ಇಂತಹ ಪ್ರಮುಖ ಮಾಧ್ಯಮಗಳಲ್ಲಿ ನಂಬೂದಿರಿಗಳ ಸಾಮಾಜಿಕ ಜೀವನ ದಾಖಲಾ ಗುತ್ತಿದ್ದರೂ ಕೂಡಾ ಮೂಲಭೂತವಾದಿಗಳ ಹಠದಿಂದಲೂ ಕೆಲವು  ವಿದ್ವಾಂಸರೆನಿಸಿ ಕೊಂಡವರು ನಂಬೂದಿರಿ ಸ್ತ್ರೀಯರ ಕುರಿತು ತೋರಿದ ಅನಾಸ್ಥೆಯಿಂದಾಗಿ ಸ್ತ್ರೀಯರು ಮನೆಯ ಒಳಗೇ ಕತ್ತಲೆಯಲ್ಲಿಯೇ ಉಳಿಯುವಂತಾಯಿತು. ಹೊರ ಪ್ರಪಂಚದೊಡನೆ ಯಾವುದೇ ತೆರನ ಸಂಪರ್ಕ ಇಲ್ಲದೆ ಮೂಢನಂಬಿಕೆಗಳ, ಸಂಪ್ರದಾಯಗಳ ಗಹ್ವರದೊಳಗೆ ಬದುಕುತ್ತಿದ್ದ ಸ್ತ್ರೀಯರಿಗೆ ಅನ್ಯ ಜಾತಿಗಳಲ್ಲಿ ಇರುವ ಮುಕ್ತ ಪ್ರವೃತ್ತಿಗಳ ಬಗೆಗೂ ಅರಿವು ಮೂಡುತ್ತಿರಲಿಲ್ಲ. ಅನ್ಯರ ಸಂಪರ್ಕಕ್ಕೆ ಅವಕಾಶವೇ ಇಲ್ಲದ್ದರಿಂದ ಅವರ ಕತ್ತಲೆಯ ಬದುಕಿಗೆ ಪ್ರತಿಭಟನೆಯ ಕಿರಣವನ್ನು ಹಾಯಿಸುವುದೂ ಕಷ್ಟದ ಮಾತೇ ಆಗಿತ್ತು. ಶಾಸ್ತ್ರಗಳ, ಸಂಪ್ರದಾಯಗಳ ಕೋಟೆಯ ನಡುವೆ ಬದುಕುತ್ತಿದ್ದ ಅವರಿಂದಲೇ ಪ್ರತಿಭಟನೆಯ ಒಂದು ಕಿಡಿ ಕಾಣಿಸಿಕೊಂಡರೇ ಮಾತ್ರವೇ ಇವುಗಳ ವಿರುದ್ಧ ಹೋರಾಡುವುದು ಸಾಧ್ಯವೆಂದು ವಿ.ಟಿ. ಭಟ್ಟಾತ್ತಿರಿಯಂತಹ ಸಾಹಿತಿಗಳು ಮನಗಂಡಿದ್ದರು. ಅದಕ್ಕಾಗಿಯೇ ಅವರು ‘ಅಡುಕಳಯಿಲ್‌ನಿನ್ನ್ ಅರಙತ್ತೆಕ್ಕ್’ (ಅಡುಗೆ ಮನೆಯಿಂದ ರಂಗಸ್ಥಳಕ್ಕೆ) ಎಂಬ ಪ್ರಹಸನ ವನ್ನು ಬರೆದು ಪ್ರೇರಕ ಶಕ್ತಿಯಾದರು. ಇಡಕುನ್ನಿಯಲ್ಲಿ ಯೋಗಕ್ಷೇಮ ಸಭೆಯ ೨೨ನೆಯ ವಾರ್ಷಿಕ ಸಮ್ಮೇಳನದಲ್ಲಿ ಮೊತ್ತ ಮೊದಲ ಬಾರಿಗೆ ಈ ಪ್ರಹಸನ ರಂಗ ಪ್ರಯೋಗ ಕಂಡಿತು. ಸ್ವಸಮುದಾಯದ ಲೋಪಗಳ ಬಗೆಗೆ ನೇರವಾಗಿ ಇದರಲ್ಲಿ ಪ್ರತಿಬಿಂಬಿಸಲಾಗಿತ್ತು. ಬಳಿಕ ಅದು ಅನೇಕ ಪ್ರಯೋಗಗಳನ್ನು ಕಂಡು ನಂಬೂದಿರಿ ಸಮುದಾಯದ ವಾತಾವರಣವನ್ನು ಕಂಪಿಸುವಂತೆ ಮಾಡಿತು. ಭಾಷಣಗಳು, ಪ್ರಕಟಣೆಗಳು ಇವುಗಳಿಗಿಂತೆಲ್ಲ ನಂಬೂದಿರಿ ಸ್ತ್ರೀಯರ ಮನಸ್ಪರ್ಶಿಸಲು ಈ ಪ್ರಹಸನಕ್ಕೆ ಸಾಧ್ಯವಾಯಿತು. ತಮ್ಮ ಅಸಹಾಯಕತೆ, ವಿಕೃತವಾದ ಮುಖಗಳು ಆ ನಾಟಕದಲ್ಲಿ ಪ್ರತಿಬಿಂಬಿಸಿದುವು. ಅಷ್ಟೇ ಅಲ್ಲ ತಮ್ಮನ್ನು ಅರ್ಥಮಾಡಿಕೊಂಡವರು, ನೆರವಾಗಲು ಉತ್ಸುಕರಾದ ಯುವ ಜನಾಂಗವೊಂದಿದೆ ಎಂಬುದನ್ನು ಅವರು ತಿಳಿದುಕೊಂಡರು. ಸ್ವಾತಂತ್ರ್ಯ ವಾಂಛೆ ಹಾಗೂ ಪ್ರತಿಭಟನಾ ಮನೋಧರ್ಮದಿಂದ ಎಚ್ಚೆತ್ತ ಅಂತರ್ಜನರು ಘೋಷವನ್ನು ಬಹಿಷ್ಕರಿಸಿದರು. ಪರಿಷ್ಕೃತವಾದ ವಸ್ತ್ರಧಾರಣೆಗೆ ಸಿದ್ಧರಾದರು. ಪ್ರಹಸನದ ಮೊದಲ ಪ್ರಯೋಗವನ್ನು ನೋಡಿದ ಸದಸ್ಯರಲ್ಲಿಯೇ ಈ ಪರಿವರ್ತನೆ ಉಂಟಾಯಿತಂತೆ. ಮೇಳ್ಪತ್ತೂರಿನಲ್ಲಿ ನಾಟಕ ಪ್ರದರ್ಶಿಸಿದಾಗ ಮರದ ಕೊಡೆಯನ್ನು ಕೈಯಲ್ಲಿ ಹಿಡಿದು ಬಂದ ಸ್ತ್ರೀಯೊಬ್ಬಳು ಅದನ್ನತ್ತ ಎಸೆದು ಮನೆಗೆ ಮರಳಿದಳಂತೆ. ವಿ.ಟಿ. ಯವರ ಮನೆಯಲ್ಲಿ ನಡೆದ ಮಹಾಸಮ್ಮೇಳನ ವೊಂದರಲ್ಲಿ ಏಳು ಮಂದಿ ಸ್ತ್ರೀಯರು ಸಂಪ್ರದಾಯದ ಘೋಷಕ್ಕೆ ವಿದಾಯ ಹೇಳಿ ಪರಿಷ್ಕೃತ ವೇಷಧಾರಣೆಯ ನಿರ್ಧಾರ ಕೈಗೊಂಡರು. ಹಾಗೆಯೇ ಬಳಿಕ ವಿ.ಟಿ. ಯವರ ನೇತೃತ್ವದಲ್ಲಿಯೇ ವಿಧವಾ ವಿವಾಹಗಳು ಅಂತರ್‌ಜಾತೀಯ ವಿವಾಹಗಳೂ ನಡೆದವು. ಮೊದಮೊದಲು ಸಂಪ್ರದಾಯವಾದಿಗಳು ಇದನ್ನು ವಿರೋಧಿಸಿದರು. ಪ್ರಗತಿವಾದಿಗಳನ್ನು ಭ್ರಷ್ಟರೆಂದು ಆರೋಪಿಸಿದರು. ತಮ್ಮ ಕುಟುಂಬದ ಮಹಿಳೆಯರನ್ನು ಸಂಪ್ರದಾಯದ ಚೌಕಟ್ಟಿನಲ್ಲಿಯೇ ಉಳಿಸುವ ಯತ್ನ ನಡೆಸಿದರು. ಆದರೂ ಸಮುದಾಯದ ಲೋಪದೋಷಗಳನ್ನು ಅರ್ಥೈಸಿಕೊಂಡ ಕೆಲವು ಹಿರಿಯರು ಮಾನವೀಯತೆಯ ನೆಲೆಯಿಂದ ಪ್ರಗತಿಪರರಿಗೆ ಪ್ರೋತ್ಸಾಹ ನೀಡಿ ಹುರಿದುಂಬಿಸಿದರು. ಹಾಗಾಗಿ ಕ್ರಮೇಣ ಎರಡು ಮೂರು ದಶಕಗಳ ತರುವಾಯ ನಂಬೂದಿರಿ ಸ್ತ್ರೀಯರು ಮೇಲೆ ಹೇಳಿದ ಸಾಂಪ್ರದಾಯಿಕ ಬದುಕಿನಿಂದ ಬಿಡುಗಡೆ ಪಡೆದರು.

