ಕೈಗಾರಿಕಾ ಕ್ಷೇತ್ರದಲ್ಲಿಯೂ ಕೇರಳ ಸಾಕಷ್ಟು ಅಭಿವೃದ್ದಿಯನ್ನು ಸಾಧಿಸಿದೆ. ಹುರಿಹಗ್ಗ, ಹಂಚು, ಬಟ್ಟೆ ಗಿರಣಿ, ರಸಗೊಬ್ಬರ ಕಾರ್ಖಾನೆ, ಎಣ್ಣೆ, ಗೋಡಂಬಿ ಕಾರ್ಖಾನೆ ಮೊದಲಾದ ಕ್ಷೇತ್ರಗಳಲ್ಲಿನ ಕೈಗಾರಿಕೆ ಕೇರಳದ ಆರ್ಥಿಕತೆಯನ್ನು ಹೆಚ್ಚಿಸುವುದರೊಂದಿಗೆ ಅನೇಕರಿಗೆ ಉದ್ಯೋಗವಕಾಶವನ್ನು ಕಲ್ಪಿಸಿದೆ. ಕೈಗಾರಿಕಾ ಕ್ಷೇತ್ರದ ಪ್ರಗತಿಗೆ ಅನುಗುಣವಾಗಿ ಸಾರಿಗೆ ಸಂಪರ್ಕವು ಹೆಚ್ಚಿದೆ. ದೇಶದ ಮಹಾನಗರಗಳಿಗೆ ರೈಲುಗಾಡಿಯ ಸಂಪರ್ಕವಿರುವುದರಿಂದ ಸಹಜವಾಗಿಯೇ ಕೇರಳ ಇತರ ಪ್ರದೇಶಗಳ ಜೊತೆಗೆ ವ್ಯಾಪಾರ ವ್ಯವಹಾರವನ್ನು ಇನ್ನಷ್ಟು ವ್ಯಾಪಕವಾಗಿಸಿದೆ. ಕೊಂಕಣ ರೈಲುದಾರಿ ಆರಂಭವಾದಂದಿನಿಂದ ಕೇರಳಕ್ಕೂ ಮುಂಬೈ ನಗರಕ್ಕೂ ಸಂಪರ್ಕ ಹಿಂದಿಗಿಂತ ಅಧಿಕವಾಗಿದೆ. ಈ ಎಲ್ಲಾ ಕಾರಣದಿಂದ ಕೇರಳದ ಪ್ರಜೆ ಸಾಂಸ್ಕೃತಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಭಾವವನ್ನು ಬೀರುವುದು ಸಾಧ್ಯವಾಗಿದೆ.

ಮರುಮಕ್ಕತ್ತಾಯ, ಜಮೀನ್ದಾರೀ ಪದ್ಧತಿ, ಅವಿಭಕ್ತ ಕುಟುಂಬ ಇವುಗಳ ಅಧಃಪತನದೊಡನೆ ಹೊಸ ಸಮಾಜ ನಿರ್ಮಾಣವಾಯಿತೆಂಬುದೇನೋ ನಿಜ. ಆದರೆ ಯುವ ಜನಾಂಗವಿಂದು ಭೂ ಒಡೆತನ, ನಾಲ್ಕು ಸುತ್ತಿನ ಮನೆ ಇತ್ಯಾದಿಗಳ ಬಗೆಗೆ ಯೋಚಿಸುವುದಿಲ್ಲ. ಬದಲಾಗಿ ಉದ್ಯೋಗ ಪಡೆದು ಸ್ವತಂತ್ರ ಜೀವನ ನಡೆಸುವುದು, ಅದಕ್ಕೆ ಬೇಕಾದ ಶಿಕ್ಷಣವನ್ನು ಹೊಂದುವುದು ಇದುವೇ ಯುವ ಜನಾಂಗದ ಬಹುದೊಡ್ಡ ಕನಸು. ಹೆಣ್ಣಾಗಲೀ, ಗಂಡಾಗಲಿ ಯಾವುದೇ ಜಾತಿಯಾಗಲಿ ಪ್ರತಿಯೊಬ್ಬರು ಔದ್ಯೋಗಿಕವಾಗಿ ಸರಕಾರದ ಇಲಾಖೆಗಳಲ್ಲಾಗಲಿ, ಸಾರ್ವಜನಿಕ ಸಂಸ್ಥೆಗಳಲ್ಲಾಗಲಿ ತೊಡಗಿಸಿಕೊಳ್ಳುವಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ತಮ್ಮೆಲ್ಲ ದುಡಿಮೆಯನ್ನು ವಿನಿಯೋಗಿಸುವ ತಂದೆ, ತಾಯಂದಿರಿದ್ದಾರೆ. ಶಿಕ್ಷಣ ಉದ್ಯೋಗ ಇವುಗಳಿಗೆ ಪೂರಕವಾಗುವಂತೆ ಕಲಾರಂಗದಲ್ಲಿ ಹಾಗೂ ಕ್ರೀಡಾರಂಗದಲ್ಲಿಯೂ ತೊಡಗಿಸಿಕೊಳ್ಳುವುದು ಇಂದು ಸರ್ವ ಸಾಧಾರಣ ಎನಿಸಿದೆ.

ಉಡುಗೆ ತೊಡುಗೆಗಳು

ಬಿಳಿಯ ಬಣ್ಣವೇ ಕೇರಳೀಯರ ಮುಖ್ಯ ಆಕರ್ಷಕ ಉಡುಗೆ. ಗಂಡಸರಾದರೆ ಬಿಳಿಯ ಮುಂಡು, ಹೆಗಲಿಗೊಂದು ಶಾಲು, ಹಣೆಯಲ್ಲಿ ಗಂಧದ ಬೊಟ್ಟು. ಇದು ಸಾಮಾನ್ಯ ಕೇರಳೀಯ ಪುರುಷರ ವೇಷಭೂಷಣ. ಬ್ರಾಹ್ಮಣರಾದರೆ ಶಿಖೆಯನ್ನು ಕಾಣಬಹುದು. ಶ್ರೀಮಂತರಾದರೆ ಜರಿಯ, ರೇಷ್ಮೆ ಪಂಚೆಯನ್ನು ಉಡುವುದಿದೆ. ಹೆಂಗಳೆಯರು ಬಿಳಿಯ ಮುಂಡನ್ನು ಉಟ್ಟುಕೊಳ್ಳುವರು. ಕುಪ್ಪಸ ತೊಟ್ಟುಕೊಳ್ಳುವರು. ಪುಟ್ಟದೊಂದು ಶಾಲನ್ನು ಸೆರಗಿನ ರೂಪದಲ್ಲಿ ಸಿಕ್ಕಿಸಿಕೊಳ್ಳುವರು. ಹಣೆಯಲ್ಲಿ ಗಂಧದ ಬೊಟ್ಟು, ಮದುವೆಯಾಗಿದ್ದರೆ ಮಾಂಗಲ್ಯದ ಸಂಕೇತವಾಗಿ ನೆತ್ತಿಯಲ್ಲಿ ಕಂಕುಮ. ಆದರೆ ಸಾರ್ವಜನಿಕವಾಗಿ ಇಂದು ಕೇರಳದ ಸ್ತ್ರೀ ಪುರುಷರು ಇತರ ರಾಜ್ಯಗಳ ಜನರಂತೆ ವೇಷಭೂಷಣವನ್ನು ತೊಟ್ಟುಕೊಳ್ಳುವರು. ನಗರಗಳಲ್ಲಿ ಪುರುಷರು ಮುಂಡಿಗೆ ಬದಲು ಪ್ಯಾಂಟಿನ್ನು ಹೆಚ್ಚಾಗಿ ಧರಿಸಲು ತೊಡಗಿದ್ದಾರೆ. ಆದರೂ ವಿಶೇಷ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಕಾದಾಗ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುವುದನ್ನು ಗಮನಿಸಬಹುದು.

