ವರ್ಣಮಯವಾದ ಉತ್ಸವಗಳ ಹಾಗೂ ಆಚರಣೆಗಳ ಕಾರಣದಿಂದಲೂ ಕೇರಳಕ್ಕೆ ಪ್ರಾಮುಖ್ಯವಿದೆ. ಕೆಲವು ಆಚರಣೆಗಳಿಗಂತೂ ಸುದೀರ್ಘವಾದ ಇತಿಹಾಸವಿದೆ. ಪರಂಪರೆಯಿದೆ. ಮೇಲ್ನೋಟಕ್ಕೆ ನೋಡುವಾಗ ಕೇರಳವು ಆಧುನಿಕವಾಗಿ ಬೆಳೆದು ನಿಂತಿರುವುದನ್ನು ಕಾಣಬಹುದು. ಆದರೆ ಆಂತರ್ಯದಲ್ಲಿ ಅದು ಅನೇಕ ಧಾರ್ಮಿಕ ನಂಬಿಕೆಗಳ ಸಂಪ್ರದಾಯಗಳ ಆಚರಣೆಗಳ ನೆಲೆವೀಡಾಗಿದೆ. ಎಡಪಂಥೀಯ ಚಿಂತನೆಯುಳ್ಳ ಜನರು, ಜನನಾಯಕರು ಲೌಕಿಕವಾಗಿ ಪ್ರಗತಿಪರರು, ವಿಚಾರಶೀಲರು, ಜನಪರ ಕಾರ್ಯಕ್ರಮಗಳ ಹರಿಕಾರರು. ಆದರೆ ಅವರ ಖಾಸಗೀ ಬದುಕು ಕೆಲವು ಸಂಪ್ರದಾಯಗಳ, ಧಾರ್ಮಿಕ ನಂಬಿಕೆಗಳ ಚೌಕಟ್ಟಿನಲ್ಲಿ ಬಂಧಿತವಾಗಿರುತ್ತದೆ. ಈ ಕಾರಣಕ್ಕಾಗಿಯೇ ಅತ್ಯಂತ ಪ್ರಗತಿಪರ ಸಂಸ್ಥಾನ ವೆಂದು ಕೀರ್ತಿ ಪಡೆದ ಕೇರಳದಲ್ಲಿ ನಂಬಿಕೆಗಳೇ ಆಧಾರವಾಗಿರುವ ಅನೇಕ ವಾಮಾಚಾರಗಳಿವೆ. ಭಕ್ತಿಯೇ ನೆಲೆಯೂರಿರುವ ಆರಾಧನಾಲಯಗಳಿವೆ. ಜ್ಯೋತಿಶ್ಯಾದಿ ಶಾಸ್ತ್ರಗಳಿಗೆ, ಮಾಟ ಮಂತ್ರ ಮೊದಲಾದ ಆಚರಣೆಗಳಿಗೆ ಪ್ರಾಶಸ್ತ್ಯವಿದೆ.

ಕೇರಳದ ಹಿಂದೂ ಮತೀಯರ ಎಲ್ಲಾ ಮನೆಗಳಲ್ಲಿ ಸಂಜೆ ವೇಳೆಗೆ ಅಂಗಳ ಸಾರಿಸಿ ಮನೆಯ ಮುಂಭಾಗ ದೀಪ ಉರಿಸಿ ಇರಿಸುವ ಪದ್ಧತಿಯಿದೆ. ಸಂಜೆೆ ವೇಳೆಯ ಈ ದೃಶ್ಯ ಸಂಪ್ರದಾಯ ಎಂಬ ನೆಲೆಯಲ್ಲಿಯೇ ಉಳಿದುಕೊಂಡು ಬಂದಿದೆ. ಕೇರಳೀಯರು ಕರ್ಕಾಟಕ ಮಾಸ (ಜುಲೈ-ಆಗಸ್ಟ್)ದಲ್ಲಿ ವಿಶಿಷ್ಟ ಆಚರಣೆಗಳನ್ನು ಆಚರಿಸುತ್ತಾರೆ. ಇದನ್ನು ‘ರಾಮಾಯಣಮಾಸ’ ಎಂದೂ ಕರೆಯುತ್ತಾರೆ. ಈ ತಿಂಗಳಲ್ಲಿ ಅವರು ತುಂಜತ್ತು ಎಳುತ್ತಚ್ಚನ್‌ನ ಆಧ್ಯಾತ್ಮ ರಾಮಾಯಣವನ್ನು ಮನೆ ಮನೆಗಳಲ್ಲಿ, ದೇವಾಲಯಗಳಲ್ಲಿ ಪಾರಾಯಣ ಮಾಡುತ್ತಾರೆ. ಮನೆಯ ಹಿರಿಯರು ರಾಮಾಯಣವನ್ನು ದೀಪದ ಮುಂದೆ ಕುಳಿತು ಹಾಡುವ ಅವರ ಜೊತೆಗೆ ಎಳೆಯರೂ ಕುಳಿತು ಹಾಡುವ ಸಂಪ್ರದಾಯ ಇಂದಿಗೂ ಇದೆ. ಹದಿನೇಳನೆಯ ದಿನಕ್ಕೆ ವಾಲಿವಧೆ ಪ್ರಸಂಗ ಮುಗಿಯಲೇ ಬೇಕು. ಇದು ಸಂಪ್ರದಾಯ. ಇಂತಹ ಆಚರಣೆಗಳು ಕೇವಲ ನಂಬಿಕೆಯ ಕಾರಣಕ್ಕಾಗಿ ಉಳಿದಿದ್ದರೂ ಸಹ ಇದರಿಂದ ಸಮಾಜದ ಅರಿವನ್ನು ಹೆಚ್ಚಿಸುವ ಉದ್ದೇಶವೂ ಇದೆ. ಈ ಆಚರಣೆಯಿಂದಾಗಿ ಕೇರಳೀಯರು ಶಾಲೆಗಳಿಗೆ ಹೋಗದವರಿಗೂ ಸಹ ಆಧ್ಯಾತ್ಮ ರಾಮಾಯಣವನ್ನು ಕರಗತ ಮಾಡಿ ಕೊಂಡಿರುತ್ತಾರೆ. ಇಂತಹ ಅನೇಕ ಆಚರಣೆಗಳ ಜೊತೆಗೆ ಅನೇಕ ಹಬ್ಬಗಳನ್ನು ಆಚರಿಸುವರು. ಭಾರತದಾದ್ಯಂತ ಆಚರಿಸುವ ದೀಪಾವಳಿ ಮೊದಲಾದವುಗಳಲ್ಲದೆ ಓಣಂ, ವಿಷು, ತಿರುವಾದಿರ ಮೊದಲಾದವು ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿವೆ. ಇವು ಹಿಂದೂ ಮತೀಯರ ಹಬ್ಬಗಳಾದರೂ ಕೇರಳದ ಎಲ್ಲಾ ಮತೀಯರು ಇವುಗಳನ್ನು ಶ್ರದ್ಧೆಯಿಂದ ಆಚರಿಸುತ್ತಾರೆ.

ಓಣಂ

ಓಣಂ ಕೇರಳೀಯರ ಹಬ್ಬಗಳಲ್ಲಿಯೇ ಅತ್ಯಂತ ಪ್ರಮುಖವಾದ ಹಬ್ಬ. ಇದನ್ನು ಸಿಂಹಮಾಸ* (ಚಿಙಮಾಸ)ದಲ್ಲಿ ಅಂದರೆ ಆಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಶುಕ್ಲ ಪಕ್ಷದ ಶ್ರವಣ ನಕ್ಷತ್ರದ ದಿನವೇ ಓಣಂ*. ಶ್ರಾವಣದ ತದ್ಭವವೇ ಓಣಂ. ಓಣಂಗೆ ಸಂಬಂಧಿಸಿದಂತೆ ಅನೇಕ ದಂತಕತೆಗಳಿವೆ. ಅವುಗಳಲ್ಲಿ ಮಹಾಬಲಿಗೆ  ಸಂಬಂಧಿಸಿದ್ದು ಬಹಳ ಮುಖ್ಯವಾದುದು. ಸಮೃದ್ದಿಯ ಕಾಲದಲ್ಲಿ ಕೇರಳವನ್ನು ಆಳಿದ ಮಹಾಬಲಿಯನ್ನು ವಿಷ್ಣು ವಾಮನಾವತಾರವನ್ನು ತಾಳಿ ತುಳಿದು ಪಾತಾಳಕ್ಕೆ ತಳ್ಳಿದ. ವರ್ಷಕ್ಕೊಮ್ಮೆ ಕೇರಳವನ್ನು ಸಂದರ್ಶಿಸುವ ಅವಕಾಶವನ್ನು ವಿಷ್ಣು ಮಹಾಬಲಿಗೆ ಅನುಗ್ರಹಿಸಿದ ಎಂಬುದು ಕತೆ. ಹಾಗೆ ತನ್ನ ಪ್ರಜೆಗಳನ್ನು ನೋಡುವ ಸಲುವಾಗಿ ಓಣಂ ದಿನ ಬರುತ್ತಾನೆಂದು ಪ್ರತೀತಿ. ಉತ್ತರ ಕೇರಳದಲ್ಲಿ ಮಾಮಾಂಕಂ ಮಹೋತ್ಸವಕ್ಕೂ ಓಣಂಗೂ ಸಂಬಂಧ ಕಲ್ಪಿಸಲಾಗುತ್ತದೆ. ಓಣಂನ್ನು ಕೊಯಿಲಿನ ಹಬ್ಬ ಎಂದೂ ಹೇಳುವುದಿದೆ.

