ಸಾಂಸ್ಕೃತಿಕ ಸಮನ್ವಯ ಕೇರಳದ ಅನನ್ಯತೆ ಮತ್ತು ವಿಘಟನೆಯ ಹೊಸ ಹಾದಿಯೆಡೆಗೆ

ಸಮಗ್ರವಾಗಿ ಭಾರತೀಯ ಸಂಸ್ಕೃತಿಯ ಮುಖ್ಯ ಧಾರೆಯಲ್ಲಿ ಕೇರಳಕ್ಕೂ ಬಹುಮುಖ್ಯ ಪಾತ್ರವಹಿಸುವುದು ಸಾಧ್ಯವಾಗಿದೆ. ೮ನೆಯ ಶತಮಾನದಲ್ಲಿ ಬಾಳಿದ ಶಂಕರಾಚಾರ್ಯರು ಹುಟ್ಟಿದ್ದು ಭಾರತದ ಒಂದು ಮೂಲೆಯಲ್ಲಿರುವ ಕೇರಳದ ಕಾಲಡಿಯಲ್ಲಿ ಎಂಬುದನ್ನುಇಲ್ಲಿನೆನಪಿಸಿಕೊಳ್ಳಬಹುದು. ಶಂಕರಾಚಾರ್ಯರಿಗೆ ಭೌಗೋಳಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಭಾರತದ ಐಕ್ಯತೆಯ ಬಗೆಗೆ ನಿರ್ದಿಷ್ಟವಾದ ಕಾಳಜಿ ಇತ್ತು ಎಂಬುದನ್ನು ಅವರ ಸಂದೇಶಗಳ ಮೂಲಕ ತಿಳಿದುಕೊಳ್ಳಬಹುದು. ಜೀವನ ವಿಧಾನದಲ್ಲಿ ಹೊಸ ಆವಿಷ್ಕಾರವನ್ನು ತರಲು ಶಂಕರಾಚಾರ್ಯರ ವಿಚಾರಧಾರೆಗಳಿಗೆ ಸಾಧ್ಯವಾಗಿದೆ. ಕೇರಳ ಸಂಸ್ಕೃತಿಯು ಇನ್ನಷ್ಟು ಕಾಂತಿಯುಕ್ತವಾಗಿ ಶೋಭಿಸಲು ಇದರಿಂದ ಸಾಧ್ಯವಾಯಿತು. ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯಗಳನ್ನು ಕೇರಳದ ಸಂಸ್ಕೃತಿಯು ಅತಿ ಪ್ರಾಚೀನ ಕಾಲ ದಲ್ಲಿಯೇ ಹೊಂದಿತ್ತು ಎಂಬುದು ಗಮನಾರ್ಹೊಸಂಗತಿ.

ಸಾಂಸ್ಕೃತಿಕ ಸಮನ್ವಯ

ಪ್ರಾಚೀನ ಕಾಲದಿಂದಲೇ ಕೇರಳವು ಭಾರತದ ಅನೇಕ ಮತ ಧರ್ಮಗಳ ಹಾಗೂ ತತ್ವ ಜ್ಞಾನಗಳ ಸಂಗಮ ಸ್ಥಾನವಾಗಿತ್ತು. ಭಾರತದ ಇತರೆಡೆಗಳಲ್ಲಿರುವಂತೆಯೇ ಜೈನ-ಬೌದ್ಧ-ಹಿಂದೂ ಮತಗಳು ಕೇರಳದ ಸಂಸ್ಕೃತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಪ್ರಾಚೀನ ಕಾಲದ ಭಾರತೀಯ ವಿಚಾರಧಾರೆಗಳನ್ನು ಹಾಗೂ ಸಾಹಿತ್ಯವನ್ನು ಬೆಳೆಸಿದ ಸಂಸ್ಕೃತ ಭಾಷೆಯಲ್ಲಿ ಯಥೇಚ್ಛವಾದ ಸಾಹಿತ್ಯ ರಚನೆಗಳು ಏಳನೆಯ ಶತಮಾನದ ಕೇರಳದಲ್ಲಿಯೇ ಕಾಣಬಹುದು. ಇದು ಒಂದೆಡೆಯಲ್ಲಿ ಸ್ಥಳೀಯವಾದ ಜನರ ಸಂಸ್ಕೃತಿಯನ್ನು ಪ್ರೇರಿಸಿದ್ದು ಅಷ್ಟೇ ಅಲ್ಲ ಅವರ ಭಾಷೆಯ ಮೇಲೆ ಪ್ರಭಾವವನ್ನು ಬೀರಿದುವು. ಅನೇಕ ಮಲಯಾಳಂ ಭಾಷೆಯ ಕೃತಿಗಳಿಗೆ ಸಂಸ್ಕೃತ ಭಾಷೆ ನೇರವಾದ ಪ್ರೇರಣೆಯನ್ನು ಪ್ರಭಾವವನ್ನು ಬೀರಿದೆ. ರಾಮಾಯಣ, ಮಹಾಭಾರತ, ಭಾಗವತ ಇವುಗಳಿಂದ ಯಾವುದಾದರೊಂದು ರೀತಿಯ ಪ್ರಭಾವದ ನೆಲೆಯಿಂದಲೇ ಇತ್ತೀಚಿನ ದಿನಗಳವರೆಗೂ ಮಲಯಾಳಂ ಸಾಹಿತ್ಯ ರಚನೆ ನಡೆದಿದೆ. ನಾಡನ್ ಪಾಟುಗಳೆಂದು ಕರೆಯುವ ಜಾನಪದ ಪಾಟು ಸಾಹಿತ್ಯವನ್ನು ಮಾತ್ರ ಸಂಸ್ಕೃತ ಸಾಹಿತ್ಯದ ಪ್ರಭಾವದಿಂದ ಹೊರತಾಗಿ ಪರಿಗಣಿಸಬಹುದು. ಆದರೆ ಭಾಷಿಕವಾಗಿ ಇಲ್ಲಿಯೂ ಸಂಸ್ಕೃತ ಛಾಯೆಯನ್ನು ಗುರುತಿಸಬಹುದು. ದೇಶ ವಿದೇಶಗಳಲ್ಲಿಯೂ ಕೇರಳದ ಸಾಂಸ್ಕೃತಿಕ ಕಲೆಗಳು ನಿರ್ದಿಷ್ಟ ಛಾಪನ್ನು ಮೂಡಿಸಿವೆ. ರವಿವರ್ಮನ ಚಿತ್ರಕಲೆ, ಸ್ವಾತಿತಿರು ನಾಳರ ಸಂಗೀತ ಇತ್ಯಾದಿಗಳು ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಅಮೂಲ್ಯವೆನಿಸಿವೆ. ಪುರಾತನವಾದ ಕೇರಳದ ಹಾಗೂ ಭಾರತದ ಸಂಸ್ಕೃತಿಗಳ ಸಂಗಮವು ಬಹುಮುಖದಿಂದ ನಡೆದಿದೆಯೆಂಬುದನ್ನು ಕಾಣಬಹುದು. ಇದರಿಂದ ಎರಡೂ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ವಿಶಿಷ್ಟವಾದ ಹೊಳಪನ್ನು ಕಾಣುವುದು ಸಾಧ್ಯವಾಗಿದೆ.

