ಭಾರತ ದೇಶದ ನೈಋತ್ಯಕ್ಕಿರುವ ಪುಟ್ಟ ರಾಜ್ಯ ಕೇರಳ. ಒಂದೆಡೆ ಸಹ್ಯಾದ್ರಿ ಪರ್ವತ ಶ್ರೇಣಿಗಳು, ಇನ್ನೊಂದೆಡೆ ಅರಬ್ಬಿ ಸಮುದ್ರವು ಇದನ್ನು ಕಾಪಾಡುತ್ತದೆ. ಹಸಿರು ಕೊಡೆ ಹಿಡಿದು ನಿಂತಿರುವ ತೆಂಗುಗಳು ವಿಶಾಲವಾಗಿ ಹರಡಿರುವ ಹೊಲಗಳು, ಎಡೆಯರಿತು ಬೆಳೆದ ಕಾಡುಗಳು ಇತ್ಯಾದಿಗಳಿಂದಾಗಿ ನೀಲಾಕಾಶದ ಕೆಳಗೆ ಹಾಸಿದ ಬಾಳೆಲೆಯಂತೆ ಎಂದು ಕೇರಳವನ್ನು ಕುರಿತು ಹೇಳುವುದಿದೆ. ಬಹುತೇಕ ಎಲ್ಲೆಡೆಯೂ ಸ್ವಚ್ಛ. ಇದು ಕೇರಳದ ಪ್ರಕೃತಿ.

ಕೇರಳದ ಚರಿತ್ರೆಗೆ ಬಹಳ ಪ್ರಾಚೀನತೆಯಿದೆ. ಮಹಾಭಾರತದಲ್ಲಿಯೂ ಕೇರಳದ ರಾಜರನ್ನು ಕುರಿತು ಪ್ರಸ್ತಾಪಿಸಲಾಗಿದೆ. ರಘು ಚಕ್ರವರ್ತಿಯ ಕುದುರೆಗಳ ಸೈನ್ಯ ಕೇರಳದ ವರೆಗೂ ಬಂದುದಾಗಿ ರಘುವಂಶದಲ್ಲಿ ವರ್ಣಿಸಲಾಗಿದೆ. ಪಂಪನು ತನ್ನ ಕಾವ್ಯದಲ್ಲಿ ಕೇರಳದ ಮಹಿಳೆಯರ ಬಗೆಗೆ ಹೇಳಿದ್ದಾನೆ. ಪ್ರಾಚೀನ ಕಾಲದಲ್ಲಿ ವಿದೇಶಿ ಪ್ರವಾಸಿಗರು ಕೇರಳವನ್ನು ಸಂದರ್ಶಿಸಿದ ಬಗೆಗೆ ಅವರ ಬರಹಗಳಿಂದ ತಿಳಿದು ಬರುತ್ತದೆ.

ಕೇರಳಕ್ಕೆ ಮಲಯಾಳ ಎಂದೂ ಮಲಬಾರ್ ಎಂದೂ ಹೆಸರುಗಳಿವೆ. ಮಲಯಾಳಂ ದೇಶನಾಮವಷ್ಟೇ ಅಲ್ಲ, ಭಾಷೆಯ ಹೆಸರು ಕೂಡ ಆಗಿದೆ. ಮಧ್ಯಕಾಲದಿಂದ ಮಲಯಾಣ್ಮ ಎಂಬ ಹೆಸರನ್ನು ಹೇಳುತ್ತಾ ಬಂದಿದ್ದರು. ಕೇರಳದ ಭಾಷೆ ಎಂಬ ಅರ್ಥದಲ್ಲಿ ಕೈರಳೀ ಎಂದೂ ಇದಕ್ಕೆ ಹೆಸರಿದೆ.

