ಕೇರಳೀಯರ ಸಾಹಸ ಪ್ರವೃತ್ತಿ ಪ್ರಸಿದ್ಧವಾಗಿದೆ. ಮಾಟ-ಮಂತ್ರಾದಿಗಳ ಮೂಲಕ ಮಾಡುವ ವಾಮಾಚಾರಗಳು, ಕೇರಳದ ಸ್ತ್ರೀಯರು ಇವರೆಲ್ಲ ಒಂದೊಂದು ಕಾರಣಕ್ಕಾಗಿ ವಿಶಿಷ್ಟ. ಒಂದು ಕಾಲದಲ್ಲಿ ಕೇರಳದ ಬಗೆಗಿನ ಹೊರಗಿನವರ ಅಭಿಪ್ರಾಯವಿದು. ಇವುಗಳ ಜೊತೆಗೆ ಇಂದು ಸಂಪೂರ್ಣ ಸಾಕ್ಷರತಾ ರಾಜ್ಯ, ಎಡ ಪಂಥೀಯ ಆಡಳಿತವಿರುವ ಬುದ್ದಿ ಜೀವಿಗಳ ರಾಜ್ಯ. ಶಿಸ್ತು, ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವ ಆಡಳಿತವಿರುವ ರಾಜ್ಯ ಎಂಬೆಲ್ಲ ವಿಶೇಷಣಗಳು ಕೇರಳದ ಬಗೆಗೆ ಇದೆ. ಕಥಕಳಿಯಂತಹ ಕಲಾ ರೂಪದ ಮೂಲಕ ಅನೇಕರಿಗೆ ಶ್ರೀಮಂತವಾದ ಕಲೆಗಳಿರುವ ನಾಡು. ಮೋಹಿನಿಯಾಟದ ನೃತ್ಯಗಾತಿಯರ ಮೂಲಕ ವಿಶಿಷ್ಟ ಉಡುಗೆ ತೊಡುಗೆಯುಳ್ಳ ಸ್ತ್ರೀ ರಾಜ್ಯ. ‘ಶಬರಿಮಲೈ’ ಧಾರ್ಮಿಕ ಕ್ಷೇತ್ರ, ಗುರುವಾಯೂರಿನ ಕೇಶವ ಇವುಗಳಿಂದಾಗಿ ಧರ್ಮಕ್ಷೇತ್ರ. ಕರಾವಳಿಯನ್ನು ಉದ್ದಕ್ಕೂ ಪಡೆದಿರುವ ಈ ರಾಜ್ಯದ ಜನತೆ ಕಡಲಿನೊಂದಿಗೆ ನಿರಂತರ ಸಂಪರ್ಕ ಪಡೆದ ಸುಖಿಗಳು ಎಂಬಿತ್ಯಾದಿ ಕಲ್ಪನೆಗಳೆಲ್ಲ ಇವೆ. ಹಾಗೆ ನೋಡಿದರೆ ಎಲ್ಲಾ ರಾಜ್ಯಗಳಲ್ಲಿ ಇರುವ ಏಳು-ಬೀಳುಗಳು, ಆಚಾರ-ಅನಾಚಾರಗಳೂ, ನಂಬಿಕೆ-ನಡಾವಳಿಗಳು ಕೇರಳದಲ್ಲೂ ಇವೆ. ಆದರೆ ಕೇರಳೀಯರನ್ನು ಇತರ ರಾಜ್ಯಗಳಿಗಿಂತ ಪ್ರತ್ಯೇಕವಾಗಿ ಗುರುತಿಸುವುದಕ್ಕೆ ಅವರಲ್ಲಿ ಅನನ್ಯವಾಗಿರುವ ಸಾಂಸ್ಕೃತಿಕ ಸಂಗತಿಗಳೂ ಬಹಳ ಇವೆ.

ಕೇರಳವನ್ನು ಬಿಟ್ಟು ಹೊರ ರಾಜ್ಯಗಳಲ್ಲಿ ನೆಲೆಸಿದ ಮಲಯಾಳಿಯೊಬ್ಬ ತನ್ನ ಬದುಕಿಗೆ ಬೇಕಾದ ವೃತ್ತಿಯೊಂದನ್ನು ಅವಲಂಬಿಸಿಕೊಳ್ಳುತ್ತಾನೆ. ಸ್ವತಂತ್ರವಾಗಿ ಬದುಕಲು ಬೇಕಾಗುವ ಆರ್ಥಿಕ ಮೂಲವನ್ನು ಸೃಷ್ಟಿಸಿಕೊಳ್ಳುತ್ತಾನೆ. ಆತ ತನ್ನ ಊರು, ನೆಲ, ಬಂಧು ಬಾಂಧವರನ್ನೆಲ್ಲ ದೂರದಲ್ಲಿ ಬಿಟ್ಟು ತಾನೊಬ್ಬನೆ ಸಾಹಸದಿಂದ ಬದುಕಬಲ್ಲ. ಅಲ್ಲಿಯೂ ತಲೆಮಾರುಗಳ ಕಾಲ ಉಳಿಯುವುದಕ್ಕೂ ಹಿಂಜರಿಯಲಾರ. ಆ ಬಗೆಗೆ ತಮಾಷೆಯಾಗಿ ಹೇಳುವುದಿದೆ. ಚಂದ್ರಲೋಕದಲ್ಲಿ ಮೊತ್ತ ಮೊದಲು ಮಾನವನು ಕಾಲಿಡುವುದಕ್ಕೆ ಮೊದಲೇ ಕೇರಳೀಯ ನೊಬ್ಬ ಪುಟ್ಟ ಹೋಟೇಲಿರಿಸಿದ್ದು ಮೊದಲು ಮಾನವರು ಇಳಿಯುವಾಗಲೇ ‘ಚಾಯ ಚಾಯ’ ಎಂದು ಕೂಗುತ್ತಿದ್ದನಂತೆ. ಅಂದರೆ ವಿಜ್ಞಾನಿಗಳು ಸಂಶೋಧನೆ ಮಾಡಿ ಚಂದ್ರಲೋಕ ವನ್ನು ಒಂದಲ್ಲ ಒಂದು ದಿನ ಪ್ರವೇಶಿಸಬಹುದು ಎಂಬ ದೂರಾಲೋಚನೆಯಿಂದ ಮಲಯಾಳಿ ಯೊಬ್ಬ ಮೊದಲೇ ಹೋಟೇಲಿರಿಸಿದ್ದನಂತೆ. ಮಲಯಾಳಿಯ ದೂರಾಲೋಚನೆ ಮತ್ತು ಸಾಹಸ ಪ್ರವೃತ್ತಿ ಈ ಮೇಲಿನ ತಮಾಷೆಯ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ಡಾಬಗಳನ್ನು ನಿರ್ಮಿಸುವ ಮಲಯಾಳಿಗರು, ಕೇರಳದ ಮುಸ್ಲೀಮರ ‘ಕಾಕ’ನ ಹೋಟೆಲುಗಳು ಕರ್ನಾಟಕದೆಲ್ಲೆಡೆಗಳಲ್ಲೂ ಕಾಣಬಹುದು. ಅತೀ ಕಡಿಮೆ ಸಂಬಳಕ್ಕೆ ದೂರದ ಊರುಗಳಲ್ಲಿ ಗಂಡು, ಹೆಣ್ಣುಗಳೆಂಬ ಭೇದವಿಲ್ಲದೆ ದುಡಿಯುತ್ತಾರೆ. ರಾಜ್ಯದ ಏಕೆ ದೇಶ ವಿದೇಶಗಳ ಅನೇಕ ಆಸ್ಪತ್ರೆಗಳಲ್ಲಿ ದಾದಿಯರಾಗಿ ಕೇರಳದ ಹೆಣ್ಣು ಮಕ್ಕಳು ದುಡಿಯುತ್ತಾರೆ. ಅಂದರೆ ಕೇರಳೀಯರು ತಾವು ಹುಟ್ಟಿದ ನೆಲವನ್ನು ನೆಚ್ಚಿಕೊಳ್ಳದೆ, ಬಂಧು ಬಾಂಧವರ ಹಂಗಿಗೆ ಒಳಗಾಗದೆ ಸ್ವತಂತ್ರವಾಗಿ ತಮ್ಮ ಬದುಕನ್ನು ರೂಢಿಸಿಕೊಳ್ಳುವಲ್ಲಿ ನಿಸ್ಸೀಮರು. ಸಮಾಜದಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಕೊಟ್ಟ ಮುಕ್ತ ಸ್ವಾತಂತ್ರ್ಯ ಕೇರಳದ ಜನರನ್ನು ದೇಶ ವಿದೇಶಗಳಲ್ಲಿ ದುಡಿಯುವಂತೆ ಮಾಡಿದೆ. ತನ್ನ ಬದುಕಿಗೆ ಬೇಕಾದ ಆರ್ಥಿಕ ಮೂಲವನ್ನು ಕಂಡುಕೊಳ್ಳುವಲ್ಲಿ, ಬದುಕನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳುವಲ್ಲಿ ಕೇರಳೀಯರಿಗೆ ಖಚಿತವಾದ ನಿಲುವುಗಳಿರುತ್ತವೆ. ಸ್ವತಹ ಯಾವ ಕೆಲಸವನ್ನು ಮಾಡಲು ಸಂಕೋಚ ಪಟ್ಟುಕೊಳ್ಳದೆ ದುಡಿಯುವ ಪ್ರವೃತ್ತಿ ಅವರ ಬದುಕಿಗೆ ಹೊಸ ಆಯಾಮವನ್ನು ಕೊಟ್ಟಿದೆ. ತಾನು ಎಲ್ಲಿ ಹೋದರೂ ಸ್ವತಂತ್ರವಾಗಿ ಬದುಕಬಲ್ಲೆ ಎಂಬ ಆತ್ಮವಿಶ್ವಾಸವನ್ನು ಕೇರಳೀಯರು ಉಳಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಕೇರಳದ ಜನರನ್ನು ದೇಶದ ಎಲ್ಲಾ ರಾಜ್ಯಗಳಲ್ಲೂ ಕಾಣಬಹುದು. ಆದರೆ ಕೇರಳದಲ್ಲಿ ನೆಲೆಸಿರುವ ಇತರ ರಾಜ್ಯಗಳ ಜನರ ಸಂಖ್ಯೆ ಬಹಳಷ್ಟು ಕಡಿಮೆ. ಹಾಗೆ ನೆಲೆಸಿದ್ದಾಗಲೂ ಔದ್ಯೋಗಿಕ ಕಾರಣಗಳಿಗಾಗಿ ಮಾತ್ರ. ಅದನ್ನು ಹೊರತುಪಡಿಸಿ ಸ್ವತಂತ್ರವಾಗಿ ತಮ್ಮನ್ನೇ ನಂಬಿಕೊಂಡು ಹೋಗಿ ನೆಲೆಸಿರುವವರ ಸಂಖ್ಯೆ ಇಲ್ಲವೆನ್ನುವಷ್ಟು ವಿರಳ.

