ಶತಮಾನಗಳ ಕಾಲ ಕೇರಳದಲ್ಲಿ ನೆಲೆ ನಿಂತಿದ್ದ ಸಾಮಾಜಿಕ-ಆರ್ಥಿಕ ವ್ಯವಸ್ಥೆ ಗಳಲ್ಲಿ ಆರೋಗ್ಯಕರವಾದ ಬದಲಾವಣೆ ಸಾಧ್ಯವಾಗಿದೆ. ಇದಕ್ಕಾಗಿ ಅನೇಕ ವರ್ಷಗಳ ಕಾಲ ನಿರಂತರ ಪ್ರಯತ್ನಗಳು ನಡೆದಿವೆ. ಅನೇಕ ಸಮಾಜ ಸುಧಾರಕರು ಹೋರಾಟಗಳನ್ನು ಚಳುವಳಿಗಳನ್ನು ನಡೆಸಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ಸಾಂಪ್ರದಾಯಿಕವಾಗಿ ಜಿಡ್ಡು ಹಿಡಿದಿದ್ದ ಕೇರಳದ ಸಾಮಾಜಿಕ ಜೀವನಕ್ಕೆ ಹೊಸತೊಂದು ವ್ಯಾಖ್ಯಾನವನ್ನು ಬರೆಯುವುದು ಸಾಧ್ಯವಾಯಿತು.

೧೯ನೆಯ ಶತಮಾನದ ಮೊದಲು

ವಾಸ್ತವವಾಗಿ ಹೊಸತೊಂದು ಸಾಮಾಜಿಕ ವ್ಯವಸ್ಥೆಗೆ ಪೋರ್ಚುಗೀಸರು ತಳಪಾಯ ಹಾಕಿದರು. ಹೊಸತೊಂದು ಸಾಂಸ್ಕೃತಿಕ ನವೋದಯದ ಹರಿಕಾರನಾದ ತುಂಜತ್ತು ರಾಮಾನುಜನ್ ಎೞುತ್ತಚ್ಚನ್ (೧೬-೧೭ನೆಯ ಶತಮಾನಗಳು) ತನ್ನ ಸಾಹಿತ್ಯ ಕೃತಿಗಳ ಮೂಲಕ ಹೊಸ ವಾತಾವರಣವನ್ನು ಮೂಡಿಸಿದ. ಕಾಳುಮೆಣಸಿನ ವ್ಯಾಪಾರದ ಗುತ್ತಿಗೆ ಪಡೆಯಲು ಪೋರ್ಚುಗೀಸರು ಅಕ್ರಮವಾಗಿ ಗೂಢಾಲೋಚನೆ ನಡೆಸಿ ಮತೀಯವಾದ ಹಿಂಸೆಗಳನ್ನು ಪ್ರಚೋದಿಸುತ್ತಿದ್ದರು. ನಾಡದೊರೆಗಳಿಗೆ ಲಂಚ ನೀಡಿ ಅವರನ್ನು ತಮ್ಮ ಕೈವಶ ಮಾಡಿಕೊಳ್ಳುವ ತಂತ್ರವನ್ನು ಬಳಸಿದ್ದರು. ಇವೆಲ್ಲ ಸಾಮಾಜಿಕವಾದ ಅಸ್ವಸ್ತ್ಯಕ್ಕೆ ಕಾರಣವಾದವು. ಕ್ರಮೇಣ ಕಾಳುಮೆಣಸಿನ ಬೆಲೆ ಕುಸಿದಾಗ ಆರ್ಥಿಕವಾದ ಅಧಃಪತನವೂ ಘಟಿಸಿತು. ಜಮೀನ್ದಾರಿ ಪದ್ಧತಿಯು ಆವಿರ್ಭಾವಗೊಂಡು ದೇವದಾಸಿಯರು ಸಮಾಜದಲ್ಲಿ ಗಣ್ಯ ಸ್ಥಾನಮಾನವನ್ನು ಪಡೆದಾಗ ಸಮಾಜದ ಎಲ್ಲಾ ಅಂಗಗಳಲ್ಲಿ ಒಂದು ರೀತಿಯ ಕೊರೆ ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಎೞುತ್ತಚ್ಚನ್‌ನ ಆಗಮನ ಒಂದು ವಿದ್ಯುತ್ ಸಂಚಾರವನ್ನೇ ಉಂಟುಮಾಡಿದಂತಾಯಿತು. ಆತ ಸಮಾಜದ ಕೆಳ ಜಾತಿಯಲ್ಲಿ ಜನಿಸಿದವ. ಹಾಗಾಗಿ ಭಕ್ತಿಯ ಶಂಖನಾದವನ್ನು ಮೊಳಗಿಸಲು ಆತನಿಗೆ ಸಾಮಾಜಿಕವಾಗಿ ಆಸ್ಪದವಿರಲಿಲ್ಲ. ಊರವರ ನಡುವೆ ತಾನು ಕಲಿತ ತಿಳುವಳಿಕೆಯನ್ನು ಪ್ರಚಾರ ಮಾಡುವುದೇ ಆತನ ಉದ್ಯೋಗವಾಯಿತು. ಸಂಸ್ಕೃತ ವಿದ್ಯಾಭ್ಯಾಸವನ್ನು ಗುತ್ತಿಗೆ ಪಡೆದಿದ್ದ ನಂಬೂದಿರಿಗಳಿಗೆ ಈತ ಒಂದು ರೀತಿಯ ಬಲವಾದ ಪ್ರಹಾರವನ್ನೇ ನೀಡಿದ. ಇದು ಜನಸಾಮಾನ್ಯರ ನಡುವೆ ಮಾನಸಿಕವಾಗಿ ಒಂದು ವಿಪ್ಲವವನ್ನೇ ಸೃಷ್ಟಿಸಿತು. ಸಾಮಾಜಿಕವಾಗಿಯೂ ಬ್ರಾಹ್ಮಣೇತರರೇ ಬಹು ಸಂಖ್ಯಾತರಾಗಿದ್ದರು. ಪಾಂಡಿತ್ಯದ ಗುತ್ತಿಗೆ ಬ್ರಾಹ್ಮಣರಿಗೆ ಮಾತ್ರ ಎಂಬ ಸಂಕಲ್ಪದಿಂದ ಬಹುಸಂಖ್ಯಾತರಾದ ಬ್ರಾಹ್ಮಣೇತರರು ಎಱುತ್ತಚ್ಚನ್‌ನ ಕಾರಣದಿಂದ ಬಹುದೊಡ್ಡ ಬದಲಾವಣೆಯೊಂದಕ್ಕೆ ಮಾನಸಿಕವಾಗಿ ಸಿದ್ಧರಾದರು.

೧೮ನೆಯ ಶತಮಾನದಲ್ಲಿ ಉಂಟಾದ ಕೆಲವು ರಾಜಕೀಯ ವಿದ್ಯಮಾನಗಳು ಜಮೀನ್ದಾರಿ ವ್ಯವಸ್ಥೆಯ ಅಧಃಪತನಕ್ಕೆ ಬಲ ನೀಡಿದುವು. ತಿರುವಿದಾಂಕೂರು ಮತ್ತು ಕೊಚ್ಚಿಗಳಲ್ಲಿ ಕೇಂದ್ರೀಕೃತವಾಗಿದ್ದ ರಾಜ್ಯಾಡಳಿತದಲ್ಲಿ ನಾಡದೊರೆಗಳ ಪ್ರಾದೇಶಿಕ ಅಧಿಪತ್ಯದ ಮೂಲಕ ಹೊಸ ತಿರುವು ಕಾಣಿಸಿಕೊಂಡಿತು. ಆಗ ತಿರುವಾಂಕೂರಿನಲ್ಲಿ ಮಾರ್ತಾಂಡವರ್ಮನು, ಕೊಚ್ಚಿಯಲ್ಲಿ ಶಕ್ತನ್‌ತಂಬುರಾನನು ಎಲ್ಲಾ ತುಂಡರಸರನ್ನು ಅವರ ರಾಜಧಾನಿಗಳನ್ನು ವಶಪಡಿಸಿಕೊಂಡರು. ಆ ಮೂಲಕ ಪ್ರಬಲವಾದ ಒಂದು ಕೇಂದ್ರೀಕೃತ ವ್ಯವಸ್ಥೆಯನ್ನು ಸ್ಥಾಪಿಸಿದರು. ಇದಕ್ಕೆ ಬ್ರಿಟಿಷರು ನೆರವು ನೀಡಿದರು. ಅವರ ಮಾರ್ಗದರ್ಶನದಲ್ಲಿ ಸುಸಜ್ಜಿತ ವಾದ ಸೈನ್ಯ ಪದ್ಧತಿಯನ್ನು ರೂಪಿಸಿದರು. ಇದರಿಂದಾಗಿ ನಾಯರರಿಗೆ ಯುದ್ಧೋದ್ಯಮ ಕೈ ತಪ್ಪಿ ಹೋಯಿತು. ಬೇರೆ ಉದ್ಯೋಗವನ್ನು ಮಾಡುವುದಕ್ಕೆ ಅವರಿಗೆ ಹಿಂದಿನ ಸ್ಥಾನಮಾನಗಳು ಅಡ್ಡಿಯಾದವು. ಅನ್ಯ ಮಾರ್ಗವಿಲ್ಲದೆ ಕೊನೆಗೆ ತಮ್ಮಲ್ಲಿದ್ದ ಭೂಮಿಯನ್ನು ಹಂಚಿಕೊಂಡು ವ್ಯವಸಾಯದಲ್ಲಿ ತೊಡಗಿದರು. ಇದು ಕೇರಳದ ಪ್ರಾದೇಶಿಕ ಆಡಳಿತ ಸಂಪ್ರದಾಯಕ್ಕೆ ನೀಡಿದ ಬಲವಾದ ಏಟಾಯಿತು.

