ಉದಿಯನನ ಮಗನಾದ ನೆಡುಂಚೇರಲಾತನ್ ನಂತರ ಅಧಿಕಾರಕ್ಕೆ ಬಂದ. ಸುಮಾರು ಕ್ರಿ.ಶ. ೭೫ರಲ್ಲಿ ಆತ ರಾಜನಾಗಿರಬಹುದು. ಚೇರ ರಾಜ್ಯದ ವಿಸ್ತಾರ, ಪ್ರತಾಪವು ಹೆಚ್ಚಾದುದು ರಾಜನಾದ ನೆಡುಂಚೇರಲಾತನ್‌ನ ಕಾಲದಲ್ಲಿ. ಈತನಿಗೆ ‘ಇಮಯವರನ್ಬನ್’ ಎಂದೂ ಕುಡಕ್ಕೋ ಎಂದೂ ವಿಶಿಷ್ಟ ಹೆಸರುಗಳಿದ್ದವು. ಕುಡನಾಡಿನ ರಾಜನಾಗಿದ್ದುದರಿಂದ ಕುಡಕ್ಕೋ ಎಂದು ಕರೆದಿರಬಹುದು. ಕೋಳಿಕೋಡ್ ವರೆಗಿನ ಪ್ರದೇಶಗಳು ಆರಂಭದಿಂದಲೇ ಚೇರರ ಅಧೀನದಲ್ಲಿತ್ತು. ಅಲ್ಲಿಂದ ಉತ್ತರಕ್ಕೆ ಪೂೞಿನಾಡ್, ಕೊಂಕಣಗಳು ಏಳಿಮಲೆ ರಾಜ್ಯದಲ್ಲಿ ಸೇರಿದ್ದವು. ಅಲ್ಲಿಂದ ಉತ್ತರ ಭಾಗಕ್ಕೆ ಬನವಾಸಿ -ಈಗಿನ ಉತ್ತರ ಕನ್ನಡ ಜಿಲ್ಲೆಯಲ್ಲಿದೆ – ವರೆಗಿನ ಪ್ರದೇಶಗಳು ಕದಂಬರ ಅಧೀನದಲ್ಲಿದ್ದವು. ನೆಡುಂಚೇರಲಾತನ್ ಕದಂಬರನ್ನು ಸೋಲಿಸಿ ಅವರ ರಕ್ಷಣೆಯ ಸಂಕೇತವಾದ ಕದಂಬ ವೃಕ್ಷವನ್ನು ಕಡಿದುರುಳಿಸಿ ಅದರಿಂದ ಯುದ್ಧ ಭೇರಿಯನ್ನು ಮಾಡಿಸಿದಾಗಿ ಸಂಘಂ ಕೃತಿಗಳಲ್ಲಿ ಹೇಳಲಾಗಿದೆ. ಕಡಲುಗಳ್ಳರನ್ನು ನೆಡುಚೇರಲಾತನ್ ನಿಗ್ರಹಿಸಿದನು. ಪ್ಲಿನಿಯ ಕಾಲದಲ್ಲಿ ‘ನಿತ್ರಿಯಾಸಿ’ (ನೇತ್ರಾವತಿ ತೀರದ ಮಂಗಳೂರು ಎಂಬುದು ವಿದ್ವಾಂಸರ ಅಭಿಪ್ರಾಯ. ಎ.ಕೆ. ಗೋಪಾಲಕೃಷ್ಣನ್, ೧೯೯೧: ೧೩೧)ಯ ಕಡಲುಗಳ್ಳರು ಮುಸಿರಿಸ್ಸಿನಲ್ಲಿ ತೊಂದರೆ ಕೊಡುತ್ತಿದ್ದರು. ಎಂದರೆ ಪೆರಿಪ್ಲಸ್‌ನು ಬರೆದ ಕಾಲದಲ್ಲಿ ಅಂದರೆ ಕ್ರಿ.ಶ. ೮೦ ಮುಸಿರಿಸ್ ಸಂಪತ್ಸಮೃದ್ಧವಾಗಿತ್ತು. ಕಡಲುಗಳ್ಳರ ಉಪಟಳದಿಂದ ಮುಸಿರಿಸ್ಸನ್ನು ರಕ್ಷಿಸುವುದು ನೆಡುಂಚೇರಲಾತನಿಗೆ ಸಾಧ್ಯವಾಯಿತು. ನೇತ್ರಾವತಿ ಮುಖದಲ್ಲಿನ ಕಡಲುಗಳ್ಳರನ್ನು, ಕದಂಬರನ್ನು ಸೋಲಿಸಿದ ನೆಡುಂಚೇರಲಾತನ್ ಚೇರ ರಾಜ್ಯದ ಅಧಿಕಾರ ಸೀಮೆಯನ್ನು ಗೋಕರ್ಣದವರೆಗೂ ವಿಸ್ತರಿಸಿದನೆಂದು ತಿಳಿದು ಬರುತ್ತದೆ.

ಕಪ್ಪಕಾಣಿಕೆಗಳನ್ನು ಪಡೆದು ವಿರೋಧಿಗಳನ್ನು ಕ್ಷಮಿಸುತ್ತಿದ್ದುದಲ್ಲದೆ ಅವರನ್ನು ಸಾಮಂತರಾಗಿ ನೆಡುಂಚೇರಲಾತನ್ ಉಳಿಸಿಕೊಂಡಿದ್ದನು. ಈತನ ಕಾಲಕ್ಕೆ ಏಳಿಮಲೆ ರಾಜರು ಹಾಗೂ ಕದಂಬರು ಈತನಿಗೆ ಸಾಮಂತರಾಗಿದ್ದಿರಬೇಕು. ಏಳಿಮಲೆಯ ರಾಜನಾದ ನನ್ನನು ಮುಂದೆ ಚೇರರ ವಿರುದ್ಧ ತಿರುಗಿಬಿದ್ದುದರಿಂದ ನಾರ್ಮುಡಿ ಚೇರನ್ ಆತನನ್ನು ವಧಿಸಿರಬೇಕು.

ನೆಡುಂಚೇರಲಾತನ್ ಯವನರನ್ನು ಸೋಲಿಸಿ ಅವರ ತಲೆಗೆ ತುಪ್ಪ ಎರೆದು ಕೈಗಳನ್ನು ಹಿಂದಕ್ಕೆ ಬಿಗಿದು ಅವರನ್ನು ಅಪಮಾನಿಸಿದನೆಂದು ತಿಳಿದುಬರುತ್ತದೆ. ಇಮಯವರನ್ಬನ್ (ಇಮೆಯವರಂ+ಅನ್ಬನ್=ದೇವತೆಗಳಿಗೆ ಪ್ರಿಯನಾದವನು) ಎಂಬ ಬಿರುದನ್ನು ಸ್ವೀಕರಿಸಿದ್ದ ರಿಂದ ಈತನೂ ಬೌದ್ಧಮತಾನುಯಾಯಿ ಆಗಿದ್ದನೆಂಬುದು ಸ್ಪಷ್ಟ. ಈತನ ಕಾಲದಲ್ಲಿ ಬೌದ್ಧ ಮತವು ಕೇರಳದಲ್ಲಿ ಎಲ್ಲೆಡೆ ವ್ಯಾಪಿಸಿತ್ತು. ಧರ್ಮಶಾಸನ ಎಂಬ ಬೌದ್ಧ ಭಿಕ್ಷು ಈತನ ಕಾಲದಲ್ಲಿ ಕೇರಳವನ್ನು ಸಂದರ್ಶಿಸಿದ್ದ. ಈತನು ಪೆರುಮಾಳನ ಅನುಮತಿ ಪಡೆದು ಒಂದು ಬೌದ್ಧ ಚೈತ್ಯಾಲಯವನ್ನು ಸ್ಥಾಪಿಸಿದನೆಂದು ತಿಳಿದು ಬರುತ್ತದೆ. ಮಣಿಮೇಖಲೈ ಕಾವ್ಯದಲ್ಲಿಯೂ ಈ ವಿಷಯ ಪ್ರಸ್ತಾಪಿಸಲಾಗಿದೆ. ಶ್ರೀಲಂಕಾದ ಕೆಲವು ಧರ್ಮ ಪ್ರಚಾರಕರ ಪ್ರೇರಣೆಯಿಂದ ಹಿಮವತ್ಪರ್ವತದಲ್ಲಿ ಬಿಲ್ಲು ನೆಟ್ಟ ರಾಜನೊಬ್ಬ ತನ್ನ ರಾಜಧಾನಿಯಾದ ವಂಚಿಯಲ್ಲಿ ಬುದ್ಧ ವಿಹಾರವೊಂದನ್ನು ನಿರ್ಮಿಸಿದ್ದಾಗಿ ಹೇಳಲಾಗಿದೆ.

ನೇಡುಂಚೇರಲಾತನ್ ಒಬ್ಬ ಕೊಡುಗೈ ದಾನಿಯಾಗಿದ್ದನು. ಸುಮಾರು ಐವತ್ತೆರೆಡು ವರ್ಷಗಳ ಕಾಲ ಅಂದರೆ ಕ್ರಿ.ಶ. ೭೪ ರಿಂದ ಕ್ರಿ.ಶ. ೧೩೩ರವರೆಗೆ ರಾಜ್ಯಭಾರ ಮಾಡಿದ ನೆಡುಂಚೇರಲಾತನ್‌ನ ಆಡಳಿತಾವಧಿಯು ಚೇರ ರಾಜ್ಯವನ್ನು ಸಂಪತ್ ಸಮೃದ್ಧವನ್ನಾಗಿಸಿತ್ತು. ಈತನ ಬಗೆಗೆ ಸಂಘಂ ಕೃತಿಗಳಲ್ಲಿ ಹಾಡಿ ಹೊಗಳಲಾಗಿದೆ. ಕಡಲಿನಿಂದಲೂ, ಕಾಡು ಗಳಿಂದಲೂ ದೊರೆಯುತ್ತಿದ್ದ ವಸ್ತುಗಳು, ಕೃಷಿ ಉತ್ಪನ್ನಗಳು, ವಿದೇಶಿ ವ್ಯಾಪಾರಗಳೂ ಎಲ್ಲಾ ಕಾಲದಲ್ಲೂ ಕೇರಳದ ಸಂಪತ್ತಿನ ಮೂಲಾಧಾರಗಳಾಗಿದ್ದವು.

ಆ ಕಾಲದಲ್ಲಿಯೇ ಕೇರಳದಲ್ಲಿ ತೆಂಗಿನ ಕೃಷಿ ವ್ಯಾಪಕವಾಗಿತ್ತೆಂದು ಕುಮಟ್ಟೂರ್ ಕಣ್ಣನಾರ್ ಎಂಬ ಕವಿಯ ಹಾಡುಗಳಿಂದ ತಿಳಿದುಬರುತ್ತದೆ. ಪೆರಿಪ್ಲಸ್‌ನ ಬರೆಹಗಳಲ್ಲಿ ವಂಚಿಯ ಕಡಲ ತೀರಗಳಿಂದ ರಫ್ತು ಮಾಡುತ್ತಿದ್ದ ವಸ್ತುಗಳಲ್ಲಿ ತೆಂಗೂ ಇದ್ದುದಾಗಿ ಉಲ್ಲೇಖಿಸಿದ್ದಾನೆ.

ಪಲ್‌ಯಾನೆ ಚೆಲ್‌ಕೆೞು ಕುಟ್ಟವನ್

ಇಮಯವರನ್ಬನ ತಮ್ಮನಾದ ಪಲ್‌ಯಾನೆ ಚೆಲ್‌ಕೆೞುಕುಟ್ಟವನ್ ೨೫ ವರ್ಷ ರಾಜನಾಗಿ ರಾಜ್ಯಭಾರ ಮಾಡಿದ. ನೆಡುಂಚೇರಲಾತನ ದಿಗ್ವಿಜಯದ ಸಂದರ್ಭಗಳಲ್ಲಿ ಆತನ ಬಲಗೈಯಾಗಿ ಕೆಲಸ ನಿರ್ವಹಿಸಿದವನೇ ಈತ. ಪೂೞಿನಾಡ್ ಜಯಸಿದ್ದು ಈತನೇ ಆಗಿರಬೇಕು. ಪಾಲೈ ಗೌತಮನಾರ್ ಎಂಬ ಕವಿ ಈತನನ್ನು ‘ಪೂೞಿಯರ್ ಕೋ’ ಎಂದು ಸಂಬೋಧಿಸಿದ್ದರಿಂದ ಇದು ಸ್ಪಷ್ಟವಾಗುತ್ತದೆ. ಕೊಂಗುನಾಡನ್ನು ಪಲ್‌ಯಾನೆಯೇ ಜಯಿಸಿದ್ದ. ದಕ್ಷಿಣದಲ್ಲಿ ಕಾಕ್ಕನಾಡಿಗೂ ಚೇರ ಸಾಮ್ರಾಜ್ಯವನ್ನು ವಿಸ್ತರಿಸುವಲ್ಲಿ ಪಲ್‌ಯಾನೆಯೇ ನೇತೃತ್ವ ವಹಿಸಿದ್ದ. ಯಾರಿಗೂ ಏರಲು ಸಾಧ್ಯವಾಗದ ರೀತಿಯಲ್ಲಿರುವ ಕಡಿದಾದ ಆಯಿರಮಲೆಗೆ ಈತ ಅಧಿಪತಿಯಾಗಿದ್ದ ಎಂದು ಹೇಳಲಾಗಿದೆ. ಇಡುಕ್ಕಿ, ಕೊಲ್ಲಂ ಜಿಲ್ಲೆಗಳ ಪೂರ್ವ ದಿಕ್ಕಿನಲ್ಲಿರುವ ಯಾವುದಾದರೂ ಬೆಟ್ಟ ಪ್ರದೇಶವಾಗಿರಬೇಕು ಈ ಆಯಿರಮಲೆ.