ಆಹಾರ ಪದ್ಧತಿ

ಕೇರಳೀಯರ ಮುಖ್ಯ ಆಹಾರ ಅಕ್ಕಿ. ಅದರಲ್ಲಿಯೂ ಕುಟ್ಟಣದ ಅಕ್ಕಿ. ತೆಂಗಿನೆಣ್ಣೆಯನ್ನು ಅಡುಗೆಯಲ್ಲಿ ಯಥೇಚ್ಛವಾಗಿ ಬಳಸುತ್ತಾರೆ. ನೇಂದ್ರ ಬಾಳೆಕಾಯಿ ವಿವಿಧ ಖಾದ್ಯಗಳ ರೂಪದಲ್ಲಿ ಬಳಕೆಯಾಗುತ್ತದೆ. ಹೊರನಾಡುಗಳಲ್ಲಿ ನೆಲೆಸಿದ ಕೇರಳೀಯರು ಗೋಧಿಯನ್ನು ದಿನದ ಒಂದು ಹೊತ್ತು ತಿನ್ನುವುದು ರೂಢಿ ಮಾಡಿಕೊಂಡಿದ್ದಾರೆ. ಬ್ರಾಹ್ಮಣೇತರರಾದರೆ ವಿವಿಧ ಜಾತಿಯ ಮೀನುಗಳನ್ನು ದೈನಂದಿನ ಆಹಾರದ ಜೊತೆ ಬಳಸುತ್ತಾರೆ. ಮರಗೆಣಸು ಸಾಮಾನ್ಯವಾಗಿ ಎಲ್ಲಾ ಕೇರಳೀಯರ ಬಹುಪ್ರಿಯವಾದ ಆಹಾರ ಪದಾರ್ಥ. ಹಾಲುಹಾಕದ ಚಹಾ ಸೇವನೆ ಸಾಮಾನ್ಯ. ನಿಂಬು ಚಹಾವನ್ನು ಕೂಡಾ ಕುಡಿವವರೂ ಇದ್ದಾರೆ.

ರಾಜಕೀಯ ಪ್ರಭುತ್ವ

ಕೇರಳೀಯರು ಹೊರನಾಡುಗಳಲ್ಲಿ ಇತರ ಜನಸಮುದಾಯಗಳ ಜೊತೆ ಹೊಂದಿಕೊಂಡು ಬಾಳಬಲ್ಲರು. ಸಾರ್ವಜನಿಕವಾದ ಹಿತಾಸಕ್ತಿಗೆ ಧಕ್ಕೆಯೊದಗಿದಾಗ ಧನಿಯೆತ್ತಬಲ್ಲರು. ದೇವಸ್ಥಾನ ಪ್ರವೇಶದಂತಹ ಹೋರಾಟ, ಅಸ್ಪೃಶ್ಯತೆಯ ವಿರುದ್ಧ ಚಳುವಳಿ ಹೂಡಿ ಮೊತ್ತ ಮೊದಲು ಸಫಲರಾದವರು ಕೇರಳೀಯರು. ರಾಜಪ್ರಭುತ್ವದ ವಿರುದ್ಧ, ಅಧಿಕಾರಿಶಾಹಿಗಳ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಸಮರ ಸಾರುವಲ್ಲಿ ಕೇರಳ ಮುಂಚೂಣಿಯಲ್ಲಿದೆ. ರಾಜ ಆಡಳಿತದ ಸಂದರ್ಭದಲ್ಲಿಯೇ ಪ್ರಾಯ ಪೂರ್ತಿಯಾದವರಿಗೆ ಮತದಾನದ ಹಕ್ಕನ್ನು ಪಡೆದು ಆಡಳಿತದಲ್ಲಿ ಸಾರ್ವಜನಿಕರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವಂತೆ ಮಾಡುವಲ್ಲಿ ಕೇರಳೀಯರು ಯಶಸ್ವಿಯಾಗಿದ್ದಾರೆ. ಈ ಕಾರಣದಿಂದಾಗಿ ಕೇರಳೀಯರು ರಾಜಕೀಯವಾಗಿ ಪ್ರಭುತ್ವವನ್ನು ಉಳಿಸಿಕೊಂಡಿದ್ದಾರೆ.

ಭಾಷಾಭಿಮಾನ

ರಾಜಕೀಯವಾಗಿ ಕೇರಳದಲ್ಲಿ ಹೋರಾಟಗಳು ಸಂಘರ್ಷಗಳು ನಡೆಯುತ್ತಿರುತ್ತವೆ. ಆದರೆ ಭಾಷಿಕವಾದ ಸಂಘರ್ಷಗಳಾಗಲಿ ಭಾಷಾಪರ ಹೋರಾಟಗಳಾಗಲಿ ಕೇರಳದಲ್ಲಿ ನಡೆದೇ ಇಲ್ಲ. ಅಲ್ಲದೆ ಭಾಷೆಗಾಗಿ ಅಭಿವೃದ್ದಿ ಪ್ರಾಧಿಕಾರಗಳಾಗಲಿ ಸಾಹಿತ್ಯ ಸಮ್ಮೇಳನ ಗಳಾಗಲಿ ಭಾಷೆಯ ಹೆಸರಿನಲ್ಲಿ ನಡೆಯುತ್ತಿಲ್ಲ. ಆದರೆ ಅವರು ಭಾಷಿಕವಾಗಿ ಅಭಿಮಾನ ಶೂನ್ಯರೆಂದು ಅರ್ಥ ಅಲ್ಲ. ಕೇರಳದಲ್ಲಿ ಮಲಯಾಳ ಭಾಷೆ ಅನೇಕ ಕಾಲಘಟ್ಟದಲ್ಲಿ ಬೇರೆ ಬೇರೆ ಭಾಷಾ ಪ್ರಭಾವದಲ್ಲಿ ಬೆಳೆದು ಬಂದಿದೆ. ತಮಿಳು, ಸಂಸ್ಕೃತ, ಇಂಗ್ಲಿಷ್, ಹಿಂದಿ, ಅರೆಬಿಕ್, ಪೋರ್ಚುಗೀಸ್, ಸಿರಿಯನ್, ಹಿಬ್ರು ಹೀಗೆ ಹಲವು ಭಾಷೆಗಳೂ ಮಲಯಾಳಂ ಭಾಷೆಯಲ್ಲಿ ಮಿಶ್ರಣ ಮಾಡಿ ಬಳಸಲು ಕೇರಳೀಯರು ಯಾವತ್ತೂ ಹಿಂದುಳಿದಿಲ್ಲ. ಭಾಷಾ ಪರವಾದ ಈ ಮುಕ್ತ ಚಿಂತನೆಯ ಕಾರಣದಿಂದಾಗಿ ಅನೇಕ ಜ್ಞಾನ ಶಾಖೆಗಳು ಮಲಯಾಳಂ ಭಾಷೆಯಲ್ಲಿ ರೂಪು ಪಡೆದವು. ಆಧುನಿಕವಾದ ವಿಚಾರಗಳಿರ ಬಹುದು, ವೈಜ್ಞಾನಿಕ ಸಂಗತಿಗಳಿರಬಹುದು. ಇವುಗಳಲ್ಲೆಲ್ಲ ಕೆಲವೊಂದು ಪಾರಿಭಾಷಿಕ ಪದಗಳಿಗೆ ಮಲಯಾಳಂ ಭಾಷೆಯಲ್ಲಿ ಪದಗಳೇ ಇಲ್ಲ. ಅನ್ಯ ಭಾಷಾ ಪದಗಳನ್ನು ಮಲಯಾಳಂಗೆ ಅನುವಾದಿಸಿ ಪದಸೃಷ್ಟಿಸಿ ಬಳಸುವುದಕ್ಕೆ ಬದಲಾಗಿ ಆಯಾ ಭಾಷೆಯ ಪದಗಳನ್ನು ಹಾಗೆಯೇ ಬಳಕೆಗೆ ತರುವುದು ಕೇರಳದಲ್ಲಿ ಸಾಮಾನ್ಯ.