 ಕೇರಳೀಯರು ತಮ್ಮ ಸ್ವಂತ ನಾಡನ್ನು ಬಿಟ್ಟು ಹೊರ ನಾಡುಗಳಿಗೆ ವಲಸೆ ಹೋಗಲು ಅನೇಕ ಕಾರಣಗಳಿರಬಹುದು. ಆದರೆ ಕೇರಳದಲ್ಲಿ ನೆಲೆ ನಿಂತಿದ್ದ ‘ಮರುಮಕ್ಕತ್ತಾಯ’ ಸಂಪ್ರದಾಯವೂ ಅವುಗಳಲ್ಲಿ ಒಂದು. ತರವಾಡು ಮನೆಗಳಲ್ಲಿ ಅವಿಭಕ್ತ ಕುಟುಂಬಗಳಲ್ಲಿ ಬದುಕುತ್ತಿದ್ದ ಅನೇಕ ಯುವಕರ ಬದುಕು ದುಡಿಮೆಗೆ ಮಾತ್ರ ಸೀಮಿತವಾಗಿತ್ತು. ಬದುಕಿನಲ್ಲಿ ಸುಖ, ಸಂತೋಷಗಳಾಗಲೀ ಆಸ್ತಿಯ ಒಡೆತನವಾಗಲೀ ದೊರೆಯುತ್ತಿರಲಿಲ್ಲ. ಒಂದೇ ಮನೆಯಲ್ಲಿ ಹುಟ್ಟಿ ಆಟವಾಡಿ ಬೆಳೆಯುತ್ತಿದ್ದ ಅಣ್ಣ ತಂಗಿಯರ ಮಕ್ಕಳು ವಯೋಮಾನದ ಕಾರಣಕ್ಕಾಗಿ ಪರಸ್ಪರ ಆಕರ್ಷಣೆಗೊಳಗಾಗುತ್ತಿದ್ದರು. ಆದರೆ ಅವರ್ಯಾರೂ ಅಂತಹ ಸಂಬಂಧಗಳನ್ನೊ ಸ್ನೇಹಭಾವವನ್ನೊ ಬೆಳೆಸುವಂತಿರಲಿಲ್ಲ. ನಾಯರ್ ಮನೆಗಳಲ್ಲಂತೂ ಈ ಸಂಪ್ರದಾಯ ಕಟ್ಟುನಿಟ್ಟಾಗಿತ್ತು. ನಂಬೂದಿರಿ ಬ್ರಾಹ್ಮಣನ ಹಿರಿಯ ಮಗ ಮಾತ್ರ ಸ್ವಜಾತಿಯ ಕನ್ಯೆಯನ್ನು ಮದುವೆಯಾಗುತ್ತಿದ್ದ. ಉಳಿದ ಗಂಡು ಮಕ್ಕಳೆಲ್ಲ ನಾಯರ್ ಕನ್ಯೆಯರನ್ನು ‘ಸಂಬಂಧ’ ಮಾಡಿಕೊಳ್ಳುತ್ತಿದ್ದರು. ಇಂತಹ ನಂಬೂದಿರಿ ಬ್ರಾಹ್ಮಣರು ವೃದ್ಧರಾದರೂ ಸರಿ ತಮ್ಮ ಹೆಣ್ಣುಮಕ್ಕಳನ್ನು ಅವರಿಗಾಗಿ  ಕೊಡಲು ನಾಯರ್ ಹೆತ್ತವರು ಕಾದಿರುತ್ತಿದ್ದರು. ತನ್ನ ಮುಂದೆ ಬೆಳೆದು ನಿಂತ ಯುವತಿಯನ್ನು ವೃದ್ಧನಾದ ನಂಬೂದಿರಿಯು ಅನುಭೋಗಿಸುವ ದುಸ್ಥಿತಿ ನಾಯರ್ ಯುವಕ ನೋಡಬೇಕಾಗಿತ್ತು. ಇಂತಹ ಸಂಪ್ರದಾಯ ಗಳಿಂದ ಹತಾಶರಾದ ಯುವಕರು ಮನೆಯಲ್ಲಿ ಭವಿಷ್ಯವನ್ನು ಕಟ್ಟಿಕೊಳ್ಳಲು ಅಶಕ್ತರಾದರು. ಕಾರಣವರ ದರ್ಪಗಳಿಗೆ ಅಡಿಯಾಳಾಗಿ ಬದುಕಬೇಕಾದ ಅನಿವಾರ್ಯ ಬದುಕು ಬಂಧನ ಸದೃಶವಾದುದಾಗಿತ್ತು. ಇವುಗಳನ್ನು ಒಡೆದು ಹೊರ ಹೋಗಿ ಸ್ವತಂತ್ರವಾಗಿ ಬದುಕುವ ಕನಸು ಪ್ರತಿಯೊಬ್ಬ ಯುವಕನದಾಗಿತ್ತು. ಇಂತಹ ಕನಸುಗಳೇ ಅನೇಕರನ್ನು ತಮ್ಮ ನಾಡು ಮನೆಗಳನ್ನು ಬಿಟ್ಟು ಇತರ ಪ್ರದೇಶಗಳಿಗೆ ಹೋಗಲು ಪ್ರೇರಿಸಿರಬಹುದು. ಹಾಗೆ ಹೊರ ಹೋಗಿ ಸ್ವತಂತ್ರವಾಗಿ ದುಡಿದು ಬದುಕುವ ಮನೋಧರ್ಮವನ್ನು ರೂಢಿಸಿಕೊಂಡಿರಬಹುದು. ತರವಾಡು ಮನೆಗಳ ಸಂಪ್ರದಾಯಗಳಿಂದ ಹತಾಶರಾದ ಯುವ ತಲೆಮಾರುಗಳ ಚಿತ್ರಣವನ್ನು ಮಲಯಾಳಂ ಸಾಹಿತ್ಯದಲ್ಲಿ ಕಾಣಬಹುದು. ಸಂಪ್ರದಾಯಗಳಿಗೆ ತಿರುಗಿ ಬಿದ್ದವರು ಅನುಭವಿಸಬೇಕಾಗಿ ಬಂದ ವಿಪತ್ತನ್ನು ಸಹ ಸಾಹಿತ್ಯದಲ್ಲಿ ಚಿತ್ರಿಸಿರುವುದನ್ನು ಕಾಣಬಹುದು. ಎಂ.ಟಿ. ವಾಸುದೇವನ್ ನಾಯರ್ ಅವರ ಬರಹಗಳ ಪ್ರಮುಖ ಆಶಯ ಇದುವೇ ಆಗಿದೆ.

ಉತ್ತರದ ತಲಪಾಡಿಯಿಂದ ದಕ್ಷಿಣದ ಪಾಱಶ್ಶಾಲೆಯವರೆಗೆ ಪ್ರಯಾಣ ಮಾಡಿದರೆ ಈ ರಾಜ್ಯದ ವೈವಿಧ್ಯಮಯವಾದ ಭೌಗೋಳಿಕ ಸ್ಥಿತಿಗತಿಗಳನ್ನು ಕಾಣಬಹುದು. ಅಷ್ಟೇ ಅಲ್ಲ ಅವರ ಉಡುಗೆ ತೊಡುಗೆಗಳಲ್ಲಿ, ಆಹಾರದಲ್ಲಿ, ಮಾತಿನಲ್ಲಿ ಇರುವ ವ್ಯತ್ಯಾಸಗಳನ್ನು ಗಮನಿಸಬಹುದು. ಪಂಪಾ, ಪೆರಿಯಾರ್ ನದಿಗಳಂತಲ್ಲ ನಿಳಾ ನದಿ. ವಳ್ಳುವ ನಾಡಿನಂತಲ್ಲ ವಯನಾಡ್. ಮಣ್ಣಾರ್‌ಕಾಡ್, ನೆಟುಮಙಾಡ್‌ಗಳು ಒಂದೇ ತೆರನಲ್ಲ. ಈ ವ್ಯತ್ಯಾಸಗಳನ್ನು ತಕ್ಷಣವೇ ಹೇಳಲು ಸಾಮಾನ್ಯರಿಗೆ ಅಸಾಧ್ಯವಾಗಬಹುದು. ಆದರೆ ಆ ಪ್ರತ್ಯೇಕತೆಯ ಅನುಭವ ಸಾಮಾನ್ಯನಿಗೂ ನಿಲುಕುವಂತದ್ದೇ. ಒಂದೊಂದು ಪ್ರದೇಶದ ಅಸ್ತಿತ್ವವನ್ನು ರೂಪಿಸುವುದು. ಕಡಲು, ಕಾಡು, ನದಿ, ಬಯಲು, ಪಕ್ಷಿಗಳು. ಅಷ್ಟೇ ಅಲ್ಲ ಸಾಂಸ್ಕೃತಿಕವಾದ ವೈಶಿಷ್ಟ್ಯಗಳು ಒಂದೊಂದು ತುಂಡು ನೆಲದ ಸ್ವಂತಂತ್ರವಾದ ಆಸ್ತಿಗಳು. ಒಂದು ಪ್ರದೇಶದ ಕಲಾ ರೂಪ ಇನ್ನೊಂದು ಪ್ರದೇಶದಲ್ಲಿ ಮತ್ತೊಂದು ರೂಪದಲ್ಲಿ ಗೋಚರಿಸುತ್ತದೆ. ಹೀಗೆ ವೈವಿಧ್ಯಗಳು ಊರಿಂದೂರಿಗೆ ಹೊಸತನವನ್ನು ತೋರಿಸುತ್ತವೆ.

ವ್ಯಕ್ತಿನಾಮಗಳು, ಇನಿಷಿಯಲ್‌ಗಳು ಕೇರಳದಲ್ಲಿ ಒಂದೇ ರೀತಿಯಲ್ಲಿಲ್ಲ. ಕುಞಂಬು, ಮಾಳು ಮೊದಲಾದ ಹೆಸರು ದಕ್ಷಿಣ ಕೇರಳದಲ್ಲಿ ವಿರಳ. ಉತ್ತರದವರ ಇನಿಷಿಯಲ್‌ಗಳು ಮನೆಯ ಹೆಸರುಗಳನ್ನು ಸೂಚಿಸುತ್ತವೆ. ದಕ್ಷಿಣದವರಲ್ಲಿ ತಂದೆ ತಾಯಂದಿರ ಹೆಸರುಗಳನ್ನು ಇನಿಷಿಯಲ್ ಆಗಿ ಇಡುವುದಿದೆ. ಉದಾಹರಣೆಗೆ ಪಿ.ಎಸ್. ರಾಜನ್ ಎಂದರೆ ಉತ್ತರದವರಿಗೆ ಪೂಂತೋಪ್ಪ್ ಮನೆಯ ಶಂಕರನ್ ಮಗ ರಾಜನ್. ದಕ್ಷಿಣದವರಿಗೆ ಆತ ಪರಮೇಶ್ವರ ಮತ್ತು ಸುಭದ್ರೆಯರ ಮಗ ರಾಜನಾಗುತ್ತದೆ.