ಪಲ್‌ಯಾನೆಯ ರಾಜಧಾನಿಯು ಸಮುದ್ರದ ಅಲೆಗಳು ಅಪ್ಪಳಿಸುತ್ತಿರುವ ಪೆರಿಯಾರಿಗೆ ಸಮೀಪದಲ್ಲಿತ್ತು ಎಂದಿರುವುದರಿಂದ ವಂಚಿಯನ್ನೇ ಸೂಚಿಸುತ್ತಿದ್ದಿರಬೇಕು ಎಂದು ಖಚಿತ ಪಡಿಸಿಕೊಳ್ಳಬಹುದು.

ಪಲ್‌ಯಾನೆ ಒಬ್ಬಾತ ಬ್ರಾಹ್ಮಣ ಮತಾನುಯಾಯಿಯಾಗಿದ್ದನು. ಈತನು ಯಾಗಗಳನ್ನು ಮಾಡಿದ ಬ್ರಾಹ್ಮಣರಿಗೆ ದಾನಗಳನ್ನು ಕೊಟ್ಟಿದ್ದನು. ಕವಿ ಗೌತಮನಾರ್‌ನೇ ಪಲ್‌ಯಾನ್‌ಗಾಗಿ ಹತ್ತು ಯಾಗಗಳನ್ನು ನಡೆಸಿದ್ದಾಗಿ ಹೇಳಿಕೊಂಡಿದ್ದಾನೆ. ಹತ್ತನೇ ಯಾಗದ ಕೊನೆಯ ಹೊತ್ತಿಗೆ ಪಲ್‌ಯಾನೆ ಸ್ವರ್ಗಾರೋಹಣ ಮಾಡಿದ್ದಾಗಿ ವರ್ಣಿಸಿದ್ದಾನೆ.

ಇಪ್ಪತೈದು ವರ್ಷದ ರಾಜ್ಯಭಾರದ ನಂತರ ತನ್ನ ಅಣ್ಣನ ಮಕ್ಕಳಿಗೆ ರಾಜ್ಯಾಧಿಕಾರವನ್ನು ವಹಿಸಿಕೊಟ್ಟಿದ್ದಿರಬೇಕು. ಪಲ್‌ಯಾನ್ ರಾಜ್ಯಭಾರ ಮಾಡಿದ ಕಾಲ ಕ್ರಿ.ಶ. ಎರಡನೆಯ ಶತಮಾನದ ಆರಂಭ ಕಾಲ. ಇದು ಚೇರರ ಪ್ರತಾಪದ ಕಾಲವಾಗಿತ್ತು. ಈತನ ಜೀವಿತದ ಬಹುಭಾಗವು ಯುವರಾಜನಾಗಿಯೇ ಕಾರ್ಯ ನಿರ್ವಹಿಸಿದಂತೆ ತಿಳಿದುಬರುತ್ತದೆ.

ನೆಡುಂಚೇರಲಾತನ್ ತೀರಿಕೊಂಡು ಪಲ್‌ಯಾನೆಯು ಅಧಿಕಾರವನ್ನು ಬಿಟ್ಟುಕೊಟ್ಟ ನಂತರ ಚೇರರು ವಿಶಾಲವಾದ ಸಾಮ್ರಾಜ್ಯವೊಂದರ ಅಧಿಪತಿಗಳಾದರು. ನೆಡುಂಚೇರಲಾತನ ಮೂವರು ಮಕ್ಕಳೂ ರಾಜರಾದರು. ನೆಡುಂಚೇರಲಾತನಿಗೆ ಪದುಮನ್ ದೇವಿ (ಪದ್ಮಿನಿ ದೇವಿ)ಯಲ್ಲಿ ಜನಿಸಿದ ನೇರ್‌ಮುಡಿ ಚೇರನ್, ಆಟ್ಟಕೊಟ್ಟು ಪಾಟ್ಟ್‌ಚೇರಲಾತನ್ ಮತ್ತು ಚೋಳ ರಾಜಕುಮಾರಿಯಲ್ಲಿ ಜನಿಸಿದ ಚೆಂಗುಟ್ಟವನ್ ಇವರೇ ಆ ಮೂವರು ಮಕ್ಕಳು. ನಾರ್‌ಮುಡಿ ಚೇರನ್ ರಾಜನಾಗಿದ್ದಾಗ ಚೆಂಗುಟ್ಟವನ್ ಯುವರಾಜನಾಗಿದ್ದ. ನಾರ್‌ಮುಡಿ ಚೇರನ್‌ನ ಮರಣಾನಂತರ ಚೆಂಗುಟ್ಟವನ್ನು ಅಧಿಕಾರಕ್ಕೆ ಬಂದು ಆಟ್ಟಕೊಟ್ಟು ಪಾಟ್ಟನ್ ಚೇರನು ಯುವರಾಜನಾದ.

ಇವರಿಗೆ ಹೊರತಾಗಿ ಅಮರಾವತಿ ನದೀ ತೀರದಲ್ಲಿರುವ ಕರುವೂರನ್ನು ಕೇಂದ್ರೀಕರಿಸಿ ಕೊಂಡು ಚೇರರ ಒಂದು ಯುವರಾಜ ಶಾಖೆ ಇದೇ ವೇಳೆಗೆ ರಾಜ್ಯವಾಳತೊಡಗಿತ್ತು. ನೆಡುಂಚೇರಲಾತನ್ ಮತ್ತು ಪಲ್‌ಯಾನೆಯ ಆಡಳಿತಾವಧಿಯಲ್ಲಿ ಸೋತ ಕೊಂಗನಾಡಿನ ವೇಳ್ ಮುಖ್ಯರು ಕಪ್ಪ ಕಾಣಿಕೆಗಳನ್ನು ನೀಡಿ ಚೇರರ ಸಾಮಂತರಾಗಿ ಮುಂದುವರಿದಿರಬೇಕು. ನೆಡುಚೇರಲಾತನ್ ತೀರಿಕೊಂಡು ಹಾಗೂ ಚೇರಲಾತನ್ ಅಧಿಕಾರ ತ್ಯಜಿಸಲು ಇದೇ ವೇಳ್ ಮುಖ್ಯರು ಚೇರ ಅಧಿಪತ್ಯವನ್ನು ಪ್ರಶ್ನಿಸಿರಬೇಕು. ಆಗ ಕರುವೂರಿನಲ್ಲಿ ಒಂದು ಯುವರಾಜ ಶಾಖೆಯನ್ನು ನೇಮಿಸಿರಬೇಕು. ಅದೂ ಪಲ್‌ಯಾನೆಯ ಮಗನನ್ನೇ ನೇಮಿಸಿರಬಹುದು.

ಪಲ್‌ಯಾನೆಯು ಅಧಿಕಾರ ಬಿಟ್ಟುಕೊಡಲು ಪೂೞಿನಾಡಿನ ಹೊಸ ವೇಳ್ ಮುಖ್ಯನಾದ ನನ್ನನ್ ಚೇರಾಧಿಪತ್ಯವನ್ನು ವಿರೋಧಿಸಿದ. ನಾರ್‌ಮುಡಿ ಚೇರ ನನ್ನನನ್ನು ನಿಯಂತ್ರಿಸುವಲ್ಲಿ ಶಕ್ತನಾದ.

ಕಳೆಂಕಾಯ್ ಕಣ್ಣಿನಾರ್ ಮುಡಿಚೇರನ್ ಎಂದು ಈತನನ್ನು ಕರೆಯಲಾಗುತಿತ್ತು. ಈತ ಬಗನಿ(ಕಳೆಂ)ಮರದ ನಾರುಗಳಿಂದ ಮಾಡಿದ ಕಿರೀಟವನ್ನು ಅದರ ಕಾಯಿಗಳಿಂದ ಮಾಡಿದ ಸರಗಳನ್ನು ಧರಿಸಿಕೊಂಡಿದ್ದನು. ಹಾಗಾಗಿ ಈತನಿಗೆ ಆ ಹೆಸರು ಬಂದಿತ್ತು. ಈತನು ಜೈನಮತಾನುಯಾಯಿಯೋ, ಬೌದ್ಧ ಮತಾನುಯಾಯಿಯೋ ಆಗಿದ್ದಿರಬೇಕು. ಆದರೆ ಬ್ರಾಹ್ಮಣರ ಬಗೆಗೆ ಅಪಾರವಾದ ಗೌರವವನ್ನು ತೋರಿಸುತ್ತಿದ್ದ. ಈತನ ಕಾಲದಲ್ಲಿ ವಿಷ್ಣು ದೇವಾಲಯಗಳಲ್ಲಿ ‘ಆರಾಟ್ಟ್’ (ಅವಭ್ನತ ಸ್ನಾನ) ಉತ್ಸವಗಳು ನಡೆಯುತ್ತಿದ್ದುದಾಗಿ ತಿಳಿದು ಬರುತ್ತದೆ. ಅನೇಕ ಕವಿಗಳಿಗೂ ಪ್ರೋತ್ಸಾಹ ನೀಡಿದ್ದನು. ಈತ ಸುಮಾರು ಇಪ್ಪತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದ.

ನಾರ್‌ಮುಡಿ ಚೇರನ್‌ನ ಮರಣಾನಂತರ ಮೂವತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದವ ಚೆಂಗುಟ್ಟವನ್. ವಂಚಿ ಈತನ ರಾಜಧಾನಿಯಾಗಿತ್ತು. ವೇಲ್‌ಕೆೞುಕುಟ್ಟವನ್ ಎಂದು ವಿಶ್ಲೇಷಿಸಲಾದ ಚೆಂಗುಟ್ಟವನ್ ಸುಮಾರು ೫೫ ವರ್ಷಗಳ ಕಾಲ ರಾಜ್ಯವಾಳಿದ. ಕಡಲುಗಳ್ಳರನ್ನು ನಿಗ್ರಹಿಸಿ ಅರಬ್ಬಿ ಸಮುದ್ರವನ್ನು ಸಾರಿಗೆ ಸಂಚಾರಕ್ಕೆ ಸುಗಮ ಮಾಡಿ ಕೊಟ್ಟುದು ಈತನ ಪ್ರಮುಖ ಸಾಧನೆಗಳಲ್ಲೊಂದು. ಚೆಂಗುಟ್ಟವನ್‌ಗೆ ಸಮಾನನಾದ ಮತ್ತು ಸಮರ್ಥನಾದ ನಾವಿಕ ಇರಲಿಲ್ಲ ಎಂದು ಒಂದು ಶತಮಾನದ ನಂತರ ಜೀವಿಸಿದ ನಪ್ಪಚಲೈಯಾರ್ ಎಂಬ ಕವಿ ಹೇಳಿದ್ದಾನೆ. ಚೆಂಗುಟ್ಟವನ ನಾವಿಕ ಜೀವನದ ಬಗೆಗೆ ಅನೇಕ ಸಂಘಂ ಕೃತಿಗಳಲ್ಲಿ ವರ್ಣನೆಗಳಿವೆ. ಅರಬ್ಬಿ ಸಮುದ್ರದ ಮೂಲಕ ಉತ್ತರದಿಂದ ದಕ್ಷಿಣಕ್ಕೆ ಬರುವ ಹಡಗುಗಳಿಗೆ ಬಸಾಂತಿಯನ್ ಎಂಬ ಗ್ರೀಕ್ ಕಾಲನಿ ಕಳೆದರೆ ಕಡಲುಗಳ್ಳರು  ಇರುವ ಅನೇಕ ದ್ವೀಪಗಳನ್ನು ದಾಟಿ ಬರಬೇಕಾಗಿತ್ತು ಎಂದು ಪೆರಿಪ್ಲಸ್ ಹೇಳಿದ್ದಾನೆ. ಈತ ಕಡಲುಗಳ್ಳರ ವಿರುದ್ಧದ ವಿಜಯದ ಮೂಲಕವೇ ಕೇರಳದ ವ್ಯಾಪಾರಾಭಿವೃದ್ದಿಗೆ ಸುಗಮ ಹಾದಿ ನಿರ್ಮಿಸಿದ. ನೆಡುಂಚೇರಲಾತನ್ ಮತ್ತು ಚೆಂಗುಟ್ಟವನ್ ಕಡಲುಗಳ್ಳರನ್ನು ಸದೆ ಬಡೆದು ಕೇರಳ ಮತ್ತು ವಿದೇಶ ರಾಜ್ಯಗಳೊಡನೆ ಸಮುದ್ರ ವ್ಯಾಪಾರವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಲು ಕಾರಣರಾದರು.

