ಆರಂಭದಲ್ಲಿ ಚೋಳ, ಪಾಂಡ್ಯ, ಚೇರ ರಾಜ್ಯಗಳು ಬುಡಕಟ್ಟು ಪ್ರಭುತ್ವದ ನೆಲೆಯಲ್ಲಿಯೇ ಬಾಳಿ ಬೆಳೆದವು. ಬುಡಕಟ್ಟು ಸಂಸ್ಕೃತಿಯಿಂದ ವಿಸ್ತೃತಗೊಂಡ ಈ ರಾಜ್ಯ ಗಳಲ್ಲಿ ಜನರು ಗೋತ್ರಗಳಾಗಿ, ಗಣಗಳಾಗಿ, ಗಣಸಮೂಹಗಳಾಗಿ ಜೀವನ ನಡೆಸುತ್ತಿದ್ದರು. ಇಂದು ಕುಟುಂಬ ಎಂದು ಹೇಳುವ ಘಟಕವನ್ನು ಅಂದು ಗೋತ್ರಗಳಾಗಿ ವಿಭಜಿಸಿದ್ದರು. ಒಂದೊಂದು ಗೋತ್ರವೂ ಯಾವುದೋ ಒಂದು ತಿನಿಸನ್ನು ತಯಾರಿಸುವುದರಲ್ಲಿಯೋ, ಉತ್ಪಾದಿಸುವುದರಲ್ಲಿಯೋ ಪ್ರಾವಿಣ್ಯವನ್ನು ಪಡೆದಿರುತ್ತಿತ್ತು. ಗೋತ್ರದ ಸ್ವತ್ತಾಗಿರುವ ತಿನಿಸಿನ ನೆಲೆಯಿಂದ ಗೋತ್ರಗಳೊಡನೆ ಬಾಂಧವ್ಯಗಳೂ ಏರ್ಪಡುತ್ತಿದ್ದವು. ಹಲವು ಗೋತ್ರಗಳನ್ನು ಸೇರಿಸಿ ಒಂದು ಗಣ ಎಂದು ಕರೆಯಲಾಗುತ್ತಿತ್ತು. ಗಣಗಳು ಛಿದ್ರವಾಗಿ ಗೋತ್ರವಾಗುವುದು ಇದ್ದರೂ ಗೋತ್ರಗಳು ಸೇರಿ ಗಣವಾಗುವ ಪ್ರಕ್ರಿಯೆಯೇ ಮುಖ್ಯ ವಾಗಿತ್ತು. ಹೀಗೆ ಗೋತ್ರಗಳು ಜೊತೆ ಸೇರುವುದು ಭಕ್ಷ್ಯವಸ್ತುಗಳ ವಿನಿಮಯದ ನೆಲೆಯಿಂದಲೇ ಆಗಿದ್ದಿರಬಹುದು.

ಗೋತ್ರ ಸಮುದಾಯದ ಎಲ್ಲಾ ಸದಸ್ಯರು ಒಗ್ಗೂಡಿದ ಉತ್ಪಾದನೆ ಮತ್ತು ಒಗ್ಗೂಡಿದ ಉಪಭೋಗವೇ ಗೋತ್ರ ಸಮುದಾಯದ ವೈಶಿಷ್ಟ್ಯ. ತಮಿಳಗಂನ ಅಂದಿನ ದ್ರಾವಿಡ ಗಣಗಳು ಆಡುಗಳನ್ನು, ದನಕರುಗಳನ್ನು ಸಾಕಿ ಅವುಗಳ ಹಾಲು ಮತ್ತು ಮಾಂಸಗಳಿಂದ ಬದುಕುತ್ತಿದ್ದರು. ಉಪವೃತ್ತಿಯಾಗಿ ಕೃಷಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಗ್ರಾಮಗಳನ್ನು ನಿರ್ಮಿಸಿ ಅಲ್ಲಿ ಸ್ಥಿರವಾಗಿ ಜನರು ವಾಸ ಮಾಡಲು ಆಗಲೇ ಆರಂಭಿಸಿದ್ದರು. ಮೆಗಸ್ತನೀಸನು ಪಾಂಡ್ಯ ರಾಜ್ಯವನ್ನು ಕುರಿತು ಅಲ್ಲಿ ೩೬೫ ಗ್ರಾಮಗಳಿದ್ದವೆಂದು ಒಂದೊಂದು ಗ್ರಾಮದವರು ಒಂದೊಂದು ದಿನ ರಾಜದಾಯವನ್ನು ಒಪ್ಪಿಸಬೇಕಾಗಿತ್ತು ಎಂದು ಹೇಳಿದ್ದಾನೆ. ಇದರಿಂದ ವ್ಯಕ್ತವಾಗುವುದೇನೆಂದರೆ ಜನರು ಗ್ರಾಮಗಳನ್ನು ನಿರ್ಮಿಸಿ ಬದುಕಲು ಆಗಲೇ ಆರಂಭ ಮಾಡಿದ್ದರು. ಮತ್ತು ರಾಜದಾಯವಾಗಿ ಕೊಡುವ ಉತ್ಪನ್ನವನ್ನು ಸಂರಕ್ಷಿಸುವ ವ್ಯವಸ್ಥೆ ಗಳಿದ್ದಿರಲಿಲ್ಲ. ಹಾಗಾಗಿ ಪ್ರತಿನಿತ್ಯ ರಾಜದಾಯವನ್ನು ಒಂದೊಂದೇ ಗ್ರಾಮದವರು ತಂದೊಪ್ಪಿಸುವ ವ್ಯವಸ್ಥೆ ಮಾಡಿದ್ದಿರಬೇಕು. ಇಲ್ಲಿ ರಾಜದಾಯವಾಗಿ ಕೊಡುವ ಉತ್ಪನ್ನಗಳು ಕೃಷಿ ಉತ್ಪನ್ನಗಳಾಗಿದ್ದಿರಲಿಲ್ಲ. ಅದು ಹಾಲು, ಮಾಂಸ ಇತ್ಯಾದಿ ರೂಪದಲ್ಲಿಯೇ ಇದ್ದಿರ ಬೇಕು ಎಂದೂ ಇದರಿಂದ ತಿಳಿದುಕೊಳ್ಳಬಹುದು.

ಪ್ರಾಣಿಗಳನ್ನು ಸಾಕುವುದು ಮುಖ್ಯ ವೃತ್ತಿಯಾಗಿತ್ತು. ಸಾಕು ಪ್ರಾಣಿಗಳೇ ಗ್ರಾಮ ಜೀವನದ ಸುರಕ್ಷತೆೆಗೆ ಅತ್ಯಂತ ಅವಶ್ಯಕವೆನಿಸಿದ್ದವು. ನೆರೆಯ ರಾಜ್ಯಗಳು ಪ್ರಾಣಿಗಳಿಗೆ ಉಪಯೋಗ ವಾಗುವಂತೆ ಕೆರೆಗಳನ್ನು ಕಟ್ಟಿಸುವದು, ಗಿಡಗಳನ್ನು ನೆಡಿಸುವುದು ಸಹೋದರ ರಾಜ್ಯಗಳು ಮಾಡುವ ಮುಖ್ಯ ಸಹಾಯವಾಗಿತ್ತು. ಅಶೋಕ ಅದನ್ನೇ ಮಾಡಿದ್ದ. ಕೇರಳದಲ್ಲಿ ಅನೇಕ ಜಲಾಶಯಗಳು ಇಂದಿಗೂ ಇವೆ. ಇವುಗಳ ಬಗೆಗೆ ಐತಿಹ್ಯಗಳೇನೂ ಇಂದಿಗೂ ದೊರೆ ಯುತ್ತಿಲ್ಲ. ಇವುಗಳಲ್ಲಿ ಅನೇಕ ಪ್ರಾಚೀನವಾದ ಕೆರೆಗಳೆ ಆಗಿವೆ ಎಂಬುದರಲ್ಲಿ ಸಂದೇಹವಿಲ್ಲ. ಮನುಷ್ಯರೂ, ಪ್ರಾಣಿಗಳೂ ಗುಂಪು ಗುಂಪಾಗಿ ವಾಸಿಸುವೆಡೆಗಳಲ್ಲಿ ಇಂತಹ ಕೆರೆಗಳು ಅಗತ್ಯವಿರುತ್ತವೆ. ಇಂದು ಕೆಲವು ಕೆರೆಗಳು ದೇವಾಲಯಗಳ ಅವಶ್ಯಕತೆಗಳಾಗಿ ಪರಿವರ್ತನೆ ಗೊಂಡಿವೆ. ಕೆಲವು ಇಂದಿಗೂ ಹಾಗೆಯೇ ಪ್ರತ್ಯೇಕವಾಗಿಯೇ ಉಳಿದಿವೆ. ಕೆಲವು ಕೆರೆಗಳ ಸಮೀಪ ಮಹಾಶಿಲಾ ಸ್ಮಾರಕಗಳೂ ಇವೆ. ಇವುಗಳಲ್ಲಿ ಕೆಲವು ಅಶೋಕನ ಕಾಲದ ಕೆರೆಗಳೂ ಇರಬಹುದು.

ಅಂದರೆ ಮೌರ್ಯರ ಕಾಲದ ಕೇರಳವು ಒಂದು ಕೃಷಿ ಉತ್ಪನ್ನಗಳ ನಾಡಾಗಿ ಬೆಳೆದಿರಲಿಲ್ಲ ಎನ್ನುವುದಕ್ಕೆ ಕೌಟಿಲ್ಯನ ಅರ್ಥಶಾಸ್ತ್ರದ ಉಲ್ಲೇಖಗಳೂ ಪೂರಕವಾಗುತ್ತವೆ. ಅಲ್ಲಿ ಮುತ್ತು, ರತ್ನಗಳ ವಿವರಗಳನ್ನೇ ಮುಖ್ಯ ವಾಣಿಜ್ಯ ವಸ್ತುಗಳನ್ನಾಗಿ ಹೇಳಿದ್ದಾನೆಯೇ ಹೊರತು ಕೇರಳದ ಕೃಷಿ ಉತ್ಪನ್ನಗಳನ್ನಲ್ಲ. ಒಂದು ಎರಡನೆಯ ಶತಮಾನದ ಹೊತ್ತಿಗೆ ವಿಶ್ವ ಮಾರುಕಟ್ಟೆಯಲ್ಲಿ ಪ್ರಮುಖ ವ್ಯಾಪಾರಿ ಸರಕಾದ ಕಾಳುಮೆಣಸು ಆಗಿನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ದಾಖಲಾಗಿರಲ್ಲ.

ಕೊಡಗಿನ ಬ್ರಹ್ಮಗಿರಿಯಲ್ಲಿ ಇತಿಹಾಸ ಪೂರ್ವದ ಮಹಾಶಿಲಾ ಸ್ಮಾರಕಗಳನ್ನು ಮತ್ತೆ ಮತ್ತೆ ಸ್ಥಾಪಿಸಲಾಗಿತ್ತು. ಮೌರ್ಯರ ಆಕ್ರಮಣದ ನಂತರದ ಕಾಲಘಟ್ಟದಲ್ಲಿಯೂ ಈ ಶಿಲಾಸ್ಮಾರಕಗಳ ಸಂಖ್ಯೆ ಹೆಚ್ಚಿದ್ದವು. ಅಂದರೆ ಈ ಜನ ಸಮುದಾಯವು ಕೃಷಿಯನ್ನು ಒಪ್ಪಿಕೊಂಡಿರಲಿಲ್ಲ ಎಂದು ಇದರಿಂದ ವ್ಯಕ್ತವಾಗುತ್ತದೆ.

