ರಾಜಕೀಯದ ಹೆಜ್ಜೆ ಗುರುತು

ಪರಂಗಿಗಳ ಪತನವೂ ಅವರ ಆ ಜಾಗಗಳಲ್ಲಿ ಕೊಚ್ಚಿ, ಕೋಝಿಕೋಡ್ ಮೊದಲಾದವರ ಆಧಿಪತ್ಯ ಬದಲಾವಣೆಗಳನ್ನುಂಟು ಮಾಡಿದವು. ಮಲಯಾಳಂ ಕರಾವಳಿಯಲ್ಲಿ ಶಾಂತಿ ಪುನಸ್ಥಾಪನೆಗೊಂಡಿತು. ಹೆಚ್ಚಿನ ಸಮೃದ್ದಿ ಉಂಟಾಯಿತು. ಯುರೋಪಿಯನ್ ಸಮುದ್ರ ವ್ಯಾಪಾರ ಮತ್ತೊಮ್ಮೆ ಊರ್ಜಿತವಾಯಿತು. ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೊಲ್ಲಂ, ಕೊಚ್ಚಿ, ಕೋಝಿಕೋಡ್ ಬಂದರುಗಳಲ್ಲಿನ ವ್ಯಾಪಾರಿ ಸಮುದಾಯದವರು ಪ್ರಬಲರಾದರು. ವೇನ್ನಾಡಿನ ಅಧೀನದಲ್ಲಿದ್ದ ಪಾಂಡ್ಯ ರಾಜ್ಯದ ಪ್ರದೇಶಗಳಲ್ಲಿ ಹೆಚ್ಚಿನವು ಹೊಸ ಮದುರೈ-ತಂಜಾವೂರು ನಾಯಕರ ಸ್ವಾಧೀನಕ್ಕೆ ಬಂದುದರಿಂದ ಆ ಪ್ರದೇಶಗಳ ಕೇರಳೀಯತೆಯು ಬೆಳೆಯಲು ಅನುವಾಯಿತು. ರಾಜ್ಯ ಗಡಿಗಳು ಉತ್ತರಕ್ಕೆ ವಿಸ್ತಾರಗೊಳ್ಳತೊಡಗಿದವು. ಅದರಿಂದ ಕೇರಳದ ದಕ್ಷಿಣ ಭಾಗದಲ್ಲಿ ಒಂದು ಹೊಸ ಸ್ಪರ್ಧೆಗೆ ವೇದಿಕೆ ಸಿದ್ಧವಾಯಿತು.

ಹದಿನೆಂಟನೆಯ ಶತಮಾನದಲ್ಲಿ ಎರಡು ಹೊಸ ಘಟನೆಗಳು ನಡೆದವು. ಕೇರಳದಲ್ಲಿ ಮಾರ್ತಾಂಡವರ್ಮನ ತಿರುವಿದಾಂಕೂರು ರಾಜ್ಯವು ಪ್ರಾಬಲ್ಯ ಪಡೆದು ಕೊಚ್ಚಿಯ ಗಡಿಯ ವರೆಗೂ ಉತ್ತರಕ್ಕೆ ವ್ಯಾಪಿಸಿತು. ನಾಡದೊರೆಗಳ ಹಳೆಯ ಪ್ರಭುತ್ವವು ಕಾಲದ ಗತಿಯಿಂದಾಗಿ ದುರ್ಬಲವಾಗಿ ಹೋಯಿತು. ವ್ಯಾಪಾರದ ಮೂಲಕ ಹಣ ಸಂಗ್ರಹ, ಜಮೀನ್ದಾರರ ಸೈನಿಕ ಶಕ್ತಿಗಳಿಗೆದುರಾಗಿ ನಿರಂಕುಶವಾದ ಕಾರ್ಯಾಚರಣೆ, ಡಿಲನೋನ ಸಹಾಯದಿಂದ ಆಧುನಿಕ ಯುರೋಪಿಯನ್ ರೀತಿಯಲ್ಲಿ ಸೈನ್ಯ ವ್ಯವಸ್ಥೆ ಮೊದಲಾದವುಗಳ ಆವಿಷ್ಕಾರದ ಮೂಲಕ ತಿರುವಾಂಕೂರ್ ಒಂದು ಹೊಸ ತೆರನ ಏಕಾಧಿಪತ್ಯ ರಾಜ್ಯವಾಯಿತು. ಶ್ರೀ ಪದ್ಮನಾಭದಾಸ ಎಂಬ ಪದವಿಯ ಮೂಲಕ ಹಳೆಬರನ್ನು ಹಾಗೂ ಭಕ್ತರನ್ನು ತೃಪ್ತಿಪಡಿಸುವ, ವಿರೋಧಿಸಿ ದವರನ್ನು ಧಮನಿಸುವ, ಬ್ರಾಹ್ಮಣ ನಾಯರ್ ಸಂಘಟನೆಗಳನ್ನು ಸಂತೃಪ್ತಿಗೊಳಿಸಲು ಒಂದು ನಿಯಮವನ್ನೇ ಆ ಆಡಳಿತ ಜಾರಿಗೆ ತಂದಿತು. ಎಲ್ಲವೂ ಯುರೋಪಿಯನ್ ಮಾದರಿಯಲ್ಲಿಯೇ ನಡೆಯಿತು. ಜಮೀನ್ದಾರಿಕೆಯು ಅಂತ್ಯಗೊಂಡು ಬಂಡವಾಳಶಾಹಿಯ ಹೆಚ್ಚಳಕ್ಕೆ ಮೊದಲ ಘಟ್ಟದಲ್ಲಿ ಈ ತೆರನ ರಾಜಕೀಯ ನಿಯಮಗಳು ಅನುಕೂಲವಾದವು. ಇದೇ ರೀತಿಯ ಬದಲಾವಣೆಗಳು ಶಕ್ತನ್ ತಂಬುರಾನನ ಕಾಲದಲ್ಲಿ ಕೊಚ್ಚಿಯಲ್ಲೂ ಉಂಟಾಯಿತು. ಆದರೆ ಚಾರಿತ್ರಿಕವಾದ ಕೆಲವು ಕಾರಣಗಳಿಂದಾಗಿ – ವ್ಯಾಪಾರ ಹೆಚ್ಚಳಕ್ಕೆ ಅಗತ್ಯವಾದ ಸರಕುಗಳ ಕೊರತೆ, ನಂಬೂದಿರಿಗಳ ಅಧಿಪತ್ಯ, ನಾಯರ್ ಪ್ರಭುಗಳ ಸ್ವೇಚ್ಛಾಚಾರ ಹಾಗಾಗಿ ಆ ರಾಜ್ಯ ತಿರುವಾಂಕೂರಿನಂತೆ ಹೊಸ ದಾರಿಯಲ್ಲಿ ಪ್ರವರ್ಧಮಾನಕ್ಕೆ ಬರಲಿಲ್ಲ.

ಅದೇ ಶತಮಾನದ ಉತ್ತರಾರ್ಧದಲ್ಲಿ ಒಂದು ದೊಡ್ಡ ರಾಜಕೀಯ ದುರಂತ ವುಂಟಾಯಿತು. ದಂಗೆಯ ಮೂಲಕ ಮೈಸೂರಿನಲ್ಲಿ ಅಧಿಕಾರಕ್ಕೆ ಬಂದ ಹೈದರ್ ಅಲಿಯ ಮಗ ಟಿಪ್ಪು ಸುಲ್ತಾನ್ ಸಾಮೂದಿರಿಯ ಅಧಿಕಾರದಲ್ಲಿದ್ದ ಕೋಝಿಕೋಡನ್ನು ಆಕ್ರಮಣ ಮಾಡಿದ. ಮಾರ್ತಾಂಡವರ್ಮನಿಗಿದ್ದಂತೆ ಪಾಶ್ಚಾತ್ಯ ವಿರೋಧದ ಹಿನ್ನೆಲೆಯಲ್ಲಿನ ಸಾಮೂದಿರಿಗೆ ಯುರೋಪಿಯನ್ ತರಬೇತಿಯ ದೀರ್ಘಾಲೋಚನೆ ಇದ್ದಿರಲಿಲ್ಲ. ಕೊನೆಗೆ ರಾಜನು ಸೋಲಿನ ಅಪಮಾನಕ್ಕೆ ಹೆದರಿ ಅರಮನೆಯ ಸಿಡಿಮದ್ದು ಭಂಡಾರಕ್ಕೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ಮೂಲಕ ಮಲಬಾರಿನಲ್ಲಿ ಮೈಸೂರಿನ ಸೈನಿಕ ಆಡಳಿತ ಸ್ಥಾಪಿತವಾಯಿತು.

ಮೈಸೂರಿನ ಮುಸಲ್ಮಾನ ಆಡಳಿತಾಧಿಕಾರಿಗಳು ಉಪಾಯದಿಂದ ಅರಕ್ಕಲ್‌ಅಲಿ ರಾಜ ನೊಂದಿಗೆ ಸ್ನೇಹ ಬೆಳೆಸಿದ್ದರಿಂದ ಸಾಮೂದಿರಿಗೆ ಮಾಪಿಳ್ಳೆಯರ ಸಹಾಯ ನಿಂತು ಹೋಯಿತು. ನಾಯಕರಿಲ್ಲದ ಅನೇಕ ನಾಯನ್ಮಾರರು ಮಾತ್ರ ಶೀತಲ ಸಮರವನ್ನು ಮುಂದುವರೆಸಿದ್ದರು. ೧೮೦೦ರಲ್ಲಿ ಬ್ರಿಟಷ್ ಈಸ್ಟ್ ಇಂಡಿಯಾ ಕಂಪನಿಯವರು ಟಿಪ್ಪುವನ್ನು ಕೊಂದು ಮಲಬಾರನ್ನು ಅಧೀನಕ್ಕೊಳಪಡಿಸಿದ ಮೇಲೆಯೇ ಶಾಂತಿ ಪುನಃ ಸ್ಥಾಪಿತವಾಯಿತು. ಟಿಪ್ಪುವಿನ ಲೆಕ್ಕ ತಲೆಕೆಳಗಾಯಿತು. ಫ್ರೆಂಚ್ ಸಹಾಯವೂ ಟಿಪ್ಪುವನ್ನು ರಕ್ಷಿಸಲಿಲ್ಲ. ಟಿಪ್ಪುವಿನ ಆಕ್ರಮಣಶೀಲ ಗುಣ, ಅಸಹಿಷ್ಣುತೆಗಳು ಚಿಕ್ಕ ಪುಟ್ಟ ರಾಜರುಗಳನ್ನೆಲ್ಲ ಬ್ರಿಟಿಷರೆಡೆಗೆ ಒಲವು ತೋರುವಂತೆ ಮಾಡಿತು. ಆತನಿಗೆ ಆದ ಸೋಲು ದಕ್ಷಿಣ ಭಾರತದಲ್ಲಿ ಬ್ರಿಟಿಷ್ ಅಧಿಪತ್ಯವನ್ನು ಸುಲಭವಾಗಿಸಿತು. ಇದರಿಂದ ಕೋಝಿಕೋಡ್ ನಾಶವಾದ್ದಷ್ಟೇ ಅಲ್ಲ ಮಲಬಾರಿನ ಪರಂಪರಾಗತ ಸಮಾಜ ಕುಸಿದು ಎರಡು ಶತಮಾನಗಳ ಕಾಲ ಆ ಪ್ರದೇಶ ಪ್ರಗತಿ ಹೊಂದದೇ ಉಳಿಯುವುದಕ್ಕೆ ಕಾರಣವಾಯಿತು. ಅಂದರೆ ಮಲಬಾರಿನ ರಾಜರುಗಳು, ನಾಡದೊರೆಗಳು, ಟಿಪ್ಪುವಿನ ಮತಾಂತರಕ್ಕೆ ಹೆದರಿ ಓಡಿದ ಅನೇಕ ಜನಸಾಮಾನ್ಯರು ಅಂದು ಅಭಯವನ್ನು ಆಶ್ರಯಿಸಿ ಸೇರಿದ್ದು ಕೊಚ್ಚಿ ಮತ್ತು ತಿರುವಾಂಕೂರಿನಲ್ಲಿ. ಮೈಸೂರಿನ ವಿರೋಧವೇ ಮಲಯಾಳಿಗರ ಸೌಹಾರ್ದವನ್ನು ಪ್ರಬಲಗೊಳಿಸಿತು. ಅಲ್ಲದೇ ಮಲಯಾಳ ಪ್ರಜ್ಞೆಗೂ ಶಕ್ತಿ ವರ್ಧಿಸಿತೆಂದು ಇತಿಹಾಸ ತಜ್ಞರ ಅಭಿಪ್ರಾಯ. (ನಾರಾಯಣನ್ ಎಂ.ಜಿ. ಎಸ್.; ೧೯೯೯-೨೦)

