ಉತ್ತರ ಕೇರಳದ ಪೂರಂ (ವಸಂತೋತ್ಸವ)

ಕಣ್ಣೂರು ಜಿಲ್ಲೆಯಲ್ಲಿ ಮೀನ ಮಾಸದಲ್ಲಿ (ಮಾರ್ಚ್-ಎಪ್ರಿಲ್) ಪೂರಂ ಆಚರಿಸುವರು. ತಿರುವಾದಿರಕ್ಕೆ ಬದಲಾಗಿ ಈ ಪ್ರದೇಶದಲ್ಲಿ ಪೂರಂ ಆಚರಿಸುತ್ತಾರೆ. ಕಾರ್ತಿಕದಿಂದ ಪೂರಂ ವರೆಗಿನ ಆಚರಣೆಯಿದು. ಈ ದಿನಗಳಲ್ಲಿ ಹಿಂದೂಗಳ ಮನೆಗಳಲ್ಲಿ ಪ್ರೇಮ ದೇವತೆಯಾದ ಕಾಮನನ್ನು ಆರಾಧಿಸಲಾಗುತ್ತದೆ. ಕನ್ಯೆಯರು ಪುಷ್ಪಾರ್ಚನೆ ನೆರವೇರಿಸುವರು. ವಡೆ ನೈವೇದ್ಯ ಅಂದಿನ ವಿಶೇಷ. ಪೂರಂ ಕಾಮದೇವನಿಗೆ ವಿದಾಯ ಹೇಳುವ ದಿವಸವಾಗಿದೆ. ದೀಪಗಳೊಡನೆ ಕಾಮದೇವನ ವಿಗ್ರಹವನ್ನು ಮನೆಯಿಂದ ಹೊರಗೆ ತಂದು ಪ್ರದಕ್ಷಿಣೆ ಹಾಕಿ ಕೋರನದಿ ದಾಟಿ ಹೋಗದಂತೆ ವಿನಂತಿಸಿಕೊಳ್ಳುವರು. ಕೋರನದಿ ದಾಟಿ ಹೋದರೆ ದಕ್ಷಿಣ ಮಲಬಾರಿನ ಸ್ತ್ರೀಯರು ಕಾಮನನ್ನು ವಿಧೇಯರಾಗಿಸುವರಂತೆ. ಬಳಿಕ ಉತ್ತರ ದಿಕ್ಕಿಗೆ ಹೋಗದ ಹಾಗೆ ಮಾಡುವರೆಂಬುದು ನಂಬಿಕೆ. ಪೂರಂ ಸಂತೋಷದ ಆಚರಣೆಯ ಕಾಲ. ದೇವಸ್ಥಾನಗಳಲ್ಲಿ ರೂಪವಿಳಕ್ಕ್, ಪೂರಕಳಿ ಇತ್ಯಾದಿಗಳೂ ಇರುತ್ತವೆ.

ಕೇರಳದ ದೇವೀ ದೇವಾಲಯಗಳಲ್ಲಿ ಹಾಗೂ ಸ್ಥಾನಗಳಲ್ಲಿ ಮೀನ ಮಾಸದ ಕಾರ್ತಿಕದಿಂದ ಆರಂಭಿಸಿ ಪೂರ್ವಾಷಾಢ ನಕ್ಷತ್ರದ ವರೆಗಿನ ದಿವಸಗಳಲ್ಲಿ ಆಚರಿಸುವ ಆಚರಣೆಯೇ ಪೂರಂನೃತ್ಯ. ಕೇರಳದ ಬೇರೆ ಬೇರೆ ಪ್ರದೇಶಗಳಲ್ಲಿ ಇದರ ಆಚರಣ ವಿಧಾನ ಬೇರೆ ಬೇರೆ ತೆರನಾಗಿರುವುದನ್ನು ಗಮನಿಸಬಹುದು. ಪೂರಂ ಎಂಬ ಪದಕ್ಕೆ ಧಾರಾಳ, ಅತ್ಯಧಿಕ, ಉತ್ಸವ, ನೃತ್ಯಾತ್ಮಕ ಆಟ ಮೊದಲಾದ ಅರ್ಥಗಳಿವೆ. ಮಧ್ಯ ಕೇರಳದಲ್ಲಿ ಉತ್ಸವ ಎಂಬ ಅರ್ಥವೇ ಪ್ರಚಲಿತದಲ್ಲಿದೆ. ಪೂರೋತ್ಸವದ ಅಂಗವಾಗಿ ಪೂರಂನೃತ್ಯವನ್ನು ಪ್ರದರ್ಶಿಸುತ್ತಾರೆ. ಕಾಮದೇವನ ವಿಗ್ರಹ ಮಾಡಿ ಹೂ ಹಾಕಿ ಪೂಜಿಸುವುದೇ ಇದರ ವೈಶಿಷ್ಟ್ಯ. ಋತುಮತಿಯ ರಾಗದ ಹೆಣ್ಣು ಮಕ್ಕಳು ಮಿಂದು ಮಡಿಯುಟ್ಟು ವ್ರತಧಾರಿಣಿಯರಾಗಿ ವಿವಿಧ ಬಗೆಯ ಹೂಗಳಿಂದ ಕಾಮದೇವನ ರೂಪವನ್ನು ತಯಾರಿಸಿ ಒಂಬತ್ತು ದಿವಸಗಳವರೆಗೆ ಹೂ ಹಾಕಿ ಪೂಜಿಸುತ್ತಾರೆ. ಈ ಹೆಣ್ಣು ಮಕ್ಕಳಿಗೆ ‘ಪೂರಂ ಕುಞ್ಙಳ್’ (ಪೂರಂ ಮಕ್ಕಳು) ಎಂದು ಕರೆಯುವರು. ಮೊದಲ ನಾಲ್ಕು ದಿನಗಳಲ್ಲಿ ಕೆರೆ ಅಥವಾ ಬಾವಿಯ ಬಳಿಯಲ್ಲಿ ಕಾಮದೇವನ ರೂಪವನ್ನು ಇರಿಸಿ ಪೂಜಿಸುವರು. ನಂತರ ಮನೆಯ ಅಂಗಳದಲ್ಲಿ ಬಳಿಕ ಮನೆಯ ಪಶ್ಚಿಮ ದಿಕ್ಕಿನ ಕೋಣೆಯಲ್ಲಿ ಇರಿಸಿ ಪೂಜಿಸುವರು. ಕೆಲವೊಮ್ಮೆ ಮಣ್ಣಿನಿಂದ ಕಾಮನ ವಿಗ್ರಹವನ್ನು ಮಾಡಿ ಗುಲಗಂಜಿಯ ಕಣ್ಣುಗಳನ್ನು ಇರಿಸಿ ಹೂಗಳಿಂದ ಅಲಂಕರಿಸುವುದೂ ಇದೆ. ಕಾಮದೇವನನ್ನು ಬೀಳ್ಕೊಡುವ ಆಚರಣೆಯೊಂದಿಗೆ ಪೂರಂನೃತ್ಯ ಕೊನೆಯಾಗುತ್ತದೆ. ಪೂರಂ ಮಕ್ಕಳು ಪೂಜಿಸಿದ ಹೂ ವಿಗ್ರಹಗಳನ್ನು ಬುಟ್ಟಿಯಲ್ಲಿರಿಸಿ ಹೊತ್ತು ಕೊಂಡೊಯ್ದು ಹಾಲುಸೂಸುವ ವೃಕ್ಷಕ್ಕೆ ಪ್ರದಕ್ಷಿಣೆ ಬಂದು ವಿಗ್ರಹವನ್ನು ಅದರ ಬುಡದಲ್ಲಿರಿಸುವರು. ನೈವೇದ್ಯ ಮಾಡಿ ಜಲತರ್ಪಣವಿತ್ತು ಕಾಮದೇವನನ್ನು ಬೀಳ್ಕೊಡುವರು. ಈ ವರ್ಷ ಹೋಗು ಬರುವ ವರ್ಷ ಪೂರಂ ದಿನಗಳಿಗೆ ಬಾ ಕಾಮ ಎಂಬರ್ಥದ ಹಾಡುಗಳನ್ನು ಹಾಡಿ ಕಳುಹಿಸಿಕೊಡುವರು.