ಕೃಷಿ ಪ್ರದೇಶಗಳಿಗಿಂತಲೂ ‘ಮನ್ರಂ’ (ಗೋಮಾಳಗಳು) ಮುಖ್ಯವಾಗಿದ್ದವು. ‘ಮನ್ರಂ’ನ ಒಡೆಯನೇ ಮುಂದೆ ‘ಮನ್ನ’(ರಾಜ)ನಾಗುತ್ತಿದ್ದುದು. ಹಸುಗಳನ್ನು ಮೇಯಿಸುವಾಗ ಹಿಡಿಯುವ ‘ಕೋಲು’ ರಾಜ್ಯಾಧಿಕಾರದ ಚಿಹ್ನೆಯಾಗಿತ್ತು. ಇದರಿಂದಾಗಿ ರಾಜರುಗಳಿಗೆ ‘ಕೋ’ ಎಂಬ ಹೆಸರು ದೊರೆಯುತ್ತಿತ್ತು.

ಒಂದೊಂದು ಗೋತ್ರಕ್ಕೆ ಒಂದೊಂದು ಮನ್ರಂ ಇರುತ್ತಿತ್ತು. ಹಲವು ಬಾರಿ ಒಂದು ಮರದ ಬುಡವನ್ನೇ ‘ಮನ್ರಂ’ ಆಗಿ ಮಾಡಿಕೊಳ್ಳುತ್ತಿದ್ದರು. ಹಲವು ಗೋತ್ರಗಳವರೂ ಹಲವು ತೆರನ ಮರಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಒಂದೊಂದು ಗೋತ್ರದ ಜಾನುವಾರುಗಳು ಪರಸ್ಪರ ಅದಲು ಬದಲಾಗದಿರಲೆಂದು ಒಬ್ಬೊಬ್ಬರು ಪ್ರತ್ಯೇಕ ಪ್ರತ್ಯೇಕ ಮರಗಳನ್ನು ‘ಮನ್ರಂ’ಗಳಾಗಿ ಆಯ್ಕೆ ಮಾಡುತ್ತಿದ್ದಿರಬೇಕು. ಮುಖ್ಯವಾಗಿ ಕದಂಬ, ಬೇವು, ಬೇಙಿ, ಹಾಲೆ ಮೊದಲಾದ ಮರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಒಂದೊಂದು ಗೋತ್ರದವರು ಒಂದೊಂದು ಮರವನ್ನು ತಮ್ಮ ಕುಲದೇವತೆಯಾಗಿ ಆಯ್ಕೆ ಮಾಡಿಕೊಂಡರು. ಆ ಮರದ ಬುಡದಲ್ಲಿ ಆಯಾ ಗೋತ್ರದ ಸದಸ್ಯರು ಸಭೆ ಸೇರಿ ಗೋತ್ರ ಸಂಬಂಧಿ ವಿಚಾರಗಳನ್ನು ಚರ್ಚಿಸುತ್ತಿದ್ದರು.

ಗಣ ಚಿಹ್ನೆಯಾದ ಕುಲವೃಕ್ಷಗಳನ್ನು ಸ್ವಗಣದ ಯಾರೂ ಕಡಿಯುತ್ತಿರಲಿಲ್ಲ. ಒಂದು ಗಣದ ಕುಲವೃಕ್ಷವನ್ನು ಕಡಿಯುವುದು ಶತ್ರುಗಣದವರಿಗೆ ವಿಜಯದ ಸಂಕೇತವಾಗಿರುತ್ತಿತ್ತು. ಕುಲವೃಕ್ಷವನ್ನು ‘ಕಾವಲುವೃಕ್ಷ’ ಎಂದೂ ಹೇಳುತ್ತಿದ್ದರು. ಕಾವಲುವೃಕ್ಷವನ್ನು ಕಡಿಯುವದು ಆ ಗಣವನ್ನು ಆಕ್ರಮಣ ಮಾಡುವುದರ ಮುನ್ನುಡಿಯಾಗಿತ್ತು.

ಗೋತ್ರ ಮುಖ್ಯಸ್ಥನ ನೇತೃತ್ವದಲ್ಲಿ ನಡೆಯುವ ಗೋತ್ರ ಸಭೆಯೇ ಗೋತ್ರದ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಕೊಡುತ್ತಿತ್ತು. ಪ್ರಾಚೀನ ಗೋತ್ರ ಸಭೆಯ ಅವಶಿಷ್ಟ್ಯಗಳು ಕೇರಳದ ಗಿರಿಜನರಲ್ಲಿ ಇಂದಿಗೂ ಕಾಣಬಹುದಾಗಿದೆ. ಮಲಯ ಜನರಿಗೆ ಇಪ್ಪತ್ತೋ ಮುವತ್ತೋ ಮನೆಗಳಿರುವ ಒಂದೊಂದು ಗ್ರಾಮಕ್ಕೂ ಒಬ್ಬೊಬ್ಬ ಮುಖ್ಯಸ್ಥನಿರುತ್ತಾನೆ. ಆತನೇ ಎಲ್ಲಾ ಸಂಘಗಳ ಅಧ್ಯಕ್ಷತೆ ವಹಿಸುವವನು. ಹಿರಿಯರನ್ನೊಳಗೊಂಡ ಸಮಿತಿ ಯೊಂದರ ಸಲಹೆ, ಸೂಚನೆಯ ಮೇರೆಗೆ ಆತ ತನ್ನ ಸಮುದಾಯದಲ್ಲಿ ನಡೆಯಬಹುದಾದ ಗೊಂದಲಗಳನ್ನು ಪರಿಹರಿಸುವನು. ಅಪರಾಧಿಗಳನ್ನು ಶಿಕ್ಷಿಸುವುದೋ, ಗಡಿಪಾರು ಮಾಡುವುದನ್ನೋ ಮಾಡುತ್ತಿದ್ದರು. ಕುಲದ ಮುಖ್ಯಸ್ಥ ‘ಪಣಿಯನ್’ ಆಗಿರುತ್ತಿದ್ದ.

‘ಕಾಣಿ’ ಎಂಬ ಜನವರ್ಗದಲ್ಲೂ ಇದೇ ತೆರನ ಸಂಪ್ರದಾಯವಿದೆ. ಹತ್ತೋ, ಹದಿನೈದೋ ಕುಟುಂಬಗಳು ನೆಲೆಸಿರುವ ಪ್ರದೇಶಕ್ಕೆ ‘ಕುಡಿ’ ಎಂದು ಹೇಳುವರು. ಕುಡಿಯ ಮುಖ್ಯಸ್ಥ ಕಾಣಿಕಾರನ್. ಕಾಣಿಕಾರನ ಸೂರಿನ ಕೆಳಗೆ ಎಲ್ಲರೂ ಸಭೆ ಸೇರುವುದು. ಅವರು ಸಾರ್ವತ್ರಿಕವಾಗಿ ಒಂದು ನಿರ್ಧಾರ ಕೈಗೊಳ್ಳುವರು. ನಿರ್ಧಾರಕ್ಕೆ ಅನುಗುಣವಾಗಿ ಶಿಕ್ಷೆ ಕೊಡುವುದು, ಸಭೆಯನ್ನು ನಿಯಂತ್ರಿಸುವುದು ಕಾಣಿಕಾರ.

ಮನ್ರಂನ ಒಳಗೆ ಮೇಲು-ಕೀಳು ಎಂಬ ಭೇದ ಭಾವ ಇದ್ದಿರಲಿಲ್ಲ. ಯಾರು ಯಾರನ್ನೂ ದೂಷಿಸುವುದೆಂದಿಲ್ಲ. ಎಲ್ಲರೂ ಸಮಾನರಾಗಿದ್ದರು. ಈ ಸಂಪ್ರದಾಯ ಗಿರಿಜನರಲ್ಲಿ ಇಂದಿಗೂ ಮುಂದುವರೆದಿದೆ. ನೋವು-ನಲಿವುಗಳಲ್ಲಿ ದುಡಿಮೆ ಇತ್ಯಾದಿಗಳಲ್ಲೆಲ್ಲ ಒಂದು ಒಗ್ಗಟ್ಟು ಗಿರಿವರ್ಗದ ಜನರಲ್ಲಿೊೊಕಾಣಬಹುದು. ಅಗತ್ಯಕ್ಕೆ ಬೇಕಾದುದನ್ನು ಎಲ್ಲರೂ ಕೂಡಿ ಉತ್ಪಾದಿಸುವುದು ಬಳಿಕ ಎಲ್ಲರೂ ಸೇರಿ ಅನುಭವಿಸುವುದು ಇದು ಗಿರಿವರ್ಗದ ಜನರ ಸಮಾಜನೀತಿಯಾಗಿತ್ತು.

ವೈದಿಕ ಪರಂಪರೆ

ದಕ್ಷಿಣ ಭಾರತಕ್ಕೆ ಆರ್ಯರು ಬಂದ ಬಳಿಕ ವೈದಿಕ ಸಂಸ್ಕೃತಿಯು ಬೇರು ಬಿಟ್ಟಿತು. ದಕ್ಷಿಣ ಭಾಗಕ್ಕೆ ಆರ್ಯರು ಯಾವಾಗ ಬಂದರು ಎಂದು ಖಚಿತವಾಗಿ ಹೇಳಲು ಇದುವರೆಗೂ ಸಾಧ್ಯವಾಗಲಿಲ್ಲ. ಕ್ರಿ.ಶ. ಮೊದಲ ಶತಮಾನಗಳಲ್ಲೇ ಅವರು ದಕ್ಷಿಣಕ್ಕೆ ಬಂದಿರಬಹುದೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಸರಿಸುಮಾರು ಅದೇ ಕಾಲಘಟ್ಟದಲ್ಲಿ ರಚಿಸಲಾಯಿತೆಂದು ಭಾವಿಸಲಾದ ತಮಿಳು ಸಂಘಂ ಸಾಹಿತ್ಯದಲ್ಲಿ ಬ್ರಾಹ್ಮಣರು ಮತ್ತು ಅವರ ಆಚರಣೆಗಳ ಕುರಿತು ಪರಾಮರ್ಶೆಗಳಿವೆ. ಕ್ರಿ.ಶ. ಆರು ಏಳನೆಯ ಶತಮಾನದ ವೇಳೆಗೆ ದಕ್ಷಿಣ ಭಾರತದಲ್ಲಿ ವೈದಿಕರು ಪ್ರಾಬಲ್ಯ ಪಡೆದಿದ್ದರು. ವೇದ, ನ್ಯಾಯ, ವ್ಯಾಕರಣ, ಜ್ಯೋತಿಷ್ಯ, ಮೀಮಾಂಸೆ, ಮೊದಲಾದ ಶಾಸ್ತ್ರ ವಿಷಯಗಳನ್ನು ಕಲಿಸಲು ಕೆಲವು ಪ್ರಮುಖ ಕೇಂದ್ರಗಳನ್ನು ಆ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಸ್ಥಾಪಿಸಲಾಗಿತ್ತು. ಪ್ರಮುಖ ದೇವಾಲಯಗಳಲ್ಲೂ ವೇದ ಶಾಸ್ತ್ರಾದಿಗಳ ಅಧ್ಯಾಪನಕ್ಕಾಗಿ ವಿದ್ಯಾ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಅಂತಹ ಕೇಂದ್ರಗಳನ್ನು ಶಾಲೆಗಳು ಎಂದೇ ಕರೆಯುತ್ತಿದ್ದರು. ಪಾರ್ಥಿವಪುರಂ ಶಾಲಾ, ಕಾಂತಳೂರ್ ಶಾಲಾ, ಶ್ರೀವಲ್ಲಭಪುರಂ ಶಾಲಾ ಮೊದಲಾದವು ಆ ಕಾಲದಲ್ಲಿದ್ದ ಪ್ರಮುಖ ಶಾಲೆಗಳು. ಪಾರ್ಥಿವಪುರಂ ಶಾಲೆಯಲ್ಲಿ ಪವಿೞಿಯಂ (ಪ್ರಕೞಿಯಂ ಋಗ್ವೇದದ ಆಶ್ವಲಾಯನ ಶಾಖೆ) ತೈತ್ತೀರಿಯಂ (ಕೃಷ್ಣ ಯಜುರ್ವೇದದ ಜೈಮಿನಿ ಶಾಖೆ) ಮೊದಲಾದವುಗಳನ್ನು ಕಲಿಸುತ್ತಿದ್ದ ಬಗೆಗೆ ಸೂಚನೆಗಳಿವೆ.

