ಶೈಕ್ಷಣಿಕವಾಗಿ ಕೇರಳ ಭಾರತದ ರಾಜ್ಯಗಳಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯ. ಈಗಾಗಲೇ ಕೇರಳವನ್ನು ಸಂಪೂರ್ಣ ಸಾಕ್ಷರರ ರಾಜ್ಯ ಎಂದೂ ಘೋಷಿಸಲಾಗಿದೆ. ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಿದ್ದು ಒಂದು ಸುಪ್ರಭಾತದಲ್ಲಲ್ಲ. ಅದಕ್ಕೆ ಈ ಹಿಂದೆ ಕೇರಳವನ್ನಾಳಿದ ರಾಜಮಹಾರಾಜರುಗಳು ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹವು ಒಂದು ಕಾರಣ. ಈ ಹಿನ್ನೆಲೆಯನ್ನು ಸ್ವಲ್ಪ ವಿವರವಾಗಿ ಇಲ್ಲಿ ವಿಸ್ತರಿಸಬಹುದು.

ಪ್ರಾಚೀನ ಕಾಲ

ಪ್ರಾಚೀನ ಕೇರಳದ ಶಿಕ್ಷಣ ವ್ಯವಸ್ಥೆಯ ಬಗೆಗೆ ಸಂಘಕಾಲದ ಕೃತಿಗಳಲ್ಲಿ ಉಲ್ಲೇಖವಿದೆ. ಆ ದಿನಗಳಲ್ಲಿಯೇ ಶಿಕ್ಷಣವು ವ್ಯಾಪಕವಾಗಿ ಪ್ರಚಾರದಲ್ಲಿತ್ತು. ಸ್ತ್ರೀ ಪುರುಷ ಭೇದವಿಲ್ಲದೆ ಶಿಕ್ಷಣ ಎಲ್ಲಾ ಜನವರ್ಗಗಳವರಿಗೂ ಲಭ್ಯವಾಗಿತ್ತು. ಕುರವರು, ಪರಯರು, ಪಾಣರು, ಬೇಡರು ಮೊದಲಾದ ಜನವರ್ಗದವರು ವಿದ್ಯಾವಂತರಾಗಿ ರಾಜಕೀಯವಾಗಿಯೂ ಅಭಿಪ್ರಾಯ ಸೂಚಿಸಲು ಅರ್ಹರಾಗಿದ್ದರು. ಸಾಂಸ್ಕೃತಿಕ ಹಾಗೂ ಬೌದ್ದಿಕವಾಗಿ ಸಮಾಜದಲ್ಲಿ ಬ್ರಾಹ್ಮಣರಿಗಿಂತಲೂ ಪಾಣರಿಗೆ ಹಾಗೂ ಇತರ ಸಮುದಾಯದ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ಚೇರ ರಾಜನಾದ ನಾರ‌್ಮುಡಿಚೇರನ್ ಕಾಪಿಯಾಟ್ಟ್ ಕಾಪ್ಪಿಯನರ್ ಎಂಬ ಆಸ್ಥಾನ ಕವಿಗೆ ನಲವತ್ತು ಲಕ್ಷ ಸ್ವರ್ಣ ವರಹಗಳನ್ನು ನೀಡಿ ಸನ್ಮಾನಿಸಿದ ಬಗೆಗೆ ಹಾಗೂ ಇತರ ಅನೇಕರಿಗೆ ಬಹುಮಾನಗಳನ್ನು, ವಸತಿ ಸೌಲಭ್ಯಗಳನ್ನು ನೀಡಿದ ಬಗೆಗೆ ಸಾಹಿತ್ಯ ಕೃತಿಗಳಲ್ಲಿ ಉಲ್ಲೇಖವಿದೆ. ಸಂಘಂ ಕಾಲದಲ್ಲಿ ಮಹಿಳೆಯರಿಗೂ ಶಿಕ್ಷಣ ನೀಡುವ ಬಗೆಗೆ ಕಾಳಜಿವಹಿಸಲಾಗಿತ್ತು. ಅಂದು ಪ್ರಸಿದ್ಧರಾದ ಅನೇಕ ಮಂದಿ ಕವಯಿತ್ರಿಯರಿದ್ದರು. ಅವರಲ್ಲಿ ಅವ್ವಯ್ಯರ್ ಪ್ರಮುಖಳಾದವಳು. ಈಕೆಯೂ ಪಾಣರ ಸಮುದಾಯಕ್ಕೆ ಸೇರಿದವಳು. ಇವರೆಲ್ಲರೂ ಪ್ರಾಚೀನ ಕಾಲದಿಂದಲೇ ಶ್ರೇಣೀಕರಣ ಸಮಾಜ ವ್ಯವಸ್ಥೆಯಲ್ಲಿ ಕೆಳವರ್ಗದ ಜಾತಿಗಳವರು ಎಂಬುದು ಗಮನಾರ್ಹ.

ಪ್ರಾಚೀನ ಕೇರಳದಲ್ಲಿ ಅನೇಕ ಶಿಕ್ಷಣ ಕೇಂದ್ರಗಳಿದ್ದವು. ಅವುಗಳಲ್ಲಿ ಪ್ರಮುಖವಾದುದು ಮುಸಿರಿಸ್ಸಿನ ಸಮೀಪವಿರುವ ಮದಿಲಗಂ (ತಮಿಳು ಸಾಹಿತ್ಯದಲ್ಲಿ ಹೇಳಿರುವ ಕೂಣವಾಯಲ್ ಕೋಟೆ). ‘ಶಿಲಪ್ಪದಿಕಾರಂ’ ಎಂಬ ತಮಿಳು ಕೃತಿಯನ್ನು ರಚಿಸಿದ ಇಳಂಗೋ ಅಡಿಗಳ್ ಮದಿಲಗಂನ ಬುದ್ದಿಜೀವಿಗಳ ನೇತಾರನಾಗಿದ್ದ. ಸಂಸ್ಕೃತ ಕವಿಗಳು, ತಮಿಳು ಕವಿಗಳು, ಬೌದ್ಧ, ಜೈನ ಪಂಡಿತರು ಮೊದಲಾದವರಿಗೆ ಮದಿಲಗಂ ಆವಾಸ ಸ್ಥಾನವಾಗಿತ್ತು. ಅಲ್ಲಿನ ಸಾಂಸ್ಕೃತಿಕ ಬದುಕು ಅವರನ್ನು ಬೌದ್ದಿಕವಾಗಿಯೂ ಸಂಪನ್ನರಾಗಿಸಿತ್ತು.