ಪೂರಂ ನೃತ್ಯಕ್ಕೆ ಸಂಬಂಧಿಸಿದಂತೆ ಹೇಳುವ ಐತಿಹ್ಯಗಳು ಹಲವಿವೆ. ಒಂದು ಕತೆಯ ಪ್ರಕಾರ ಒಮ್ಮೆ ಶ್ರೀಕೃಷ್ಣನು ದೇವಲೋಕಕ್ಕೆ ಹೋಗಿದ್ದಾಗ ಇಂದ್ರನು ‘ಪುರಂ’ ಎಂಬ ದೇವಸ್ತ್ರೀಯಿಂದ ಒಂದು ನೃತ್ಯವನ್ನು ಏರ್ಪಡಿಸಿದನು. ಈ ನೃತ್ಯದಿಂದ ಆಕರ್ಷಿತನಾದ ಶ್ರೀಕೃಷ್ಣನು ದ್ವಾರಕೆಗೆ ಬಂದು ಗೋಪಾಲಕರಿಗೆ ಕಲಿಸಿಕೊಟ್ಟನಂತೆ. ಇನ್ನೊಂದು ಕತೆಯ ಪ್ರಕಾರ ಶಿವನು ಕಾಮನನ್ನು ದಹಿಸಿದ ತರುವಾಯ ದುಃಖಿಸುವ ರತಿಯನ್ನು ಕಂಡು ಮಹಾವಿಷ್ಣು ಪರಿತಪಿಸಿದನು. ರತಿಯನ್ನು ಸಮಾಧಾನಪಡಿಸುವ ಸಲುವಾಗಿ ತ್ರೈಲೋಕ ವಾಸಿಗಳು ಚ್ರೈತ್ರ ಮಾಸದ ಕಾರ್ತಿಕ ಮೊದಲ್ಗೊಂಡು ಪೂರ್ವಾಷಾಢದ ವರೆಗಿನ ಒಂಬತ್ತು ದಿನಗಳ ಕಾಲ ಹದಿನೆಂಟು ಮಂದಿ ಕನ್ಯೆಯರಿಂದ ಪುಷ್ಪ ಶರಗಳನ್ನು ಮಾಡಿ ಒಂದು ನೃತ್ಯವನ್ನೇರ್ಪಡಿಸಿದ. ಇವರು ಹದಿನೆಂಟು ವರ್ಣಗಳಲ್ಲಿ ಇದನ್ನು ಆಡಿದರು. ಇದುವೇ ಮುಂದೆ ಪೂರಂ ಆಚರಣೆ ಯಾಗಿ ಪ್ರಚಾರಕ್ಕೆ ಬಂತು ಎಂದು ನಂಬಲಾಗಿದೆ.

ತೃಶ್ಯೂರ್ ಪೂರಂ (ವಸಂತೋತ್ಸವ)

ಕೇರಳದ ಪೂರಂ ಉತ್ಸವಗಳಲ್ಲಿಯೇ ಅತ್ಯಂತ ಪ್ರಸಿದ್ಧವಾದುದು ತೃಶ್ಯೂರ್‌ಪೂರಂ. ಇದು ದಕ್ಷಿಣ ಭಾರತದ ಅನೇಕರನ್ನು ಆಕರ್ಷಿಸುವ ಉತ್ಸವ. ಮೇಷ ಮಾಸದ ಪೂರಂ* ನಕ್ಷತ್ರದಂದು (ಏಪ್ರಿಲ್-ಮೇ) ತಿಂಗಳು ಉತ್ಸವ. ವಡಕ್ಕ್‌ನ್ನಾಥನ್ ದೇವಾಲಯದ  ಸಮೀಪವಿರುವ ತಿರುವಂಬಾಡಿ ಪರಮೇಕಾವ್ ಮೊದಲಾದ ದೇವಸ್ಥಾನಗಳಿಂದ ಹಣೆಪಟ್ಟಿ ಕಟ್ಟಿ ಛತ್ರ ಚಾಮರಗಳೊಡನೆ ಆನೆಗಳ ಸವಾರಿ ಏರ್ಪಡಿಸಲಾಗುತ್ತದೆ. ೧೭೮೯-೧೮೦೫ರ ವರೆಗೆ ಕೊಚ್ಚಿಯಲ್ಲಿ ರಾಜ್ಯಭಾರ ಮಾಡಿದ ಶಕ್ತನ್‌ತಂಬುರಾನ್ ಪೂರಂ ಉತ್ಸವವನ್ನು ಆರಂಭಿಸಿದ. ಜಾತಿ ಮತ ಭೇದವನ್ನು ತೊರೆದು ತೃಶ್ಯೂರಿನ ಸಕಲ ಜನರ ನೆರವಿನಿಂದ ಈ ಉತ್ಸವ ನಡೆಯುತ್ತದೆ. ತೃಶ್ಯೂರ್ ಪೂರಂಗೆ ಸಂಬಂಧಿಸಿದಂತೆ ಸಿಡಿಮದ್ದಿನ ಪ್ರದರ್ಶನದಲ್ಲಿ ತಿರುವಂಬಾಡಿ ಮತ್ತು ಪರಮೇಕಾವ್ ದೇವಾಲಯಗಳ ನಡುವೆ ದೊಡ್ಡ ಸ್ಫರ್ಧೆಯೇ ನಡೆಯುತ್ತದೆ. ಅಪರಾಹ್ನ ನಡೆಯುವ ಗಜರಾಜರ ಮೆರವಣಿಗೆಯಲ್ಲೂ ಈ ಸ್ಱರ್ಧೆ ನಡೆಯುತ್ತದೆ. ವಡಕ್ಕ್‌ನ್ನಾಥನ್ ಮೆರವಣಿಗೆಗೆ ಅಲಂಕೃತಗೊಂಡ ವೀರರ ಸಂಖ್ಯೆಯೂ ಅನೇಕವಿರುತ್ತದೆ. ‘ಕುಡಮಾಟ್ಟಂ’ ಮೊದಲಾದ ಆಚರಣೆಗಳು ಬಹು ಮಂದಿಯ ಗಮನ ಸೆಳೆಯುತ್ತದೆ. ಹಾಗೆಯೇ ಪೂರಂಗೆ ಚೆಂಡೆ ಮೇಳವು ದೇಶದಲ್ಲಿಯೇ ಅನನ್ಯವಾದ ಒಂದು ವಾದ್ಯವಾದನ ವ್ಯವಸ್ಥೆಯಾಗಿದೆ.

ಪೊಂಗಲ್

ಕೃಷಿ ಸಂಬಂಧಿಯಾದ ಅನೇಕ ಆಚರಣೆಗಳು ಕೇರಳದಲ್ಲಿವೆ. ತಮಿಳು ಪರಂಪರೆಯಲ್ಲಿ ಪ್ರಕೃತಿ ಆರಾಧನೆಗೆ ಸಂಬಂಧಿಸಿದ ಒಂದು ಆಚರಣೆಯೇ ಪೊಂಗಲ್. ಇದು ದಕ್ಷಿಣ ಕೇರಳದಲ್ಲಿ ಮಾತ್ರವೇ ಪ್ರಚಲಿತದಲ್ಲಿದೆ. ನಾಲ್ಕು ದಿವಸಗಳ ಕಾಲ ಪೊಂಗಲ್ ಆಚರಿಸಲಾ ಗುತ್ತದೆ. ಅವುಗಳು ಅನುಕ್ರಮವಾಗಿ ಬೋಧಿಪೊಂಗಲ್, ಸೂರ್ಯಪೊಂಗಲ್, ಮಾಟ್ಟ್‌ಪೊಂಗಲ್, ಕಾಣಂಪೊಂಗಲ್. ಇವಕ್ಕೆ ತೈಪೊಂಗಲ್, ಮಕರ ಪೊಂಗಲ್ ಇತ್ಯಾದಿ ಗಳು ಹೆಸರುಗಳಿಂದಲೂ ಕರೆಯಲಾಗುತ್ತದೆ. ಇವೂ ದಕ್ಷಿಣ ಭಾರತದ ಕೃಷಿ ಸಂಬಂಧಿ ಆಚರಣೆಗಳಾಗಿವೆ. ಕೃಷಿ ಕೆಲಸಗಳಿಗೆ ಉಪಯೋಗಿಸುವ ಸಾಕು ಪ್ರಾಣಿಗಳಿಗೆ ಪೂಜೆ ಸಲ್ಲಿಸುವ ಆಚರಣೆ. ಮಕರಮಾಸ ಆರಂಭದಲ್ಲಿ (ಜನವರಿ) ತೈಪೊಂಗಲನ್ನು ಆಚರಿಸಲಾಗುತ್ತದೆ.