ಸಾಹಸಿಯಾದ ಒಬ್ಬ ನಾವಿಕನಂತೆಯೇ ಚೆಂಗುಟ್ಟವನ್ ಒಬ್ಬ ಉತ್ತಮ ಬಿಲ್ಗಾರನೂ ಆಗಿದ್ದ. ವೇಳ್‌ಮುಖ್ಯರ ಹಾಗೂ ಚೋಳರ ನೆರವಿನಿಂದ ಮೆರೆಯುತ್ತಿದ್ದ ಲೋಕ್ಕೂರ್ ರಾಜನಾದ ಪೞಯನನ್ನು ಚೆಂಗುಟ್ಟವನ್ ಸೋಲಿಸಿದ. ಏಳು ಮಂದಿ ರಾಜರುಗಳ ಕಿರೀಟಗಳಿಂದ ತೆಗೆದ ಚಿನ್ನದಿಂದ ಪದಕವನ್ನು ನಿರ್ಮಿಸಿ ಚೆಂಗುಟ್ಟವನ್ ಧರಿಸಿಕೊಂಡಿದ್ದನೆಂದು ತಮಿಳು ಕಾವ್ಯಗಳು ಈತನನ್ನು ಹೊಗಳಿವೆ. ಸಂಘಂ ಸಾಹಿತ್ಯದಲ್ಲಿ ನೆಡುಂಚೇರಲಾತನ್, ಕರಿಕಾಲನ್, ನೆಡುಂಚೆಳಿಯನ್ ಹೀಗೆ ಕೆಲವೇ ಮಂದಿ ಅಪೂರ್ವರಿಗೆ ಮಾತ್ರ ದೊರೆತ ಹೊಗಳಿಕೆಗೆ ಚೆಂಗುಟ್ಟವನ್ ಸಹ ಪಾತ್ರನಾಗಿದ್ದಾನೆ. ತನ್ನ ಕುಲದ ಲಾಂಛನವಾದ ಬಿಲ್ಲನ್ನು ಹಿಮಾಲಯದಲ್ಲಿ ನೆಟ್ಟುದಾಗಿ ಈತನನ್ನು ವಿಶಿಷ್ಟವಾಗಿ ತಮಿಳು ಕೃತಿಗಳು ಉಲ್ಲೇಖಿಸಿವೆ.

ಕಣ್ಣಗಿಯ ಕತೆಯ ಮೂಲಕ ಚೆಂಗುಟ್ಟವನ್‌ನ ಕೀರ್ತಿ ಉಳಿದು ಬಂದಿದೆ. ತಮಿಳು ಸಾಹಿತ್ಯದ ಅನಶ್ವರ ಕೃತಿಯಾದ ಶಿಲಪ್ಪದಿಕಾರಂಗೆ ಆ ಕತೆಯೇ ಆಧಾರವಾಗಿದೆ. ಚೋಳ ದೇಶದವನಾದ ವಣಿಕ ಶ್ರೇಷ್ಠ ಕೋವಲನ್ ಪತಿವ್ರತೆಯಾದ ಕಣ್ಣಗಿಯನ್ನು ತೊರೆದು ಮಾಧವಿ ಎಂಬ ನರ್ತಕಿಯೊಡನೆ ಪ್ರೇಮ ವ್ಯವಹಾರದಲ್ಲಿ ತೊಡಗಿ ತನ್ನೆಲ್ಲ ಸಂಪತ್ತನ್ನು ಕಳೆದುಕೊಳ್ಳುತ್ತಾನೆ. ಬಳಿಕ ಮರಳಿ ಕಣ್ಣಗಿಯ ಬಳಿಗೆ ಬಂದು ಆಕೆಯೊಡನೆ ಪಾಂಡ್ಯ ರಾಜಧಾನಿಯಾದ ಮದುರೈಗೆ ಹೋಗುವನು. ಅಲ್ಲಿ ಆಕೆಯ ಕಾಲಿನ ಕಡಗವನ್ನು ಮಾರಾಟ ಮಾಡಲು ಯತ್ನಿಸಿದಾಗ ರಾಜಭಟರು ಆತನನ್ನು ಕಳ್ಳನೆಂದು ಬಂಧಿಸಿ ವಧಾ ಶಿಕ್ಷೆಗೆ ಗುರಿ ಮಾಡುತ್ತಾರೆ. ಪತಿವ್ರತಾ ಶಿರೋಮಣಿಯಾದ ಕಣ್ಣಗಿಯ ಶಾಪಕ್ಕೆ ತುತ್ತಾಗಿ ಮದುರೈ ಸಂಪೂರ್ಣ ಸುಟ್ಟು ಭಸ್ಮವಾಗುತ್ತದೆ. ಅಲ್ಲಿಂದ ಅಭಯವನ್ನರಸಿ ಚೇರ ನಾಡಿಗೆ ಬಂದ ಕಣ್ಣಗಿಗೆ ಸ್ಮಾರಕ ನಿರ್ಮಿಸಲು ಚೆಂಗುಟ್ಟವನ್ ಉತ್ತರ ಭಾರತದಿಂದ ಶಿಲೆಯೊಂದನ್ನು ಆಯ್ಕೆ ಮಾಡುತ್ತಾನೆ. ಗಂಗಾ ಸ್ನಾನವನ್ನು ಮಾಡಿ ಮರಳಿ ಬಂದು ಶಿಲೆಯನ್ನು ನೆಡುತ್ತಾನೆ. ಇದುವೇ ಶಿಲಪ್ಪದಿಕಾರಂನ ಕಥಾಬೀಜ. ಇಳಂಗೋ ಅಡಿಗಳು ಈ ವಸ್ತುವನ್ನೇ ಆಧರಿಸಿ ಲೋಕೋತ್ತರವಾದ ಪ್ರಸಿದ್ಧ ಕಾವ್ಯವೊಂದನ್ನು ಬರೆದರು. ಪುಕಾರ್, ಮದುರೈ, ವಂಚಿ ಮೊದಲಾದ ನಗರಗಳ ವಿವರಗಳು ಅಂದಿನ ಜನಜೀವನದ ಸುಂದರ ಚಿತ್ರಗಳು ಈ ಕಾವ್ಯದಲ್ಲಿದೆ. ಆದರೆ ಶಿಲಪ್ಪದಿಕಾರಂನ ರಚನೆಯು ಚೆಂಗುಟ್ಟವನ್‌ನ ನಂತರ ಎರಡೋ, ಮೂರನೆಯದೋ ಶತಮಾನದಲ್ಲಿ ಆದುದರಿಂದ ಅದರಲ್ಲಿ ಪ್ರತಿಪಾದಿತವಾದ ವಿಚಾರಗಳು ಚೆಂಗುಟ್ಟವನ್‌ನ ಕಾಲಘಟ್ಟದವುಗಳಲ್ಲ. ಶಿಲಪ್ಪದಿಕಾರಂವನ್ನು ಬರೆದ ಕರ್ತೃ ಇಳಂಗೋ ಅಡಿಗಳು ಚೆಂಗುಟ್ಟವನ್‌ನ ಸಹೋದರನೆಂದು ಆ ಕಾವ್ಯದಲ್ಲಿಯೇ ಹೇಳಿಕೊಳ್ಳುತ್ತಾರೆ. ಆದರೆ ಶಿಲಪ್ಪದಿಕಾರಂನ ಕಾಲ ನಿರ್ಣಯದೊಂದಿಗೆ ಅದು ತಾಳೆಯಾಗುವುದಿಲ್ಲ. ಈತ ಕೇರಳೀಯನಾದ ಒಬ್ಬ ಕವಿ ಎಂಬುದರಲ್ಲಿ ಮಾತ್ರ ಸಂದೇಹವಿಲ್ಲ. ಪ್ರಸಿದ್ಧರಾದ ವ್ಯಕ್ತಿಗಳ ಮೂಲಕ ಕತೆ ಹೇಳಿಸುವುದು ಮಲಯಾಳಂ  ಪರಂಪರೆಯಲ್ಲಿಯೇ ಇದೆ. ಮಲಯಾಳಂನ ಪ್ರಮುಖ ಕವಿಯಾದ ಎೞುತ್ತಚ್ಚನ್ ಗಿಳಿಗಳ ಮೂಲಕ ಕಾವ್ಯವನ್ನು ಹಾಡಿಸಿದ್ದಾನೆ. ‘ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ’ ಎಂಬ ಕುಮಾರವ್ಯಾಸನ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹಾಗೆಯೇ ಚೆಂಗುಟ್ಟವನ್‌ನ ಸಹೋದರನೆಂಬ ಒಬ್ಬ ಯೋಗೀಶ್ವರನನ್ನು ಸಂಕಲ್ಪಿಸಿಕೊಂಡು ಆತನ ಮೂಲಕ ಕತೆ ಹೇಳುವ ಸಂಪ್ರದಾಯ ಶಿಲಪ್ಪದಿಕಾರಂನ ಕರ್ತೃ ಸ್ವೀಕರಿಸಿರಬಹುದು.

 ಚೆಂಗುಟ್ಟವನ್‌ನ ಕಣ್ಣಗಿ ಶಿಲಾಸ್ಮಾರಕ ಉತ್ಸವದಲ್ಲಿ ಸಹಕರಿಸಲು ಅನೇಕ ರಾಜರುಗಳನ್ನು ಆಹ್ವಾನಿಸಿದ್ದನು. ಅವರಲ್ಲಿ ಗಜಬಾಹು ಎಂಬ ಸಿಂಹಳ ರಾಜನೊಬ್ಬ ಭಾಗವಹಿಸಿದ ಬಗೆಗೆ ಪ್ರಸ್ತಾಪಿಸಲಾಗಿದೆ. ಸಿಲೋನ್‌ನ ಪ್ರಾಚೀನ ಇತಿಹಾಸದ ಗ್ರಂಥ ‘ಮಹಾವಂಶ’ದಲ್ಲಿ ಗಜಬಾಹುವಿನ ಆಡಳಿತ ಕಾಲ ಕ್ರಿ.ಶ. ೧೭೧-೧೯೩ ಎಂದು ಹೇಳಿದೆ. ಚೆಂಗುಟ್ಟವನ್‌ನ ಅಧಿಕಾರಾವಧಿಯ ಐವತ್ತನೇ ವರ್ಷದಲ್ಲಿ ಈ ಉತ್ಸವ ನಡೆದಿತ್ತು. ಇದು ಎರಡನೆಯ ಶತಮಾನದ ಕೊನೆಯ ಕಾಲು ಶತಮಾನದಲ್ಲಾಗುತ್ತದೆ. ಹಾಗಾಗಿ ಕಣ್ಣಗಿ ಸ್ಮಾರಕವನ್ನು ನಿರ್ಮಿಸುವ ಉತ್ಸವದಲ್ಲಿ ಗಜಬಾಹು ಭಾಗವಹಿಸಿದ್ದ ಎಂಬುದರಲ್ಲಿ ವಾಸ್ತವಾಂಶವಿದೆ.

ಚೆಂಗುಟ್ಟವನ್‌ನ ಜೀವನದ ಇನ್ನೊಂದು ಪ್ರಮುಖ ಘಟನೆಯೆಂದರೆ ಆತ ಚೋಳರ ಪರಂಪರಾಗತವಾದ ಅಧಿಕಾರದಲ್ಲಿ ಕೈ ಹಾಕಿದುದು. ಚೋಳರೊಡನೆ ನಡೆದ ಯುದ್ಧದಲ್ಲಿ ಕೆಲವು ಚೋಳ ರಾಜರನ್ನು ವಧಿಸಿ ಯಥಾರ್ಥ ಹಕ್ಕುದಾರನಾದ ನಲಂಕಿಳ್ಳಿಯನ್ನು ಅಧಿಕಾರದಲ್ಲಿ ಮುಂದುವರೆಯುವಂತೆ ಮಾಡಿದ.

