ಕೇರಳದ ಮಣ್ಣಿನಲ್ಲಿ ಮೊದಲ ಹೆಜ್ಜೆ ಗುರುತುಗಳನ್ನು ಮೂಡಿಸಿದ ಜನವರ್ಗಗಳ ಹಾಗೂ ಅವರ ಶವ ಸಂಸ್ಕಾರಗಳ ಬಗೆಗೆ ಕೆಲವು ಕುರುಹುಗಳು ದೊರೆಯುತ್ತವೆ. ಅವರು ಮಾತನಾಡುತ್ತಿದ್ದ ಭಾಷೆಯ ಬಗೆಗೆ ದಾಖಲೆಗಳಿಲ್ಲ. ಆದರೆ ಅವರು ತಮಿಳಿನ ಪ್ರಾಗ್‌ರೂಪವೊಂದನ್ನು ಬಳಸುತ್ತಿದ್ದರು ಎಂಬುದನ್ನು ವಿದ್ವಾಂಸರು ಅಂಗೀಕರಿಸಿದ್ದಾರೆ. ಅವರು ಲಾಟರೈಟ್ ಮಣ್ಣು ಹಾಗೂ ಗ್ರಾನೈಟ್‌ಗಳಿಂದ ವಿಶಿಷ್ಟ ರೀತಿಯಲ್ಲಿ ಗೋರಿಗಳನ್ನು ನಿರ್ಮಿಸುತ್ತಿದ್ದರು. ಇದು ಪಶ್ಚಿಮ ಯುರೋಪು ಮತ್ತು ಪಶ್ಚಿಮ ಏಷ್ಯಾಗಳ ಮೆಗಲಿಥಿಕ್ ಸ್ಮಾರಕಗಳನ್ನು ಹೋಲುವಂಥವು. ಹಾಗಾಗಿ ಈ ದೇಶಗಳ ಜೊತೆಗೆ ಇಲ್ಲಿನ ಜನರಿಗೆ ಸಂಬಂಧಗಳಿದ್ದವು ಎಂದು ಭಾವಿಸಬಹುದು. ಏಷ್ಯಾದ ಗೋರಿಗಳಿಗಿಂತ ಕೇರಳದ ಗೋರಿಗಳು ನಂತರದವುಗಳು. ಮೆನ್‌ಹಿರ್‌ಗಳು (ಎತ್ತರವಾಗಿ ನೆಟ್ಟಗೆ ನಿಲ್ಲಿಸಿರುವ ಅಖಂಡ ಶಿಲಾ ಸ್ಮಾರಕಗಳು), ಕಲ್ಲಿನ ಗುಹೆಗಳು, ಅರೆ ತೆರೆದ ಗೋರಿಗಳು, ಡಾಲ್ಟನ್ ಹಾಸು ಬಂಡೆಯ ಕಲ್ಲು ಕಟ್ಟಡಗಳು ಮತ್ತು ಕಲ್ಲಿನ ವೃತ್ತಾಕೃತಿಗಳು ಕೇರಳಕ್ಕೆ ವಿಶಿಷ್ಟವಾದವುಗಳು. ಇವುಗಳ ಬಗೆಗೆ ಸಂಘಂ ಸಾಹಿತ್ಯದಲ್ಲಿ  ಸಾಂದರ್ಭಿಕವಾಗಿ ಉಲ್ಲೇಖಿಸಲಾಗಿದೆ. ಪುರಾತತ್ವ ಶಾಸ್ತ್ರದ ಪ್ರಕಾರ ಇವುಗಳ ಕಾಲವನ್ನು ಕ್ರಿ.ಪೂ. ಹತ್ತನೆಯ ಶತಮಾನಕ್ಕೂ ಹಿಂದಿನದೆಂದು ಭಾವಿಸ ಲಾಗಿದೆ. ಇದೇ ಆಚರಣೆಗಳು ಚಾರಿತ್ರಿಕ ಕಾಲಘಟ್ಟದವರೆಗೂ ಮುಂದುವರಿದಿರಬೇಕು. ಅಂದರೆ ಕ್ರಿ.ಪೂ. ಹತ್ತನೆಯ ಶತಮಾನದಿಂದ ಕ್ರಿ.ಶ. ಐದನೆಯ ಶತಮಾನದವರೆಗಿನ ಅವಧಿ ಯೆಂದು ಒಪ್ಪಿಕೊಳ್ಳಲಾಗಿದೆ.

ಗೋರಿಗಳ ಅವಶೇಷಗಳು ಕಟ್ಟಿಸಿದ ತ್ರಿಶೂಲಗಳು ಮತ್ತು ಇತರ ಆಯುಧಗಳನ್ನು ಗಮನಿಸಿದರೆ ಮೆಗಲಿಥ್ ನಿರ್ಮಾಪಕರು ಶಿಲಾಯುಗದಿಂದ ತಾಮ್ರಯುಗವನ್ನು ಬಿಟ್ಟು ನೇರ ಕಬ್ಬಿಣಯುಗಕ್ಕೆ ವಿಸ್ತರಿಸಿಕೊಂಡರೆಂದು ವಿದ್ವಾಂಸರು ಭಾವಿಸಿದ್ದಾರೆ. ಪ್ರಾಚೀನ ಶಿಲಾಯುಗ ಮತ್ತು ನವೀನ ಶಿಲಾಯುಗಕ್ಕೆ ಸಂಬಂಧಿಸಿದಂತೆ ಅತ್ಯಂತ ಕನಿಷ್ಠ ಕುರುಹುಗಳು ಮಾತ್ರ ಕೇರಳದಲ್ಲಿ ಲಭ್ಯವಿವೆ. ಇತ್ತೀಚಿನ ವರ್ಷಗಳಲ್ಲಿ ಪುಣೆಯ ಡೆಕ್ಕನ್ ಕಾಲೇಜಿನ ಸಂಶೋಧಕರು ಪಾಲಕ್ಕಾಡ್ ಪ್ರದೇಶದಲ್ಲಿ ಪ್ರಾಚೀನ ಶಿಲಾಯುಗಕ್ಕೆ ಸಂಬಂಧಿಸಿದ ಸಂಭವನೀಯ ಜಾಗಗಳನ್ನು ಪತ್ತೆ ಹಚ್ಚಿದ್ದಾರೆ. ನವೀನ ಶಿಲಾಯುಗದ ಆಯುಧಗಳನ್ನು ಕೊಲ್ಕತ್ತಾ ವಿಶ್ವವಿದ್ಯಾಲಯದ ಸಂಶೋಧಕರು ಶೋಧಿಸಿದ್ದಾರೆ.

ಮೈಸೂರು ಗಡಿಭಾಗವನ್ನು ತಲುಪಿದ ಮೆಗಲಿಥ್ ನಿರ್ಮಾಪಕರನ್ನು ಹೋಲುವ ಮೌರ್ಯ ಆಕ್ರಮಣಕಾರರು ಬೆಟ್ಟ ಪ್ರದೇಶಗಳಲ್ಲಿ ವಾಸಿಸುತ್ತಾ ಸುತ್ತಮುತ್ತಲ ಪ್ರದೇಶಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಇವುಗಳ ವಿವರಗಳಿರುವ ತಮಿಳು ಸಾಹಿತ್ಯವನ್ನು ವಿದ್ವಾಂಸರು ಸಂರಕ್ಷಿಸಿಕೊಂಡು ಬಂದಿದ್ದಾರೆ. ಇದರಲ್ಲಿ ಚಾರಣ ಕವಿಗಳು ಸಂಗ್ರಹಿಸಿದವುಗಳೇ ಅತ್ಯಂತ ಹಳೆಯ ಹಾಡುಗಳು. ಅಶೋಕನ ಶಾಸನವೊಂದರಲ್ಲಿ ನೆರೆಯ ಜನರಾದ ಕೇರಳ ಪುತ್ರ ಮತ್ತು ಸತಿಯ ಪುತ್ರರು ಇವರಿಬ್ಬರೂ ಚೋಳ, ಪಾಂಡ್ಯ ಮತ್ತು ತಾಂಬಪಣ್ಣಿ ಅಥವಾ ಸಿಲೋನ್ ಇವರೊಂದಿಗಿದ್ದರು ಎಂದು ಹೇಳಿದೆ. ಇದರಲ್ಲಿ ಯಾವ ರಾಜರ ಹೆಸರನ್ನೂ ಹೇಳಿಲ್ಲ. ಹಾಗಾಗಿ ಚೋಳ, ಪಾಂಡ್ಯ ಮೊದಲಾದವರು ಬುಡಕಟ್ಟು ಸಂಸ್ಕೃತಿಯೊಂದರಿಂದ ರೂಪು ಪಡೆದ ಜನ ವರ್ಗದವರಿರಬೇಕು ಎಂದು ಊಹಿಸಬಹುದು. ಆಧುನಿಕ ಮೌರ್ಯ ಸಾಮ್ರಾಜ್ಯದೊಡನೆ ಸಂಬಂಧವನ್ನು ಹೊಂದಿದ್ದ ಅವರು ಚೇರರ ಮತ್ತು ಕೇರಳದ ಸಣ್ಣಪುಟ್ಟ ಮುಖಂಡರ ನಡುವೆ ರಾಜಕೀಯ ಹಾಗೂ ಸಾಮಾಜಿಕ ಚಳುವಳಿಗಳಿಗೆ ಹೆಚ್ಚಿನ ಚಾಲನೆ ಕೊಟ್ಟರು. ಅಶೋಕನು ಈ ಪ್ರದೇಶಗಳಿಗೆ ರಸ್ತೆಗಳನ್ನು ನಿರ್ಮಿಸಿ ಇಲ್ಲಿನ ವ್ಯಾಪಾರಾಭಿವೃದ್ದಿಗೆ ಕಾರಣನಾದನು. ಬೌದ್ಧ ಸನ್ಯಾಸಿಗಳನ್ನು ಧರ್ಮ ಪ್ರಚಾರಕ್ಕಾಗಿ ಕಳುಹಿಸಿದುದರ ಪರಿಣಾಮವಾಗಿ ಚೇರ ರಾಜಧಾನಿಯಾದ ಕರೂರ್‌ನ ಸುತ್ತುುತ್ತಲ ಗುಹೆಗಳಲ್ಲಿ ಬ್ರಾಹ್ಮಿ ಲಿಪಿಯ ಶಾಸನಗಳು ದಾಖಲಾದವು. ಎಳಿಮಲೆ (ಕಣ್ಣೂರು ಸಮೀಪ)ಯ ಪ್ರಸಿದ್ಧ ದಳವಾಯಿಯಾದ ನನ್ನನ್‌ನನ್ನು ಕವಿಗಳು ಹಾಡಿ ಹೊಗಳಿದ್ದಾರೆ. ಈತ ಮೌರ್ಯರ ಸಮಕಾಲೀನನಾಗಿದ್ದನು.

ಕ್ರಿ.ಪೂ. ನಾಲ್ಕನೆಯ ಶತಮಾನದ ವೇಳೆಗೆ ಉತ್ತರ ಭಾರತದವರಿಗೆ ದಕ್ಷಿಣ ಭಾರತವು ಸುಪರಿಚಿತವಾಗಿತ್ತು. ಚಂದ್ರಗುಪ್ತನ ರಾಜಧಾನಿಗೆ ಬಂದಿದ್ದ ಗ್ರೀಕ್ ಪ್ರತೀಹಾರಿ ಮೆಗಸ್ತನೀಸ್‌ನು ದಕ್ಷಿಣ ಭಾರತದ ಬಗೆಗೆ ಉಲ್ಲೇಖಿಸಿದ್ದಾನೆ. ಪಾಂಡ್ಯ ರಾಜ್ಯವನ್ನು ಆಳುತ್ತಿದ್ದುದು ಒಬ್ಬಾಕೆ ಸ್ತ್ರೀಯೆಂದು, ಆ ರಾಜ್ಞಿಯ ಅಧೀನದಲ್ಲಿ ಮುನ್ನೂರ ಅರವತ್ತೈದು ಗ್ರಾಮಗಳು ಇದ್ದುವೆಂದು ಪ್ರತಿಯೊಂದು ದಿವಸವೂ ಒಂದೊಂದು ಗ್ರಾಮದ ಜನರು ರಾಜದಾಯವನ್ನು ತಂದು ಒಪ್ಪಿಸುತ್ತಿದ್ದುದು ಪದ್ಧತಿಯಾಗಿತ್ತು ಎಂಬಿತ್ಯಾದಿ ವಿವರಗಳಿವೆ. ಪಾಂಡ್ಯ ರಾಜ್ಯದ ಸಮೀಪವಿದ್ದ ರಾಜ್ಯ ‘ಚೇರ್‌ಮೇ’ ‘ಚೇರ’ ಅಥವಾ ‘ಕೇರಳ’ವೇ ಆಗಿದೆ.