ಹೀಗೆ ಒಂದೆಡೆ ಸುಸಂಘಟಿತವಾಗಿ ಕಾರ್ಯಪ್ರವೃತ್ತವಾಗುವುದರ ಮೂಲಕ ಸಮುದಾಯದ ಯಾತನಾಪೂರ್ಣವಾದ ದುಷ್ಟ ಪ್ರವೃತ್ತಿಗಳ ವಿರುದ್ಧ ಪ್ರತಿಭಟಿಸುವ ಧೈರ್ಯ ವನ್ನು ಪಡೆದರು. ಆ ಮೂಲಕ ವಿಧವಾ ವಿವಾಹ, ಭೂ ಒಡೆತನದಂತಹ ಹಕ್ಕುಗಳನ್ನು ಪಡೆದರು. ಇನ್ನೊಂದೆಡೆ ಸಂಪ್ರದಾಯ ಆಚಾರ ವಿಚಾರಗಳ ವಿರುದ್ಧ ಹೋರಾಡಿ ಅದರಲ್ಲೂ ಸ್ತ್ರೀಯರಿಗೆ ಹಿಂದಿಲ್ಲದೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ವಿ.ಟಿ.ಯಂತಹ ಸಮಾಜ ಸುಧಾರಕರು ಯಶಸ್ವಿಯಾದರು. ಹಾಗಾಗಿಯೇ ಕ್ರಿಶ್ಚಿಯನರ ಮದುವೆಯ ನಿಯಮಕ್ಕೆ ವಿರುದ್ಧವಾಗಿ ಮೇರಿ ರೋಯಿ, ಶರಿಯತ್‌ಗೆ ವಿರುದ್ಧವಾಗಿ ಷಾಬಾನು ಬೇಗಂ ಕಾನೂನು ಸಮರ ನಡೆಸುವುದಕ್ಕೆ ಎಷ್ಟೋ ಮೊದಲೇ ನಂಬೂದಿರಿ ಸ್ತ್ರೀಯರು ಸ್ಥಿರಾಸ್ತಿಗಳ ಹಕ್ಕು ಹಾಗೂ ಮದುವೆಯ ಸಂರಕ್ಷಣೆಯನ್ನು ಪಡೆದರು.

ಸ್ವಯಂ ಪ್ರಜ್ಞೆ ಹಾಗೂ ಸ್ವತಂತ್ರೇಚ್ಚೆಯನ್ನು ಬಡಿದೆಬ್ಬಿಸಿದ ನಂಬೂದಿರಿ ಸ್ತ್ರೀಯರು ಕ್ರಮೇಣ  ತಾವು  ವೃತ್ತಿಕ್ಷೇತ್ರಕ್ಕೆ ಇಳಿಯುವ ಹಾಗೂ ಆ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಬೇಕೆಂಬ ಅನಿವಾರ್ಯತೆಯನ್ನು ಕಂಡುಕೊಂಡರು. ಯೋಗಕ್ಷೇಮ ಸಭೆಯ ಮಹಿಳಾ ವಿಭಾಗವಾಗಿ ಕಾರ್ಯಪ್ರವೃತ್ತವಾದ ‘ಅಂತರ್ಜನ ಸಮಾಜಂ’ ಈ ದಾರಿಯಲ್ಲಿ ಆಲೋಚಿಸಿತು. ಜಾತ್ಯಾಭಿಮಾನ ತೊರೆದು ಎಲ್ಲಾ ಕೆಲಸಗಳಲ್ಲೂ ನಂಬೂದಿರಿ ಸ್ತ್ರೀಯರು ಸಿದ್ಧರಾಗಬೇಕೆಂದು ಅವರು ಆಹ್ವಾನ ನೀಡಿದರು. ಅದಕ್ಕಾಗಿ ಹಲವೆಡೆಗಳಲ್ಲಿ ಕಾರ್ಮಿಕ ಕೇಂದ್ರಗಳನ್ನು ಸಂಘಟಿಸಿದರು. ‘ಕಾರ್ಮಿಕ ಕೇಂದ್ರಗಳಿಗೆ’ ಎಂಬೊಂದು ನಾಟಕವನ್ನು ಅವರು ಈ ವಿಷಯದ ಪ್ರಚಾರಕ್ಕಾಗಿ ರಚಿಸಿದರು. ನಂಬೂದಿರಿ ಸ್ತ್ರೀಯರು ಮೊದಮೊದಲು ಕೃಷಿ ಕೆಲಸಗಳಿಗಾಗಿ ಹೊಲಗಳಲ್ಲಿ ಇನ್ನಿತರ ಕೆಲಸಗಳಲ್ಲಿ ಉತ್ಸಾಹದಿಂದ ತೊಡಗಿಸಿ ಕೊಂಡರು. ಆದರೆ ಇದು ಒಂದು ಆರಂಭಶೂರತ್ವ ಎಂಬಷ್ಟಕ್ಕೇ ಸೀಮಿತವಾಯಿತು. ಭೂ ನಿಯಮಗಳು ಜಾರಿಗೊಂಡಾಗ ಕೆಲವು ನಂಬೂದಿರಿ ಕುಟುಂಬಗಳು ಬಡತನ ರೇಖೆಯ ಕೆಳಗೆ ಉಳಿದವು. ಆದರೂ ನಂಬೂದಿರಿ ಸ್ತ್ರೀಯರು ಇತರ ಸಮುದಾಯದ ಸ್ತ್ರೀಯರಂತೆ ಕಠಿಣ ದುಡಿಮೆಯನ್ನು ಮಾಡುವುದರ ಮೂಲಕ ಸ್ವತಂತ್ರವಾಗಿ ಬದುಕುವ ಆಸಕ್ತಿಯನ್ನು ಪ್ರಕಟಿಸಲಿಲ್ಲ. ಬಳಿಕ ಸಾರ್ವತ್ರಿಕವಾಗಿ ಶಿಕ್ಷಣ ಪಡೆದು ಅನೇಕ ಉದ್ಯೋಗಗಳಲ್ಲಿ ನಂಬೂದಿರಿ ಸ್ತ್ರೀಯರು ಪ್ರವೇಶಿಸಿದರು. ಇಂದು ಭಾರತದ ಒಳಗೂ ಹೊರಗೂ ಅಧಿಕ ಸಂಖ್ಯೆಯಲ್ಲೇ ಔದ್ಯೋಗಿಕ ರಂಗಗಳಲ್ಲಿ ನಂಬೂದಿರಿ ಸ್ತ್ರೀಯರು ಕಾರ್ಯನಿರ್ವಹಿ ಸುತ್ತಿದ್ದಾರೆ.

ಸ್ತ್ರೀಯರು ವಹಿಸಬೇಕಾದ ಪಾತ್ರದ ಕುರಿತು ತಿಳಿದುಕೊಂಡು ಸಾಮಾಜಿಕ ಪ್ರವೃತ್ತಿಗಳ ಮೂಲಕ ಪ್ರಗತಿಪರ ಮನೋಧರ್ಮದಿಂದ ಬೆಳೆದು ಬಂದವರು ನೆನ್‌ಮೆನಿಮಂಗಳಂ, ಆರ್ಯಾಪಳ್ಳಂ, ಲಲಿತಾಂಬಿಕಾ ಅಂತರ್ಜನಂ ಮೊದಲಾದವರು. ಆರ್ಯಾಪಳ್ಳಂ ಕೃಷಿಕ ಸಂಘಟನೆಗಳ ನೇತೃತ್ವವಹಿಸಿ ಎಡಪಂಥೀಯ ಧೋರಣೆಗಳ ಮೂಲಕ ಗಮನಾರ್ಹರಾದರು. ಇವರಿಂದೆಲ್ಲ ಸ್ಪೂರ್ತಿ ಪಡೆದು ಬಳಿಕ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಖ್ಯಾತರಾದ ನಂಬೂದಿರಿ ಮಹಿಳೆಯರು ಅನೇಕರಿದ್ದಾರೆ.

ಇಂದು ಕೇರಳದ ನಂಬೂದಿರಿ ಸ್ತ್ರೀಯರು ಇತರ ಸಮುದಾಯಗಳ ಸ್ತ್ರೀಯರಂತೆ ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಇಂದು ನಂಬೂದಿರಿ ಸ್ತ್ರೀಯರು ಎಂಬ ನೆಲೆಯಲ್ಲಿ ಪ್ರತ್ಯೇಕವಾದ ಸಮಸ್ಯೆಗಳೇನೂ ಇಲ್ಲ. ಎಲ್ಲಾ ಮಹಿಳೆಯರ ಸಮಸ್ಯೆಗಳು ಮಾತ್ರ ನಂಬೂದಿರಿ ಸ್ತ್ರೀಯರ ಸಮಸ್ಯೆಗಳಾಗಿ ಉಳಿದಿವೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರಿದ ಮಹಿಳೆಯರು ತಮ್ಮ ವಿರುದ್ಧವಾದ ಶೋಷಣೆಗಳನ್ನು ಕುರಿತಂತೆ ಪ್ರಜ್ಞೆಯುಳ್ಳವರಾಗಿದ್ದಾರೆ. ಅಂತಹ ವಿಕಟ ವಿಕೃತ ಆವರಣದಿಂದ ಬಿಡಿಸಿಕೊಂಡು ಬದುಕು ನಡೆಸುವ ಬಗೆಗೂ ಅವರಿಗೆ ಅರಿವಿದೆ. ಸಾಮರ್ಥ್ಯವೂ ಇದೆ.

