ಕೆಲವು ಸಾಮಾಜಿಕ ಆಚರಣೆಗಳು

ಮರುಮಕ್ಕತ್ತಾಯ ಸಂಪ್ರದಾಯವನ್ನು ಅನುಸರಿಸಿ ಕೇರಳದಲ್ಲಿ ಕೆಲವು ವಿಶಿಷ್ಟ ಆಚರಣೆ ಗಳೂ ಪ್ರಚಲಿತದಲ್ಲಿವೆ. ಹಿಂದೆ ಕೆಲವು ಸಮುದಾಯಗಳಲ್ಲಿ ಬಹುಪತ್ನಿತ್ವ ಮತ್ತು ಏಕಪತ್ನಿತ್ವಗಳು ಆಚರಣೆಯಲ್ಲಿದ್ದವು. ಒಂದು ಕಾಲಘಟ್ಟದಲ್ಲಿ ನಂಬೂದಿರಿಯರು, ಕ್ಷತ್ರಿ ಯರು ಮತ್ತಿತರ ಉನ್ನತ ಜಾತಿಯವರು ನಾಯರ್ ಮೊದಲಾದ ಇತರ ಜಾತಿಗಳವರೊಡನೆ ಸಂಬಂಧ ಏರ್ಪಡಿಸತೊಡಗಿದ್ದರಿಂದ ಹೆಂಡತಿಯರನ್ನು ರಕ್ಷಿಸುವ ಹೊಣೆಯನ್ನು ಅವರು ಹೊತ್ತುಕೊಳ್ಳಬೇಕಾಗಿರಲಿಲ್ಲ. ನಾಯರ್, ಈಳವರು, ಕುರವರು, ಹೊಲೆಯರು ಮೊದಲಾದ ವರಲ್ಲಿ ಬಹುಪತ್ನಿತ್ವ ಅಸ್ತಿತ್ವದಲ್ಲಿತ್ತು. ಕ್ರೈಸ್ತರು ಏಕಪತ್ನಿತ್ವದಲ್ಲಿ ದೃಢವಾದ ನಂಬಿಕೆಯನ್ನಿರಿಸಿ ಕೊಂಡವರಾಗಿದ್ದರು.

ಕೇರಳದಲ್ಲಿ ನಾಯನ್ಮಾರರು, ಮತ್ತಿತರ ಜಾತಿಗಳಲ್ಲಿ ಬಹುಪತ್ನಿತ್ವ ಸಾಮಾನ್ಯವಾಗಿತ್ತು. ‘ಸಂಬಂಧ’ ವ್ಯವಸ್ಥೆಯು ಬಹುಪತ್ನಿತ್ವಕ್ಕೆ ಸಮಾನವಾಗಿದೆ. ಕ್ರಿ.ಶ. ೧೧ನೆಯ ಶತಮಾನದ ಚೇರ ಚೋಳ ಯುದ್ಧದಿಂದ ಉಂಟಾದ ಪರಿಸ್ಥಿತಿಯೇ ಬಹುಪತ್ನಿತ್ವಕ್ಕೆ ಕಾರಣವಾಯಿತು ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ನಾಯರ್ ಯುದ್ಧ ವೀರರು ಯುದ್ದದಲ್ಲಿ ಅಪಮೃತ್ಯವಿಗೆ ಒಳಗಾಗಿದ್ದರು. ಇದರಿಂದ ನಾಯರ್ ಸಮುದಾಯದಲ್ಲಿ ಪುರಷರ ಸಂಖ್ಯೆ ಕಡಿಮೆಯಾಯಿತು. ನಂಬೂದಿರಿ ಬ್ರಾಹ್ಮಣರಲ್ಲಿ ಹಿರಿಮಗ ಮಾತ್ರ ಸ್ವಜಾತಿ ಕನ್ಯೆಯನ್ನು ಮದುವೆಯಾಗಿ ಪೌರೋಹಿತ್ಯದ ಕಾರ್ಯವನ್ನು ಮುಂದುವರಿಸಬೇಕು ಎಂಬ ವ್ಯವಸ್ಥೆಯಿತ್ತು. ಮಿಕ್ಕುಳಿದವರು ನಾಯರ್ ಕನ್ಯೆಯರನ್ನು ಮದುವೆಯಾಗಬಹುದಿತ್ತು. ಇದೇ ಮುಂದುವರೆದು ಒಂದು ವ್ಯವಸ್ಥೆಯಾಗಿ ಬಹುಪತ್ನಿತ್ವ ಪದ್ಧತಿಗೆ ವ್ಯಾಪಕವಾದ ಪ್ರಚಾರವೂ ದೊರೆಯಿತು. ಮರುಮಕ್ಕತ್ತಾಯವನ್ನು ಒಪ್ಪಿಕೊಂಡ ಸಮುದಾಯಗಳ ನಡುವೆ ಪತಿ ಸಹೋದರರ ಪತಿತ್ವದ ಹೊರತಾಗಿಯೂ ಬಹುಪತಿತ್ವ ಜಾರಿಯಲ್ಲಿತ್ತು. ಮಲಬಾರಿನ ಕುರಿತು ಬರೆದ ಬರ್ಬೋಸಾ, ಕ್ಯಾಪ್ಟನ್ ನ್ಯೂ ಹೋಪ್ ಮೊದಲಾದ ಯುರೋಪಿಯನ್ ಪ್ರವಾಸಿಗಳು ಬಹುಪತಿತ್ವವನ್ನು ಕುರಿತು ಸೂಚಿಸಿದ ಮಾತುಗಳನ್ನು ಇಲ್ಲಿ ಉಲ್ಲೇಖಿಸ ಬಹುದು. “ಒಬ್ಬಾಕೆ ಸ್ತ್ರೀಗೆ ಎಷ್ಟು ಮಂದಿ ಪ್ರಿಯತಮರಿದ್ದಾರೋ ಅಷ್ಟು ಶ್ರೇಷ್ಠವಾದುದು ಆಕೆಯ ಪದವಿ”. ೨೦ನೆಯ ಶತಮಾನದ ಆರಂಭದ ಕಾಲದಲ್ಲಿಯೂ ದಕ್ಷಿಣ ಕೇರಳದಲ್ಲಿ ಪ್ರಚಲಿತವಿದ್ದುದು ಸಹೋದರರನ್ನು ಮದುವೆಯಾಗುವ ಬಹುಪತಿತ್ವ, ಅಂದರೆ ಪಾಂಡವಾಚಾರ. ಉತ್ತರ ಕೇರಳದಲ್ಲಿ ಈ ತೆರನ ಬಹುಪತಿತ್ವ ಪ್ರಚಾರದಲ್ಲಿದ್ದಿರಲಿಲ್ಲ.

ಕೆಲವೇ ದಶಕಗಳ ಹಿಂದಿನವರೆಗೂ ನಾಯರ್, ಈಳವರ್ ಮೊದಲಾದ ಮರು ಮಕ್ಕತ್ತಾಯದ ಸಮುದಾಯಗಳಲ್ಲಿ ತಾಳಿಕೆಟ್ಟು, ತಿರಂಡು ಕಲ್ಯಾಣಂ, ಪುಳಿಕುಡಿ ಮೊದಲಾದ ಆಚರಣೆಗಳಿದ್ದವು. ಹೆಣ್ಣು ಮಕ್ಕಳು ಋತುಮತಿಯಾಗುವುದಕ್ಕೆ ವೊದಲೇ ನಡೆಸುವ ಆಚರಣೆ ಕೆಟ್ಟ್‌ಕಲ್ಯಾಣ ಅಥವಾ ತಾಳಿಕೆಟ್ಟು. ಉನ್ನತ ಜಾತಿಯವನೊಬ್ಬನಿಂದ ಹುಡುಗಿಯ ಕೊರಳಿಗೆ ತಾಳಿ ಕಟ್ಟಿಸುವುದು ತಾಳಿಕೆಟ್ಟು ಅಥವಾ ಕೆಟ್ಟ್‌ಕಲ್ಯಾಣ. ಆದರೆ ತಾಳಿ ಕಟ್ಟಿದ ವ್ಯಕ್ತಿಗೆ ಹುಡುಗಿಯ ಮೇಲೆ ಯಾವೊಂದು ಅಧಿಕಾರವೂ ಇರುತ್ತಿರಲಿಲ್ಲ. ಹುಡುಗಿ ಮದುವೆಯಾದವಳ ಸ್ಥಾನವನ್ನು ಪಡೆಯುವುದಿಲ್ಲ. ಇದೊಂದು ವಿವಾಹವೂ ಅಲ್ಲ.

ಹೆಣ್ಣು ಋತುಮತಿಯಾಗುವಾಗ ಆಚರಿಸುವ ಒಂದು ಆಚರಣೆಯೇ ‘ತಿರಂಡ್ ಕಲ್ಯಾಣ’. ಆಚರಣೆ ನಾಲ್ಕು ದಿನಗಳ ಕಾಲ ನಡೆಯುತ್ತದೆ. ಸ್ತ್ರೀ ಗರ್ಭಿಣಿಯಾದರೆ ಒಂಬತ್ತನೇ ತಿಂಗಳಲ್ಲಿ ಆಚರಿಸುವ ಆಚರಣೆಯೇ ಪುಳಿಕುಡಿ. ಮನೆಯ ಅಂಗಳದ ನಡುವಿನಲ್ಲಿ ನೆಟ್ಟ ಒಂದು ಗಿಡದ ಎಲೆಯಲ್ಲಿ ಸಂಗ್ರಹಿತವಾದ ದ್ರವವನ್ನು ಗರ್ಭಿಣಿಗೆ ಕೊಡಲಾಗುತ್ತದೆ. ಈ ತೆರನ ಆಚರಣೆಗಳಿಗೆಲ್ಲ ಸಾಕಷ್ಟು ಹಣವನ್ನು ವ್ಯಯ ಮಾಡಲಾಗುತ್ತಿತ್ತು. ಈಗ ಇಂತಹ ಆಚರಣೆಗಳೆಲ್ಲ ಬಹು ಜನರ ಅಪೇಕ್ಷೆಯ ಮೇರೆಗೆ ಮಾತ್ರ ನಡೆಯುತ್ತದೆ.