ಔದ್ಯೋಗಿಕ ಕಾರಣಗಳಿಗಾಗಿ ಕೇರಳೀಯರು ಅನ್ಯದೇಶಗಳಿಗೆ ಹೋಗಬೇಕಾದ ಅನಿವಾರ್ಯ ಸಂದರ್ಭಗಳಲ್ಲಿ ಇಂಗ್ಲಿಷ್, ಹಿಂದಿ, ಜರ್ಮನ್, ಫ್ರೆಂಚ್, ಅರೆಬಿಕ್, ಪರ್ಶಿಯನ್ ಮೊದಲಾದ ಭಾಷೆಗಳನ್ನು ಕಲಿತವರಿದ್ದಾರೆ. ಕೇರಳೀಯರು ಅತ್ಯಂತ ಅನಿವಾರ್ಯ ಎಂಬ ಸಂದರ್ಭವನ್ನು ಹೊರತುಪಡಿಸಿದರೆ ಮಲಯಾಳಂ ಮಾತ್ರ ಮಾತ ನಾಡುತ್ತಾರೆ. ಕೇರಳದಲ್ಲಿ ಶಿಕ್ಷಣ ಮಾಧ್ಯಮ ಮಲಯಾಳಂ ಎಂಬ ಕೂಗಿಲ್ಲ. ಮಲಯಾಳಂ, ಇಂಗ್ಲಿಷ್, ಹಿಂದಿ ಎಲ್ಲವೂ ಮಾಧ್ಯಮವೇ. ವಿಶ್ವವಿದ್ಯಾಲಯದ ಮಟ್ಟದಲ್ಲಿ ಇಂಗ್ಲಿಷನ್ನು ಮಾಧ್ಯಮವಾಗಿ ಕೇರಳೀಯರು ಅಂಗೀಕರಿಸಿದ್ದಾರೆ.

ವಿಘಟನೆಯ ಹೊಸಹಾದಿಯೆಡೆಗೆ

ಪೋರ್ಚುಗೀಸರ ಆಗಮನವು ಕೇರಳದ ಜನಜೀವನವನ್ನು ಅಲ್ಲೋಲ ಕಲ್ಲೋಲ ಗೊಳಿಸಿದ ಕಾಲಘಟ್ಟವಾಗಿತ್ತು. ಅದು ತನಕ ಇಲ್ಲಿನ ವಿವಿಧ ಜಾತಿಯವರಾದ ಹಿಂದುಗಳು, ಕ್ರಿಶ್ಚಿಯನರು, ಮುಸಲ್ಮಾನರು ಆಚಾರ-ವಿಚಾರ, ನಂಬಿಕೆ-ನಡಾವಳಿಗಳಲ್ಲಿ ಚಿತ್ರ-ವಿಚಿತ್ರವಾದ ವೈರುಧ್ಯಗಳನ್ನು, ವಿರೋಧಾಭಾಸಗಳನ್ನು ಸೃಷ್ಟಿಸಿ ಅದರ ಅಡಿಯಲ್ಲಿ ಬದುಕಿದ ಪ್ರವೃತ್ತಿಗಳ ಚರಿತ್ರೆಯೇ ಕೇರಳದ್ದು. ಕೇರಳದ ವೈಶಿಷ್ಟ್ಯಗಳೊಂದಿಗೆ ವಿವಿಧ ಜಾತಿ ಮತಾನುಯಾಯಿಗಳು ಒಡಹುಟ್ಟಿದವರಂತೆ ಕಳೆದ ಚರಿತ್ರೆಯೇ ಕೇರಳಕ್ಕಿದ್ದುದು. ಈ ಕೇರಳೀಯ ಐಕ್ಯತೆಯಲ್ಲಿ ಬಿರುಕು ಮೂಡಿಸುವುದೇ ವಿದೇಶಿಯರ ಮುಖ್ಯ ಗುರಿಯಾಗಿತ್ತು. ಆರ್ಥಿಕ, ರಾಜಕೀಯ ವಲಯಗಳಲ್ಲಿ ಮಾತ್ರವಲ್ಲ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ವಿದೇಶಿಯರ ಆಗಮನವು ಅಸ್ವಾಸ್ಥ್ಯ, ದ್ವೇಷದ, ಪರಂಪರಾಗತ ಆಚಾರ ವಿಚಾರಗಳು ಅರ್ಥ ಶೂನ್ಯವೆಂದು ವಿಶ್ಲೇಷಿಸುವ ಪ್ರವೃತ್ತಿಗಳಿಗೆ ಬೀಜ ಬಿತ್ತಿದಂತಾಯಿತು. ಈ ಸನ್ನಿವೇಶದಲ್ಲಿ ಎೞುತ್ತಚ್ಚನ್ ಕಾಣಿಸಿಕೊಂಡು ಕೇರಳದ ಸಂಸ್ಕೃತಿಗೆ ಹೊಸತೊಂದು ಆಯಾಮವನ್ನು ನೀಡಿದ.