ಕೌಟಿಲನ್ಯ ‘ಅರ್ಥಶಾಸ್ತ್ರ’ದಲ್ಲಿ ದಕ್ಷಿಣ ಭಾರತವನ್ನು ಕರತಲಾಮಲಕವಾಗಿ ಅಧ್ಯಯನ ಮಾಡಲಾಗಿದೆ. ಕೇವಲ ದಕ್ಷಿಣ ಭಾರತ ಎಂದಲ್ಲ. ಕೇರಳದ ಪ್ರಕೃತಿ ಸಂಪತ್ತನ್ನು ಸಹ ತಲಸ್ಪರ್ಶಿಯಾಗಿ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅರ್ಥಶಾಸ್ತ್ರದ ಕಾಲ ಕ್ರಿ.ಪೂ. ನಾಲ್ಕನೆಯ ಶತಮಾನವೆಂದು  ಬಹುತೇಕ ವಿದ್ವಾಂಸರ ಅಭಿಪ್ರಾಯ. ಅರ್ಥಶಾಸ್ತ್ರದಲ್ಲಿ ಹತ್ತು ರೀತಿಯ ಮುತ್ತುಗಳನ್ನು ಹೇಳಲಾಗಿದೆ. ಚೂರ್ಣಿ ಎಂದೂ ಹೆಸರಿರುವ ಪೆರಿಯಾರಿನಿಂದ ದೊರೆಯುವ ‘ಚೌರ್‌ಣಯಂ’, ತಾಮ್ರಪರ್ಣಿ ನದಿಯಿಂದ ದೊರೆಯುವ ‘ತಾಮ್ರಪರ್ಣಿಕಂ’, ಪಾಂಡ್ಯ ದೇಶದ ಮಲಯಾಕೋಟಿ ಪರ್ವತದಲ್ಲಿ ದೊರೆಯುವ ‘ಪಾಂಡ್ಯ ಕವಾಟಕಂ’, ಆಂಧ್ರದ ಮಹೇಂದ್ರ ಪರ್ವತದಿಂದ ದೊರೆಯುವ ‘ಮಹೇಂದ್ರಂ’ ಮೊದಲಾದವುಗಳನ್ನು ಹೆಸರಿಸಲಾಗಿದೆ. ಚೂರ್ಣಿ ನದಿಯ ಶಂಖಗಳಿಂದ ಕ್ರಿ.ಶ. ಹದಿನಾಲ್ಕನೆಯ ಶತಮಾನದವರೆಗೆ ಮುತ್ತುಗಳು ಧಾರಾಳವಾಗಿ ಸಿಗುತ್ತಿದ್ದುವು ಎಂದು ‘ಶುಕ ಸಂದೇಶಂ’ ಎಂಬ ಸಂಸ್ಕೃತ ಕಾವ್ಯದಲ್ಲಿ ಹೇಳಲಾಗಿದೆ. ಮೂರು ತೆರನ ಮಾಣಿಕ್ಯಗಳಲ್ಲಿ ಎರಡೂ ಸಹ ದಕ್ಷಿಣ ಭಾರತದಲ್ಲಿ ದೊರೆಯುವವುಗಳೇ ಆಗಿವೆ. ಮಲಯಾದ್ರಿಯ ಮತ್ತು ದಕ್ಷಿಣ ಸಮುದ್ರದ ಮಧ್ಯದಲ್ಲಿರುವ ಕೋಟೆ ಎಂಬ ಪ್ರದೇಶದಲ್ಲಿ ದೊರೆಯುವ ‘ಕೌಟಂ’, ಮಲಯಾದ್ರಿಯ ಮೂಲ ಎಂಬಲ್ಲಿರುವ ‘ಮಲೇಯಕಂ’ ರತ್ನಗಳ ಜೊತೆಗೆ ಹಲವು ಬಣ್ಣಗಳಲ್ಲಿರುವ ವೈಢೂರ್ಯಗಳ ಬಗೆಗೂ ಅದರಲ್ಲಿ ಪ್ರತಿಪಾದಿಸಲಾಗಿದೆ. ಅವುಗಳ ಏಕ ಉಗಮ ಸ್ಥಾನ ಕೊಂಗುನಾಡು ಎಂಬ ಸಂಗತಿ ಗಮನಾರ್ಹವಾದುದು.

ರತ್ನಗಳಿಗೆ ಹೊರತಾಗಿ ಶ್ರೀಗಂಧ, ಕಾಳು ಮೆಣಸು, ತೇಗ ಮೊದಲಾದ ಕೇರಳದ ಉತ್ಪನ್ನಗಳ ಬಗೆಗೂ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಮಲಯಾ ದೇಶದಲ್ಲಿ ದೊರೆಯುವ ಶ್ರೀಗಂಧವು ರಕ್ತವರ್ಣದಾಗಿತ್ತೆಂದು ಪ್ರತ್ಯೇಕವಾಗಿ ಹೇಳಲಾಗಿದೆ. ಮರಿಚಂ (ಕಾಳುಮೆಣಸು) ಔಷಧ ಗುಣವುಳ್ಳದ್ದೆಂದೂ ಕೌಟಿಲ್ಯನಿಗೆ ತಿಳಿದಿತ್ತು. ಗಟ್ಟಿಯಾದ ತಿರುಳಿರುವ ಮರಗಳಲ್ಲಿ ತೇಗಕ್ಕೆ ಮೊದಲ ಪ್ರಾಶಸ್ತ್ಯ ಕೊಡಲಾಗಿದೆ.

ದಕ್ಷಿಣ ಭಾರತದ ಪ್ರಕೃತಿ ಸಂಪತ್ತನ್ನು ಅರ್ಥ ಮಾಡಿಕೊಂಡಿರುವ ಕೌಟಿಲ್ಯನು ಉತ್ತರಾಪಥಕ್ಕಿಂತಲೂ ದಕ್ಷಿಣಾ ಪಥವನ್ನೇ ವಾಣಿಜ್ಯ ಪ್ರಧಾನವಾದುದೆಂದು ಅಭಿಪ್ರಾಯ ಪಟ್ಟಿದ್ದಾನೆ. ಅದುವರೆಗೆ ದಕ್ಷಿಣ ಭಾರತವನ್ನು ಆದಾಯ ಕಡಿಮೆ ಇರುವ ಪ್ರದೇಶವೆಂದು ಭಾವಿಸಲಾಗಿತ್ತು. ಅಲ್ಲದೆ ಅದುವರೆಗೆ ದಕ್ಷಿಣಾಪಥ ಎಂದರೆ ದಂಡಕಾರಣ್ಯದವರೆಗೆ ಮಾತ್ರವೆ ವ್ಯಾಪಿಸಿತ್ತು. ಬಳಿಕ ದಕ್ಷಿಣ ಭಾರತವು ವ್ಯಾಪಾರಕ್ಕೆ ಮುಕ್ತವಾಗಿ ತೆರೆದುಕೊಂಡುದರಿಂದ ದಕ್ಷಿಣ ಭಾರತದಲ್ಲಿ ವ್ಯಾಪಾರ ಅಭಿವೃದ್ದಿಯಾಯಿತು. ಇಂಡೋಆರ್ಯನ್ನರೂ ಸರಿ ಸುಮಾರು ಇದೇ ಕಾಲಘಟ್ಟದಲ್ಲಿ ಬಂದಿರಬೇಕು.

ಸಾಂಸ್ಕೃತಿಕ ಸಂಪತ್ತಿನ ವಿನಿಮಯದ ಮುನ್ನುಡಿಯಾಗಿ ವ್ಯಾಪಾರದ ಮೂಲಕ ಉತ್ಪನ್ನಗಳ ವಿನಿಮಯ ನಡೆದಿರುವುದನ್ನು ಇತಿಹಾಸದಲ್ಲಿ ಕಾಣಬಹುದು. ಪ್ರಾಚೀನ ಕಾಲದಲ್ಲಿ ಭಾರತ ಮತ್ತು ಪಾಶ್ಚಾತ್ಯ ದೇಶಗಳೊಡನೆ ಪರಸ್ಪರ ನೆಲೆ ನಿಂತ ವ್ಯಾಪಾರ ಸಂಬಂಧಗಳ ಮೂಲಕವೇ ಭಾರತದ ಧರ್ಮ, ತತ್ವ ಚಿಂತನೆ, ಕಥನ ಸಂಪ್ರದಾಯ, ವೈದ್ಯಶಾಸ್ತ್ರ ಮೊದಲಾದವುಗಳು ಪಾಶ್ಚಾತ್ಯ ದೇಶಗಳಲ್ಲಿ ಪಸರಿಸಲು ಕಾರಣವಾಯಿತು. ಹಾಗೆಯೇ ಪಾಶ್ಚಾತ್ಯ ದೇಶಗಳಿಂದ ಲಿಪಿ, ವಾಸ್ತುಶಿಲ್ಪ, ನಾಣ್ಯ ನಿರ್ಮಾಣ ರೀತಿ, ವೊದಲಾದವುಗಳೆಲ್ಲ ಭಾರತೀಯರಿಗೂ ಪರಿಚಯವಾದವು. ಕನಿಷ್ಕನ ಕಾಲದಲ್ಲಿ ಪಶ್ಚಿಮೇಷ್ಯದಿಂದ ಚೈನಾದವರೆಗೆ ವ್ಯಾಪಿಸಿದ್ದ ವ್ಯಾಪಾರ ಸಂಬಂಧದ ಮೂಲಕ ಬೌದ್ಧಮತ ಏಷ್ಯಾದ ಸಾರ್ವತ್ರಿಕ ಸಂಪತ್ತಾಗಿ ಅಭಿವೃದ್ದಿ ಹೊಂದಿತು. ಇಂಡೋನೇಶ್ಯ, ಬಾಲಿ, ಸುಮಾತ್ರ ಮೊದಲಾದ ದ್ವೀಪಗಳಲ್ಲಿ ಹೈಂದವ ಸಂಸ್ಕೃತಿ ಪ್ರಚಾರ ಪಡೆಯುವುದಕ್ಕೆ ಪೂರ್ವದಲ್ಲಿ ವ್ಯಾಪಾರ ಸಂಬಂಧ ಏರ್ಪಟ್ಟಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ಸಂಪತ್ತಿನ ವಿನಿಮಯದೊಂದಿಗೆ ಪರಸ್ಪರ ಆಶಯಗಳ ಕೊಡುಕೊಳ್ಳುಗೆ  ನಡೆದು ಸಾಂಸ್ಕೃತಿಕ ಸಂಬಂಧಗಳು ಹೆಚ್ಚುತ್ತವೆ. ವಾಸ್ತುಶಿಲ್ಪ, ಪ್ರಾಕ್ತನಶಿಲ್ಪ ಮೊದಲಾದ ಕಲಾಸೃಷ್ಟಿಗಳ ವಿನಿಮಯವೂ ಸಾಂಸ್ಕೃತಿಕ ಬಾಂಧವ್ಯವನ್ನು ತ್ವರಿತಗೊಳಿಸುತ್ತದೆ.