ಮಹಾಬಲಿ ಎಂಬೊಬ್ಬ ಅರಸ ಕೇರಳವನ್ನಾಳುತ್ತಿದ್ದನೆಂದೂ ಈತನ ಕಾಲದಲ್ಲಿ ಕೇರಳವು ಸಂಪತ್ಸಮೃದ್ಧವಾಗಿತ್ತೆಂದು ಐತಿಹ್ಯ. ಈತನ ನೆನಪಿಗಾಗಿ ಓಣಂನ್ನು ಆಚರಿಸಲಾಗುತ್ತದೆ. ವಿಷ್ಣುವು ವಾಮನಾವತಾರವನ್ನೆತ್ತಿ ಪಾತಾಳಕ್ಕೆ ತುಳಿದ ಮಹಾಬಲಿಯ ಜೊತೆಗೆ ಕಾಲಾನು ಕ್ರಮದಲ್ಲಿ ಅಭೇದವಾಗಿ ಕಲ್ಪಿಸಿರುವ ಸಾಧ್ಯತೆಯಿದೆ. ತಮಿಳುನಾಡಿನಲ್ಲಿ ‘ಮಹಾಬಲಿಪುರಂ’ ಎಂಬ ಹೆಸರಿನ ಊರು ಇದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ತುಳುನಾಡಿನಲ್ಲಿ ಬಲಿಯನ್ನು ನರಕಚತುರ್ದಶಿಯ ಸಂದರ್ಭದಲ್ಲಿ ಪೂಜಿಸಲಾಗುತ್ತದೆ. ದೀಪಾವಳಿಗೂ ಬಲಿಗೂ ಸಂಬಂಧ ಇರುವುದು ತುಳುನಾಡಿನಲ್ಲಿ ಮಾತ್ರ. ಕರ್ನಾಟಕದ ಬೇರೆ ಪ್ರದೇಶ ಗಳಲ್ಲೆಲ್ಲೂ ದೀಪಾವಳಿಯ ಸಂದರ್ಭದಲ್ಲಿ ಬಲಿಯು ಪೂಜೆಗೊಳ್ಳುವುದಿಲ್ಲ. ತುಳುನಾಡಿನಲ್ಲಿ ಬಲಿ ಜಾತಿಯಲ್ಲಿ ಬಿಲ್ಲವ. ಹಾಗಾಗಿ ಆತ ಸಾಮಾಜಿಕವಾಗಿ ಅಸ್ಪೃಶ್ಯ. ಬ್ರಾಹ್ಮಣರು ಬಲಿಯನ್ನು ಸಂಕೇತಿಸುವ ಹಾಲೆ ಮರದ ಕವಲನ್ನು ಅಂಗಳದಲ್ಲಿ ನೆಟ್ಟು ಪೂಜೆ ಸಲ್ಲಿಸುವುದಿಲ್ಲ. ಕೆಲವರು ಸಾಂಕೇತಿಕವಾಗಿ ಬಾಳೆಯ ಕಂದು ನೆಟ್ಟು ಪೂಜೆ ಸಲ್ಲಿಸುವುದೂ ಇದೆ. ಆದರೆ ಬ್ರಾಹ್ಮಣೇತರರು ಹಾಲೆ ಮರದ ಕವಲನ್ನು ಅಂಗಳದಲ್ಲಿ ನೆಟ್ಟು ಮೂರು ದಿನ ಪೂಜೆ ಸಲ್ಲಿಸುತ್ತಾರೆ. ಆದರೆ ಬಲಿಯೇಂದ್ರನನ್ನು ನಿಲ್ಲಿಸುವುದು ತುಳಸಿ ಕಟ್ಟೆಯಿಂದಲೂ ದೂರ.

ಭೂಮಿಯನ್ನು ಮಾರಿಯಾದರೂ ಓಣಂ ಔತಣ ಮಾಡಬೇಕೆಂದುಬು  ಗಾದೆ ಮಾತು. ಓಣಂನ ಅಧಿದೇವತೆಯಾದ ಓಣತ್ತಪ್ಪನ್ ಪೂಜೆಯನ್ನು ವಿಜೃಂಭಣೆಯಿಂದ ಮಾಡುತ್ತಾರೆ. ಓಣಂನ ಹತ್ತು ದಿವಸ ಮೊದಲೇ ಅಂದರೆ ಹಸ್ತ ನಕ್ಷತ್ರದಂದು ಪ್ರಾರಂಭವಾಗುತ್ತದೆ. ಮನೆಯ ಮುಂಭಾಗದಲ್ಲಿ ಪ್ರತಿದಿನ ಸೆಗಣಿ ಸಾರಿಸಿ ರಂಗೋಲಿ ಬರೆದು ವಿಧ ವಿಧವಾದ ಹೂಗಳಿಂದ ಪೂಕಳಂ ಹಾಕುತ್ತಾರೆ. ಶ್ರವಣ ನಕ್ಷತ್ರದ ದಿನ ಬೆಳಗ್ಗೆ ಅಂಗಳದಲ್ಲಿ ಮಣ್ಣಿನಿಂದ ಮಾಡಿದ ವಾಮನಮೂರ್ತಿಯನ್ನು ಪ್ರತಿಷ್ಠಾಪಿಸುವರು.

ಓಣಮನ್ನು ಕುರಿತು ಪ್ರಾಚೀನ ಸಾಹಿತ್ಯ ಹಾಗೂ ಶಾಸನಗಳಲ್ಲಿ ವಿವರಗಳಿವೆ. ಮಳೆ ಹೋದ ಬಳಿಕ ಶ್ರಾವಣ ಮಾಸದಲ್ಲಿ ಮದುರೈಯಲ್ಲಿ ಓಣಮನ್ನು ಆಚರಿಸಲಾಗುತ್ತಿತ್ತು ಎಂದು ಮಾಂಕುಡಿ ಮರುತನಾರ್‌ನ ‘ಮದುರೈಕಾಂಚಿ’ ಎಂಬ ಸಂಘಂ ಕಾಲದ ತಮಿಳು ಗ್ರಂಥದಲ್ಲಿ ಹೇಳಿದೆ. ಮಹೋದಯಪುರಂನ ಕುಲಶೇಖರ ರಾಜರುಗಳ ಕಾಲದಲ್ಲಿ (ಕ್ರಿ.ಶ. ೮೦೦-೧೧೦೨) ತೃಕ್ಕಾಕ್ಕರದಲ್ಲಿ ಓಣಮನ್ನು ರಾಜಕೀಯ ಆಡಂಬರಗಳೊಡನೆ ಆಚರಿಸಲಾಗುತ್ತಿತ್ತು. ತೃಕ್ಕಾಕ್ಕರದ ದೇವಸ್ಥಾನದಲ್ಲಿ ವಾಮನಮೂರ್ತಿಯ ಪ್ರತಿಷ್ಠೆಯಿರುವ ಕಾರಣಕ್ಕಾಗಿ ವೈಷ್ಣವ ಪಂಥಕ್ಕೆ ಉತ್ತೇಜನ ನೀಡುವುದರಲ್ಲಿಯೂ ಇದು ಮಹತ್ವ ಪಡೆ ಯುತ್ತದೆ. ಇಪ್ಪತ್ತೆಂಟು ದಿವಸಗಳ ವರೆಗೆ ಸುದೀರ್ಘವಾದ ಓಣಂ ಆಚರಣೆಯನ್ನು ಕುರಿತು ವಿವರಿಸುವ ಶಾಸನವೊಂದು ತೃಕ್ಕಾಕ್ಕರಯಲ್ಲಿ ಲಭಿಸಿದೆ. ಬರ್ತಲೋಮಿಯೋ ಎಂಬ ವಿದೇಶ ಪ್ರವಾಸಿ ಕೂಡಾ ತನ್ನ ಬರೆಹಗಳಲ್ಲಿ ಕೇರಳದ ಓಣಂ ಆಚರಣೆಯನ್ನು ಕುರಿತು ಬರೆದಿದ್ದಾನೆ.