ಚೆಂಗುಟ್ಟವನ್‌ನ ಕಾಲದಲ್ಲಿ ಬದುಕಿದ್ದನೆಂದು ಶಿಲಪ್ಪದಿಕಾರಂನಲ್ಲಿ ಹೇಳಿದ ಕರಿಕಾಲ ಮತ್ತು ನೆಡುಂಚೆಳಿಯನ್ ಆ ಹೆಸರುಗಳಲ್ಲಿ ಪ್ರಸಿದ್ಧರಾದುದು ಚೋಳ ರಾಜನೋ ಪಾಂಡ್ಯ ರಾಜನೋ ಅಲ್ಲ. ಪೊರುನರಾಟ್ಟುಪ್ಪಡೈಯಲ್ಲೂ ಪಟ್ಟಿನಿಪಾಲೈಯಲ್ಲೂ ಪ್ರಶಂಸೆಗೊಳಗಾದ ರಾಜ ಕರಿಕಾಲನ್. ಆತ ಎರಡನೆಯ ಕರಿಕಾಲನಾಗಿದ್ದಾನೆ. ಹಾಗೆಯೇ ನೆಡುಂಚೆಳಿಯನ್ ಎಂಬ ಹೆಸರಿನಲ್ಲಿ ಪ್ರಸಿದ್ದನಾದ ಪಾಂಡ್ಯ ರಾಜ ತಲೈಯಾಲಂಕಾನಂ ಯುದ್ಧದಲ್ಲಿ ಜಯಿ ಸಿದ್ದನು. ಆತನ ಕಾಲ ಮೂರನೆಯ ಶತಮಾನದ ಉತ್ತರಾರ್ಧ. ಚೆಂಗುಟ್ಟವನ್ ಕಾಲದಲ್ಲಿ ಬದುಕಿದ್ದ ಕರಿಕಾಲನು ನೆಡುಂಚೆಳಿಯನ್ ಚೆಂಗುಟ್ಟವನ್‌ನ ಪ್ರತಾಪದ ಮುಂದೆ ನಿಲ್ಲುವವ ನಾಗಿರಲಿಲ್ಲ.

ಚೆಂಗುಟ್ಟವನ್‌ನ ಬದುಕಿನ ಪ್ರಮುಖ ಘಟನೆಯೆಂದರೆ ಕಣ್ಣಗೀ ಪ್ರತಿಷ್ಠೆ. ಇದು ಆತನ ಧಾರ್ಮಿಕವಾದ ಔದಾರ್ಯವನ್ನು ತೋರಿಸುತ್ತದೆ. ಚೆಂಗುಟ್ಟವನ್ ಒಬ್ಬ ಶಿವಭಕ್ತ ನಾಗಿದ್ದ. ಪತ್ತಿನಿ ಒಬ್ಬಳು ಬೌದ್ಧ ಮತಾನುಯಾಯಿಯಾಗಿದ್ದಳು ಎಂದು ಮಣಿ ಮೇಖಲೈ ಯಲ್ಲಿ ಹೇಳಲಾಗಿದೆ. ಬೌದ್ಧ ಮತಾನುಯಾಯಿಗಳಾದ ರಾಜರುಗಳೇ ಚೆಂಗುಟ್ಟವನ್‌ನ ಆತ್ಮೀಯ ಸ್ನೇಹಿತರಾಗಿದ್ದರು. ಶಾತವಾಹನನಾದ ಯಜ್ಞಶ್ರೀ ಶಾತಕರ್ಣಿಯೂ ಸಿಲೋನಿನ ಗಜಬಾಹುಕಗಾಮಣಿಯೂ ಬೌದ್ಧಮತ ಅನುಯಾಯಿಗಳಾಗಿದ್ದರು. ಪತ್ತಿನಿಯ ಒಂದು ಪ್ರತಿಮೆಯನ್ನು ಗಜಬಾಹು ಸಿಲೋನಿನ ಅನುರಾಧಪುರದಲ್ಲಿ ಪ್ರತಿಷ್ಠಾಪಿಸಿದ್ದ. ಗಜಬಾಹು ಮಹಾಯಾನ ಬೌದ್ಧ ಪಂಥದಲ್ಲಿ ನಂಬಿಕೆಯಿರಿಸಿದ್ದ ಒಬ್ಬ ರಾಜನಾಗಿದ್ದ. ಹೀನಾಯಾನ ಪಂಥದವರನ್ನೆಲ್ಲ ಗಜಬಾಹು ನಂತರದ ದಿನಗಳಲ್ಲಿ ಮಹಾಯಾನದ ಕೇಂದ್ರವಾದ ಅಭಯಗಿರಿ ವಿಹಾರವನ್ನು ಗಜಬಾಹುಕಗಾಮಣಿ ಪ್ರೋತ್ಸಾಹಿಸಿದ್ದು ಮಹಾಯಾನರು ವೀರರ ಆರಾಧನೆಯಲ್ಲಿ ನಂಬಿಕೆಯಿರಿಸಿದವರಾದುದರಿಂದ ಕಣ್ಣಗಿಯ ಹಾಗಿರುವ ಪತಿವ್ರತೆಯರನ್ನು (ಪತ್ತಿನಿದೇವಿ) ಪ್ರತಿಷ್ಠಾಪಿಸಿ ಪೂಜಿಸುವುದರಲ್ಲಿ ಆಶ್ಚರ್ಯ ಪಡಬೇಕಾಗಿಲ್ಲ. ಪತ್ತಿನಿದೇವಿಯ ಕೆಲವು ಅವಶಿಷ್ಟ್ಯಗಳನ್ನು ಗಜಬಾಹು ಸಿಲೋನಿಗೆ ಕೊಂಡು ಹೋದುದಾಗಿ ರಾಜಾವಳಿ ಎಂಬ ಸಂಸ್ಕೃತ ಗ್ರಂಥಗಳಲ್ಲಿ ಹೇಳಲಾಗಿದೆ.

ಚೆಂಗುಟ್ಟವನ್ ಪತ್ತಿನಿದೇವಿಯನ್ನು ಪ್ರತಿಷ್ಠಾಪಿಸಿದಾಗ ಕುರವರು, ಕೊಂಗಳ್‌ಕೋಶರು (ಕೊಂಗುನಾಡಿನ ಕೋಶ ಎಂಬ ಜನವರ್ಗದವರು) ಪತ್ತಿನಿದೇವಿಯ ಬಲಿ ಮೊದಲಾದ ಪೂಜಾವಿಧಿಗಳಲ್ಲಿ ಭಾಗವಹಿಸಿದ್ದಾಗಿ ಹೇಳಲಾಗುತ್ತದೆ. ಪತ್ತಿನಿದೇವಿಯಲ್ಲಿಯೂ ಬೌದ್ಧ ಮತದೊಡನೆಯೂ ಜನರಿಗೆ ಇರುವ ಗೌರವದ ಸಂಕೇತವಾಗಿ ಇದನ್ನು ಪರಿಗಣಿಸಬಹುದು. ಸಿಲೋನ್‌ನ ಸಂಬಂಧದ ಮೂಲಕವೇ ಬೌದ್ಧಮತ ಕೇರಳದಲ್ಲಿಯೂ ಪ್ರಚಾರಕ್ಕೆ ಬಂದಿರಬೇಕು.

ಆಟ್ಟ್ ಕೊಟ್ಟ್ ಪಾಟ್ಟ್ ಚೇರಲಾತನ್

ಚೆಂಗುಟ್ಟವನ್‌ನ ಅಧಿಕಾರಾವಧಿಯಲ್ಲಿ ಆಟ್ಟ್‌ಕೊಟ್ಟ್‌ಪಾಟ್ಟ್ ಚೇರಲಾತನ್ ಯುವ ರಾಜನಾಗಿ ಕಾರ್ಯನಿರ್ವಹಿಸುತ್ತಿದ್ದ. ನರವ (ಮಂಗಳೂರು) ಈ ಯುವರಾಜನ ರಾಜಧಾನಿ ಯಾಗಿತ್ತು. ಚೇರ ಸಾಮ್ರಾಜ್ಯದ ಕೀರ್ತಿ, ಪ್ರತಿಷ್ಠೆಗಳು ಪರಾಕಾಷ್ಠೆಗೆ ತಲುಪಿದ ದಿನಗಳಾಗಿದ್ದವು ಅವು. ಆಟ್ಟ್‌ಕೊಟ್ಟ್‌ಪಾಟ್ಟ್ ಚೇರಲಾತನ್ ಒಬ್ಬ ಕಲಾಪ್ರೇಮಿಯೂ, ಸೌಂದರ್ಯಾ ರಾಧಕನೂ ಆಗಿದ್ದು ನೆಯ್ದಿಲೆಯೆ ಮೊದಲಾದ ಹೂಗಳನ್ನು ಮಾಲೆ ಮಾಡಿ ನೇತು ಹಾಕಿ ಅದರಿಂದ ಹೊರ ಹೊಮ್ಮುವ ನರುಗಂಪನ್ನು ಆಸ್ವಾದಿಸುತ್ತಾ ಸುಂದರಿಯರಾದ ವಿರಾಳಿ ನರ್ತಕಿ ಸ್ತ್ರೀಯರ ಸುಮಧುರ ಗಾಯನಕ್ಕೆ ಮೋಹಕವಾದ ನರ್ತನಕ್ಕೂ ಮೈ ಮರೆತು ಬಹಳ ಹೊತ್ತು ತಲ್ಲೀನನಾಗುತ್ತಿದ್ದನಂತೆ. ವಿರಾಳಿ ಸ್ತ್ರೀಯರೊಂದಿಗೆ ತಾನೂ ಹಾಡಿ, ಕುಣಿದು ನರ್ತಿಸುತ್ತಿದ್ದ ಈತನ ರಸಿಕತೆಯ ಬಗೆಗೆ ಕಲಾವೋಹದ ಬಗೆಗೆ ಸಂಘಂ ಕೃತಿಗಳಲ್ಲಿ ಸಾಕಷ್ಟು ವರ್ಣನೆಗಳು ಬರುತ್ತವೆ. ಮೊಗಲ ಚಕ್ರವರ್ತಿಗಳಲ್ಲಿ ಕಲಾಪ್ರಿಯನಾದ ಷಹಜಹಾನನಿಗಿದ್ದ ಕೀರ್ತಿ ಗೌರವಗಳು ಈತನಿಗಿವೆ.

ಆತನ ಬಗೆಗೆ ವಿರೋಧಿಗಳಲ್ಲಿ ಅಸೂಯೆ ಹುಟ್ಟಿಸುವಷ್ಟು ಸಂಪತ್ತು ಇತ್ತು. ಹಡಗುಗಳಲ್ಲಿ ಬಂದ ರತ್ನಾಭರಣಗಳನ್ನು ಸುರಕ್ಷಿತವಾಗಿಡಲು ಭಂಡಾರಗಳನ್ನು ಆತನ ರಾಜಧಾನಿಯಲ್ಲಿ ನಿರ್ಮಿಸಲಾಗಿತ್ತು. ನಾಡಿನಲ್ಲಿರುವ ಭಿಕ್ಷುಕರನ್ನು ಕರೆತಂದು ಅವರಿಗೆ ತೃಪ್ತಿಯಾಗುವಂತೆ ದಾನ-ಧರ್ಮಗಳನ್ನು ಮಾಡುತ್ತಿದ್ದನು. ಕವಿಯ ಮಾತುಗಳಲ್ಲಿ ಉತ್ಪ್ರೇಕ್ಷೆ ಇರಬಹುದಾದರೂ ಆತನ ಕಾಲದಲ್ಲಿ ಕೇರಳ ಸಂಪತ್ ಸಮೃದ್ದಿಯ ನೆಲೆಯಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.

ಕೇರಳದ ಕವಯಿತ್ರಿಯಾದ ಕಾಕ್ಕಪ್ಪಾಡಿನಿಯಾರ್ ನಚ್ಚಳ್ಳಯಾರ್ ಇದ್ದುದು ಆಟ್ಟುಕೊಟ್ಟುಪಾಟ್ಟ್ ಚೇರಲಾತನ್ ರಾಜನ ಆಸ್ಥಾನದಲ್ಲಿ. ರಾಜನನ್ನು ಹೊಗಳಿ ಹಾಡಿ ದುದಕ್ಕಾಗಿ ಪಾರಿತೋಷಕವಾಗಿ ಒಂಬತ್ತು ತೊಲೆ ಹೊನ್ನು, ಹೊನ್ನಿನ ಲಕ್ಷ ನಾಣ್ಯಗಳೂ ಈ ಕವಯಿತ್ರಿಗೆ ಲಭಿಸಿತ್ತು. ಅಷ್ಟೇ ಅಲ್ಲದೆ ಅರಮನೆಯಲ್ಲಿ ವಾಸ ಮಾಡಲು ಈ ತರುಣಿಗೆ ರಾಜ ಅನುಮತಿಯನ್ನು ನೀಡಿದ್ದನು.