ಕರ್ಕಟಕ ಮಾಸದಲ್ಲಿ ಆರಂಭವಾಗುವ ಕೃಷಿ ಕೆಲಸಗಳು ಮಕರ ಸಂಕ್ರಮಣದೊಡನೆ ಕೊನೆಗೊಳ್ಳುತ್ತವೆ. ಆ ದಿವಸವೇ ಬೋಧಿಪೊಂಗಲನ್ನು ಆಚರಿಸಲಾಗುತ್ತದೆ. ಎರಡನೆಯ ದಿವಸ ಸೂರ್ಯಪೊಂಗಲನ್ನು ಆಚರಿಸಲಾಗುತ್ತದೆ. ಇದು ಸೂರ್ಯಾರಾಧನೆಯ ದಿನ. ಅಂದು ಹೊಸ ಪಾತ್ರೆಯಲ್ಲಿ ಹಾಲಿನಲ್ಲಿ ಹೊಸ ಅಕ್ಕಿಯನ್ನು ಬೇಯಿಸಿ ಉಕ್ಕಿ ಬರುವಾಗ ‘ಪೊಂಗಲೊ, ಪೊಂಗಲ್’ ಎಂದು ಎಲ್ಲರೂ ಕೂಗುವುದು ಆಚರಣೆಯ ಮುಖ್ಯಭಾಗ. ಅದರ ಮರುದಿನ ಮಾಟ್ಟ್‌ಪೊಂಗಲ್. ಮಾಟ್ಟ್‌ಪೊಂಗಲ್‌ನ ದಿವಸ ಮುಖ್ಯವಾಗಿ ಜಾನುವಾರುಗಳನ್ನು ಸ್ನಾನ ಮಾಡಿಸಿ, ಶೃಂಗರಿಸಿ ಹೊಟ್ಟೆ ತುಂಬ ಆಹಾರ ನೀಡುವುದು ಆಚರಣೆಯ ಭಾಗ. ಅಂದು ಅವುಗಳಿಂದ ಯಾವುದೇ ರೀತಿಯ ಕೆಲಸಗಳನ್ನು ಮಾಡಿಸು ವಂತಿಲ್ಲ. ಈ ಹಬ್ಬದಲ್ಲಿ ಜಾನುವಾರುಗಳಿಗೆ ಯಾವುದೇ ತೆರನ ಹಿಂಸೆಯಿಲ್ಲ.

ನಾಲ್ಕನೆಯ ದಿವಸ ಕಾಣಂಪೊಂಗಲ್. ಹಲವು ರೀತಿಯ ಮನರಂಜನೆಗಾಗಿ ಕಲಾ ಪ್ರದರ್ಶನಗಳನ್ನು ನಡೆಸುವ ದಿನ ಇದು. ಪೊಂಗಲ್ ದಿನಗಳಲ್ಲಿ ಮಳೆಯ ದೇವತೆಯಾದ ಇಂದ್ರ, ಬೆಳಕಿನ ದೇವತೆಯಾದ ಸೂರ್ಯ ಹಾಗೂ ಗೋವುಗಳನ್ನು ಆರಾಧಿಸಲಾಗುತ್ತದೆ.

ಪ್ರಾಣಿಗಳಿಗೆ ಹಿಂಸೆ ನೀಡಿ ಮನರಂಜನೆ ಪಡೆಯುವ ಆಟಗಳು ಉತ್ತರ ಕೇರಳದಲ್ಲಿ ಕೋಳಿ ಅಂಕ, ಕಂಬಳ ಮೊದಲಾದವುಗಳಿವೆ. ಇವು ತುಳು ನಾಡಿನಲ್ಲಿಯೂ ನಡೆಯುತ್ತವೆ. ವಿನಾಯಕ ಚತುರ್ಥಿ, ಅಷ್ಟಮಿ, ದೀಪಾವಳಿ ವೊದಲಾದ ಸಂದರ್ಭಗಳಲ್ಲಿ ಕೋಳಿಗಳ ಕಾಲುಗಳಿಗೆ ಕತ್ತಿ ಕಟ್ಟಿ ಹೋರಾಟಕ್ಕಿಳಿಸುವ ಕೋಳಿ ಅಂಕವನ್ನು ಏರ್ಪಡಿಸಲಾಗುತ್ತದೆ. ಕೃಷಿ ಸಂಬಂಧಿಯಾದ ಕಂಬಳವು ಹೊಲವನ್ನು ಚೆನ್ನಾಗಿ ಹದ ಮಾಡುವ ಆಶಯವನ್ನು ಹೊಂದಿದೆ. ಕೋಣಗಳನ್ನು ಕೆಸರು ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯಿದು. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಸಲುವಾಗಿಯೆ ಕೋಣಗಳನ್ನು ಸಾಕುವ ಜನರಿದ್ದಾರೆ. ಕೋಣ ಗಳನ್ನು ಕಂಬಳದಲ್ಲಿ ಗೆಲ್ಲಿಸುವುದೆಂದರೆ ಮನೆತನದ ಪ್ರತಿಷ್ಠೆಯನ್ನು ಕಾಯ್ದುಕೊಳ್ಳುವುದೂ ಆಗಿದೆ.

ಮೇಲೆ ವಿವರಿಸಿದ ಆಚರಣೆಗಳಲ್ಲದೆ ಇನ್ನೂ ಅನೇಕ ಸಣ್ಣ ಪುಟ್ಟ ದೇವಾಲಯಗಳಲ್ಲಿ ಆಯಾ ದೇವಾಲಯಗಳ ಆರ್ಥಿಕ ಸ್ಥಿತಿಗತಿಗಳನ್ನನುಸರಿಸಿ ನಿರ್ದಿಷ್ಟ ಆಚರಣೆಗಳು ನಡೆಯುತ್ತವೆ. ದಕ್ಷಿಣ ಕೇರಳದ ಅನೇಕ ದೇವಾಲಯಗಳಲ್ಲಿ ಆನೆಗಳನ್ನು ಶೃಂಗರಿಸಿ ಸವಾರಿ ಏರ್ಪಡಿಸುವುದು ಮುಖ್ಯ ಆಕರ್ಷಣೆ. ಇತರ ದೇವಾಲಯಗಳ ಉತ್ಸವಗಳ ಸಂದರ್ಭದಲ್ಲಿ ಚೆಂಡೆ ವಾದ್ಯ ವಿಶೇಷವಾಗಿದೆ. ಅನೇಕ ಮಂದಿ ಚೆಂಡೆ ಮೊದಲಾದ ವಾದ್ಯಗಳನ್ನು ಹಲವು ಗಂಟೆಗಳ ಕಾಲ ನಿರಂತರ ಬಾರಿಸುವ ವಿಶಿಷ್ಟ ಆಚರಣೆ ಸಾಮಾನ್ಯವಾಗಿದೆ. ದೇವಾಲಯಗಳಿಗೆ ಭಕ್ತರು ಬರುವ ಸಂಖ್ಯೆಯನ್ನಾಧರಿಸಿ ಹಾಗೂ ಆಯಾ ದೇವಾಲಯಗಳ ಆದಾಯವನ್ನು ದೃಷ್ಟಿಯಲ್ಲಿರಿಸಿಕೊಂಡು ವರ್ಷಕ್ಕೆ ಒಂದು ದಿನವೋ ಅಥವಾ ಹಲವು ದಿನವೋ ಆಚರಣೆಗಳು ನಡೆಯುತ್ತವೆ. ಧ್ವಜ ಏರಿಸುವ ಅಥವಾ ಬಾಳೆ ಗೊನೆ ಕಡಿಯುವಲ್ಲಿಂದ ಆರಂಭಿಸಿ ಅವಭೃತ ಸ್ನಾನದ ವರೆಗೆ ಸಾಮಾನ್ಯ ಆಚರಣೆಗಳು ನಡೆಯುತ್ತವೆ. ಹಾಗಿದ್ದಾಗ್ಯೂ ಪ್ರಾದೇಶಿಕವಾಗಿ ಆಚರಣೆಗಳು ವೈವಿಧ್ಯ ಹಾಗೂ ಮಹತ್ವವನ್ನು ಪಡೆಯುತ್ತವೆ. ಆಚರಣೆಗಳ ಸಂದರ್ಭದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಜೊತೆಗೆ ಕಲಾ ಪ್ರದರ್ಶನಗಳನ್ನು ಏರ್ಪಡಿಸುವುದೂ ಇದೆ. ಚೆಂಡೆ ಮೇಳ, ತಾಯಂಬಕ, ಪಂಚವಾದ್ಯ, ನಾದ ಸ್ವರಮೇಳ, ಕಥಕಳಿ, ತುಳ್ಳಲ್, ಕೂತ್ತ್, ಕೂಡಿಯಾಟಂ, ಪಾಠಕಂ, ಹರಿಕಥೆ, ವೇಲಕಳಿ, ತೆಯ್ಯಂ, ತಿರ, ತೂಕ್ಕಂ, ಮೊದಲಾದ ಕಲಾ ಪ್ರದರ್ಶನಗಳು ದೇವಾಲಯಗಳ ಆವರಣದಲ್ಲಿಯೇ ಪ್ರದರ್ಶನಗೊಳ್ಳುತ್ತಿದ್ದುವು.