೧೯೬೧ರಲ್ಲಿ ಕೇರಳ ಸರಕಾರವು ಓಣಂಮನ್ನು ನಾಡಹಬ್ಬವಾಗಿ ಆಚರಿಸಲು ತೀರ್ಮಾ ನಿಸಿತು. ಆಚರಣೆ ಔಪಚಾರಿಕವಾಗಿ ಹಸ್ತ ನಕ್ಷತ್ರದ ದಿನದಿಂದು ಆರಂಭವಾಗುತ್ತದೆ. ಕೊಚ್ಚಿ ಯಲ್ಲಿ ರಾಜರ ಆಡಳಿತಾವಧಿಯಲ್ಲಿಯೇ ಓಣಂನ ಆಚರಣೆಗಳು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಈಗ ಸರಕಾರದ ನೇತೃತ್ವದಲ್ಲಿಯೇ ಆಚರಣೆಗಳು ನಡೆಯುತ್ತವೆ. ಓಣಂ ಆರಂಭವಾದರೆ ಮನೆಗಳ ಮುಂದೆ ಹೂಗಳಿಂದ ಅಲಂಕರಿಸುವ ಹೂವಿಗಾಗಿ ಮಕ್ಕಳು ಅಲೆದಾಡುವ ತೃಕ್ಕಾಕ್ಕರಪ್ಪನ ವಿಗ್ರಹವನ್ನು ಪೂಜಿಸುವ ದೃಶ್ಯ ಸಾಮಾನ್ಯ. ಮಹಿಳೆಯರು, ಮಕ್ಕಳು ಸೇರಿ ಹೂಗಳಿಂದ ರಂಗೋಲಿಯನ್ನು ಹಾಕುವರು. ಇದನ್ನು ‘ಪೂಕಳಂ’ ಎಂದು ಕರೆಯುತ್ತಾರೆ. ಉತ್ತರಾಷಾಢ, ಶ್ರಾವಣ ಎಂಬೀ ದಿನಗಳಲ್ಲಿ ಪ್ರಮುಖವಾಗಿ ಇದನ್ನು ಮಾಡಲಾಗುತ್ತದೆ. ಎಲ್ಲಾ ಮನೆಗಳಲ್ಲೂ ವಿಶೇಷ ಔತಣವನ್ನು ಏರ್ಪಡಿಸಲಾಗುತ್ತದೆ.

ಓಣಂಗೆ ಕೆಲವು ಸಾಮಾಜಿಕ ಆಚರಣೆಗಳೂ ಇವೆ. ಮನೆಮಂದಿಯೆಲ್ಲ ಒಂದುಗೂಡು ವುದಕ್ಕೆ ಇದೊಂದು ಸದವಕಾಶ. ಕುಟುಂಬದ ಸದಸ್ಯರೆಲ್ಲರೂ ಓಣಂ ಆಚರಣೆಗಾಗಿ ಎಲ್ಲಿದ್ದರೂ ಒಂದೆಡೆ ಸೇರುತ್ತಾರೆ. ಪರಸ್ಪರ ಕೊಡುಗೆಗಳನ್ನು ಕೊಡುತ್ತಾರೆ. ಕುಟುಂಬದ ಯಜಮಾನರು ಕಿರಿಯರಿಗೆ, ಕೆಲಸದಾಳುಗಳಿಗೆ ‘ಓಣಂಕೊಡಿ’ (ಹೊಸಪಂಚೆ)ಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಗೇಣಿದಾರರು, ಕೂಲಿಯಾಳುಗಳು ಜಮೀನ್ದಾರರಿಗೆ ತೆಂಗಿನಕಾಯಿ, ಬಾಳೆಗೊನೆ ಮೊದಲಾದ ಫಲವಸ್ತುಗಳ ರೂಪದಲ್ಲಿ ಓಣಕಾೞ್ಚ (ಓಣದ ಕಾಣಿಕೆ)ವನ್ನು ಕೊಡುವುದು ಸಂಪ್ರದಾಯ. ಈಗ ಜಮೀನ್ದಾರಿ ವ್ಯವಸ್ಥೆ ಇಲ್ಲವಾದ್ದರಿಂದ ಈ ಸಂಪ್ರದಾಯ ಬಹುತೇಕ ಮರೆಯಾಗಿದೆ.

ಓಣಂನ ದಿನ ಹಲವಾರು ತೆರನ ಮನರಂಜನಾ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸಲಾಗಿದೆ. ಓಣಂದ ಔತಣದ ನಂತರ ಪ್ರತಿಯೊಬ್ಬರೂ ತಮಗಿಷ್ಟವಾದ ಆಟಗಳಲ್ಲಿ ತೊಡಗಿಸಿಕೊಳ್ಳುವುದಿದೆ. ಇಂದಿನ ಪುಟ್‌ಬಾಲ್ ಆಟವನ್ನು ನೆನಪಿಸುವ ‘ತಲೆಪಂದು’ (ತಲೆ ಚೆಂಡು) ಎನ್ನುವುದು ಒಂದು ತೆರನ ಚೆಂಡಾಟ. ಇಬ್ಬರೋ ಅದಕ್ಕಿಂತ ಹೆಚ್ಚು ಮಂದಿಯೋ ಎರಡು ತಂಡಗಳಾಗಿ ಆಡುವ ಸ್ಪರ್ಧೆಯ ಆಟವಿದು. ಇದರಲ್ಲಿ ಅನೇಕ ಹಂತಗಳಿವೆ. ಓಣಂ ಸಂದರ್ಭದಲ್ಲಿ ಆಡುವ ಆಟವಾದರೂ ಇದು ಶಾಲೆಗಳಲ್ಲಿ ಇತರೆಡೆಗಳಲ್ಲಿ ಹುಡುಗರು ಆಡುವುದನ್ನು ಗಮನಿಸಬಹುದು. ದಕ್ಷಿಣ ಮಲಬಾರು ಪ್ರದೇಶದಲ್ಲಿ ಪ್ರಚಲಿತವಿರುವ ಆಟ ಓಣತಲ್‌ಲ್ (ಓಣದ ಏಟು). ಎರಡು ಪಂಗಡಗಳಾಗಿ ನಿಂತು ಹೊಡೆದಾಡುವ ಆಟವಿದು. ಉತ್ತರ ಕೇರಳದಲ್ಲಿ ಸ್ವಲ್ಪ ವ್ಯತ್ಯಸ್ಥವಾಗಿ ಇದನ್ನು ಆಡುತ್ತಾರೆ. ಗುಂಪಿನಲ್ಲಿ ಇಬ್ಬರು ಪರಸ್ಪರ ಎಡ ಕೈಯನ್ನು ಹಿಡಿದುಕೊಳ್ಳುತ್ತಾರೆ. ಅವರ ಹಿಡಿತವನ್ನು ಬಿಡಿಸುವ ಸಲುವಾಗಿ ಉಳಿದವರೆಲ್ಲರು ಶ್ರಮಿಸುತ್ತಾರೆ. ಕೈ ಹಿಡಿದುಕೊಂಡವರು ಬಿಡಿಸುವುದಕ್ಕೆ ಬರುವವರಿಗೆ ಮೈಮುಖ ನೋಡದೆ ಹೊಡೆಯುತ್ತಾರೆ. ಅವರ ಏಟನ್ನು ಸಹಿಸಿ ಬಿಡಿಸುವ ಪ್ರಯತ್ನ ಮಾಡುವುದೇ ಆಟ. ಇದು ಒಂದು ರೀತಿಯ ಸಮರಾಭ್ಯಾಸದಂತಿರುತ್ತದೆ. ಹೊಡೆಯುವವರು ಕೈಗಳಿಂದ ಹೊಡೆಯಬಹುದೇ ಹೊರತು ಆಯುಧಗಳನ್ನು ಮಾತ್ರ ಉಪಯೋಗಿಸುವಂತಿಲ್ಲ ಎಂಬುದು ನಿಯಮ. ಕರ್ನಾಟಕದಲ್ಲಿ ಪ್ರಚಲಿತವಿರುವ ಕುಟ್ಟಿದೊಣ್ಣೆಯೆಂಬ ಆಟವು ‘ಕುಟ್ಟಿಯೂಕೋಲೂ’ ಎಂಬ ಹೆಸರಿನಿಂದ ಕೇರಳಲ್ಲೂ ಪ್ರಚಾರದಲ್ಲಿದೆ.

‘ಕರಡಿಕಳಿ’ (ಕರಡಿಯಾಟ), ‘ಪುಲಿಕಳಿ’ (ಹುಲಿಯಾಟ) ಮೊದಲಾದ ಮನರಂಜನ ವೇಷಗಳು ಜನರ ಸಂತಸವನ್ನು ಹೆಚ್ಚಿಸುತ್ತದೆ. ಕರಡಿ ವೇಷವನ್ನೋ, ಹುಲಿವೇಷವನ್ನೋ ಹಾಕಿದ ಯುವಕರು, ಹುಡುಗರು ಮನೆ ಮನೆಗಳಿಗೆ ತೆರಳುತ್ತಾರೆ. ಅಲ್ಲದೆ ಕಂಗಿನ ಹಾಳೆಯ ಮುಖವಾಡವನ್ನು ಆಧರಿಸಿ ದೇಹವನ್ನು ಹುಲ್ಲಿನಿಂದ ಶೃಂಗರಿಸಿ ಮಸಿಬಳಿದು ಮದ್ದಲೆ ಬಾರಿಸುತ್ತಾ ಕುಣಿಯುತ್ತಾ ಮನೆ ಮನೆಗೆ ತೆರಳುವುದಿದೆ. ಬೆಳಗ್ಗೆ ದೇವಸ್ಥಾನದಲ್ಲಿ ನೃತ್ಯ ಮಾಡಿ ಬಳಿಕ ಮನೆಮನೆಗಳಿಗೆ ಹೋಗುತ್ತಾರೆ. ಇದರಲ್ಲಿ ಮುಖ್ಯವಾಗಿ ನರ್ತಕರು, ಬೇಟೆಗಾರ, ಮುದುಕ, ಮುದುಕಿ, ಶಿವ, ಗಣಪತಿ ಮೊದಲಾದ ವೇಷಗಳನ್ನು ಧರಿಸುತ್ತಾರೆ. ಮಹಾಬಲಿ ಯನ್ನು ಹೊಗಳುವ ಹಾಡುಗಳನ್ನು ಹಾಡುತ್ತಾ ಕುಣಿಯುತ್ತಾರೆ. ಮಹಾಬಲಿಯನ್ನು ಸ್ವಾಗತಿಸುವುದೇ ಹಾಡಿನ ಆಶಯ. ಮನೆಗಳಿಗೆ ಬಂದು ಕುಣಿದಾಗ ಬಟ್ಟೆ, ಹಣ ಮೊದಲಾದವುಗಳ ರೂಪದಲ್ಲಿ ಸಂಭಾವನೆಯನ್ನು ನೀಡುತ್ತಾರೆ.