ನೆಲದ ಗುಣ

ಕೇರಳವೆಂದರೆ ಇತರರಿಗೆ ಮೊದಲಿಗೆ ನೆನಪಿಗೆ ಬರುವುದು ಕಥಕಳಿ, ಓಣಂ, ಶಂಕರಾಚಾರ್ಯ, ದೋಣಿಯಾಟ, ಹಿನ್ನೀರು, ಸಿನಿಮಾ, ಇತ್ಯಾದಿ ವಿಚಾರಗಳೇ ಆಗಿರುತ್ತವೆ. ಕೇರಳವನ್ನು ಹೆಚ್ಚು ಹತ್ತಿರದಿಂದ ಬಲ್ಲವರಿಗಾದರೆ ನಾಯರ್ ಮತ್ತು ನಂಬೂದಿರಿಗಳು, ಮಾಪಿಳ್ಳೆ ಮುಸ್ಲಿಮರು ಮತ್ತು ಸಿರಿಯನ್ ಕ್ರಿಶ್ಚಿಯನರು, ತರವಾಡು ಮನೆಗಳ  ಅವಿಭಕ್ತ ಕುಟುಂಬಗಳು, ಗುರುವಾಯೂರಿನ ಶ್ರೀ ಕೃಷ್ಣ ದೇವಾಲಯ, ಶಬರಿಮಲೆ, ಶ್ರೀ ನಾರಾಯಣ ಗುರು ಮತ್ತು ರಾಜಕೀಯವಾಗಿ ಚುನಾವಣೆಯಲ್ಲಿಯೂ ಮೇಲುಗೈ ಪಡೆದ ಕಮ್ಯುನಿಸಂ ಇತ್ಯಾದಿಗಳು. ಪ್ರಪಂಚದ ಎಲ್ಲೆಡೆಯಲ್ಲಿಯೂ ಕೇರಳೀಯರು ಇಂದು ವ್ಯಾಪಿಸಿದ್ದಾರೆ. ಅಲ್ಲೆಲ್ಲ ಅವರು ಸ್ವಸಾಮರ್ಥ್ಯಕ್ಕೆ, ಕಠಿಣ ದುಡಿಮೆಗೆ ಹೆಸರಾಗಿದ್ದಾರೆ. ಈ ಎಲ್ಲಾ ಗುಣಗಳಿದ್ದರೂ ಅವರು ಹುಟ್ಟಿದ ಊರಿನ ಬಗೆಗೆ ಹಾಗೂ ರಾಜ್ಯದ ಬಗೆಗೆ ವಿಶೇಷ ಒಲವುಳ್ಳವರಾಗಿದ್ದಾರೆ. ಓಣಂ, ಕ್ರಿಸ್‌ಮಸ್, ವಿಷು ಮೊದಲಾದ ಹಬ್ಬಗಳ ಸಂದರ್ಭದಲ್ಲಿ ಕೇರಳೀಯರು ಯಾವ ದೇಶದಲ್ಲಿಯೇ ಇರಲಿ ತಮ್ಮ ತವರೂರಿಗೆ ಬಂದೇ ಬರುತ್ತಾರೆ. ನಾಡಿನ ಸಂಸ್ಕೃತಿಯ ಬಗೆಗೆ ಆ ತೆರನಾದ ಪ್ರೀತಿ, ಅಭಿಮಾನ ಅವರಿಗೆ. ಕೇರಳೀಯರು ತಮ್ಮ ಬೌದ್ದಿಕ ಸಾಮರ್ಥ್ಯದಿಂದ, ದುಡಿಮೆಯ ಪ್ರವೃತ್ತಿಯಿಂದ ಹೊರನಾಡಿನ ಜನರೊಂದಿಗೆ ಬೆರೆತು ಬಾಳುತ್ತಾರೆ. ಅವರಿಗೆ ಜಾತಿಯ ಮಿತಿಗಳು, ಮೇರೆಗಳೂ ಇರುವುದಿಲ್ಲ. ಇದುವೇ ಕೇರಳೀಯರ ವಿಶಿಷ್ಟ ಗುಣ. ಅವರು ಬದುಕುವ ನಗರಗಳಲ್ಲಿ ಒಂದಕ್ಕಿಂತ ಹೆಚ್ಚಿನ ಮಲಯಾಳಿಗರ ಸಂಘಗಳನ್ನು ಮಾಡಿಕೊಂಡು ತಮ್ಮ ನೆಲದ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರುಗಳಿಗೆ ಉಳಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಮಾನ್ಯವಾಗಿ ಇತರರು ಕೂಡಾ ಗಮನಿಸುವಂತೆ ಕೇಂದ್ರ ಸರಕಾರದ ಸೇವೆಗಳಲ್ಲಿ ಮೇನೋನ್‌ಗಳು, ಪಿಳ್ಳೆಗಳು, ನಾಯರ್‌ಗಳು ಹೆಚ್ಚು ಪ್ರಮಾಣದಲ್ಲಿರುವುದನ್ನು ಕಾಣಬಹುದು. ಭಾರತದ ಮುಖ್ಯ ನಗರಗಳಾದ ಬೆಂಗಳೂರು, ಕೊಲ್ಕತ್ತಾ, ಮುಂಬೈ, ಚೆನ್ನೈ ಹಾಗೂ ಅರೇಬಿಯಾದ ನಗರಗಳಲ್ಲಿನ ಪ್ರಮುಖ ಮಾರುಕಟ್ಟೆಗಳಲ್ಲಿ ಮಲಬಾರಿನ ಮಾಪಿಳ್ಳೆ ಮುಸ್ಲಿಮರು ಪ್ರಮುಖ ವ್ಯಾಪಾರಿಗಳಾಗಿದ್ದಾರೆ. ಜರ್ಮನಿ, ಅಮೇರಿಕಾ ಸಂಪತ್ತು ಕೇರಳಕ್ಕೆ ಹರಿದು ಬರುವಲ್ಲಿ ತಿರುವಿದಾಂಕೂರು ಕ್ರಿಶ್ಚಿಯನರ ಪಾತ್ರ ಮಹತ್ವದ್ದಾಗಿದೆ. ಇವುಗಳ ಜೊತೆಗೆ ಇತ್ತೀಚಿನ ದಿವಸಗಳಲ್ಲಿ ಸಾಮಾಜಿಕವಾಗಿ ಹಿಂದುಳಿದಿದ್ದ ಈಳವರು ಮತ್ತು ದಲಿತರು ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಸಾಮಾಜಿಕವಾಗಿ ಪ್ರಗತಿ ಸಾಧಿಸಿದ್ದು ಕೂಡ ಗಮನಾರ್ಹವಾಗಿದೆ.