ಶಿಕ್ಷಣ ವ್ಯವಸ್ಥೆಯ ಶೈಥಿಲ್ಯ

ಬ್ರಾಹ್ಮಣರು ಪ್ರಬಲರಾದಂತೆ ಕೇರಳದ ಶೈಕ್ಷಣಿಕ ವ್ಯವಸ್ಥೆಯು ಶಿಥಿಲವಾಗುತ್ತಾ ಬಂತು. ಚಾತುರ್ವರ್ಣ ವ್ಯವಸ್ಥೆಯು ಸಮಾಜದಲ್ಲಿ ನೆಲೆಗೊಳ್ಳುತ್ತಿದ್ದಂತೆ ಶೂದ್ರರಿಗೆ ಶಿಕ್ಷಣವನ್ನು ನಿಷೇಧಿಸಲಾಯಿತು. ದೈಹಿಕ ಶ್ರಮದ ಕೆಲಸಗಳಿಗೆ ಸಮಾಜದ ಕೆಳವರ್ಗದವರನ್ನು ನಿಯೋಜಿಸ ಲಾಯಿತು. ಇದರಿಂದಾಗಿ ಪಾಣರಂತಹ ಜನ ಸಮುದಾಯಗಳು ಸಮಾಜದ ಕೆಳವರ್ಗದಲ್ಲಿ ಗುರುತಿಸುವಂತಾಯಿತು. ಸ್ತ್ರಿಯರಿಗೂ ಶಿಕ್ಷಣವನ್ನು ನಿಷೇಧಿಸಲಾಯಿತು. ದೇವದಾಸಿಯರು ಮಾತ್ರ ಶಿಕ್ಷಣವನ್ನು ಪಡೆಯಬಹುದಾಗಿತ್ತು. ಹಿಂದೂಗಳೆನ್ನುವ ಜನ ಸಮುದಾಯದ ಮೇಲುವರ್ಗದಲ್ಲಿ ಗುರುತಿಸಿಕೊಂಡ ಬ್ರಾಹ್ಮಣರು ಮಾತ್ರವೇ ಶಿಕ್ಷಣ ಪಡೆಯುವಂತಾಯಿತು. ಈ ವ್ಯವಸ್ಥೆ ಬ್ರಿಟಿಷರ ಆಗಮನದ ನಂತರ ಇತ್ತೀಚಿನ ಕಾಲದವರೆಗೂ ಮುಂದುವರೆಯಿತು. ಸಾಮಾಜಿಕವಾಗಿ ಅಸಹಾಯಕರಾದ ಜನವರ್ಗಗಳ ಪ್ರಗತಿಗಾಗಿ ನಡೆಸಿದ ಸಾಂಘಿಕ ಹೋರಾಟ ಗಳ ಪರಿಣಾಮವಾಗಿ ಪರಿಸ್ಥಿತಿ ಬದಲಾಯಿತು.

ಕುಲಶೇಖರರ ಶೈಕ್ಷಣಿಕ ಪ್ರೋತ್ಸಾಹ

ಕ್ರಿ.ಶ. ೮೦೦ರಲ್ಲಿ ಕುಲಶೇಖರವರ್ಮನ ನೇತೃತ್ವದಲ್ಲಿ ಮಹೋದಯಪುರವನ್ನು ರಾಜಧಾನಿಯನ್ನಾಗಿ ಮಾಡಿ ಚೇರ ಸಾಮ್ರಾಜ್ಯವನ್ನು ಸ್ಥಾಪಿಸುವುದರ ಮೂಲಕ ಕೇರಳವು ಸಾಂಸ್ಕೃತಿಕ ನವೋತ್ಥಾನಕ್ಕೆ ನಾಂದಿ ಹಾಡಿತು. ಒಂಭತ್ತು, ಹತ್ತನೇ ಶತಮಾನಗಳಲ್ಲಿ ಕೇರಳವನ್ನಾಳಿದ ಆಯು ರಾಜರುಗಳು ಇದಕ್ಕೆ ಪೂರಕ ಕೊಡುಗೆಗಳನ್ನು ನೀಡಿದರು. ಈ ಕಾಲಘಟ್ಟದಲ್ಲಿ ಕೇರಳದೆಲ್ಲೆಡೆ ದೇವಾಲಯಗಳು ನಿರ್ಮಾಣಗೊಂಡವು. ದೇವಾಲಯಗಳು ಧಾರ್ಮಿಕ ಜಾಗೃತಿಯನ್ನು ಮೂಡಿಸುವುದರ ಜೊತೆ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದವು. ದೇವಾಲಯಗಳ ಜೊತೆಗೆ ನೃತ್ಯ ಕಲೆಗಳ ಪ್ರದರ್ಶನ ಸ್ಥಳಗಳಾದ ಕೂತ್ತಂಬಲಗಳಿದ್ದಂತೆ ಶಾಲೆಗಳೆಂಬ ಶಿಕ್ಷಣ ಕೇಂದ್ರಗಳೂ ಇದ್ದವು. ಈ ಸಂಪ್ರದಾಯವು ಬೌದ್ಧಮತದ ಅನುಕರಣೆಯಾಗಿ ಮುಂದುವರಿದುದು ಎಂದೇ ಬಹುತೇಕ ವಿದ್ವಾಂಸರ ಅಭಿಪ್ರಾಯ. ಕುಲಶೇಖರ ಸಾಮ್ರಾಜ್ಯದ ರಾಜಧಾನಿಯಾದ ಮಹೋದಯಪುರವು  ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಿತು. ಮಹೋದಯಪುರದಲ್ಲಿ ಆ ಕಾಲದಲ್ಲಿ ಅನೇಕ ಕವಿಗಳು, ಸಾಹಿತಿಗಳು ಪ್ರಖ್ಯಾತರಾದರು. ಒಂಭತ್ತನೆಯ ಶತಮಾನದ ನಕ್ಷತ್ರ ಬಂಗಲೆಯು ಮಹೋದಯಪುರಂನಲ್ಲಿ ಸ್ಥಾಪನೆಯಾಯಿತು. ಇದು ದಕ್ಷಿಣ ಭಾರತದಲ್ಲಿಯೇ ಈ ತೆರನ ಸಂಸ್ಥೆಗಳಲ್ಲಿ ಮೊದಲನೆಯದು. ಆರ್ಯಭಟನ ಸಿದ್ಧಾಂತಗಳ ನೆಲೆಯಲ್ಲಿ ಕಾರ್ಯ ಪ್ರವೃತ್ತವಾಗಿದ್ದ ಈ ಸಂಸ್ಥೆ ಶಂಕರನಾರಾಯಣನೆಂಬ ಜ್ಯೋತಿಶ್ಶಾಸ್ತ್ರಜ್ಞನ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಲಘು ಭಾಸ್ಕರೀಯಂ ಎಂಬ ಭಾಸ್ಕರಾಚಾರ್ಯರ ಜ್ಯೋತಿಶ್ಶಾಸ್ತ್ರ ಗ್ರಂಥಕ್ಕೆ ಶಂಕರನಾರಾಯಣೀಯ ಎಂಬ ಭಾಷ್ಯವನ್ನು ಬರೆದವರು ಇವರೇ. ಈ ನಕ್ಷತ್ರ ಬಂಗಲೆಯಲ್ಲಿ ಸರಿಯಾದ ಸಮಯವನ್ನು ಜನರಿಗೆ ತಿಳಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಸ್ಕೃತದಲ್ಲಿಯೂ, ತಮಿಳಿನಲ್ಲಿಯೂ ಸಾಹಿತ್ಯ ರಚನೆಗೆ ಈ ಸಂಸ್ಥೆ ಪ್ರೇರಕ ಶಕ್ತಿಯಾಯಿತು. ಆ ಕಾಲದಲ್ಲಿ ಶಿಕ್ಷಣದ ಭಾಷೆ ತಮಿಳು ಮತ್ತು ಸಂಸ್ಕೃತವಾಗಿತ್ತು. ಮಲಯಾಳವನ್ನು ಕೇವಲ ವ್ಯಾವಹಾರಿಕ ಭಾಷೆಯಾಗಿ ಮಾತ್ರ ಗಣಿಸಲಾಗಿತ್ತು.