ವೈವಿಧ್ಯಮಯವಾದ ಸಾಂಸ್ಕೃತಿಕ ಸಂಗತಿಗಳಿರುವ ಕೇರಳದ ಮಲಯಾಳಂ ಭಾಷೆಯ ಒಳಗೆ ಅನೇಕ ಮಲಯಾಳಂಗಳಿವೆ. ಅವುಗಳು ಸ್ವತಂತ್ರ ಭಾಷೆಗಳು ಎಂಬಷ್ಟರಮಟ್ಟಿಗಿನ ಪ್ರತ್ಯೇಕತೆಯನ್ನು ಉಳಿಸಿಕೊಂಡಿವೆ. ಅವು ಅನೇಕ ಸಾದೃಶ್ಯಗಳ ನಡುವೆ ವೈದೃಶ್ಯಗಳನ್ನು ಉಳಿಸಿಕೊಂಡು ಕೇರಳದ ಸಂಸ್ಕೃತಿಯನ್ನು ಕಟ್ಟಿ ಕೊಟ್ಟಿವೆ. ಪ್ರಾದೇಶಿಕ ಅನನ್ಯತೆಗಳನ್ನು ಉಳಿಸಿಕೊಂಡೂ ದೇಶೀಯತೆಯ ಭಾಗವಾಗಿ ಕೇರಳ ಸಂಸ್ಕೃತಿ ರೂಪು ಪಡೆದಿದೆ.

ದೇಶೀಯತೆ

ದೇಶೀಯತೆ ಎಂದರೆ ಭಾವನಾತ್ಮಕವಾದುದು. ಆದ್ದರಿಂದಲೇ ದೇಶ ಎಂದರೆ ಒಂದು ಕಾಲ್ಪನಿಕ ಸಮಾಜ ಎಂದು ಕೆಲವರು ವಾದಿಸುವುದೂ ಇದೆ. ವರ್ಗ, ಜಾತಿ, ಮತ ಎಂಬಿವುಗಳಂತೆ ದೇಶವೂ ಒಂದು ಕಾಲ್ಪನಿಕ ಸಮಾಜ ಎಂದು ಹೇಳಬಹುದು. ಆದರೆ ದೇಶೀಯ ಪ್ರಜ್ಞೆ ಎಂಬುದು ಏಕಕಾಲಕ್ಕೆ ಅನೇಕ ಹೆಸರುಗಳಲ್ಲಿ ವಸ್ತುನಿಷ್ಠವಾದ ಘಟಕಗಳನ್ನಾಶ್ರಯಿಸಿ ಹುಟ್ಟುತ್ತಿರುತ್ತದೆ. ಈ ಘಟಕಗಳ ನೆಲೆಯಿಂದಲೋ ಅಥವಾ ಅವುಗಳ ಸಮ್ಮಿಲನದಿಂದಲೋ ದೇಶೀಯ ಭಾವನೆಗಳಿಗೆ ಏರಿಳಿತಗಳು ಪ್ರಾಪ್ತವಾಗುತ್ತವೆ. ಒಮ್ಮೆ ಶಕ್ತಿವತ್ತಾದ ದೇಶೀಯ ಭಾವನೆ ಇನ್ನೊಮ್ಮೆ ದುರ್ಬಲವಾಗಿ ಇಲ್ಲವಾಗುವುದು ಅಸಂಭವನೀಯವಲ್ಲ. ಆದರೆ ದುರ್ಬಲವಾಗಿಯೂ ನಾಶವಾಗಲು ಸಾಧ್ಯವಾಗದೆ ಕೆಲವು ಸಂದರ್ಭಗಳಲ್ಲಿ ಹಿಂದಿನಷ್ಟೇ ಶಕ್ತಿವತ್ತಾಗಿ ಪ್ರಕಟಗೊಳ್ಳುವುದೂ ಇದೆ. ಜಾತಿ, ಮತ, ವಂಶ, ವರ್ಗ, ರಾಜ್ಯ, ಭಾಷೆ ಈ ಎಲ್ಲಾ ಭಾವನಾತ್ಮಕ ವಿಚಾರಗಳು ಕೆಲವೊಮ್ಮೆ ಮನುಷ್ಯನನ್ನು ಹತ್ತಿರವಾಗಿಸುವ ಕೆಲವೊಮ್ಮೆ ದೂರಾಗಿಸುವ ಸಂಗತಿಗಳಾಗಿ ಪರಿವರ್ತನೆ ಗೊಂಡುದನ್ನು ಇತಿಹಾಸದಲ್ಲಿ ಕಾಣಬಹುದಾಗಿದೆ. ಆದರೂ ಇವುಗಳಲ್ಲಿ ಹೊಂದಾಣಿಕೆಯಿಂದ ಸಂಜನಿಸುವ ಸಮಗ್ರವಾದ ದೇಶೀಯ ಕಲ್ಪನೆ ಆಧುನಿಕ ಸಂದರ್ಭದಲ್ಲಿ ಮಾತ್ರ ಕಾಣುತ್ತಿದ್ದೇವೆ. ಕಾಲ ಕ್ರಮೇಣ ಹೆಚ್ಚಾದ ಸಾರಿಗೆ ಸೌಕರ್ಯಗಳು, ಆಶಯ ವಿನಿಮಯ ಮಾಧ್ಯಮಗಳು ಭಾಷೆ, ಸಾಹಿತ್ಯಗಳನ್ನು ಪುಷ್ಟೀಕರಿಸುವುದರೊಂದಿಗೆ ಎಲ್ಲರನ್ನೂ ಒಂದೇ ರೀತಿಯಲ್ಲಿ ತಲುಪಲು ಮತ್ತು ತರಬೇತಿಗೊಳಿಸಲು ನೆರವಾದವು. ಪುಸ್ತಕಗಳು, ಸಂವಹನ ಮಾಧ್ಯಮಗಳು, ಒಂದೇ ಶಿಕ್ಷಣ ಮಾದರಿಯುಳ್ಳ ವಿದ್ಯಾಲಯಗಳು, ಕಚೇರಿಗಳು, ವಾಣಿಜ್ಯ ಸಂಸ್ಥೆಗಳು ಮೊದಲಾದವುಗಳಿಗೆಲ್ಲ ಈ ಪ್ರಜ್ಞೆಯ ಹುಟ್ಟಿನಲ್ಲಿ ಪಾಲಿದೆ. ಪ್ರಜೆಗಳು ಎಂಬ ಸ್ಥಿತಿಯಿಂದ ಜನರು ಒಂದು ನಿರ್ಣಾಯಕ ರಾಜಕೀಯ ಶಕ್ತಿಗಳಾಗಿ ಬದಲಾಗುವ ಹಾಗೂ ಜನಾಭಿಪ್ರಾಯವು ಆಡಳಿತವನ್ನು ಹೆಚ್ಚು ಹೆಚ್ಚು ನಿಯಂತ್ರಿಸುವ ಹಿನ್ನೆಲೆಯಲ್ಲಿ ಮಾತ್ರವೇ ದೇಶೀಯತೆ ಹೆಚ್ಚು ಜಾಗೃತಗೊಳ್ಳುತ್ತದೆ. ಆದ್ದರಿಂದಲೇ ದೇಶೀಯತೆ ಎನ್ನುವುದು ಆಧುನಿಕ ಕಾಲದ ಹುಟ್ಟು.

ಭಾರತದಲ್ಲಿ ದೇಶೀಯ ಚಿಂತನೆಗಳು ಪ್ರಖರವಾಗಿ ಪ್ರಕಟಗೊಂಡುದು ಬ್ರಿಟಿಷ್ ಅಧಿಪತ್ಯದ ಸಂದರ್ಭದಲ್ಲಿ. ಈ ಉಪಖಂಡದಲ್ಲಿ ಎಂದಿಗೂ ರಾಜಕೀಯವಾಗಿ ಒಂದು ಗೂಡದ ವಿವಿಧ ಸಂಸ್ಥಾನಗಳಿದ್ದವು. ಅವುಗಳ ನಡುವೆ ಸಾರಿಗೆ, ಸಂಪರ್ಕಗಳಿಗಾಗಿ ಬ್ರಿಟಿಷರು ಆಧುನಿಕ ಯಂತ್ರೋಪಕರಣಗಳ ನೆರವು ಪಡೆದರು. ಒಂದೇ ಆಡಳಿತ ಯಂತ್ರದ ಕೆಳಗೆ ಒಂದೇ ಆಡಳಿತ ಭಾಷೆಯನ್ನು ಏರ್ಪಡಿಸುವುದರ ಮೂಲಕ ಬ್ರಿಟಿಷರು ಜನರ ನಡುವೆ ಭಾರತ ದೇಶೀಯತೆಯ ಚಿಂತನೆಗೆ ಅವರಿಗರಿಯದೆಯೇ ಒಂದು ತಳಪಾಯವನ್ನು ಹಾಕಿಕೊಟ್ಟರು. ರೈಲ್ವೆ, ಟೆಲಿಗ್ರಾಫ್ ಮೊದಲಾದವುಗಳ ಮೂಲಕ ಭಾರತೀಯ ಸಮಾಜ ಕೈಗಾರಿಕೀಕರಣಕ್ಕೆ ಮೊದಲ ಹೆಜ್ಜೆ ಇರಿಸಿದಂತಾಯಿತು. ಬ್ರಿಟಿಷ್ ಆಡಳಿತವನ್ನು ಬೆಂಬಲಿಸುವವರು ಮತ್ತು ವಿರೋಧಿಸುವವರು ಸ್ವಯಂ ಭಾರತೀಯರು ಎಂಬ ನೆಲೆಯಲ್ಲಿ ಯೋಚಿಸತೊಡಗಿದರು. ಹತ್ತೊಂಬತ್ತನೆಯ ಶತಮಾನದ ಕೊನೆಯ ವೇಳೆಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ನವೀಕರಣಗಳ ಹೆಸರಲ್ಲಿ ನಡೆದ ಪರಿಷ್ಕಾರಗಳು ಭಾರತದ ಮೂಲೆ ಮೂಲೆಗೂ ವ್ಯಾಪಿಸುತ್ತಿದ್ದಂತೆ ಭಾರತೀಯ ದೇಶೀಯ ಪ್ರಜ್ಞೆ  ಶಕ್ತವಾಗಿ ರೂಪು ಪಡೆಯಿತು. ಪ್ರಾದೇಶಿಕ ಭಾಷಾ ಸಾಂಸ್ಕೃತಿಕ ಘಟಕಗಳನ್ನು ಉಪದೇಶೀಯತೆ ಎಂದು ಗುರುತಿಸುವುದೂ ಆರಂಭವಾಯಿತು.