ಮತಧರ್ಮಗಳ ಸಮನ್ವಯ

ಭಾರತೀಯವಾದ ಹಾಗೂ ಕೇರಳೀಯವಾದ ಎರಡೂ ಸಂಸ್ಕೃತಿಗಳ ಸಂಗಮದಿಂದ ಮತಧರ್ಮಗಳ ವಿಚಾರದಲ್ಲಿ ವಿಶಿಷ್ಟವಾದ ಸಂಗತಿಗಳನ್ನು ಗುರುತಿಸಬಹುದು. ಹಿಂದೂ ಮತೀಯ ವಿಚಾರ ಹಾಗೂ ಆಚರಣೆಗಳ ಸಂಬಂಧದಲ್ಲಿ ಗಮನಾರ್ಹವಾದ ಘಟನೆಗಳೇ ನಡೆದಿವೆ. ಶ್ರೀ ಶಂಕರಾಚಾರ್ಯರ ಅದ್ವೈತ ಚಿಂತನೆ ಹಾಗೂ ಪ್ರಭಾಕರನ ಮೀಮಾಂಸಾ ವಿಚಾರಗಳು ಇವುಗಳಲ್ಲಿ ಮುಖ್ಯವಾದುದು. ಚೇರಮಾನ್ ಪೆರುಮಾಳ್, ಕುಲಶೇಖರ ಆಳ್ವಾರ್, ನಾಯನ್ಮಾರ್ ಮೊದಲಾದ ಮಹನೀಯರು ಕಂಡುಕೊಂಡ ಭಕ್ತಿ ಮಾರ್ಗವು ಇಲ್ಲಿ ಸ್ಮರಣಯೋಗ್ಯ. ಮಹಾವಿಷ್ಣು ಹಾಗೂ ಶಿವನ ಹೆಸರಿನಲ್ಲಿ ಭಾವನಾತ್ಮಕವಾಗಿ ತಾದಾತ್ಮ್ಯವನ್ನು ಹೊಂದುವ ಭಕ್ತಿ ಮಾರ್ಗವಾಗಿತ್ತು ಇವರದು. ಆರ್ಯ, ದ್ರಾವಿಡವೆಂಬ ಎರಡು ಸಂಸ್ಕೃತಿಗಳ ಸಮ್ಮಿಳನಕ್ಕೆ ಕೇರಳವು ಅನೇಕ ಶತಮಾನಗಳ ಪೂರ್ವದಲ್ಲಿಯೇ ವೇದಿಕೆಯನ್ನೊದಗಿಸಿತ್ತು. ಹಿಂದೂ ಮತದ ವಿಶಾಲವಾದ ನಿಬಂಧನೆಗಳ ಒಳಗೆ ಈ ಎರಡೂ ಸಂಸ್ಕಾರಗಳ ಮೌಲಿಕವಾದ ವಿಚಾರಗಳು ಹೊಂದಿಕೊಳ್ಳುವಂತಾದುದು ವಿಶೇಷ. ಕೇರಳದ ತೀರ ಭಾಗದಲ್ಲಿ ಹಿಂದೂ ಮತದ ಬೆಳವಣಿಗೆಯಲ್ಲಿ ಪ್ರಾದೇಶಿಕವಾದ ಅನೇಕ ಆಚರಣಾ ವಿಧಿ ವಿಧಾನಗಳ ಪ್ರಭಾವವೂ ಇದೆ. ಆರಾಧನಾ ವಿಚಾರಗಳಲ್ಲಿ ಹಾಗೂ ನಂಬಿಕೆಗಳ ತಳಹದಿಯಲ್ಲಿ ಭಾರತದ ಇತರ ಭಾಗಗಳ ಹಿಂದೂ ಮತಾನುಯಾಯಿಗಳ ನಡುವೆ ಕಂಡು ಬಂದ ತೀವ್ರತೆಯಾಗಲಿ, ಸಂರ್ಷವಾಗಲಿ, ಅಭಿಪ್ರಾಯ ವ್ಯತ್ಯಾಸಗಳಾಗಲಿ ಕೇರಳದಲ್ಲಿ ಕಾಣಿಸಿಕೊಳ್ಳಲಿಲ್ಲ.

ಕೇರಳದ ಹಿಂದೂಗಳು ಶಿವನ ಜೊತೆಗೆ ವಿಷ್ಣುವನ್ನು ಆರಾಧಿಸುತ್ತಾರೆ. ಕರ್ನಾಟಕ ಹಾಗೂ ದಕ್ಷಿಣ ಭಾರತದ ಇತರ ಪ್ರದೇಶದಲ್ಲಿ ಕಂಡು ಬಂದಂತೆ ವರ್ಣ ಧರ್ಮಗಳ ವಿಚಾರದಲ್ಲಿ ಕೇರಳದಲ್ಲಿ ಶಿವ ಹಾಗೂ ವಿಷ್ಣುವಿನ ಭಕ್ತರ ನಡುವೆ ಸಂಘರ್ಷ ನಡೆದುದಕ್ಕೆ  ಇತಿಹಾಸದಲ್ಲಿ ದಾಖಲೆಗಳು ಇಲ್ಲ. ಕೇರಳದ ಹಳ್ಳಿ, ನಗರಗಳೆಂದಲ್ಲ; ಇತರ ಹೊರನಾಡು ಗಳಿಂದಲೂ ಭಕ್ತರು ಕೇರಳದ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸುತ್ತಾರೆ. ಪ್ರತಿವರ್ಷ ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರು ಶಿವ ಹಾಗೂ ವಿಷ್ಣುವನ್ನು ಸಮಾನವಾಗಿ ಆರಾಧಿಸುವವರ ಪ್ರತೀಕವಾಗಿ ಇಂದಿಗೂ ಕಾಣಿಸುತ್ತಾರೆ. ಅಯ್ಯಪ್ಪ ಪೂಜೆಯು ಆರ್ಯ ದ್ರಾವಿಡ ಸಮನ್ವಯದ  ಪರಿಣಾಮವೆಂದೂ ಒಂದು ಅಭಿಪ್ರಾಯವಿದೆ. ಇದು ಶಿಥಿಲಗೊಂಡ ಬೌದ್ಧ ಧರ್ಮವನ್ನು ಇನ್ನಷ್ಟು ಶಿಥಿಲಗೊಳಿಸಲೋ ಅಥವಾ ಶೈವ ವೈಷ್ಣವ ಸಂಘರ್ಷವನ್ನು ತಪ್ಪಿಸುವ ಸಲುವಾಗಿಯೋ ಹಿಂದೂ ಮತೀಯರು ಪ್ರಜ್ಞಾಪೂರ್ವಕವಾಗಿ ರೂಪಿಸಿದ ಭಕ್ತಿ ಕೇಂದ್ರವೂ ಆಗಿರಬಹುದು. ಏನೇ ಆದರೂ ಹಿಂದೂ ಮತದ ಎಲ್ಲಾ ಜಾತಿಗಳವರನ್ನು ಒಂದುಗೂಡಿಸುವ ಅಷ್ಟೇ ಅಲ್ಲದೆ ಅನ್ಯ ಮತೀಯರನ್ನು ಪರಸ್ಪರ ಸ್ನೇಹದಿಂದ ಕಾಣುವಲ್ಲಿ ಅಯ್ಯಪ್ಪ ಕ್ಷೇತ್ರವು ಗಮನಾರ್ಹವೆನಿಸಿದೆ. ಮಲೆ ಮೆಟ್ಟುವ ವ್ರತಧಾರಿಗಳಾದ ಅಯ್ಯಪ್ಪ ಭಕ್ತರ ನಡುವೆ ಜಾತೀಯ ಭೇದಗಳಿಗೆ, ಉಚ್ಚ ನೀಚ ಎಂಬ ಭಾವನೆಗೆ, ಸ್ಪೃಶ್ಯ ಅಸ್ಪೃಶ್ಯತೆಗೆ ಹಿಂದೆಯೂ ಅವಕಾಶ ಇರಲಿಲ್ಲ. ಹಾಗೆ ಮಲೆಮೆಟ್ಟುವ ಅಯ್ಯಪ್ಪ ಭಕ್ತರು ಎರುಮೇಲಿಯ ವಾವರನ ಮಸೀದಿಗೂ ಆರ್ತುಂಗಲ್ ಮಸೀದಿಗೂ ಹೋಗಿ ಪೂಜೆ ಸಲ್ಲಿಸುವಂತೆ ವಿಧಿಸಿರು ವುದನ್ನು ಕೇವಲ ಆಕಸ್ಮಿಕವೆಂದು ಭಾವಿಸಬೇಕಾಗಿಲ್ಲ. ಕೇರಳೀಯ ಸಮಾಜದಲ್ಲಿ ಜಾತಿ ಮತಗಳ ವ್ಯತ್ಯಾಸಗಳು ಸಾರ್ವಜನಿಕವಾಗಿ ಗೋಚರವಾಗದಿರಲು ಇಂತಹ ಚಿಂತನೆಗಳು ಕೆಲಸ ಮಾಡಿರಬೇಕು.

ಕೇರಳೀಯರ ವಿಶಾಲ ಮನೋಭಾವ ಹಾಗೂ ಅಭಿವೃದ್ದಿಗೆ ಪ್ರಾಚೀನ ಕಾಲದಿಂದಲೇ ಕೇರಳಕ್ಕೆ ಬಂದ ಕ್ರೈಸ್ತ, ಯೆಹೂದಿ, ಇಸ್ಲಾಂ ಮೊದಲಾದ ಮತೀಯರು ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಕೇರಳದ ವಿವಿಧ ಹಿಂದೂ ದೇವಾಲಯಗಳ ವಾರ್ಷಿಕ ಉತ್ಸವಗಳಲ್ಲಿ ಅನ್ಯ ಮತೀಯರಿಗೂ ನಿರ್ದಿಷ್ಟವಾದ ಕರ್ತವ್ಯಗಳಿರುತ್ತಿದ್ದವು. ಹಿಂದೂ ದೇವಾಲಯಗಳ  ಜೊತೆಗೆ ಅನ್ಯಮತೀಯರ ಆರಾಧನಾ ಕೇಂದ್ರಗಳು ಇಂದಿಗೂ ಕೇರಳದ ಅನೇಕ ಕಡೆಗಳಲ್ಲಿವೆ.