ಅಸ್ಪೃಶ್ಯತಾ ನಿವಾರಣೆ

ದೇವಸ್ಥಾನಗಳ ಎದುರು ಬೀದಿಗಳಲ್ಲಿ ಅಸ್ಪೃಶ್ಯ ಜಾತಿಗಳವರಿಗೆ ನಡೆದಾಡುವ ಸ್ವಾತಂತ್ರ್ಯ ಕೊಡಬೇಕೆಂಬ ಲಕ್ಷ್ಯವನ್ನು ಇರಿಸಿಕೊಂಡು ಹೋರಾಟ ಆರಂಭವಾಯಿತು. ಕೋಝಿಕೋಡಿನ ತಳಿ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ತೀಯ (ಬಿಲ್ಲವ)ರು ಮತ್ತಿತರ ಅವರ್ಣೀಯರು ಸಂಚರಿಸಬಾರದು ಎಂಬ ಮಲಬಾರ್ ಕಲೆಕ್ಟರನ ನಿಷೇಧಾಜ್ಞೆಯನ್ನು ೧೯೧೭ರಲ್ಲಿ ‘ಮಿತವಾದಿ’ ಪತ್ರಿಕಾ ಸಂಪಾದಕ ಸಿ. ಕೃಷ್ಣನ್ ಉಲ್ಲಂಘಿಸಿದರು. ಅಸ್ಪೃಶ್ಯತಾ ನಿವಾರಣೆಯ ಹೋರಾಟಕ್ಕೆ ದೀಪ ಹಚ್ಚಿದ ಪ್ರಕರಣ ಎಂದೇ ಇದನ್ನು ತಿಳಿಯಲಾಗುತ್ತದೆ. ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದ ವ್ಯಕ್ತಿ ಟಿ.ಕೆ. ಮಾಧವನ್. ಆತ ೧೯೨೩ರಲ್ಲಿ ಅವರ್ಣೀಯರ ನಡೆದಾಡುವ ಸ್ವಾತಂತ್ರ್ಯದ ಹೋರಾಟಕ್ಕೆ ಅಖಿಲ ಭಾರತೀಯ ಕಾಂಗ್ರೆಸ್‌ನ ಬೆಂಬಲವನ್ನು ಪಡೆದರು. ಈ ದಿಸೆಯಲ್ಲಿ ನಡೆದ ಪ್ರಸಿದ್ಧ ಹೋರಾಟವೇ ವೈಕಂ ಸತ್ಯಾಗ್ರಹ (೧೯೨೪-೧೯೨೫). ಭಾರತದೆಲ್ಲೆಡೆ ಗಮನ ಸೆಳೆದ ಘಟನೆ ಇದು. ಗಾಂಧೀಜಿಗೆ ಇದಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಭಾರತದ ಎಲ್ಲಾ ಭಾಗದಿಂದಲೂ ಕಾಂಗ್ರೆಸ್ ನಾಯಕರು ವೈಕಂಗೆ ಬಂದು ಸೇರಿದರು. ಪಂಜಾಬಿನಿಂದ ಬಂದ ಅಕಾಲಿಗಳು ವೈಕಂ ಸತ್ಯಾಗ್ರಹಿಗಳಿಗೆ ಉಚಿತ ಊಟದ ವ್ಯವಸ್ಥೆಯನ್ನು ಮಾಡಿದರು. ೧೯೨೫  ಮಾರ್ಚ್‌ನಲ್ಲಿ ಗಾಂಧೀಜಿಯವರ ವೈಕಂಗೆ ಭೇಟಿ ನೀಡಿದ್ದು ಚಳುವಳಿಗಾರರಿಗೆ ಹೊಸ ಹುರುಪನ್ನು ನೀಡಿತು. ಗಾಂಧೀಜಿ ನಡೆಸಿದ ಮಾತುಕತೆಯ ಪರಿಣಾಮವಾಗಿ ವೈಕಂ ದೇವಾಲಯದ ಸುತ್ತಲೂ ಇರುವ ರಸ್ತೆಗಳನ್ನು ಅವರ್ಣೀಯರಿಗೆ ತೆರೆದುಕೊಡಲಾಯಿತು. ಆದರೆ ಮತ್ತಿತರ ಹಲವು ದೇವಸ್ಥಾನಗಳ ಸ್ಥಿತಿ ಇದಾಗಿರಲಿಲ್ಲ. ಶುಚೀಂದ್ರಂ, ಅಂಬಲಪ್ಪುೞ, ತಿರುವಾರ್‌ಪ್ ಮೊದಲಾದ ಇತರ ಸ್ಥಳಗಳಲ್ಲಿಯೂ ಸಂಚಾರ ಸ್ವಾತಂತ್ರ್ಯ ಹೋರಾಟ ನಡೆಯಿತು. ೧೯೨೮ರಲ್ಲಿ ತಿರುವಾಂಕೂರಿನ ದೇವಾಲಯಗಳ ರಸ್ತೆಗಳನ್ನು ಅವರ್ಣೀಯರಿಗೆ ತೆರೆದು ಕೊಡಲಾಯಿತು.

ಅಸ್ಪೃಶ್ಯತಾ ನಿವಾರಣೆಯ ಹೋರಾಟಕ್ಕೆ ಮತ್ತೊದು ಮೈಲಿಗಲ್ಲು ಗುರವಾಯೂರು ಸತ್ಯಾಗ್ರಹ (೧೯೩೧-೧೯೩೨). ಹೋರಾಟದ ಗುರಿ ಗುರುವಾಯೂರು ದೇವಾಲಯಕ್ಕೆ ದಲಿತರಿಗೆ ಪ್ರವೇಶ ಅವಕಾಶವನ್ನು ಕಲ್ಪಿಸಿಕೊಡುವುದೇ ಆಗಿತ್ತು. ಹತ್ತು ತಿಂಗಳವರೆಗೆ ಈ ಹೋರಾಟ ಮುಂದುವರಿಯಿತು. ಕೆ. ಕೇಳಪ್ಪನ್ ನಡೆಸಿದ ಉಪವಾಸ ಸತ್ಯಾಗ್ರಹ ಹೋರಾಟದ ಸಕ್ರಿಯ ಕಾರ್ಯಕರ್ತರೂ ಸಂಘಟಕರಲ್ಲೊಬ್ಬರೂ ಆದ ಎ.ಕೆ. ಗೋಪಾಲನ್ ಅವರ ಮೇಲೆ ನಡೆದ ಹಲ್ಲೆಯ ಕಾರಣದಿಂದಾಗಿ ಅಖಿಲ ಭಾರತೀಯ ಮಟ್ಟದಲ್ಲಿ ಗಮನ ಸೆಳೆಯಿತು. ಕೊನೆಗೂ ಗಾಂಧೀಜಿಯವರ ಸಲಹೆಯ ಮೇರೆಗೆ ಹೋರಾಟವನ್ನು ನಿಲ್ಲಿಸಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಪೊನ್ನಾನಿ ತಾಲೂಕಿನ ಸವರ್ಣೀಯ ಹಿಂದುಗಳ ನಡುವೆ ಜನಾಭಿಪ್ರಾಯ ಸಂಗ್ರಹಿಸಲಾಯಿತು. ಇಪ್ಪತ್ತು ಸಾವಿರ ಜನರ ಅಭಿಪ್ರಾಯ ಕೇಳಲಾಯಿತು. ಅವರಲ್ಲಿ ಶೇಕಡಾ ಎಪ್ಪತ್ತೇಳು ಜನರೂ ಅವರ್ಣೀಯರ ದೇವಾಲಯ ಪ್ರವೇಶವನ್ನು ಬೆಂಬಲಿಸಿದ್ದರು. ಶೇಕಡಾ ಹದಿಮೂರರಷ್ಟು ಜನರು ವಿರೋಧಿಸಿದ್ದರು. ಶೇಕಡಾ ಹತ್ತರಷ್ಟು ಜನರು ಸ್ಪಷ್ಟವಾದ ನಿರ್ಧಾರವನ್ನು ಸೂಚಿಸಲಿಲ್ಲ. ಅಭಿಪ್ರಾಯ ನೀಡಲು ಪಾಲುಗೊಂಡಿದ್ದ ಎಂಟು ಸಾವಿರದಷ್ಟು ಮಹಿಳೆಯರು ಅವರ್ಣೀಯರ ದೇವಸ್ಥಾನ ಪ್ರವೇಶವನ್ನು ಬೆಂಬಲಿ ಸಿದರು ಎಂಬುದೇ ಗಮನಾರ್ಹವಾದ ಸಂಗತಿ. ಸವರ್ಣೀಯ ಹಿಂದುಗಳು  ದೇವಾಲಯ ಪ್ರವೇಶಕ್ಕೆ ಬೆಂಬಲಿಸುವುದಿಲ್ಲ ಎಂಬ ವಾದ ಅಪ್ಪಟಸುಳ್ಳು ಎಂಬು ಈ ಜನಾಭಿಪ್ರಾಯದಿಂದ ಸ್ಪಷ್ಟವಾಯಿತು.

