ವ್ಯಕ್ತಿಗಳು ವಿಭಿನ್ನ ಸ್ವರಗಳ ಸಮಾಜದ ನಡುವೆ ಬದುಕುತ್ತಿರುತ್ತಾರೆ. ಹಾಗಾಗಿ ವ್ಯಕ್ತಿಯ ಬದುಕಿನ ಎಲ್ಲಾ ಘಟಕಗಳ ಮೇಲೂ ವಿಭಿನ್ನ ಸ್ವರಗಳ ಸಮಾಜದ ಪ್ರಭಾವ ಇದ್ದೇ ಇರುತ್ತದೆ. ಈ ಪ್ರಭಾವಕ್ಕೆ ಸಿಲುಕಿದ ವ್ಯಕ್ತಿ ಪ್ರಭಾವೀ ಸಮಾಜದ ಕೆಲವು ಘಟಕಗಳನ್ನು ಸ್ವೀಕರಿಸುವ ಇನ್ನು ಕೆಲವೊಮ್ಮೆ ನಿರಾಕರಿಸುವ ಮೂಲಕ ಬೆಳೆಯಬಹುದು. ಹಾಗಾಗಿ ಕೆಲವಕ್ಕೆ ಪ್ರತಿಕ್ರಿಯಿಸುವ ಕೆಲವಕ್ಕೆ ಪ್ರತಿಕ್ರಿಯಿಸಲಾಗದೆ ಅಂತರ್ ಸಂಘರ್ಷದಲ್ಲಿ ತೊಡಗಿರುವ ಸಂದರ್ಭಗಳೂ ಇವೆ. ಇವುಗಳಿಂದಾಗಿ ಮಾನವನ ವ್ಯಕ್ತಿತ್ವಕ್ಕೆ ಒಂದು ರೂಪು ಸಿದ್ಧಗೊಳ್ಳುತ್ತದೆ. ಇದು ಅಪ್ರಜ್ಞಾಪೂರ್ವಕವಾಗಿ ರೂಢಿಸಿಕೊಂಡ ವ್ಯಕ್ತಿತ್ವವಾದರೂ ಪ್ರಜ್ಞಾಪೂರ್ವಕವಾಗಿಯೇ ನಿರ್ಮಿಸಿಕೊಂಡ ವ್ಯಕ್ತಿತ್ವವೂ ಆಗಿರುತ್ತದೆ. ಕೇರಳದ ಮಹಿಳೆಯರ ವ್ಯಕ್ತಿತ್ವವನ್ನು ಕುರಿತು ಹೇಳುವಾಗ ಈ ಮಾತು ಸ್ಪಷ್ಟವಾಗಬಹುದು. ಧಾರ್ಮಿಕ ಆಚರಣೆಗಳು, ಧರ್ಮದ ನಡಾವಳಿಗಳು, ಐತಿಹ್ಯಗಳು, ಗಾದೆಗಳು, ಕೌಟುಂಬಿಕ ಬಾಂಧವ್ಯಗಳು, ನಂಬಿಕೆಗಳು, ಹೆಣ್ಣು ಗಂಡಿನ ಸಂಬಂಧಗಳು, ಭಾಷಾ ಬಳಕೆ, ಸಾಹಿತ್ಯ,  ಕಲೆ, ಜಾತಿಗಳು, ಸಾಮಾಜಿಕ ವ್ಯವಸ್ಥೆಗಳು, ಅಧಿಕಾರ, ಆಡಳಿತ ಇವೆಲ್ಲವೂ ಇಂದಿನ ಮಾನವನ ಬದುಕಿನ ಮೇಲೆ ನೇರವಾದ ಪ್ರಭಾವ ವನ್ನು ಸ್ಥಾಪಿಸುತ್ತವೆ ಎನ್ನುವುದರಿಂದಲೇ ಇವುಗಳಿಗೆಲ್ಲ ವಿಶಿಷ್ಟವಾದ ಅರ್ಥಗಳಿವೆ.

ಮಹಿಳೆಗೆ ಸಂಬಂಧಿಸಿದಂತೆ ಈ ಮೇಲೆ ಹೇಳಿದ ಎಲ್ಲಾ ವಿಷಯಗಳಿಗೆ ಆಕೆ ಪ್ರತ್ಯಕ್ಷ ವಾಗಿಯೋ, ಪರೋಕ್ಷವಾಗಿಯೋ ಮತ್ತು ಮೌನವಾಗಿಯೋ, ಶಾಬ್ದಿಕವಾಗಿಯೋ, ಪ್ರತಿಕ್ರಿಯಿಸಲೇ ಬೇಕಾಗುತ್ತದೆ. ಆಕೆಗೆ ಕೌಟುಂಬಿಕ ಬಾಂಧವ್ಯದಲ್ಲಿ ದೊರೆಯುವುದು ಒಂದು ತೆರನ ಅನುಭವವಾದರೆ ಕಲೆ, ಸಾಹಿತ್ಯಗಳಲ್ಲಿ ದೊರೆಯುವ ಆಚಾರ ವಿಚಾರಗಳ ಅನುಭವ ಮತ್ತೊಂದು ತೆರ. ಈ ಕಾರಣದಿಂದಾಗಿ ಆಕೆಯ ವ್ಯಕ್ತಿತ್ವದಲ್ಲಿ ವೈರುಧ್ಯಗಳೇ ಕಾಣಿಸಿಕೊಂಡಲ್ಲಿ ಅಚ್ಚರಿ ಪಡಬೇಕಾಗಿಲ್ಲ. ಸ್ತ್ರೀಯರು ಇಂದು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕ ವಾಗಿ ಎಚ್ಚರಗೊಂಡಿದ್ದಾರೆ. ಸ್ತ್ರೀವಾದಿ ಅಧ್ಯಯನಗಳೂ ಅವರಲ್ಲಿ ಜಾಗೃತಿಯನ್ನು ಮೂಡಿಸಿವೆ. ಎಲ್ಲಾ ಕ್ಷೇತ್ರಗಳಲ್ಲಿ ಸ್ತ್ರೀಯರ ಚಿಂತನೆಗಳಿಗೆ, ವಿಚಾರಗಳಿಗೆ ಮಾನ್ಯತೆಯನ್ನು ಕಲ್ಪಿಸಲಾಗುತ್ತಿದೆ.

ರಾಜಕೀಯ

೧೯೩೦ರ ದಶಕದಲ್ಲಿ ನಡೆದ ಅನೇಕ ಚಳುವಳಿಗಳ ಮೂಲಕವೂ ಮಹಿಳೆಯರು ರಾಜಕೀಯವಾಗಿ, ಹೆಚ್ಚು ಸಂಘಟಿತರಾದರು. ನಾಲ್ವತ್ತರ ದಶಕದಲ್ಲಿ ನಡೆದ ಎರಡನೆಯ ಲೋಕ ಮಹಾಯುದ್ಧದ ಹಿನ್ನೆಲೆಯಲ್ಲಿ ಇಲ್ಲಿ ಮಹಿಳಾ ಹೋರಾಟಗಳು ಶಕ್ತವಾಗಿ ಬೆಳೆದವು. ಮಲಬಾರಿನ ಕೃಷಿಕ ಹೋರಾಟದಲ್ಲೂ ಹಾಗೆಯೇ ಸ್ವಾತಂತ್ರ್ಯ ಹೋರಾಟದಲ್ಲೂ ಸ್ತ್ರೀಯರು ಸಕ್ರಿಯವಾಗಿ ಭಾಗವಹಿಸಿದರು. ಚೀಮೇನಿಯ ‘ತೋಲ್‌ವಿೞಕ್ಕ್ ಸಮರಂ’ ಹಾಗೂ ಕಂಡುಂಕೈಯ ‘ಮೇಚ್ಚಿಲ್ ಪುಲ್‌ಲ್ ಸಮರಂ’ ಇವೆರಡೂ ಸ್ತ್ರೀಯರೇ ನೇತೃತ್ವ ವಹಿಸಿ ನಡೆಸಿದ ಹೋರಾಟಗಳು. ಮಲಬಾರಿನಲ್ಲಿ ಆರ್ಯಾಪಳ್ಳಂ, ಕೊಚ್ಚಿಯಲ್ಲಿ ಪಾರ್ವತಿ ನೆನ್ಮೇನಿ ಮಂಗಲಂ, ತಿರುವಾಂಕೂರಿಲ್ಲಿ ಲಲಿತಾಂಬಿಕ ಅಂತರ್ಜನಂ ಈ ಹೋರಾಟಗಳ ನೇತೃತ್ವ ವಹಿಸಿದರು. ಕಯ್ಯೂರು ಹೋರಾಟದಲ್ಲಿ ದೇವಯಾನಿಯಂತೆ ಮೌನವಾಗಿ ಭಾಗವಹಿಸಿ ದವರೂ ಅನೇಕರಿದ್ದಾರೆ. ಎಲಿಸಬೆತ್ ಕುರುವಿಳ, ಅಕ್ಕಾಮ್ಮ ಚೆರಿಯಾನ್‌ರಂತಿರುವ ಸ್ತ್ರೀಯರು ಕಾಂಗ್ರೆಸಿನ ವಕ್ತಾರರಾಗಿ ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದರು.

ಕೇರಳದ ನಂಬೂದಿರಿ ಸಮುದಾಯದ ಪರಿಷ್ಕಾರಕ್ಕಾಗಿ ಪ್ರಮುಖ ಹೋರಾಟಗಳಲ್ಲಿ ಸ್ತ್ರೀಯರು ಸಕ್ರಿಯವಾಗಿ ಪಾಲುಗೊಂಡಿದ್ದರು. ವಿ.ಟಿ. ಭಟ್ಟಾತಿರಿಪಾಡ್ ನೇತೃತ್ವದಲ್ಲಿ ಯೋಗಕ್ಷೇಮ ಸಭಾ ನಡೆಸಿದ ‘ಮಾಱ್‌ಮಱಯ್ಕಲ್ ಸಮರಂ (ಎದೆ ಮರೆಸುವ ಹೋರಾಟ)’ ‘ಕಲ್ಲುಮಾಲಾ ಪ್ರಕ್ಷೋಭಂ’ ಇವೆರಡೂ ನೇರವಾಗಿ ಸ್ತ್ರೀಯರ ಹಕ್ಕು ಬಾಧ್ಯತೆಗಳಿಗೆ ಸಂಬಂಧಿಸಿದ ಹೋರಾಟಗಳೇ ಆಗಿದ್ದವು. ಪ್ರಗತಿಪರರೆನಿಸಿದ ಗಂಡಸರ ಸಂಪೂರ್ಣ ಶ್ರಮದ ಪರಿಣಾಮವಾಗಿಯೇ ಹೋರಾಟಗಳು  ಯಶಸ್ವಿಯಾದವು ಎಂಬುದು ವಾಸ್ತವ. ಆದರೆ ಈ ಹೋರಾಟದಿಂದಾಗಿ ಮಹಿಳೆಯರ ಬದುಕಿನಲ್ಲಿ ಸಾಮಾಜಿಕವಾಗಿಯೂ ರಾಜಕೀಯವಾಗಿಯೂ ಸ್ಪಷ್ಟವಾದ ಬದಲಾವಣೆಗಳು ಕಾಣಿಸಿಕೊಂಡವು. ಸ್ತ್ರೀಯರ ಸ್ಥಾನಮಾನಗಳ ಬದಲಾವಣೆಗಳಿಗೆ ಪ್ರಗತಿಪರವೆನಿಸಿದ ರಾಜಕೀಯ ಶಕ್ತಿಗಳು ಬೆಂಬಲವಾಗಿ ನಿಂತವು. ರಾಜಕೀಯವಾಗಿ ಮಹಿಳೆ, ಮಹಿಳೆಯರ ಸಮಸ್ಯೆಗಳು ಶ್ರದ್ಧೇಯವೆನಿಸಿದವು. ಆದರೆ ಕಾಲ ಕ್ರಮೇಣ ಸಮಾಜದ ಕೆಳವರ್ಗದ ಜನ ಹಾಗೂ ಮಹಿಳೆಯರು ರಾಜಕೀಯವಾಗಿ ಶೋಷಿತರೇ ಆಗಿ ಉಳಿದು ಕೊಂಡಿದ್ದಾರೆ. ರಾಜಕೀಯವಾಗಿ ಸ್ತ್ರೀಯರು ನಿರ್ಣಾಯಕ ಪಾತ್ರವಹಿಸುವಲ್ಲಿಯೂ ಹಿಂದುಳಿದಿದ್ದಾರೆ. ಧಾರ್ಮಿಕ ಕಾರಣಗಳಿಗಾಗಿ ಒಂದು ಕಾಲದಲ್ಲಿ ಮನೆಯಲ್ಲಿಯೇ ಉಳಿದು ಕೊಂಡಿದ್ದರು. ಈಗಲೂ ಸಾಮಾಜಿಕವಾಗಿ, ಕೌಟಂಬಿಕ ಕಾರಣಗಳಿಗಾಗಿ ಮನೆ ಹಾಗೂ ಕುಟುಂಬದ ಜವಾಬ್ದಾರಿಯನ್ನು ಹೊರಿಸಿ ಸಾರ್ವಜನಿಕ ಜೀವನದಲ್ಲಿ ಹಾಗೂ ರಾಜಕೀಯ ದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಅವಿಭಕ್ತ ಕುಟುಂಬದಲ್ಲಿ ಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅನೇಕ ಜನರಿರುತ್ತಿದ್ದರು. ಆದರೆ ಅವಿಭಕ್ತ ಕುಟುಂಬ ಗಳು ವಿಘಟನೆಗೊಂಡು ಅಣು ಕುಟುಂಬಗಳಾಗಿ ಬದಲಾದುವು. ಪ್ರತಿಯೊಂದು ಅಣು ಕುಟುಂಬದ ಜವಾಬ್ದಾರಿಯೂ ಮಹಿಳೆಯದಾಯಿತು. ದುಡಿಯುವ ಮಹಿಳೆಗೂ ಕೌಟುಂಬಿಕ ಜವಾಬ್ದಾರಿ ತಪ್ಪಿದ್ದಲ್ಲ. ಈ ಕಾರಣದಿಂದ ರಾಜಕೀಯವಾಗಿಯೂ ಕೇರಳದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿಲ್ಲ ಎಂದೆನಿಸುತ್ತದೆ.