ಫ್ಯೂಡಲ್ ಸಂಸ್ಕೃತಿ

ಸಾಮಾನ್ಯವಾಗಿ ಕೇರಳದ ಜನರು ಎತ್ತರವೂ ಅಲ್ಲದ ಗಿಡ್ಡವೂ ಅಲ್ಲದ ಮೈಕಟ್ಟುಳ್ಳವರು. ಕಪ್ಪು ಅಲ್ಲದ ಬಿಳಿಯೂ ಅಲ್ಲದ ಮೈ ಚರ್ಮವುಳ್ಳವರು. ಇವರು  ಬುಡಕಟ್ಟು ಜನಾಂಗವನ್ನು ಹೊರತು ಪಡಿಸಿದ ಜನಾಂಗಗಳ ಸಮ್ಮಿಶ್ರ ಜನವರ್ಗದವರು. ಕೇರಳೀಯರ ಪೂರ್ವಜರು ಬೇರೆ ಬೇರೆ ಕಾಲಗಳಲ್ಲಿ ಕೇರಳಕ್ಕೆ ಬಂದು ನೆಲೆ ನಿಂತವರು. ಬೆಟ್ಟ, ಪರ್ವತಗಳನ್ನು ಹತ್ತಿಯೋ, ಇಳಿದೋ ಅಥವಾ ಸಮುದ್ರದ ಅಲೆಗಳೊಡನೆ ಹೋರಾಡಿ ಬಂದವರೋ ಆಗಿದ್ದರು. ಹಾಗೆ ಬಂದು ನದೀ ತೀರಗಳಲ್ಲಿ, ಕಾಡುಗಳ ಕನ್ನೆ ನೆಲದಲ್ಲಿ ನೆಲೆ ನಿಂತರು. ಕ್ರಮೇಣ ಸಮತಟ್ಟಾದ ಭೂ ಪ್ರದೇಶಗಳಲ್ಲಿ ಭತ್ತ ಮೊದಲಾದ ಧಾನ್ಯಗಳ ಕೃಷಿಗಳನ್ನು ಆರಂಭಿಸಿದರು. ತಾಂತ್ರಿಕವಾಗಿ ಪ್ರಗತಿ ಸಾಧಿಸಿ ನೆಲೆ ನಿಂತ ಆರ್ಯ ಜನಾಂಗದವರು ಮತ್ತು ಅವರ ಜೊತೆಗೆ ಬದುಕುತ್ತಿದ್ದ ಸ್ಥಳೀಯರು ಕೇರಳದ ಅಧ್ಯಯನಕ್ಕೆ ಕಾರಣರಾದರು. ಅವರು ಜಾತಿ ಆಧಾರಿತ ಫ್ಯೂಡಲ್ ಕೃಷಿ ಸಮಾಜವನ್ನು ಹುಟ್ಟು ಹಾಕಿದರು. ಸ್ಥಳೀಯರನ್ನು ಜೀತದಾಳುಗಳಂತೆ ದುಡಿಸಿಕೊಂಡರು. ಅವರನ್ನು ದಮನ ಮಾಡಿದರು. ಅಲ್ಲದೆ ಬೆಟ್ಟಗುಡ್ಡಗಳತ್ತ ಹೋಗಿ ನೆಲೆಸುವಂತೆ ಮಾಡಿದರು. ಬಳಿಕ ಈ ಫ್ಯೂಡಲ್ ದೊರೆಗಳು ಕರಿಮೆಣಸು ಮೊದಲಾದ ಸಾಂಬಾರ ಪದಾರ್ಥಗಳನ್ನು ಅರಸುತ್ತಾ ಬಂದ ಕಡಲು ಕಳ್ಳರನ್ನು, ಜ್ಯೂಗಳನ್ನು, ಗ್ರೀಕ್, ರೋಮನ್ ಹಾಗೂ ಸಿರಿಯಾದ ಕ್ರಿಶ್ಚಿಯನ್ನರನ್ನು ಅರಬ್ ರಾಷ್ಟ್ರದ ಮುಸಲ್ಮಾನರನ್ನು ಹಾಗೂ ಯುರೋಪಿಯನ್ನರನ್ನು ಸ್ವಾಗತಿಸಿದರು. ಹಾಗಾಗಿ ಪಾರಂಪರಿಕವಾದ ವಾಣಿಜ್ಯೋದ್ಯಮ ಕೂಡಾ ಇದೆ ಫ್ಯೂಡಲ್ ಸಮಾಜದ ಚೌಕಟ್ಟಿನಲ್ಲಿಯೇ ರೂಪು ಪಡೆದು ಶತಮಾನಗಳ ಕಾಲ ಜೀವಂತವಾಗುಳಿಯಿತು. ಕೃಷಿ ಉತ್ಪನ್ನಗಳು, ಕಡಲು ಉತ್ಪನ್ನಗಳ ವಿಧಾನದ ಕಾರಣದಿಂದಾಗಿ ರಾಜಕೀಯ ಬದಲಾವಣೆಗಳ ಪರಿಣಾಮವಾಗಿಯೂ, ಈ ಫ್ಯೂಡಲ್ ವ್ಯವಸ್ಥೆ ಬದಲಾಗಿರಲಿಲ್ಲ. ಒಂದೆಡೆ ವ್ಯಾಪಾರಕ್ಕೆ ಬಂದ ವಿದೇಶಿಯರನ್ನು ಫ್ಯೂಡಲ್ ದೊರೆಗಳು ಆತ್ಮೀಯವಾಗಿ ಸತ್ಕರಿಸಿದರಲ್ಲದೆ ಅವರ ಧರ್ಮ ಪ್ರಚಾರಕ್ಕೆ ಅವಕಾಶವನ್ನು ಮಾಡಿಕೊಟ್ಟರು. ಇನ್ನೊಂದೆಡೆ ಸ್ಥಳೀಯರಾದ ಬುಡಕಟ್ಟು ಜನರನ್ನು ಆರ್ಥಿಕ ವಾಗಿ ಶೋಷಣೆ ಮಾಡುತ್ತಾ ಅವರನ್ನು ದಮನ ಮಾಡಲೆತ್ನಿಸಿದರು. ಅಲ್ಲದೆ ಸಾಮಾಜಿಕವಾಗಿ ಅವರನ್ನು ಬಹಿಷ್ಕರಿಸಿದರು. ಹೀಗೆ ಕೇರಳದ ಚರಿತ್ರೆಯು ಇಂತಹ ಸಂಕೀರ್ಣ ಹಾಗೂ ಸುರಕ್ಷಿತ ಸಮಾಜದ ನೆಲೆಯಿಂದ ಆರಂಭವಾಗುತ್ತದೆ. ಇದು ಮೂಲತಃ ಭಾರತದ ಅದರಲ್ಲೂ ಪಶ್ಚಿಮ ಏಷ್ಯಾದ ಜನಜೀವನದ ಪ್ರಭಾವದಿಂದಲೇ ರೂಪುಗೊಂಡುದು. ಬಹುವರ್ಣಗಳ ಸೆಮಿಟಿಕ್‌ಸಮಾಜ ಮತ್ತು ಸಂಸ್ಕೃತಿಯಿಂದ ತೇಪೆ ಹಾಕಿ ಅಲಂಕರಿಸಿದ ಭಾರತೀಯ ಸಮಾಜದ ಪ್ರಾದೇಶಿಕ ವೈಶಿಷ್ಟ್ಯವೂ ನಮ್ಮಲ್ಲಿದೆ.

