ವೃಕ್ಷಾರಾಧನೆ

ಕೇರಳದಲ್ಲಿ ಹಿಂದೂಗಳಿಗೆ ಕೆಲವು ವೃಕ್ಷಗಳ ಬಗೆಗೆ ಪವಿತ್ರ ಭಾವನೆಯಿದೆ. ಅಶ್ವತ್ಥ (ಅರಯಾಲ್), ಬಿಲ್ವ (ಕೂವಳಂ), ತುಳಸಿ ಮೊದಲಾದವು ಪವಿತ್ರ ಸಸ್ಯಗಳು. ದೇವಾಲಯ ಗಳ ಆವರಣದಲ್ಲಿ ಆಲದ ಮರವನ್ನು ನೆಟ್ಟು ಅದಕ್ಕೆ ಸತ್ತಲೂ ವೃತ್ತಾಕಾರದಲ್ಲಿ ಈ ಸಸ್ಯಗಳನ್ನು ನೆಡುವುದಿದೆ. ಆಲದ ಬುಡದಲ್ಲಿ ನಾಗದೇವತೆಗಳನ್ನು ಪ್ರತಿಷ್ಠಾಪಿಸುವುದಿದೆ. ಬಿಲ್ವವನ್ನು ಶಿವನ ಪೂಜೆಗೆ ಬಳಸುತ್ತಾರೆ. ವಿಷ್ಣುವಿಗೆ ತುಳಸಿ ಪ್ರಿಯ. ತುಳಸಿಯ ಎಲೆಗಳನ್ನು ಎಲ್ಲಾ ದೇವರ ಪೂಜೆಗಳಲ್ಲೂ ಬಳಸಲಾಗುತ್ತದೆ. ಸಾಮಾನ್ಯವಾಗಿ ಹಿಂದೂಗಳ ಮನೆಗಳಲ್ಲಿ ತುಳಸಿಕಟ್ಟೆಗಳನ್ನು ನಿರ್ಮಿಸಿ ಅದಕ್ಕೆ ಸಾಯಂಕಾಲ ದೀಪ ಉರಿಸಿ ಪೂಜೆ ಸಲ್ಲಿಸುವ ಪದ್ಧತಿ ಇದೆ. ತುಳಸಿ ಗಿಡದ ಕಾಂಡವನ್ನು ನಯಗೊಳಿಸಿ ಪೋಣಿಸಿ ಮಾಲೆ ಮಾಡಿ ಶಬರಿಮಲೆ ವ್ರತಧಾರಿಗಳು ಧರಿಸುವುದಿದೆ. ನಂಬೂದಿರಿ ಹಾಗೂ ಇತರ ಬ್ರಾಹ್ಮಣ ಸಮುದಾಯದವರು ದರ್ಬೆ, ತುಳಸೀದಳಗಳನ್ನು ಶ್ರಾದ್ಧಾದಿ ಕ್ರಿಯೆಗಳಲ್ಲಿ ಬಳಸುವುದಿದೆ. ಹನುಮಂತ ವೀಳ್ಯೆದೆಲೆಯ ಮಾಲೆಯನ್ನು ಧರಿಸುವುದಿದೆ.

ದೇವ ಪ್ರತಿಷ್ಠೆಗಳಿಲ್ಲದ ಆರಾಧನಾ ಕೇಂದ್ರಗಳು

ಯಾವ ದೈವ ಪ್ರತಿಷ್ಠೆಯೂ ಇಲ್ಲದ ಅನೇಕ ಹೈಂದವಾರಾಧನಾ ಕೇಂದ್ರಗಳು ಕೇರಳ ದಲ್ಲಿವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದುದು ಕೊಲ್ಲಂ ಜಿಲ್ಲೆಯಲ್ಲಿರುವ ಓಚ್ಚಿರ. ಅಲ್ಲಿ ಒಂದು ವಿಗ್ರಹವೋ, ದೇವಸ್ಥಾನವೋ ಇಲ್ಲ. ಅಲ್ಲಿ ಪರಬ್ರಹ್ಮ ಮೂರ್ತಿಯನ್ನು ಆರಾಧಿಸಲಾಗುತ್ತದೆ. ಯಾವುದೇ ಜಾತಿ ವರ್ಗಗಳ ಭೇದವಿಲ್ಲದೆ ಸರ್ವರೂ ಪ್ರವೇಶಿಸಿ ಆರಾಧಿಸಬಹುದಾದ ಒಂದು ತೆರನ ಜಾಗವಷ್ಟೇ ಅಲ್ಲಿರುವುದು. ಏಟ್ಟುಮಾನೂರಿನ ಸಮೀಪದ ಬೆಟ್ಟದ ಪ್ರದೇಶದಲ್ಲಿ ವೇದವ್ಯಾಸಗಿರಿಯಲ್ಲಿ ವಿಗ್ರಹವೇ ಇಲ್ಲ. ಅಲ್ಲಿರುವ ಕರಿಯ ಬಂಡೆಯ ತುಂಡುಗಳನ್ನು ವೇದವ್ಯಾಸ ಹಾಗೂ ಪಂಚಪಾಂಡವರೆಂದು ಜನರು ನಂಬಿಕೊಂಡು ಬಂದಿದ್ದಾರೆ. ಪಾಂಡವರು ವನವಾಸದಲ್ಲಿದ್ದಾಗ ಗುರು ವೇದವ್ಯಾಸರನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದರೆಂದು ಪಾಂಡವರಿಗೆ ವಿದ್ಯಾಭ್ಯಾಸ ಮಾಡಿಸಲು ಅಲ್ಲೊಂದು ಗುರುಕುಲವನ್ನು ನಿರ್ಮಿಸಿದರೆಂದು ಪ್ರತೀತಿ. ವೇದವ್ಯಾಸಗಿರಿಯಲ್ಲಿರುವ ಮೂರು ಜಲಧಾರೆಗಳು ಗಂಗೆ, ಯಮುನೆ ಹಾಗೂ ಗೋದಾವರಿಯರೆಂದು ನಂಬಲಾಗಿದೆ. ವೇದವ್ಯಾಸರು ಪೂಜೆಗಾಗಿ ಈ ಮೂರು ನದಿಗಳ ನೀರನ್ನು ಬಳಸುತ್ತಿದ್ದರೆಂದು ಐತಿಹ್ಯ. ಆಟ್ಟಪ್ಪಾಡಿಯ ‘ಮಲ್ಲೀಶ್ವರನ್ ಕ್ಷೇತ್ರ’ದಲ್ಲಿ ಗಿರಿಜನರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಶಿವರಾತ್ರಿ ಆಚರಿಸುವುದು ಸಂಪ್ರದಾಯ. ಆದರೆ ಅಲ್ಲಿಯೂ ವಿಗ್ರಹವೋ, ದೇವಸ್ಥಾನವೋ ಇಲ್ಲ. ಪಾಲಕ್ಕಾಡ್ ಜಿಲ್ಲೆಯ ತೇನಾರಿ ಇನ್ನೊಂದು ಮುಖ್ಯ ಆರಾಧನಾ ಕೇಂದ್ರ. ಅಲ್ಲಿ ರಾಮತೀರ್ಥ ಎಂಬೊಂದು ನೀರ ಝರಿಯಿದೆ. ಅದರಲ್ಲಿ ಸ್ನಾನ ಮಾಡಿದವರಿಗೆ ಗಂಗಾ ಸ್ನಾನದ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ. ಈ ತೀರ್ಥದ ಸಮೀಪ ಅನೇಕ ಪುರಾತನ ದೇವಾಲಯಗಳಿದ್ದು ಅವು ಇಂದು ಅವಗಣನೆಗೊಳಗಾಗಿವೆ.

ದೇವಸ್ಥಾನದ ವಿಧಿ ವಿಧಾನಗಳು

ಕೇರಳದ ದೇವಾಲಯಗಳಲ್ಲಿ ಆರಾಧನಾ ಪದ್ಧತಿಗಳು ಸಾಮಾನ್ಯವಾಗಿ ಶಾಸ್ತ್ರ ಪದ್ಧತಿಗಳಿಗೆ ಅನುಗುಣವಾಗಿಯೇ ನಡೆಯುತ್ತದೆ. ಸ್ನಾನ, ಜಪಾದಿಗಳ ಬಳಿಕವೇ ಪೂಜಾರಿ ಪೂಜಾ ಕರ್ಮಗಳನ್ನು ನಿರ್ವಹಿಸುತ್ತಾನೆ. ನೀರು, ಹೂ, ಶ್ರೀಗಂಧ, ಕರ್ಪೂರ ಮೊದಲಾದ ವಸ್ತುಗಳನ್ನು ಪೂಜೆಗೆ ಬಳಸುತ್ತಾರೆ. ದೇವಾಲಯದ ಗರ್ಭಗೃಹಕ್ಕೆ ಪ್ರವೇಶಿಸಲು ಪ್ರತಿಷ್ಠಾ ಮೂರ್ತಿಯನ್ನು ಮುಟ್ಟಲು ಪೂಜಾರಿಗೆ ಮಾತ್ರವೇ ಅಧಿಕಾರವಿರುವುದು. ದೇವಾಲಯಗಳ ಪೂಜಾ ವಿಧಾನಗಳಿಗೆ ನಿರ್ದಿಷ್ಟ ವ್ಯವಸ್ಥೆಯಿದೆ. ಭಕ್ತರು ಸ್ನಾನ ಮಾಡಿಯೇ ದೇವಾಲಯದ ಆವರಣವನ್ನು ಪ್ರವೇಶಿಸಬೇಕು. ಆಗ ಭಕ್ತರು ಮಡಿ ಬಟ್ಟೆಯನ್ನು ಉಟ್ಟುಕೊಂಡಿರಬೇಕು. ಅವರು ನೈವೇದ್ಯ, ಅರ್ಚನೆ, ದೀಪ  ಬೆಳಗುವುದು ಮೊದಲಾದ ಹರಕೆಗಳನ್ನು ನೆರವೇರಿ ಸುತ್ತಾರೆ. ಕಾಣಿಕೆ ಹಾಕುವ ಪದ್ಧತಿಯೂ ಇದೆ. ಆಭರಣಾದಿಗಳನ್ನು ಅರ್ಪಿಸುವ ಸಂಪ್ರ ದಾಯವೂ ಇದೆ. ವಿಗ್ರಹಕ್ಕೆ ಶ್ರೀಗಂಧವನ್ನು ಲೇಪಿಸುವುದು ಪ್ರಮುಖ ಹರಕೆಗಳಲ್ಲೊಂದು. ಭಕ್ತರಿಗೆ ಗಂಧ, ಭಸ್ಮ, ಹೂವು ಮೊದಲಾದವನ್ನು ಪ್ರಸಾದವಾಗಿ ಕೊಡಲಾಗುತ್ತದೆ. ತೀರ್ಥ ಜಲವನ್ನು ಸೇವಿಸಲು ಕೊಡುವುದಿದೆ. ದೇವಿ ದೇವಾಲಯಗಳಲ್ಲಿ ಕೆಂಪು ಕುಂಕುಮವನ್ನು ಪ್ರಸಾದವಾಗಿ ಕೊಡುವುದು ಸಾಮಾನ್ಯ. ಬೆಳಗ್ಗೆ ಬಾಗಿಲು ತೆರೆಯುವ ಸಂದರ್ಭದಲ್ಲಿ ದರ್ಶನ ಮಾಡುವುದು ಪುಣ್ಯಕರ ಎಂದು ಭಾವಿಸಲಾಗುತ್ತೆ. ಗುರುವಾಯೂರು ದೇವಾಲಯದಲ್ಲಿ ನಡೆ ತೆರೆಯುವಾಗಿನ ದೇವರ ದರ್ಶನಕ್ಕಾಗಿ ರಾತ್ರಿಯಿಂದಲೇ ಭಕ್ತರು ಕಾಯುವುದೂ ಇದೆ. ಕೋಟ್ಟಯಂನ ತಿರುವಾರ್‌ಪಿನಲ್ಲಿ ಉಷಾ ಪೂಜೆಗೆ ದರ್ಶನ ಮಾಡುವುದು ವಿಶೇಷ ಎಂದು ನಂಬಲಾಗಿದೆ. ಎಲ್ಲಾ ದೇವಾಲಯಗಳಲ್ಲೂ ದೀಪಾರಾಧನೆಯ ವೇಳೆಗೆ ಭಕ್ತರನ್ನು ಆಕರ್ಷಿಸಲಾಗುತ್ತದೆ.