೧೮ನೆಯ ಶತಮಾನದ ಉತ್ತರಾರ್ಧದಲ್ಲಿ ಮೈಸೂರು ಕೇರಳವನ್ನು ಆಕ್ರಮಿಸಿತು. ಅದು ಕೇರಳದ ಸಾಂಪ್ರದಾಯಿಕ ಸಾಮಾಜಿಕ ಸ್ಥಿತಿಗತಿಗಳನ್ನು ಬುಡಮೇಲು ಮಾಡಿತು. ಸಮಾಜದ ಉನ್ನತ ಸ್ತರದಲ್ಲಿ ವಿರಾಜಮಾನರಾಗಿದ್ದ ನಂಬೂದಿರಿಯರು, ನಾಯರರು, ಕ್ಷತ್ರಿಯರು ಮೈಸೂರಿನ ಹೈದರಾಲಿ, ಟಿಪ್ಪು ಇವರನ್ನು ತೀರ ಕ್ಷುಲ್ಲಕವಾಗಿ ಪರಿಗಣಿಸಿದರು. ಆ ಜನವರ್ಗ ದವರು ಉನ್ನತ ಸ್ಥಾನದಲ್ಲಿದ್ದು ಪಡೆಯುತ್ತಿದ್ದ ಸುಖ ಸೌಲಭ್ಯಗಳೆಲ್ಲ ಹೈದರಾಲಿ ಟಿಪ್ಪು ಇವರ ಆಕ್ರಮಣದ ಒಂದೇ ಏಟಿಗೆ ಇಲ್ಲವಾದವು. ಮೈಸೂರಿನ ಸುಲ್ತಾನರ ವಕ್ರದೃಷ್ಟಿಗೆ ಮಲಬಾರಿನ ನಾಯನ್ಮಾರರು ಗುರಿಯಾದರು. ಅವರನ್ನು ಸಮಾಜದ ಅತ್ಯಂತ ಕೆಳವರ್ಗ ದವರೆಂದು ಘೋಷಿಸಲಾಯಿತು. ನಂಬೂದಿರಿಯರನ್ನು, ನಾಯರರನ್ನು, ಕ್ಷತ್ರಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿದರು (ಶ್ರೀಧರ ಮೇನೋನ್, ೧೯೯೬: ೨೬೧). ಈ ವಿಪತ್ತಿನಿಂದ ರಕ್ಷಣೆ ಬಯಸಿ ಅನೇಕರು ತಿರುವಾಂಕೂರಿಗೆ ಪಲಾಯನಗೈದರು. ಈ ಎಲ್ಲಾ ವಿದ್ಯಮಾನಗಳು ಜನಸಾಮಾನ್ಯರ ನಡುವೆ ಪಡೆದ ಪ್ರತ್ಯಾಘಾತಗಳು ತೀವ್ರತರ ವಾಗಿದ್ದವು. ಜಾತಿಯ ಆಧಾರದಲ್ಲಿ ಸ್ಥಾನಮಾನಗಳನ್ನು ನಿರ್ಧರಿಸಿದ್ದ ವ್ಯವಸ್ಥೆಯ ಪೊಳ್ಳುತನ ಪ್ರಕಟವಾದಾಗ ಕೆಳವರ್ಗದ ಜನರಲ್ಲಿ ಒಂದು ರೀತಿಯ ಕುಲಾಭಿಮಾನ, ಆತ್ಮವಿಶ್ವಾಸ ವ್ಯಕ್ತವಾಯಿತು. ಹೀಗೆ ಮೈಸೂರು ಆಕ್ರಮಣವು ಕೇರಳದ ಸಾಂಪ್ರದಾಯಕ ಸಮಾಜವನ್ನು ನಾಶಮಾಡಿ ಹೊಸತೊಂದು ಸಾಮಾಜಿಕ ಜೀವನಕ್ಕೆ ಪ್ರೇರಣೆ ಒದಗಿಸಿತು. ಟಿಪ್ಪು ಮತಾಂತರ ಮಾಡಿದ ಎಂದು ಆರೋಪಿಸುವ ಬದಲು ಕೇರಳದ ಸಾಮಾಜಿಕ ಸ್ಥಿತಿಗತಿಗಳು ಇದನ್ನು ಅನಿವಾರ್ಯವಾಗಿಸಿತು ಎಂಬ ವಾಸ್ತವವನ್ನು ಅರಿತುಕೊಳ್ಳುವುದು ಉತ್ತಮ.

ಆರ್ಥಿಕ ಅಭಿವೃದ್ದಿ

ಯುರೋಪಿಯನ್ ಶಕ್ತಿಗಳ ಆಗಮನವು ಕೇರಳದ ಆರ್ಥಿಕ ರಂಗದಲ್ಲಿ ಹೊಸತೊಂದು ಎಚ್ಚರವನ್ನು ಮೂಡಿಸಿತು. ಪರಿಣಾಮವಾಗಿ ಹೊಸತೊಂದು ಆರ್ಥಿಕ ನೀತಿ ರೂಪು ಪಡೆಯಿತು. ಗೋಡಂಬಿ, ತಂಬಾಕು, ಅನಾನಸು ಮೊದಲಾದ ಕೃಷಿ ಬೆಳೆಗಳನ್ನು ಪೋಚರ್ುಗೀಸರು ಕೇರಳಕ್ಕೆ ತಂದರು. ಕಾಳುಮೆಣಸು, ಏಲಕ್ಕಿ, ಶುಂಠಿ, ದಾಲಚೀನಿ ಮೊದಲಾದ ಸುಗಂಧ ವಸ್ತುಗಳಿಗೆ ಯುರೋಪಿನಲ್ಲಿ ಪೋಚರ್ುಗೀಸರು ಪ್ರಚಾರ ನೀಡಿದರು. ಈ ಎಲ್ಲಾ ಸುಗಂಧ ವಸ್ತುಗಳು ಅವರ ಮೂಲಕ ಯುರೋಪಿಗೆ ರಫ್ತಾದವು. ಶುಂಠಿ ಮತ್ತು ಕಾಳುಮೆಣಸನ್ನು ಬೃಹತ್ ಪ್ರಮಾಣದಲ್ಲಿ ಕೃಷಿ ಮಾಡುವಂತೆ ಪೋರ್ಚುಗೀಸರು ಪ್ರೇರಿಸಿದರು. ತೆಂಗನ್ನು ವಾಣಿಜ್ಯ ಬೆಳೆಯಾಗಿ ರೂಪಿಸಿದ್ದಲ್ಲದೆ ಹೊಸ ಹೊಸ ತಳಿಗಳನ್ನು ತಂದು ಪ್ರಚಾರ ಮಾಡಿದರು. ಹುರಿಹಗ್ಗವನ್ನು ಕೇರಳದ ಪ್ರಮುಖ ರಫ್ತು ಮಾಡುವ ವಸ್ತುವನ್ನಾಗಿ ಮಾಡಿದ್ದೂ ಪೋರ್ಚುಗೀಸರೇ.

ಪೋರ್ಚುಗೀಸರ ನಂತರ ಬಂದ ಡಚ್ಚರೂ ಕೂಡಾ ಕೇರಳದ ಹೊಸ ಆರ್ಥಿಕ ಪರಿಷ್ಕಾರ ಗಳಲ್ಲಿ ಕೆಲವನ್ನು ಮಾಡಿದರು. ವಿದೇಶ ವಾಣಿಜ್ಯಗಳಿಗೆ ಅವರೂ ಪ್ರಾಮುಖ್ಯವನ್ನು ನೀಡಿದರು. ಹೊಸ ಕೃಷಿ ಬೆಳೆಗಳನ್ನು ಅವರು ತಂದರು. ವೈಜ್ಞಾನಿಕವಾದ ಕೃಷಿ ಸಂಪ್ರದಾಯಗಳನ್ನು ಅವರು ಪ್ರಚಾರ ಮಾಡಿದರು. ಕರಾವಳಿಯುದ್ಧಕ್ಕೂ ತೆಂಗಿನ ಕೃಷಿ ಮಾಡಲು ಅವರು ಮುಂದಾದರು. ಸ್ಥಳೀಯ ಕೃಷಿಕರಿಗೆ ಇದು ಹೊಸ ದಾರಿಯನ್ನು ತೋರಿಸಿಕೊಟ್ಟಿತು. ಹುರಿಹಗ್ಗ, ತೆಂಗಿನೆಣ್ಣೆಯ ವ್ಯಾಪಾರಗಳು ಬೃಹತ್ ಪ್ರಮಾಣದಲ್ಲಿ ನಡೆದವು. ಭತ್ತದ ಕೃಷಿಯನ್ನು ಪ್ರೋತ್ಸಾಹ ಉಪ್ಪು ತಯಾರಿಸಲು ಆರಂಭಿಸಿದವರೂ ಅವರೇ. ಬಟ್ಟೆಗೆ ಬಣ್ಣ ಹಾಕುವ ವಿಧಾನವನ್ನು ಹೇಳಿಕೊಟ್ಟರು. ಡಚ್ಚರು ವಾಣಿಜ್ಯೋದ್ಯಮಕ್ಕೆ ನೀಡಿದ ಪ್ರೋತ್ಸಾಹ ಹಾಗೂ ಅವರು ರೂಪಿಸಿದ ನಿಯಮಗಳಿಂದಾಗಿ ಕೇರಳದ ಬಂದರು ಪ್ರದೇಶಗಳು ಸಜೀವಗೊಂಡವು.

ಬ್ರಿಟಿಷ್ ಆಡಳಿತವೂ ಕೇರಳದ ಆರ್ಥಿಕ ಅಭಿವೃದ್ದಿಯನ್ನು ಒಂದು ಹಂತದವರೆಗೆ ತ್ವರಿತಗೊಳಿಸಿತು. ವನಸ್ಪತಿಗಳನ್ನು ಹೆಚ್ಚಿಸುವಲ್ಲಿ ಅವರು ಗಮನ ಹರಿಸಿದರು. ಸುಗಂಧ ವಸ್ತುಗಳನ್ನು ಕೃಷಿ ಮಾಡುವುದರಲ್ಲಿಯೇ ಅವರಿಗೆ ಆಸಕ್ತಿ ಇತ್ತು. ೧೭೯೯ರಲ್ಲಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿ ಅಂಚರಕಂಡಿಯಲ್ಲಿ ಸುಗಂಧ ವಸ್ತುಗಳ ತೋಟವನ್ನೇ ನಿರ್ಮಿಸಿತು. ಅದರಲ್ಲಿ ಕಾಫಿ, ದಾಲಚೀನಿ, ಕಾಳುಮೆಣಸು, ಸಾಗುವಾನಿ ವೊದಲಾದವುಗಳನ್ನು ನೆಟ್ಟು ಬೆಳಸಿದರು. ಅಲ್ಲಿಂದ ಕಾಫಿ ಬೆಳೆ ವಯನಾಡಿಗೂ ಹಬ್ಬಿತು. ಅಂಚರಕಂಡಿಯ ಆ ತೋಟ ಈಗಲೂ ಇದೆ. ದಾಲಚೀನಿಯನ್ನು ಮಾತ್ರವೇ ಇಂದು ಅಲ್ಲಿ ಬೆಳೆಯಲಾಗುತ್ತದೆ. ೧೯ನೇ ಶತಮಾನದ ಕೊನೆಯ ವೇಳೆಗೆ ಮಲಬಾರಿನಲ್ಲಿ ಅನೇಕ ಚಹಾ ತೋಟಗಳು ಇದ್ದುವು. ಇಡುಕ್ಕಿ ಜಿಲ್ಲೆಯಲ್ಲಿ ಅದೇ ವೇಳೆಗೆ ೧೮೭೭ರಲ್ಲಿ ಕಣ್ಣನ್ ದೇವನ್ ತೋಟವನ್ನು ಸ್ಥಾಪಿಸ ಲಾಯಿತು. ಪೂಞಾರ್‌ತಂಬುರಾನನಿಂದ ಜೆ.ಡಿ. ಮನ್ರೊ ಎಂಬುವರು ಸ್ಥಳ ಖರೀದಿಸಿ ಚಹಾ ಕೃಷಿ ಆರಂಭಿಸಿದರು. ಆ ಮೂಲಕ ಕೇರಳದ ಆರ್ಥಿಕ ಬದಲಾವಣೆಗೆ ಕಾರಣರಾದರು. ಚಹಾ ರಫ್ತಿನಿಂದ ಕೇರಳವು ಬೃಹತ್ ಪ್ರಮಾಣದ ವಿದೇಶಿ ಹಣವನ್ನು ತಂದುಕೊಂಡಿತು.