ಹೆಂಗಸರು ಓಣಂ ಸಂದರ್ಭದಲ್ಲಿ ಆಡುವ ವಿಶೇಷ ಆಟಗಳು ಅನೇಕವಿವೆ. ಅವುಗಳಲ್ಲಿ ಕೈಕೊಟ್ಟಿಕಳಿಯೂ ಒಂದು. ಹೆಂಗಸರು ವೃತ್ತಾಕಾರವಾಗಿ ನಿಂತು ಸುತ್ತು ಬರುತ್ತಾ ಕೈ ಚಪ್ಪಾಳೆಯನ್ನು ಲಯಬದ್ಧವಾಗಿ ತಟ್ಟುತ್ತಾ ನರ್ತಿಸುವುದು. ನಡುವೆ ದೀಪ ಹಾಗೂ ಭತ್ತ ತುಂಬಿದ ಬಳ್ಳದಲ್ಲಿ ಅಥವಾ ಪರೆಯಲ್ಲಿ ತೆಂಗಿನ ಹೂ, ವೀಳ್ಯೆದೆಲೆ, ಅಡಕೆ, ಇತ್ಯಾದಿಗಳನ್ನು ಇರಿಸುವರು. ಓಣಂ ಹಬ್ಬದ ವೈಶಿಷ್ಟ್ಯವನ್ನು, ಮಹಾಬಲಿಯ ಆಡಳಿತಾವಧಿಯ ಸಮೃದ್ದಿ ಯನ್ನು ಸಾರುವ ಗೀತೆಯನ್ನು ಹಾಡುತ್ತಾರೆ.

ದಕ್ಷಿಣ ಕನ್ನಡದ ಸಿದ್ಧ ವೇಷವನ್ನುಹೋಲುವ ‘ಕುಮ್ಮಟಿ ನೃತ್ಯ’ ದೇವಿಯ ಪ್ರೀತಿಗಾಗಿ ಮಾಡುವ ಕುಣಿತ. ಇದೊಂದು ಕೃಷಿ ಸಂಬಂಧಿಯಾದ ಕಲಾತ್ಮಕ ಕುಣಿತ. ಕನ್ಯೆಯರು ತಲೆ ಕೂದಲು ಬಿಚ್ಚಿಹಾಕಿ ಮೈ ಮೇಲೆ ಲಹರಿ ಬಂದಂತೆ ನೃತ್ಯವಾಡುವ ಕಲೆಗೆ ‘ಮುಡಿಯಾಟಂ ’ಎಂದು ಹೆಸರು. ಓಣಂ ಕಾಲದಲ್ಲಿ ಮಾತ್ರ ಮಹಿಳೆಯರು ಆಡುವ ಪ್ರಸಿದ್ಧ ಆಟ ಉಯ್ಯಲೆಯಾಟ. ಉಯ್ಯಲೆಯಾಡುವ ಹೆಂಗಸರು ಅನೇಕ ಜಾನಪದ ಗೀತೆಗಳನ್ನು ಹಾಡುವರು. ಇವೇ ಅಲ್ಲದೆ ತಿರುವಾದಿರಕಳಿಯನ್ನು ಓಣಂ ಸಂದರ್ಭದಲ್ಲಿ ವಿಶೇಷವಾಗಿ ಮಾಡುತ್ತಾರೆ. ಹೀಗೆ ಮಹಿಳೆಯರೇ ಭಾಗವಹಿಸುವ ಅನೇಕ ಕಲಾರೂಪಗಳ ಜೊತೆಗೆ ಜಾನಪದ ಗೀತೆಗಳು, ನೃತ್ಯ ಸಂಪ್ರದಾಯಗಳು ಉಳಿದುಕೊಂಡು ಬಂದಿವೆ. ಇವುಗಳಲ್ಲಿ ಕೆಲವು ಕಲಾ ಪ್ರಕಾರಗಳು ಶಿಕ್ಷಿತ ಜನರನ್ನು ಆಕರ್ಷಿಸಿದ್ದಲ್ಲದೆ ಆಧುನಿಕ ವೇದಿಕೆಗಳಲ್ಲಿಯೂ ಅವುಗಳಿಗೆ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದ್ದಾರೆ.

ನದಿ ತೀರಗಳಲ್ಲಿ, ಹಿನ್ನೀರು ಪ್ರದೇಶಗಳಲ್ಲಿ ದೋಣಿ ಓಟಗಳನ್ನು ಏರ್ಪಡಿಸುವುದಿದೆ. ಈ ಸಂದರ್ಭದಲ್ಲಿ ದೋಣಿ ಹಾಡುಗಳನ್ನು ದೋಣಿಯ ಚಲನೆಗೆ ಅನುಗುಣವಾಗಿ ಆಲಾಪಿಸಲಾಗುತ್ತದೆ.

ಓಣಂ ಆಚರಣೆಗಳು ಪ್ರಾದೇಶಿಕವಾಗಿ ವಿಭಿನ್ನವಾಗಿವೆ. ಕರ್ನಾಟಕದ ಸಾಮೀಪ್ಯವುಳ್ಳ ಉತ್ತರ ಕೇರಳ ಹಾಗೂ ತಮಿಳುನಾಡಿನ ಸಂಪರ್ಕವುಳ್ಳ ದಕ್ಷಿಣ ಕೇರಳವನ್ನು ತುಲನೆ ಮಾಡಿದರೆ ಮಧ್ಯ ಕೇರಳದಲ್ಲಿ ವಿಶೇಷವಾಗಿ ಓಣಂ ಆಚರಣೆಯ ವೈಶಿಷ್ಟ್ಯವನ್ನು ಗುರುತಿಸ ಬಹುದು. ಓಣಂ ಕೇರಳ ರಾಜ್ಯದ ನಾಡಹಬ್ಬ ಎಂಬ ಕಾರಣದಿಂದ ಎಲ್ಲಾ ಜನವರ್ಗದವರೂ ಸಂಭ್ರಮದಿಂದ ಆಚರಿಸುತ್ತಾರೆ.

ವಿಷು (ಬಿಷು)

ಮೇಷಮಾಸ ಸಂಕ್ರಮಣದಂದೇ ವಿಷು ಆಚರಣೆ. ಕೇರಳೀಯರಿಗೆ ಇದು ಹೊಸ ವರ್ಷಾರಂಭ. ವಿಷು ಕಣಿ ಕಾಣುವ ಫಲವನ್ನನುಸರಿಸಿ ಆ ವರ್ಷದ ಭವಿಷ್ಯ ನಿರ್ಧಾರ ವಾಗುತ್ತದೆ ಎಂಬುದು ಹಿಂದೂಗಳ ನಂಬಿಕೆ. ಹಾಗಾಗಿ ಆಚರಣೆಯ ಬಹುಮುಖ್ಯ ಭಾಗ ಕಣಿ ಕಾಣುವುದು. ಹಿಂದಿನ ದಿನ ರಾತ್ರಿಯೇ ಅಂದರೆ ಸಂಕ್ರಮಣದ ದಿವಸ ಮಾವು, ಹಲಸು, ತೆಂಗು, ಭತ್ತ, ಅಕ್ಕಿ, ಮಂಗಲ ವಸ್ತುಗಳು, ಕಕ್ಕೆಹೂ ಇತ್ಯಾದಿಗಳನ್ನು ಇರಿಸಿ ದೀಪ ಬೆಳಗಿಸುವುದು ಸಾಮಾನ್ಯವಾಗಿ ಕೇರಳದ ಎಲ್ಲಾ ಹಿಂದೂಗಳ ಮನೆಯಲ್ಲಿ ಸಂಪ್ರದಾಯ. ಮನೆಯ ಪ್ರತಿಯೊಬ್ಬರೂ ಎದ್ದು ಈ ಕಣಿ ವಸ್ತುಗಳನ್ನೇ ಮೊದಲು ನೋಡಬೇಕು. ಮಕ್ಕಳಿಗೆ, ಆಶ್ರಿತ ಜನರಿಗೆ ವಿಷುವಿನ ಕೊಡುಗೆ ನೀಡುವ ಸಂಪ್ರದಾಯವೂ ಇದೆ. ಜಮೀನ್ದಾರರ ಮನೆಗಳಿಗೆ ಗೇಣಿದಾರರು, ಕೂಲಿಯಾಳುಗಳು ತಾವು ಬೆಳೆದ ತರಕಾರಿ, ಫಲವಸ್ತುಗಳು, ತಾವು ವೃತ್ತಿಯ ಭಾಗವಾಗಿ ತಯಾರಿಸಿದ ಚಾಪೆ ಮೊದಲಾದ ಕರಕೌಶಲ ವಸ್ತುಗಳನ್ನು ಕೊಂಡೊಯ್ದು ಕಣಿಯೊಪ್ಪಿಸುವುದೂ ಇದೆ. ಪ್ರತಿಫಲವಾಗಿ ಹಣ, ದವಸ ಧಾನ್ಯಗಳು ಇತ್ಯಾದಿಗಳನ್ನು ವಿಷುವಿನ ಕೊಡುಗೆಯಾಗಿ ಸ್ವೀಕರಿಸುವರು. ಉತ್ತರ ಹಾಗೂ ಮಧ್ಯ ಕೇರಳದಲ್ಲಿ ವಿಷು ಕಣಿ ಕಂಡ ಬಳಿಕ ಮಕ್ಕಳು ಪಟಾಕಿ ಸಿಡಿಸುವ ಸಂಪ್ರದಾಯವಿದೆ. ವಿಷು ದಿವಸ ಮನೆಗಳಲ್ಲಿ ವಿಶೇಷ ಔತಣವಿರುತ್ತದೆ. ವಿಷುಕಣಿ ಕಂಡ ಬಳಿಕ ಸಮೀಪದ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸುತ್ತಾರೆ. ದೇವಾಲಯಗಳಲ್ಲಿಯೂ ವಿಷುಕಣಿಯನ್ನು ಇರಿಸುವ ಪದ್ಧತಿಯಿದೆ. ಶಬರಿಮಲೆ ಶಾ್ತಾವ್ ದೇವಾಲಯದಲ್ಲಿ ವಿಷುವಿನ ದಿನ ಬಾಗಿಲು ತೆರೆಯುವುದು ಪ್ರಧಾನ ಆಚರಣೆ. ತಿರುವಲ್ಲಾದ ಶ್ರೀವಲ್ಲಭ ದೇವಾಲಯ, ಹರಿಪ್ಪಾಡಿನ ಸುಬ್ರಹ್ಮಣ್ಯ ದೇವಾಲಯ, ಗುರುವಾಯೂರಿನ ಶ್ರೀಕೃಷ್ಣ ದೇವಾಲಯ ಮೊದಲಾದೆಡೆಗಳಲ್ಲಿ ವಿಷುವನ್ನು ಆಚರಿಸಲಾಗುತ್ತದೆ.