ಬಹುತೇಕ ಪ್ರತಿಯೊಂದು ದೇವಾಲಯಗಳಲ್ಲೂ ಹರಕೆಯೊಪ್ಪಿಸುವ ರೀತಿ ವಿಭಿನ್ನ ವಾಗಿವೆ. ಭಕ್ತರಿಗೆಲ್ಲರಿಗೂ ಕೊಡಲು ಅನುಕೂಲವಾಗುವಂತೆ ಸಿಹಿ ವಸ್ತುಗಳನ್ನು ಶ್ರೀ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಸಮರ್ಪಿಸುತ್ತಾರೆ. ತಿರುವನಂತಪುರದ ಪೞಙಾಡಿ, ಕೊಟ್ಟಾರಕರ, ವಾಳಪ್ಪಳ್ಳಿ ಮೊದಲಾದೆಡೆಗಳಲ್ಲಿನ ಗಣಪತಿ ದೇವಾಲಯಗಳಲ್ಲಿನ ‘ಅಪ್ಪಂನೈವೆದ್ಯಂ’ (ಒಂದು ತೆರನ ಸಿಹಿ ಗುಂಡು ಪೊಂಗಲ್) ವಿಶೇಷವಾದದ್ದು. ಪೞವಙಾಡಿ ಗಣಪತಿಗೆ ಹೋಮವೂ ಮೋದಕ ಮೊದಲಾದವುಗಳ ನೈವೇದ್ಯವೂ ಇದೆ. ಗಣಪತಿ ದೇವಸ್ಥಾನದ ಮೆಟ್ಟಿಲುಗಳಿಗೆ ತೆಂಗಿನಕಾಯಿ ಒಡೆಯುವುದು ಇನ್ನೊಂದು ತೆರನ ಹರಕೆ. ಇದೇ ತೆರನ ಪೂಜಾ ಪದ್ಧತಿ ಕೆಲವು ಶಾಸ್ತಾ ದೇವಸ್ಥಾನಗಳಲ್ಲೂ ಇದೆ. ಅಚ್ಚನ್‌ಕೋವಿಲ್‌ನ ಶಾಸ್ತಾವ್ ದೇವಸ್ಥಾನದಲ್ಲಿ ಪುಷ್ಪಾಭಿಷೇಕವನ್ನು ವಿಶೇಷವಾಗಿ ಮಾಡಲಾಗುತ್ತದೆ. ಕುಳತ್ತುಪುೞ ಶಾಸ್ತಾವ್ ದೆವಸ್ಥಾನದ ಸಮೀಪವಿರುವ ಕಲ್ಲಡಯಾಟ್ಟಿನ ಮೀನುಗಳಿಗೆ ಅನ್ನ ಕೊಡುವದು ಇಲ್ಲಿನ ಪ್ರಧಾನ ಹರಕೆ. ಓಚ್ಚಿರಮಣ್ಣಡಿ ದೇವಾಲಯದಲ್ಲಿ ಅನ್ನ ನೈವೇದ್ಯ ಇಲ್ಲದುದೇ ಅಲ್ಲಿನ ವೈಶಿಷ್ಟ್ಯ. ಅಂಬಲಪುೞ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಹಾಲುಪಾಯಸ ಮತ್ತು ಚೇರ್ತಲ ಕಾತ್ಯಾಯಿನಿ ದೇವಾಲಯದಲ್ಲಿ ತಡಿಯಪ್ಪ (ದೊಡ್ಡ ಅಪ್ಪ) ಮುಖ್ಯವಾಗಿದೆ. ವೆಟ್ಟಿಕುೞಙರ ಭಗವತೀ ದೇವಸ್ಥಾನದಲ್ಲಿ ಹರಕೆ ಒಪ್ಪಿಸಿದ ಅಕ್ಕಿ ಪಾಯಸ ಎಷ್ಟು ದಿನವಾದರೂ ಕೆಡುವುದಿಲ್ಲ. ಶಬರಿಮಲೆಯ ಶಾಸ್ತಾವ್ ದೇವಸ್ಥಾನದ ಅಪ್ಪ, ಅರವಣ ಪಾಯಸ, ಮೊದಲಾದವು ಪ್ರಧಾನ ನೈವೇದ್ಯಗಳು. ಮಣ್ಣಾರ್ ಶಾಲೆಯಂತಹ ನಾಗ ದೇವಸ್ಥಾನಗಳಲ್ಲೂ ನಾಗ ಬನಗಳಲ್ಲೂ ‘ನೂರುಂ ಪಾಲುಂ’ ಮುಖ್ಯ ಹರಕೆ. ತಿರುವೆಲ್ಲಾ ಶ್ರೀವಲ್ಲಭ ಕ್ಷೇತ್ರದಲ್ಲಿ ಉಷಾ ಪಾಯಸಂ ಬಹಳ ಸಿಹಿ ಹಾಗೂ ವಿಶಿಷ್ಟವಾದ ಹರಕೆ. ಸುಬ್ರಹ್ಮಣ್ಯ ದೇವಸ್ಥಾನಗಳಲ್ಲೆಲ್ಲಾ ಕಾವಡಿಯಭಿಷೇಕಂ ಪ್ರಮುಖವಾಗಿದೆ. ಚಂದನಂ, ಪನ್ನೀರ್, ಸಕ್ಕರೆ, ಕುಂಕುಮ ಮೊದಲಾದ ಹಲವು ದ್ರವ್ಯಗಳನ್ನು ಕಾವಡಿಯಭಿಷೇಕಕ್ಕೆ ಉಪಯೋಗಿಸಲಾಗುತ್ತದೆ.

ಶಬರಿಮಲೆಯಲ್ಲಿ ಬೆಳ್ಳಿಯಿಂದಲೋ, ಚಿನ್ನದಿಂದಲೋ ಮಾಡಿದ ಮನುಷ್ಯ ರೂಪವನ್ನು ಸಮರ್ಪಿಸುವುದೂ ಇದೆ. ನಾಗರಾಜ ದೇವಸ್ಥಾನಗಳಲ್ಲಿ ಇತರ ದೇವಾಲಯಗಳಲ್ಲೂ ಮನುಷ್ಯ ರೂಪ (ಪ್ರತಿಷ್ಠಾ ಮೂರ್ತಿಯ ರೂಪ) ಸಮರ್ಪಿಸುವ ಪದ್ಧತಿ ಇದೆ. ಏಟ್ಟುಮಾನೂರ್ ದೇವಸ್ಥಾನದಲ್ಲಿ ಪಾಯಸ ಮೊದಲಾದ ಹರಕೆಗಳಲ್ಲದೆ ಇತರ ದೇವಸ್ಥಾನಗಳಿಗಿಂತಲೂ ಹೆಚ್ಚಿನ ರೀತಿಯಲ್ಲಿ ಹಣದ ಕಾಣಿಕೆಯನ್ನು ಹಾಕಲಾಗುತ್ತದೆ. ವೈಕಂನ ದೇವಾಲಯದ ಪ್ರಮುಖ ಹರಕೆ ಬ್ರಾಹ್ಮಣರಿಗೆ ಅನ್ನದಾನ. ಗುರುವಾಯೂರು ದೇವಾಲಯದಲ್ಲಿ ತುಲಾಭಾರ, ಅರ್ಚನೆ ಮೊದಲಾದವು ಪ್ರಮುಖವಾಗಿದೆ. ಭಕ್ತರ ತೂಕದಷ್ಟೇ ವಸ್ತುಗಳನ್ನು ದೇವರಿಗೆ ಸಮರ್ಪಿಸುವ ರೀತಿಯ ತುಲಾಭಾರಗಳು ದೇವಾಲಯ ಗಳಲ್ಲಿ ರೂಢಿಯಲ್ಲಿವೆ. ಹಣ್ಣು, ತರಕಾರಿ, ಸಕ್ಕರೆ ಮೊದಲಾದವುಗಳನ್ನು ತುಲಾಭಾರಕ್ಕೆ ಉಪಯೋಗಿಸಲಾಗುತ್ತದೆ. ಗುರುವಾಯೂರಿನಂತಹ ದೇವಸ್ಥಾನಗಳಲ್ಲಿ ಆನೆಯನ್ನು ಸಮರ್ಪಿಸುವುದು ವಿಶೇಷ ಹರಕೆ. ಕಾಡಾಂಪುೞ ಭಗವತೀ ದೇವಸ್ಥಾನದಲ್ಲಿ ಭಕ್ತರ ಅಭೀಷ್ಟೆ ಈಡೇರಲು ನಡೆಸುವ ಮುಖ್ಯವಾದ ಹರಕೆಗಳು ಮುಖ್ಯವಾಗಿ ಎರಡು. ‘ಪೂಮೂಡಲು’ (ಹೂವಿನಿಂದ ಮುಚ್ಚುವುದು) ಮತ್ತು ತೆಂಗಿನಕಾಯಿ ಒಡೆಯುವುದು. ಚೆರುಕುನ್ನು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಅನ್ನದಾನಕ್ಕೆ ಪ್ರಾಮುಖ್ಯ ಕಲ್ಪಿಸಲಾಗಿದೆ. ಚೆರುಕುನ್ನು ದೇವೀ ದೇವಸ್ಥಾನದ ಸಮೀಪದ ತಳಿಪರಂಬು ದೇವಸ್ಥಾನದ ಶಿವನು ನಿತ್ಯವು ಚೆರುಕುನ್ನು ಸಂದರ್ಶಿಸುತ್ತಾನೆ. ಹಾಗಾಗಿ ಅವನಿಗೆ ಕೊಡುವ ಹರಕೆಯ ಚೆರುಕುನ್ನು ದೇವೀ ದೇವಸ್ಥಾನದಲ್ಲಿ ಸಂಜೆಗೆ ಸಮರ್ಪಿಸಿದರೂ ಸಾಕು ಎಂಬುದು ಭಕ್ತರ ನಂಬಿಕೆ.

ಕೊಟ್ಟಿಯೂರು ದೇವಸ್ಥಾನದ ಎಳನೀರಾಟ ಹಾಗೂ ತುಪ್ಪದಾಟ ಪ್ರಸಿದ್ಧವಾಗಿದೆ. ಇವುಗಳನ್ನು ಅನುಕ್ರಮವಾಗಿ ಈಳವರು ಹಾಗೂ ನಾಯನ್ಮಾರರು ವೃಷಭ ಮಾಸದಲ್ಲಿ ಆಚರಿಸುತ್ತಾರೆ. ಕೊಟ್ಟಿಯೂರು ಶಿವ ದೇವಸ್ಥಾನದಿಂದ ಭಕ್ತರು ಕೊಂಡು ಹೋಗುವ ಬಿದಿರ ತುಂಡುಗಳನ್ನು ಗ್ರಾಮ ದೇವತೆಗಳ ವಿಗ್ರಹಕ್ಕಾಗಿ ಮನೆಗಳಲ್ಲಿ ಕಾಪಿಡುತ್ತಾರೆ. ಕಾಸರಗೋಡು ಸಮೀಪದ ಕುಂಬಳೆಯ ಎಡನಾಡು ಗ್ರಾಮದಲ್ಲಿ ಮುಜಂಗಾವ್ ಶ್ರೀ ಪಾರ್ಥಸಾರಥಿ ದೇವಸ್ಥಾನದಲ್ಲಿ ಸೌತೆಕಾಯಿ ಮತ್ತು ಪಡುವಲಕಾಯಿ ಮೊದಲಾದವುಗಳನ್ನು ಹರಕೆಯೊಪ್ಪಿಸುವುದಿದೆ. ಮಣ್ಣಾರ್‌ಶಾಲ ನಾಗರಾಜ ದೇವಸ್ಥಾನದಲ್ಲಿ ಸೀಗುಂಬಳಕಾಯಿ, ಕುಂಬಳಕಾಯಿ, ಸೌತೆಕಾಯಿ ಮೊದಲಾದವುಗಳೊಡನೆ ಅರಿಸಿನ, ಉಪ್ಪು ಹರಕೆ ಒಪ್ಪಿಸು ವುದಿದೆ. ಬಾಳೆಹಣ್ಣು ಮತ್ತು ಪಂಚಾಮೃತವು ಹರಿಪ್ಪಾಡ್  ಹಾಗೂ ಗುರುವಾಯೂರು ದೇವಸ್ಥಾನಗಳಲ್ಲಿ ಪ್ರಮುಖವಾದ ನೈವೇದ್ಯ. ತೃಚ್ಚಂಬರ ದೇವಸ್ಥಾನದಲ್ಲಿ ದೊಡ್ಡಪಾತ್ರೆ ಯಲ್ಲಿ ಪಾಯಸವನ್ನು ಹರಕೆಯೊಪ್ಪಿಸಿ ವಿತರಿಸುವುದು ಸಂತಾನಭಿವೃದ್ದಿಯ ಅನುಗ್ರಹಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆಯಿದೆ. ಗುರುವಾಯೂರು ದೇವಸ್ಥಾನದಲ್ಲಿ ತೆಂಗಿನೆಣ್ಣೆ ಅಭಿಷೇಕ ಉದಯಾಸ್ತಮಾನ ಪೂಜೆ ಮೊದಲಾದ ಹರಕೆಗಳಿವೆ.

