ಹೊರಗಿನಿಂದ ಬಂದುದಾದರೂ ಕ್ರೈಸ್ತ ಮತದ ಪ್ರಚಾರ ಅತ್ಯಂತ ಶೀಘ್ರ ಗತಿಯಲ್ಲಿಯೇ ಆಯಿತು. ಅದನ್ನು ಒಂದು ಸ್ಥಳೀಯ ಮತವೆಂದು ಪರಿಗಣಿಸಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಕ್ರಿ.ಶ. ೩೪೫ರಲ್ಲಿ ಬಾಗ್ದಾದ್, ನಿನೆವೆ, ಜೆರುಸಲೇಮ್‌ಗಳಿಂದ ನಾಲ್ಕು ನೂರರಷ್ಟು ಸಿರಿಯನ್ ಕ್ರೈಸ್ತರು ಕೇರಳಕ್ಕೆ ವಲಸೆ ಬಂದರು. ಕೋಸ್‌ಮೋಸ್ ಇಂಡಿಕೋ ಪೂಸ್ಸನ್ ಎಂಬ ಬೈಸಂಟಿಯನ್ ಸನ್ಯಾಸಿ (ಕ್ರಿ.ಶ. ಆರನೆಯ ಶತಮಾನ) ಕೊಲ್ಲಂನ ಚರ್ಚ್‌ನ ಕುರಿತು ಹೇಳಿದ್ದಾನೆ. ಆ ಕಾಲದಲ್ಲಿಯೇ ಕ್ರೈಸ್ತರು ವ್ಯಾಪಾರದಲ್ಲಿ ಪ್ರಭಾವ ಬೀರಿದ್ದರು. ರಾಜರುಗಳಿಂದ ಅವರಿಗೆ ಬೇಕಾದಂತೆ ನೆರವೂ ಲಭಿಸಿತ್ತು. ಎರಡನೆಯ ಚೇರ ಸಾಮ್ರಾಜ್ಯದ ಕಾಲದಲ್ಲಿಯೇ (ಕ್ರಿ.ಶ. ೮೮೦-೧೧೦೨) ಕ್ರಿಶ್ಚಿಯನ್ ವ್ಯಾಪಾರಿಗಳಿಗೆ ಅನುಕೂಲಕರ ವಾತಾವರಣವಿತ್ತು. ಸ್ಥಾಣುಕವಿಯು ಚೇರ ಚಕ್ರವರ್ತಿಯಾದಾಗ (ಕ್ರಿ.ಶ. ೮೪೪-೮೮೪) ವೇನ್ನಾಡಿನ ನಾಡದೊರೆಗಳಾದ ಅಯ್ಯನಡಿಗಳ್ ತಿರುವಡಿಗಳ್ ಹೊರಡಿಸಿದ ತರಿಸ್ಸಾಪ್ಪಳ್ಳಿ ತಾಮ್ರ ಶಾಸನದಲ್ಲಿ (ಕ್ರಿ.ಶ. ೮೪೯) ಕೊಲ್ಲಂನ ಕ್ರಿಶ್ಚಿಯನ್‌ರಿಗೆ ಮಾಡಿಕೊಟ್ಟ ಅನುಕೂಲಗಳ ಬಗೆಗೆ ಉಲ್ಲೇಖಿಸಲಾಗಿದೆ. ಆ ಕಾಲದ ಕೇರಳದ ರಾಜರುಗಳು ಪ್ರಕಟಿಸಿದ ಮತ ಸಹಿಷ್ಣುತೆಗೆ ಹಾಗೂ ಉದಾರ ದೃಷ್ಟಿಗೆ ಇದೊಂದು ಉತ್ತಮ ನಿದರ್ಶನ. ಸಾಮಾಜಿಕ ಜೀವನದಲ್ಲಿ ಹಿಂದೂಗಳಿಗೆ ಇರುವಷ್ಟೇ ಮಾನ್ಯತೆಯನ್ನು ಕ್ರಿಶ್ಚಿಯನ್ನರಿಗೂ ಒದಗಿಸಿಕೊಡಲಾಗಿತ್ತು. ಮಹೋದಯಪುರದ ವೀರರಾಘವ ಚಕ್ರವರ್ತಿಯು ಕ್ರಿ.ಶ. ೧೨೨೫ರಲ್ಲಿ ಬರೆಸಿದ ತಾಮ್ರ ಶಾಸನ ಇನ್ನೊಂದು ಪ್ರಮುಖ ಚಾರಿತ್ರಿಕ ದಾಖಲೆಯಾಗಿದೆ. ಇರವಿಕೋರ್ತನನ್ ಎಂಬ ಕ್ರಿಶ್ಚಿಯನ್ ವ್ಯಾಪಾರಿಗೆ ಮಣಿಗ್ರಾಮದ ಅಧಿಪತ್ಯ ಮತ್ತಿತರ ಸೌಕರ್ಯಗಳನ್ನು ಒದಗಿಸಿಕೊಟ್ಟ ಬಗೆಗಿನ ದಾಖಲೆ ಇದು.

ಕ್ರೈಸ್ತಮತ ಕೇರಳದಲ್ಲಿ ಅತ್ಯಂತ ಶೀಘ್ರ ಗತಿಯಲ್ಲಿ ಪ್ರಚಾರಕ್ಕೆ ಬಂತು. ಚರ್ಚ್ ಕೇರಳದ ಸಾಮಾಜಿಕ ಜೀವನದಲ್ಲಿ ಪ್ರಬಲವಾದ ಒಂದು ಸಂಸ್ಥೆಯೂ ಆಯಿತು. ಚರ್ಚ್‌ನ ಆಚಾರಗಳಲ್ಲಿ, ಸಂಪ್ರದಾಯಗಳಲ್ಲಿ ಕೇರಳ ಸಂಸ್ಕೃತಿಯ ಪ್ರಭಾವ ಹಲವು ರೀತಿಯಲ್ಲಿ ಕಾಣಿಸಿಕೊಂಡಿತು. ಆರಂಭ ಕಾಲದ ಕ್ರಿಶ್ಚಿಯನರನ್ನು ಸಿರಿಯನ್ ಕ್ರಿಶ್ಚಿಯನ್‌ಗಳು ಎಂದೇ ಕರೆಯಲಾಗುತಿತ್ತು. ಅದಕ್ಕೆ ಕಾರಣ ಅವರು ಮತಾಚಾರಗಳಲ್ಲಿ ಸಿರಿಯನ್ ಭಾಷೆಯನ್ನು ಬಳಸಿದುದೇ ಆಗಿತ್ತು. ಯೇಸುಕ್ರಿಸ್ತನ ಭಾಷೆಯಾದ ಆರಮೈಕ್ ಭಾಷೆಯ ಒಂದು ಪ್ರಾದೇಶಿಕ ಪ್ರಭೇದವೇ ಸಿರಿಯನ್ ಭಾಷೆ. ಪರ್ಶಿಯಾದ ಕ್ರೈಸ್ತ ಕೇಂದ್ರವು ಇದೇ ಭಾಷೆಯನ್ನು ಬಳಸುತ್ತಿತ್ತು. ಆ ಪರ್ಶಿಯನ್ ಕೇಂದ್ರದೊಡನೆ ಕ್ರಿ.ಶ. ೬ ರಿಂದ ೧೬ನೆಯ ಶತಮಾನದ ವರೆಗೆ ಕೇರಳದ ಕ್ರಿಶ್ಚಿಯನರು ಸಂಪರ್ಕ ಹೊಂದಿದ್ದರು. ಪರಿಣಾಮವಾಗಿ ಕೇರಳದ ಕ್ರಿಶ್ಚಿಯನರಲ್ಲೂ ಹಾಗೂ ಅವರ ಚರ್ಚ್‌ಗಳಲ್ಲಿ ಸಿರಿಯನ್ ಭಾಷೆ ಪ್ರಚಾರಕ್ಕೆ ಬಂತು. ತುಂಬಾ ಸಮಯದ ಬಳಿಕ ಸಿರಿಯನ್ ಭಾಷೆಯ ಜೊತೆಗೆ ಲ್ಯಾಟಿನ್ ಭಾಷೆಯನ್ನೂ ಉಪಯೋಗಿಸತೊಡಗಿದರು. ಮಧ್ಯಕಾಲೀನ ಸಂದರ್ಭದಲ್ಲಿ ಕೊಲ್ಲಂಗೆ ಬಂದ ಮಿಷನರಿಗಳು ಮೊತ್ತ ಮೊದಲಿಗೆ ಕೇರಳದಲ್ಲಿ ಲ್ಯಾಟಿನ್ ಭಾಷೆಯನ್ನು ಪ್ರಚಾರ ಮಾಡಿದರು. ೧೪೯೮ರಲ್ಲಿ ಪೋರ್ಚುಗೀಸರು ಬಂದು ರಾಜಕೀಯವಾಗಿ ನೆಲೆಯೂರಿದಾಗ ಲ್ಯಾಟಿನ್ ಭಾಷೆಯೂ ಪ್ರಾಮುಖ್ಯ ಪಡೆಯಿತು. ಆ ಬಳಿಕವೇ ಕೇರಳೆಲ್ಲೆಡೆ ಲ್ಯಾಟಿನ್ ಕ್ಯಾಥೋಲಿಕರ ಸಂಖ್ಯೆ ಹೆಚ್ಚುತ್ತಾ ಬಂತು. ಕರಾವಳಿ ಪ್ರದೇಶಗಳಲ್ಲಿ ಅವರ ಸಂಖ್ಯೆ ಅಧಿಕವಿದೆ. ಲ್ಯಾಟಿನ್ ಕ್ಯಾಥೋಲಿಕರೆಂದರೆ ಪೋಪ್‌ನ ಧಾರ್ಮಿಕ ನೇತೃತ್ವವನ್ನು ಒಪ್ಪಿಕೊಂಡವರು.