ಇತಿಹಾಸದ ವಿರೋಧಾಭಾಸವನ್ನು ಗಮನಿಸಿ ಪರಂಗಿಯರು ತಂದ ಪಿರಂಗಿಗಳಿಗಿಂತಲೂ ರಾಜಕೀಯ ಬೆರೆಸಿದ ಮತ ಪ್ರಚಾರಗಳಿಗಾಗಿ ಅವರು ತಂದ ಮುದ್ರಣ ವಿದ್ಯೆ ಪಾರಂಪರಿಕವಾಗಿ ಕೇರಳದಲ್ಲಿ ಒಂದು ದೊಡ್ಡ ಕಂದಕವನ್ನೇ ನಿರ್ಮಿಸಿತು. ಅಂದರೆ ಈ ಹಿಂದೆ ಅದೇ ಮುದ್ರಣ ವಿದ್ಯೆಯೇ ಸ್ಥಳೀಯ ಧಾರ್ಮಿಕ ಸಾಹಿತ್ಯಗಳ ಪ್ರಸಾರದ ಮೂಲಕ ಕೇರಳ ದೇಶೀಯತೆಗೆ ದೊಡ್ಡ ಒತ್ತಾಸೆ ನೀಡಿತು. ಅಷ್ಟೇ ಅಲ್ಲದೆ ಮಿಷನರಿಗಳು ಬಲವಂತದ ಮತಾಂತರದ ಮೂಲಕ ಮುಕ್ಕುವ (ಬೆಸ್ತರು)ರನ್ನು ಮತಾಂತರಗೊಳಿಸಿದ್ದು ಕೇರಳದ ಜಾತಿ ವ್ಯವಸ್ಥೆಗೆ ಒಂದು ಪಂಥಾಹ್ವಾನವಾಗಿತ್ತು. ಇದು ಜನಸಾಮಾನ್ಯರ ಪ್ರಜ್ಞೆಗೆ ಸಿಲುಕಿ ಸಾಮಾಜಿಕ ಪರಿಷ್ಕಾರವೊಂದಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರೇರಕವಾಯಿತು. ಶಿಕ್ಷಣವೂ ಮಿಷನರಿಗಳ ಮೂಲಕ ವ್ಯಾಪಕವಾಯಿತು. ಸಾಕ್ಷರತೆಯ ದೃಷ್ಟಿಯಿಂದ ಕೇರಳವನ್ನು ಇತರ ರಾಜ್ಯಗಳಿಂದಲೂ ಮುಂಚೂಣಿಯಲ್ಲಿ ಇರಿಸಲು ಇದು ನೆರವಾಯಿತು.

ಕೇರಳ ರಾಜ್ಯ

ಮಲಬಾರಿನ ಬ್ರಿಟಿಷ್ ಅಧಿಪತ್ಯವು ಆಡಳಿತಾತ್ಮಕವಾಗಿ ಕೇರಳದ ಉತ್ತರದ ಭಾಗಗಳನ್ನು ಮದ್ರಾಸ್ ಸಂಸ್ಥಾನದ ಜಿಲ್ಲೆಯಾಗಿಸಿತ್ತು. ಆದರೂ ತಮಿಳು ದೇಶೀಯತೆಯ ತೀವ್ರಗತಿಯ ಬೆಳವಣಿಗೆಯ ನಡುವೆ ಅವಗಣನೆಗೆ, ಅಪಮಾನಕ್ಕೆ ಗುರಿಯಾದ ಮಲಬಾರಿನ ಜನತೆಗೆ ಭಾಷಿಕವಾಗಿ, ಸಾಂಸ್ಕೃತಿಕವಾಗಿ ಕೊಚ್ಚಿ ಹಾಗೂ ತಿರುವಿದಾಂಕೂರು ಪ್ರದೇಶಗಳೊಡನೆ ಭಾವೈಕ್ಯತೆಗೆ ದಾರಿ ತೋರಿಸಿತು. ರೈಲು ಮಾರ್ಗ ಬಂದುದರಿಂದ ಮಲಬಾರು ಪ್ರದೇಶವು ವ್ಯಾಪಾರ ಮತ್ತು ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಮದ್ರಾಸ್ ನಗರದೊಡನೆ ಸಂಪರ್ಕ ಸಾಧಿಸಿತ್ತು. ಆದರೆ ತಮಿಳರು ಹಾಗೂ ಮಲಯಾಳಿಗರು ಪ್ರತ್ಯೇಕ ಜನವರ್ಗ ಎಂಬ ನಂಬಿಕೆ ದಿನಂಪ್ರತಿ ಸಾಹಿತ್ಯ ಕಲೆಗಳ ಮೂಲಕ ಬೆಳೆದು ವ್ಯಾಪಿಸುತ್ತಲೇ ಇತ್ತು.

ಶ್ರೀನಾರಾಯಣ ಗುರುವಿನ ಪ್ರವೇಶ ಹಾಗೂ ಅವರ ಸಂಘ ಸ್ಥಾಪನೆಯು ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕವಾಗಿ ದೀರ್ಘ ಪರಿಣಾಮಗಳನ್ನುಂಟು ಮಾಡಿದವು. ಸವರ್ಣೀಯರಲ್ಲಿ ಜಗಳ, ಕಾಯದೆ, ಅವರ್ಣೀಯರಿಗೆ ಸಮನಾಂತರವಾಗಿ ದೇವಾಲಯ, ವಿದ್ಯಾಲಯ, ವ್ಯವಸಾಯ ಕೇಂದ್ರಗಳನ್ನು ಸ್ಥಾಪಿಸುವುದರ ಮೂಲಕ ಹೊಸತೊಂದು ಪರಿವರ್ತನೆಗೆ ನಾಂದಿ ಹಾಡಿದರು. ಇದು ಶಾಂತವಾದ ಒಂದು ಕ್ರಾಂತಿ. ಆಧುನಿಕ ಭಾರತದಲ್ಲಿಯೇ ನೋಡಿದರೆ ಅವರ್ಣೀಯ ಸಮುದಾಯದ ಒಬ್ಬ ವ್ಯಕ್ತಿ; ಅದರಲ್ಲೂ ವೇದಾಂತಿಯಂತಿರುವ ಒಬ್ಬ ಆಚಾರ್ಯ ಸಾಮಾಜಿಕ ಪರಿಷ್ಕಾರಕ್ಕಾಗಿ ಜೀವಮಾನವನ್ನು ಮುಡುಪಾಗಿರಿಸಿದ ವ್ಯಕ್ತಿ ಇನ್ನೊಬ್ಬ ಸಿಗಲಾರನೆಂದು ಇವರ ಬಗೆಗೆ ಹೇಳಲಾಗಿದೆ. ಈಳವ ಜನಾಂಗವನ್ನು ಕೇರಳದ ಸಾಂಸ್ಕೃತಿಕ ಮುಖ್ಯವಾಹಿನಿಗೆ ತರುವುದರೊಂದಿಗೆ ಭಾರತದಲ್ಲಿ ಒಂದು ಆದರ್ಶ ನವೋತ್ಥಾನವನ್ನು ಸೃಷ್ಟಿಸಲು ನಾರಾಯಣ ಗುರುವಿಗೆ ಸಾಧ್ಯವಾಯಿತು. ಇದೇ ಕಾಲಘಟ್ಟದಲ್ಲಿ ನಂಬೂದಿರಿ, ನಾಯರ್, ಮಾಪ್ಪಿಳ, ನಸ್ರಾಣಿ, ಹೊಲೆಯ ಜನಾಂಗ ಗಳಲ್ಲೂ ಪರಿಷ್ಕಾರಗಳು ನಡೆದವು. ಇವೆಲ್ಲವುಗಳಿಂದಾಗಿ ಕೇರಳ ಸಮಾಜಕ್ಕೆ ಹೊಸ ಶಕ್ತಿ ಮತ್ತು ಆತ್ಮವಿಶ್ವಾಸ ಪ್ರಾಪ್ತವಾಯಿತು.