ತಿರುವಾದಿರ

ಸವರ್ಣೀಯ ಮಹಿಳೆಯರು ಮುಖ್ಯವಾಗಿ ನಾಯರ್ ಸ್ತ್ರೀಯರು ನಡೆಸುವ ಆಚರಣೆಯಿದು. ಧನುರ್ಮಾಸದ ತಿರುವಾದಿರ. ಇದು ಕಾಮದಹನ ಕತೆಯನ್ನು ನೆನಪಿಸುವ ಆಚರಣೆ. ವೈವಾಹಿಕ ಜೀವನ ಸುಖಪ್ರದವಾಗಿರಲೆಂದು ಶಿವನನ್ನು ಆರಾಧಿಸುವುದೇ ತಿರುವಾದಿರದ ಮುಖ್ಯ ಉದ್ದೇಶ. ತಿರುವಾದಿರದ ದಿನದಂದು ಸ್ತ್ರೀಯರು ಬೆಳಗ್ಗೆ ಸ್ನಾನಾದಿಗಳನ್ನು ಮಾಡಿ ದೇವಾಲಯಗಳಿಗೆ ದರ್ಶನವೀಯುವರು. ಅಂದು ಶಿವ ದೇವಾಲಯಕ್ಕೆ ಹೋಗುವುದು ಬಹಳ ವಿಶೇಷ ಎಂಬುದು ನಂಬಿಕೆ. ಮಹಿಳೆಯರು ತಾಂಬೂಲವನ್ನು ಸವಿದು ತುಟಿ ಕೆಂಪಾಗಿಸುವರು. ಅಕ್ಕಿಯಿಂದ ತಯಾರಿಸಿದ ನಿತ್ಯ ಆಹಾರಗಳಿಗೆ ಬದಲಾಗಿ ಅಂದು ಸೀಮೆ ಅಕ್ಕಿ, ಗೋಧಿ, ಬಾಳೆಹಣ್ಣು, ಎಳನೀರು, ಕೂವೆ ಮೊದಲಾದವುಗಳನ್ನು ಆಹಾರವಾಗಿ ಸ್ವೀಕರಿಸುವರು. ತಿರುವಾದಿರದ ಭಾಗವಾಗಿ ತಿರುವಾದಿರಕಳಿ, ಉಯ್ಯಲೆಯಾಟ ಇತ್ಯಾದಿ ಗಳನ್ನು ಆಡುವರು. ವಯಸ್ಸಿಗೆ ಬಂದ ಕನ್ಯೆಯರು ಹೊಸದಾಗಿ ಮದುವೆಯಾದ ಯುವತಿಯರಿಗಾಗಿ ಹೂ ತಿರುವಾದಿರವನ್ನು ಆಚರಿಸುವರು. ತಿರುವಾದಿರಕ್ಕೆ ಸಂಬಂಧಿಸಿದ ಅನೇಕ ಸಾಂಪ್ರದಾಯಕ ಆಚರಣೆಗಳು ಇಂದು ಮರೆಯಾಗಿವೆ. ಆದರೂ ತಿರುವಾದಿರವನ್ನು ಇಂದಿಗೂ ಆಚರಿಸುತ್ತಾರೆ.

ನವರಾತ್ರಿ

ಕರ್ನಾಟಕದಲ್ಲಿ ದಸರಾ ಆಚರಣೆಯಂತೆ ಕೇರಳದಲ್ಲಿ ನವರಾತ್ರಿಯನ್ನು ಆಚರಿಸುತ್ತಾರೆ. ಒಂಬತ್ತು ದಿವಸಗಳ ಆಚರಣೆಯಲ್ಲಿ ಕೊನೆಯ ಮೂರು ದಿವಸಗಳಲ್ಲಿ ದುರ್ಗಾಷ್ಟಮಿ, ನವಮಿ ಹಾಗೂ ವಿಜಯದಶಮಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ದಿವಸಗಳಲ್ಲಿ ಕೇರಳೀಯರು ಸರಸ್ವತಿ ಪೂಜೆಯನ್ನು ಮಾಡುತ್ತಾರೆ. ಜ್ಞಾದೇವತೆಯಾದ ಸರಸ್ವತಿಯ ಸಂಕೇತವಾಗಿ ಹಿಂದೂಗಳ ಮನೆಗಳಲ್ಲಿ ಪುಸ್ತಕಗಳನ್ನು ಇರಿಸಿ ಅಲಂಕರಿಸಿದ ಪೂಜೆ ಮಾಡುವರು. ದುರ್ಗಾಷ್ಟಮಿಯ ದಿನದಂದು ಪುಸ್ತಕಗಳನ್ನು ಪೂಜೆಗೆ ಇರಿಸಿದ ಬಳಿಕ ವಿಜಯದಶಮಿಯವರೆಗೆ ಏನನ್ನೂ ಓದಬಾರದು ಎಂಬುದು ನಂಬಿಕೆ. ಮಹಾನವಮಿಯಂದು ಆರಾಧನೆ ಮಾತ್ರವಿರುತ್ತದೆ. ವಿಜಯದಶಮಿಯಂದು ವಿದ್ಯಾರಂಭ ಮಾಡಲಾಗುತ್ತದೆ. ಮಕ್ಕಳಿಗೆ ಅಕ್ಷರಾಭ್ಯಾಸ ಆರಂಭ ಮಾಡಲು ಇದು ಅತ್ಯಂತ ಸೂಕ್ತವಾದ ದಿನವೆಂದು ಕೇರಳೀಯರ ನಂಬಿಕೆ. ವಿಜಯದಶಮಿಯಂದು ಅಕ್ಕಿಯ ಮೇಲೋ, ಮರಳಿನ ಮೇಲೋ ಅಕ್ಷರ ಬರೆಸುವ ಸಂಪ್ರದಾಯ ಕೆರಳದಲ್ಲಿದೆ. ತಿರೂರಿನ ತುಂಜತ್ತ್‌ಪರಂಬಿನಲ್ಲಿರುವ ತುಂಜತ್ತ್‌ಎೞುತ್ತಚ್ಚ್‌ನ್ ಸ್ಮಾರಕದಲ್ಲಿಯೂ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗುತ್ತದೆ. ಇದೇ ದಿನದಂದು ಅಕ್ಷರಾಭ್ಯಾಸ ಆರಂಭಿಸಲು ಕೇರಳೀಯರು ಕರ್ನಾಟಕದ ಕೊಲ್ಲೂರಿಗೆ ಅಪಾರ ಸಂಖ್ಯೆಯಲ್ಲಿ ಬರುತ್ತಾರೆ. ತಿರೂರಿನ ಸಮೀಪವಿರುವ ತಿರುವಳ್ಳಕಾವ್ ದೇವಸ್ಥಾನದಲ್ಲಿ ವಿಜಯದಶವಿುಯಂದು ನವರಾತ್ರಿ ಉತ್ಸವವನ್ನು ಆಚರಿಸ ಲಾಗುತ್ತದೆ. ಸ್ವಾತಿತಿರುನಾಳ್ ಮಹಾರಾಜನು ನವರಾತ್ರಿ ಸಂದರ್ಭದಲ್ಲಿ ಹಾಡಲು ನವರಾತ್ರಿ ಕೀರ್ತನೆಗಳನ್ನು ರಚಿಸಿದ್ದನೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಶಿವರಾತ್ರಿ