ವನ ಸಂಪತ್ತುಗಳಲ್ಲಿ ತೇಗ ಬ್ರಿಟಿಷರ ಪ್ರತ್ಯೇಕ ಗಮನಕ್ಕೆ ಕಾರಣವಾಯಿತು. ತೇಗಿಗೆ ವಿದೇಶಿ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಬಹುದೆಂದು ಅವರು ಅರಿತುಕೊಂಡರು. ಕೇರಳದ ಕಾಡುಗಳಿಂದ ಕಡಿದು ಕೊಂಡೊಯ್ದ ತೇಗದ ದಿಮ್ಮಿಗಳನ್ನು ಉಪಯೋಗಿಸಿ ನಿರ್ಮಿಸಿದ ಹಡಗುಗಳು ಟ್ರಪಾಲ್‌ಗರ್ ನಾವಿಕ ಯುದ್ಧದಲ್ಲಿ ನೆಲ್ಸನ್‌ನಿಗೆ ವಿಜಯ ತಂದುಕೊಟ್ಟವು ಎಂಬುದು ಕತೆ. ತೇಗದ ಹಿರಿಮೆಯನ್ನು ಅರಿತ ಬ್ರಿಟಿಷರು ತೇಗದ ಮರಗಳನ್ನು ನೆಟ್ಟು ಬೆಳೆಸಲು ಮುಂದಾದರು. ಮಲಬಾರಿನ ಕಲೆಕ್ಟರ್ ಆಗಿದ್ದ ಕೊನ್ನೋಳಿ ೧೮೧೦ರಲ್ಲಿ ಸ್ಥಾಪಿಸಿದ ನಿಲಂಬೂರು ತೋಟ ಇವುಗಳಲ್ಲಿ ಪ್ರಮುಖವಾದುದು. ದಕ್ಷಿಣ ಮಲಬಾರಿನ ಕಾಡುಗಳಿಗೆ ಪ್ರಾಮುಖ್ಯತೆ ಬಂದುದು ಈ ತೋಟದಿಂದ. ಕೇರಳದ ಇತರ ಪ್ರದೇಶಗಳಲ್ಲಿಯೂ ತೇಗದ ತೋಟಗಳನ್ನು ಬೆಳೆಸಲಾಯಿತು. ಕೇರಳದ ಆರ್ಥಿಕ ಅಭಿವೃದ್ದಿಯ ಮೇಲೆ ಇವು ಬೀರಿದ ಪರಿಣಾಮ ಅಗಾಧವಾದುದು.

ಆಡಳಿತ ಸುಧಾರಣೆಗಳು

೧೯ನೆಯ ಶತಮಾನದ ಆರಂಭದ ದಶಕಗಳಲ್ಲಿಯೇ ಬ್ರಿಟಿಷ ಅಧಿಕಾರಿಗಳು ಹಾಗೂ ತಿರುವಿದಾಂಕೂರು ಮತ್ತು ಕೊಚ್ಚಿ ರಾಜರುಗಳು ಆಡಳಿತದಲ್ಲಿ ಕೆಲವು ಸುಧಾರಣೆಗಳನ್ನು ತಂದರು. ಕ್ರಿಶ್ಚಿಯನ್ ಮಿಷನರಿಗಳ ನೇತೃತ್ವದಲ್ಲಿ ಪಾಶ್ಚಾತ್ಯ ಶಿಕ್ಷಣವನ್ನು ಪ್ರಚಾರ ಮಾಡಿದ ಬಗೆಯನ್ನು ಪ್ರತ್ಯೇಕ ಅಧ್ಯಾಯದಲ್ಲಿ ಗಮನಿಸಲಾಗಿದೆ. ಪಾಶ್ಚಾತ್ಯ ಶಿಕ್ಷಣ, ಸಾಮೂಹಿಕ ಬದಲಾವಣೆಗೆ ವೇಗ ಹೆಚ್ಚಿಸಿತು. ಜೀತ ಪದ್ಧತಿಯನ್ನು ಇಲ್ಲವಾಗಿಸಿದ್ದೇ ಅತ್ಯಂತ ಪ್ರಮುಖ ಬದಲಾವಣೆ. ಇದು ಜಮೀನ್ದಾರೀ ವ್ಯವಸ್ಥೆಯ ತಳಪಾಯವನ್ನೇ ಅಲುಗಾಡಿಸಿತು. ಮಲಬಾರು, ಕೊಚ್ಚಿ, ತಿರುವಾಂಕೂರಿನ ಆಡಳಿತ ಯಂತ್ರದಲ್ಲಿ ಗಮನಾರ್ಹವಾದ ಸುಧಾರಣೆ ಕಂಡುಬಂದಿತು. ಪರಂಪರಾಗತವಾಗಿ ಬರುತ್ತಿದ್ದ ವೃತ್ತಿಗಳನ್ನು ಕೊನೆಗೊಳಿಸಲಾಯಿತು. ನ್ಯಾಯಾಲಯಗಳು ಪಾಶ್ಚಾತ್ಯ ಪದ್ಧತಿಗನುಸಾರವಾಗಿ ಕಾರ್ಯನಿರ್ವಹಿಸತೊಡಗಿದವು. ಇದರಿಂದಾಗಿ ವಿಚಾರಣೆ ಹಾಗೂ ಶಿಕ್ಷೆಯ ವಿಧಾನದಲ್ಲಿ ಬದಲಾವಣೆ ಗೋಚರಿಸಿತು. ಪ್ರಮುಖ ನಗರಗಳಲ್ಲೆಲ್ಲ ನ್ಯಾಯಾಲಯಗಳನ್ನು ಸ್ಥಾಪಿಸಲಾಯಿತು. ಹಳೆಯ ರೀತಿಯ ತೆರಿಗೆ ಸಂಗ್ರಹ ಪದ್ಧತಿಯನ್ನು ಕೊನೆಗೊಳಿಸಲಾಯಿತು. ಇದು ಸ್ವತಂತ್ರವಾದ ಆರ್ಥಿಕ ಸಂಬಂಧಗಳಿಗೆ ದಾರಿ ಮಾಡಿಕೊಟ್ಟಿತು. ಸರಕಾರಕ್ಕಾಗಿ ವೇತನವಿಲ್ಲದೆ ಕೆಲಸ ಮಾಡಬೇಕೆಂಬ ಒತ್ತಾಯಗಳೂ ಇಲ್ಲವಾದವು. ನಿಯತವಾಗಿ ಪ್ರತಿ ತಿಂಗಳ ಸಂಬಳ ಕೊಡುವ ಪದ್ಧತಿಯನ್ನು ಜಾರಿಗೆ ತರಲಾಯಿತು. ಆಭರಣ, ವಸ್ತ್ರ, ವಾಹನ ಇತ್ಯಾದಿಗಳನ್ನು ಉಪಯೋಗಿಸಲು ಇದ್ದ ನಿಬಂಧನೆಗಳನ್ನು ತೆಗೆದು ಹಾಕಲಾಯಿತು. ಜಮೀನ್ದಾರೀ ವ್ಯವಸ್ಥೆಯಿಂದ ಸಾಮಾಜಿಕ ಸಮಾನತೆಯ ಹೊಸ ನೀತಿಗಳು ನಿಧಾನವಾಗಿ ಕಾಣಿಸಿಕೊಳ್ಳತೊಡಗಿದವು.

ಮಧ್ಯಮ ವರ್ಗದವರ ಏಳಿಗೆ

ಶಿಕ್ಷಣವನ್ನು ಸಾರ್ವತ್ರಿಕವಾಗಿ ಪ್ರಚಾರ ಮಾಡಿದ್ದರಿಂದ ವಿದ್ಯಾಸಂಪನ್ನರಾದ ಮಧ್ಯಮ ವರ್ಗದವರು ಸಾಮಾಜಿಕವಾಗಿ ಗಣ್ಯರಾದರು. ಮುಖ್ಯವಾಗಿ ತಿರುವಾಂಕೂರಿನಲ್ಲಿ ಇಂತಹ ಒಂದು ಪ್ರವೃತ್ತಿ ವಿಶೇಷವಾಗಿ ಗೋಚರಿಸಿತು. ಔದ್ಯೋಗಿಕ ಕ್ಷೇತ್ರದಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಬ್ರಾಹ್ಮಣರು ಗುತ್ತಿಗೆ ಹಿಡಿದಿದ್ದ ಸ್ಥಾನಗಳಿಗೆ ಮಧ್ಯಮ ವರ್ಗದವರು ಲಗ್ಗೆಯಿಟ್ಟರು. ಮಾರ್ತಾಂಡವರ್ಮನ ಕಾಲಾನಂತರ ಸಾಮಾನ್ಯವಾಗಿ ತಿರುವಾಂಕೂರಿನ ರಾಜರುಗಳೆಲ್ಲ ಸಂಸ್ಥಾನದ ದಿವಾನರನ್ನಾಗಿ ತಮಿಳು ಬ್ರಾಹ್ಮಣರನ್ನು ನಿಯಮಿಸುತ್ತಿದ್ದರು. ಇದು ಸ್ಥಳೀಯರಿಗೆ ಹಿತಕರವಾಗಲಿಲ್ಲ. ಸರಕಾರದ ಉದ್ಯೋಗಗಳಲ್ಲಿ ವಿದ್ಯಾಭ್ಯಾಸ ಹೊಂದಿದ ಸ್ಥಳೀಯರನ್ನು ನಿಯಮಿಸಲೇಬೇಕೆಂಬ ಒತ್ತಾಯಕ್ಕೆ ಬಲ ಹೆಚ್ಚಿತು. ನಾಯನ್ಮಾರರು ಈ ಒತ್ತಾಯದ ನೇತೃತ್ವ ವಹಿಸಿದ್ದರು. ೧೮೯೧ ಜನವರಿ ಒಂದನೇ ತಾರೀಕಿಗೆ ೧೦,೦೦೦ ಮಂದಿ ಸಹಿ ಮಾಡಿದ ಒಂದು ಮನವಿಯನ್ನು ರಾಜನಿಗೆ ಸಲ್ಲಿಸ ಲಾಯಿತು. ‘ಮಲಯಾಳ ಮೇಮೋರಿಯಲ್’ ಎಂಬ ಹೆಸರಿನಿಂದ ಇದನ್ನು ಗುರುತಿಸ ಲಾಗುತ್ತದೆ. ಸರಕಾರದ ಉನ್ನತ ಉದ್ಯೋಗಗಳಿಂದ ಸ್ಥಳೀಯರನ್ನು ದೂರವಿಡುವ ಸಂಪ್ರದಾಯವನ್ನು ಕೊನೆಗೊಳಿಸಬೇಕೆಂದು ಸಾಧ್ಯವಾದಷ್ಟು ಉದ್ಯೋಗಗಳನ್ನು ಅವರಿಗೂ ಕೊಡಬೇಕಾದ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕೆಂದು ಆ ಮನವಿಯಲ್ಲಿ ಕೇಳಿಕೊಳ್ಳಲಾಗಿತ್ತು. ೧೮೯೬ರ ಸೆಪ್ಟೆಂಬರ್‌ನಲ್ಲಿ ‘ಈಳವ ಮೆಮೋರಿಯಲ್’ ಎಂಬ ಹೆಸರಿನಿಂದ ಮತ್ತೊಂದು ಮನವಿಯನ್ನು ಮಹಾರಾಜನಿಗೆ ಸಮರ್ಪಿಸಲಾಯಿತು. ಅದು ೧೩, ೧೭೬ ಈಳವರು ಸಹಿ ಮಾಡಿದ ಮನವಿಯಾಗಿತ್ತು. ಜಾತಿಯ ಹೆಸರಿನಲ್ಲಿ ತಿರುವಿದಾಂಕೂರಿನಲ್ಲಿ ಉದ್ಯೋಗ ನಿಷೇಧಕ್ಕೆ ಒಳಗಾದ ಡಾ. ಪಲ್ಪ್ ಎಂಬ ವಿದ್ವಾಂಸ ಇದರ ನೇತೃತ್ವ ವಹಿಸಿದ್ದರು. ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಿದ ಸ್ವಜಾತೀಯರನ್ನು ಎಲ್ಲಾ ಅವಕಾಶಗಳಿಗೆ ಅರ್ಹರಾಗಿಸುವಂತೆ ಇತರೇ ಸ್ಥಳೀಯರನ್ನೂ ಪರಿಗಣಿಸಬೇಕೆಂದು ಆ ಮನವಿಯಲ್ಲಿ ಕೋರಲಾಗಿತ್ತು. ಸರಕಾರೀ ಸೇವೆಯಲ್ಲಿ ಪ್ರಾತಿನಿಧ್ಯವೇ ಇವರ ಪ್ರಮುಖ ಬೇಡಿಕೆಯಾಗಿತ್ತು. ‘ಈಳವ ಮೆಮೋರಿಯಲ್’ ಎಂಬುದು ಅವರ್ಣೀಯರು ಸಾಮಾಜಿಕ ಸಮಾನತೆಗಾಗಿ ಪ್ರಾರಂಭಿಸಿದ ದೊಡ್ಡದೊಂದು ಹೋರಾಟದ ಮುನ್ನುಡಿಯಾಗಿತ್ತು.