ಮೇಲೆ ಹೇಳಿದವುಗಳಿಗಿಂತ ವ್ಯತ್ಯಸ್ಥವಾದ ಪೂಜಾ ಸಂಪ್ರದಾಯಗಳು ಕೆಲವು ದೇವಸ್ಥಾನ ಗಳಲ್ಲಿವೆ. ಪರಶ್ಯಿನಕಡವ್ ಮುತ್ತಪ್ಪ ದೇವಸ್ಥಾನದಲ್ಲಿ ಮದ್ಯ, ಮೀನು, ಮಾಂಸ ಇತ್ಯಾದಿ ಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿ ಪ್ರಸಾದವಾಗಿ ಭಕ್ತರಿಗೆ ವಿತರಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಅನಾಮಧೇಯ ಭಕ್ತರಿಂದ ಹರಕೆಯ ರೂಪದಲ್ಲಿ ಹಣವೂ ಬರುತ್ತದೆ. ಗುರುವಾಯೂರನ್ನು ಬಿಟ್ಟರೆ ಅತ್ಯಂತ ಹೆಚ್ಚು ಭಕ್ತರನ್ನು ಆಕರ್ಷಿಸುವ ಕೇರಳದ ಪ್ರಮುಖ ದೇವಸ್ಥಾನ ಪರಶ್ಯಿನಕಡನ್. ಪೆರಳಶ್ಯೇರಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿರುವ ನಾಗ ಪ್ರತಿಷ್ಠೆಗೆ ಮೊಟ್ಟೆ ನೈವೇದ್ಯ ಸಂಪ್ರದಾಯವಿದೆ. ಅಪಸ್ಮಾರ ರೋಗ ಪರಿಹಾರಕ್ಕಾಗಿ ತಳಿಪರಂಬು ದೇವಸ್ಥಾನದಲ್ಲಿ ಉರುಳು ಸೇವೆಯೂ ಆಚರಣೆಯಲ್ಲಿದೆ. ಹರಿಪಾಡ್ ಸುಬ್ರಹ್ಮಣ್ಯ ಹಾಗೂ ಶಬರಿಮಲೆ ದೇವಸ್ಥಾನದಲ್ಲೂ ಉರುಳು ಸೇವೆ ಮಾಡಲಾಗುತ್ತದೆ. ಭಕ್ತರು ಸ್ವತಹ ಮಾಡುವುದಲ್ಲದೆ ಇತರರ ಮೂಲಕ ಮಾಡಿಸಿ ಪುಣ್ಯ ಸಂಪಾದಿಸುವುದೂ ಇದೆ.

ರೋಗ ಪರಿಹಾರಕ ಆಚರಣೆಗಳು

ಧಾರ್ಮಿಕ ಆಚರೆಣೆಗಳ ಕುರಿತು ಹೇಳುವಾಗ ಮಾನಸಿಕ ಹಾಗೂ ರೋಗ ಪರಿಹಾರಕಗಳಿಗೆ ಇರುವ ಆಚರಣೆಗಳು ಕೂಡಾ ಪ್ರಸ್ತುತವೆನಿಸುತ್ತವೆ. ಓಚ್ಚಿರದ ಪರಬ್ರಹ್ಮ ದೇವಸ್ಥಾನವನ್ನು ರೋಗ ಪರಿಹಾರಕ್ಕಾಗಿ ಭಕ್ತರು ಸಂದರ್ಶಿಸುತ್ತಾರೆ. ಮರುಞೂರ್‌ವಟ್ಟಂ ಧನ್ವಂತರಿ ಅಮವಾಸ್ಯೆಗಳಲ್ಲಿ ಭಕ್ತರು ಕೊಡುವ ಪ್ರಸಾದ ಸರ್ವರೋಗ ಶಮನಕಾರಿ ಎಂದು ನಂಬಲಾ ಗುತ್ತದೆ. ‘ಮರುಞೂರ್‌ವಟ್ಟಂ’ ಎಂಬುದು ‘ಮರುನೊರುವಟ್ಟಂ’ (ಮದ್ದೊಂದು ಬಾರಿ-ಎಂದರೆ ಒಂದು ಬಾರಿ ಔಷಧಿ ಉಪಯೋಗಿಸಿದರೆ ರೋಗ ಶಮನಾಗುತ್ತದೆ ಎಂಬ ನಂಬಿಕೆ.) ಎಂಬುದರಿಂದ ರೂಪಗೊಂಡ ಸ್ಥಳನಾಮದೆಂದು ಭಾವಿಸಲಾಗಿದೆ. ತಗಳಿಯ ಶಾಸ್ತಾವ್ ದೇವಸ್ಥಾನದ ಮನೋರೋಗಿಗಳಿಗೆ ಎಣ್ಣೆ ಕೊಟ್ಟು ರೋಗ ಗುಣಪಡಿಸಲಾಗುತ್ತದೆ ಎಂದು ನಂಬಲಾಗಿದೆ. ಕುಷ್ಠ ಮೊದಲಾದ ರೋಗಗಳ ಪರಿಹಾರಕ್ಕಾಗಿ ಆ ಎಣ್ಣೆಯನ್ನು ಔಷಧಿ ಯನ್ನಾಗಿ ಉಪಯೋಗಿಸಲಾಗುತ್ತದೆ. ಆಲಪ್ಪುೞ ಜಿಲ್ಲೆಯಲ್ಲಿರುವ ತಿರುವಿಳಾ ದೇವಸ್ಥಾನ ದಿಂದ ಒಂದು ಗಿಡಮೂಲಿಕೆಯನ್ನು ಮಂತ್ರಿಸಿ ಕೊಡಲಾಗುತ್ತದೆ. ಅದು ಅಪಸ್ಮಾರ, ಕೈವಿಷ ಮೊದಲಾದ ರೋಗಗಳ ಪರಿಹಾರವೆಂದು ಭಾವಿಸಲಾಗುತ್ತದೆ.

ಏಟ್ಟುಮಾನೂರು ಶಿವದೇವಸ್ಥಾನದಲ್ಲಿ ಪೂಜೆ ಮಾಡುವುದರಿಂದ ಕ್ಷುದ್ರದೇವತೆಗಳ ಬಾಧೆ ನಿವಾರಣೆಯಾಗುತ್ತದೆ ಹಾಗೂ ವಾಸಿಯಾಗದ ಹಳೆಯ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆಯಿದೆ. ಇಲಿ ವಿಷದಿಂದ ತೊಂದರೆಗೊಳಗಾದವರು ತೃಣಯಂ ಕುಡಂ ಎಂಬಲ್ಲಿ ರುವ ಶ್ರೀರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದಿದೆ. ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ಎಲಿಕುಳಂ (ಇಲಿಕೆರೆ) ಕೆರೆಯಲ್ಲಿ ಸ್ನಾನ ಮಾಡುವುದು ಉತ್ತಮ ಎಂದು ನಂಬಲಾಗಿದೆ. ಇಲಿ ವಿಷ ಬಾಧೆಯಿದ್ದವರು ಆ ಕೆರೆಯಲ್ಲಿನ ನೀರನ್ನು ಕುಡಿಯುವುದೋ ಅದರಲ್ಲಿ ಸ್ನಾನ ಮಾಡುವುದನ್ನೋ ಮಾಡುತ್ತಾರೆ. ಇದಕ್ಕೆ ಜಾತಿನೀತಿಗಳ ಪರಿವೆಯಿಲ್ಲ.

ಇಗರ್ಜಿಗಳು

ಕೇರಳದಲ್ಲಿ ಹಿಂದೂ ಆರಾಧನಾಲಯಗಳು ಸಂಸ್ಕೃತಿಯ ಭಾಗವಾಗಿರುವಂತೆ ಕ್ರಿಶ್ಚಿಯನ್ ಹಾಗೂ ಮುಸಲ್ಮಾನರ ಆರಾಧನಾ ಕೇಂದ್ರಗಳೂ ಸಹ ಸಾಂಸ್ಕೃತಿಕವಾಗಿ ಮುಖ್ಯವಾಗಿವೆ. ಯೇಸುಕ್ರಿಸ್ತನ ಶಿಷ್ಯರಲ್ಲಿ ಒಬ್ಬನಾದ ಸೈಂಟ್ ಥೋಮಸ್ ಕ್ರಿ.ಶ. ೫೨ರಲ್ಲಿ ಸಂಸ್ಥಾನದ ವಿವಿಧ ಭಾಗಗಳಿಗೆ ಭೇಟಿ ನೀಡಿ ಅನೇಕರನ್ನು ಮತಾಂತರಗೊಳಿಸಿದ ಎಂಬುದು ಸಾಮಾನ್ಯ ವಾದೊಂದು ನಂಬಿಕೆ. ಕೋಟೆಕಾವ್, ಪಾಲಯೂರು, ಕೊಕ್ಕೋತಮಂಗಲಂ, ತಿರಣಂ, ನಿಲಯ್ಕಲ್, ಕೊಲ್ಲಂ, ತಿರುವಂಕೋಡ್ ಮೊದಲಾದ ಏಳು ಸ್ಥಳಗಳಲ್ಲಿ ಆತ ಇಗರ್ಜಿಯನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ಸೈಂಟ್ ಥೋಮಸ್ ಸ್ಥಾಪಿಸಿದನೆಂದು ಹೇಳುವ ಇನ್ನೂ ಅನೇಕ ಇಗರ್ಜಿಗಳು ಕೇರಳದಲ್ಲಿವೆ. ಕಾಲಕ್ರಮೇಣ ಸಮುದಾಯದ ಜನಸಂಖ್ಯೆ ಹೆಚ್ಚಾ ಗುತ್ತಿದ್ದಂತೆ ಅವರವರ ಅನುಕೂಲಕ್ಕಾಗಿ ಇಗರ್ಜಿಗಳನ್ನು ನಿರ್ಮಿಸಿದರು. ಪ್ರಾದೇಶಿಕವಾಗಿ ವಿಭಿನ್ನ ನಂಬಿಕೆ ಆಚರಣೆಗಳ ಕಾರಣದಿಂದಾಗಿ ಕೇರಳದ ಕ್ರಿಶ್ಚಿಯನ್ ಸಮುದಾಯದಲ್ಲಿ ಅನೇಕ ವಿಭಾಗಗಳೂ ರೂಪು ಪಡೆದವು. ಒಂದೊಂದು ವಿಭಾಗಕ್ಕೆ ನಿರ್ದಿಷ್ಟ ನಂಬಿಕೆ ಆಚರಣೆಗಳ ತಳಹದಿಯಲ್ಲಿ ಪ್ರತ್ಯೇಕ ಪ್ರತ್ಯೇಕ ಇಗರ್ಜಿಗಳೂ ಸ್ಥಾಪನೆಗೊಂಡವು. ಹೀಗೆ ಇಗರ್ಜಿಗಳ ಸಂಖ್ಯೆಯು ಹೆಚ್ಚುತ್ತಲೇ ಹೋಯಿತು.