೨೦ನೇ ಶತಮಾನದ ಎರಡನೆಯ ದಶಕದಲ್ಲಿ ಕೇರಳದಲ್ಲೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ದೇಶೀಯ ಚಿಂತನೆಗಳು ಸಜೀವಗೊಂಡವು. ಗಾಂಧೀಜಿಯ ಸಲಹೆಯಂತೆ ಭಾಷೆಯ ತಳಹದಿಯಲ್ಲಿ ಕಾಂಗ್ರೆಸ್ ಸಂಘಟನೆಯನ್ನು ರೂಪಿಸುವುದರೊಂದಿಗೆ ಐಕ್ಯಕೇರಳಕ್ಕೆ ಬೀಜಾಂಕುರವಾದಂತಾಯಿತು. ಕೆ.ಪಿ. ಕೇಶವ ಮೇನೋನ್, ಪ್ರೊ. ಮುಂಡಶ್ಶೇರಿ ಮೊದಲಾ ದವರು ನೇತೃತ್ವ ವಹಿಸಿದ ಚಳುವಳಿಗೆ ಕಮ್ಯುನಿಸ್ಟ್‌ರು ಬೆಂಬಲಿಸಿದರು. ಮೊದಲು ತಿರುಕೊಚ್ಚಿ ಯಲ್ಲಿ ಬಳಿಕ ಐಕ್ಯ ಕೇರಳದ ರೂಪೀಕರಣದ ನಂತರ ನಡೆದ ಚುನಾವಣೆಯಲ್ಲಿ ಕಮ್ಯುನಿಸ್ಟ್ ಆಡಳಿತ ನೆಲೆ ನಿಂತಿತು. ಅದೊಂದು ಹೊಸ ಆಯಾಮವಾಯಿತು. ರಣದಿವೇಯವರ ಕಲ್ಕತ್ತಾ ಥಿಸೀಸ್‌ನ* ಪರಿಣಾಮವಾಗಿ ಉಂಟಾದ ದೇಶ ವಿರೋಧಿ ಚಟುವಟಿಕೆಗಳಿಗೆ ಜನಸಾಮಾನ್ಯರ ಅಸಹಕಾರದಿಂದಾಗಿ ಪರಾಜಿತರಾದ ಕಮ್ಯುನಿಸ್ಟರು ಪಾರ್ಲಿಮೆಂಟರಿ ಸಂಪ್ರದಾಯಕ್ಕೆ ಮೊತ್ತ ಮೊದಲಾಗಿ ಒಲವು ತೋರಿದರು (ವರ್ಗೀಸ್ ವಿ.ಜೆ., ೧೯೯೯ : ೨೨). ಕಾಂಗ್ರೆಸ್ ನೇತಾರರ ಭ್ರಷ್ಟಾಚಾರವನ್ನು ಕಂಡು ರೋಸಿದ ಜನತೆ ಕಮ್ಯುನಿಸ್ಟರನ್ನು ಸ್ವಾಗತಿಸಿದರು. ಆ ಹೊಸ ಆಯಾಮದಿಂದಾಗಿ ಜಾಗತಿಕ ಶ್ರದ್ಧೆ ಇತ್ತ ಕೇಂದ್ರೀಕರಣಗೊಂಡಿತು. ಸಾವಿರಾರು ನಿಷೇಧಾತ್ಮಕ ಪರಿಣಾಮಗಳಿದ್ದರೂ ಕಮ್ಯುನಿಸ್ಟ್ ಕೇರಳವನ್ನು ಇತರ ಸಂಸ್ಥಾನಗಳಿಗಿಂತ ಪ್ರತ್ಯೇಕವಾಗಿ ಬೆಳೆಸಿತು. ಅದರಲ್ಲಿ ಪ್ರಾದೇಶಿಕತೆ ಎಂಬ ಕೇರಳ ದೇಶೀಯತೆಗೂ ಪ್ರಾಬಲ್ಯ ದೊರೆಯಿತು.

ಭಾಷೆ, ಆಚಾರ, ವಿಚಾರಗಳ ನೆಲೆಯಿಂದ ಒಂದಾಗಿರುವ ಮಲಯಾಳಿಗರು ತಿರುವಿದಾಂಕೂರು, ಕೊಚ್ಚಿ, ಬ್ರಿಟಿಷ್ ಮಲಬಾರು ಆಡಳಿತಗಳಲ್ಲಿ ಪ್ರತ್ಯೇಕವಾಗಿಯೇ ಇದ್ದರು. ಇವರೆಲ್ಲರೂ ಒಂದೇ ಆಡಳಿತದ ವ್ಯಾಪ್ತಿಯಲ್ಲಿ ಬರುವುದನ್ನು ಕುರಿತಂತೆ ಅನೇಕರು ಕನಸು ಕಾಣುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೇರಳ ಏಕೀಕರಣಕ್ಕಾಗಿ ನಡೆದ ಹೋರಾಟವನ್ನು ‘ಐಕ್ಯ ಕೇರಳ ಚಳುವಳಿ’ ಎಂದೇ ಕರೆಯಲಾಗುತ್ತದೆ. ಮಹಾತ್ಮಾಗಾಂಧೀಜಿಯವರು ಕಾಂಗ್ರೆಸ್‌ನ ನೇತೃತ್ವವಹಿಸಿದಾಗ ಸಂಸ್ಥಾನ ಕಾಂಗ್ರೆಸ್ ಸಮತಿಗಳನ್ನು ರೂಪಿಸುವಲ್ಲಿ ಭಾಷೆಯನ್ನು ಆಧಾರವಾಗಿಟ್ಟುಕೊಳ್ಳಲು ಸೂಚಿಸಿದ್ದರು. ೧೯೪೯ರ ಜುಲೈ ೨೯ ರಂದು ಅಂದಿನ ಕೊಚ್ಚಿ ಮಹಾರಾಜನಾದ ಶ್ರೀ ಕೇರಳವರ್ಮನು ಕೊಚ್ಚಿ, ತಿರುವಿದಾಂಕೂರು ಹಾಗೂ ಬ್ರಿಟಿಷ್ ಮಲಬಾರು ಸೇರಿದ ಒಂದು ಕೇರಳ ಸಂಸ್ಥಾನವನ್ನು ಬೆಂಬಲಿಸುವುದಾಗಿ ಪ್ರಕಟಿಸಿದನು. ಇದು ಕೇರಳ ಏಕೀಕರಣವನ್ನು ಕುರಿತ ಮೊದಲ ಅಧಿಕೃತ ಪ್ರಕಟಣೆಯಾಗಿತ್ತು. ೧೯೪೭ರಲ್ಲಿ ಕೆ. ಕೇಳಪ್ಪನರ್ ನೇತೃತ್ವದಲ್ಲಿ ತೃಶ್ಯೂರಿನಲ್ಲಿ ನಡೆದ ‘ಐಕ್ಯ ಕೇರಳ’ ಸಮ್ಮೇಳದಲ್ಲಿ ಕೊಚ್ಚಿ ಮಹಾರಾಜನು ಬೆಂಬಲಿಸಿ ಭಾಷಣ ಮಾಡಿದಾಗ ಜನರ ಬೆಂಬಲವೂ ವ್ಯಾಪಕವಾಗಿ ದೊರೆಯಿತು. ೧೯೪೯ರ ತಿರುವಿದಾಂಕೂರು ಮತ್ತು ಕೊಚ್ಚಿಯನ್ನು ಸೇರಿಸಿ ಜುಲೈ ೧ ರಂದು ತಿರುಕೊಚ್ಚಿಯನ್ನು ರೂಪಿಸಲಾಯಿತು. ಇವೆರಡೂ ಒಂದೇ ಆಡಳಿತದಲ್ಲಿ ಬಂದ ಏಕೀಕರಣವನ್ನು ಐಕ್ಯ ಕೇರಳವೆಂಬ ನೆಲೆಯಲ್ಲಿ ಸ್ವಾಗತಿಸಲಾಯಿತು. ಕೇರಳವು ಬೇರೆ ಬೇರೆ ಆಡಳಿತಾಧಿಕಾರಿಗಳ ಅಧೀನದಲ್ಲಿದ್ದರೂ ಅವರೆಲ್ಲ ಭಾಷಿಕವಾಗಿ ಮಲಯಾಳವನ್ನೇ ಆಶ್ರಯಿಸಿದ್ದರು. ಅವು ಭಾಷಿಕರ ಆಡಳಿತಕ್ಕೆ ಒಳಪಡದ ಕಾರಣ ಕೇರಳ ಏಕೀಕರಣ ಚಳುವಳಿಯು ಕರ್ನಾಟಕ ಏಕೀಕರಣ ಚಳುವಳಿಯ ಸ್ವರೂಪವನ್ನು ಪಡೆಯಲಿಲ್ಲ. ತಿರುವಾಂಕೂರಿನಲ್ಲಿ ತಮಿಳು ಭಾಷಿಕರೇ ಅಧಿಕವಿದ್ದುದರಿಂದ ಸ್ವಲ್ಪಮಟ್ಟಿಗೆ ಸಮಸ್ಯೆಗಳನ್ನು ಎದುರಿಸಬೇಕಾಯಿತಾದದೊ ಬಳಿಕ ಐಕ್ಯ ಕೇರಳ ಚಳುವಳಿಗೆ ಹಾದಿ ಸುಗಮವಾಯಿತು.

ಭಾಷಾವಾರು ಪ್ರಾಂತ್ಯ ವಿಂಗಡಣೆಯ ಪರಿಣಾಮವಾಗಿ ೧೯೫೬ರ ನವೆಂಬರ್ ೧ ರಂದು ಆಧುನಿಕ ರಾಜಕೀಯ ಕೇರಳದ ಉದಯವಾಯಿತು. ಸುಮಾರು ಮೂರು ಕೋಟಿ ಜನಸಂಖ್ಯೆಯಿರುವ ಕೇರಳದ ವಿಸ್ತೀರ್ಣ ೩೮,೮೬೩ ಚದರ ಕಿ.ಮೀ. ತಿರುವನಂತಪುರಂ, ಕೊಲ್ಲಂ, ಆಲಪ್ಪುೞ, ಪತ್ತನಂತಿಟ್ಟ, ಕೋಟ್ಟಯಂ, ಇಡುಕ್ಕಿ, ಎರ್ನಾಕುಳಂ, ತೃಶ್ಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕೋಡ್, ವಯನಾಡ್, ಕಣ್ಣೂರ್ ಮತ್ತು ಕಾಸರಗೋಡು ಎಂಬೀ ಹದಿನಾಲ್ಕು ಜಿಲ್ಲೆಗಳು ಕೇರಳದಲ್ಲಿವೆ. ೧೪೦ ವಿಧಾನಸಭಾ ಕ್ಷೇತ್ರಗಳು ಹಾಗೂ ೨೦ ಲೋಕಸಭಾ ಕ್ಷೇತ್ರಗಳಿವೆ. ೯೮೩ ಪಂಚಾಯತುಗಳು, ಮೂರು ಮಹಾನಗರ ಪಾಲಿಕೆಗಳು ಹಾಗೂ ೫೪ ನಗರ ಸಭೆಗಳೂ ಇವೆ.

೨೮.೦೧.೧೯೫೭ ರಂದು ಕೇರಳ ವಿಧಾನಸಭೆಗೆ ನಡೆದ ಮೊದಲ ಚುನಾವಣೆಯಲ್ಲಿ ಎಡ ಪಂಥೀಯ ಪಕ್ಷಗಳು ಜಯಗಳಿಸಿದವು. ಇ.ಎಂ.ಎಸ್. ನಂಬೂದಿರಿಪಾಡ್ ಅವರ ನೇತೃತ್ವದಲ್ಲಿ ರಚನೆಯಾದ ಮಂತ್ರಿಮಂಡಲವು ದೇಶದ ಮೊತ್ತ ವೊದಲ ಎಡ ಪಂಥೀಯ ಸರಕಾರವಾಗಿತ್ತು. ನಂತರ ನಡೆದ ಪ್ರತೀ ಚುನಾವಣೆಯಲ್ಲಿ ಬದಲೀ ಸರಕಾರಗಳನ್ನೇ ಕೇರಳದ ಜನ ಚುನಾಯಿಸುತ್ತಾ ಬಂದಿದ್ದಾರೆ. ೧೯೫೭ ರಿಂದ ೨೦೦೬ರವರೆಗಿನ ಅವಧಿಯಲ್ಲಿ ತಾಣುಪಿಳ್ಳೆ, ಆರ್. ಶಂಕರ್, ಅಚ್ಯುತ ಮೇನೋನ್, ಕೆ. ಕರುಣಾಕರನ್, ಎ.ಕೆ. ಆಂಟನಿ, ಪಿ.ಕೆ. ವಾಸುದೇವನ್ ನಾಯರ್, ಸಿ.ಎಚ್. ಮುಹಮ್ಮದ್ ಕೋಯ, ಇ.ಕೆ. ನಾಯನಾರ್, ಉಮ್ಮನ್ ಚಾಂಡಿ ಎಂಬುವರು ಮುಖ್ಯಮಂತ್ರಿಗಳಾಗಿ ಕೇರಳವನ್ನು ಆಳಿದ್ದಾರೆ. ಪ್ರಸ್ತುತ ವಿ.ಎಸ್. ಅಚ್ಯುತಾನಂದನ್ ಕೇರಳದಲ್ಲಿ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದಾರೆ.