ಮೌರ್ಯರ ಕಾಲದಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ನಡೆದ ಈ ಪ್ರಕ್ರಿಯೆಗಳಿಂದ ಭಾರತವು ಒಂದು ವ್ಯಾಪಾರ ಕೇಂದ್ರವಾಗಿ ಬೆಳೆಯಿತು. ವ್ಯಾಪಾರಿಗಳ ರಕ್ಷಣೆಗೆ ಮಾರಾಟದ ಸರಕುಗಳ ಸಂರಕ್ಷಣೆ, ಕ್ರಯ ವಿಕ್ರಯಗಳಿಗೆ ಕಾನೂನುಗಳು ಮೊದಲಾದ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಸಮುದ್ರ ವ್ಯಾಪಾರದ ಜವಾಬ್ದಾರಿಯನ್ನು ವಹಿಸಲು ಅಧ್ಯಕ್ಷರನ್ನು ನೇಮಿಸಿ ಅದಕ್ಕೆ ರಾಜ ಬೊಕ್ಕಸದಿಂದ ವೇತನ ನಿಗದಿಪಡಿಸಲಾಗುತ್ತಿತ್ತು. ದೂರ ಹಾಗೂ ಸಮೀಪದ ದೇಶಗಳೊಂದಿಗೆ ವ್ಯಾಪಾರ ವಹಿವಾಟು ನಡೆಸಲು ದೊಡ್ಡ ಹಾಗೂ ಸಣ್ಣ ಹಡಗುಗಳ ವ್ಯವಸ್ಥೆ ಮಾಡಲಾಗಿತ್ತು. ಈ ವಾಣಿಜ್ಯ ವ್ಯವಸ್ಥೆಯ ನ್ಯಾಯಯುತವಾದ ಆಡಳಿತ ವೈಖರಿಯ ಪರಿಣಾಮವಾಗಿ ಭಾರತವನ್ನಷ್ಟೇ ಅಲ್ಲ ಬಾಕ್‌ಟ್ರಿಯಾನದಿಂದ ಕಾಂಬೋಡಿಯದವರೆಗೂ ವ್ಯಾಪಿಸಿ ಒಂದು ವ್ಯಾಪಾರ ಶೃಂಖಲೆ ರೂಪುಗೊಂಡಿತ್ತು.

ಮೌರ್ಯ ಸಾಮ್ರಾಜ್ಯದ ಈ ವ್ಯಾಪಾರ ಶೃಂಖಲೆಯಲ್ಲಿ ಕೇರಳವೂ ಒಳಗೊಂಡಿತ್ತು. ತೃಶ್ಶೂರ್ ಜಿಲ್ಲೆಯ ಇಯಾಲ್ ಎಂಬ ಸ್ಥಳದಿಂದ ಮೌರ್ಯ ಕಾಲಕ್ಕಿಂತಲೂ ಹಿಂದಿನ ಹತ್ತು ನಾಣ್ಯಗಳು, ಮೌರ್ಯರ ಕಾಲದ ಹದಿನಾಲ್ಕು ನಾಣ್ಯಗಳು ಲಭಿಸಿವೆ. ಮೌರ್ಯ ಕಾಲದ ಪೂರ್ವದಲ್ಲಿದ್ದ ನಾಣ್ಯಗಳು ಮೌರ್ಯ ಕಾಲದ ಹಾಗೂ ಅದಕ್ಕೂ ಸ್ವಲ್ಪ ಮೊದಲು ಕೇರಳದೊಂದಿಗೆ ನಡೆದ ವಾಣಿಜ್ಯ ಸಂಬಂಧದ ದೃಗ್ ಸಾಕ್ಷಿಗಳಾಗಿವೆ.

ವಾಣಿಜ್ಯದಲ್ಲುಂಟಾದ ಈ ತೆರನ ಅಭಿವೃದ್ದಿ ಹಾಗೂ ದೇಶಗಳ ನಡುವಿನ ಸಂಬಂಧದ ತಳಹದಿಯಲ್ಲಿ ಅಶೋಕನು ತನ್ನ ರಾಜ್ಯದ ಒಳಗೆ ಹಾಗೂ ಹೊರಗೆ ಬೌದ್ದಧರ್ಮ ಪ್ರಚಾರಕ್ಕೆ ಶ್ರಮಿಸಿದ. ಬುದ್ಧನ ಸಂದೇಶಗಳನ್ನು ಪ್ರಚಾರ ಮಾಡಲು ದೇಶದ ಒಳಗೂ ಹೊರಗೂ ಬೌದ್ಧ ಸನ್ಯಾಸಿಗಳನ್ನು ಕಳುಹಿಸಿದ. ಅಶೋಕನ ಶಾಸನಗಳಲ್ಲಿ ‘ತಮಿಳಗಂ’ ಪ್ರತ್ಯೇಕ ಗಣನೆಗೆ ಕಾರಣವಾಗಿತ್ತು ಎಂದು ಆತನ ಶಾಸನಗಳಿಂದ ತಿಳಿದುಬರುತ್ತದೆ. ಚೋಳರು, ಪಾಂಡ್ಯರು, ಸತಿಯಪುತ್ರರು, ಕೇರಳಪುತ್ರರು ಮೊದಲಾದವರೆಲ್ಲ ಅಶೋಕನ ಸಾಮ್ರಾಜ್ಯ ದೊಡನೆ ಸೌಹಾರ್ದ ಸಂಬಂಧ ಹೆೊಂದಿದ್ದ ಸ್ವತಂತ್ರ ಜನಪದರಾಗಿದ್ದರು ಎಂದು ಶಾಸನ ಗಳಿಂದ ವ್ಯಕ್ತವಾಗುತ್ತದೆ. ಅಶೋಕನ ಶಾಸನಗಳು ಕೇರಳದ ಇತಿಹಾಸವನ್ನು ತಿಳಿಯಲು ಸಹಾಯಕವಾಗುವ ಪ್ರಾಚೀನ ಉಲ್ಲೇಖಗಳಾಗಿವೆ. ಸತಿಯಪುತ್ರ ಎಂದರೆ ತುಳುನಾಡು ಎಂದು ಮಂ. ಗೋವಿಂದ ಪೈಗಳು ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಅಶೋಕನ ಎರಡು ಶಿಲಾಶಾಸನಗಳಲ್ಲಿ ಕೇರಳದ ಕುರಿತ ವಿಚಾರಗಳ ಉಲ್ಲೇಖವಿದೆ. ಮನುಷ್ಯರಿಗೂ, ಪ್ರಾಣಿಗಳಿಗೂ ಬೇಕಾದ ಉಚಿತ ಆಸ್ಪತ್ರೆಗಳನ್ನು ತನ್ನ ಸಾಮ್ರಾಜ್ಯದ ಗಡಿಭಾಗದಲ್ಲಿರುವ ಚೋಳರ, ಪಾಂಡ್ಯರ, ಸತಿಯಪುತ್ರರ, ಕೇರಳ ಪುತ್ರರ ರಾಜ್ಯಗಳಲ್ಲಿಯೂ ತಾಂಬಪಣ್ಣಿ (ಶ್ರೀಲಂಕಾ)ಯಲ್ಲಿಯೂ ಸ್ಥಾಪಿಸಿದ್ದಾಗಿ ಶಿಲಾಶಾಸನವೊಂದರಿಂದ ತಿಳಿದು ಬರುತ್ತದೆ. ಮನುಷ್ಯರ ಹಾಗೂ ಪ್ರಾಣಿಗಳ ಉಪಯೋಗಕ್ಕಾಗಿ ರಸ್ತೆಯ ಬದಿಗಳಲ್ಲಿ ಜಲಾಶಯಗಳನ್ನು ನಿರ್ಮಿಸಿ, ವೃಕ್ಷಗಳನ್ನು ನೆಡಿಸಿದ ಬಗೆಗೆ ಉಲ್ಲೇಖವಿದೆ. ಇದೇ ಶಿಲಾಶಾಸನವನ್ನು ಐದು ಎಡೆಗಳಲ್ಲಿ ಸ್ಥಾಪಿಸಲಾಗಿದ್ದು, ಅವುಗಳಲ್ಲಿ ಕೆಲವದರಲ್ಲಿ ‘ಕೇರಳಪುತ್ತೊ’ ಮತ್ತು ಮತ್ತೆ ಕೆಲವದರಲ್ಲಿ ‘ಕೇರಳ ಪುತ್ರ’ ಎಂದು ಹೇಳಲಾಗಿದೆ. ಚೇರರು, ಪಾಂಡ್ಯರು ಮೊದಲಾದ ಪ್ರಯೋಗಗಳೊಡನೆ ಚೇರರು ಎಂಬ ಅರ್ಥದಲ್ಲಿರುವ ‘ಕೇರಳಪುತ್ತೊ’ ಎಂಬ ಪ್ರಯೋಗ ಗಮನಾರ್ಹವಾಗಿದೆ.

ಇನ್ನೊಂದು ಶಾಸನದಲ್ಲಿ ಅಶೋಕನು ತನ್ನ ಸಾಮ್ರಾಜ್ಯದ ಹೊರಗೆ ಸಾಧಿಸಿದ ಧರ್ಮವಿಜಯವನ್ನು ಕುರಿತ ಉಲ್ಲೇಖವಿದೆ. ಸಾಮ್ರಾಜ್ಯದ ಸೀಮೆಯಿಂದ ಆರುನೂರು ಯೋಜನ ದೂರವಿರುವ ಆಂಡ್ರಿಯೋಕ್ಸ್, ಟಾಲೆಮಿ, ಅಲೆಕ್ಸಾಂಡರ್ ಮೊದಲಾದ ರಾಜರ ರಾಜ್ಯಗಳವರೆಗೂ ದಕ್ಷಿಣಕ್ಕೆ ಚೋಳರು, ಪಾಂಡ್ಯರಿಂದಾರಂಭಿಸಿ ತಾಂಬಪಣ್ಣಿ (ಶ್ರೀಲಂಕಾ) ಯವರೆಗೂ ಧರ್ಮವಿಜಯ ಸಾಧಿಸಿದ್ದನ್ನು ಉಲ್ಲೇಖಿಸಲಾಗಿದೆ. ಈ ಶಿಲಾ ಶಾಸನದಲ್ಲಿ ಚೇರರನ್ನು ವಿಶೇಷವಾಗಿ ಹೇಳದಿದ್ದರೂ ಚೋಳ, ಪಾಂಡ್ಯರಿಂದಾರಂಭಿಸಿ ತಾಂಬಪಣ್ಣಿವರೆಗೂ ಎಂದು ಹೇಳಿದ್ದರಲ್ಲಿ ಚೇರರು ಅದರಲ್ಲಿ ಒಳಗೊಂಡಿದ್ದಾರೆಂದು ಇತಿಹಾಸ ತಜ್ಞರು ಊಹಿಸಿದ್ದಾರೆ.

ಅಶೋಕನ ಸಾಮ್ರಾಜ್ಯ ತಮಿಳಗಂನವರೆಗೂ ವಿಸ್ತರಿಸಿತ್ತು ಎಂಬುದು ಈ ಶಾಸನಗಳಿಂದ ವ್ಯಕ್ತವಾಗುತ್ತದೆ. ತಮಿಳಗಂ ಅಶೋಕನ ಸಾಮ್ರಾಜ್ಯದಲ್ಲಿ ವಿಲೀನವಾಗದಷ್ಟು ಸಶಕ್ತವಾದ ಜನಪದವಾಗಿತ್ತು. ಈ ಜನಪದಗಳಲ್ಲಿ ರಾಜರುಗಳ್ಯಾರೂ ಇದ್ದಿರಲಿಲ್ಲ. ಚೋಳರು, ಪಾಂಡ್ಯರು, ಕೇರಳಪುತ್ರರು ಮೊದಲಾದ ಬಹುವಚನ ಪ್ರಯೋಗಗಳಿಂದ ಇವರೆಲ್ಲ ಬುಡಕಟ್ಟು ಪ್ರಭುತ್ವವುಳ್ಳ ರಾಜ್ಯಗಳಾಗಿದ್ದವು ಎಂದು ಪರಿಭಾವಿಸಬಹುದು. ಈ ಬುಡಕಟ್ಟು ಪ್ರಭುತ್ವಗಳು ಅಶೋಕನ ಸಾಮ್ರಾಜ್ಯದೊಡನೆ ಸ್ನೇಹದಿಂದ ವ್ಯವಹರಿಸಿ ಧರ್ಮ ಪ್ರಚಾರ ಮತ್ತಿತರ ಸೇವಾವೃತ್ತಿಗಳನ್ನು ಈ ರಾಜ್ಯಗಳಲ್ಲೇ ವಿಸ್ತರಿಸಿದುವು ಎಂದು ಶಾಸನಗಳಿಂದ ತಿಳಿದು ಬರುತ್ತದೆ. ತಮಿಳಗಂನ ನಾಲ್ಕು ಪ್ರಧಾನ ಜನಪದಗಳೆಂದರೆ ಚೋಳ, ಪಾಂಡ್ಯ, ಚೇರ ಮತ್ತು ಸತಿಯಪುತ್ರ ಎಂದು ಇದರಲ್ಲಿ ತಿಳಿಸಲಾಗಿದೆ.