ಪ್ರಮುಖವಾಗಿ ಕೇರಳದ ಕ್ರಿಶ್ಚಿಯನರನ್ನು ಕ್ಯಾಥೋಲಿಕರು ಮತ್ತು ಕ್ಯಾಥೋಲಿಕರಲ್ಲ ದವರು ಎಂದು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಪೋಪ್‌ಗೆ ವಿಧೇಯರಾಗಿರುವುದೇ ಕ್ಯಾಥೋಲಿಕರ ವೈಶಿಷ್ಠ್ಯ. ಮತೀಯವಾದ ನಂಬಿಕೆಗಳು ಹಾಗೂ ಆಚರಣೆಗಳಿಗೆ ಸಂಬಂಧಿಸಿದಂತೆ ರೋಮನ್ ಕ್ಯಾಥೋಲಿಕರು ಯಾಕೋಬಾಯ್ ಸಿರಿಯನ್ ವಿಭಾಗದವರು. ಪವಿತ್ರವಾದ ವೇದವನ್ನು ಗೌರವಿಸುವವರು. ಮಾರ್ತೋಮ ಸಭೆ ಅಥವಾ ಪಾಶ್ಚಾತ್ಯ ಸಭೆಗಳ ಅಭಿಪ್ರಾಯವನ್ನು ಅನುಸರಿಸುವ ವೇದ ಪುಸ್ತಕಗಳೇ ಪಾಪ ವಿಮೋಚನೆಯ  ವಿಷಯಕ್ಕೆ ಸಂಬಂಧಿಸಿದಂತೆ ಅಂತಿಮವಾದ ಸತ್ಯಗಳು. ವೇದ ಪುಸ್ತಕವನ್ನು ಅಂತಿಮ ಸತ್ಯವೆಂದು ಒಪ್ಪದ ಮಾರ್ತೋಮ ಸಭೆ ಮರಣ ಹೊಂದಿದವರ ಹಾಗೂ ಮಹಾತ್ಮರನ್ನು ಕುರಿತ ಪ್ರಾರ್ಥನೆಗಳನ್ನು ಒಪ್ಪುವುದಿಲ್ಲ. ಕೇರಳದ ಕ್ರಿಶ್ಚಿಯನರ ಆರಾಧನಾ ಕೇಂದ್ರಗಳ ನಿರ್ಮಾಣದಲ್ಲಿಯೂ ಈ ಕಾರಣಗಳಿಗಾಗಿ ಸ್ಪಷ್ಟವಾದ ವ್ಯತ್ಯಾಸಗಳಿವೆ.

ಕ್ರಿಶ್ಚಿಯನರ ಪ್ರಮುಖ ಇಗರ್ಜಿಗಳು

ಕ್ರೈಸ್ತರ ಪ್ರಮುಖ ಇಗರ್ಜಿಗಳು ಹಳೆಯ ತಿರುವಿದಾಂಕೂರು ಕೊಚ್ಚಿ ಪ್ರದೇಶಗಳಲ್ಲಿವೆ. ಕೇರಳದ ಉತ್ತರ ಭಾಗದಲ್ಲೂ ಇತ್ತೀಚಿನ ದಿನಗಳಲ್ಲಿ ಕ್ರಿಶ್ಚಿಯನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸತೊಡಗಿದ್ದರಿಂದ ಅಲ್ಲಿಯೂ ಅನೇಕ ಇಗರ್ಜಿಗಳು ತಲೆಯೆತ್ತಿವೆ. ಕ್ಯಾಥೋಲಿಕರೇ ಹೆಚ್ಚಿರುವ ಕಾರಣ ಇಲ್ಲಿನ ಅನೇಕ ಇಗರ್ಜಿಗಳು ರೋಮನ್ ಕ್ಯಾಥೋಲಿಕ್ ಸಭೆಯ ವ್ಯಾಪ್ತಿಯಲ್ಲಿ ಬರುತ್ತವೆ. ಕ್ರಿಶ್ಚಿಯನರ ಜನಜೀವನ ಹಾಗೂ ಆರಾಧನಾ ಕೇಂದ್ರಗಳ ಕಾರಣದಿಂದಾಗಿ ಕೇರಳದ ಸಾಮಾಜಿಕ ಬದುಕಿನಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಗುರುತಿಸಬಹುದು.

ತಿರುವನಂತಪುರಂನಲ್ಲಿಯೇ ಬೇರೆ ಬೇರೆ ವಿಭಾಗಗಳಿಗೆ ಸೇರಿದ ಇಗರ್ಜಿಗಳು ಅನೇಕವಿವೆ. ನಗರ ಮಧ್ಯದಲ್ಲಿರುವ ಸೈಂಟ್ ಜೋಸೆಫ್ ಕ್ಯಾತಿಡ್ರಲ್ ಇಗರ್ಜಿಯು ಸುಮಾರು ೧೮೫೦ಕ್ಕೂ ಮೊದಲು ನಿರ್ಮಾಣಗೊಂಡುದು. ಇಗರ್ಜಿಯ ಎದುರು ಭಾಗದಲ್ಲಿರುವ ಅಲಂಕೃತವಾದ ಯೇಸುವಿನ ಪ್ರತಿಮೆ ಆಕರ್ಷಕವಾದುದು. ತಿರುವನಂತಪುರಂನ ಕಡಲ ತೀರದಲ್ಲಿರುವ ಸೈಂಟ್ ಆಂಟನಿಯ ಇಗರ್ಜಿಗೆ ನಾಲ್ಕುನೂರು ವರ್ಷಗಳ ಹಳಮೆಯಿದೆ. ಸೈಂಟ್ ಫ್ರಾನ್ಸಿಸ್ ಸೇವಿಯರ್ ತಿರುವನಂತಪುರಂನ ಕರಾವಳಿ ಪ್ರದೇಶಗಳಲ್ಲಿ ೧೬ನೆಯ ಶತಮಾನದಲ್ಲಿ ಧರ್ಮ ಪ್ರಚಾರ ಮಾಡಿದ್ದ. ಆತನ ಹೆಸರಿನಲ್ಲಿರುವ ಇಗರ್ಜಿಯೊಂದು ನಾಡಾರ್ ಕ್ರಿಶ್ಚಿಯನರ ಒಂದು ಗುಂಪಿಗೆ ಮಾತ್ರ ಸೀಮಿತವಾಗಿದೆ. ಚಿರಯಿನ್‌ಕೀೞು ತಾಲೂಕಿನ ಮಙೋಡ್ ಸೈಂಟ್ ಸೆಬಾಸ್ಟಿಯನ್‌ನ ಒಂದು ಇಗರ್ಜಿಯಿದೆ. ಕುಂಭ ಮಾಸದ ಮೊದಲ ಆದಿತ್ಯವಾರದಂದು ನಡೆಯುವ ಉತ್ಸವ ಸುಪ್ರಸಿದ್ಧವಾಗಿದೆ. ತಿರುವನಂತಪುರಂನ ವೆಟ್ಟುಕಾಡ್ ನಲ್ಲಿರುವ ಪುಣ್ಯಮಾತೆಯ ಇಗರ್ಜಿಯ ಹಿಂಭಾಗದಲ್ಲಿ ಸ್ಥಾಪಿಸಿರುವ ಯೇಸುಕ್ರಿಸ್ತನ ಪ್ರತಿಮೆ ಅತ್ಯಾಕರ್ಷಕವಾದುದು. ವಿವಿಧ ಜಾತಿ ಮತಗಳಿಗೆ ಸೇರಿದ ಅನೇಕರು ದರ್ಶನಕ್ಕಾಗಿ ವೆಟ್ಟುಕಾಡ್‌ನಲ್ಲಿ ಸೇರುವರು. ಆ ಮೂಲಕ ಇಗರ್ಜಿಯ ಆದಾಯವೂ ಗಮನಾರ್ಹವಾಗಿದೆ.

ಪತ್ತನಂತಿಟ್ಟ ತಾಲೂಕಿನ ಓಮಲ್ಲೂರಿನ ಸಮೀಪ ಮತ್ತಿನಕೆರೆಯಲ್ಲಿರುವ ಇಗರ್ಜಿಯು ಯಾಕೋಬೈಟ್ ಸಿರಿಯನ್ ಕ್ರಿಶ್ಚಿಯನರಿಗೆ ಬಹುಮುಖ್ಯವಾದ ಆರಾಧನಾ ಕೇಂದ್ರವಾಗಿದೆ. ಅಂತ್ಯೋಖ್ಯಾಯದ ಪಾದ್ರಿಯಾದ ಇಗ್ನೇಷಿಯನ್ ಏಲಿಯಾಸ್ ತೃತೀಯನು ಕೇರಳಕ್ಕೆ ಭೇಟಿ ನೀಡಿದ್ದಾಗ ೧೯೭೨ ಫೆಬ್ರುವರಿ ೧೩ನೇ ದಿನಾಂಕದಂದು ಹೃದಯಾಘಾತದಿಂದ ಮೃತಪಟ್ಟನು. ಆತನ ಸಮಾಧಿ ಈ ಇಗರ್ಜಿಯಲ್ಲಿದೆ. ಅಂತ್ಯೋಖ್ಯಾಯದ ಹಾಗೂ ಪೌರಾಸ್ತ್ಯ ದೇಶದ ಪಾದ್ರಿಯ ಭಾರತದಲ್ಲಿರುವ ಏಕೈಕ ಸಮಾಧಿಯಿದು. ಹಾಗಾಗಿ ಸಾವಿರಾರು ಭಕ್ತರು ಹರಕೆಗಳೊಂದಿಗೆ ಇಲ್ಲಿಗೆ ಬರುತ್ತಾರೆ.

ನೀಂಡಕರದಲ್ಲಿರುವ ಸೈಂಟ್ ಸೆಬಾಸ್ಟಿಯನ್ ಇಗರ್ಜಿಯೂ ಹದಿನಾರನೆಯ ಶತಮಾನಕ್ಕೂ ಹಿಂದೆಯೇ ನಿರ್ಮಾಣವಾದುದು. ವಾಣಿಜ್ಯ ವ್ಯವಹಾರಗಳಿಗಾಗಿ ಇಲ್ಲಿ ಬಂದು ನೆಲೆನಿಂತ ಪೋರ್ಚುಗೀಸರು ನಿರ್ಮಿಸಿದ್ದ ಆರಾಧನಾಲಯವಿದು. ಕೊಲ್ಲಂ ನಗರದಲ್ಲಿಯೂ ಸಿರಿಯನ್ ಕ್ಯಾಥೋಲಿಕರದು ಹಾಗೂ ಲ್ಯಾಟಿನ್ ಕ್ಯಾಥೋಲಿಕರ ಅನೇಕ ಇಗರ್ಜಿಗಳಿವೆ. ಪೋರ್ಚುಗೀಸರು ಹಾಗೂ ಡಚ್ಚರು ನಿರ್ಮಿಸಿದ ಕೋಟೆಗಳ ಅವಶಿಷ್ಟ್ಯಗಳೇ ತುಂಬಿರುವ ತಂಗಶ್ಯೇರಿಯಲ್ಲಿಯೂ ೧೮ನೆಯ ಶತಮಾನದಲ್ಲಿ ನಿರ್ಮಿಸಿದ ಅನೇಕ ಇಗರ್ಜಿ ಗಳಿವೆ.

ಪತ್ತನಂತಿಟ್ಟ ತಾಲೂಕಿನ ಮಲ್ಲಪ್ಪುೞಶ್ಯೇರಿ ಗ್ರಾಮದ ಪಂಪಾನದಿ ತೀರದಲ್ಲಿ ಎಲ್ಲಾ ವರ್ಷವೂ ಮಾರ್ಚ್ ತಿಂಗಳಲ್ಲಿ ನಡೆಯುವ ಮಾರಾಮನ್ ಸಮ್ಮೇಳನವು ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕ್ರಿಶ್ಚಿಯನ್ ಸಮ್ಮೇಳನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರ್ತೋಮಾ ಸಭಾದ ಸ್ಥಾಪಕರಲ್ಲೊಬ್ಬನಾದ ಮಹಾತ್ಮನಾದ ಎಬ್ರಹಾಂ ಮಲ್‌ಪ್ಪಾನ್ ಜನಿಸಿದುದೂ ಮಾರಾಮಣ್ಣಿನಲ್ಲಿ. ಸಮೀಪದ ಕೊಳಂಚೇರಿಯಲ್ಲಿರುವ ಮಾರ್ತೋಮಾ ಪಳ್ಳಿಯ ಬೃಹತ್ತಾದ ಸೌಧವೂ ಜನಾಕರ್ಷಣೀಯವಾಗಿದೆ. ಕೊಳಂಚೇರಿಯ ಸಮೀಪವಿರುವ ಸುಂದರವಾದ ಚರಲ್‌ಕುನ್ನ್ ಮಾರ್ತೋಮಾ ಸಭಾದ ಆಶ್ರಯದಲ್ಲಿ ನಡೆಯುವ ಎಲ್ಲಾ ಸಾಮಾಜಿಕ ಚಟುವಟಿಕೆಗಳಿಗೆ ನೇತೃತ್ವ ನೀಡುವ ಕೇಂದ್ರವಾಗಿ ವಿಕಾಸ ಹೊಂದಿದೆ.