ಕಾಂಗ್ರೆಸಿಗರು ಘೋಷಿಸಿದ ಆದರೆ ಪ್ರಾಯೋಗಿಕವಾಗಿ ನಿರ್ಲಕ್ಷಿಸಿದ ಭೂ ಹಂಚಿಕೆಯನ್ನು ಕಮ್ಯುನಿಸ್ಟರು ಕಾರ್ಯ ರೂಪಕ್ಕೆ ತಂದರು. ಆ ಮೂಲಕ ಉಳುವವನೆ ಹೊಲದೊಡೆಯ ಎಂಬ ಕ್ರಾಂತಿವಾಕ್ಯ ಇಲ್ಲವಾಯಿತು. ಹಾಗೆ ಕೃಷಿವಲಯದಲ್ಲಿ ಜಮೀನ್ದಾರಿಕೆ ಕೊನೆಗೊಂಡು ಬಂಡವಾಳಶಾಹಿ ಬೆಳವಣಿಗೆಗೆ ಸಿದ್ಧತೆಯನ್ನು ಯಾರಿಗೂ ಅರಿಯದಂತೆ ಅವರು ನಡೆಸಿದರು. ಆದರೆ ಬಂಡವಾಳಶಾಹಿಗಳಲ್ಲಿ ಕುರುಡು ಸೈದ್ಧಾಂತಿಕ ವಿರೋಧದ ಕಾರಣದಿಂದಾಗಿ ಸಾಕ್ಷರತೆಯಲ್ಲಿ ಕೇರಳ ಮುಂದಿದ್ದರೂ ಉನ್ನತ ಶಿಕ್ಷಣ ಹಾಗೂ ಕೈಗಾರಿಕೆಯಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ಕೇರಳ ಇತರೆಲ್ಲಾ ಸಂಸ್ಥಾನಗಳಿಗಿಂತ ಹಿಂದಿದೆ. ಅರಬ್ ರಾಷ್ಟ್ರಗಳಿಂದ ಬರುವ ಹಣದ ಕಾರಣದಿಂದಾಗಿ ಅನೇಕ ಆಧುನಿಕ ಸುಖ ಸವಲತ್ತುಗಳು ಕೇರಳದಲ್ಲಿ ಲಭ್ಯವಿರಬಹುದು. ಹಲವು ಕೆಡುಕುಗಳನ್ನು ಮೇಲ್ನೋಟಕ್ಕೆ ಇವು ಮರೆಮಾಚಿರಬಹುದು. ಇಲ್ಲಿನ ಉತ್ಪಾದನೆಯಲ್ಲಿನ ಕೊರತೆ, ನಿರುದ್ಯೋಗ, ಹೊರಗಿನವರಿಗೆ ತಿಳಿದಿಲ್ಲ. ಲೆಕ್ಕಕ್ಕೂ ಸಿಗುತ್ತಿಲ್ಲ. ಕೇರಳದ ಜನರಿಗೆ ಬೇಕಾದಷ್ಟು ದವಸ ಧಾನ್ಯಗಳಾಗಲಿ, ಸೊಪ್ಪು ತರಕಾರಿಗಳಾಗಲಿ, ಹಾಲು ಹಯನುಗಳಾಗಲಿ ಈ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿಲ್ಲ. ಇದಕ್ಕಾಗಿ ಕೇರಳೀಯರು ಅನ್ಯ ರಾಜ್ಯಗಳನ್ನು ಅವಲಂಬಿಸಬೇಕಾಗಿದೆ. ನಾವೇ ಎಲ್ಲವನ್ನು ಸರಿಪಡಿಸಬಲ್ಲವರು ಎಂಬ ಆಡಳಿತ ವರ್ಗದ ನಿಲುವೆ ನಾಡಿನ ಅರೆ ಸಾಕ್ಷರರನ್ನಷ್ಟೇ ಅಲ್ಲ ಬುದ್ದಿವಂತರಾದ ಆರ್ಥಿಕ ತಜ್ಞರನ್ನು ಕಬಳಿಸಿಬಿಡಬಹುದೆಂದು ‘ಆದರ್ಶ ಕೇರಳ’ದ ಕುರಿತ ಅಧ್ಯಯನಗಳು ಸೂಚಿ ಸುತ್ತವೆ. ಗಲ್ಫ್‌ನ ಹಣದ ಹರಿವು ನಿಂತಾಗ ಬರಲಿರುವ ಕಷ್ಟ ಕೋಟಲೆಗಳು ಇಂದಲ್ಲವಾದರೆ ನಾಳೆಯಾದರೂ ಕೇರಳೀಯರಲ್ಲಿ ಔದ್ಯೋಗಿಕ ಸಂಬಂಧವಾದ ಹೊಸ ಪ್ರಜ್ಞೆಯನ್ನು ಮೂಡಿಸಬಹುದು.

ರಾಜಕೀಯವಾಗಿ ಇಂದು ಕೇರಳದ ಭಾಗವಾಗಿರುವ ಅನೇಕ ಪ್ರದೇಶಗಳು ಹಿಂದೆ ಕರ್ನಾಟಕದ ರಾಜರುಗಳ ಆಡಳಿತಕ್ಕೊಳಪಟ್ಟಿದ್ದವು. ಈ ಕಾರಣಕ್ಕಾಗಿ ಉತ್ತರ ಕೇರಳದ ಭಾಗಗಳು ಕನ್ನಡ ಸಂಸ್ಕೃತಿಯ ಭಾಗವೂ ಆಗಿರುವುದನ್ನು ಗಮನಿಸಬಹುದು. ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯದ ಅರಸರು ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದ ಕಾಲಘಟ್ಟದಲ್ಲಿ ಉತ್ತರ ಕೇರಳವು ಈ ಅರಸರುಗಳ ಸ್ವಾಧೀನದಲ್ಲಿತ್ತು. ೧೫೬೫ರಲ್ಲಿ ವಿಜಯನಗರ ಸಾಮ್ರಾಜ್ಯ ಪತನಾನಂತರ ಅವರ ಅಂಕಿತದಲ್ಲಿದ್ದ ಇಕ್ಕೇರಿ ನಾಯಕರು ಸ್ವತಂತ್ರರಾದರು. ಕರಾವಳಿಯ ಪಯಸ್ವಿನೀ ನದಿಯವರೆಗಿನ ತುಳುನಾಡು ಮಾತ್ರವಲ್ಲದೆ ನೀಲೇಶ್ವರದ ಕವಾಯಿ ಹೊಳೆಯವರೆಗಿನ ಪ್ರದೇಶಗಳು ಇಕ್ಕೇರಿ ನಾಯಕರ ವಶವಾದವು. ಶಿವಪ್ಪನಾಯಕನು ಅಲ್ಪತ್ತನಾಡು, ಪಡುವನಾಡು, ತೈಕಾಡು, ನೀಲೇಶ್ವರ ಎಂಬ ನಾಲ್ಕು ನಾಡುಗಳನ್ನು ಸೇರಿಸಿ ಬೇಕಲ ಸಂಸ್ಥಾನವೆಂದು ಹೆಸರಿಸಿದನು. ಅಲ್ಪತ್ತ ನಾಡಿನಲ್ಲಿ ಹೊಸಕೋಟೆ (ಈಗಿನ ಹೊಸದುರ್ಗ) ಯನ್ನು ಕಟ್ಟಿಸಿ ಬಲಶಾಲಿಗಳಾದ ರಾಮರಾಜ ಕ್ಷತ್ರಿಯರನ್ನು ಕಾವಲಿರಿಸಿದನು.

೧೭೩೭ರಲ್ಲಿ ಕೋಲತ್ತಿರಿ ಅರಸರಿಗೂ ಬಿದನೂರು ಸೈನ್ಯದ ದಂಡನಾಯಕನಾದ ಸೂರಪ್ಪಯ್ಯನಿಗೂ ಒಂದು ಒಪ್ಪಂದವಾದ ಬಗೆಗೆ ತಿಳಿದು ಬರುತ್ತದೆ. ಇದರಲ್ಲಿ ಮಾಡಾಯಿ ಕೋಟೆಯಿಂದ ಪಶ್ಚಿಮಕ್ಕೆ ಊರಬಳ್ಳಿಯವರೆಗೆ, ದಕ್ಷಿಣಕ್ಕೆ ತಳಿಪರಂಬ ನದಿ ಪಾತ್ರದಿಂದ ಪೂರ್ವಕ್ಕೆ ಇರುವ ರಾಜ್ಯ ಬಿದನೂರಿನ ಅರಸನಿಗೆ ಹಾಗೂ ಇದರ ದಕ್ಷಿಣಕ್ಕೆ ಉಳಿದ ರಾಜ್ಯವು ಕೋಲತ್ತಿರಿ ಅರಸರಿಗೂ ಇರತಕ್ಕುದೆಂದು ನಿರ್ಣಯವಾದ ಬಗೆಗೆ ವಿವರಗಳಿವೆ. ರಾಜಕೀಯವಾಗಿ ಕರ್ನಾಟಕದ ಪ್ರದೇಶವಾಗಿದ್ದ ಸ್ಥಳಗಳಲ್ಲಿ ಅನೇಕ ಕನ್ನಡ ಜನಾಂಗಗಳು ಕೇರಳದ ಸಂಸ್ಕೃತಿಯ ಭಾಗವಾಗಿವೆ.