ಕರ್ನಾಟಕದಲ್ಲಿಯಂತೆ ಕೇರಳದಲ್ಲಿಯೂ ಶಿವರಾತ್ರಿ ಆಚರಣೆಗಳನ್ನು ಕೇರಳದಾದ್ಯಂತ ಆಚರಿಸಲಾಗುತ್ತದೆ. ಲೋಕ ಸಂರಕ್ಷಣೆಗಾಗಿ ಶಿವನು ಕಾಳಕೂಟ ವಿಷವನ್ನು ಕುಡಿದ ದಿನವಾಗಿ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಶಿವರಾತ್ರಿಯಂದು ರಾತ್ರಿಪೂರ್ತಿ ಜಾಗರಣೆ ಮಾಡಬೇಕೆಂಬುದು ನಂಬಿಕೆ. ಅದಕ್ಕಾಗಿ ದೇವಾಲಯಗಳಲ್ಲಿ ಭಜನೆ ಹಾಗೂ ಇತರ ಕಲಾ ಪ್ರದರ್ಶನಗಳ ವ್ಯವಸ್ಥೆ ಮಾಡಲಾಗುತ್ತದೆ. ಆಲುವಾಯಿಯ ಪೆರಿಯಾರ್ ನದಿ ತೀರದಲ್ಲಿ ಆಚರಿಸುವ ಶಿವರಾತ್ರಿ ಕೇರಳದ ಪ್ರಾದೇಶಿಕ ಉತ್ಸವಗಳಲ್ಲಿ ಪ್ರಮುಖವಾದುದು. ಕೇರಳದೆಲ್ಲೆಡೆ ಯಿಂದ ಭಕ್ತ ಜನರು ಬಂದು ಸೇರುವರು. ಆಲುವಾಯಿ ಶಿವರಾತ್ರಿಗೆ ಪ್ರಯಾಗದ ಕುಂಭಮೇಳಕ್ಕೆ ಸಮಾನವಾದ ಪ್ರಸಿದ್ದಿಯಿದೆ. ಪೆರಿಯಾರಿನ ಮರಳಿನ ಮೇಲೆ ಪ್ರತಿಷ್ಠೆ ಮಾಡಿದ ಶಿವಲಿಂಗವೇ ಆರಾಧನಾ ಮೂರ್ತಿ. ಭಕ್ತರು ರಾತ್ರಿ ಪೂರ್ತಿ ಮರಳಿನ ಮೇಲೆ ಕಳೆದು ಬೆಳಿಗ್ಗೆ ಪಿತೃಗಳಿಗೆ ಬಲಿಯರ್ಪಿಸಿ ಮರಳುವರು. ಆಲುವಾಯಿ ಶಿವರಾತ್ರಿಯ ಪ್ರಯುಕ್ತ ವಿಶೇಷ ವಸ್ತುಪ್ರದರ್ಶನ ಇತ್ಯಾದಿಗಳನ್ನು ಏರ್ಪಡಿಸಲಾಗುತ್ತದೆ. ಹಂಪಿಯ ವಿರೂಪಾಕ್ಷನ ಸನ್ನಿಧಿಯಲ್ಲಿಯೂ ಶಿವರಾತ್ರಿ ಆಚರಣೆ ನಡೆಯುವುದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.

ಅಟ್ಟಪಾಡಿ ಕಣಿವೆಯಲ್ಲಿರುವ ಮಲ್ಲೀಶ್ವರ ದೇವಸ್ಥಾನದಲ್ಲಿ ಬುಡಕಟ್ಟು ಜನರು ಆಚರಿಸುವ ಶಿವರಾತ್ರಿ ಇನ್ನೊಂದು ಪ್ರಮುಖ ಉತ್ಸವವಾಗಿದೆ. ಶಿವರಾತ್ರಿ ಆಚರಣೆಗಾಗಿ ಬುಡಕಟ್ಟು ಜನರು ಮೂರು ದಿನಗಳ ಮೊದಲೇ ಮನೆಗಳನ್ನು ಬಿಟ್ಟು ಬಂದು ಕುಟುಂಬ ಸಮೇತ ಇಲ್ಲಿ ಬೀಡು ಬಿಡುತ್ತಾರೆ. ಸುತ್ತಮುತ್ತಲಿನ ಪ್ರದೇಶಗಳಿಂದ ಹಾಗೂ ತಮಿಳುನಾಡಿನಿಂದ ವ್ಯಾಪಾರಿಗಳು ಬಂದು ಬೃಹತ್ ಸಂತೆಯನ್ನು ಏರ್ಪಡಿಸುತ್ತಾರೆ. ಅಲ್ಲದೆ ಬುಡಕಟ್ಟು ಜನರು ತಾವು ಸಾಕಿದ ಪ್ರಾಣಿಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸುತ್ತಾರೆ ಎಂಬುದೊಂದು ವೈಶಿಷ್ಟ್ಯ.

ಅಷ್ಟಮಿ ರೋಹಿಣಿ

ಕೇರಳದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯಾದ ಅಷ್ಟಮಿ ರೋಹಿಣಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶ್ರೀಕೃಷ್ಣ ದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ, ಕಲಾ ಪ್ರದರ್ಶನಗಳನ್ನು ಏರ್ಪಡಿಸುತ್ತಾರೆ. ಕೊಲ್ಲಂನ ವಡಯಾಟ್ಟು ಕೋಟೆಯ ಶ್ರೀಕೃಷ್ಣಸ್ವಾಮಿ ದೇವಾಲಯದಲ್ಲಿ ಅಷ್ಟಮಿ ರೋಹಿಣಿ ಆಚರಣೆ ವಿಶಿಷ್ಟವಾಗಿದೆ. ಅಲ್ಲಿನ ‘ಉರಿಯಡಿ’ ಆಚರಣೆ ಪ್ರಸಿದ್ಧವಾಗಿದೆ. ಶ್ರೀ ಕೃಷ್ಣನು ಬೆಣ್ಣೆ ಕದ್ದು ತಿಂದುದರ ಸಾಂಕೇತಿಕ ಆಚರಣೆ ಉರಿಯಡಿ. ನೀಳವಾದ ಬಿದಿರಿಗೆ ಸಿಕ್ಕಗಳನ್ನು ಕಟ್ಟಿ ತೂಗುವರು. ಅದರಲ್ಲಿ ಮಣ್ಣಿನ ಮಡಕೆಗಳನ್ನು ಇಟ್ಟು ಅವುಗಳಲ್ಲಿ ಹಾಲು, ಮೊಸರು, ಹಣ ಮೊದಲಾದವುಗಳನ್ನು ಇರಿಸುವರು. ಸಿಕ್ಕಗಳನ್ನು ಕಟ್ಟಿದ ಬಿದಿರನ್ನು ಹೇರಿಕೊಂಡು ಜನರ ಗುಂಪು ಬೀದಿಗಳಲ್ಲಿ ಮೆರವಣಿಗೆ ಹೋಗುತ್ತದೆ. ಕೆಲವರು ಮಡಕೆಗಳನ್ನು ಒಡೆಯಲು ಶ್ರಮಿಸುವರು. ಇತರರು ಅವರ ಮೇಲೆ ನೀರು ಎರಚಿ ಅವರಿಗೆ ಅಡ್ಡಿ ಪಡಿಸುವರು. ಮಡಕೆ ಒಡೆಯುವಲ್ಲಿ ಯಶಸ್ವಿಯಾದವರು ಅದರೊಳಗಿನ ವಸ್ತುಗಳನ್ನು ಪಡೆಯುತ್ತಾರೆ. ಅಷ್ಟಮಿ ರೋಹಿಣಿ ದಿವಸ, ಅಪರಾಹ್ನ ಮೆರವಣಿಗೆ ಆರಂಭವಾಗುತ್ತದೆ. ಶ್ರೀಕೃಷ್ಣನ ಚಿನ್ನದ ವಿಗ್ರಹವನ್ನು ಪ್ರತಿಷ್ಠಾಪಿಸಿ ಅಲಂಕರಿಸಿದ ರಥವು ಮೆರವಣಿಗೆಯ ಮುಂಚೂಣಿಯಲ್ಲಿರುತ್ತದೆ. ದಾರಿ ಯುದ್ದಕ್ಕೂ ಕಾದು ನಿಂತ ಜನರಿಗೆ ಭಗವದ್ದರ್ಶನ ಮಾಡಲು ಇದೊಂದು ಅವಕಾಶವಾಗುತ್ತದೆ. ಹಾಗೆಯೇ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನ ಮೊದಲಾದೆಡೆಗಳಲ್ಲಿಯೂ ಅಷ್ಟಮಿ ರೋಹಿಣಿ ಆಚರಣೆ ನಡೆಯುತ್ತದೆ.