ಆತ್ಮಕತೆಯೊಂದರ ಮುನ್ನುಡಿಯೊಂದರಲ್ಲಿ ಪ್ರಸಿದ್ಧ ಲೇಖಕಿ ಶ್ರೀಮತಿ ಲಲಿತಾಂಬಿಕಾ ಅಂತರ್ಜನಂ ಹೀಗೆ ಹೇಳುತ್ತಾರೆ. “ಇಲ್ಲಿಯೂ (ಸಾಹಿತ್ಯದಲ್ಲೂ) ಅವರು ಯಾವಾಗಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಾಗಿಯೇ ಇದ್ದರು. ಸಾಹಿತ್ಯದೊಡನೆ ಹತ್ತಿರವಾಗಲು ಅವರಿಗೆ ಅಡ್ಡಿಗಳಿವೆ. ಅಲ್ಲಿಯೂ ಮಡಿಮೈಲಿಗೆಗಳಿವೆ. ಅಂತಸ್ತು ಅಭಿಮಾನಗಳಿರುವ ಕುಟುಂಬಗಳ ಸ್ತ್ರೀಯರ ಧ್ವನಿ ಹೊರಗೆ ಕೇಳಿಸಬಾರದು”.

ಈ ಉದ್ಧೃತ ವಾಕ್ಯಗಳನ್ನು ಗಮನಿಸಿದರೆ ಪ್ರಪಂಚದ ಎಲ್ಲಾ ಸ್ತ್ರೀಯರ ಪರಿಸ್ಥಿತಿಯೂ ಒಂದೇ ಎಂಬುದು ವ್ಯಕ್ತವಾಗುತ್ತದೆ. ಉದ್ಧೃತ ವಾಕ್ಯಗಳಲ್ಲಿನ ಪರಿಸ್ಥಿತಿ ಇಂದಿಗೂ ಪ್ರಶ್ನಿಸದೆ ಮುಂದುವರೆದಿದೆ. ಅದರಲ್ಲಿ ಆಕೆಗೆ ಆಶ್ಚರ್ಯವೋ, ವಿರೋಧಭಾಸವೋ, ಜಿಗುಪ್ಸೆಯೋ ಏನೂ ಅನ್ನಿಸುವುದಿಲ್ಲ. ಇಂತಹ ತಿಳುವಳಿಕೆಯ ಕೊರತೆಯಿಂದಾಗಿ ತನ್ನನ್ನು ಸೇವಕಳಾಗಿ ಅರ್ಪಿಸಿಕೊಂಡು ಇದೇ ಸ್ಥಿತಿ ತನಗೆ ನ್ಯಾಯವಾಗಿ ಲಭಿಸಿಬೇಕಾದ ಅತ್ಯಂತ ಉತ್ತಮ ಸ್ಥಿತಿ ಎಂದು ಆಕೆ ನಿಷ್ಕಳಂಕವಾಗಿ ಭಾವಿಸಿಕೊಂಡಿದ್ದಾಳೆ. ಹೇಗೆ ಇಷ್ಟು ಸರಳವಾಗಿ ಮಹಿಳೆಯ ಮನಸ್ಸನ್ನು ಪುರುಷಕೇಂದ್ರಿತವಾಗಿ ನಿರ್ಮಿಸಲು ಇತಿಹಾಸದುದ್ದಕ್ಕೂ ಸಾಧ್ಯವಾಯಿತು. ಇದಕ್ಕೆ ಲಲಿತಾಂಬಿಕಾ ಅಂತರ್ಜನ ಅವರ ಮೇಲಿನ ಉದ್ಧೃತ ಮಾತುಗಳು ಉತ್ತರ ಹೇಳುತ್ತವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದವರ ಸ್ತ್ರೀಯರ ಸ್ಥಾನಮಾನಗಳು ಸಮಾನವಾಗಿದ್ದುವು ಎಂಬುದರಿಂದ ಇದು ಸುವ್ಯಕ್ತ. ದಲಿತವರ್ಗ ಮತ್ತು  ಸ್ತ್ರೀವರ್ಗ ಇವರನ್ನು ತುಲನೆ ಮಾಡಿ ನೋಡಿದರೆ ದಲಿತರ ಸಮಸ್ಯೆಗಳು ಹೇಳುವಂತವುಗಳು ಮತ್ತು ತಾತ್ವಿಕವಾಗಿಯಾದರೂ ಪರಿಹರಿಸಬಹುದಾದಂತವು. ಆದರೆ ಅದಕ್ಕೆ ಸಮಾನವಾದ ಸ್ತ್ರೀಯರ ಸಮಸ್ಯೆಗಳು ಜೋರಾಗಿ ಹೇಳಿಕೊಳ್ಳಲೂ ಆಗದವು ಎಂದು ವ್ಯಕ್ತವಾಗುತ್ತದೆ. “ಕೇರಳದಲ್ಲಿ ಒಳ್ಳೆ ಸಾಹಿತ್ಯ ಬರಲು ಸಾಧ್ಯವಿಲ್ಲ. ಹೇಗೆ ತಾನೆ ಸಾಧ್ಯ? ಒಳ್ಳೆಯ ಸಾಹಿತ್ಯ ಬರಬೇಕಿದ್ದರೆ ಬರಹಗಾರ್ತಿಯರಿಗೆ ಏನನ್ನು ಬೇಕಾದರೂ ತೆರೆದ ಮನಸ್ಸಿನಿಂದ ಬರೆಯುವ ಸ್ವಾತಂತ್ರ್ಯ ಬೇಕು. ಅದು ಇಲ್ಲಿ ಎಂದಾದರೂ ಸಿಕ್ಕೀತೆ” (ಶ್ರೀದೇವಿ ಕೆ. ನಾಯರ್, ೨೦೦೪ : ೬). ಸ್ತ್ರೀಯರಿಗೆ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವುದಕ್ಕೂ ಸ್ವಾತಂತ್ರ್ಯವಿಲ್ಲ ಎಂಬುದು ಮಲಯಾಳಂನ ಪ್ರಸಿದ್ಧ ಲೇಖಕಿ ಮಾಧವಿಕುಟ್ಟಿಯವರು ಈ ಮಾತುಗಳಿಂದ ಸ್ಪಷ್ಟವಾಗುತ್ತದೆ.

ಕೇರಳದ ಹೆಣ್ಣು ಮಗು

ಹೆಣ್ಣು ಹುಟ್ಟಿದಾಗಿನಿಂದ ಅನೇಕ ಕಟ್ಟುಪಾಡುಗಳಲ್ಲಿ ಬೆಳೆಯುತ್ತಾ ಆಕೆ ಮುದುಡಿ ಕೊಳ್ಳುತ್ತಾಳೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಭ್ರೂಣ ಹಂತದಲ್ಲಿಯೇ ಹೆಣ್ಣು ಮಕ್ಕಳನ್ನು ನಾಶಮಾಡುವ ಪ್ರಮಾಣ ಕೇರಳದಲ್ಲಿ ಕಡಿಮೆ. ಅದಕ್ಕೆ ಮುಖ್ಯ ಕಾರಣವೆಂದರೆ ಅನೇಕ ಜಾತಿಗಳಲ್ಲಿನ ಕುಟುಂಬ ವ್ಯವಸ್ಥೆ, ದಾಯಕ್ರಮ ಇತ್ಯಾದಿಗಳನ್ನು ನೋಡಿದರೆ ಹೆಚ್ಚಿನ ಜಾತಿಗಳಲ್ಲೂ ಕುಟುಂಬದ ಭದ್ರ ನೆಲೆ ಹೆಣ್ಣು ಮಕ್ಕಳು ಎಂಬುದನ್ನು ಕಾಣಬಹುದು. ಬದಲಾದ ಜೀವನ ವಿಧಾನಗಳಲ್ಲಿ ಶಿಕ್ಷಣದ ವಿಷಯದಲ್ಲೂ ಹೆಣ್ಣು ಮತ್ತು ಗಂಡುಗಳ ನಡುವೆ ಅಂತಹ ವ್ಯತ್ಯಾಸಗಳಿಲ್ಲ. ಆದರೂ ಒಂದು ಹೆಣ್ಣುಬೆಳೆದು ಬರುವುದು ಮೇಲೆ ಸೂಚಿಸಿದ ಅಭಾವ ಪ್ರಜ್ಞೆಯಲ್ಲಿ ಅಥವಾ ಪುರುಷನ ಉಪಕರಣ ಪ್ರಜ್ಞೆ ಎಂಬ ನೆಲೆಯಲ್ಲಿಯೇ ಆಗಿದೆ.

ಒಂದು ಮಗು ಯಾವಾಗ ಹೆಣ್ಣು ಗಂಡು ಎಂಬ ಭೇದವನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತದೆ ಎಂದರೆ ‘ಅವನೊಬ್ಬ ಗಂಡಲ್ಲವೇ’ ಎಂಬ ತಾಯಿಯ ಹಾಗೂ ಇತರ ಬಂಧುಗಳ ಮಾತುಗಳ ಮೂಲಕವೇ ಅದು ವ್ಯಕ್ತಗೊಳ್ಳುತ್ತಿರುತ್ತದೆ. ತನ್ನ ವಿರುದ್ಧವಾದ ಲಿಂಗಕ್ಕೆ ಉನ್ನತ ಸ್ಥಾನವಿದೆಯೆಂದು ಹಾಗಾಗಿ ಅವನ ಹಟಗಳಿಗೆ ತಾನು ತಲೆಬಾಗಲೇಬೇಕು ಎಂಬ ಪ್ರಜ್ಞೆಯನ್ನು ಮೂಡಿಸಿಕೊಂಡಾಗ ಈ ವ್ಯತ್ಯಾಸ ತಾನೇ ತಾನಾಗಿ ಮನಸ್ಸಿನಲ್ಲಿ ದಾಖಲಾಗಿ ಬಿಡುತ್ತದೆ. ಬಳಿಕ ತಾಯಿ ತಂದೆಗೆ ವಿಧೇಯವಾಗಿ ಎಲ್ಲಾ ಹಂತಗಳಲ್ಲೂ ನಡೆದುಕೊಳ್ಳುವ ರೀತಿಗಳನ್ನು ಗಮನಿಸಿದಾಗಲೂ ಹೆಣ್ಣುಮಗಳು ತನಗರಿಯದಂತೆ ಪುರಷಾಧಿಪತ್ಯದ ಮೌಲ್ಯಗಳನ್ನು ಒಪ್ಪಿಕೊಳ್ಳುವುದಕ್ಕೆ ಆರಂಭಿಸಿ ಬಿಡುತ್ತಾಳೆ. ಅಷ್ಟೇ ಅಲ್ಲದೆ ರೂಢಿಯ ಗಾದೆ ಮಾತುಗಳು, ಪಡೆನುಡಿಗಳು ಅವಳು ಒಪ್ಪಿಕೊಳ್ಳಬೇಕಿರುವ ಹಾದಿಯನ್ನು ಇನ್ನಷ್ಟು ಖಚಿತಪಡಿಸುತ್ತದೆ. ಸಿಗಡಿ ಜಿಗಿದರೆ ಮಡಕೆಗೆ, ಓತಿ ಓಡಿದರೆ ಬೇಲಿಯ ತನಕ, ಹೆಣ್ಣುಕೋಳಿ ಕೂಗಿದರೆ ಹೊತ್ತು ಬೆಳಗಾಗದು, ಹೆಣ್ಣನ್ನು ಮಣ್ಣನ್ನು ದಂಡಿಸಿದರೆ ಗುಣ ಹೆಚ್ಚೀತು, ಹೆಣ್ಣಿನ ಮಾತು ಕೇಳಿದವ ಬೀದಿಯಲ್ಲಿ, ಗಂಡನೇ ಕಣ್ಣಿಗೆ ಕಾಣುವ ದೇವರು, ಹೆಣ್ಣು ಬಾಳುವ ಜಾಗ ನಶಿಸಿತು – ಹೀಗೆ ಅನೇಕ ನಾಣ್ನುಡಿಗಳು ಹೆಣ್ಣಿನ ಕುರಿತಾಗಿ ಮಲಯಾಳಂನಲ್ಲಿವೆ. ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದ ವಯಸ್ಸಿನಲ್ಲಿ ಇಂತಹ ಸ್ವತಂತ್ರ ನಿರ್ಣಾಯಕ ಘಟಕಗಳು ಆಕೆಯ ಮನಸ್ಸನ್ನು ಪ್ರವೇಶಿಸುತ್ತವೆ. ಎಂದರೆ ಈ ಹಂತದಲ್ಲಿ ದೈನಂದಿನ ಎಲ್ಲಾ ವ್ಯವಹಾರಗಳನ್ನು ನಿಯಂತ್ರಿಸುವ ವಿಷಯವಾಗಿ ಇದು ಪರಿಣಮಿಸು ವುದಿಲ್ಲ. ಬಹಳ ಸ್ವಾಭಾವಿಕವೆನ್ನುವಂತೆ ಇತರ ಗಂಡು ಮಕ್ಕಳೊಡನೆ ತಂದೆ ಹಾಗೂ ಅಣ್ಣ ತಮ್ಮಂದಿರೊಡನೆ, ಅತಿಥಿಗಳೊಡನೆ ನಿಸ್ಸಂಕೋಚವಾಗಿ ವ್ಯವಹರಿಸುವಳು. ಆದರೆ ಕೌಮಾರ್ಯದ ಆರಂಭದೊಡನೆ ಈ ಪರಿಸ್ಥಿತಿ ಅನಿರೀಕ್ಷಿತವಾಗಿ ತಲೆಕೆಳಗಾಗುತ್ತದೆ.