ಕೇರಳೀಯರ ಜೀವನ ವಿಧಾನದ ಮೇಲೆ ಪಾಶ್ಚಾತ್ಯರ ಪ್ರಭಾವವಿದೆ. ಹಾಗೆಯೇ ಪಾಶ್ಚಾತ್ಯರ ಮೇಲೂ ಕೇರಳ ಸಂಸ್ಕೃತಿಯ ಪ್ರಭಾವವಾಗಿರುವುದನ್ನು ಗುರುತಿಸಬಹುದು. ಶಂಕರಾಚಾರ್ಯರ ನೇತೃತ್ವದಲ್ಲಿ ಪ್ರಚಾರ ಪಡೆದ ತತ್ವ ಚಿಂತನೆಗಳು ಪಿಸ್ತ, ಹೆಗೆಲ್ ಮೊದಲಾದ ಪಾಶ್ಚಾತ್ಯ ತತ್ವ ಚಿಂತಕರ ವಿಚಾರ ಸರಣಿಗಳನ್ನು ಪ್ರಭಾವಿಸಿವೆ. ‘ಪೌಸ್ಟ್’ ಎಂಬ ನಾಟಕದಲ್ಲಿ ಅದ್ವೈತವಾದದ ವಿಚಾರಗಳನ್ನು ತರಲಾಗಿದೆ ಎಂದು ‘The wonder that was india’ ಎಂಬ ಗ್ರಂಥದಲ್ಲಿ ಎ.ಎಲ್. ಭಾಷಾಂ ಅಭಿಪ್ರಾಯಪಟ್ಟಿದ್ದಾರೆ (ಶ್ರೀಧರ ಮೇನೋನ್, ೧೯೯೬ : ೩೧೩).

ಪಾಶ್ಚಾತ್ಯ ದೇಶಗಳ ಸಾಂಪ್ರದಾಯಕ ಕ್ರೈಸ್ತ ಧರ್ಮದ ಮೇಲೆ ಭಾರತೀಯ ವಿಚಾರಧಾರೆ ಗಳ ಪ್ರಭಾವವಾಗಿರುವುದನ್ನು ‘ಮಲಬಾರ್ ಮ್ಯಾನುವೆಲ್’ನಲ್ಲಿ ಲೋಗನ್ ದಾಖಲಿಸಿದ್ದಾನೆ. (ಅದೇ ೧೯೯೬ : ೩೧೩) ಪುರೋಹಿತ ಆಶ್ರಮಗಳು, ಕನ್ಯಾಸ್ತ್ರೀ ಮಠಗಳು, ಜಪಮಾಲೆ, ಕೇಶ ಮುಂಡನ, ಬ್ರಹ್ಮಚರ್ಯೆ ಮೊದಲಾದವುಗಳೆಲ್ಲ ಭಾರತದಿಂದಲೇ ಯುರೋಪಿಗೆ ಹೋಗಿವೆ ಎಂಬ ಅಭಿಪ್ರಾಯವಿದೆ. ಇದಕ್ಕೆ ಬದಲಾಗಿ ಕಲೆಗಳು, ವಿಜ್ಞಾನ, ವಾಸ್ತು ವಿದ್ಯೆ, ನಾಣ್ಯ ಮುದ್ರಣ, ಕ್ರೈಸ್ತ ಧರ್ಮದ ಆದರ್ಶಗಳನ್ನು ಪೂರ್ವದ ದೇಶಗಳಿಗೆ ನೀಡಿರಬಹುದು ಎಂದು ಲೋಗನ್ ಅಭಿಪ್ರಾಯಪಟ್ಟಿದ್ದಾನೆ. ಪ್ರಾಚೀನ ಕಾಲದಿಂದಲೇ ಕೇರಳ ಪಾಶ್ಚಾತ್ಯ ದೇಶಗಳೊಡನೆ ಇರಿಸಿಕೊಂಡ ಸಂಪರ್ಕದಿಂದ ಇದು ಸಾಧ್ಯವಾಗಿದೆ. ಕ್ರೈಸ್ತ ಧರ್ಮವು ರೋಮ್ ಸಾಮ್ರಾಜ್ಯದ ಅಧಿಕೃತ ಧರ್ಮವೆಂದು ಕೀರ್ತಿ ಪಡೆಯುವ ಪೂರ್ವದಲ್ಲಿಯೇ ಅಂದರೆ ಕ್ರಿ.ಶ. ಒಂದನೆಯ ಶತಮಾನಕ್ಕೂ ಮೊದಲೇ ಅದು ಕೇರಳದಲ್ಲಿ ಪ್ರಚಾರಕ್ಕೆ ಬಂದಿತ್ತು. ಉತ್ತರ ಭಾರತದ ಸಿಂಧ್ ಪ್ರಾಂತದಲ್ಲಿ ಇಸ್ಲಾಂ ಧರ್ಮವು ರಾಜಕೀಯವಾಗಿಯೋ, ಸೈನಿಕ ಶಕ್ತಿಯಾಗಿಯೋ ಕಾಣಿಸಿಕೊಂಡುದು ಕ್ರಿ.ಶ. ಎಂಟನೆಯ ಶತಮಾನದಲ್ಲಿ. ಅದಕ್ಕೂ ಒಂದು ಶತಮಾನಕ್ಕೆ ಪೂರ್ವದಲ್ಲಿಯೇ ಇಸ್ಲಾಂ ಧರ್ಮವು ಕೇರಳದಲ್ಲಿ ಒಂದು ಸಾಂಸ್ಕೃತಿಕ ಶಕ್ತಿಯಾಗಿ ರೂಪುಗೊಂಡಿತ್ತು.

ಆರಂಭದ ಕಾಲಘಟ್ಟಗಳಲ್ಲಿಯೇ ಭಾರತವು ವಿದೇಶಿ ಸಂಸ್ಕೃತಿಗಳ ಮೇಲೆ ಬೀರಿದ ಪ್ರಭಾವದಲ್ಲಿ ಕೇರಳಕ್ಕೆ ಮಹತ್ವದ ಪಾತ್ರವಿದೆ. ಶ್ರೀಲಂಕಾ ಹಾಗೂ ಆಗ್ನೇಯ ಏಷ್ಯಾ ರಾಜ್ಯಗಳಿಗೆ ಪ್ರಾಚೀನ ಕಾಲದಲ್ಲಿಯೇ ಪಸರಿಸಿದ ದಕ್ಷಿಣ ಭಾರತದ ಸಂಸ್ಕೃತಿಯಲ್ಲಿ ಕೇರಳದ ಪ್ರಭಾವವೇ ಅಧಿಕವಿದೆ. ಇಂಡೋನೇಷ್ಯಾದ ಪಶ್ಚಿಮ ಸುಮಾತ್ರದಲ್ಲಿ ಮಿನಾನ್‌ಕಬಾವ್ (Minangkabau) ಎಂಬ ಒಂದು ಜನವರ್ಗವಿದೆಯಂತೆ. ಅವರು ಪರಂಪರಾಗತವಾಗಿ ಮರುಮಕ್ಕತ್ತಾಯ ಪದ್ದತಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಕೇರಳದಲ್ಲಿಯೇ ಮರುಮಕ್ಕತ್ತಾಯ ಪದ್ಧತಿ ಅಪ್ರತ್ಯಕ್ಷವಾದರೂ ಇವರು ಜಗತ್ತಿನಲ್ಲಿಯೇ ಮರುಮಕ್ಕತ್ತಾಯ ವನ್ನು ಅನುಸರಿಸುವ ಪ್ರಮುಖ ಜನವರ್ಗವಾಗಿ ಇಂದಿಗೂ ಪರಿಗಣಿತವಾಗಿದ್ದಾರೆ. ಇದು ಬಹುಶಃ ಪ್ರಾಚೀನ ಕಾಲದಿಂದಲೂ ಕೇರಳ ಮತ್ತು ಇಂಡೋನೇಷ್ಯಾದ ಸಂಪರ್ಕದ ಕುರುಹಾಗಿರಬಹುದು. ಇಂಡೋನೇಷ್ಯಾದ ಇನ್ನೊಂದು ಭಾಗವಾದ ಜಾವಾದಲ್ಲಿ ಪ್ರಚಲಿತ ವಿರುವ ಹರಿಹರ ಪೂಜೆಯೂ ಕೇರಳದ ಶಿವ ವಿಷ್ಣು ಸಂಯೋಗವನ್ನು ನೆನಪಿಸುತ್ತದೆ. ಅಲ್ಲಿ ‘ವಯಙ್’ ಎಂಬ ಹೆಸರಿನಲ್ಲಿ ಪ್ರದರ್ಶನಗೊಳ್ಳುವ ನೆರಳು ಗೊಂಬೆಯಾಟಗಳು ಕೇರಳದ ಗೊಂಬೆಯಾಟಗಳನ್ನು ನೆನಪಿಸುತ್ತದೆ. ಹಾಗೆಯೇ  ಆಧುನಿಕ ವಿಯೆಟ್ನಾಮಿನಲ್ಲಿ ಆಚರಣೆ ಯಲ್ಲಿರುವ ಭಗವತಿ ಪೂಜೆಯೂ ಪ್ರಾಚೀನ ಕೇರಳದ ಸಂಪರ್ಕವನ್ನು ಸೂಚಿಸುತ್ತದೆ.