ಶಬರಿಮಲೆ ಉತ್ಸವ

ಕೇರಳದಾದ್ಯಂತ ಹಾಗೂ ಕೇರಳದ ಹೊರಗಡೆಯ ಜನರನ್ನು ಆಕರ್ಷಿಸುವ ಉತ್ಸವಗಳಲ್ಲಿ ಶಬರಿಮಲೆ ಉತ್ಸವ ಪ್ರಮುಖವಾದುದು. ಶಬರಿಮಲೆಯಲ್ಲಿ ಎರಡು ವಾರ್ಷಿಕೋತ್ಸವಗಳಿವೆ. ಮಂಡಲವಿಳಕ್ಕ್ ಉತ್ಸವ ಹಾಗೂ ಮಕರವಿಳಕ್ಕ್ ಉತ್ಸವ ಎಂಬೀ ಎರಡು ಉತ್ಸವಗಳು ಅನೇಕ ಜನರನ್ನು ಆಕರ್ಷಿಸುತ್ತವೆ. ಶಬರಿಮಲೆಗೆ ಹೋಗುವುದಕ್ಕೆ ಮೊದಲು ಬ್ರಹ್ಮಚರ್ಯೆ ವೃತಾಚರಣೆಯನ್ನು ಮಾಡಬೇಕು. ಒಂಬತ್ತು ಹಾಗೂ ಐವತ್ತೈದಕ್ಕೂ ನಡುವಿನ ವಯಸ್ಸಿನ ಮಹಿಳೆಯರು ಶಬರಿಮಲೆಗೆ ಹೋಗುವಂತಿಲ್ಲ. ಶಬರಿಮಲೆಗೆ ಹೋಗುವ ಭಕ್ತರು ತೆಂಗಿನಕಾಯಿಯಲ್ಲಿ ತುಪ್ಪವನ್ನು ತುಂಬಿಸಿಕೊಂಡು ಪ್ರಯಾಣದ ನಡುವೆ ಅಗತ್ಯವಾದ ವಸ್ತುಗಳನ್ನು ಹಾಗೂ ಹರಕೆಯೊಪ್ಪಿಸಲಿರುವ ಸಾಮಗ್ರಿಗಳನ್ನು ಕಟ್ಟಿಕೊಂಡು ಶಬರಿಮಲೆಗೆ ಶರಣಂ ಕೂಗುತ್ತಾ ಯಾತ್ರೆ ಆರಂಭಿಸುವರು. ತೆಂಗಿನಕಾಯಿಯಲ್ಲಿ ತುಂಬಿಸಿಕೊಂಡ ತುಪ್ಪ ಅಯ್ಯಪ್ಪನ ಅಭಿಷೇಕಕ್ಕಿರುವುದು. ಕಟ್ಟುಕಟ್ಟಿ ಹೊರಡುವ ಸಂದರ್ಭದಲ್ಲಿ ವಿಶೇಷ ಆಚರಣೆಗಳಿವೆ. ವ್ರತ ಆಚರಣೆ ಆರಂಭಿಸಿದ ಭಕ್ತನನ್ನು ಸ್ವಾಮಿ ಎಂದು ಕರೆಯುವರು. ರುದ್ರಾಕ್ಷಿ ಅಥವಾ ತುಳಸೀ ದಳಗಳ ಮಾಲೆ, ಹಾಗೂ ಕಪ್ಪುಬಟ್ಟೆ ಧರಿಸಿದ ಸ್ವಾಮಿ ವ್ರತ ಮುಗಿಯುವವರೆಗೆ ಕ್ಷೌರ ಮಾಡುವಂತಿಲ್ಲ. ಕಟ್ಟುಕಟ್ಟಿ ಶಬರಿಮಲೆಗೆ ಹೋಗುವ ಭಕ್ತರು ಹದಿನೆಂಟು ಮೆಟ್ಟಿಲುಗಳನ್ನು ತುಳಿದು ಅಯ್ಯಪ್ಪನಿಗೆ ತುಪ್ಪದ ಅಭಿಷೇಕ ಾಡುವರು. ಮೆಟ್ಟಿಲುಗಳಿಗೆ ತೆಂಗಿನಕಾಯಿ ಒಡೆಯುವುದು ಸಂಪ್ರದಾಯ. ಹದಿನೆಂಟು ಬಾರಿ ಮಲೆ ತುಳಿದವರು ಸ್ವಾಮಿ ‘ಪೆರಿಯಸ್ವಾಮಿ’ ಎಂದೆನಿಸಿಕೊಳ್ಳುವರು. ಮೂರು ಬಾರಿ ಮಲೆ ತುಳಿದವರು ‘ಗುರುಸ್ವಾಮಿ’ ಎಂದೆನಿಸಿಕೊಳ್ಳುವರು. ಮೊದಲ ಬಾರಿಗೆ ಮಲೆಗೆ ಹೋಗುವ ಭಕ್ತರು ‘ಕನ್ನಿಸ್ವಾಮಿ’ ಎಂದೆನಿಸಿಕೊಳ್ಳುವರು. ಮಲೆಗೆ ಹೋಗುವ ಬಾಲಕರು ‘ಮಣಿಕಂಠ ಸ್ವಾಮಿ’ ಎನಿಸಿಕೊಳ್ಳುವರು. ಮಕರವಿಳಕ್ಕ್ ಕಳೆದರೆ ಶಬರಿಮಲೆಯಲ್ಲಿ ಬಾಗಿಲು ಮುಚ್ಚುತ್ತದೆ. ಇದನ್ನು ‘ನಡೆಯಡಯ್ಕಲ್’ ಎನ್ನುವರು. ಮೊದಲ ಬಾರಿಗೆ ಮಲೆಗೆ ಹೋಗುವವರು ಎರುಮೇಲಿಯ ಶಾಸ್ತಾವ್ ದೇವಸ್ಥಾನವನ್ನು ಸಂದರ್ಶಿಸಬೇಕೆಂಬುದು ನಿಯಮ. ಬಳಿಕ ಸಮೀಪವಿರುವ ವಾವರ ಸ್ವಾಮಿಯ ಮಸೀದಿಗೂ ಭೇಟಿ ನೀಡಬೇಕು. ಅಲ್ಲಿಯೂ ಹರಕೆ ಸಮರ್ಪಿಸಬೇಕು.

ವೈಕಂ ಅಷ್ಟಮಿ

ಕುಂಭ (ಫೆಬ್ರುವರಿ-ಮಾರ್ಚ್), ವೃಶ್ಚಿಕ (ನವೆಂಬರ್-ಡಿಸೆಂಬರ್) ಎಂಬೀ ಮಾಸಗಳಲ್ಲಿ ವೈಕಂ ಶಿವದೇವಾಲಯದ ಅಷ್ಟಮಿ ಉತ್ಸವಗಳು ನಡೆಯುತ್ತವೆ. ಇವುಗಳಲ್ಲಿ ವೃಶ್ಚಿಕಾಷ್ಟಮಿಯೇ ಬಹುಮುಖ್ಯವಾದುದು. ಆಚರಣೆಯು ಹನ್ನೆರಡು ದಿವಸಗಳ ವರೆಗೆ ನಡೆಯುತ್ತದೆ. ಉದಯನಾಪುರಂನ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಅವಭೃತ ಸ್ನಾನ. ಉತ್ಸವದ ಅಂಗವಾಗಿ ಪಂಚವಾದ್ಯ ವಿಶೇಷ. ಅಷ್ಟಮಿಯ ದಿವಸ ಉದಯನಾಪುರಂ ಹಾಗೂ ವೈಕಂ ದೇವಾಲಯಗಳಲ್ಲಿನ ದೇವರ ಮೆರವಣಿಗೆ ಇರುತ್ತದೆ. ತಂದೆ ಮಗನ ಅಪೂರ್ವ ಸಮಾಗಮವಾಗಿ ಈ ಉತ್ಸವವನ್ನು ಜನರು ಕೊಂಡಾಡುವರು.

ಕೊಟ್ಟಿಯೂರು ಉತ್ಸವ

ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ದೇವಾಲಯದಲ್ಲಿ ವೃಷಭ ಮಾಸ (ಮೇ-ಜೂನ್)ದ ಸ್ವಾತಿ ನಕ್ಷತ್ರದಿಂದ ಆರಂಭವಾಗಿ ಇಪ್ಪತ್ತೆಂಟು ದಿವಸಗಳ ಕಾಲ ಉತ್ಸವ ನಡೆಯುತ್ತದೆ. ಅರಣ್ಯ ಪ್ರದೇಶದಲ್ಲಿ ಅಕ್ಕರಕೊಟ್ಟಿಯೂರು, ಇಕ್ಕರಕೊಟ್ಟಿಯೂರು ಎಂಬೆರಡು ದೇವಾಲಯಗಳಿವೆ. ವಯನಾಡಿನ ತವಿಞಾಲ್ ಗ್ರಾಮದ ಮುದಿರಕ್ಕಾವಿನಿಂದ ಒಂದು ಖಡ್ಗ ವನ್ನು ಇಕ್ಕರಕೊಟ್ಟಿಯೂರು ದೇವಾಲಯಕ್ಕೆ ತರುವುದರ ಮೂಲಕ ಉತ್ಸವಕ್ಕೆ ಚಾಲನೆ ದೊರೆಯುತ್ತದೆ. ಮುದಿರಕ್ಕಾವಿನಲ್ಲಿ ನಿತ್ಯವೂ ಪೂಜಿಸಲಾಗುವ ಈ ಖಡ್ಗವು ದಕ್ಷನನ್ನು ಸಂಹರಿಸಿದ ವೀರಭದ್ರನ ಆಯುಧ ಎಂಬ ನಂಬಿಕೆಯಿದೆ. ಇಕ್ಕರಕೊಟ್ಟಿಯೂರು ದೇವಾಲ ಯದ ಗೋಪುರದಲ್ಲಿ ಸಂರಕ್ಷಿಸಿಟ್ಟಿರುವ ಆಭರಣಗಳನ್ನು ಅಕ್ಕರಕೊಟ್ಟಿಯೂರು ದೇವಾಲ ಯದ ಶ್ರೀ ಕಾವಿಗೆ ಉತ್ಸವದ ಕೊನೆಯ ದಿನ ಮೆರವಣಿಗೆಯಲ್ಲಿ ತರಲಾಗುತ್ತದೆ. ಉತ್ತರ ಕೇರಳದಿಂದಲೂ ಕೂರ್ಗ್ ಪ್ರದೇಶದಿಂದಲೂ ಅನೇಕ ಭಕ್ತರು ಈ ಉತ್ಸವದಲ್ಲಿ ಭಾಗವಹಿ ಸುತ್ತಾರೆ. ದಕ್ಷಯಾಗದ ಸಂಕೇತವಾಗಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ನೆಯ್ಯಟ (ತುಪ್ಪದಾಟ) ಹಾಗೂ ಎಳನೀರಾಟ ಇವೆರಡು ಉತ್ಸವದ ಪ್ರಮುಖ ಕಾರ್ಯಕ್ರಮಗಳು.