ಪೆಣ್ಣೈಯಾರ್‌ನಿಂದ ವೈಗೈ ನದಿಯವರೆಗೆ ವ್ಯಾಪಿಸಿದ್ದ ಪ್ರದೇಶವನ್ನು ಚೋಳ ಎಂದು ಹೇಳಲಾಗಿದೆ. ಎಂದರೆ ಇಂದಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ದಕ್ಷಿಣ ಭಾಗಗಳೂ, ತಂಜಾವೂರು ಜಿಲ್ಲೆಯೂ, ತಿರುಚಿರಾಪ್ಪಳ್ಳಿ ಜಿಲ್ಲೆಯ ಬಹುಭಾಗಗಳೂ ಅದರಲ್ಲಿ ಒಳ ಗೊಂಡಿದ್ದವು. ಉಱಂದೈ ಅಥವಾ ಉರೈಯೂರು ಚೋಳರ ರಾಜಧಾನಿಯಾಗಿತ್ತು. ಚೋಳ ರಾಜ್ಯದ ದಕ್ಷಿಣ ಭಾಗ ಅಂದರೆ ಇಂದಿನ ಮಧುರೈ, ರಾಮನಾಥಪುರಂ, ತಿರುನೆಲ್ವೇಲಿ ಜಿಲ್ಲೆಗಳು. ಕನ್ಯಾಕುಮಾರಿ ಜಿಲ್ಲೆಯ ನಾಟ್ಟಲ್‌ನಾಡ್ ಒಳಗೊಂಡ ಪ್ರದೇಶವೇ ಪಾಂಡ್ಯ.  ಬಹುತೇಕ ಇಂದಿನ ಕೇರಳದ ಗಡಿಭಾಗದಲ್ಲಿರುವ ನಾಡುಗಳನ್ನು ಸಂಘಕಾಲದಲ್ಲಿ ‘ಚೇರ’ ಎಂದು ಕರೆಯಲಾಗಿದೆ. ವೇನ್ನಾಡ್, ಕರ್‌ಕ್ಕನಾಡ್, ಕುಟ್ಟನಾಡ್, ಕುಡನಾಡ್,                      ಪೂೞಿನಾಡ್ ಮೊದಲಾದುವು ಅಂದು ಬೇರೆ ಬೇರೆ ರಾಜ್ಯಗಳಲ್ಲಿ ಒಳಗೊಂಡಿದ್ದವು. ಇದರಲ್ಲಿ ಸತಿಯಪುತ್ರ ಯಾವುದು ಎಂಬುದರ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಬಹುತೇಕ ವಿದ್ವಾಂಸರು ಒಪ್ಪಿಕೊಂಡಂತೆ ಇದು ಕೊಂಗುನಾಡಿನ ಒಂದು ಭೂಪ್ರದೇಶ. ಕೊಂಗುನಾಡು ಎಂದರೆ ಚೋಳ, ಪಾಂಡ್ಯ, ರಾಜ್ಯಗಳ ಪಶ್ಚಿಮ ದಿಕ್ಕಿಗೆ ಮಲೆಯ ಇಳಿಜಾರಿನ ಪ್ರದೇಶಗಳು. ಅಂದರೆ ಇಂದಿನ ಕೊಯಂಬತ್ತೂರು, ಸೇಲಂ ಜಿಲ್ಲೆಯ ತಿರುಚ್ಚಿರಪಳ್ಳಿ ಹಾಗೂ ಮದುರೈ ಜಿಲ್ಲೆಗಳ ಕೆಲವು ಭಾಗಗಳು ಕೊಂಗುನಾಡಿನಲ್ಲೊಳಗೊಂಡಿತ್ತು. ಕೊಂಗುನಾಡಿನ ಇಂದಿನ ಸೇಲಂ ಜಿಲ್ಲೆಯ ಕುದಿರಮಲೆಯನ್ನು ಒಳಗೊಂಡಂತೆ ವಿಸ್ತಾರವಾದ ಒಂದು ಪ್ರದೇಶ. ಇದು ಅಶೋಕನ ಕಾಲಕ್ಕೆ ಸತಿಯ ಪುತ್ರರ ಸ್ವಾಧೀನದಲ್ಲಿತ್ತು ಎಂದು ಅಭಿಪ್ರಾಯಪಡಲಾಗಿದೆ. ತರುವಾಯದ ದಿವಸಗಳಲ್ಲಿ ಕೊಂಗುನಾಡು ಚೇರ ರಾಜ್ಯದಲ್ಲಿ ವಿಲೀನವಾಯಿತು.

ಪ್ರಾಚೀನ ಕೃತಿಗಳಲ್ಲಿ ಚೇರ ರಾಜ್ಯ

ಆರಂಭದ ಚೇರ ರಾಜರುಗಳನ್ನು ಅವರ ಯುದ್ಧ ಹಾಗೂ ಆಕ್ರಮಣಗಳಿಗಿಂತಲೂ ಅವರ ಆಸ್ಥಾನ ಕವಿಗಳು ಹಾಡಿ ಹೊಗಳಿ ಅಮರರನ್ನಾಗಿಸಿದ್ದಾರೆ. ಅವರ ಆಸ್ಥಾನದಲ್ಲಿ ಮಾಮುಲನಾರ್, ಪಾರಿನರ್, ಗೌತಮನರ್ ಮತ್ತು ಕಪಿಲರ್ ಮೊದಲಾದ ಕವಿ ಸಮೂಹವೇ ಇತ್ತು. ಅವರು ಚೇರ ರಾಜರುಗಳನ್ನು ಸರಳ ಸುಂದರವಾಗಿ ಹಾಡಿ ಹೊಗಳಿದ್ದಾರೆ. ಈ ವೈದಿಕ ವಿದ್ವಾಂಸರುಗಳು ತಮ್ಮ ರಾಜರುಗಳಿಗಾಗಿ ಬಲಿದಾನಗಳನ್ನು ಏರ್ಪಡಿಸುತ್ತಿದ್ದರಲ್ಲದೆ ಅವರನ್ನು ಪೌರಾಣಿಕ ವಂಶದೊಂದಿಗೆ ಸಂಬಂಧ ಕಲ್ಪಿಸುತ್ತಿದ್ದರು.

ವಿೞಿದಿಂದ ತುಂಬಾ ಉತ್ತರಕ್ಕೆ ಕೊಲ್ಲಂವರೆಗೆ ಬರುವ ಪ್ರದೇಶವನ್ನು ವೇನ್ನಾಡೆಂದು ಹೇಳಲಾಗುತ್ತಿತ್ತು. ಇಂದಿನ ಕೊಲ್ಲಂ, ಇಡುಕ್ಕಿ ಜಿಲ್ಲೆಗಳು ಬಹುತೇಕ ಕರ್‌ಕ್ಕನಾಡಿನಲ್ಲಿ ಸೇರಿದ್ದವು. ಕೊಲ್ಲಂನ ಉತ್ತರದ ಹಿನ್ನೀರು ಪ್ರದೇಶಗಳು ಹಳ್ಳ ಪ್ರದೇಶಗಳು ಕುಟ್ಟನಾಡ್. ತೃಶ್ಶೂರ್ ಜಿಲ್ಲೆಯೂ ದಕ್ಷಿಣ ಮಲಬಾರೂ ಬಹುತೇಕ ಕುಟ್ಟನಾಡಿನಲ್ಲಿ ಸೇರಿಕೊಂಡಿತ್ತು. ಕುಡನಾಡಿನ ಉತ್ತರಕ್ಕೆ ಪೂೞಿನಾಡ್, ಇಷ್ಟೆಲ್ಲ ಪ್ರದೇಶಗಳು ಚೇರ ರಾಜ್ಯದಲ್ಲಿ ಒಳ ಗೊಂಡಿದ್ದವು. ಪೂೞಿನಾಡಿನ ಉತ್ತರ ಭಾಗಕ್ಕೆ ‘ಕೇಣ್‌ಕಾನಂ’ ಎಂದು ಹೇಳಲಾಗುತ್ತಿತ್ತು. ಕಾಸರಗೋಡು ಮತ್ತು ಮಂಗಳೂರುವರೆಗಿನ ತೀರ ಪ್ರದೇಶಗಳು ಸಹ್ಯಾದ್ರಿ ಭಾಗಗಳ ಒಳಗೊಂಡಿರುವ ಭಾಗವೇ ಕೊಂಕಣವಾಗಿದ್ದಿರಬೇಕು. ‘ಮೊೞಿಪೆಯರ್ ದೇಶಂ’ ಎಂದೇ ಕೊಂಕಣವನ್ನು ಹೇಳಲಾಗುತ್ತದೆ. ತುಳು ಮತ್ತು ಕನ್ನಡ/ಪ್ರದೇಶಗಳ ಭಾಷೆಯಾಗಿದ್ದವು. ಕೆ.ವಿ. ರಮೇಶ್ ಅವರು ಮೊೞಿಪೆಯರ್ ದೇಶಂ ಎಂದರೆ ತುಳುನಾಡು ಎಂದು ಹೇಳಿದ್ದಾರೆ.

ಆರಂಭದ ಕಾಲಗಳಲ್ಲಿ ಚೇರ ರಾಜ್ಯವು ಕುಟ್ಟನಾಡ್, ಕುಡನಾಡ್, ಮೊದಲಾದ ಪ್ರದೇಶಗಳಲ್ಲಿ ವ್ಯಾಪಿಸಿತ್ತು. ಚೇರ ರಾಜ್ಯದ ಗಡಿಗಳೆಂದು ಮೆಕೆಂಜಿ ತನ್ನ ಉಲ್ಲೇಖಗಳಲ್ಲಿ  ಪ್ರಸ್ತಾಪಿಸಿದ್ದಾನೆ. ಅವನ ಪ್ರಕಾರ ಉತ್ತರಕ್ಕೆ ಪಳನಿವರೆಗೆ ಪೂರ್ವಕ್ಕೆ ಚೆಂಕೋಟ್ಟೆವರೆಗೆ ಪಶ್ಚಿಮಕ್ಕೆ ಕೋಳಿಕೋಡ್‌ವರೆಗೆ ದಕ್ಷಿಣಕ್ಕೆ ಎಂಬತ್ತು ಊರುಗಳು ಚೇರನಾಡಿಗೆ ಸೇರಿದ ಪ್ರದೇಶಗಳಾಗಿದ್ದವು. ಕೋಳಿಕೋಡ್‌ನಿಂದ ಪುರಕಾಡಿನ ಉತ್ತರದವರೆಗೆ ಅಲ್ಲಿಂದ ಪೂರ್ವಕ್ಕೆ ಸಹ್ಯಾದ್ರಿ ಆಚೆ ಪಳನಿಯಿಂದ ಚೆಂಕೋಟ್ಟೆವರೆಗೆ ಇರುವ ಪ್ರದೇಶಗಳೇ ಚೇರನಾಡು ಎಂದು ಆರಂಭದಲ್ಲಿ ಕರೆಯಲಾಗುತ್ತಿತ್ತು ಎಂದು ಇದರಿಂದ ವ್ಯಕ್ತವಾಗುತ್ತದೆ. ಅಶೋಕನ ಶಾಸನಗಳಲ್ಲಿ ಹೇಳಿದ ಕೇರಳ ಪುತ್ರನ ರಾಜ್ಯವು ಇದುವೇ ಆಗಿತ್ತು. ಬಳಿಕ ಸಂಘಕಾಲದಲ್ಲಿ ಚೇರ ರಾಜ್ಯದ ಮೇರೆಗಳು ವಿಸ್ತಾರಗೊಂಡವು. ನೆಡುಂಚೇರಲಾತನ ಕಾಲದಲ್ಲಿ ಉತ್ತರಕ್ಕೆ ಗೋಕರ್ಣದವರೆಗೆ ಕೇರಳದ ಗಡಿಗಳು ವಿಸ್ತರಿಸಿದ್ದಂತೆ ತೋರುತ್ತದೆ. ಕ್ರಿ.ಶ. ೪ನೆಯ ಶತಮಾನದಲ್ಲಿ ಕದಂಬರ ಪ್ರವರ್ಧಮಾನ ಕಾಲದಲ್ಲಿ ಕರ್ನಾಟಕದ ಪ್ರದೇಶಗಳು ಕೇರಳದ ಕೈ ತಪ್ಪಿ ಹೋಗಿರಬೇಕು.