ವಾನವರನ್ಬನ್ ಎಂಬ ಬಿರುದನ್ನು ಈತ ಇರಿಸಿಕೊಂಡಿದ್ದನಾದ್ದರಿಂದ ಈತನೂ ಒಬ್ಬ ಬೌದ್ಧಮತಾನುಯಾಯಿಯಾಗಿದ್ದ ಎಂದು ತಿಳಿದು ಬರುತ್ತದೆ.

೩೮ ವರ್ಷಗಳ ಕಾಲ ರಾಜ್ಯವಾಳಿದ ಈ ಚೇರ ರಾಜನು ಚೆಂಗುಟ್ಟವನ್‌ನ ಕಾಲದಲ್ಲಿ ಯುವರಾಜನಾಗಿಯೂ ತದನಂತರ ರಾಜನಾಗಿಯೂ ಕಾರ್ಯ ನಿವರ್ಹಿಸಿದ್ದ. ಎರಡನೆಯ ಶತಮಾನದ ಅಂತ್ಯದಲ್ಲಿ ಆಟ್ಟ್‌ಕೊಟ್ಟಪಾಟ್ಟ್ ಚೇರಲಾತನ್‌ನ ರಾಜ್ಯಭಾರ ಕೊನೆಗೊಂಡಿರ ಬೇಕು.

ಕ್ರಿಸ್ತಶಕದ ಎರಡನೆಯ ಶತಮಾನದ ಪೂರ್ತಿ ಪ್ರತಾಪಶಾಲಿಗಳಾದ ಕಲಾಪ್ರೇಮಿಗಳಾದ ರಾಜರ ಆಡಳಿತದ ಅನುಗ್ರಹದಲ್ಲಿ ಚೇರರಾಜ್ಯ ಸಂಪತ್ಸಮೃದ್ಧವಾಗಿತ್ತು. ಚೇರ ರಾಜ್ಯದ ಸೀಮೆಗಳು ವಿಸ್ತರಿಸಿದ್ದಲ್ಲದೆ ಅಭಿವೃದ್ದಿಯ ಕವಾಟಗಳನ್ನು ತೆರೆದು ಕೊಟ್ಟಿದ್ದ ನೆಡುಂಚೇರಲಾತನ ಆಡಳಿತದಲ್ಲಿಯೇ ಎರಡನೆಯ ಶತಮಾನ ಆರಂಭ ಕಂಡಿತು. ಮುಂದುವರೆದ ಆ ಶತಮಾನದ ರಾಜರುಗಳ ಕಾಲದಲ್ಲಿ ಚೇರ ಸಾಮ್ರಾಜ್ಯದ ಹೆಸರು, ಕೀರ್ತಿಗಳು ಒಟ್ಟಾದವು. ನೆಡುಂಚೇರಲಾತನ್ ಮತ್ತು ಚೆಂಗುಟ್ಟವನ್ ಆ ಶತಮಾನದಲ್ಲಿ ಆಳಿದ ತಮಿಳಗಂನ ಅತ್ಯಂತ ಪ್ರಖ್ಯಾತರಾದ ರಾಜರುಗಳು.

ಚೆಂಗುಟ್ಟವನ್‌ನ ನಂತರ ಬಂದು ವಂಚಿಯನ್ನು ರಾಜಧಾನಿಯನ್ನಾಗಿ ಮಾಡಿ ಆಳಿದ ರಾಜರುಗಳು ಯಾರು ಕೂಡ ಅಷ್ಟು ಪ್ರಸಿದ್ದರಾಗಿರಲಿಲ್ಲ. ಚೇರ ಸಾಮ್ರಾಜ್ಯದ ಗತವೈಭವದ ನೆಲೆಯಲ್ಲಿಯೇ ರಾಜ್ಯದ ಗಡಿಯನ್ನು ಗಟ್ಟಿಗೊಳಿಸಲು ಕೆಲವರಿಗೆ ಸಾಧ್ಯವಾದುದೂ ಇದೆ. ಆದರೂ ಮೂರನೆಯ ಶತಮಾನಕ್ಕೆ ಬಂದರೂ ಆ ಶತಮಾನದ ಪೂರ್ವಾಧರ್ದಲ್ಲಿ ಕರಿಕಾಲ ಚೋಳನು ಉತ್ತರಾರ್ಧದಲ್ಲಿ ನೆಡುಂಚೆಳಿಯನ್ ಪಾಂಡ್ಯನೂ ಅತುಲ ವಿಕ್ರಮಿಗಳಾಗಿ ಪ್ರಕಟ ವಾದರು.

ಚೆಂಗುಟ್ಟವನ್‌ನ ಮಗನಾದ ಕೋತೈ ವಂಚಿಯನ್ನು ರಾಜಧಾನಿಯನ್ನಾಗಿಸಿ ಆಡಳಿತ ನಡೆಸಿದಂತೆ ತೋರುತ್ತದೆ. ಶತ್ರುಗಳಿಗೆ ಜಯಿಸಲಸಾಧ್ಯವಾದ ಒಬ್ಬ ವಿಕ್ರಮಿಯಾಗಿದ್ದ ಕೋತೈ. ಈತ ಕವಿಯೂ ಆಗಿದ್ದ ಎಂಬ ಅಭಿಪ್ರಾಯವಿದ್ದು ಈತನು ರಚಿಸಿದ ಒಂದು ಹಾಡು ಪುರನಾನೂರಿನಲ್ಲಿ ಇದೆ. ಚೇರಮಾನ್ ಇಳಂಕುಟ್ಟವನ್ ಎಂಬ ಒಬ್ಬ ರಾಜನ ಕುರಿತು ಅಗನಾನೂರಿನಲ್ಲಿ ಹೇಳಲಾಗಿದೆ. ಕವಿ ಪಾಲೈ ಹಾಡಿದ ಪೆರುಂಕಡುಕೋ ವಂಚಿಯ ಮತ್ತೊಬ್ಬ ರಾಜನಾಗಿದ್ದ. ಈ ರಾಜನ ಕುರಿತು ಇಳವಾಯಿನಿ ಎಂಬ ಕವಿ ಹಾಡಿದ್ದಾನೆ. ಈತನ ಕಾಲದಲ್ಲಿ ವಂಚಿನಗರವು ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು. ಈ ರಾಜನೂ ಸಹ ಒಬ್ಬ ಕವಿಯಾಗಿದ್ದ. ಸಂಘಂ ಸಾಹಿತ್ಯದಲ್ಲಿ ಶಾಶ್ವತವಾದ ಒಂದು ಸ್ಥಾನ ಪಾಲೈ ಕವಿ ಹಾಡಿದ ಪೆರುಂಕಡುಕೋವನಿಗಿದೆ.

ನಂತರದಲ್ಲಿ ಮಾವೆಂಕೋ ಎಂಬ ಚೇರ ರಾಜ ರಾಜ್ಯವಾಳಿದ ಬಗೆಗೆ ತಿಳಿಯುತ್ತದೆ. ಚೋಳ-ಪಾಂಡ್ಯ ರಾಜರುಗಳೊಡನೆ ಸ್ನೇಹದಿಂದಿದ್ದ ಒಬ್ಬ ರಾಜನೀತ. ಈತನ ಬಗೆಗೆ ಕವಯಿತ್ರಿ ಅವ್ವಯ್ಯರ್ ಹಾಡಿದ್ದಾಳೆ. ನಂತರದ ಚೇರ ರಾಜ ಚೇರಮಾನ್ ವಂಚ. ಈತ ಉದಾರನಾಗಿದ್ದ ಎಂದು ಸಂಘಂ ಸಾಹಿತ್ಯದಲ್ಲಿ ಹೇಳಲಾಗಿದೆ. ಆದರೆ ಈತನ ಕಾಲದಲ್ಲಿ ಪಾಂಡ್ಯರಾಜ ನೆಡುಂಚೆಳಿಯನ್ ಮುಚಿರಿ (ಮುಸಿರಿಸ್) ಪಟ್ಟಣವನ್ನು ಆಕ್ರಮಿಸಿದನು. ಬಳಿಕ ವಂಚಿ ನಗರವನ್ನು ಚೋಳರು ಆಕ್ರಮಿಸಿಕೊಂಡರು. ಕುಳಮುಟ್ಟತ್ತ್ ತುಂಚಿಯ ಕಿಳ್ಳಿವಳವನ್ ಎಂಬ ಚೋಳ ರಾಜನು ಕೊಂಗುನಾಡು ಹಾಗೂ ಕುಟ್ಟನಾಡನ್ನು ಆಕ್ರಮಿಸಿದಾಗ ವಂಚಿ ನಗರವು ಶರಣಾಯಿತು ಎಂದು ಸಂಘಂ ಕೃತಿಗಳಲ್ಲಿ ಹೇಳಲಾಗಿದೆ. ಹೀಗೆ ಮೂರನೆಯ ಶತಮಾನದ ಉತ್ತರಾರ್ಧದಲ್ಲಿ ವಂಚಿನಗರವನ್ನಾಳಿದ ಚೇರ ರಾಜರುಗಳ ಪರಂಪರೆ ಕೊನೆಗೊಂಡಿತು ಎಂದು ಸಂಘಂ ಕೃತಿಗಳಿಂದ ವ್ಯಕ್ತವಾಗುತ್ತದೆ.

ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲಿರುವ ಉಲ್ಲೇಖಗಳು

ಪ್ರಾಚೀನ ಕಾಲದಿಂದಲೇ ಕೇರಳವು ಇತರ ಭಾಗಗಳಲ್ಲಿರುವ ಜನರ ಗಮನವನ್ನು ಸೆಳೆದಿತ್ತು. ಪ್ರಾಚೀನ ಸಂಸ್ಕೃತ ಗ್ರಂಥಗಳಲ್ಲಿ ಕೇರಳದ ಕುರಿತಾಗಿ ಇರುವ ಪರಾಮರ್ಶೆಗಳೇ ಇದಕ್ಕೆ ನಿದರ್ಶನ. ಕೇರಳದ ಕುರಿತು ಸ್ಪಷ್ಟವಾಗಿ ಹೇಳುವ ಮೊದಲ ಗ್ರಂಥ ಐತರೇಯಾರಣ್ಯಕ. ರಾಮಾಯಣ, ಮಹಾಭಾರತಗಳಲ್ಲೂ ಕೇರಳದ ಕುರಿತು ಉಲ್ಲೇಖಗಳಿವೆ. ಕೇರಳದ ಭೂ ಗರ್ಭಶಾಸ್ತ್ರದ ಬಗೆಗೆ ಕ್ರಿ.ಪೂ. ನಾಲ್ಕನೆಯ ಶತಮಾನದಲ್ಲಿ ಜೀವಿಸಿದ್ದ ಕಾತ್ಯಾಯನ ಮತ್ತು ಕ್ರಿ.ಪೂ. ಎರಡನೆಯ ಶತಮಾನದಲ್ಲಿ ಜೀವಿಸಿದ್ದ ಪತಂಜಲಿ ಇವರಿಗೆ ಅರಿವಿತ್ತು. ಕೌಟಿಲ್ಯನು ಅರ್ಥಶಾಸ್ತ್ರದಲ್ಲಿ ಮುತ್ತುಗಳು ತುಂಬಿದ ಕೇರಳದ ನದಿಗಳ ಕುರಿತು ಸೂಚಿಸಿದ್ದಾನೆ. ಪುರಾಣಗಳಲ್ಲೂ ಕೇರಳದ ಕುರಿತು ಪರಾಮರ್ಶಿಸಲಾಗಿದೆ. ಕಾಳಿದಾಸನ ‘ರಘುವಂಶ’ದಲ್ಲಿ ಕೇರಳದ ಕುರಿತಾದ ವಿವರಣೆ ಕೊಡುವುದರಿಂದ ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿಯೇ ಉತ್ತರ ಭಾರತೀಯ ಸಾಹಿತಿಗಳಿಗೂ ಕೇರಳದ ಕುರಿತು ತಿಳುವಳಿಕೆ ಇದ್ದಿತು ಎಂದು ಭಾವಿಸ ಬಹುದಾಗಿದೆ.