ಜಮೀನ್ದಾರಿ ಪದ್ಧತಿಯ ಆರಂಭ

ಭೂಮಿಯ ಖಾಸಗೀ ಒಡೆತನದ ಕುರಿತು ಸಂಘ ಕೃತಿಗಳಲ್ಲಿ ಉಲ್ಲೇಖಗಳಿದ್ದರೂ ನಂತರ ಬಂದ ಜಮೀನ್ದಾರಿ ವ್ಯವಸ್ಥೆಯ ಬಗೆಗೆ ಯಾವುದೇ ಪ್ರಸ್ತಾಪವಿಲ್ಲ. ಪರಶುರಾಮ ಬ್ರಾಹ್ಮಣರಿಗೆ ಭೂದಾನವನ್ನು ಮಾಡಿದ ಬಳಿಕ ಕೇರಳದಲ್ಲಿ ಜಮೀನ್ದಾರಿ ವ್ಯವಸ್ಥೆ ರೂಪುಗೊಂಡಿತು ಎಂಬ ವಾದ ಪರಶುರಾಮನಿಗೆ ಸಂಬಂಧಿಸಿದ ಇತರ ಕತೆಗಳಂತೆಯೇ ತಿರಸ್ಕಾರ ಯೋಗ್ಯವಾಗಿದೆ. ಇಲ್ಲಿ ಜಮೀನ್ದಾರಿ ವ್ಯವಸ್ಥೆ ಆರಂಭವಾದುದು ಹನ್ನೊಂದನೆಯ ಶತಮಾನದಲ್ಲುಂಟಾದ ಚೇರ-ಚೋಳರ ಯುದ್ಧದ ಮೂಲಕ. ಯುದ್ಧಕ್ಕಾಗಿ ರಾಜ್ಯದ ಎಲ್ಲಾ ಸಂಪತ್ತನ್ನು ವಿನಿಯೋಗಿಸಬೇಕಾದ ಅನಿವಾರ್ಯತೆ ಉಂಟಾಯಿತು. ಆರ್ಥಿಕ ಹಾಗೂ ಸಾಮಾಜಿಕ ಜೀವನದಲ್ಲಿ ನಂಬೂದಿರಿಗಳಿಗೆ ಪ್ರಮುಖವಾದೊಂದು ಪಾತ್ರ ದೊರೆಯಿತು. ಸಮಾಜದ ದೊಡ್ಡದೊಂದು ಜನ ವಿಭಾಗ ಯುದ್ಧದಲ್ಲಿ ನಿಷ್ಠೆಯನ್ನು ಕೇಂದ್ರೀಕರಿಸಿದಾಗ ಅವರಿಗೆ ದೇವಾಲಯಗಳ ಆಡಳಿತದಲ್ಲಿ ಆಸಕ್ತಿ ಕಡಿಮೆಯಾಯಿತು. ದೇವಾಲಯಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ನಂಬೂದಿರಿಗಳು ದೇವಾಲಯಗಳ ಆಸ್ತಿ, ಹಾಗೂ ಕಾಣಿಕೆ ರೂಪದಲ್ಲಿ ಬಂದ ಆದಾಯವನ್ನು ಕೈವಶ ಮಾಡಿಕೊಂಡರು. ಅದೇ ವೇಳೆಗೆ ಸಣ್ಣ ಪುಟ್ಟ ಗೇಣಿದಾರರು ತಮ್ಮ ಸ್ವಾಧೀನವಿದ್ದ ಆಸ್ತಿ ಪಾಸ್ತಿಗಳನ್ನು ಒಟ್ಟಾಗಿ ನಂಬೂದಿರಿಗಳಿಗೆ ಕೊಡುವುದನ್ನೋ ಅಥವಾ ದೇವಾಲಯಗಳಿಗೆ ಒಪ್ಪಿಸುವುದನ್ನೋ ಮಾಡಿದರು. ಹೀಗೆ ಕೊಡುವುದಕ್ಕೆ ಮುಖ್ಯ ಕಾರಣವೆಂದರೆ ದೇವರ ಸ್ವಾಧೀನವಿರುವ ಹಾಗೂ ಬ್ರಾಹ್ಮಣ ಸ್ವಾಧೀನವಿರುವ ವಸ್ತುಗಳನ್ನು ಶತ್ರು ಸೈನ್ಯಗಳವರು ನಾಶ ಮಾಡಲಾರರು ಎಂಬ ನಂಬಿಕೆಯೇ ಆಗಿತ್ತು. ಹಾಗೆಯೇ ಅವುಗಳಿಗೆ ತೆರಿಗೆಯನ್ನು ಕೊಡಬೇಕಾಗಿಲ್ಲ ಎಂಬ ದೂರಾಲೋಚನೆಯೂ ಇತ್ತು. ಇಂತಹ ಪರಿಸ್ಥಿತಿಯ ಲಾಭ ಪಡೆದ ನಂಬೂದಿರಿಗಳು ಶ್ರೀಮಂತಿಕೆಯಿಂದ ಜಮಿನ್ದಾರ ರಾಗಿ ಪ್ರಬಲರಾದರು. ಈ ರೀತಿಯಲ್ಲಿ ಕೇರಳದಲ್ಲಿ ಜಮೀನ್ದಾರಿ ವ್ಯವಸ್ಥೆ ರೂಪುಗೊಂಡಿತು.

ನಾಡ ದೊರೆಗಳ ಪ್ರಾಬಲ್ಯ

೧೧ನೆಯ ಶತಮಾನದಲ್ಲಿ ಜಮೀನ್ದಾರಿ ವ್ಯವಸ್ಥೆ ರೂಪುಗೊಂಡಾಗಲೇ ಕೇರಳದ ದೇಶೀಯ ಐಕ್ಯತೆ ಶಿಥಿಲವಾಗುತ್ತಾ ಬಂತು. ೯-೧೦ನೆಯ ಶತಮಾನಗಳಲ್ಲಿ ಕೇರಳದ ರಾಜಾಡಳಿತದಲ್ಲಿ ಸುಭದ್ರವಾದ ವ್ಯವಸ್ಥೆ ಇತ್ತು. ಕುಲಶೇಖರ ಚಕ್ರವರ್ತಿಯೂ ಆತನ ಪ್ರತಿನಿಧಿಗಳಾದ ನಾಡದೊರೆಗಳು ಅಧಿಕಾರ ರಕ್ಷಣೆಯನ್ನು ಮಾಡುತ್ತಾ ಆಡಳಿತದಲ್ಲಿ ಸುವ್ಯವಸ್ಥೆಯನ್ನು ಉಳಿಸಿಕೊಂಡಿದ್ದರು. ಹನ್ನೊಂದನೆಯ ಶತಮಾನದ ಉತ್ತರಾರ್ಧದಲ್ಲಿ ಕೇಂದ್ರಾಡಳಿತ ದುರ್ಬಲವಾಯಿತು. ಇದರಿಂದಾಗಿ ನಾಡದೊರೆಗಳು ಸ್ವತಂತ್ರರಾದರು. ಕುಲಶೇಖರ ಸಾಮ್ರಾಜ್ಯದ ಅಧಃಪತನದೊಡನೆ ಸಣ್ಣ ಪುಟ್ಟ ಸಂಸ್ಥಾನಗಳು ರೂಪುಗೊಂಡು ಆಡಳಿತ ಕ್ರಮಗಳು ಬದಲಾದವು. ಈ ಸನ್ನಿವೇಶ ಅನೇಕ ಶತಮಾನಗಳ ತನಕ ಮುಂದುವರೆಯಿತು.

ಪೋರ್ಚುಗೀಸರು ಬರುವ ವೇಳೆಗೆ ದುರ್ಬಲವಾದ ನಾಡದೊರೆಗಳ ಆಡಳಿತವಿತ್ತು. ಕೇರಳದ ರಾಜಕೀಯ ಅಧಿಕಾರ ಮುಖ್ಯವಾಗಿ ಕೋಝಿಕೋಡ್ ವೇನ್ನಾಡ್ ರಾಜ ವಂಶಗಳಲ್ಲಿ ಕೇಂದ್ರೀಕೃತವಾಗಿತ್ತು. ರಾಜರು ಪರಮಾಧಿಕಾರಿಗಳಾಗಿದ್ದರು. ಪ್ರಬಲವಾದ ಶಕ್ತಿಗಳಿಗೆ ನಾಡ ದೊರೆಗಳು ತಲೆಬಾಗುವವರಾಗಿದ್ದರು. ಈ ನಾಡದೊರೆಗಳಿಗೆ ಹೊರತಾಗಿ ಸ್ವತಂತ್ರವಾದ ಅಧಿಕಾರ ಚಲಾಯಿಸುತ್ತಿದ್ದ ನಾಯರ್‌ದೊರೆಗಳು ಹಾಗೂ ನಂಬೂದಿರಿ ದೊರೆಗಳೂ ಇದ್ದರು. ಅಗತ್ಯಕ್ಕನುಸರಿಸಿ ಸಾಮಂತ ಅರಸರಿಗೆ ಯುದ್ಧ ಸಾಮಗ್ರಿಗಳನ್ನು ಒದಗಿಸುವುದು ನಾಡದೊರೆಗಳ ಕರ್ತವ್ಯವಾಗಿತ್ತು. ಒಂದೊಂದು ಆಡಳಿತ ವಿಭಾಗಕ್ಕೂ ಸ್ವತಂತ್ರವಾದ ಸೈನ್ಯ ವ್ಯವಸ್ಥೆ ಇತ್ತು. ಈ ಆಡಳಿತ ವಿಭಾಗಗಳ ಚಟುವಟಿಕೆಗಳು ನಾಡಿನಲ್ಲಿ ಒಂದು ರೀತಿಯ ಅಸ್ವಸ್ಥ ವಾತಾವರಣವನ್ನು ಸೃಷ್ಟಿಸಿತು.

ಕೇರಳದ ಸಾಮಂತರಸರ ಆಡಳಿತಕ್ಕೆ ಮತೀಯ ಛಾಯೆಯಿತ್ತು. ದೇವಸ್ಥಾನಗಳು ಶತ್ರುಗಳಿಂದ ರಕ್ಷಣೆ ಪಡೆಯುವ ಅಭಯ ತಾಣಗಳಾಗಿದ್ದರಿಂದ ಆಳರಸರು ತಮ್ಮ ಸೀಮೆಯ ವ್ಯಾಪ್ತಿಗೆ ಬರಲಿ ಬರದಿರಲಿ ದೇವಸ್ಥಾನಗಳ ಮೇಲೆ ಹಕ್ಕು ಸ್ಥಾಪಿಸುತ್ತಿದ್ದರು. ಆಡಳಿತ ನಡೆಸುವ ರಾಜನಿಗೆ ಪ್ರಾಯೋಗಿಕವಾಗಿ ಯಾವುದೇ ರೀತಿಯ ನಿಯಂತ್ರಣ ಸಾಧ್ಯವಿಲ್ಲದ ರಾಜ್ಯದೊಳಗಿನ ರಾಜ್ಯವಾಗಿ ದೇವಸ್ಥಾನಗಳು ಬದಲಾದವು. ಅವುಗಳು ರಾಜಕೀಯ ಸಮಾಲೋಚನೆಯ ಕೇಂದ್ರಗಳಾಗಿ ರೂಪುಗೊಂಡವು. ರಾಜಕೀಯ ಅಧಿಕಾರಕ್ಕೆ ವಿಧೇಯ ವಲ್ಲದ ಒಂದು ವಿಭಾಗ ಎಂಬಂತೆ ನಂಬೂದಿರಿಗಳೂ ಪ್ರಬಲರಾದರು. ಅವರು ಮತೀಯ ವಾದ ಅಧಿಕಾರವನ್ನು ಗಟ್ಟಿಗೊಳಿಸಿದರು. ನಮ್ಮನ್ನು ಶಿಕ್ಷಿಸಲು ಅಧಿಕಾರ ಹೊಂದಿದವರು ಆಳ್ವಾಂಚೇರಿ ಸಾಮ್ರಾಟರು ಮಾತ್ರ. ಮಿಕ್ಕ ಯಾವ ರಾಜರಿಗೂ ತಮ್ಮನ್ನು ಪ್ರಶ್ನಿಸುವ ಅಧಿಕಾರ ಇಲ್ಲವೆಂದು ನಂಬೂದಿರಿಗಳು ಭಾವಿಸಿದ್ದರು. ಭೂ ಹಿಡುವಳಿದಾರರನ್ನು ಕೊಲ್ಲುವ, ಶಿಕ್ಷಿಸುವ ಅಧಿಕಾರವನ್ನು ನಂಬೂದಿರಿಗಳು ಚಲಾಯಿಸುತ್ತಿದ್ದರು. ಹೀಗೆ ೧೬ನೆಯ ಶತಮಾನದ ಕೇರಳದಲ್ಲಿ ಶಿಥಿಲವಾದೊಂದು ರಾಜಕೀಯ ವ್ಯವಸ್ಥೆಯಿತ್ತು. ಸಣ್ಣ ಪುಟ್ಟ ತುಂಡರಸರು ಪರಸ್ಪರ ಅಂತಃಕಲಹದಲ್ಲಿ ಕಾಲ ಕಳೆಯತೊಡಗಿದ್ದು ಮತಾಧಿಕಾರದಿಂದಾಗಿ ಭಿನ್ನಾಭಿಪ್ರಾಯಗಳು ತಲೆದೋರಿದವು. ಇವೆಲ್ಲಾ ರಾಜಕೀಯ ಹಾಗೂ ಸಾಮಾಜಿಕ ವಾತಾವರಣವನ್ನು ಕಲುಷಿತಗೊಳಿಸಿದು್ದವು.