ಅಸ್ಪೃಶ್ಯತಾ ನಿವಾರಣಾ ಹೋರಾಟ ಯಶಸ್ವಿಯಾದುದು ೧೯೨೬ರ ನವೆಂಬರ್ ೧೨ನೆಯ ದಿನಾಂಕದಂದು. ಅಂದು ತಿರುವಾಂಕೂರಿನ ಮಹಾರಾಜನಾದ ಶ್ರೀಚಿತ್ತಿರತಿರುನಾಳ್ ಬಾಲರಾಮವರ್ಮ ಚಾರಿತ್ರಿಕ ಪ್ರಸಿದ್ಧವಾದ ದೇವಾಲಯ ಪ್ರವೇಶ ಘೋಷಣೆ (ಕ್ಷೇತ್ರ ಪ್ರವೇಶನ ವಿಳಂಬರಂ)ಯನ್ನು ಹೊರಡಿಸಿದ. ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಘೋಷಣೆಯಿದು.

ಕೊಚ್ಚಿ, ಮಲಬಾರು ಪ್ರದೇಶಗಳಲ್ಲಿ ಮತ್ತು ಹತ್ತು ವರ್ಷಗಳ ನಂತರವೇ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಅಸ್ಪೃಶ್ಯತೆಯನ್ನು ಕಾನೂನಿನ ಮೂಲಕ ವಿರೋಧಿಸಲಾಯಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಸಾಮಾಜಿಕ ಸಂಬಂಧಗಳು

ವರ್ಣಭೇದವಿಲ್ಲದೆ ಎಲ್ಲಾ ಹಿಂದೂಗಳಿಗೂ ದೇವಸ್ಥಾನಕ್ಕೆ ಮುಕ್ತ ಪ್ರವೇಶ ನೀಡುವುದರ ಮೂಲಕ ಕೇರಳದ ಸಾರ್ವಜನಿಕ ಜೀವನದಲ್ಲಿ ಮೇಲುಕೀಳಿನ ಭಾವನೆಗಳು ಬಹುತೇಕ ಕ್ಷೀಣಿಸುತ್ತಾ ಬಂದವು. ಹೊಸ ತಲೆಮಾರಿನ ಹಿಂದೂಗಳಲ್ಲಿ ಜಾತೀಯತೆಯ ಭಾವನೆ ಇಂದು ಇಲ್ಲವೇ ಇಲ್ಲ ಎನ್ನುವಷ್ಟು ಕ್ಷೀಣಿಸಿದೆ. ಒಂದು ಹಿಂದೂ ಸಮುದಾಯದ ಅನೇಕ ಜಾತಿಗಳಿಗೆ ಸಹಭೋಜನಕ್ಕೂ ಅವಕಾಶವಿದ್ದಿರಲಿಲ್ಲ. ಇಂದು ಸಹಭೋಜನಗಳೆಲ್ಲ ಚರ್ಚಾ ವಿಷಯವೇ ಅಲ್ಲ. ನಾಯನ್ಮಾರರಿಗೂ ಈಳವರಿಗೂ ನಡುವಿನ ಅನೇಕ ಉಪಜಾತಿಗಳು ಇಂದಿನ ತಲೆಮಾರಿನವರಿಗೆ ತೀರಾ ಅಪರಿಚಿತ. ಹಿಂದೆ ನಾಯನ್ಮಾರರ ಮತ್ತು ಈಳವರ ಮದುವೆ ಸಮಾರಂಭಗಳಲ್ಲಿ ಉಳಿದ ಉಪಜಾತಿಗಳನ್ನು ಅತ್ಯಂತ ಪ್ರಬಲವಾಗಿಯೇ ಪರಿಗಣಿಸ ಲಾಗುತ್ತಿತ್ತು. ಆಕಸ್ಮಿಕವಾಗಿ ಅನ್ಯ ಜಾತಿಯವರನ್ನು ಸ್ನೇಹದ ಕಾರಣಕ್ಕಾಗಿ ಆಹ್ವಾನಿಸಿದ್ದರೆ ಆಯಾ ಜಾತಿಗಳವರು ಆಹ್ವಾನಿಸಿದ ವ್ಯಕ್ತಿಯನ್ನು ವಿರೋಧಿಸಿ ಮದುವೆ ಮಂಟಪಗಳಲ್ಲಿ ನೀರು, ಆಹಾರಗಳನ್ನು ಮುಟ್ಟದೇ ಹೋಗುವುದು, ಕೆಲವೊಮ್ಮೆ ಸಮಾರಂಭದ ಮುಖ್ಯ ಭಾಗವೆಲ್ಲ ಅನ್ಯ ಜಾತಿಗಳ ಪ್ರವೇಶದ ಕಾರಣಕ್ಕಾಗಿ ಜಗಳದಲ್ಲಿಯೇ ಕಳೆದು ಹೋಗುತ್ತಿ ರುವುದು ಇತ್ಯಾದಿಗಳೆಲ್ಲ ನಡೆಯುತ್ತಿದ್ದವು. ಇಂದು ಅಂಥದ್ದೇನೂ ಇಲ್ಲ. ಜಾತಿ ಜಾತಿಗಳ ನಡುವಿನ ಅಂತರವಿಲ್ಲದ ಸಾಮಾಜಿಕ ಬದುಕು ಇಂದು ಕೇರಳದಲ್ಲಿದೆ. ಅಸ್ಪೃಶ್ಯತೆಯಂತಹ ಅನಿಷ್ಟ ಆಚಾರಗಳ ವಿರುದ್ಧ ಹೋರಾಡಲು ಎಲ್ಲಾ ಜಾತಿಗಳವರ ಸಂಘಟಿತ ಪ್ರಯತ್ನ, ಇಂಗ್ಲಿಷ್ ವಿದ್ಯಾಭ್ಯಾಸ, ಹಳ್ಳಿಗಳಿಂದ ಬಂದು ನಗರದಲ್ಲಿ ಬದುಕುವ ಪರಿಣಾಮ, ಕೈಗಾರಿಕೀ ಕರಣ, ಟ್ರೇಡ್ ಯೂನಿಯನ್‌ಗಳ ಹುಟ್ಟು ಇವೆಲ್ಲಕ್ಕೂ ಮಿಗಿಲಾಗಿ ಜಾತೀಯತೆಯನ್ನು ನಿರ್ಲಕ್ಷಿಸಿ ಆರ್ಥಿಕ ಚಟುವಟಿಕೆಗಳಿಗೆ ಪ್ರಾಧಾನ್ಯ ನೀಡಿದ ಕಮ್ಯುನಿಸ್ಟ್ ಚಿಂತಾಗತಿ ಇವೆಲ್ಲ ವುಗಳ ಕಾರಣದಿಂದ ಜಾತೀಯತೆ ಕೇರಳದ ಸಾಮಾಜಿಕ ಜೀವನದಲ್ಲಿ ನಗಣ್ಯವಾಗಿದೆ.