ಬ್ರಿಟಿಷ್ ಅಧಿಪತ್ಯ ಎಂಬ ಬಹಿರಂಗ ಶತ್ರು ನೆಲೆ ನಿಂತಿರುವಷ್ಟು ಕಾಲ ಭಾರತೀಯರಿಗೆ ಒಂದು ಏಕದೇಶೀಯ ಪ್ರಜ್ಞೆ ಸಹಜವಾದ ಒಂದು ಅಗತ್ಯ. ಅಷ್ಟೇ ಅಲ್ಲ ಜೀವನ್ಮರಣ ಸಮಸ್ಯೆಯೂ ಆಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತು, ಭಾರತ ಪಾಕಿಸ್ಥಾನ ವಿಭಜನೆಯೊಂದಿಗೆ ಈ ದೇಶೀಯ ಪ್ರಜ್ಞೆ ಶಿಥಿಲವಾಯಿತು. ಆದರೆ ಒಂದು ಕಡೆಯಲ್ಲಿ ಪಾಕಿಸ್ಥಾನ ಇನ್ನೊಂದೆಡೆ ಚೈನಾ ಭಾರತದ ಗಡಿಭಾಗದಲ್ಲಿ ನಡೆಸುತ್ತಿರುವ ಭಯೋತ್ಪಾದನಾ  ಚಟುವಟಿಕೆಗಳು ಹಾಗೂ ಸೈನಿಕ ಕಾರ್ಯಾಚರಣೆಗಳನ್ನು ಮುಂದುವರಿಸಿದ್ದರಿಂದ ಭಾರತದ ದೇಶೀಯ ಪ್ರಜ್ಞೆ ನಡುನಡುವೆ ಪುನರ್ ಜೀವಿಸುತ್ತಲೇ ಬಂತು. ಭಯೋತ್ಪಾದನೆ ತಾತ್ಕಾಲಿಕವಾಗಿ ನಿಂತು ಹೋದಾಗ ಐಕ್ಯತೆಯ ಪ್ರಜ್ಞೆ ಕ್ಷಯವಾಗುತ್ತದೆ. ಮತ್ತೊಂದು ಸಂದರ್ಭ ಸೃಷ್ಟಿಯಾದಾಗ ಮಾತ್ರ ಆ ಪ್ರಜ್ಞೆ ಜಾಗೃತ ಗೊಳ್ಳುತ್ತದೆ.

ಜಗತ್ತಿನ ಬೃಹತ್ ರಾಷ್ಟ್ರಗಳ ಅಹಂಕಾರ, ನೆರೆ ರಾಷ್ಟ್ರಗಳ ಸ್ಪರ್ಧೆ ಇವುಗಳ ಹಿನ್ನೆಲೆಯಲ್ಲಿ ಒಂದು ಐಕ್ಯ ಪ್ರಜ್ಞೆ ಅಗತ್ಯ ಎಂದು ಎಲ್ಲರಿಗೂ ಅನ್ನಿಸಿದೆ. ಆದರೆ ಆ ಅನಿಸಿಕೆ ದೇಶೀಯತೆಯ ಭಾಗವೋ, ಅಥವಾ ನಾಗರೀಕತೆಯ ಅನುಬಂಧವೋ ಎಂದು ಬೇರ್ಪಡಿಸಿ ನೋಡುವುದು ಸಾಧ್ಯವಾಗಲಿಲ್ಲ. ಆದರೂ ವೈವಿಧ್ಯಮಯವಾದ ಅನೇಕ ಪ್ರಾದೇಶಿಕ ಘಟಕಗಳು ಭಾರತದಲ್ಲಿ ಬ್ರಿಟಿಷರು ಮಾಡಿದ ಕೃತ್ರಿಮ ಸಂಸ್ಥಾನ ವಿಭಜನೆಯ ಜಾಗದಲ್ಲಿ ಸಹಜವಾದ ಮತ್ತು ಜನರ ಇಷ್ಟಾನಿಷ್ಟಗಳನ್ನು ಪೂರೈಸುವ ಪುನರ್ ವಿಭಜನೆಯೊಂದು ಅಗತ್ಯವಿದೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಂಡುಕೊಂಡಿತ್ತು. ಗಾಂಧೀಜಿ ಹಾಗೂ ಇತರರ ಚಿಂತನೆಗಳನ್ನು ಅನುಸರಿಸಿಯೇ ಆ ವಿಭಜನೆ ಭಾಷೆಯ ತಳಹದಿಯಲ್ಲಿ ನಡೆಯಿತು. ಹಾಗಾಗಿ ಐಕ್ಯ ಕೇರಳ ಎಂಬ ಪ್ರಾಚೀನ ರೂಪವೇ ಕೇರಳ ಸಂಸ್ಥಾನವಾಗಿ ಆವಿರ್ಭಜಿಸಿತು. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಈ ಐಕ್ಯ ಪ್ರಜ್ಞೆ ಮೊದಲೇ ಪ್ರಕಟವಾಗಿದ್ದರೂ ರಾಜಕೀಯ ವಲಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ದೂರದೃಷ್ಟಿಯಿಂದಾಗಿ ಈ ಹೊಸ ತಿರುವು ಸಾಧ್ಯವಾಯಿತು. ಭಾಷೆಯ ತಳಹದಿಯಲ್ಲಿ ಕಾಂಗ್ರೆಸ್ ಭಾರತೀಯರನ್ನು ದೇಶೀಯತೆಯ ಚಿಂತನೆಗೆ ಹಚ್ಚಿತು. ಕ್ರಮೇಣ ಕಮ್ಯುನಿಸ್ಟರೂ ಇದನ್ನೇ ಅಂಗೀಕರಿಸಿದರು.

ಆದರೆ ಭಾಷಾ ಸಂಸ್ಥಾನಗಳಲ್ಲಿ ಬೆಳೆದು ಬಂದ ಚಿಂತನೆಯನ್ನು ದೇಶೀಯತೆಯೆಂದು ಕರೆಯಲು ನಮ್ಮ ದೇಶೀಯ ಚಿಂತಕರು ಒಪ್ಪಲಿಲ್ಲ. ಯಾಕೆಂದರೆ ದೇಶೀಯತೆ ಎಂದರೆ ಭಾರತದ ದೇಶೀಯತೆ ಎಂಬ ಅರ್ಥದಲ್ಲಿ ಅವರು ಪರಿಭಾವಿಸಿದ್ದಾರೆ. ಭಾರತದ ದೇಶೀಯತೆಯಲ್ಲಿ ವೈವಿಧ್ಯಗಳಿವೆಯೆಂದೂ ಒಪ್ಪಿಕೊಳ್ಳುವುದರ ಮೂಲಕ ಬಹುತ್ವದಲ್ಲಿ ಏಕತೆ ಎಂಬ ಘೋಷಣೆಯ ಆಶ್ರಯ ಪಡೆಯಲು ದೇಶೀಯ ಚಿಂತಕರು ಉತ್ಸಾಹ ತೋರಿದರು. ಅಷ್ಟೇ ಅಲ್ಲ ಪ್ರಾದೇಶಿಕ ಅನನ್ಯತೆ ಹಾಗೂ ಸಾಮುದಾಯಿಕ ಪ್ರಜ್ಞೆ ಇವೆಲ್ಲ ದೇಶೀಯತೆಗೆ ವಿರುದ್ಧವಾದುದೆಂದು ಅವರು ಸಾರಿದರು. ಸ್ಟಾಲಿನ್ ಸೋವಿಯೆಟ್ ಯೂನಿಯನ್‌ನ ಹಿನ್ನೆಲೆಯಲ್ಲಿ ದೇಶೀಯತೆಯ ಸಮಸ್ಯೆಯ ಕುರಿತು ಪುನರ್ ಚಿಂತನೆಗೆ ತೊಡಗಿದಾಗ ಸೈದ್ಧಾಂತಿಕ ನಿಲುವಿನಲ್ಲಿ ಪ್ರಕಟಣೆಗಳು ಹೊರಬಂದಾಗ ಇಲ್ಲಿಯೂ ಕಮ್ಯುನಿಸ್ಟ್‌ರು ಅದನ್ನು ಎತ್ತಿ ಹಿಡಿದರು. ಆದರೆ ತಿದ್ದುಪಡಿಗಳು ಬೇಕೆಂಬ ಹಟ, ಕೋಲಾಹಲಗಳ ನಡುವೆ ಆ ಚಿಂತನೆಗಳನ್ನು ಹೊತ್ತ ಮೊದಲ ಪ್ರಕಟಣೆಗಳನ್ನು ಹಾಗೂ ಪುಸ್ತಕಗಳನ್ನು ಬೀಗ ಹಾಕಿ ಮುಚ್ಚಿಟ್ಟರು. ಇ.ಎಂ.ಎಸ್. ಬರೆದ ‘ಕೇರಳಂ ಮಲಯಾಳಿಕಳುಡೆ ಮಾತೃ ಭೂಮಿಯುಂ’ (ಕೇರಳ ಮಲಯಾಳಿಗಳ ಮಾತೃಭೂಮಿಯು) ಮೊದಲಾದ ಕೃತಿಗಳು ಬೆಳಕು ಕಾಣಲು ತುಂಬಾ ಸಮಯ ಕಾಯಬೇಕಾಯಿತು.