ಶಾಲೆಗಳು

ಪ್ರಾಚೀನ ಕಾಲದಲ್ಲಿ ಶಾಲೆಯೆಂಬ ಹೆಸರಿನಲ್ಲಿ ಕರೆಯಲಾಗುತ್ತಿದ್ದ ವಿದ್ಯಾಲಯಗಳಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನವಿತ್ತು. ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ವಸತಿಗಳನ್ನು ಕೊಟ್ಟು ಶಿಕ್ಷಣ ಕೊಡುತ್ತಿದ್ದ ಕೇಂದ್ರಗಳೇ ಶಾಲೆಗಳು. ಈ ಶಾಲೆಗಳಲ್ಲಿ ವೇದಗಳು, ಇತರೇ ಶಾಸ್ತ್ರಗಳು ಹಾಗೂ ಸಂಸ್ಕೃತ ಭಾಷೆಯ ಕುರಿತು ಶಿಕ್ಷಣ ನೀಡಲಾಗುತ್ತಿತ್ತು. ಕಾಂತಳೂರು, ಪಾರ್ಥಿವಶೇಖರಪುರಂ, ತಿರುವೆಲ್ಲಾ, ಮೂಳಿಮಳಂ ಮೊದಲಾದೆಡೆಗಳಲ್ಲಿದ್ದ ಶಾಲೆಗಳು ಪ್ರಮುಖವಾದವುಗಳು. ಇವುಗಳಲ್ಲಿ ಕಾಂತಳೂರು ಶಾಲೆಯು ಆಯುರಾಜರ ಕಾಲದಲ್ಲಿ ವಿಕಾಸಗೊಂಡುದು. ಇದರ ಕುರಿತು ಚೋಳರ ಶಾಸನಗಳಲ್ಲದೆ ಅನೇಕ ಚಾರಿತ್ರಿಕ ದಾಖಲೆಗಳಲ್ಲಿ ಉಲ್ಲೇಖವಿದೆ. ಇದು ತಿರುವನಂತಪುರಂ ದೊಡ್ಡ ಶಾಲೆಯಾಗಿತ್ತು ಎಂದು ವಿದ್ವಾಂಸರ ಅಭಿಪ್ರಾಯ. ಪಾರ್ಥಿವಪುರಂ ಇಂದಿನ ಕನ್ಯಾಕುಮಾರಿ ಜಿಲ್ಲೆಯಲ್ಲಿದೆ.

ದಕ್ಷಿಣ ಭಾರತದ ನಲಂದ-ಕಾಂತಳೂರು ಶಾಲೆ

ಶಾಲೆಗಳಲ್ಲಿ ವಿದ್ಯಾರ್ಥಿಗಳ ಬೌದ್ದಿಕ, ಮಾನಸಿಕ ವಿಕಾಸಕ್ಕೆ ಅನುಕೂಲವಾಗುವ ಶಿಕ್ಷಣವನ್ನು ನೀಡಲಾಗುತ್ತಿತ್ತು. ಜೊತೆಗೆ ಕ್ರೀಡೆಗಳ ಹಾಗೂ ಕಲೆಗಳ ಕುರಿತ ಶಿಕ್ಷಣವನ್ನು ನೀಡಲಾಗುತ್ತಿತ್ತು. ಶಾಲೆಗಳಲ್ಲಿ ಶಿಕ್ಷಣ ನೀಡುತ್ತಿದ್ದ ರೀತಿ ಮತ್ತು ಅಲ್ಲಿನ ಸೌಲಭ್ಯಗಳ ಬಗೆಗೆ ಆ ಕಾಲದ ಶಾಸನಗಳಲ್ಲಿ ಉಲ್ಲೇಖವಿದೆ. ಶಾಲೆಗಳ ಒಳಗೆ ಶಿಸ್ತಿನ ವಿಷಯದಲ್ಲಿಯೂ ನಿರ್ದಿಷ್ಟ ಸೂಚನೆಗಳಿವೆ. ಶಾಲೆಗಳಲ್ಲಿ ಅಸಭ್ಯೊವರ್ತನೆಗೆ ಅವಕಾಶವಿರಲಿಲ್ಲ. ಜಗಳ, ದೊ೦ಬಿಗಳನ್ನು ನಡೆಸಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು. ವಿದ್ಯಾರ್ಥಿಗಳು ಶಸ್ತ್ರಾಸ್ತ್ರಗಳನ್ನು ಹೊಂದಿರುವಂತಿಲ್ಲ. ಜೂಜಾಟ ಆಡಬಾರದು. ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ ಊಟವನ್ನು ಕೊಡುವಂತಿರಲಿಲ್ಲ. ಮಹಿಳೆಯರಿಗೆ ಶಾಲೆಗಳಲ್ಲಿ ಪ್ರವೇಶವಿದ್ದಿರಲಿಲ್ಲ. ಇಂತಹ ಕಠಿಣ ನಿಯಮಗಳ ಮೂಲಕ ಆದರ್ಶ ವಿದ್ಯಾರ್ಥಿಗಳನ್ನು ಶಾಲೆಗಳು ರೂಪಿಸುತ್ತಿದ್ದವು. ಕಾಂತಳೂರು ಶಾಲೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಕಾರಣಕ್ಕಾಗಿ ಇದನ್ನು ‘ದಕ್ಷಿಣ ಭಾರತದ ನಲಂದ’ ಎಂದೇ ಕರೆಯಲಾಗುತ್ತಿತ್ತು.

ಶಾಲೆಗಳಲ್ಲಿ ನೀಡುವ ಶಿಕ್ಷಣವಲ್ಲದೆ ಸಾಮಾಜಿಕವಾಗಿ ತಿಳುವಳಿಕೆಯನ್ನು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ದೇವಾಲಯಗಳಲ್ಲಿ ಪುರಾಣ ಪ್ರವಚನ ಪ್ರಮುಖವಾದ ಕಾರ್ಯಕ್ರಮವಾಗಿತ್ತು. ಅವುಗಳಲ್ಲಿ ಮಹಾಭಾರತ ಪಟ್ಟತ್ತಾನಂ ಪ್ರಸಿದ್ಧವಾಗಿದೆ. ಬ್ರಾಹ್ಮಣ ಪಂಡಿತರು ಮಹಾಭಾರತ ಪ್ರವಚನ ಮಾಡುವ ಕಾರ್ಯ ಕ್ರಮವಿದು. ಬಹುತೇಕ ದೇವಾಲಯಗಳಲ್ಲಿ ಗ್ರಂಥದ ಕೋಣೆಗಳು ಇರುತ್ತಿದ್ದವು. ವೇದಾಭ್ಯಾಸವನ್ನು ಉತ್ತೇಜಿಸುವ ಸಲುವಾಗಿ ದೇವಾಲಯಗಳಲ್ಲಿ ಆಗಾಗ ವೇದ ಪಾರಾಯಣ ಸ್ಫರ್ಧೆಯನ್ನು ಏರ್ಪಡಿಸಲಾಗುತ್ತಿತ್ತು. ಹೀಗೆ ಕುಲಶೇಖರ ಸಾಮ್ರಾಜ್ಯದ ಅವಧಿಯಲ್ಲಿ ಶಿಕ್ಷಣವು ಔಪಚಾರಿಕವಾಗಿಯೂ ಅನೌಪಚಾರಿಕವಾಗಿಯೂ ಹೆಚ್ಚಿನ ಪ್ರಾಶಸ್ತ್ಯ ಪಡೆಯಿತು.