ಪ್ರಾದೇಶಿಕ ಆಚರಣೆಗಳು

ಮೇಲೆ ಹೆಸರಿಸಿದ ಆಚರಣೆಗಳಲ್ಲದೆ ಪ್ರಾದೇಶಿಕವಾಗಿಯೂ ಅನೇಕ ಆಚರಣೆಗಳು ಸಾಂಸ್ಕೃತಿಕವಾಗಿ ಪ್ರಮುಖವಾಗಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಬಹುದು. ತಿರುವನಂತಪುರಂನ ಶ್ರೀಪದ್ಮನಾಭಸ್ವಾಮಿ ದೇವಾಲಯದಲ್ಲಿ ಆರು ವರ್ಷಕ್ಕೊಮ್ಮೆ ನಡೆಸುವ ‘ಮುರಜಪಂ’ ನಂಬೂದಿರಿ ಬ್ರಾಹ್ಮಣರು ಎಂಟು ವಾರಗಳ ಕಾಲ ನಿರಂತರ ನಡೆಸುವ ವೈದಿಕ ಮಂತ್ರೋಚ್ಛಾರಣೆಯ ಕಾರ್ಯಕ್ರಮ. ಲಕ್ಷದೀಪ ಮಹೋತ್ಸವದೊಡನೆ ಮುರಜಪ ಅಂತ್ಯಗೊಳ್ಳುತ್ತದೆ. ಪುರಾಣ ಕಥಾಪಾತ್ರವಾದ ಕಾರ್ತವೀರ್ಯಾರ್ಜುನನು ನಡೆಸುತ್ತಿದ್ದ ಮುರಜಪದ ರೀತಿಯಂತೆ ಮಾರ್ತಾಂಡವರ್ಮ ಮಹಾರಾಜನು (೧೭೨೯-೧೭೫೮) ಮುರಜಪ ಕಾರ್ಯಕ್ರಮಕ್ಕೆ ನಿಯಮಾವಳಿಗಳನ್ನು ರೂಪಿಸಿದ ಎಂಬುದು ನಂಬಿಕೆ. ತುಲಾ (ಅಕ್ಟೋಬರ್-ನವೆಂಬರ್), ಮೀನಂ (ಮಾರ್ಚ್-ಏಪ್ರಿಲ್) ಮೊದಲಾದ ತಿಂಗಳುಗಳಲ್ಲಿ ಹತ್ತು ದಿನಗಳ ಉತ್ಸವವನ್ನು ನಡೆಸಲಾಗುತ್ತದೆ. ಶಂಖಮುಖ ಕಡಲ ತೀರಕ್ಕೆ ಹೋಗುವ ಅವಭೃತ ಸ್ನಾನದ ಮೆರವಣಿಗೆಯೇ ಉತ್ಸವದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಇದರಲ್ಲಿ ತಿರುವಿದಾಂ ಕೂರು ಮಹಾರಾಜನ ವಂಶಜರೂ ಭಾಗವಹಿಸುತ್ತಾರೆ.

ತಿರುವನಂತಪುರಂನ ಮೆಣಕಾಚ್ಚಿನ ಸಮೀಪವಿರುವ ಆಟ್ಟ್‌ಕಾಲ್ ಭಗವತಿ ದೇವಸ್ಥಾನ ದಲ್ಲಿ ವರ್ಷಕ್ಕೊಮ್ಮೆ ಕುಂಭ (ಮಾರ್ಚ್-ಎಪ್ರಿಲ್) ಮಾಸದಲ್ಲಿ ಒಂಬತ್ತು ದಿವಸ ನಡೆಯುವ ಪೊಂಕಾಲ ಮಹೋತ್ಸವ ಪ್ರಸಿದ್ಧವಾಗಿದೆ. ಒಂಬತ್ತನೆಯ ದಿವಸ ಸಾವಿರಾರು ಮಹಿಳೆಯರು ಪೊಂಕಾಲ ಹಾಕಲು ಬೇಕಾದ ಪದಾರ್ಥಗಳನ್ನು ತಂದು ದೇವಾಲಯದ ಸುತ್ತಮುತ್ತಲ ಆವರಣದಲ್ಲಿ ಸೇರುವರು. ಒಲೆ ಹೂಡಿ ನೈವೇದ್ಯವನ್ನು ಪಾಕ ಮಾಡಿ ದೇವಿಗೆ ಸಮರ್ಪಿ ಸುವರು. ಕೇರಳದ ಮಹಿಳೆಯರ ಶಬರಿಮಲೆ ಎಂದೇ ಪ್ರಸಿದ್ಧವಾದ ಈ ದೇವಸ್ಥಾನದ ಪೊಂಕಾಲ ಆಚರಣೆಗೆ ಲಕ್ಷೋಪಲಕ್ಷ ಮಹಿಳೆಯರು ಬರುತ್ತಾರೆ. ದೇವಾಲಯಗಳಲ್ಲಿ ಇಷ್ಟ ದೇವತೆಯನ್ನು ಪ್ರತಿಷ್ಠಾಪಿಸಿ ಆರಾಧಿಸುವುದಕ್ಕೂ ಪೂರ್ವದಲ್ಲಿದ್ದ ಸಂಪ್ರದಾಯವಿದು ಎಂದು ಊಹಿಸಬಹುದಾಗಿದೆ.

ಓಚ್ಚಿರದ ಪರಬ್ರಹ್ಮ ದೇವಸ್ಥಾನದಲ್ಲಿ ಕರ್ಕಾಟಕ ಮಾಸದಲ್ಲಿ ಓಚ್ಚಿರ್‌ಕಳಿ ನಡೆಯುತ್ತದೆ. ಕಾಯಂಕುಳಂ ರಾಜನಿಗೂ ಅಂಬಲಪ್ಪುೞದ ರಾಜನಿಗೂ ಪರಸ್ಪರ ನಡೆದ ಯುದ್ಧವನ್ನು ಸಾಂಕೇತಿಕವಾಗಿ ಅನುಸರಿಸುವ ರೀತಿಯ ಆಚರಣೆಯಿದು. ಒಂದು ಕಾಲದಲ್ಲಿ ನಾಯನ್ಮಾರರು ಮಾತ್ರ ಈ ಆಟದಲ್ಲಿ ಭಾಗವಹಿಸುತ್ತಿದ್ದರು. ಇತ್ತೀಚೆಗೆ ಎಲ್ಲಾ ಸಮುದಾಯಗಳವರೂ ಪಾಲ್ಗೊಳ್ಳುತ್ತಿದ್ದಾರೆ. ತಿರುವಿದಾಂಕೂರು ಪ್ರದೇಶದ ಎಲ್ಲೆಡೆಗಳಿಂದ ಸಾವಿರಾರು ಮಂದಿ ಓಚ್ಚಿರಕಳಿಯಲ್ಲಿ ಭಾಗವಹಿಸುತ್ತಾರೆ. ಉತ್ಸವದ ಅಂಗವಾಗಿ ಸಂತೆ, ವಸ್ತುಪ್ರದರ್ಶನ, ಹಿಂದೂ ಮತೀಯರ ಸಮ್ಮೇಳನ ಇತ್ಯಾದಿಗಳೆಲ್ಲ ನಡೆಯುತ್ತವೆ. ವೃಶ್ಚಿಕ ಮಾಸ (ನವೆಂಬರ್-ಡಿಸೆಂಬರ್) ಮೊದಲ ತಾರೀಕಿನಿಂದ ಹನ್ನೆರಡು ದಿವಸ ಕಾರ್ತಿಕ ಬೆಳಕಿನ ಉತ್ಸವ ಅಥವಾ ಹನ್ನೆರಡು ಜ್ಯೋತಿ ಇರುತ್ತದೆ.