೧೭ನೆಯ ಶತಮಾನದ ಮಧ್ಯಭಾಗದಲ್ಲಿ ಕೇರಳದಲ್ಲಿ ಪೋರ್ಚ್‌ಗೀಸರ ಶಕ್ತಿ ಕ್ಷಯಿಸ ತೊಡಗಿತು. ಅವರ ಜಾಗದಲ್ಲಿ ಡಚ್ಚರು ಕಾಣಿಸಿಕೊಂಡರು. ಪೋಪ್‌ನ ಧಾರ್ಮಿಕ ನೇತೃತ್ವವನ್ನು ಒಪ್ಪಿಕೊಂಡಿದ್ದವರಲ್ಲಿ ಒಂದು ಗುಂಪು ಅದನ್ನು ತೊರೆದು ಸ್ಥಳೀಯ ಧಾರ್ಮಿಕ ನೇತೃತ್ವದಲ್ಲಿ ಸ್ವತಂತ್ರವಾಯಿತು. ಅವರು ಅಂತ್ಯೋಖ್ಯಾದ ಯಾಕೋಬನಾದ ಪಾಟ್ರಿ ಯರ್‌ಕೀಸನ ಅಂಗೀಕಾರ ಪಡೆಯುವುದರೊಂದಿಗೆ ಕೇರಳದ ಕ್ರಿಶ್ಚಿಯನರಲ್ಲಿ ಹೊಸತೊಂದು ಶಾಖೆ ರೂಪು ಪಡೆಯಿತು. ಬ್ರಿಟಿಷರು ಅಧಿಪತ್ಯ ಸ್ಥಾಪಿಸಿದಾಗ ಲಂಡನಿನ ಚರ್ಚ್ ಮಿಷನ್ ಸೊಸೈಟಿ ಕೇರಳದಲ್ಲಿ ಕಾರ್ಯ ಪ್ರವೃತ್ತವಾಗಿತ್ತು. ಆರಂಭ ಕಾಲದಲ್ಲಿ ಸಿರಿಯನ್ ಚರ್ಚ್ ಮತ್ತು ಚರ್ಚ್ ಮಿಷನ್ ಸೊಸೈಟಿಯವರು ಒಂದಾಗಿ ಕಾರ್ಯೋನ್ಮುಖರಾಗಿದ್ದರು. ಕಾಲ ಕ್ರಮೇಣ ಅವರಲ್ಲಿ ಹೊಂದಾಣಿಕೆ ಬರಲಿಲ್ಲ. ಚರ್ಚ್ ಮಿಷನ್ ಸೊಸೈಟಿಯ ಚಟುವಟಿಕೆಯ ಪರಿಣಾಮವಾಗಿ ಆಂಗ್ಲ ಚರ್ಚ್ ರೂಪ ಪಡೆಯಿತು. ಹಿಂದೂ ಮತದ ಕೆಳವರ್ಗದ ಜನರನ್ನು ಕೇಂದ್ರೀಕರಿಸಿ ಚರ್ಚ್ ಮಿಷನ್ ಸೊಸೈಟಿ ಕಾರ್ಯ ಪ್ರವೃತ್ತವಾಗಿತ್ತು. ಚರ್ಚ್ ಮಿಷನ್ ಸೊಸೈಟಿಯ ಜನಪ್ರಿಯತೆಯನ್ನು ಮನಗಂಡ ಕೆಲವು ಜನ ಕ್ರಿಶ್ಚಿಯನ್ ಪಾದ್ರಿಗಳು ಆಮೂಲಾಗ್ರ ಬದಲಾವಣೆಗೆ ವಾದಿಸಿದರು. ಚರ್ಚುಗಳಲ್ಲಿ ಸಿರಿಯನ್‌ಗೆ ಬದಲಾಗಿ ಮಲಯಾಳಂ ಭಾಷೆಯನ್ನು ಉಪಯೋಗಿಸಬೇಕೆಂದು ಅವರು ಒತ್ತಾಯಿಸಿದರು. ಬದಲಾವಣೆ ಬಯಸಿದವರು ಮಾರಾ ಮಣ್ಣಿನ ಏಬ್ರಹಾಂ ವೇಲ್ಪ್ಪಾನ ನೇತೃತ್ವದಲ್ಲಿ ಮಾರ್ತೋಮಾ ಸಿರಿಯನ್ ಸಭೆಯನ್ನು ಹುಟ್ಟು ಹಾಕಿದರು. ಇದರಿಂದ ಯಾಕೋಬಾಯ ಸಿರಿಯಾನಿ ಸಭೆ ಹಾಗೂ ರೋಮನ್ ಕ್ಯಾಥೋಲಿಕ್ ಸಭೆಯಿಂದ ಭಿನ್ನವಾದ ಒಂದು ಹೊಸ ಕ್ರಿಶ್ಚಿಯನ್ ಶಾಖೆಯೊಂದು ಕೇರಳದಲ್ಲಿ ರೂಪುಗೊಂಡಿತು.

ಕ್ರಿ.ಶ. ಒಂದನೆಯ ಶತಮಾನದಲ್ಲಿ ಸೈಂಟ್ ಥೋಮಸ್ ಕೇರಳದಲ್ಲಿ ಸ್ಥಾಪಿಸಿದ ಕ್ರಿಶ್ಚಿಯನ್ ಮತವು ಮುಂದಿನ ಹತ್ತೊಂಬತ್ತು ಶತಮಾನಗಳಲ್ಲಿ ಹಲವು ಶಾಖೆಗಳಾಗಿ ಒಡೆಯಿತು. ಹಾಗಾಗಿ ಇಂದು ಐದು ಪ್ರಮುಖ ಕ್ರಿಶ್ಚಿಯನ್ ವಿಭಾಗಗಳು ಕೇರಳದಲ್ಲಿದೆ.

೧. ತೃಶ್ಯೂರ್ ಮತ್ತು ಎರ್ನಾಕುಳಂ ಪ್ರದೇಶದಲ್ಲಿರುವ ನೆಸ್ಟೋರಿಯನ್ ಸಭೆ. ತಿರುವನಂತಪುರಂನಲ್ಲೂ ಇದಕ್ಕೊಂದು ಶಾಖೆ ಇದೆ.

೨. ಕೇರಳದೆಲ್ಲೆಡೆ ವ್ಯಾಪಕವಾಗಿ ನೆಲೆಸಿರುವ ರೋಮನ್ ಕ್ಯಾಥೋಲಿಕ್ ವಿಭಾಗ. ಇವರು ಚರ್ಚ್ ವಿಧಿ-ವಿಧಾನಗಳಲ್ಲಿ ಸಿರಿಯನ್, ಲ್ಯಾಟಿನ್, ಮಲಯಾಳಂ ಮೊದಲಾದ ಭಾಷೆಗಳನ್ನು ಬಳಸುತ್ತಾರೆ.

೩. ಯಾಕ್ಕೊಬಾಯ್ ಸಿರಿಯನ್ ವಿಭಾಗ. ಇದಕ್ಕೆ ಆರ್ಥೋಡೊಕ್ಸ್ ಸಿರಿಯನ್ ವಿಭಾಗ ಎಂಬ ಹೆಸರೂ ಇದೆ.

೪. ಆಂಗ್ಲ ವಿಭಾಗ. ಇದು ಇಂದಿಗೂ ಚರ್ಚ್ ಆಫ್ ಸೌತ್ ಇಂಡಿಯಾದ ಭಾಗವೇ ಆಗಿದೆ.

೫. ಮಾರ್ತೋಮಾ ಸಿರಿಯನ್ ವಿಭಾಗ.

ಯಾಕೋಬಾಯ್ ಸಿರಿಯನ್ ವಿಭಾಗದಲ್ಲಿ ಒಡಕುಂಟಾಗಿ ಮತ್ತೆ ಎರಡು ಶಾಖೆಗಳು ರೂಪು ಪಡೆದಿವೆ. ಇವರಲ್ಲಿ ಒಂದು ಗುಂಪು ಕ್ಯಾಥೋಲಿಕ್ ಭಾವೆಯೊಡನೆ ಗುರುತಿಸಿಕೊಂಡರೆ ಮತ್ತೊಂದು ಗುಂಪು ಅಂತ್ಯೋಖ್ಯಾಯಿಯ ಪಾಟ್ರಿಯಾರ್‌ಕೀಸನ ನೇತೃತ್ವವನ್ನು ಒಪ್ಪಿ ಕೊಂಡವರು.

ಮಾರ್ತೋಮಾ ಸಭೆಯಲ್ಲಿ ಇತ್ತೀಚೆಗೆ ಉಂಟಾದ ಬಿರುಕಿನ ಪರಿಣಾಮವಾಗಿ ಸೈಂಟ್ ಥೋಮಸ್ ಇವಾಂಜಲಿಕಲ್ ಸಭೆ ಎಂಬೊಂದು ಹೊಸ ಗುಂಪೂ ಕಾಣಿಸಿಕೊಂಡಿದೆ.

ಇವೆಲ್ಲವುಗಳಿಗೆ ಹೊರತಾಗಿ ಸಾಲ್ವೇಷನ್ ಆರ್ಮಿ, ಲೂಥರನ್ ಮಿಷನ್, ಬ್ರದರ್ ಮಿಷನ್, ಬೈಬಲ್ ಫೈಡ್ ಮಿಷನ್, ದೈವ ಸಭೆ, ಸಾಬ್ಬತ್ ಮಿಷನ್, ಪೆಂತಿಕೋಸ್ಟ್ ಮೊದಲಾದ ಸಣ್ಣ ಪುಟ್ಟ ಸಭೆಗಳಿವೆ. ಇವೆಲ್ಲವುಗಳಿಗೆ ವಿದೇಶದ ಸಭೆಗಳಿಗೆ ಯಾವುದಾದ ರೊಂದು ರೀತಿಯಲ್ಲಿ ಸಂಬಂಧ ಇದ್ದೇ ಇದೆ.

ಕೇರಳದ ಕ್ರಿಶ್ಚಿಯನ್ ಮತಗಳ ವಿಕಾಸದ ಇತಿಹಾಸವನ್ನು ಗಮನಿಸಿದರೆ ವ್ಯಕ್ತವಾಗುವ ಮುಖ್ಯ ವಿಚಾರವೆಂದರೆ ಅದು ಎಲ್ಲಾ ಕಾಲದಲ್ಲಿಯೂ ಸ್ಥಳೀಯ ಅಥವಾ ವಿದೇಶ ಶಕ್ತಿಗಳಿಗೆ ಅಧೀನವಾಗಿಯೇ ನಡೆದುಕೊಂಡಿತ್ತು. ಯಥಾಸ್ಥಿತಿ ವಾದವನ್ನು ಹೇಳಲಾಗದ ಕ್ಯಾಥೋಲಿಕ್ ಸಭೆ ಇಂದಿಗೂ ಭಾರತೀಯತೆಯನ್ನು ಅಳವಡಿಸಿಕೊಂಡು ಹೊಸದೊದು ರೂಪ ಪಡೆಯುವ ಯತ್ನದಲ್ಲಿದೆ. ಈ ಶ್ರಮ ಅರ್ಥಪೂರ್ಣವೂ ಹೌದು. ಕ್ರಿಶ್ಚಿಯನರು ಹಿಂದೂಗಳನ್ನು ಉಡುಗೆ, ತೊಡುಗೆಗಳಲ್ಲಿ ಜೀವನ ವಿಧಾನಗಳಲ್ಲಿ ಅನುಸರಿಸುವ ಹಾಗೂ ಹೆಸರುಗಳನ್ನು ಇರಿಸಿಕೊಳ್ಳುವ ಪದ್ಧತಿಯನ್ನು ಭಾರತೀಯಗೊಳ್ಳುವುದರ ಭಾಗವಾಗಿಯೇ ಕಾಣಬೇಕು. ಕೇರಳದ ಕ್ರೈಸ್ತಮತ ಸಂಪೂರ್ಣವಾಗಿ ಕೇರಳದ ಜನ ಜೀವನದೊಂದಿಗೆ ಬೆರೆತು ಹೋಗಿದೆ. ಇತ್ತೀಚೆಗೆ ಪ್ರಕಟವಾದ ಪ್ರೊ. ಪಿ.ಸಿ. ದೇವಸ್ಯ ಅವರ ‘ಕ್ರೈಸ್ತ ಭಾಗವತ’ ಎಂಬ ಸಂಸ್ಕೃತ ಮಹಾಕಾವ್ಯ ಇದಕ್ಕೆ ಉತ್ತಮ ಉದಾಹರಣೆಯಾಗಬಹುದು. ಕ್ರಿಶ್ಚಿಯನ್ ಮತ್ತು ಹಿಂದೂ ಮತಗಳ ಸಮನ್ವಯದ ನೆಲೆಯಿಂದಲೇ ಪ್ರಸ್ತುತ ಕೃತಿಯನ್ನು ರಚಿಸಲಾಗಿದೆ.