ಚೇರ್ತಲದ ಸಮೀಪದ ಆರ್ತುಂಗಲ್‌ನಲ್ಲಿರುವ ಸೈಂಟ್ ಆ್ಯಂಡ್ರ್ಯೂಸ್ ಕೇರಳದ ಪುಣ್ಯಕ್ಷೇತ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಊರವರು ‘ವೆಳುತ್ತಚ್ಚನ್’ (ಬೆಳ್ಳಗಿನ ತಾತ) ಎಂದು ಕರೆಯುವ ಈ ಇಗರ್ಜಿಯ ಸೈಂಟ್ ಸೆಬಾಸ್ಟಿಯನ್‌ನ ಪವಿತ್ರ ರೂಪ ಚೆನ್ನೈ ಇಗರ್ಜಿಯಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ ಫ್ರಾನ್ಸಿನಲ್ಲಿ ನಿರ್ಮಿಸಿದುದು. ಆ ವಿಗ್ರಹವನ್ನು ಹೇರಿಕೊಂಡು ಬಂದ ಹಡಗು ತೈಕ್ಕಲ್ ಬಂದರಿನ ಸಮೀಪಕ್ಕೆ ಬಂದಾಗ ತಟಕ್ಕನೆ ನಿಂತು ಬಿಟ್ಟಿತೆಂದು ಹಾಗೂ ಅದನ್ನು ಆರ್ತುಂಗಲ್‌ನಲ್ಲಿಯೇ ಪ್ರತಿಷ್ಠಾಪಿಸಲಾಯಿತೆಂದು ಕತೆ. ಸೈಂಟ್ ಸೆಬಾಸ್ಟಿಯನಿಗಿದೆಯೆಂದು ಹೇಳಲಾಗುವ ರೋಗ ಪರಿಹಾರಕ ಶಕ್ತಿಯ ಕಾರಣಕ್ಕಾಗಿ ದೇಶದೆಲ್ಲೆಡೆಯಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಅದೇ ಊರಿನವ ನಾದ ಮೂತ್ತೇಡತ್ತು ಕಯ್‌ಮಳ್ ಎಂಬ ನಾಯರ್‌ನ ಕೃಪೆಗೂ ಪಾತ್ರವಾದ ಇಗರ್ಜಿಯಿದು.

ಆಲಪ್ಪುೞ ಪಟ್ಟಣದ ಸೈಂಟ್ ಮೈಕೇಲ್ ಇಗರ್ಜಿಗೆ ಸುಮಾರು ಹದಿನೈದು ಶತಮಾನ ಗಳಷ್ಟು ಹಳಮೆಯಿದೆ. ರೋಗ ಪರಿಹಾರಕ್ಕಾಗಿ ಹೆಸರುವಾಸಿಯಾದುದು ಈ ಆರಾಧನಾಲಯ. ತುಂಬೋಳಿಯ ಪ್ರಾಚೀನವಾದ ಸೈಂಟ್ ಥೋಮಸ್ ಇಗರ್ಜಿಯಲ್ಲಿರುವ ಪ್ರಾಚೀನ ಶಿಲುಬೆ ಹಾಗೂ ‘ಕಪ್ಪಲ್‌ಕಾರತ್ತಿಯಮ್ಮ’ (ಹಡುಗಿನಲ್ಲಿ ಏರಿ ಬಂದ ದಿವ್ಯ ಮಾತೆ) ಎಂದು ಕರೆಯಲಾಗುವ ಕನ್ನಿಮೇರಿಯ ಪ್ರತಿಮೆ ಪ್ರಸಿದ್ಧವಾಗಿದೆ. ಚಂಬಕ್ಕುಳದ ಕಲ್ಲೂರ್‌ಕಾಟ್ ನಲ್ಲಿರುವ ಸಿರಿಯನ್ ಕ್ಯಾಥೋಲಿಕ್ ಇಗರ್ಜಿ ಕ್ರಿ.ಶ. ೪೨೭ರಲ್ಲಿ ಸ್ಥಾಪಿಸಿದ್ದೆಂದು ತಿಳಿಯ ಲಾಗಿದೆ. ಚಂಬಕಶ್ಯೇರಿ ರಾಜರುಗಳ ಚರಿತ್ರೆಯ ಜೊತೆಗೆ ಅದಕ್ಕೆ ಸಂಬಂಧ ಗೋಚರಿಸುತ್ತದೆ. ಅಂಬಲಪ್ಪುೞ ದೇವಾಲಯದಲ್ಲಿ ಪ್ರತಿಷ್ಠೆ ಮಾಡುವುದಕ್ಕಾಗಿ ಅಲ್ಲಿನ ರಾಜನು ಕದ್ದು ಕೊಂಡೊಯ್ದ ಶ್ರೀಕೃಷ್ಣನ ವಿಗ್ರಹಕ್ಕೆ ಆ ಇಗರ್ಜಿಯ ಪುರೋಹಿತರು ಚಂಪಕ್ಕುಳದಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡಿ ಸಹಾಯ ಮಾಡಿದರು ಎಂಬುದು ಐತಿಹ್ಯ.

ಪಂಪಾನದಿಯ ತೀರದ ಎಡತ್ವಾಯಿಯಲ್ಲಿರುವ ಸೈಂಟ್ ಜಾರ್ಜ್ ಇಗರ್ಜಿ ತಮಿಳುನಾಡಿ ನಿಂದ ಭಕ್ತರನ್ನು ಆಕರ್ಷಿಸುವ ಪ್ರಮುಖ ಪುಣ್ಯಕ್ಷೇತ್ರ. ೧೮೧೦ರಲ್ಲಿ ಸ್ಥಾಪನೆಯಾದ ಈ ಆರಾಧನಾಯಲದಲ್ಲಿ ಪ್ರತಿಷ್ಠಾಪಿಸಿರುವ ಸೈಂಟ್ ಜಾರ್ಜ್‌ನ ವಿಗ್ರಹವನ್ನು ಇಡಪ್ಪಳ್ಳಿಯ ಕ್ಯಾಥೋಲಿಕ್ ಇಗರ್ಜಿಯಿಂದ ತಂದುದು. ಮೇಷ ಮಾಸದಲ್ಲಿ ಇಲ್ಲಿ ಆಚರಿಸುತ್ತ ಬರುವ ಜಾರ್ಜ್‌ನ ಹುಟ್ಟುಹಬ್ಬ ಪ್ರಖ್ಯಾತವಾಗಿದೆ. ಚೇರ್ತಲ ತಾಲೂಕಿನ ಪಳ್ಳಿಪುರಂ ಎಂಬ ಸ್ಥಳದಲ್ಲಿ ‘ಸ್ವರ್ಗಾರೋಹಣ ಮಾತೆ’ಯ ಹೆಸರಿನಲ್ಲಿ ಸ್ಥಾಪಿಸಲಾದ ಪ್ರಮುಖವಾದ ಒಂದು ಸಿರಿಯನ್ ಕ್ರಿಶ್ಚಿಯನ್ ಇಗರ್ಜಿಯಿದೆ. ಸಮೀಪದ ಕೊಕ್ಕೋತಮಂಗಲದಲ್ಲಿ ಸೈಂಟ್ ಥೋಮಸ್ ಸ್ಥಾಪಿಸಿದ ಶಿಲುಬೆಯನ್ನು ಈ ಇಗರ್ಜಿಯಲ್ಲಿ ಸಂರಕ್ಷಿಸಲಾಗಿದೆ. ‘ಸೈಂಟ್ ಮೇರಿಯ ಇಗರ್ಜಿ’ ಎಂಬ ಹೆಸರಿನಲ್ಲಿ ೧೧ನೇ ಶತಮಾನದಲ್ಲಿ ಸ್ಥಾಪಿಸಿದ್ದೆಂದು ಹೇಳಲಾಗುವ ಪ್ರಮುಖವಾದ ಆರಾಧನ ಕೇಂದ್ರವೊಂದು ಚೇರ್ತಲದಲ್ಲಿದೆ. ‘ಅಮಲೋದ್ಭವ ಮಾತೆ’ಯ ಸುಂದರವಾದೊಂದು ವಿಗ್ರಹವೂ ಇಲ್ಲಿದೆ. ಜಾತಿ ಭೇದವನ್ನೆಣಿಸದೆ ಅನೇಕ ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಇಡಪ್ಪಳ್ಳಿ ರಾಜನು ದಾನ ಮಾಡಿದ ಜಾಗದಲ್ಲಿ ಎಂಟು ನೂರು ವರ್ಷಗಳಷ್ಟು ಹಳೆಯದಾದ ಕಲ್ಲುಪ್ಪಾರದ ಸೈಂಟ್ ಮೇರೀಸ್ ಆರ್ಥೋಡೋಕ್ಸ್ ಸಿರಿಯನ್ ಇಗರ್ಜಿಯಿದೆ. ಸುಮಾರು ಕ್ರಿ.ಶ. ೧೩೦೦ರಲ್ಲಿ ಕಾಞೂರಿನ ವಲಿಯತ್ತಾನ್ ಎಂಬ ಒಬ್ಬ ಊರ ಮುಖಂಡನ ನೆರವಿನಿಂದ ಚೇಪ್ಪಾಡಿನ ಸೈಂಟ್ ಥೋಮಸ್ ಇಗರ್ಜಿ ರೂಪುಗೊಂಡಿತು. ಇತಿಹಾಸ ಪ್ರಸಿದ್ಧವಾದ ಚೇಪ್ಪಾಡಿನ ಇಗರ್ಜಿ ಆರ್ಥೋಡೋಕ್ಸ್ ಸಿರಿಯನ್ ಕ್ರಿಶ್ಚಿಯನರಿಗೆ ಪವಿತ್ರವಾದ ತೀರ್ಥಕ್ಷೇತ್ರವಾಗಿದೆ. ಸೈಂಟ್ ಥೋಮಸ್ ಕ್ರಿ.ಶ. ೫೨ರಲ್ಲಿ ಸ್ಥಾಪಿಸಿದ ಏಳು ಇಗರ್ಜಿಗಳಲ್ಲಿ ಒಂದು ಸೈಂಟ್ ಮೇರೀಸ್ ಆರ್ಥೋಡೋಕ್ಸ್ ಸಿರಿಯನ್ ಇಗರ್ಜಿ. ೨೦ನೆಯ ಶತಮಾನದ ಆರಂಭದಲ್ಲಿ ಈ ಇಗರ್ಜಿಯನ್ನು ಹೊಸತಾಗಿ ಪುನರ್ ನಿರ್ಮಿಸ ಲಾಯಿತು. ಇಲ್ಲಿ ಅನೇಕ ಪವಿತ್ರ ವಸ್ತುಗಳನ್ನು ಸಂರಕ್ಷಿಸಲಾಗಿದೆ. ಅವುಗಳಲ್ಲಿ ಕನ್ನೆಮೇರಿಯ ಚಿನ್ನ ಹಾಗೂ ಮಾರ್ಬಲ್‌ನ ಒಂದೊಂದು ವಿಗ್ರಹ ಮತ್ತು ಚಿನ್ನದ ಶಿಲುಬೆ ಹೆಚ್ಚು ಆಕರ್ಷಕವಾದುದು.

ಕೋಟ್ಟಯಂ ಮತ್ತು ಪರಿಸರ ಪ್ರದೇಶಗಳು ಕ್ಯಾಥೋಲಿಕರು ಹಾಗೂ ಕ್ಯಾಥೋಲಿಕರಲ್ಲದ ಕ್ರಿಶ್ಚಿಯನರ ಇಗರ್ಜಿಗಳಿಗೆ ಪ್ರಸಿದ್ಧವಾಗಿದೆ. ಕುರವಿಲಙಟ್ಟದ ಸೈಂಟ್ ಮೇರಿಯ ಇಗರ್ಜಿಯು ಕೇರಳದ ಅತ್ಯಂತ ಪ್ರಾಚೀನವಾದ ಕ್ರೈಸ್ತ ದೇವಾಲಯವೆಂದು ಪ್ರಸಿದ್ಧವಾಗಿದೆ. ಕ್ರಿ.ಶ. ೩೩೫ರಲ್ಲಿ ಇದನ್ನು ಸ್ಥಾಪಿಸಲಾಯಿತು. ಅನೇಕ ಬಾರಿ ಇದನ್ನು ನವೀಕರಿಸಿದ್ದರೂ ಪ್ರಾಚೀನವಾದ ಅವಶಿಷ್ಟ್ಯಗಳನ್ನು ಕಾಯ್ದುಕೊಳ್ಳಲಾಗಿದೆ. ಓದಲಾಗದ ಒಂದು ಲಿಪಿಯಿರುವ ಗಂಟೆಯೊಂದನ್ನು ಪ್ರದರ್ಶನ ವಸ್ತುವಾಗಿ ಇರಿಸಲಾಗಿದೆ. ಕನ್ನೆಮೇರಿಯ ಕಲ್ಲಿನ ಪ್ರತಿಮೆ, ಶಿಲುಬೆ ಹಾಗೂ ಪೋರ್ಚುಗೀಸರು ಉಪಯೋಗಿಸುತ್ತಿದ್ದರೆಂದು ಹೇಳಲಾದ ಹಡಗಿನ ದಾರು ಪ್ರತಿಮೆ ಇವು ಈ ಇಗರ್ಜಿಯ ಇತರ ಆಕಷ‰ಣೆಗಳು. ಅನೇಕ ಆಕರ್ಷಕ ಚಿತ್ರಗಳಿರುವ ಈ ಮರದ ಹಡಗನ್ನು ಉತ್ಸವ ಸಂದರ್ಭದಲ್ಲಿ ಹೊರಗೆ ತರಲಾಗುತ್ತದೆ.