ಸ್ಥಳೀಯ ಅರಸರು ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹ

ಕುಲಶೇಖರ ಸಾಮ್ರಾಜ್ಯ ಪತನಾನಂತರ ಕೇರಳವು ಸಣ್ಣ ಪುಟ್ಟ ನಾಡುಗಳಾಗಿ ವಿಭಜನೆ ಗೊಂಡು ಸ್ಥಳೀಯ ರಾಜರುಗಳ ಆಡಳಿತಕ್ಕೊಳಪಟ್ಟಿತು. ಈ ನಾಡದೊರೆಗಳು ವಿದ್ಯಾಭ್ಯಾಸಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೊಡುವಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದರು. ದಕ್ಷಿಣ ವೇನ್ನಾಡಿನ ರಾಜರುಗಳ ಕಾಲದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಪ್ರಬಲವಾದವು. ರವಿವರ್ಮ ಕುಲಶೇಖರ (೧೨೯೯-೧೩೧೪) ಎಂಬ ರಾಜನ ಕಾಲದಲ್ಲಿ ವೇನ್ನಾಡಿನ ರಾಜಧಾನಿಯಾಗಿದ್ದ ಕೊಲ್ಲಂ ಪ್ರಸಿದ್ಧವಾದ ವಿದ್ಯಾಕೇಂದ್ರವಾಗಿತ್ತು. ೧೪ನೆಯ ಶತಮಾನದ ವೇಳೆಗೆ ಕೊಲ್ಲಂ ಒಂದು ಸಾಂಸ್ಕೃತಿಕ ಕೇಂದ್ರವಾಗಿ ವಿಕಾಸಗೊಂಡಿತ್ತು. ಈ ಬಗೆಗೆ ಉಣ್ಣಿನೀಲಿ ಸಂದೇಶ ಮೊದಲಾದ ಕಾವ್ಯ ಕೃತಿಗಳಲ್ಲಿ ಉಲ್ಲೇಖವಿದೆ. ತೆಕ್ಕಾಂಕೂರು ಹಾಗೂ ಬಡಕಾಂಕೂರು ರಾಜರುಗಳೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ತೆಕ್ಕಾಂಕೂರಿಗೆ ಸೇರಿದ್ದ ಕೊಟ್ಟಯಂ ಬಡಕಾಂಕೂರಿಗೆ ಸೇರಿದ್ದ ಕಡುತ್ತುರುತ್ತಿ ವಿದ್ವಾಂಸರ ಹಾಗೂ ಕವಿಗಳ ನೆಲೆವೀಡಾಗಿತ್ತು.

ಸಾಮೂದಿರಿಗಳ ಆಡಳಿತ ಕಾಲದಲ್ಲಿ ಕೋಳಿಕ್ಕೋಡ್ ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಶೈಕ್ಷಣಿಕ ಕೇಂದ್ರವಾಗಿ ಬೆಳೆಯಿತು. ಕೋಳಿಕ್ಕೋಡಿನ ತಳಿ ದೇವಸ್ಥಾನದಲ್ಲಿ ತುಲಾಮಾಸದಲ್ಲಿ ರೇವತಿ ನಕ್ಷತ್ರದಂದು ನಡೆಯುತ್ತಿದ್ದ ‘ರೇವತಿ ಪಟ್ಟತ್ತಾನಂ’ ಪಂಡಿತರ ವಾರ್ಷಿಕ ಸಮ್ಮೇಳನವಾಗಿತ್ತು. ಪಟ್ಟತ್ತಾನಂನಲ್ಲಿ ಭಾಗವಹಿಸುತ್ತಿದ್ದ ವಿದ್ವಾಂಸರಿಗೆ ಸಾಮೂದಿರಿಯು ‘ಭಟ್ಟ’ ಎಂಬ ಬಿರುದನ್ನು ಜೊತೆಗೆ ಹಣವನ್ನು ಸಂಭಾವನೆಯಾಗಿ ನೀಡುತ್ತಿದ್ದ. ಕೇರಳದ ಎಲ್ಲಾ ಸಭಾಮಠಗಳಿಂದಲೂ ವಿದ್ವಾಂಸರು ಈ ಪಟ್ಟತ್ತಾನಂನಲ್ಲಿ ಭಾಗವಹಿಸುತ್ತಿದ್ದರು. ಮೀಮಾಂಸೆ, ವೇದಾಂತ, ವ್ಯಾಕರಣ ಮೊದಲಾದ ಶಾಸ್ತ್ರ ವಿಷಯಗಳನ್ನು ಕುರಿತಂತೆ ಸಮ್ಮೇಳನದಲ್ಲಿ ಚರ್ಚಿಸಲಾಗುತ್ತಿತ್ತು. ಚರ್ಚೆಯಲ್ಲಿ ಭಾಗವಹಿಸಿ ಭಟ್ಟಸ್ಥಾನವನ್ನು ಪಡೆಯುವುದು ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ದೊಡ್ಡ ದೊಡ್ಡ ವಿದ್ವಾಂಸರೆನಿಸಿ ಕೊಂಡವರು ಚರ್ಚೆಗಳಲ್ಲಿ ಪರಾಜಿತರಾದುದೂ ಇದೆ. ನಾರಾಯಣೀಯದ ಕರ್ತೃವಾದ ಮೇಲ್‌ಪತ್ತೂರು ನಾರಾಯಣ ಭಟ್ಟತ್ತಿರಿ ಆರು ಬಾರಿ ಸೋತ ಬಳಿಕವೇ ಭಟ್ಟಸ್ಥಾನವನ್ನು ಪಡೆಯುವುದು ಸಾಧ್ಯವಾಯಿತು.

ಹದಿನಾಲ್ಕು ಹದಿನೈದನೆಯ ಶತಮಾನದಲ್ಲಿ ಕೋಲತ್ತಿರಿ ರಾಜರುಗಳ ಆಡಳಿತ ಕಾಲದಲ್ಲಿ ಉತ್ತರ ಕೇರಳದ ತಳಿಪ್ಪರಂಬ್ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಿತು. ತಳಿಪ್ಪರಂಬ್ ದೇವಸ್ಥಾನದಲ್ಲಿ ನಡೆಯುತ್ತಿದ್ದ ಕೂತ್ತ್, ಕೂಡಿಯಾಟ್ಟಂ, ಮೇಳ, ಸಂಗೀತ ವೊದಲಾದವುಗಳ ಸ್ಪರ್ಧೆ ಪ್ರಖ್ಯಾತವಾಗಿದೆ. ಪರಿಣಿತರಾದ ಕಲಾವಿದರು ಸ್ಪರ್ಧೆಗಳಲ್ಲಿ ಭಾಗವಹಿಸಲು ಕೇರಳದೆಲ್ಲೆಡೆಯಿಂದ ಬರುತ್ತಿದ್ದರು. ಘನ ವಿದ್ವಾಂಸರು ಸ್ಪರ್ಧೆಯ ನಿರ್ಣಾಯಕರಾಗಿ ರುತ್ತಿದ್ದರು. ಈ ಸ್ಪರ್ಧೆಗಳಲ್ಲಿ ವಿಜೇತರಾದ ಕಲಾವಿದರಿಗೆ ಎಲ್ಲೆಡೆ ಗೌರವ ಸಲ್ಲುತ್ತಿತ್ತು.