ಯೆಹೂದಿ ಮತ

ಕ್ರಿ.ಶ. ಮೊದಲ ಶತಮಾನದಲ್ಲಿಯೇ ಕೇರಳದ ಕಡಲ ತೀರಪ್ರದೇಶಗಳಲ್ಲಿ ಯೆಹೂದ್ಯರು ನೆಲೆಸಿದ್ದರು. ಇಸ್ರೆಯೇಲ್ ಮತ್ತು ಕೇರಳದ ನಡುವೆ ನಡೆದ ವ್ಯಾಪಾರ ಸಂಬಂಧವೇ ಕೇರಳದಲ್ಲಿ ಯೆಹೂದ್ಯರು ನೆಲೆಯೂರಲು ಮುಖ್ಯ ಪ್ರೇರಣೆಯಾಯಿತು. ಮತ ಪೀಡನೆಯ ಕಾರಣದಿಂದ ರಕ್ಷಣೆ ಪಡೆಯುವ ಸಲುವಾಗಿ ಕ್ರಿ.ಶ. ೯೮ರಲ್ಲಿ ಸಾವಿರಾರು ಜನ ಯೆಹೂದ್ಯರು ಕೇರಳಕ್ಕೆ ಬಂದಿದ್ದರು ಎಂಬುದು ಕತೆ. ಅವರು ಮುಸಿರಿಸಿಗೆ ಬಂದು ಅಲ್ಲಿ ಮೊದಲ ನೆಲೆಯನ್ನು ಸ್ಥಾಪಿಸಿದರು. ಬಳಿಕ ಅವರು ಪರವೂರು, ಮಾಳ, ಪುಲ್ಲೂರು ಮೊದಲಾದ ಸ್ಥಳಗಳಿಗೆ ವ್ಯಾಪಿಸಿದರು. ಯುರೋಪಿನಲ್ಲಿ ಕ್ರೈಸ್ತ ಮತದ ಪ್ರಾಬಲ್ಯದಿಂದಾಗಿ ಯೆಹೂದ್ಯರ ದಮನ ಶಕ್ತಿ ಹೆಚ್ಚಿತು. ಅದರ ಪರಿಣಾಮವಾಗಿ ಅನೇಕ ಮಂದಿ ಯೆಹೂದ್ಯರು ಮತ್ತೆ ಕೇರಳಕ್ಕೆ ವಲಸೆ ಬಂದರು. ಕ್ರಿಶ್ಚಿಯನರಂತೆ ಯೆಹೂದ್ಯರು ಸಹ ವ್ಯಾಪಾರದಲ್ಲಿಯೇ ಗಮನ ಕೇಂದ್ರೀಕರಿಸಿದರು. ಅವರಿಗೆ ಸ್ಥಳೀಯ ರಾಜರುಗಳ ರಕ್ಷಣೆ, ಸಹಾಯ ಬೇಕಾದಂತೆ ಸಿಗುತ್ತಿತ್ತು. ಕ್ರಿ.ಶ. ೧೦೦೦ನೆಯ ವರ್ಷದಲ್ಲಿ ಭಾಸ್ಕರ ರವಿ ಬರೆಸಿದ ತಾಮ್ರ ಶಾಸನ ವೊಂದರಲ್ಲಿ ಜೋಸೆಫ್ ರಬ್ಬಾನ್ ಎಂಬ ಯೆಹೂದಿ ಗಣ್ಯನಿಗೆ ಒದಗಿಸಿಕೊಟ್ಟ ಸೌಕರ್ಯಗಳ ವಿವರಗಳಿವೆ. ಕೇರಳದ ಸ್ಥಳೀಯ ರಾಜರುಗಳು ಪರಮತ ಸಹಿಷ್ಣುತೆಗೆ ಈ ತಾಮ್ರ ಶಾಸನ ಇನ್ನೊಂದು ನಿದರ್ಶನ. ಪೋರ್ಚುಗೀಸರ ಆಗಮನದವರೆಗೆ ಕೇರಳದಲ್ಲಿ ಯೆಹೂದ್ಯರು ಪ್ರಬಲರಾಗಿದ್ದರು. ಪೋರ್ಚುಗೀಸರು ಬಂದು ಯೆಹೂದ್ಯರ ದಮನದಲ್ಲಿ ತೊಡಗಿದರು. ೧೫೬೫ರಲ್ಲಿ ಯೆಹೂದ್ಯರು ಕೊಡುಂಗಲ್ಲೂರಿನಿಂದ ಕೊಚ್ಚಿಗೆ ತಮ್ಮ ನೆಲೆಯನ್ನು ಸ್ಥಳಾಂತರಿಸಿದರು. ೧೫೬೭ರಲ್ಲಿ ಅವರು ಕೊಚ್ಚಿಯಲ್ಲಿ ಜೂಡ ಚರ್ಚ್ ಸ್ಥಾಪಿಸಿದರು. ಮಧ್ಯ ಕೇರಳದಲ್ಲಿ ನೆಲೆಸಿದ್ದ ಯೆಹೂದ್ಯರು ಕೇರಳದ ಸಾಮಾಜಿಕ ಜೀವನದಲ್ಲಿ ಗಮನಾರ್ಹವಾದ ಸ್ಥಾನವನ್ನು ಪಡೆದಿದ್ದರು. ೧೯೪೧ ಮೇ ತಿಂಗಳಲ್ಲಿ ಯೆಹೂದ್ಯರು ಅವರ ಸ್ವದೇಶವಾದ ಇಸ್ರೇಲನ್ನು ಸ್ಥಾಪಿಸಿದ್ದರಿಂದ ಕೇರಳದಲ್ಲಿದ್ದ ಅರ್ಧದಷ್ಟು ಯೆಹೂದ್ಯರು ಅಲ್ಲಿಗೆ ವಲಸೆ ಹೋದರು. ಈಗ ಕೇರಳದಲ್ಲಿ ಕೇವಲ ಬೆರಳೆಣಿಕೆಯ ಕುಟುಂಬಗಳು ಮಾತ್ರ ಇವೆ.

ಇಸ್ಲಾಂ

ಕ್ರೈಸ್ತ ಯೆಹೂದ್ಯ ಮತಗಳಂತೆ ಇಸ್ಲಾಂ ಕೂಡಾ ಆರಂಭ ಕಾಲದಲ್ಲಿಯೇ ಕೇರಳಕ್ಕೆ ಬಂತು. ಅರಬರು ಮತ್ತು ಕೇರಳೀಯರ ನಡುವಿನ ವ್ಯಾಪಾರ ಸಂಬಂಧವೇ ಇದಕ್ಕೆ ಮುಖ್ಯ ಕಾರಣ. ಅರಬ್ ವ್ಯಾಪಾರಿಗಳು ಕ್ರಿ.ಶ. ಎಂಟನೆಯ ಶತಮಾನದಲ್ಲಿ ಮುಸಿರಿಸ್‌ಗೆ ಇಸ್ಲಾಂನ್ನು ಮೊದಲ ಬಾರಿಗೆ ತಂದರು. ಮುಸಿರಿಸ್‌ನಲ್ಲಿಯೇ ಮೊದಲ ಮಸೀದಿಯು ಸ್ಥಾಪಿತವಾಯಿತು. ನಾಡ ದೊರೆಗಳ ಆಶ್ರಯದಲ್ಲಿಯೇ ಇಸ್ಲಾಂ ಬೆಳೆಯಿತು. ಚೇರರ ಕೊನೆಯ ರಾಜನಾದ ಚೇರಮಾನ್ ಪೆರುಮಾಳ್ ಇಸ್ಲಾಂ ಧರ್ಮವನ್ನು ಸೇರಿದ್ದಲ್ಲದೆ ಮಕ್ಕವನ್ನು ಸಂದರ್ಶಿಸಿದ ನೆಂಬುದು ಕತೆ. ಇದಕ್ಕೆ ಚರಿತ್ರೆಯಲ್ಲಿ ಖಚಿತ ದಾಖಲೆಗಳು ಇಲ್ಲದೆ ಹೋದರೂ, ಕೇರಳದಲ್ಲಿ ಇಸ್ಲಾಂ ಮತ ಪ್ರಾಬಲ್ಯ ಪಡೆದಿತ್ತು ಎಂಬುದನ್ನು ಇದರಿಂದ ತಿಳಿಯಬಹುದು. ಇಸ್ಲಾಂನ ಬೆಳವಣಿಗೆಯೂ ಕ್ಷಿಪ್ರ ಗತಿಯಲ್ಲಿ ಆಗಿದೆ. ಹಿಂದೂಗಳನ್ನು ಬಿಟ್ಟರೆ ಮುಸಲ್ಮಾನರೇ ಕೇರಳದ ಪ್ರಮುಖ ಜನಶಕ್ತಿ.

ಸಾಮೂದಿರಿಗಳು ಮುಸಲ್ಮಾನರಿಗೆ ಮಾಡಿದ ಸಹಾಯದಿಂದ ಉತ್ತರ ಕೇರಳದಲ್ಲಿ ಮುಸಲ್ಮಾನರು ಪ್ರಬಲರಾದರು. ಕೋಝಿಕೋಡಿನ ಕುಟ್ಟಿಚ್ಚರ ಮುಚ್ಚುಂದಿ ಮಸೀದಿಯ ಶಿಲಾಶಾಸನ (ಹದಿಮೂರನೆಯ ಶತಮಾನ)ದಲ್ಲಿ ಮಸೀದಿ ಕಟ್ಟುವುದಕ್ಕಾಗಿ ಸಾಮೂದಿರಿಯು ಭೂಮಿ ದಾನ ನೀಡಿದ ಬಗೆಗೆ ‘ವಟ್ಟೆೞುತ್ತು’ ಲಿಪಿಯಲ್ಲಿ ದ್ವಿಭಾಷೆಯಲ್ಲಿ ಬರೆಯಲಾಗಿದೆ. ಕುಞಾಲಿ ಮರಕ್ಕಾರನು ಸಾಮೂದಿರಿಯ ನೌಕಾ ಪಡೆಯ ಕ್ಯಾಪ್ಟನ್ ಆಗಿದ್ದ. ಪೋರ್ಚ್‌ಗೀಸರ ಅಧಿಪತ್ಯದ ವಿರುದ್ಧ ಹೋರಾಡಿ ಚರಿತ್ರೆಯಲ್ಲಿ ಶಾಶ್ವತವಾದ ಸ್ಥಾನವನ್ನು ಉಳಿಸಿಕೊಂಡವನು ಈತ. ಸಾಮೂದಿರಿಗೆ ಮುಸಲ್ಮಾನರ ನೆರವು ಅಪೇಕ್ಷಣೀಯವಾಗಿತ್ತು ಎಂಬುದು ಇನ್ನೊಂದು ಘಟನೆಯಿಂದ ತಿಳಿಯುತ್ತದೆ. ಸಾಮೂದಿರಿಗಳ ನೌಕಾ ಪಡೆಯ ಅಗತ್ಯಕ್ಕೆ ಬೇಕಾದಷ್ಟು ಮುಸಲ್ಮಾನರು ಇರಬೇಕೆಂದು ಬಗೆದು ಸ್ಥಳೀಯ ಹಿಂದೂಗಳಾದ ಮುಕ್ಕವ (ಮೀನುಗಾರರು) ಜನಾಂಗದ ಮನೆಯೊಂದರಿಂದ ಕನಿಷ್ಠ ಒಬ್ಬನಾದರೂ ಇಸ್ಲಾಂ ಧರ್ಮಕ್ಕೆ ಮತಾಂತರ ಗೊಳ್ಳಬೇಕು ಎಂಬ ಶಾಸನವನ್ನು ಹೊರಡಿಸಿದ್ದ (ಶ್ರೀಧರ ಮೆಮೋನ್, ೧೯೯೬: ೨೬). ಸಾಮೂದಿರಿಯ ಪರಮತ ಸಹಿಷ್ಣುತೆಯ ಒಂದು ದೃಷ್ಟಾಂತವಿದು. ಕೋಝಿಕೋಡ್, ಮಲಪ್ಪುರ ಜಿಲ್ಲೆಗಳಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಲು ಇದೂ ಒಂದು ಕಾರಣ.