ಇಲ್ಲಿ ಮುಖ್ಯವಾಗಿ ಹೆಸರಿಸಬೇಕಾದ ಜನಾಂಗವೆಂದರೆ ಕುಮಾರ ಕ್ಷತ್ರಿಯರು, ರಾಮರಾಜ ಕ್ಷತ್ರಿಯರು, ಆರ್ಯ ಮರಾಠಾ ಕ್ಷತ್ರಿಯರು. ಇಕ್ಕೇರಿ ಅರಸರು ಉತ್ತರ ಕೇರಳಕ್ಕೆ ದಂಡೆತ್ತಿ ಬಂದಾಗ ಕನ್ನಡ ಪ್ರದೇಶದಿಂದ ಬಂದ ಜನವರ್ಗದವರಿವರು. ಇವರೆಲ್ಲರ ಮನೆ ಮಾತು ಕನ್ನಡವೇ ಆಗಿದೆ. ಕುಮಾರ ಕ್ಷತ್ರಿಯರು ಕಾಸರಗೋಡು ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ನೆಲೆಸಿದ್ದಾರೆ. ಕೆಳದಿ ಅರಸರ ಸೈನ್ಯದಲ್ಲಿ ದಂಡಾಳುಗಳಾಗಿ ಕೋಟೆಯ ಕಾವಲುಗಾರರಾಗಿ ಬಂದ ಜನವರ್ಗದವರು ಇವರು. ಇವರನ್ನು ಕೋಟೆಗಾರರು ಎಂದೂ ಕರೆಯುವುದಿದೆ. ರಾಮರಾಜ ಕ್ಷತ್ರಿಯರೂ ಕೂಡಾ ಇಕ್ಕೇರಿ ಅರಸರ ಸೇನೆಯಲ್ಲಿದ್ದ ಕಲಿಗಳು. ಆರ್ಯ ಮರಾಠಾ ಕ್ಷತ್ರಿಯರು ಮೂಲತಃ ಯೋಧರು. ಇವರೂ ಸಹ ಇಕ್ಕೇರಿ ಅರಸರ ಸೈನ್ಯದಲ್ಲಿದ್ದುಕೊಂಡೇ ಈ ಪ್ರದೇಶಕ್ಕೆ ಬಂದು ನೆಲೆಸಿದವರು. ಇವರ ಮನೆ ಮಾತು ಕನ್ನಡ. ಇಕ್ಕೇರಿ ನಾಯಕರ ಕಾಲದಲ್ಲಿ ಬಂದ ಮುಟುಕರು ಎನ್ನುವ ಜನಾಂಗದ ಕೆಲವು ಮನೆಗಳೂ ಉತ್ತರ ಕೇರಳದಲ್ಲಿವೆ. ಇವರು ಮಾತ್ರವಲ್ಲದೆ ಹವ್ಯಕ ಬ್ರಾಹ್ಮಣರು, ಕೋಟ ಬ್ರಾಹ್ಮಣರು, ಮಾದಿಗರು, ಬೈರರು ಮೊದಲಾದ ಜನಾಂಗಗಳವರು ಕನ್ನಡ ಮನೆಮಾತಿನವರಾಗಿ ಉತ್ತರ ಕೇರಳದಲ್ಲಿದ್ದಾರೆ. ವಿಜಯನಗರದ ಅರಸರ ಕಾಲದಲ್ಲಿ ಕಾಸರಗೋಡು ಪ್ರದೇಶಕ್ಕೆ ವ್ಯಾಪಾರಕ್ಕಾಗಿ ಬಂದ ತೆಲುಗು ಶೆಟ್ಟರ ಜನಾಂಗವೊಂದಿದೆ. ಇವರ ಮಾತೃ ಭಾಷೆಯೂ ಕ್ನಡವೇ ಆಗಿದೆ. ಹಾಗಾಗಿ ಕೇರಳ ಸಂಸ್ಕೃತಿ ಹಾಗೂ ಕನ್ನಡ ಸಂಸ್ಕೃತಿಗಳ ಮಿಶ್ರ ಸಂಸ್ಕೃತಿಯನ್ನು ಉತ್ತರ ಕೇರಳದ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಈ ಪ್ರದೇಶಗಳ ಕನ್ನಡ ಭಾಷೆ, ಸಂಸ್ಕೃತಿ, ಜನಜೀವನದ ಮೇಲೆ ಮಲಯಾಳಂ ಪ್ರಭಾವಗಳನ್ನು ಗುರುತಿಸಬಹು ದಾಗಿದೆ. ಹಾಗೆಯೇ ಮಲಯಾಳಂನಲ್ಲೂ ಕನ್ನಡದ ಪ್ರಭಾವಗಳನ್ನು ಕಾಣಬಹುದು.

ಕೇರಳ ಕರ್ನಾಟಕ ಸಾಂಸ್ಕೃತಿಕ ಸಂಬಂಧ

ಭಾಷಿಕವಾಗಿ ಒಂದೇ ಮೂಲವಾಗಿದ್ದರಿಂದ ಕನ್ನಡ ಮಲಯಾಳಂನ ಕೆಲವೊಂದು ಪದಗಳು ಎರಡೂ ಭಾಷೆಗಳ ಜನಪದ ಸಾಹಿತ್ಯ, ಕಲೆಗಳ ಸಂದರ್ಭದಲ್ಲಿ ಬಳಕೆಯಾಗುವುದಿದೆ. “ಲೀಲಾ ತಿಲಕಂ” ಎಂಬ ಹದಿನೈದನೆಯ ಶತಮಾನದ ಮಲಯಾಳಂ ಮಣಿಪ್ರವಾಳ ಸಾಹಿತ್ಯ ಅಲಂಕಾರ ಗ್ರಂಥದಲ್ಲಿ ಕನ್ನಡದಲ್ಲಿ ನಿಘಂಟುಗಳೇ ಇಲ್ಲ ಎಂಬ ಹೇಳಿಕೆಯಿದೆ. ಇದು ಕನ್ನಡದ ಕುರಿತ ತಿಳುವಳಿಕೆಯ ಕೊರತೆಯಿಂದ ಬರೆದುದೇ ಹೊರತು ಕನ್ನಡದ ಕೃತಿಗಳನ್ನು ಗಮನಿಸಿ ಬರೆದುದಲ್ಲ. ಆಗಲೇ ಕನ್ನಡದಲ್ಲಿ ಅನೇಕ ನಿಘಂಟುಗಳು ಬಂದಿದ್ದವು ಎಂಬ ಸತ್ಯ ಸಂಗತಿ ಅಲ್ಲಿ ದಾಖಲಾಗಲಿಲ್ಲ. ಇದೇ ಅಲಂಕಾರ ಗ್ರಂಥಕ್ಕೆ ಕರ್ಣಾಟಕ ಭಾಷಾ ಭೂಷಣಂ ಕೃತಿಯ ಪ್ರಭಾವವಿದೆ ಎಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಕನ್ನಡ ವ್ಯಾಕರಣವನ್ನು ಕುರಿತಂತೆ ಸಂಸ್ಕೃತದಲ್ಲಿ ನಾಗವರ್ಮನು ಬರೆದ “ಕರ್ಣಾಟಕ ಭಾಷಾ ಭೂಷಣ” ಕೃತಿಯನ್ನು ಲೀಲಾತಿಲಕಕಾರ ಗಮನಿಸಿರಬಹುದು. ಆದರೆ ಕನ್ನಡದಲ್ಲಿನ ವ್ಯಾಕರಣ ಗ್ರಂಥಗಳನ್ನಾಗಲಿ, ಕಾವ್ಯಗಳನ್ನಾಗಲಿ ಗಮನಿಸಿಲ್ಲ ಎಂಬುದೂ ಸ್ಪಷ್ಟವಿದೆ.

ಸುಮಾರು ಹದಿನೇಳನೆಯ ಶತಮಾನದ ವರೆಗೆ ಕನ್ನಡ-ಮಲಯಾಳಂ ಸಾಹಿತ್ಯಗಳು ಸ್ವತಂತ್ರವಾಗಿಯೇ ಬೆಳೆದವು. ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಅರಸರ ದಿಗ್ವಿಜಯ ಸಂದಂರ್ಭ ದಲ್ಲಿ ಭೌಗೋಳಿಕವಾಗಿ ಕೇರಳವನ್ನು ಹೆಸರಿಸಿದ್ದನ್ನು ಬಿಟ್ಟರೆ ಸಾಂಸ್ಕೃತಿಕವಾಗಿ ಸಂಬಂಧ ಗಳನ್ನು ಹೊಂದಿದಂತಿಲ್ಲ. ಪಂಪ ಕೇರಳ ‘ನಟೀ ಕಟೀ ಸೂತ್ರಾರುಣ ಮಣಿ’ ಎಂದು ಹೇಳುವಲ್ಲಿ ಕೇರಳದ ಸಾಂಸ್ಕೃತಿಕ ಕಲೆ ಹಾಗೂ ಅದರಲ್ಲಿ ಭಾಗವಹಿಸುವ ಸ್ತ್ರೀಯರನ್ನು ಹಿನ್ನೆಲೆಯಾಗಿರಿಸಿಕೊಂಡೇ ಹೇಳಿದಂತಿದೆ. ಕೇರಳದ ಜನರು ಶೌರ್ಯ, ಸಾಹಸ, ಕಲಾಪ್ರಿಯತೆ, ಸೌಂದರ್ಯ ಪ್ರಜ್ಞೆ ಅಲ್ಲದೆ ಮಾಟ-ಮಂತ್ರ ಮೊದಲಾದ ವಾಮಾಚಾರ ಪ್ರವೃತ್ತಿಗಳಲ್ಲಿ ಪ್ರವೀಣರೆಂಬುದನ್ನು ಕನ್ನಡ ನಾಡಿನ ಜನರು ತಿಳಿದಿದ್ದರು ಎಂಬುದಕ್ಕೆ ಕನ್ನಡ ಸಾಹಿತ್ಯ ಹಾಗೂ ಬದುಕಿನ ಸಂದರ್ಭದಲ್ಲಿ ಆಧಾರಗಳನ್ನು ಒದಗಿಸಬಹುದು. ಅಂದರೆ ಹಿಂದಿನಿಂದಲೂ ಭಾಷಾ ಗಡಿ ಪ್ರದೇಶಗಳಲ್ಲಿನ ಜನಜೀವನದಲ್ಲಿ ಸಾಂಸ್ಕೃತಿಕವಾಗಿ ಕೊಡುಕೊಳುಗೆಗಳು ನಡೆದುದನ್ನು ಅತ್ಯಂತ ಢಾಳಾಗಿಯೇ ಗುರುತಿಸಬಹುದು. ಆಚಾರ ವಿಚಾರಗಳಲ್ಲಾಗಲಿ, ಜನ ಜೀವನದಲ್ಲಾಗಲಿ ಈ ಕೊಡುಕೊಳುಗೆಗಳು ಆಯಾ ಪ್ರದೇಶದ ಜನರ ಬದುಕಿನಲ್ಲಿ ಪ್ರಭಾವವನ್ನು ಬೀರಿವೆ. ಆ ಮೂಲಕ ಈ ಪ್ರದೇಶದ ಜನರು ರಾಜ್ಯದ ಮುಖ್ಯವಾಹಿನಿಗಿಂತ ಭಿನ್ನವಾದ ಸಾಂಸ್ಕೃತಿಕ ಬದುಕನ್ನು ರೂಢಿಸಿಕೊಂಡಿರುವುದನ್ನು ಕಾಣಬಹುದು.