ನಾಡ ದೊರೆಗಳ ಅಧಿಕಾರಗಳು

೧೬-೧೭ನೆಯ ಶತಮಾನದಲ್ಲಿ ಪೋರ್ಚ್‌ಗೀಸ್ ಹಾಗೂ ಡಚ್ಚ್ ಬರಹಗಾರರು ದಾಖಲಿಸಿದ ವಿವರಗಳು ಕೇರಳದ ಫ್ಯೂಡಲ್ ಆಡಳಿತ ವ್ಯವಸ್ಥೆಯ ಮೇಲೆ ಹೆಚ್ಚಿನ ಬೆಳಕು ಚೆಲ್ಲುತ್ತವೆ. ನಾಡದೊರೆಗಳಿಗೆ ತುಂಬಾ ಅಧಿಕಾರ ವ್ಯಾಪ್ತಿಯಿದ್ದರೂ ಅವರ ಕಾರ್ಯ ವೈಖರಿಯನ್ನು ಜನ ಸಂಘಟನೆಗಳು ಕಾದು ನೋಡುತ್ತಿದ್ದವು. ಜಮೀನ್ದಾರಿ ವ್ಯವಸ್ಥೆಗಳ ಮುಖ್ಯಸ್ಥನಾದ ನಾಡದೊರೆ ನಿಯಂತ್ರಣಾಧಿಕಾರವುಳ್ಳ ಒಬ್ಬ ವ್ಯಕ್ತಿಯಾಗಿದ್ದ. ರಾಜರುಗಳಿಂದ ನಾಡದೊರೆಗಳ ವರೆಗೆ ಎಲ್ಲರ ಸ್ವಾಧೀನದಲ್ಲಿಯೂ ಭೂಮಿಯಿತ್ತು. ಕೆಳ ವರ್ಗದ ಜನರು ಅವರಿಗಾಗಿ ಕೃಷಿ ಇತ್ಯಾದಿ ಕೆಲಸಗಳನ್ನು ಮಾಡಿಕೊಡುತ್ತಿದ್ದರು. ಅಲ್ಲವಾದರೆ ಆ ಭೂಮಿಯನ್ನು ಭೂ ಹಿಡುವಳಿದಾರರಿಗೆ, ಗೇಣಿದಾರರಿಗೋ, ದುಡಿಯಲು ಕೊಡುತ್ತಿದ್ದರು. ಅಂದು ಖಚಿತವಾದ ಖಾಯಂ ತೆರಿಗೆಗಳೊಂದೂ ಇದ್ದಿರಲಿಲ್ಲ. ಆದರೆ ನಾಡದೊರೆಗೆ ಇತರೇ ಆರ್ಥಿಕ ಮೂಲಗಳಿದ್ದವು. ಆಮದು ಮತ್ತು ರಫ್ತುಗಳಿಗೆ ಸಂಬಂಧಿಸಿದ ತೆರಿಗೆ ಹಾಗೂ ಸಾರಿಗೆ ಕರ ಇತ್ಯಾದಿಗಳು ನಾಡದೊರೆಗಳಿಗೆ ಬರುತ್ತಿದ್ದವು. ಸಮೀಪದ ಯಾವುದಾದರೂ ನಾಡದೊರೆಯ ಭೂಮಿ ಅನ್ಯರ ವಶವಾಗುವ ಸ್ಥಿತಿ ಬಂದಾಗಲೋ, ನಾಶವಾಗುವ ಸ್ಥಿತಿ ಬಂದಾಗಲೋ, ತುರ್ತು ಸಂದರ್ಭಗಳಲ್ಲಿ ಆರ್ಥಿಕ ನೆರವು ನೀಡುವಂತೆ ಜನರನ್ನು ಪ್ರೇರಿಸುವುದಕ್ಕೆ ಅಗತ್ಯವಿದ್ದರೆ ಅಕ್ರಮ ಬಲ ಪ್ರಯೋಗಿಸುವುದಕ್ಕೂ ನಾಡದೊರೆಗಳಿಗೆ ಅಧಿಕಾರವಿತ್ತು. ಇತರರ ಮೇಲೆ ಅಪರಾಧ ಹೊರಿಸುವುದಕ್ಕೂ ಅವರಿಗೆ ಅವಕಾಶವಿತ್ತು. ಒಂದು ಕುಟುಂಬದ ಆಸ್ತಿಯ ಹಕ್ಕುದಾರ ಸಾಯುವಾಗ ನಂತರದ ಹಕ್ಕುದಾರನಿಗೆ ಆಸ್ತಿಯ ಹಕ್ಕನ್ನು ವಹಿಸಿ ಕೊಡುವಾಗ ‘ಪುರುಷಾಂತರ’ ಎಂಬ ಕಾಣಿಕೆಯನ್ನು ನಾಡದೊರೆಗೆ ಕೊಡಬೇಕು. ಆಸ್ತಿಗೆ ಹಕ್ಕುದಾರರು ಯಾರೂ ಇಲ್ಲದೆ ಯಜಮಾನ ಸಾಯುವಾಗ ಆಸ್ತಿ ಪಾಸ್ತಿಗಳನ್ನು ನಾಡದೊರೆಗಳಲ್ಲಿ ನಿಕ್ಷೇಪವಾಗಿಡಬೇಕು. ಇದನ್ನು ‘ಅಟ್ಟಾಲಡಕ್ಕಂ’ ಎಂದು ಹೇಳಲಾಗುತ್ತದೆ. ನಾಡದೊರೆಗಳ ಪೂರ್ವಾನುಮತಿಯಿಲ್ಲದೆ ಯಾರಿಗೂ ದತ್ತು ಸ್ವೀಕಾರಕ್ಕೆ ಅವಕಾಶವಿರಲಿಲ್ಲ. ಯಾರಾದರೂ ಕುಟುಂಬಕ್ಕೆ ದತ್ತು ಸ್ವೀಕರಿಸ ಬಯಸಿದರೆ ನಾಡದೊರೆಗೆ ದತ್ತು ಕಾಣಿಕೆ ನೀಡಿ ಅನುಮತಿ ಪಡೆಯಬೇಕಾಗಿತ್ತು. ಮದುವೆ, ಹೆರಿಗೆ, ಸಾವು, ಗೃಹಪ್ರವೇಶ ಮೊದಲಾದ ಸಂದರ್ಭಗಳಲ್ಲೆಲ್ಲ ನಾಡದೊರೆ ಪ್ರಜೆಗಳಿಂದ ಸಂಭಾವನೆಗಳನ್ನು ಪಡೆಯುತ್ತಿದ್ದ. ಪರ ಪುರುಷ ಸಂಗ ಮಾಡಿದ ಹೆಂಗಸನ್ನು ನಾಡದೊರೆಯ ಮುಂದೆ ಕರೆದೊಯ್ಯಬೇಕಾಗಿತ್ತು. ನಾಡದೊರೆ ಅವರನ್ನು ವಿದೇಶಿ ವ್ಯಾಪಾರಿಗಳಿಗೆ ಮಾರಾಟಮಾಡಿ ಹಣ ಪಡೆದುಕೊಳ್ಳುತ್ತಿದ್ದ. ನಾಡದೊರೆಗೆ ಹಿತವಾದುದನ್ನು ಕೊಡದೆ ಬಂಗಾರವನ್ನು ಖರೀದಿಸುವಂತಿರಲಿಲ್ಲ. ರಕ್ಷಾಭೋಗಂ, ಚಙಾತಂ ಮೊದಲಾದ ತೆರಿಗೆಗಳನ್ನು ರಕ್ಷಣೆಯ ಹೆಸರಲ್ಲಿ ನಾಡದೊರೆಗಳು ಎಲ್ಲರಿಂದಲೂ ಸಂಗ್ರಹಿಸುತ್ತಿದ್ದರು. ಕಡಲ ತೀರಕ್ಕೆ ಬರುವ ಹಡಗುಗಳಿಂದ ಸಂಪತ್ತನ್ನು ದೋಚಿ ನಾಡದೊರೆಗಳು ತಮ್ಮ ಭಂಡಾರವನ್ನು ತುಂಬಿಸಿಕೊಳ್ಳುತ್ತಿದ್ದರು. ಕೆಲವು ವಿಶೇಷ ಸನ್ನಿವೇಶಗಳಲ್ಲಿ ತನ್ನ ಸೀಮೆಯ ಒಳಗೆ ಬರುವ ಪ್ರಾಣಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ನಾಡದೊರೆಗಳಿಗಿತ್ತು.

ಎರಡು ಪಕ್ಷಗಳವರಿಗೆ ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ವಿವಾದಗಳಿದ್ದರೆ ಅದನ್ನು ಪರಿಹರಿಸಲು ಏರ್ಪಡಿಸುವ ‘ಅಂಕಂ’ ನಾಡದೊರೆಗಳಿಗೆ ಆದಾಯ ಮಾಡಿಕೊಡುವ ಒಂದು ಸಂಪ್ರದಾಯವಾಗಿದೆ. ಅಂಕ ಮುರಿಯುವ ಅನುಮತಿಗಾಗಿ ಎರಡು ಪಕ್ಷಗಳವರು ಸಾವಿರ ಪಣಗಳನ್ನು ನಾಡದೊರೆಗಳಿಗೆ ಕಾಣಿಕೆಯಾಗಿ ಸಮರ್ಪಿಸಬೇಕು. ಗಡಿಭಾಗಗಳಲ್ಲಿ ನೆಲೆಸಿರುವವರ ಮದುವೆ ಇತ್ಯಾದಿಗಳನ್ನು ನಡೆಸಿಕೊಡುವುದು ನಾಡದೊರೆಯ ಕರ್ತವ್ಯದಲ್ಲಿ ಸೇರಿದೆ. ವಿವಾಹಕ್ಕೆ ಪೂರ್ವದಲ್ಲಿ ವಧು-ವರರ ಬಂಧುಗಳು ನಾಡದೊರೆಯನ್ನು ಭೇಟಿ ಮಾಡಿ ಹಣ, ವಸ್ತುಗಳನ್ನು ಕಾಣಿಕೆ ಸಲ್ಲಿಸುವ ಸಂಪ್ರದಾಯವಿತ್ತು. ಮಹಡಿ ಮನೆಗಳನ್ನೋ, ಹೆಂಚಿನ ಮನೆಗಳನ್ನೋ ಕಟ್ಟಲು ನಾಡದೊರೆಗಳ ಪೂರ್ವಾನುಮತಿ ಪಡೆಯಬೇಕಾಗಿತ್ತು. ಅನುಮತಿ ಕೆಲವರಿಗೆ ಮಾತ್ರವೇ ದೊರೆಯುತ್ತಿತ್ತು. ದೊಡ್ಡ ಜಮೀನ್ದಾರರಿಗೆ, ನಾಡದೊರೆ ಗಳಿಗೆ ಮಾತ್ರವೇ ಪಲ್ಲಕ್ಕಿ ಮೊದಲಾದ ಆಡಂಬರದ ವಸ್ತುಗಳನ್ನು ಬಳಸಲು ಅವಕಾಶವಿತ್ತು. ತಾಳಿಕೆಟ್ಟುಗೆ ಮೊದಲು ಹುಡುಗಿಯನ್ನು ನಾಡದೊರೆಗಳ ಮನೆಗೆ ಕರೆತಂದು ಮುಖ ಕಾಣಿಸುವ ಸಂಪ್ರದಾಯವಿತ್ತು. ನಾಡದೊರೆಗಳು ವ್ಯಕ್ತಿಗಳಿಂದ ಹಣದ ರೂಪದಲ್ಲಿಯೋ, ವಸ್ತುವಿನ ರೂಪದಲ್ಲಿಯೋ ಸಂಭಾವನೆಗಳನ್ನು ಸ್ವೀಕರಿಸಿ ಬದಲಿಗೆ ‘ಮೇನೋನ್’ ಮೊದಲಾದ  ಪದವಿಗಳನ್ನು ಕೊಡುವುದಿತ್ತು. ಪ್ರಜೆಗಳ ದೈನಂದಿನ ಬದುಕಿಗೆ ಸಂಬಂಧಿಸಿದ ಸೂಚನೆಗಳನ್ನು ಕೊಡಲು ನಾಡದೊರೆಗೆ ಅಧಿಕಾರವಿತ್ತು. ಎರಡೂ ಕೈಗಳಲ್ಲಿ ಬಳೆ ತೊಡಲು ಅವಕಾಶವಿದ್ದುದು ವಿಶೇಷ ಅನುಮತಿ ಪಡೆದವರಿಗೆ ಮಾತ್ರವಾಗಿತ್ತು. ಹಿಡಿಕೆಯಿರುವ ಕೊಡೆ ಉಪಯೋಗಿಸಲು ನಾಡದೊರೆಯ ಒಪ್ಪಿಗೆ ಬೇಕಾಗಿತ್ತು. ಒಪ್ಪಿಗೆಯಿಲ್ಲದಿದ್ದರೆ ತಲೆಕೊಡೆ ಅಥವಾ ಟೊಪ್ಪಿಕೊಡೆ ಯನ್ನು ಮಾತ್ರ ಬಳಸಬಹುದಾಗಿತ್ತು. ಸ್ತ್ರೀಯರು ಮೂಗುತಿ ಮತ್ತಿತರ ಆಭರಣಗಳನ್ನು ಧರಿಸಲೂ ನಾಡದೊರೆಗಳ ಅನುಮತಿ ಬೇಕಾಗಿತ್ತು. ಜಾತ್ರೆ ಮೊದಲಾದ ಉತ್ಸವಗಳಲ್ಲಿ ಊಟೋಪಚಾರಗಳಿಗಿರುವ ಎಳನೀರು ಕೊಯ್ಯುವ ಹಕ್ಕು ನಾಡದೊರೆಗಳದು ಮಾತ್ರವಾಗಿತ್ತು.