ರಾಮಪುರದ ಕ್ಯಾಥೋಲಿಕ ಇಗರ್ಜಿಯನ್ನು ಸೈಂಟ್ ಆಗಸ್ಟಿನ್‌ಗೆ ಸಮರ್ಪಿಸಲಾಗಿದೆ. ಸೈಂಟ್ ಆಗಸ್ಟಿನ್ ರೋಮ್‌ನಲ್ಲಿ ತಯಾರಿಸಿ ತಂದ ಅಗಸ್ಟಿನ್‌ನ ಪ್ರತಿಮೆಯನ್ನು ವಿಶೇಷವಾಗಿ ನಿರ್ಮಿಸಿದ ಅಲ್ತಾರ್ (Altar)ನ ಮೇಲೆ ಪ್ರತಿಷ್ಠಾಪಿಸಲಾಗಿದೆ. ಪೋರ್ಚ್‌ಗಲ್‌ನ ಒಬ್ಬ ರಾಜನು ಕೊಡುಗೆಯಾಗಿ ನೀಡಿದ ಶಿಲುಬೆ ಹಾಗೂ ನೆಕ್ಲೆಸ್‌ಗಳಿಂದ ಪ್ರತಿಮೆಯನ್ನು ಅಲಂಕರಿಸಲಾಗಿದೆ. ವಾರ್ಷಿಕೋತ್ಸವ ಸಂದರ್ಭದಲ್ಲಿ ಇವುಗಳನ್ನು ವಿಶೇಷವಾಗಿ ಪ್ರದರ್ಶಿಸ ಲಾಗುತ್ತದೆ. ಮಲಯಾಳಂ ಸಾಹಿತ್ಯದಲ್ಲಿ ಮೊತ್ತ ಮೊದಲ ಪ್ರವಾಸ ಕಥನ ಎಂಬ ಕೀರ್ತಿಗೆ ಪಾತ್ರವಾದ ‘ವರ್ತಮಾನ ಪುಸ್ತಕಂ’ನ ಕರ್ತೃ ಪಾರೆಮ್ಮಾಕಲ್ ತೋಮ್ಮಾಗತ್ತನಾರನ (೧೮ನೆಯ ಶತಮಾನ) ಭೌತಿಕ ಅವಶಿಷ್ಟ್ಯಗಳನ್ನು ಈ ಇಗರ್ಜಿಯಲ್ಲಿ ಸಂರಕ್ಷಿಸಲಾಗಿದೆ.

‘ಕಡಪ್ಲಾಮಟ್ಟದ ಮುತ್ತಿಯಮ್ಮ’ ಎಂಬ ಹೆಸರಿನಲ್ಲಿ ಸೈಂಟ್ ಮೇರಿಗೆ ಸಮರ್ಪಿಸಿದ ಹಳೆಯ ಕ್ರೈಸ್ತ ದೇವಾಲಯವೇ ಕಡಪ್ಲಾಮಟ್ಟದ ಕ್ಯಾಥೋಲಿಕ್ ಇಗರ್ಜಿ. ವಡಕ್ಕಾಂಕೂರು ರಾಜನ ರಕ್ಷಣೆಯೂ ಈ ಇಗರ್ಜಿಗಿತ್ತು. ಸ್ಥಳೀಯರು ವೆಚ್ಚೂರಿನ ‘ಮುತ್ತಿಯಮ್ಮ’ ಎಂದೇ ಕರೆಯುವ ಸೈಂಟ್ ಮೇರಿಯ ಹೆಸರಿನ ಹಳೆಯ ಇಗರ್ಜಿಯೊಂದು ವೆಚ್ಚೂರಿನಲ್ಲಿದೆ. ಬಾಲಯೇಸುವನ್ನು ಎತ್ತಿಕೊಂಡಿರುವ ಮೇರಿಮಾತೆಯ ಮನೋಹರವಾದ ಒಂದು ಚಿತ್ರವನ್ನು ಈ ಇಗರ್ಜಿಯಲ್ಲಿ ಕಾಣಬಹುದು. ಸೈಂಟ್ ಲ್ಯೂಕನು ಬರೆದ ಪ್ರಸಿದ್ಧ ಚಿತ್ರದ ‘ತದ್ರೂಪ’ ಎಂದೇ ಭಾವಿಸಲಾದ ಚಿತ್ರವಿದು. ವೆಚ್ಚೂರು ಇಗರ್ಜಿಗೆ ಕೀರ್ತಿ ತಂದ ಚಿತ್ರವಿದು. ಇಲ್ಲಿ ವರ್ಷಕ್ಕೆ ಒಂದು ದಿನ ನಡೆಯುವ ವಿಶೇಷ ಔತಣಕೂಟದಲ್ಲಿ ನಾಡಿನ ನಾನಾ ಭಾಗಗಳಿಂದ ಆರಾಧಕರು ಬಂದು ಪಾಲ್ಗೊಳ್ಳುತ್ತಾರೆ.

ಪಾಲಾನಗರದಲ್ಲಿ ಅನೇಕ ಕ್ಯಾಥೋಲಿಕ್ ಆರಾಧನಾಲಯಗಳಿವೆ. ಮೀನಚ್ಚಿಲಾರಿನ ದಕ್ಷಿಣ ಭಾಗದಲ್ಲಿ ‘ವಲಿಯಪಳ್ಳಿ’ (ದೊಡ್ಡ ಇಗರ್ಜಿ) ಎಂಬ ಹೆಸರಿನಿಂದಲೇ ಪ್ರಖ್ಯಾತವಾದ ಸೈಂಟ್ ಥೋಮಸ್ ಕ್ಯಾಥಿಡ್ರಲ್ ಆ ನಗರದ ಗಮನಾರ್ಹ ಇಗರ್ಜಿ. ೧೬ನೆಯ ಶತಮಾನ ದಲ್ಲಿಯೋ, ಅದಕ್ಕೂ ಮೊದಲೋ ನಾಲ್ಕು ಸಿರಿಯನ್ ಕ್ರಿಶ್ಚಿಯನ್ ಕುಟುಂಬಗಳು ನಿರ್ಮಿಸಿದ ಇಗರ್ಜಿಗೆ ಮೀನಚ್ಚಿಲ್ ಒಡೆಯರುಗಳು ಎಂಬ ಹೆಸರಿನಿಂದ ಪ್ರಸಿದ್ಧರಾದ ಆ ಊರಿನ ನಾಯರ್ ಮುಖಂಡರ ಆಶ್ರಯವೂ ಲಭಿಸಿತ್ತು. ಪಾಲಾದಲ್ಲಿರುವ ಕ್ರೈಸ್ತ ದೇವಾಲಯಗಳ ಸಮೂಹದಲ್ಲಿ ಹಳೆಯ ಇಗರ್ಜಿ ಹಾಗೂ ಹೊಸ ಇಗರ್ಜಿಗಳನ್ನು ನೆನಪಿಸಿಕೊಳ್ಳಲೇಬೇಕು. ಸೈಂಟ್ ಮೇರಿಗೆ ಸಮರ್ಪಿಸಿದ ಹಳೆಯ ಇಗರ್ಜಿ ೧೬೬೩ನೆಯ ವರ್ಷದಲ್ಲಿ ಸೈಂಟ್ ಜಾರ್ಜ್‌ನ ಹೆಸರಿನಲ್ಲಿರುವ ಹೊಸ ಇಗರ್ಜಿ ೧೮೨೧ರಲ್ಲಿ ಸ್ಥಾಪಿಸಲಾಯಿತು.

ಅತಿರಂಪುೞದ ಸೈಂಟ್‌ಮೇರಿಯ ಇಗರ್ಜಿಯು ಕೇರಳದ ಹಳೆಯ ಕ್ಯಾಥೋಲಿಕ್ ದೇವಾಲಯಗಳಲ್ಲಿ ಒಂದು. ಸೈಂಟ್ ಸೆಭಾಸ್ಟಿಯನ್‌ನ ಒಂದು ಪ್ರತಿಮೆಯೂ ಅಲ್ಲಿದೆ. ಸಾಮಾನ್ಯವಾಗಿ ಕಾಣುವ ಪ್ರತಿಮೆಗಳಂತಲ್ಲ ಇದು. ಪೋರ್ಚುಗೀಸರು ತಂದುದೆಂದು ಹೇಳಲಾಗುವ ಮೂರು ಪ್ರತಿಮೆಗಳಲ್ಲಿ ಇದೂ ಒಂದು. ಇನ್ನೆರಡು ಆರ್ತುಂಗಲ್ ಕುರನಿಲಙಾಡ್‌ನಲ್ಲೂ ಕುಡಮಾಳೂರಿನ ಈಗಿನ ಸೈಂಟ್ ಮೇರಿಯ ಇಗರ್ಜಿಯಲ್ಲಿವೆ. ಇದಕ್ಕೆ ಎಂಟುನೂರು ವರ್ಷಗಳ ಹಳಮೆಯಿದೆ. ಸೈಂಟ್‌ಮೇರಿಯು ಮಾಡಿದ ಉಪಕಾರಗಳಿಗೆ ಕೃತಜ್ಞತೆಯ ಸಲುವಾಗಿ ಸ್ಥಳೀಯರಾದ ಕ್ರಿಶ್ಚಿಯನರಿಗೆ ಚೆಂಬಕಶ್ಯೇರಿ ರಾಜನು ನಿರ್ಮಿಸಿಕೊಟ್ಟ ಇಗರ್ಜಿಯಿದು. ಪೋರ್ಚ್‌ಗೀಸ್ ಮಾದರಿಯಲ್ಲಿ ಯುರೋಪಿನವರಾದ ಇಂಜಿನಿಯರುಗಳ ನೇತೃತ್ವದಲ್ಲಿ ಇದನ್ನು ನಿರ್ಮಿಸಲಾಗಿದೆ.

ವಲಿಯಪಳ್ಳಿ (ದೊಡ್ಡ ಇಗರ್ಜಿ) ಮತ್ತು ಪುದಿಯಪಳ್ಳಿ (ಹೊಸ ಇಗರ್ಜಿ) ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಎರಡು ಸಿರಿಯನ್ ಕ್ರಿಶ್ಚಿಯನ್ ದೇವಾಲಯಗಳು ಕಡುತುರ್ತಿ ಯಲ್ಲಿವೆ. ‘ವಲಿಯಪಳ್ಳಿ’ ನಿರ್ಮಾಣಗೊಂಡುದು ಕ್ರಿ.ಶ. ೬ನೆಯ ಶತಮಾನದಲ್ಲಿ. ಪುದಿಯಪಳ್ಳಿ ಹನ್ನೊಂದನೆಯ ಶತಮಾನದಲ್ಲಿ ನಿರ್ಮಾಣಗೊಂಡುದು ಎಂದು ನಂಬಲಾಗಿದೆ. ವಲಿಯಪಳ್ಳಿಯು ಶಿಲ್ಪಕಲೆಗಳಿಗೂ ಕೂಡ ಪ್ರಸಿದ್ಧವಾಗಿದೆ. ಎರಡು ಪರ್ಶಿಯನ್ ಶಿಲುಬೆ ಗಳನ್ನು ಇಗರ್ಜಿಯ ಗೋಡೆಗೆ ನೇತು ಹಾಕಲಾಗಿದೆ. ಲೋಹದ ಗಂಟೆಯನ್ನು ೧೬೪೭ರಲ್ಲಿ ಇರಿಸಲಾಗಿದೆ. ಕುರವಿಲಙಾಡ್, ಕುಡಮಾಳೂರು ಮೊದಲಾದ ದೂರದ ಸ್ಥಳಗಳಿಗೂ ಅದರ ಸದ್ದು ಕೇಳಿಸುತ್ತದೆ.