ದೇವಸ್ಥಾನಗಳು ಮತ್ತು ಬ್ರಹ್ಮಸ್ಥಾನಗಳು

ದೇವಾಲಯಗಳಿಗೆ ಸಂಬಂಧಪಟ್ಟ ವೇದಾಧ್ಯಯನ ಕೇಂದ್ರಗಳು ನಂತರದ ಕಾಲ ಘಟ್ಟಗಳಲ್ಲಿ ಅನೇಕ ಸ್ಥಳಗಳಲ್ಲಿ ಸ್ಥಾಪನೆಗೊಂಡವು. ವೇದಗಳು ಅವುಗಳಿಗೆ ಸಂಬಂಧಿಸಿದ ವಿಷಯಗಳಲ್ಲದೆ ವ್ಯಾಕರಣ, ಮೀಮಾಂಸೆ ಮೊದಲಾದ ಶಾಸ್ತ್ರ ವಿಷಯಗಳನ್ನು ಅಲ್ಲಿ ಕಲಿಸಲಾಗುತ್ತಿತ್ತು. ತೃಶ್ಶೂರ್, ತಿರುವಲ್ಲ, ಕೋಟ್ಟಯಂ ಮೊದಲಾದ ಸ್ಥಳಗಳಲ್ಲಿದ್ದ ದೇವಾಲಯಗಳಲ್ಲಿ ನಂಬೂದಿರಿ ಯುವಕರಿಗೆ ವೇದಗಳನ್ನು ಕಲಿಯುವ ಸೌಕರ್ಯಗಳಿದ್ದವು. ಅವರಿಗೆ ವಸತಿ, ಊಟೋಪಚಾರಗಳನ್ನು ಉಚಿತವಾಗಿ ಕೊಡಲಾಗುತ್ತಿತ್ತು. ಕೇವಲ ದೇವಸ್ಥಾನಗಳಲ್ಲಷ್ಟೇ ಅಲ್ಲದೆ ಶ್ರೀಮಂತರಾದ ನಂಬೂದಿರಿ ಬ್ರಾಹ್ಮಣರ ಮನೆಗಳಲ್ಲೂ ವೇದಾಧ್ಯಯನಗಳಿಗೆ ಅವಕಾಶವಿತ್ತು. ಅಲ್ಲಿಯೂ ಸೌಕರ್ಯಗಳನ್ನು ಕೊಡಲಾಗುತ್ತಿತ್ತು. ಅಧ್ಯಾಪಕರನ್ನು ನೇಮಿಸಿ ಅವರಿಗೂ ಆಶ್ರಯವನ್ನಿತ್ತು ಶ್ರೀಮಂತ ನಂಬೂದಿರಿಗಳು ಮನೆ ಗಳಲ್ಲಿ ವೇದಾಧ್ಯಯನವನ್ನು ಪ್ರೋತ್ಸಾಹಿಸಿದರು. ಹೀಗೆ ದೇವಸ್ಥಾನಗಳಲ್ಲೂ ನಂಬೂದಿರಿ ಬ್ರಾಹ್ಮಣರ ಮನೆ (ಬ್ರಹ್ಮಸ್ಥಾನ)ಗಳಲ್ಲೂ ವೇದಾಧ್ಯಯನದ ಕೇಂದ್ರಗಳು ರೂಪುಗೊಂಡವು. ದೇವಸ್ಥಾನಗಳು ಆರ್ಥಿಕವಾಗಿ ಕ್ಷೀಣಿಸಿದ ಪರಿಣಾಮವಾಗಿ ಅಲ್ಲಿ ವೇದಾಧ್ಯಯನಗಳು ಕ್ರಮೇಣ ಇಲ್ಲವಾದವು. ಬದಲಾದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳಿಗನುಗುಣವಾಗಿ ಶ್ರೀಮಂತ ನಂಬೂದಿರಿ ಬ್ರಾಹ್ಮಣರ ಮನೆತನಗಳು ವಿಚ್ಛಿದ್ರಗೊಂಡವು. ಪರಿಣಾಮವಾಗಿ ಅಲ್ಲಿಯೂ ವೇದಾಧ್ಯಯನ ಕೇಂದ್ರಗಳು ಇಲ್ಲವಾದವು. ತೃಶ್ಶೂರಿನಲ್ಲಿರುವ ಬ್ರಹ್ಮಸ್ವಮಠ ದಂತಹ ಕೆಲವು ವೇದಾಧ್ಯಯನ ಕೇಂದ್ರಗಳು ಮಾತ್ರವೇ ಸ್ವಲ್ಪ ಮಟ್ಟಿಗೆ ಇಂದಿಗೂ ಕಾರ್ಯ ಪ್ರವೃತ್ತವಾಗಿವೆ.

ನಂಬೂದಿರಿ ಬ್ರಾಹ್ಮಣರಿಗೆಲ್ಲಾ ವೇದಾಧ್ಯಯನ ಕಡ್ಡಾಯವಾಗಿತ್ತು. ಗುರು ಹೇಳಿ ಕೊಟ್ಟುದನ್ನು ಶಿಷ್ಯರು ಕಂಠಪಾಠ ಮಾಡುವ ಮೂಲಕ ವೇದಾಧ್ಯಯನ ನಡೆಯುತ್ತಿತ್ತು. ವೇದವನ್ನು ಕಲಿಯುವ ಮೌಖಿಕ ಪರಂಪರೆ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಜಾರಿಯಲ್ಲಿತ್ತು. ಇಂದಿಗೂ ಸಂಪೂರ್ಣ ಸಾಕ್ಷರರಾದ ಕೇರಳೀಯರಲ್ಲೂ ಈ ಮೌಖಿಕ ಪದ್ಧತಿಯೇ ವೇದಾಧ್ಯಯನಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿದೆ. ದೈನಂದಿನ ಬದುಕಿನ ಕೆಲವು ವಿಶಿಷ್ಟ ಆಚರಣೆಗಳ ಸಂದರ್ಭದಲ್ಲಿ ವೇದಗಳನ್ನು ಪಠಿಸುವ ಕ್ರಮವಿದೆ. ಆಗೆಲ್ಲ ಉರು ಹೊಡೆಯುದೆ ಪುಸ್ತಕ ನೋಡಿ ಹೇಳುವಂತಿರಲಿಲ್ಲ. ಆ ಕಾರಣಕ್ಕಾಗಿ ವೇದಗಳನ್ನು ಕಂಠಪಾಠ ಮಾಡಿಕೊಳ್ಳಲೇ ಬೇಕಾಗಿತ್ತು. ಕೇರಳದಲ್ಲಿ ಇದನ್ನೇ ‘ಜಪ’ ಎನ್ನುವರು.

ವೇದವನ್ನು ಕಲಿಸುವುದಕ್ಕೆ ‘ಉಪದೇಶ’ ಎಂದು ಹೇಳುತ್ತಾರೆ. ಆದರೆ ವೇದ ಭಾಗಗಳನ್ನು ‘ಮಂತ್ರಗಳು’ ಎಂದು ಕರೆಯಲಾಗುತ್ತದೆ. ಉಪದೇಶ, ಮಂತ್ರ, ಈ ಪದಗಳೆಲ್ಲ ವೇದಗಳು ಪವಿತ್ರವೆಂಬುದನ್ನು ಸೂಚಿಸುತ್ತವೆ.

ವೇದಾರಂಭ

ಶಿಷ್ಯನು ಗುರುವಿಗೆ ವಂದಿಸಿ ವೇದೋಪದೇಶಕ್ಕೆ ವಿನಂತಿಸಿಕೊಳ್ಳುವನು. ಬಳಿಕ ಗುರು ಅಧ್ಯಾಪನವನ್ನು ಆರಂಭಿಸುವನು. ಶಿಷ್ಯರು ಮತ್ತು ಗುರು ಪದ್ಮಾಸನ ಹಾಕಿ ಎದುರು ಬದುರಾಗಿ ಕುಳಿತುಕೊಳ್ಳುವರು. ಗುರು ಮಂತ್ರಗಳನ್ನು ಒಂದೊಂದಾಗಿ ಹೇಳಿಕೊಡುವನು. ಇದು ರಜಾ ದಿನಗಳನ್ನು ಹೊರತು ಪಡಿಸಿ ಎಲ್ಲ ದಿನಗಳಲ್ಲಿ ದಿನವಿಡೀ ನಡೆಯುತ್ತದೆ. ಈ ರೀತಿ ಮಂತ್ರಗಳನ್ನು ಆಚಾರ್ಯನು ಪೂರ್ಣವಾಗಿ ಶಿಷ್ಯನಿಗೆ ಉಪದೇಶಿಸುವನು. ಇದನ್ನು ‘ಮುದಲ್‌ಮುಱ’ (ಮೊದಲೋಱ) ಎಂದು ಹೇಳುವರು. ನಂಬೂದಿರಿ ಬ್ರಾಹ್ಮಣರಲ್ಲಿ ವೇದಾಧಿಕಾರ ಇರುವವರು ಎಂದು ಇಲ್ಲದವರು ಎಂದು ಎರಡು ವಿಭಾಗಗಳಿವೆ. ವೇದಾಧ್ಯಯನದ ಅಧಿಕಾರ ಪಡೆದ ಆರ್ಯರು ಇಲ್ಲಿಗೆ ಬಂದು ಸ್ಥಳೀಯರಲ್ಲಿ ಅನೇಕರನ್ನು ನಂಬೂದಿರಿಗಳಾಗಿ ಪರಿವರ್ತಿಸಿದರು. ಹಾಗೆ ಪರಿವರ್ತನೆಗೊಂಡ ನಂಬೂದಿರಿಗಳಿಗೆ ಬ್ರಾಹ್ಮಣತ್ವವನ್ನು ಕೊಟ್ಟರಾದರೂ ವೇದಾಧಿಕಾರವನ್ನು ಕೊಡಲಿಲ್ಲ. ಯಾವುದೋ ಕಾರಣಗಳಿ ಗಾಗಿ ಮೂರು ತಲೆಮಾರುಗಳವರೆಗೆ ವೇದಾಧ್ಯಯನವನ್ನು ಮಾಡದವರೂ ಕೂಡಾ ವೇದಾಧಿಕಾರ ಇಲ್ಲದವರೆಂದು ನಂಬೂದಿರಿ ಬ್ರಾಹ್ಮಣರಲ್ಲಿ ನಂಬಿಕೆಯಿದೆ. ಇಂಥವರು ‘ಮುದಲ್ ಮುಱ’ದ ಮೂಲಕ ವೇದಾಧ್ಯಯನವನ್ನು ಮಾಡಬಹುದು.