ವಿದೇಶಿ ಬರಹಗಾರರು

ವಿದೇಶಿ ಬರಹಗಳಲ್ಲಿ ಗ್ರೀಸ್‌ನ ಮತ್ತು ರೋಮ್‌ನ ಪ್ರಾಚೀನ ಗ್ರಂಥಕರ್ತರ ವಿವರಗಳಲ್ಲಿ ಕೇರಳಕ್ಕೆ ಸ್ಥಾನ ಕಲ್ಪಿಸಲಾಗಿದೆ. ಗ್ರೀಕ್ ಪ್ರತೀಹಾರಾ ಮೇಗಸ್ತನೀಸ್ ಚೇರ ರಾಜ್ಯದ ಕುರಿತು ತನ್ನ ‘ಇಂಡಿಕಾ’ ಎಂಬ ಗ್ರಂಥದಲ್ಲಿ ಹೇಳಿದ್ದಾನೆ. ಪ್ಲಿನಿ (ಕ್ರಿ.ಶ. ಮೊದಲನೆಯ ಶತಮಾನ), ಟಾಲೆಮಿ (ಕ್ರಿ.ಶ. ಎರಡನೆಯ ಶತಮಾನ) ಮೊದಲಾದವರು ಕೇರಳವನ್ನು ಕುರಿತು ಹೇಳಿದ ಇತರ ಪ್ರಮುಖ ಬರಹಗಾರರು. ಕೇರಳ ಮತ್ತು ರೋಮ್ ಸಾಮ್ರಾಜ್ಯಗಳ ಪರಸ್ಪರ ವ್ಯಾಪಾರ ಸಂಬಂಧವನ್ನು ಕುರಿತೇ ಅವರೆಲ್ಲ ಹೆಚ್ಚಾಗಿ ಉಲ್ಲೇಖಿಸಿದ್ದಾರೆ. ಮುಸಿರಿಸ್, ತಿರಿಡಿಸ್, ಬರಕ್ಕೆ ಮೊದಲಾದ ಬಂದರುಗಳ ಕುರಿತೂ ಅವರು ಹೇಳಿದ್ದಾರೆ. ಸುಲೈಮಾನ್ (ಒಂಬತ್ತನೆಯ ಶತಮಾನ) ಮಾರ್ಕೊಪೋಲೋ (ಹದಿಮೂರನೆಯ ಶತಮಾನ), ಫ್ರಿಯಾದ್ ಜೊರ್ಡಾನಸ್ (ಹದಿನಾಲ್ಕನೆಯ ಶತಮಾನ) ಇಬನ್‌ಬತೂತ್ (ಹದಿನಾಲ್ಕನೆಯ ಶತಮಾನ) ಮಹ್ವಾನ್ (ಹದಿನೈದನೆಯ ಶತಮಾನ) ನಿಕೋಲೋ ಕೊಂಟಿ (ಹದಿನೈದನೆಯ ಶತಮಾನ) ಅಬ್ದುಲ್ ರಸಾಕ್ (ಹದಿನೈದನೆಯ ಶತಮಾನ) ಮೊದಲಾದ ವಿದೇಶಿ ಪ್ರವಾಸಿಗರ ಬರವಣಿಗೆ ಗಳು ಕೇರಳದ ಜೀವನದ ಕುರಿತು ಮತ್ತು ಕೇರಳದೊಡನೆ ವಿದೇಶಿ ರಾಷ್ಟ್ರಗಳ ವ್ಯಾಪಾರ ಸಂಬಂಧವನ್ನು ಕುರಿತು ಕೆಲವು ಕುತೂಹಲಕರವಾದ ಸಂಗತಿಗಳನ್ನು ತಿಳಿಸುತ್ತವೆ. ವ್ಯಾಪಾರ ಹಾಗೂ ವಾಣಿಜ್ಯ ಕ್ಷೇತ್ರಗಳ ಕೇರಳೀಯರ ಕೊಡುಗೆಗಳನ್ನು ಅವರ ಸಂಸ್ಕೃತಿಯ ಜೊತೆಗೆ ಸಂಬಂಧ ಕಲ್ಪಿಸಿ ನೋಡುವುದು ಔಚಿತ್ಯಪೂರ್ಣವಾಗಬಹುದು. ಕೇರಳ ಸಂಸ್ಕೃತಿಯನ್ನು ವಿದೇಶಿಯರು ಆಕರ್ಷಿಸುವುದಕ್ಕೆ ಪೂರ್ವದಲ್ಲಿ ಕೇರಳದ ಜೊತೆಗೆ ವ್ಯಾಪಾರ ಸಂಬಂಧಗಳನ್ನು ವಿದೇಶಿ ರಾಷ್ಟ್ರಗಳು ಹೊಂದಿದ್ದವು. ಸುಗಂಧ ದ್ರವ್ಯಗಳನಾಡು ಎಂಬ ಕಾರಣಕ್ಕೆ ಕೇರಳವು ವಿದೇಶಿ ರಾಷ್ಟ್ರಗಳನ್ನು ತನ್ನೆಡೆಗೆ ಸೆಳೆದಿತ್ತು. ಕೇರಳವೂ ವಿದೇಶಿ ರಾಷ್ಟ್ರಗಳೊಡನೆ ವ್ಯಾಪಾರ ಸಂಬಂಧವನ್ನು ಕ್ರಿ.ಪೂ. ಸುಮಾರು ಮೂರು ಸಾವಿರದ ವೇಳೆಗೆ ಹೊಂದಿತ್ತು.

ಸುಗಂಧ ವಸ್ತುಗಳ ವ್ಯಾಪಾರ ಆರಂಭ

ಪಶ್ಚಿಮ ಏಷ್ಯಾದ ರಾಜ್ಯಗಳಲ್ಲಿ ಕೇರಳದ ಸುಗಂಧ ವಸ್ತುಗಳಿಗೆ ತುಂಬಾ ಪ್ರಚಾರ ದೊರೆತಿತ್ತು. ಸುಗಂಧ ವಸ್ತುಗಳನ್ನು ಕುರಿತ ವಿವರಗಳು ವೇದ ಗ್ರಂಥಗಳಲ್ಲೂ ಇವೆ. ಅವರಲ್ಲಿ ಪ್ರಮುಖವಾದವುಗಳೆಂದರೆ ಕಾಳುಮೆಣಸು, ಶುಂಠಿ, ಜಾಯಿಕಾಯಿ, ಏಲಕ್ಕಿ, ದಾಲಚೀನಿ ಇತ್ಯಾದಿಗಳು. ಇವುಗಳಲ್ಲಿ ದಾಲಚೀನಿ ಮತ್ತು ಏಲಕ್ಕಿಗೆ ಪ್ರಥಮ ಸ್ಥಾನ. ಮಿಕ್ಕುಳಿದವುಗಳು ನಂತರ ಬಂದವುಗಳು. ಹೊರ ದೇಶಗಳಲ್ಲಿ ಈ ಸುಗಂಧ ವಸ್ತುಗಳು ಆಹಾರ ವಸ್ತುವಾಗಿ, ಔಷಧಿಯಾಗಿ, ಪೂಜಾ ಸಾಮಗ್ರಿಯಾಗಿ ಬಳಕೆಯಾಗುತ್ತಿತ್ತು. ಬಾಬಿಲೋನ್ ನಗರದ ವ್ಯಾಪಾರದಲ್ಲಿ ಸುಗಂಧ ವಸ್ತುಗಳು ಪ್ರಮುಖ ಸ್ಥಾನ ಪಡೆದಿದ್ದವು. ಈ ವಸ್ತುಗಳು ಕೇರಳದಿಂದ ಕಡಲಿನ ಮೂಲಕ ಹಾಗೂ ಕರಾವಳಿಯ ಮೂಲಕವೂ ಬೇರೆ ಬೇರೆ ದೇಶಗಳಿಗೆ ಸರಬರಾಜಾಗುತ್ತಿದ್ದವು. ಬೇಬಿಲೋನಿಯರಿಗೆ, ಅಸ್ಸೀರಿಯಸರಿಗೆ ಅಲ್ಲದೆ ಪ್ರಾಚೀನ ಈಜಿಪ್ಟಿಯನರಿಗೂ ಈ ಸುಗಂಧ ವಸ್ತುಗಳ ಬಗೆಗೆ ಅತಿಯಾದ ಮೋಹವಿತ್ತು. ಈಜಿಪ್ಟಿಯನ್ ರಾಜರ ಮೃತ ಶರೀರಗಳನ್ನು ಕೆಡದಂತೆ ಕಾಪಾಡಲು ದಾಲಚೀನಿಯನ್ನು ಉಪಯೋಗಿಸುತ್ತಿದ್ದರು. ಸುಗಂಧ ದ್ರವ್ಯಗಳ ಹಾಗೂ ತೈಲಗಳ ತಯಾರಿಗೂ ದಾಲಚೀನಿ ಯನ್ನು ಬಳಸಲಾಗುತ್ತಿತ್ತು.

ಇಸ್ರೇಲಿಯನರು

ಕೇರಳದಿಂದ ದಾಲಚೀನಿ ಹಾಗೂ ಇತರ ಸುಗಂಧ ವಸ್ತುಗಳು ಮೊದಲ ಬಾರಿಗೆ ಪಶ್ಚಿಮಕ್ಕೆ ಕೊಂಡೊಯ್ದವರು ಅರಬ್ಬಿಯರು ಮತ್ತು ಫೀನಿಷ್ಯರು. ಇಸ್ರೇಲಿನ ಸೋಲೋಮನ್ ರಾಜ (ಕ್ರಿ.ಪೂ ೧೦೦೦) ಫಿನೀಷ್ಯರ ನೇತೃತ್ವದಲ್ಲಿ ಕಳುಹಿಸಿದ ಹಡುಗುಗಳು ಪೂರ್ವದ ಓಂಫಿರ್ ಎಂಬ ಬಂದರಿನಿಂದ ಚಿನ್ನ ಹಾಗೂ ಸುಗಂಧ ವಸ್ತು ಮೊದಲಾದವುಗಳನ್ನು ಕೊಂಡೊ ಯ್ದುದಾಗಿ ಉಲ್ಲೇಖಗಳು ದೊರೆಯುತ್ತವೆ. ಆ ಓಂಫಿರ್ ಬಂದರು ಕೇರಳದಲ್ಲಿತ್ತೆಂದು ವಿದ್ವಾಂಸರ ಅಭಿಪ್ರಾಯ.

ಅರಬರು

ಸುಗಂಧ ವಸ್ತುಗಳ ವ್ಯಾಪಾರದಲ್ಲಿ ಫಿನಿಷ್ಯನರಿಗಿಂತಲೂ ಮುಂಚೂಣಿಯಲ್ಲಿದ್ದವರು ಅರಬರು. ಸುಗಂಧದ್ರವ್ಯ ವ್ಯಾಪಾರದಿಂದ ಗಳಿಸಿದ ಸಂಪತ್ತು ಅವರ ಸಂಸ್ಕೃತಿಯ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ತುಂಬಾ ಸಮಯದವರೆಗೂ ಅವರೇ ಸುಗಂಧ ದ್ರವ್ಯಗಳ ವ್ಯಾಪಾರದ ಗುತ್ತಿಗೆದಾರರಾಗಿದ್ದರು. ಅವರ ಮೂಲಕವೇ ಅವುಗಳು ಯುರೋಪನ್ನು ಸೇರುತ್ತಿದ್ದವು. ಸುಗಂಧ ದ್ರವ್ಯಗಳ ಬೆಲೆ ಹೆಚ್ಚಿಸುವುದಕ್ಕಾಗಿ ಅವುಗಳನ್ನು ಅವರು ತರುತ್ತಿದ್ದ ಜಾಗವನ್ನು ರಹಸ್ಯವಾಗಿ ಇರಿಸಿಕೊಂಡರು. ಅರೇಬಿಯಾದಲ್ಲೂ ಇಥಿಯೋಪಿಯಾದಲ್ಲೂ ಪರ್ವತ ಪ್ರದೇಶಗಳಲ್ಲಿ ಯಾರಿಗೂ ಹೋಗಲು ಸಾಧ್ಯವಾಗದ ದಟ್ಟಾರಣ್ಯಗಳ ಪ್ರದೇಶ ಗಳಿಂದೆಲ್ಲ ಅವರು ದಾಲಚೀನಿಯನ್ನು ಸಂಗ್ರಹಿಸಿ ತರುತ್ತಿದ್ದರೆಂದು ಹೇಳಿಕೊಳ್ಳುತ್ತಿದ್ದರು. ಶುಂಠಿ ಹಾಗೂ ಏಲಕ್ಕಿ ಅರಬರಿಗೆ ಅತ್ಯಂತ ಪ್ರಿಯನಾದ ಸುಗಂಧ ವಸ್ತುಗಳಾಗಿದ್ದವು. ಕಾಳುಮೆಣಸಿನ ಕುರಿತು ಅವರಿಗೆ ಅಂತಹ ಆಕರ್ಷಣೆ ಇದ್ದಿರಲಿಲ್ಲ.