ಅಲ್ಲಿ ತನಕ ಇಲ್ಲಿ ನೆಲೆ ನಿಂತಿರುವ ಎರಡು ವಿಭಿನ್ನ ಧಾರೆಗಳು ಕಾಣಿಸುತ್ತವೆ. ಈ ಧಾರೆಗಳನ್ನು ಜನವರ್ಗದ ದೃಷ್ಟಿಯಿಂದ ನೋಡಿದರೆ ಒಂದು ಅಭಿಜಾತ ಜನವರ್ಗ, ಎಂದರೆ ಮೇಲುವರ್ಗದ ಪ್ರತಿಷ್ಟಿತ ಜನವರ್ಗ. ಇನ್ನೊಂದು ಸಮಾಜದಲ್ಲಿ ಕೆಳಮಟ್ಟದಲ್ಲಿ ಜೀವಿಸುವ ಜನವರ್ಗ. ಅಂತಃಸತ್ವದ ನೆಲೆಯಿಂದ ಪರಿಗ್ರಹಿಸಿದರೆ ಧರ್ಮ ಕೇಂದ್ರಿತವಾದ ಮತ್ತು ಧರ್ಮ ನಿರಪೇಕ್ಷವಾದ ಎರಡು ಧಾರೆಗಳು. ಭಾಷೆಯ ದೃಷ್ಟಿಯಿಂದ ಗಮನಿಸಿದರೆ ಮಣಿಪ್ರವಾಳ ಸಾಹಿತ್ಯದ ಮತ್ತು ಪಾಟ್ಟು ಸಾಹಿತ್ಯದ ಎರಡು ಧಾರೆಗಳು ಗೋಚರಿಸುತ್ತವೆ. ಈ ಎರಡೂ ವಿಭಿನ್ನ ಧಾರೆಗಳನ್ನು ಸಮನ್ವಯೀಕರಿಸಿದ ಒಂದು ವಿಶಿಷ್ಟ ರೀತಿ ಎೞುತ್ತಚ್ಚನ್‌ನ ಕೃತಿಗಳಲ್ಲಿ ಕಾಣಬಹುದು. ಅಸ್ತಿತ್ವದಲ್ಲಿರುವ ಜಾತಿ, ಜಮೀನ್ದಾರ, ನಾಡದೊರೆಗಳ ಬೌದ್ದಿಕ ಕೇಂದ್ರವಾದ ಭಕ್ತಿಯಲ್ಲಿ ನೆಲೆನಿಂತೇ ಎೞುತ್ತಚ್ಚನ್ ಈ ಸಮನ್ವಯವನ್ನು ಸಾಧಿಸಿದ. ಸರ್ವಸಮತ್ವ ದರ್ಶನ ಎಂಬ ವಿಶೇಷಣವುಳ್ಳ ಉಪನಿಷತ್ತಿನ ದ್ವೈತ ವೇದಾಂತವನ್ನು ಲೌಕಿಕ ಭಕ್ತಿಯ ಜೊತೆ ಸೇರಿಸಿಕೊಂಡು ಒಂದು ದಾರ್ಶನಿಕ ಪಂಥ ಮಧ್ಯಕಾಲೀನ ಭಾರತದಲ್ಲಿ ಎಲ್ಲೆಡೆ ಪ್ರಚಾರ ಪಡೆಯಿತು. ಆ ಭಕ್ತಿಪಂಥ ಕೇರಳದ ಪ್ರಮುಖ ಪ್ರತಿನಿಧಿ ಎೞುತ್ತಚ್ಚನ್. ಹಾಗೆ ಆತ ಅದುವರೆಗೆ ಸಂಸ್ಕೃತ ಭಾಷಾಭಿಜ್ಞರಿಂದ ರಚಿತವಾಗಿ ಮೇಲು ವರ್ಗದವರು ಗುತ್ತಿಗೆ ಪಡೆದಿದ್ದ ಇತಿಹಾಸ ಪುರಾಣಗಳು ‘ಅದ್ವೈತ ವೇದಾಂತಗಳು’ ಭಕ್ತಿ ದರ್ಶನಗಳು ಸಮಾಜದ ಕೆಳವರ್ಗದವರಿಗೂ ದೊರಕುವಂತೆ ಮಾಡಿದ. ಆ ಮೂಲಕ ಆತ ಅವರ ಸವರ್ಣೀಯ ಸಂಸ್ಕೃತಿಯನ್ನು ನಾಶ ಮಾಡಿದ. ಜಾತಿ ಪ್ರಜ್ಞೆಗೆ ಇದರಿಂದ ಆದ ಅಘಾತದಿಂದಾಗಿ ಹಿಂದೂ ಮತದ ಧಾರ್ಮಿಕ ತಳಹದಿಗೆ ಮತ ನಿರಪೇಕ್ಷವಾದ ಛಾಪು ಬಂತು. ಭಾಷೆ ಮತ್ತು ಛಂದಸ್ಸುಗಳ ವಿಷಯದಲ್ಲಿ ಈ ತೆರನಾದೊಂದು ಮಧ್ಯ ಮಾರ್ಗ ಸ್ವೀಕರಿಸಿದ್ದರಿಂದ ಎೞುತ್ತಚ್ಚನ್ ಮಲಯಾಳಂ ಸಾಂಸ್ಕೃತಿಕ ಲೋಕದಲ್ಲಿ ಅಗ್ರಮಾನ್ಯನೆನಿಸಿದ. ಮೇಲು ವರ್ಗ ದವರ ಪೋಷಣೆಯಲ್ಲಿದ್ದ ಸಂಸ್ಕೃತ ಭಾಷೆಯ ಅಧಿಪತ್ಯಕ್ಕೆ ಸವಾಲೆಸೆದವರಲ್ಲಿ ಎೞುತ್ತಚ್ಚನಿಗಿಂತಲೂ ಒಂದು ಹೆಜ್ಜೆ ಮುಂದಿರುವ ಪೂಂತಾನನನ್ನು ಇಲ್ಲಿ ನೆನಪಿಸಿಕೊಳ್ಳ ಬಹುದು. ಪೋರ್ಚುಗೀಸರ ಆಗಮನವು ಸೃಷ್ಟಿಸಿದ ರಾಜಕೀಯ, ಸಾಂಸ್ಕೃತಿಕ ಸನ್ನಿವೇಶವು ಭಕ್ತಿಪಂಥವನ್ನು ಸವರ್ಣೀಯರ ಸ್ವಾಧೀನದಿಂದ ಬಿಡುಗಡೆಗೊಳಿಸಿ ಕೆಳವರ್ಗದವರೆಡೆಗೆ ತಂದು ಅದನ್ನು ಜನಪರವಾಗಿಸಿ ಪ್ರಬಲಗೊಳಿಸಲು ಈ ಭಕ್ತಿಪಂಥದ ನಾಯಕರನ್ನು ಪ್ರೇರಿಸಿತು.

ಮಧ್ಯಕಾಲೀನ ಸಂದರ್ಭದಲ್ಲಿ ಭಕ್ತಿಪಂಥವು ಸಮಾಜದ ಜಾತಿ-ಮತಗಳ ಕಂದಕವನ್ನು ನಾಶಮಾಡಿ ಸಮನ್ವಯದ ನೆಲೆಯನ್ನು ಒದಗಿಸಿತು. ಆಧುನಿಕ ಭಕ್ತಿಗಳು ಮನುಷ್ಯ- ಮನುಷ್ಯರ ನಡುವೆ ಕಂದಕಗಳನ್ನು ನಿರ್ಮಿಸಿ ಜಾತಿಗಳನ್ನು ಕೋಮುಗಳನ್ನು ಸೃಷ್ಟಿಸುವತ್ತ ಸಾಗಿರುವುದನ್ನು ಗಮನಿಸಬಹುದು. ಸಾಮುದಾಯಕವಾದ ಆಸಕ್ತಿಗೆ ಬದಲಾಗಿ ವೈಯಕ್ತಿಕ ಹಿತಾಸಕ್ತಿಗಳು ಸ್ವಜನ ಪಕ್ಷಪಾತಗಳು ಹೆಚ್ಚುತ್ತಿರುವುದು ಸಾಂಸ್ಕೃತಿಕವಾಗಿಯೂ ಅಪಾಯಕಾರಿ. ರಾಜಕೀಯ ಪಕ್ಷಗಳ ಅಧಿಕಾರ ದಾಹ ಸಾಮಾಜಿಕವಾದ ದೂರದೃಷ್ಟಿಯ ಕೊರತೆ ಅಕ್ಷರಸ್ಥರ ರಾಜ್ಯವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕೇರಳವೇ ಸಾಂಸ್ಕೃತಿಕವಾಗಿ ವಿಘಟನೆಯತ್ತ ಚಲಿಸುತ್ತದೆ ಎಂಬುದೇ ಆಶ್ಚರ್ಯ.