ಮುದಲ್‌ಮುರದ ಬಳಿಕ ‘ಸಂಹಿತೆ’ಯನ್ನು ಉರು ಹೊಡೆಯಲು ಕಲಿಸುವರು. ಸಂಹಿತೆ ಯನ್ನು ನಂಬೂದಿರಿ ಬ್ರಾಹ್ಮಣರು ವ್ಯವಹಾರದಲ್ಲಿ ‘ಚಙತ’ಯೆಂದೇ ಹೇಳುವರು. ನಂಬೂದಿರಿಗಳ ಮನೆಗಳಲ್ಲಿ ವೇದಾಧ್ಯಯನಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಇವಿಷ್ಟನ್ನು ಮನೆಗಳಲ್ಲಿಯೇ ಹೇಳಿಕೊಡುತ್ತಿದ್ದರು. ಇದಕ್ಕಿಂತ ಹೆಚ್ಚಿನದನ್ನು ಕಲಿಯಲು ಬ್ರಹ್ಮಸ್ವಮಠ ದಂತಹ ಅಧ್ಯಯನ ಕೇಂದ್ರಗಳಿಗೆ ಹೋಗುತ್ತಿದ್ದರು.

ಮತ ಧರ್ಮಗಳು

ಪ್ರಾಚೀನ ಕಾಲದಿಂದಲೂ ಕೇರಳವು ವೈವಿಧ್ಯಮಯವಾದ ಸಂಸ್ಕೃತಿ ಹಾಗೂ ಜೀವನ ರೀತಿಗಳ ಆಡುಂಬೊಲವಾಗಿತ್ತು. ಇಲ್ಲಿನ ವೈವಿಧ್ಯತೆಗೆ ಪ್ರಾದೇಶಿಕವಾದ ಹಾಗೂ ವಿದೇಶದ ಅನೇಕ ಘಟಕಗಳು ಕೊಡುಗೆಗಳನ್ನು ನೀಡಿವೆ. ಆರಂಭ ಕಾಲದಿಂದಲೂ ಮತಾಚಾರಗಳ ಮತ್ತು ಜೀವನ ಸಂಪ್ರದಾಯಗಳ ವಿಷಯದಲ್ಲಿ ಕೇರಳವು ದ್ರಾವಿಡ ಸಂಸ್ಕೃತಿಯನ್ನೇ ಅನುಸರಿಸಿದೆ. ಕ್ರಮೇಣ ಉತ್ತರ ಭಾರತದಿಂದ ಹಲವು ಮತದರ್ಶನಗಳು, ಜೀವನ ಪದ್ಧತಿಗಳು ಕೇರಳವನ್ನು ಪ್ರವೇಶಿಸಿದವು. ಜನರ ಬೆಂಬಲವನ್ನು ಗಳಿಸಲು ಇವು ತಮ್ಮೊಳಗೆ ಪರಸ್ಪರ ಸ್ಪರ್ಧೆಗಿಳಿದಿದ್ದುವು ಎಂದೇ ಹೇಳಬಹುದು. ಕೇರಳದ ಸಾಂಸ್ಕೃತಿಕ ಸಮನ್ವಯದ ಚರಿತ್ರೆಯನ್ನು ತಿಳಿಯ ಬಯಸುವವರಿಗೆ ಕುತೂಹಲಕರವಾದ ಸಂಗತಿ ಎಂದರೆ ಆರ್ಯ ದ್ರಾವಿಡ ಸಂಸ್ಕೃತಿಗಳ ಸಮನ್ವಯ ಮತ್ತು ಬೌದ್ಧ-ಜೈನ ಮತಗಳ ಉತ್ಥಾನ ಮತ್ತು ಅವನತಿ. ಇದೇ ವೇಳೆಗೆ ವ್ಯಾಪಾರದ ಮೂಲಕ ವಿದೇಶ ರಾಷ್ಟ್ರಗಳ ಕ್ರೈಸ್ತ, ಇಸ್ಲಾಂ, ಯೆಹೂದಿ ಮತಗಳು ಕೇರಳವನ್ನು ಪ್ರವೇಶಿಸಿದವು. ಕೇರಳದ ಸಮ್ಮಿಶ್ರ ಸಂಸ್ಕೃತಿಯು ಹಲವು ಮತ ಧರ್ಮಗಳ  ಪ್ರಭಾವಲಯ ದಲ್ಲಿ ಬೆಳೆದು ವಿಕಾಸ ಪಥವನ್ನು ತುಳಿದ ಚಾರಿತ್ರಿಕ ಘಟನೆಗಳ ವಿವರಗಳನ್ನು ಈ ಅಧ್ಯಾಯಲ್ಲಿ ವಿಸ್ತರಿಸಬಹುದು.

ದ್ರಾವಿಡ

ಕೇರಳೀಯರ ಮತೀಯವಾದ ಜೀವನ ವಿಧಾನಗಳು, ಪುರಾತನವಾದ ಆಚಾರಗಳು ಮತ್ತು ಚಟುವಟಿಕೆಗಳ ವಿಚಿತ್ರ ತೆರನ ಮಿಶ್ರಣವಾಗಿತ್ತು. ಅಂದು ಪ್ರಾದೇಶಿಕ ಪ್ರಭೇದಗಳು ಧಾರಾಳ ಇದ್ದವು.

ವೃಕ್ಷಾರಾಧನೆ ಮತ್ತು ಪಿತೃಪೂಜೆ ಅಂದು ಸಾಮಾನ್ಯವಾಗಿತ್ತು. ಸಂಕುಚಿತವಾದ ಜಾತಿ, ಮತ, ವಿಚಾರಗಳಿಗೆ ಅಂದು ಸ್ಥಾನವಿರಲಿಲ್ಲ. ದುಡಿಮೆಯ ಮಹತ್ವವನ್ನು ನಂಬಿದ್ದ ಅಂದಿನ ಸಮಾಜದ ಕಲ್ಪನೆಯಲ್ಲಿ ಸಮನ್ವಯಕ್ಕೂ, ಸ್ವಾತಂತ್ರ್ಯಕ್ಕೂ ಪ್ರಮುಖವಾದ ಸ್ಥಾನವಿತ್ತು. ಅದನ್ನು ಬೇಕಾದರೆ ಸ್ವತಂತ್ರ ಸಮಾಜ ಎಂದೇ ಕರೆಯಬಹುದು. ಶುದ್ದಾಶುದ್ಧಗಳು ಅಂದು ಯಾರಿಗೂ ತಿಳಿದಿರಲಿಲ್ಲ. ಹಿಂದಿನ ಕಾಲದಿಂದಲೇ ಪ್ರಬಲವಾಗಿದ್ದ ಜಾತಿ ಸಂಪ್ರದಾಯದ  ಮೊಳಕೆ ಕೂಡ ಆ ಕಾಲದಲ್ಲಿ ಕಾಣಿಸಿಕೊಂಡಿರಲಿಲ್ಲ.

ಹೀಗೆ ಸಾಮಾಜಿಕವಾಗಿ ವಿಂಗಡಣೆಗಳನ್ನು ಇನ್ನೂ ಅಂಗೀಕರಿಸದ ಜೀವನ ಸಂಪ್ರದಾಯವು ನೆಲೆ ನಿಂತಿರುವ ಕಾಲದಲ್ಲಿ ಕೇರಳಕ್ಕೆ ಬೌದ್ಧ, ಜೈನ, ಹಾಗೂ ಬ್ರಾಹ್ಮಣ ಮತಗಳು ಕಾಲಿಟ್ಟವು. ಈ ಮತಗಳಲ್ಲಿ ಬಹಳ ಕಡಿಮೆ ಸಂಖ್ಯೆಯ ಜನರು ಮಾತ್ರ ಅಂದು ಸೇರಿಕೊಂಡಿದ್ದರು. ಏನಿದ್ದರೂ ಸಾಮಾಜಿಕವಾದ ಸ್ಪರ್ಧೆ ಅಂದು ಯಾವ ರೂಪದಲ್ಲಿಯೂ ಪ್ರತ್ಯಕ್ಷವಾಗಿರಲಿಲ್ಲ. ಜನರಲ್ಲಿ ಸಹಿಷ್ಣುತಾ ಮನೋಭಾವವೇ ಮುಖ್ಯವಾಗಿತ್ತು. ಏಕ ಕಾಲದಲ್ಲಿ ಅವರು ಬೌದ್ಧ, ಜೈನ, ಆರಾಧನ ಕೇಂದ್ರಗಳಲ್ಲಿ ಪೂಜೆ ಸಲ್ಲಿಸುತ್ತಿದ್ದರು. ವೈದಿಕ ವಿಧಿ ಪ್ರಕಾರದಲ್ಲೂ ಕರ್ಮಗಳನ್ನೂ ನಿರ್ವಹಿಸುತ್ತಿದ್ದರು. ದ್ವೇಷವೋ, ಮಾತ್ಸರ್ಯವೋ ಪ್ರಕಟಿಸದೆ ವಿವಿಧ ಮತಗಳು ಅಂದು ಇಲ್ಲಿ ಒಂದುಗೂಡಿ ಬಾಳಿದವು. ಸಾಂಸ್ಕೃತಿಕ ಸಮನ್ವಯದ ಸಾಮಾಜಿಕ ಸೌಹಾರ್ದದ ವಾತಾವರಣ ಎಲ್ಲೆಡೆ ನೆಲೆ ನಿಂತಿತ್ತು.