ಏಕರೂಪದ ಜೀವನ ಶೈಲಿ

ಇಂದು ಕೇರಳೀಯರ ನಡವೆ ಮುಸಲ್ಮಾನರನ್ನು, ಕ್ರಿಶ್ಚಿಯನ್ನರನ್ನು, ಹಿಂದುಗಳನ್ನು ಪ್ರತ್ಯೇಕವಾಗಿ ಗುರುತಿಸುವುದು ಕಷ್ಟ. ಹಾಗೆಯೇ ಹಿಂದೂಗಳ ನಡುವೆ ನಾಯರ್, ನಂಬೂದಿರಿ, ಈಳವರನ್ನು ಪ್ರತ್ಯೇಕವಾಗಿ ಗುರುತಿಸುವುದು ಕಷ್ಟ. ಅರ್ಧ ಶತಮಾನಕ್ಕೆ ಹಿಂದಾಗಿದ್ದರೆ ಇಂತಹ ಪ್ರತ್ಯೇಕತೆಗಳನ್ನು ಅವರವರ ನಂಬಿಕೆ, ಬದುಕಿನ ಶೈಲಿ, ಉಡುಗೆ ತೊಡುಗೆ ಮತ್ತು ಗುಣ ಸ್ವಭಾವಗಳ ನೆಲೆಯಿಂದ ಕಂಡುಕೊಳ್ಳಬಹುದಾಗಿತ್ತು. ಸ್ಥಳೀಯರಾದ ಮುಸಲ್ಮಾನರು ತಲೆಕೂದಲು ಬೋಳಿಸಿ ಗಡ್ಡ ಬೆಳೆಸಿರುತ್ತಿದ್ದರು. ಬಣ್ಣದ ಲುಂಗಿಯನ್ನು ಉಟ್ಟುಕೊಳ್ಳುತ್ತಿದ್ದರು. ಅವರ ಹೆಂಗಸರು ಮುಖ ಮರೆಸಿಕೊಳ್ಳಲು ‘ತಟ್ಟಮ್’ನ್ನು ಉಪಯೋಗಿಸುತ್ತಿದ್ದರು. ಸಿರಿಯನ್ ಕ್ರಿಶ್ಚಿಯನ್‌ರು ಸಂತ ಥೋಮಸನ ಶಿಷ್ಯರ ಸಂತತಿಯವರಂತೆ ಬಟ್ಟೆ ತೊಟ್ಟುಕೊಳ್ಳುತ್ತಿದ್ದರು. ಹೆಚ್ಚು ಕಡಿಮೆ ನಾಯರ್ ಜನರಂತೆ ಇರುವ ಉಡುಗೆ ತೊಡುಗೆ ಇವರದಾದರೂ ಎದೆಯಲ್ಲಿ ಶಿಲುಬೆಗೇರಿದ ಯೇಸುವಿನ ಸಂಕೇತವನ್ನು ಧರಿಸುತ್ತಿದ್ದರು. ಅವರ ಮಹಿಳೆಯರು ಪಂಚೆಯನ್ನು ವಿಶಿಷ್ಟವಾಗಿ ಉಡುತ್ತಿದ್ದು, ಕೂದಲನ್ನು ಬೀಸಣಿಗೆ ಆಕಾರದಲ್ಲಿ ಕಟ್ಟಿಕೊಳ್ಳುತ್ತಿದ್ದರು. ಹಿಂದೂಗಳಲ್ಲಿ ನಂಬೂದಿರಿ ಬ್ರಾಹ್ಮಣರು ಸಮಾಜದ ತುರಾಯಿಯಂತಿದ್ದರು. ಅವರೇ ಕ್ಷತ್ರಿಯರಿಗೆ ಮತ್ತು ಸಾಮಂತ ಮುಖ್ಯಸ್ಥರುಗಳಿಗೆ ನಿಯಮಗಳನ್ನು ರೂಪಿಸುತ್ತಿದ್ದವರು. ಅವರ ಸಾಮಾಜಿಕ ಜೀವನ ದೇವಸ್ಥಾನಗಳನ್ನು ಕೇಂದ್ರೀಕರಿಸಿತ್ತಾದರೂ ಅವರು ಬಿಡುವಿನ ವೇಳೆಗಳಲ್ಲಿ ಬೌದ್ದಿಕ ಹಾಗೂ ಕಲಾತ್ಮಕ ಚಟುವಟಿಕೆಗಳಲ್ಲಿ ನಿರತರಾಗಿರುತ್ತಿದ್ದರು.