ಹದಿನಾರು ಹದಿನೇಳನೆಯ ಶತಮಾನದಲ್ಲಿ ಚೆಂಬಕಶ್ಶೇರಿ ರಾಜರುಗಳ ಕಾಲದಲ್ಲಿ ಅಂಬಲಪುಱ ಪ್ರಸಿದ್ಧ ವಿದ್ಯಾಭ್ಯಾಸ ಕೇಂದ್ರವಾಗಿ ರೂಪು ಪಡೆಯಿತು. ಚೆಂಬಕಶ್ಶೇರಿ ರಾಜರುಗಳಲ್ಲಿ ಪ್ರಸಿದ್ಧನಾದ ಪೂರಾಡಂತಿರುನಾಳ್ ದೇವನಾರಾಯಣನ್ ಶ್ರೇಷ್ಠನಾದ ಒಬ್ಬ ವಿದ್ವಾಂಸನಾಗಿದ್ದ. ಆತ ಮೇಲ್ಪತ್ತೂರು ನಾರಾಯಣನ್ ಭಟ್ಟತ್ತಿರಿ (೧೫೬೦-೧೬೪೬)ಯನ್ನು ಗೌರವಿಸಿದ್ದ. ದೇವನಾರಾಯಣನ ಸೂಚನೆಯ ಮೇರೆಗೆ ಮೇಲ್ಪತ್ತೂರು ‘ಪ್ರಕ್ರಿಯಾ ಸರ್ವಸ್ವಂ’ ಎಂಬ ಸಂಸ್ಕೃತ ವ್ಯಾಕರಣ ಗ್ರಂಥವನ್ನು ರಚಿಸಿದ. ತಮಿಳುನಾಡಿನಿಂದ ಬಂದ ನೀಲಕಂಠ ದೀಕ್ಷಿತರೂ ದೇವನಾರಾಯಣನ ಕೃಪೆಗೊಳಗಾಗಿದ್ದ. ಶಿಲ್ಪಶಾಸ್ತ್ರಗಳ ಅಧಿಕೃತ ಗ್ರಂಥವೆಂದು ಪರಿಗಣಿಸಲಾದ ‘ಶಿಲ್ಪರತ್ನಂ’ ರಚಿಸಿದ ಶ್ರೀಕುಮಾರನ್ ನಂಬೂದಿರಿಯೂ ಸಹ ದೇವನಾರಾಯಣನ ಆಶ್ರಯದಲ್ಲಿದ್ದ. ಕೋಳಿಕೋಡ್, ಕೊಚ್ಚಿ, ತೆಕ್ಕಂಕೂರು, ಬಡಕಂಕೂರು ಮೊದಲಾದ ರಾಜರುಗಳು ಈ ಕಾಲಘಟ್ಟದಲ್ಲಿಯೂ ಕವಿಗಳ, ಕಲಾವಿದರ, ಸಾಹಿತಿಗಳ ರಕ್ಷಕರಾಗಿ ಮುಂದುವರಿದಿದ್ದರು. ಈ ರಾಜರುಗಳ ಸೂಚನೆಯ ಮೇರೆಗೆ ಮೇಲ್ಪತ್ತೂರು ನಾರಾಯಣನ್ ಭಟ್ಟತಿರಿಯು ಮಾನಮೆಯೋದಯ, ಮಾಡಮಹೀಶ ಪ್ರಶಸ್ತಿ, ಧಾತುಕಾವ್ಯಂ ಮೊದಲಾದ ಗ್ರಂಥಗಳನ್ನು ರಚಿಸಿದ.

ಹದಿನೆಂಟನೆಯ ಶತಮಾನದಲ್ಲಿ ವಿದ್ವಾಂಸರ ಪ್ರೋತ್ಸಾಹಕಕ್ಕೆ ಹೊಸದೊಂದು ಆಯಾಮ ದೊರೆಯಿತು. ಈ ಕಾಲಘಟ್ಟದಲ್ಲಿ ತಿರುವಿದಾಂಕೂರು ವಿದ್ವಾಂಸರ ಆಶ್ರಯ ತಾಣವಾಗಿತ್ತು. ಮಾರ್ತಾಂಡವರ್ಮ ಮಹಾರಾಜ (೧೭೨೯-೧೭೫೮)ನ ರಾಜ್ಯ ವಿಸ್ತರಣೆಯು ರಾಜಕೀಯವಾದ ವಿಸ್ತರಣೆಗಿಂತಲೂ ಸಾಂಸ್ಕೃತಿಕ ರಾಜ್ಯದ ವಿಸ್ತರಣೆಯಾಗಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಿತು. ಸಂಸ್ಕೃತ ಸಾಹಿತ್ಯ ರಚನೆಗಿಂತಲೂ ಮಲಯಾಳಂ ಸಾಹಿತ್ಯ ರಚನೆಗೆ ಪ್ರೋತ್ಸಾಹ ದೊರೆತುದು ಅಲ್ಲದೆ ಸಾಮಾಜಿಕವಾದ ಆಶಯಗಳನ್ನು ಒಳಗೊಂಡು ಸಾಹಿತ್ಯ ರಚನೆಯಾದುದು ಈ ಕಾಲಘಟ್ಟದ ವೈಶಿಷ್ಟ್ಯ. ರಾಮಪುರತ್ತ್ ವಾರ್ಯರು, ಕುಂಜನ್‌ನಂಬ್ಯಾರರು ಮಾರ್ತಾಂಡ ವರ್ಮನ ಆಸ್ಥಾನ ವಿದ್ವಾಂಸರಾಗಿದ್ದರು. ಮಾರ್ತಾಂಡವರ್ಮನ ನಂತರ ಬಂದ ಧರ್ಮರಾಜ (೧೭೫೮-೧೭೬೮)ನೂ ಸಹ ವಿದ್ಯೆಗೆ ಪ್ರೋತ್ಸಾಹನೀಡುವಲ್ಲಿ ಹಿಂದಿನವರನ್ನೇ ಅನುಸರಿಸಿದ. ನಳಚರಿತದ ಕರ್ತೃವಾದ ಉಣ್ಣಾಯಿ ವಾರ್ಯರು ಧರ್ಮರಾಜನ ಆಸ್ಥಾನಿಕರಲ್ಲಿ ಒಬ್ಬನಾಗಿದ್ದ. ಕಾವ್ಯ, ಸಂಗೀತ, ಕಥಕಳಿ ಧರ್ಮರಾಜನ ಆಶ್ರಯದಲ್ಲಿ ಹೆಚ್ಚು ಪ್ರಜ್ವಲ್ಯಮಾನವಾಗಿ ಶೋಭಿಸಿತು. ಆಗಾಗ ಆತ ನಡೆಸುತ್ತಿದ್ದ ವಿದ್ವಜ್ಜನರ ಸಮ್ಮೇಳನವೂ ನಾಡಿನೆಲ್ಲೆಡೆಯ ವಿದ್ವಾಂಸರಿಗೆ ತಮ್ಮ ಪ್ರತಿಭೆಯನ್ನು ಪ್ರಕಟಿಸಲು ಸಂದರ್ಭವನ್ನೊದಗಿಸಿತು.