ರೋಮ್ ಗ್ರೀಕ್ ವ್ಯಾಪಾರ ಸಂಬಂಧ

ಅರಬರ ಮೂಲಕ ಯುರೋಪ್ ತಲುಪಿದ ಕೇರಳದ ಸುಗಂಧ ವಸ್ತುಗಳ ಹಲವು ಉಪಯೋಗಗಳನ್ನು ರೋಮನರು, ಗ್ರೀಕರು ಕಂಡುಕೊಂಡರು. ಅವರು ತಯಾರಿಸುತ್ತಿದ್ದ ಸುಗಂಧ ದ್ರವ್ಯಗಳಲ್ಲಿ ದಾಲಚೀನಿಗೂ, ಏಲಕ್ಕಿಗೂ ಅದ್ವೀತಿಯವಾದ ಸ್ಥಾನವಿತ್ತು. ಮೊದಲನೆಯ ಸೆಲ್ಯುಕಸ್ ರಾಜನು ಅಪೋಲೋ ದೇವತೆಗೆ ಸಮರ್ಪಿಸುತ್ತಿದ್ದ ಪೂಜಾ ವಸ್ತುಗಳಲ್ಲಿ ದಾಲಚೀನಿಯೂ ಸೇರಿತ್ತು. ಗ್ರೀಸಿನ ಮತ್ತು ರೋಮಿನ ಶ್ರೀಮಂತರು ವಿಶೇಷ ಸಮಾರಂಭಗಳಲ್ಲಿ ಕೇರಳದ ಸುಗಂಧ ದ್ರವ್ಯಗಳಿಗೆ ಪ್ರಾಶಸ್ತ್ಯ ಕೊಟ್ಟಿದ್ದರು. ಕರಿಮೆಣಸಿಗೆ ವಿಶೇಷ ಪ್ರಚಾರ ಕೊಟ್ಟವರು ಗ್ರೀಕರು ಹಾಗೂ ರೋಮನ್ನರು. ಕ್ರಿ.ಶ. ಮೊದಲನೆಯ ಶತಮಾನದಲ್ಲಿ ಪ್ಲಿನಿಯು ಕರಿಮೆಣಸು ವ್ಯಾಪಾರದ ಪ್ರಾಮುಖ್ಯವನ್ನು ಸ್ಪಷ್ಟ ಪಡಿಸಿದ್ದಾನೆ. ಪ್ಲಿನಿಗೆ ಕರಿಮೆಣಸು ಪ್ರಿಯವಾಗಿರಲಿಲ್ಲ. ಹಾಗಾಗಿ ಅದರ ಪ್ರಸಿದ್ದಿಯು ಆತನನ್ನು ಅಚ್ಚರಿಗೊಳಿಸಿತು. ಹಿಪ್ಪೊಕ್ರಿಟಸ್ (ಕ್ರಿ.ಪೂ. ೪೬೦-೩೪೦) ಎಂಬ ಗ್ರೀಕ್ ವೈದ್ಯನು ಸುಗಂಧ ವಸ್ತುಗಳ ಔಷಧೀಯ ಗುಣಗಳ ಬಗೆಗೆ ಹೆಚ್ಚು ಒತ್ತು ಕೊಟ್ಟಿದ್ದಾನೆ. ಜ್ವರಕ್ಕೂ ತಲೆನೋವಿಗೂ ಉಪಯೋಗಿಸುವ ಭಾರತೀಯ ಔಷಧಿ ಎಂದು ಕಾಳುಮೆಣಸನ್ನು ಕುರಿತು ವಿವರಿಸಿದ್ದಾನೆ.

ಹಿಪ್ಪಾಲಸ್‌ನು ಮಳೆ ಗಾಳಿಗಳ ಗತಿಯನ್ನು ಕ್ರಿ.ಶ. ೪೫ರಲ್ಲಿ ಕಂಡು ಹಿಡಿಯುವುದರ ಮೂಲಕ ಕೇರಳದ ಮತ್ತು ಪಾಶ್ಚಾತ್ಯ ದೇಶಗಳ ನಡುವಿನ ವ್ಯಾಪಾರ ಸಂಬಂಧ ಹೆಚ್ಚು ಗಟ್ಟಿಗೊಂಡಿತು. ಬಳಿಕ ಈ ಈಜಿಪ್ಟಿಯನರು ರಂಗಕ್ಕೆ ಬಂದರು. ಕಾನ್‌ಸ್ಟಂಟಿಯನ್ ಚಕ್ರವರ್ತಿ (ಕ್ರಿ.ಶ. ನಾಲ್ಕನೆಯ ಶತಮಾನ) ಸ್ಥಾಪಿಸಿದ ಕಾನ್‌ಸ್ಟಂಟಿನೋಪಲ್ ನಗರವು ಸುಗಂಧ ವಸ್ತುಗಳ ಪ್ರಮುಖ ಕೇಂದ್ರವಾಯಿತು. ಚಕ್ರವರ್ತಿ ರೋಮ್‌ನ ಬಿಷಪ್‌ಗೆ ನೀಡಿದ ಕೊಡುಗೆಗಳಲ್ಲಿ ಕಾಳುಮೆಣಸು ಕೂಡಾ ಸೇರಿತ್ತು. ಕ್ರಿ.ಶ. ೫ನೆಯ ಶತಮಾನದ ರಾಜನು ರೋಮನ್ನು ಆಕ್ರಮಿಸಿದಾಗ ನಗರವನ್ನು ನಾಶಮಾಡದಿರಲು ಪ್ರತಿಫಲವಾಗಿ ಮೂರು ಸಾವಿರ ರಾತಲು ಕಾಳುಮೆಣಸನ್ನು ಕೊಟ್ಟಿದ್ದನು. ಕಾಳುಮೆಣಸು ಇಷ್ಟು ಪ್ರಮಾಣದಲ್ಲಿ ಯುರೋಪಿ ನಲ್ಲಿಯೂ ಲಭ್ಯವಾಗುತ್ತಿತ್ತು ಎನ್ನುವುದು ಇಲ್ಲಿ ಮುಖ್ಯವಾಗಿದೆ. ಅಂದು ಚಿನ್ನ ಬೆಳ್ಳಿಗಳಿಗೆ ಇದ್ದ ಬೆಲೆಯೇ ಕರಿಮೆಣಸಿಗೂ ಇತ್ತು ಎಂಬುದು ತಿಳಿಯುತ್ತದೆ. ಆ ಕಾರಣಕ್ಕಾಗಿಯೇ ಇದನ್ನು ಕಪ್ಪು ಚಿನ್ನ (Black Gold) ಎಂದು ಕರೆಯಲಾಗಿದೆ. ಯುರೋಪಿನ ಮಾರುಕಟ್ಟೆ ಗಳಲ್ಲಿ ಜಾಯಿಕಾಯಿಗಳು ಬೇಕಾದಷ್ಟು ಲಭ್ಯವಿದ್ದವು. ವಿಶೇಷವಾಗಿ ಎರಡನೆಯ ಶತಮಾನದ ವೆನೀಸ್‌ನಲ್ಲೂ ಸುಗಂಧ ವಸ್ತುಗಳ ವ್ಯಾಪಾರದಿಂದ ವ್ಯಾಪಾರಿಗಳು ಶ್ರೀಮಂತರಾದರು. ತತ್ಪರಿಣಾಮವಾಗಿ ಯುರೋಪಿನೆಲ್ಲೆಡೆ ವೆನೀಸಿನ ಕೀರ್ತಿ ಹಬ್ಬಿತು.

ಚೀನಾ ಮತ್ತು ಪಶ್ಚಿಮ ಯುರೋಪಿನೊಂದಿಗೆ ವ್ಯಾಪಾರ ಸಂಬಂಧ

ಪ್ರಾಚೀನ ಕಾಲದಿಂದಲೇ ಕೇರಳವು ಚೈನಾದೊಡನೆ ವ್ಯಾಪಾರ ಸಂಬಂಧವನ್ನು ಹೊಂದಿತ್ತು. ಚೈನಾದ ಅನೇಕ ವಸ್ತುಗಳು ಕೇರಳೀಯರ ಬದುಕಿನಲ್ಲಿ ಹಾಸುಹೊಕ್ಕಾಗಿವೆ ಎಂಬುದರಿಂದ ಇದನ್ನು ತಿಳಿಯಬಹುದು. ಅಡುಗೆಯಲ್ಲಿ ಬಳಸುತ್ತಿದ್ದ ಪಾತ್ರೆಗಳು, ಮೀನು ಹಿಡಿಯಲು ಬಳಸುತ್ತಿದ್ದ ಬಲೆಗಳು ಇದನ್ನು ಶ್ರುತಪಡಿಸುತ್ತವೆ. ಚೀನೀ ಭರಣಿ, ಚೀನಿ ಚಟ್ಟಿ, ಚೀನಿ ಬಲೆ ಇತ್ಯಾದಿ ಹೆಸರಿನ ವಸ್ತುಗಳು ಕೇರಳದ ಮನೆಮಾತಾಗಿವೆ. ಕ್ರಿ.ಶ. ೧೨ನೆಯ ಶತಮಾನ ದಲ್ಲಿ ಲಂಡನಿನಲ್ಲಿ ಕಾಳುಮೆಣಸು ವ್ಯಾಪಾರಿಗಳ ಒಂದು ಸಂಘವೇ ಇತ್ತು. ೧೩ನೆಯ ಶತಮಾನದಲ್ಲಿ ಜೀವಿಸಿದ್ದ ಮಾರ್ಕೊಪೊಲೋ ಪ್ರಸಿದ್ಧ ಪ್ರವಾಸಿಯಾಗಿದ್ದ. ಈತ ಚೈನಾ ಮತ್ತು ಪಶ್ಚಿಮ ಏಷ್ಯಾದ ಜೊತೆಗೆ ಭಾರತ ನಡೆಸಿದ ಸುಗಂಧ ದ್ರವ್ಯಗಳ ವ್ಯಾಪಾರದ ಬಗೆಗೆ ವಿವರಿಸಿದ್ದಾನೆ. ಕಾಳುಮೆಣಸು, ಶುಂಠಿ, ದಾಲಚೀನಿ  ಮೊದಲಾದವುಗಳ ಕುರಿತು ಮಾರ್ಕೊಪೊಲೋ ಪ್ರತ್ಯೇಕವಾಗಿ ಹೇಳಿದ್ದಾನೆ. ಹದಿನಾಲ್ಕನೆಯ ಶತಮಾನದಲ್ಲಿ ಇಂಗ್ಲೆಂಡಿ ನಲ್ಲಿ ಸುಗಂಧ ದ್ರವ್ಯಗಳಿಗೆ ತೆರಿಗೆ ವಿಧಿಸಲಾಗುತ್ತಿತ್ತು. ಕ್ರಿ.ಶ. ೧೩೪೫ರಲ್ಲಿ ಕಾಳುಮೆಣಸು ವ್ಯಾಪಾರಿಗಳ ಸಂಘ ಸ್ಥಾಪಿಸಿದವರೂ ಕೂಡಾ ಶ್ರೀಮಂತ ಕಾಳುಮೆಣಸು ವ್ಯಾಪಾರಿಗಳೇ ಆಗಿದ್ದರು. ಆ ಕಾಲದಲ್ಲಿಯೇ ಕಾಳುಮೆಣಸಿಗೂ ದಾಲಚೀನಿಗೂ ಬೆಲೆ ದುಬಾರಿಯಾದುದ ರಿಂದ ಜನಸಾಮಾನ್ಯರಿಗೆ ಅವುಗಳನ್ನು ಖರೀದಿಸುವುದು ಅಸಾಧ್ಯವಾಗಿತ್ತು. ನವೋತ್ಥಾನದ ಕಾಲದ ಸಂದರ್ಭದಲ್ಲಿ ಪಶ್ಚಿಮ ಯುರೋಪಿನ ರಾಷ್ಟ್ರಗಳವರು ಸುಗಂಧ ದ್ರವ್ಯ ವ್ಯಾಪಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದರು. ಪೋರ್ಚ್‌ಗೀಸರೆ ಇದರಲ್ಲಿ ಮೊದಲಿಗರಾಗಿದ್ದರು. ಹಾಗಾಗಿ ಅವರು ಅರಬರ ವಿರೋಧಿಗಳಾದರು. ಬಳಿಕ ಡಚ್ಚರು,  ಫ್ರೆಂಚರು, ಬ್ರಿಟಿಷರು ರಂಗ ಪ್ರವೇಶಿಸಿದರು. ಕಾಲ ಕ್ರಮೇಣ ಯುರೋಪಿನ ಪ್ರಮುಖ ರಾಷ್ಟ್ರಗಳು ಒಂದೊಂದಾಗಿ ಸುಗಂಧ ದ್ರವ್ಯ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಭಾರತವನ್ನು ತಮ್ಮ ಅಧೀನಕ್ಕೆ ತಂದುಕೊಂಡವು. ಆದರೂ ಬ್ರಿಟಿಷರ ಅಧಿಪತ್ಯದಲ್ಲಿ ಬಳಿಕ ಸ್ವಾತಂತ್ರ್ಯ ಲಭಿಸಿದ ಬಳಿಕವೂ-ಕಾಳುಮೆಣಸು, ಏಲಕ್ಕಿ, ದಾಲಚೀನಿಗಳು ಭಾರತಕ್ಕೆ ಬೇಕಾದಷ್ಟು ವಿದೇಶಿ ವಿನಿಮಯ ವನ್ನು ತಂದು ಕೊಟ್ಟವು.