ನಾಡದೊರೆಗಳಿಗೆ ಕೊಲೆ ಮಾಡುವ ಅಧಿಕಾರವಿತ್ತು. ಕೆಲವು ಪ್ರದೇಶಗಳಲ್ಲಿ ಆ ಅಧಿಕಾರವನ್ನು ಆಯ್ದ ವ್ಯಕ್ತಿಗಳಲ್ಲಿ ಒಬ್ಬರಿಗೆ ನಿರ್ದಿಷ್ಟ ಕಾಲಾವಧಿಯವರೆಗೆ ಕೊಡಲಾ ಗುತ್ತಿತ್ತು. ಐದು ವರ್ಷದವರಿಗೆ ಈ ಅಧಿಕಾರಕ್ಕೆ ‘ತಲವೆಟ್ಟಿಪಾರ್‌ಪತ್ಯಂ’ (ತಲೆ ಕಡಿಯುವ ಪಾರುಪತ್ಯ) ಎಂದು ಹೆಸರು. ಈ ಐದು ವರ್ಷ ಅಧಿಕಾರ ಪಡೆದವನು ಎಲ್ಲಾ ತೆರನ ಪ್ರಜಾಪೀಡನೆಯನ್ನು ಮಾಡುತ್ತಿದ್ದ. ೧೭-೧೮ನೆಯ ಶತಮಾನಗಳಲ್ಲಿ ಕೇರಳದಲ್ಲಿ ಫ್ಯೂಡಲಿಸಂ ಅದರ ಭೀಕರ ಸ್ವರೂಪದಲ್ಲಿ ನೆಲೆೆಗೊಂಡಿತ್ತು. ಅನೇಕರು ಹೀನವಾದ ಗುಲಾಮಗಿರಿಗೆ ವಿಧೇಯರಾದರು. ಚರವಸ್ತುಗಳಂತೆ ಅವರು ವಿಕ್ರಯ ವಸ್ತುಗಳಾಗಿ ಬದಲಾದರು. ಅವರು ಹಕ್ಕುಗಳಿಗೂ, ಸೌಲಭ್ಯಗಳಿಗೂ ಅರ್ಹರಾದ ವ್ಯಕ್ತಿಗಳು ಎಂದು ಅವರನ್ನು ಪರಿಗಣಿಸಲೇ ಇಲ್ಲ. ಜಮೀನ್ದಾರನು ಕಾರಣವಿಲ್ಲದೆ ಗುಲಾಮನೊಬ್ಬನನ್ನು ಕೊಲ್ಲುವಾಗಲೂ ತಡೆಯುವ ಅಧಿಕಾರ ಯಾರಿಗೂ ಇರಲಿಲ್ಲ. ಇವು ೧೯ನೆಯ ಶತಮಾನದ ಆರಂಭದಲ್ಲಿ ಬ್ರಿಟಿಷ್ ವಸಾಹತು ಸ್ಥಾಪನೆಗೊಳ್ಳುವಾಗ ಇದ್ದ ಸ್ಥಿತಿಗತಿಗಳು.

ಜಾತಿ ಸಂಪ್ರದಾಯಗಳು

ಭಾರತದೆಲ್ಲೆಡೆ ಇರುವಂತೆ ಕೇರಳದಲ್ಲಿಯೂ ಹಿಂದೂ ಸಮುದಾಯವೆನ್ನುವುದು ಅನೇಕ ಜಾತಿಗಳ ತಳಹದಿಯಲ್ಲಿ ರೂಪುಗೊಂಡ ಒಂದು ಸಂಘಟನೆ. ಕ್ರಿ.ಶ. ೮ನೆಯ ಶತಮಾನದಲ್ಲಿ ಉತ್ತರದಿಂದ ಆರ್ಯರು ಆಗಮಿಸಿದ ತರುವಾಯ ಕೇರಳದಲ್ಲಿ ಜಾತಿ ವ್ಯವಸ್ಥೆ ಆರಂಭ ವಾಯಿತು. ಹನ್ನೊಂದನೇ ಶತಮಾನದ ಚೇರ ಚೋಳ ಯುದ್ಧದಿಂದಾಗಿ ಉಂಟಾದ ಸಾಮಾಜಿಕ ಹಾಗೂ ಆರ್ಥಿಕ ಕ್ಷೆತ್ರದಲ್ಲಾದ ಬದಲಾವಣೆ ಜಾತಿವ್ಯವಸ್ಥೆಯನ್ನು ಇನ್ನಷ್ಟು ಪ್ರಬಲ ಗೊಳಿಸಿತು. ಶ್ರೇಣೀಕರಣ ವ್ಯವಸ್ಥೆಯಲ್ಲಿ ನಂಬೂದಿರಿ ಬ್ರಾಹ್ಮಣರು ಸಮಾಜದ ಉನ್ನತ ಸ್ಥಾನದಲ್ಲಿದ್ದರು. ಮತೀಯವಾದ ವಿಚಾರ ಹಾಗೂ ಧಾರ್ಮಿಕ ವಿಷಯಗಳಲ್ಲಿ ನಂಬೂದಿರಿ ಬ್ರಾಹ್ಮಣರಿಗೆ ಅಗ್ರಪೀಠ, ಜೈನ ಬೌದ್ಧ ಮತಗಳು ಕ್ಷೀಣಿಸುತ್ತಾ ಜಾತಿ, ಉಪಜಾತಿಗಳ ನೆಲೆಯಲ್ಲಿ ಹಿಂದೂ ಸಮುದಾಯಗಳು ಸಂಘಟಿತಗೊಳ್ಳತೊಡಗಿದ್ದುವು.

ಉನ್ನತ ಜಾತಿಗೆ ಸೇರಿದವರು ಸಮಾಜದ ಉತ್ಕೃಷ್ಟ ನೆಲೆಯಲ್ಲೂ ಕೆಳಗಿನ ಜಾತಿಯವರು ಸಮಾಜದ ನಿಕೃಷ್ಟ ನೆಲೆಯಲ್ಲಿಯೂ ಉಳಿಯುವಂತಾಯಿತು. ೧೬-೧೯ನೆಯ ಶತಮಾನಗಳಲ್ಲಿ ಕೇರಳದಲ್ಲಿ ಅಸ್ತಿತ್ವದಲ್ಲಿದ್ದ ಸಾಮಾಜಿಕ ಸಂಘಟನೆಯನ್ನು ಕುರಿತು ಪೋರ್ಚುಗೀಸ್, ಡಚ್, ಬ್ರಿಟಿಷ್ ಬರೆಹಗಾರರು ವಿವರಿಸಿದ್ದಾರೆ. ಬ್ರಾಹ್ಮಣರು ಶ್ರೇಣೀಕರಣ ಸಮಾಜದ ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡರು. ತುಳು ಬ್ರಾಹ್ಮಣರು, ಗೌಡ ಸಾರಸ್ವತರು ಮೊದಲಾದ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಇವರ ಜೊತೆಗೆ ಗುರುತಿಸಿಕೊಂಡಿದ್ದರು. ಆಡಳಿತಾಧಿಕಾರಿಗಳಾಗಿದ್ದ ಕ್ಷತ್ರಿಯರನ್ನು ನಂಬೂದಿರಿಗಳು ತಮ್ಮ ನಿಯಂತ್ರಣದಲ್ಲಿರುವಂತೆ ಎಚ್ಚರವಹಿಸಿದರು. ನಾಯನ್ಮಾರರು, ತೀಯರು (ಈಳವರು) ಹಿಂದೂ ಸಮುದಾಯದ ಪ್ರಬಲ ಜಾತಿಯವರಾಗಿದ್ದರು. ನಾಯನ್ಮಾರರು ಸೈನಿಕರಾದದ್ದರಿಂದ ಅವರಿಗೆ ಹೆಚ್ಚು ಅಧಿಕಾರವಿತ್ತು. ಅವರು ಖಡ್ಗ ಹೆಗಲಿಗೇರಿಸಿಯೇ ನಡೆಯುತ್ತಿದ್ದರು. ಪ್ರಾಣದ ಹಾಗೂ ಸ್ವರಕ್ಷಣೆಯ ಸಲುವಾಗಿ ಪೋರ್ಚುಗೀಸರು ಅವರನ್ನು ತಮ್ಮ ಬಲೆಗೆ ಬೀಳಿಸಲು ಸ್ನೇಹ ಬೆಳೆಸಿದರು. ಪೋರ್ಚುಗೀಸರ ಆಗಮನದ ವೇಳೆಗೆ ನಾಯನ್ಮಾರರು ಮದ್ಯಪಾನಿಗಳಾಗಿರಲಿಲ್ಲ. ಆದರೆ ಬುಕ್ಕನನೆಂಬ ವಿದೇಶಿ ಪ್ರವಾಸಿಯ ಆಗಮನದ ವೇಳೆಗೆ (೧೮೦೦-೧೮೦೧) ಪರಿಸ್ಥಿತಿ ಬದಲಾಗಿತ್ತು. ಹದಿನೆಂಟನೆಯ ಶತಮಾನದಲ್ಲಿ ತುಳ್ಳಲ್ ಕವಿತೆಗಳನ್ನು ಬರೆದ ಕುಂಜನ್ ನಂಬಿಯಾರ್ ನಾಯನ್ಮಾರರ ಮದ್ಯಪಾನವನ್ನು ಕುರಿತು ವ್ಯಂಗ್ಯವಾಡಿದ್ದಾನೆ. ತೀಯ (ಈಳವ) ಸಮುದಾಯದವರ ಮುಖ್ಯ ವೃತ್ತಿ ಹೆಂಡ ತೆಗೆಯುವುದಾಗಿತ್ತು. ಆದರೆ ಅವರಿಗೂ ಕೂಡಾ ಸೈನಿಕ ತರಬೇತಿ ಇತ್ತು. ಕಮ್ಮಾಳನ್, ಮುಕ್ಕುವನ್ (ಬೆಸ್ತ) ಪುಲಯನ್ (ಹೊಲೆಯ) ಪರಯನ್, ಕುರವನ್ ಮೊದಲಾದ ಜಾತಿಗಳವರನ್ನು ಸಮಾಜದ ಕೆಳವರ್ಗದವರಾಗಿ ಗುರುತಿಸ ಲಾಗಿತ್ತು. ಎಲ್ಲಾ ವಿಧದಲ್ಲೂ ಶೋಷಣೆಗೆ ಗುರಿಯಾಗುತ್ತಿದ್ದ ಈ ಜನ ಸಮುದಾಯದವರು ಅಸಹಾಯಕರಾಗಿ ಮೇಲುವರ್ಗದವರಿಗೆ ವಿಧೇಯವಾಗಿ ನಡೆದುಕೊಳ್ಳಬೇಕಾಗಿತ್ತು.