ಮಲೇಶ್ಯಾ, ಸಿಂಗಾಪುರ ಮೊದಲಾದ ದಕ್ಷಿಣ ಪೂರ್ವ ಏಷ್ಯನ್ ದೇಶಗಳಲ್ಲಿ, ಪಶ್ಚಿಮೇಷ್ಯಾ, ಆಫ್ರಿಕಾ, ಅರಬ್ ರಾಷ್ಟ್ರಗಳಲ್ಲಿ ಮಲಯಾಳಿಗರ ಮಹಾಪೂರವೇ ಇದೆ. ಕೇರಳೀಯರು ಶ್ರಮ ಜೀವನದ ಪರಿಣಾಮವಾಗಿ ಅವರು ನೆಲೆಸಿರುವ ಪ್ರದೇಶದ ಆರ್ಥಿಕ ಪ್ರಗತಿಗೆ ಕಾರಣರಾಗಿದ್ದಾರೆ ಎಂಬುದನ್ನು ಅಧ್ಯಯನಗಳು ಶ್ರುತಪಡಿಸಿವೆ. ಹಾಗೆ ಹೊರಗೆ ದುಡಿಯುವ ಕೇರಳೀಯರು ಕಳುಹಿಸುತ್ತಿದ್ದ ಹಣದಿಂದ ಅವರ ಕೇರಳದಲ್ಲಿರುವ ಬಂಧು ಜನರ ಜೀವನದ ಸ್ಥಿತಿ ಬೇಗನೇ ಸುಧಾರಿಸುವಂತಾಯಿತು.

ಭಾರತದ ಒಳಗೆ ಬೇರೆ ಬೇರೆ ಸ್ಥಳಗಳಿಂದಲೂ ವಿದೇಶಗಳಿಂದಲೂ ಕೇರಳದ ಸಂಸ್ಕೃತಿಯ ಮೇಲೆ ಪ್ರಭಾವಗಳಾಗಿವೆ. ಹಾಗಿದ್ದಾಗಲೂ ಕೇರಳವು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನನ್ಯತೆ ಹಾಗೂ ಸ್ವಂತಿಕೆಯನ್ನು ಸ್ಪಷ್ಟವಾಗಿಯೇ ಉಳಿಸಿಕೊಂಡಿದೆ. ದೀಪಾವಳಿ, ದುರ್ಗಾಪೂಜೆ, ಮಹಾಶಿವರಾತ್ರಿ, ಅಷ್ಟಮಿ, ವಿನಾಯಕ ಚತುರ್ಥಿ ಮೊದಲಾದ ಹಬ್ಬಗಳನ್ನು, ಆಚರಿಸುವುದರ ಮೂಲಕ ಭಾರತದ ಮುಖ್ಯ ಧಾರೆಯಲ್ಲೂ ಸೇರಿಕೊಂಡಿದ್ದಾರೆ. ಅವುಗಳ ಜೊತೆಗೆ ತಮ್ಮದೇ ಆದ ಓಣಂ, ವಿಷು, ತಿರುವಾದಿರ ಮೊದಲಾದ ಅಚ್ಚ ಕೇರಳೀಯವಾದ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಇವುಗಳ ಆಚರಣೆಯ ಮೂಲಕ ಹೊರನಾಡುಗಳಲ್ಲಿ ನೆಲೆಸಿರುವ ಮಲಯಾಳಿಗರನ್ನು ಒಂದೆಡೆ ಸೇರಿಸುವ ಹಾಗೂ ಅನ್ಯ ಮತೀಯರಲ್ಲಿ ಸ್ನೇಹವನ್ನು ಹೆಚ್ಚಿಸಲು ಸಾಧ್ಯವಾಗಿದೆ. ಶೃಂಗರಿಸಿದ ಗಜರಾಜನೊಡನೆ ಚಂಡೆ ವಾದನಗಳು, ಪಂಚ ವಾದ್ಯಗಳ ಮೆರವಣಿಗೆ, ಕಥಕಳಿ, ಓಟಂ ತುಳ್ಳಲ್ ಮೊದಲಾದ ಕಲಾ ರೂಪಗಳ ಪ್ರದರ್ಶನ ಇವುಗಳ ಮೂಲಕ ಕೇರಳದ ದೇವಸ್ಥಾನಗಳ ಜಾತ್ರೆಗಳಿಗೆ ರಂಗೇರುತ್ತದೆ. ಮೆರವಣಿಗೆಗಳ ವೇಳೆ ಪ್ರದರ್ಶಿಸುವ ಸ್ಪರ್ಧಾತ್ಮಕ ಬಣ್ಣದ ಕೊಡೆಗಳು, ಗುರುವಾಯೂರು ದೇವಸ್ಥಾನದ ಆನೆಯೋಟ ಇವೆಲ್ಲ ಕೇರಳದ ಪರಂಪರಾಗತ ಸಾಂಸ್ಕೃತಿಕ ಕುರುಹುಗಳಾಗಿ ಇಂದಿಗೂ ಉಳಿದುಕೊಂಡಿವೆ. ಅಚ್ಚ ಕೇರಳೀಯವೆನ್ನುವ ಅನೇಕ ಆಚರಣಾ ವಿಧಿಗಳು ಕೆ್ರಿಸ್ತ, ಮುಸಲ್ಮಾನರ ಆರಾಧನಾ ಕೇಂದ್ರಗಳಲ್ಲಿ ಏರ್ಪಡುತ್ತವೆ ಎಂಬುದು ಗಮನಾರ್ಹ. ಮಸೀದಿ ಗಳಲ್ಲಿನ ಉತ್ಸವಗಳ ಸಂದರ್ಭದಲ್ಲಿ ಚಂಡೆ ವಾದನ, ನಾದಸ್ವರ ವಾದನಗಳು ರೂಢಿಯಲ್ಲಿವೆ. ಉತ್ಸವಾಚರಣೆಗಳಲ್ಲಿರುವಂತೆ ಪೂಜಾ ವಿಧಾನಗಳಲ್ಲಿ ಹಾಗೂ ಎಲ್ಲಾ ಮತೀಯರ ದೇವಾಲಯಗಳಲ್ಲಿ ಸಾದೃಶ್ಯವನ್ನು ಗುರುತಿಸಬಹುದು.

ಕೇರಳದ ಹಲವು ಅಭಿನಯ ಕಲೆಗಳು ದೇವಾಲಯಗಳ ಆವರಣದಲ್ಲಿಯೇ ಹುಟ್ಟಿ ಬೆಳೆದವುಗಳು. ಆದರೂ ಅವುಗಳಲ್ಲಿ ಅನ್ಯಮತೀಯ ಪ್ರಭಾವವನ್ನು ಗಮನಿಸಬಹುದು. ಕಥಕಳಿ ಸ್ತ್ರೀ ವೇಷಗಳು ಧರಿಸುವ ಉಡುಗೆ, ತೊಡುಗೆಗಳಲ್ಲಿ ಉತ್ತರ ಕೇರಳದ ಮುಸಲ್ಮಾನ ಸ್ತ್ರೀಯರ ಉಡುಗೆ ತೊಡುಗೆಗಳ ಜೊತೆ ಸಾಮ್ಯವಿದೆ. ಕಥಕಳಿಯ ಪ್ರಾರಂಭಿಕ ರೂಪ ಗಳಲ್ಲೊಂದಾದ ಕೃಷ್ಣನಾಟದ ಪರಿಷ್ಕರ್ತೃವಾದ ಕೋಝಿಕೋಡಿನ ಸಾಮೂದಿರಿಯು ತನ್ನ ಪ್ರಜಾ ವರ್ಗಗಳಲ್ಲಿ ಒಂದಾದ ಮುಸ್ಲಿಂ ಸಮುದಾಯಕ್ಕೆ ನಿರ್ಮಿಸಿಕೊಟ್ಟಿರುವ ವಸ್ತ್ರಾಭರಣ ಗಳಿವು. ಸವರ್ಣೀಯರಾದ ಹಿಂದೂ ಸಮುದಾಯಗಳ ಸ್ತ್ರೀಯರ ವೇಷಭೂಷಣಗಳನ್ನು ಕಲಾವಿದರಿಗೆ ಕೊಡಬೇಕಾಗಿಲ್ಲವೆಂದು ಆತ ಆಲೋಚಿಸಿರಬಹುದು ಎನ್ನುವುದೂ ಇಲ್ಲಿ ಉಲ್ಲೇಖಾರ್ಹ. ಕುಂಬಳೆಯ ಆಲಿಚಾಮುಂಡಿ ದೈವವು ಹಿಂದೂ ಮುಸ್ಲಿಂ ಸಮನ್ವಯದ ಉನ್ನತ ಉದಾಹರಣೆಗಳಲ್ಲೊಂದು. ಇವೆಲ್ಲ ಧಾರ್ಮಿಕ ಕಲಾರೂಪಗಳ ಮೇಲೆ ಮುಸ್ಲಿಂ ಸಂಸ್ಕೃತಿಯ ಹೆಜ್ಜೆ ಗುರುತುಗಳು.