ಆದಿಮಗೋತ್ರ ವ್ಯವಸ್ಥೆಯಲ್ಲಿ ಋತುಮತಿಯಾಗುವುದನ್ನು ಒಂದು ಸಮಾರಂಭ ಎಂಬಂತೆ ಬಂಧು, ಬಳಗದವರಿಗೆ ತಿಳಿಸಿ ವಿಶೇಷ ದಿವಸವಾಗಿ ಆಚರಿಸುವುದನ್ನು ಕಾಣ ಬಹುದು. ಇತ್ತೀಚಿನವರೆಗೆ ಈ ಆಚರಣೆ ರೂಢಿಯಲ್ಲಿದ್ದು ಕೆಲವೆಡೆಗಳಲ್ಲಿ ಈಗಲೂ ವರ್ಣಾವರ್ಣಗಳ ಭೇದವಿಲ್ಲದೆ ರೂಢಿಯಲ್ಲಿದೆ. ಗೋತ್ರ ಪದ್ಧತಿಯಲ್ಲಿ ಇದನ್ನು ಸ್ಪಷ್ಟವಾಗಿ ಅಗತ್ಯವಾದ ಆಚರಣೆಯೆಂದು ಹೇಳಲಾಗಿತ್ತು. ಇದು ಒಬ್ಬಾಕೆ ಹೆಣ್ಣು ಪ್ರತ್ಯುತ್ಪಾದನೆಗೆ ಸನ್ನದ್ಧಳಾಗಿದ್ದಾಳೆ ಎಂಬ ಸೂಚನೆ ಕೊಡುವುದು. ಪ್ರಕೃತಿಯೊಡನೆ ಹೊಂದಿಕೊಂಡು ವಂಶ ವನ್ನು ಮುಂದುವರಿಸಬೇಕಾದುದು ಅವಳ ಕರ್ತವ್ಯ ಎಂಬುದನ್ನು ನೆನಪು ಮಾಡಿಕೊಡುವ  ಆಚರಣೆ ಎಂದು ಬೇಕಾದರೂ ಇದನ್ನು ಭಾವಿಸಬಹುದು.

ಕೇರಳದ ಹಿಂದೂ ಕುಟುಂಬದ ಹೆಣ್ಣು ಮಗಳೊಬ್ಬಳು ಅನೇಕ ನಿಷೇಧಗಳಿಂದ ಬಂಧಿಸಿಕೊಂಡಿರುವುದನ್ನು ಕಾಣಬಹುದು. ಋತುಮತಿಯಾಗುವುದಕ್ಕೆ ಮೊದಲು ಮನೆಯ ಎಲ್ಲಾ ಭಾಗಗಳಲ್ಲಿ ಆಕೆ ನಡೆದಾಡಬಹುದಿತ್ತು. ಹೀಗಿರುವಾಗ ತಕ್ಷಣವೇ ಒಂದು ದಿವಸ ಆಕೆ ಅಶುದ್ದಿಗಳ ಲೋಕಕ್ಕೆ ಪ್ರವೇಶಿಸಿ ಬಿಡುತ್ತಾಳೆ. ಅಂದಿನಿಂದ ಆಕೆ ಕೆಲವು ದಿವಸಗಳಲ್ಲಿ ಮನೆಯ ನಿರ್ದಿಷ್ಟ ಜಾಗಗಳಲ್ಲಿ ಪ್ರವೇಶಿಸುವಂತಿಲ್ಲ. ಅವಳು ಊಟ ಮಾಡಿದ, ಮುಟ್ಟಿದ ಪಾತ್ರೆಗಳನ್ನು ಕವುಚಿ ಹಾಕಿದರೆ ಮಾತ್ರ ಶುದ್ದಿ ಪ್ರಾಪ್ತಿಸುತ್ತದೆ. ದೇವಾಲಯಗಳಿಗೆ ಹೋಗು ವಾಗಲೂ ಆಕೆಯನ್ನು ಕಂಡ ತಕ್ಷಣ ನಿಕೃಷ್ಟ ಜೀವಿಯ ದರ್ಶನವಾದಂತೆ ಅಸಹ್ಯಪಟ್ಟುಕೊಂಡು ಕಣ್ತಪ್ಪಿಸಿ ಹೋಗಿಬಿಡುವರು. ವಿದ್ಯುತ್ ಹರಿಯುವ ಹಾಗೂ ವಿದ್ಯುತ್ ಹರಿಯದ ವಸ್ತುಗಳಿದ್ದಂತೆ ಅಶುದ್ಧ ಹರಿಯದ ಹಾಗೂ ಅಶುದ್ಧ ಹರಿಯುವ ವಸ್ತುಗಳೂ ಇವೆ. ಹೊಸವಸ್ತ್ರ, ಮರ, ಸಿಮೆಂಟ್, ಪ್ಲಾಸ್ಟಿಕ್, ಪೋಲಿಯೆಸ್ಟರ್, ಕಲ್ಲು ಮೊದಲಾದವು ಅಶುದ್ದಿಯು ಹರಿಯದ ವಸ್ತುಗಳು. ತೊಳೆದ ವಸ್ತ್ರ, ಹಾಸಿಗೆ, ಹಾಲು, ಪಾತ್ರೆ, ಊಟದ ವಸ್ತುಗಳು, ಮೊದಲಾದವುಗಳೆಲ್ಲ ಅಶುದ್ದಿಯ ವಾಹಕಗಳು. ಋತುಮತಿಯಾದಾಗ ಹಿಂದಿನ ದಿನದವರೆಗೆ ಕಂಡ ಲೋಕವಲ್ಲ ಆಕೆಯನ್ನು ಮರುದಿನ ನೋಡುವುದು. ಆಕೆಯು ನಡೆದಾಡುವ ವ್ಯಾಪ್ತಿ ಕಡಿಮೆಯಾಗುತ್ತದೆ. ಮೂರು ದಿವಸ ಅಶುದ್ದಿಯಲ್ಲಿ ಕುಳಿತು ಮರಳಿ ಸಮೂಹವನ್ನು ಸೇರುವಾಗ ಆಕೆ ಬದಲಾಗಿರುತ್ತಾಳೆ. ದೀಪ ಹಚ್ಚಬಾರದು, ಇತರರ ಜೊತೆಗೂಡಿ ಊಟ ಮಾಡಬಾರದು, ಶುಭ ಸಮಾರಂಭಗಳಲ್ಲಿ ಭಾಗವಹಿಸಬಾರದು, ಇತರರ ವಸ್ತ್ರಗಳನ್ನು ಮುಟ್ಟಬಾರದು ದೇವಾಲಯಗಳಿಗೆ ಹೋಗಬಾರದು ಎಂಬಿತ್ಯಾದಿ ಅನೇಕ ವಿಧಿ ನಿಷೇಧಗಳಿವೆ. ತನ್ನ ದೇಹ ಯಾವುದೇ ಕ್ಷಣದಲ್ಲಿ ಅಶುದ್ದಿಗೆ ಈಡಾಗಬಹುದಾದಂತಹದು, ಪುರುಷ ಕೇಂದ್ರಿತ ಸಮಾಜದಲ್ಲಿ ತಾನು ತಗ್ಗಿ ಬಗ್ಗಿ ನಡೆಯಬೇಕಾದವಳು ಎಂಬಿತ್ಯಾದಿಗಳನ್ನು ಯಾರೂ ಹೇಳದೆಯೇ ಆಕೆ ತಿಳಿದುಕೊಂಡು ಬಿಡುತ್ತಾಳೆ. ಕೇರಳದ ಬಹುತೇಕ ಹಿಂದೂ ಕುಟಂಬಗಳು ಮೇಲಿನ ನಿಷೇಧಗಳಿಗೆ ತಿಂಗಳಿಗೊಮ್ಮೆ ಹೆಣ್ಣು ಮಕ್ಕಳನ್ನು ಒಳಪಡಿಸುತ್ತಾರೆ. ಒಂದಷ್ಟು ಹಿಂದೂ ಕುಟುಂಬಗಳು ಹೊಸ ಬದಲಾವಣೆಗಳಿಗೆ ಹೊಂದಿಕೊಂಡು, ಈ ನಿಬಂಧನೆಗಳನ್ನು ಸಡಿಲಗೊಳಿಸಿಕೊಂಡಿವೆ. ಆದರೂ ದೀಪ ಉರಿಸುವುದು, ದೇವಾಲಯಗಳಿಗೆ ಹೋಗುವುದು, ಹೋಗುವವರನ್ನು ಸ್ಪರ್ಶಿಸುವುದೂ, ಶುಭ ಸಮಾರಂಭಗಳಲ್ಲಿ ಇತರರೊಡನೆ ಬೆರೆಯುವುದು ಇತ್ಯಾದಿಗಳನ್ನು ನಿಷೇಧಿಸುವವರೇ ಆಗಿರುತ್ತಾರೆ. ದೇವಾಲಯಗಳಿಗೆ ಸಂಬಂಧ ಪಟ್ಟ ವಿಷಯಗಳಲ್ಲಿ  ಎಲ್ಲ ಜಾತಿ, ಜನರೂ ಒಂದೇ ತೆರನ ನಿಷೇಧಗಳನ್ನು ಶುದ್ದಿಯನ್ನು ಹೇರಿರುವುದನ್ನು ಕಾಣಬಹುದು. ಇಂತಹ  ಆವರ್ತನಾಚರಣೆಗಳು ನೂರು ಶೇಕಡಾ ಸಾಕ್ಷರರಿರುವ ಕೇರಳದಲ್ಲಿಯೂ ಜಾರಿಯಲ್ಲಿದೆ. ಮಾನವ ಹಕ್ಕುಗಳ ಉಲ್ಲಂಘನೆಯ ಬಗೆ ಹೋರಾಡುವವರಿಗೆ ಇದೊಂದು ಗಮನಕ್ಕೆ ಬರುವುದಿಲ್ಲ.

ಹೆಣ್ಣನ್ನು ಹೀಗೆ ಒಂಟಿಯಾಗಿಸಲು ಇರುವ ಕಾರಣಗಳನ್ನು ಶೋಧಿಸಿದರೆ ಕೆಲವು ವಿಷಯಗಳು ಸ್ಪಷ್ಟವಾಗುತ್ತದೆ. ಹಳೆಯ ಗೋತ್ರ ಸಂಪ್ರದಾಯಗಳಲ್ಲೆಲ್ಲ ಪ್ರಕೃತಿ ಪ್ರತಿಭಾ ಸಂಘಗಳ ಕುರಿತಾದ ಭಯಕ್ಕೆ ಸಂಬಂಧಿಸಿದ್ದಾಗಿರಬಹುದು. ರಕ್ತವನ್ನು ನೋಡಿದಾಗ ಭಯಗೊಂಡು ದೂರ ನಿಲ್ಲಿಸಿದ್ದಾಗಿರಬಹುದು. ಹೆಣ್ಣು ಮಕ್ಕಳನ್ನು ಆಶಯ ಪರವಾಗಿ ನಿಯಂತ್ರಿಸುವ ವಯಸ್ಸಿನಲ್ಲಿ ಈ ವಿಧಿ ನಿಷೇಧಗಳನ್ನು ಹೇರುವುದರ ಮೂಲಕ ತಮಗೆ ಬೇಕಾದಂತೆ ಬಳಸಿಕೊಳ್ಳುವ ತಂತ್ರವೂ ಇರಬಹುದು. ಬದುಕನ್ನು ಅನುಭವಿಸದ ಅಪಕ್ವವಾದ ಪ್ರಾಯವಿದು. ಲೈಂಗಿಕವಾಗಿ ಇತರ ವರ್ಗಗಳ ಪ್ರತ್ಯೇಕತೆಗಳನ್ನು ಹುಡುಕಾಡುವ ಪ್ರಾಯ. ಎಲ್ಲಕ್ಕಿಂತಲೂ ಮಿಗಿಲಾಗಿ ಹಿರಿಯರ ಆಜ್ಞೆ, ಆದೇಶಗಳನ್ನು, ಧಿಕ್ಕರಿಸಲಾಗದ ವಯಸ್ಸು. ಇದರಿಂದ ಕೌಮಾರ್ಯದಲ್ಲಿಯೇ ಮನಸ್ಸಿನಲ್ಲಿ ಕೀಳರಿಮೆಯು, ಅಭಾವ ಪ್ರಜ್ಞೆಯೂ ನೆಲೆಯೂರುತ್ತದೆ. ಹೀಗೆ ಹೆಣ್ಣುಮಗಳು ಪುರಷಾಧೀನ ಸಮಾಜದ ನಿಯಮಗಳಿಗೆ ಅಡಿಯಾಳಾಗಿ ಬೆಳೆದು ಬರುತ್ತಾಳೆ.