ಶ್ರೀಮಂತ ನಾಯರುಗಳು ಅವಿಭಕ್ತ ಕುಟುಂಬದ ತರವಾಡು ಮನೆಗಳಲ್ಲಿ ವೈಭವ ಹಾಗೂ ಆಡಂಬರದ ಜೀವನ ನಡೆಸುತ್ತಿದ್ದರು. ಒಂದು ತರವಾಡು ಮನೆಯಲ್ಲಿ ಏನಿಲ್ಲ ವೆಂದರೂ ನೂರಕ್ಕೂ ಮಿಕ್ಕಿದ ಜನರಿರುತ್ತಿದ್ದರು. ಕವಿಗಳು, ಕಲಾವಿದರು ರಾಜಾಶ್ರಯ ಪಡೆದು ಅವರ ಆಸ್ಥಾನದಲ್ಲಿ ಬೌದ್ದಿಕ ವಾದ ವಿವಾದಗಳನ್ನು ನಡೆಸುತ್ತಿದ್ದರು. ಶ್ರೀಲಂಕಾದ ಇಝಮ್ (Izzham)ನಿಂದ ವಲಸೆ ಬಂದ ಈಳವರು ಹೆಂಡ ತೆಗೆಯುವುದನ್ನೇ ಮುಖ್ಯ ವೃತ್ತಿಯಾಗಿರಿಸಿಕೊಂಡಿದ್ದರು. ಇವರನ್ನು ಕೇರಳದ ಜಾತಿ ವ್ಯವಸ್ಥೆಯಿಂದ ಹೊರಗೆ ಇರಿಸಲಾಗಿತ್ತು. ಅವರಲ್ಲೂ ಕೆಲವರು ಶ್ರೀಮಂತ ಜಮೀನ್ದಾರರು, ವಿದ್ವಾಂಸರು, ವೈದ್ಯರು ಮತ್ತು ಹೋರಾಟಗಾರರು ಆಗಿ ಹೋಗಿದ್ದಾರೆ. ಚೆರುಮರು ಮತ್ತು ಪುಲಯರು ಇವರೂ ಜಾತಿ ಸಮಾಜದಿಂದ ಹೊರಗೇ ಉಳಿದಿದ್ದರು. ಅವರಿಗೆ ಬಿಳಿಯ ಧೋತಿ ಉಡುವುದಾಗಲಿ ಸಾರ್ವಜನಿಕ ರಸ್ತೆಗಳಲ್ಲಿ ನಡೆಯುವುದಕ್ಕಾಗಲಿ ಆಸ್ಪದವಿರಲಿಲ್ಲ. ಅವರು ಹಾಗೆ ಮಾಡಿದರೆ ಸಮಾಜದ ಶಾಂತಿ, ಸಮಾಧಾನಗಳು ಹದಗೆಡುತ್ತಿದ್ದವು ಎಂಬ ನಂಬಿಕೆ ಅವರಲ್ಲಿತ್ತು. ಸಾಮಾಜಿಕ ಕ್ರಾಂತಿಯ ಬಿರುಗಾಳಿಗೆ ಸಿಲುಕಿ ಇವೆಲ್ಲ ಇಂದು ನಾಶವಾಗಿದೆ.

ಜಾತಿ ಪದ್ಧತಿಯ ಗೈರು ಹಾಜರಿ

ಶಿಕ್ಷಣ, ರಾಜಕಾರಣ, ಆಧುನಿಕ ರಂಗ ಚಟುವಟಿಕೆಗಳ ಪರಿಣಾಮವಾಗಿ ಜಾತಿ ಪದ್ಧತಿಯು ಇಂದು ಬಹುತೇಕ ನಾಶವಾಗಿದೆ. ಆಡಳಿತ ನಡೆಸುತ್ತಿದ್ದ ಫ್ಯೂಡಲ್ ಜನರ ಮನೆಗಳು ಹರಿದು ಹಂಚಿ ಹೋಗಿವೆ. ಅವುಗಳ ಜಾಗದಲ್ಲಿ ಈಗ ವಾಣಿಜ್ಯೋದ್ಯಮಿಗಳು, ಬಿಳಿ ಕಾಲರಿನ ಅಧಿಕಾರಿಗಳೂ ಪ್ರತ್ಯಕ್ಷವಾಗಿದ್ದಾರೆ. ರಾಜ್ಯದ ಹೊರಗಡೆಗೆ ದುಡಿಯಲು ಅನೇಕ ಕೇರಳೀಯರು ಹೋಗಿದ್ದಾರೆ. ಅವರು ದುಡಿದು ತಮ್ಮ ಹುಟ್ಟೂರಿಗೆ ಹಣದ ಹೊಳೆಯನ್ನು ಹರಿಸುತ್ತಿದ್ದಾರೆ. ಇದೆಲ್ಲವೂ ಅವರಿಗೆ ಪರಂಪರಾಗತ ಸಂಸ್ಕೃತಿಗಿಂತಲೂ ಇಂದು ಹೆಚ್ಚು ಮೌಲ್ಯಯುತವಾಗಿದೆ.

ಭೌಗೋಳಿಕ ಸ್ಥಿತಿಗತಿ

ಕೇರಳದ ಮಣ್ಣಿನ ಬಹುಭಾಗ ಪಶ್ಚಿಮ ಘಟ್ಟಗಳ ಇಳಿಜಾರು ಪ್ರದೇಶವಾಗಿದೆ. ಇದು ದಟ್ಟವಾದ ಕಾಡುಗಳಿಂದ ತುಂಬಿರುವ, ಸಾಕಷ್ಟು ಮಳೆ ಬೀಳುತ್ತಿರುವ ಫಲವತ್ತಾದ ನೆಲ. ಇಲ್ಲಿನ ಅನೇಕ ಸಸ್ಯೋತ್ಪನ್ನಗಳು ಕೇರಳೀಯರಿಗೆ ದೊರೆತ ಪ್ರಕೃತಿಯ ವರ. ಹೊರ ಪ್ರಪಂಚಕ್ಕೆ ತಿಳಿದಂತೆ ರಬ್ಬರ್, ಚಾ ಬೆಟ್ಟ ಪ್ರದೇಶಗಳಲ್ಲಿ ವಾಣಿಜ್ಯ ಬೆಳೆಗಳಾಗಿವೆ. ಬುಡಕಟ್ಟು ಜನಾಂಗದ ಬೇಟೆಗಾರರು, ಆಹಾರ ಸಂಗ್ರಹಕಾರರು ಕಾಡುಗಳ ನಡುವೆ ನಾಗರಿಕತೆಯ ನಸುಬೆಳಕನ್ನು ಹಾಯಿಸಿದ್ದಾರೆ. ಆದರೆ ಅವರಿಗೆ ಆಧುನಿಕ ನಾಗರಿಕತೆಯ ಬಗೆಗೆ ಏನೇನೂ ತಿಳಿದಿಲ್ಲ. ಆದರೆ ಪಾಶ್ಚಾತ್ಯ ದೇಶಗಳ ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು ಮತ್ತು ಅವರ ಶಿಷ್ಯರಲ್ಲಿ ಕೆಲವರು ಇಂತಹ ಕಾಡು ಜನಾಂಗಗಳ ಬಗೆಗೆ ಅಂದರೆ ಮುಖ್ಯವಾಗಿ ತೋಡರು, ಕಾಡರು, ಕುರುಬರು ಮೊದಲಾದವರ ಬಗೆಗೆ ಅಧ್ಯಯನಗಳನ್ನು ಮಾಡಿದ್ದಾರೆ.