ಜಾತಿ ವ್ಯವಸ್ಥೆಯನ್ನು ನಿರ್ದಾಕ್ಷಿಣ್ಯವಾಗಿ ಕಾಪಾಡಿಕೊಂಡು ಬರಲಾಗಿತ್ತು. ಉನ್ನತ ಜಾತಿಯವರಾದ ಬ್ರಾಹ್ಮಣರು, ಕ್ಷತ್ರಿಯರು, ನಾಯನ್ಮಾರರು ಜಾತಿವ್ಯವಸ್ಥೆಗಳು ತಪ್ಪದಂತೆ ಎಚ್ಚರವಹಿಸುತ್ತಿದ್ದರು. ಜಾತಿಯ ಸಂಪ್ರದಾಯಕ್ಕೆ ತಪ್ಪಿ ನಡೆಯುವ ಉನ್ನತ ಜಾತಿಗಳವರನ್ನು ಜಾತಿ ಭ್ರಷ್ಟರನ್ನಾಗಿಸಿ ಕ್ರಿಶ್ಚಿಯನರಿಗೋ, ಮುಸಲ್ಮಾನರಿಗೋ ಮಾರಾಟ ಮಾಡುತ್ತಿದ್ದರು. ಅತ್ಯಂತ ನಿರ್ದಾಕ್ಷಿಣ್ಯವಾಗಿ ಅಸ್ಪೃಶ್ಯತೆಯನ್ನು ಕಾಪಾಡಲಾಗುತ್ತಿತ್ತು. ಕೆಳಜಾತಿಗಳವರು ಮೇಲುವರ್ಗದವರ ಕಣ್ಣಿಗೂ ಕಾಣದಂತೆ ಬದುಕಬೇಕಾಗಿತ್ತು. ಕೆಲವು ಜಾತಿಗಳವರಿಗೆ ನಿರ್ದಿಷ್ಟ ಅಂತರದಿಂದ ವ್ಯವಹರಿಸಬೇಕಾದ ನಿಬಂಧನೆಗಳಿದ್ದವು. ಪುಲಯರ್ ನಾಯನ್ಮಾರರಿಂದ ಅರುವತ್ತು ಅಡಿ ದೂರದಲ್ಲಿ ನಿಲ್ಲಬೇಕಾಗಿತ್ತು. ಪುಲಯರನ್ನೋ, ಬೇಡರನ್ನೋ ಕಣ್ಣಿನಲ್ಲಿ ನೋಡಿದರೇ ನಂಬೂದಿರಿಗೆ ಅಶುದ್ದಿಯಾಗುತ್ತಿತ್ತು. ನಂಬೂದಿರಿಯೊಬ್ಬ ಇದಿರಾಗಿ ಹಾದಿಯಲ್ಲಿ ನಡೆದು ಬರುತ್ತಿದ್ದರೆ ಕೆಳಜಾತಿಯವರು ಆತನ ಕಣ್ಣಿಗೆ ಕಾಣಿಸಿಕೊಳ್ಳದಂತೆ ಅಡಗಿಕೊಳ್ಳಬೇಕಾಗಿತ್ತು. ನದೀ ತಟಗಳಲ್ಲಾದರೆ ಪ್ರಾಣಪಾಯವನ್ನು ಲೆಕ್ಕಿಸದೆ ನೀರಿಗಾದರೂ ಜಿಗಿದು ಕೆಳವರ್ಗದವರು ರಕ್ಷಣೆ ಪಡೆಯುತ್ತಿದ್ದ ದೃಷ್ಟಾಂತಗಳೂ ಇವೆ. ಈ ಸಂಪ್ರದಾಯ ಗಳನ್ನು ಪಾಲಿಸದ ಕೆಳಜಾತಿಗಳವರನ್ನು ಕೊಲೆ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು.

ಕೆಳವರ್ಗದವರಿಗೆ ನಿಷೇಧಿಸಲಾದ ಅನೇಕ ಅನುಕೂಲಗಳನ್ನು ನಂಬೂದಿರಿಗಳು, ಕ್ಷತ್ರಿಯರು, ಬ್ರಾಹ್ಮಣರು ಅನುಭವಿಸುತ್ತಿದ್ದರು. ರಾಜಕೀಯ ಪ್ರಭುತ್ವ ಸವರ್ಣೀಯರಲ್ಲಿ ನಿಕ್ಷೇಪವಾಗಿತ್ತು. ಕ್ಷತ್ರಿಯರು ನಾಯನ್ಮಾರರ ವೈವಾಹಿಕ ಸಂಬಂಧಗಳನ್ನು ಮಾಡಿ ಕೊಂಡಿದ್ದರು. ರಾಜ ಕುಟುಂಬದವರ ಆಡಳಿತವು ಹೊರಗಿನಿಂದ ಬಂದ ಬ್ರಾಹ್ಮಣರ ನೆರವನ್ನು ಆಶ್ರಯಿಸಿತ್ತು. ಅಂತಹ ವ್ಯಕ್ತಿಗಳು ಉನ್ನತ ವರ್ಗದವರಿಗೆ ಅಧಿಕಾರ ಹಾಗೂ ಪದವಿಯನ್ನು ಕೊಡುತ್ತಿದ್ದರು.

ವಿವಾದ ವಿಷಯಗಳೇನಾದರೂ ಇದ್ದಲ್ಲಿ ಅದಕ್ಕೆ ಪರಿಹಾರ ಸೂಚಿಸಿ ಅಂತಿಮ ತೀರ್ಪು ನೀಡುವವರು ವೈದಿಕ ಬ್ರಾಹ್ಮಣರು. ಅವರ ತೀರ್ಪು ಏಕಪಕ್ಷೀಯವಾಗಿದ್ದರೂ ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರಲಿಲ್ಲ. ಯಾವುದೇ ರೀತಿಯ ಘೋರ ಅಪರಾಧ ಮಾಡಿದ್ದರೂ ಬ್ರಾಹ್ಮಣರನ್ನು ವಧಾಶಿಕ್ಷೆಯಿಂದ ಹೊರತುಪಡಿಸಲಾಗಿತ್ತು. ಕೆಳಜಾತಿಗಳವರಿಗೆ ಕಳ್ಳತನ, ಗೋಹತ್ಯೆಗಳಂತಹ ಅಪರಾಧಗಳಿಗೆ ವಧಾಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಶ್ರೇಣೀಕರಣ ಸಮಾಜದಲ್ಲಿ ಅಪರಾಧ ಎಸಗಿದ ವ್ಯಕ್ತಿಯ ಸ್ಥಾನಮಾನಗಳು ಕಡಿಮೆಯಿದ್ದಷ್ಟೂ ಶಿಕ್ಷೆಯ ತೀವ್ರತೆ ಹೆಚ್ಚಾಗಿರುತ್ತಿತ್ತು. ಕೆಳಜಾತಿಯವರು ಸಣ್ಣಪುಟ್ಟ ಅಪರಾಧಗಳನ್ನೆಸಗಿದರೂ ಆನೆಯಿಂದ ತುಳಿಸಿ ಸಾಯಿಸುವ, ಪಿರಂಗಿಯ ಬಾಯಿಗೆ ತಲೆಯೊಡ್ಡಿಸಿ ಕೊಲ್ಲುವ ಹೀಗೆ ಚಿತ್ರ ಹಿಂಸೆ ನೀಡಿ ಕೊಲ್ಲುವ ಘೋರ ಶಿಕ್ಷೆಗಳನ್ನೇ ವಿಧಿಸಲಾಗುತ್ತಿತ್ತು. ತಪ್ಪೆಸಗಿದವರು ಈಳವರೋ, ಪುಲಯರೋ ಆಗಿದ್ದರೆ ಅವರನ್ನು ಗಲ್ಲಿಗೇರಿಸಿ ಕೊಲ್ಲಲಾಗುತ್ತಿತ್ತು. ನಾಯರರಾದರೆ ಶಿರಚ್ಛೇದನ. ಈ ಎಲ್ಲಾ ಶಿಕ್ಷೆಗಳು ಒಂದೇ ಪ್ರಮಾಣದ ಅಪರಾಧಗಳಿಗೆ ಜಾತಿಯನ್ನನುಸರಿಸಿ ನೀಡಲಾಗುತ್ತಿತ್ತು. ಅಪರಾಧ ಮಾಡಿದವರನ್ನು ಸತ್ಯ ಪರೀಕ್ಷೆಗೆ ಒಡ್ಡುವ ಸಂಪ್ರದಾಯವೂ ಇತ್ತು. ಇದನ್ನು ಜಾತಿಯ ಹಿನ್ನೆಲೆಯಲ್ಲಿಯೇ ಮಾಡಲಾಗುತ್ತಿತ್ತು. ಕ್ಷತ್ರಿಯರು ಅಗ್ನಿ ಸ್ಪರ್ಶಿಸಿ ಶೂದ್ರರು ವಿಷ ಸೇವಿಸಿ ಸತ್ಯ ಪರೀಕ್ಷೆಗೆ ಗುರಿಯಾಗಬೇಕಾಗಿತ್ತು. ಆಚಾರಗಳಿಗೆ ತಪ್ಪಿ ನಡೆದ ನಂಬೂದಿರಿ ಸ್ತ್ರೀಯರು ಶುಚೀಂದ್ರಂ ದೇವಾಲಯದಲ್ಲಿ ಕುದಿಯುವ ತುಪ್ಪದಲ್ಲಿ ಕೈಯಿರಿಸಿ ಸತ್ಯ ಪರೀಕ್ಷೆಗೆ ಒಳಗಾಗಬೇಕಾಗಿತ್ತು. ಕೇರಳಕ್ಕೆ ಬ್ರಿಟಿಷರು ಬರುವ ವೇಳೆಗೆ ಅಲ್ಲಿನ ರೀತಿ ನೀತಿಗಳು ಈ ತೆರನಾಗಿದ್ದವು. ಬ್ರಿಟಿಷ್ ಅಧಿಕಾರಿಗಳು ಶಿಕ್ಷಾ ವಿಧಾನದಲ್ಲಿ ಬದಲಾವಣೆಗಳನ್ನು ತರಲು ಬಯಸಿದರು. ಆದರೆ ನಾಡದೊರೆಗಳ ಉನ್ನತ ಜಾತಿಗಳವರು ತಮ್ಮ ಸ್ಥಾನಮಾನಗಳನ್ನು, ಅಧಿಕಾರಗಳನ್ನು ಬಿಟ್ಟುಕೊಡಲು ಮುಂದಾಗಲಿಲ್ಲ. ಬ್ರಿಟಿಷರಿಗೂ ಆರಂಭದಲ್ಲಿ ಅವರನ್ನು ಓಲೈಸದಿರುವುದೂ ಸಾಧ್ಯವಿರಲಿಲ್ಲ.

ಅವರ್ಣೀಯರಿಗೆ ರಾಜ್ಯಾಧಿಕಾರಕ್ಕೆ ಸಂಬಂಧಿಸಿದ ಯಾವುದೇ ವಿಚಾರಗಳಲ್ಲಿ ಅವಕಾಶ ವಿರಲಿಲ್ಲ. ತಿರುವಾಂಕೂರು, ಕೊಚ್ಚಿ ಸಂಸ್ಥಾನಗಳಲ್ಲಿ ಅವರ್ಣೀಯರಿಗೆ ಯಾವುದೇ ರೀತಿಯ ಔದ್ಯೋಗಿಕ ಪದವಿಯೂ ಇದ್ದಿರಲಿಲ್ಲ. ಅವರ್ಣೀಯರ ಆಭರಣ, ವಾಹನ, ಪಾತ್ರೆ ಪಗಡಿಗಳು, ಗೃಹ ವಿನ್ಯಾಸಗಳು ಇತ್ಯಾದಿಗಳಿಗೆಲ್ಲ ನಿರ್ದಿಷ್ಟ ನಿಯಮಗಳನ್ನು ರೂಪಿಸ ಲಾಗಿತ್ತು. ಹೆಚ್ಚಿನ ಅನುಕೂಲತೆಗಳನ್ನು ಪಡೆಯಲಿಚ್ಛಿಸುವ ಶ್ರೀಮಂತ ಅವರ್ಣೀಯರು ಆಡಳಿತಾಧಿಕಾರಿಗಳಿಂದ ಅನುಮತಿ ಪಡೆದೇ ಬಳಸಬೇಕಾಗಿತ್ತು. ಇದರಿಂದೆಲ್ಲ ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತಲೇ ಹೋಯಿತು.