ಕೇರಳದ ಪ್ರಸಿದ್ಧ ಕಲೆಯಾದ ಕಥಕಳಿ ಹಾಗೂ ಜನಪದ ಕಲೆಯಾದ ತುಳ್ಳಲ್‌ಗಳ ಪ್ರಭಾವ ಕರ್ನಾಟಕದ ಯಕ್ಷಗಾನದ ಮೇಲೆ ಆಗಿರುವುದಂತೂ ಸ್ಪಷ್ಟವಿದೆ. ಒಂದು ಕಲೆಯ ಮೇಲೆ ಇನ್ನೊಂದರ ಪ್ರಭಾವವಿದೆ ಎಂಬುದನ್ನು ಗುರುತಿಸುವುದಕ್ಕೆ ಬದಲಾಗಿ ಯಕ್ಷಗಾನದ ತೆಂಕು ತಟ್ಟಿನ ಪ್ರಭೇದವು ಎರಡು ರಾಜ್ಯಗಳ ಸಂಸ್ಕೃತಿಯನ್ನು ಮೈಗೂಡಿಸಿಕೊಂಡೇ ಪ್ರವರ್ಧಮಾನಕ್ಕೆ ಬಂತು ಎಂದರೆ ಹೆಚ್ಚು ಸರಿಯೆನಿಸಬಹುದು. ಆ ಕಾರಣಕ್ಕಾಗಿಯೇ ಯಕ್ಷಗಾನದ ಮೇಲೆ ಕಥಕಳಿಯ ಪ್ರಭಾವವಿದೆಯೆಂದು ಕೆಲವು ಮಂದಿ ವಿದ್ವಾಂಸರು ಅಭಿಪ್ರಾಯಪಟ್ಟರೆ ಕಥಕಳಿಯೇ ಯಕ್ಷಗಾನದಿಂದ ಸಾಕಷ್ಟು ಪಡೆದಿದೆ ಎಂಬ ಅಭಿಪ್ರಾಯವೂ ಇದೆ. ಅದೇನೇ ಇರಲಿ ಎರಡೂ ಭಾಷೆಗಳ ಮಿಲನ ಪ್ರದೇಶಗಳು ಮಾತ್ರ ಯಾವತ್ತು ಇಂತಹ ಜಿಜ್ಞಾಸೆಗಳನ್ನು ಉಳಿಸಿಕೊಳ್ಳುತ್ತವೆ. ಪರಸ್ಪರ ಎರಡೂ ಭಾಷೆಗಳ ನಡುವಿನ ಕೊಡುಕೊಳುಗೆಗಳ ಹಾಗೂ ಸಂಬಂಧಗಳ ಕುರಿತು ಖಚಿತವಾದ ಪಟ್ಟಿಯನ್ನು ಮಾಡುವುದು ಕೂಡಾ ಅಸಾಧ್ಯವೇ.

ಕೇರಳದ ತೆಯ್ಯಂ ಮತ್ತು ದಕ್ಷಿಣ ಕನ್ನಡದ ದೈವ ಆರಾಧನೆಯಲ್ಲೂ ಪರಸ್ಪರ ಸಾದೃಶ್ಯವುಳ್ಳ ಅನೇಕ ಊರುಗಳ ಹೆಸರುಗಳು ಬರುತ್ತವೆ. ಇದರಿಂದ ಸಾಂಸ್ಕೃತಿಕವಾಗಿಯೂ ತೆಯ್ಯಂ ಸಂದರ್ಭದಲ್ಲಿ ಕರ್ನಾಟಕದ ಪ್ರದೇಶಗಳು ಮುಖ್ಯ ಪಾತ್ರವಹಿಸುತ್ತವೆ ಎಂಬುದನ್ನು ತಿಳಿಯಬಹುದು. ಕೇರಳದಲ್ಲಿ ಕಳರಿಪಯಟ್ ಎಂಬ ಯುದ್ಧ ಕಲೆ (Martial art) ತುಳುನಾಡಿನ ಕಲೆಯೆಂದೇ ಪ್ರಸಿದ್ಧ. ಆದರೆ ತುಳು ಪ್ರದೇಶಗಳಲ್ಲಿ ಇದರ ವ್ಯವಸ್ಥಿತವಾದ ಬೆಳವಣಿಗೆ ಇಲ್ಲ. ಆದರೆ ಗರಡಿಗಳು ಈಗಲೂ ಇವೆ.

ಸಾಂಸ್ಕೃತಿಕ ಕೊಡುಕೊಳುಗೆಯ ಸಂದರ್ಭದಲ್ಲಿ ಗಮನಿಸಬೇಕಾದ ಮುಖ್ಯವಾದ ಸಂಗತಿಯೊಂದಿದೆ. ಪ್ರಾಚೀನ ಕೇರಳದ ದೇವಾಲಯಗಳಲ್ಲಿ, ಅರಮನೆಗಳಲ್ಲಿ ಕನ್ನಡ ನಾಡಿನ ಅನೇಕ ಬ್ರಾಹ್ಮಣರನ್ನು ಪೌರೋಹಿತ್ಯಕ್ಕಾಗಿ, ಅಧ್ಯಾಪನಕ್ಕಾಗಿ ಕರೆಸಿಕೊಂಡ ಬಗೆಗೆ ಉಲ್ಲೇಖಗಳಿವೆ. ತಿರುವನಂತಪುರದ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಯನ್ನು ಇವತ್ತಿಗೂ ಕನ್ನಡ ಬ್ರಾಹ್ಮಣರು ಉಳಿಸಿಕೊಂಡು ಬಂದಿದ್ದಾರೆ. ತುಳುವಿನಲ್ಲಿರುವ ‘ಮೂಕಾಂಬಿಕ ಗುಳಿಗ’ ಪಾಡ್ದನದಲ್ಲಿ ಕೊಲ್ಲೂರಿನ ವಾಸುಭಟ್ಟರು ಶಾಂತಿ ಪೂಜೆಗಾಗಿ ಕೇರಳಕ್ಕೆ ಹೋದ ಬಗ್ಗೆ ಪ್ರಸ್ತಾಪವಿದೆ (ವೆಂಕಟರಾಜ ಪುಣಿಂಚತ್ತಾಯ ೧೯೯೯:೭೬).

ಮಲಯಾಳಂನ ಆರಂಭ ಕಾಲದ ಸಾಹಿತ್ಯವನ್ನು ಪಾಟ್ಟು ಸಾಹಿತ್ಯವೆಂದು ಕರೆಯಲಾ ಗುತ್ತದೆ. ಸುಮಾರು ಕ್ರಿ.ಶ. ೭ ಹಾಗೂ ೮ನೆಯ ಶತಮಾನದ ಅವಧಿಯಲ್ಲಿ ಈ ಪಾಟ್ಟು ಸಾಹಿತ್ಯ ಪ್ರಚಲಿತದಲ್ಲಿತ್ತು. ಇದರಲ್ಲಿ ಬಳಕೆಯಾದ ಭಾಷೆಯು ತಮಿಳು, ತುಳು. ಭಾಷೆಯ ದಟ್ಟವಾದ ಪ್ರಭಾವಕ್ಕೊಳಗಾಗಿದೆ. ಇಂದು ಮಲಯಾಳಂನಲ್ಲಿ ಬಳಸಲಾಗುವ ಎಲ್ಲಾ ಅಕ್ಷರಗಳನ್ನು ಅಲ್ಲಿ ಬಳಸಿಲ್ಲ ಎಂದು ವಿದ್ವಾಂಸರು ಗುರುತಿಸಿದ್ದಾರೆ. ಈ ಪಾಟ್ಟು ಸಾಹಿತ್ಯದ ಜೊತೆಗೆ ಅನೇಕ ಸಂಸ್ಕೃತ ಪದಗಳ ಮಿಶ್ರಣ ಮಾಡಿ ಮಣಿಪ್ರವಾಳ ಎಂಬ ಶೈಲಿಯ ಸೃಷ್ಟಿಗೆ ಕಾರಣರಾದವರು ಈ ಮೇಲೆ ಉಲ್ಲೇಖಿಸಿದ ಪುರೋಹಿತ ವರ್ಗದವರು. ಸ್ಥಳೀಯರಾದ ನಂಬೂದಿರಿಗಳು ಹಾಗೂ ದಕ್ಷಿಣ ಕನ್ನಡದಿಂದ ಕೇರಳಕ್ಕೆ ಹೋದ ಎಂಬ್ರಾಂದ್ರಿಗಳು ಎಂಬೀ ಜನವರ್ಗವೇ ಮಣಿಪ್ರವಾಳ ಶೈಲಿಯ ಉಗಮಕ್ಕೆ ಕಾರಣರಾದರು ಎಂಬುದು ವಿದ್ವಾಂಸರ ಅಭಿಮತ. ದಕ್ಷಿಣ ಕನ್ನಡದಿಂದ ಹೋದ ಬ್ರಾಹ್ಮಣರನ್ನು ಎಂಬ್ರಾಂದ್ರಿಗಳೆಂದು, ತುಳು ನಂಬಿಗಳು ಎಂದು ಕೇರಳದಲ್ಲಿ ಕರೆಯಲಾಗುತ್ತದೆ.

ಮಲಯಾಳಂನ ವಿಶಿಷ್ಟ ಸಾಹಿತ್ಯ ಪ್ರಕಾರವಾದ ತುಳ್ಳಲ್ ಕತೆಗಳನ್ನು ಬರೆದ ಕುಂಜನ್ ನಂಬಿಯಾರ್‌ರಿಗೆ (ಸುಮಾರು ೧೭೦೫) ಉಣ್ಣಿರವಿ ಕುರುಪ್ ಮತ್ತು ದ್ರೋಣಂ ಪಳ್ಳಿ ಆಚಾರ್ಯರು ಎನ್ನುವ ಇಬ್ಬರು ಗುರುಗಳಿದ್ದರಂತೆ. ಈ ದ್ರೋಣಂಪಳ್ಳಿ ಆಚಾರ್ಯರು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕಿನವರೆಂದು ಮತ್ತೂರು ಪಣಿಕ್ಕರ್‌ನಿಂದಾಗಿ ಕೇರಳಕ್ಕೆ ಬಂದರೆಂದು ಬಳಿಕ ಅವರು ಕುಂಜನ್ ನಂಬಿಯಾರರ ಗುರುಗಳಾದರೆಂದೂ ತಿಳಿಸುವ ಒಂದು ಕತೆಯಿದೆ. ಶ್ರೀ. ಪಿ.ಕೆ. ನಾರಾಯಣ ಪಿಳ್ಳೆ ಅವರು ಪ್ರಕಟಿಸಿದ ‘ಅರುವದು ತುಳ್ಳಲ್ ಕಥೆಗಳ್’ ಕೃತಿಯಲ್ಲಿರುವ ಈ ಕತೆ ಹೀಗಿದೆ –