ಆಧುನಿಕತೆಯ ಹೊಸಗಾಳಿ

ಉಕ್ಕಿ ಹರಿಯುವ ನದಿಗಳು ಬಯಲು ಪ್ರದೇಶಗಳನ್ನು ಫಲವತ್ತಾಗಿಸಿವೆ. ನದೀ ತೀರಗಳಲ್ಲಿ ಸಮೃದ್ಧವಾದ ಗ್ರಾಮಗಳು ನೆಲೆಸಿವೆ. ಅಲ್ಲೆಲ್ಲಾ ಒಂದೆರೆಡು ಪ್ರಾಚೀನ ದೇವಾಲಯಗಳು ಅಥವಾ ಚರ್ಚುಗಳು ಅಥವಾ ಆಧುನಿಕ ಮಸೀದಿಗಳು, ಒಂದು ಪ್ರಾಥಮಿಕ ಹಾಗೂ ಪ್ರೌಢಶಾಲೆ, ಮತ್ತೊಂದು ಮಾರುಕಟ್ಟೆ ಇರುತ್ತದೆ. ಕೇರಳದ ಪ್ರತಿಯೊಂದು ಹಳ್ಳಿಗಳಲ್ಲೂ ಭತ್ತದ ಗದ್ದೆಗಳು, ನೇಗಿಲುಗಳು, ಎತ್ತಿನ ಗಾಡಿಗಳು, ಜೀತದಾಳುಗಳು ಇತ್ತೀಚಿನವರೆಗೂ ಕಾಣುತ್ತಿದ್ದ ದೃಶ್ಯಗಳಿವು. ಆ ಹಳ್ಳಿಗಳೆಲ್ಲ ಈ ಮುಖ್ಯ ರಸ್ತೆಗೆ ನೇರ ಸಂರ್ಪಕವನ್ನು ಹೊಂದಿವೆ. ಭೂ ಸುಧಾರಣ ಕಾನೂನುನಿಂದಾಗಿ ನಾಯರರು ನಂಬೂದಿರಿಗಳು ತಮ್ಮ ಪ್ರಭಾವವನ್ನು, ಭೂಮಿಯನ್ನು ಕಳೆದುಕೊಂಡಿದ್ದಾರೆ. ಅಲ್ಲೆಲ್ಲ ಶಿಥಿಲಗೊಂಡ ತರವಾಡು ಮನೆಗಳು ಮಾತ್ರವೇ ಇಂದು ಉಳಿದುಕೊಂಡಿವೆ. ತರವಾಡು ಮನೆಗಳಲ್ಲಿ ಕಿರಿಯ ತಲೆಮಾರಿನ ಯುವಕರು ನಗರಗಳನ್ನು ಸೇರಿಕೊಂಡಿದ್ದಾರೆ. ಆಧುನಿಕ ಶಿಕ್ಷಣದ ಪರಿಣಾಮವಾಗಿ ಬಿಳಿ ಕಾಲರಿನ ಉದ್ಯೋಗಗಳನ್ನು ಹಿಡಿದುಕೊಂಡಿದ್ದಾರೆ. ಹಿಂದುಳಿದ ವರ್ಗಗಳಿಗೆ ದೊರೆತ ಉಚಿತ ಶಿಕ್ಷಣದ ಕಾರಣವಾಗಿ ಹಳ್ಳಿಗಳಲ್ಲಿ ಸಾಮಾಜಿಕ ಕ್ರಾಂತಿಯನ್ನು ಹುಟ್ಟು ಹಾಕಿದೆ. ಪರಂಪರಾಗತ ಕಲೆೆಗಳು, ತಂತ್ರಜ್ಞಾನಗಳು ಶಿಥಿಲವಾಗಿವೆ. ಕುಶಲ ಕರ್ಮಿಗಳ ಮಕ್ಕಳು ಇಂಗ್ಲಿಷ್ ಶಿಕ್ಷಣ ಪಡೆದು ನಗರಗಳಲ್ಲಿ ಔದ್ಯೋಗಿಕ ಜೀವನ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲೂ ಸಿನಿಮಾ ಥಿಯೇಟರ್‌ಗಳು ತಲೆಯೆತ್ತಿ ಹೊಸ ಫ್ಯಾಷನ್ನುಗಳನ್ನು ಪ್ರಚಾರಪಡಿಸಿವೆ. ಸಿಂಗಾಪುರ, ಪೆನಾಂಗ್, ದುಬೈ, ಬಹರೈನ್‌ನಿಂದ ಬರುವ ಮನಿ ಆರ್ಡರ್‌ಗಳು ಬಡವರಿಗೆ ಬದುಕನ್ನು ಕೊಡುತ್ತಿವೆ. ಆಹಾರ ಉತ್ಪನ್ನಗಳನ್ನು ಕೃಷಿ ಮಾಡುತ್ತಿದ್ದ ಪ್ರದೇಶಗಳಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಸುತ್ತಿದ್ದಾರೆ.