ಶರೀರ ವಿಶ್ರಾಂತಿಯ ಹೆಸರಲ್ಲಿ ತೋರಿದ ಈ ಮಾನವೀಯತೆಯನ್ನು ಆಧುನಿಕ ಪ್ರಪಂಚದಲ್ಲಿ ನ್ಯಾಯೀಕರಿಸುವುದು ಸಾಧ್ಯವಾಗಲಾರದು. ವರ್ಷಗಳ ಸುದೀರ್ಘ ಮಾನಸಿಕ ಸಂಘರ್ಷಗಳ ನಡುವೆ ಹೆಣ್ಣು ಕ್ರೂರವಾಗಿ ಪರೀಕ್ಷೆಗೊಳಗಾಗುತ್ತಿರುತ್ತಾಳೆ. ವಿವೇಕಯುತವಾಗಿ ಆಕೆ ತಾನು ಸಾಮಾಜಿಕವಾಗಿ ಪುರುಷನಷ್ಟೇ ಸಮಾನಳು ಎಂಬ ತಿಳುವಳಿಕೆಯನ್ನು ರೂಢಿಸಿಕೊಳ್ಳ ಲೆತ್ನಿಸಿದರೂ ಆಕೆಯನ್ನು ಅಧಮ ಪ್ರಜ್ಞೆ ಮತ್ತು ಅಭಾವ ಪ್ರಜ್ಞೆ ಬೆಂಬತ್ತುತ್ತಲೇ ಇರುತ್ತದೆ.

ದಲಿತರ ದೇವಾಲಯ ಪ್ರವೇಶದಂತಹ ಅವಕಾಶಗಳಿಗಾಗಿ ಹೋರಾಟಗಳು ನಡೆದಂತೆ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ನಡೆದಿಲ್ಲ. ಸ್ತ್ರೀಯರ ಸಮಸ್ಯೆಗಳಿಗೆ ಸವರ್ಣೀಯ, ಅವರ್ಣೀಯ ಎಂಬ ಭೇದಗಳು ಬೇಕಾಗಿಲ್ಲ. ಸ್ತ್ರೀ ದೇವಾಲಯ ಪ್ರವೇಶ ಮಾಡಿದಾಗ ಅವರ್ಣೀಯರೂ ಪಾಪಕೃತ್ಯವೆಂದು ಭಾವಿಸಿದ್ದರು. ಇಂತಹ ಆಘಾತಕರವಾದ ತಿಳುವಳಿಕೆಯಿಂದ ಸ್ತ್ರೀ ಸಮಸ್ಯೆಗಳನ್ನು ಪ್ರಜ್ಞಾಪೂರ್ವಕವಾಗಿ ವಿಸ್ಮೃತಿಗೆ ತಳ್ಳಲಾಯಿತು. ಇವುಗಳ ನಡುವೆಯೂ ಸಿ.ಎಸ್. ಚಂದ್ರಿಕಾರಂತಹ ಸ್ತ್ರೀವಾದಿ ಲೇಖಕಿಯರು ಸಾಮಾಜಿಕ ಕ್ರಾಂತಿಯ ಮೂಲಕ ಸಮಾನತೆ ಸಾಧ್ಯ ಎಂಬ ಆಶಾಭಾವನೆಯಿಂದ ಬರೆಯುತ್ತಿದ್ದಾರೆ.

ನಂಬೂದಿರಿ ಮಹಿಳೆಯರು

ಕೇರಳದ ನಂಬೂದಿರಿ ಸ್ತ್ರೀಯರ ಗತ ಇತಿಹಾಸವೆಂದರೆ ಕೇರಳದ ಸಮುದಾಯದ ವಿಧಿ ನಿಷೇಧಗಳ ಇತಿಹಾಸವೂ ಹೌದು. ಹಾಗೆಯೇ ಧಾರ್ಮಿಕವಾಗಿ ಪ್ರಾಬಲ್ಯವನ್ನು ಪಡೆದಿದ್ದ ಒಂದು ಸಮುದಾಯದಲ್ಲಿ ಹೆಪ್ಪುಗಟ್ಟಿದ್ದ ಮೂಢನಂಬಿಕೆಗಳು, ಆಚರಣೆಗಳು, ವೈರುಧ್ಯಗಳಿಂದ ಕೂಡಿದ ಜೀವನ ರೀತಿಗಳ ಇತಿಹಾಸವೂ ಹೌದು. ಹಾಗಾಗಿಯೇ ಕೇರಳದ ಮಧ್ಯಕಾಲೀನ ಚರಿತ್ರೆಯನ್ನು ವಿಶ್ಲೇಷಿಸುವಾಗ ನಂಬೂದಿರಿ ಬ್ರಾಹ್ಮಣರ ಧಾರ್ಮಿಕವಾದ ಆಚಾರ ವಿಚಾರಗಳು ಮುಖ್ಯವಾಗಿ ಗಮನ ಸೆಳೆಯುತ್ತವೆ.

ಸಂಘಂ ಕಾಲದ ತರುವಾಯ ಕ್ರಿ.ಶ. ಏಳನೆಯ ಶತಮಾನದ ಅವಧಿಯಲ್ಲಿ ಹಂತ ಹಂತವಾಗಿ ಕೇರಳದಲ್ಲಿ ನೆಲೆನಿಂತು ಉತ್ತರದ ತಳಪ್ಪರಂಬ್‌ನಿಂದ ದಕ್ಷಿಣದ ಪಂದಳಂವರೆಗೆ ಅನೇಕ ಬ್ರಹ್ಮಸ್ಥಾನಗಳನ್ನು ಸ್ಥಾಪಿಸಿ ನೆಲೆ ಭದ್ರಗೊಳಿಸಿದವರೇ ನಂಬೂದಿರಿ ಬ್ರಾಹ್ಮಣರು ಎಂಬುದು ಪ್ರಚಲಿತವಾದ ವಿಷಯ. ಹೀಗೆ ನೆಲೆನಿಂತ ಬ್ರಾಹ್ಮಣ ವರ್ಗದವರ ಆಚಾರ ವಿಚಾರಗಳು ಬಹುತೇಕ ಮನುಸ್ಮೃತಿಯನ್ನೇ ಆಧಾರವಾಗಿರಿಸಿಕೊಂಡಿದ್ದವು ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. ಕ್ರಮೇಣ ಅವರು ಸ್ಥಳೀಯವಾದ ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ವಿದ್ಯಮಾನಗಳನ್ನು ಅನುಸರಿಸಿ ತಮ್ಮ ಆಚಾರ ವಿಚಾರಗಳಲ್ಲಿ ಬದಲಾವಣೆಯನ್ನು ತಂದುಕೊಂಡರು. ಸ್ಥಳೀಯವಾಗಿ ಪ್ರಬಲರಾದ ಒಂದು ಜನಸಮುದಾಯವಾಗಿ ರೂಪು ಗೊಳ್ಳಲು ಅವರಿಗೆ ಈ ಬದಲಾವಣೆ ಅನಿವಾರ್ಯವೂ ಆಗಿತ್ತು. ಹೀಗೆ ಕ್ರಿ.ಶ. ೧೪-೧೫ನೇ ಶತಮಾನದಲ್ಲಿ ನಂಬೂದಿರಿ ಬ್ರಾಹ್ಮಣರಲ್ಲಿ ಪ್ರಚಲಿತದಲ್ಲಿದ್ದ ಧಾರ್ಮಿಕ ವಿಧಿ ನಿಷೇಧಗಳ ಹಾಗೂ ರೀತಿ ರಿವಾಜುಗಳ ಕ್ರೋಡೀಕರಣವೇ ಶಾಂಕರಸ್ಮೃತಿ ಅಥವಾ ಲಘುಧರ್ಮಪ್ರಕಾಶಿಕಾ ಎಂಬುದು ವಿದ್ವಾಂಸರ ಅಭಿಪ್ರಾಯ. ಅದು ರೂಪುಗೊಂಡ ಕಾಲಘಟ್ಟ ಯಾವುದಿದ್ದರೂ ಕೂಡಾ ೨೦ನೇ ಶತಮಾನದ ಆರಂಭದ ದಶಕಗಳ ಸ್ತ್ರೀಯರಿಗೆ ವೇದಗ್ರಂಥವು  ‘ಶಾಂಕರಸ್ಮೃತಿ’ಯೇ ಆಗಿದೆ. ಆದ್ದರಿಂದ ನಂಬೂದಿರಿ ವರ್ಗದಲ್ಲಿ ಸ್ತ್ರೀ ಏನಾಗಿದ್ದಳು ಎಂಬುದನ್ನು ಶಾಂಕರಸ್ಮೃತಿಯ ದಂಪತೀಧರ್ಮ, ಗೃಹಸ್ಥಧರ್ಮ, ಪುತ್ರ ಮಹಾತ್ಮೆ, ಭಾರ್ಯಾಭರಣ, ಸ್ಮಾರ್ತವಿಚಾರ, ರಜಸ್ವಲೆ ಧರ್ಮ, ೬೪ ಅನಾಚಾರಗಳು ಮೊದಲಾದ ಅಧ್ಯಾಯಗಳಿಂದ ತಿಳಿದುಕೊಳ್ಳಬಹುದು. ಇತಿಹಾಸದ ಆಗುಹೋಗುಗಳ ನಡುವೆ ಹೊಸ ಸಾಮಾಜಿಕ ನಿಯಮಗಳು ರೂಪುಗೊಳ್ಳುವಾಗ ಅದು ಸ್ತ್ರೀಯರನ್ನು ಹೇಗೆ ಬಾಧಿಸುತ್ತದೆ ಎಂಬ ಚಿತ್ರಣವೂ ಇದರಿಂದ ವ್ಯಕ್ತವಾಗುತ್ತದೆ.

ಹಾಗೆ ನೋಡಿದರೆ ಶಾಂಕರಸ್ಮೃತಿಯಲ್ಲಿ ಪ್ರತಿಬಿಂಬಿಸಿದ ಸ್ತ್ರೀಯರ ವಿಚಾರಗಳಿಗೂ ಮನುಸ್ಮೃತಿಯಲ್ಲಿ ಹೇಳಿದ ವಿಚಾರಗಳಿಗೂ ಅಂತಹ ವ್ಯತ್ಯಾಸವೇನಿಲ್ಲ. ಗರ್ಭಧಾರಣೆ ಗಾಗಿಯೇ ಸ್ತ್ರೀಯನ್ನು ಸೃಷ್ಟಿಸಲಾಯಿತು. ಸ್ತ್ರೀ ಕ್ಷೇತ್ರ ಸಮಾನಳು (ಇಲ್ಲಿ ಕ್ಷೇತ್ರ ಎಂದರೆ ಫಲವತ್ತಾದ ನೆಲ). ಸಂತತಿಯ ಪಾವಿತ್ರ್ಯಕ್ಕಾಗಿ ಸ್ತ್ರೀಯನ್ನು ಪ್ರಯತ್ನಪೂರ್ವಕವಾಗಿ ಸಂರಕ್ಷಿಸಬೇಕು ಎಂಬಿತ್ಯಾದಿಗಳನ್ನು ಮನುಸ್ಮೃತಿ ಸೂಚಿಸಿದೆ. ಚಾತುರ್ವಣ್ಯಗಳು ನೆಲೆ ನಿಂತಿದ್ದ ಅಂದಿನ ಸಮಾಜದಲ್ಲಿ ವರ್ಣಸಂಕರದ ಅಪಾಯ ಉಂಟಾಗದಿರಲಿ ಎಂದು ಸ್ತ್ರೀಯನ್ನು ವಿವಾಹ ಎಂಬ ಚೌಕಟ್ಟಿನಲ್ಲಿ ಗಂಡನ ಅಧೀನದಲ್ಲಿ ಬಂಧಿಸಿದ್ದಿರಬೇಕು. ಆರಂಭ ಕಾಲದಲ್ಲಿ ಕೇರಳದ ನಂಬೂದಿರಿ ಬ್ರಾಹ್ಮಣರು ಈ ನಿಯಮಗಳನ್ನೇ ಅನುಸರಿಸಿದರು. ಕ್ರಮೇಣ ಬದಲಾದ ಆರ್ಥಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಅಧಿಪತ್ಯವನ್ನು ಸಂರಕ್ಷಿಸಲು ಕುಟುಂಬದ ಆಸ್ತಿಯನ್ನು ವಿಭಾಗಿಸಬಾರದು ಎಂಬಂತಹ ನಿಯಮಗಳನ್ನು ಹಾಕಿಕೊಂಡರು. ಹೀಗೆ ತಾವು ಅಂಗೀಕರಿಸಿದ್ದ ಮನುಸ್ಮೃತಿಯ ವಿಚಾರಗಳಲ್ಲಿ ಬದಲಾವಣೆ ಗಳನ್ನು ಮಾಡಿಕೊಂಡರು. ಈ ವಿವಾಹ ಸಂಪ್ರದಾಯ ಮೇಲ್ನೋಟಕ್ಕೆ ಪುರುಷ ಸಂಬಂಧಿ ಯಾದ ಒಂದು ವಿವರಣೆ ಅಂತ ಅನ್ನಿಸಿದರೂ ಕಾಲಾಂತರದಲ್ಲಿ ಅದು ನಂಬೂದಿರಿ ಸ್ತ್ರೀಯರ ಎಲ್ಲಾ ದುರ್ವಿಧಿಗಳಿಗೆ ಕಾರಣವಾಯಿತು. ಸ್ತ್ರೀಯರಿಗೆ ಸಂಬಂಧಿಸಿದಂತೆ ಶಾಂಕರಸ್ಮೃತಿಯಲ್ಲಿ ಹೇಳಿದ ವಿಧಿನಿಷೇಧಗಳೆಲ್ಲವೂ ವಿವಾಹ ವ್ಯವಸ್ಥೆಯ ಅನುಬಂಧಗಳಾಗಿಯೇ ಗೋಚರಿ ಸುತ್ತವೆ.