ಚೆಂಗನ್ನೂರು ಭಗವತಿ ದೇವಾಲಯದಲ್ಲಿ ‘ತಿರುಪ್ಪೂತ್ತ್’ ಎಂಬ ಆಚರಣೆ ನಡೆಯುತ್ತದೆ. ಇದು ಕೆಲವೊಮ್ಮೆ ವರ್ಷಕ್ಕೆ ಹನ್ನೊಂದು ಬಾರಿ ನಡೆಯುವುದಿದೆ. ಲೋಹದಿಂದ ತಯಾರಿಸಿದ ದೇವೀ ವಿಗ್ರಹಕ್ಕೆ ತೊಡಿಸಿದ ರೇಷ್ಮೆ ಬಟ್ಟೆಯಲ್ಲಿ ರಕ್ತ ಕಣಗಳು ಕಾಣಿಸುವುದರೊಂದಿಗೆ ದೇವಸ್ಥಾನದ ಬಾಗಿಲು ಹಾಕಿ ನಾಲ್ಕನೆಯ ದಿವಸ ಶುದ್ದೀಕರಣ ಪ್ರಕ್ರಿಯೆಗಳು ನಡೆಯುತ್ತವೆ. ಬಣ್ಣ ಬದಲಾದ ಬಟ್ಟೆ ಪವಿತ್ರವಾಯಿತೆಂದು ಭಕ್ತರು ಭಾವಿಸುತ್ತಾರೆ.

ಕುಂಭ ಮಾಸ (ಫೆಬ್ರವರಿ-ಮಾರ್ಚ್)ದ ಶುಕ್ಲ ಪಕ್ಷಾರಂಭದಲ್ಲಿ ಚಿಟ್ಟೂರು ಭಗವತೀ ದೇವಸ್ಥಾನದಲ್ಲಿ ನಡೆಯುವ ಉತ್ಸವವೇ ‘ಕೊಂಗನ್‌ಪಡ’. ಇದು ಮೂರೋ, ನಾಲ್ಕೋ ಶತಮಾನಗಳ ಹಿಂದೆ ಆರಂಭವಾದ ಆಚರಣೆ. ಒಂದು ಸಾವಿರ ವರ್ಷಗಳ ಹಿಂದೆ ಕೊಂಗನಾಡಿ ನಿಂದ ಬಂದ ಪಡೆಯನ್ನು ಚಿಟ್ಟೂರು ನಾಯನ್ಮಾರರು ಸೋಲಿಸಿದುದರ ನೆನಪಿಗಾಗಿ ‘ಕೊಂಗನ್‌ಪಡ’ ಆಚರಿಸಲಾಗುತ್ತದೆ ಎಂಬ ಪ್ರತೀತಿಯಿದೆ. ಕುಂಭ ಮಾಸದ ಶಿವರಾತ್ರಿ ದಿವಸ ರಾತ್ರಿ ‘ಚಿಲಂಬು’ (ಕಾಲ್ಗೆಜ್ಜೆ) ಎಂಬ ಕಾರ್ಯಕ್ರಮದೊಂದಿಗೆ ಉತ್ಸವ ಆರಂಭ ವಾಗುತ್ತದೆ. ಕೊಂಗನ್‌ಪಡ ಯುದ್ಧ ಪ್ರಕಟಣೆ ಹೊರಡಿಸಿದ್ದನ್ನು ಭಯಭೀತರಾದ ಜನರು ದೇವಿಯನ್ನು ಆರಾಧಿಸತೊಡಗಿದುದರ ಸಂಕೇತವೇ ‘ಚಿಲಂಬು’. ಸಂಜೆಗೆ ಮೊದಲೇ ಜನರು ದೇವಾಲಯದಲ್ಲಿ ಗುಂಪುಗೂಡುವರು. ಚೋಳ ಸೈನ್ಯದೊಡನೆ ಹೋರಾಟ ನಡೆದುದೆಂದು ಹೇಳಲಾಗುವ ಜಾಗವನ್ನು ಸಂದರ್ಶಿಸುವರು. ಮಧ್ಯರಾತ್ರಿಯ ಹೊತ್ತಿಗೆ ಮೆರವಣಿಗೆ ಬರುವರು. ಕೊಂಗನ್‌ಪಡ ಮರುದಿವಸ ವಿಜೃಂಭಣೆಯಿಂದ ನಡೆಯುತ್ತದೆ. ಅಂದು ಬಹುಮುಖ್ಯವಾದ ಕೋಲಂ ಮೆರವಣಿಗೆ ನಡೆಯುತ್ತದೆ. ಬೆಳ್ಚಪಾಡರು ಮುಂಚೂಣಿ ಯಲ್ಲಿಯೂ ಅವರ ಜೊತೆಗೆ ಹೆಣ್ಣಿನ ವೇಷ ತೊಟ್ಟಿರುವ ಹುಡುಗರೂ ಮೆರವಣಿಗೆಗೆ ಕಳೆ ಕಟ್ಟುವರು. ಕೊಂಗನ್‌ಪಡೆಯ ಯುದ್ಧ ಪ್ರಕಟಣೆಯ ಓಲೆ ಓದುವುದು, ಕೊಂಗರು ಕೈಯಲ್ಲಿ ಪಂಜನ್ನು ಹಿಡಿದುಕೊಂಡು ಯುದ್ಧದ ಅನುಕರಣೆಯಂತೆ ಮುಂದೆ ಬರುವುದು ಇತ್ಯಾದಿಗಳು ನಡೆಯುತ್ತವೆ. ಅವರ ಕೈಯಲ್ಲಿ ಒಂದು ಕೋಣನ ತಲೆಯಿರುತ್ತದೆ. ಇದು ಚೋಳರಾಜನ ಪತನವನ್ನು ಸಾಂಕೇತಿಕವಾಗಿ ಸೂಚಿಸುತ್ತದೆ.

ನಲ್ಲೈಪಳ್ಳಿ ಗ್ರಾಮದ ಚುಣಂಗಿ ಭಗವತೀ ದೇವಸ್ಥಾನದಲ್ಲಿ ನಡೆಯುವ ಪ್ರಮುಖ ಆಚರಣೆ ಪಾವಕ್ಕೂತ್ತ್ (ಗೊಂಬೆ ನೃತ್ಯ). ಇದು ಹನ್ನೊಂದು ದಿವಸಗಳ ಕಾಲ ನಡೆಯುತ್ತದೆ. ಪ್ರತ್ಯೇಕವಾಗಿ ನಿರ್ಮಿಸಿದ ಕೂತ್ತಂಬಲದಲ್ಲಿ ಪ್ರತಿ ದಿವಸವೂ ರಾತ್ರಿ ಹನ್ನೊಂದರಿಂದ ಬೆಳಗ್ಗಿನ ತನಕವೂ ಕಂಬರಾಮಾಯಣದ ಕತೆಯ ಪಾವಕೂತ್ತ್ ಕಾರ್ಯಕ್ರಮವೂ ನಡೆಯುತ್ತದೆ. ಕೂತ್ತಿಗೂ ಮೊದಲು ತಾಯಂಬಕ, ಕೊಂಬುವಾದ್ಯ, ಕೊಳಲು ಮೊದಲಾದ ವಾದ್ಯ ವಾದನಗಳಿ ರುತ್ತವೆ. ಹಣೆಪಟ್ಟಿ ಕಟ್ಟಿದ ಆನೆಗಳು, ನಾದಸ್ವರ ಮೇಳಗಳಿಂದೊಡಗೂಡಿದ ಮೆರವಣಿಗೆಯಿರುತ್ತದೆ. ಬಳಿಕ ಕೂತ್ತ್ ಆರಂಭವಾಗಿ ರಾಮ ಪಟ್ಟಾಭಿಷೇಕದೊಡನೆ ಕೊನೆಗೊಳ್ಳುತ್ತದೆ.

ಇತರ ಕೆಲವು ವಿಶಿಷ್ಟ ಆಚರಣೆಗಳು

ಮೇಲೆ ವಿವರಿಸಿದ ನಿರ್ದಿಷ್ಟ ಆಚರಣೆಗಳಲ್ಲದೆ ಕೇರಳದಲ್ಲಿ ಇತರ ವಿಶಿಷ್ಟ ಆಚರಣೆಗಳು ಅನೇಕವಿವೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ವಿವರಿಸಬಹುದು. ಚವರದ ಸಮೀಪವಿರುವ ಕೊಟ್ಟಕುಳಙರ ದೇವಾಲಯದಲ್ಲಿ ‘ತಾಲಪ್ಪೊಲಿ ಉತ್ಸವ’ ತುಂಬಾ ಸ್ವಾರಸ್ಯ ವಾಗಿದೆ. ಬೇರೆ ದೇವಾಲಯಗಳಲ್ಲಿ ತಾಲಪ್ಪೊಲಿ ಹೊರುವ ಹೆಣ್ಣು ಮಕ್ಕಳು ಸುಂದರವಾಗಿ ಬಟ್ಟೆಗಳನ್ನು ಧರಿಸಿ ಅಂಗೈಯ ಪಾತ್ರೆಯಲ್ಲಿ ತುಂಬಿದ ಭತ್ತ ಅಥವಾ ಅಕ್ಕಿಯ ನಡುವೆ ಪುಟ್ಟ ದೀಪವೊಂದನ್ನು ಉರಿಸಿಟ್ಟು ದೇವರಿಗೆ ಪೂಜೆ ಸಲ್ಲಿಸುವರು. ಆದರೆ ಕೊಟ್ಟಂ ಕುಳಙರ ದೇವಾಲಯದಲ್ಲಿ ಸ್ತ್ರೀ ವೇಷ ಧರಿಸಿದ ಪುರುಷರೇ ತಾಲಪ್ಪೊಲಿ ಹೊತ್ತೊಯ್ಯುವರು. ಇದು ಶತಮಾನಗಳಿಂದ ನಡೆದುಕೊಂಡು ಬಂದ ಸಂಪ್ರದಾಯ.