ಜೈನ ಮತ

ಕ್ರಿಸ್ತನಿಗೂ ಮೊದಲೇ ಜೈನಮತ ಕೇರಳದಲ್ಲಿ ಪ್ರಚಾರಕ್ಕೆ ಬಂದಿತ್ತು. ಆರಂಭದಲ್ಲಿ ಕೇರಳಕ್ಕೆ ಬಂದ ಜೈನಮತ ಪ್ರಚಾರಕರಿಗೆ ಮತ ಪ್ರಚಾರಕ್ಕಿಂತಲೂ ಹೆಚ್ಚಿನ ಆಸಕ್ತಿ ಶಾಂತಿ ಕಂಡುಕೊಳ್ಳುವುದರತ್ತಲೇ ಇತ್ತು. ಧ್ಯಾನಕ್ಕೆ ಅನುಕೂಲವಾದ ಪರಿಸರವನ್ನು ಅವರು ಕೇರಳ ದಲ್ಲಿ ಕಂಡುಕೊಂಡರು. ಶಿಲಪ್ಪದಿಕಾರಂ, ಮಣಿಮೇಖಲೈ ಮೊದಲಾದ ತಮಿಳು ಕೃತಿಗಳಲ್ಲಿ ಜೈನ ಸಂನ್ಯಾಸಿಗಳ ಚಟುವಟಿಕೆಗಳ ಕುರಿತು ಪರಾಮರ್ಶಿಸಲಾಗಿದೆ. ಶಿಲಪ್ಪದಿಕಾರಂನ ಕರ್ತೃವಾದ ಇಳಂಗೋಅಡಿಗಳು ಜೈನ ಮತಾನುಯಾಯಿಗಳಾಗಿದ್ದರು. ಮದಿಲಗಂ(ತಮಿಳಿನ ಕಣವಾಯಿಲ್ ಕೋಟೆ)ನಲ್ಲಿ ಆತ ನೆಲೆಸಿದ್ದ. ಅಂದು ಅದೊಂದು ಪ್ರಸಿದ್ಧ ಜೈನ ಆರಾಧನಾ ಕೇಂದ್ರವಾಗಿತ್ತು. ಮದಿಲಗದ ಜೈನ ಕೇಂದ್ರ ಸುಪ್ರಸಿದ್ಧವಾಗಿದೆ. ಸುತ್ತಮುತ್ತಲಿನ ಉಳಿದ ಆರಾಧನಾ ಸ್ಥಳಗಳನ್ನು ಇದರ ಉಪಕೇಂದ್ರವಾಗಿ ಪರಿಗಣಿಸಲಾಗಿತ್ತು. ಮದಿಲಗದ ಜೈನ ಕೇಂದ್ರವೂ ಮತ್ತಿತರ ಜೈನ ದೇವಾಲಯಗಳೆಲ್ಲ ಜೈನಮತದ ಅವನತಿಯ ಕಾಲದಲ್ಲಿ ಹಿಂದೂ ಕ್ಷೇತ್ರಗಳಾಗಿ ಪರಿವರ್ತನೆಗೊಂಡವು. ಜೈನ ಮತಾನುಯಾಯಿಗಳೂ ಹಿಂದೂ ಮತಾನುಯಾಯಿಗಳಾದರು (ಶ್ರೀಧರ ಮೇನೋನ್ ಎ.; ೧೯೯೬:೧೪).

ಇಂದು ಭರತ ಕ್ಷೇತ್ರವೆಂದು ಪ್ರಸಿದ್ದವಾದ ಇರಿಂಜಾಲಕುಡದ ಕೂಡಲ್ ಮಾಣಿಕ್ಯ ಕ್ಷೇತ್ರಂ ಒಂದು ಕಾಲದಲ್ಲಿ ಜೈನ ದೇವಾಲಯವಾಗಿತ್ತು ಎಂದು ತಿಳಿದು ಬರುತ್ತದೆ. ಜೈನ ದಿಗಂಬರನಾದ ಭರತೇಶ್ವರನನ್ನು ಅಂದು ಅಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಇಂದು ಭಗವತಿಯ ಪ್ರತಿಷ್ಠೆ ಇರುವ ಪೆರುಂಬಾವೂರಿನ ಕಲ್ಲಿಲ್ ದೇವಸ್ಥಾನವು ಆರಂಭ ಕಾಲದಲ್ಲಿ ಜೈನ ದೇವಾಲಯವಾಗಿತ್ತು. ಪಾರ್ಶ್ವನಾಥ, ಮಹಾವೀರ ತೀರ್ಥಂಕರ, ಪದ್ಮಾವತಿ ದೇವಿ ಮೊದಲಾದ ಜೈನಬಿಂಬಗಳನ್ನು ಅಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಉತ್ತರ ಕೇರಳದ ಇಡಯಲ್ ಬೆಟ್ಟದಲ್ಲಿ ಇರುವ ಭಗವತಿ ದೇವಸ್ಥಾನ, ವಯನಾಡಿನ ಸುಲ್ತಾನ್ ಬತ್ತೇರಿ (ಗಣಪತಿವಟ್ಟಂ), ಮಾನಂದವಾಡಿ, ಕಾಸರಗೋಡು, ವಯನಾಡು, ಪಾಲಕ್ಕಾಡ್ ಮೊದಲಾದ ಪ್ರದೇಶಗಳಲ್ಲಿ ಜೈನ ಕೇಂದ್ರಗಳು ಇಂದಿಗೂ ಇವೆ. ಮಂಜೇಶ್ವರ, ಮಾನಂದವಾಡಿ, ಕಲ್‌ಪ್ಪಟ್ಟ, ವಡಕಂತರ, ಕಾವಶ್ಶೆರಿ ಮೊದಲಾದವುಗಳನ್ನು ಹೆಸರಿಸಬಹುದು. ಕೊಚ್ಚಿ, ಆಲಪ್ಪುೞಗಳಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ಜೈನ ಕುಟುಂಬಗಳು ಇಂದಿಗೂ ಇವೆ. ಇವರ ದೇವಾಯಲಗಳೂ ಇವೆ.

ಕೇರಳದಲ್ಲಿ ಜೈನಮತದ ಅಧಃಪತನವು ಕ್ರಿ.ಶ. ೮ನೆಯ ಶತಮಾನದಲ್ಲಿ ಪ್ರಾರಂಭ ವಾಯಿತು. ಹದಿನಾರನೆಯ ಶತಮಾನ ಆಗುವಷ್ಟರಲ್ಲಿ ಅದು ಸಂಪೂರ್ಣ ನಾಮಾವಶೇಷ ವಾಯಿತು. ಹಿಂದೂ ದೇವಾಲಯ ಹಾಗೂ ಮುಸಲ್ಮಾನರ ಅರಾಧನಾಲಯಗಳ ಶಿಲ್ಪಗಳಲ್ಲಿ ಜೈನ ಶಿಲ್ಪಗಳ ಪ್ರಭಾವವಿದೆ ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ (ಶ್ರೀಧರ ಮೇನೋನ್ ಎ.: ೧೯೯೬: ೧೪). ಆದರೂ ಬೌದ್ಧ ಮತದಷ್ಟು ಪ್ರಭಾವಯುತವಾಗಿ ಕೇರಳದಲ್ಲಿ ಜೈನ ಮತವು ಇದ್ದಿರಲಿಲ್ಲ ಎಂದು ಹೇಳಬಹುದು.

ಬೌದ್ಧಮತ

ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಅಂದರೆ ಅಶೋಕನ ಕಾಲದಲ್ಲಿ ಕೇರಳದಲ್ಲಿ ಬೌದ್ಧಮತ ಪ್ರಚಾರಕ್ಕೆ ಬಂತು. ಬೌದ್ಧ ಭಿಕ್ಷುಗಳ ಚಟುವಟಿಕೆಗಳ ಕುರಿತು ಕ್ರಿ.ಶ. ಮೊದಲನೆಯ ಶತಮಾನದಲ್ಲಿ ರಚನೆಗೊಂಡ ಸಂಘಂ ಕೃತಿಗಳಲ್ಲಿ ಉಲ್ಲೇಖಗಳಿವೆ. ಮಣಿ ಮೇಖಲೈ ಒಂದು ಬೌದ್ಧ ಗ್ರಂಥ. ಬುದ್ಧನ ತತ್ವೋಪದೇಶಗಳನ್ನು ಅದರಲ್ಲಿ ವಿವರಿಸಲಾಗಿದೆ. ಇಂದಿನ ಪ್ರಮುಖ ಹಿಂದೂ ದೇವಾಲಯಗಳು ಒಂದು ಕಾಲದಲ್ಲಿ ಬೌದ್ಧ ದೇವಾಲಯ ಗಳಾಗಿದ್ದವು. ತೃಶ್ಶೂರಿನ ವಡಕುನ್ನಾಥನ್ ದೇವಾಲಯ, ಕಯಕೂಟ್ಟದ ಸಮೀಪವಿರುವ ಶಿವ ದೇವಾಲಯ ಮೊದಲಾದವು ಈ ಪಟ್ಟಿಯಲ್ಲಿ ಬರುತ್ತವೆ. ಕೇರಳದ ಪ್ರಸಿದ್ಧ ಬೌದ್ಧ ಚೈತ್ಯಾಲಯಗಳು ನೆಲೆಗೊಂಡಿದ್ದುದು ಹೆಚ್ಚಾಗಿ ಇಂದಿನ ಕೊಲ್ಲಂ, ಆಲಪ್ಪುೞ ಜಿಲ್ಲೆಗಳಲ್ಲಿ. ಆ ಪ್ರದೇಶಗಳಲ್ಲಿ ದೊರೆತ ಬೌದ್ಧ ವಿಗ್ರಹಗಳು ಇತರ ಬೌದ್ಧಮತ ಅವಶೇಷಗಳು ಈ ವಸ್ತುಸ್ಥಿತಿಯನ್ನು ಖಚಿತಪಡಿಸುತ್ತವೆ. ಅಂಬುಲಪುೞದ ಕರುಮಾಡಿಕುಟ್ಟನ್ ಪ್ರಸಿದ್ಧವಾದ ಬುದ್ಧ ವಿಗ್ರಹಗಳಲ್ಲೊಂದು. ಅಷ್ಟೇ ಅಲ್ಲದೆ ಮಾವೇಲಿಕ್ಕರ, ಭರಣಿಕ್ಕಾವ್, ಮರುತೂರ್ ಕುಳಙರ, ಪಳ್ಳಿಕ್ಕಲ್ ಮೊದಲಾದೆಡೆಗಳಲ್ಲಿ ಶಿಲೆಗಳಿಂದ ನಿರ್ಮಿಸಿದ ಬುದ್ಧ ವಿಗ್ರಹಗಳು ದೊರೆತಿವೆ.

ದಕ್ಷಿಣ ಭಾರತದಲ್ಲೆಡೆ ಪ್ರಸಿದ್ದಿ ಪಡೆದ ಶ್ರೀಮೂಲವಾಸಂ ಎಂಬ ಬುದ್ಧನ ಆರಾಧನಾ ಕೇಂದ್ರವು ಆಲಪ್ಪುೞ ಜಿಲ್ಲೆಯ ಅಂಬಲಪುೞಕ್ಕೂ ತೃಕ್ಕುನ್ನಪುೞಕ್ಕೂ ನಡುವೆ ಇದ್ದಿರಬಹು ದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಚೀನ ಕೇರಳದ ಹಿಂದೂ ರಾಜರುಗಳು ಪರಮತ ಸಹಿಷ್ಣುತೆಯನ್ನು ಪ್ರಕಟಿಸಿದ್ದಾರೆ. ಅವರು ಬೌದ್ಧ ಮತಕ್ಕೆ ಹಾಗೂ ಅವರ ಆರಾಧನ ಕೇಂದ್ರಗಳಿಗೆ ಸಾಕಷ್ಟು ನೆರವನ್ನು ನೀಡಿದ್ದಾರೆ. ವಿೞಿಞಮನ್ನು ರಾಜಧಾನಿಯನ್ನಾಗಿ ಮಾಡಿ ರಾಜ್ಯವಾಳಿದ ವಿಕ್ರಮಾದಿತ್ಯವರಗುಣ ಎಂಬ ‘ಆಯ್’ ರಾಜನ (ಕ್ರಿ.ಶ. ೮೮೫-೯೨೫) ಪಾಲಿಯಂ ಶಾಸನ ಇದಕ್ಕೆ ಸಾಕ್ಷಿಯೊದಗಿಸುತ್ತದೆ. ಶ್ರೀ ಮೂಲವಾಸಂ ದೇವಸ್ಥಾನಕ್ಕೆ ವರಗುಣನ್ ಭೂದಾನ ನೀಡಿದ ಬಗೆಗೆ ವಿವರಗಳು ಪಾಲಿಯಂ ಶಾಸನದಲ್ಲಿವೆ.