ಭಾಷಾವಾರು ಪ್ರಾಂತ್ಯ ವಿಂಗಡಣೆಗೆ ಕಾಂಗ್ರೆಸ್ ಪ್ರತಿಜ್ಞಾ ಬದ್ಧವಾಗಿದ್ದರೂ ಸ್ವಾತಂತ್ಯ್ರ ಲಭಿಸಿದ ನಂತರ ಆ ಯೋಚನೆ ಮುಂದೂಡುತ್ತಾ ಹೋಯಿತು. ಆಂಧ್ರದ ಪೊಟ್ಟಿ ಶ್ರೀರಾಮುಲುವಿನ ಆತ್ಮತ್ಯಾಗವು ರಾಜಕೀಯ ನಾಯಕರನ್ನು ವಾಸ್ತವ ಪ್ರಜ್ಞೆಗೆ ಕರೆ ತಂದಿತು. ಕೇರಳದಲ್ಲಿ ಅಂದು ಸಾರ್ವಜನಿಕ ಜೀವನದ ಮುಂಚೂಣಿಯಲ್ಲಿದ್ದ ಕೆ.ಪಿ. ಕೇಶವ ಮೇನೋನ್, ಪ್ರೊಫೆಸರ್ ಮುಂಡಶ್ಶೇರಿ ಮೊದಲಾದವರೆಲ್ಲ ಜನರ ಇಷ್ಟಾನುಸಾರ ಐಕ್ಯಕೇರಳದ ಸಮಸ್ಯೆಯನ್ನು ಎತ್ತಿ ಹಿಡಿದರು. ಅಂದಿನ ಸಂಸ್ಥಾನ ಪುನರ್ ವಿಭಜನೆಯಲ್ಲಿ ಮೊದಲಿಗೆ ತಿರುಕೊಚ್ಚಿಯು ಬಳಿಕ ಐಕ್ಯ ಕೇರಳವೂ ರೂಪುಗೊಂಡಿತು. ಆದರೆ ಒಂದು ವಿಷಯ ಇಲ್ಲಿ ಪ್ರಸ್ತಾಪ ಯೋಗ್ಯವೆನಿಸಿದೆ. ಕಾಂಗ್ರೆಸಿನ ನೇತೃತ್ವದಲ್ಲಿ ಸಿದ್ಧಗೊಂಡ ಭಾರತೀಯ ಸಂವಿಧಾನದಲ್ಲಿ ‘ಫೆಡರೇಶನ್’ ಎಂಬ ಪರಿಕಲ್ಪನೆಯನ್ನು ಅಂಗೀಕರಿಸಿದ್ದರೂ ‘ಯುನಿಟಿ’ಯ ಸ್ವಭಾವವೆ ಆಡಳಿತದಲ್ಲಿ ಹೆಚ್ಚುತ್ತಿತ್ತು. ಆರಂಭದ ವರ್ಷಗಳಲ್ಲಂತೂ ಪ್ರಾದೇಶಿಕತೆಯನ್ನು ನಿರ್ಲಕ್ಷ್ಯಕ್ಕೊಳಪಡಿಸಲಾಗಿತ್ತು.

ಕೇರಳ ದೇಶೀಯತೆ

ಕೇರಳದ ಮಣ್ಣಿನಲ್ಲಿ ಹಾಗೂ ಜನರ ಕಣ್ಣುಗಳಲ್ಲಿ ದೇಶೀಯತೆಯು ಅರ್ಥಪೂರ್ಣ ಗೊಳ್ಳುವ ಘಟಕಗಳನ್ನು ಭೌಗೋಳಿಕ ಸಮಾಜಶಾಸ್ತ್ರಕ್ಕೆ ಪರವಾದ ವೈಶಿಷ್ಟ್ಯಗಳ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಾಗುತ್ತದೆ.

ಸಹ್ಯಾದ್ರಿ ಪರ್ವತ ಶ್ರೇಣಿಗಳು ಒಂದು ಕೋಟೆಯಂತೆ ಕೇರಳವನ್ನು ತಮಿಳುನಾಡಿನಿಂದ ಪ್ರತ್ಯೇಕವಾಗಿಸಿದೆ. ಅದೇ ವೇಳೆಗೆ ಪಾಲಕ್ಕಾಡಿನ ಗುಡ್ಡಗಾಡು ಪ್ರದೇಶದಂತೆ ಸಾಕಷ್ಟು ಗುಡ್ಡಗಾಡುಗಳು ಅವುಗಳ ಮೂಲಕ ಕಾಲ್ದಾರಿಗಳು ಕೇರಳಕ್ಕೆ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳೊಡನೆ ಸಂಪರ್ಕ ಕಲ್ಪಿಸಿವೆ. ಕರ್ನಾಟಕದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯು ಕೇರಳದ ಜೊತೆಗಿನ ಸಂಪರ್ಕವನ್ನು ಹೆಚ್ಚಿಸಿದೆ. ಆ ಮೂಲಕ ಕೇರಳವನ್ನು ಭಾರತದ ಅವಿಭಾಜ್ಯ ಅಂಗವಾಗಿಸಿದೆ. ಭಾಷೆ ಮತ್ತು ಜೀವನ ಶೈಲಿಗಳಲ್ಲಿ ಪ್ರತ್ಯೇಕತೆಯನ್ನು ಉಳಿಸಿಕೊಳ್ಳುವುದರಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿ ಪ್ರಮುಖ ಪಾತ್ರ ವಹಿಸಿದೆ. ಸೈನಿಕ ಆಕ್ರಮಣಗಳನ್ನು ದೂರದ ಮಳೆಗಾಳಿಗಳನ್ನು ಬಳಿಗೆ ಕರೆದು ಮಳೆ ಸುರಿಯುವಂತೆ ಮಾಡಿದೆ. ತುಂಬಿ ಹರಿಯುವ ಐವತ್ತರಷ್ಟು ನದಿಗಳನ್ನು ನಾಡಿಗೆ ದಯ ಪಾಲಿಸಿದೆ. ಅವುಗಳ ಅಸ್ತಿತ್ವ ರಾಜಕೀಯವಾಗಿ ಕೇರಳದ ಏಕೀಕರಣಕ್ಕೆ ಅಡ್ಡಿಯೂ ಆಗಿದೆ. ಮಳೆ ಹಾಗೂ ನದಿಗಳು ಸೇರಿ ಉಂಟು ಮಾಡಿದ ಜಲ ಸಂಪತ್ತಿನಿಂದಾಗಿ ಒಂಟಿ ಗ್ರಾಮಗಳಿಗೆ ಬದಲಾಗಿ ಇಡೀ ರಾಜ್ಯವೇ ಪುಟ್ಟ ಪುಟ್ಟ ಮನೆಗಳಿರುವ ಒಂದೇ ಗ್ರಾಮವನ್ನಾಗಿ ರೂಪಿಸಿದೆ. ಒಂದೊಂದು ಮನೆಗೂ ಪ್ರತ್ಯೇಕ ಪ್ರತ್ಯೇಕ ಬಾವಿ, ಆವರಣ ಇರುವಾಗ ರಸ್ತೆ ಬದಿಗಳಲ್ಲಿ ಅಲ್ಲಲ್ಲಿ ಬಡಾವಣೆಗಳ ರೂಪದಲ್ಲಿ ಮನೆಗಳನ್ನು ನಿರ್ಮಿಸಬೇಕಾದ ಅಗತ್ಯ ಬರಲಿಲ್ಲ. ಸಂಘಟಿತವಾದ ಬಿಡಿ ಗಾ್ರಮಗಳ ರಕ್ಷಣೆ ಬೇಕಾಗಿ ಬರಲಿಲ್ಲ. ಆ ಮೂಲಕ ಗ್ರಾಮ ನೇತೃತ್ವವೇ ರಾಜ್ಯ ನೇತೃತ್ವವಾಗಿ ರೂಪು ಪಡೆಯುವುದು ಸಾಧ್ಯವಾಯಿತು. ಒತ್ತೊತ್ತಾಗಿರುವ ಸಣ್ಣಪುಟ್ಟ ಊರುಗಳು, ಊರುಗಳಲ್ಲಿ ತುಂಬಾ ಗ್ರಾಮಗಳು ಗ್ರಾಮಗಳಲ್ಲಿ ಎಲ್ಲೆಡೆ ಮನೆಗಳು ಇರುವ ಕೇರಳದ  ಜನಜೀವನ ಶೈಲಿಯಲ್ಲಿ ಮಲೆಗಳಿಗೆ, ನದಿಗಳಿಗೆ, ಮಳೆ ಮತ್ತು ಮಣ್ಣಿಗೆ ವಿಶೇಷ ಪ್ರಾಶಸ್ತ್ಯವಿದೆ.

ವರ್ಷ ಋತುವಿನ ಏರಿಳಿತವೇ ಇನ್ನೊಂದು ಪ್ರಮುಖ ಅಂಶ. ಇದು ಪ್ರಪಂಚದಲ್ಲಿಯೇ ವಿಶಿಷ್ಟವಾದ ಒಂದು ಸನ್ನಿವೇಶ. ಪಶ್ಚಿಮ ಏಷ್ಯದ – ಪೂರ್ವ, ಪಶ್ಚಿಮ ಸಂಸ್ಕೃತಿಗಳು ಸೇರಿದ ಹೊಸತೊಂದು ದ್ವಿಮುಖ ಸಂಸ್ಕೃತಿ ಕೇರಳದಲ್ಲುಂಟಾಯಿತು. ಪ್ರತೀ ವರ್ಷವೂ ಬರುವ ಮಳೆಯೊಂದಿಗೆ ಪ್ರಾಚೀನ ಕಾಲದಿಂದಲೂ ಯೆಹೂದ್ಯರು, ಕ್ರಿಶ್ಚಿಯನ್ನರು, ಅರಬರು, ಚೀನಿಯರು ಬಳಿಕ ಯುರೋಪಿಯನರು ಇಲ್ಲಿ ಬಂದು ನೆಲೆಸಿದರು. ಅವರೂ ಕೇರಳೀಯರೇ ಆದರು. ಪರಂಪರಾಗತವಾಗಿ ಕೇರಳದ ಸಂಪನ್ಮೂಲ ಸಮುದ್ರದ ವ್ಯಾಪಾರದೊಂದಿಗೆ ಮಿಳಿತಗೊಂಡಿದೆ. ಯುರೋಪಿಯನರಿಗೆ ಅತ್ಯಂತ ಜೀವನಾವಶ್ಯಕವಾದ ವಸ್ತು ಕರಿಮೆಣಸು. ಸರ್ವರೋಗ ನಿವಾರಕ ಶಕ್ತಿಯಿರುವ ಕರಿಮೆಣಸಿಗಾಗಿ ಪ್ರಾಣವನ್ನು ಪಣವಾಗಿಟ್ಟು ಬಂಧು ಬಾಂಧವರನ್ನು ಬಿಟ್ಟು ಕಡಲಿನ ಗಾಳಿ, ಪ್ರಾಣಿಗಳ ಜೊತೆಗೆ ಹೋರಾಡಿ ಅಪರಿಚಿತ ಲೋಕವೊಂದಕ್ಕೆ ಬರಲು ಯುರೋಪಿಯನರು ಮುಂದಾದರು. ಜೊತೆಗೆ ಶ್ರೀಗಂಧ, ಲವಂಗ, ಮೊದಲಾದ ವಸ್ತುಗಳು ದಂತ, ಹತ್ತಿಗಳಿಂದ ತಯಾರಿಸಿದ ವಸ್ತುಗಳನ್ನು ಕೇರಳದಿಂದ ಸಾಗಿಸಬಹುದೆಂದು ಅವರು ಕಂಡುಕೊಂಡರು.