ಅನೇಕ ನಗರಗಳು ಇಂತಹ ಹಳ್ಳಿಗಳ ನಡುವೆ ಬೆಳೆದು ನಿಂತಿವೆ. ಬೆಳೆಯುತ್ತಿರುವ ಹಳ್ಳಿಗಳೂ ಸಹ ಹಳೆಯ ದಳವಾಯಿಗಳ ಪ್ರಮುಖ ಆವಾಸ ಕೇಂದ್ರಗಳಾಗುತ್ತಿವೆ. ಪಟ್ಟಣಗಳು ಗ್ರಾಮೀಣ ಪ್ರದೇಶದ ಛಾಯೆಯನ್ನು ಉಳಿಸಿಕೊಂಡಿವೆ. ಹಳ್ಳಿಗಳೂ ಪಟ್ಟಣಗಳ ಎಲ್ಲಾ ಸೌಕರ್ಯವನ್ನು ಹೊಂದಿವೆ. ಹಳ್ಳಿ ಹಾಗೂ ಪಟ್ಟಣಗಳ ನಡುವೆ ವ್ಯತ್ಯಾಸಗಳೇ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇಂದಿನ ಕೇರಳದ ಸಮಾಜದಲ್ಲಿ ಹಳ್ಳಿಗಳಲ್ಲಿ ಹಾಗೂ ಪಟ್ಟಣ ಗಳಲ್ಲಿ ವಾಸಿಸುವ ಜನರು ಒಂದೇ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಅಲ್ಲಿ ಜಮೀನ್ದಾರರಿಲ್ಲ. ಕೋಟ್ಯಾಧಿಪತಿಗಳಿಲ್ಲ. ಕೊಳಚೆಯ ದರಿದ್ರರೂ ಇಲ್ಲ. ಸಾಮಾಜಿಕ ಸೀಮಾರೇಖೆಗಳೂ ಇಲ್ಲವಾಗಿ ಮಧ್ಯಮ ವರ್ಗದವರ ಸಂಖ್ಯೆ ಹೆಚ್ಚಿದೆ. ಬಹುತೇಕ ಜನರೆಲ್ಲ ಓದಬಲ್ಲರು, ಬರೆಯಬಲ್ಲರು. ಪ್ರತಿಯೊಂದು ಅಂಗಡಿ ಮುಂಗಟ್ಟುಗಳಲ್ಲಿ ದೈನಂದಿನ ಸುದ್ದಿಗಳ ವಿಶ್ಲೇಷಣೆ ಮಾಡಬಲ್ಲರು. ಸಾಮಾನ್ಯ ಜನರೂ ಸಿನಿಮಾ ಆರಾಧಕರೇ ಆಗಿದ್ದಾರೆ. ಸಾಹಿತ್ಯ ವಿಮರ್ಶಕರೂ ಆಗಿದ್ದಾರೆ. ಕೃಷಿ ಕಾರ್ಮಿಕರೂ ಕೂಡ ಅಧಿಕಾರ ರಾಜಕಾರಣವನ್ನು ಅಲ್ಲಿನ ಜಟಿಲತೆಯನ್ನು ಅದರ ಪ್ರಭಾವವನ್ನು ಹಿಂಬಾಲಿಸುವವರಾಗಿದ್ದಾರೆ. ಈ ಶತಮಾನದ ಆರಂಭದ ದಶಕದಲ್ಲಿ ಶಾಲೆ ಮತ್ತು ವಾಚನಾಯಲಗಳನ್ನು ಹುಟ್ಟು ಹಾಕಿದ ಕ್ರಾಂತಿಕಾರಕ ಚಳುವಳಿಗಳು ಕೇರಳದ ಜನತೆಯನ್ನು ಎಚ್ಚರಿಸಿ, ಅವರನ್ನು ಸಾಕ್ಷರರನ್ನಾಗಿಸಿತು. ಇದು ಪ್ರಜಾಪ್ರಭುತ್ವದ ಶಕ್ತಿಯನ್ನು, ಸಮಾಜವಾದವನ್ನು ಹಾಗೂ ಸಾಹಿತ್ಯದ ನವೋತ್ಥಾನದ ಸೃಷ್ಟಿಯನ್ನು ಪೋಷಿಸಿತು.

ಪ್ರಜ್ಞಾವಂತ ಜನವರ್ಗ

ಕೇರಳದ ಜನ ಸಮುದಾಯದಲ್ಲಿ ಎದ್ದು ಕಾಣುವ ಮತ್ತು ಹೆಚ್ಚಿನ ಸಂಖ್ಯೆಯಲ್ಲಿರುವ ಮಧ್ಯಮ ವರ್ಗದವರು ಅಕ್ಷರಸ್ಥರಾಗಿದ್ದರಿಂದ ತಮ್ಮ ಹಕ್ಕುಗಳ ಬಗೆಗೆ ಪ್ರಜ್ಞೆಯುಳ್ಳ ವರಾಗಿದ್ದಾರೆ. ಅದು ಇಂಡಿಯಾದ ಇತರ ಭಾಗಗಳ ಜನರಿಂದ ಕೇರಳದ ಜನತೆಯನ್ನು ಪ್ರತ್ಯೇಕವಾಗಿಸುತ್ತದೆ. ಸಮಾಜದ ಮೇಲೆ ಫ್ಯೂಡಲ್ ದೊರೆಗಳಿಗೆ ಇದ್ದ ಹಿಡಿತ ಸಡಿಲವಾಗಿದೆ. ಪ್ರತಿಯೊಬ್ಬನೂ ಅವನ ಮಟ್ಟಿಗೆ ಅವನೇ ನಾಯಕ. ಚಲನಚಿತ್ರ ಕ್ಷೇತ್ರದ ಹೊರಗೆ ಬದುಕಿನಲ್ಲಿ ವ್ಯಕ್ತಿ ಆರಾಧನೆಯ ಪ್ರವೃತ್ತಿ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ.