ಕೇರಳದ ಸಂಸ್ಕೃತಿಯನ್ನು ಕುರಿತು ಹೇಳುವಾಗ ಮುಖ್ಯವಾಗಿ ಎರಡು ಧಾರೆಗಳನ್ನು ಗುರುತಿಸಬಹುದು. ಅವುಗಳಲ್ಲಿ ಒಂದು ಭಾರತೀಯ ಜನ್ಯವಾದ ಹಿಂದೂ, ಬೌದ್ಧ, ಜೈನ ಸಂಸ್ಕೃತಿಗಳು. ಇನ್ನೊಂದು ಸೆಮಿಟಿಕ್ ಗಡಿಪ್ರದೇಶದ ಮೂಲಕ ಇಲ್ಲಿಗೆ ವಲಸೆ ಬಂದ ಯೆಹೂದ್ಯ, ಕ್ರೈಸ್ತ, ಇಸ್ಲಾಂ ಸಂಸ್ಕೃತಿ. ಈ ಎರಡು ಮುಖ್ಯ ಸಂಸ್ಕೃತಿಗಳು ಕೇರಳೀಯರ ಧಾರ್ಮಿಕವಾದ ಹಾಗೂ ಸಾಮಾಜಿಕವಾದ ಸಂಸ್ಕೃತಿಯನ್ನು ರೂಪಿಸಿದೆ. ಈ ಎರಡೂ ಸಂಸ್ಕೃತಿಗಳು ಇತಿಹಾಸ ಕಾಲದಿಂದ ಪರಸ್ಪರ ಸ್ನೇಹ, ವಿಶ್ವಾಸಗಳಿಂದ ಪರಸ್ಪರ ಹೊಂದಿ ಕೊಂಡು ಕೇರಳದ ಸಂಸ್ಕೃತಿಯನ್ನು ರೂಪುಗೊಳಿಸಿವೆ. ಹತ್ತೊಂಬತ್ತು-ಇಪ್ಪತ್ತನೇ ಶತಮಾನದಲ್ಲಿ ನಡೆದ ಪ್ರಗತಿಪರ ಸಾಮಾಜಿಕ ಚಳುವಳಿಗಳು. ಸ್ವಾತಂತ್ರ್ಯ ಹೋರಾಟಗಳು, ರಾಷ್ಟ್ರದಲ್ಲಿ ಬೇರೂರಿದ ಸೆಕ್ಯುಲರ್ ವಾದಗಳು ಇವುಗಳಿಂದೆಲ್ಲ ಪ್ರತಿಯೊಂದು ಧರ್ಮಗಳು ಇನ್ನಷ್ಟು ಶಕ್ತಗೊಂಡು ತಮ್ಮ ಅಸ್ತಿತ್ವವನ್ನು ಖಚಿತಗೊಳಿಸುವತ್ತ ಸಾಗಿವೆ. ಹಾಗಾಗಿ ಧರ್ಮ ಎಂಬುದು ಮನುಷ್ಯನ ವಿಮೋಚನೆಗಾಗಿ ಎಂಬ ದೃಷ್ಟಿಕೋನವೂ ಇದರಿಂದ ಶಕ್ತ ವಾದಂತಾಗಿದೆ.

ಎರಡು ಮತೀಯ ಸಂಸ್ಕೃತಿಗಳು ಪರಸ್ಪರ ವಿಭಿನ್ನವಾದ ಆಶಯಗಳಿಗೆ ಒತ್ತು ಕೊಡುತ್ತಾ ಬಂದುದರಿಂದ ಇಂದಿಗೂ ಅವು ಎರಡು ವ್ಯತ್ಯಸ್ಥವಾದ ಸಾಂಸ್ಕೃತಿಕ ಧಾರೆಗಳಾಗಿ ಉಳಿದು ಕೊಂಡಿವೆ ಎಂಬುದು ವಾಸ್ತವ. ಹಾಗಾಗಿಯೇ ಈ ವಿಭಿನ್ನ ಧರ್ಮಗಳ ಸಂಸ್ಕೃತಿಗಳಲ್ಲಿ ವಿಭಿನ್ನ ಚಿಂತನಾ ರೀತಿಗಳು, ಜೀವನ ಶೈಲಿಯಲ್ಲಿ ಬೇರೆಡೆಗಳಲ್ಲಿ ಇಲ್ಲದ ಪ್ರತ್ಯೇಕತೆಗಳನ್ನು ಕಾಣಬಹುದು. ಕೇರಳದ ಕ್ರೈಸ್ತ, ಇಸ್ಲಾಂ ಸಮಾಜದಲ್ಲಿ ಬೇರೆಡೆಗಳಲ್ಲಿರುವಂತೆ  ಅಸಹಿಷ್ಣುತೆ ಇಲ್ಲ. ಈ ನಾಡಿನ ಹೈಂದವ ಸಮಾಜಗಳಲ್ಲಿ ಬೇರೆ ಎಲ್ಲಿಯೂ ಕಾಣಲಾಗದ ಸಾಮಾಜಿಕ ಬದ್ಧತೆಗಳಿವೆ. ನಿರ್ಣಾಯಕವಾದ ಹಲವು ಜನಪರ ಹೋರಾಟಗಳಲ್ಲೂ ಸಾಮೂಹಿಕವಾಗಿ ಪರಸ್ಪರ ಒಂದುಗೂಡಿ ಭಾಗವಹಿಸಿದ್ದನ್ನು ಕಾಣಬಹುದು. ಇಲ್ಲಿನ ಜನಪದರಲ್ಲಿ ಯಾರು ಯಾರಿಗೂ ಅನ್ಯರಲ್ಲ. ತಿರಸ್ಕಾರ ಯೋಗ್ಯರೂ ಅಲ್ಲ. ಇಂತಹ ವಿಭಿನ್ನ ಮತೀಯರ ಸೌಹಾರ್ದವೇ ‘ಕೇರಳ ಮಾದರಿ’ ಸಮಾಜದ ಜೀವನಾಡಿಯಾಗಿದೆ. ಅಂದರೆ ಇಲ್ಲಿ ಸಮಸ್ಯೆಗಳು ಇಲ್ಲವೆಂದಲ್ಲ. ಆದರೆ  ಅವುಗಳಿಗಿಂತಲೂ ಮುಖ್ಯವಾಗಿ ತಲೆಮಾರುಗಳಿಂದ ಕೇರಳೀಯರು ಕಾಯ್ದುಕೊಂಡು ಬಂದ ಸೌಹಾರ್ದ ಸಂಸ್ಕೃತಿಯನ್ನು ಪ್ರತ್ಯೇಕವಾಗಿ ಗಮನಿಸಬಹದಾಗಿದೆ.