ಹೀಗಾಗಿ ಕೇರಳೀಯರಲ್ಲಿ ಒಂದು ರೀತಿಯಲ್ಲಿ ದೇಸಿಗೆ ವಿರುದ್ದವಾದ ಚಿಂತಾಗತಿಯು ಕಾಣಿಸಿಕೊಂಡಿತು. ಪಾಶ್ಚಾತ್ಯರ ಕುರಿತು ಆರಾಧನಾ ಮನೋಭಾವವೂ, ಮತ ಸಹಿಷ್ಣುತೆಯು ಬೆಳೆಯಿತು. ಇವೆಲ್ಲ ಕೇರಳೀಯರನ್ನು ಭಾರತದ ಇತರ ಪ್ರದೇಶಗಳ ಜನರಿಗಿಂತ ಪ್ರತ್ಯೇಕ ವಾಗಿಸಿವೆ. ಕ್ರಿಶ್ಚಿಯನರು ಮತ್ತು ಮುಸಲ್ಮಾನರು ಕೇರಳದೆಲ್ಲೆಡೆ ಇರುವುದರಿಂದ ಕೇರಳದ ಸಮಾಜಕ್ಕೆ ಒಂದು ರೀತಿಯ ವಿಶಿಷ್ಟ ಸ್ವಭಾವ ಪ್ರಾಪ್ತವಾಗಿದೆ. ಅನೇಕ ಮತಗಳ, ಜಾತಿಗಳ, ಸಂಸ್ಥಾನಗಳ, ನೇತೃತ್ವಗಳ ಜೀವನ ಶೈಲಿ ಪ್ರಾಚೀನ ಕೇರಳವನ್ನು ದಕ್ಷಿಣ ಭಾರತದಲ್ಲಿಯೇ ಬೇರೆಯೇ ಆದ ಒಂದು ಜನವರ್ಗದ ನೆಲೆಯನ್ನಾಗಿಸಿದೆ. ಭೌಗೋಳಿಕತೆಗೂ, ಜೀವನ ವಿಧಾನಕ್ಕೂ ಮತ್ತು ಸಂಸ್ಕೃತಿಗಳೊಳಗೆ ಪರಸ್ಪರ ಅಭೇದ್ಯವಾದ ಸಂಬಂಧವುಂಟೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಆರ್ಯರ ಆಗಮನದ ಮೂಲಕ ಕೇರಳದ ಸಾಂಸ್ಕೃತಿಕ ಬದುಕಿಗೆ ಅಪೂರ್ವವಾದೊಂದು ಬದಲಾವಣೆ ಸಾಧ್ಯವಾಯಿತು. ಇದು ಭಾರತದ ಇತರ ಪ್ರದೇಶಗಳಿಗಿಂತ ವ್ಯವಸ್ಥಿತವಾದ ರೀತಿಯಲ್ಲಿಯೇ ಆಯಿತು. ಪರಿಣಾಮಗಳೂ ವಿಭಿನ್ನವಾದವು. ಕ್ರಿ.ಶ. ಆರಂಭದ ಶತಮಾನ ಗಳಲ್ಲಿ ಉತ್ತರದ ಕಡಲು ತೀರದ ಮೂಲಕ ವಲಸೆ ಬಂದು ಮುಖ್ಯ ನದೀತಟಗಳಲ್ಲಿ ರೂಪುಗೊಂಡ ಬ್ರಾಹ್ಮಣ ಗ್ರಾಮಗಳು ಕೇರಳದಲ್ಲಿ ಒಂದು ಹಸಿರು ಕ್ರಾಂತಿಯನ್ನೇ ಉಂಟು ಮಾಡಿದುವು. ಮೂವತ್ತೆರಡು ಮೂಲ ಗ್ರಾಮಗಳು ಒಂದಷ್ಟು ಉಪ ಗ್ರಾಮಗಳು ಇಲ್ಲಿನ ಪ್ರಮುಖ ಉತ್ಪಾದನಾ ಕೇಂದ್ರಗಳಾಗಿ ಮಾರ್ಪಾಡಾದವು. ಜಾತಿ ಪದ್ಧತಿಗಳು ಜಾರಿಗೊಂಡವು. ದೇವಸ್ಥಾನಗಳು ಸೃಷ್ಟಿಯಾದವು. ಕೇರಳವನ್ನು ಭಾರತದ ಸಂಸ್ಕೃತಿಯ ಮುಖ್ಯ ಧಾರೆಗೆ ತಂದವರು ಈ ಬ್ರಾಹ್ಮಣ ಆದಿವಾಸಿ ಜನರು. ಇವರೇ ಕೇರಳದಲ್ಲಿ ಆರ್ಯ-ದ್ರಾವಿಡರ ಸಮ್ಮಿಲನದ ಹೊಸ ಸಂಸ್ಕೃತಿಗೆ ನಾಂದಿ ಹಾಡಿದವರು. ‘ಸಂಬಂಧ’ ವ್ಯವಸ್ಥೆಗಳಲ್ಲಿ ಪ್ರಾಚೀನ ವಾದ ‘ಮರುಮಕ್ಕತ್ತಾಯ’ ಪದ್ಧತಿಗೆ ಲೋಕದಲ್ಲೆಲ್ಲೂ ಇಲ್ಲದ ರೀತಿಯ ಪರಿಷ್ಕಾರವನ್ನು ತಂದು ಸಮಾಜದಲ್ಲಿ ಇರಗೊಳಿಸಿದರು. ನಂಬೂದಿರಿಗಳ ನೇತೃತ್ವದಲ್ಲಿ ರೂಪು ಪಡೆದ ‘ಚೇರಮಾನ್ ಪೆರುಮಕ್ಕಳ’ ರಾಜ್ಯವು ಇಂದಿನ ಕೇರಳದ ಗಡಿಗಳನ್ನು ನಿರ್ಣಯಿಸಿತು. ಅದರ ಆಡಳಿತ ರೀತಿ, ಅಧಿಕಾರ ಹಂಚಿಕೆ ವೈಶಿಷ್ಟ್ಯಪೂರ್ಣವಾದುದು. ಆ ರಾಜ್ಯದ ನಿಯಮಗಳ ಗೂಡುಗಳಲ್ಲಿ ತಮಿಳು-ಮಲಯಾಳಂಗಳು ಪ್ರತ್ಯೇಕಗೊಳ್ಳತೊಡಗಿದವು. ಪ್ರಾಕೃತಿಕವಾಗಿ ಬೇರೆ ಬೇರೆಯಾಗಲೇ ಬೇಕಾಗಿದ್ದ ಕೇರಳವನ್ನು ಒಂದುಗೂಡಿಸಿ ನಿಲ್ಲಿಸಿದುದು ಕೇರಳ (ಮಲಯಾಳಂ) ಭಾಷೆ.