ವಂಜಿ ಚೇರ ರಾಜ್ಯದ ರಾಜಧಾನಿಯಾಗಿತ್ತು. ತೊಂಡಿಯೂ ಕೂಡ ಒಂದು ಕಾಲದಲ್ಲಿ ಚೇರರಿಗೆ ರಾಜಧಾನಿಯಾಗಿತ್ತು. ಹಿಂದೆ ಚೇರರು ಕೊಂಗನಾಡನ್ನು ಸ್ವಾಧೀನಪಡಿಸಿಕೊಂಡಾಗ ಕರುವೂರು ಒಂದು ಪ್ರಧಾನ ರಾಜಧಾನಿಯಾಗಿತ್ತು. ಚೇರ ರಾಜ್ಯದ ಮುಖ್ಯ ಬಂದರು ಪ್ರದೇಶ ‘ಮುಚಿರಿ’ ಪಟ್ಟಣಂ ಆಗಿತ್ತು. ಕೃಷಿ ವಾಣಿಜ್ಯೋದ್ಯಮಗಳಲ್ಲಿ ಅಭಿವೃದ್ದಿ ಹೊಂದಿದ ರಾಜ್ಯವಾಗಿತ್ತು ಚೇರ ರಾಜ್ಯ.

‘ತಗರೂರು ಯಾತ್ತಿರೈ’ ಎಂಬೊಂದು ಕೃತಿಯಲ್ಲಿ ಚೇರನಾಡಿನ ವಿವರಗಳು ಇದ್ದ ಬಗೆಗೆ ತಿಳಿದು ಬರುತ್ತದೆ. ಆ ಕೃತಿ ಲಭ್ಯವಿಲ್ಲದುದರಿಂದ ಚೇರ ರಾಜ್ಯದ ವೈಭವದ ಕುರಿತ ಮಾಹಿತಿಗಳು ಹೆಚ್ಚು ಲಭ್ಯವಿಲ್ಲ. ಆದರೂ ಇತರೆ ಲಭ್ಯ ಸಂಘಂ ಕೃತಿಗಳಲ್ಲಿ ಚೇರ ರಾಜ್ಯದ ಬಗೆಗೆ ಬಹುತೇಕ ಮಾಹಿತಿಗಳು ದೊರೆಯುತ್ತವೆ. ಭತ್ತ, ಮೀನು, ಕಳ್ಳು, ಯಥೇಚ್ಛ ವಾಗಿ ದೊರೆಯುತ್ತಿದ್ದ ಪ್ರದೇಶ. ಚಿನ್ನ ಮೊದಲಾದ ವಿದೇಶಿ ದ್ರವ್ಯಗಳನ್ನು ಹೇರಿಕೊಂಡು ಬಂದ ಯವನರ ಹಡಗುಗಳು ಬಂದು ಮುಚಿರಿ ಬಂದರುಗಳಲ್ಲಿ ತಂಗಿದ್ದವು ಎಂಬಿತ್ಯಾದಿ ವಿವರಗಳು ಅಲ್ಲಿವೆ.

ಚೆೆಂಗುಟ್ಟವನ್ ಸಂಘಕಾಲದ ಅತ್ಯಂತ ಪ್ರಸಿದ್ಧ ಚೇರ ರಾಜನಾಗಿದ್ದ. ಚೆಂಗುಟ್ಟವನ ನೇತೃತ್ವದಲ್ಲಿ ಚೇರ ರಾಜ್ಯವು ದಕ್ಷಿಣ ಭಾರತದ ಪ್ರಬಲ ರಾಜ್ಯವಾಗಿತ್ತು. ತಮಿಳು ಸಾಹಿತ್ಯದ ಪ್ರಮುಖ ಕೃತಿಯಾದ ‘ಶಿಲಪ್ಪದಿಕಾರಂ’ ಚೆಂಗುಟ್ಟವನ್‌ನ ಶಾಶ್ವತ ಸ್ಮಾರಕ ಎನಿಸಿದೆ. ಹಿಮಾಲಯದವರೆಗೂ ಹೋಗಿ ಧ್ವಜ ನೆಟ್ಟ ಆ ಮಹಾರಾಜ ಚೇರ ರಾಜಕೀಯ ಮುದ್ರೆಯಾದ ಬೆಟ್ಟ ಮಾತ್ರವಲ್ಲ ಚೇರ, ಚೋಳ, ಪಾಂಡ್ಯರ ಮುದ್ರೆಗಳನ್ನು ಅಲ್ಲಿ ನೆಡಿಸಿದ. ತಮಿಳಗಂನ ಸಂಪೂರ್ಣ ಪ್ರಾತಿನಿಧ್ಯವನ್ನು ಚೆಂಗುಟ್ಟವನ್ ವಹಿಸಿದ್ದ ಎಂಬುದು ಇದರಿಂದ ವ್ಯಕ್ತ ವಾಗುತ್ತದೆ.

ಸಂಘಂ ಕಾಲದಲ್ಲಿ ತೊಂಡೈಮಂಡಲ, ಚೋಳ, ಪಾಂಡ್ಯ, ಚೇರ, ಕೊಂಗುನಾಡ್ ಎಂಬಿತ್ಯಾದಿ ಐದು ಮಂಡಲಗಳಾಗಿ ತಮಿಳಗಮನ್ನು ವಿಭಜಿಸಲಾಗಿತ್ತು. ಈ ಐದು ಮಂಡಲಗಳಲ್ಲದೆ ರಾಜರುಗಳ ಅಧಿಪತ್ಯಕ್ಕೆ ಒಳಪಡದ ಹಲವು ಪ್ರಮುಖರಾದ ಕುಲ ಮುಖ್ಯಸ್ಥರು ತಮಿಳಗಂನಲ್ಲಿದ್ದರು. ಅವರನ್ನು ‘ವೇಳ್’ ಅಥವಾ ‘ಬೆಟ್ಟರವರ್’ ಎಂದು ಕರೆಯಲಾಗುತ್ತಿತ್ತು. ಇತಿಹಾಸಪೂರ್ವ ಕುಲದ ಮುಖ್ಯಸ್ಥರುಗಳಿಗಿಂತ ವ್ಯತ್ಯಸ್ಥವಾದ ಒಂದು ಪದವಿ ‘ವೇಳ್’ಗೆ ಇತ್ತು. ಭೌಗೋಳಿಕವಾಗಿ ಒಂದು ಪ್ರದೇಶದ ಅಧಿಪತ್ಯ ಕೂಡ ‘ವೇಳ್’ನ  ಮುಖ್ಯಸ್ಥರಿಗೆ ಇರುತ್ತಿತ್ತು. ಏಳಿಮಲೆಯಲ್ಲಿ ನನ್ನನ ಅಧಿಪತ್ಯದಲ್ಲಿ ವಿಶಾಲ ಭೂ ಪ್ರದೇಶವು ಇದ್ದ ಬಗೆಗೆ ತಿಳಿದು ಬರುತ್ತದೆ. ಹಾಗೆಯೇ ಪಾರಿ ಎಂಬ ವೇಳ್ ಮುಖ್ಯಸ್ಥನ ಅಧೀನದಲ್ಲಿ ಮುನ್ನೂರು ಗ್ರಾಮಗಳು ಇದ್ದುವು. ಇತಿಹಾಸಪೂರ್ವ ಕಾಲಘಟ್ಟದಲ್ಲಿ ಇವರಿಗೆ ಒಂದು ಗಣದ ಅಧಿಪತ್ಯಮಾತ್ರವೇ ಇದ್ದಿತು. ಗಣಾಧಿಪತ್ಯ ಮತ್ತು ರಾಜರುಗಳ ನಡುವಿನ ಒಂದು ಅಧಿಕಾರ ಪದವಿ ‘ವೇಳ್’.

ವೇಳ್ ಮುಖ್ಯಸ್ಥರನ್ನು ತಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಸಲುವಾಗಿ ಚೇರ, ಚೋಳ, ಪಾಂಡ್ಯ ರಾಜರುಗಳು ಅನೇಕ ಯುದ್ಧಗಳನ್ನು ನಡೆಸಿದ್ದರು. ನಂತರದ ಕಾಲ ಘಟ್ಟಗಳಲ್ಲಿ ಅವರು ರಾಜರುಗಳ ಅಧಿಪತ್ಯವನ್ನು ಒಪ್ಪಿಕೊಂಡ ಬಗೆಗೆ ಸಂಘಂ ಕೃತಿಗಳಲ್ಲಿ ಉಲ್ಲೇಖಗಳು ದೊರೆಯುತ್ತವೆ. ಕುದಿರಮಲೆಯವನ್ನು ಕೇಂದ್ರವಾಗಿಸಿಕೊಂಡು ಆಳಿದ ಅದಿಯಮಾನ್, ಪೊದಿಯ ಮಲೆಯ ಆಯ್, ಏಳುಮಲೆಯ ನನ್ನನ್, ಕೊಲ್ಲಿ ಮಲೆಯ ಓರಿ, ಮುಳ್ಳೂರ್ ಮಲೆಯ ಕಾರಿ, ಪರಂಬು ಮಲೆಯ ಪಾರಿ, ಪನ್ರಿ ಮಲೆಯ ಆವಿ ಮೊದಲಾದವರೆಲ್ಲ ‘ವೇಳ್’ ಮುಖ್ಯಸ್ಥರಾಗಿದ್ದರೆಂದು ತಿಳಿದುಬರುತ್ತದೆ. ಇವರನ್ನು ಶರಣಾಗತರನ್ನಾಗಿಸಿದ ಕುರುಹಾಗಿ ಕೆಲವು ಚೇರ ರಾಜರುಗಳು ಏಳು ಸುತ್ತಿನ ಪದಕವನ್ನು ಎದೆಯಲ್ಲಿ ಧರಿಸುತ್ತಿದ್ದರು ಎಂದು ತಿಳಿದುಬರುತ್ತದೆ.

ಅಶೋಕ ಚರ್ಕವರ್ತಿಯ ಶಾಸನಗಳಲ್ಲಿ ಚೇರ-ಚೋಳ-ಪಾಂಡ್ಯರ ಜೊತೆಗೆ ಸತಿಯಪುತ್ರ ಎಂಬ ಒಂದು ರಾಜ್ಯವನ್ನು ಕುರಿತು ಹೇಳಲಾಗಿದೆ. ಸತಿಯ ಪುತ್ರನೇ ಅದಿಯಮಾನ್ ಎಂಬ ವೇಳ್ ಮುಖ್ಯಸ್ಥ. ಚೇರ-ಚೋಳ – ಪಾಂಡ್ಯರುಗಳು ರಾಜ ಪದವಿಗೇರಿದಾಗಿಂದಲೂ ಅದಿಯಮಾನ್ ಎಂಬಾತ ವೇಳ್ ಮುಖ್ಯಸ್ಥನಾಗಿಯೇ ಮುಂದುವರಿದಿದ್ದ. ತಗರೂರ್ ಅದಿಯಮಾನನ ಕೇಂದ್ರ ಸ್ಥಾನವಾಗಿತ್ತು. ಸೇಲಂ ಜಿಲ್ಲೆಯ ಧರ್ಮಪುರಿಯೇ ತಗರೂರು ಎಂಬ ಅಭಿಪ್ರಾಯವಿದೆ. ಈಗಿನ ಮೈಸೂರಿನ ಒಂದು ಗ್ರಾಮವೇ ತಗರೂರು ಎಂಬ ಇನ್ನೊಂದು ಅಭಿಪ್ರಾಯವೂ ಇದೆ. ಇಂದಿನ ಸೇಲಂ ಜಿಲ್ಲೆಯ ಬಹುತೇಕ ಪ್ರದೇಶಗಳು -ಕಾವೇರಿಯ ಪೂರ್ವ ಭಾಗದಿಂದ ಆರಂಭಿಸಿ ದಕ್ಷಿಣದ ನಾಮಕ್ಕಲ್ ವರೆಗಿನ ಪ್ರದೇಶಗಳು -ಅದಿಯಮಾನ್‌ನ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿತ್ತು. ಅಲ್ಲಿ ಎರಡು ದೇವಸ್ಥಾನಗಳಲ್ಲಿ ಇಂದಿಗೂ ಅದಿಯಮಾನ್‌ನ ಶಾಸನವಿದೆ.