ಮನುಸ್ಮೃತಿಯಲ್ಲಾದರೂ ವರ್ಣಗಳ ಪ್ರಾಶಸ್ತ್ಯವನ್ನನುಸರಿಸಿ ಅನುಲೋಮ, ವಿವಾಹ ಸಂಪ್ರದಾಯಗಳನ್ನು ಹೇಳಿದೆ. ಪುರುಷ ಮೇಲುವರ್ಣದಲ್ಲೂ, ಸ್ತ್ರೀ ಕೆಳವರ್ಣದಲ್ಲೂ ಇದ್ದು ಆಗುವ ವಿವಾಹ ಅನುಲೋಮ ವಿವಾಹವೆನಿಸುತ್ತದೆ. ಪ್ರತಿಲೋಮವಾದ ಸ್ತ್ರೀ ಪುರುಷ ಸಂಬಂಧವನ್ನು ಮನುಸ್ಮೃತಿ ಅಂಗೀಕರಿಸಿದೆ. ಆದರೆ ‘ಶಾಂಕರಸ್ಮೃತಿ’ಯು ಪುರುಷನಿಗೆ ಇತರ ವರ್ಣಗಳೊಡನೆ ಸಂಬಂಧವನ್ನು ಹೇಳಿ ಸ್ತ್ರೀಯರಿಗೆ ಈ ತೆರನ ಸಂಬಂಧದ ಬಗೆಗೆ ಮೌನ ವಹಿಸಿದೆ. ರಜಸ್ವಲೆಯಾಗಿ ಮೂರೋ ನಾಲ್ಕೋ ವರ್ಷಗಳು ಕಳೆದರೆ ತಂದೆ ತಾಯಿಗಳು ಮದುವೆ ಮಾಡಿಸದಿದ್ದರೆ ಇಷ್ಟ ಬಂದವರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಸ್ತ್ರೀಗೆ ಮನುಸ್ಮೃತಿ ನೀಡಿದೆ. (ಮನುಸ್ಮೃತಿ ೧x-೧೯) ಶಾಂಕರಸ್ಮೃತಿಯಲ್ಲಾದರೋ, ಈ ತೆರನ ಸ್ವಾತಂತ್ರ್ಯಕ್ಕೂ ಆಸ್ಪದ ಇರಲಿಲ್ಲ. ಅಣ್ಣನ ಹೆಂಡತಿಯನ್ನು ತಾಯಿಯಂತೆ ಕಂಡು ಪ್ರತಿನಿತ್ಯ ಪಾದಮುಟ್ಟಿ ನಮಸ್ಕರಿಸಬೇಕು ಎಂದು ಮನುಸ್ಮೃತಿ ಹೇಳುತ್ತದೆ. ಆದರೆ ‘ಶಾಂಕರಸ್ಮೃತಿ’ಯಲ್ಲಿ ಗಂಡನನ್ನು ಹೊರತುಪಡಿಸಿ ಇನ್ನೊಬ್ಬ ಪುರುಷನನ್ನು ನೋಡಬಾರದು ಎಂದೇ ವಿಧಿಸುತ್ತದೆ. ಸ್ತ್ರೀ ಧರ್ಮಗಳನ್ನು ಹೋಲುವೆಡೆಯಲ್ಲೂ ಅರವತ್ನಾಲ್ಕು ಅನಾಚಾರ ಗಳನ್ನು ಹೇಳುವೆಡೆಗಳಲ್ಲೂ ಬ್ರಾಹ್ಮಣ ಸ್ತ್ರೀಯರಿಗಿರುವ ವಿಧಿ ನಿಷೇಧಗಳನ್ನು ಶಾಂಕರ ಸ್ಮೃತಿಯಲ್ಲಿ ಒಂದೊಂದಾಗಿ ಹೇಳಲಾಗಿದೆ.

೧.  ಮಲಯಾಳ ಬ್ರಾಹ್ಮಣ ಸ್ತ್ರೀಯರು ತೀರ್ಥ ಸ್ನಾನವನ್ನು ಮಾಡಬಾರದು.

೨.  ಉನ್ನತ ವಿದ್ಯಾಭ್ಯಾಸವನ್ನು ಹೊಂದಬಾರದು.

೩.  ವೇದೋಚ್ಚಾರಣೆಯನ್ನು ಕೇಳಬಾರದು.

೪.  ಗಂಡನನ್ನು ಹೊರತುಪಡಿಸಿ ಪುರುಷರನ್ನು ನೋಡಬಾರದು.

೫.  ಹೊರಗೆ ಹೋಗಬೇಕಾದರೆ ಮರೆಯಾಗಿ ಕೊಡೆಯನ್ನೊ, ಬಟ್ಟೆಯನ್ನೋ ಹಿಡಿದು ಕೊಂಡಿರಬೇಕು.

೬.  ಹಾಡು ಹಾಡಬಾರದು, ಆಟ ಆಡಬಾರದು.

೭.  ರಾತ್ರಿಯಲ್ಲಿ ದಾರಿ ನಡೆಯಬಾರದು.

೮.  ಜಾತ್ರೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ ದೇವಸ್ಥಾನಗಳಿಗೆ ಹೋಗಬಾರದು.

೯.  ಬಿಳಿ ಬಟ್ಟೆಯನ್ನಲ್ಲದೆ ಬೇರೆ ಬಣ್ಣದ ವಸ್ತ್ರ ಧರಿಸಬಾರದು.

೧೦.     ಮೂಗು ಚುಚ್ಚಿಸಿಕೊಳ್ಳಬಾರದು.

ಹೀಗೆ ವಿಧಿನಿಷೇಧಗಳನ್ನು ಹೇರುತ್ತಲೆ ‘ಶಾಂಕರಸ್ಮೃತಿ’ ಕೇರಳದ ನಂಬೂದಿರಿ ಸ್ತ್ರೀಯರನ್ನು ಮಾನಸಿಕವಾಗಿ, ಸಾಮಾಜಿಕವಾಗಿ ಕುಗ್ಗಿಸುವಂತೆ ಮಾಡಿದೆ.

ಶಾಂಕರಸ್ಮೃತಿಯ ನಿಯಮಗಳನ್ನು ಇತ್ತೀಚಿನವರೆಗೂ ನಂಬೂದಿರಿ ಬ್ರಾಹ್ಮಣರು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಪುರುಷರು ತಮ್ಮ ಆಸೆ ಆಕಾಂಕ್ಷೆಗಳಿಗೆ ಅನುಗುಣವಾಗಿ ವಿಧಿ-ನಿಷೇಧಗಳನ್ನು ಉದಾರ ದೃಷ್ಟಿಯಿಂದ ಸ್ವೀಕರಿಸಿದ್ದಾರೆ. ಸ್ತ್ರೀಯರ ವಿಷಯದಲ್ಲಿ ಮಾತ್ರ ಈ ತೆರನ ಔದಾರ್ಯವನ್ನು ಪ್ರಕಟಿಸದೆ ತುಂಬಾ ನಿಷ್ಠುರವಾಗಿಯೇ ನಡೆದುಕೊಂಡಿದ್ದಾರೆ.

ಕುಟುಂಬದ ಹಿರಿಯ ಮಗ ಮಾತ್ರವೇ ಮದುವೆಯಾಗಬಹುದು ಎಂಬ ನಿಯಮ ಕುಟುಂಬದ ಆಸ್ತಿ ವಿಭಜನೆಯಾಗದಿರಲೆಂದೇ ಮಾಡಿಕೊಂಡಂತಿದೆ. ಅದೇ ವೇಳೆಗೆ ತಂದೆಯ ತಮ್ಮಂದಿರು ಮದುವೆಯಾಗಬಾರದೆಂದು ಶಾಂಕರಸ್ಮೃತಿಯಲ್ಲಿ ಹೇಳುವುದಿಲ್ಲ. ವಿವಾಹಾಸಕ್ತ ರಾದ ತಮ್ಮಂದಿರಿಗೆ ವಿವಾಹ ಮಾಡಿಸಬಹುದು ಎಂದೇ ಇದೆ. ಸ್ನಾತಕ ವೃತ್ತಿಯನ್ನು (ನೈಷ್ಠಿಕ ಬ್ರಹ್ಮಚಾರಿತ್ವ) ಸ್ವೀಕರಿಸಿ ಬಳಿಕ ಸದಾಚಾರ ವಿರುದ್ದವಾದ ಬದುಕನ್ನು ನಡೆಸುವವನು ಸಾಮಾಜಿಕ ಭ್ರಷ್ಟನಾಗುತ್ತಾನೆ ಎಂದೂ ಹೇಳಿದೆ. ಆತ ಇಹ ಪರಗಳೆರಡಕ್ಕೂ ಅಯೋಗ್ಯ ವೆಂದೂ ವಂಶ ನಾಶಕ್ಕೆ ಕಾರಣನಾಗುತ್ತಾನೆಂದೂ ಹೇಳಿದೆ. ಈ ಸ್ಮೃತಿ ವಚನವನ್ನು ಕೈಬಿಟ್ಟ ನಂಬೂದಿರಿಗಳು ಹಿರಿಯ ಮಗನಿಗೆ ಮಾತ್ರ ವಿವಾಹ ಎಂಬುದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದರು. ಹಿರಿಯ ಮಗನನ್ನು ಹೊರತುಪಡಿಸಿ ಉಳಿದರೂ ಸ್ವಜಾತಿಯಿಂದಲೇ ಮದುವೆಯಾಗಿರುತ್ತಿದ್ದರೆ  ನಂಬೂದಿರಿ ಸ್ತ್ರೀಯರು ಒಬ್ಬಳು ಹೆಂಡತಿ ಇರುವಾಗಲೇ ಎರಡನೆಯವಳನ್ನು ಮದುವೆಯಾಗ ಬೇಕಾಗಿರಲಿಲ್ಲ. ವೃದ್ಧನಾದ ಗಂಡನೊಡನೆ ದಾಂಪತ್ಯ ನಡೆಸಬೇಕಾದ ಪ್ರಮೇಯವೂ ನಂಬೂದಿರಿ ತರುಣಿಯರಿಗೆ ಬರುತ್ತಿರಲಿಲ್ಲ. ಬಾಲ ವಿಧವೆಯಾಗುವ ಸಮಸ್ಯೆಯೂ ತಪ್ಪುತ್ತಿತ್ತು. ‘ಅಧಿವೇದನಂ’ನ ಕುರಿತಾದ ನಿಯಮಗಳನ್ನು ಕೂಡಾ ಉದಾರವಾಗಿ ಪರಿಗಣಿಸಿ ರುವುದನ್ನು ಕಾಣಬಹುದು. ‘ಸಾಪತ್ನ್ಯಂ’ ಎಂಬುದು ಪಾಪಕೃತ್ಯ. ಆದರೂ ಮೊದಲ ಹೆಂಡತಿಯಲ್ಲಿ ಮಕ್ಕಳಾಗುವುದಿಲ್ಲ ಎಂದು ಖಚಿತವಾದ ಮೇಲೆ ಮತ್ತೊಬ್ಬಳನ್ನು ಮದುವೆಯಾಗಬಹುದು. ಎರಡನೆಯ ಹೆಂಡತಿಯಲ್ಲೂ ಸಂತಾನ ಪ್ರಾಪ್ತಿಯಾಗದಿದ್ದಾಗ ಮೂರನೆಯವಳನ್ನು ಮದುವೆಯಾಗಬಹುದು. ಈ ಮೂವರೂ ಹೆಂಡಿರು ಬದುಕಿರುವಾಗ, ಮತ್ತೊಂದು ‘ವೇಳಿ’ಯನ್ನು ಮಾಡಿಕೊಳ್ಳಬಾರದು ಎಂದು ‘ಶಾಂಕರಸ್ಮೃತಿ’ ಹೇಳುತ್ತದೆ. ಈ ನಿಯಮವನ್ನು ಪಾಲಿಸುವಲ್ಲಿ ನಂಬೂದಿರಿ ಬ್ರಾಹ್ಮಣರು ನಿಷ್ಠೆಯನ್ನು ತೋರಿಸಲಿಲ್ಲ. ‘ಬದಲಿ ವೇಳಿ ಮಾಡಿಕೊಳ್ಳುವುದು’ ಎಂಬೊಂದು ಪದ್ಧತಿ ನಂಬೂದಿರಿ ಬ್ರಾಹ್ಮಣರ ನಡುವೆ ಸರ್ವಸಾಧಾರಣವಾಗಿ ಇತ್ತು. ಸಹೋದರಿಯನ್ನು ಮದುವೆ ಮಾಡಿಕೊಡುವ ಸಲುವಾಗಿ ಹೆಣ್ಣು ಮಕ್ಕಳನ್ನು ಪರಸ್ಪರ ಬದಲಾಯಿಸಿಕೊಳ್ಳುವ ಸಂಪ್ರದಾಯವೊಂದಕ್ಕೆ ಇದು ನಾಂದಿ ಹಾಡಿದಂತಾಯಿತು.