ಮತೀಯ ಸಹಿಷ್ಣುತೆ

ಕೇರಳದ ಮತಗಳ ಕುರಿತಾದ ಈ ಎಲ್ಲಾ ವಿಷಯಗಳು ಒಂದು ಮುಖ್ಯ ವಸ್ತು ಸ್ಥಿತಿಯನ್ನು ಹೊರಗೆಡಹುತ್ತವೆ. ಕೇರಳದ ಮತೀಯ ವಾತಾವರಣ ಎಲ್ಲಾ ಕಾಲದಲ್ಲಿಯೂ ಸಹಿಷ್ಣುತೆ ಹಾಗೂ ಸಮನ್ವಯದಿಂದ ಕೂಡಿತ್ತು. ಹಿಂದೂ ಮತದ ಒಳಗಡೆಯೆ ಅನೇಕ ವಿಭಾಗಗಳಿದ್ದು, ಹಿಂದೂಯೇತರ ಅನೇಕ ಮತಗಳು ಬಂದು ನೆಲೆಸಿಯೂ ಅಲ್ಲಿನ ಸಮಾಜದಲ್ಲಿ ಮತೀಯ ಕಾರಣಗಳಿಗಾಗಿ ಸ್ಪರ್ಧೆಯೋ, ಸಂಘರ್ಷವೋ ನಡೆದ ಉದಾಹರಣೆಗಳಿಲ್ಲ. ಶೈವ, ವೈಷ್ಣವ ಪಂಥಗಳು ಪರಸ್ಪರ ಸೌಹಾರ್ದ ಭಾವನೆಯಿಂದ ಬದುಕಿದ್ದವು. ಬೌದ್ಧ ಮತ, ಜೈನಮತ, ಕ್ರೈಸ್ತ ಮತ ಇವುಗಳೊಡನೆ ಹಿಂದೂ ಮತ ಎಲ್ಲಾ ಕಾಲದಲ್ಲಿಯೂ ಸೌಹಾರ್ದಯುತವಾದ ಸಂಬಂಧವನ್ನೇ ಹೊಂದಿತ್ತು. ಸಮಾಜದಲ್ಲಿ ಹಿಂದೂ ಮತಕ್ಕೆ ಇದ್ದ ಉನ್ನತವಾದ ಸ್ಥಾನ ದಿಂದಾಗಿ ಉಳಿದ ಮತಗಳ ಬಗೆಗೆ ಅದು ತುಚ್ಛ ಭಾವನೆಯಿಂದ ನೋಡಲಿಲ್ಲ. ಕೇರಳದಲ್ಲಿ ಬೌದ್ಧರು, ಜೈನರು, ಕ್ರಿಶ್ಚಿಯನ್‌ರು, ಯೆಹೂದ್ಯರು, ಮುಸಲ್ಮಾನರು ಇವರೆಲ್ಲರ ಆರಾಧನಾ ಕೇಂದ್ರಗಳಿಗೆ ‘ಪಳ್ಳಿ’ ಎಂದೇ ಹೆಸರು. ಇಲ್ಲಿ ಎಂದೂ ಮತದ ಹೆಸರಲ್ಲಿ ಘರ್ಷಣೆ ನಡೆದಿರುವುದಿಲ್ಲ. ಕ್ರಿ.ಶ. ಹನ್ನೊಂದನೆಯ ಶತಮಾನದಲ್ಲಿ ರಚಿತವಾದ ‘ಮೂಷಕ ವಂಶ’ ಎಂಬ ಕಾವ್ಯದಲ್ಲಿ ರಾಜರ್ಷಿಗಳ ಆಶ್ರಮಗಳಲ್ಲಿ ಪ್ರಾಣಿಗಳು ಪರಸ್ಪರ ವೈರವನ್ನು ತೊರೆದು ಹೇಗೆ ಅನ್ಯೋನ್ಯವಾಗಿ ಜೀವಿಸುತ್ತಿದ್ದವೋ ಹಾಗೆಯೇ ಉತ್ತರ ಕೇರಳದಲ್ಲಿ ಮೂಷಿಕ ವಂಶದವರ ಆಳ್ವಿಕೆಯ ಕಾಲದಲ್ಲಿಯೂ ವಿಭಿನ್ನ ಮತಗಳ ಜನರು ಅನ್ಯೋನ್ಯ ಸ್ನೇಹದಿಂದ ಬಾಳುತ್ತಿದ್ದರು ಎಂದು ವಿವರಿಸಲಾಗಿದೆ. ಮತೀಯವಾದ ಈ ಸೌಹಾರ್ದಯುತ ಒಳ ಗೊಳ್ಳುವಿಕೆಯು ಜೀವನದ ಇತರ ಕ್ಷೇತ್ರಗಳಾದ ಆಚಾರಗಳು, ಸಾಮಾಜಿಕ ಸಂಸ್ಥೆಗಳು, ಜಾತ್ರೆಗಳು, ಭಾಷೆ, ಸಾಹಿತ್ಯ, ಕಲೆ, ಸಂಗೀತ, ಚಿತ್ರ, ವಾಸ್ತುಶಿಲ್ಪ ಹೀಗೆ ಎಲ್ಲೆಡೆಯೂ ಇದೆ ಎಂಬುದು ವಾಸ್ತವ.

ಸಮಾಜ ಮತ್ತು ಆರ್ಥಿಕ ಸಂಬಂಧ

ಒಂದು ಜನ ಸಮೂಹದ ಸಂಸ್ಕೃತಿಯನ್ನು ಕುರಿತು ಅಧ್ಯಯನ ಮಾಡುವ ಸಂದರ್ಭದಲ್ಲಿ ಅವರ ಸಾಮಾಜಿಕ ಹಾಗೂ ಆರ್ಥಿಕ ನೆಲೆಗಳನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಕೇರಳದ ಭೌಗೋಳಿಕ ವೈಶಿಷ್ಟ್ಯಗಳು ಹಾಗೂ ವಿದೇಶಿ ಆಕ್ರಮಣಗಳಿಗೆ ತುತ್ತಾದ ರಾಜಕೀಯ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಕೇರಳೀಯರಿಗೆ ಅವರದ್ದೇ ಆದ ಒಂದು ಜೀವನ ವಿಧಾನದಲ್ಲಿ ಅನನ್ಯತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಅವಿಭಕ್ತ ಕುಟುಂಬ ವ್ಯವಸ್ಥೆ, ಬಹುಪತ್ನಿತ್ವ, ಮರುಮಕ್ಕತ್ತಾಯ ಮೊದಲಾದ ಸಂಪ್ರದಾಯಗಳು ಇಲ್ಲಿ ರೂಪು ಪಡೆದವು. ಜಾತಿ ವ್ಯವಸ್ಥೆಯು ಆರ್ಯರ ಆಗಮನದ ತರುವಾಯ ಇಲ್ಲಿ ರೂಪುಗೊಂಡಿತು. ಜಮ್ಮಿ ಸಂಪ್ರದಾಯ (ಜಮಿನ್ದಾರಿ ಪದ್ಧತಿ) ಇಲ್ಲಿ ನೆಲೆಗೊಂಡಿರುವುದು ನಾಡದೊರೆಗಳ ಆಡಳಿತ ವ್ಯವಸ್ಥೆಯ ಪರಿಣಾಮವೇ ಆಗಿದೆ. ಈ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗಳನ್ನು ಹುಟ್ಟು ಹಾಕಿದ ಹಾಗೂ ಅವುಗಳ ಪ್ರಭಾವಗಳು ಆಧುನಿಕ ಕಾಲದವರೆಗೂ ಕ್ರಮೇಣ ಶಿಥಿಲಗೊಂಡುದು ಇಲ್ಲಿ ಗಮನಾರ್ಹವಾಗಿದೆ.

ಚಾರಿತ್ರಿಕ ಹಿನ್ನೆಲೆ

ಸಾಮಾಜಿಕ ಹಾಗೂ ಆರ್ಥಿಕ ಸ್ಥಾನಮಾನಗಳು ಹಾಗೂ ವ್ಯವಸ್ಥೆಗಳನ್ನು ಕುರಿತು ವಿವರಿಸುವಾಗ ಆವುಗಳ ಚಾರಿತ್ರಿಕ ಹಿನ್ನೆಲೆಗಳನ್ನು ಗಮನಿಸುವುದು ಅಗತ್ಯ. ಕ್ರಿ.ಶ. ಆರಂಭಕ್ಕೂ ಮೊದಲು ಸಂಘಂ ಕಾಲದಲ್ಲಿ ಕೇರಳದ ಜಾತಿ-ಉಪಜಾತಿಗಳನ್ನು ತಳಹದಿಯಾಗಿರಿಸಿ ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆ ಇದ್ದಿರಲಿಲ್ಲ. ನಂತರ ಜಾರಿಗೆ ಬಂದ ಜಮೀನ್ದಾರ ಗೇಣಿದಾರ ಸಂಬಂಧವೂ ಆ ಕಾಲದಲ್ಲಿ ಇರಲಿಲ್ಲ. ಕ್ರಿ.ಶ. ೮ನೆಯ ಶತಮಾನದ ವೇಳೆಗೆ ಆರ್ಯೀಕರಣದ ತರುವಾಯ ಸಮಾಜದಲ್ಲಿ ಬ್ರಾಹ್ಮಣ ಜಾತಿಯ ಅಧಿಪತ್ಯ ತಲೆದೋರಿತು. ಇದು ಚಾತುರ್ವರ್ಣ್ಯ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿತು. ೧೧ನೆಯ ಶತಮಾನದ ಚೇರ ಚೋಳ ಯುದ್ಧದ ಪ್ರಭಾವದಿಂದ ಜಾತಿ ವ್ಯವಸ್ಥೆ ಇನ್ನಷ್ಟು ಪ್ರಬಲವಾಯಿತು. ಸಮಾಜದ ಅತ್ಯಂತ ಪ್ರಬಲ ವರ್ಗವಾಗಿ ನಂಬೂದಿರಿ ಬ್ರಾಹ್ಮಣರು ರೂಪುಗೊಂಡರು. ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವಿಚಾರಗಳಲ್ಲೆಲ್ಲ ನಂಬೂದಿರಿ ವರ್ಗವೇ ನಿರ್ಣಾಯಕ ಶಕ್ತಿಯಾಯಿತು. ಅವರಲ್ಲಿ ಹಲವರು ಯುದ್ಧವಿದ್ಯೆಯನ್ನು ಅರಿತಿದ್ದರು. ಕಳರಿ ಸಂಪ್ರದಾಯ, ಜಮೀನ್ದಾರಿ ಪದ್ಧತಿ, ಮರುಮಕ್ಕತ್ತಾಯ ವ್ಯವಸ್ಥೆ, ಬಹುಪತ್ನಿತ್ವ ಮೊದಲಾದುವು ಪ್ರಬಲ ವಾದುವು.