ರಾಜ ಮಹಾರಾಜರುಗಳು ವಿದ್ವಜ್ಜನರಿಗೆ ನೀಡುತ್ತಿದ್ದ ಪ್ರೋತ್ಸಾಹ ಜೊತೆಗೆ ಜನಸಾಮಾನ್ಯರಿಗೂ ವಿದ್ಯಾಭ್ಯಾಸದ ಅವಕಾಶವನ್ನೂ ಕಲ್ಪಿಸಿದ ಬಗೆಗೆ ಉದಾಹರಣೆಗಳಿವೆ. ಕೇರಳವನ್ನು ಆಳಿದ ರಾಜರುಗಳು ಎಲ್ಲಾ ಕಾಲಘಟ್ಟದಲ್ಲಿಯೂ ವಿದ್ಯೆಗೆ ಪ್ರೋತ್ಸಾಹ ನೀಡಿದ್ದರು. ಕಲೆ, ಸಂಗೀತಗಳಿಗೂ ಪ್ರಾಧಾನ್ಯ ನೀಡಿದ್ದರು. ಈ ಕಾರಣದಿಂದಾಗಿ ಕೇರಳವು ಸಾಂಸ್ಕೃತಿಕ ಕಲಾ ಕೇರಳವಾಗಿ ರೂಪು ಪಡೆಯಲು ಸಾಧ್ಯವಾಯಿತು.

ಸಭಾ ಮಠಗಳು

ದಕ್ಷಿಣ ಕೇರಳದಲ್ಲಿನ ದೇವಾಲಯದ ಶಾಲೆಗಳು ವಿದ್ಯಾಭ್ಯಾಸ ಕೆಂದ್ರಗಳಾಗಿ ಬೆಳೆದರೆ ಉತ್ತರ ಕೇರಳ ಹಾಗೂ ಮಧ್ಯ ಕೇರಳದಲ್ಲಿ ಸಭಾಮಠಗಳು ವಿದ್ಯಾಭ್ಯಾಸದ ಚಟುವಟಿಕೆಗಳಿಗೆ ಆಶ್ರಯ ತಾಣಗಳಾಗಿದ್ದವು. ಅನೇಕ ಸಭಾಮಠಗಳು ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಊಟ, ವಸತಿಗಳನ್ನು ಉಚಿತವಾಗಿ ನೀಡಿ ವೇದಾಧ್ಯಯನಗಳಿಗೆ ಪ್ರೋತ್ಸಾಹ ನೀಡುತ್ತಿದ್ದುವು. ಇವುಗಳನ್ನು ನಡೆಸಿಕೊಂಡು ಹೋಗಲು ದಾನಗಳ ರೂಪದಲ್ಲಿ ಹಣ, ಭೂಮಿಗಳನ್ನು ರಾಜರುಗಳು, ಶ್ರೀಮಂತರು ನೀಡುತ್ತಿದ್ದರು.

ಸಭಾಮಠಗಳಲ್ಲಿ ಅತ್ಯಂತ ಪ್ರಸಿದ್ಧವಾದವುಗಳೆಂದರೆ ತೃಶ್ಶೂರಿನಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳು – ವಡಕ್ಕೇ ಮಠ, ನಡುವಿಲ್ ಮಠ, ಇಡಯಿಲ್ ಮಠ, ತೆಕ್ಕೆ ಮಠ. ಆದಿಶಂಕರರ ಪಟ್ಟಶಿಷ್ಯರಾದ ತೋಟಕನ್, ಸುರೇಶ್ವರನ್, ಹಸ್ತಮಲಕನ್, ಪದ್ಮಪಾದನ್ ಎಂಬಿವರೇ ಅನುಕ್ರಮವಾಗಿ ಈ ಮಠಗಳ ಮೊದಲ ಮೇಲ್ವಿಚಾರಕರಾಗಿದ್ದರು. ಶಂಕರರ ಕಾಲದಲ್ಲಿಯೇ ಈ ಮಠಗಳ ಚಟುವಟಿಕೆಗಳಿಗೆ ಬೇಕಾದ ಭೂಮಿ, ಹಣಗಳನ್ನು ಶಿಷ್ಯ ಪರಂಪರೆಯೇ ದಾನ ರೂಪದಲ್ಲಿ ಒದಗಿಸಿತ್ತು. ವೇದಾಧ್ಯಯನಗಳಿಗೆ ಈ ಮಠಗಳು ನೀಡಿದ ಪ್ರೋತ್ಸಾಹ ಅಮೂಲ್ಯವಾದುದು. ತೃಶ್ಶೂರಿನ ಈ ಮಠಗಳಲ್ಲದೆ ಚೊವ್ವನೂರು, ತಿರುನಾವಾಯ್, ಕಡವಲ್ಲೂರು ಮೊದಲಾದ ಸಭಾ ಮಠಗಳು ಪ್ರಸಿದ್ಧವಾಗಿದ್ದವು. ಈ ಮಠಗಳು ವೇದಾಧ್ಯಯನ, ವೇದ ಪಠನ ಇತ್ಯಾದಿಗಳ ಬಗೆಗೆ ಸ್ಪರ್ಧೆಗಳನ್ನು ಏರ್ಪಡಿಸಿ ನಿರ್ದಿಷ್ಟ ಸ್ಥಾನಮಾನಗಳನ್ನು ನೀಡಿ ಪ್ರೋತ್ಸಾಹ ಪ್ರಾಚೀನ ಕೇರಳದಲ್ಲಿ ಸಂಸ್ಕೃತ ವಿದ್ಯಾಭ್ಯಾಸ ಈ ಮಠಗಳ ಮೂಲಕ ವ್ಯಾಪಕವಾಗಿ ನಡೆಯಿತು. ಜನರ ಅಪೇಕ್ಷೆ ಮೇರೆಗೆ ಉತ್ತರ ಕೇರಳದಲ್ಲೂ ತೃಕ್ಕೈಕಾಡು ಮಠ, ನಡುವಿಲ ಮಠ, ತೆಕ್ಕೇಮಠ, ಪಡಿಞಾರ್ ಮಠ (ಇಳನೀರು ಮಠ) ಎಂಬೀ ನಾಲ್ಕು ಶಾಖಾ ಮಠಗಳನ್ನು ಸ್ಥಾಪಿಸಿದರು. ಈ ಮಠಗಳಲ್ಲಿ ತೆಕ್ಕೇಮಠವು ಜೀರ್ಣವಾಗಿದೆ. ತೃಕ್ಕೈಕಾಡು ಮಠದ ಸ್ವಾಮಿಗಳು ತೃಕ್ಕೈಕಾಡು ಎಂಬಲ್ಲಿ, ನಡುವಿಲ ಮಠದ ಸ್ವಾಮಿಗಳು ತ್ರಿಚೂರಿನಲ್ಲಿ, ಇಳನೀರು ಮಠದ ಸ್ವಾಮಿಗಳು ಕಾಸರಗೋಡಿನ ‘ಎಡನೀರು’ ಎಂಬ ಊರಿನಲ್ಲಿ ಸ್ವಾಸಮಾಧಿಷ್ಠಿತರಾಗಿದ್ದಾರೆ. ಕಾಸರಗೋಡಿನ ಎಡನೀರಿನಲ್ಲಿರುವ ಮಠವು ತೃಶ್ಶೂರಿನ ಮಠಗಳ ಶಾಖೆಯೆ ಆಗಿದೆ. ಇದು ತೋಟಕಾಚಾರ್ಯ ಪರಂಪರೆಯೆಂದೇ ಪ್ರಸಿದ್ಧ. ಪ್ರಸ್ತುತ ಈ ಮಠವು ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆ, ಶಿಕ್ಷಣಗಳಿಗೆ ಪ್ರೋತ್ಸಾಹ ನೀಡುತ್ತಾ ಕಾರ್ಯಪ್ರವೃತ್ತವಾಗಿದೆ.

