಬಹುದು. ಬೇರೆ ಬೇರೆ ಧರ್ಮೀಯರ ಆರಾಧನಾಲಯಗಳು ಜೊತೆ ಜೊತೆಗೆ ಉಳಿದುಕೊಂಡು ಬಂದಿರುವುದನ್ನು ಕೇರಳದಲ್ಲಿ ಇಂದಿಗೂ ಕಾಣಬಹುದು. ಚೇಙಮಂಗಲದ ಇತಿಹಾಸ ಪ್ರಸಿದ್ಧವಾದ ಕೋಟೆ ಕೋವಿಲಗಂ (ಕೋಟೆ ದೇವಸ್ಥಾನ) ಇರುವ ಜಾಗದಲ್ಲಿ ಒಂದೇ ದೇವಸ್ಥಾನದ ಜೊತೆಗೆ ಮಸೀದಿ, ಇಗರ್ಜಿ ಹಾಗೂ ಯೆಹೂದ್ಯರ ದೇವಾಲಯವೂ ಇದೆ. ಕ್ರಿಶ್ಚಿಯನರ ಹಾಗೂ ಯೆಹೂದ್ಯರ ಸೈಂಟ್ ಮೇರೀಸ್ ಆರ್ಥೊಡೋಕ್ಸ್ ಇಗರ್ಜಿಯೂ ಅಲ್ಲಿನ ಭಗವತೀ ಹಾಗೂ ವಾವರನ ಮಸೀದಿಯೂ ಜೊತೆಗಿದೆ.

ಕೇರಳದ ಹಿಂದೂ ಅರಸರು ಮಸೀದಿಗಳನ್ನು, ಇಗರ್ಜಿಗಳನ್ನು ನಿರ್ಮಿಸಿಕೊಟ್ಟಿದ್ದಲ್ಲದೆ ಭೂಮಿ ಇತ್ಯಾದಿಗಳನ್ನು ದಾನವಾಗಿ ನೀಡಿದ ಉದಾಹರಣೆಗಳು ಸಾಕಷ್ಟಿವೆ. ದೇವಾಲಯಗಳು ನಾಮಾವಶೇಷವಾದ ಮೇಲೆ ಬೆಳೆದು ನಿಂತ ಮಸೀದಿಗಳು ಅನೇಕವಿವೆ. ಮಾನಚ್ಚಿಲ್ ತಾಲೂಕಿನ ಕೂಟ್ಟಿಕಲ್ ಎಂಬ ಸ್ಥಳದ ಇತಿಹಾಸ ಪ್ರಸಿದ್ಧ ಮಸೀದಿಯ ತಳಪಾಯ ಒಂದು ಪ್ರಾಚೀನ ದೇವಾಲಯದ್ದು (ಶ್ರೀಧರ ಮೇನೋನ್, ೧೯೯೬:೮೧). ಹಳೆಯ ದೇವಾಲಯದ ಅನೇಕ ಭಾಗಗಳು, ಸ್ನಾನಘಟ್ಟಗಳು, ಮೆಟ್ಟುಗಲ್ಲುಗಳು ಕೆಲವು ವಿಗ್ರಹಗಳು ಇಂದಿಗೂ ಮಸೀದಿಯ ಹೊರ ಆವರಣದಲ್ಲಿ ಗೋಚರಿಸುತ್ತವೆ. ಪರವೂರಿನ ಕೋಟಕಾವ್ ಮಸೀದಿ ಹಾಗೂ ಪಾಲೂರು ಮಸೀದಿಗಳ ಪರಿಸರದಲ್ಲಿ ಹಿಂದೂ ದೇವತೆಗಳ ವಿಗ್ರಹಗಳನ್ನುಇಂದಿಗೂ ಕಾಣಬಹುದು. ಇತರ ಧರ್ಮೀಯರ ಆರಾಧನಾಲಯಗಳ ವಿಚಾರದಲ್ಲಿ ಅಧಿಕಾರಿಗಳು ಪರಸ್ಪರ ಗೌರವದಿಂದ ನಡೆದುಕೊಂಡಿರುವುದನ್ನು ಇವು ಸ್ಪಷ್ಟಪಡಿಸುತ್ತವೆ. ಕಣ್ಣೂರು ಜಿಲ್ಲೆಯ ಚಾಲಾಡ್‌ನ ಶಾಸ್ತಾವ್ ದೇವಾಲಯದ ಸಮೀಪವಿರುವ ಷೇಕ್ ಮಸೀದಿಯಲ್ಲಿ ಈ ಊರಿನ ಹಿಂದೂಗಳ ಭಾವನೆಗಳನ್ನು ಗೌರವಿಸಿ ಮೃಗಗಳನ್ನು ಇಂದಿಗೂ ಕೊಲ್ಲುವುದಿಲ್ಲ. ಆಚರಣೆಗಳ ಸಂದರ್ಭದಲ್ಲಿ ಎಲ್ಲಾ ಜಾತಿ ಜನಗಳವರು ಸೇರಿಕೊಳ್ಳುವುದು ಇಲ್ಲಿಯ ಸಂಪ್ರದಾಯ. ಹೀಗೆ ಪರಸ್ಪರ ಪ್ರೀತಿ, ಗೌರವಗಳ ಮೂಲಕ ಆರಾಧನಾಲಯಗಳು ಕೇರಳದ ಸಂಸ್ಕೃತಿಯನ್ನು ಪೋಷಿಸಿವೆ.