ತೆಕ್ಕುಂಕೂರು ರಾಜನು ದಾನ ಮಾಡಿದ ಒಂದು ಮನೆಯನ್ನು ಇಗರ್ಜಿಯನ್ನಾಗಿ ಮಾಡ ಲಾಗಿದೆ. ಎರಡು ಶತಮಾನಗಳಷ್ಟು ಹಳೆಯದಾದ ಇಗರ್ಜಿಯಿದು. ಬಾಲ ಯೇಸುವನ್ನು ಎತ್ತಿಕೊಂಡಿರುವ ಮೇರಿಮಾತೆಯ ಒಂದು ಇಟಾಲಿಯನ್ ಚಿತ್ರವೂ ಈ ಇಗರ್ಜಿಯಲ್ಲಿದೆ. ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ೭ ಮತ್ತು ೮ ರಂದು ವಾರ್ಷಿಕೋತ್ಸವಕ್ಕೆ ಬರುವ ಯಾತ್ರಿಕರಿಗೆ ಇದನ್ನು ತೋರಿಸಲಾಗುತ್ತದೆ. ಮೂರು ಶತಮಾನಗಳಷ್ಟು ಹಳೆಯದಾದ ಪುದುಪಳ್ಳಿಯ ಸೈಂಟ್ ಜಾರ್ಜ್ ಆರ್ಥಡೋಕ್ಸ್ ಸಿರಿಯನ್ ದೇವಾಲಯದ ಜಾಗವೂ ತೆಕ್ಕುಂಕೂರು ರಾಜನ ಕೊಡುಗೆಯೇ ಆಗಿದೆ. ವರ್ಷಂಪ್ರತಿ ನಡೆಯುವ ಉತ್ಸವ ಹಾಗೂ ಔತಣಕೂಟ ವಿಶಿಷ್ಟವಾಗಿದೆ.

ಭರಣಙಾನ ಮತ್ತು ಮಾನ್ನಾನ ಇವು ಕೋಟ್ಟಯಂ ಜಿಲ್ಲೆಯಲ್ಲಿರುವ ಕ್ರೈಸ್ತರ ಎರಡು ಪ್ರಮುಖ ಪುಣ್ಯಕೇತ್ರಗಳು. ಭರಣಙಾನದ ಸೈಂಟ್ ಮೇರಿಯ ಇಗರ್ಜಿಗೆ ಸಾವಿರ ವರ್ಷಗಳ ಇತಿಹಾಸವಿದೆ. ಇದರ ಸಮೀಪ ಪ್ರೀತಿ ಮತ್ತು ಯಾತನೆಯ ರಕ್ತಸಾಕ್ಷಿಯೆನಿಸಿದ ಸಿಸ್ಟರ್ ಅಲ್‌ಫೋನ್ಸಳ ಸಮಾಧಿಯಿದೆ. ಈ ಕಾರಣಕ್ಕಾಗಿ ದೇಶ ವಿದೇಶಗಳಿಂದ ಕ್ರೈಸ್ತ ಆರಾಧಕರು ಇಲ್ಲಿಗೆ ಬರುತ್ತಾರೆ. ದೇವರ ಸೇವಕಿಯಾಗಿ ಸಿಸ್ಟರ್ ಅಲ್‌ಪೋನ್ಸಳನ್ನು ಕ್ರೈಸ್ತರು ಪೂಜಿ ಸುತ್ತಾರೆ. ಭಕ್ತರಿಗೆ ಸಿಸ್ಟರ್ ಅನುಗ್ರಹಿಸಿದ ಬಗೆಗೆ ಅನೇಕ ದಂತಕತೆಗಳೂ ಪ್ರಚಲಿತದಲ್ಲಿವೆ. ಮಾನ್ನಾನದ ಸೈಂಟ್ ಜೋಸೆಫ್ ಮೋನೋಸ್ಟಿಕ್ ಕ್ಯಾಥೋಲಿಕರು ‘ದೇವರ ಸೇವಕ’ ಎಂದೇ ಆರಾಧಿಸುವ ಕುರಿಯಾಕೋಸ್ ಪಾದ್ರಿಯ ಅವಶಿಷ್ಟ್ಯಗಳನ್ನು ಸಂರಕ್ಷಿಸಿದ ಕಾರಣಕ್ಕಾಗಿ ಮಾನ್ನಾನದ ಈ ಸನ್ಯಾಸಿ ಮಠ (Monastery) ಅವರಿಗೆ ಪ್ರಮುಖ ಪುಣ್ಯಕ್ಷೇತ್ರವೆನಿಸಿದೆ. ಚಾವರದ ಕುರಿಯಾಕೋಸ್ ಕ್ಯಾಥೋಲಿಕ್ ಸಭೆಯಲ್ಲಿ ಇತ್ತೀಚಿಗೆ ಸ್ಥಾನ ಪಡೆದ ಮಹಾತ್ಮ ರಲ್ಲಿ ಒಬ್ಬ.

ಕ್ರೈಸ್ತರ ಪ್ರಮುಖ ಹಲವು ಆರಾಧನಾಲಯಗಳು ಹಳೆಯ ಕೊಚ್ಚಿ ಪ್ರದೇಶಗಳಲ್ಲಿಯೂ ಇವೆ. ಸ್ಥಾಪಕಯೋಹಾನ್ನನ ಹೆಸರಿನಲ್ಲಿರುವ ಕೆಲವೇ ಇಗರ್ಜಿಗಳಲ್ಲಿ ಒಂದು ಪರವೂರಿ ನಲ್ಲಿದೆ. ಇದು ಸ್ಥಾಪಿತವಾದುದು ಕ್ರಿ.ಶ. ೯ನೆಯ ಶತಮಾನದಲ್ಲಿ ಎಂದು ನಂಬಲಾಗಿದೆ. ಟಿಪ್ಪು ಆಕ್ರಮಣದ ಸಂದರ್ಭದಲ್ಲಿ ಈ ಇಗರ್ಜಿಯನ್ನು ನಾಶ ಮಾಡಿದ್ದ. ಬಳಿಕ ಇದನ್ನು ಪುನರ್ನಿರ್ಮಿಸಲಾಯಿತು. ಮೂನಾಂಬದ ಪಳ್ಳಿಪುರ ಎಂಬ ಸ್ಥಳದಲ್ಲಿ ‘ಮಞ್ಮಾತಾಪಳ್ಳಿ’ (ಮಂಜಿನಮಾತೆ ಇಗರ್ಜಿ) ಎಂಬ ಹೆಸರಿನ ದೇವಾಲಯವಿದೆ. ಟಿಪ್ಪು ಸುಲ್ತಾನನು ಸೈನಿಕ ಕಾರ್ಯಾಚರಣೆಗೆ ಬಂದಾಗ ಈ ಪ್ರದೇಶವೆಲ್ಲ ಮಂಜಿನಿಂದ ಆವರಿಸಿತ್ತು. ಮಂಜಿನಲ್ಲಿ ಮರೆಮಾಡಿ ರಕ್ಷಿಸಿದ್ದು ಈ ಮಾತೆಯ ಶಕ್ತಿಯಿಂದ ಎಂಬ ಕಾರಣಕ್ಕಾಗಿ ‘ಮಞ್ಮಾತಾಪಳ್ಳಿ’ ಎಂಬ ಹೆಸರಿನಿಂದ ಪ್ರಚಾರ ದೊರೆಯಿತು. ಕಾತ್ತೂರಿನ ಸೈಂಟ್ ಮೇರಿಯ ಇಗರ್ಜಿ ೧೮ನೆಯ ಶತಮಾನದ ಆರಂಭದಲ್ಲಿ ಸ್ಥಾಪನೆಯಾಯಿತು. ಕೊಚ್ಚಿಯ ರಾಜ ಶಕ್ತನ್‌ತಂಬುರಾನನನ್ನು ಸಂರಕ್ಷಣೆ ಮಾಡಿದ್ದಕ್ಕಾಗಿ ಕೃತಜ್ಞತೆಯ ಕುರುಹಾಗಿ ಆತ ನೀಡಿದ ಕಂಚಿನ ದೀಪ ಈಗಲೂ ಈ ಇಗರ್ಜಿಯಲ್ಲಿದೆ.

ಸಮುದ್ರ ಮಟ್ಟದಿಂದ ೨೦೦೦ ಅಡಿ ಎತ್ತರದಲ್ಲಿರುವ ಮಲಯಾಟ್ಟೂರು ಬೆಟ್ಟದ ಮೇಲೆ ಇರುವ ಸೈಂಟ್ ಥೋಮಸ್ ಇಗರ್ಜಿ ಕೇರಳದ ಕ್ರಿಶ್ಚಿಯನ ಪುಣ್ಯಕ್ಷೇತ್ರಗಳಲ್ಲಿ ಗಮನಾರ್ಹವಾಗಿದೆ. ತಮಿಳುನಾಡಿಗೆ ಹೋಗುವಾಗ ಮಾರ್ಗ ಮಧ್ಯೆ ಸೈಂಟ್ ಥೋಮಸ್ ಇಲ್ಲಿಗೆ ಭೇಟಿ ನೀಡಿದುದರ ನೆನಪಿಗಾಗಿ ಇಲ್ಲಿ ಪ್ರತಿಮೆಯನ್ನು ಈ ಬೆಟ್ಟದ ಕಣಿವೆಯಲ್ಲಿ ಸ್ಥಾಪಿಸಲಾಗಿದೆ. ‘ಪೊನ್ನಿನ್‌ಕುರಶು ಮುತ್ತಪ್ಪನ್’ (ಹೊನ್ನ ಶಿಲುಬೆಯ ಮುತ್ತಪ್ಪ) ಎಂದೇ ಈ ಇಗರ್ಜಿಯ ದೇವರ ಹೆಸರು.

ಎರ್ನಾಕುಳಂ ಜಿಲ್ಲೆಯ ಕೋಲಂಚೇರಿ ಎಂಬ ಸ್ಥಳದಲ್ಲಿ ಸೈಂಟ್ ಪೀಟರನ ಹಾಗೂ ಸೈಂಟ್ ಪಾಲ್‌ನ ಹೆಸರಿನಲ್ಲಿರುವ ಆರ್ಥೊಡೋಕ್ಸ್ ಸಿರಿಯನ್ ಇಗರ್ಜಿಯು ಕ್ರಿ.ಶ. ೭ನೆಯ ಶತಮಾನದಲ್ಲಿ ನಿರ್ಮಾಣಗೊಂಡುದು. ಆ ನಂತರ ಅದನ್ನು ಅತ್ಯಾಧುನಿಕವಾಗಿ ನವೀಕರಿಸಲಾಗಿದೆ. ಕ್ರೈಸ್ತರ ಪ್ರಾಚೀನ ಕೇಂದ್ರವಾದ ಅಂಗಮಾಲಿಯಲ್ಲೂ ಅನೇಕ ಇಗರ್ಜಿ ಗಳಿವೆ. ಸೈಂಟ್ ಹೋರ್ವಿಂಸ್ ಇಗರ್ಜಿ ಕ್ರಿ.ಶ. ೫ ನೆಯ ಶತಮಾನದಲ್ಲಿ ಸ್ಥಾಪಿಸಿದ್ದೆಂದು ನಂಬಲಾಗಿದೆ. ಕೊನೆಯ ಸಿರಿಯನ್ ಬಿಷಪ್ ಮಾರ್ ಎಬ್ರಾಹಾಂ ೧೫೯೭ರಲ್ಲಿ ಇಲ್ಲಿ ಮರಣ ಹೊಂದಿದನು. ಆತನ ಸಮಾಧಿಯೂ ಈ ಇಗರ್ಜಿಯಲ್ಲಿದೆ. ಕುಂಬಳದ ಕಣ್ಣಾಮಾಲಿ ಎಂಬ ಸ್ಥಳದಲ್ಲಿರುವ ಕ್ಯಾಥೋಲಿಕ್ ಇಗರ್ಜಿಯಲ್ಲಿ ಎಲ್ಲಾ ವರ್ಷವೂೊ ಮಾರ್ಚ್ ೧೯ನೆಯ ತಾರೀಕಿನಂದು ಹಪ್ಪಳ, ಪಾಯಸ, ಹಣ್ಣು ಮೊದಲಾದ ಸಸ್ಯಾಹಾರಗಳ ಔತಣವನ್ನು ಏರ್ಪಡಿಸಲಾಗುತ್ತದೆ. ಎರ್ನಾಕುಳಂನ ಪಶ್ಚಿಮ ದಿಕ್ಕಿಗಿರುವ ವಲ್ಲಾರ್‌ಪಾಡಂ ಎಂಬುದು ಪ್ರಸಿದ್ಧವಾದ ಒಂದು ತೀರ್ಥಕ್ಷೇತ್ರ. ‘ವಲ್ಲಾರ್‌ಪಾಡತ್ತಮ್ಮ’ ಎಂಬ ಹೆಸರಿನಿಂದ ಪ್ರಸಿದ್ಧ ವಾದ ಇಲ್ಲಿನ ಕನ್ನೆಮೇರಿಯು ಪ್ರತಿಮೆ ಭಕ್ತ ಜನರನ್ನು ಬಿರುಗಾಳಿ, ಮಳೆಗಳಿಂದ ರಕ್ಷಿಸುತ್ತಾಳೆ ಎಂಬ ನಂಬಿಕೆಯಿದೆ. ಪಿರವದಲ್ಲಿರುವ ಸೈಂಟ್‌ಮೇರಿಯ ಹಳೆಯ ಆರ್ಥೋಡೋಕ್ಸ್ ಇಗರ್ಜಿ ಕೇರಳದ ಪ್ರಮುಖ ಆರ್ಥೋಡೋಕ್ಸ್ ದೇವಾಲಯಗಳಲ್ಲಿ ಒಂದು. ಯೇಸುಕ್ರಿಸ್ತನು ಜನಿಸುತ್ತಾನೆ ಎಂಬ ಸೂಚನೆ ಸಿಕ್ಕಾಗ ಬೆತ್ಲೆಹೇಮಿಗೆ ಹೊರಟು ನಿಂತ ಪಿರವರದ ಕುಶ ವಂಶದ ರಾಜರು ಈ ಕ್ರೈಸ್ತ ದೇವಾಲಯವನ್ನು ಕಟ್ಟಿಸಿದರು ಎಂಬುದು ನಂಬಿಕೆ.