ಈಳವರ ಈ ಬೇಡಿಕೆಗೆ ಕ್ರಿಶ್ಚಿಯನರು, ಮುಸಲ್ಮಾನರು ಪ್ರಬಲವಾದ ಬೆಂಬಲ ನೀಡಿದ್ದರು. ಏಕೆಂದರೆ ರೆವೆನ್ಯೂ ಇಲಾಖೆಯ ಉದ್ಯೋಗಗಳು ಅವರಿಗೂ ಬೇಕಾಗಿತ್ತು. ರೆವಿನ್ಯೂ ಇಲಾಖೆಯ ನಿಯಂತ್ರಣದಲ್ಲಿ ಧಾರ್ಮಿಕ ಇಲಾಖೆಯೂ ಒಳಪಟ್ಟಿದ್ದರಿಂದ ದೇವಸ್ಥಾನಗಳಿಗೆ ಪ್ರವೇಶಕ್ಕೆ ಅರ್ಹವಲ್ಲದ ಅವರ್ಣೀಯರೂ ಅಹಿಂದುಗಳೂ ಅಲ್ಲಿನ ಉದ್ಯೋಗಕ್ಕೆ ಅರ್ಹರಲ್ಲ ಎಂಬುದು ಸರಕಾರದ ನಿಲುವಾಗಿತ್ತು.

ಹಾಗಾಗಿ ಈ ಶತಮಾನದ ಪ್ರಾರಂಭದಲ್ಲಿ ಹಿಂದುಳಿದ ವರ್ಗದವರು ಕ್ರಿಶ್ಚಿಯನರ ಮತ್ತು ಮುಸಲ್ಮಾನರ ಬೆಂಬಲದೊಡನೆ ಸಾಮಾಜಿಕ ಸಮಾನತೆಗಾಗಿ ಹೋರಾಟ ಆರಂಭಿಸಿತು. ಅದರ ನೇತೃತ್ವ ವಹಿಸಿದವರೆಂದರೆ ಇ.ಜೆ. ಜೋನ್, ಟಿ.ಕೆ. ಮಾಧವನ್ ಮೊದಲಾದವರು. ೧೯೨೨ರ ಹೋರಾಟದ ಪರಿಣಾಮವಾಗಿ ರೆವೆನ್ಯೂ ಇಲಾಖೆಯನ್ನು ರೆವೆನ್ಯೂ (ಕಂದಾಯ) ಮತ್ತು ದೇವಸ್ವಂ (ಮುಜರಾಯಿ) ಎಂದು ಎರಡಾಗಿ ವಿಭಾಗಿಸಲಾಯಿತು. ರೆವೆನ್ಯೂ ಇಲಾಖೆ ಯಲ್ಲಿ ಅವರ್ಣೀಯರಿಗೂ, ಅಹಿಂದುಗಳಿಗೂ ಉದ್ಯೋಗ ನೀಡಲು ಸರ್ಕಾರ ಮುಂದಾಯಿತು. ಅನೀತಿಯುತವಾಗಿದ್ದ ಒಂದು ಸಾಮಾಜಿಕ ನಿಯಮವನ್ನು ಒಂದು ಹಂತದವರೆಗೆ ಪರಿಹರಿಸಲು ಸರಕಾರ ಮುಂದೆ ಬಂದಿತು. ಅದು ಸಾಮಾಜಿಕ ಸಮಾನತೆ ಎಂಬ ತತ್ವಕ್ಕೆ ದೊರೆತ ಮೊದಲ ಮಾನ್ಯತೆಯಾಗಿತ್ತು. ೧೯೩೫ರಲ್ಲಿ ತಿರುವಾಂಕೂರಿನಲ್ಲಿ ಲೋಕಸೇವಾ ಆಯೋಗವನ್ನು ಸ್ಥಾಪಿಸುವುದರ ಮೂಲಕ ಎಲ್ಲಾ ಜಾತಿಗೆ ಸೇರಿದವರಿಗೂ ನಿಗದಿತ ಒಂದು ಅನುಪಾತದಲ್ಲಿ ಸರಕಾರದಲ್ಲಿ ಉದ್ಯೋಗ ಕೊಡಬಹುದು ಎಂಬ ನಿಯಮ ವೊಂದು ಜಾರಿಗೆ ಬಂತು.

ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ಹೋರಾಟ

ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದಂತೆಯೇ, ಸಮಾನಾಂತರವಾಗಿ ಪ್ರಜಾಪ್ರಭುತ್ವದ ಹಕ್ಕಿಗಾಗಿಯೂ ತಿರುವಾಂಕೂರಿನಲ್ಲಿ ಹೋರಾಟ ನಡೆಯುತ್ತಿತ್ತು. ಸ್ವದೇಶಾಭಿಮಾನಿ ಪತ್ರಿಕಾ ಸಂಪಾದಕ ರಾಮಕೃಷ್ಣ ಪಿಳ್ಳೆ ತನ್ನ ಪತ್ರಿಕೆಯ ಮೂಲಕ ದಿವಾನ್ ಪಿ. ರಾಜಗೋಪಾಲಚಾರಿಗೆದುರಾಗಿ ಮಾಡಿದ ಟೀಕೆಗಳೂ ಈ ಹೋರಾಟದ ಭಾಗಗಳೇ ಆಗಿದ್ದವು. ರಾಮಕೃಷ್ಣಪಿಳ್ಳೆ ಪ್ರಜಾಸ್ವಾತಂತ್ರ್ಯದ ಕಾವಲು ಭಟರಾಗಿದ್ದರು. ಅವರು ತೀಕ್ಷ್ಣವಾದ ವಿಮರ್ಶೆಗಳನ್ನು ಪ್ರತಿದಿನ ಪ್ರಕಟಿಸಿದರು. ಜೊತೆಗೆ ಜನರನ್ನು ಪ್ರಬುದ್ಧರನ್ನಾಗಿಸಿದರು. ೧೯೧೧ರಲ್ಲಿ ಅವರನ್ನು ಗಡಿಪಾರು ಮಾಡಿ ಪತ್ರಿಕೆಯನ್ನು ಹಾಗೂ ಮುದ್ರಣಾಲಯವನ್ನು ವಶಪಡಿಸಿಕೊಂಡಿದ್ದೂ ಆಯಿತು.

ವಿಧಾನಸಭೆಯನ್ನು ಪರಿಷ್ಕರಿಸುವ ಉದ್ದೇಶವನ್ನು ಇರಿಸಿಕೊಂಡ ಇನ್ನೊಂದು ಹೋರಾಟವು ೧೯೨೦ರಲ್ಲಿ ನಡೆಯಿತು. ಚುನಾಯಿತರಾದ ಸದಸ್ಯರ ಬಹುಮತ ಪಡೆದು ಕೊಂಡು ವಿಧಾನಸಭೆಯನ್ನು ಪುನಃ ರೂಪಿಸಬೇಕೆಂದು ಮಹಾರಾಜರಲ್ಲಿ ನಿವೇದಿಸಿ ಕೊಂಡಿದ್ದರು. ಅದನ್ನು ಮಹಾರಾಜರು ಅಂಗೀಕರಿಸಿದ್ದರು. ಹಾಗೆ ೧೯೨೨ರಲ್ಲಿ ತಿರುವಿದಾಂಕೂರು ವಿಧಾನಸಭೆಗೆ ಚುನಾಯಿತರಾದವರಿಗೆ ಪ್ರಾತಿನಿಧ್ಯವಿರುವ ಒಂದು ಜನಪ್ರತಿನಿಧಿ ಸಭೆಯ ಗೌರವವಿತ್ತು. ಒಟ್ಟು ಇರುವ ಐವತ್ತು ಸದಸ್ಯ ಬಲದಲ್ಲಿ ೨೮ ಮಂದಿ ಚುನಾಯಿತರಾದ ನಿರುದ್ಯೋಗಿಗಳಾಗಿದ್ದರು.