ಶಾಂಕರಸ್ಮೃತಿಯಲ್ಲಿ ಎಂಟು ರೀತಿಯ ವಿವಾಹ ಪದ್ಧತಿಗಳನ್ನು ಹೇಳಲಾಗಿದೆ. ವಿವಾಹ ವಿಧಿಗಳನ್ನು ಹೇಳುವಲ್ಲಿಯೇ, ವಧು ಪರೀಕ್ಷೆಯ ಸಂದರ್ಭಗಳಲ್ಲೇ ‘ವರದಕ್ಷಿಣೆ’ (ಸ್ತ್ರೀಧನಂ)ಯ ಕುರಿತು ವಿವರಗಳು ಬರುವುದಿಲ್ಲ. ಆದರೂ ‘ವರದಕ್ಷಿಣೆ’ ಕೊಡುವ ಪದ್ಧತಿ ಯೊಂದು ನಂಬೂದಿರಿ ಜನರಲ್ಲಿ ಹಿಂದಿನಿಂದಲೇ ಪ್ರಚಲಿತದಲ್ಲಿದೆ. ಈ ವರದಕ್ಷಿಣೆ ಸಂಪ್ರದಾಯವು ನಂಬೂದಿರಿ ಸ್ತ್ರೀಯರನ್ನು ಎರಡು ತೆರನ ವಿಪತ್ತುಗಳಿಗೆ ಗುರಿ ಮಾಡಿತು. ಎರಡು, ಮೂರು ಮದುವೆ ಮಾಡಿಕೊಳ್ಳಲು ವರದಕ್ಷಿಣೆಯು ಒಂದು ಆಕರ್ಷಣೆಯಾಯಿತು. ಇದು ಮೊದಲನೆಯ ವಿಪತ್ತು ಎನಿಸಿದರೆ ಎರಡನೆಯದು ಭೀಕರವಾಗಿತ್ತು. ಆರ್ಥಿಕವಾಗಿ ಪ್ರಬಲರಾದ ನಂಬೂದಿರಿ ಬ್ರಾಹ್ಮಣರ ನಡುವೆ ಬಡ ಕುಟುಂಬಗಳೂ ಇದ್ದವು. ವರದಕ್ಷಿಣೆ ಕೊಡಲು ಅಶಕ್ತರಾದ ಬಡವರನ್ನು ಬದಲಿ ವಿವಾಹ ಮಾಡಿಕೊಳ್ಳಲು ಯಾರೂ ಮುಂದಾಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಅಸಹಾಯಕರಾದ ತಂದೆ ತಾಯಂದಿರು ಪ್ರಾಯಪ್ರಬುದ್ಧರಾದ ತಮ್ಮ ಹೆಣ್ಣು ಮಕ್ಕಳನ್ನು ಕರ್ನಾಟಕದ ಸಿರ್ಸಿ, ಸಿದ್ಧಾಪುರಗಳಿಗೋ ಕೆಲವೊಮ್ಮೆ ತಮಿಳುನಾಡಿನ ಕೊಯಂಬತ್ತೂರು ಪ್ರದೇಶಗಳ ಯಾವುದೋ ಬ್ರಾಹ್ಮಣನಿಗೆ ಕೊಟ್ಟು ಸಂಬಂಧ ಏರ್ಪಡಿಸುತ್ತಿದ್ದರು. ಇದು ವಾಸ್ತವದಲ್ಲಿ ವಿವಾಹ ಸಂಬಂಧ ಆಗುತ್ತಿರಲಿಲ್ಲ. ಹೀಗೆ ಸಂಬಂಧ ಏರ್ಪಡಿಸಿದ ಹೆಣ್ಣು ಮಕ್ಕಳು ಮುಂದೆ ಅನಾಥರಾಗಿ ವೇಶ್ಯಾವೃತ್ತಿಗಿಳಿದು ತಮ್ಮ ಬದುಕನ್ನು ಹಾಳು ಮಾಡಿಕೊಂಡ ನಿದರ್ಶನಗಳೂ ಇವೆ.

ಮದುವೆಯ ಮೂಲಕವಾದರೂ ಕನ್ಯೆಯನ್ನು ಷಂಡನಿಗೆ ಕೊಡಬಾರದು ಎಂದು ‘ಶಾಂಕರಸ್ಮೃತಿ’ ಹೇಳುತ್ತದೆ. ವೃದ್ಧರನ್ನು ಶಾಂಕರಸ್ಮೃತಿ ಷಂಡರ ಪಟ್ಟಿಯಲ್ಲಿ ಸೇರಿಸಿದೆ.

ಆದರೆ ಸ್ತ್ರೀಗೆ ಅನುಕೂಲವಾಗಿರುವ ಯಾವುದೇ ನಿಯಮಗಳನ್ನು ನಂಬೂದಿರಿ ಪುರುಷರು ಗಮನಿಸುವುದಿಲ್ಲ. ಬ್ರಾಹ್ಮಣನು ಧರ್ಮಾರ್ಥವಾಗಿ ಬ್ರಾಹ್ಮಣ ಕನ್ಯೆಯನ್ನೇ ಮದುವೆಯಾಗ ಬೇಕು, ಕಾಮಾರ್ಥವಾಗಿ ಕ್ಷತ್ರಿಯ ಕನ್ಯೆಯನ್ನು ಮದುವೆಯಾಗಬಹುದು, ಶೂದ್ರ ಸ್ತ್ರೀಯನ್ನು ಎಂದೂ ಮದುವೆಯಾಗಲೇಬಾರದು ಎಂಬಿತ್ಯಾದಿ ಶಾಂಕರಸ್ಮೃತಿಯ ಹೇಳಿಕೆಗಳನ್ನು ಸ್ವಜಾತಿಯ ಮದುವೆಯ ಜೊತೆಗೆ ಅನ್ಯ ಜಾತಿಯ ಹೆಣ್ಣುಗಳೊಡನೆ ಸಂಬಂಧಕ್ಕೆ ಕೊಟ್ಟ ಅನುಮತಿ ಎಂಬಂತೆ ವ್ಯಾಖ್ಯಾನಿಸಿಕೊಂಡಿದ್ದಾರೆ. ಹೀಗೆ ಧಾರ್ಮಿಕ ಶ್ರೇಷ್ಠರಿಂದ ಹೇಳಿದ ವಿವಾಹ ಪದ್ಧತಿ ನಂಬೂದಿರಿ ಸಮುದಾಯಕ್ಕೆ ಒಂದು ನುಂಗಲಾರದ ತುತ್ತಾಗಿ ಪರಿಣಮಿಸಿತು. ಇದರ ಎಲ್ಲಾ ದುರಂತಗಳನ್ನು ಅನುಭವಿಸಿ ಕತ್ತಲೆಯ ಕೋಣೆಯೊಳಗೆ ನಂಬೂದಿರಿ ಸ್ತ್ರೀಯರು ಶತಮಾನಗಳನ್ನು ಕಳೆದರು.

ವ್ರತ, ನಿಯಮಾನುಷ್ಠಾನಗಳನ್ನು ಮಾಡುತ್ತಾ ಸ್ಮೃತಿ ವಾಕ್ಯಗಳನ್ನು ಅನುಸರಿಸುತ್ತ ಸ್ತ್ರೀಯರನ್ನು ಪ್ರೀತಿ, ಗೌರವಗಳಿಂದ ನಡೆಸಿಕೊಂಡ ಕುಟುಂಬಗಳೂ ಇವರ ನಡುವೆ ಇದ್ದವು. ಗೃಹಸ್ಥ ಜೀವನದ ಪಾವಿತ್ರ್ಯವನ್ನು ಪ್ರಮುಖವಾಗಿ ಪರಿಗಣಿಸಿದ ನಂಬೂದಿರಿ ಜನರು ಎಲ್ಲಾ ಕಾಲದಲ್ಲೂ ಇದ್ದರು. ತಾಪಸ ಜೀವನವನ್ನು ಅನುಸರಿಸಿ ಜ್ಞಾನಾರ್ಜನೆಗಾಗಿಯೇ ತಮ್ಮ ಪ್ರಾಣವನ್ನು ಮುಡಿಪಾಗಿರಿಸಿ ಸಾಂಸ್ಕೃತಿಕ, ವೈಜ್ಞಾನಿಕ ಕ್ಷೇತ್ರಗಳಿಗೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದವರೂ ನಂಬೂದಿರಿ ಬ್ರಾಹ್ಮಣರಲ್ಲಿ ಅನೇಕರಿದ್ದಾರೆ. ಅಂದರೆ ಈ ತೆರನ ಜೀವನವನ್ನು ಅನುಸರಿಸದೆ ಸ್ತ್ರೀಯರನ್ನು ನಿಕೃಷ್ಟವಾಗಿ ನಡೆಸಿಕೊಂಡವರೂ ನಂಬೂದಿರಿ ಬ್ರಾಹ್ಮಣರಲ್ಲಿದ್ದಾರೆ. ‘ತ್ಯಾಗ ಸಮೃದ್ದಿಯಿಂದ ದೈವತ್ವಕ್ಕೆ ಏರಿದ ಭೋಗಾಸಕ್ತಿಯಿಂದ ಮೃಗೀಯತ್ವಕ್ಕೆ ಇಳಿದ ಸಮುದಾಯ’ವೆಂದು ನಂಬೂದಿರಿ ವರ್ಗವನ್ನು ಕುರಿತು ವಿದ್ವಾಂಸರು ಹೇಳಿದ್ದಿದೆ (ಶ್ರೀದೇವಿ ಕೆ.ಪಿ. : ೧೯೯೯).

ಶಾಂಕರಸ್ಮೃತಿಯ ನಿಯಮಗಳಿಗೂ, ನಿಬಂಧನೆಗಳಿಗೂ ಸ್ವೇಚ್ಛಾನುಸಾರ ವ್ಯಾಖ್ಯಾನಗಳನ್ನು ಮಾಡಿದ ನಂಬೂದಿರಿಗಳು ವೃದ್ಧ ಪತಿಯಂದಿರು, ಸಾಪತ್ನ್ಯಂ ದುಃಖ, ಅಕಾಲ ವೈಧವ್ಯ ಮೊದಲಾದ ದುರ್ವಿಧಿಗಳಿಗೆ ಬಲಿಯಾಗಬೇಕಾಗಿ ಬಂದ ತಮ್ಮ ಸ್ತ್ರೀಯರ ಪಾವಿತ್ರ್ಯವನ್ನು ಬಯಸಿದ್ದರು. ಒಬ್ಬಾಕೆ ಸ್ತ್ರೀಗೆ ಕಾಮತೃಪ್ತಿಯನ್ನು ಕೊಡಬೇಕಾದರೆ ಐದೋ, ಹತ್ತೋ ಮಂದಿ ಪುರುಷರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಪುರುಷರು ಎರಡೋ ಅದಕ್ಕಿಂತ ಹೆಚ್ಚೋ ಹೆಂಡತಿಯರನ್ನು ಮಾಡಿಕೊಳ್ಳುವುದು ಪಾಪಕೃತ್ಯ. ಈ ಸ್ಮೃತಿ ವಾಕ್ಯದ ಉತ್ತರಾರ್ಧವನ್ನು ನಿರ್ಲಕ್ಷಿಸಿ ಪೂರ್ವಾರ್ಧಕ್ಕೆ ಒತ್ತುಕೊಟ್ಟ ನಂಬೂದಿರಿ ಗಂಡಸರು ಸ್ತ್ರೀಯರಿಗೆ ಅನೇಕ ಕಟ್ಟುಪಾಡುಗಳನ್ನು ವಿಧಿಸಿ ಅವರು ಮನೆಯ ಒಳಗಡೆಯೇ ಉಳಿಯುವಂತೆ ಮಾಡಿದರು. ಅದಕ್ಕಾಗಿ ಘೋಷ ಸಂಪ್ರದಾಯವನ್ನು, ಪರಪುರುಷ ದರ್ಶನ ನಿಷೇಧವನ್ನು ಸೃಷ್ಟಿಸಿದರು. ಇಷ್ಟಾಗಿಯೂ ಸ್ತ್ರೀಯ ಚಾರಿತ್ರ್ಯಶುದ್ದಿ ನಷ್ಟವಾಯಿತೆಂದು ಸಂದೇಹ ಉಂಟಾದರೆ ಅವಳನ್ನು ಬಹಳ ಕ್ರೂರವಾಗಿ ಶಿಕ್ಷಿಸುವ ‘ಸ್ಮಾರ್ತವಿಚಾರ’ಕ್ಕೆ ರೂಪುಕೊಟ್ಟರು.