ಬೌದ್ಧ ಮತದ ಅಧಃಪತನವು ಆರಂಭವಾದುದು ಕ್ರಿ.ಶ. ಎಂಟನೆಯ ಶತಮಾನದಲ್ಲಿ.  ಕೇರಳದ ಸಾಮಾಜಿಕ ಜೀವನವು ನಂಬೂದಿರಿಯರ ನಿಯಂತ್ರಣದಲ್ಲಿದ್ದ ಕಾಲಘಟ್ಟವದು. ಕ್ರಿ.ಶ. ಹನ್ನೆರಡನೆಯ ಶತಮಾನದ ವೇಳೆಗೆ ನಂಬೂದಿರಿಗಳ ಪ್ರಭಾವ ಉಚ್ಛ್ರಾಯ ಸ್ಥಿತಿಗೆ ತಲುಪಿತು. ಆ ಮೂಲಕ ಬೌದ್ಧ ಮತದ ಕ್ಷಯವೂ ಅನಿವಾರ್ಯವಾಯಿತು. ಒಂಭತ್ತನೆಯ ಶತಮಾನದ ಶಾಸನಗಳು ಹಲವು ಬೌದ್ಧ ದೇವಾಲಯಗಳ ಪತನವನ್ನು ದಾಖಲಿಸುತ್ತವೆ. ಆದರೂ ಕೇರಳ ಸಂಸ್ಕೃತಿಯಲ್ಲಿ ಶಾಶ್ವತನಾದ ಕೆಲವು ಮುದ್ರೆಗಳನ್ನು ಉಳಿಸಿಕೊಳ್ಳಲು ಬೌದ್ಧ ಧರ್ಮಕ್ಕೆ ಸಾಧ್ಯವಾಗಿದೆ. ವಾಸ್ತವವಾಗಿ ಬೌದ್ಧ ಧರ್ಮವು ಹಿಂದೂ ಧರ್ಮದಲ್ಲಿ ವಿಲೀನವಾಯಿತೆಂದೇ ಹೇಳಬಹುದು.

ಬೌದ್ಧ ಮತಕ್ಕೆ ಸಂಬಂಧಿಸಿದ ಕೆಲವು ಆರಾಧನಾ ಸಂಪ್ರದಾಯಗಳು ಹಾಗೂ ಹಲವು ಆಚರಣೆಗಳನ್ನು ಹಿಂದೂ ಮತ ಸ್ವೀಕರಿಸಿದೆ. ಶಾಸ್ತಾವ್ ಅಥವಾ ಅಯ್ಯಪ್ಪ ಬುದ್ಧನ ಹೈಂದವ ರೂಪವೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕೇರಳದೆಲ್ಲೆಡೆ ಪ್ರಚಲಿತದಲ್ಲಿರುವ ನಾಗಾರಾಧನೆಯ ಸಂಪ್ರದಾಯ ಬೌದ್ಧ ಧರ್ಮದ ಕೊಡುಗೆಯೇ ಹೌದು. ಕೇರಳದ ಹಿಂದೂ ದೇವಸ್ಥಾನಗಳಲ್ಲಿನ ಉತ್ಸವಾಚರಣೆಗಳು, ಬಲಿ ಪ್ರದರ್ಶನ, ವಿಗ್ರಹಗಳು ಎಲ್ಲವೂ ಬೌದ್ಧ ಧರ್ಮದ ಅನುಕರಣೆಯಿಂದ ರೂಪ ಪಡೆದವುಗಳು. ವೈದ್ಯ ಶಾಸ್ತ್ರಕ್ಕೂ ಬೌದ್ಧ ಮತವು ಗಮನಾರ್ಹವಾದ ಕೊಡುಗೆಗಳನ್ನು ನೀಡಿದೆ. ಅಷ್ಟಾಂಗ ಹೃದಯ ಬರೆದ ವಾಗ್ಭಟ ಬೌದ್ಧ ಮತಾನುಯಾಯಿಯಾಗಿದ್ದ. ಕೇರಳದಲ್ಲಿ ತುಂಬಾ ಪ್ರಚಾರ ಪಡೆದ ಅಮರಕೋಶದ ಕರ್ತೃ ಅಮರಸಿಂಹನೂ ಬೌದ್ಧ ಮತಾನುಯಾಯಿಯಾಗಿದ್ದನು. ಮಲಯಾಳಂ ಭಾಷೆಯಲ್ಲಿ ಸೇರಿಕೊಂಡಿರುವ ಪಾಲಿ ಭಾಷೆಯ ಪದಗಳೂ ಸಹ ಕೇರಳ ಮತ್ತು ಬೌದ್ಧ ಧರ್ಮದ ಪರಸ್ಪರ ಸಂಬಂಧಕ್ಕೆ ನಿದರ್ಶನಗಳಾಗಿವೆ. ಬೌದ್ಧ ವಿಹಾರಗಳೊಡನೆ ವಿದ್ಯಾಭ್ಯಾಸ ಕೆಂದ್ರಗಳನ್ನು ಸ್ಥಾಪಿಸುವ ಸಂಪ್ರದಾಯ ಕೇರಳದಲ್ಲಿತ್ತು. ಕೇರಳದ ದೇವಾಲಯಗಳಲ್ಲಿನ ವಾಸ್ತುಶಿಲ್ಪದಲ್ಲಿ ಬೌದ್ಧ ಧರ್ಮದ ಪ್ರಭಾವ ನಿಚ್ಚಳವಾಗಿದೆ. ಮಲಯಾಳಂ ಸಾಹಿತ್ಯದಲ್ಲಿಯೂ ಸಹ ಬೌದ್ಧ ಮತದ ಪ್ರಭಾವವನ್ನು ಗುರುತಿಸಲಾಗಿದೆ.

ಹಿಂದೂ ಮತದ ಬೆಳವಣಿಗೆ

ಕೇರಳದಲ್ಲಿ ಹಿಂದೂ ಮತದ ಬೆಳವಣಿಗೆಯು ಇತರ ಮತಗಳೊಡನೆ ಅದಕ್ಕಿರುವ ಸಂಬಂಧದ ಸಾಂಸ್ಕೃತಿಕ ಸಮನ್ವಯದ ಹಿನ್ನೆಲೆಯಲ್ಲಿ ನಡೆದಿದೆ. ಆರ್ಯ ಸಂಸ್ಕೃತಿ ಕೇರಳಕ್ಕೆ ಕಾಲಿಟ್ಟುದು ಕ್ರೈಸ್ತ ಮತ ಕೇರಳಕ್ಕೆ ಬರುವ ಮೂರೋ, ನಾಲ್ಕೋ ಶತಮಾನದ ಮೊದಲು. ಅದು ಇಲ್ಲಿ ನೆಲೆ ನಿಂತಿದ್ದ ದ್ರಾವಿಡ ಸಂಸ್ಕೃತಿಯನ್ನು ತನ್ನ ಅಧೀನಕ್ಕೆ ತೆಗೆದುಕೊಂಡಿತು. ಆ ಮೂಲಕ ಪ್ರಾದೇಶಿಕವಾದ ಸಂಸ್ಕೃತಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಯಿತು. ಕ್ರಿ.ಶ. ೫ನೆಯ ಶತಮಾನದ ವೇಳೆಗೆ ಆರ್ಯ ಸಂಸ್ಕೃತಿಯು ಕೇರಳದೆಲ್ಲೆಡೆ ವ್ಯಾಪಿಸಿ ತನ್ನ ಪ್ರಭುತ್ವವನ್ನು ಸ್ಥಾಪಿಸಿತ್ತು. ಸಾಮಾಜಿಕ ಬದುಕಿನಲ್ಲಿ ಅದರಲ್ಲೂ ಮೇಲು ವರ್ಗದವರ ಬದುಕಿನಲ್ಲಿ ಅದರ ಪ್ರಭಾವ ನಿಚ್ಚಳವಾಗಿತ್ತು. ಆರ್ಯ ಸಂಸ್ಕೃತಿಯು ಪ್ರಚಾರಕ್ಕೆ ಬರುತ್ತಲೇ ಜಾತಿ ವ್ಯವಸ್ಥೆಯೂ ರೂಢಿಗೆ ಬಂತು. ಕೇರಳದ ಸಾಮಾಜಿಕ ಜೀವನದಲ್ಲಿ ಉನ್ನತ ಸ್ತರದಲ್ಲಿದ್ದ ವಾಣರು, ಬೇಡರು, ಕುರವರು ಮೊದಲಾದ ದ್ರಾವಿಡ ಜನವರ್ಗದವರು ಆರ್ಯರ ಪ್ರವೇಶದೊಡನೆ ಸಮಾಜದ ಕೆಳಸ್ತರಕ್ಕೆ ಸೇರಿದರು. ಶಿಕ್ಷಣ ಹಾಗೂ ತಂತ್ರಜ್ಞಾನ ಗಳಲ್ಲಿ ಬೌದ್ದಿಕವಾಗಿ ಪ್ರೌಢರಾಗಿದ್ದ ದ್ರಾವಿಡ ಜನವರ್ಗದವರನ್ನು ತಮ್ಮವರನ್ನಾಗಿ ಮಾಡಿಕೊಳ್ಳಲು ಆರ್ಯರು ಶ್ರಮಿಸಿದರು. ಇದರ ಪರಿಣಾಮವಾಗಿಯೇ ಕಪಿಲರಂತಹ ದ್ರಾವಿಡ ಕವಿಗಳನ್ನು ಬ್ರಾಹ್ಮಣರಾಗಿ ಅಂಗೀಕರಿಸಲು ಅವರು ಮುಂದಾದರು. ಆರ್ಯರ ಪ್ರಾಬಲ್ಯದಿಂದಾಗಿ ಜಾತಿ ಸಂಪ್ರದಾಯವು ಕೇರಳದ ಸಾಮಾಜಿಕ ಜೀವನದ ಅವಿಭಾಜ್ಯ ಅಂಗವಾಯಿತು.