ಆಸ್ತಿಯ ಹಕ್ಕು, ಮದುವೆ

ಆಸ್ತಿಯ ಹಕ್ಕಿಗೆ ಸಂಬಂಧಿಸಿದ ಹಳೆಯ ನಿಯಮಗಳಿಗೆ ಬದಲಾವಣೆ ಬಂದುದು ಮರುಮಕ್ಕತ್ತಾಯ ಸಂಪ್ರದಾಯದ ಅಧಃಪತನದ ಮೂಲಕ. ಮರುಮಕ್ಕತ್ತಾಯ  ‘ತರವಾಡಿ’ನ ‘ಕಾರಣವರಿಗೆ’ ಕಿರಿಯರು ವಿರೋಧ ವ್ಯಕ್ತಪಡಿಸಿದರು. ತಿರುವಿದಾಂಕೂರು ಪ್ರದೇಶದಲ್ಲಿ ನಾಯರ್ ಸರ್ಮೀಸ್ ಸೊಸೈಟಿಯೂ ಮರುಮಕ್ಕತ್ತಾಯದ ವಿರುದ್ಧವಾಗಿ ನೆಲೆ ಗಟ್ಟಿಗೊಳಿಸಿತು. ಸಾರ್ವಜನಿಕ ಅಭಿಪ್ರಾಯಗಳು ಪ್ರಬಲವಾದ್ದರಿಂದ ೧೯೦೭-೧೯೦೮ ರಲ್ಲಿ ತಿರುವಿದಾಂಕೂರು ಸರಕಾರ ಈ ಸಮಸ್ಯೆಯನ್ನು ಪರಿಹರಿಸಲು ಉದ್ಯೋಗಸ್ಥರನ್ನು ಹಾಗೂ ನಿರುದ್ಯೋಗಿಗಳನ್ನು ಸೇರಿಸಿ ಒಂದು ಸಮಿತಿಯನ್ನು ರೂಪಿಸಿತು. ಈ ವಿಷಯದ ಕುರಿತು ೧೯೧೨ರಲ್ಲಿ ಒಂದು ನಿಯಮವನ್ನು ಜಾರಿಗೊಳಿಸಿದರು. ಒಂದನೆ ನಾಯರ್ ಆಕ್ಟ್ (Nair Act -I) ಎಂದು ಅದರ ಹೆಸರು. ತರವಾಡು ಮನೆಗಳನ್ನು ವಿಭಾಗಿಸಲು ಈ ನಿಯಮ ಅನುಮತಿ ನೀಡಲಿಲ್ಲ. ಆದರೆ ತಂದೆಯ ಆಸ್ತಿಯ ಅರ್ಧ ಭಾಗ ಸಹೋದರಿಯ ಮಕ್ಕಳಿಗೂ ಉಳಿದರ್ಧ ಭಾಗ ಮಕ್ಕಳಿಗೂ ಕೊಡಬಹುದೆಂಬುದೇ ಈ ನಿಯಮ. ವಾಸ್ತವವಾಗಿ ಇದು ಒಂದು ರೀತಿಯ ಒಪ್ಪಂದ. ಈ ಒಪ್ಪಂದವನ್ನು  ಸುಧಾರಣಾವಾದಿಗಳು ಒಪ್ಪಲಿಲ್ಲ. ಮರುಮಕ್ಕತ್ತಾಯ ನಿಯಮವನ್ನು ಪರಿಷ್ಕರಿಸಲು ಒಂದು ಅನೌಪಚಾರಿಕ ಪ್ರಮೇಯವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಮಾತೃಮೂಲದ ಆಸ್ತಿಯನ್ನು ವಿಭಾಗಿಸಬೇಕೆಂದು ಆ ಪ್ರಮೇಯದಲ್ಲಿ ಸೂಚಿಸಲಾಗಿತ್ತು. ಆದರೆ ಸರಕಾರದ ವಿರೋಧದಿಂದಾಗಿ ಅದು ವಿಫಲವಾಯಿತು. ಕೊನೆಗೂ ೧೯೨೫ರಲ್ಲಿ ಅಂಗೀಕರಿಸಿದ ನಾಯರ್ ಏಕ್ಟ್ ಪ್ರತಿಯೊಬ್ಬರಿಗೂ ಪಾಲು ಕೊಡುವುದಕ್ಕೆ ವ್ಯವಸ್ಥೆ ಮಾಡಿತು. ಗಂಡಸರ ಆಸ್ತಿಯಲ್ಲಿ ಸಹೋದರಿಯ ಮಕ್ಕಳಿಗಿರುವ ಹಕ್ಕನ್ನು ಅದು ನಿಷೇಧಿಸಿತು. ನಾಯರ್ ಆಕ್ಟನ್ನು ಅನುಸರಿಸಿಯೇ ವ್ಯವಸ್ಥೆ ಗಳನ್ನು ಜಾರಿಗೊಳಿಸುವ ಈಳವರ ‘ನಾಂಚಿನಾಡ್ ವೆಳ್ಳಾಳ ಆಕ್ಟ್’ ಜಾರಿಗೆ ಬಂತು. ನಾಯರ್ ಆಕ್ಟ್ ಬಹುಪತ್ನಿತ್ವವನ್ನು ವಿರೋಧಿಸಿತು. ಹಾಗೆ ಹಲವು ನಿಯಮಗಳನ್ನು ಪರಿಷ್ಕರಿಸಿ ತಿರುವಾಂಕೂರಿನ ಹಿಂದುಗಳು ಮಕ್ಕಳಕಟ್ಟು (ಮಕ್ಕತ್ತಾಯ)ಗಳಾಗಿ ಬದಲಾಗಿ ಅವಿಭಕ್ತ ಕುಟಂಬಗಳೂ ಇಲ್ಲವಾದವು.

ಕೊಚ್ಚಿಯಲ್ಲಿ ಈ ತೆರನ ನಿಯಮಗಳು ಹಲವು ಒಂದೊಂದಾಗಿ ಜಾರಿಗೆ ಬಂದವು. ೧೯೧೯-೨೦ರ ನಾಯರ್ ರೆಗ್ಯುಲೇಶನ್ ಏಕ್ಟ್‌ನಲ್ಲಿ ಕಾರಣವರ ಅಧಿಕಾರವನ್ನು ಮೊಟಕು ಗೊಳಿಸಿ ತರವಾಡು ಮನೆಯು ಪಾಲುದಾರಿಕೆಗೆ ವ್ಯವಸ್ಥೆಯನ್ನು ಸೂಚಿಸಿತು. ಹೆಂಡತಿ ಮತ್ತು ಮಕ್ಕಳನ್ನು ಸಾಕುವ ಜವಾಬ್ದಾರಿಯನ್ನು ಗಂಡನಿಗೆ ಕೊಡಲಾಯಿತು. ನಾಯರ್ ಸಮುದಾಯದ ಗಂಡನಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತಿತ್ತು. ಹಾಗೆಯೇ ನಾಯರ್ ಸ್ತ್ರೀಯ ನಂಬೂದಿರಿ ಗಂಡನು ಹೆಂಡತಿ ಮಕ್ಕಳ ಖರ್ಚುವೆಚ್ಚಗಳನ್ನು ಭರಿಸಬೇಕು. ಬಹುಪತ್ನಿತ್ವವನ್ನು ನಿಷೇಧಿಸಲಾಯಿತು. ಇದು ಮರುಮಕ್ಕತ್ತಾಯ ಸಂಪ್ರದಾಯಕ್ಕೆ ಕ್ರಾಂತಿಕಾರಕವಾದ ಬದಲಾವಣೆಯಾಗಿತ್ತು. ೧೯೩೭-೧೯೩೮ರಲ್ಲಿ ಅಂಗೀಕರಿಸಿದ ಕೊಚ್ಚಿ ನಾಯರ್ ಪದ್ದತಿಯ ನಿಯಮವನ್ನು ಉಳಿಸಿಕೊಂಡು ಅವಿಭಕ್ತ ಕುಟುಂಬದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಹೊಸ ವ್ಯವಸ್ಥೆಗಳನ್ನು ಸೂಚಿಸಿತು. ಮರುಮಕ್ಕತ್ತಾಯ ಸಂಪ್ರದಾಯವನ್ನು ಸಂಪೂರ್ಣವಾಗಿ ಕೊನೆಗೊಳಿಸಿ ಕಾರಣವರ ಏಕಾಧಿಪತ್ಯದ ಕ್ರೂರ ಹಸ್ತದಿಂದ ತರವಾಡು ಮನೆಗಳನ್ನು ಮುಕ್ತಗೊಳಿಸಿದ ನಿಯಮವಿದು. ಗಂಡನ ಆಸ್ತಿಗೆ ನಿಯಮಾನುಸಾರ ಹೆಂಡತಿ ಮಕ್ಕಳು ಹಕ್ಕುದಾರರಾದರು. ವ್ಯಕ್ತಿಗಳ ಪಾಲುದಾರಿಕೆಯಲ್ಲಿ ತರವಾಡು ಮನೆಯ ಎಲ್ಲಾ ಸದಸ್ಯರಿಗೆ ಸಮಾನ ಹಕ್ಕುಗಳನ್ನು ಕೊಡಲಾಯಿತು. ಬಹುಪತ್ನಿತ್ವವನ್ನು ನಿಷೇಧಿಸುವುದರೊಂದಿಗೆ ವಿವಾಹದ ಪ್ರಾಯವನ್ನು ಆ ನಿಯಮದಲ್ಲಿ ಉಲ್ಲೇಖಿಸಲಾಯಿತು. ಮದುವೆಯಾಗುವ ಹುಡುಗಿಯ ವಯಸ್ಸು ಕನಿಷ್ಠ ಹದಿನಾರು ಹಾಗೂ ಹುಡುಗನ ವಯಸ್ಸು ಇಪ್ಪತ್ತೊಂದು ಎಂದೂ ನಿಯಮದಲ್ಲಿ ಸೂಚಿಸಲಾಯಿತು.

ಮಲಬಾರಿನ ದಾಯಕ್ರಮವನ್ನು ಪರಿಷ್ಕರಿಸಿ ಅಂದಿನ ಮದ್ರಾಸ್ ಸರಕಾರ ಹಲವು ಕಾನೂನುಗಳನ್ನು ರೂಪಿಸಿತು. ೧೯೩೩ರಲ್ಲಿ ಮದ್ರಾಸ್ ಸರಕಾರವು ಮರುಮಕ್ಕತ್ತಾಯ ನಿಯಮಕ್ಕೆ ತರವಾಡಿನ ವ್ಯಕ್ತಿಗಳ ಪಾಲುದಾರಿಕೆಗೆ ವ್ಯವಸ್ಥೆಗಳನ್ನು ಸೂಚಿಸಿ ಕಾರ್ಯ ರೂಪಕ್ಕೆ ತಂದಿತು. ಸದಸ್ಯರ ಬಹುಮತವನ್ನು ಅನುಸರಿಸಿ ಕಾರಣವರು ಒಪ್ಪದಿದ್ದರೂ ತರವಾಡಿನ ಆಸ್ತಿಯನ್ನು ವಿಭಾಗಿಸಬಹುದು ಎಂಬ ನಿಯಮವನ್ನು ಜಾರಿಗೆ ತರಲಾಯಿತು. ಆ ನಿಯಮ ದಿಂದಾಗಿ ಮರುಮಕ್ಕತ್ತಾಯ ಸಂಪ್ರದಾಯವನ್ನು ಒಪ್ಪಿಕೊಂಡಿದ್ದ ಪಯ್ಯನ್ನೂರಿನ ನಂಬೂದಿರಿ ಯರನ್ನೂ ಒಳಗೊಂಡಂತೆ ಮಲಬಾರಿನ ಎಲ್ಲಾ ಹಿಂದೂಗಳನ್ನು ಚಿಂತೆಗೆ ಈಡುಮಾಡಿತು. ೧೯೫೮ರಲ್ಲಿ ತಂದ ಬದಲಾವಣೆಯೊಂದರಲ್ಲಿ ಮರುಮಕ್ಕತ್ತಾಯ ಮನೆಯ ಸದಸ್ಯರ ಪಾಲಿನ ಹಕ್ಕನ್ನು ಸ್ಥಿರೀಕರಿಸಲಾಯಿತು.