ಕಳೆದ ಎರಡು ಮೂರು ದಶಕಗಳಿಂದೀಚೆಗೆ ಕೇರಳದ ಸಾಂಸ್ಕೃತಿಕ ವಲಯಗಳಲ್ಲಿ, ಮತೀಯ ವಲಯಗಳಲ್ಲಿ ವಿಶೇಷವಾಗಿ ಬದಲಾವಣೆಗಳಾಗಿರುವುದನ್ನು ಕಾಣಬಹುದು. ಇವುಗಳಿಗೆ ಕಾರಣಗಳನ್ನು ಸ್ಪಷ್ಟವಾಗಿ ಗುರುತಿಸುವುದು ಅಸಾಧ್ಯವಾದರೂ ಸಂಕೀರ್ಣವಾದ ಮತೀಯ ವಲಯಗಳಲ್ಲಿ ಗೋಚರಿಸಿದ ಕೆಲವು ಧೋರಣೆಗಳಲ್ಲಿನ ವೈರುದ್ಧ್ಯಗಳನ್ನು ವಿವರಿಸಬಹುದು.

ವಿವಿಧ ಜಾತಿಗಳಿಗೆ ಕೋಮುಗಳಿಗೆ ಸಂಬಂಧಿಸಿದ ಜನರು ನಗರಗಳಲ್ಲಿ, ಹಳ್ಳಿಗಳಲ್ಲಿ ಪರಸ್ಪರ ಕೂಡು ಬಾಳುವೆ ನಡೆಸುತ್ತಿರುವುದು ಕೇರಳ ಸಂಸ್ಕೃತಿಯ ವೈಶಿಷ್ಟ್ಯಗಳಲ್ಲೊಂದು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಜನಪರವಾದ ಕಾರ್ಯಕ್ರಮಗಳಲ್ಲೆಲ್ಲ ಎಲ್ಲಾ ಕೋಮು, ಜಾತಿಗಳವರು ಒಂದಾಗಿ ವ್ಯವಹರಿಸುವುದು ಇಲ್ಲಿನ ವಿಶೇಷ. ಹಬ್ಬ ಹರಿದಿನಗಳನ್ನು ಜೊತೆಗೂಡಿ ಆಚರಿಸುವ, ಧಾರ್ಮಿಕ ಕೇಂದ್ರಗಳಿಗೆ ಒಂದುಗೂಡಿ ಹೋಗುವ ಆಸಕ್ತಿಗಳನ್ನು ಜಾತಿ-ಮತಗಳ ಎಲ್ಲೆಗಳನ್ನು ಮೀರಿ ಪ್ರಕಟಿಸಿದ್ದನ್ನು ಕಾಣಬಹುದು. ಒಂದು ಊರಿನ ದೇವಾಲಯದಲ್ಲಿ ನಡೆಯುವ ಉತ್ಸವ ಇಡೀ ಊರಿಗೆ ಉತ್ಸವದ ವಾತಾವರಣ ಬಂದಂತೆ ಜನರು ಭಾಗವಹಿಸುತ್ತಿದ್ದರು. ಶ್ರೀನಾರಾಯಣಗುರು ಅವರ ‘ಮತ ಯಾವುದಾದರೂ ಮನುಷ್ಯರು ಚೆನ್ನಾಗಿದ್ದರೆ ಸಾಕು’ ಎಂಬ ತತ್ವ ಕೇರಳದ ಮತೀಯ ಸಮುದಾಯಗಳನ್ನು ಜೊತೆಗೂಡಿಸುವ ಸೂತ್ರವಾಗಿ ಪರಿಣಮಿಸಿದೆ.

ಇದಕ್ಕೆ ಇನ್ನೊಂದು ಮುಖವಿದೆ. ಈ ಕೋಮು ಸೌಹಾರ್ದಗಳ ನಡುವೆ ಮತ್ಸರ, ವೈರಗಳನ್ನು ಊದಿ ಉರಿಸುವ ಧೋರಣೆಗಳು ಕೇರಳದ ಎಲ್ಲಾ ಮತ ಸಮುದಾಯಗಳಲ್ಲಿ ಕಳೆದ ಮೂವತ್ತು ವರ್ಷಗಳಿಂದೀಚೆಗೆ ಬೆಳೆದು ಬರುತ್ತಿರುವುದನ್ನು ಕಾಣಬಹುದು. ಪ್ರತಿಯೊಂದು ಕೋಮುಗಳು ತಮ್ಮ ಕ್ಷೇತ್ರವನ್ನು ಭದ್ರಗೊಳಿಸುವ ರೀತಿಯಲ್ಲಿ ಹಂತ ಹಂತವಾಗಿ ಹೆಜ್ಜೆ ಹಾಕುತ್ತಿವೆ. ರಾಜಕೀಯ ಪಕ್ಷಗಳು, ವ್ಯಾಪಾರಿ ಸಂಘಟನೆಗಳು, ಮತೀಯ ವಿಚಾರಗಳನ್ನು ತಮ್ಮ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳಲು ಮುಂದಾಗುತ್ತಿವೆ. ಪರಿಣಾಮ ವಾಗಿ ಕೋಮುಗಳು, ಜಾತಿಗಳು ಕೇರಳದಲ್ಲಿ ಇಂದು ಮಾರಾಟದ ವಸ್ತುವಾಗಿ ರೂಪು ಗೊಳ್ಳುತ್ತಿವೆ. ಕ್ರೈಸ್ತ ಸಭೆಗಳ ಪಂತಕೋಸ್ತ್, ಕರಿಸ್ಮಾಟಿಕ್ ಪಂಥಗಳಲ್ಲೂ, ಇಸ್ಲಾಂ ಮತೀಯ ಸಂಘಟನೆಗಳಲ್ಲೂ ಹಿಂದೂಗಳ ಹಿಂದುತ್ವದ ವಿಚಾರಧಾರೆಗಳಲ್ಲೂ ಅಸಹನೆಯ ವಿಷಬೀಜಗಳನ್ನು ಕಾಣಬಹುದು. ಇಂತಹ ಸಂಘಟನೆಗಳತ್ತ ಹಾಗೂ ಅವುಗಳ ಧೋರಣೆಗಳತ್ತ ಹೆಚ್ಚು ಹೆಚ್ಚು ಜನರು ಆಕರ್ಷಿತರಾಗುತ್ತಿದ್ದಾರೆ ಎಂಬುದೇ ವಿಸ್ಮಯ.