“ಪೂರ್ವ ಕಾಲದಲ್ಲಿ ಶಸ್ತ್ರವಿದ್ಯಾಭ್ಯಾಸಕ್ಕಾಗಿ ಅಂಬಲಪುೞ, ತೆಕ್ಕುಂಕೂರ್, ಚಂಬಕಶ್ಯೇರಿ ಮೊದಲಾದ ರಾಜ್ಯಗಳಿಂದ ಅನೇಕ ಯೋಧರು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಗೆ ಹೋಗುವ ಸಂಪ್ರದಾಯವಿತ್ತು. ಉಡುಪಿ ತಾಲೂಕಿನಲ್ಲಿದ್ದ ದ್ರೋಣಂ ಪಳ್ಳಿ (ಓಣಂ ಪಳ್ಳಿ) ಆಚಾರ್ಯರಿಂದ ವಿದ್ಯಾಭ್ಯಾಸವನ್ನು ಪಡೆದು ವೀರಯೋಧರೂ, ಕಲಾಕೋವಿದರೂ ಆಗಿ ತಮ್ಮ ತಮ್ಮ ರಾಜ್ಯಗಳಿಗೆ ಹಿಂತಿರುಗುತ್ತಿದ್ದರು. ಹೀಗೆ ಉಡುಪಿಗೆ ಬಂದು ದ್ರೋಣಂಪಳ್ಳಿ ಆಚಾರ್ಯರಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಒಂದು ಗುಂಪಿನಲ್ಲಿ ಒಬ್ಬ ಪಣಿಕ್ಕರನಿದ್ದ. ಉಡುಪಿಯವರೆಗೇನೋ ಹೋದ. ಆದರೆ ಶಸ್ತ್ರಾಭ್ಯಾಸದಲ್ಲಿ ಅನಾಸಕ್ತನಾದ. ಗುರುಗಳ ಮನೆಗೆಲಸವನ್ನೆಲ್ಲ ಅತ್ಯಂತ ಶ್ರದ್ಧೆಯಿಂದ ಮಾಡಿಕೊಂಡು ನಿಶ್ಚಿಂತನಾಗಿದ್ದ. ಶಿಷ್ಯರೆಲ್ಲರೂ ವಿದ್ಯಾಭ್ಯಾಸ ಮುಗಿಸಿ ಹಿಂದಿರುಗುವ ಕಾಲ ಸಮೀಪಿಸಿತು. ಪಣಿಕ್ಕರ ಶಸ್ತ್ರ ವಿದ್ಯಾ ಪರಿಣತ ನಾಗದೆ ಹಿಂದಿರುಗಬೇಕಾಯಿತು. ಅಲ್ಲಿಯವರೆಗೆ ಅತ್ಯಂತ ಶ್ರದ್ಧೆ ಮತ್ತು ಭಕ್ತಿಗಳಿಂದ ಮನೆಗೆಲಸವನ್ನು ನೋಡಿಕೊಂಡು ಹೋಗುತ್ತಿದ್ದ ಪಣಿಕ್ಕರನನ್ನು ಕಂಡು ದ್ರೋಣಂಪಳ್ಳಿ ಆಚಾರ್ಯರ ಪತ್ನಿಗೆ ಕನಿಕರವುಂಟಾಯಿತು. ಆಕೆ ಆಚಾರ್ಯರಿಗೆ ತಿಳಿಯದಂತೆ ಆಚಾರ್ಯರ ಕುಲದೇವತೆಯಾದ ಭಗವತಿಯ ಪ್ರತಿಮೆಯನ್ನು ಪಣಿಕ್ಕರನಿಗೆ ಕೊಟ್ಟು, ಭಕ್ತಿಯಿಂದ ಇದನ್ನು ಪೂಜಿಸು; ನಿನಗೆ ಎಲ್ಲ ವಿದ್ಯೆಗಳೂ ಸಿದ್ದಿಸುತ್ತವೆ’-ಎಂದು ಹರಸಿ ಕಳುಹಿಸಿಕೊಟ್ಟರು. ಪಣಿಕ್ಕರ ತನ್ನ ಊರಿಗೆ ಹಿಂತಿರುಗಿದ. ಆಚಾರ್ಯರು ತಮ್ಮ ಕುಲದೇವತೆಯ ಪ್ರತಿಮೆಯನ್ನು ಕಾಣದೆ ಕೊರಗುತ್ತಿದ್ದಾಗ ಅವರ ಪತ್ನಿ ತಾನು ಮಾಡಿದ ತಪ್ಪನ್ನು ತಿಳಿಸಿ ಕ್ಷಮೆ ಯಾಚಿಸಿದರು. ತಮ್ಮ ಇಷ್ಟ ದೈವವನ್ನು ಮರಳಿ ಪಡೆಯುವುದಕ್ಕಾಗಿ ಪಣಿಕ್ಕರನನ್ನು ಹುಡುಕಿಕೊಂಡು ಕೇರಳಕ್ಕೆ ಹೊರಟರು. ಅಂಬಲಪುೞವನ್ನು ತಲುಪಿದಾಗ, ಚಂಬಕಶ್ಯೇರಿ ರಾಜನಿಗೆ ದ್ರೋಣ ವಂಶಜರಾದ ದ್ರೋಣಂಪಳ್ಳಿ ಆಚಾರ್ಯರು ಉಡುಪಿಯಿಂದ ತನ್ನ ರಾಜಧಾನಿಗೆ ಆಗಮಿಸಿರುವ ಸುದ್ದಿ ತಿಳಿಯಿತು. ಅವರನ್ನು ರಾಜ ಮರ್ಯಾದೆಗಳಿಂದ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡ. ರಾಜನ ಆದರ ಸತ್ಕಾರಗಳಿಂದ ಆಚಾರ್ಯರಿಗೆ ಪಣಿಕ್ಕರನ ಮೇಲಿದ್ದ ಸಿಟ್ಟೆಲ್ಲ ಇಳಿಯಿತು. ಶಿಷ್ಯ ಮಾಡಿದ ತಪ್ಪನ್ನು ಸಹಾನುಭೂತಿಯಿಂದ ಕ್ಷಮಿಸಿ, ಆಚಾರ್ಯರು ಅಲ್ಲಿಯೇ ನೆಲೆಸಿದರು. ‘ಮಾತ್ತೂರ್’ ಎನ್ನುವ ಸ್ಥಳದಲ್ಲಿ ಭಗವತಿಯನ್ನು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಆ ಸ್ಥಳಕ್ಕೆ ‘ಮಾತ್ತೂರ್ ಭಗವತಿ ಕ್ಷೇತ್ರ’ ಎನ್ನುವ ಹೆಸರು ಬಂದಿತಂತೆ”.

ಈ ಮಿತ್‌ನಿಂದ ತಿಳಿಯುವ ಮುಖ್ಯ ವಿಚಾರವೆಂದರೆ ದಕ್ಷಿಣ ಕರ್ನಾಟಕದಿಂದ ಬ್ರಾಹ್ಮಣರು ಪೌರೋಹಿತ್ಯ ಹಾಗೂ ಅಧ್ಯಾಪನಗಳಿಗಾಗಿ ಹೋಗುತ್ತಿದ್ದರು. ಅಲ್ಲದೆ ಕೇರಳದ ಕ್ಷತ್ರಿಯರೂ ಶಸ್ತ್ರಾಸ್ತ್ರಗಳ ಪರಿಣತಿಯನ್ನು ಪಡೆಯಲು ದಕ್ಷಿಣ ಕರ್ನಾಟಕದ ಪ್ರದೇಶಕ್ಕೆ ಬರುತ್ತಿದ್ದರು ಎಂಬುದೂ ಸ್ಪಷ್ಟವಾಗುತ್ತದೆ. ಕೇರಳದ ನಂಬೂದಿರಿ ಬ್ರಾಹ್ಮಣರು ಶೂದ್ರರಾದ ನಾಯರ್ ಸ್ತ್ರೀಯರನ್ನು ಮದುವೆಯಾಗಿ ವರ್ಣಸಂಕರ ಏರ್ಪಡುತ್ತಿದ್ದುದರಿಂದ ಕರ್ನಾಟಕದ ಬ್ರಾಹ್ಮಣರು ಕೇರಳದ ದೇವಸ್ಥಾನಗಳಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಲು ಆಮದಾ ಗುತ್ತಿದ್ದರು. ಹೀಗೆ ಅವರನ್ನು ದೇವಾಲಯಗಳಿಗೆ, ಅರಮನೆಗಳಿಗೆ ಕರೆಸಿಕೊಂಡು ಅವರಿಗೆ ಆಶ್ರಯ ನೀಡುತ್ತಿದ್ದು ಆ ಮೂಲಕ ಕರ್ನಾಟಕದ ಪ್ರದೇಶಕ್ಕೂ ಕೇರಳಕ್ಕೂ ಒಂದು ತೆರನ ಸಾಂಸ್ಕೃತಿಕ ವಿನಿಮಯ ನಡೆದಿದೆ. ಹೀಗೆ ಹೋದ ಬ್ರಾಹ್ಮಣರಲ್ಲಿ ಕೆಲವರು ಕೇರಳದಲ್ಲಿಯೇ ನೆಲೆ ನಿಂತಿದ್ದು ಇನ್ನು ಕೆಲವರು ಹೋಗಿ ಬರುವ ಮೂಲಕ ತಮ್ಮ ತಾಯ್ನಡಿನ ಜೊತೆ ಸಂಪರ್ಕ ಉಳಿಸಿಕೊಂಡಿದ್ದರು.

ಕೇರಳದಲ್ಲಿ ಆಳಿದ ಅನೇಕ ರಾಜರು ಕರ್ನಾಟಕದ ಸಾಂಸ್ಕೃತಿಕ ಕಲೆಗಳ ಬಗೆಗೆ ಆಸಕ್ತಿಯುಳ್ಳವರಾಗಿದ್ದು, ಸಾಕಷ್ಟು ಪ್ರೋತ್ಸಾಹ ನೀಡಿದ ಬಗ್ಗೆ ಚರಿತ್ರೆಯಲ್ಲಿ ಉಲ್ಲೇಖಗಳಿವೆ. ಸಂಗೀತ ಪ್ರಿಯನೂ ಸಾಹಿತ್ಯ ರಚೈತನೂ ಆದ ಸ್ವಾತಿತಿರುನಾಳ್ (೧೮೧೩-೪೬) ಕರ್ನಾಟಕದ ಅನೇಕ ಸಂಗೀತಗಾರರನ್ನು ಸನ್ಮಾನಿಸಿದ ಬಗೆಗೆ ತಿಳಿದು ಬರುತ್ತದೆ. ಸ್ವಾತಿತಿರುನಾಳ್ ಸ್ವತಹ ಕನ್ನಡ ಭಾಷೆ, ಸಾಹಿತ್ಯಗಳ ಬಗ್ಗೆ ಪ್ರೀತಿಯನ್ನು ಬೆಳೆಸಿ ಕೊಂಡಿದ್ದನೆಂದೂ ತಿಳಿಯುತ್ತದೆ. ಆತ ‘ರಾಜೀವಾಕ್ಷ ಬಾರೋ ……’ ಎಂದು ಆರಂಭವಾಗುವ ಕೀರ್ತನೆಯೊಂದನ್ನು ಕನ್ನಡದಲ್ಲಿ ಬರೆದಿದ್ದಾನೆ.