ಉತ್ತರದ ಕಡೆಯಿಂದ ವೈದಿಕ ಬ್ರಾಹ್ಮಣರು ಮೆಲ್ಲ ಮೆಲ್ಲನೆ ಪ್ರವೇಶಿಸಿ ೮, ೯ನೆಯ ಶತಮಾನದ ವೇಳೆಗೆ ದೊಡ್ಡ ಪ್ರವಾಹದ ರೂಪದಲ್ಲಿ ಕೇರಳಕ್ಕೆ ಬಂದರು. ಕೇರಳದ ಸಮಾಜದಲ್ಲಿ ಅದುವರೆಗೆ ಕಸುಬನ್ನು ಆಧರಿಸಿದ ರೈತರು, ಕುರುಬರು, ಬೆಸ್ತರು ಇತ್ಯಾದಿ ಜನ ಸಮುದಾಯಗಳಿದ್ದರು. ವೈದಿಕ ಬ್ರಾಹ್ಮಣರು, ಚಾತುರ್ವರ್ಣ್ಯವನ್ನೇ ಪ್ರಬಲವಾಗಿ ನಂಬಿದ್ದರು. ಹೀಗೆ ಬಂದ ವೈದಿಕ ಬ್ರಾಹ್ಮಣರು ಕೇರಳದ ಸಮಾಜದಲ್ಲಿ ಅಲ್ಪಸಂಖ್ಯಾತರೇ ಆಗಿದ್ದರೂ ಅವರು ಪೌರೋಹಿತ್ಯ ಮೊದಲಾದ ಕೈಂಕರ್ಯವನ್ನು ಕೈವಶ ಮಾಡಿಕೊಂಡಿದ್ದ ರಿಂದ ಸಾಮಾಜಿಕವಾಗಿ ಹೊಸ ರೂಪವನ್ನು ಕೊಡುವುದು ಸಾಧ್ಯವಾಯಿತು. ಅವರು ತಮ್ಮ ಸ್ವಂತ ಪ್ರಯತ್ನದಿಂದ ಸಮಾಜದ ಉನ್ನತ ಸ್ತರವನ್ನೇರಿದರು. ಆಳುವ ಅರಸರು ಮತ್ತು ಸೇನಾಪತಿಗಳು ಉತ್ಸವಗಳನ್ನು ಆಚರಿಸುವಂತೆ ಪ್ರಚೋದಿಸಿದರು. ಪರಿಣಾಮವಾಗಿ ಅನೇಕರು ಕ್ಷತ್ರಿಯರಾಗಿ ಬದಲಾದರು.

ಚೇರ ಚಕ್ರಾಧಿಪತ್ಯದ ರಾಜಧಾನಿಯಾದ ಮಹೋದಯಪುರವು ೧೮೧೯ ರಲ್ಲಿ ಅವನತಿ ಹೊಂದಿತು. ಹತ್ತನೇ ಶತಮಾನದಲ್ಲಿ ಚೇರರಿಗೂ ಚೋಳರಿಗೂ ಸುಮಾರು ನೂರು ವರ್ಷಗಳ ಕಾಲವೇ ಯುದ್ಧ ನಡೆದಿತ್ತು. ಚೋಳರ ಆಕ್ರಮಣದಿಂದ ತತ್ತರಿಸಿದ ಚೇರರು ತಮ್ಮ ಸೈನ್ಯಗಳನ್ನು ಮತ್ತೆ ಸಜ್ಜುಗೊಳಿಸಲು ನಿರಂತರ ಶ್ರಮಿಸಿದರು. ಬಲಿದಾನಿಗಳೆಂದೇ ಹೆಸರಾದ ಯುದ್ಧವೀರ ಚಾವೇರರು೧ ಈ ಕಾಲದಲ್ಲಿ ಪ್ರಬಲವಾಗಿ ಮುಂಚೂಣಿಗೆ ಬಂದರು. ಈ ಸಂದರ್ಭದಲ್ಲಿಯೇ ‘ನಾಯರ್’ ಎಂಬ ಪದವು ಮೊದಲಿಗೆ ಗೋಚರಿಸಿತು. ಅದುವರೆಗೂ ಅದೊಂದು ಜಾತಿಸೂಚಕ ಪದವಾಗಿರಲಿಲ್ಲ. ಯುದ್ಧ ಶೌರ್ಯವನ್ನು ಅವರ ಸ್ಥಾನವನ್ನು ಸೂಚಿಸುವ ಪದ ‘ನಾಯರ್’. ಅವರು ಸೈನ್ಯಕ್ಕೆ ಸೇರಿ ಸೇವೆ ಸಲ್ಲಿಸಿದ್ದರಿಂದಾಗಿ ಈ ಪದ ಜಾತಿಸೂಚಕವಾಗಿ ರೂಢಿಗೆ ಬಂತು. ಸಾಮ್ರಾಜ್ಯದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಹೋರಾಡಬಲ್ಲ ಸಾಹಸಿಗಳಾದ ನಾಯರರು ಅರಮನೆಗಳಿಗೆ ಸಮೀಪವರ್ತಿಗಳಾದರು.

ಪರಿಣಾಮವಾಗಿ ನಾಯರರು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದರು. ಬ್ರಾಹ್ಮಣ ಮತ್ತು ಕ್ಷತ್ರಿಯ ಯುವಕರು ನಾಯರ್ ಹುಡುಗಿಯರನ್ನು ಮದುವೆಯಾಗುವುದಕ್ಕೆ ಅವಕಾಶವುಂಟಾಯಿತು.

ಚೇರ ರಾಜರ ವಂಶಾವಳಿಯು ಹಿಂದಿನಿಂದಲೇ ಪಿತೃ ಪ್ರಧಾನ್ಯವುಳ್ಳದ್ದಾಗಿತ್ತೆಂದು ತಿಳಿದು ಬರುತ್ತದೆ. ಬಹುಶಃ ಮಾತೃ ಪ್ರಧಾನ ವಂಶಗಳು ಮೊತ್ತ ಮೊದಲು ಜನ್ಮ ತಳೆದುದು ಚೇರರಿಗೂ ಚೋಳರಿಗೂ ನಡೆದ ಈ ಸಂಘರ್ಷದ ಕಾಲದಲ್ಲಾಗಿರಬೇಕು ಎಂಬುದು ವಿದ್ವಾಂಸರ ಅಭಿಪ್ರಾಯ. ವಲಸೆ ಬರುವ ಗುಂಪಿನಲ್ಲಿ ಹೆಂಗಸರ ಸಂಖ್ಯೆಗಿಂತ ಗಂಡಸರ ಸಂಖ್ಯೆ ಅಧಿಕವಾಗಿರುವಂತೆ ಕೇರಳಕ್ಕೆ ಬಂದ ವೈದಿಕ ಬ್ರಾಹ್ಮಣರ ವಿಚಾರದಲ್ಲಿಯೂ ಹೀಗೆಯೇ ಆಯಿತು. ನಂಬೂದಿರಿ ಬ್ರಾಹ್ಮಣರ ವಿಚಾರದಲ್ಲಿಯೂ ಹೀಗೆಯೇ ಆಗಿತ್ತು. ಹಾಗಾಗಿ ನಂಬೂದಿರಿ ಬ್ರಾಹ್ಮಣರ ಹಿರಿಯ ಮಗ ಸ್ವಜಾತಿಯ ಕನ್ಯೆಯನ್ನು ಮದುವೆಯಾಗುವ ಸಂಪ್ರದಾಯವಿತ್ತು. ಉಳಿದ ಮಕ್ಕಳು ನಾಯರ್ ಕನ್ಯೆಯರನ್ನು ಅಥವಾ ಕ್ಷತ್ರಿಯ ಕನ್ಯೆಯನ್ನು ಮದುವೆಯಾಗುವ ಅವಕಾಶವನ್ನು ಕಲ್ಪಿಸಲಾಗಿತ್ತು. ಹೆಣ್ಣು ಮಕ್ಕಳಿಗೆ ಕುಟುಂಬದ ಆಸ್ತಿಯಲ್ಲಿ ಹಕ್ಕು ಲಭಿಸುತ್ತಿರಲಿಲ್ಲವಾದ್ದರಿಂದ ಆರ್ಥಿಕ ನೆಲೆಗಟ್ಟನ್ನು ಭದ್ರಗೊಳಿಸಲು ಮಾತೃ ಪ್ರಧಾನ ಹಕ್ಕನ್ನಾಗಿ ಪರಿವರ್ತಿಸಿ ವಿಧಿಸಿರಬೇಕು. ಚೋಳರೊಡನೆ ನಡೆದ ಯುದ್ಧದಲ್ಲಿ ಅಧಿಕ ಸಂಖ್ಯೆ ಯಲ್ಲಿ ನಾಯರ್ ಯೋಧರು ಮರಣವನ್ನಪ್ಪಿದರು. ಹಾಗಾಗಿ ಬ್ರಾಹ್ಮಣರನ್ನು ಮದುವೆ ಯಾಗಿದ್ದ ಅಧಿಕ ಸಂಖ್ಯೆಯ ಸ್ತ್ರೀಯರಿಗೆ ಮಾತೃ ಯಜಮಾನ್ಯವುಳ್ಳ ಸಮಾಜ ವ್ಯವಸ್ಥೆಯನ್ನು ವ್ಯಾಪಕಗೊಳಿಸಲು ಅನುಕೂಲವೇ ಆಯಿತು.

ಪೌರೋಹಿತ್ಯದ ಅಧಿಕಾರವನ್ನು ಪಡೆದುಕೊಂಡಿದ್ದು, ಅರಮನೆಗಳವರೊಡನೆ ಸಂಬಂಧ ಬೆಳೆಸುವುದರ ಮೂಲಕ ಪರೋಕ್ಷವಾಗಿ ರಾಜ್ಯಾಡಳಿತದ ಸೂತ್ರವನ್ನು ವಹಿಸಿಕೊಂಡರು. ಸ್ತ್ರೀಯರ ಮೂಲಕ ಭೂಮಿಯ ಯಜಮಾನ್ಯವನ್ನು ಪಡೆದು ಆರ್ಥಿಕ ಮಟ್ಟವನ್ನು ಅತ್ಯುನ್ನತಿಗೆ ಏರಿಸಿಕೊಂಡರು. ಇವೆಲ್ಲವುಗಳ ಪರಿಣಾಮವಾಗಿ ನಂಬೂದಿರಿ ಬ್ರಾಹ್ಮಣರು ಕೇರಳದ ಸಾಮಾಜಿಕ ಜೀವನದಲ್ಲಿ ಉನ್ನತ ಸ್ತರವನ್ನೇರಿದರು. ನಾಯರರು ನಾಡಿನ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡು ದೇಶ ಸಂರಕ್ಷಕರಾಗಿ ಸಾಮಾಜಿಕವಾಗಿ ಅತ್ಯುನ್ನತಿಗೇರಿದರು. ಕ್ರಿ.ಶ. ೧೧೦೦-೧೫೦೦ರ ಕಾಲಘಟ್ಟದಲ್ಲಿ ಕೇರಳದಲ್ಲಿ ಜಮೀನ್ದಾರರ ಹಾಗೂ ಗೇಣಿದಾರರ ವ್ಯವಸ್ಥೆ ಪ್ರಾಬಲ್ಯ ಪಡೆದು ಅದರ ದುಷ್ಪರಿಣಾಮಗಳೂ ಗೋಚರಿಸತೊಡಗಿದವು. ಸುಖಲೋಲುಪರಾದ ನಂಬೂದಿರಿ ಜನ ವರ್ಗದವರು ದೇವದಾಸಿ ಸಂಪ್ರದಾಯಕ್ಕೆ ನೀಡಿದ ಪ್ರಾಶಸ್ತ್ಯದಿಂದಾಗಿ ಸಮಾಜದ ಅಧಃಪತನಕ್ಕೂ ನಾಂದಿ ಹಾಡಿದ ಕಾಲಘಟ್ಟವಿದು. ಪ್ರಗತಿ ವಿರೋಧವಾದ ಅನೇಕ ಸಾಮಾಜಿಕ ಸಂಪ್ರದಾಯಗಳು, ಆಚರಣೆಗಳು ಚಾಲನೆಗೊಂಡ ಕಾಲಘಟ್ಟವೆಂದು ಇದನ್ನು ಗುರುತಿಸಲಾಗುತ್ತದೆ. ಈ ತೆರನ ಸಾಮಾಜಿಕ ದುರಾಚಾರಗಳು ೧೬-೧೭ನೆಯ ಶತಮಾನದ ಡಚ್-ಪೋರ್ಚ್‌ಗೀಸ್ ಬರಹಗಾರರನ್ನು ಆಕರ್ಷಿಸಿದುವು. ಪಾಶ್ಚಾತ್ಯ ಪ್ರಭಾವ ಹೆಚ್ಚಿದಂತೆಲ್ಲ ಪರಿವರ್ತನೆಯ ಗಾಳಿ ಎಲ್ಲೆಡೆ ಬೀಸತೊಡಗಿತು. ಇಂಗ್ಲಿಷ್ ಶಿಕ್ಷಣದ ಕಾರಣದಿಂದ ಸಾಮಾಜಿಕವಾಗಿ ಹೊಸ ಚಾಲನೆಗೆ ವೇಗ ಹೆಚ್ಚಿತು. ಇಪ್ಪತ್ತನೆಯ ಶತಮಾನದಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಆರ್ಥಿಕ ಸಮಾನತೆ, ಸಾಮಾಜಿಕ ಸ್ವಾತಂತ್ರ್ಯ ಇತ್ಯಾದಿಗಳಿಗೆ ಪ್ರಾಮುಖ್ಯ ನೀಡಿ ಹುಟ್ಟಿಕೊಂಡ ಅನೇಕ ಚಳುವಳಿಗಳು ಮೇಲೆ ಹೇಳಿದ ಸಾಮಾಜಿಕ ಸಂಪ್ರದಾಯಗಳಿಗೆ ದೊಡ್ಡ ಪ್ರಹಾರವನ್ನು ನೀಡಿದವು. ಕೇರಳದಲ್ಲಿ ಒಂದು ಹೊಸ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಹುಟ್ಟಿಹಾಕಲು ಇದು ದಾರಿ ಮಾಡಿಕೊಟ್ಟಿತು. ಈ ಹಿನ್ನೆಲೆಯಲ್ಲಿ ಆ ಹಳೆಯ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗಳ ಉಗಮ ಮತ್ತು ವಿಕಾಸಗಳನ್ನು ತಿಳಿಯಬೇಕಾಗಿದೆ.