ಹಿಂದೂ ಮತದ ವಿಕಾಸಕ್ಕೆ ಸಮನಾಂತರವಾಗಿ ಜೈನ, ಬೌದ್ಧ ಮತಗಳ ಅಧಃಪತನವೂ ನಡೆಯಿತು. ಹಿಂದೂ ಮತದ ನೇತೃತ್ವವು ಬೌದ್ಧ ಮತದೊಡನೆಯೋ, ಜೈನ ಮತದೊಡನೆಯೋ ಆಕ್ರಮಣಕ್ಕೆ ತೊಡಗಿರಲಿಲ್ಲ. ಆಕ್ರಮಣಾಸಕ್ತಿ ಇಲ್ಲದೆಯೇ ಅದು ತನ್ನ ನೆಲೆಯನ್ನು ಕಂಡುಕೊಂಡಿತು. ಎಂಟನೇ ಶತಮಾನದ ಹೊತ್ತಿಗೆ ಕೇರಳವು ಹಿಂದೂ ಮತದ ನವೋತ್ಥಾನದ ಕೇಂದ್ರವಾಗಿತ್ತು. ಕೇರಳಕ್ಕೆ ಹೊರಗಿನಿಂದ ಬಂದ ಆರು ಮಂದಿ ಹಿಂದೂ ಪಂಡಿತರು ಬೌದ್ಧ ಮತಾನುಯಾಯಿಗಳೊಡನೆ ವಾಗ್ವಾದಕ್ಕಿಳಿದು ಅವರನ್ನು ಸೋಲಿಸಿದರು. ಪರಿಣಾಮವಾಗಿ ಕೇರಳದಲ್ಲಿ ಹಿಂದೂ ಮತ ಸ್ಥಾಪನೆಗೆ ನಾಂದಿಯಾಯಿತು ಎಂಬುದು ವಿದ್ವಾಂಸರ ಅಭಿಪ್ರಾಯ. ಶಾಸ್ತ್ರಗಳ ಅಧ್ಯಯನಕ್ಕೆ ಅವರು ನಿರ್ದಿಷ್ಟ ಸೂತ್ರಗಳನ್ನು ಅಳವಡಿಸಿದ್ದರು. ಅವರ ಶಿಷ್ಯನಲ್ಲಿ ಪ್ರಮುಖನಾದವನು ಮೀಮಾಂಸಕನಾದ ಪ್ರಭಾಕರನ್. ಪ್ರಭಾಕರನು ತನ್ನದಾದ ಒಂದು ಚಿಂತನಾ ರೀತಿಯನ್ನು ಮಂಡಿಸುವುದರ ಮೂಲಕ ಒಂದು ಶಿಷ್ಟ ಸಮೂಹಕ್ಕೆ ಗುರುವಾದನು. ಪ್ರಭಾಕರನ್ ಮತಕ್ಕೆ ಗುರುಮತ ಎಂದೂ ಹೆಸರಿದೆ.

ಶಂಕರಾಚಾರ್ಯರು

ಕೇರಳದ ಹಿಂದೂ ಮತದ ಪರಂಪರೆಯಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವವರೇ ಶ್ರೀಶಂಕರಾಚಾರ್ಯರು (ಕ್ರಿ.ಶ. ೭೮೮-೮೨೦). ಈತ ಕಾಲಡಿ ಎಂಬಲ್ಲಿ ಜನಿಸಿದ ನಂಬೂದಿರಿ ಬ್ರಾಹ್ಮಣ. ಕೇರಳದ ಸಾಂಸ್ಕೃತಿಕ ಸಮನ್ವಯದ ಪರಂಪರೆಯಲ್ಲಿ ಮಕುಟ ಪ್ರಾಯರಾದವರು ಶ್ರೀಶಂಕರಾಚಾರ್ಯ. ಯುಕ್ತಿರಾಹಿತ್ಯದ ಜೇಡರಬಲೆಯಿಂದ ಹಿಂದೂ ಮತವನ್ನು ಬಿಡುಗಡೆ ಗೊಳಿಸಿ ವೇದಾಂತ ಪದ್ಧತಿಗಳನ್ನು ಪ್ರಮಾಣೀಕರಿಸಿದರು. ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತವು ಆತ್ಮ ಮತ್ತು ಬ್ರಹ್ಮನಿಗೆ ಇರುವ ಸಂಬಂಧದಲ್ಲಿ ಅದ್ವೈತ ಭಾವಕ್ಕೆ ಪ್ರಾಮುಖ್ಯತೆ ಕೊಡುತ್ತದೆ. ಒಂದೇ ಇರುವ ಪರಮಾತ್ಮನನ್ನು ಭಿನ್ನ ಭಿನ್ನ ರೂಪಗಳಲ್ಲಿ ಕಾಣುವುದಕ್ಕೆ, ಆರಾಧಿಸುವುದಕ್ಕೆ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ಭಾರತಾದ್ಯಂತ ಸಂಚರಿಸಿದ ಶ್ರೀಶಂಕರಾಚಾರ್ಯರು ಜೈನ, ಬೌದ್ಧಮತದ ಅನೇಕ ಪಂಡಿತರೊಡನೆ ವಾಗ್ವಾದಕ್ಕಿಳಿದು ಅವರನ್ನು ಪರಾಜಯಗೊಳಿಸಿದರು. ತನ್ನ ಬೌದ್ದಿಕ ಸಾಮರ್ಥ್ಯದಿಂದ ಅನೇಕ ಶಿಷ್ಯರನ್ನು ಪಡೆದರು.

ಬುದ್ಧಮತ ಮತ್ತು ಹಿಂದೂ ಮತಗಳಲ್ಲಿರುವ ಉತ್ಕೃಷ್ಟ ವಿಚಾರಗಳನ್ನು ಕೂಡಿ ಹೆಣೆಯಲು ಶಂಕರಾಚಾರ್ಯರು ಶ್ರಮವಹಿಸಿದರು. ಈ ಲಕ್ಷ್ಯವನ್ನೇ ಗುರಿಯಾಗಿರಿಸಿ ಭಾರತದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು. ಉತ್ತರದಲ್ಲಿ ಬದರೀನಾಥದಲ್ಲೂ, ಪೂರ್ವದ ಪುರಿಯಲ್ಲೂ, ಪಶ್ಚಿಮದ ದ್ವಾರಕೆಯಲ್ಲಿ, ದಕ್ಷಿಣದ ಶೃಂಗೇರಿಯಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಮಠಗಳು ಭಾರತದ ಏಕತೆಯನ್ನು ಕುರಿತು ಶಂಕರರ ಮೂಲ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನೆಲ್ಲ ಮಾಡಿದುದು ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ ಎಂಬುದನ್ನು ಗಮನಿಸಬೇಕು. ಆಗಲೆ ಭಾರತ ರಾಷ್ಟ್ರೀಯತೆಯ ಕಲ್ಪನೆಯೂ ರೂಪು ಪಡೆಯುತ್ತಿತ್ತು ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ.

ಬೌದ್ಧ ಮತದ ತತ್ವಗಳನ್ನು ಹಾಗೂ ಅದರ ಸಂಘಗಳನ್ನು ಅನುಸರಿಸುವ ಶಂಕರಾಚಾರ್ಯರ ಪ್ರಯತ್ನಗಳಿಂದಾಗಿ ಅವರಿಗೆ ಪ್ರಚ್ಛನ್ನಬುದ್ಧ ಎಂಬ ಹೆಸರು ಬಂತು. ಮಧ್ಯಕಾಲದ ಭಾರತದ ಮತ ಧರ್ಮಗಳ ಚರಿತ್ರೆಗೆ ತಳಹದಿಯೆನಿಸಿದ ಸಾಂಸ್ಕೃತಿಕ ಸಮನ್ವಯ ಎಂಬುದರ ಅಡಿಗಲ್ಲು ನೆಟ್ಟವರು ಶಂಕರಾಚಾರ್ಯರು ಎಂಬಂತಹ ಅಭಿಪ್ರಾಯಗಳನ್ನು ವಿದ್ವಾಂಸರು ಪ್ರಕಟಿಸಿದ್ದಾರೆ. ಶಂಕರರ ದರ್ಶನಗಳಲ್ಲಿ ಇಸ್ಲಾಂ ಪ್ರಭಾವವನ್ನು ಗುರುತಿಸುವ ಪ್ರಯತ್ನವನ್ನು ಪ್ರೊ. ಸರ್ ಹುಮಾಯೂನ್ ಕಬೀರ್ Indian heritage ಎಂಬ ಗ್ರಂಥದಲ್ಲಿ ಮಾಡಿದ್ದಾರೆ. ಶಂಕರಾಚಾರ್ಯರ ಅದ್ವೈತ, ದ್ವೈತ ನಿಷೇಧ, ವೇದ ಪ್ರಾಮಾಣ್ಯವನ್ನು ತಳಹದಿ ಯಾಗಿರಿಸಿದ ತತ್ವ ಸಿದ್ದಾಂತಗಳು, ಅಪೌರುಷೇಯವಾದ ಸತ್ಯವನ್ನು ಮೌಲಿಕವಾದ ಪಾವಿತ್ರ್ಯವನ್ನು ಪುನಸ್ಥಾಪಿಸುವುದೇ ಶಂಕರಾಚಾರ್ಯರ ನಿಲುವು. ಇಲ್ಲೆಲ್ಲ ಇಸ್ಲಾಂನ ಪ್ರಭಾವವು ಬೌದ್ಧ ಮತದ ಮೇಲಾಗಿದೆ ಎಂಬುದನ್ನು ಪ್ರೊ. ಕಬೀರ್ ಗುರುತಿಸುತ್ತಾರೆ (ಶ್ರೀಧರ ಮೇನೋನ್ ಎ.: ೧೯೯೬:೧೯). ಈ ಅಭಿಪ್ರಾಯದಲ್ಲಿ ಸಾರ್ವಜನಿಕವಾಗಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಅದರೂ ಕಾಲಡಿಯಲ್ಲಿ ಜನಿಸಿದ ಶಂಕರರಿಗೆ ಸಮೀಪದ ಮುಸಿರಿಸನ್ನು ಕೇಂದ್ರೀಕರಿಸಿ ಬೆಳೆದು ಬಂದ ಇಸ್ಲಾಂನ ಪಂಥಾಹ್ವಾನವನ್ನು ಅರ್ಥ ಮಾಡಿ ಕೊಳ್ಳುವುದು ಸಾಧ್ಯವಾಗಿರಬೇಕು. ಹಾಗಾಗಿಯೇ ತನ್ನ ಮತಕ್ಕೆ ಪುನರುಜ್ಜೀವನ ಕೊಡಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿರಬೇಕು. ಶಂಕರರು ಹಿಂದೂ ಮತದ ನವೋತ್ಥಾನದ ಜೀವವೂ, ಚೈತನ್ಯವೂ ಆಗಿದ್ದರು. ಭಾರತದ ಸಾಂಸ್ಕೃತಿಕ ಸಮನ್ವಯಕ್ಕೆ ಕೇರಳದ ಕೊಡುಗೆಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದರೆ ಶಂಕರರ ಜೀವನ ಹಾಗೂ ಚಟುವಟಿಕೆ ಗಳಿಂದ ಗಮನಿಸಿದರೆ ಅನೇಕ ಮಾಹಿತಿಗಳು ದೊರೆಯಬಹುದು.