ವಾಸ್ತವವಾಗಿ ಜಾತಿಗಳ ನಡುವೆ ಇರಿಸಿಕೊಂಡಿದ್ದ ಈ ಅಸಮಾನತೆಯ ಕಾರಣದಿಂದಾಗಿ ಹಿಂದೂ ಸಮುದಾಯದ ನಡುವೆ ಸಂಘಟನೆಗೆ ಅಡ್ಡಿಯಾಯಿತು. ಕೆಳವರ್ಗದಲ್ಲಿ ಗುರುತಿಸಿದ ಜಾತಿಗಳವರು ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಅಭಿವೃದ್ದಿ ಹೊಂದಲು ಸಾಧ್ಯವಾಗಲೇ ಇಲ್ಲ. ಹಿಂದೂ ಸಮುದಾಯವೆಂದು ಗುರುತಿಸುತ್ತಿದ್ದ ಎಲ್ಲಾ ಜಾತಿಗಳವರಲ್ಲಿ ಮೇಲುವರ್ಗದವರು ಅಂತರವನ್ನು ಕಾಪಾಡಿಕೊಂಡೇ ಬಂದರು. ಸಾರ್ವಜನಿಕ ಸ್ಥಳಗಳಾದ ದೇವಸ್ಥಾನಗಳಿಗೆ, ಶಾಲೆಗಳಿಗೆ ಅವರ್ಣೀಯರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಅವರ್ಣೀಯರು ಸಾರ್ವಜನಿಕ ಪ್ರದೇಶಗಳಲ್ಲಿ ಭಯಮುಕ್ತರಾಗಿ  ನಡೆದಾಡುವ ಅವಕಾಶವೂ ಇರಲಿಲ್ಲ. ಸ್ಪೃಶ್ಯ, ಅಸ್ಪೃಶ್ಯ ಆಚರಣೆ ಕಠಿಣವಾಗಿತ್ತು. ಅನ್ಯ ಜಾತಿಗಳ ಜನರೊಡನೆ ಸಹಪಂಕ್ತಿ ಭೋಜನಕ್ಕೆ ಅವಕಾಶವಿರಲಿಲ್ಲ. ನಾಯರ್, ಈಳವರ್, ಮೊದಲಾದ ಜಾತಿಗಳ ನಡುವೆಯೂ, ಸಣ್ಣ ಪುಟ್ಟ ಉಪಜಾತಿಗಳು ನಿರ್ಮಾಣಗೊಂಡು ಸಾಮಾಜಿಕ ಪ್ರಗತಿಗೆ ತಡೆಯುಂಟಾಗಿದ್ದವು. ಜಾತಿಗಳ ನಡುವೆ ಉಪಜಾತಿಗಳೂ ಪರಸ್ಪರ ವಿವಾಹವನ್ನು, ಮಿಶ್ರ ಭೋಜನವನ್ನು ಮಾಡುತ್ತಿರಲಿಲ್ಲ. ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದ ಅವರ್ಣೀ ಯರೂ ಕೂಡ ಪುಲಯರ್ ಮೊದಲಾದ ಜಾತಿಗಳೊಡನೆ ಅಸ್ಪೃಶ್ಯತೆಯನ್ನು ಪಾಲಿಸುತ್ತಿದ್ದರು. ಅವರ್ಣಿಯರಿಗೆ ದೇವಾಲಯಗಳಲ್ಲಿ ಪ್ರವೇಶವನ್ನು ನಿಷೇಧಿಸಲಾಗಿತ್ತು ಎಂಬುದನ್ನು ವಿರೋಧಿಸಿದ್ದ ಈಳವರ ದೇವಾಲಯಗಳಿಗೂ ಪುಲಯರಂತಹ ಕೆಲವು ಜಾತಿಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು ಎನ್ನುವುದು ಒಂದು ರೀತಿಯ ವಿರೋಧಾಭಾಸವೇ ಸರಿ.

ಕೇರಳದ ಸಾಮಾಜಿಕ ಜೀವನದಲ್ಲಿ ಇಂದಿಗೂ ಇಂತಹ ಅನೇಕ ವಿರೋಧಾಭಾಸಗಳನ್ನು ಕಾಣಬಹುದು. ದೇವಸ್ಥಾನಗಳ ರಸ್ತೆಗಳಲ್ಲಿ ಕ್ರಿಶ್ಚಿಯನರು, ಮುಸಲ್ಮಾನರು ನಡೆದಾಡುವುದನ್ನು ನಿಷೇಧಿಸಲಾಗಿತ್ತು. ಹಿಂದೂ ಸಮುದಾಯಕ್ಕೆ ಸೇರಿದವರಾದರೂ ಕೆಳವರ್ಗದಲ್ಲಿ ಜನಿಸಿದ ಕಾರಣಕ್ಕಾಗಿ ಅವರಿಗೂ ಇದೇ ತೆರನ ನಿಷೇಧ ಅನ್ವಯವಾಗುತ್ತಿತ್ತು. ಉಲ್ಲಂಘಿಸಿದರೆ ಸಾಮೂಹಿಕವಾದ ಶಿಕ್ಷೆಗೂ ಅವರನ್ನು ಗುರಿಪಡಿಸಲಾಗುತ್ತಿತ್ತು. ಅವರ್ಣ ಹಿಂದೂಗಳು ಕ್ರಿಶ್ಚಿಯನರೋ, ಮುಸಲ್ಮಾನರೋ ಆಗಿ ಮತಾಂತರ ಹೊಂದಿದರೆ ಅವರಿಗೆ ಸಾಮಾಜಿಕವಾದ ಎಲ್ಲಾ ಸೌಲಭ್ಯಗಳನ್ನು ನಿಷೇಧಿಸಲಾಗುತ್ತಿತ್ತು. ಅದನ್ನು ಅವರ್ಣೀಯರೂ ಪ್ರತಿಭಟಿ ಸುತ್ತಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ಕೆಳವರ್ಗದ ಅನೇಕ ಹಿಂದೂಗಳು ಕ್ರಿಶ್ಚಿಯನ ರಾಗಿಯೋ, ಮುಸಲ್ಮಾನರಾಗಿಯೋ ಮತಾಂತರಗೊಂಡುದರಲ್ಲಿ ಆಶ್ಚರ್ಯ ಪಡುವಂತಹು ದೇನಿಲ್ಲ. ಇದರಿಂದ ಹಿಂದೂ ಸಮುದಾಯಕ್ಕೆ ಹಾನಿಯಾಯಿತು ಎಂಬುದು ವಾಸ್ತವ. ೧೮೯೨ರಲ್ಲಿ ಕೇರಳಕ್ಕೆ ಬಂದ ಸ್ವಾಮಿ ವಿವೇಕಾನಂದ ಈ ವಿರೋಧಾಭಾಸವನ್ನು ಕುರಿತು ಮಿತ್ರರೊಬ್ಬರಿಗೆ ಹೀಗೆ ಬರೆದಿದ್ದರು. “ಒಬ್ಬ ತೋಟಿಯು ತೋಟಿಯಾಗಿಯೇ ಬಂದರೆ ಪ್ಲೇಗು ಬಂದಂತೆ ಹೊಡೆದೋಡಿಸುವರು. ಆದರೂ ಮಂತ್ರೋಚ್ಛಾರಣೆಯಿಂದ ಸ್ವಲ್ಪ ನೀರು ಆತನ ತಲೆಗೆ ಎರೆದು ಬಟ್ಟೆ ಬದಲಿಸಿದರೆ ಅವನು ಹಿಂದೂಗಳ ಮನೆಯನ್ನು ಯಾವುದೇ ತಡೆಯಿಲ್ಲದೆ ಪ್ರವೇಶಿಸಬಹುದು. ಅವನಿಗೆ ಹಾರ್ದಿಕವಾದ ಸ್ವಾಗತವೂ ದೊರೆಯುತ್ತದೆ. ಕುಳಿತುಕೊಳ್ಳುವುದಕ್ಕೆ ಸ್ಥಳವೂ ದೊರೆಯುತ್ತದೆ. ಇದಕ್ಕಿಂತಾಚೆಗಿನ ವಿರೋಧಾಭಾಸವನ್ನು ಕಾಣುವುದು ಸಾಧ್ಯವೇ?”. ಜಾತಿ ವ್ಯವಸ್ಥೆಯನ್ನಾಧರಿಸಿದ ವಿಧಿ ನಿಷೇಧಗಳನ್ನು ನೋಡಿಯೇ ವಿವೇಕಾನಂದರು ಹೇಸಿ ಈ ಮಾತುಗಳನ್ನು ಬರೆದಿದ್ದಾರೆ ಎಂಬುದು ಸ್ಪಷ್ಟ. ಕೇರಳವನ್ನು ಅವರು ಭ್ರಾಂತಾಲಯ (ಹುಚ್ಚರಮನೆ) ಎಂದು ಕರೆದುದರಲ್ಲಿಯೂ ಆಶ್ಚರ್ಯಪಡುವ ಅಗತ್ಯವಿಲ್ಲ. ಅಷ್ಟೊಂದು ನಿಕೃಷ್ಟವಾದ ಜಾತಿ ವ್ಯವಸ್ಥೆ ಕೇರಳದಲ್ಲಿ ಪ್ರಾಬಲ್ಯದಲ್ಲಿತ್ತು. ಈಗಲೂ ಅದು ಸಂಪೂರ್ಣವಾಗಿ ಹೋಗಿದೆ ಎಂದು ಹೇಳುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಬಹುಮಟ್ಟಿಗೆ ಅವು ಗೋಚರವಾಗದಿರಬಹುದು. ವ್ಯಕ್ತಿಗಳ ಖಾಸಗೀ ಬದುಕಿನಲ್ಲಿ ಈ ತೆರನ ಜಾತಿ ಸಂಪ್ರದಾಯಗಳು ಇಂದಿಗೂ ಅಲ್ಲಲ್ಲಿ ಆಚರಣೆಯಲ್ಲಿವೆ.

ಮಣ್ಣಾಪೇಡಿ ಮತ್ತು ಪುಲಪೇಡಿ

ನಾಡದೊರೆಗಳ ಆಡಳಿತ ಕಾಲದಲ್ಲಿ ವರ್ಷಕ್ಕೊಂದು ದಿನ ಕೆಳಜಾತಿಗಳವರಿಗೆ ಸ್ವಾತಂತ್ರ್ಯ ವನ್ನು ನೀಡಿದುದರ ಆಚರಣೆಯಿದು. ಅಸ್ಪೃಶ್ಯತೆಗೆ ಸಂಬಂಧಿಸಿದ ಒಂದು ಸಾಮಾಜಿಕ ಆಚರಣೆಯಿದು. ಇದನ್ನು ದಕ್ಷಿಣ ತಿರುವಾಂಕೂರಿನಲ್ಲಿ ಮಣ್ಣಾಪೇಡಿ ಎಂದು ಕರೆದರೆ ಉತ್ತರದಲ್ಲಿ ಪುಲಪೇಡಿ ಎಂದು ಕರೆಯುತ್ತಿದ್ದರು. ಕರ್ಕಾಟಕ ತಿಂಗಳಲ್ಲಿ ಸಂಜೆಯ ಬಳಿಕ ಗಂಡಸಿನ ರಕ್ಷಣೆಯಿಲ್ಲದೆ ನಾಯರ್ ಮಹಿಳೆಯರು ಮನೆಯಿಂದ ಹೊರಗಿಳಿಯವಂತಿರಲಿಲ್ಲ. ಮನೆಯ ಹೊರಗೆ ಮಣ್ಣಾನೋ, ಹೊಲೆಯನೋ, ಪರಮನೊ, ನಾಯರ್ ಹೆಣ್ಣುಮಗಳನ್ನು ಮುಟ್ಟಿದರೆ ಅಥವಾ ಆತ ‘ಕಂಡೇ’ ಎಂದು ಕೂಗಿದರೆ ಆಕೆ ಜಾತಿ ಭ್ರಷ್ಟಳಾಗುತ್ತಿದ್ದಳು. ಕಲ್ಲಿನಿಂದಲೋ, ಕೋಲಿನಿಂದಲೋ, ಬಟ್ಟೆಯಿಂದಲೋ ಹೊಡೆದು ಏಟು ತಾಗಿದ ಹೆಣ್ಣು ಜಾತಿ ಭ್ರಷ್ಟಳಾಗಿ ಹೊಡೆದವನ ಜೊತೆಗೆ ಹೋಗಬೇಕಾಗಿತ್ತು. ಕುಟುಂಬದ ಇತರ ಸದಸ್ಯರಿಗೂ ಜಾತಿಭ್ರಷ್ಟದ ಭಯವಿರುವುದರಿಂದ ಅವರು ಆಕೆಯನ್ನು ಮರಳಿ ಮನೆಯೊಳಗೆ ಸೇರಿಸಿಕೊಳ್ಳು ತ್ತಿರಲಿಲ್ಲ. ಮಣ್ಣಾನ ಜೊತೆಗೆ ಹೋಗಿ ರಕ್ಷಣೆ ಪಡೆದರೆ ಆಕೆ ಬದುಕಿಕೊಳ್ಳಬಹುದು. ಬಂಧುಗಳ್ಯಾರಾದರು ಕೈಗೆ ಸಿಕ್ಕಿದರೆ ಆಕೆಯನ್ನು ಕೊಂದೇ ಬಿಡುತ್ತಿದ್ದರು. ಮಣ್ಣಾನ ಹೆಂಡತಿಯಾಗಿ ಬದುಕುವುದರಿಂದ ಅವರಿಗಾಗುವ ಅವಮಾನದ ಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದರು. ಮಣ್ಣಾಪೇಡಿಯ ಕುರಿತು ಮೊದಲು ಅಧಿಕೃತವಾಗಿ ಬರೆದವ ಬರ್ಬೋಸ (೧೫೧೭). ಅಮಾನವೀಯವಾದ ಈ ಆಚರಣೆಯು ಬ್ರಿಟಿಷರ ಆಡಳಿತಾವಧಿಯವರೆಗೂ ಮಲಬಾರು ಪ್ರದೇಶದಲ್ಲಿ ರೂಢಿಯಲ್ಲಿತ್ತು. ವೇನ್ನಾಡಿನಲ್ಲಿ ೧೬೯೬ರಲ್ಲಿ ರಾಜನಾಗಿದ್ದ ಉಣ್ಣಿ ಕೇರಳವರ್ಮ ಒಂದು ಘೋಷಣೆಯ ಮೂಲಕ ಈ ಆಚರಣೆಯನ್ನು ನಿಷೇಧಿಸಿದ. ಆ ಘೋಷಣೆಯ ಪ್ರಕಾರ ಮಣ್ಣಾಪೇಡಿಯಾದ ಹುಡುಗಿ ಸ್ನಾನ ಮಾಡಿದರೆ ದೋಷ ಪರಿಹಾರವಾಗುತ್ತಿತ್ತು. ಈ ಒಂದು ಘೋಷಣೆಯ ಮೂಲಕವೇ ಕೇರಳವರ್ಮ ಕೇರಳದ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗೆ ಕಾರಣನಾದ.