ಮೞವರ್ ವಂಶದವನಾದ ಅದಿಯಮಾನ್‌ನ ಸಾಹಸಗಳನ್ನು ಕುರಿತು ಕವಯಿತ್ರಿ ಅವ್ವಯ್ಯರ್ ಹಾಡಿ ಹೊಗಳಿದ್ದಾಳೆ. ವಿದೇಶದಿಂದ ಕಬ್ಬನ್ನು ಮೊತ್ತ ಮೊದಲ ಬಾರಿಗೆ ತಮಿಳಗಂ ಪ್ರದೇಶಗಳಿಗೆ ತಂದುದು ಅದಿಯಮಾನ್‌ನ ಪೂರ್ವಜರು ಎಂದು ಕವಯಿತ್ರಿ ಹಾಡುಗಳಲ್ಲಿ ಸೂಚಿಸಿದ್ದಾಳೆ.

ಪಶ್ಚಿಮ ಘಟ್ಟದ ದಕ್ಷಿಣದ ಪೊದಿಯಲ್‌ಮಲೆಯನ್ನು ಮುಖ್ಯ ಕೇಂದ್ರವನ್ನಾಗಿರಿಸಿ ಕೊಂಡು ರಾಜ್ಯವಾಳಿದವರು ‘ಆಯ್‌ವೇಳ್’ರುಗಳು. ಪೊದಿಯಲ್ ಮಲೆಯನ್ನು ಅಗಸ್ತ್ಯಕೂಟ ಎಂದೂ ಕರೆಯಲಾಗುತ್ತದೆ. ತಿರುವನಂತಪುರಂ ಜಿಲ್ಲೆಯ ನೆಯ್ಯರ್ ಆಣೆಕಟ್ಟಿನ ಉತ್ತರ ದಿಕ್ಕಿಗೆ ಅಗಸ್ತ್ಯಕೂಟದ ಕೇಂದ್ರಸ್ಥಾನ. ಅಗಸ್ತ್ಯಮಹರ್ಷಿಯ ಆಸ್ಥಾನ ವೆಂದು ತಿಳಿಯಲಾದ ಇದು ಒಂದು ಪುಣ್ಯ ಕ್ಷೇತ್ರವಾಗಿ ಇಂದು ಪ್ರಸಿದ್ಧವಾಗಿದೆ. ಮಲಯಾಳಿಗರೂ, ತಮಿಳರೂ ವರ್ಷಂಪ್ರತಿ ಭಕ್ತಿಯಿಂದ ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಕೃತಿ ಸೌಂದರ್ಯ ಸಂಪನ್ನವಾದ ಈ  ಭೂಭಾಗ ಅಪರೂಪದ ಔಷಧಿ ಸಸ್ಯಗಳ ನೆಲೆಭೂಮಿಯೂ ಆಗಿದೆ.

ಆನೆಗಳು ಯಥೇಚ್ಛವಾಗಿದ್ದ ನಾಡು ಆಯ್‌ರಾಜ್ಯ. ಇಲ್ಲಿ ನವಿಲುಗಳು, ಮಂಗಗಳು, ಅಳಿಲುಗಳು ಧಾರಾಳವಾಗಿದ್ದವು. ಚೆಂಕೋಟೆಗೆ ಸಮೀಪವಿರುವ ಆಯ್‌ಕ್ಕುಡಿಯೇ ಆಯ್‌ವೇಳರ ಮುಖ್ಯ ನೆಲೆಯಾಗಿತ್ತು. ಆಯ್‌ವೇಳ್‌ದಲ್ಲಿ ಪ್ರಸಿದ್ಧನಾದವ ಆಯ್ ಅಂಡಿದನ್. ಈತ ತೀರಿಕೊಂಡಾಗ ಈತನ ಮಡದಿಯರು ಅವನೊಂದಿಗೆ ಚಿತೆಗೇರಿದರು ಎಂದು ಆತನ ಗುಣಗಾನವನ್ನು ತಮಿಳು ಕೃತಿಗಳು ಮಾಡಿವೆ. ಅವನ ಉತ್ತರಾಧಿಕಾರಿಗಳಾದ ತಿದಿಯ, ಅದಿಯ ಮೊದಲಾದವರ ಕುರಿತು ಸಂಘಂ ಕೃತಿಗಳಲ್ಲಿ ವಿವರಗಳಿವೆ. ಅದಿಯನ ಕಾಲದಲ್ಲಿ ಪಾಂಡ್ಯ ರಾಜ ಪಶುಂಪೂಣ್ ಪಾಂಡ್ಯನು ಆಯುರಾಜ್ಯವನ್ನು ಆಕ್ರಮಿಸಿ ಸ್ವಾಧೀನ ಪಡಿಸಿಕೊಂಡನು.

ಆಯರ್ ವಂಶದ ಮುಖ್ಯಸ್ಥನಾಗಿದ್ದ. ಆಯ್‌ವೇಳ್‌ವ ಪಶುಪಾಲನ ವೃತ್ತಿಯನ್ನು ಅವಲಂಬಿಸಿದವರು ಆಯರ್‌ರು. ಅವರು ರಾಜ ಪದವಿಯನ್ನು ಪಡೆಯುವುದಕ್ಕೆ ಮೊದಲೇ ಅವರನ್ನು ಪಾಂಡ್ಯರು ಸ್ವಾಧೀನಕ್ಕೆ ತೆಗೆದುಕೊಂಡರು. ಚೇರ ರಾಜರು ಸಾಮಂತರುಗಳಾಗಿದ್ದ ಆಯ್‌ವೇಳರೂ ಇದ್ದರು. ಆಯ್ ಎಯಿನನ್ ಅಂಥವರಲ್ಲಿ ಒಬ್ಬನಾಗಿದ್ದ.

ಆಯ್‌ವೇಳರಂತೆಯೇ ಒಬ್ಬ ಪ್ರಬಲನಾಗಿದ್ದ ಏಳುಮಲೆಯ ನನ್ನನ್ ಏಳಿಲ್‌ಮಲ (ಎತ್ತರದ ಬೆಟ್ಟ) ಎಂದು ಸಂಘಂ ಕೃತಿಗಳಲ್ಲಿ ಪ್ರತಿಪಾದಿಸಿದೆ. ಇದನ್ನು ನಂತರ ‘ಎಲಿಮಲ’, ಏಳುಮಲ ರಾಜ್ಯ, ಮೂಷಿಕ ರಾಜ್ಯ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗಿದೆ. ಪುಳಿಮಲ ಮತ್ತು ಕೊಂಕಣಗಳು ಏಳಿಮಲ ರಾಜ್ಯದಲ್ಲಿ ಒಳಗೊಂಡಿದ್ದುವು. ಕೋಳಿಕೋಡಿನಿಂದ ಮಂಗಳೂರಿನವರೆಗಿನ ಪ್ರದೇಶಗಳು ಹಾಗೂ ಅದರ ದಕ್ಷಿಣಕ್ಕಿರುವ ಸಹ್ಯಾದ್ರಿ ಬೆಟ್ಟ ಪ್ರದೇಶಗಳು ಸೇರಿದ ರಾಜ್ಯವಾಗಿತ್ತು ಇದು. ಭಾಷಿಕವಾಗಿ ಇದು ಕನ್ನಡ, ತುಳು ಮತ್ತು ಮಲಯಾಳಂಗಳನ್ನೊಳಗೊಂಡ ಪ್ರದೇಶವಾಗಿರಬೇಕು. ವಯನಾಡು, ಗುಡಲೂರು, ಪ್ರದೇಶಗಳು ಇದರಲ್ಲಿ ಒಳಗೊಂಡಿದ್ದವು. ಪಾೞು ಪಟ್ಟಣವೇ ಏಳು ಮಲೆಯ ರಾಜನಾದ ನನ್ನನ ರಾಜಧಾನಿಯಾಗಿತ್ತು. ನನ್ನನ ಬಗೆಗೆ ಸಂಘಂ ಕೃತಿಗಳಲ್ಲಿ ವರ್ಣಿಸಲಾಗಿದೆ. ತಮಿಳು, ಕನ್ನಡ ಭಾಷೆಗಳನ್ನು ಮಾತನಾಡುವ ಪ್ರದೇಶಗಳನ್ನು ಒಳಗೊಂಡಿರುವ ಏಳಿಮಲೆ ರಾಜ್ಯವು ಭಾಷಿಕವಾಗಿ ಸಮ್ಮಿಶ್ರ ರಾಜ್ಯವೇ ಆಗಿತ್ತು. ಅಲ್ಲದೆ ಏಳಿಮಲೆ ರಾಜ್ಯವು ಕನ್ನಡನಾಡಿಗೂ ತಮಿಳುನಾಡಿಗೂ ಸಂಬಂಧ ಕಲ್ಪಿಸುವ ಒಂದು ಪ್ರಮುಖ ಕೊಂಡಿಯಾಗಿತ್ತು.

ಏಳಿಮಲೆಯನ್ನು ಆಳುತ್ತಿದ್ದ ನನ್ನನ್ ಒಬ್ಬ ವೀರನಾದ ರಾಜನಾಗಿದ್ದ. ಪೞಯನ್, ಪಿಂಡನ್ ಮೊದಲಾದ ಕುಲ ಮುಖ್ಯಸ್ಥರನ್ನು ಸೋಲಿಸಿ ನನ್ನನ್ ತನ್ನ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡ. ನನ್ನನ ಅತ್ಯಂತ ದೊಡ್ಡ ವಿಜಯ ಪಾೞಿ ಯುದ್ಧವಾಗಿತ್ತು. ನನ್ನನ ಸೇನಾನಾಯಕನಾದ ಮಿಞಾಲಿಯು ಚೇರನ ಸಾಮಂತನಾದ ಅಯ್‌ಎಯ್‌ನನ್ನು ಸೋಲಿಸಿ ಕೊಂದುದು ಈ ಯುದ್ದದಲ್ಲಿ. ಇದು ಏಳಿಮಲೆ ರಾಜ್ಯದ ಅವನತಿಗೂ, ನನ್ನನ ಅಂತ್ಯಕ್ಕೂ ದಾರಿ ಮಾಡಿಕೊಟ್ಟಿತು. ಚೇರ ರಾಜನಾದ ನಾರ್‌ಮುಡಿ ಚೇರನ್ ಸ್ವತಹ ಸೇನಾ ನೇತೃತ್ವವನ್ನು ವಹಿಸಿಕೊಂಡು ನನ್ನನನ್ನು ಸೋಲಿಸಿ ಪೂೞಿನಾಡನ್ನು ವಶಪಡಿಸಿಕೊಂಡ.