ಗೊಂದಲಗಳ ನಾಡು

ಇತ್ತೀಚಿನ ಕೆಲವು ಶತಮಾನಗಳಲ್ಲಿ ಕೇರಳದ ದೇಶೀಯತೆಗೆ ಗಂಭೀರವಾದ ಸ್ವರೂಪ ಬಂದಿದೆ. ಹದಿನಾರನೆಯ ಶತಮಾನವು ಹಲವು ಕಾರಣಗಳಿಗಾಗಿ ಪ್ರಾಮುಖ್ಯ ಪಡೆದಿದೆ. ಕೇರಳದ ದೇಶೀಯತೆಗೆ ಮೂರ್ತ ರೂಪ ಕೊಡಬಹುದಾದ ಪ್ರವೃತ್ತಿಗಳು ಆ ಶತಮಾನದಲ್ಲಿ ಬೆಳಕಿಗೆ ಬಂದವು. ಪರಂಪರಾಗತವಾಗಿ ಬಂದ ಸಹಜ ಬೆಳವಣಿಗೆ ಮತ್ತು ಪಾಶ್ಚಾತ್ಯರ ನೇರವಾದ ಸಂಪರ್ಕ ಇನ್ನೊಂದು ದಿಕ್ಕಿನಿಂದ ಇದನ್ನು ಗಮನಾರ್ಹವಾಗಿ ಪರಿಗಣಿಸುವಂತೆ ಮಾಡಿತು. ಹಳೆಯದನ್ನು ವಿರೋಧಿಸುವ ಹೊಸತನ್ನು ಆವೇಶದಿಂದ ಸ್ವೀಕರಿಸುವ ಮನೋಧರ್ಮವೂ ಸರಿಯಲ್ಲವೆಂದು ಕೇರಳೀಯರು ಭಾವಿಸಿದ್ದರು. ಆರ್ಯರು, ಆಂಗ್ಲರು, ಅರಬ್ಬಿಯನರು ಇರಲಿ ಅವರೆಲ್ಲರಿಂದಲೂ ಒಳ್ಳೆಯದನ್ನು ಸ್ವೀಕರಿಸಿ ಮಲಯಾಳಂ ಭಾಷೆಯ ಸಂಸ್ಕೃತಿಯ ಜೀವಕೋಶಗಳನ್ನು ಬೆಳೆಸಿದರು. ಸುಭದ್ರವಾದ ಸಾರ್ವಜನಿಕ ಜೀವನ ಶೈಲಿಗೆ ಅವರು ಅಡಿಗಲ್ಲು ನೆಟ್ಟರು. ಅಸ್ಪೃಶ್ಯರನ್ನು, ಆದಿವಾಸಿಗಳನ್ನು ಸಹ ಕೇರಳದ ಮುಖ್ಯ ಸಾಂಸ್ಕೃತಿಕ ವಾಹಿನಿಗೆ ತಂದರು. ಆ ಮೂಲಕ ಸಮಕಾಲೀನ ವಿಚಾರಗಳ ನೆಲೆಯಲ್ಲೂ ಮುದ್ರೆಯೊತ್ತಿದ್ದಾರೆ. ಫ್ರಾಂಕುಗಳು ಎಂಬರ್ಥದಲ್ಲಿ ಪರಂಗಿಗಳು ಎಂದು ಕರೆಯುವ ಪೋರ್ಚಗೀಸರ ಆಗಮನದೊಂದಿಗೆ ಯುರೋಪಿನ ವಸಾಹಾತುಶಾಹಿ ಭಾರತದಲ್ಲಿ ತಲೆಯೆತ್ತಲು ಪ್ರಯತ್ನಗಳು ಆರಂಭವಾದವು. ಬಲದ ದೃಷ್ಟಿಯಿಂದ ನೋಡಿದರೆ ಅವರಲ್ಲಿ ಸ್ಥಳೀಯರಿಗಿಂತ ಹೆಚ್ಚಿದ್ದುದು ಪಿರಂಗಿಗಳು ಮಾತ್ರ. ಹಾಯಿ ದೋಣಿಗಳು ಹಾಗೂ ಸ್ಥಳೀಯ ಪಿರಂಗಿ ತೋಪುಗಳು ಮಾಪಿಳ್ಳೆಯರಲ್ಲೂ ಇದ್ದುವು. ಆದರೆ ಅವು ಯುರೋಪಿಯನರ ಪಿರಂಗಿಗಳನ್ನು ಎದುರಿಸುವಷ್ಟು ಶಕ್ತವಾಗಿರಲಿಲ್ಲ. ಆದರೆ ಯುರೋಪಿಯನರ ಸಾಮಾಜಿಕ ವ್ಯವಸ್ಥೆ ಮತ್ತು ಸಾಂಸ್ಕೃತಿಕ ವಿಚಾರಗಳು ಅಂದು ಕೇರಳೀಯರಿಗಿಂತಲೂ ಚೆನ್ನಾಗಿತ್ತು ಎಂದೇನೂ ಹೇಳುವಂತಿರಲಿಲ್ಲ. ನವೋತ್ಥಾನದ ತರುವಾಯದ ಪೋರ್ಚುಗಲ್ ತನ್ನ ಸಾಮರ್ಥ್ಯವನ್ನು ತೋರಿಸಿದ್ದು ಕಡಲು ದಾರಿಗಳನ್ನು ಕಂಡು ಹುಡುಕುವುದರಲ್ಲಿ ಮಾತ್ರವೇ ಆಗಿತ್ತು. ಈ ಸಾಮರ್ಥ್ಯ ಕೋಝಿಕೋಡಿನ ಸಾಮೂದಿರಿಯೊಂದಿಗೆ ಅರಬ್ ರಾಷ್ಟ್ರದ ಮುಸಲ್ಮಾನ ವ್ಯಾಪಾರಿಗಳಿಗಿದ್ದ ಸಂಬಂಧಕ್ಕೆ ಒಂದು ರೀತಿಯ ಪಂಥಾಹ್ವಾನವೇ ಆಗಿತ್ತು. ಅವರು ಕೋಝಿಕೋಡಿನೊಂದಿಗೆ ಕಲಹಕ್ಕಿಳಿದು ಕೊಚ್ಚಿಯೊಂದಿಗೆ ಸ್ನೇಹ ಬೆಳೆಸಿದ್ದು ರಾಜಕೀಯವಾಗಿಯೂ ಒಂದು ರೀತಿಯ ಕೋಲಾಹಲವನ್ನು ಉಂಟುಮಾಡಿತು. ಕೇರಳವನ್ನು ಸಂಪೂರ್ಣ ತನ್ನ ಅಧೀನಕ್ಕೆ ತರಬೇಕೆಂಬ ಕೋಝಿಕೋಡಿನ ದೂರಾಲೋಚನೆ ಧೂಳೀಪಟ ವಾಯಿತು. ಕೇರಳದಲ್ಲಿ ಹಿಂದಿದ್ದ ರಾಜಕೀಯ ನೆಮ್ಮದಿ, ಸಮತೋಲನ ಸ್ಥಿತಿ ಅಕ್ಷರಶಃ ಇಲ್ಲವಾಯಿತು. ಕೋಝಿಕೋಡಿಗೆ ವಿರುದ್ಧವಾಗಿ ಕೊಚ್ಚಿ ಬೆಳೆದು ನಿಂತಿತು. ಚೀನೀಯರು ಬರುವುದೂ ಕಡಿಮೆಯಾಯಿತು. ಅಂತಾರಾಷ್ಟ್ರೀಯ ವಾಣಿಜ್ಯ ಕೇಂದ್ರ ಎಂಬ ನೆಲೆಯಲ್ಲಿ ಕೊಚ್ಚಿಗೆ ವಿಶೇಷ ಪ್ರಾಶಸ್ತ್ಯ ಲಭ್ಯವಾಯಿತು. ಅರಾಜಕತೆಯೂ, ಗೊಂದಲಗಳು ಕೇರಳದೆಲ್ಲೆಡೆ ವ್ಯಾಪಿಸಿದುವು.

ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಾದಂತೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರ ಗಳಲ್ಲೂ ಅಲ್ಲೋಲ ಕಲ್ಲೋಲಗಳಾದವು. ಕ್ರೈಸ್ತ ಮತದ ಹೆಸರಲ್ಲಿ ಕಲಹ ಹೆಚ್ಚಿಸುವ ಪರಂಗಿಯವರ ಪ್ರಯತ್ನ ಹೆಚ್ಚಿತು. ೧೫೯೯ರ ಉದಯಂಪೇರೂರ್ ಸ್ನೇಹದೋಸಿನಲ್ಲಿ ನಸ್ರಾಣಿ (Syrian Christan)ಗಳಲ್ಲಿ ಒಂದು ಗುಂಪು ಪರಂಗಿಯರನ್ನು ಬೆಂಬಲಿಸಿತು. ಇನ್ನೊಂದು ಗುಂಪು ಇವರೊಂದಿಗೆ ನಿರಂತರ ಕಲಹದಲ್ಲಿ ತೊಡಗಿತು. ಕಡಲ ತೀರದ ಬೆಸ್ತರು ಹಾಗೂ ಅರೆಯರನ್ನು ಬಲವಂತದಿಂದ ಮತಾಂತರಗೊಳಿಸಿದ ಪರಂಗಿಯರು ಕೇರಳದ ಸಾಮಾಜಿಕ ಜೀವನದಲ್ಲಿ ಹೊಸ ಸಮಸ್ಯೆಗಳ ಬೀಜಗಳನ್ನು ಬಿತ್ತಿದರು. ಸಮಾನತೆ, ಬಡವರಿಗೆ ನೆರವಾಗುವುದು, ಅನಾಥರನ್ನು ಸಂರಕ್ಷಿಸುವುದು ಮೊದಲಾದ ಉದ್ದೇಶಗಳು ಮಾತ್ರ ಮತಾಂತರದ ಹಿಂದೆ ಇದ್ದುದಲ್ಲ ಎಂದು ತರುವಾಯದ ಪರಿಣಾಮಗಳನ್ನು ನೋಡಿದರೆ ವೇದ್ಯವಾಗುವ ಸಂಗತಿ. ಯೇಸುಕ್ರಿಸ್ತನ ಸ್ನೇಹ ಪ್ರಚೋದನೆಯೋ, ಸಂತ ಸೇವಿಯರ್‌ನ ಸುವಾರ್ತೆಗಳೋ, ಅಲ್ಲಿ ಕಂಡು ಬರಲಿಲ್ಲ. ಆದರೆ ಇವೆಲ್ಲವುಗಳನ್ನು ಮತಾಂತರದ ಜೊತೆಗೆ ಮೇಲ್ನೋಟಕ್ಕೆ ಕಾಣಬಹುದಿತ್ತು. ಕ್ಯಾಥೋಲಿಕ್‌ರ ಸ್ಥಿತಿ ತಕ್ಷಣವೇ ಉತ್ತಮಗೊಳ್ಳದಿದ್ದರೂ ಕೇರಳದ ಜಾತಿಗಳ ಸುಭದ್ರ ಕೋಟೆಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಇದು ಸಾಕಾಯಿತು. ಕೇರಳದ ಹಿಂದೂ ಸಮುದಾಯದಲ್ಲೋ ಕ್ರಿಶ್ಚಿಯನ್ ಸಮುದಾಯದಲ್ಲೋ ತಲೆತೂರಿಸಲು ಅರಬ್ ಮುಸ್ಲಿಮರು ಮುಂದಾಗಿರಲಿಲ್ಲ. ಪರಂಗಿಯರ ಅಹಂಕಾರದಿಂದ ಕೂಡಿದ ಈ ನಿಗೂಢ ಆಟ ಸ್ಥಳೀಯ ಪಾಳೆಯಗಾರರನ್ನು, ತುಂಡರಸರನ್ನು ರೊಚ್ಚಿಗೆಬ್ಬಿಸಿತು. ಪರಿಣಾಮ ವಾಗಿ ಸಾಮಾಜಿಕ ಅಸ್ವಸ್ಥತೆಗಳು ತಾಂಡವವಾಡತೊಡಗಿದವು. (ನಾರಾಯಣನ್ ಎಂ.ಜಿ.ಎಸ್., ೧೯೯೯, ಪುಟ ೧೯)

ಪರಂಗಿಗಳ ಆಕ್ರಮಣದಿಂದಾಗಿ ನಸ್ರಾಣಿಗಳ (ಸಿರಿಯನ್ ಕ್ರಿಶ್ಚನರು) ಮತ್ತು ಮಹಮ್ಮದೀ ಯರ ಕೇರಳೀಯತೆ ಒಂದುಗೂಡಿ ಪ್ರಬಲಗೊಂಡಿತು. ಈ ಸಮುದಾಯಗಳು ಸ್ಥಳೀಯ ಅರಸರ ಹಾಗೂ ಸ್ಥಳೀಯ ಜನರ ಜೊತೆ ನಿಂತು ವಿದೇಶಿಯರನ್ನು ಎದುರಿಸುವುದರ ಮೂಲಕ ಕೇರಳದ ಒಗ್ಗಟ್ಟು ನೆಲೆ ನಿಂತಿತು. ಈ ಮೂಲಕ ಕೇರಳದ ದೇಶೀಯತೆ ವಿದೇಶಿಯರಿಗೆ ವಿರುದ್ಧವಾಗಿ ಗಟ್ಟಿಗೊಳ್ಳುತ್ತಾ ಬೆಳೆದು ಬಂತು. ವೈಯುಕ್ತಿಕವಾಗಿ ವಿಭಿನ್ನ ಚಿಂತನೆಯುಳ್ಳವರಾಗಿಯೂ ಕೇರಳೀಯರು ಆಚಾರ-ವಿಚಾರಗಳಲ್ಲಿ ಒಂದು ರೀತಿಯ ಐಕ್ಯತೆಯನ್ನೇ ಪ್ರಕಟಿಸಿದರು. ಈ ಅಗ್ನಿ ಪರೀಕ್ಷೆಯನ್ನು ದಾಟಿ ಬಂದ ನಸ್ರಾಣಿ ಹಾಗೂ ಮಹಮ್ಮದೀಯ ಜನರು ಕೇರಳೀಯತೆಯಲ್ಲಿಯೂ ಹೆಚ್ಚು ತಾದಾತ್ಮ್ಯವನ್ನು ಹೊಂದಿದ್ದರು.