ಡಾ. ಗುಂಡರ್ಟ್ ದಾಖಲಿಸಿದ ಪ್ರಕಾರ ಈ ಆಚರಣೆಯು ಕರ್ಕಾಟಕ ತಿಂಗಳಲ್ಲಿ ನಡೆಯುತ್ತಿತ್ತು. (ವಿಷ್ಣುನಂಬೂದಿರಿ, ೨೦೦೦ : ೪೧೫) ಮಣ್ಣಾಪೇಡಿಯನ್ನು ಕುರಿತು ಅಚ್ಯುತ ಮೇನೋನ್ ಬೇರೊಂದು ತೆರನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. (ಅಚ್ಯುತವಾದ್ಯರ್, ೨೦೦೩ : ೧೨೫) ಅವರ ಪ್ರಕಾರ ವರ್ಷಕ್ಕೊಮ್ಮೆ ಬನಗಳಲ್ಲಿ ವಾರ್ಷಿಕ ಆಚರಣೆ, ಜಾತ್ರೆಗಳು ನಡೆಯುವಾಗ ಕೆಳಜಾತಿಗಳವರಿಗಾಗಿ ನಾಡದೊರೆಗಳು ಒಂದು ತೆರನ ಸ್ವಾತಂತ್ರ್ಯವನ್ನು ನೀಡಿದ್ದರು. ಅವರಿಗೆ ಅಂದು ಬನಗಳಿಗೂ ಪ್ರವೇಶಾವಕಾಶವಿತ್ತು. ಈ ಸ್ವಾತಂತ್ರ್ಯ ದಿನವನ್ನು ಪ್ರಜೆಗಳಿಗೆ ಡಂಗೂರ ಸಾರಿ ತಿಳಿಸಲಾಗುತ್ತಿತ್ತು. ಈ ಸ್ವಾತಂತ್ರ್ಯವನ್ನು ವಿರೋಧಿಸುವವರು ಮನೆಯಲ್ಲಿ ಕುಳಿತುಕೊಳ್ಳಬೇಕು. ಈ ಕಾಲದಲ್ಲಿ ಮೇಲುಜಾತಿಗೆ ಸೇರಿದ ಮಹಿಳೆಯರನ್ನು ಕೆಳಜಾತಿಯವರು ಮುಟ್ಟಿದರೆ ಅವರು ಅವರ ಜೊತೆಗೆ ಹೋಗಬೇಕು. ಇದು ಸಂಪ್ರದಾಯ.

ಹೊಲೆಯರು, ಪರಯರು, ಚರುಮರು ಮೊದಲಾದ ಜಾತಿಗಳೆಲ್ಲ ಕೃಷಿ ಕೆಲಸಗಳಲ್ಲಿ ದುಡಿಯುತ್ತಿದ್ದರು. ಇವರನ್ನು ಮಾರಾಟ ಮಾಡಬಹುದು, ಖರೀದಿಸಬಹುದು, ಒತ್ತೆಯಿಡ ಬಹುದು. ಮಲಗುವುದಕ್ಕೆ ಜಾಗಕೊಟ್ಟು ಬದುಕುವುದಕ್ಕೆ ಆಹಾರ ಕೊಟ್ಟು ಜೀವನ ಪೂರ್ತಿ ಮೇಲು ವರ್ಗದವರಿಗಾಗಿ ಅವರನ್ನು ದುಡಿಸಿಕೊಳ್ಳಲಾಗುತ್ತಿತ್ತು. ವರ್ಗೀಯ ಶೋಷಣೆ ಗಿಂತಲೂ ಕ್ರೂರವಾಗಿತ್ತು ಇಲ್ಲಿಯ ಜಾತಿ ಶೋಷಣೆ. ರಾಜಕೀಯ ಹಾಗೂ ಆರ್ಥಿಕ ಶೋಷಣೆ ಮಾತ್ರವಾಗಿರಲಿಲ್ಲ. ಬದಲಾಗಿ ಶಿಕ್ಷಣದ ಅವಕಾಶವನ್ನು ಇವರಿಗೆ ನಿಷೇಧಿಸ ಲಾಗಿತ್ತು. ದಕ್ಷಿಣ ಆಫ್ರಿಕದ ಕಪ್ಪು ಜನರನ್ನು ನಡೆಸಿಕೊಂಡುದಕ್ಕಿಂತಲೂ ಕ್ರೂರವಾಗಿ ಕೇರಳದಲ್ಲಿ ಜಾತಿ ವ್ಯವಸ್ಥೆ ನೆಲೆ ನಿಂತಿತ್ತು. ಬ್ರಾಹ್ಮಣರಲ್ಲಿ ಕೇಂದ್ರೀಕೃತಗೊಂಡಿದ್ದ ರಾಜಕೀಯ ಆರ್ಥಿಕ ಪ್ರಾಬಲ್ಯವೇ ಇದಕ್ಕೆಲ್ಲ ಕಾರಣವಾಗಿತ್ತು.

ಹತ್ತೊಂಬತ್ತನೆಯ ಶತಮಾನದವರೆಗೂ ಈ ಜಾತಿ ವ್ಯವಸ್ಥೆ ಕೇರಳದಲ್ಲಿ ಪ್ರಾಬಲ್ಯ ದಲ್ಲಿತ್ತು. ಪಾಶ್ಚಾತ್ಯ ಮಿಷನರಿಗಳು, ಶ್ರೀನಾರಾಯಣ ಗುರು ಮೊದಲಾದವರ ಸಮಾಜ ಸುಧಾರಣೆಯ ಫಲವಾಗಿ ಇದು ಶಿಥಿಲಗೊಂಡಿತು. ೧೯೩೬ ನವೆಂಬರ್ ೧೨ ರಂದು ತಿರುವಾಂಕೂರು ಮಹಾರಾಜ ಶ್ರೀಚಿತ್ತಿರತಿರುನಾಳ್ ಬಾಲರಾಮವರ್ಮ ದೇವಾಲಯ ಪ್ರವೇಶ ಘೋಷಣೆಯನ್ನು ಹೊರಡಿಸುವುದರ ಮೂಲಕ ಜಾತಿವ್ಯವಸ್ಥೆ ಔಪಚಾರಿಕವಾಗಿ ಕೇರಳದಲ್ಲಿ ಮರೆಯಾಯಿತು.

ದೇವದಾಸಿ ಪದ್ಧತಿ

ಕೇರಳದಲ್ಲಿ ಅಸ್ತಿತ್ವದಲ್ಲಿದ್ದ ಜಮೀನ್ದಾರಿ ಜಾತಿ ವ್ಯವಸ್ಥೆಗಳ ಜೊತೆಗೆ ವಿಶ್ಲೇಷಿಸಬೇಕಾದ ಇನ್ನೊಂದು ಪದ್ಧತಿ ದೇವದಾಸಿ ಸಂಪ್ರದಾಯ. ದೇವದಾಸಿಯರೆಂದರೆ ದೇವಸ್ಥಾನದ ನರ್ತಕಿಯರು. ದಕ್ಷಿಣ ಭಾರತದೆಲ್ಲೆಡೆ ಅರಮನೆಗಳಲ್ಲಿ ಕುಟುಂಬಗಳಲ್ಲಿ ದೇವದಾಸಿ ಸ್ಥಾನ ದೊರೆಯುವುದೆಂದರೆ ಒಂದು ಅಭಿಮಾನದ ಸಂಗತಿಯಾಗಿತ್ತು. ಕ್ರಿ.ಶ. ೮ನೆಯ  ಶತಮಾನ ದಲ್ಲಿ ದಕ್ಷಿಣ ಭಾರತದಲ್ಲೆಡೆ ದೇವದಾಸಿ ಸಂಪ್ರದಾಯ ರೂಢಿಯಲ್ಲಿತ್ತು ಎಂಬುದಕ್ಕೆ ಕೇರಳದಲ್ಲೂ ಅದಕ್ಕೂ ಹೊರಗಡೆಯಲ್ಲೂ ಆಧಾರಗಳು ದೊರೆತಿವೆ. ಕೇರಳದಲ್ಲೂ ದೇವದಾಸಿ ಸಂಪ್ರದಾಯ ಪ್ರಾರಂಭವಾದುದು ಕೊಲ್ಲ ವರ್ಷಾರಂಭ (ಕ್ರಿ.ಶ. ೮೨೫) ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಚೋಳರ ಆಕ್ರಮಣದ ಕಾಲದಲ್ಲಿ ಇದು ಇನ್ನಷ್ಟು ಅಭಿವೃದ್ದಿಯಾಯಿತು. ಕ್ರಿ.ಶ. ೯೩೨ರಲ್ಲಿ ಬರೆದ ಗೋದರವಿಯ ಚೋಕೂರ್ ಶಾಸನದಲ್ಲಿ ದೇವದಾಸಿ ಸಂಪ್ರದಾಯದ ಕುರಿತ ಮೊತ್ತ ಮೊದಲ ಉಲ್ಲೇಖ ದೊರೆತಿದೆ. ಇದು ಮಲಬಾರು ಪ್ರದೇಶದಲ್ಲಿ ದೊರೆತ ದಾಖಲೆ. ಹತ್ತನೆಯ ಶತಮಾದ ಆರಂಭದಿಂದ ಹಲವು ಶಾಸನಗಳಲ್ಲೂ ಈ ಸಂಪ್ರದಾಯದ ಪರಾಮರ್ಶೆಯನ್ನು ಕಾಣಬಹುದು. ೧೧ನೆಯ ಶತಮಾನದ ವೇಳೆಗೆ ಈ ಸಂಪ್ರದಾಯ ಇನ್ನಷ್ಟು ಪ್ರವರ್ಧಮಾನಕ್ಕೆ ಬಂದಿತ್ತು ಎಂದು ಅಭಿಪ್ರಾಯ ಪಡಲಾಗಿದೆ. ಕ್ರಿ.ಶ. ೧೨ನೆಯ ಶತಮಾನದ್ದೆಂದು ಭಾವಿಸಲಾದ ತಿರುವಲ್ಲಾ ಶಾಸನದಲ್ಲೂ ದೇವಾಲಯದ ನಾಲ್ವರು ದೇವದಾಸಿಯರಿಗೆ ಹನ್ನೆರಡು ಬಳ್ಳ ಅಕ್ಕಿಯನ್ನು ಕೊಟ್ಟ ಬಗೆಗೆ ಉಲ್ಲೇಖವಿದೆ. ದೇವದಾಸಿ ಸಂಪ್ರದಾಯವನ್ನು ಪೋಷಿಸುವುದು ಅಭಿಮಾನಾರ್ಹ ವಿಷಯ ಎಂದು ಆಡಳಿತಗಾರರು ಹಾಗೂ ಜಮೀನ್ದಾರರು ಭಾವಿಸಿದ್ದರು. “ಕಂಡಿಯಾರ್ ತೇವಡಿಚ್ಚಿ ಉಣ್ಣಿ ಕಳತ್ರ” ಎಂಬ ಪ್ರಸಿದ್ಧ ದೇವದಾಸಿಯು ೧೩ನೆಯ ಶತಮಾನದ ಆರಂಭದಲ್ಲಿ ವೇನಾಡನ್ನು ಆಳಿದ ವೀರಕೇರಳವರ್ಮನ ಮಡದಿಯಾಗಿದ್ದಳು. ಹಾಗೆಯೇ ೧೪ನೆಯ ಶತಮಾನದಲ್ಲಿ ಓಡನಾಡಿನ ರಾಜನಾದ ಇರವಿ ಕೇರಳವರ್ಮನ ಮಡದಿ ನರ್ತಕಿಯರಲ್ಲಿ ಅಗ್ರಗಣ್ಯಳಾದ ಚೆರುಕರಕುಟ್ಟತ್ತಿ ಎಂಬವಳೆಂದು ‘ಶಿವವಿಲಾಸ’ವೆಂಬ ಕೃತಿಯಲ್ಲಿ ಹೇಳಲಾಗಿದೆ.