ವಯನಾಡಿನ ಮಲೆ ಪ್ರದೇಶಗಳು ಸಂಪದ್ಭರಿತವಾಗಿದ್ದವು. ಚಿನ್ನದ ಅದಿರುಗಳನ್ನು ಇಲ್ಲಿಂದ ಅಗೆದು ತೆಗೆಯಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಇದು ವಾಣಿಜ್ಯ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಿದ ರಾಜ್ಯವಾಗಿತ್ತು ಏಳಿಮಲ ಎಂಬುದಕ್ಕೆ ಆ ಪ್ರದೇಶದಲ್ಲಿ ದೊರೆತ ರೋಮನ್ ನಾಣ್ಯಗಳೇ ಸಾಕ್ಷಿಯಾಗಿವೆ. ಕಣ್ಣೂರು, ಮಂಗಳೂರು ಪ್ರದೇಶಗಳಿಂದ ಧಾರಾಳ ರೋಮನ್ ನಾಣ್ಯಗಳು ದೊರೆತಿವೆ. ಗ್ರೀಕರು, ರೋಮನ್ನರೇ ಮೊದಲಾದ ವಿದೇಶಿಯರು ಏಳಿಮಲೆಯ ವ್ಯಾಪಾರ ಸೌಕರ್ಯಗಳನ್ನು ಹೊಗಳಿದ್ದಾರೆ. ಚೇರರು ಅವರನ್ನು ಆಕ್ರಮಿಸಿ ವಶಕ್ಕೆ ತೆಗೆದುಕೊಳ್ಳದೆ ಇರುತ್ತಿದ್ದರೆ ಏಳಿಮಲೆ ರಾಜ್ಯ ದಕ್ಷಿಣ ಭಾರತದ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿತ್ತು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನೊಬ್ಬ ಸುಪ್ರಸಿದ್ಧ ವೇಲ್ ಮುಖ್ಯನಾಗಿದ್ದ ಕೊಲ್ಲಿಮಲೆಯ ಓರಿ. ಇಂದಿನ ಸೇಲಂ ಜಿಲ್ಲೆಗೆ ಸೇರಿದ ಆಟ್ಟೂರ್, ನಾಮಕ್ಕಲ್ ಮೊದಲಾದ ತಾಲೂಕುಗಳಲ್ಲಿ ಕೊಲ್ಲಿಮಲೆ ವ್ಯಾಪಿಸಿದೆ. ಓರಿ ಒಬ್ಬ ಉತ್ತಮ ಬಿಲ್ಲಾಳುವಾಗಿದ್ದ. ಆತ ಮೞವನ್ ಕುಲದ ಮುಖ್ಯಸ್ಥನಾಗಿದ್ದ. ಮೞವರ್, ಮಱವರ್, ಮಲ್ಲರ್. ಏಯಿನರ್, ವೇಡರ್, ವೇಟ್ಟುವರ್, ವಿಲ್ಲಾರ್ ಮೊದಲಾದ ಹೆಸರುಗಳಿಂದ ಗುರುತಿಸುವವರೆಲ್ಲರೂ ಬಿಲ್ಲಾಳುಗಳೇ ಆಗಿದ್ದರು. ಮೞವರ್ ಉತ್ತಮ ಕುದುರೆ ಸವಾರರಾಗಿದ್ದರು. ತಮಿಳಗಂನಲ್ಲಿ ಮೊತ್ತ ಮೊದಲ ಬಾರಿಗೆ ಯುದ್ಧಗಳಲ್ಲಿ  ಕುದುರೆಗಳನ್ನು ಉಪಯೋಗಿಸಿದವರು ಮೞವರು.

ಚೆಂಗುಟ್ಟವನ ಕಾಲದಲ್ಲಿ ಮಲೆಯನಾಡನ್ನು ಆಳುತ್ತಿದ್ದ ಕಾರಿಯ ಸಹಾಯದಿಂದ ಚೇರರು ಓರಿಯನ್ನು ಕೊಂದು ಕೊಲ್ಲಿಯನ್ನು ವಶಪಡಿಸಿಕೊಂಡರು. ಕೊಲ್ಲಿಮಲೆಯು ನಂತರದ ಚೇರ ರಾಜರ ಕಾಲದಲ್ಲಿ ಇನ್ನಷ್ಟು ಖ್ಯಾತಿ ಪಡೆದಿತ್ತು.

ಸೇಲಂ ಜಿಲ್ಲೆಯ ಇನ್ನೊಂದು ಮಲೆಯ ಮುಖ್ಯಸ್ಥನಾಗಿದ್ದ ಕಾರಿ. ತೋಲ್‌ಕಾಪ್ಪಿಯಂನಲ್ಲಿ ಹೇಳಿದ ಮಲೆನಾಡಿನ ಭಾಗಗಳೆಲ್ಲ ಕಾರಿಯ ಮಲಯ ನಾಡಿನ ಭಾಗಗಳೇ ಆಗಿದ್ದವು. ಕಾರಿಯ ಮಲಯ ನಾಡಿನಲ್ಲೂ ಓರಿಯ ಕೊಲ್ಲಿಮಲೆಯಲ್ಲೂ ಸೇರಿದ್ದ ತಿರುಕೋಯಿಲೂರ್ ಕಾರಿಯ ರಾಜಧಾನಿಯಾಗಿತ್ತು. ಸಂಘಂ ಕಾಲದಲ್ಲಿ ಅದಕ್ಕೆ ಕೋವಲೂರ್ ಎಂಬ ಹೆಸರಿತ್ತು. ಓರಿಯಂತೆಯೇ ಕಾರಿಯೂ ಕೂಡ ಒಬ್ಬ ಒಳ್ಳೆಯ ಕುದುರೆ ಸವಾರನೂ, ಮೞವರ್ (ಮಲೆಯರು) ವಂಶದ ಮುಖ್ಯಸ್ಥನೂ ಆಗಿದ್ದ.

ಮಲನಾಡ್ ಸಂಪೂರ್ಣವಾಗಿ ಚೇರರಿಗೆ ಅಧೀನವಾಗುವುದರೊಂದಿಗೆ ಅವರಿಗೆ ಮಲಯಾಳರ್ (ಮಲ+ಆಳರ್=ಮಲೆಯ ಮುಖ್ಯಸ್ಥ) ಎಂಬ ಹೆಸರು ಬಂತು. ಮಲಯಾಳಂ ಎಂಬ ಪದ ಚೇರಂ (ಕೇರಳಂ) ಎಂಬ ಪದದ ಪರ್ಯಾಯ ಪದವಾದುದು ಈ ಕಾರಣದಿಂದ. ಆದರೆ ಸಂಘ ಕಾಲದಲ್ಲಿ ಮತ್ತು ಅದಕ್ಕೆ ಸಮೀಪದ ಕಾಲಘಟ್ಟಗಳಲ್ಲಿ ಇವುಗಳನ್ನು ಪ್ರತ್ಯೇಕವಾಗಿಯೇ ಕಾಣಲಾಗಿದೆ. ರಟ್ಟ ರಾಜನಾದ ತಿರುವಿಕ್ರಮನು ಜೈನ ಮತವನ್ನು ಬಿಟ್ಟು ಶೈವ ಮತವನ್ನು ಸ್ವೀಕರಿಸಿದ ಬಳಿಕ ದಕ್ಷಿಣದ ರಾಜ್ಯಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ. ಚೋಳ, ಪಾಂಡ್ಯ, ಕೇರಳ, ಮಲಯಾಳ ರಾಜ್ಯಗಳನ್ನು ಸ್ವಾಧೀನಪಡಿಸಿಕೊಂಡು ಹಿಂತಿರುಗಿ ಬಂದ ಎಂದು ‘ಕೊಂಗುದೇಶದ ರಾಜರುಗಳು’ ಎಂಬ ಪ್ರಾಚೀನ ಕೃತಿಯೊಂದರಲ್ಲಿ ಹೇಳಲಾಗಿದೆ. ಇಲ್ಲಿ ಕೇರಳ ಮತ್ತು ಮಲಯಾಳಗಳನ್ನು ಬೇರೆ ಬೇರೆ ರಾಜ್ಯಗಳಾಗಿ ಗಣಿಸಲಾಗಿದೆ. ಆದರೂ ಕಾಲಕ್ರಮೇಣ ‘ಮಲಯಾಳರ್’ ಎಂಬ ಗೌರವ ಕೇರಳೀಯರ ಸಾಮಾನ್ಯ ಹೆಸರಾಗಿಯೇ ಉಳಿಯಿತು.

ಮತ್ತೊಬ್ಬ ಪ್ರಸಿದ್ಧನಾದ ವೇಳ್ ಎಂದರೆ ಪರಂಬುಮಲೆಯ ಪಾರಿ. ಇಂದಿನ ತೃಶ್ಶೂರ್ ಜಿಲ್ಲೆಯ ಪೂರ್ವ ಗಡಿಯಲ್ಲಿರುವ ಪರಂಬಿಕುಳಂ ಎಂಬ ಪ್ರದೇಶದಲ್ಲಿ ಪಾರಿಯ ಪರಂಬುಮಲ ಇತ್ತು. ಮುನ್ನೂರು ಊರುಗಳಲ್ಲಿ ಪಾರಿಯ ಅಧಿಕಾರ ಸೀಮೆ ವ್ಯಾಪಿಸಿತ್ತು. ಬಿದಿರಕ್ಕಿ, ಹಲಸು, ಬಳ್ಳಿಗೆಣಸು, ಜೇನು, ನವಿಲುಗಳು, ಶ್ರೀಗಂಧದ ವೃಕ್ಷಗಳು ಧಾರಾಳ ವಾಗಿದ್ದ ಪ್ರದೇಶವಿದು. ದಾನಶೂರನೆಂದು ಹೆಸರು ವಾಸಿಯಾದ ಈತನನ್ನು ಚೇರರು ವಧಿಸಿದ್ದರು. ನಸು ಬೆಳದಿಂಗಳ ರಾತ್ರಿಯಲ್ಲಿ ಮಡಿದ ಪಾರಿಯ ಹೆಣ್ಣು ಮಕ್ಕಳು ತಂದೆಯ ಅಗಲಿಕೆಯ ಕುರಿತು, ಕೈ ಬಿಟ್ಟು ಹೋದ ಮಲೆಪ್ರದೇಶಗಳ ಕುರಿತು ನೆನೆಯುತ್ತಾ ಹಾಡುವ ದೃಶ್ಯ ಸಂಘಂ ಸಾಹಿತ್ಯದಲ್ಲಿ ಹೃದಯಸ್ಪರ್ಶಿಯಾಗಿ ದಾಖಲಾಗಿದೆ. ಪಾರಿಯ ಮಕ್ಕಳು ಕಪಿಲರ ಸಂರಕ್ಷಣೆಯಲ್ಲಿದ್ದರು. ಕಪಿಲರು ಅವರನ್ನು ಯೋಗ್ಯ ವರನಿಗೆ ಕೊಡಲು ಊರು ತುಂಬಾ ಅಲೆದಾಡಿದ ಬಗೆಗೆ ಸಂಘಂ ಸಾಹಿತ್ಯದಲ್ಲಿ ವರ್ಣಿಸಲಾಗಿದೆ. ಕಪಿಲರು ಬಳಿಕ ಚೆಲ್‌ವಕ್ಕಡುಂ ಕೋವಾೞಿಯಾತನ್ ಎಂಬ ಚೇರ ರಾಜನ ಆಸ್ಥಾನಿಕರಾಗಿದ್ದರು.

ಇವರಷ್ಟೇ ಅಲ್ಲದೆ ಮತ್ತೂ ಇತರ ಕೆಲವು ವೇಳರು ಸಂಘಂ ಕಾಲದಲ್ಲಿ ತಮಿಳಗ ದಲ್ಲಿದ್ದರು. ಪನ್ರಿಮಲೆ(ಪೞನಿಮಲ)ಯ ವೇಳ ಆವಿ, ನಾಂಚಿಲ್‌ಮಲೆಯ ವಳ್ಳುವನ್ ಮೊದಲಾದವರನ್ನು ಇಲ್ಲಿ ಹೆಸರಿಸಬಹುದು. ವೇಳ್ ಆವಿಯ ಒಬ್ಬಾಕೆ ಮಗಳನ್ನು ನೆಡುಂ ಚೇರಲಾತನ್ ಮದುವೆಯಾಗಿದ್ದ. ವಂಚಿ ರಾಜಧಾನಿಯಲ್ಲಿ ವೇಳ್ ಆವಿಗೆ ಪ್ರತ್ಯೇಕ ಅರಮನೆಯಿತ್ತೆಂದೂ ಶಿಲಪ್ಪದಿಕಾರಂನಲ್ಲಿ ಹೇಳಿದೆ.