ಮರುಮಕ್ಕತ್ತಾಯ ಸಂಪ್ರದಾಯ

ಕೇರಳದ ವಿಶಿಷ್ಟವಾದ ಒಂದು ದಾಯಕ್ರಮ ಮರುಮಕ್ಕತ್ತಾಯ ಸಂಪ್ರದಾಯ. ಈ ದಾಯಕ್ರಮ ಕೇರಳದಲ್ಲಿ ಪ್ರಾಚೀನ ಕಾಲದಲ್ಲಿ ಇದ್ದಿರಲಿಲ್ಲ ಎಂಬ ಅಭಿಪ್ರಾಯವೂ ಇದೆ. ಕೇರಳದಲ್ಲಿ ಮರುಮಕ್ಕತ್ತಾಯ ವ್ಯವಸ್ಥೆಯ ಅವಿರ್ಭಾವದ ಕುರಿತು ವಿದ್ವಾಂಸರು ಪ್ರಕಟಿಸಿದ ಅಭಿಪ್ರಾಯಗಳನ್ನು ಇಲ್ಲಿ ವಿಸ್ತರಿಸಬಹುದು.

ಮರುಮಕ್ಕತ್ತಾಯ ಸಂಪ್ರದಾಯದ ಅವಿರ್ಭಾವದ ಕುರಿತು ಪರಂಪರಾಗತವಾಗಿ ಉಳಿದುಕೊಂಡು ಬಂದ ವಿಚಾರವು ಬ್ರಾಹ್ಮಣರಿಗೆ ಸಂಬಂಧಿಸಿದ್ದಾಗಿದೆ. ಐತಿಹ್ಯವೊಂದರ ಪ್ರಕಾರ ಕೇರಳವನ್ನು ಸೃಷ್ಟಿಸಿದ ಪರುಶುರಾಮನ ಸಂಕಲ್ಪದಂತೆ ಮರುಮಕ್ಕತ್ತಾಯ ಪದ್ಧತಿ ಚಾಲ್ತಿಗೆ ಬಂದಿದೆ. ಶೂದ್ರ ಸ್ತ್ರೀಯರು ಪಾತಿವ್ರತ್ಯವನ್ನು ಹಾಗೂ ಎದೆ ಮರೆಸುವ ವಸ್ತ್ರವನ್ನು ತೊರೆಯಬೇಕೆಂದೂ ಬ್ರಾಹ್ಮಣರ ಕಾಮನೆಗಳನ್ನು ತೀರಿಸಿಕೊಡಬೇಕೆಂದೂ ಪರುಶುರಾಮನೇ ಆದೇಶಿಸಿದನಂತೆ. ಇದು ಮರುಮಕ್ಕತ್ತಾಯದ ಹುಟ್ಟಿಗೆ ಸಂಬಂಧಿಸಿದ ವಿಚಾರವೇನೂ ಅಲ್ಲ. ಹಿಂದೂ ಸಮುದಾಯದಲ್ಲಿ ತಮಗಿರುವ ಉನ್ನತ ಸ್ಥಾನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಾಗೂ ಶೂದ್ರ ಸ್ತ್ರೀಯರಲ್ಲಿ ಹುಟ್ಟಿದ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತು ಕೊಳ್ಳದೆಯೇ ನಾಯರ್ ಸ್ತ್ರೀಯರೊಡನೆ ದೈಹಿಕ ಸುಖವನ್ನು ಅನುಭವಿಸುವ ಹಕ್ಕು ತಮಗಿದೆ ಎಂಬುದನ್ನು ಪ್ರಚಾರ ಪಡಿಸುವುದಕ್ಕಾಗಿ ಬ್ರಾಹ್ಮಣರೇ ಸೃಷ್ಟಿಸಿದ ಕತೆಯಾಗಿರಬಹುದು ಇದು.

ಕುಟುಂಬದ ಹಿರಿಯ ಮಗ ಮಾತ್ರವೇ ಸ್ವಜಾತಿಯ ಕನ್ಯೆಯನ್ನು ವಿವಾಹವಾಗಬಹುದು ಎಂದು ನಂಬೂದಿರಿ ಪ್ರಚಾರ ಮಾಡಿದ ನಿಯಮ. ಕಿರಿಯ ಮಕ್ಕಳು ಜೀವನಪೂರ್ತಿ ಅವಿವಾಹಿತರಾಗಿಯೇ ಉಳಿಯಬಹುದು ಎಂಬ ನಿಯಮವನ್ನೂ ಹಾಕಿದ್ದರು. ಈ ಕಾರಣದಿಂದಾಗಿ ಅವಿವಾಹಿತರಾದ ನಂಬೂದಿರಿ ಯುವಕರು ತಮ್ಮ ಪರಿಸರದ ನಾಯರ್ ಮನೆಗಳಲ್ಲಿ ಸ್ತ್ರೀಯರ ಬೇಟೆಗೆ ತೊಡಗಿದರು. ಹೀಗೆ ‘ಸಂಬಂಧ’ ಎಂಬ ವ್ಯವಸ್ಥೆ ಜಾರಿಗೆ ಬಂತು. ‘ಸಂಬಂಧ’ ಎಂದರೆ ನಂಬೂದಿರಿ ಯುವಕರು ನಾಯರ್ ಕನ್ಯೆಯರೊಡನೆ ನಡೆಸುವ ಒಂದು ತೆರನ ಕೂಡಿಕೆ ವ್ಯವಸ್ಥೆ. ಒಬ್ಬ ನಂಬೂದಿರಿಯು ಅನೇಕ ನಾಯರ್ ಯುವತಿಯ ರೊಡನೆಯೂ ‘ಸಂಬಂಧ’ ಏರ್ಪಡಿಸಿಕೊಳ್ಳಬಹುದು. ಪಾಶ್ಚಾತ್ಯರಲ್ಲಿ ‘ಇಟ್ಟು ಕೊಳ್ಳುವ’ ಅಥವಾ ಕರ್ನಾಟಕದಲ್ಲಿ ಪ್ರಚಲಿತವಿರುವ ‘ಕೂಡಿಕೆ’ ಪದ್ಧತಿಯನ್ನು ಹೋಲುವ ಸಂಪ್ರದಾಯ ವಿದು. ಇಲ್ಲಿ ನಿಯಮವನ್ನು ರೂಪಿಸುವವರು, ನಿಯಂತ್ರಿಸುವವರು ನಂಬೂದಿರಿ ಬ್ರಾಹ್ಮಣರೇ ಆದ್ದರಿಂದ ಅವರು ತಮ್ಮ ಸುಖಲೋಲುಪತೆಗೆ ಅನುಗುಣವಾಗಿ ನಿಯಮಗಳನ್ನು ರೂಪಿಸಿಕೊಳ್ಳುತ್ತಿದ್ದರು. ಅವರ ಸುಖಾಸಕ್ತಿಗೆ ಅಡ್ಡಿಯಾದ ಸಂಬಂಧಗಳನ್ನು ನಿಷೇಧಿಸುವ ಹಾಗೆಯೇ ನಾಯರ್ ಕನ್ಯೆಯರ ವಿವಾಹಕ್ಕೆ ಅಡ್ಡಿಪಡಿಸುವ ಕೆಲಸಗಳನ್ನು ಮಾಡುತ್ತಿದ್ದರು. ಇವುಗಳನ್ನು ಮಾಡುವಾಗ ಪರಶುರಾಮನ ಆದೇಶದ ಮುದ್ರೆಯಿದೆ ಎಂಬ ಕಟ್ಟುಕತೆಯನ್ನು ಹೇಳಿ ಜನರನ್ನು ತಮಗೆ ಬೇಕಾದಂತೆ ಬಳಸುತ್ತಿದ್ದರು. ನಾಯರ್ ಸಮುದಾಯದ ಹಿರಿಯರೂ ಕೂಡಾ ಪರಶುರಾಮನ ಈ ಪವಿತ್ರ ಹಕ್ಕನ್ನು ಪ್ರಶ್ನಿಸುವ ಧೈರ್ಯ ಮಾಡಲಿಲ್ಲ. ಈ ಎಲ್ಲಾ ಕಾರಣದಿಂದಾಗಿ ‘ಸಂಬಂಧ’ ಏರ್ಪಡಿಸಲು ನಂಬೂದಿರಿಗಳಿಗೆ ಸಾರ್ವಜನಿಕ ಮುದ್ರೆಯೂ ದೊರೆಯಿತು.