ಕೇರಳದ ಹಲವೆಡೆಗಳಲ್ಲಿ ಪ್ರಚಲಿತದಲ್ಲಿರುವ ದೋಣಿಯಾಟಗಳ ಆರಂಭವು ಬಹುತೇಕ ಮತೀಯವೇ ಆಗಿದ್ದರೂ ಕೆಲವೊಮ್ಮೆ ಜಾತಿ ಮತಗಳನ್ನು ಮೀರಿ ಎಲ್ಲರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಎಲ್ಲಾ ಜಾತಿ ಮತಗಳಿಗೂ ಸೇರಿದ ನೂರಾರು ದೋಣಿಗಾರರು ಉತ್ಸಾಹದಿಂದ ದೋಣಿ ಹಾಡುಗಳನ್ನು ಹಾಡುತ್ತಾ ತಾಳಲಯಬದ್ಧವಾಗಿ ಹುಟ್ಟು ಹಾಕುತ್ತಾ ಹಿನ್ನೀರಿನಲ್ಲಿ, ನದಿಗಳಲ್ಲಿ ಹೋಗುವ ದೃಶ್ಯ ಹೃನ್ಮನಗಳಿಗೆ ಮುದ ನೀಡುತ್ತದೆ.

ಕ್ರೈಸ್ತ ಸಮುದಾಯ

ಕೇರಳದಲ್ಲಿ ವಾಸಿಸುವ ವ್ಯಕ್ತಿಗಳಿಗೆ ತಮ್ಮ ಪರಿಸರದ ಹಾಗೂ ಸಂಸ್ಕೃತಿಯ ಜೊತೆಗಿನ ಸಂಬಂಧ ಸುಭದ್ರವಾಗಿದೆ. ಕ್ರೈಸ್ತಮತ, ಇಸ್ಲಾಂ ಮತಗಳ ಅನುಯಾಯಿಗಳೂ ಕೂಡಾ ಕೇರಳದ ಮಣ್ಣಿನ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಇಲ್ಲಿನ ನಿವಾಸಿಗಳೇ ಆಗಿ ಬದಲಾಗಿದ್ದಾರೆ. ತಮ್ಮ ಮತ ಧರ್ಮಗಳಿಗೆ ವಿರೋಧವಲ್ಲದ ಭಾರತೀಯ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಲ್ಲಿ ಈ ಮತೀಯರು ಹಿಂದುಳಿಯಲಿಲ್ಲ. ರೋಮನ್ ಕ್ಯಾಥೋಲಿಕ್ ಸಭೆಯಲ್ಲೂ ಭಾರತೀಕರಣ ಎಂಬ ಪ್ರಸ್ತಾವಕ್ಕೆ ಇತ್ತೀಚಿಗೆ ಹಿಂದಿಲ್ಲದ ಪ್ರಾಶಸ್ತ್ಯ ಲಭ್ಯವಾಗಿದೆ. ಪ್ರೊ. ಪಿ.ಸಿ. ದೇವಸ್ಯ ಅವರ ‘ಕ್ರಿಸ್ತು ಭಾಗವತಂ’ ಎಂಬ ಸಂಸ್ಕೃತ ಮಹಾಕಾವ್ಯವು ರಾಮಾಯಣ, ಮಹಾಭಾರತದಂತಹ ಇತಿಹಾಸ ಕಾವ್ಯಗಳಂತೆ ಯೇಸು ಕ್ರಿಸ್ತನ ಜೀವನ ಕತೆಯನ್ನು ಒಳಗೊಂಡು ಜನಮಾನ್ಯವೆನಿಸಿದೆ. ಹಿಂದೂ ಜನರ ಭಾಷೆಯಾದ ಸಂಸ್ಕೃತವನ್ನು ತಮ್ಮ ಕಾವ್ಯ ಮಾಧ್ಯಮವಾಗಿ ಬಳಸಿಕೊಂಡ ಕ್ರೈಸ್ತರು ಕೇರಳದ ಹಿಂದೂ ಮತ್ತು ಕ್ರೈಸ್ತ ಸಮುದಾಯಗಳ ಸಾಂಸ್ಕೃತಿಕ ಸಮನ್ವಯಕ್ಕೆ ಕಾರಣರಾಗಿದ್ದಾರೆ. ಪವಿತ್ರ ಕುರಾನಿನ ಮಲಯಾಳಂ ಅನುವಾದಕ್ಕೂ ಈ ತೆರನ ಮಹತ್ವವಿದೆ.

ಸಾಹಿತ್ಯ ಪಂಥಗಳು

ಸಾಹಿತ್ಯ, ಭಾಷೆ, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಕೇರಳದ ಕೊಡುಗೆ  ಅನನ್ಯವಾಗಿದೆ. ಕೇರಳೀಯರು ಸಂಸ್ಕೃತಕ್ಕೆ ಕೊಟ್ಟ ಪೂಜ್ಯ ಸ್ಥಾನದಿಂದಾಗಿ ಅದು ಕೇರಳೀಯರ ಭಾಷೆ ಮತ್ತು ಸಾಹಿತ್ಯದ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿದೆ. ಕನ್ನಡ ಸಾಹಿತ್ಯದಂತೆಯೇ ಪ್ರಾಚೀನ ಮಲಯಾಳಂ ಸಾಹಿತ್ಯ ಕೂಡಾ ಸಂಸ್ಕೃತ ಕಾವ್ಯಗಳಾದ ರಾಮಾಯಣ, ಮಹಾಭಾರತ, ಭಾಗವತಗಳನ್ನು ಆಧರಿಸಿಯೇ ಹುಟ್ಟಿಕೊಂಡಿದೆ. ಕನ್ನಡ ಕವಿಗಳಂತೆ ಮಲಯಾಳಂ ಕವಿಗಳೂ ಅವುಗಳನ್ನು ತಮ್ಮ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಮರುಸೃಷ್ಟಿಸಿದ್ದಾರೆ. ಆಧುನಿಕವಾದ ಕುಮಾರನ್ ಆಶಾನ್ ಕೂಡಾ ಜಾತಿ ಮತಗಳ ಭೇದವೆಣಿಸದ ಬೌದ್ಧಮತದ ಪ್ರಭಾವಕ್ಕೆ ಒಳಗಾಗಿದ್ದರು. ಕೇರಳೀಯವಾದ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ಬೌದ್ಧಮತದ ಪ್ರಭಾವವಿದೆ.

ಆಧುನಿಕ ಮಲಯಾಳಂ ಸಾಹಿತ್ಯದ ಎಲ್ಲಾ ನೆಲೆಗಳಲ್ಲಿ ಪಾಶ್ಚಾತ್ಯ ಬರಹಗಾರರ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಬಹುದು. ಕ್ರಿಶ್ಚಿಯನ್ ಮಿಷನರಿಗಳು ಮಲಯಾಳಂ ವ್ಯಾಕರಣ, ನಿಘಂಟುಗಳ ರಚನೆಯ ಮೂಲಕ ಕೊಡುಗೆಗಳನ್ನು ನೀಡಿದ್ದಾರೆ. ಕೇರಳದ ಪ್ರದರ್ಶನ ಕಲೆಗಳಿಗೆ ಅದರಲ್ಲೂ ಮುಖ್ಯವಾಗಿ ಕಥಕಳಿಗೆ ಹೊಸ ಚೈತನ್ಯವನ್ನು ನೀಡಿ ರಾಜಕೀಯವಾದ ಗುಲಾಮಗಿರಿ ಹಾಗೂ ಅಸಮಾನತೆಯ ವಿರುದ್ಧ ಹೋರಾಡಿದ ಕವಿ ವಳ್ಳತ್ತೋಳ್ ನಾರಾಯಣ ಮೇನೋನ್ ಸಾಂಸ್ಕೃತಿಕ ಕೇರಳದ ಜನಜೀವನದ ಮೇಲೆ ಪ್ರಭಾವವನ್ನು ಬೀರಿದ್ದಾರೆ. ಇವರಿಂದಾಗಿ ಕಥಕಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಧಾನ್ಯ ಲಭ್ಯವಾಯಿತು.