ಸ್ತ್ರೀಯಾಗಲಿ, ಪುರಷನಾಗಲಿ ನಂಬೂದಿರಿ ಸಮುದಾಯದ ಒಂದು ವೈಶಿಷ್ಟ್ಯವೆಂದರೆ ಅವರ ಜೀವನ ವಿಧಾನಗಳು ಧಾರ್ಮಿಕ ಹಿನ್ನೆಲೆಯಿಂದ ರೂಪ ಪಡೆದವುಗಳು. ಬದುಕಿಗಾಗಿ ಧಾರ್ಮಿಕ ವಿಧಿ-ವಿಧಾನಗಳನ್ನು ರೂಪಿಸಿಕೊಂಡವರಲ್ಲ ಅವರು. ಬದಲಾಗಿ ಧಾರ್ಮಿಕ ವಿಧಿವಿಧಾನಗಳಿಗಾಗಿ ಬದುಕನ್ನು ರೂಪಿಸಿಕೊಂಡವರು. ಹಾಗಾಗಿಯೇ ನಂಬೂದಿರಿ  ಸ್ತ್ರೀಯರು ಕಠಿಣ ನಿಯಮಗಳ ನಿಯಂತ್ರಣದಲ್ಲಿ ಬದುಕುವ ಅನಿವಾರ್ಯತೆ ಉಂಟಾಯಿತು. ಕೌಮಾರ್ಯಕ್ಕೆ ಕಾಲಿರಿಸುವ ದಿನಗಳಿಂದಲೇ ಆಕೆ ಜಾತಿಯ ನಿಬಂಧನೆಗಳಿಗೆ ಒಳಗಾಗ ಬೇಕಾಗುತ್ತಿತ್ತು. ಷೋಡಸ ಸಂಸ್ಕಾರಗಳಲ್ಲೊಂದಾದ ‘ಚೂಡಾಕರಣಂ’ ಕಳೆದರೆ ವಿಶೇಷ ದಿನಗಳಲ್ಲಿ ‘ತೇವಾರಂ’ (ದೇವತಾರಾಧನೆ) ಕಡ್ಡಾಯವಾಗಿರುತ್ತಿತ್ತು. ‘ಕಿವಿಚುಚ್ಚುವುದು’, ‘ಉಡುತುಟಙಲ್’ ಮೊದಲಾದ ಆಚರಣೆಗಳು ಕಳೆಯುವಾಗ ‘ತೇವಾರಂ’ ದಿನಚರಿಯಾಗಿ ಬಿಡುತ್ತದೆ. ಇದರಲ್ಲಿ ಬಹುಮುಖ್ಯವಾದ ಭಾಗ ಗಂಡನೊಡನೆ ಬಹುಕಾಲ ಸುಖವಾಗಿ ಜೀವನ ಸಾಗಿಸಲು ಶಿವನನ್ನು ಕುರಿತು ಪ್ರಾರ್ಥಿಸುವ ಶ್ಲೋಕಗಳೇ ಆಗಿರುತ್ತವೆ. ಇದು ಬೆಳಗಿನಿಂದ ಮಧ್ಯಾಹ್ನದವರೆಗೂ ಮುಂದುವರಿಯುತ್ತದೆ. ಮಧ್ಯಾಹ್ನದ ಊಟದ ಬಳಿಕ ರಾಮಾಯಣ, ಮಹಾಭಾರತ ಮೊದಲಾದ ಭಕ್ತಿ ಪರವಾದ ಕಾವ್ಯ ಗ್ರಂಥಗಳನ್ನು, ಧಾರ್ಮಿಕ ಗ್ರಂಥಗಳನ್ನು ಓದಬಹುದು. ಮೂರು ಗಂಟೆಯ ಹೊತ್ತಿಗೆ  ಸ್ನಾನಾದಿಗಳನ್ನು ಮುಗಿಸಿ ಉತ್ತರಕ್ಕೆ ಮುಖ ಮಾಡಿ ಕುಳಿತು ಕೊರಳ ಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡು ‘ಪಂಚಾಕ್ಷರ’ವನ್ನು ಜಪಿಸಬೇಕು. ಇದೂ ಕೂಡಾ ಮಾಂಗಲ್ಯ ಭಾಗ್ಯಕ್ಕಾಗಿಯೇ. ಸೂರ್ಯಾಸ್ತಕ್ಕೆ ಮೊದಲು ಮೈ ತೊಳೆದುಕೊಂಡು ಬಂದು ಪಶ್ಚಿಮಕ್ಕೆ ಅಭಿಮುಖವಾಗಿ ಕುಳಿತು ಮಂತ್ರೋಚ್ಛಾರಣೆ ಮಾಡುವುದು, ನಮಸ್ಕರಿಸುವುದನ್ನು ಮಾಡಬೇಕು. ಸುವಾಸನೆ ಯುಳ್ಳ ಹೂಗಳನ್ನೋ, ದ್ರವ್ಯಗಳನ್ನೋ ಬಳಸುವಂತಿಲ್ಲ. ಮಲಗುವಾಗ ತಲೆದಿಂಬನ್ನು ಉಪಯೋಗಿಸಬಾರದು. ಋತುಮತಿಯಾಗುವ ತನಕ ಸಮೀಪದ, ಜಾತ್ರೆ, ಉತ್ಸವಗಳಿಗೆ ಪರಿಚಾರಕರೊಡನೆ ಹೋಗಿ ಬರಬಹುದು. ಋತುಮತಿಯಾದ ಬಳಿಕ ಅದೂ ಸಾಧ್ಯವಿಲ್ಲ. ಸ್ವಂತ ಮನೆಯ ಗಂಡಸರು ಹಾಗೂ ಸಮೀಪದ ಬಂಧುಗಳನ್ನಲ್ಲದೆ ಅನ್ಯ ಪುರುಷರನ್ನು ನೋಡುವಂತೆಯೇ ಇಲ್ಲ. ಮನೆಯ ಹಿಂಭಾಗದಲ್ಲೋ ಮತ್ತೆಲ್ಲೋ ಆಡುತ್ತಿರಬೇಕು. ಪಡಸಾಲೆಗೆ ಪ್ರವೇಶಿಸುವಂತೆಯೇ ಇಲ್ಲ.

ವಿವಾಹಿತೆ ಮಾಡಲೇಬೇಕಾದ ಕೆಲವು ಆಚರಣೆಗಳಿವೆ. ಎಲ್ಲವೂ ಗಂಡನ ಹಾಗೂ ಮಗನ ಶ್ರೇಯಸ್ಸು ಹಾಗೂ ಆಯುಷ್ಯ ವರ್ಧನೆಗಾಗಿ ಇರುವಂತವುಗಳು. ದೇವಸ್ಥಾನಗಳಿಗೆ ಹೋಗಲು ಮಾತ್ರ ಮನೆಯಿಂದ ಹೊರಗಿಳಿಯಬಹುದು. ತವರುಮನೆಗೋ ಬಂಧುಗಳ ಮನೆಗೋ ಯಾವಾಗಲಾದರೂ ಒಮ್ಮೊಮ್ಮೆ ಅನುಕೂಲಾನುಸಾರ ಹೋಗಿ ಬರಬಹುದು. ಈ ಕೆಲವು ಪರಿಮಿತವಾದ ಅವಕಾಶಗಳಲ್ಲಿ ಮನೆಯಿಂದ ಹೊರಗಿಳಿಯಬಹುದು. ಆದರೆ ಈ ಸಂದರ್ಭದಲ್ಲಿ ಮಱಕೊಡೆ, ಚೇಲಪ್ಪುತಪ್ಪ್ಗಳಿಂದ ತಮ್ಮ ದೇಹವು ಅನ್ಯರಿಗೆ ಕಾಣದಂತೆ ಮರೆ ಮಾಡಿಕೊಂಡಿರಬೇಕು. ಸ್ನಾನ, ವಸ್ತ್ರಧಾರಣೆ, ಆಭರಣ ತೊಡುವುದು ಇತ್ಯಾದಿ ವೈಯುಕ್ತಿಕ ವಿಷಯಗಳಲ್ಲೂ ಜಾತೀಯ ನಿಯಮಗಳಿಗೆ ವಿಧೇಯರಾಗಿರಬೇಕಾಗಿತ್ತು.

ಈ ಜಾತಿಯ ಕಟ್ಟುಪಾಡುಗಳ ಜೀವನ ವಿಧಾನದಲ್ಲೂ ಕೆಲವು ಉತ್ತಮಾಂಶಗಳು ಇದ್ದವು  ಎಂಬುದನ್ನು ಮರೆಯುವಂತಿಲ್ಲ. ಮಾನಸಿಕವೂ, ಶಾರೀರಿಕವೂ ಆದ ಪರಿಶುದ್ಧತೆ, ಭಾವನಾತ್ಮಕವಾಗಿ ಪಕ್ವತೆಯನ್ನು ಮುಂಚೂಣಿಯಲ್ಲಿರಿಸಿ ರೂಪುಕೊಟ್ಟ ಸರಳವಾದ ಒಂದು ಜೀವನ ವಿಧಾನ ಅದು. ವೈದಿಕ ಮೇಧಾವಿತ್ವವು ಅದರ ಅಂಧವಿಶ್ವಾಸಗಳಿಗೆ ಹಲವು ವಿಕೃತವಾದ ವ್ಯಾಖ್ಯಾನಗಳನ್ನು ನೀಡುತ್ತಾರೆ. ಈ ಕಟ್ಟುಪಾಡುಗಳ ಹಿಂದೆ ಭೌತಿಕ ಚೈತನ್ಯವೂ ಆತ್ಮೀಯತೆಯ ಅಂತಃಸ್ವತ್ವವೂ ಅಡಗಿ ಕುಳಿತಿದೆ ಎಂಬುದು ಮಾತ್ರ ಸತ್ಯ. ಕಟ್ಟುಪಾಡುಗಳ ಅಂತರಾರ್ಥ ಏನೆಂದು ತಿಳಿದುಕೊಳ್ಳಲು ಶ್ರಮಿಸದೆ ಕಣ್ಣುಮುಚ್ಚಿ ಅನುಸರಿಸಿದ್ದರಿಂದಾಗಿ ನಂಬೂದಿರಿ ಸಮುದಾಯದ ಧಾರ್ಮಿಕ ಜೀವನ ಪ್ರಬಲವಾಯಿತು. ಗಂಡಸರ ಅಧಿಕಾರ ವ್ಯಾಪ್ತಿಯೂ ಹೆಚ್ಚಿತು.

ಹೀಗೆ ಪುರುಷಾಧಿಪತ್ಯದ ಸಾಮಾಜಿಕ ನಿಯಮಗಳ ಹಾಗೂ ಅರ್ಥವಿಲ್ಲದ ಆಚರಣೆಗಳ ಉರುಳಿಗೆ ಸಿಕ್ಕಿಹಾಕಿಕೊಂಡ ನಂಬೂದಿರಿ ಸ್ತ್ರೀಯರು ಇದೆಲ್ಲವೂ ವಿಧಿ ಬರಹ ಎಂದೇ ನಂಬಿದರು. ಈ ಉರುಳು ಮಾನವ ನಿರ್ಮಿತವೆಂದೂ ಅವುಗಳಿಂದ ಬಿಡುಗಡೆ ಪಡೆಯಬೇಕು ಎಂಬ ಯೋಚನೆ ಕೂಡ ಆ ಮಹಿಳೆಯರಲ್ಲಿ ಉಂಟಾಗಲಿಲ್ಲ. ಇದೇ ಅವಸ್ಥೆ ಇಪ್ಪತ್ತನೇ ಶತಮಾನದ ಆರಂಭದ ದಶಕಗಳವರೆಗೂ ಕೇರಳದಲ್ಲಿತ್ತು.

ಮುಸಲ್ಮಾನ ಮಹಿಳೆಯರು

ಖುರಾನಿನಲ್ಲಿ ಹೇಳಿದ ನಿಯಮಗಳಿಗೆ ಪುರೋಹಿತಶಾಹಿಗಳು ನೀಡಿದ ವ್ಯಾಖ್ಯಾನಗಳಿಗೆ ಬದ್ಧರಾಗಿರುವಂತೆ ಮುಸಲ್ಮಾನ ಸ್ತ್ರೀಯರನ್ನು ನಡೆಸಿಕೊಳ್ಳಲಾಗಿದೆ. ಹಿಂದೂ ಮಹಿಳೆಯರಿ ಗಿಂತಲೂ ಹೆಚ್ಚು ನಿರ್ಬಂಧಗಳು ಮುಸಲ್ಮಾನ ಮಹಿಳೆಯರಿಗೆ ಅವರ ಧರ್ಮವು ಹೇರಿದೆ. ಮಸೀದಿಗೆ ಪ್ರವೇಶ ಇಲ್ಲದ ಮುಸಲ್ಮಾನ ಮಹಿಳೆಯರು ಬಹುಶಃ ಕೇರಳದಲ್ಲಿಯೇ ಅತ್ಯಂತ ಹಿಂದುಳಿದವರಾಗಿದ್ದಾರೆ. ಅವರಲ್ಲಿ ಕೀಳರಿಮೆಯನ್ನು ಅಥವಾ ಅಧಮ ಪ್ರಜ್ಞೆಯನ್ನು ಹುಟ್ಟಿಸಲು ಪರ್ಯಾಪ್ತವಾದ ಆಚಾರಗಳ ನಡುವೆ ಅವರು ಬದುಕುತ್ತಿದ್ದಾರೆ.

ಕ್ರೈಸ್ತ ಮಹಿಳೆಯರು

ಹಳೆಯ ನಿಯಮಗಳಲ್ಲಿ ನಿಷ್ಠುರವಾದ ವಿಧಿ ನಿಷೇಧಗಳು ಇಂದು ಪರಿಷ್ಕಾರಕ್ಕೊಳಗಾಗಿವೆ. ಆದರೂ ಇಂದಿಗೂ ಕೇರಳದ ಒಂದು ವಿಭಾಗದ ಕ್ರೈಸ್ತ ಮಹಿಳೆಯರು ಋತುಮತಿಯಾದರೆ ‘ಕುರ್ಬಾನ’ವನ್ನು ಕೈಗೊಳ್ಳುವಂತಿಲ್ಲ. ಇದು ಹಳೆಯ ನಿಯಮಗಳಿಗಿಂತಲೂ ಪರಿವರ್ತನೆಗಳ ಮೊದಲು ಇದ್ದ ನಿಯಮಗಳ ಮುಂದುವರಿಕೆಯೆಂದು ಭಾವಿಸಬಹುದು. ಸ್ತ್ರೀಯರಿಗೆ ಸಂಬಂಧಿಸಿದಂತೆ ಕ್ರೈಸ್ತರಲ್ಲಿ ಪ್ರಗತಿಪರವಾಗಿ ಶೀಘ್ರವಾದ ಬೆಳವಣಿಗೆ ಕಾಣಿಸುತ್ತದೆ. ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಇತರರಿಗಿಂತ ಕ್ರೈಸ್ತ ಮಹಿಳೆಯರು ಮುಂದಿದ್ದಾರೆ. ಆದರೂ ಕನ್ಯತ್ವವನ್ನು ಕುರಿತಂತೆ, ಹೆಂಡತಿ ಎಂಬ ಪದವಿಯನ್ನು ಕುರಿತಂತೆ ಪುರುಷನಿಗೆ ಸಮರ್ಪಿಸುವುದಕ್ಕಿರುವ ಪವಿತ್ರವಾದ ವಸ್ತು ಎಂಬ ಸಾಂಪ್ರದಾಯಕವಾದ ನಿಯಮಗಳೂ ಇವರನ್ನೂ ಸಹ ಕೀಳರಿಮೆಗೆ ಪಕ್ಕಾಗುವಂತೆ ಮಾಡಿವೆ ಎಂಬುದು ಗಮನಾರ್ಹ.