ತೈಪ್ಪೂಯಂ

ಸುಬ್ರಹ್ಮಣ್ಯನಿಗೆ ಸಂಬಂಧಿಸಿದ ವಿಶೇಷ ಆಚರಣೆಯಿದು. ಮಕರ ಮಾಸದಲ್ಲಿ (ಜನವರಿ-ಫೆಬ್ರುವರಿ) ಇದನ್ನು ಆಚರಿಸಲಾಗುತ್ತದೆ. ಈ ದಿವಸ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಕಾವಡಿಯಭಿಷೇಕ ಅದರಲ್ಲಿ ಮುಖ್ಯ ವಾದದ್ದು. ಭಕ್ತರು ಕಾವಡಿಯಲ್ಲಿ ಅಭಿಷೇಕ ದ್ರವ್ಯಗಳನ್ನು ತುಂಬಿಸಿದ ಪಾತ್ರೆಗಳನ್ನು ಕಟ್ಟಿ ತೂಗಿಸಿದ ಕೋಲನ್ನು ಹೆಗಲಿಗೇರಿಸಿ ವಾದ್ಯ ಮೇಳಗಳ ಸಹಿತ ದೇವಾಲಯಗಳಿಗೆ ಬರುವರು. ಸಕ್ಕರೆ, ಕುಂಕುಮ, ಜೇನು, ಭಸ್ಮ, ಎಣ್ಣೆ ಮೊದಲಾದವುಗಳಲ್ಲಿ ಯಾವುದಾದರೂ ಒಂದನ್ನು ತಂದು ಅದಕ್ಕೆ ಅಭಿಷೇಕ ಮಾಡುವರು. ಹರಿಪ್ಪಾಡಿನ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ನಡೆಯುವ ವಿಶೇಷ ಆಚರಣೆಯಿದು.

ತೃಕ್ಕಾರ್ತಿಕ

ವೃಶ್ಚಿಕ ಮಾಸದಲ್ಲಿ (ನವೆಂಬರ್-ಡಿಸೆಂಬರ್) ಅಂದರೆ ಕಾರ್ತಿಕ ಹುಣ್ಣಿಮೆಯಂದು ಹಿಂದೂಗಳು ಸುಬ್ರಹ್ಮಣ್ಯ ಹಾಗೂ ಶಿವ ದೇವಾಲಯಗಳಲ್ಲಿ ಆಚರಿಸುವ ಒಂದು ಆಚರಣೆ ತೃಕ್ಕಾರ್ತಿಕ. ಆಚರಣೆಯ ಬಹುಮುಖ್ಯ ಭಾಗ ದೀಪ ಬೆಳಗಿಸುವುದು. ಅರಳಿನ ನೈವೇದ್ಯ, ಬಲಿ ದರ್ಶನ ಇತ್ಯಾದಿಗಳ ಮೂಲಕ ದೇವಾಲಯಗಳಲ್ಲಿ ತೃಕ್ಕಾರ್ತಿಕವನ್ನು ಆಚರಿಸುತ್ತಾರೆ. ತೃಕ್ಕಾರ್ತಿಕದ ದಿನ ದೇವಾಲಯದ ಗೋಡೆಗಳಲ್ಲಿ ಮನೆಗಳ ಸುತ್ತಲೂ ದೀಪ ಉರಿಸಿಡುವ ದೃಶ್ಯ ನೋಡಲು ಸುಂದರವಾಗಿರುತ್ತದೆ. ಈ ಪದ್ದತಿ ಕರ್ನಾಟಕ, ತಮಿಳುನಾಡುಗಳಲ್ಲಿಯೂ ಇದೆ.

ಮಂಡಲ ಪೂಜೆ

ವೃಶ್ಚಿಕ (ನವೆಂಬರ್-ಡಿಸೆಂಬರ್) ಮಾಸದ ಆರಂಭದಿಂದ ನಲವತ್ತೊಂದು ದಿವಸ ಪವಿತ್ರವಾದ ದಿನವಾಗಿ ಹಿಂದೂಗಳು ನಂಬಿದ್ದಾರೆ. ಈ ದಿವಸಗಳಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಹರಕೆಗಳನ್ನು ಸಲ್ಲಿಸುತ್ತಾರೆ. ಈ ದಿವಸಗಳಲ್ಲಿ ಭಾಗವತ ಪಾರಾಯಣವನ್ನು ನಡೆಸುವುದು, ಕ್ಷೌರ ಮಾಡದೆ ಬ್ರಹ್ಮಚರ್ಯೆಯ ದೀಕ್ಷೆಯನ್ನು ಕೈಗೊಳ್ಳುವುದು ಇತ್ಯಾದಿಗಳ ಮೂಲಕ ಮಂಡಲ ಕಾಲವನ್ನು ಆಚರಿಸುತ್ತಾರೆ. ನಲ್ವತ್ತೊಂದನೆಯ ದಿವಸವೇ ಪ್ರಸಿದ್ಧವಾದ ಶಬರಿಮಲೆಯಲ್ಲಿಯೂ ಮಂಡಲವಿಳಕ್ಕ್ ಉತ್ಸವ. ಅಂದು ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆಯಿರುತ್ತದೆ. ಮಂಡಲ ಕಾಲ ಮುಗಿಯುವ ಹೊತ್ತಿಗೆ ಕ್ರಿಶ್ಚಿಯನರ ಕ್ರಿಸ್‌ಮಸ್ ಹಾಗೂ ಮುಸಲ್ಮಾನರ ಮೊಹರಂ ಆಚರಣೆಯು ಬರುತ್ತದೆ. ಹಾಗಾಗಿ ಮಂಡಲ ಕಾಲವು ಎಲ್ಲಾ ಧರ್ಮೀಯರಿಗೂ ಧಾರ್ಮಿಕ ಆಚರಣೆಯ ಅವಧಿಯಾಗಿದೆ.

ಕೆಟ್ಟುಕಾೞ್ಚ

ಕೊಲ್ಲಂ, ಆಲಪ್ಪುೞ ಜಿಲ್ಲೆಗಳಲ್ಲಿನ ಹಲವು ದೇವಾಲಯಗಳಲ್ಲಿ ’ಕೆಟ್ಟುಕಾೞ್ಚ’  ಆಚರಿಸಲಾಗುತ್ತದೆ. ಹಲವೆಡೆಗಳಿಂದ ಜನರು ಬಿದಿರು, ಹುಲ್ಲು, ಹುರಿಹಗ್ಗ, ಬಣ್ಣದ ಬಟ್ಟೆಗಳಿಂದ ತೇರನ್ನೋ, ಕುದುರೆಯನ್ನೋ ತಯಾರಿಸಿ ದೇವಾಲಯಕ್ಕೆ ಬರುತ್ತಾರೆ. ದೇವಾಲಯಗಳ ಗೋಪುರಗಳಂತೆ ಭಾಸವಾಗುವ ರೀತಿಯಲ್ಲಿ ತೇರನ್ನು ಸಿದ್ಧಪಡಿಸುತ್ತಾರೆ. ಭೀಮ, ಪಾಂಚಾಲಿ, ಹನುಮಾನ್ ಮೊದಲಾದ ಪುರಾಣ ಪಾತ್ರಗಳ ಪ್ರತಿಮೆಗಳನ್ನು ತೇರಿನಲ್ಲಿ ಪ್ರತಿಷ್ಠಾಪಿಸುತ್ತಾರೆ. ತೇರು ಚಿಕ್ಕದಾಗಿದ್ದರೆ ಜನರು ಹೆಗಲ ಮೇಲೆ ಹೇರಿಕೊಂಡು ಬರುತ್ತಾರೆ. ದೊಡ್ಡದಾಗಿದ್ದರೆ ಗಾಲಿಗಳನ್ನು ಜೋಡಿಸಿ ಎಳೆದುಕೊಂಡು ಬರುತ್ತಾರೆ. ವಿವಿಧೆಡೆಗಳಿಂದ ಬರುವ ತೇರುಗಳು ದೇವಾಲಯಕ್ಕೆ ಪ್ರದಕ್ಷಿಣೆ ಬರುವ ಸಂಪ್ರದಾಯವಿದೆ. ಕ್ರಿ.ಶ. ಐದನೆಯ ಶತಮಾನದ ಚೈನಾ ಯಾತ್ರಿಕವಾದ ಫಾಹಿಯಾನನು ಪಾಟಲೀಪುತ್ರದಲ್ಲಿ ನೋಡಿದ್ದೇನೆಂದು ಉಲ್ಲೇಖಿಸಿದ ಬೌದ್ಧ ಮತಾಚರಣೆಗೂ ಈ ಆಚರಣೆಗೂ ಸಾಮ್ಯವಿದೆ ಎಂದು ವಿದ್ವಾಂಸರು ಗುರುತಿಸಿದ್ದಾರೆ. ಚೆಟ್ಟಿಕುಳಙರ, ನೀಲಂಬೇರೂರು, ಪಂದಳಂ, ಮಾವೆಲಿಕ್ಕರ, ಕಡವೂರು, ಓಚ್ಚಿರ ಮೊದಲಾದ ಸ್ಥಳಗಳಲ್ಲಿರುವ ಈ ಆಚರಣೆ ಗಮನಾರ್ಹವಾಗಿದೆ.