ಪೌರಾಣಿಕ ಆಶಯಗಳಿಂದಲೂ ಗಾಂಧಿ, ಲೆನಿನ್ ಮೊದಲಾದವರ ವಿಚಾರಧಾರೆ ಗಳಿಂದಲೂ ಪ್ರಚೋದನೆ ಪಡೆದ ವಳ್ಳತ್ತೋಳರ ಸಾಹಿತ್ಯ ಕೇರಳದಲ್ಲಿ ಹೊಸ ಚೈತನ್ಯಕ್ಕೆ ನಾಂದಿ ಹಾಡಿತು. ಮೊಪಾಸಾಂಗ್, ಆಂಟನ್ ಚೆಕಾವ್, ಮಾಕ್ಸಿಂಗೋರ್ಕಿ, ಇಬ್ಸನ್ ಮೊದಲಾದ ಪಾಶ್ಚಾತ್ಯ ಚಿಂತಕರಿಂದ ಸ್ಪೂರ್ತಿ ಪಡೆದ ಕೇರಳದ ಸಾಹಿತಿಗಳು ಸಾಹಿತ್ಯಗಳ ಮೂಲಕ ಹೊಸ ಒಳನೋಟಗಳನ್ನು ಪ್ರಕಟಿಸಿದರು. ತಗಳಿ ಶಿವಶಂಕರಪಿಳ್ಳೆ, ಎಂ.ಟಿ. ವಾಸುದೇವನ್ ನಾಯರರಂತಹ ಬರಹಗಾರರು ಕೇರಳದ ತರವಾಡು ಸಂಪ್ರದಾಯಗಳ ನಂಬಿಕೆಗಳ ಮೇಲೆ ಹೊಸಬೆಳಕು ಚೆಲ್ಲಿದರು. ಸಾಹಿತ್ಯದಲ್ಲಿ ಸಾಮಾಜಿಕವಾದ ಚಿಂತಾಗತಿಗಳ ಮೇಲೆ ಮಾರ್ಕ್ಸಿಸಂನ ಪ್ರಭಾವ ನಿಚ್ಚಳವಾಗಿದೆ. ಕೇರಳದ ಸಾಹಿತ್ಯ ಹಾಗೂ ರಾಜಕೀಯದ ಮೇಲೆ ಮಾರ್ಕ್ಸಿಸಂ ಮೂಡಿಸಿದ ಪ್ರಭಾವದಿಂದಲೇ ಇಲ್ಲಿನ ಜನಜೀವನ ಹೆಚ್ಚು ಪ್ರಜ್ಞಾ ಪೂರ್ವಕವಾಗಿದೆ.

ಕೇರಳದಲ್ಲಿ ನೆಲೆಯೂರಿದ್ದ ಅನೇಕ ಸಂಪ್ರದಾಯಗಳು ಇಂದು ಇಲ್ಲವಾಗಿವೆ. ಆದರೆ ಜ್ಯೋತಿಷ್ಯಾಸ್ತ್ರ, ಮಂತ್ರವಿದ್ಯೆ ಇವುಗಳಲ್ಲಿ ಹಿಂದೂ ಮತೀಯರ ನಂಬಿಕೆ ಬಲವಾಗಿಯೇ ಇದೆ. ಮುಸಲ್ಮಾನರಲ್ಲೂ ಕ್ರಿಶ್ಚಿಯನ್ನರಲ್ಲೂ ಈ ತೆರನ ನಂಬಿಕೆ ಇದೆ.

ಇತ್ತೀಚಿನ ದಶಕಗಳಲ್ಲಿ ಕೇರಳವು ಸಾಮಾಜಿಕವಾಗಿ ನವಯುಗವನ್ನೇ ಕಂಡಿದೆ. ಕೇರಳದಲ್ಲಿರುವವರೂ ಹೊರನಾಡುಗಳಲ್ಲಿ ನೆಲೆಸಿರುವವರೂ ಸರಳ ಜೀವನವನ್ನು ರೂಢಿಸಿ ಕೊಂಡಿದ್ದಾರೆ. ಹೊರನಾಡುಗಳಲ್ಲಿ ನೆಲೆಸಿರುವ ಕೇರಳೀಯರು ದುಡಿದು ಸಂಪಾದಿಸಿ ತವರುನಾಡಿನ ಅಭಿವೃದ್ದಿಗೆ ಕಾರಣರಾಗಿದ್ದಾರೆ. ರಜಾ ದಿನಗಳಲ್ಲಿ ತವರು ನಾಡಿಗೆ ಕುಟುಂಬ ಸಹಿತ ಬಂದು ನೆಲೆಸುವುದರ ಮೂಲಕ ವಿಭಿನ್ನ ವಿಚಾರಧಾರೆಗಳ, ಸಂಸ್ಕೃತಿಗಳ ವಾಹಕ ರಾಗಿಯೂ ಕೆಲಸ ಮಾಡುತ್ತಿದ್ದಾರೆ. ತಾವು ದುಡಿದು ಬದುಕುವ ನಾಡಿನ ಅನೇಕ ಉತ್ತಮ ಸಂಗತಿಗಳನ್ನು ತಮ್ಮ ನಾಡಿನವರಲ್ಲಿಯೂ ಬೆಳೆಸುವ ಪ್ರಯತ್ನ ಮಾಡುತ್ತಾರೆ. ತಾವು ನೆಲೆಸಿರುವ ನೆಲದಲ್ಲಿ ತಮ್ಮ ಶ್ರಮ ಹಾಗೂ ಬೌದ್ದಿಕ ಸಾಮರ್ಥ್ಯದ ಕಾರಣದಿಂದ ಅಭಿವೃದ್ದಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವು ಕೃಷಿ ಸಂಬಂಧಿ ಕೆಲಸಗಳಿರ ಬಹುದು, ಕಾಷ್ಠಶಿಲ್ಪ ಮೊದಲಾದ ಕಲಾತ್ಮಕ ವಸ್ತುಗಳ ಮೂಲಕವಾಗಿರಬಹುದು. ಇದರಿಂದ ಬದುಕಿನಲ್ಲಿ ಸೌಹಾರ್ದಯುತವಾದ ಸಹಬಾಳ್ವೆ ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶಗಳ ಜನ ನಗರ ಪ್ರದೇಶಗಳ ಕಡೆಗೆ ಹಾಗೂ ಅಲ್ಲಿನ ಸೌಲಭ್ಯಗಳ ಕಡೆಗೆ ಆಕರ್ಷಿತರಾಗಿದ್ದಾರೆ. ಆಧುನಿಕ ವಿದ್ಯಾಭ್ಯಾಸದ ಕಾರಣದಿಂದಾಗಿ ಪ್ರತಿಯೊಂದು ಗ್ರಾಮಗಳಲ್ಲಿಯೂ ನಗರದ ಅನುಕೂಲಗಳು ದೊರೆಯುವಂತೆ ಮಾಡಿಕೊಂಡಿರುವುದು ಗಮನಾರ್ಹ.

ಮದುವೆ ಮೊದಲಾದ ಸಂಪ್ರದಾಯಗಳು ಅಲ್ಲಿನ ಆಚರಣೆಗಳು ಬಹುತೇಕ ನಿರ್ನಾಮ ವಾಗಿವೆ. ಮದುವೆಗಳು ದೇವಾಲಯಗಳಲ್ಲಿ ಸರಳವಾಗಿ ನಡೆಯುತ್ತವೆ. ಮದುವೆಗೆ ಬರುವ ಆಹ್ವಾನಿತರಲ್ಲಿ ಜಾತಿ ಭೇದಗಳು ಮರೆಯಾಗಿವೆ. ಕೇರಳದ ದೇವಾಲಯಗಳು ಬಹುತೇಕ ಎಲ್ಲಾ ವಿಭಾಗದ ಜನರಿಗೂ ಮುಕ್ತವಾಗಿಯೇ ಪ್ರವೇಶವನ್ನು ಕಲ್ಪಿಸಿವೆ.