ಆಸ್ತಿಗಳ ಯಜಮಾನ್ಯಕ್ಕೆ ಸಂಬಂಧಿಸಿದ ನಿಯಮಗಳಿಗೂ ಮರುಮಕ್ಕತ್ತಾಯ ಸಂಪ್ರದಾಯಕ್ಕೂ ಸಂಬಂಧ ಕಲ್ಪಿಸುವುದಿದೆ. ನಾಯರ್ ತರವಾಡುಗಳ (ಮನೆತನಗಳ) ಆಸ್ತಿ ಪಾಸ್ತಿಗಳು, ವಸ್ತು ಪರಿಕರಗಳು ನಾಶವಾಗದಂತೆ ಸಂರಕ್ಷಿಸಲು ಸೃಷ್ಟಿಸಿದ ವ್ಯವಸ್ಥೆಯೇ ಮರುಮಕ್ಕತ್ತಾಯ ಸಂಪ್ರದಾಯ ಎಂಬ ಇನ್ನೊಂದು ವಾದವೂ ಇದೆ. ನಾಯರ್ ಸ್ವಜಾತಿಯ ರೊಡನೆ ನಡೆದ ವಿವಾಹ ಹಾಗೂ ನಂಬೂದಿರಿಗಳೊಡನೆ ನಡೆದ ಸಂಬಂಧದ ಕಾರಣದಿಂದಾಗಿ ಕುಟುಂಬದ ಆಸ್ತಿಗಳನ್ನು ವಿಭಾಗಿಸುವುದರಿಂದ ಮನೆಗಳು ಶಿಥಿಲವಾಗಬಹುದೆಂದು ಭಯ ಪಟ್ಟುದರಿಂದ ಅದನ್ನು ತಡೆಯಲು ಮರುಮಕ್ಕತ್ತಾಯ ಸಂಪ್ರದಾಯವನ್ನು ಆಚರಣೆಗೆ ತಂದಿರಬಹುದು. ಕುಟುಂಬದ ಆಸ್ತಿಗಳನ್ನು ಪಾಲು ಮಾಡುವಂತಿಲ್ಲ ಎಂಬ ನಿಯಮವನ್ನು ಘೋಷಿಸಿದರು.

ಕೇರಳದಲ್ಲಿ ರೂಢಿಯಲ್ಲಿದ್ದ ಸೈನಿಕ ಪದ್ಧತಿಯ ಪರಿಣಾಮವೇ ಮರುಮಕ್ಕತ್ತಾಯ ಎಂಬ ಇನ್ನೊಂದು ವಾದವೂ ಇದೆ. ನಾಯರ್‌ರು ಮೊದಲೇ ಯುದ್ಧ ವೀರರು. ಯೋಧ ಜೀವನವನ್ನು ನಡೆಸುತ್ತಿದ್ದ ಇವರ ಗೃಹ ಕಲಹಗಳ ಕಾರಣ ಅನೇಕಾನೇಕ ಯುವಕರು ಸೈನ್ಯದೆಡೆಗೆ ಆಕರ್ಷಿತರಾದರು. ಪರಿಣಾಮವಾಗಿ ಕೌಟುಂಬಿಕವಾಗಿ ಜವಾಬ್ದಾರಿ ನಿರ್ವಹಣೆಯನ್ನು ಮಾಡಲಾಗದೆ ಗ್ರಹಸ್ಥ ಜೀವನವನ್ನು ನಡೆಸಲಾಗದ ಸ್ಥಿತಿ ನಿರ್ಮಾಣ ವಾಯಿತು. ಇದು ಮರುಮಕ್ಕತ್ತಾಯ ಸಂಪ್ರದಾಯಕ್ಕೆ ನಾಂದಿ ಹಾಡಿರಬಹುದು ಎಂಬ ವಾದವೂ ಇದೆ.

ಕ್ರಿ.ಶ. ೧೯೦೦ರಲ್ಲಿ ಟಿ.ಕೆ. ಗೋಪಾಲ ಪಣಿಕ್ಕರ್ ಅವರು ‘Malabar and Its Folk’ ಎಂಬ ಗ್ರಂಥದಲ್ಲಿ ನಾಯರ್ ಸಮುದಾಯದಲ್ಲಿ ಆಚರಣೆಯಲ್ಲಿದ್ದ ಬಹುಪತ್ನಿತ್ವ ಸಂಪ್ರದಾಯಕ್ಕೂ ಮರುಮಕ್ಕತ್ತಾಯ ಸಂಪ್ರದಾಯದ ಹುಟ್ಟಿಗೂ ಸಂಬಂಧ ಕಲ್ಪಿಸಿದ್ದಾರೆ. ಅವರ ವಾದದ ಪ್ರಕಾರ ನಾಯರ್ ಸಮುದಾಯದ ನಡುವೆ ಚಾಲ್ತಿಯಲ್ಲಿದ್ದ ಕ್ರಮ ರಹಿತ ಸ್ವತಂತ್ರ ಲೈಂಗಿಕ ಸಂಪ್ರದಾಯವು ಶತಮಾನಗಳ ತರುವಾಯ ಬಹುಪತ್ನಿತ್ವವಾಗಿ ಪರಿಣಮಿಸಿರಬೇಕು. ಈ ಎರಡೂ ಸಂಪ್ರದಾಯಗಳಲ್ಲೂ ಒಬ್ಬಾಕೆ ಸ್ತ್ರೀಯ ಮಕ್ಕಳು ಪಿತೃತ್ವವನ್ನು ಗಣಿಸಿದರೆ ಹಲವರ ಮಕ್ಕಳು. ತಾಯಿಯ ಪಕ್ಷದಿಂದ ನೋಡಿದರೆ ಒಬ್ಬಳಿಗೆ ಮಾತ್ರ ಸೇರಿದ ಸಂತಾನ. ಹಾಗಾಗಿ ಮಾತೃತ್ವ ಎನ್ನುವುದು ಅತಾರ್ಕಿಕ ವಿಷಯ. ಪಿತೃತ್ವ ಎನ್ನುವುದು ಅನುಮಾನಾಸ್ಪದ ಸಂಗತಿಯಾಗಿತ್ತು. ಇಂತಹ ಸನ್ನಿವೇಶದಲ್ಲಿ ಕುಟುಂಬದ ಆಸ್ತಿ ಮಕ್ಕಳದೋ, ಗಂಡಸರದ್ದೋ ಆಗಿರುವುದು ಸಾಧ್ಯವಿಲ್ಲ. ಹೆಣ್ಣು ಸಂತತಿಗೂ ಭಗಿನಿಯರಿಗೂ ಕುಟುಂಬದ ಆಸ್ತಿಯು ಸೇರಬೇಕಾದುದು ಸಹಜ. ಒಬ್ಬರ ಆಸ್ತಿಗೆ ಸಹೋದರಿ ಯರು ಸಹೋದರಿಯರ ಮಕ್ಕಳೂ ಹಕ್ಕುದಾರರಾಗುವುದು. ಹೆಂಡತಿಯೂ ಮಕ್ಕಳೂ ಹಕ್ಕುದಾರರಲ್ಲದಿರುವ ಒಂದು ಸಂಪ್ರದಾಯ ಪ್ರಚಾರಕ್ಕೆ ಬಂದಿರಬೇಕು. ಹೀಗೆ ಗೋಪಾಲ ಪಣಿಕ್ಕರ ಅಭಿಪ್ರಾಯದಂತೆ “ವಿವಾಹ ಸಂಪ್ರದಾಯದ ಆರಂಭದ ಸ್ಥಿತಿಯನ್ನು ಸೂಚಿಸುವ ಸ್ವತಂತ್ರ ಲೈಂಗಿಕ ಸಂಬಂಧಗಳಿಂದಲೂ ಮುಂದುವರಿದು ರೂಢಿಗೆ ಬಂದ ಬಹುಪತ್ನಿತ್ವ ಸಂಪ್ರದಾಯದಿಂದಲೂ ಮರುಮಕ್ಕತ್ತಾಯಿ ಪದ್ಧತಿಯ ನಿಜವಾದ ಆವಿರ್ಭಾವವಾಯಿತು”.

ಮೇಲಿನ ಎಲ್ಲಾ ವಾದಗಳೂ ಮರುಮಕ್ಕತ್ತಾಯ ಸಂಪ್ರದಾಯದ ಪ್ರಾಚೀನತೆಯನ್ನೇ ಆಧರಿಸಿ ಹುಟ್ಟಿಕೊಂಡಿವೆ. ಪ್ರಾಚೀನ ಕೇರಳವು ಮರುಮಕ್ಕತ್ತಾಯ ಮೂಲಕವೇ ಪರಿಚಿತ ವಾಗಿತ್ತು. ಚೇರ ರಾಜರುಗಳ ವಂಶವಾಹಿನಿ ಮರುಮಕ್ಕತ್ತಾಯನ್ನು ಅನುಸರಿಸಿಯೇ ಆಗಿತ್ತು ಎಂದು ಸಂಘಂ ಕೃತಿಗಳು ವ್ಯಕ್ತಪಡಿಸಿವೆ. ಚೇರ ರಾಜರು ತಂದೆಯ ಹೆಸರಿನೊಡನೆ ತಾಯಿಯ ಹೆಸರನ್ನು ತಮ್ಮ ಹೆಸರಿನೊಡನೆ ಸೇರಿಸಿ ಹೇಳುವುದು ಸಂಘಂ ಕಾಲದಲ್ಲಿಯೆ ಪ್ರಚಲಿತವಾಗಿದ್ದ ಮರುಮಕ್ಕತ್ತಾಯ ಸೂಚನೆಯೇ ಆಗಿದೆ. ಆದರೆ ಅಳಿಯ ಕಟ್ಟು ಆಗ ಪ್ರಚಲಿತದಲ್ಲಿತ್ತು ಎನ್ನುವುದಕ್ಕೆ ಬೇರೆ ಸ್ಪಷ್ಟ ಪುರಾವೆಗಳೇನೂ ದೊರೆಯುವುದಿಲ್ಲ. ಈ ವಿಷಯವನ್ನು ಕುರಿತು ಸಂಶೋಧನೆ ನಡೆಸಿದ ಕೆಲವು ವಿದ್ವಾಂಸರು ಮರುಮಕ್ಕತ್ತಾಯ ಪದ್ಧತಿ ಪ್ರಾಚೀನ ಕಾಲ ದಿಂದಲೇ ಪ್ರಚಲಿತದಲ್ಲಿತ್ತು ಎಂಬುದಕ್ಕೆ ಸಹಮತವನ್ನು ವ್ಯಕ್ತಪಡಿಸಿಲ್ಲ.

ಅವಿಭಕ್ತ ಕುಟುಂಬ

ಮೇಲೆ ಹೇಳಿದ ಸಂಪ್ರದಾಯಗಳ ಪ್ರಕಾರ ಮರುಮಕ್ಕತ್ತಾಯದ ಲಕ್ಷಣಗಳ ವ್ಯಾಪ್ತಿಯನ್ನು ಇಲ್ಲಿ ವಿವರಿಸಬಹುದು. ಸಹೋದರಿಯ ಮಕ್ಕಳಿಗೆ ಹಕ್ಕನ್ನು ಕೊಡುವುದು ಮರುಮಕ್ಕತ್ತಾಯ ಪದ್ಧತಿ. ಮಾತೃ ಮೂಲದ ಎಲ್ಲಾ ಹಕ್ಕುದಾರರು ಸೇರಿದ ಕೂಡು ಕುಟುಂಬವೇ ಮರುಮಕ್ಕತ್ತಾಯ ಸಂಪ್ರದಾಯದಲ್ಲಿರುವುದು. ತಾಯಿಯ ಸಂತತಿ ಹಾಗೂ ಪೌತ್ರಿಯರು, ಸಹೋದರಿ ಸಹೋದರರು, ಸಹೋದರಿಯ ಪಕ್ಷದ ಇತರರು ಒಂದೇ ಮನೆಯಲ್ಲಿ ಒಂದೇ ಅಡುಗೆ ಮನೆಯಲ್ಲಿ ಊಟ ಮಾಡಿ ಎಲ್ಲಾ ವಸ್ತುಗಳನ್ನು ಒಂದೇ ರೀತಿಯಲ್ಲಿ ಅನುಭವಿಸುವ ಹಕ್ಕುದಾರರು. ಮರುಮಕ್ಕತ್ತಾಯ ಕುಟುಂಬದ ಎಲ್ಲಾ ಸದಸ್ಯರಿಗೂ ಕುಟುಂಬದ ಆಸ್ತಿಯನ್ನು ಉಪಭೋಗಿಸಲು ಅವಕಾಶವಿದೆಯಾದರೂ ಕುಟುಂಬ ಆಸ್ತಿಯ ಪಾಲಿಗೆ ಹಕ್ಕುದಾರರಲ್ಲ. ಕುಟುಂಬದ ಆಸ್ತಿ ಪಾಲು ಮಾಡಬೇಕಾದರೆ ಎಲ್ಲಾ ಸದಸ್ಯರ ಸಮ್ಮತಿ ಬೇಕು.