ಇದರೊಡನೆಯೇ ಉತ್ತರ ಮಲಬಾರಿನ ಮಾಪಿಳ್ಳೆಗಳ ದಾಯಕ್ರಮವು ಮರು ಮಕ್ಕತ್ತಾಯದಿಂದ ಮಕ್ಕಳ ಕಟ್ಟಿಗೆ ಬದಲಾಯಿಸಿ ನಿಯಮವನ್ನು ಜಾರಿಗೊಳಿಸಲಾಯಿತು. ಹೀಗೆ ಪಾಲುದಾರಿಕೆಯಿಂದ ಬರುವ ಆಸ್ತಿಯನ್ನು ಷರಿಯತ್‌ನ ಪ್ರಕಾರ ಸ್ವಾಧೀನದಲ್ಲಿರಿಸಿ ಕೊಳ್ಳಬಹುದು. ೧೯೩೭ರಲ್ಲಿ ಕೇಂದ್ರ ವಿಧಾನಸಭೆ ಅಂಗೀಕರಿಸಿದ ಷರಿಯತ್ ನಿಯಮವನ್ನು ೧೯೪೯ರಲ್ಲಿ ಮದ್ರಾಸ್ ವಿಧಾನ ಸಭೆಯು ರಾಜ್ಯದ ಮುಸಲ್ಮಾನರಿಗೂ ಅನ್ವಯಿಸುವಂತೆ ಮಾಡಿತು. ಆ ಮೂಲಕ ಮರುಮಕ್ಕತ್ತಾಯ ಸಂಪ್ರದಾಯವನ್ನು ಅನುಸರಿಸಿದ್ದ ಮಲಬಾರಿನ ಮಾಪ್ಳಾಗಳು ಜಗತ್ತಿನ ಇತರ ಮುಸಲ್ಮಾನರಂತೆ ಮಕ್ಕಳಕಟ್ಟನ್ನು ಅಂಗೀಕರಿಸಿದಂತಾಯಿತು.

೧೯೩೩ರಲ್ಲಿ ಅಂಗೀಕರಿಸಿದ ಮದ್ರಾಸಿನ ನಂಬೂದಿರಿ ನಿಯಮವು ಮಲಬಾರಿನ ನಂಬೂದಿರಿಗಳ ದಾಯಕ್ರಮದಲ್ಲಿ ಬದಲಾವಣೆಯನ್ನು ತಂದಿತು. ಅದರ ಪ್ರಕಾರ ಮನೆಯ ಸದಸ್ಯರಿಗೆ ಎಲ್ಲ ಸ್ತ್ರೀ ಪುರುಷ ಭೇದವಿಲ್ಲದೆ ತರವಾಡು ಆಸ್ತಿಯಲ್ಲಿ ಸಮಾನವಾದ ಪಾಲು ಕೊಡಬೇಕೆಂದು ಸೂಚಿಸಲಾಯಿತು. ಹಾಗೆಯೇ ನಂಬೂದಿರಿಯ ಹಿರಿಯ ಮಗನಂತೆ ಕಿರಿಯರೂ ಕೂಡಾ ಸ್ವಜಾತಿಯಿಂದ ಮದುವೆಯಾಗುವ ಅವಕಾಶವನ್ನು ಕಲ್ಪಿಸಲಾಯಿತು. ಅವರ ಸಂತತಿಗೂ ಆಸ್ತಿಯ ಹಕ್ಕನ್ನು ನೀಡಲಾಯಿತು.

ಸ್ವಾತಂತ್ರ್ಯಾನಂತರ ಭಾರತದ ಲೋಕಸಭೆಯು ಅಂಗೀಕರಿಸಿದ ಮಸೂದೆಯೂ ದೇಶದ ಎಲ್ಲಾ ಹಿಂದುಗಳಿಗೆ ಸಾಮಾನ್ಯವಾಗಿ ಅನ್ವಯವಾಗುವಂತಿತ್ತು. ೧೯೫೬ರಲ್ಲಿ ಜಾರಿಗೆ ಬಂದ ಹಿಂದೂಗಳ ಆಸ್ತಿ ಹಕ್ಕಿನ ಕಾನೂನನ್ನು ಎಲ್ಲಾ ಹಿಂದೂಗಳಿಗೂ ಅನ್ವಯಿಸಿ ಜಾರಿಗೆ ತರಲಾಯಿತು. ಹೆಣ್ಣು, ಗಂಡುಗಳಿಗೆ ಆಸ್ತಿಯಲ್ಲಿ ಸಮಾನ ಹಕ್ಕುಗಳನ್ನು ನೀಡಲಾಯಿತು. ಇದು ಮರುಮಕ್ಕತ್ತಾಯ ಸಂಪ್ರದಾಯದವರಿಗೂ ಅನ್ವಯವಾಗುತ್ತಿತ್ತು. ಈ ನಿಯಮದಂತೆ ಎಲ್ಲಾ ವಿಭಾಗದ ಹಿಂದೂಗಳು ಏಕಪತ್ನಿತ್ವವನ್ನು ಕಡ್ಡಾಯವಾಗಿ ಒಪ್ಪಿಕೊಳ್ಳಬೇಕಾಗಿ ಬಂತು.

ಕೇರಳದ ವಿಧಾನಸಭೆಯು ೧೯೭೫ರಲ್ಲಿ ಹಿಂದೂ ಕುಟುಂಬ ನಿಯಮಗಳಿಗೆ ಅನ್ವಯಿಸು ವಂತೆ ಅಂಗೀಕರಿಸಿದ ಮಸೂದೆಯು ಮರುಮಕ್ಕತ್ತಾಯ ಸಂಪ್ರದಾಯದ ಕೊನೆಯ ಪರಿಷೃತ ನಿಯಮಗಳಾಗಿದ್ದವು. ಇದು ಕೇರಳದಲ್ಲಿ ಮರುಮಕ್ಕತ್ತಾಯ ಸಂಪ್ರದಾಯವನ್ನು ಔಪಚಾರಿಕ ವಾಗಿ ಕೊನೆಗೊಳಿಸಲು ಕಾರಣವಾಯಿತು. ಅಲ್ಲದೆ ಮಕ್ಕತ್ತಾಯ ಸಂಪ್ರದಾಯದ ಆರಂಭಕ್ಕೂ ಇದು ಕಾರಣವಾಯಿತು.

ಸ್ವಾತಂತ್ರ್ಯಪೂರ್ವದ ಭೂ ನಿಯಮ

ಕೇರಳದಲ್ಲಿ ಒಂದು ಹೊಸ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳಲು ದಾರಿ ಮಾಡಿಕೊಟ್ಟ ಭೂ ನಿಯಮಗಳಲ್ಲಿ ಹಲವು ಕೇರಳದ ಮೂರು ಪ್ರಾದೇಶಿಕ ವಿಭಾಗಗಳಲ್ಲೂ ಹಿಂದಿನಿಂದಲೇ ಜಾರಿಯಲ್ಲಿದ್ದುವು. ಒಕ್ಕಲು ಜನರ ಅತಂತ್ರ ಸ್ಥಿತಿಗಳನ್ನು ಕೊನೆಗೊಳಿಸುವ ನಿಯಮಗಳು ಹತ್ತೊಂಬತ್ತನೆಯ ಶತಮಾನದಲ್ಲಿಯೇ ಇದ್ದವು. ಭೂಹಂಚಿಕೆಗೆ ಸಂಬಂಧಿಸಿದಂತೆ ಅನೇಕ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದರು. ಎಲ್ಲಾ ಸಂದರ್ಭದಲ್ಲಿಯೂ ಗೇಣಿದಾರರು ಹಿತವನ್ನು ಕಾಪಾಡಲಾಗಿತ್ತು. ಸ್ವಾತಂತ್ರ್ಯಾನಂತರ ಭಾರತದ ಇತರ ಭಾಗಗಳಲ್ಲಿ ಭೂಹಂಚಿಕೆಗೆ ಸಂಬಂಧಿಸಿದ ಕಾನೂನನ್ನು ಕೇರಳದಲ್ಲಿಯೂ ಜಾರಿಗೊಳಿಸಲಾಯಿತು. ಇದರಲ್ಲಿ ಮೊದಲನೆ ಯದಾಗಿ ಮಧ್ಯಮ ವರ್ಗದವರ ಭೂಮಿಯನ್ನು ಅವರಿಗೆ ಉಳಿಸಲಾಯಿತು. ಎರಡನೆಯದಾಗಿ ಗೇಣಿದಾರರ ಭೂಮಿಯ ಪರಿಧಿಯನ್ನು ಗುರುತಿಸಿ ಅವರಿಗೆ ಭೂಮಿಯನ್ನು ವಿತರಿಸಲಾಯಿತು.