ಮರುಮಕ್ಕತ್ತಾಯ ಸಂಪ್ರದಾಯ, ಅವಿಭಕ್ತ ಕುಟುಂಬ ವ್ಯವಸ್ಥೆ, ಬಹುಪತ್ನಿತ್ವ ಮೊದಲಾದವುಗಳ ಅಧಃಪತನವು ಕೇರಳದ ಸಾಂಸ್ಕೃತಿಕ ಚರಿತ್ರೆಯ ಅಧ್ಯಾಯವೊಂದಕ್ಕೆ ಮಂಗಳ ಹಾಡಿದಂತಾಗಿದೆ. ಈ ಮೇಲಿನ ಸಂಪ್ರದಾಯಗಳ ಮೂಲಕ ಜಮೀನ್ದಾರಿ ವ್ಯವಸ್ಥೆ ಪ್ರಬಲಗೊಂಡಿತ್ತು. ಇದರ ಪರಿಣಾಮವಾಗಿ ಸಮಾಜದಲ್ಲಿ ಅನಾಚಾರಗಳ ಕಪ್ಪು ಅಧ್ಯಾಯ ಗಳೇ ದೈನಂದಿನ ಪರಿಪಾಠವಾಗಿತ್ತು. ಎನ್.ಎಸ್.ಎಸ್., ಎಸ್.ಎನ್.ಡಿ.ಪಿ. ಯಂತಹ ಸಾಮಾಜಿಕ ಸಂಘಟನೆಗಳು, ಶ್ರೀನಾರಾಯಣಗುರುವಿನಂತಹ ಸಮಾಜ ಸುಧಾರಕರ ನೇತೃತ್ವದ ಕಾರಣದಿಂದ ಸಮಾಜದ ಅನೇಕ ಅನಿಷ್ಟ ಪದ್ಧತಿಗಳು ಕೊನೆಯಾದವು. ಸರಕಾರವು ಬಹುಜನ ಅಭಿಪ್ರಾಯಕ್ಕೆ ಮಣಿದು ಮರುಮಕ್ಕತ್ತಾಯದಂತಹ ಪದ್ಧತಿಗೆ ಅಂತ್ಯ ಹಾಡಿ ಮಕ್ಕತ್ತಾಯ ವನ್ನು ಅನುಸರಿಸುವಂತೆ ಆದೇಶಿಸಿತು. ಬಹುಪತಿತ್ವ, ಬಹುಪತ್ನಿತ್ವಗಳ ಸಂಪ್ರದಾಯಗಳನ್ನು ಇಲ್ಲವಾಗಿಸಿ ಏಕಪತಿತ್ವ, ಏಕಪತ್ನಿತ್ವ, ಕುಟಂಬ ಸಂಪ್ರದಾಯಗಳನ್ನು ಹಿಂದೂ ಮತೀಯರಲ್ಲಿ ನೆಲೆಗೊಳಿಸಿತ್ತು. ಇವುಗಳ ಪರಿಣಾಮವಾಗಿ ಕೇರಳದಲ್ಲಿ ಪ್ರಗತಿಪರವಾದ ಸಮಾಜ ವ್ಯವಸ್ಥೆ ಯೊಂದು ರೂಪುಗೊಂಡಿತು.

ಉಳುವವನೇ ಹೊಲದೊಡೆಯ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಂಡುದರಿಂದಾಗಿ ಕೇರಳದಲ್ಲಿ ಜಮೀನ್ದಾರೀ ವ್ಯವಸ್ಥೆ ಕುಸಿದುಬಿತ್ತು. ಭೂಮಿಯಲ್ಲಿ ಬೆವರು ಸುರಿಸಿ ದುಡಿ ಯುತ್ತಿದ್ದ ವ್ಯಕ್ತಿಗಳಿಗೆ ಭೂಮಿಯ ಮೇಲೆ ಯಾವುದೇ ರೀತಿಯ ಹಕ್ಕಿರಲಿಲ್ಲ. ಜಮೀನ್ದಾರರು ತಮ್ಮ ಸ್ವಾಧೀನವಿದ್ದ ಭೂಮಿಯ ಕಡೆ ಮುಖ ಹಾಕದೆಯೇ ಅದರ ಫಲಗಳನ್ನು ಕುಳಿತಲ್ಲಿಯೇ ಅನುಭವಿಸುತ್ತಿದ್ದರು. ಸ್ವಾತಂತ್ರ್ಯ ನಂತರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭೂಮಿಗೂ ದುಡಿವವನಿಗೂ ಸರಕಾರಕ್ಕೂ ನೇರವಾದ ಸಂಬಂಧ ಏರ್ಪಟ್ಟಿತ್ತು. ಇದರಿಂದ ಐಷಾರಾಮಾಗಿ ಸುಖಲೋಲುಪರಾಗಿ ಜೀವನ ನಡೆಸುತ್ತಿದ್ದ ಜಮೀನ್ದಾರರು, ನಾಡದೊರೆಗಳು ಆರ್ಥಿಕವಾಗಿ ಪ್ರಬಲ ಹೊಡೆತಕ್ಕೊಳಗಾದರು. ಪರಿಣಾಮವಾಗಿ ಜಮೀನ್ದಾರರಲ್ಲಿ, ನಾಡದೊರೆಗಳಲ್ಲಿ ಕೇಂದ್ರೀಕೃತವಾಗಿದ್ದ ಭೂಮಿ  ದುಡಿಯುವವರಲ್ಲಿ ಸಮಾನವಾಗಿ ಹಂಚಿ ಹೋಯಿತು. ಇದು ಕೇರಳದ ಅರ್ಥವ್ಯವಸ್ಥೆಯ ಮೇಲೆ ಹಾಗೂ ಸಾಮಾಜಿಕ ಬದುಕಿನಲ್ಲಿ ಹೊಸ ಆಯಾಮವೊಂದನ್ನು ಸೃಷ್ಟಿಸಿತು. ಜಮೀನ್ದಾರರ ಹಾಗೂ ನಾಡದೊರೆಗಳ ಆಶ್ರಯದಲ್ಲಿ ಇದ್ದ ಅನೇಕ ದೃಶ್ಯಕಲೆಗಳೂ ಜನ ಸಾಮಾನ್ಯರತ್ತ ಹೋಗಲು ಇದು ಕಾರಣವಾಯಿತು. ಕೇರಳದ ಸಾಂಸ್ಕೃತಿಕ ರಂಗದಲ್ಲಿಯೂ ಒಂದು ತೆರನ ಪರಿವರ್ತನೆಗೆ ನಾಂದಿ ಹಾಡಿ ದಂತಾಯಿತು.

ಉತ್ತರ ಕೇರಳದ ಮುಸಲ್ಮಾನರು ಸಾಂಪ್ರದಾಯಕ ಮರುಮಕ್ಕತ್ತಾಯ ಪದ್ಧತಿಯನ್ನು ಅನುಸರಿಸುತ್ತಿದ್ದರು. ಸಾಮಾಜಿಕ ಪರಿವರ್ತನೆಯ ಕಾರಣದಿಂದ ಅವರೂ ಮಕ್ಕತ್ತಾಯ ಪದ್ಧತಿಯನ್ನು ಅನುಸರಿಸಿದರು. ಮುಸಲ್ಮಾನರು ಸಮಾಜದ ಇತರ ಜನವರ್ಗದ ಜತೆ ಒಂದಾಗಿ ಪ್ರಗತಿಪರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬ ಪ್ರಜ್ಞೆ ಸಮುದಾಯದ ನೇತಾರರಲ್ಲಿ ಕಾಣಿಸಿಕೊಂಡಿತು. ಮುಸಲ್ಮಾನರು ಇಂಗ್ಲಿಷ್ ಶಿಕ್ಷಣವನ್ನು ಪಡೆಯಬೇಕಾದ ಅಗತ್ಯವನ್ನು ಮನಗಂಡರು. ವಕ್ಕಂ ಅಬ್ದುಲ್ ಖಾದರ್ ಮೌಲವಿ (೧೮೭೩-೧೯೩೨)ಯಂತಹ ನಾಯಕರು ತಿರುವಿದಾಂಕೂರು ಮುಸ್ಲಿಂ ಸಮುದಾಯದ ಏಳಿಗೆಗಾಗಿ ಶ್ರಮಿಸಿದರು.

ಮುಸಲ್ಮಾನ ಸಮುದಾಯದ ಅಭಿವೃದ್ದಿಗಾಗಿ ಕೇರಳದೆಲ್ಲೆಡೆ ಸಂಘಟನೆಗಳು ಹುಟ್ಟಿ ಕೊಂಡವು. ಧರ್ಮ ನಿರಪೇಕ್ಷವಾದ ಸಾಮಾಜಿಕ ಜೀವನವೊಂದನ್ನು ಕಂಡುಕೊಳ್ಳುವುದು, ಪಾಶ್ಚಾತ್ಯ ಮಾದರಿಯ ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆಯನ್ನು ಸಾಧಿಸುವುದು ಮೊದಲಾದ ಉದ್ದೇಶಗಳು ಸಂಘಟನೆಗಳಿಗಿದ್ದವು. ಮದ್ರಸಗಳಲ್ಲಿ ಕುರಾನ್‌ಗಳನ್ನು ಜೋರಾಗಿ ಓದಿಸುವ ಸಾಂಪ್ರದಾಯಕ ವಿದ್ಯಾಭ್ಯಾಸಕ್ಕೆ ಭಿನ್ನವಾದ ಶಿಕ್ಷಣ ಪದ್ಧತಿಯ ಕಡೆಗೆ ಮುಸ್ಲಿಂ ಸಂಘಟನೆಗಳು ಮನ ಮಾಡಿದವು.