ಆಲತ್ತೂರು ಮಾರಿಯಮ್ಮನ್ ದೇವಾಲಯದಲ್ಲಿ ಪೊಂಗಲ್ ಆಚರಣೆಯ ಭಾಗವಾಗಿ ದೇವಿಯ ಪ್ರೀತಿಗಾಗಿ ಸಂಕಲೆ ಮತ್ತು ಖಡ್ಗವನ್ನು ಉಪಯೋಗಿಸಿ ಕೆಲವು ಕ್ರೀಡಾ ಪ್ರದರ್ಶನಗಳನ್ನು ನಡೆಸುವರು. ಒಟ್ಟಪಾಲಂನ ಚಿನಕತ್ತ್ ಭಗವತೀ ದೇವಾಲಯದ ಪೂರಂ ಉತ್ಸವದಲ್ಲಿ ಸ್ಥಳೀಯರು ಗುಂಪುಗೂಡಿ ಸಹಾಯವನ್ನು ಕೋರುತ್ತಾ ಕೂಗುವರು. ನಮ್ಮನ್ನು ಹೊಡೆದು ಸಾಯಿಸುತ್ತಾರೆಂದು, ಬಾಯಾರಿಕೆಯಾಗುತ್ತಿದೆಯೆಂದು, ನಮಗೆ ಸಹಾಯ ಮಾಡುವವರು ಯಾರು ಇಲ್ಲವೆಂದು ಕೂಗಿ ಹೇಳುತ್ತಾ ಕುಣಿಯುವರು. ಇದು ಪರಂಪರಾಗತವಾಗಿ ನಡೆದು ಬಂದ ಸಂಪ್ರದಾಯ. ಮಲಪ್ಪುರಂ ಜಿಲ್ಲೆಯ ತಿರುಮಾಂ ಧಾಂಕುನ್ನು ಭಗವತೀ ದೇವಸ್ಥಾನದಲ್ಲಿ ಮಕರ ಮಾಸದಲ್ಲಿ ನಡೆಯುವ ಉತ್ಸವಕ್ಕೆ ಒಂದು ತೆರನ ವೈಶಿಷ್ಟ್ಯವಿದೆ. ಕಾಡಿನ ಬಳ್ಳಿಗಳೂ ಸಾಮಾನ್ಯವಾಗಿ ದೊರೆಯುವ ಮಾವಿನಕಾಯಿ ಗಾತ್ರದ ಒಂದು ತೆರನ ಕಾಯಿಯನ್ನು ಒಡೆದು ಊರವರು ಪರಸ್ಪರ ಎಸೆದಾಡುವರು. ಕಣ್ಣೂರು ಜಿಲ್ಲೆಯ ಮಾವಿಲಕ್ಕಾವ್ ಉತ್ಸವಕ್ಕೆ ಸಂಬಂಧಿಸಿದಂತೆ ಪೆಟ್ಟು, ಏಟು, ತಳ್ಳುವುದು ಮೊದಲಾದ ವಿಚಿತ್ರ ಆಚರಣೆಗಳಿವೆ. ಉತ್ಸವದ ಎರಡನೆಯ ದಿವಸ ಹಾಗೂ ನಾಲ್ಕನೆಯ ದಿವಸ ಜನರು ಹೊಲಗಳಲ್ಲಿ ಎರಡು ತಂಡಗಳಾಗಿ ನಿಂತು ಪರಸ್ಪರ ಹೊಡೆದಾಡುವರು.

ಗುರುವಾಯೂರು ಕೇಶವ ದೇವಾಲಯದಲ್ಲಿ ವರ್ಷಂಪ್ರತಿ ನಡೆಯುವ ಆನೆಯೋಟ ವಿಶಿಷ್ಟವಾದ ಆಚರಣೆಯಾಗಿದೆ. ಕೊಡುಙಲ್ಲೂರ್ ಶ್ರೀಕರುಂಬಾ ಭಗವತೀ ದೇವಸ್ಥಾನವನ್ನು ಭರಣಿ ಮಹೋತ್ಸವ ಹಾಗೂ ಚೇರ್ತಲ ಭಗವತೀ ದೇವಸ್ಥಾನದ ಪೂರಂಗೆ ಸಂಬಂಧಿಸಿದಂತೆ ಅಶ್ಲೀಲ ಗಾನಗಳನ್ನು ಹಾಡುವ ಸಂಪ್ರದಾಯ ಇತ್ತೀಚಿನ ವರೆಗೂ ಇತ್ತು. ಸರಕಾರ ಮತ್ತಿತರ ಪ್ರಗತಿಪರ ಸಂಘಟನೆಗಳ ಮಧ್ಯ ಪ್ರವೇಶದ ಬಳಿಕ ಈ ಸಂಪ್ರದಾಯ ಇಂದು ಬಹುತೇಕ ಇಲ್ಲವಾಗಿದೆ. ಕೊಡುಙಲ್ಲೂರು ದೇವಾಲಯ, ಕಾಸರಗೋಡಿನ ಕೊರಕೋಡು ಆರ್ಯ ಕಾತ್ಯಾಯಿನಿ ಮೊದಲಾದ ದೇವಾಲಯಗಳಲ್ಲಿ ಕೋಳಿಗಳನ್ನು ಬಲಿಕೊಡುತ್ತಿದ್ದ ಸಂಪ್ರದಾಯವಿತ್ತು. ಸರಕಾರದ ಆದೇಶದ ಮೇರೆಗೆ ಇಂತಹ ಸಂಪ್ರದಾಯಗಳನ್ನು ಸುಮಾರು ೧೯೫೪ರಲ್ಲಿ ನಿಲ್ಲಿಸಲಾಗಿದೆ. ಅದಕ್ಕೂ ಪೂರ್ವದಲ್ಲಿ ಕೋಣ ಬಲಿಯೂ ನಡೆಯುತ್ತಿತ್ತು ಎಂದು ಹೇಳಲಾಗುತ್ತದೆ.

ಕೇರಳದ ಕ್ರಿಶ್ಚಿಯನರು ಮುಸಲ್ಮಾನರು ತಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಆಚರಿಸುವ ಉತ್ಸವಗಳು ಕೇರಳ ಸಂಸ್ಕೃತಿಯ ಭಾಗಗಳೇ ಆಗಿವೆ. ಈ ಸಮುದಾಯದವರು ವಿಶ್ವದೆಲ್ಲೆಡೆ ಆಚರಿಸುವ ಆಚರಣೆಗೆ ಹೊರತಾಗಿಯೂ ಕೇರಳೀಯ ಎನ್ನಬಹುದಾದ ಕೆಲವು ವೈಶಿಷ್ಟ್ಯಗಳಿವೆ. ಜನವರಿ ೨೦ ರಿಂದ ೩೧ರವರೆಗೆ ಹನ್ನೊಂದು ದಿವಸ ಆರ್ತುಂಗಲ್ ಸೈಂಟೊ ಆ್ಯಂಡರೂಸ್ ಇಗರ್ಜಿಯಲ್ಲಿ ಸೈಂಟ್ ಸೆಬಾಸ್ಟಿಯನ್ ಔತಣವನ್ನು ನಡೆಸಲಾಗುತ್ತದೆ. ಇಗರ್ಜಿಯ ಒಳಗೆ ಸಂರಕ್ಷಿಸಲಾದ ಸೈಂಟ್ ಸೆಬಾಸ್ಟಿಯನನ ಹಳೆಯ ವಿಗ್ರಹವನ್ನು ಹೊರಗೆ ತೆಗೆದು ಮೆರವಣಿಗೆಯಲ್ಲಿ ಕೊಂಡೊಯ್ದು ಪೂಜೆ ಸಲ್ಲಿಸುವ ಸ್ಥಳದಲ್ಲಿ ಸ್ಥಾಪಿಸಲಾಗುತ್ತದೆ. ಜನವರಿ ೧೨ ರಂದು ಮಧ್ಯರಾತ್ರಿಯಲ್ಲಿ ಹೊರ ತರುವ ವಿಗ್ರಹವನ್ನು ಜನವರಿ ೨೩ ರಂದು ಇಗರ್ಜಿಗೆ ಕೊಂಡೊಯ್ಯಲಾಗುತ್ತದೆ ಶಬರಿಮಲೆಗೆ ಹೋಗಿ ಬರುವ ಭಕ್ತರು ಜನವರಿ ೧೮ ರಂದು ಇಗರ್ಜಿಯನ್ನು ಸಂದರ್ಶಿಸಿ ವೆಳುತ್ತಚ್ಚನ್‌ನನ್ನು (ಸೈಂಟ್ ಸಬಾಸ್ಟಿಯನ್) ಪ್ರಾರ್ಥಿಸುವರು. ಆ ಮೂಲಕ ಅಯ್ಯಪ್ಪ ಭಕ್ತರು ವ್ರತವನ್ನು ಕೊನೆಗೊಳಿಸುವರು. ಈ ಕಾರಣಕ್ಕೆ ಕೇರಳದ ಆರ್ತುಂಗಲ್ ಇಗರ್ಜಿ ಪ್ರಸಿದ್ಧವಾಗಿದೆ.