ಈ ಬದಲಾವಣೆ ಪ್ರಗತಿಪರವಾಗಿದ್ದರೂ ಈಳವರು, ಮುಸಲ್ಮಾನರು, ಕ್ರಿಶ್ಚಿಯನರು ಮೊದಲಾದವರಿಗೆ ವಿಧಾನಸಭೆಯಲ್ಲಿ ಕನಿಷ್ಠ ಪ್ರಾಶಸ್ತ್ಯ ಮಾತ್ರ ಸಿಕ್ಕಿತ್ತು. ಏಕೆಂದರೆ ಮತದಾನದ ಅವಕಾಶವನ್ನು ತೆರಿಗೆ ಪಾವತಿಸುವವರಿಗೆ ಮಾತ್ರವೇ ಸೀಮಿತಗೊಳಿಸಲಾಗಿತ್ತು. ಸಾಮಾನ್ಯವಾಗಿ ತೆರಿಗೆ ಪಾವತಿಸುವವರು ಮುಂದುವರಿದ ಸಮುದಾಯಗಳವರೇ ಆಗಿದ್ದರು. ಅದರಲ್ಲೂ ಮುಖ್ಯವಾಗಿ ನಾಯನ್ಮಾರರು. ಹಾಗಾಗಿ ನಾಯನ್ಮಾರರಿಗೆ ಜನಸಂಖ್ಯೆಗೆ ಅನುಗುಣವಾಗಿ ಸಿಗಬೇಕಾದ ಸ್ಥಾನಗಳಿಗಿಂತಲೂ ಹೆಚ್ಚಿನ ಸ್ಥಾನಗಳು ಸಿಕ್ಕಿದವು. ಬಳಿಕ ಮತದಾನದ ಹಕ್ಕನ್ನು ಸೀಮಿತಗೊಳಿಸುವುದರ ವಿರುದ್ಧ ಪ್ರತಿಭಟನೆಗಳೂ ನಡೆದವು. ಈಳವರು, ಕ್ರಿಶ್ಚಿಯನರು, ಮುಸಲ್ಮಾನರು ಈ ಹೋರಾಟಕ್ಕೆ ನೇತೃತ್ವ ನೀಡಿದರು. ಆದರೆ ಸರಕಾರ ನಿಯಮ ಸಡಿಸಲು ಸಿದ್ಧವಾಗಲಿಲ್ಲ.

೧೯೩೨ರಲ್ಲಿ ತಿರುವಾಂಕೂರಿನ ಮಹಾರಾಜ ಜಾರಿಗೆ ತಂದ ಪರಿಷ್ಕೃತ ವಿಧಾನಸಭೆಗೂ ಮತದಾನದ ವಿಷಯದಲ್ಲಿ ಯಾವ ಬದಲಾವಣೆಯನ್ನೂ ತಂದಿರಲಿಲ್ಲ. ಹಾಗಾಗಿ ಪ್ರತಿಭಟನೆ, ಹೋರಾಟಗಳು ಮುಂದುವರಿದವು. ಸಿ. ಕೇಶವನ್, ಎನ್.ಪಿ. ಜೋಸೆಫ್, ಪಿ.ಕೆ. ಕುಞ್ ಮೊದಲಾದವರ ನೇತೃತ್ವದಲ್ಲಿ ನಡೆದ ನಿರಂತರ ಹೋರಾಟಗಳೂ ಇದರ ಭಾಗವಾಗಿದ್ದವು. ಸರಕಾರದ ಉದ್ಯೋಗಗಳಲ್ಲೂ ವಿಧಾನಸಭೆಯಲ್ಲೂ ಜನಸಂಖ್ಯೆಯನ್ನು ಆಧರಿಸಿ ಎಲ್ಲಾ ಸಮುದಾಯದ ಜನರಿಗೂ ಪ್ರಾತಿನಿಧ್ಯ ನೀಡಬೇಕು ಎಂದು ಹೋರಾಟಗಾರರು ಪ್ರತಿಪಾದಿ ಸಿದರು. ಪ್ರಾಯಪೂರ್ತಿಯಾದವರಿಗೆ ಮತದಾನದ ಅವಕಾಶ ಕೊಡಬೇಕು ಮತ್ತು ಸ್ವತಂತ್ರಾಡಳಿತ ನಿರ್ವಹಣೆಗೆ ಅವಕಾಶ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದರು. ಈ ಬೇಡಿಕೆಗಳನ್ನು ಈಡೇರಿಸುವವರೆಗೆ ಮತದಾನದಿಂದ ದೂರವುಳಿಯು ವುದಾಗಿಯೂ ತೀರ್ಮಾನಿಸಿದರು. ಈ ಹೋರಾಟವನ್ನು ಬಲ ಪ್ರಯೋಗಿಸಿ ಹಿಮ್ಮೆಟ್ಟಿಸಲು ಪ್ರಯತ್ನಿಸಿ ವಿಫಲವಾಯಿತು. ಕೊನೆಗೂ ಈಳವ, ಕ್ರಿಶ್ಚಿಯನ್, ಮುಸ್ಲಿಂ ಜನ ಸಮುದಾಯ ಗಳವರಿಗಾಗಿ ಅನೇಕ ವಿಧಾನಸಭಾ ಸ್ಥಾನಗಳನ್ನು ಮೀಸಲಿರಿಸಲು ಸರಕಾರ ತೀರ್ಮಾನಿಸಿತು. ಆದರೆ ಅದು ಮತ್ತೊಂದು ದೊಡ್ಡ ಹೋರಾಟಕ್ಕೆ ಎಡೆ ಮಾಡಿಕೊಟ್ಟಿತು. ಪ್ರಾಯಪೂರ್ತಿ ಯಾದವರನ್ನು ಆಧರಿಸಿ ಸ್ವತಂತ್ರಾಡಳಿತಾಧಿಕಾರಕ್ಕಾಗಿ ೧೯೩೮ ರಲ್ಲಿ  ತಿರುವಿದಾಂಕೂರು ಸ್ಟೇಟ್ ಕಾಂಗ್ರೆಸ್ ಎಂಬೊಂದು ಸಂಘಟನೆಯು ಸ್ಥಾಪನೆಯಾಯಿತು. ೧೯೪೭ರಲ್ಲಿ ಸುದೀರ್ಘ ವಾದ ಹೋರಾಟದ ಪರಿಣಾಮವಾಗಿ ಅದನ್ನು ಪಡೆಯುವಲ್ಲಿಯೂ ಯಶಸ್ವಿಯಾದರು. ಇದರಿಂದಾಗಿ ತಿರುವಾಂಕೂರಿನ ಇತಿಹಾಸದಲ್ಲಿ ಪ್ರಜಾಪ್ರಭುತ್ವದ ಹೊಸತೊಂದು ಯುಗವನ್ನು ಉದ್ಘಾಟಿಸಿದಂತಾಯ್ತು. ಕೊಚ್ಚಿಯಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಯ ಯತ್ನ ಬೇರೆ ರೀತಿಯಲ್ಲಾಯ್ತು. ಆಕ್ರಮಣಾಸಕ್ತವಾದ ಚಳುವಳಿಗೆ ಎಡೆಕೊಡದೆ ಶಾಂತ ರೀತಿಯಿಂದಲೇ ಅಲ್ಲಿನ ಸರಕಾರ ಜನರ ಬೇಡಿಕೆಯನ್ನು ಈಡೇರಿಸಿತು. ಹಾಗಾಗಿ ಪ್ರಾಯಪೂರ್ತಿಯಾದವರ ಮತದಾನದ ತಳಹದಿಯಲ್ಲಿ ಸ್ವತಂತ್ರಾಧಿಕಾರವು ತಿರುವಾಂಕೂರಿನಲ್ಲಿ ಆಗುವ ವೇಳೆಗೆ ಕೊಚ್ಚಿಯಲ್ಲಿಯು ಜಾರಿಗೆ ಬಂತು.

ಸಾಮಾಜಿಕ ಮತ್ತು ಮತೀಯ ಬದಲಾವಣೆಗಳು

೧೯ನೆಯ ಶತಮಾನದ ಕೊನೆಯ ದಶಕಗಳಲ್ಲಿ ಕೇರಳದಲ್ಲಿ ಸಾಮಾಜಿಕವೂ ಮತೀಯವೂ ಆದ ಕೆಲವು ಪರಿಷ್ಕಾರಗಳು ನಡೆದವು. ಅಸ್ಪೃಶ್ಯತೆಯ ನಿವಾರಣೆ, ಜಾತಿಯ ನಾಶ, ಅಳಿಯಕಟ್ಟು ಸಂಪ್ರದಾಯದಲ್ಲಿ ಪರಿಷ್ಕಾರ, ತಾಲಿಕೆಟ್ಟು ಕಲ್ಯಾಣಂ, ತಿರಂಡುಕುಳಿ (ಋತುಸ್ನಾನ) ಮೊದಲಾದ ದುಂದುವೆಚ್ಚದ ಆಚರಣೆಗಳಿಗೆ ಸಾಮಾಜಿಕವಾಗಿ ಬಹಿಷ್ಕಾರ ಹಾಕಲಾಯಿತು. ರಾಮಕೃಷ್ಣ ಮಿಶನ್, ಆರ್ಯ ಸಮಾಜ, ಥಿಯೋಸೋಫಿಕಲ್ ಸೊಸೈಟಿ ಮೊದಲಾದ ಅಖಿಲ ಭಾರತ ಸಂಘಟನೆಗಳಿಗೂ ಕೇರಳದಲ್ಲಿ ಶಾಖೆಗಳು ಇದ್ದರೂ ಅವು ಕೆಲವೇ ಕೆಲವು ಜನರಿಗೆ ಮಾತ್ರ ಸೀಮಿತಗೊಂಡಿದ್ದವು. ಹಾಗಾಗಿ ಅವುಗಳ ಪ್ರಭಾವ  ಕೇರಳದಲ್ಲಿ ಬಹಳ ಪರಿಮಿತವಾಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲಾದ ಅಖಿಲ ಭಾರತ ರಾಜಕೀಯ ಪಕ್ಷಗಳ ಪ್ರಾದೇಶಿಕ ಘಟಕಗಳ ಮೂಲಕ ಅವುಗಳ ಧೋರಣೆಗಳು ಪ್ರಚಾರ ಪಡೆದಿವೆ. ಅಂತಹ ಸಂಘಟನೆಗಳ ಪ್ರಾದೇಶಿಕ ನೇತೃತ್ವವನ್ನು ಆದರ್ಶಶಾಲಿಗಳಾದ ಉನ್ನತ ವ್ಯಕ್ತಿಗಳು ಹೊಂದಿದ್ದರು ಎಂಬುದು ಅತ್ಯಂತ ಗಮನಾರ್ಹವಾದ ಸಂಗತಿ.