ಮುಸಲ್ಮಾನರ ಸಾಂಸ್ಕೃತಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ದಿಯನ್ನು ಲಕ್ಷ್ಯವಾಗಿರಿಸಿ ೧೯೬೪ರಲ್ಲಿ ಮುಸ್ಲಿಂ ಎಜುಕೇಶನ್ ಸೊಸೈಟಿ ಸ್ಥಾಪಿಸಲಾಯಿತು. ಇದು ಶಾಲಾ, ಕಾಲೇಜು ಗಳನ್ನು ಸ್ಥಾಪಿಸಿ ಅನೇಕ ಮುಸಲ್ಮಾನ ಯುವಕರನ್ನು ಶಿಕ್ಷಣದ ಕಡೆಗೆ ಆಕರ್ಷಿಸುವಂತೆ ಮಾಡಿತು.

ಉಳಿದ ಸಮುದಾಯಗಳಿಗೆ ಹೋಲಿಸಿದರೆ ಮುಸಲ್ಮಾನರು ಸಾಮಾಜಿಕ ಬದಲಾವಣೆಗಳಿಗೆ ಸ್ಪಂದಿಸಿದ್ದು ತುಂಬಾ ನಿಧಾನವಾಗಿ. ಆದರೂ ಧಾರ್ಮಿಕ ವಿಚಾರಗಳಲ್ಲಿ ಇಂದಿಗೂ ಬದಲಾವಣೆ ಸಾಧಿಸಿಲ್ಲ. ಆದರೆ ತಲೆ ಬೋಳಿಸಿ ಗಡ್ಡ ಬಿಡುವುದು, ಬಹುಪತ್ನಿತ್ವ, ಸ್ತ್ರೀಯರಿಗೆ ಶಿಕ್ಷಣ ನಿಷೇಧ ಇತ್ಯಾದಿಗಳಲ್ಲಿ ಬದಲಾವಣೆ ಸಾಧ್ಯವಾಗಿದೆ. ಮುಸಲ್ಮಾನರಲ್ಲಿ ಪುರುಷರು, ಮಹಿಳೆಯರು ಸಾಮಾಜಿಕವಾಗಿ, ರಾಜಕೀಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಹಿಳೆಯರು ಆಧುನಿಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವರದಕ್ಷಿಣೆಯನ್ನು ವಿರೋಧಿ ಸುವವರೂ ಇದ್ದಾರೆ. ಮಸೀದಿಗಳಲ್ಲಿ ಪ್ರಾರ್ಥನಾ ವೇಳೆ ಮಹಿಳೆಯರಿಗೂ ಭಾಗವಹಿಸಲು ಅವಕಾಶ ನೀಡಬೇಕೆಂದು ವಾದಿಸುವವರೂ ಮುಸಲ್ಮಾನರಲ್ಲಿ ಇದ್ದಾರೆ. ಕೆಲವು ಪ್ರದೇಶಗಳಲ್ಲಿ ಮುಸಲ್ಮಾನ ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಇದು ಮುಸಲ್ಮಾನರ ವಿಷಯದಲ್ಲಿ ಕ್ರಾಂತಿಕಾರಕವಾದ  ಬದಲಾವಣೆಯೇ ಹೌದು. ಮುಸಲ್ಮಾನರು ಸಾರ್ವಜನಿಕವಾಗಿ ಧರಿಸುವ ಉಡುಗೆ ತೊಡುಗೆಗಳಲ್ಲಿ ಹಾಗೂ ಅವರ ಮದುವೆ ಹಾಗೂ ಇನ್ನಿತರ ಧಾರ್ಮಿಕ ಸಮಾರಂಭಗಳಲ್ಲಿ ಕೇರಳೀಯ ಎನ್ನಬಹುದಾದ ಅನೇಕ ಸಾಂಸ್ಕೃತಿಕ ಸಂಗತಿಗಳನ್ನು ಅಳವಡಿಸಿಕೊಂಡಿದ್ದಾರೆ.

ಕೇರಳದ ಕೃಷಿಕರು ಆರ್ಥಿಕವಾಗಿ ಸಬಲರಾಗಿದ್ದಾರೆ. ನೇಗಿಲು ನೊಗಗಳನ್ನು ಹೊತ್ತು  ನಡೆಯುವ ಸಾಂಪ್ರದಾಯಿಕ ಉಳುಮೆಗೆ ಬದಲಾಗಿ ಯಂತ್ರಗಳನ್ನು ಬಳಸಿ ಉಳುಮೆ ಮಾಡುವುದು ಸಾಧ್ಯವಾಗಿದೆ. ಸೊಪ್ಪು ಗೊಬ್ಬರಗಳಿಗೆ ಬದಲಾಗಿ ರಾಸಾಯನಿಕ ಗೊಬ್ಬರ ಗಳನ್ನು ಬಳಸಲಾರಂಭಿಸಿದ್ದು, ಬೆಟ್ಟ ಗುಡ್ಡಗಳನ್ನು ಕಡಿದು ಕೃಷಿ ಯೋಗ್ಯ ಸ್ಥಳಗಳನ್ನಾಗಿ ಮಾಡಿ ಅಭಿವೃದ್ದಿ ಸಾಧಿಸಿದ್ದು ಇದೆಲ್ಲ ಕೇರಳದ ಆರ್ಥಿಕ ರಂಗದಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ. ಕೇರಳದ ಮುಖ್ಯ ಬೆಳೆ ಭತ್ತ. ಅಲ್ಲದೆ ಏಲಕ್ಕಿ, ಚಹಾ, ಕಾಫಿ, ರಬ್ಬರ್ ಕರಿಮೆಣಸು ಇತ್ಯಾದಿಗಳನ್ನು ಪ್ರಮುಖವಾಗಿ ಬೆಳೆಯುತ್ತಾರೆ. ಭಾರತಕ್ಕೆ ವಿದೇಶಿ ನಾಣ್ಯಗಳನ್ನು ತರುವಲ್ಲಿ ಈ ಬೆಳೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಕೇರಳದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪರಿವರ್ತನೆ ಕಾಣಲು ಕೃಷಿ ಕೆಲಸಗಳಲ್ಲಾದ ಬದಲಾವಣೆಯೂ ಒಂದು ಕಾರಣವಾಗಿದೆ.

ನೀರಾವರಿ ಯೋಜನೆಗಳು, ಜಲ ವಿದ್ಯುತ್ ಯೊಜನೆಗಳ ಪರಿಣಾಮವಾಗಿ ಕೇರಳದ ಕೃಷಿ ಪ್ರದೇಶ ಹೆಚ್ಚಾಗಿದೆ. ಬರಡು ಭೂಮಿ ಎಂಬ ಜಾಗವೇ ಇಲ್ಲವಾಗಿ ಎಲ್ಲೆಡೆ ಹಸುರು ವ್ಯಾಪಿಸಿದೆ. ಈ ಯೋಜನೆಗಳ ಜೊತೆಗೆ ಪ್ರವಾಸಿ ಕೇಂದ್ರಗಳೂ ಹೆಚ್ಚಿವೆ. ಆಣೆಕಟ್ಟುಗಳ ಸಮೀಪ ಪ್ರವಾಸಿ ತಾಣಗಳು ದೇಶೀಯರನ್ನು, ವಿದೇಶಿಯರನ್ನು ಆಕರ್ಷಿಸಿ ಆರ್ಥಿಕವಾಗಿ ಕೇರಳಕ್ಕೆ ಹೆಚ್ಚಿನ ಬಲ ನೀಡಿವೆ. ಪ್ರವಾಸಿಗರ ಕಾರಣದಿಂದಾಗಿ ಇಲ್ಲಿನ ಅನೇಕ ವಸ್ತುಗಳಿಗೆ ಕರಕುಶಲ ಸಾಮಗ್ರಿಗಳಿಗೆ, ಇತರೆ ಉತ್ಪನ್ನಗಳಿಗೆ, ಕಲೆಗಳಿಗೆ ವಿಶೇಷ ಬೇಡಿಕೆ ಪ್ರಾಪ್ತವಾಗಿದೆ. ಆ ಮೂಲಕ ದೊರೆತ ಅಂತರ್‌ರಾಷ್ಟ್ರೀಯ ಪ್ರಸಿದ್ದಿಯಿಂದ ಅಮೆರಿಕ, ಕೆನಡಾ ದೇಶಗಳ ಆರ್ಥಿಕ ನೆರವಿನಿಂದ ಶಬರಿಗಿರಿ, ಇಡುಕ್ಕಿ ಮೊದಲಾದ ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ. ಇದರಿಂದ ವ್ಯವಸಾಯ ಕ್ಷೇತ್ರದಲ್ಲಿ ಕೇರಳ ಹೆಚ್ಚಿನ ಪ್ರಗತಿ ಸಾಧಿಸುವುದು ಸಾಧ್ಯವಾಗಿದೆ. ಹಾಗೆಯೇ ನಾರ್ವೆ, ಸ್ವೀಡನ್ ದೇಶಗಳ ನೆರವಿನಿಂದ ಮೀನುಗಾರಿಕೆ, ಹೈನುಗಾರಿಕೆಯಲ್ಲಿಯೂ ವಿಶೇಷ ಪ್ರಗತಿ ಸಾಧಿಸಿದೆ.