ಭಕ್ತಿಪಂಥ

ಪ್ರಭಾಕರ ಮತ್ತು ಶಂಕರರ ವಿಚಾರಧಾರೆಗಳಿಗೆ ಸಹಜವಾಗಿಯೇ ಕೆಲವು ಮಿತಿಗಳೂ ಇದ್ದವು. ಬೌದ್ದಿಕ ಸಾಮರ್ಥ್ಯದಿಂದ ಲಭಿಸಿದ ಅವರ ವಿಚಾರಧಾರೆಗಳು ಬುದ್ದಿಜೀವಿಗಳನ್ನು ಮಾತ್ರ ಆಕರ್ಷಿಸಿದವು. ಸಂಸ್ಕೃತ ಭಾಷೆಯಲ್ಲಿಯೇ ಅವರ ವಿಚಾರಗಳು ಪ್ರಚಾರಗೊಂಡವು. ಆ ಭಾಷೆಯ ಅರಿವಿಲ್ಲದ ಅನೇಕರಿಗೆ ಅವುಗಳನ್ನು ಅರ್ಥೈಸುವುದು ಸಾಧ್ಯವಾಗಲಿಲ್ಲ. ಪ್ರಭಾಕರನ ಹಾಗೂ ಶಂಕರಾಚಾರ್ಯರ ಈ ಲೋಪವನ್ನು ನೀಗಿಸಿದವರು ಭಕ್ತಿಪಂಥದ ಯತಿವರ್ಯರುಗಳು. ವೈಷ್ಣವ ಆಚಾರ್ಯನಾದ ಕುಲಶೇಖರ ಆಳ್ವಾರರೂ ಶೈವಾಚಾರ್ಯ ನಾದ ಚೇರಮಾನ್ ಪೆರುಮಾಳ್ ನಾಯನಾರ್, ವಿರಲ್ ಮಿಂಡನಾಯನಾರ್ ಮೊದಲಾದ ವರೆಲ್ಲ ಭಕ್ತಿ ಪಂಥವೊಂದನ್ನು ಹುಟ್ಟು ಹಾಕಿದರು. ತೀರಾ ಭಾವುಕವಾದ ಆ ಭಕ್ತಿಪಂಥ ರೂಪುಗೊಂಡುದು ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ. ಕುಲಶೇಖರ ಆಳ್ವಾರರು ಬರೆದ ‘ಪೆರುಮಾಳ್ ತಿರುಮೊೞಿ’ಯು ಭಕ್ತಿಪಂಥದ ಮೊದಲ ಸಾಹಿತ್ಯ ಸೃಷ್ಟಿ. ಭಕ್ತಿ ಪಂಥದವರಾದ ಆಚಾರ್ಯರು ಜನಸಾಮಾನ್ಯರ ನಡುವೆ ಮತೀಯವಾದ ಹೊಸ ಎಚ್ಚರವನ್ನು ಮೂಡಿಸಿದರು. ಹಿಂದೂ ಮತದ ಕ್ಷಿಪ್ರ ಬೆಳವಣಿಗೆಗೆ ಅದು ಕಾರಣವಾಯಿತು. ಅದರ ಜೊತೆಗೆ ಜೈನ, ಬೌದ್ಧಮತಗಳ ಪತನವೂ ಪೂರ್ಣ ರೂಪದಲ್ಲಿ ಆಯಿತು.

ಆರ್ಯ ದ್ರಾವಿಡ ಸಂಕರ

ಕೇರಳದಲ್ಲಿ ಹಿಂದೂ ಮತವು ಉತ್ತರದಿಂದ ಬಂದ ಆರ್ಯರ ಹಾಗೂ ದಕ್ಷಿಣದಲ್ಲಿಯೇ ನೆಲೆಸಿದ್ದ ದ್ರಾವಿಡರ ಪರಸ್ಪರ ಸಮನ್ವಯದ ನೆಲೆಯಲ್ಲಿ ರೂಪುಗೊಂಡಿತು. ಕೇರಳದ ಹಿಂದೂ ಮತಾಚರಣೆಗಳು ಮತ್ತು ಆರ್ಯ ದ್ರಾವಿಡರ ಆಚರಣೆಗಳಲ್ಲಿ ಪರಸ್ಪರ ಹೋಲಿಕೆ ಯನ್ನು ಕಾಣಬಹುದು. ಕೇರಳದಲ್ಲಿ ನೆಲೆ ನಿಂತ ಆರ್ಯರು ಸ್ಥಳೀಯರ ಆಚಾರ ವಿಚಾರಗಳನ್ನು ಅನುಸರಿಸಿದ್ದಲ್ಲದೆ ಅವರ ದೈವ ದೇವತೆಗಳನ್ನು ತಮ್ಮ ಮತದ ಒಳಗೂ ಪ್ರತಿಷ್ಠಾಪಿಸಿದರು. ಬೌದ್ಧ ಜೈನ ಕ್ಷೇತ್ರಗಳು ಹಿಂದೂ ದೇವಸ್ಥಾನಗಳಾಗಿ ಪರಿವರ್ತನೆಗೊಂಡವು. ನಾಗಾರಾಧನೆ ಯನ್ನು ಗಮನಿಸಿದರೆ ಅದರಲ್ಲಿ ಆರ್ಯೇತರವಾದ ಗುಣ ಸ್ವಭಾವಗಳನ್ನು ಕಾಣಬಹುದು. ಎಂದರೆ ಆರ್ಯರು ನಾಗಾರಾಧನೆಯನ್ನು ಸ್ವಮತದ ಭಾಗವಾಗಿ ಪರಿಗಣಿಸಿದರು. ಸಂಘ ಕಾಲದ ಕೇರಳದಲ್ಲಿ ನಾಗಾರಾಧನೆ ಆಚರಣೆಯಲ್ಲಿದ್ದಂತೆ ಕಾಣುವುದಿಲ್ಲ. ಅದರ ತರುವಾಯವೇ ಅದರ ಪ್ರವೇಶ ಆಗಿದ್ದಿರಬೇಕು. ಅನಂತಶಯನ ಪ್ರತಿಷ್ಠೆಯು ಕೇರಳದಲ್ಲಿ ನಾಗಾರಾಧನೆಯ ಪ್ರಭುತ್ವವನ್ನು ಹೊರಗೆಡಹುತ್ತದೆ. ಹಿಂದೂ ಮತದಲ್ಲಿ ನಂತರದ ದಿನಗಳಲ್ಲಿ ನಾಗಾರಾಧನೆ ಹೆಚ್ಚು ಪ್ರಾಧಾನ್ಯವನ್ನು ಪಡೆಯಿತು. ಶಾಸ್ತಾವ್ ಬುದ್ಧನ ಹೈಂದವ ರೂಪ ಎಂಬುದನ್ನು ಒಪ್ಪದವರು ಶಾಸ್ತಾವ್ ಅಯ್ಯನಾರ್ ಎಂಬ ದ್ರಾವಿಡ ದೇವತೆಯ ರೂಪ ಎಂಬ ಅಭಿಪ್ರಾಯ ಪ್ರಕಟಿಸಿದ್ದಾರೆ. ಅವರ ಅಭಿಪ್ರಾಯದಂತೆ ಕೇರಳದಲ್ಲಿ ಆರ್ಯೀಕರಣದ ಪ್ರಚಾರ ಪಡೆದ ಕಾಲದಲ್ಲಿ ಆ ದ್ರಾವಿಡ ದೇವತೆಯನ್ನು ಹಿಂದೂ ಮತದಲ್ಲಿ ಸೇರಿಸಿಕೊಂಡಿರಬೇಕು. ಪಿತೃ ಪೂಜೆಯೂ ದ್ರಾವಿಡವೇ. ಅದು ಹೈಂದವ ಮತಾಚಾರಗಳೊಳಗೆ ನಂತರದ ದಿನಗಳಲ್ಲಿ ಸಮನ್ವಯಗೊಂಡಿರಬೇಕು.

ಕ್ರೈಸ್ತ ಮತ

ಕೇರಳದಲ್ಲಿ ಕ್ರೈಸ್ತ ಮತದ ಪ್ರಚಾರ ಮತ್ತು ವಿಕಾಸವು ಇಲ್ಲಿ ಸಂಭವಿಸಿದ ಮತ ಮತ್ತು ಸಂಸ್ಕೃತಿಗಳ ಸಮ್ಮಿಲನಕ್ಕೆ ಅತ್ಯಂತ ಉತ್ತಮ ಉದಾಹರಣೆಯಾಗಬಹುದೇನೋ. ಕ್ರಿ.ಶ. ಒಂದನೆಯ ಶತಮಾನದಲ್ಲಿಯೇ ಕ್ರೈಸ್ತ ಮತ ಕೇರಳದಲ್ಲಿ ಕಾಲಿರಿಸಿತು. ಆ ಬಳಿಕ ಮುನ್ನೂರು ವರ್ಷಗಳ ನಂತರವಷ್ಟೇ ರೋಮ್‌ನಲ್ಲಿ ಕೂಡಾ ಕ್ರೈಸ್ತ ಮತಕ್ಕೆ ಮಾನ್ಯತೆ ದೊರೆತುದು. ಕ್ರಿ.ಶ. ೫೨ರಲ್ಲಿ ಮುಸಿರಿಸ್‌ನ ಸಮೀಪದಲ್ಲಿರುವ ಮಾಲಿಯಂಕರ ಎಂಬಲ್ಲಿ ಸೈಂಟ್ ಥೋಮಸ್ ಹಡಗಿನಿಂದ ಇಳಿದ. ಅಲ್ಲಿದ್ದ ಅನೇಕ ಬ್ರಾಹ್ಮಣ ಕುಟುಂಬಗಳನ್ನು ಮತಾಂತರ ಗೊಳಿಸಿದನು ಎಂಬುದು ಕತೆ. ಸೈಂಟ್ ಥೋಮಸ್‌ನೇ ಏಳು ಇಗರ್ಜಿಗಳನ್ನು ಕಟ್ಟಿಸಿದ. ಸೈಂಟ್ ಥೋಮಸ್‌ನಿಗೆ ಸಂಬಂಧಿಸಿದ ಈ ಕತೆಯನ್ನು ಕೇರಳದ ಕ್ರಿಶ್ಚಿಯನ್ನರು ನಂಬಿದ್ದಾರೆ. ಆದರೆ ಆಧುನಿಕ ಚರಿತ್ರೆಕಾರರು ಇದಕ್ಕೆ ಸಾಕಷ್ಟು ಪುರಾವೆಗಳಿಲ್ಲವೆಂದು ತಳ್ಳಿ ಹಾಕಿದ್ದಾರೆ. ಕೇರಳ ಮತ್ತು ಮೆಡಿಟರೇನಿಯನ್ ತೀರ ಪ್ರದೇಶಗಳು ಪರಸ್ಪರ ಪ್ರಾಚೀನ ಕಾಲದಿಂದಲೇ ಇದ್ದ ವ್ಯಾಪಾರ ಸಂಬಂಧವನ್ನು ನೆನಪಿಸಿಕೊಂಡರೆ ಸೈಂಟ್ ಥೋಮಸ್‌ನ ಕುರಿತು ಇರುವ ಈ ಕತೆ ಕೇವಲ ಕಟ್ಟುಕತೆಯೆಲ್ಲ ಎಂದು ಎನ್ನುವವರೂ ಇದ್ದಾರೆ.