ಸಾಮಾಜಿಕ ಚರಿತ್ರೆಯ ಹಿನ್ನೆಲೆಯಲ್ಲಿ ನೋಡಿದರೆ ತನ್ನ ಧರ್ಮಕ್ಕೆ ಜಾತಿಗೆ ಸಂಬಂಧಿಸಿದ ಕಟ್ಟುಪಾಡುಗಳನ್ನು ಕಡಿದೊಗೆದರೆ ಮಾತ್ರ ಸ್ತ್ರೀಗೆ ಸಾಮಾಜಿಕವಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಸಾಧ್ಯ. ಧಾರ್ಮಿಕವಾದ ಅನೇಕ ಕಟ್ಟುಪಾಡುಗಳು ಸ್ತ್ರೀಗೆ ಪುರುಷನಿಲ್ಲದೆ ಬಾಳುವುದು ಅಸಾಧ್ಯ ಎಂಬ ಸತ್ಯವನ್ನು ಗಟ್ಟಿಗೊಳಿಸುತ್ತಲೇ ಬಂದಿವೆ. ರಚನಾತ್ಮಕವಾಗಿ ಮತ್ತು ರಾಜಕೀಯವಾಗಿ ಸ್ತ್ರೀಯರಿಗೆ ಸ್ವಾತಂತ್ರ್ಯವನ್ನು ಕೊಡುವುದಕ್ಕಿಂತಲೂ ಮುಖ್ಯವಾದ ಸಮಕಾಲೀನ ಅವಶ್ಯಕತೆ ಎಂದರೆ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ನಿಯಮಗಳ ವಿರುದ್ಧವಾದ ಹೋರಾಟ.

ಕೇರಳದ ಸಾಮಾಜಿಕ ವ್ಯವಸ್ಥೆಯಲ್ಲಿ ಬ್ರಾಹ್ಮಣರು ಸಮಾಜದ ಉನ್ನತ ಸ್ತರದಲ್ಲಿಯೇ ಇದ್ದರು. ಇವರು ಇತರ ಜಾತಿ, ಸಮುದಾಯಗಳ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ಹೇರುತ್ತಿದ್ದರು. ಬ್ರಾಹ್ಮಣರು ರೂಪಿಸಿದ ಅನೇಕ ನಿಯಮಗಳು ಅವರಿಗೇ ಅನುಕೂಲ ವಾಗುವಂತಿದ್ದುವು. ನಾಡದೊರೆಗಳ ಪ್ರಾಬಲ್ಯದ ಕಾಲದಲ್ಲೂ ಸ್ತ್ರೀಯರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತು. ಸೊಂಟದ ಮೇಲ್ಭಾಗದಲ್ಲಿ ಬಟ್ಟೆ ತೊಡುವುದು ಕೂಡಾ ಮೇಲುವರ್ಗ ದವರಿಗೆ ಅವಿಧೇಯತೆಯ ಪ್ರಕಟಣೆಯಾಗಿ ಗೋಚರಿಸುತ್ತಿತ್ತು. ಹಾಗಾಗಿ ಶೂದ್ರ ಸ್ತ್ರೀಯರು ಎರೆಮರೆಸುವಂತೆ ಬಟ್ಟೆ ತೊಟ್ಟುಕೊಳ್ಳಬಾರದಿತ್ತು.

ಸ್ವಾತಿತಿರುನಾಳದ ಆಡಳಿತ ಕಾಲದಲ್ಲಿ ದಕ್ಷಿಣ ತಿರುವಾಂಕೂರಿನ ವೈಕುಂಠ ಸ್ವಾಮಿಗಳು ಎಂಬ ಸಮಾಜ ಸುಧಾರಕರೊಬ್ಬರು ಜಾತಿವಿನಾಶ ಕೆಲಸಗಳಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಹಿಂದೂ ಸಮಾಜದ ಬ್ರಾಹ್ಮಣ ಪ್ರಾಬಲ್ಯವನ್ನು ಕಠಿಣವಾಗಿಯೇ ಟೀಕಿಸಿದ ಅವರು ಅವರ್ಣೀಯ ಹಿಂದೂಗಳು ಕ್ರೈಸ್ತಮತಕ್ಕೆ ಮತಾಂತರಗೊಳ್ಳುವುದನ್ನು ಪ್ರೋತ್ಸಾಹಿಸಿದರು. ಹಿಂದೂ ಮತೀಯವಾದಿಗಳ ಒತ್ತಾಯಕ್ಕೆ ಮಣಿದು ಸ್ವಾತಿತಿರುನಾಳ್ ಇವರನ್ನು ಸೆರೆಮನೆ ಯಲ್ಲಿ ಇರಿಸಿದರೂ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು. ಕೆಳವರ್ಗದ ಮಹಿಳೆಯರು ಮತಾಂತರಗೊಂಡರೆ ಅವರಿಗೆ ಎದೆಮರೆಸುವಂತೆ ಬಟ್ಟೆ ತೊಟ್ಟುಕೊಳ್ಳುವ ಅವಕಾಶ ದೊರೆಯುತ್ತಿತ್ತು. ಈ ಅವಕಾಶವನ್ನು ಪಡೆಯುವುದಕ್ಕಾಗಿ ಮಹಿಳೆಯರು ಮತಾಂತರಗೊಳ್ಳಲೇ ಬೇಕೆಂಬುದು ಸ್ವಾಮಿಗಳ ವಾದವಾಗಿತ್ತು. ಇದರ ಹೆಸರಿನಲ್ಲಿ ದಕ್ಷಿಣ ತಿರುವಾಂಕೂರಿನಲ್ಲಿ ಅನೇಕ  ಚಳುವಳಿಗಳೂ ನಡೆದುವು. ೧೮೨೯ರಲ್ಲಿ ಒಂದು ಘೋಷಣೆಯ ಮೂಲಕ ಶೂದ್ರ ಮಹಿಳೆಯರಿಗೆ ಎದೆಮರೆಸುವ ಅವಕಾಶ ನೀಡಲಾಯಿತು. ಆದರೆ ಅವರು ಹಿಂದೂ ಬ್ರಾಹ್ಮಣ ಮಹಿಳೆಯರಂತೆ ಉಡುಗೆ ತೊಡುಗೆಗಳಲ್ಲಿ ಯಾವುದೇ ರೀತಿಯ ಅನುಕರಣೆಯನ್ನು ಮಾಡದಂತೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಹಿಂದೂ ಸಮುದಾಯದ ಒಳಗಡೆಯೇ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಮಹಿಳೆಯರ ಉಡುಗೆ ತೊಡುಗೆಗಳ ವ್ಯತ್ಯಾಸಕ್ಕೆ ಇದುವೇ ಮುಖ್ಯಕಾರಣ.

ಉಚ್ಚವರ್ಗದವರ ಸೇವೆಗಾಗಿ ಇತರೇ ವರ್ಗದ ಮಹಿಳೆಯರು ದುಡಿಯಬೇಕಾಗಿತ್ತು. ಹಾಗಿದ್ದಾಗಲೂ ಮಹಿಳೆ ಯಾವುದೆ ಜಾತಿಗೆ ಸೇರಿದರೂ ತನ್ನ ಸಮುದಾಯದ ಪುರುಷರ ಅಧೀನವಾಗಿಯೇ ಬದುಕಬೇಕಾಗಿತ್ತು. ಸಾಮಾಜಿಕ ಹೋರಾಟಗಳ ಮೂಲಕ ೨೦ನೇ ಶತಮಾನದಲ್ಲಿ ಸಮಾನತೆಗೆ ಸಂಬಂಧಿಸಿದಂತೆ ಮಹಿಳೆಯರು ಬಹುಮಟ್ಟಿಗೆ ಯಶಸ್ವಿ ಯಾಗಿದ್ದಾರೆ.

ಸ್ತ್ರೀಯ ವ್ಯಕ್ತಿತ್ವ ನಿರ್ಮಿತಿಯಲ್ಲಿ ಮುಖ್ಯವಾಗಿರುವ ಮತ್ತೊಂದು ಘಟಕವೆಂದರೆ ಆರ್ಥಿಕತೆ. ಸ್ವಂತವಾಗಿ ದುಡಿದು ಸಂಪಾದಿಸುವುದರಿಂದ ಆರ್ಥಿಕ ಸಮಾನತೆ ರೂಪುಗೊಳ್ಳ ಲಾರದು. ಮಲಯಾಳಂನ ಅನೇಕ ಸ್ತ್ರೀಪರ ಚಿಂತಕರು ಭಾವಿಸುವಂತೆ ಸ್ತ್ರೀಗೆ ಆರ್ಥಿಕ ಸಮಾನತೆ ದೊರೆಯಬೇಕಾದರೆ ಅಡುಗೆ ಮನೆಯ ಕೆಲಸಗಳಿಂದ ಆಕೆಗೆ ಬಿಡುಗಡೆ ದೊರೆಯಬೇಕು. ಆಕೆ ಹೊರಗಡೆ ದುಡಿದು ಸಂಪಾದಿಸುವವಳಾಗಿದ್ದರೂ ಅಡುಗೆ ಮನೆಯ ಹೊಣೆ ಆಕೆಯದೇ ಎಂದು ಪುರುಷ ಸಮಾಜ ಬಲವಾಗಿ ನಂಬಿದೆ. ಮಹಿಳೆಯರೂ ಅದನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ. ಅಡುಗೆ ಮನೆಯಲ್ಲಿ ಪುರುಷ ಹಾಗೂ ಸ್ತ್ರೀಗೆ ಸಮಾನವಾಗಿ ದುಡಿಯುವಂತಾಗಬೇಕು. ಮನೆಯ ಶುಚಿತ್ವವನ್ನು ಕಾಪಾಡುವುದು, ಮನೆಯನ್ನು ಒಪ್ಪ ಓರಣವಾಗಿ ಇರಿಸುವುದು, ಅಡುಗೆ ಮಾಡುವುದು, ಮಕ್ಕಳ ಯೋಗಕ್ಷೇಮ ವಿಚಾರಿಸುವುದು ಇವೆಲ್ಲ ಕುಟುಂಬದ ಎಲ್ಲಾ ಸದಸ್ಯರ ಹೊಣೆ ಎಂಬ ಅರಿವು ಮೂಡುವಂತಾದರೆ ಮಾತ್ರ ಸ್ತ್ರೀಗೆ ಆರ್ಥಿಕವಾದ ಸಮಾನತೆ ದೊರಕಿಸಿಕೊಟ್ಟಂತಾಗುತ್ತದೆ ಎಂಬುದಾಗಿ ಕೇರಳದ ಸ್ತ್ರೀವಾದಿ ಚಿಂತಕರು ಪ್ರತಿಪಾದಿಸುತ್ತಾರೆ (ಇಂದು ಇಡಪ್ಪಳ್ಳಿ : ೧೯೯೯).

ದೇಶದ ಅನೇಕ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಮಹಿಳೆಯರು ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದಿದ್ದಾರೆ. ಪುರುಷರಿಗಿಂತಲೂ ಮಹಿಳೆಯರೇ ವ್ಯಾವಹಾರಿಕವಾಗಿ ಮುಂದಿರುವುದನ್ನು ಕಾಣಬಹುದು. ಹಾಗೆ ಹೇಳುವಾಗ ದೊಡ್ಡ ದೊಡ್ಡ ಉದ್ಯಮಗಳನ್ನು ಮಹಿಳೆಯರೇ ಹೆಚ್ಚಾಗಿ ನಡೆಸುತ್ತಾರೆಂದಲ್ಲ. ಕುಟುಂಬದ ಜವಾಬ್ದಾರಿಯನ್ನು ವಹಿಸಿ ದೈನಂದಿನ ಬದುಕಿನಲ್ಲಿ ಅಗತ್ಯವೆನಿಸಿದ ಎಲ್ಲಾ ವಿಚಾರಗಳಲ್ಲಿ ಮಹಿಳೆಯರೇ ಮುಖ್ಯವಾಗಿ ನಿಯಂತ್ರಕ ಸ್ಥಾನದಲ್ಲಿದ್ದಾರೆ. ಇಂದು ಕೈಗಾರಿಕಾ ಕೇಂದ್ರಗಳಲ್ಲಿ, ವ್ಯಾಪಾರದಲ್ಲಿ, ಹೋಟೆಲುಗಳಲ್ಲಿ, ರಿಕ್ಷಾಗಳಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರು ದುಡಿಯುವುದನ್ನು ಕೇರಳದಲ್ಲಿ ಕಾಣಬಹುದು. ಸಾಮಾಜಿಕ ಸಂಘಟನೆಗಳಲ್ಲಿಯೂ ಮಹಿಳೆಯರು ಮುಖ್ಯಪಾತ್ರ ವಹಿಸುವುದನ್ನು ಗಮನಿಸಬಹುದು. ಇತ್ಯಾದಿಗಳನ್ನು ಗಮನಿಸಿದರೆ ಕೇರಳದ ಮಹಿಳೆಯರ ಸ್ಥಾನಮಾನಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅನೇಕ ಪ್ರಗತಿಪರ ಸಂಘಟನೆಗಳ ಹೋರಾಟದ ಮೂಲಕ ಬದಲಾವಣೆ ಸಾಧ್ಯವಾಗಿದೆ. ಈ ವಿವರಗಳನ್ನು ‘ಹೊಸ ಸಾಮಾಜಿಕ ವ್ಯವಸ್ಥೆಗಳು’ ಎಂಬ ಅಧ್ಯಾಯದಲ್ಲಿ ವಿಸ್ತರಿಸಲಾಗಿದೆ.