ವ್ಯಾಪಾರೀ ಮಾರ್ಗಗಳು

ಕೇರಳದೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದ ವಿದೇಶಿಯರು ಯಾವ ಯಾವುದೋ ದಾರಿಗಳನ್ನು ಹುಡುಕುತ್ತಾ ಕಾಲ್ನಡೆಯಲ್ಲಿಯೇ ಬಂದರು ಎಂಬುದು ಕುತೂಹಲಕರವಾದ ಸಂಗತಿ. ಸಿಂಧೂನದಿ ತೀರದ ನಾಗರಿಕತೆಯ ಕಾಲದಲ್ಲಿಯೇ (ಕ್ರಿ.ಪೂ. ೩೦೦೦) ಉತ್ತರ ಭಾರತ ಮತ್ತು ದಕ್ಷಿಣ ಭಾರತ ಪರಸ್ಪರ ಸಂಪರ್ಕ ಹೊಂದಿದ್ದ ಸಾಧ್ಯತೆ ಇತ್ತು. ತೀರ ಪ್ರದೇಶಗಳ ಮೂಲಕ ಇದ್ದ ದಾರಿಗಳ ಮೂಲಕ ಕೇರಳದ ಸುಗಂಧ ವಸ್ತುಗಳು ಉತ್ತರ ಭಾರತದ ಪ್ರದೇಶಗಳಿಗೆ ತಲುಪಿರಬಹುದು. ಸೋಲೋಮನ್ ಚಕ್ರವರ್ತಿಯ ಕಾಲಕ್ಕೂ (ಕ್ರಿ.ಪೂ. ೧೦೦೦) ಬಹಳ ಮೊದಲೇ ಒಮಾನಿನಲ್ಲೂ ಪರ್ಶಿಯನ್ ಹಿನ್ನೀರಿನ ತೀರ ಪ್ರದೇಶಗಳ ಮೂಲಕ ಅರಬರು ಕೇರಳಕ್ಕೆ ಬಂದಿರುವ ಸಾಧ್ಯತೆಯೂ ಇದೆ. ಹಾಗೆ ಬಂದ ಅರಬರು ಕೇರಳದಿಂದ ಮೊದಲ ಬಾರಿಗೆ ದಾಲಚೀನಿಯನ್ನು ಪಶ್ಚಿಮ ಏಷ್ಯಾದ ಪ್ರದೇಶಗಳಿಗೆ ಕೊಂಡೊಯ್ದರು.

ಪ್ರಾಚೀನ ಬಂದರುಗಳು

ಪ್ಲಿನಿ, ಟಾಲೆಮಿ, ಪೆರಿಪ್ಲಸ್ ಮೊದಲಾದವರು ಪ್ರಾಚೀನ ಕೇರಳದ ಬಂದರುಗಳ ಕುರಿತು ಸ್ಪಷ್ಟವಾದ ವಿವರಗಳನ್ನು ನೀಡಿದ್ದಾರೆ. ಆ ಬಂದರುಗಳಲ್ಲಿ ಹಲವು ಇಂದು ನಾಮಾವಶೇಷವಾಗಿವೆ. ಪ್ರಾಚೀನ ಬಂದರುಗಳಲ್ಲಿ ಪ್ರಮುಖವಾದವು ಮುಸಿರಿಸ್ (ಇಂದಿನ ಕೊಡುಙಲ್ಲೂರ್). ಮುಸಿರಿಸ್ ಆ ಕಾಲದಲ್ಲಿ ಭಾರತಕ್ಕಿದ್ದ ಒಂದೇ ಪ್ರವೇಶ ದ್ವಾರವಾಗಿತ್ತು. ಮುಸಿರಿಸ್ ವ್ಯಾಪಾರ ಕೇಂದ್ರ ಎಂಬುದಷ್ಟೇ ಅಲ್ಲದೆ ಅದು ವಿವಿಧ ಸಂಸ್ಕೃತಿಗಳ ಸಂಗಮ ಸ್ಥಾನವೂ ಆಗಿತ್ತು. ಕೇರಳ ಸಂಸ್ಕೃತಿಯ ಬೆಳವಣಿಗೆಗೆ ಕೊಡುಗೆಗಳನ್ನು ನೀಡಿದ ಕ್ರಿಶ್ಚಿಯನ್ನರಿಗೆ, ಯೆಹೂದ್ಯರಿಗೆ, ಮಹಮ್ಮದೀಯರಿಗೆ ಆಶ್ರಯ ನೀಡಿದುದು ಮುಸಿರಿಸ್. ಕ್ರಿ.ಶ. ೧೩೪೧ರಲ್ಲಿ ಪೆರಿಯಾರಿನಲ್ಲಿ ದೊಡ್ಡದೊಂದು ನೆರೆ ಬಂದ ಬಳಿಕ ಆ ನಗರದ ಪ್ರಾಮುಖ್ಯತೆ ಕಡಿಮೆಯಾಯಿತು. ತಿಂಡಿಸ್, ಬರಾಕ್ಕೆ, ನೆಲ್‌ಕಿನ್‌ಡಾ ಮೊದಲಾದವುಗಳು ಪ್ರವಾಸಿಗಳು ವಿವರಿಸಿದ ಇತರ ಪ್ರಾಚೀನ ಬಂದರು ಪ್ರದೇಶಗಳಾಗಿವೆ. ಇವುಗಳಲ್ಲಿ ಬರಾಕ್ಕೆಯು ಇಂದಿನ ಪುರಕಾಟ್ ಆಗಿರಬಹುದು ಎಂಬುದರಲ್ಲಿ ವಿದ್ವಾಂಸರಲ್ಲಿ ಸಹಮತವಿದೆ. ಮತ್ತುಳಿದ ಎರಡು ಬಂದರುಗಳ ವಿಷಯದಲ್ಲಿ ಸ್ಪಷ್ಟವಾದ ಮಾಹಿತಿಗಳಿಲ್ಲ. ಪೆರಿಪ್ಲಸ್ ವಿಶ್ಲೇಷಿಸಿರುವ ‘ಬಲಿತ’ ತಿರುವನಂತಪುರದಿಂದ ದಕ್ಷಿಣಕ್ಕಿರುವ ವಿೞಿಞಂ ಆಗಿರಬಹುದೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ‘ನೌರ’ ಪ್ರಾಚೀನ ಬಂದರಿನ ಒಂದು ಹೆಸರು. ಇದು ಇಂದಿನ ಕಣ್ಣೂರು ಆಗಿರಬಹುದು. ಕೆಲವು ತಮಿಳು ಗ್ರಂಥಗಳಲ್ಲಿ ಕೆಲವು ಬಂದರುಗಳ ಹೆಸರುಗಳೂ ಇವೆ. ಉದಾಹರಣೆಗೆ ಮಾಂದೈ, ವಾಗೈ, ಪಂದರ್. ಇವುಗಳ ಇಂದಿನ ಹೆಸರೇನು ಎಂದು ನಿರ್ಧರಿಸುವುದು ಇತಿಹಾಸ ತಜ್ಞರಿಗೂ ಸಾಧ್ಯವಾಗಿಲ್ಲ.

ಪ್ರಾಚೀನ ಕಾಲದಲ್ಲಿಯೇ ಪ್ರಾಮುಖ್ಯ ಪಡೆದಿದ್ದ ಬಂದರುಗಳು ಕೊಲ್ಲಂ, ಕೊಚ್ಚಿನ್ ಮತ್ತು ಕೋಝಿಕೋಡ್. ಇವುಗಳಿಗೆ ಕೇರಳ ವಿದೇಶಿ ವ್ಯಾಪಾರದ ವಿಷಯದಲ್ಲಿ ಗಮನಾರ್ಹ ವಾದ ಸ್ಥಾನವಿದೆ. ಸುಲೈಮಾನ್ ಭಾರತವನ್ನು ಸಂದರ್ಶಿಸಿದಾಗ ಕ್ರಿ.ಶ. ೮೩೧ ಕೊಲ್ಲಂ ಚೀನಾದ ವ್ಯಾಪಾರ ಕೇಂದ್ರವಾಗಿತ್ತು. ಮಾರ್ಕೊಪೊಲೋ (೧೩ನೆಯ ಶತಮಾನ), ಇಬನ್ ಬತೂತ (೧೪ನೆಯ ಶತಮಾನ) ಮೊದಲಾದವರು ಚೀನಾದ ವ್ಯಾಪಾರಿ ಕೇಂದ್ರವೆಂದೇ ಕೊಲ್ಲಂನ್ನು ವಿವರಿಸಿದ್ದಾರೆ. ೧೩ ಮತ್ತು ೧೪ನೆಯ ಶತಮಾನದಲ್ಲಿ ಕೋಝಿಕೋಡ್ ಪ್ರಸಿದ್ದಿಗೆ ಏರಿತು. ೧೪೯೮ರಲ್ಲಿ ವಾಸ್ಕೋಡಿಗಾಮನು ಹಡಗಿನಿಂದ ಇಳಿಯುವ ವೇಳೆಗೆ ಅದರ ಪ್ರಸಿದ್ದಿ ಉಚ್ಛ್ರಾಯ ಸ್ಥಿತಿಗೇರಿತ್ತು.

೧೩೪೧ರಲ್ಲಿ ಮುಸಿರಿಸ್ ಅಧಃಪತನವಾಗಲು ಕೊಚ್ಚಿ ಅಭಿವೃದ್ದಿ ಪಥ ತುಳಿಯಿತು. ಚೀನೀಯರು, ಅರಬರು ಕೊಚ್ಚಿಯೊಡನೆ ವ್ಯಾಪಾರ ಸಂಬಂಧ ಬೆಳೆಸಿದರು. ೧೪೦೯ರಲ್ಲಿ ಮಾಹ್ವಾನನು ೧೯೪೦ರಲ್ಲಿ ನಿಕೋಲೋ ಕೋಂಟಿಯೂ ಸಂದರ್ಶಿಸಿದ ಕಾಲದಲ್ಲಿ ಕೊಚ್ಚಿಯು ಕರಿಮೆಣಸು ಮೊದಲಾದ ಸುಗಂಧ ದ್ರವ್ಯಗಳ ವ್ಯವಹಾರ ನಡೆಸುವ ಸಂಪತ್ ಸಮೃದ್ಧವಾದ ಬಂದರಾಗಿತ್ತು. ಆ ನಂತರದ ದಿನಗಳ ಚರಿತ್ರೆಯು ಕೇರಳ ಮತ್ತು ಯುರೋಪಿಯನ್ ಶಕ್ತಿಗಳ ಪರಸ್ಪರ ಸಾಮರಸ್ಯದ ಸಂಬಂಧದ ಸ್ಥಿತಿಗತಿಗಳಿಗೆ ಸಂಬಂಧಿಸಿದ್ದಾಗಿದೆ.

ಹೀಗೆ ಕೇರಳವು ಹೊರ ದೇಶಗಳೊಂದಿಗೆ ಏರ್ಪಡಿಸಿದ ವ್ಯಾಪಾರ ಬಾಂಧವ್ಯವು ಸಾಂಸ್ಕೃತಿಕ ಬಾಂಧವ್ಯವಾಗಿ ರೂಪು ಪಡೆಯಲು ದಾರಿ ಮಾಡಿ ಕೊಟ್ಟಂತಾಯ್ತು.