ಕೇರಳದ ಅನೇಕ ಕಡೆಗಳಲ್ಲಿ ರಾಜಾಶ್ರಯಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕ್ಕಾಗಿ ಅನುಕೂಲ ಮಾಡಿಕೊಡಲಾಗುತ್ತಿತ್ತು. ಹೀಗೆ ವಿದ್ಯಾರ್ಜನೆಯ ಸಲುವಾಗಿ ಕೇರಳಕ್ಕೆ ಕರ್ನಾಟಕದಿಂದಲೂ ಬ್ರಾಹ್ಮಣರು ಹೋಗುತ್ತಿದ್ದ ಬಗ್ಗೆ ತಿಳಿದು ಬರುತ್ತದೆ. ಹೀಗೆ ವಿದ್ಯಾಭ್ಯಾಸವನ್ನು ಪಡೆಯಲು ನೆರವು ನೀಡಿದ ಅರಸು ಮನೆತನಗಳಲ್ಲಿ ನೀಲೇಶ್ವರ ಅರಸು ಮನೆತನವೂ ಒಂದು. ಇವರು ನಡೆಸುತ್ತಿದ್ದ ರಾಜಾಸ್ ಹೈಸ್ಕೂಲಿನಲ್ಲಿ ಕನ್ನಡದ ಕಾದಂಬರಿಕಾರ ರಾದ ನಿರಂಜನರು ವಿದ್ಯಾರ್ಜನೆ ಮಾಡಿದ್ದರು. ಅವರು ಬರೆದ ‘ಚಿರಸ್ಮರಣೆ’ ಕಾದಂಬರಿಯಲ್ಲಿ ಕಯ್ಯೂರಿನ ರೈತ ದಂಗೆಯನ್ನು ಮತ್ತು ಅಂದು ನಿರಂಜನರು ಪಡೆದ ಪ್ರತ್ಯಕ್ಷ ಅನುಭವವನ್ನು ದಾಖಲಿಸಿದ್ದಾರೆ. ಹೀಗೆ ಬರವಣಿಗೆಯ ಮೂಲಕವಾಗಿ ಸಾಂಸ್ಕೃತಿಕ ಸಂವಹನವನ್ನು ಎಲ್ಲರೂ ಮಾಡದಿರಬಹುದು. ಮೌಖಿಕವಾಗಿಯೂ ಸಾಂಸ್ಕೃತಿಕ ಸಂವಹನ ನಡೆದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ವಿವಿಧತೆಯಲ್ಲಿ ಏಕತೆ

ಪ್ರಾಚೀನ ಕಾಲದಿಂದಲೇ ಕೇರಳವು ವಿದೇಶಿಯರೊದಿಗೆ ಸಂಪರ್ಕವನ್ನು ಏರ್ಪಡಿಸಿ ಕೊಂಡಿತ್ತು ಎಂಬುದನ್ನು ಈಗಾಗಲೇ ಗಮನಿಸಲಾಗಿದೆ. ಈ ಕಾರಣದಿಂದಾಗಿಯೇ ಕೇರಳದ ಸಂಸ್ಕೃತಿಯಲ್ಲಿ ಸಾರ್ವತ್ರಿಕವೆನಿಸಬಹುದಾದ ಅನೇಕ ಅಂಶಗಳು ಕೇರಳ ಸಂಸ್ಕೃತಿ ಮತ್ತು ಜೀವನವನ್ನು ಒಂದು ಚೌಕಟ್ಟಿನಲ್ಲಿ ನೆಲೆಗೊಳಿಸಿವೆ. ಕೇರಳೀಯರ ಸಂಸ್ಕೃತಿಯನ್ನು, ಜೀವನ ವಿಧಾನವನ್ನು ಒಂದು ಹಂತದವರೆಗೆ ಕರ್ನಾಟಕ ಮತ್ತು ತಮಿಳುನಾಡುಗಳೊಂದಿಗೆ ಹೋಲಿಸಬಹುದು. ಎಂದರೆ ಅದೇ ವೇಳೆಗೆ ಕೇರಳದ ಭೌಗೋಳಿಕ ಅಸ್ತಿತ್ವವು ಇತರ ಭಾಗಗಳಿಗಿಂತ ಭಿನ್ನವಾದ ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಗಿದೆ. ಭಾರತದ ದಕ್ಷಿಣ ತುದಿಗೆ ಇರುವ ಕೇರಳವನ್ನು ಪಶ್ಚಿಮ ಘಟ್ಟದ ಶ್ರೇಣಿಯು ಇತರ ಭಾಗಗಳಿಂದ ಪ್ರತ್ಯೇಕಿಸಿದೆ. ಅರಬ್ಬಿ ಸಮುದ್ರವು ದೇಶದ ಇತರ ಭಾಗಗಳಿಂದ ಕೇರಳವನ್ನು ಪ್ರತ್ಯೇಕವಾಗುಳಿಸಿದೆ. ಆ ಕಾರಣದಿಂದ ಏಕೀಕೃತವೂ ದೃಢ ಚೌಕಟ್ಟು ಇರುವ ಒಂದು ಸಂಸ್ಕೃತಿ ಇಲ್ಲಿ ಬೆಳೆದು ಬಂದಿತು. ವಿಶಿಷ್ಟವಾದ ಈ ಸ್ಥಿತಿ ಜೀವನದ ಎಲ್ಲಾ ರಂಗಗಳಲ್ಲೂ – ಕಲೆ, ಸಾಹಿತ್ಯ, ಸಮಾಜ, ಆರ್ಥಿಕ ವಿದ್ಯಮಾನಗಳಲ್ಲೆಲ್ಲಾ- ತನ್ನದೇ ಆದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಪ್ರಾಚೀನ ಕಾಲದಿಂದಲೇ ಕೇರಳಕ್ಕೆ ಸಾಧ್ಯವಾಗಿದೆ. ಅಂದರೆ ಅದರ ಜೊತೆ ಜೊತೆಗೆ ಭಾರತೀಯ ಸಂಸ್ಕೃತಿಯೊಡನಿರುವ ಸಾದೃಶ್ಯಗಳನ್ನು ಅವಗಣಿಸುವಂತಿಲ್ಲ. ಭಾರತೀಯ ಸಂಸ್ಕೃತಿಯಂತೆ ಕೇರಳ ಸಂಸ್ಕೃತಿಗೂ ಅವಿಚ್ಛಿನ್ನವಾದ ಚರಿತ್ರೆಯಿದೆ. ಸುದೀರ್ಘವಾದ ಆ ಚರಿತ್ರೆಯ ಪ್ರತಿ ಯೊಂದು ಕಾಲಘಟ್ಟದಲ್ಲೂ ಪಡೆದ ಪ್ರಭಾವ, ಸ್ವಾತಂತ್ರ್ಯ ವೈವಿಧ್ಯಮಯವಾಗಿದೆ. ಆದರೆ ಅವುಗಳಿಂದ ಒಮ್ಮೆಯೂ ಆ ಅವಿಚ್ಛಿನ್ನತೆಗೆ ಭಂಗವುಂಟಾಗಲಿಲ್ಲ.

ಜಗತ್ತಿನ ಹಲವು ಭಾಗಗಳಲ್ಲಿಯೂ ಪ್ರಾಚೀನವಾದ ಅನೇಕ ಸಂಸ್ಕೃತಿಗಳು ನಾಶ ವಾದುದಿದೆ. ಆದರೆ ಭಾರತೀಯ ಸಂಸ್ಕೃತಿಗೆ ಆ ತೆರನ ಪತನ ಸಂಭವಿಸಿದುದೇ ಇಲ್ಲ. ಅದು ಎತ್ತಿ ಹಿಡಿದ ಅನರ್ಘ್ಯ ಮೌಲ್ಯಗಳಿಗೆ ಸಾರ್ವತ್ರಿಕವಾದ ಅನುಮೋದನೆಯೂ ದೊರೆತಿದೆ. ಇದಕ್ಕೆ ಭಾರತದ ಪ್ರಾಚೀನತೆ, ಏಕೋಭಾವ, ಸಾತತ್ಯ, ಸಾರ್ವತ್ರಿಕತೆಗಳು ಗಮನಾರ್ಹವಾಗಿವೆ. ಭಾರತೀಯ ಸಂಸ್ಕೃತಿಯಲ್ಲಿ ವೈವಿಧ್ಯತೆ ಹಾಗೂ ಸಂಪನ್ನತೆ ಪ್ರಾಮುಖ್ಯ ಪಡೆದಿದೆ. ಅಲ್ಲದೇ ವೈವಿಧ್ಯ ಮತ್ತು ಸಂಪನ್ನತೆ ಕೇರಳ ಸಂಸ್ಕೃತಿಗೂ ಇದೆ. ಹಾಗಾಗಿ ಯುಗಯುಗಗಳು ಕಳೆದರೂ ಅದು ನೆಲೆ ನಿಂತಿದೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಮನುಷ್ಯ ಚೇತನಗಳು ಹುಟ್ಟಿಹಾಕಿದ ಮಹತ್ತಾದ ಗಳಿಕೆಗಳ ಮೊತ್ತವೇ ಸಂಸ್ಕೃತಿ. ಮತ, ತತ್ವ, ಭಾಷೆ, ಸಾಹಿತ್ಯ, ಕಲೆ, ಶಿಲ್ಪ, ಶಿಕ್ಷಣ, ಆರ್ಥಿಕ ಮತ್ತು ಸಾಮಾಜಿಕ ನಿಯಮಗಳು ಎಂಬಿತ್ಯಾದಿ ವಿಭಿನ್ನ ಕ್ಷೇತ್ರಗಳಲ್ಲೆಲ್ಲಾ ಒಂದು ಜನವರ್ಗ ಕಂಡುಕೊಂಡ ಸಾಮೂಹಿಕ ಗಳಿಕೆಗಳ ಅಸ್ತಿತ್ವವನ್ನೇ ಸಂಸ್ಕೃತಿ ಪ್ರತಿನಿಧಿಸುತ್ತದೆ. ಈ ಅಳತೆಯ ಮಾನವನ್ನು ಬಳಸಿ ನೋಡುವಾಗ ಕೇರಳದ ಸಂಸ್ಕೃತಿಯ ಔನ್ನತ್ಯವು ವೇದ್ಯವಾಗುತ್ತದೆ. ಚರಿತ್ರೆಯ ಬೇರೆ ಬೇರೆ ಘಟ್ಟಗಳಲ್ಲೆಲ್ಲ ಕೇರಳದ ಪ್ರತಿಭೆ ಉಜ್ವಲವಾಗಿ ಕಾಣಿಸುತ್ತದೆ. ತತ್ಪರಿಣಾಮವಾಗಿ ಕೇರಳೀಯರ ಪ್ರಯತ್ನಗಳು ಫಲಪ್ರದವಾಗಿವೆ. ಇನ್ನು ಮುಂದಿನ ಅಧ್ಯಾಯಗಳಲ್ಲಿ ಇವುಗಳನು್ನ ಹಂತ ಹಂತವಾಗಿ ಸಾಂಸ್ಕೃತಿಕ ಹಿನ್ನೆಲೆಯಿಂದ ಪರಿಭಾವಿಸಬಹುದು.