ಕರಾವಳಿಯ ತೀರ ಪ್ರದೇಶಗಳಲ್ಲಿ ಬೆಸ್ತರ ಜನಪದವೇ ನೆಲೆ ನಿಂತಿದೆ. ತೀರ ಪ್ರದೇಶಗಳ ಮರಳಿಗೆ ಐದು ನೂರ ತೊಂಬತ್ತು ಕಿಲೋ ಮೀಟರ್‌ಗಳಷ್ಟು ಉದ್ಧಕ್ಕೂ ಅಪ್ಪಳಿಸುವ ಅರಬ್ಬೀ ಸಮುದ್ರದ ಅಲೆಗಳು ಕೇರಳಕ್ಕೆ ಸಂಪತ್ತನ್ನು, ಜ್ಞಾನವನ್ನು ತಂದುಕೊಟ್ಟಿದೆ.

ಅಲ್ಲದೆ ಇತಿಹಾಸಪೂರ್ವ(Pre-Historic)ದಲ್ಲಿಯೇ ಇಲ್ಲಿ ನೆಲೆಸಿದ ಫ್ರೆಂಚ್ ಅಸ್ಟ್ರೋಲೋಯ್‌ಡ್ ಅಥವಾ ನೆಗ್ರಿಟೊ ಜನಾಂಗದವರು ಸಮುದ್ರ ದಾರಿಯಾಗಿಯೇ ಬಂದವರಿರಬೇಕು. ಅಲ್ಲದೆ ಸಿರಿಯಾದ ಬ್ಯೂಷ್ ಮತ್ತು ಕ್ರಿಶ್ಚಿಯನ್‌ರನ್ನು ಕರೆ ತಂದರು. ಅವರು ಕ್ರಿ.ಶ. ಆರಂಭದ ಶತಮಾನಗಳಲ್ಲಿ ಬಂದರು ಪಟ್ಟಣಗಳನ್ನು ಅಭಿವೃದ್ದಿಪಡಿಸಿದರು. ಅಲ್ಲಿಗೆ ಗ್ರೀಕ್ ಮೂಲದ ರೋಮನ್ ವ್ಯಾಪಾರಿಗಳು ಕಾಳುಮೆಣಸನ್ನು ಅರಸುತ್ತಾ ಬಂದರು. ಯೆಹೂದಿ ಮತ, ಕ್ರಿಶ್ಚಿಯನ್ ಮತ ಮತ್ತು ಇಸ್ಲಾಂ ಮತಗಳು ಕೇರಳದಲ್ಲಿ ಬೌದ್ಧಮತ, ಜೈನಮತ ಮತ್ತು ಹಿಂದೂ ಮತಗಳಂತೆಯೇ ವ್ಯಾಪಕವಾಗಿದ್ದವು. ಕಡಲ ತೀರದ ಮುಕ್ತದ್ವಾರವು ಅರೆಬಿಯನ್ ಕರಾವಳಿಗಳಿಂದ ವ್ಯಾಪಾರದ ಗಾಳಿ ನೇರವಾಗಿ ಕೇರಳಕ್ಕೆ ಬೀಸಲು ಅನುಕೂಲವಾಯಿತು. ಹಾಗೆಯೇ ಪ್ರತಿ ಹಂತಗಳಲ್ಲೂ ಕೇರಳದ ಸ್ವಾತಂತ್ರ್ಯಕ್ಕೆ ಧಕ್ಕೆಯೊದಗಿಸುತ್ತಿದ್ದವು. ಅದು ವಾಸ್ಕೋಡಗಾಮನ ಆಗಮನದ ಮೂಲಕ ನಾಂದಿ ಹಾಡಿತು. ಪರಿಣಾಮವಾಗಿ  ಮಲಬಾರ್ ತೀರವು  ಏಶಿಯನ್ ಭೂಖಂಡವನ್ನು ಯುದ್ಧ ಭೂಮಿಯಾಗಿ ಪರಿವರ್ತಿಸುವ ಪೂರ್ವದಲ್ಲಿ ಯುರೋಪಿನ ಪ್ರಭಾವಿ ಶಕ್ತಿಗಳಾದ ಪೋರ್ಚ್‌ಗೀಸರು, ಫ್ರೆಂಚರು, ಡಚ್ಚರು ಹಾಗೂ ಇಂಗ್ಲಿಷರಿಗೆ ತರಬೇತಿಯ ನೆಲೆಯಾಯಿತು. ಕಡಲು ಮುಕ್ತವಾಗಿ ದಾರಿ ಮಾಡಿ ಕೊಟ್ಟುದರಿಂದಲೇ ಕೇರಳೀಯರಿಗೆ ಪ್ರಾಚೀನ ಕಾಲದಿಂದಲೇ ಅನೇಕ ಸಂಸ್ಕೃತಿಗಳ ಪರಿಚಯ ಸಾಧ್ಯವಾಯಿತು. ಇದರಿಂದಾಗಿ ಹೊಂದಿಕೊಳು್ಳವ ಮತ್ತು ಉದಾರ ಭಾವನೆಯು ಕೇರಳದ ವ್ಯಕ್ತಿತ್ವದ ಮುಖ್ಯ ಲಕ್ಷಣವಾಯಿತು.

ಪ್ರಕೃತಿ ಮತ್ತು ಮಾನವನ ನಡುವೆ ನಡೆಯುವ ಕ್ರಿಯೆ ಪ್ರತಿಕ್ರಿಯೆಗಳಿಂದಾದ ಸಂಘರ್ಷ ಮತ್ತು ಸಹಕಾರಗಳು ಶತಮಾನಗಳ ಕಾಲ ನಡೆದು ಬಂದು ಕೇರಳದ ಸಂಸ್ಕೃತಿಯ ಲಕ್ಷಣವನ್ನು ರೂಪಿಸಿವೆ.