ಕೇರಳದ ಕ್ಯಾಥೋಲಿಕರು ಆಚರಿಸುವ ಉತ್ಸವಗಳಲ್ಲಿ ಮಲಯಾಟ್ಟೂರ್ ಸೈಂಟ್ ಥೋಮಸ್ ಇಗರ್ಜಿಯ ಉತ್ಸವ ಗಮನಾರ್ಹವಾದದ್ದು. ಮಾರ್ಚ್-ಎಪ್ರಿಲ್ ತಿಂಗಳುಗಳಲ್ಲಿ ಈಸ್ತರ್ ಕಳೆದು ಮೊದಲ ಭಾನುವಾರದಂದು ಈ ಉತ್ಸವ ನಡೆಯುತ್ತದೆ. ಸಮುದ್ರ ಮಟ್ಟದಿಂದ ಎರಡು ಸಾವಿರ ಅಡಿ ಎತ್ತರದಲ್ಲಿರುವ ಈ ಇಗರ್ಜಿಗೆ ಕೇರಳದೆಲ್ಲೆಡೆಯಿಂದ ಭಕ್ತರು ಉತ್ಸವ ಸಂದರ್ಭದಲ್ಲಿ ಬರುತ್ತಾರೆ. ಮಲಯಾಟ್ಟೂರು ಬೆಟ್ಟವನ್ನು ಏರುವ ಈ ತೀರ್ಥಯಾತ್ರೆಯು ಶಬರಿಮಲೆ ತೀರ್ಥಯಾತ್ರೆಗೆ ಸಮಾನವಾದುದೆಂದು ನಂಬಿಕೆ. ತೀರ್ಥ ಯಾತ್ರೆಯ ವೇಳೆಗೆ ಭೌತಿಕ ಕಷ್ಟಗಳು ದೂರವಾಗಲು ‘ಪೊನ್‌ಕುರಿಶ್ಯು ಮುತ್ತಪ್ಪಾ ಪೊನ್‌ಮಲಕಯಟ್ಟು’ ‘ಪೊನ್‌ಕುರಿಶ್ಯು ಮುತ್ತಪ್ಪಾ ಪೊನ್‌ಮಲಯಿರಕ್ಕುಂ’ (ಹೊನ್ನ ಶಿಲುಬೆಯ ಮುತ್ತಪ್ಪಾ ಹೊನ್ನ ಬೆಟ್ಟವ ಹತ್ತಿಸು, ಹೊನ್ನ ಶಿಲುಬೆಯ ಮುತ್ತಪ್ಪಾ ಹೊನ್ನ ಬೆಟ್ಟವ ಇಳಿಸು) ಎಂದು ಏರುವಾಗಲೂ ಇಳಿಯುವಾಗಲೂ ಜೋರಾಗಿ ಕೂಗುತ್ತಾ ಮುನ್ನಡೆ ಯುವರು.

ಮಾನ್ನಾರಿನ ಸಮೀಪವಿರುವ ಪರುಮಲ ಇಗರ್ಜಿಯು ಆರ್ಥೊಡೋಕ್ಸ್ ಸಿರಿಯನ್ ಕ್ರಿಶ್ಚಿಯನರಿಗೆ ಪವಿತ್ರವಾದ ತೀರ್ಥಯಾತ್ರೆಯ ಕೇಂದ್ರ. ಅಲ್ಲಿ ಮಾರ್ ಗ್ರಿಗೋರಿಯೋಸ್‌ನ ಭೌತಿಕ ಅವಶಿಷ್ಟ್ಯಗಳನ್ನು ಸಂರಕ್ಷಿಸಿರುವುದರಿಂದ ಕ್ರಿಶ್ಚಿಯನರಿಗೆ ಅತ್ಯಂತ ಪವಿತ್ರಕ್ಷೇತ್ರ ವಾಗಿದೆ. ಮಲಯಾಳಂ ಮಣ್ಣಿನಲ್ಲಿ ಜನಿಸಿದ ಮಲಂಕರ ಸಭೆಯು ಅಂಗೀಕರಿಸಿದ ಏಕೈಕ ಮಹಾತ್ಮ ಮಾರ್ ಗ್ರಿಗೋರಿಯಾಸ್. ಪರುಮಲ ತಿರುಮೇನಿಯ ಹೆಸರಿನಲ್ಲಿ ನಡೆಯುವ ಪವಾಡಗಳೂ ಅನೇಕ. ಜಾತಿ ಮತಗಳ ಭೇದವೆಣಿಸದೆ ಕೇರಳದೆಲ್ಲೆಡೆಗಳಿಂದ ದಿನಾಲೂ ಅನೇಕರು ಪರುಮಲೆಯಲ್ಲಿರುವ ಸಮಾಧಿಗೆ ಭೇಟಿ ನೀಡುವರು.

ಪ್ರತಿವರ್ಷವೂ ಮಾರ್ಚ್ ತಿಂಗಳಲ್ಲಿ ಮಾರ್ತೋಮ ಸಭೆಯ ಆಶ್ರಯದಲ್ಲಿ ಪಂಪಾ ನದಿಯ ತೀರದಲ್ಲಿರುವ ಮಾರಾಮಣ್ ಮರಳಿನ ಮೇಲೆ ಸಮ್ಮೇಳನ ನಡೆಯುತ್ತದೆ. ೧೮೯೪ರಲ್ಲಿ ಶ್ರೀಲಂಕಾದಿಂದ ಇಬ್ಬರು ಪ್ರವಾದಿಗಳು ಬಂದಾಗ ಮೊದಲ ಸಮ್ಮೇಳನ ನಡೆದಿತ್ತು. ಈಗ ಏಷ್ಯಾಖಂಡದ ಅತ್ಯಂತ ದೊಡ್ಡ ಸಮ್ಮೇಳನವೇ ಆಗಿದೆ. ಜಾಗತಿಕಮಟ್ಟದಲ್ಲಿ ಎರಡನೆಯ ದೊಡ್ಡ ಕ್ರಿಶ್ಚಿಯನ್ ಸಮ್ಮೇಳನ ಆಗಿ ಇದು ಪ್ರಸಿದ್ದಿ ಪಡೆದಿದೆ. ಬೈಬಲ್ ವಾಚನ, ಧರ್ಮ ಪ್ರವಚನ ಇತ್ಯಾದಿಗಳು ಮುಖ್ಯ ಕಾರ್ಯಕ್ರಮಗಳು. ದೇಶ ವಿದೇಶಗಳಿಂದ ಪರಿಣಿತರಾದ ಧಾರ್ಮಿಕ ವಿದ್ವಜ್ಜನರು ಇದರಲ್ಲಿ ಭಾಗವಹಿಸುತ್ತಾರೆ.

ಕೇರಳದ ದೇವಸ್ಥಾನಗಳು, ಇಗರ್ಜಿಗಳು, ಮಸೀದಿಗಳು ಇವೆಲ್ಲಾ ನಡೆಯುವ ಎಲ್ಲಾ ಉತ್ಸವಗಳಲ್ಲಿಯು ಸಾಮಾನ್ಯವಾಗಿ ಕೇರಳೀಯತೆಯ ಛಾಯೆ ಇದ್ದೇ ಇರುತ್ತದೆ. ಆನೆಯ ಸವಾರಿ, ಪಂಚವಾದ್ಯ, ಚೆಂಡೆ ಮೇಳ, ಸಂಗೀತ ಕಚೇರಿ, ಸಿಡಿಮದ್ದು ಪ್ರದರ್ಶನ ಇತ್ಯಾದಿಗಳೆಲ್ಲ ಸಾಮಾನ್ಯವಾಗಿ ಜಾತಿಮತ ಭೇದವನ್ನೆಣಿಸದೆ ಏರ್ಪಡಿಸುತ್ತಾರೆ. ಹಾಗಾಗಿ ಎಲ್ಲಾ ಜಾತಿ ಮತಗಳವರ ಸಾಂಪ್ರದಾಯಕ ಆಚರಣೆಗಳು ಕೇರಳ ಸಂಸ್ಕೃತಿ ಕಥನದ ಭಾಗವಾಗಿಯೇ ನಿರೂಪಿಸುವುದು ಸಾಧ್ಯವಾಗಿದೆ.