ತಲೆಮಾರುಗಳಿಂದ ನೆಲೆ ನಿಂತಿರುವ ಸಾಮಾಜಿಕ ರೀತಿ ನೀತಿಗಳಲ್ಲಿ ಆಯಾಯ ಕೋಮುಗಳಲ್ಲಿ, ನಂಬಿಕೆಯಿರಿಸಿದವರಿಗೆ ಸಂರಕ್ಷಣೆ ದೊರೆತಿತ್ತು. ಭಾರತವು ಒಂದು ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರವಾದ್ದರಿಂದ ಈ ತೆರನ ಸಂವಿಧಾನಗಳು ಶಿಥಿಲಗೊಂಡುವು. ಅದರಲ್ಲೂ ಮುಖ್ಯವಾಗಿ ಚಾತುರ್ವರ್ಣ್ಯ ವ್ಯವಸ್ಥೆಗೆ ಏಟು ಬಿದ್ದಂತಾಯ್ತು. ಪರಂಪರಾಗತ ಪುರೋಹಿತಶಾಹಿಗಳಿಗೆ ಇದ್ದ ಸ್ಥಾನಮಾನಗಳು ಕ್ರಮೇಣ ಕಡಿಮೆಯಾದವು. ಎಲ್ಲಾ ಮಾನವರೂ ದೇವರ ಮುಂದೆ ಸಮಾನರು ಮತ್ತು ದೀನರನ್ನು ಬಡವರನ್ನು ದೇವರು ಕರುಣೆಯಿಂದ ಕಾಣುತ್ತಾನೆ ಎಂಬಿತ್ಯಾದಿ ಸೆಕ್ಯುಲರ್ ಚಿಂತನೆಗಳು ಸಮಾಜದಲ್ಲಿ ವ್ಯಾಪಕವಾದಂತೆ ಪರಂಪರಾಗತವಾದ ಸಂವಿಧಾನಗಳು ಶಿಥಿಲವಾಗತೊಡಗಿದವು. ಆಧುನಿಕ ಶಿಕ್ಷಣ ಸಂಪ್ರದಾಯ, ಶ್ರೀನಾರಾಯಣಗುರು ಆಲೋಚನಾ ವಿಧಾನಗಳು, ಎಡಪಂಥೀಯ ಧೋರಣೆಗಳು ಈ ಪರಿವರ್ತನೆಗಳಿಗೆ ಪ್ರೋತ್ಸಾಹ ಇವೆಲ್ಲದರ ಪರಿಣಾಮವಾಗಿ ಮತೀಯವಾದಿಗಳಿಗೆ ಬೇರುಗಳೇ ಕಳಚಿಹೋದ ಅನುಭವಗಳಾಗ ತೊಡಗಿದವು. ಪರಂಪರಾಗತವಾಗಿ ನಂಬಿಕೊಂಡು ಬಂದ ಸಂಹಿತೆಗಳನ್ನು ಸಂರಕ್ಷಿಸುವ ಸಶಕ್ತವಾದ ಸಂವಿಧಾನಗಳು ಇಲ್ಲವಾದರೆ, ಹೇಗೆ ಧರ್ಮಗಳ ಭವಿಷ್ಯವನ್ನು ಗಟ್ಟಿಗೊಳಿ ಸುವುದು? ಎಂಬ ಪ್ರಶ್ನೆ ಅವರಲ್ಲಿ ಉದ್ಭವಿಸಿತು. ಮತೀಯ ವಲಯಗಳಲ್ಲಿ ಸಾಮೂಹಿಕವಾಗಿ ಸಂರಕ್ಷಣೆಯನ್ನು ಜೊತೆಗೂಡಿಸಿಕೊಂಡು ಅನೇಕ ಸಂಘಟನೆಗಳನ್ನು ರೂಪುಗೊಳಿಸಲು ಉದ್ಯುಕ್ತರಾದರು. ರಾಜಕೀಯ ಪಕ್ಷಗಳು, ವ್ಯಾಪಾರಿಗಳು ಈ ನಿಲುವುಗಳನ್ನೇ ಬಂಡವಾಳ ವಾಗಿಸಿಕೊಳ್ಳಲು ಆರಂಭಿಸಿದ್ದರಿಂದ ಮತೀಯವಾದ ಪವಿತ್ರ ವಲಯಗಳಲ್ಲೂ ಅನ್ಯ ಶಕ್ತಿಗಳು ಅಧಿಪತ್ಯ ಸ್ಥಾಪಿಸತೊಡಗಿದ್ದವು. ಹೀಗೆ ಒಂದು ರೀತಿಯ ಕೋಮು ರಾಜಕೀಯ ಕೇರಳದ ಎಲ್ಲಾ ಮತೀಯ ಸಮುದಾಯಗಳಲ್ಲೂ ಶಕ್ತಿ ಹೆಚ್ಚಿಸುತ್ತಾ ಬರುತ್ತಿದೆೆ.

ಒಂದು ಹೊಸ ಮತೀಯ ಸಂಸ್ಕೃತಿ ಇಲ್ಲಿ ಅರಳಬೇಕಾಗಿದೆ. ಅದರ ಕೇಂದ್ರಬಿಂದು ಮತೀಯ ಸಮುದಾಯ ಪ್ರಜ್ಞೆಯಾಗಿರದೆ ಪ್ರಾಮಾಣಿಕವಾಗಿ ಮನುಷ್ಯರ ಪರವಾಗಿರಬೇಕು. ಮನುಷ್ಯನು ಮತೀಯ ಜೀವನದ ಮುಖ್ಯ ಬಿಂದು. ಮನುಷ್ಯನ ಚೈತನ್ಯವನ್ನು ವರ್ಧಿಸುವುದೇ ಆತ್ಮೀಯತೆ, ಹಿಂದು, ಕ್ರೈಸ್ತ, ಇಸ್ಲಾಂ ಈ ಎಲ್ಲಾ ಧರ್ಮಗಳ ತಿರುಳು ಅದುವೇ ತಾನೆ.