ನಾಡದೊರೆಗಳು ಪ್ರಬಲರಾದುದು, ಜಾತಿ ವರ್ಗಗಳಲ್ಲಿ ಬಂದ ಬದಲಾವಣೆಗಳು, ಯುದ್ಧಗಳು ಎಲ್ಲವುಗಳಿಂದಾಗಿ ಸಾಮಾಜಿಕ, ಸಾಂಸ್ಕೃತಿಕ ಜೀವನದಲ್ಲಿ ಒಂದು ಹೊಸ ತಿರುವು ಕಾಣಿಸಿಕೊಂಡಿತು. ಕೆಲವು ಸಮುದಾಯಗಳ ಸ್ಥಾನದಲ್ಲೂ ಬದಲಾವಣೆಗಳು ಗೋಚರಿಸಿದವು, ಅನೇಕ ಮುಸಲ್ಮಾನರು ದಿವಾಳಿಯಾದರು. ಅನೇಕ ನಸ್ರಾಣಿ ಜನರು ಶ್ರೀಮಂತರಾದರು. ಕೆಲವು ನಂಬೂದಿರಿ ಮನೆತನಗಳು ಛಿದ್ರಗೊಂಡವು. ದಂಡನಾಯಕರುಗಳು ಪ್ರಬಲ ನೇತಾರರಾದರು. ಕೃಷಿಕರು ನಂಬೂದಿರಿ ಜನರ ಕೈಕೆಳಗೆ ಗೇಣಿದಾರರಾಗಿ ದುಡಿಯ ತೊಡಗಿದರು. ನಾಯನ್ಮಾರರು ಹಣ ಸಂಪಾದಿಸಿ ಗೌರವ ಪಡೆದರು. ಅವರ ನಡುವೆ ವಿದ್ವಾಂಸರೆನಿಸಿದವರು ಆಯುಧ ವಿದ್ಯೆಯನ್ನು ಕಲಿಸುವುದರ ಜೊತೆಗೆ ಅಕ್ಷರ ವಿದ್ಯೆಯನ್ನು ಕಲಿಸತೊಡಗಿದರು. ಭಾರತೀಯ ಸಂಸ್ಕೃತಿಯ ಮುಖ್ಯಧಾರೆಯಲ್ಲಿ ಗುರುತಿಸಬೇಕಾದ ಸಿದ್ಧತೆಗಳನ್ನು ಮಾಡತೊಡಗಿದರು. ಇದರ ಪರಿಣಾಮವೋ ಎಂಬಂತೆ ತುಂಜತ್  ಎೞುತ್ತಚ್ಚನ್ ನೇತೃತ್ವದಲ್ಲಿ ಇತಿಹಾಸ, ಪುರಾಣ ಗ್ರಂಥಗಳ ಅನುವಾದ ಕೆಲಸಗಳೂ ನಡೆದುವು. ಇದನ್ನು ಭಕ್ತಿಯುಗ ಎಂದೂ ಸಾಹಿತ್ಯ ಚರಿತ್ರೆಕಾರರು ಗುರುತಿಸಿದ್ದಾರೆ.

ವ್ಯಾಪಕವಾಗಿ ಸನ್ಮಾರ್ಗಿಕವಾದ ಬದಲಾವಣೆಯ ಆವೇಶವೂ ಇದರ ಹಿಂದಿತ್ತು. ಕುರುಡು ನಂಬಿಕೆಯ ನೆಲೆಯಿಂದ ದೇವರಲ್ಲಿ ಭಕ್ತಿಯನ್ನಿರಿಸಿ ತಾದಾತ್ಮ್ಯ ಹೊಂದುವ ಸ್ಥಿತಿಗೆ ಬದಲಾಗಿ ದೈನಂದಿನ ಬದುಕಿನಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸುವ ಕುರಿತ ಆಲೋಚನೆಗಳನ್ನು ಎೞುತ್ತಚ್ಚನ್ ಹಾಗೂ ಸಮಕಾಲೀನರು ಮಾಡಿದರು. ಪುರಾಣ, ಇತಿಹಾಸಗಳ ಯಾಂತ್ರಿಕ ಅನುವಾದಗಳಿಗಿಂತಲೂ ಸಮಕಾಲೀನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಲಕ್ಷ್ಯ ಇದರ ಹಿಂದಿತ್ತು ಎಂಬುದು ವ್ಯಕ್ತವಾಗುತ್ತದೆ. ಸಮಾಜದಲ್ಲಿ ಉಂಟಾದ ನೈತಿಕ ಅಧಃಪತನ, ಅತಿ ಆಸೆ, ಅಧಿಕಾರ ದಾಹಗಳಿಂದುಂಟಾದ ವೈರಾಗ್ಯವು ಭಕ್ತಿಯ ಹಾದಿ ತುಳಿದಾಗ ಸಿನಿಕತನದ ಬದುಕಿನಿಂದ ದೂರವಾಗಲು ಸಮಕಾಲೀನ ಮಾನವರ ಕತೆಗಳನ್ನು ಹೇಳಲು ಎೞುತ್ತಚ್ಚನ್ ಮುಂದಾದ. ಆ ನಾಡದೊರೆಗಳ ಕಾಲದಲ್ಲೂ ಎೞುತ್ತಚ್ಚನ್ ಬರಹಗಾರನೇ ಹೊರತು ನಾಡದೊರೆಯಾಗಿರಲಿಲ್ಲ. ಸಾಹಿತ್ಯದ ಮೂಲಕ ಪರ್ಯಾಯ ಶಕ್ತಿಯೊಂದನ್ನು ಹುಟ್ಟು ಹಾಕುವ ಕೆಲಸವನ್ನು ಎೞುತ್ತಚ್ಚನ್ ಮಾಡಿದ. ನಾಯನ್ಮಾರರ ಗುರುಕುಲ (ಎೞುತ್ತ್‌ಪಳ್ಳಿ)ಗಳಲ್ಲಿ ಪಾಠ ಹೇಳುತ್ತಿದ್ದ ಉಪಾಧ್ಯಾಯರ ಸಮುದಾಯಕ್ಕೆ ಸೇರಿದ ಎೞುತ್ತಚ್ಚನ್ ಸಾಂಸ್ಕೃತಿಕವಾಗಿ ಸೈನ್ಯವೊಂದನ್ನು ಸೃಷ್ಟಿಸಿದ. ನಂಬೂದಿರಿಗಳ ಭಾಷೆಯನ್ನು ವ್ಯಂಗ್ಯವಾಗಿಸಿ ಪಂಥಾಹ್ವಾನವನ್ನೇ ನೀಡಿದ.

ಸಾಹಿತ್ಯ ಮಾತ್ರವಲ್ಲ ಎೞುತ್ತಚ್ಚನ್‌ನ ಕಾರಣದಿಂದ ಮಲಯಾಳಂ ಲಿಪಿ ಹಾಗೂ ಭಾಷೆಯಲ್ಲಿ ರೂಪಾಂತರವುಂಟಾಯಿತು. ಶೂದ್ರರಲ್ಲೂ ಸಂಸ್ಕೃತ ಪದ ಬಳಕೆ ಅಧಿಕವಾದಾಗ ಮಣಿಪ್ರವಾಳವೆಂಬ ಭಾಷಾ ರೀತಿಯೇ ಮಲಯಾಳಂ ಎನ್ನಿಸಿತು. ಅದನ್ನು ಬರೆಯಲು ಹಳೆಯ ‘ವಟ್ಟೆೞುತ್ತು’ ಲಿಪಿಗಳು ಪರ್ಯಾಪ್ತವೆನಿಸಲಿಲ್ಲ. ಆಗ ಹಿಂದಿನಿಂದಲೇ ಸಂಸ್ಕೃತ ಸಾಹಿತ್ಯದಲ್ಲೂ ದಕ್ಷಿಣ ಭಾರತದ ಸವರ್ಣೀಯರು ಉಪಯೋಗಿಸುತ್ತಿದ್ದ ಗ್ರಂಥ ಲಿಪಿಗಳು ಹೆಚ್ಚು ಹೆಚ್ಚಾಗಿ ಮಲಯಾಳಂಗೆ ಬಳಕೆಯಾದವು. ಈ ಕಾರಣಕ್ಕಾಗಿಯೇ ಇರಬೇಕು ತುಂಜತ್ತು ಎೞುತ್ತಚ್ಚನ್‌ನನ್ನು ಮಲಯಾಳಂ ಭಾಷೆ ಮತ್ತು ಲಿಪಿಗಳ ಜನಕ ಎಂದೇ ಕರೆಯಲಾಗುತ್ತದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಮೂದಿರಿಯ ನೇತೃತ್ವದಲ್ಲಿ ದೇವಾಲಯಗಳ ನವೀಕರಣ ಕೆಲಸಗಳು ಕೃಷ್ಣನಾಟಂ, ಕಥಕಳಿಯ ಮೂಲ ರೂಪಗಳು ಕಾಣಿಸಿಕೊಂಡಿರಬೇಕು. ಗುರುವಾಯೂರನ್ನು ಕೇಂದ್ರೀಕರಿಸಿ ಭಕ್ತಿಪಂಥವೊಂದು ಪ್ರಚಲಿತದಲ್ಲಿತ್ತು. ಪೂಂತಾನಂ ನಂಬೂದಿರಿ, ಮೇಲ್ಪತ್ತೂರ್ ನಾರಾಯಣಭಟ್ಟತ್ತಿರಿ (೧೫೫೯-೧೬೨೦) ಮೊದಲಾದವರೆಲ್ಲ ಈ ಭಕ್ತಿ ಪಂಥದ ಹರಿಕಾರರು. ಸ್ವಲ್ಪ ಉತ್ತರ ಭಾಗಕ್ಕೆ ಬಂದಂತೆ ವಡಕ್ಕನ್‌ಪಾಟ್ಟ್ ಎಂಬ ವೀರರ ಕತೆಗಳನ್ನು ಹೇಳುವ ಜನಪದ ಹಾಡುಗಳು ಜನ್ಮ ತಾಳಿದವು. ಬಹುಶಃ ಇದೇ ಕಾಲಘಟ್ಟದಲ್ಲಿ ಚೆರುಶ್ಶೇರಿಯವರ ಕೃಷ್ಣಪ್ಪಾಟ್ಟು ರೂಪುಗೊಂಡಿರಬೇಕು. ಹೀಗೆ ಎಲ್ಲಿ ನೋಡಿದರಲ್ಲಿ ಗೊಂದಲಗಳ ಸೃಷ್ಟಿ, ಸಾವಿನ ತಾಂಡವ ನೃತ್ಯಗಳು, ಒಂದೆಡೆ ವೀರರ ಕಥನಗಳು, ಇನ್ನೊಂದೆಡೆ ವೇದಾಂತ ಚಿಂತನೆಗಳು ಹುಟ್ಟಿಕೊಂಡುವು.