ನಾಂಚಿಲ್ ಮಲೆಯೂ ಅದರ ಕಣಿವೆ ಪ್ರದೇಶದಲ್ಲಿರುವ ನಾಂಚಿನಾಡು (ತೋವಾಳ, ಅಗಸ್ತ್ಯೇಶ್ವರ ತಾಲೂಕುಗಳು) ನಾಂಚಿಲ್ ವಳ್ಳುವನ ಆಡಳಿತಕ್ಕೆ ವಿಧೇಯವಾಗಿತ್ತು. ನಾಂಚಿಲ್ ವಳ್ಳುವನ್‌ನು ಚೇರ ರಾಜನ ಒಬ್ಬ ಸಾಮಂತನಾಗಿದ್ದನು.

ಸಂಘಂ ಕಾಲದ ಚೇರ ರಾಜರುಗಳು

ತಮಿಳಗಂ ಸಂಘಂ ಕಾಲದಲ್ಲಿ ಮೂರು ಮಂದಿ ಪ್ರಬಲ ರಾಜರುಗಳ ಮತ್ತು ಅನೇಕ ವೇಳ ಪ್ರಮುಖರ ಅಧಿಕಾರ ವ್ಯಾಪ್ತಿಯಲ್ಲಿ ಕಳೆದ ನಾಡಾಗಿತ್ತು. ವೇಳ್ ಮುಖ್ಯಸ್ಥರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮೂವೇಂದನರು (ಚೇರ-ಚೋಳ-ಪಾಂಡ್ಯ) ನಿರಂತರ ಶ್ರಮಿಸಿದ್ದರು. ಇದಕ್ಕಾಗಿ ನಡೆದ ಯುದ್ಧಗಳ ಪರಿಣಾಮವಾಗಿಯೇ ಚೇರ, ಚೋಳ, ಪಾಂಡ್ಯರ ರಾಜ್ಯಗಳ ವಿಸ್ತಾರವೂ ಹೆಚ್ಚಿತು. ಕೆಲವೊಮ್ಮೆ ಈ ತ್ರಿಶಕ್ತಿಗಳು ಪರಸ್ಪರ ತಾವೇ ಯುದ್ಧ ಮಾಡಿಕೊಂಡಿದ್ದೂ ಇತ್ತು. ಆದರೂ ಒಂದು ರಾಜ್ಯ ಇನ್ನೊಂದು ರಾಜ್ಯಕ್ಕೆ, ಪೂರ್ಣ ಶರಣಾಗುವ ಪರಿಸ್ಥಿತಿ ಸಂಘಂ ಕಾಲದಲ್ಲಿ ನಿರ್ಮಾಣವಾಗಿರಲಿಲ್ಲ. ಸೋಲುಗಳು ಸಂಭವಿಸಿವೆ. ರಾಜರುಗಳ ಸಾವು ಸಂಭವಿಸಿವೆ. ಆದರೆ ರಾಜ್ಯದ ಸ್ವಾತಂತ್ರ್ಯವನ್ನು ಉಳಿಸುವುದು ಈ ರಾಜಕೀಯ ಶಕ್ತಿಗಳಿಗೆ ಸಾಧ್ಯವಾಗಿದೆ. ಹೊರಗಿನಿಂದ ಆಕ್ರಮಣಗಳು ಈ ಕಾಲಘಟ್ಟದಲ್ಲಿ ಆಗಿರಲಿಲ್ಲ. ಹಾಗಾಗಿ ಈ ಕಾಲಘಟ್ಟದ ರಾಜಕೀಯ ಚರಿತ್ರೆಯೆಂದರೆ ಪರಸ್ಪರ ಯುದ್ಧಗಳ ಚರಿತ್ರೆ ಮಾತ್ರ.

ಉದಿಯನ್ ಚೇರನ್

ಪ್ರಸಿದ್ಧನಾದ ಮೊದಲ ಚೇರ ರಾಜ ಉದಿಯನ್ ಚೇರನ್. ಈತನ ಕಾಲದಲ್ಲಿ ಚೇರರು ರಾಜ ಪದವಿಯನ್ನು ಪಡೆಯುವಂತಾಯಿತು. ಕಳುಮುರ್ ಅಂದರೆ ಇಂದಿನ ಕುಳೂರು ಈತನ ರಾಜಧಾನಿಯಾಗಿದ್ದಿರಬೇಕು. ಉದಿಯನನ ಕಾಲದಲ್ಲಿ ಬಂದರುಗಳು ವಾಣಿಜ್ಯಾಭಿವೃದ್ದಿ ಹೊಂದಿದ್ದವು. ಕ್ರಿ.ಶ. ನಲವತ್ತೈದರಲ್ಲಿ ಹಿಪ್ಪಾಲಸ್ ಎಂಬ ಗ್ರೀಕ್ ನಾವಿಕನು ಮಳೆಯ ಗಾಳಿಯನ್ನು ಕಂಡುಹಿಡಿದ ನಂತರ ವಿದೇಶದ ಜೊತೆಗೆ ಕೇರಳದ ಸಮುದ್ರ ವ್ಯಾಪಾರ ಅಭಿವೃದ್ದಿ ಹೊಂದಿತು. ಹಾಗಾಗಿ ಉದಿಯನ ಆಡಳಿತ, ಕ್ರಿ.ಶ. ಮೊದಲ ಶತಮಾನದಲ್ಲಿಯೇ ಆರಂಭವಾಗಿರಬೇಕು. ಪಾಶ್ಚಾತ್ಯರು ಇಲ್ಲಿಂದ ಕೊಂಡೊಯ್ದ ಮುಖ್ಯ ಉತ್ಪನ್ನ ಕರಿಮೆಣಸು. ಸುಮಾರು ಕ್ರಿ.ಶ. ೨೫೦ರಲ್ಲಿ ಬರೆಯಲಾದ ಪರಿಪ್ಲಸ್‌ನ ಗ್ರಂಥದಲ್ಲಿ ‘ಕೊಟ್ಟನಾರ’ ಎಂಬ ಸ್ಥಳದಿಂದ ಕಾಳುಮೆಣಸು ತರಲಾಗುತ್ತಿತ್ತು ಎಂದು ಹೇಳಲಾಗಿದೆ. ಕುಟ್ಟನಾಡು ಪ್ರದೇಶವನ್ನೆ ಕೊಟ್ಟನಾರ ಎಂದು ಹೇಳಿರಬೇಕು. ಕೊಟ್ಟನಾರ ಅಂದು ಚೇರರ ಅಧೀನ ಪ್ರದೇಶವಾಗಿತ್ತು. ಕ್ರಿಶ್ಚಿಯನ್ನರನ್ನು ಯೆಹೂದ್ಯರನ್ನು ಭಾರತಕ್ಕೆ ಮೊತ್ತ ಮೊದಲ ಬಾರಿಗೆ ಸ್ವಾಗತಿಸಿದ ರಾಜ ಉದಿಯನ್ ಚೇರನಾಗಿರಬೇಕು ಎಂದು ಊಹಿಸಲಾಗಿದೆ. ಕ್ರೈಸ್ತ ಮತ ಪ್ರಚಾರಕ್ಕಾಗಿ ಸೈಂಟ್ ಥಾಮಸ್ ಕ್ರಿ.ಶ. ೫ರಲ್ಲೂ ಜೈರುಸಲೇಮಿನ ಇಗರ್ಜಿಯು ನಾಶವಾದ ಬಳಿಕ ಯೆಹೂದಿಗಳು ಕ್ರಿ.ಶ. ೬೮೦ರಲ್ಲೂ ಕೇರಳಕ್ಕೆ ಬಂದರು. ಕ್ರಿ.ಶ. ಮೊದಲನೆಯ ಶತಮಾನದ ಮಧ್ಯ ಭಾಗದಲ್ಲಿ ಅಧಿಕಾರಕ್ಕೆ ಬಂದ ರಾಜ ಉದಿಯನ್ ಅದುದರಿಂದ ಪಶ್ಚಿಮ ಏಷ್ಯಾದಲ್ಲಿ ಉದಯವಾದ ಎರಡು ಮಹತ್ತರ ಸಂಸ್ಕೃತಿಗಳನ್ನು ಭಾರತಕ್ಕೆ ಸ್ವಾಗತಿಸಿದ ಚರಿತ್ರಾರ್ಹವಾದ ಮತ್ತು ಉತ್ಕೃಷ್ಟವಾದ ಕೆಲಸ ಮಾಡಿದ ಒಬ್ಬ ಇತಿಹಾಸ ಪುರುಷನಾಗಿ ಈತನನ್ನು ಪರಿಗಣಿಸಲಾಗಿದೆ.

ಈತನು ‘ವಾನವರನ್ಬನ್’ ಎಂಬ ಬಿರುದನ್ನು ಇಟ್ಟುಕೊಂಡಿದ್ದನು. ವಾನವರು ಎಂದರೆ ದೇವತೆಗಳು. ಅನ್ಬನ್ ಎಂದರೆ ಪ್ರಿಯನಾದವನು. ದೇವತೆಗಳಿಗೆ ಪ್ರಿಯನಾದವನು ಎಂಬರ್ಥ ದಲ್ಲಿ ಈ ಬಿರುದನ್ನು ಇರಿಸಿಕೊಂಡಿರಬೇಕು. ಚರಿತ್ರೆಯಲ್ಲಿ ಇಂತಹ ಅನೇಕ ಬಿರುದುಗಳನ್ನು ಸ್ವೀಕರಿಸಿದ ಬಗೆಗೆ ತಿಳಿದುಬರುತ್ತದೆ. ಅಶೋಕನು ‘ಪ್ರಿಯದರ್ಶಿ’ ಎಂಬ ಬಿರುದನ್ನು ಸ್ವೀಕರಿಸಿದ ಬಗೆಗೆ ಶಾಸನಗಳಿಂದ ತಿಳಿಯುತ್ತದೆ. ಅಶೋಕನ ಕಾಲದಲ್ಲಿ ಸಿಲೋನ್‌ನಲ್ಲಿ ತಿಸ್ಸ ಎಂಬ ಹೆಸರಿನ ರಾಜನು ಬೌದ್ಧಮತವನ್ನು ಪ್ರಚಾರ ಮಾಡಿದನು. ಈತ ದೇವನಾಂಪಿಯ (ದೇವತೆಗಳಿಗೆ ಪ್ರಿಯನಾದವನು) ಎಂಬ ಬಿರುದನ್ನು ಸ್ವೀಕರಿಸಿದ್ದನು. ಈ ತೆರನ ಬಿರುದನ್ನು ಇರಿಸಿಕೊಂಡವರೆಲ್ಲ ಬೌದ್ಧ ಮತಾನುಯಾಯಿಗಳಾಗಿದ್ದರೆಂದು ಭಾವಿಸಬಹುದು. ಹಾಗಾಗಿ ಉದಿಯನ್ ಚೇರನೂ ಸಹ ಬೌದ್ಧನುಮತಾವಲಂಬಿಯಾಗಿದ್ದಿರ ಬೇಕು. ಆ ಕಾಲದಲ್ಲಿ ಕೇರಳದಲ್ಲಿಯೇ ಬೌದ್ಧ ಮತವು ತನ್ನ ಶಕ್ತಿಯನ್ನು ವರ್ಧಿಸಲಾರಂಭಿಸಿತ್ತು. ಉದಿಯನನ ಬಗೆಗೆ ಇತಿಹಾಸದಲ್ಲಿ ಹೆಚ್ಚಿನ ಉಲ್ಲೇಖಗಳು ದೊರೆಯುತ್ತಿಲ್ಲ. ಆತ ಕ್ರೈಸ್ತ ಮತ್ತು ಯೆಹೂದಿ ಮತದವರನ್ನು ಭಾರತಕ್ಕೆ ಸ್ವಾಗತಿಸಿದ ಎಂಬ ಕಾರಣದಿಂದ ಗಮನಾರ್ಹ ನಾಗಿದ್ದಾನೆ. ಈ ಮತಗಳವರು ಕೇರಳದ ಸಂಸ್ಕೃತಿಯಲ್ಲಿ ಗಮನಾರ್ಹರಾಗಿದ್ದಾರೆ.