ಉಳುವವನೇ ಹೊಲದೊಡೆಯ

ಪಂಚವಾರ್ಷಿಕ ಯೋಜನೆಗಳಲ್ಲಿ ಸೂಚಿಸಿದ ತಾತ್ವಿಕ ಚೌಕಟ್ಟಿನಲ್ಲಿ ಭೂ ನಿಯಮವನ್ನು ೧೯೬೦ರಲ್ಲಿ ಪರಿಷ್ಕರಿಸಲಾಯಿತು. ಈ ನಿಯಮಗಳನ್ನು ನ್ಯಾಯಾಲಯವು ರದ್ದು ಮಾಡಿದ್ದರಿಂದ ಮತ್ತೆ ನಿಯಮಗಳನ್ನು ಪುನರ್ ರೂಪಿಸಲಾಯಿತು. ೧೯೬೩ರಲ್ಲಿ ಅಂಗೀಕರಿಸಿದ ಪರಿಷ್ಕೃತ ಭೂ ನಿಯಮ ೧೯೬೪ ಏಪ್ರಿಲ್ ಒಂದರಿಂದ ಜಾರಿಗೆ ಬಂತು. ಆದರೂ ಅದರಲ್ಲಿ ಸೂಚಿಸಿದಂತೆ ಭೂ ಪರಿಧಿಯನ್ನು ನಿರ್ಣಯಿಸುವುದೋ, ಮಧ್ಯಮ ವರ್ಗದವರನ್ನು ಹೊರತು ಪಡಿಸುವುದೋ ಇವು ಪ್ರಾಯೋಗಿಕವಾಗಿ ಕಾರ್ಯ ರೂಪಕ್ಕೆ ಬರಲಿಲ್ಲ. ಹಾಗಾಗಿ ೧೯೬೯ರ ಭೂ ನಿಯಮವನ್ನು ಮಾಡುವಾಗ ೧೯೬೩ರ ನಿಯಮಗಳನ್ನು ಸಂಪೂರ್ಣ ಬದಲಾವಣೆ ಮಾಡಲಾಯಿತು. ಇದರಿಂದಾಗಿ ಉಳುವವರಿಗೆ ಸಂಪೂರ್ಣವಾಗಿ ಆಸ್ತಿ ಹಕ್ಕು ಲಭಿಸಿತು. ಮಧ್ಯವರ್ತಿಗಳನ್ನು ಹೊರತುಪಡಿಸಿದ್ದರಿಂದ ಉಳುವವ ಹಾಗೂ ಸರಕಾರದ ಸಂಬಂಧ ನೇರವಾಯಿತು. ಸಣ್ಣಪುಟ್ಟ ವ್ಯತ್ಯಾಸಗಳನ್ನು ಬಿಟ್ಟರೆ ಉಳುವವರ ಒಡೆತನದ ಹಕ್ಕು ಭದ್ರವಾಯಿತು. ಸ್ವಾಧೀನದಲ್ಲಿರುವ ಭೂಮಿಯನ್ನು ಬೇಕಾದರೆ ಬೆಲೆಕೊಟ್ಟು ಖರೀದಿಸುವ ಹಕ್ಕು ಸ್ವಾಧೀನದಲ್ಲಿರುವವನಿಗೆ ಇತ್ತು. ೧೯೭೦ ಜನವರಿ ಒಂದರಿಂದ ಈ ನಿಯಮ ಜಾರಿಗೆ ಬಂತು.

ಭೂಮಿಯ ಒಡೆತನ

೧೯೬೧ರ ಕೃಷಿ ಕಾನೂನುನಲ್ಲಿ ಒಬ್ಬ ವ್ಯಕ್ತಿ ಹೊಂದಬಹುದಾದ ಭೂಮಿಯ ಪರಧಿಯನ್ನು ನಿಶ್ಚಯಿಸಲಾಗಿತ್ತು. ೧೫ ಎಕರೆ ಭೂಮಿಯನ್ನು ಮಾತ್ರ ಒಬ್ಬ ಹೊಂದಬಹುದೆಂದು ನಿಯಮ ಮಾಡಲಾಯಿತು. ಸರಕಾರದ ಭೂಮಿ, ಖಾಸಗೀ ಸಂಘ ಸಂಸ್ಥೆಗಳ ತೋಟ ಮೊದಲಾವುಗಳಿಗೆ ಈ ನಿಯಮದಿಂದ ವಿನಾಯಿತಿ ಕೊಡಲಾಯಿತು.

೧೯೭೦ ಜನವರಿಯ ತರುವಾಯ ಭೂ ನಿಯಮಕ್ಕೆ ಸಂಬಂಧಿಸಿದ ಕಾನೂನುಗಳನ್ನು ಮತ್ತೆ ಪರಿಷ್ಕರಿಸಲಾಯಿತು. ೧೯೭೦ ಜನವರಿಯ ನಂತರ ಯಾರೂ ಕಾನೂನಿನಲ್ಲಿ ಸೂಚಿಸಿದ್ದಕ್ಕಿಂತ ಹೆಚ್ಚಿನ ಭೂಮಿಯನ್ನು ಇರಿಸಿಕೊಳ್ಳುವಂತಿಲ್ಲ. ಈ ನಿಯಮದಂತೆ ಪ್ರಾಯ ಪೂರ್ತಿಯಾದ ಅವಿವಾಹಿತನೊಬ್ಬನು ೫ ಎಕರೆಗಿಂತ ಹೆಚ್ಚಿನ ಭೂಮಿಯನ್ನು ಹೊಂದುವಂತಿಲ್ಲ. ಎರಡು ಅಥವಾ ಅದಕ್ಕೆ ಹೆಚ್ಚಿನ ಸದಸ್ಯರಿರುವ ಕುಟುಂಬದ ವ್ಯಕ್ತಿ ಹತ್ತು ಎಕರೆ ನೆಲವನ್ನು ಸ್ವಾಧೀನದಲ್ಲಿರಿಕೊಳ್ಳಬಹುದು. ಕುಟುಂಬದಲ್ಲಿ ಐವರು ಸದಸ್ಯರು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಸದಸ್ಯರಿದ್ದಲ್ಲಿ ಒಬ್ಬ ವ್ಯಕ್ತಿಗೆ ಒಂದು ಎಕರೆಯಂತೆ ಹೆಚ್ಚಿನ ಭೂಮಿಯನ್ನು ಸ್ವಾಧೀನದಲ್ಲಿರಿಸಿಕೊಳ್ಳಬಹುದು. ರಬ್ಬರ್, ಚಹಾ, ಕಾಫಿ ಮೊದಲಾದವುಗಳನ್ನು ಕೃಷಿ ಮಾಡುವ ತೋಟಗಳನ್ನು, ಕೃಷಿ ಯೋಗ್ಯವಲ್ಲದೆ ಭೂಮಿಯನ್ನು ಶಿಕ್ಷಣ ಸಂಸ್ಥೆಗಳ ಹಾಗೂ ಧಾರ್ಮಿಕ ಕೇಂದ್ರಗಳ ಸ್ವಾಧೀನದಲ್ಲಿರುವ ಭೂಮಿಯನ್ನು ಈ ಕಾನೂನಿನಿಂದ ಹೊರತುಪಡಿಸಲಾಯಿತು.

ಅವರವರು ವಾಸ ಮಾಡುತ್ತಿದ್ದ ನೆಲದ ಹಕ್ಕನ್ನು ಅವರವರಿಗೇ ಕೊಟ್ಟುದರಿಂದ ಬಡವರಿಗೆ ಬಹಳ ಅನುಕೂಲವೇ ಆಯಿತು. ೧೯ನೇ ಶತಮಾನದ ಉತ್ತರಾರ್ಧದಿಂದ ಈಚೆಗೆ ಅನೇಕ ಬಾರಿ ಭೂ ವಿತರಣೆಗೆ ಸಂಬಂಧಿಸಿದಂತೆ ನಿಯಮಗಳು ರೂಪುಗೊಂಡಿವೆ, ಬದಲಾಗಿವೆ. ಅಂತಿಮವಾಗಿ ಇವುಗಳ ಪರಿಣಾಮವೆಂದರೆ ಜಮೀನ್ದಾರಿಕೆಯ ನಾಶ. ಕೇರಳದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಇವುಗಳಿಗೆ ಮಹತ್ವದ ಪಾತ್ರವಿದೆ. ಕೇರಳದ ಬುಡಕಟ್ಟು ಜನರು ವಾಸ ಮಾಡುತ್ತಿದ್ದ ಭೂಮಿಯ ಹಕ್ಕಿಗಾಗಿ ಹೋರಾಟಗಳು ಇಂದಿಗೂ ನಡೆದಿವೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಹೊಸ ಮೌಲ್ಯಗಳು