ಶುಚೀಂದ್ರಂ ದೇವಸ್ಥಾನದ ದೇವದಾಸಿಯರಿಗೆ ಉನ್ನತವಾದ ಸ್ಥಾನಮಾನಗಳನ್ನು ನೀಡಿದ್ದ ಬಗೆಗೆ ಅಲ್ಲಿನ ಶಾಸನಗಳಲ್ಲಿ ಉಲ್ಲೇಖಗಳಿವೆ. ವೇನಾಡಿನ ಇರವಿವರ್ಮನು ನೀಡಿದ ದಾನಭೂಮಿಯ ಉಸ್ತುವಾರಿ ‘ಪೆರುಮಾಳ್‌ಕಾಯರ್’ ಎಂಬ ದೇವದಾಸಿಯದಾಗಿತ್ತು ಎಂದು ಕ್ರಿ.ಶ. ೧೪೮೯ರ ಶಾಸನವೊಂದರಲ್ಲಿ ಹೇಳಲಾಗಿದೆ.

ಆರಂಭದ ಕಾಲಘಟ್ಟದಲ್ಲಿ ದೇವದಾಸಿಯರು ತಾವಿದ್ದ ದೇವಾಲಯಗಳಿಗೆ  ಮೌಲಿಕವಾದ ಕೊಡುಗೆಗಳನ್ನು ನೀಡಿದ್ದಾರೆ. ಸಂಗೀತ, ನೃತ್ಯ, ಮೊದಲಾದ ಕಲಾ ಪ್ರದರ್ಶನಗಳನ್ನು ನಡೆಸಿ ದೇವಾಲಯದ ಆದಾಯ ಹೆಚ್ಚಿಸುವ ಜವಾಬ್ದಾರಿಯನ್ನು ದೇವದಾಸಿಯರಲ್ಲಿ ನಿಕ್ಷಿಪ್ತಗೊಳಿಸಲಾಗಿತ್ತು. ಈ ಉದ್ಯೋಗಕ್ಕೆ ಉತ್ತಮ ಮನ್ನಣೆ ಹಾಗೂ ಪ್ರತಿಫಲಗಳಿದ್ದರೂ ಕುಲೀನ ಕುಟುಂಬಗಳ ಸಂಗೀತ, ನೃತ್ಯಗಳನ್ನು ಬಲ್ಲ ಕೆಲವು ಸ್ತ್ರೀಯರು ಪ್ರತಿಫಲಾಪೇಕ್ಷೇ ಯಿಲ್ಲದೆ ಇಂತಹ ಕಲಾಸೇವೆಯನ್ನೂ ಮಾಡುತ್ತಿದ್ದರು.

ಕಾಲ ಕ್ರಮೇಣ ೧೩ನೇಯಶತಮಾನದ ವೇಳೆಗೆ ದೇವದಾಸಿ ಪದವಿಯು ಪರಂಪರಾಗತ ವಾಗಿ ಮುಂದುವರಿಯಲು ಪ್ರಾರಂಭವಾಯಿತು. ಆಗ ಕುಲೀನ ಕುಟುಂಬದ ಸ್ತ್ರೀಯರು ದೂರ ಉಳಿದರು. ಹಾಗಾಗಿ ದೇವದಾಸಿಯರ ಸ್ಥಿತಿ ನೈತಿಕವಾಗಿ ಅಧಃಪತನಕ್ಕಿಳಿಯಿತು. ದೇವದಾಸಿ ಸಂಪ್ರದಾಯವನ್ನೇ ಸಮಾಜದ ಅನಿಷ್ಟದ ಸಂಕೇತವಾಗಿ ಕಾಣಲಾಯಿತು. ಉಣ್ಣಿಯಾಚ್ಚಿ ಚರಿತಂ, ಉಣ್ಣಿಯಾಡಿಚರಿತಂ, ಉಣ್ಣಿಚ್ಛಿರುದೇವಿಚರಿತಂ ಮೊದಲಾದ ಮಣಿಪ್ರವಾಳ ಕಾವ್ಯಗಳಲ್ಲಿ ದೇವದಾಸಿಯರೇ ನಾಯಕಿಯರು. ಸಮಕಾಲೀನರಾದ ಪ್ರಸಿದ್ಧ ದೇವದಾಸಿಯರನ್ನು ಹೊಗಳಿ ಕಾವ್ಯ ರಚಿಸಲು ಕವಿಗಳನ್ನು ರಾಜರುಗಳು ಪ್ರಚೋದಿ ಸುತ್ತಿದ್ದರು. ೧೫-೧೬ನೆಯ ಶತಮಾನದ ದೇವದಾಸಿ ಸಂಪ್ರದಾಯದ ಫಲವಾಗಿ ಕುಸಿದ ನೈತಿಕತೆಯನ್ನು ಹೇಳುವ ಕೃತಿ ‘ಚಂದ್ರೋತ್ಸವಂ’ (ಕ್ರಿ.ಶ. ೧೫೦೦). ಇದು ಒಂದು ಶೃಂಗಾರಕಾವ್ಯ. ಪ್ರಸಿದ್ಧ ದೇವದಾಸಿ ಮೇದಿನೀವೆಣ್ಣಿಲಾವ್ ನಡೆಸಿದ ಚಂದ್ರೋತ್ಸವವನ್ನು ಕುರಿತು ಈ ಕಾವ್ಯದಲ್ಲಿ ವರ್ಣಿಸಲಾಗಿದೆ. ಆ ಕಾಲಘಟ್ಟದ ಎಲ್ಲಾ ಜಮೀನ್ದಾರರು, ನಾಡದೊರೆ ಗಳು ಆ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಸಾಹಿತ್ಯ ಕೃತಿಗಳಷ್ಟೇ ಅಲ್ಲ, ಆ ಕಾಲದ ಶಾಸನಗಳು, ಚಿತ್ರಗಳು, ವಿಗ್ರಹಗಳು, ಶಿಲ್ಪಗಳು ಇವೆಲ್ಲ  ಆ ಕಾಲದ ನೈತಿಕ ಕುಸಿತಗಳನ್ನು ದಾಖಲಿಸಿವೆ. ದೇವಾಲಯಗಳ ಮೂಲಕ ಭೂಮಿಯ ಒಡೆತನವನ್ನು  ಬ್ರಾಹ್ಮಣರು ಪಡೆಯುವ ವೇಳೆಗೆ ಸಾಂಸ್ಕೃತಿಕ ರಂಗಗಳಲ್ಲಿ ಕುಲೀನ ಮನೆತನದ ಸ್ತ್ರೀಯರು ತೊಡಗಿಸಿಕೊಂಡಿದ್ದರು. ಭೋಗಾಸಕ್ತರಾದ ದೇವಾಲಯಗಳ ಆಡಳಿತಾಧಿಕಾರಿಗಳು ದೇವದಾಸಿ ಎಂಬ ಸಂಪ್ರದಾಯ ವನ್ನು ಅನೈತಿಕ ದಾರಿಯಲ್ಲಿ ನಡೆಸಿಕೊಂಡರು. ಇದರಿಂದಾಗಿ ದೇವದಾಸಿ ಸಂಪ್ರದಾಯ ಅಧಃಪತನ ಕಂಡಿತು.

ನೈತಿಕತೆ ಕುಸಿದ ಸಂಕೇತವಾದ ದೇವದಾಸಿ ಸಂಪ್ರದಾಯವು ೨೦ನೇ ಶತಮಾನದ ಆರಂಭದವರೆಗೂ ದಕ್ಷಿಣ ತಿರುವಾಂಕೂರಿನ ಕೆಲವು ದೇವಾಲಯಗಳಲ್ಲಿ ಅಸ್ತಿತ್ವದಲ್ಲಿತ್ತು. ಇದಕ್ಕೆ ‘ಕೂಡಿಕ್ಕಾರಿ ಸಂಪ್ರದಾಯ’ (ಕೂಡಿಕೆಯವಳ ಸಂಪ್ರದಾಯ) ಎಂಬ ಹೆಸರೂ ಇದೆ. ದೇವಸ್ಥಾನಗಳಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಈ ಕನ್ಯೆಯರು ಗಾನ, ನೃತ್ಯಾದಿಗಳ ಜೊತೆಗೆ ಸಣ್ಣಪುಟ್ಟ ಇತರ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ದೇವಾಲಯಕ್ಕೆ ಬರುವ ರಾಜ ಕುಟುಂಬದವರನ್ನು ಸ್ವಾಗತಿಸುವುದು, ಅವರನ್ನು ಸಂತೋಷಪಡಿಸುವುದು ದೇವದಾಸಿಯರ ಕರ್ತವ್ಯ ಎಂಬಲ್ಲಿಯವರೆಗೂ ಈ ಸಂಪ್ರದಾಯ ವಿಸ್ತರಿಸಿತ್ತು. ದೇವದಾಸಿ ಸಂಪ್ರದಾಯ ಒಂದು ಸಾಮಾಜಿಕ ಅನಿಷ್ಟವೆಂದು ಬಹಿರಂಗವಾಗಿ ಪ್ರಕಟವಾದಾಗ ೧೯೩೦ರಲ್ಲಿ ಒಂದು ಚಳುವಳಿಯ ಮೂಲಕ ತಿರುವಾಂಕೂರು ಸರಕಾರ ಅದನ್ನು ನಿಷೇಧಿಸಿತು. ಕರ್ನಾಟಕದಲ್ಲಿಯೂ ದೇವದಾಸಿ ಪದ್ಧತಿ ಇದ್ದು, ಕುಲವೃತ್ತಿಯಾಗಿ ಅದನ್ನು ಉಳಿಸಿಕೊಂಡು ಬಂದಿದ್ದರು. ಜಮೀನ್ದಾರಿ ವ್ಯವಸ್ಥೆಯ ಭಾಗವಾಗಿರುವ ಈ ಸಂಪ್ರದಾಯ ಸಾಮಾಜಿಕ ಎಚ್ಚರ ಹಾಗೂ ಹೋರಾಟಗಳ ಕಾರಣದಿಂದ ಬಹುತೇಕ ಇಲ್ಲವಾಗಿದೆ.