ಧರ್ಮಗಳು ಮಾನವನ ಬಿಡುಗಡೆಗೊಂದು ಉಪಾಧಿ ಎಂಬ ತತ್ವವನ್ನು ಕೇರಳದ ಮತೀಯ ಸಮುದಾಯಗಳು ಸಾಮಾನ್ಯವಾಗಿ ಒಪ್ಪಿಕೊಂಡಿವೆ. ಹಿಂದೂ, ಕ್ರೈಸ್ತ, ಇಸ್ಲಾಂ ಸಾಮಾಜಿಕ ಸಂಘಟನೆಗಳು, ವ್ಯಕ್ತಿಗಳು ನಡೆಸುವ ಅನೇಕ ಶಿಕ್ಷಣ ಸಂಸ್ಥೆಗಳು, ಅಭಯಾ ಶ್ರಮಗಳು, ಆಸ್ಪತ್ರೆಗಳು, ಸಾಮಾಜಿಕ ಆರೋಗ್ಯ ಕಾರ್ಯಕ್ರಮಗಳು, ನ್ಯಾಯ, ಮಾನವ ಹಕ್ಕುಗಳಿಗಾಗಿರುವ ಹೋರಾಟಗಳು ಇವುಗಳಲ್ಲಿ ಈ ಮತ ಸಮುದಾಯಗಳ ಧೋರಣೆಗಳು ವ್ಯಕ್ತವಾಗುತ್ತಿವೆ. ವಿವಿಧ ಜಾತಿ ಮತಗಳಿಗೆ ಸೇರಿದವರು ಸಾಮಾಜಿಕವಾಗಿ ಒಂದುಗೂಡಿ ಸಮಾಜದ ಸೇವಾನಿರತರಾದುದುದನ್ನು ಭಾರತದ ಇತರೇ ರಾಜ್ಯಗಳಿಗಿಂತ ಕೇರಳದಲ್ಲಿ ಸ್ವಲ್ಪ ಹೆಚ್ಚಾಗಿಯೇ ಕಾಣಬಹುದು. ಜೀವನದ ಗುಣಮಟ್ಟ, ಸಾಕ್ಷರತೆ, ಆರೋಗ್ಯಮಟ್ಟ ಇತ್ಯಾದಿಗಳಲ್ಲೆಲ್ಲ ಕೇರಳ ಇತರೇ ರಾಜ್ಯಗಳಿಗಿಂತ ಮುಂದಿದ್ದರೂ ಅದಕ್ಕೆ ಇರುವ ಬಹುಮುಖ್ಯ ಕಾರಣ ವಿವಿಧ ಮತಧರ್ಮಗಳು ಒಂದುಗೂಡಿ ನಡೆಸಿದ ಕ್ಷೇಮಾಭ್ಯುದಯ ಚಟುವಟಿಕೆಗಳು. ಕೇರಳದ ಜಾತಿ ವ್ಯವಸ್ಥೆಯ ಬೆನ್ನೆಲುಬು ಮುರಿದು ಸಮಾನತೆಯ ನೆಲೆಗಟ್ಟಿನ ಮೇಲೆ ಬೆಳೆಸಿದ ವಿಚಾರಗಳೇ ಮುಖ್ಯ ಪ್ರಚೋದನೆಗಳಾಗಿವೆ. ಇಸ್ಲಾಂ ಸಾಹೋದರ್ಯ ಮನೋಭಾವ, ಹಿಂದೂ ದಶರ್ನಗಳ ಸಮಭಾವನೆಗಳು, ಕ್ರಿಶ್ಚಿಯನರ ಸ್ನೇಹಭಾವವು ಮಲಯಾಳಿಗರ ಜೀವನ ದೃಷ್ಟಿಯನ್ನು ರೂಪಿಸಿದೆ.

ಸ್ವಹಿತಾಸಕ್ತಿಗಾಗಿ ಮತೀಯ ವಿಚಾರಗಳನ್ನು ಉಪಾಧಿಗಳನ್ನಾಗಿ ಬಳಸಿಕೊಂಡುದನ್ನು ಒಂದು ವಿರೋಧಾಭಾಸವೆಂದೇ ಹೇಳಬಹುದು. ಮತಾನುಯಾಯಿಗಳು ಒಂದೊಂದು ಮತವನ್ನು ತನ್ನತ್ತ ಎಳೆದುಕೊಳ್ಳವುದರಲ್ಲಿಯೇ ಮಗ್ನವಾಗಿವೆ. ಮನಸ್ಸಿನಲ್ಲಿ ಇತರ ಮತಗಳ ಬಗೆಗೆ ಹಾಕಿಕೊಂಡ ಬೇಲಿಗಳು ಭದ್ರವಾಗುತ್ತ ಸಾಗಿವೆ. ಸ್ವಹಿತಾಸಕ್ತಿಯನ್ನು ಈಡೇರಿಸಿ ಕೊಳ್ಳಲು ಸ್ವತಹ ಮತಧರ್ಮವನ್ನು ಏಕೆ ದೇವರನ್ನೇ ಉಪಾಧಿಯಾಗಿ ಬಳಸಿಕೊಳ್ಳಲು ಇಂದು ಕೇರಳೀಯರು ಹಿಂಜರಿಯುತ್ತಿಲ್ಲ. ಇಷ್ಟಾರ್ಥವನ್ನು ಸಾಧಿಸಿಕೊಳ್ಳಲು ತೀರ್ಥಕ್ಷೇತ್ರ ಗಳಿಗೆ ಯಾತ್ರೆ ಹೊರಟವರನ್ನು, ಧ್ಯಾನಮಂದಿರಗಳಲ್ಲಿ ಧ್ಯಾನ ನಿರತರಾದವರನ್ನು, ಸಮಾಧಿ ಸ್ಥಳಗಳಲ್ಲಿ ಸೇರುವವರನ್ನು ನಾವಿಂದೂ ಕೇರಳದೆಲ್ಲೆಡೆ ಕಾಣಬಹುದು. ಮತ ಧರ್ಮಗಳ ವ್ಯಾಪಾರೀಕರಣವನ್ನು ಇಂದು ಎಲ್ಲೆಡೆ ಕಾಣುತ್ತಿದ್ದೇವೆ. ಸಮಾಜ ಸೇವೆಯ ಹೆಸರಲ್ಲಿ ಧಾರ್ಮಿಕ ಸಂಸ್ಥೆಗಳು ನಡೆಸುವ ಎಲ್ಲಾ ಕೆಲಸಗಳು ಆರ್ಥಿಕವಾಗಿ ಲಾಭ ಗಳಿಸುವುದನ್ನೇ ಮುಖ್ಯ ಗುರಿಯಾಗಿರಿಸಿಕೊಂಡು ಕಾರ್ಯಪ್ರವೃತ್ತವಾಗಿವೆ. ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವ ಈ ಪ್ರಕ್ರಿಯೆಯಿಂದಾಗಿ ಜನಜೀವನದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯಗಳನ್ನು ಧರ್ಮ ಸಂಸ್ಥೆಗಳು ಕಳೆದುಕೊಂಡಿವೆ. ಲಂಚ, ಮಹಿಳೆಯರ ಮೇಲಿನ ಅತ್ಯಾಚಾರ, ಪರಿಸರ ನಾಶದಂತಹ ಸಮಸ್ಯೆಗಳಿಗೆ ಕ್ರಿಯಾತ್ಮಕವಾಗಿ ಪ್ರತಿಕ್ರಿುಸುವ ಪ್ರವೃತ್ತಿಗಳು ಕ್ಷೀಣಿಸುತ್ತಿವೆ. ಮತಧರ್ಮಗಳು ಮಾನವನ ಬಿಡುಗಡೆಗಾಗಿ ಎಂದು, ಪ್ರವಚನ ಮಾಡಿದವರು ಅಪ್ರಸ್ತುತ ರಾಗಿದ್ದಾರೆ. ಮತಧರ್ಮಗಳು ಯಾವಾಗಲೂ ವ್ಯಕ್ತಿಯನ್ನು ಸುಸಂಸ್ಕೃತರನ್ನಾಗಿಸುತ್ತವೆ ಎಂದು ವಿಶ್ಲೇಷಿಸಿದ ಮಿಸ್ಟಿಕ್ ಆಚಾರ್ಯರು ಅವಗಣನೆಗೊಳಗಾಗಿದ್ದಾರೆ. ಹಾಗಾಗಿ ಹೊಸ ಪುರೋಹಿತಶಾಹಿಗಳ ಕೈ ಮೇಲಾಗುತ್ತಿರುವುದನ್ನು ಕಾಣಬಹುದು. ಸಂಕುಚಿತ ಸಾಮಾಜಿಕ ಪ್ರಜ್ಞೆಯನ್ನು ಗಟ್ಟಿಗೊಳಿಸುವ ಪ್ರವೃತ್ತಿ ಇದು ಎಂದು ಪರಿಭಾವಿಸಬಹುದು.