ಹಿಂದೂ ಸಮಾಜದ ಬದಲಾವಣೆಗಳು

ಆಧುನಿಕ ಕೇರಳವು ಸಮಾಜ ಸುಧಾರಕರಾದ ಇಬ್ಬರು ಮಹಾಪುರುಷರಿಗೆ ಜನ್ಮ ನೀಡಿದೆ. ಒಬ್ಬರು ಶ್ರೀ ಚಟ್ಟಂಬಿ ಸ್ವಾಮಿಗಳು (೧೮೫೩-೧೯೨೪). ಇನ್ನೊಬ್ಬರು ಶ್ರೀ ನಾರಾಯಣಗುರು (೧೮೫೪-೧೯೨೮). ಚಟ್ಟಂಬಿಸ್ವಾಮಿಗಳು ಚಿಕ್ಕಂದಿನಲ್ಲಿಯೇ ಮತೀಯ ವಿಚಾರಗಳಲ್ಲಿ ಅಗಾಧವಾದ ಪಾಂಡಿತ್ಯವನ್ನು ಪಡೆದಿದ್ದರು. ಸಾಮಾಜಿಕ ಕ್ಷೇತ್ರದಲ್ಲಿ ಬ್ರಾಹ್ಮಣರು ಪಡೆದುಕೊಂಡಿದ್ದ ಸ್ಥಾನವನ್ನು ಅವರು ಪ್ರಶ್ನಿಸಿದರು. ಬ್ರಾಹ್ಮಣೇತರರಿಗೆ ಸಮಾಜದಲ್ಲಿದ್ದ ಅತಂತ್ರ ಸ್ಥಿತಿಯಿಂದ ಅವರು ಕೋಪಗೊಂಡಿದ್ದರು. ಸಮಾಜದ ಈಳವರಿಗೂ ನಾಯನ್ಮಾರರಿಗೂ ಅರ್ಹವಾದ ಸ್ಥಾನವನ್ನು ದೊರಕಿಸಿಕೊಡಲು ಆಸಕ್ತರಾದರೂ ತಾನು ಹುಟ್ಟಿದ ನಾಯರ್ ಸಮುದಾಯದ ಏಳಿಗೆಗಾಗಿ ಅವರು ಶ್ರಮಿಸಿದರು. ಬ್ರಾಹ್ಮಣೇತರ ವರ್ಗದ ಅಭಿವೃದ್ದಿ ಆರಂಭಗೊಳ್ಳಲು ನಾಯರ್ ಸಮುದಾಯದ ಅಭಿವೃದ್ದಿ ಉತ್ತೇಜನಕಾರಿ ಯಾಗಬಹುದೆಂದು ಅವರು ಭಾವಿಸಿದಂತಿತ್ತು. ಹಿಂದೂಗಳ ಸಾಮಾಜಿಕ ಪರಿಷ್ಕಾರಗಳಿಗೆ ಹೊಸ ಚೈತನ್ಯ ಕೊಡುವುದಕ್ಕೆ ಚಟ್ಟಂಬಿ ಸ್ವಾಮಿಗಳು ಮುಂದಾದರು. ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಳ್ಳಲು ಆಸಕ್ತರಾದವರ ಆಸೆಯನ್ನು ಚಿಗುರಿನಲ್ಲಿಯೇ ಚಿವುಟಲು ಚಟ್ಟಂಬಿ ಸ್ವಾಮಿಗಳಿಗೆ ಸಾಧ್ಯವಾಯಿತು.

ಶ್ರೀನಾರಾಯಣಗುರು ಈಳವ ಸಮುದಾಯದಲ್ಲಿ ಜನಿಸಿದರು. ಈಳವರು ಕೇರಳದ ಅವಣೀರ್ಯರಲ್ಲಿ ಪ್ರಮುಖರು. ಅದರಿಂದಾಗಿ ಈಳವ ಸಮುದಾಯದಲ್ಲಿ ಶ್ರೀ ನಾರಾಯಣ ಗುರುವಿನ ಪ್ರಭಾವ ಇಡೀ ಕೇರಳದ ಸಾಮಾಜಿಕ ಪರಿವರ್ತನೆಯಲ್ಲಿ ನಿರ್ಣಾಯಕವಾಯಿತು. ಜಾತಿರಹಿತವಾದ ಒಂದು ಹೈಂದವ ಸಮುದಾಯದ ಸ್ಥಾಪನೆ ನಾರಾಯಣ ಗುರುವಿನ ಮುಖ್ಯ ಲಕ್ಷ್ಯವಾಗಿತ್ತು. “ಒಂದು ಜಾತಿ, ಒಂದು ಮತಂ ಒಂದು ದೈವ ಮನುಷ್ಯನಿಗೆ” (ಮಾನವನಿಗೆ ಒಂದು ಜಾತಿ, ಒಂದು ಮತ, ಒಂದು ದೈವ) ಎಂಬ ಘೋಷಣೆಯೊಂದಿಗೆ ಅವರು ಮಾನವ ಸಾಹೋದರ್ಯದ ಶಂಖನಾದವನ್ನು ಮೊಳಗಿಸಿದರು. ಎಸ್.ಎನ್.ಡಿ.ಪಿ. (ಶ್ರೀನಾರಾಯಣ ಗುರು ಧರ್ಮ ಪರಿಪಾಲನಾಯೋಗ) ಸಭೆಗೆ ಆತ ನೀಡಿದ ನೇತೃತ್ವ ಈಳವರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ದಿಗಾಗಿ ಸಂಘಟಿಸಿದ ಚಟುವಟಿಕೆಗಳು ಈಳವರನ್ನು ಮಾತ್ರವಲ್ಲ ಇತರ ಅವರ್ಣೀಯರನ್ನೆಲ್ಲ ಪ್ರಚೋದಿಸಿತು. ಹಿಂದೂ ಸಮುದಾಯದ ಅವಿಭಾಜ್ಯ ಘಟಕ ಎಂಬ ನೆಲೆಯಲ್ಲಿ ಸ್ವಂತ ಶಕ್ತಿ ಹಾಗೂ ಗೌರವವನ್ನು ಕಂಡುಕೊಳ್ಳಲು ಅವರು ನೆರವಾದರು. ಈಳವರಿಗಾಗಿ ಅವರು ದೇವಾಲಯಗಳನ್ನು ಕಟ್ಟಿಸಿದರು. ಅದಕ್ಕೆ ಎಲ್ಲಾ ಜಾತಿಗಳವರಿಗೂ ಪ್ರವೇಶಾವಕಾಶ ನೀಡಿದರು. ಎಲ್ಲಾ ಅವರ್ಣೀಯರಿಗೂ ದೇವಾಲಯ ಪ್ರವೇಶಕ್ಕೆ ಅರ್ಹತೆ ಇದೆ ಎಂಬುದನ್ನು ಅವರು ತೋರಿಸಿಕೊಟ್ಟರು. ಪ್ರಾಣಿ ಬಲಿಯಂತಹ ಆಚರಣೆಗಳನ್ನು ನಿಷೇಧಿಸಿದರು. ಈಳವ ಸಮುದಾಯದಲ್ಲಿದ್ದ ತಾಲಿಕೆಟ್ಟ್, ತಿರಂಡಕುಳಿ ಮೊದಲಾದ ಸಾಮಾಜಿಕ ಆಚರಣೆಗಳನ್ನು ಅವರು ವಿರೋಧಿಸಿದರು. ಈಳವರ ವಿವಾಹ ಸಂಪ್ರದಾಯದಲ್ಲಿಯೂ ಅವರು ಅಮೂಲಾಗ್ರವಾದ ಬದಲಾವಣೆಗಳನ್ನು ತಂದರು. ವಧೂವರರು ಎದುರೆದುರು ನಿಂತು ಮಾಲೆ ಹಾಕುವ ಸಂಪ್ರದಾಯವನ್ನು ಈಳವರಲ್ಲಿ ಜಾರಿಗೆ ತಂದವರು ನಾರಾಯಣಗುರುಗಳು. ಮರುಮಕ್ಕತ್ತಾಯ, ಬಹುಪತ್ನಿತ್ವ ಇವೆಲ್ಲ ನಾರಾಯಣಗುರುವಿನ ಚಟುವಟಿಕೆಯಿಂದಾಗಿ ಈಳವ ಸಮುದಾಯದಿಂದ ಮರೆಯಾದವು. ಈಳವರ ಜಾತಿ ವೃತ್ತಿಯಾಗಿ ಪರಿಗಣಿತವಾಗಿದ್ದ ಶೇಂದಿ ತೆಗೆಯುವುದನ್ನು ನಿಲ್ಲಿಸಬೇಕೆಂದು ಅವರು ಹೇಳಿದರು. ಅದಕ್ಕೆ ಬದಲಾಗಿ ವ್ಯವಸಾಯ ಕ್ಷೇತ್ರಗಳಲ್ಲೋ, ಭೌದ್ದಿಕವಾದ ಚಟುವಟಿಕೆಗಳಲ್ಲೋ ತೊಡಗಬೇಕೆಂದು ಅವರು ತಿಳಿಯ ಹೇಳಿದರು. ಈಳವರ ಆರ್ಥಿಕವೂ, ಶೈಕ್ಷಣಿಕವೂ ಆದ ಅಭಿವೃದ್ದಿಗೆ ಈ ಸಲಹೆಗಳು ಅತ್ಯಂತ ಅಮೂಲ್ಯವಾಗಿದ್ದವು.

ಶ್ರೀನಾರಾಯಣಗುರುವಿನ ಚಟುವಟಿಕೆಗಳು ಈಳವ ಸಮುದಾಯವನ್ನಷ್ಟೇ ಅಲ್ಲ, ಇತರ ಸಮುದಾಯಗಳ ಮೇಲೂ ಪ್ರಭಾವ ಬೀರಿದುವು. ಶ್ರೀ ನಾರಾಯಣಗುರು ತೋರಿಸಿದ ದಾರಿಯನ್ನು ಅನುಸರಿಸಲು ದಲಿತರೂ ಮುಂದಾದರು. ತಾವೂ ಸಂಘಟಿತರಾಗಿ ಸಾಮಾಜಿಕ ಬದಲಾವಣೆಗೆ ನೇತೃತ್ವ ನೀಡಿದವರಲ್ಲಿ ಅಯ್ಯನ್ ಕಾಳಿ (೧೮೬೧-೧೯೪೧) ಎಂಬ ದಲಿತ ನಾಯಕನ ಹೆಸರು ಗಮನಾರ್ಹವಾದುದು. ದಲಿತರನ್ನು ಸಂಘಟಿಸಿ ಅವರಲ್ಲಿ ಹಕ್ಕುಗಳ ಕುರಿತ ತಿಳುವಳಿಕೆ ಮೂಡಿಸಲು ಆಯ್ದುಕೊಂಡ ಮಾರ್ಗ ಶ್ರೀ ನಾರಾಯಣ ಗುರುವಿನದೇ. ಹಾಗೆ ದಲಿತ ವರ್ಗದ ಅಭಿವೃದ್ದಿಗೆ ಪರೋಕ್ಷವಾಗಿ ಪ್ರೇರಣೆ ನೀಡಿದವರು ಶ್ರೀ ನಾರಾಯಣ ಗುರು. ಸ್ಥೂಲವಾಗಿ ಹೇಳುವುದಾದರೆ ಆಧುನಿಕ ಕೇರಳದ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಶ್ರೀ ನಾರಾಯಣಗುರುವಿನ ಕೊಡುಗೆ ಮಾತ್ರ ಅಮೂಲ್ಯವಾದದ್ದು. ದಕ್ಷಿಣ ಕರ್ನಾಟಕದಲ್ಲಿಯೂ ನಾರಾಯಣ ಗುರುಮಂದಿರಗಳು ಅವರ ಆದರ್ಶಗಳನ್ನು ಪಾಲಿಸುವ ಈಳವ ಸಮುದಾಯದವರು ಇದ್ದಾರೆ. ನಾರಾಯಣಗುರು ಗೋಕರ್ಣದವರೆಗೂ ತಮ್ಮ ಚಟುವಟಿಕೆಯನ್ನು ವಿಸ್ತರಿಸಿದ್ದರು. ಎಸ್. ಎನ್. ಡಿ.ಪಿ. ಎಂಬ ಸಂಘಟನೆ ಇಂದು ಜಾತಿ ಸಂಘಟನೆಯಾಗಿ ಪ್ರಬಲವಾಗಿದೆ. ರಾಜಕೀಯವಾದ ನಿರ್ಣಯಕ ಪಾತ್ರ ವಹಿಸುವುದು ಇದಕ್ಕೆ ಸಾಧ್ಯವಾಗಿದೆ. ನಾರಾಯಣ ಗುರುಗಳ ಆದರ್ಶಗಳಿಂದ ದೂರವಾಗಿದೆ ಎಂಬ ಟೀಕೆಗೂ ಗುರಿಯಾಗಿದೆ.