ಗ್ರಾಮೀಣ ವಿದ್ಯಾಕೇಂದ್ರಗಳು

ಸಭಾ ಮಠಗಳು ನಂಬೂದಿರಿ ಬ್ರಾಹ್ಮಣರ ವಿದ್ಯಾಭ್ಯಾಸಕ್ಕೆ ಮಾತ್ರ ಸೀಮಿತವಾಗಿದ್ದವು. ಇತರ ಸಮುದಾಯದ ಜನರಿಗೆ ಅಕ್ಷರ ಕಲಿಸಲು ಗ್ರಾಮ ಪ್ರದೇಶಗಳಲ್ಲಿ ‘ಎೞುತ್ತ್‌ಪಳಿ’ಗಳೆಂಬ ಶಿಕ್ಷಣ ಕೇಂದ್ರಗಳಿದ್ದವು. ಈ ತೆರನ ಎೞುತ್ತ್‌ಪಳ್ಳಿಗಳು ಬೌದ್ಧಮತದ ಪ್ರಚೋದನೆಯಿಂದ ರೂಪು ಪಡೆದವುಗಳು ಎಂಬುದು ವಿದ್ವಾಂಸರ ಅಭಿಪ್ರಾಯ. ಒಂದೊಂದು ಊರಿನಲ್ಲಿ ಒಂದೊಂದು ಎೞುತ್ತ್‌ಪಳ್ಳಿಗಳಿದ್ದವು. ಎೞುತ್ತ್‌ಪಳ್ಳಿಗಳಲ್ಲಿ ಪಾಠ ಹೇಳಿ ಕೊಡುವವನನ್ನು ಎೞುತ್ತಚ್ಚನ್ ಎಂದೋ, ಆಶಾನ್ ಎಂದೋ ಕರೆಯಲಾಗುತ್ತಿತ್ತು. ಜನರು ಅಧಿಕವಿದ್ದೆಡೆಗಳಲ್ಲಿ ಒಂದಕ್ಕಿಂತ ಹೆಚ್ಚಿನ ಎೞುತ್ತುಪಳ್ಳಿಗಳು ಇರುತ್ತಿದ್ದವು. ಮೂರರಿಂದ ಏಳು ವರ್ಷದ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದ ಎೞುತ್ತಚ್ಚನ್ ಬಳಿಕ ಬಾಲ ಪಾಠಗಳನ್ನು ಹೇಳಿಕೊಡುತ್ತಿದ್ದರು.

ಸಾಮಾನ್ಯವಾಗಿ ವಿಜಯದಶಮಿಯ ದಿವಸ ಅಕ್ಷರಾಭ್ಯಾಸ ಆರಂಭ ಮಾಡಲಾಗುತ್ತಿತ್ತು. ಪದ್ಮಾಸನ ಹಾಕಿ ಕುಳಿತ ಆಶಾನ್ ಸರಸ್ವತಿ ಪೂಜೆ ಮಾಡಿದ ಬಳಿಕ ಮಗುವಿನ ನಾಲಗೆಯಲ್ಲಿ ‘ಹರಿಶ್ರೀ ಗಣಪತಯೇ ನಮಃ’ ಎಂದು ಚಿನ್ನದಿಂದ ಬರೆಯುವನು. ಬಳಿಕ ನೆಲದಲ್ಲಿ ಹಾಕಿದ ಅಕ್ಕಿಯಲ್ಲಿ ಮಗುವಿನ ಕೈಹಿಡಿದು ಆಶಾನ್ ಅಕ್ಷರ ಬರೆಸುವನು. ಅಕ್ಷರಾಭ್ಯಾಸ ಆರಂಭದ ಕಾರ್ಯಕ್ರಮ ಮನೆಗಳಲ್ಲಿ ಕೆಲವೊಮ್ಮೆ ಎೞುತ್ತಪಳ್ಳಿಗಳಲ್ಲಿ ನಡೆಯುತ್ತಿತ್ತು. ಗ್ರಾಮದ ಶ್ರೀಮಂತರ ಮನೆಯಲ್ಲಿಯೂ ಎಳುತ್ತುಪಳ್ಳಿಗಳು ಕಾರ್ಯ ನಿರ್ವಹಿಸುತ್ತಿದ್ದುದೂ ಇತ್ತು. ಓದು, ಬರಹ, ಕಾವ್ಯವಾಚನ, ಗಣಿತ, ಜ್ಯೋತಿಶ್ಶಾಸ್ತ್ರ ಇತ್ಯಾದಿ ವಿಷಯಗಳನ್ನು ಕಲಿಸುತ್ತಿದ್ದರು. ವಿದ್ಯಾರ್ಥಿಗಳು ಪಾಠಗಳನ್ನು ತಾಳೆ ಎಲೆಯ ಮೇಲೆ ಕಂಟದಿಂದ ಬರೆಯು ತ್ತಿದ್ದರು. ಬಳಿಕ ಆ ತಾಳೆ ಗರಿಗಳನ್ನೆಲ್ಲ ಜೋಡಿಸಿ ಹಗ್ಗದಿಂದ ಕಟ್ಟಿ ಸಂರಕ್ಷಿಸುತ್ತಿದ್ದರು. ಎೞುತ್ತ್‌ಪಳ್ಳಿಯ ಆಶಾನರು ಶಿಸ್ತಿನ ವಿಷಯದಲ್ಲಿ ಯಾವುದೇ ಸಡಿಲಿಕೆ ತೋರಿಸುತ್ತಿರಲಿಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ವಿಷಯದಲ್ಲಿ ಆಶಾನರು ಸ್ವತಂತ್ರರಾಗಿದ್ದರು. ಆಶಾನರಿಗೆ ಸಂಬಳವು ದವಸ ಧಾನ್ಯಗಳ ರೂಪದಲ್ಲಿ ಸಲ್ಲುತ್ತಿತ್ತು.