ವಳ್ಳಂಕಳಿ (ದೋಣಿಯಾಟ)

ಕೇರಳದ ಅನನ್ಯ ಆಚರಣೆ  ವಳ್ಳಂಕಳಿ. ಓಣಂ ಸಮಯದಲ್ಲಿ ಆಲಪ್ಪುೞ, ಕೋಟ್ಟಯಂ ಜಿಲ್ಲೆಗಳಲ್ಲಿ ನೆಡಸುವ ವಳ್ಳಂಕಳಿ  ಪ್ರದರ್ಶನಗಳು ಪ್ರಸಿದ್ಧವಾಗಿವೆ. ಆಲಪ್ಪುೞದ ಪುನ್ನಮಡ ಹಿನ್ನೀರಿನಲ್ಲಿ ನಡೆಯುವ ವಳ್ಳಂಕಳಿ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಿಂದೆ ಜವಾಹರ್‌ಲಾಲ್ ನೆಹರೂ ಅವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ವಳ್ಳಂಕಳಿ ಉದ್ಘಾಟನೆಗೆ ಆಗಮಿಸಿದ್ದರು. ಆ ನಂತರ ಈ ವಳ್ಳಂಕಳಿ ಉತ್ಸವಕ್ಕೆ ನೆಹರು ಟ್ರೋಫಿ ವಳ್ಳಂಕಳಿ ಎಂದು ಹೆಸರು. ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯಾಚರಣೆಗೆ ಸಂಬಂಧಿಸಿದಂತೆ ಎರಡನೆಯ ಶನಿವಾರದಂದು ನೆಹರು ಟ್ರೋಫಿ ವಳ್ಳಂಕಳಿ ಉತ್ಸವದಲ್ಲಿ ದೋಣಿ ಓಟದ ರಾಷ್ಟ್ರೀಯ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ನೂರರಿಂದ ನೂರ ಇಪ್ಪತ್ತು ಅಡಿ ಉದ್ದದ ದೋಣಿಗಳು ನೂರಾರು ಜನರನ್ನು ಹೇರಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುವ ದೃಶ್ಯ ಆಕರ್ಷಣೀಯವಾದುದು. ಎಲ್ಲಾ ಮತೀಯ ಜನರೂ ಇದರಲ್ಲಿ ಭಾಗವಹಿಸುತ್ತಾರೆಂಬ ಕಾರಣಕ್ಕೆ ಪುನ್ನಮಡಕಾಯಲ್ ವಳ್ಳಂಕಳಿ ಸುಪ್ರಸಿದ್ಧವಾಗಿದೆ.

ಆರನ್ಮುಳದ ಉತ್ತಿಟ್ಟಾದಿ ವಳ್ಳಂಕಳಿ ಓಣಂಗೆ ಸಂಬಂಧಿಸಿದ ಆಚರಣೆಯಾಗಿದೆ. ಆರನ್ಮುಳ ದೇವಾಲಯದ ಪಾರ್ಥಸಾರಥಿಯಾದ ಭಗವಂತನು ಪಂಪಾ ನದಿಯನ್ನು ದಾಟಿದ ನೆನಪಿಗಾಗಿ ಈ ವಳ್ಳಂಕಳಿಯನ್ನು ಆಚರಿಸಲಾಗುತ್ತದೆ. ಇದರಲ್ಲಿ ಸ್ಪರ್ಧೆಯೋ, ಬಹುಮಾನವೋ ಯಾವುದೂ ಇಲ್ಲ. ಇದು ಪೂರ್ಣ ಧಾರ್ಮಿಕ ಹಾಗೂ ಮನರಂಜನೆಗಾಗಿ ಎಲ್ಲಾ ಮತೀಯರು ಭಾಗವಹಿಸುವ ವಳ್ಳಂಕಳಿಯಿದು. ಹುಟ್ಟು ಹಾಕುತ್ತಾ ಹಾಡುತ್ತಾ ದೋಣಿಗಾರರು ದೋಣಿಯೋಡಿಸುವ ದೃಶ್ಯ ಮನೋಹರವಾಗಿದೆ. ಪ್ರಾದೇಶಿಕವಾಗಿ ಆರನ್ಮುಳದಲ್ಲಿ ಅಂದು ವಿಶೇಷ ಹಬ್ಬ. ಅಂದು ದೇವಾಲಯದಲ್ಲಿ ‘ದೋಣಿ ಔತಣ’ ವಿಶೇಷ.

ಚಂಬಕ್ಕುಳದ ಪಂಪಾನದಿಯಲ್ಲಿ ನಡೆಯುವ ಮೂಲಂ ವಳ್ಳಂಕಳಿ ಅನೇಕ ಜನರನ್ನು ಆಕರ್ಷಿಸುತ್ತದೆ. ಅಂಬಲಪುೞ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ ಚೆಂಬಕಶ್ಯೇರಿ ರಾಜನಾದ ದೇವನಾರಾಯಣನ್ ಕುರಿಚ್ಚಿಯಿಂದ ಅಂಬಲಪ್ಪುೞಕ್ಕೆ ಶ್ರೀಕೃಷ್ಣ ವಿಗ್ರಹವನ್ನು ಕೊಂಡೊಯ್ದ ನೆನಪಿಗಾಗಿ ಮೂಲಂ ವಳ್ಳಂಕಳಿಯನ್ನು ಆಚರಿಸಲಾಗುತ್ತದೆ. ಆ ಪ್ರಯಾಣದ ನಡುವೆ ಕ್ರಿಶ್ಚಿಯನರ ಮನೆಯಾದ ಮಾಪ್ಪಿಳಶ್ಯೇರಿಯಲ್ಲಿ ವಿಗ್ರಹ ಒಂದು ದಿನ ವಿರಮಿಸ ಬೇಕಾಯಿತಂತೆ. ಮರುದಿವಸ  ರಾಜನ  ಪ್ರಜೆಗಳಾದ ಹಿಂದೂಗಳು ಕ್ರಿಶ್ಚಿಯನರೂ ಸೇರಿ ವಿಗ್ರಹವನ್ನು ಅಂಬಲಪುೞಕ್ಕೆ ತಲುಪಿಸಿದರಂತೆ. ಈ ಘಟನೆಯನ್ನು ಚಂಬಕುಳ ವಳ್ಳಂಕಳಿಯ ಮೂಲಕ ಆಚರಿಸಲಾಗುತ್ತದೆ. ಈಗಲೂ ವಳ್ಳಂಕಳಿಗೆ ಬೇಕಾದ ಧ್ವಜ, ಹಗ್ಗ ಇತ್ಯಾದಿಗಳನ್ನು ಕಲ್ಲೂರ್‌ಕೋಡ್ ಇಗರ್ಜಿಯಿಂದಲೇ ಕೊಡಲಾಗುತ್ತದೆ.

ಹರಿಪಾಡಿನ ಸಮೀಪ ಪಾಯಿಪ್ಪಡ್ ಪಂಪಾತೀರದಲ್ಲಿ ಓಣಂ ಕಾಲದಲ್ಲಿ ನಡೆಯುವ ವಳ್ಳಂಕಳಿ (ಪಾಯಿಪ್ಪಾಟ್ಟು ಜಲೋತ್ಸವ)ಯನ್ನು ಹರಿಪ್ಪಾಡಿನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವಿಗ್ರಹ ಪ್ರತಿಷ್ಠಾಪನೆಯ ನೆನಪಿಗಾಗಿ ಆಚರಿಸಲಾಗುತ್ತದೆ. ಪಾಂಡವರು ಪೂಜಿಸುತ್ತಿದ್ದ ವಿಗ್ರಹವು ನೀರಿನಲ್ಲಿ ದೊರೆತಿದ್ದು ಅದನ್ನು ಆಚರಣೆಯೊಡನೆ ದೇವಾಲಯಕ್ಕೆ ತಂದುದರ ಸಂಕೇತವಾಗಿ ವಳ್ಳಂಕಳಿಯನ್ನು ಆಚರಿಸಲಾಗುತ್ತದೆ. ವಳ್ಳಂಕಳಿ ಆಡುವವರು ಹಾಡು ಹಾಡುತ್ತಾ ಮೆರವಣಿಗೆಗೆ ಬಂದು ದೇವಾಲಯ ಸಂದರ್ಶಿಸಿದ ಬಳಿಕವೇ ವಳ್ಳಂಕಳಿಗೆ ಹೋಗುವುದು. ವಿವಿಧೆಡೆಗಳಿಂದ ಬಂದ ದೋಣಿಗಾರರು ಈ ವಳ್ಳಂಕಳಿಯಲ್ಲಿ ಪಾಲ್ಗೊಳ್ಳು ತ್ತಾರೆ. ಇವಲ್ಲದೆ ಇನ್ನೂ ಅನೇಕ ವಳ್ಳಂಕಳಿಗಳೂ ಕೇರಳದೆಲ್ಲೆಡೆ ಆಚರಣೆಯಲ್ಲಿವೆ. ದೋಣಿಯಾಟದ ಸಂದರ್ಭದಲ್ಲಿ ಹಾಡುವ ಸಲುವಾಗಿ ರಚಿಸಿದ ಅನೇಕ ಹಾಡುಗಳು ಜನಪದರಲ್ಲಿವೆ. ಮಾರ್ತಾಂಡವರ್ಮ ಮಹಾರಾಜನ ಆಳ್ವಿಕೆಯ ಕಾಲದಲ್ಲಿ ಆತನ ಜಲ ಪ್ರಯಾಣದ ಸಂದರ್ಭದಲ್ಲಿ ರಾಮಪುರತ್ತ್ ವಾರಿಯರ್ ರಚಿಸಿದನೆಂದು ಹೇಳಲಾಗುವ ‘ಕುಚೇಲ ವೃತ್ತಂ’ ದೋಣಿಹಾಡು ಪ್ರಸಿದ್ಧವಾಗಿದೆ.