ಪ್ರಗತಿಪರ ಸಂಘಟನೆಗಳು

ಕೇರಳದ ಸಾಮಾಜಿಕ ಪ್ರಗತಿಗೆ ಅತ್ಯಂತ ಮುಖ್ಯ ಪಾತ್ರ ವಹಿಸಿದ ಅನೇಕ ಸಂಘಟನೆಗಳಿವೆ. ಶ್ರೀನಾರಾಯಣಗುರು ಧರ್ಮ ಪರಿಪಾಲನ (ಎಸ್.ಎನ್.ಡಿ.ಪಿ.) ಸಭೆ ಮತ್ತು ನಾಯರ್ ಸರ್ವೀಸ್ ಸೊಸೈಟಿ ಇವುಗಳಲ್ಲಿ ಪ್ರಮುಖವಾದವುಗಳು. ೧೯೦೩ ಮೇ ೧೫ ರಂದು ಎಸ್.ಎನ್.ಡಿ.ಪಿ. ಸಭೆ ಸ್ಥಾಪನೆಗೊಂಡಿತು. ಅದರ ಮೊದಲ ವಾರ್ಷಿಕ ಸಭೆಯು ೧೯೦೪ರಲ್ಲಿ ಅರುವಿಪುರದಲ್ಲಿ ಶ್ರೀನಾರಾಯಣಗುರುವಿನ ನೇತೃತ್ವದಲ್ಲಿಯೇ ನಡೆಯಿತು. ಡಾ. ಪಲ್‌ಪು, ಕುಮಾರನಾಶಾನ್, ಆರ್. ಶಂಕರ್ ಮೊದಲಾದ ಪ್ರತಿಭಾವಂತರು ಸಭೆಯ ಅಭಿವೃದ್ದಿಗೆ ಶ್ರಮಿಸಿದರು. ಶ್ರೀನಾರಾಯಣಗುರುವಿನ ಸಂದೇಶಗಳನ್ನು ಪ್ರಚಾರ ಮಾಡುವುದಲ್ಲದೆ ಈಳವ ಸಮುದಾಯದ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ದಿಗೆ ಗಮನಾರ್ಹ ಕಾರ್ಯಕ್ರಮಗಳನ್ನು ಸಭೆ ಹಮ್ಮಿಕೊಂಡಿತು. ಎಸ್.ಎನ್.ಡಿ.ಪಿ. ಸಭೆಯಲ್ಲದೆ ಈಳವ ಅಭಿವೃದ್ದಿಗಾಗಿ ಶ್ರಮಿಸಿದ ಮತ್ತೊಂದು ಸಂಘಟನೆ ೧೯೧೭ರಲ್ಲಿ ಚೆರಾಯಿಯಲ್ಲಿ ಕೆ. ಅಯ್ಯಪ್ಪನ್ ಎಂಬುವರು ಸ್ಥಾಪಿಸಿದ ‘ಸಹೋದರ ಸಮಾಜಂ’, ೧೮೯೧ರಲ್ಲಿ ಪರವೂರಿನಲ್ಲಿ ಕೇಶವನಾಶಾನ್ ಆರಂಭಿಸಿದ ‘ಸುಜನಾನಂದಿನಿ’ ಮತ್ತು ೧೯೧೧ರಲ್ಲಿ ಮಯ್ಯನಾಡ್ ಸಿ.ವಿ. ಕುಞಾರಾಮನ್ ಆರಂಭಿಸಿದ ಕೇರಳದ ‘ಕೇರಳ ಕೌಮುದಿ’ ಈಳವ ಸಮುದಾಯದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ ಎರಡು ಪತ್ರಿಕೆಗಳು.

೧೯೧೪ರಲ್ಲಿ ಅಕ್ಟೋಬರ್ ೩೧ನೇ ತಾರೀಕಿನಂದು ಚಙನಾಶ್ಯೇರಿಯಲ್ಲಿ ಪೆರುನ್ನಾಯಿಲ್ ನಾಯರ್ ಸಮುದಾಯದ ಯುವಕರ ಒಂದು ಗುಂಪು ಮನ್ನತ್ ಪದ್ಮನಾಭನ್ ಎಂಬುವರ ನೇತೃತ್ವದಲ್ಲಿ ಸಭೆ ಸೇರಿ ಸಂಘಟನೆಯೊಂದನ್ನು ರೂಪಿಸಿದರು. ಪೂನಾದಲ್ಲಿ ಗೋಪಾಲಕೃಷ್ಣ ಗೋಖಲೆ ಸ್ಥಾಪಿಸಿದ ‘ಸರ್ವೆಂಟ್ ಆಫ್ ಇಂಡಿಯನ್ ಸೊಸೈಟಿ’ ಎಂಬ ಸಂಘಟನೆಯ ಮಾದರಿಯಲ್ಲಿ ನಾಯರ್ ಸರ್ವೀಸ್ ಸೊಸೈಟಿ (ಎನ್.ಎಸ್.ಎಸ್)ಯನ್ನು ಸ್ಥಾಪಿಸಿದರು. ನಾಯರ್ ಸಮುದಾಯಕ್ಕೆ ನೆರವಾಗುವುದು ಈ ಸಂಘಟನೆಯ ಉದ್ದೇಶವಾಗಿತ್ತು. ಮರುಮಕ್ಕತ್ತಾಯ ಸಂಪ್ರದಾಯವನ್ನು ಪರಿಷ್ಕರಿಸಿದ್ದಲ್ಲದೆ ಸಾಮಾಜಿಕ ಅನಾಚಾರಗಳನ್ನು ನಾಶ ಮಾಡಲು ಎನ್.ಎಸ್.ಎಸ್. ಶ್ರಮಿಸಿತು. ಅಸ್ಪೃಶ್ಯತಾ ನಿವಾರಣೆಯಲ್ಲೂ ಇದರ ಶ್ರಮ ಗಮನಾರ್ಹವಾಗಿದೆ. ಆರಂಭದಿಂದಲೇ ಶೈಕ್ಷಣಿಕ ಕ್ಷೇತ್ರದಲ್ಲೂ ಎನ್.ಎಸ್.ಎಸ್. ಅನೇಕ ಕಾರ್ಯಕ್ರಮಗಳನ್ನು ರೂಪಿಸಿತು. ಇಂದಿಗೂ ಈ ಸಂಘಟನೆಯ ನಿಯಂತ್ರಣದಲ್ಲಿ ಅನೇಕ ಶಾಲಾ, ಕಾಲೇಜುಗಳು ಕಾರ್ಯ ಪ್ರವೃತ್ತವಾಗಿವೆ. ಇತ್ತೀಚೆಗೆ ವೈದ್ಯಕೀಯ ಚಿಕಿತ್ಸೆಯಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಎಸ್.ಎನ್.ಡಿ.ಪಿ. ಮತ್ತು ಎನ್.ಎಸ್.ಎಸ್.ಗಳಲ್ಲದೆ ಇನ್ನೂ ಅನೇಕ ಸಾಮಾಜಿಕ ಸಂಘಟನೆಗಳು ಕೇರಳದಲ್ಲಿದ್ದವು. ೧೯೦೭ರಲ್ಲಿ ಅಯ್ಯನ್‌ಕಾಳಿ ಸ್ಥಾಪಿಸಿದ ‘ಸಾಧು ಜನಪರಿಪಾಲನಾ ಸಭೆ’ಗೆ ವಿವಿಧೆಡೆಗಳಲ್ಲಿ ಶಾಖೆಗಳೂ ಇದ್ದವು. ದಲಿತ ಜನರ ದೀನ ಸ್ಥಿತಿಯ ನಿವಾರಣೆಯಲ್ಲಿ ಈ ಸಂಘಟನೆಯ ಕೊಡುಗೆ ಅಪಾರವಾಗಿದೆ.

೧೯೦೮ರಲ್ಲಿ ನಂಬೂದಿರಿಯ ಯೋಗಕ್ಷೇಮ ಸಭೆಯೂ ಸ್ಥಾಪನೆಗೊಂಡಿತು. ನಂಬೂದಿರಿ ಯರಲ್ಲಿ ಆಧುನಿಕ ಶೈಕ್ಷಣಿಕ ಪ್ರಚಾರವನ್ನು ಈ ಸಭೆ ಮಾಡಿತು. ಅಷ್ಟಲ್ಲದೆ ಅಂತರ್ಜನರ (ನಂಬೂದಿರಿ ಸ್ತ್ರೀಯರು) ಅತಂತ್ರ ಸ್ಥಿತಿಯ ನಿವಾರಣೆ, ಮದುವೆ ಸಂಪ್ರದಾಯಗಳಲ್ಲಿ ಬದಲಾವಣೆ ಮೊದಲಾದ ಪ್ರಗತಿಪರ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ನಂಬೂದಿರಿ ಮಹಿಳೆಯರನ್ನು ಧಾರ್ಮಿಕ ಕಟ್ಟುಕಟ್ಟಳೆಗಳ ದುಸ್ಥಿತಿಯಿಂದ ಪಾರುಮಾಡುವಲ್ಲಿ ಯೋಗಕ್ಷೇಮ ಸಭೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪುರುಷರೊಡನೆ ಅಥವಾ ಮುಂದಾಳತ್ವದಲ್ಲಿ ನಂಬೂದಿರಿ ಸ್ತ್ರೀಯರು ಎಂದೂ ಮುಂಚೂಣಿಯಲ್ಲಿಯೇ ಇದ್ದರು. ತಮ್ಮ ಅಂತಃಪುರಗಳಲ್ಲಿ ನರಕಯಾತನೆಯನ್ನು ಅನುಭವಿಸುವ ಸ್ತ್ರೀ ಸಮಾಜದ ಸಮಸ್ಯೆಗಳ ಕುರಿತ ಪ್ರಜ್ಞೆ ಆರಂಭ ಕಾಲದ ಕ್ಷೇಮಸಭಾದ ಕಾರ್ಯಕರ್ತರಿಗಿರಲಿಲ್ಲ. ತೃಪ್ಪುಣಿತ್ತುರ ದೇವಸ್ಥಾನಕ್ಕೆ ಸಂಬಂಧಪಟ್ಟ ಆಢ್ಯನಾದ ನಂಬೂದಿರಿಯ ನೇತೃತ್ವದಲ್ಲಿ ೧೯೦೮ರಲ್ಲಿ ಆರಂಭ ವಾದ ‘ಯೋಗಕ್ಷೇಮ ಸಭೆ’ಯ ಮುಖ್ಯ ಲಕ್ಷ್ಯ ನಂಬೂದಿರಿಗಳಿಗೆ ಶಿಕ್ಷಣ, ರಾಜನೀತಿ, ಧರ್ಮ ಇತ್ಯಾದಿಗಳಲ್ಲಿ ತಿಳುವಳಿಕೆ ಮೂಡಿಸುವುದಾಗಿತ್ತು. ಅಷ್ಟೇ ಅಲ್ಲ, ಪರಂಪರಾಗತವಾಗಿ ಬಂದಿರುವ ಆಚರಣೆಗಳನ್ನೋ, ನಡಾವಳಿಗಳನ್ನೋ, ಅಭಿಜಾತ ವ್ಯವಸ್ಥೆಗಳನ್ನೋ, ವಿರೋಧಿಸಿ ಸಭೆಯಲ್ಲಿ ಯಾವುದೊಂದನ್ನು ಮಾತನಾಡುವುದೊ, ವ್ಯವಹರಿಸುವುದೊ, ನಿರ್ಧರಿಸು ವುದನ್ನೋ, ಮಾಡಬಾರದು ಎಂಬಿತ್ಯಾದಿ ನಿಬಂಧನೆಗಳನ್ನು ಹಾಕಿಕೊಂಡಿದ್ದರು. ಇದರಿಂದಾಗಿ ನಂಬೂದಿರಿಗಳ ಸಾರ್ವಜನಿಕ ಜೀವನ ಅದರಲ್ಲೂ ಸ್ತ್ರೀಯರ ಬದುಕು ದುಸ್ಸಹನೀಯ ವಾಗಿತ್ತು. ಸ್ವಧರ್ಮಾನುಸರಣೆ, ಆಚಾರ ಸಂರಕ್ಷಣೆ, ಭೂಮಾಲಿಕ ಮತ್ತು ಗೇಣಿದಾರರ ಸಂಬಂಧ ಮೊದಲಾದವುಗಳೂ ಕೂಡಾ ಸಭೆಯ ಮುಖ್ಯ ಚಟುವಟಿಕೆಯ ಭಾಗವಾಗಿದ್ದುವು.