ಅವಿಭಕ್ತ ಕುಟುಂಬದ ಪರವಾಗಿ ನಿಯಮ ಪ್ರಕಾರ ಆಸ್ತಿಯನ್ನು ಸ್ತ್ರೀಯರಲ್ಲಿ ನಿಕ್ಷೇಪವಾಗಿರಿಸಿದ್ದರೂ ಕುಟುಂಬದ ಆಡಳಿತಕ್ಕೆ ಅವರಿಗೆ ಸಾಮರ್ಥ್ಯವಿರಲಿಲ್ಲ. ಅದಕ್ಕಾಗಿ ಕುಟುಂಬದ ಆಡಳಿತದ ಜವಾಬ್ದಾರಿಯನ್ನು ಕುಟುಂಬದ ಕಾರಣವರಿಗೆ (ತಾಯಿಯ ಹಿರಿಯ ಸೋದರ) ವಹಿಸಿದರು. ಸೋದರಮಾವನ ಉಸ್ತುವಾರಿಯಲ್ಲಿ ಕುಟುಂಬದ ಆಡಳಿತ ನಡೆಯು ತ್ತಿತ್ತಾದರೂ ಹಕ್ಕುದಾರರಾದ ಸೋದರಿಯ ಮಕ್ಕಳು ಹಾಗೂ ಸಹೋದರರ ಅನುಮತಿ ಯಿಲ್ಲದೆ ಆಸ್ತಿಯ ಯಾವೊಂದು ವಸ್ತುವನ್ನು ಇತರರಿಗೆ ಹಸ್ತಾಂತರಿಸಲು ಸಾಧ್ಯವಿರಲಿಲ್ಲ. ತಮ್ಮಂದಿರಿಗೆ ಆಸ್ತಿಯಲ್ಲಿ ಹಕ್ಕಿಲ್ಲ. ಆದರೆ ಪ್ರಾಯವನ್ನನುಸರಿಸಿ ಅವರಿಗೂ ಕಾರಣವರ ಸ್ಥಾನ ಲಭಿಸುತ್ತದೆ. ಕಾರಣವರ್ ಆಸ್ತಿಯನ್ನು ದುರುಪಯೋಗಪಡಿಸುತ್ತಾರಾದರೆ ತಮ್ಮಂದಿರು ಅವನನ್ನು ನಿಯಮ ಪ್ರಕಾರ ಕಾರಣವರ ಸ್ಥಾನದಿಂದ ಪದಚ್ಯುತಿಗೊಳಿಸಬಹುದು.

ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಅನಾರೋಗ್ಯಕರವಾದ ಒಂದಂಶವೆಂದರೆ ಅತ್ತೆ (ಕಾರಣವರ ಪತ್ನಿ)ಯಂದಿರು. ಅವರಿಗೆ ಕುಟುಂಬದ ಆಸ್ತಿಯಲ್ಲಿ ಹಕ್ಕಿಲ್ಲ. ಆದರೂ ಕುಟುಂಬದ ವಿಷಯಗಳಲ್ಲಿ ಅವರು ಅತ್ಯಾಸಕ್ತಿ ತೋರುತಿದ್ದರು. ಇದು ಕಾರಣವರ ಸಹೋದರರಲ್ಲಿ ಅಸಮಾಧಾನವನ್ನು, ಅತ್ತೆಯನ್ನು ಸಂಶಯ ದೃಷ್ಟಿಯಿಂದ ನೋಡಲು ಕಾರಣವಾಯಿತು. ಕೌಟುಂಬಿಕ ಸಂಘರ್ಷಗಳಿಗೆ ಕಾರಣವಾದುದೂ ಇದುವೇ. ಅಲ್ಲದೆ ಕಾರಣವರು ತನ್ನ ನೇರ ತಂಗಿಯ ಹಾಗೂ ಅವರ ಮಕ್ಕಳೊಡನೆ ತೋರಿಸುವ ಪ್ರೀತಿಯೂ ಉಳಿದವರು ಕಾರಣವರನ್ನು ದ್ವೇಷದಿಂದ ನೋಡಲು ಕಾರಣವಾಯಿತು. ಈ ಎಲ್ಲಾ ಕಾರಣಗಳಿಂದ ಅವಿಭಕ್ತ ಕುಟುಂಬ ವ್ಯವಸ್ಥೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ಒದ್ದಾಡಹತ್ತಿತು. ಗೃಹ ಕಲಹಗಳಿಂದಾಗಿ ಅವಿಭಕ್ತ ಕುಟಂಬದ ಸಂತಸದ ಕ್ಷಣಗಳು ನಾಶವಾಗಿ ಕುಟುಂಬದ ಹಕ್ಕಿನ ವಿಷಯದಲ್ಲಿ ಮರುಮಕ್ಕತ್ತಾಯ ಸಂಪ್ರದಾಯವನ್ನು ನವೀಕರಿಸಬೇಕೆಂಬ ಅಗತ್ಯ ಕಾಣಿಸಿಕೊಂಡಿತು.

ಮರುಮಕ್ಕತ್ತಾಯ ಸಮುದಾಯಗಳು

ಕೇರಳದಲ್ಲಿ ಮರುಮಕ್ಕತ್ತಾಯ ಸಂಪ್ರದಾಯವನ್ನು ಆಚರಿಸುತ್ತಿರುವ ಪ್ರಮುಖ ಸಮುದಾಯಗಳನ್ನು ಪರಿಶೀಲಿಸಬಹುದು. ಕ್ಷತ್ರಿಯರು, ಅಂಬಲ ವಾಸಿಗಳು, (ದೇವಾಲಯ ಗಳಲ್ಲಿ ಸೇವಾವೃತ್ತಿ ಮಾಡುತ್ತಾ ಅಲ್ಲಿಯೇ ನೆಲೆಸಿರುವ ಜನವರ್ಗ), ನಾಯನ್ಮಾರರು, ಇವರಲ್ಲೆಲ್ಲ ಇತ್ತೀಚಿನ ದಿನಗಳವರೆಗೂ ಮರುಮಕ್ಕತ್ತಾಯ ಸಂಪ್ರದಾಯ ಪ್ರಚಲಿತದಲ್ಲಿತ್ತು. ತಿರುವಾಂಕೂರು ಹಾಗೂ ಕೊಚ್ಚಿ ರಾಜ ಮನೆತನದಲ್ಲಿ ರಾಜ್ಯಾವಕಾಶಕ್ಕಾಗಿ ಮರುಮಕ್ಕತ್ತಾಯ ಸಂಪ್ರದಾಯವನ್ನೇ ಅನುಸರಿಸಲಾಗುತಿತ್ತು. ಹಿರಿಯ ಅಳಿಯನಿಗೆ (ಸಹೋದರಿಯ ಮಗ) ಅಧಿಕಾರವನ್ನು ವಹಿಸಿಕೊಡುವುದು ಪದ್ಧತಿ. ಕಣ್ಣೂರಿನ ಪಯ್ಯನ್ನೂರು ಗ್ರಾಮದ ಹದಿನಾರು ಮನೆಗಳವರು ಮಾತ್ರ ಮರುಮಕ್ಕತ್ತಾಯ ಸಂಪ್ರದಾಯವನ್ನು ಸ್ವೀಕರಿಸಿದ್ದಾರೆ. ಕೇರಳದ ಹಾಗೂ ಹೊರಗಡೆ ನೆಲೆಸಿರುವ ಬ್ರಾಹ್ಮಣರು ಸ್ವೀಕರಿಸಿದ ಮಿತಾಕ್ಷರ ಸಂಪ್ರದಾಯಕ್ಕೂ ವಿರುದ್ಧವಾಗಿತ್ತದು. ಈಳವರಲ್ಲಿ ಮಕ್ಕತ್ತಾಯ ಹಾಗೂ ಮರುಮಕ್ಕತ್ತಾಯ ಪ್ರಚಲಿತದಲ್ಲಿದೆ. ಕಮ್ಮಾಳರು ಮಕ್ಕತ್ತಾಯವನ್ನು ಸ್ವೀಕರಿಸಿದ್ದರು. ದಲಿತರು ಹಾಗೂ ಗಿರಿಜನರಲ್ಲಿ ಒಂದು ವ್ಯವಸ್ಥಿತವಾದ ದಾಯಕ್ರಮ ಇದ್ದಿರಲಿಲ್ಲ. ಇವರಲ್ಲಿ ಎರಡೂ ಸಂಪ್ರದಾಯಗಳು ಚಾಲ್ತಿ ಯಲ್ಲಿದ್ದವು. ಕ್ರೈಸ್ತರು, ಮುಸಲ್ಮಾನರು ಮಕ್ಕಳಕಟ್ಟು ಸಂಪ್ರದಾಯವನ್ನು ಬೆಂಬಲಿಸಿದರು. ಆದರೂ ಮುಸಲ್ಮಾನರ ನಡುವೆ ಇದಕ್ಕೆ ಸ್ವಲ್ಪ ಬದಲಾವಣೆ ಇದೆ. ಕಣ್ಣೂರಿನ ಅರಯ್ಕಲ್ ರಾಜ ಮನೆತನವನ್ನು ಒಳಗೊಂಡಂತೆ ಮಲಬಾರಿನ ಮಾಪಿಳ್ಳೆಯರು ತಲಶ್ಶೇರಿಯ ಕೋಯಿ ಯರು ಮರುಮಕ್ಕತ್ತಾಯವನ್ನು ಅನುಸರಿಸಿದ್ದಾರೆ. ಮಯ್ಯನಾಡು, ಪರವೂರು ಮೊದಲಾದ ಪ್ರದೇಶಗಳ ಕೆಲವು ಮುಸಲ್ಮಾನ ಕುಟುಂಬಗಳಲ್ಲಿಯೂ ಮರುಮಕ್ಕತ್ತಾಯ ಸಂಪ್ರದಾಯ ವನ್ನು ಸ್ವೀಕರಿಸಿರುವುದನ್ನು ಕಾಣಬಹುದು. ಮರುಮಕ್ಕತ್ತಾಯ ವ್ಯವಸ್ಥೆ ಮುಸಲ್ಮಾನ ಸಮುದಾಯಕ್ಕೆ ವಿರುದ್ಧವಾಗಿದ್ದರೂ ಒಂದು ವೇಳೆ ವೈವಾಹಿಕ ಸಂಬಂಧದ ಮೂಲಕವೋ ಅಥವಾ ಬೇರೆ ರೀತಿಯಲ್ಲಿಯೋ ನಾಯರ್ ಸಮುದಾಯದೊಡನೆ ಸಂಪರ್ಕ ಏರ್ಪಟ್ಟ ಮುಸ್ಲಿಂ ಸಮುದಾಯದಲ್ಲಿ ಮರುಮಕ್ಕತ್ತಾಯವನ್ನು ಅನುಸರಿಸಿದ್ದಿರಬಹುದು.