ಕೇರಳದ ಸಾಮಾಜಿಕ ಬದಲಾವಣೆಗಳಿಗೆ ಸಂಬಂಧಿಸಿದ ಅನೇಕ ಚಾರಿತ್ರಿಕ ಸಂಗತಿಗಳನ್ನು ಗಮನಿಸಿದ್ದಾಯಿತು. ಇದರಿಂದ ಸ್ಪಷ್ಟವಾಗುವ ಮುಖ್ಯ ವಿಚಾರವೆಂದರೆ ಇಂದಿನ ಕೇರಳವೆಂದರೆ ಇಪ್ಪತ್ತನೇ ಶತಮಾನದ ಆರಂಭದಲ್ಲಿದ್ದ ಕೇರಳವಲ್ಲ. ಇಪ್ಪತ್ತನೇ ಶತಮಾನದ ಆರಂಭ ಕಾಲದ ಕೇರಳವು ಜಮೀನ್ದಾರರ ಮುಷ್ಟಿಯಲ್ಲಿತ್ತು. ನಾಯರುಗಳು, ನಂಬೂದಿರಿಯರು ಸಾಮಾಜಿಕವಾದ ನೀತಿನಿಯಮಗಳನ್ನು ರೂಪಿಸಿ ಸುಖಲೋಲುಪವಾದ ಜೀವನ ನಡೆಸುತ್ತಿದ್ದರು. ಸಾಮಾಜಿಕ ಸ್ಥಾನಮಾನಗಳನ್ನು ನಿರ್ಣಯಿಸುತ್ತಿದ್ದವರೂ ಈ ಜನಗಳೇ ಆಗಿದ್ದರು. ಅವರ ಆದೇಶಗಳನ್ನು ಕಣ್ಣುಮುಚ್ಚಿ ಅನುಸರಿಸುವುದು ಕೆಳಜಾತಿಗಳವರ ಕರ್ತವ್ಯ ವಾಗಿತ್ತು. ಒಬ್ಬನ ವಶದಲ್ಲಿ ಎಷ್ಟು ನೆಲ ಇದೆಯೋ, ಅದರ ಮೇಲೆ ಆತನ ಸಾಮಾಜಿಕ ಸ್ಥಾನಮಾನಗಳು ನಿರ್ಣಯವಾಗುತ್ತಿದ್ದವು. ಹೆಚ್ಚು ನೆಲ ಸ್ವಾಧೀನವಿದ್ದಷ್ಟು ಅವನ ಸ್ಥಾನಮಾನಗಳು ಅಷ್ಟು ಹೆಚ್ಚಾಗುತ್ತಿತ್ತು. ಜಮೀನ್ದಾರಿಕೆಯ ನೆರಳಿನಲ್ಲಿ ಅಸ್ಪೃಶ್ಯತೆ, ಬಹುಪತ್ನಿತ್ವ, ಮರುಮಕ್ಕತ್ತಾಯ ಮೊದಲಾದ ಆಚರಣೆಗಳು ವ್ಯವಸ್ಥಿತವಾಗಿ ನಡೆದವು. ಸಮಾಜದ ದೊಡ್ಡದೊಂದು ಜನ ವಿಭಾಗವು ಆಸಕ್ತಿ, ಅಭಿರುಚಿಗಳಿಗೆ ಅನುಗುಣವಾಗಿ ಬದುಕುವ ಅವಕಾಶದಿಂದಲೇ ವಂಚಿತವಾಗಿತ್ತು.

ಇಂದು ಇಂತಹ ಪರಿಸ್ಥಿತಿಯಿಲ್ಲ. ಕೇರಳದ ಸಾಮಾನ್ಯ ಪ್ರಜೆಯೂ ಇಂದು ಜಮೀನ್ದಾರರ ಹಾಗೂ ಸಾಮಾಜಿಕ ಕಟ್ಟುಪಾಡುಗಳಿಂದ ಮುಕ್ತಿ ಹೊಂದಿದ್ದಾನೆ. ಜನರ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ವಿರೋಧವಾದ ಎಲ್ಲಾ ವ್ಯವಸ್ಥೆಗಳು ಇಂದು ನಾಶವಾಗಿವೆ. ಮರುಮಕ್ಕತ್ತಾಯ, ಜಮೀನ್ದಾರೀ ಪದ್ಧತಿಗಳು ನಾಶವಾಗಲು ಪ್ರಗತಿಪರವಾದ ಸಂಘಟನೆಗಳ ಹಾಗೂ ಹೋರಾಟಗಳೇ ಮುಖ್ಯ ಕಾರಣ. ಕಾಲಕಾಲಕ್ಕೆ ಸರಕಾರವು ಅಂಗೀಕರಿಸಿದ ಪ್ರಗತಿಪರ ಕಾನೂನುಗಳು ಇದಕ್ಕೆ ನೆರವಾಗಿವೆ. ಜಾತಿ ಮತ್ತು ಭೂಮಿಯ ಒಡೆತನ ನೀಡಿದ ಸಾಮಾಜಿಕ ಸ್ಥಾನಮಾನಗಳು ಇಂದಿಲ್ಲ. ರಾಜರುಗಳ ಆಡಳಿತ ಕೊನೆಗೊಂಡುದು ಸಾಮಾಜಿಕ ಪರಿವರ್ತನೆಗೆ ಒತ್ತಾಸೆ ನೀಡಿತು. ರಾಜ ಮನೆತನದವರು ದಂತ ಗೋಪುರಗಳಿಂದ ಹೊರಬಂದು ಜೀವನ ನಿರ್ವಹಣೆಗಾಗಿ ವ್ಯಾಪಾರ, ವ್ಯವಸಾಯಗಳಲ್ಲಿ ತೊಡಗಿಕೊಂಡರು. ಸರಕಾರದ ಉದ್ಯೋಗಗಳನ್ನು ಅರಸಿ ಹೋದರು. ಅದೇ ವೇಳೆಗೆ ಪರಂಪರಾಗತವಾಗಿ ನಿಕೃಷ್ಟರೆಂದು ಹೇಳುವ ಕೆಲಸಗಳನ್ನು ಮಾಡಿ ಬದುಕುತ್ತಿದ್ದ ಕೆಳ ವರ್ಗದವರೂ ಕೃಷಿ, ವ್ಯಾಪಾರಗಳಲ್ಲಿ ತೊಡಗಿದ್ದಲ್ಲದೆ ಬೌದ್ದಿಕವಾದ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಗೆಲ್ಲಾ ಇಂದು ಶಿಕ್ಷಣ ಲಭಿಸಿದೆ. ಜಾತಿ ಸಂಪ್ರದಾಯಗಳು ಬಹುತೇಕ ನಶಿಸಿವೆ. ಆರ್ಥಿಕ ತಳಹದಿಯ ಮೇಲೆ ಸಮಾಜದಲ್ಲಿ ಜನರನ್ನು ವರ್ಗೀಕರಿಸುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಈ ಹೊಸ ಆರ್ಥಿಕ ವರ್ಗಗಳಿಗೆ ಅವರವರದೇ ಆದ ಆಸಕ್ತಿ, ಅಭಿರುಚಿಗಳಿವೆ. ಅವುಗಳನ್ನು ಪೂರೈಸಿಕೊಳ್ಳುವಲ್ಲಿ ಅವರಿಗೆ ಜಾತೀಯವಾದ ಯಾವುದೇ ಅಡ್ಡಿ ಅಡಚಣೆಗಳು ಎದುರಾಗುವುದಿಲ್ಲ. ಸರಕಾರದ ಉದ್ಯೋಗಿಗಳು, ವೈದ್ಯರು, ಕೃಷಿಕರು, ಕಾರ್ಮಿಕರು ಇವರಿಗೆಲ್ಲ ಇಂದು ಅವರ ಜಾತಿಯ ಕಾರಣಕ್ಕಿಂತಲೂ ವೃತ್ತಿ ಹಾಗೂ ಆರ್ಥಿಕ ಸ್ಥಿತಿಯ ಕಾರಣಗಳಿಗಾಗಿ ಸಾಮಾಜಿಕ ಸ್ಥಾನಮಾನಗಳು ದೊರೆಯುತ್ತವೆ. ಇದು ಚಲನಶೀಲವಾದ ಹೊಸದೊಂದು ಸಾಮಾಜಿಕ ಬದಲಾವಣೆಯನ್ನು ಸೂಚಿಸುತ್ತದೆ. ಈ ಹೊಸ ಸಮಾಜದಲ್ಲಿ ಹೊಸ ಮೌಲ್ಯಗಳನ್ನು ಹೊಸ ಮಾನದಂಡಗಳನ್ನು ರೂಪಿಸಿಕೊಂಡಿದ್ದಾರೆ. ಜೀರ್ಣಗೊಂಡ ವ್ಯವಸ್ಥೆಯನ್ನು ನಿಷೇಧಿಸಲು ಹಾಗೆಯೇ ಭಾವೀ ಬದುಕನ್ನು ಉಜ್ವಲಗೊಳಿಸುವ ವ್ಯವಸ್ಥೆ ಯನ್ನು ಸ್ವಾಗತಿಸಲು ಕೇರಳೀಯರು ಸದಾ ಸಿದ್ಧರಾಗಿದ್ದಾರೆ. ಜನರ ಆಸಕ್ತಿಯೇ ಇಂದು ಸರ್ವಮಾನ್ಯ ವಿಚಾರವಾಗಿದೆ. ಜನರ ಇಚ್ಛೆಗಳನ್ನು ಪ್ರಜಾಪ್ರಭುತ್ವದ ಮೂಲಕ ನೆರವೇರಿಸಿ ಕೊಡಲಾಗುತ್ತದೆ. ಇಂದಿನ ಈ ಎಚ್ಚರದ ಸ್ಥಿತಿಯನ್ನು ನೆಲೆ ನಿಲ್ಲಿಸಿ ಪುಷ್ಟಿಗೊಳಿಸುವಲ್ಲಿ ಹೊಸತೊಂದು ಸಾಮಾಜಿಕ ಪ್ರಜ್ಞೆ ಕೇರಳೀಯರಲ್ಲಿದೆ. ಈ ಮೌಲಿಕವಾದ ಪ್ರಜ್ಞೆಯೇ ಆಧುನಿಕ ಕೇರಳದ ಜನಜೀವನದ ಕೇಂದ್ರವಾಗಿದೆ.