ಆದರೂ ಇಂಗ್ಲಿಷ್ ಶಿಕ್ಷಣವನ್ನು ಪಡೆದ ಸಿ.ಎಸ್. ಸುಬ್ರಹ್ಮಣ್ಯನ್ ಪೋತ್ತಿಯಂತಹವರು ಸಭಾದ ಮುಖ್ಯ ಕಾರ್ಯಕರ್ತರಾದಾಗ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೂ ಸಭಾದ ಚಟುವಟಿಕೆ ವಿಸ್ತರಿಸಿತು. ವೆಳ್ಳಿನೆಯಿಯಲ್ಲಿ ನಡೆದ ಎಂಟನೆ ವಾರ್ಷಿಕ ಸಮ್ಮೇಳನದಲ್ಲಿ ಅನ್ಯ ಜಾತಿಯವರೊಡನೆ ನಂಬೂದಿರಿಯರ ಸಂಬಂಧ ನಿರರ್ಥಕವಾದುದೆಂದು ಘೋಷಿಸ ಲಾಯಿತು. ಸ್ತ್ರೀ ವಿದ್ಯಾಭ್ಯಾಸದ ಅಗತ್ಯ, ಅದು ಇಲ್ಲದೆ ಇರುವುದರಿಂದ ಅವರ ಮನಸ್ಥಿತಿ, ಅದರಿಂದ ನಂಬೂದಿರಿ ಸಮುದಾಯದಲ್ಲಿ ಅದರಿಂದ ಉಂಟಾಗುವ ದುಃಖ, ಕ್ಲೇಶಗಳು ಚರ್ಚೆಗೆ ಬಂದುವು. ಕನ್ಯೆಯರು ಮದುವೆಯಾಗದೇ ಉಳಿಯಬಾರದು ಎಂಬ ಕಾರಣಕ್ಕಾಗಿ ನಂಬೂದಿರಿಯ ಕಿರಿಯ ಮಕ್ಕಳೂ ಸ್ವಜಾತೀಯ ಕನ್ಯೆಯನ್ನು ಮದುವೆಯಾಗಬಹುದೆಂದು ಅವರಿಗೆ ಬರುವ ಸಮಸ್ಯೆಗಳನ್ನು ಸಭಾ ಪರಿಹರಿಸುವುದಾಗಿಯೂ ತೀರ್ಮಾನ ಕೈಗೊಳ್ಳ ಲಾಯಿತು. ಸ್ತ್ರೀ ವಿದಾಭ್ಯಾಸಕ್ಕೆ ಪ್ರೋತ್ಸಾಹ ಕೊಡುವ ನೆಪದಲ್ಲಿ ೧೯೨೯ರಲ್ಲಿ ನಂಬೂದಿರಿ ಬ್ರಾಹ್ಮಣರು ಶಾಲೆಗಳಿಗೆ ಹೆಣ್ಣು ಮಕ್ಕಳನ್ನು ಸೇರಿಸಲು ಆರಂಭಿಸಿದರು. ಋತುಮತಿಯಾದ ಹೆಣ್ಣು ಮಕ್ಕಳೂ ಮನೆಯೊಳಗಿದ್ದು ಓದಿ, ಕಲಿತು ಪರೀಕ್ಷೆಗಳಿಗೆ ಹಾಜರಾಗಲು ಅನುಮತಿಯನ್ನು ಕಲ್ಪಿಸಲಾಯಿತು. ೧೯೩೪ರಲ್ಲಿ ಹೆಣ್ಣು ಮಕ್ಕಳಿಗೆ ಶಾಲೆಯ ಸಮೀಪವೇ ನೆಲೆಸಿ ಕಲಿಯಲು ಅನುಕೂಲವಾಗುವಂತೆ ಹಾಸ್ಟೆಲನ್ನು ಆರಂಭಿಸಿದರು. ಸದನಂ ಎಂಬ ಹೆಸರಿನಿಂದ ಆ ಹಾಸ್ಟಲ್ ಪ್ರಸಿದ್ಧವಾಗಿತ್ತು. ಕೆಲವು ತಂದೆ ತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಇರಿಸಿ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟರು. ಹಾಗಾಗಿ ನಂಬೂದಿರಿ ಮಹಿಳೆಯರು ಸಾರ್ವಜನಿಕ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸುವಂತಾಯಿತು.

ದೇಶೀಯ ಚಳುವಳಿಯಿಂದ ಪ್ರಚೋದನೆ ಪಡೆದ ಯುವಕರು ಸಭಾವನ್ನು ಸೇರಿದ್ದರಿಂದ ಪ್ರಗತಿಪರವಾದ ಆಲೋಚನೆಗಳು ಇನ್ನಷ್ಟು ಶಕ್ತವಾದವು. ವೃದ್ಧರಿಗೆ ವಿವಾಹ ಮಾಡಿ ಕೊಡುವುದು, ಅನ್ಯಜಾತಿಯವರೊಡನೆ ಎಲ್ಲಾ ತೆರನ ಸಂಬಂಧವನ್ನು ನಿರಾಕರಿಸುವುದರ ಮೂಲಕ ನಂಬೂದಿರಿ ಸಮುದಾಯ ಅನುಭವಿಸುತ್ತಿದ್ದ ಸಂಕಷ್ಟಗಳನ್ನು ದೂರ ಮಾಡುವ ಬಗೆಗೆ ಆಲೋಚನೆ ಮಾಡುವಂತಾಯಿತು. ಸ್ತ್ರೀಯರಿಗೆ ಶಿಕ್ಷಣ ಕೊಡಿಸುವುದು ಹಾಗೂ ಪರಿವೇದನ, ವಿಧವಾ ವಿವಾಹವನ್ನು ಪ್ರೋತ್ಸಾಹ ಮೂಲಕ ಹೊಸ ಚಿಂತನೆಗಳನ್ನು ರೂಪಿಸುವುದು. ಸಭಾದ ಕಾರ್ಯ ಚಟುವಟಿಕೆಯ ಭಾಗಗಳಾದವು.

ಪ್ರಗತಿಪರವಾದ ಆಶಯಗಳನ್ನು ಪ್ರಚುರಪಡಿಸುವುದಕ್ಕಾಗಿ ಯೋಗಕ್ಷೇಮ ಸಭೆಯನ್ನು ಅದರ ಪೋಷಕ ಸಂಘಟನೆಯೆಂದು ವಿಶೇಷಣ ಪಡೆದ ‘ಯುವಜನ ಸಂಘ’ವನ್ನು ಸ್ಥಾಪಿಸಲಾಯಿತು. ಕೆಲವು ಮಾಸಪತ್ರಿಕೆಗಳನ್ನು ಆರಂಭಿಸಿ ಪ್ರಗತಿಪರ ವಿಚಾರಗಳನ್ನು ಪ್ರಚುರಪಡಿಸಲಾಯಿತು. ‘ಮಂಗಳೋದಯಂ’ ಮಾಸಪತ್ರಿಕೆಯೂ ಬಳಿಕ ದಿನಪತ್ರಿಕೆಯಾಗಿ ಪ್ರಕಟವಾಯಿತು. ಸಂಪ್ರದಾಯಕ್ಕೆ ವಿರುದ್ಧವಾಗಿ ‘ಸುದರ್ಶನಂ’ ಎಂಬೊಂದು ಪತ್ರಿಕೆಯನ್ನು ನಂತರ ಆರಂಭಿಸಲಾಯಿತು. ಈ ಕಾಲದಲ್ಲಿ ಕೆಲವು ಸಾಹಿತಿಗಳು ಸಾಹಿತ್ಯದ ಮೂಲಕ ನಂಬೂದಿರಿಗಳ ಸಾಮಾಜಿಕ ಪ್ರಜ್ಞೆಯ ಮೇಲೆ ಹೊಸ ಬೆಳಕು ಚೆಲ್ಲಿದರು. ಸಾಮಾಜಿಕ ಕಾಳಜಿಯನ್ನು ಪ್ರಕಟಪಡಿಸುವ ಕೆಲವು ಕಾದಂಬರಿಗಳು, ಲೇಖನಗಳು ಪ್ರಕಟವಾದವು. ಇದೇ ಕಾಲದಲ್ಲಿ ನಿಯತಕಾಲಿಕೆಗಳ ಪ್ರಕಟಣೆಯಲ್ಲಿ ಅತ್ಯಂತ ಶಕ್ತವಾದುದು ಕರೂರ್ ದಾಮೋದರನ್ ನಂಬೂದಿರಿಪ್ಪಾಡರ ನೆನಪಿಗಾಗಿ ‘ಯುವಜನಸಂಘ’ದ ನೇತೃತ್ವದಲ್ಲಿ ಆರಂಭಿಸಿದ ‘ಉಣ್ಣಿ ನಂಬೂದಿರಿ’ ಎಂಬ ಮಾಸಪತ್ರಿಕೆ. ಇದನ್ನು ಬಳಿಕ ಒಂದು ದಿನಪತ್ರಿಕೆ ಯನ್ನಾಗಿ ಮುಂದುವರಿಸಿದರೂ ಸಂಪ್ರದಾಯವಾದಿಗಳಿಗೂ ಯುವ ಜನಸಂಘದವರಿಗೂ ಪರಸ್ಪರ ನಡೆದ ಸಂಘರ್ಷದ ಫಲವಾಗಿ ನಿಂತುಹೋಯಿತು.