ಬೋಳ್‌ಗಾಟ್ಟಿ ತುರುತ್ತಿನ (ಪೊತ್ತಿಕ್ಕರ) ಮುಳಪ್ರಕ್ಕಾಡ್ ಸೈಂಟ್ ಸೆಬಾಸ್ಟಿಯನ್ ಇಗರ್ಜಿಯನ್ನು ೧೮೪೨ರಲ್ಲಿ ಸ್ಥಾಪಿಸಲಾಯಿತು. ಕೋರ್‌ಪ್ಪಸ್ ಕ್ರಿಶ್ಚಿಯನರಿಗೆ ಸಂಬಂಧಿಸಿದ ಈ ಇಗರ್ಜಿಯು ಉತ್ಸವ ಆಚರಣೆಗಳಿಗೆ ಪ್ರಸಿದ್ಧವಾಗಿದೆ. ಸೈಂಟ್ ಥೋಮಸ್‌ನ ಹೆಸರಿನಲ್ಲಿ ಪರವೂರಿನಲ್ಲಿರುವ ಪ್ರಾಚೀನ ಕೋಟೆಕಾವ್ ಇಗರ್ಜಿ ಮೊದಲು ಒಂದು ಹಿಂದೂ ದೇವಾಲಯವಾಗಿತ್ತಂತೆ. ಬಿಷಪ್ ರೋಸನ್ನು ಸಮಾಧಿ ಮಾಡಿದುದೂ ಇದೇ ಸ್ಥಳದಲ್ಲಿ. ೧೩ನೆಯ ಶತಮಾನದಲ್ಲಿ ಸ್ಥಾಪಿಸಿದ್ದೆಂದು ಹೇಳಲಾಗುವ ಮುಳತ್ತುರುತ್ತಿಯ ಆರ್ಥೋ ಡೋಕ್ಸ್ ಸಿರಿಯನ್ ಇಗರ್ಜಿಯಲ್ಲಿ ಯಾಕೋಬಾಯ್ ಹಾಗೂ ಸೈಂಟ್ ಥೋಮಸ್ ಕ್ರಿಶ್ಚಿಯನರು ಪರಸ್ಪರ ವೈಮನಸ್ಸುಗಳನ್ನು ಮರೆತು ಒಂದುಗೂಡಲು ಪ್ರತಿಜ್ಞಾಬದ್ಧ ರಾಗಿದ್ದರು.

ಪ್ರತಿ ವರ್ಷವೂ  ಅಕ್ಟೋಬರ್ ೧ನೇ ತಾರೀಕಿನಂದು ಕ್ರೈಸ್ತ ರಾಜನ ಔತಣವನ್ನು ಆಚರಿಸುವ ಸಾಂತಾಕ್ರೂಸ್ ಕ್ಯಾಥಿಡ್ರಲ್ ಮಟ್ಟಾಂಚೇರಿಯಲ್ಲಿರುವ ಒಂದು ಅಸಾಮಾನ್ಯ ಆರಾಧನಾ ಕೇಂದ್ರವಾಗಿದೆ. ೧೬೫೩ ಜನವರಿ ೩ನೇ ದಿನಾಂಕದಂದು ‘ಕೂನನ್‌ಕುರಿಶು ಸತ್ಯ’ ನಡೆದುದು ಇದೇ ಇಗರ್ಜಿಯ ಹೆಸರಿನಲ್ಲಿ. ಈ ಶಿಲುಬೆಗೆ ಕಟ್ಟಿರುವ ನೀಳವಾದ ಒಂದು ಹಗ್ಗವನ್ನು ಹಿಡಿದುಕೊಂಡು ಮಟ್ಟಾಂಚೇರಿಯ ಸಿರಿಯನ್ ಕ್ರಿಶ್ಚಿಯನರು ಇನ್ನು ಮುಂದೆ ಎಂದಿಗೂ ಕ್ಯಾಥೋಲಿಕ್ ಆರ್ಚ್ ಬಿಷಪರನ್ನು ಅನುಸರಿಸುವುದನ್ನಾಗಲಿ ಜೈಸ್ಯೂಟರಿಗೆ ತಲೆ ಬಾಗುವುದನ್ನಾಗಲಿ ಮಾಡಲಾರೆವು ಎಂದು ಸತ್ಯ ಪ್ರತಿಜ್ಞೆ ಮಾಡಿದ್ದರು.  ಕೂನನ್‌ಕುರಿಶು ಸ್ಥಾಪಿಸಿದ ಚಿಕ್ಕ ಮಂದಿರ (Chapel) ಪ್ರಮುಖ ವ್ಯಾಪಾರ ಕೇಂದ್ರವಾದ ಮಟ್ಟಾಂಚೇರಿ ಪಟ್ಟಣದ ಹೃದಯ ಭಾಗದಲ್ಲಿ ಉರಿಯುವ ಮೇಣದ ಬತ್ತಿಗಳ ನಡುವಿರುವ ಬೀದಿಯಲ್ಲಿ ನೆಲೆ ನಿಂತಿದೆ. ಈ ದೇಶದಲ್ಲಿ ಎಲ್ಲೂ ಕಾಣಲು ಸಿಗದ ಒಂದು ಅಪೂರ್ವ ದೃಶ್ಯವಿದು.

ಇಳಂಕುನ್ನಪ್ಪುೞ ಗ್ರಾಮದ ಓಚ್ಚಂದುರುತ್ತಿಯಲ್ಲಿರುವ ದಿವ್ಯದೂತ ಶಿಲುಬೆ ಇಗರ್ಜಿಯು ಪ್ರಸಿದ್ಧವಾಗಿದೆ. ನೀರಿನಲ್ಲಿ ತೇಲುತ್ತಿರುವ ಮರದ ಶಿಲುಬೆಯನ್ನು ನೋಡಿದ ಈಳವ ಮಹಿಳೆಯೊಬ್ಬಳು ಅದನ್ನೊಯ್ದು ರಕ್ಷಿಸಿದಳು. ಇದನ್ನು ತಿಳಿದ ಜೋನ್ ಎಂಬ ಒಬ್ಬ ಪೋರ್ಚುಗೀಸ್ ಕ್ಯಾಪ್ಟನ್ ಆ ಶಿಲುಬೆಯನ್ನು ಖರೀದಿಸಿ ‘ದಿವ್ಯಾದ್ಭುತ ಶಿಲುಬೆ’ (Cruiz milagres- ಪೋರ್ಚ್‌ಗೀಸ್ ಭಾಷೆಯಲ್ಲಿ) ಎಂದು ಹೆಸರಿಸಿ ನಿರ್ಮಾಣ ಹಂತದಲ್ಲಿದ್ದ ಇಗರ್ಜಿಯೊಂದಕ್ಕೆ ಕೊಡುಗೆಯಾಗಿ ನೀಡಿದ ಎಂಬುದು ಕತೆ. ಮುಖ್ಯ ಬಲಿಪೀಠದ ನಡುವಿನಲ್ಲಿ ಈಗಲೂ ಆ ದಿವ್ಯಾದ್ಭುತ ಶಿಲುಬೆಯನ್ನು ಕಾಣಬಹುದು.

ಚಾವಕ್ಕಾಡ್ ತಾಲೂಕಿನ ಪಾಲಯೂರ್ ಎಂಬ ಸ್ಥಳದಲ್ಲಿ ಸೈಂಟ್ ಥೋಮಸ್ ಸ್ಥಾಪಿಸಿದ್ದೆಂದು ಹೇಳಲಾಗುವ ಇಗರ್ಜಿ ಕೇರಳದ ಪ್ರಾಚೀನ ಇಗರ್ಜಿಗಳಲ್ಲಿ ಒಂದು. ಎಲ್ಲಾ ಗುಂಪಿನ ಕ್ರೈಸ್ತ ಜನರು ಇಲ್ಲಿಗೆ ಬರುತ್ತಾರೆ. ಟಿಪ್ಪು ಸುಲ್ತಾನನ ಆಕ್ರಮಣದಿಂದ ಭೌತಿಕವಾಗಿ ನಾಶವಾದ ಈ ಇಗರ್ಜಿಯನ್ನು ನಂತರ ಪುನರ್ ನಿರ್ಮಿಸಲಾಯಿತು. ಕ್ರಿ.ಶ. ೫೨ ರಲ್ಲಿ ಸೈಂಟ್ ಥೋಮಸ್ ಕೇರಳದ ತೀರದಲ್ಲಿ ಬಂದು ಇಳಿದ ಸ್ಥಳದಲ್ಲಿ ರೋಮ್‌ನ ಸೈಂಟ್ ಪೀಟರ್ ಕ್ಯಾಥಿಡ್ರಲ್‌ನ ಮಾದರಿಯಲ್ಲಿ ಮಾರ್ತೋಮಾ ಪೋಂಡಿಫಿಕಲ್ ಇಗರ್ಜಿಯನ್ನು ನಿರ್ಮಿಸಲಾಯಿತು. ಸೈಂಟ್ ಥೋಮಸ್‌ನ ಆಗಮನದ ೧೯೦೦ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ೧೯೫೩ರಲ್ಲಿ ಈ ಇಗರ್ಜಿಯನ್ನು ಪವಿತ್ರೀಕರಿಸಲಾಯಿತು. ಆ ಮೂಲಕ ಇದೊಂದು ಪುಣ್ಯಸ್ಥಳವಾಗಿ ರೂಪುಗೊಂಡಿತು. ಯೇಸುಕ್ರಿಸ್ತನ ಪವಿತ್ರ ಗಾಯದಲ್ಲಿ ಬೆರಳಾಡಿಸುವ ಭಾಗ್ಯ ಪಡೆದ ಸೈಂಟ್ ಥೋಮಸ್‌ನ ಪವಿತ್ರವಾದ ಕೈಯನ್ನು ಇಲ್ಲಿ ಸಮಾಧಿ ಮಾಡಲಾಗಿದೆ. ಒಂದು ಪವಿತ್ರ ತೀರ್ಥಕ್ಷೇತ್ರವಾಗಿ ಪೋಪ್‌ನ ಅಂಗೀಕಾರವು ಈ ಆರಾಧನಾಲಯಕ್ಕೆ ಲಭ್ಯವಾಗಿದೆ.