ಹದಿನೆಂಟನೆಯ ಶತಮಾನದಲ್ಲಿ ತುಂಜತ್ತ್ ಎೞುತ್ತಚ್ಚನ್ ಕೇರಳದ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಿದ. ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮಾತ್ರ ಸಂಸ್ಕೃತ ಶಿಕ್ಷಣ ನೀಡುತ್ತಿದ್ದ ಸಂಪ್ರದಾಯದ ವಿರುದ್ಧ ಆತ ಧ್ವನಿಯೆತ್ತಿದ. ಶಿಕ್ಷಣವು ಎಲ್ಲಾ ವರ್ಗದವರಿಗೂ ಸಮಾನವಾಗಿ ದೊರೆಯಬೇಕೆಂಬುದು ಆತನ ಆಪೇಕ್ಷೆಯಾಗಿತ್ತು. ಜನಸಾಮಾನ್ಯರಿಗೂ ಶಿಕ್ಷಣ ನೀಡವುದೇ ಆತನ ಪ್ರಮುಖ ಗುರಿಯಾಗಿತ್ತು. ಅದಕ್ಕೆ ಜಾತಿಯೋ, ಹಣವೋ ಅಡ್ಡಿಯಾಗಬಾರದು ಎಂಬುದು ಆತನ ಅಭಿಪ್ರಾಯವಾಗಿತ್ತು. ಸಾಂಪ್ರದಾಯಿಕ ಶಿಕ್ಷಣದ ವಿರುದ್ಧ ಆತನು ಸಂಪೂರ್ಣವಾಗಿ ಯಶಸ್ವಿಯಾದನೆಂದು ಹೇಳುವಂತಿಲ್ಲ. ಸಾಂಪ್ರದಾಯಿಕ ಎೞುತ್ತ್‌ಪಳ್ಳಿಗಳು ಬ್ರಿಟಿಷರ ಆಗಮನದ ವರೆಗೂ ವ್ಯವಸ್ಥಿತವಾಗಿ ನಡೆದುವು.

ಕಳರಿಗಳು

ಪ್ರಾಚೀನ ಕೇರಳದಲ್ಲಿ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕಲೆಗಳ ಅಭ್ಯಾಸಕ್ಕೂ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಕಳರಿಗಳೆಂದರೆ ಕೇರಳದಲ್ಲಿನ ಸಾಂಪ್ರದಾಯಿಕ ಶಸ್ತ್ರಾಭ್ಯಾಸ ಕೇಂದ್ರಗಳು. ಪ್ರತಿಯೊಂದು ಗ್ರಾಮದಲ್ಲಿಯೂ ಒಂದೊಂದು ಕಳರಿಯಿರುತ್ತಿತ್ತು. ಕಳರಿಗಳಲ್ಲಿ ವಿದ್ಯೆಯನ್ನು ಹೇಳಿಕೊಡುವ ಗುರುವನ್ನು ಪಣಿಕ್ಕರರೆಂದೋ, ಕುರುಪ್ಪ್ ಎಂದೋ ಕರೆಯು ತ್ತಿದ್ದರು. ಎೞುತ್ತ್‌ಪಳ್ಳಿಗಳಲ್ಲಿ ಶಿಕ್ಷಣ ಪಡೆದ ಬಳಿಕ ವಿದ್ಯಾರ್ಥಿಗಳು ಕಳರಿಗಳಲ್ಲಿ ಕಲಿಯು ತ್ತಿದ್ದರು. ಕಳರಿಗಳಲ್ಲಿ ಆಯುಧ ಬಳಕೆ, ಕತ್ತಿ ಹೋರಾಟ, ಕುಸ್ತಿ ಮೊದಲಾದವುಗಳನ್ನು ಹೇಳಿಕೊಡುತ್ತಿದ್ದರು. ಕೇರಳದ ಸಾಂಸ್ಕೃತಿಕ ಇತಿಹಾಸದಲ್ಲಿ ಕಳರಿಗಳಿಗೆ ವಿಶಿಷ್ಟ ಸ್ಥಾನವಿದೆ. ಊರಿಗೆ ಅನ್ಯರ ಅಥವಾ ದುಷ್ಟಶಕ್ತಿಗಳ ಆಕ್ರಮಣಗಳನ್ನು ತಡೆಗಟ್ಟುವಲ್ಲಿ ಕಳರಿಗಳಲ್ಲಿ ಪಳಗಿದ ಯುವಕರು ಹೋರಾಡಿದ ದುಷ್ಟಾಂತಗಳಿವೆ. ಅನ್ಯಾಕ್ರಮಣದ ವಿರುದ್ಧ ಕಳರಿಗಳು ಮಾನವಶಕ್ತಿಯನ್ನು ವ್ಯವಸ್ಥಿತವಾಗಿ ರೂಪುಗೊಳಿಸುತ್ತಿದ್ದವು. ಬ್ರಿಟಿಷರ ಆಗಮನದ ತರುವಾಯ ಎೞುತ್ತುಪಳ್ಳಿಗಳೊಡನೆ ಕಳರಿಗಳೂ ನಾಮಾವಶೇಷವಾದವು.

ಪೋರ್ಚುಗೀಸರು ಮತ್ತು ಡಚ್ಚರ ಕೊಡುಗೆ

ಪೋರ್ಚುಗೀಸರು ಕೊಚ್ಚಿ, ಕೊಡುಙಲ್ಲೂರು, ವೈಪ್ಪಿನ್‌ಕೋಟೆ ಮೊದಲಾದೆಡೆಗಳಲ್ಲಿ ಮತಪಂಡಿತರುಗಳಿಗೆ ತರಬೇತಿ ನೀಡಲು ‘ಸೆಮಿನಾರಿ’ಗಳನ್ನು ಸ್ಥಾಪಿಸಿದರು. ಈ ‘ಸೆಮಿನಾರಿ’ ಗಳಿಂದ ಸ್ಥಳೀಯ ಜನರ ನಡುವೆ ಲ್ಯಾಟಿನ್ ಹಾಗೂ ಪೋರ್ಚುಗೀಸ್ ಭಾಷೆಗೆ ಪ್ರಚಾರ ದೊರೆಯಿತು. ಕೆಲವು ಮಂದಿ ರಾಜರುಗಳು ಪೋರ್ಚುಗೀಸ್ ಭಾಷೆಯನ್ನು ಕಲಿತರು. ಪೋರ್ಚುಗೀಸರಿಗೂ ಸ್ಥಳೀಯರಾದ ಕ್ರಿಶ್ಚಿಯನರಿಗೂ ಶಿಕ್ಷಣ ನೀಡಲು ಜೆಸುಟ್ ಕಾಲೇಜೊಂದನ್ನು ಸ್ಥಾಪಿಸಲಾಗಿತ್ತು ಎಂದು ತಿಳಿದುಬರುತ್ತದೆ.

ಕೇರಳದಲ್ಲಿ ಮೊತ್ತ ಮೊದಲ ಬಾರಿಗೆ ಮುದ್ರಣಾಲಯಗಳನ್ನು ಸ್ಥಾಪಿಸಿದವರು ಪೋರ್ಚುಗೀಸರು. ಜೋವನ್ನಸ್ ಗೋಣ್‌ಸಾಲ್‌ವಸ್ ಎಂಬ ಸ್ಪಾನಿಷ್ ಜೆಸುಟ್ ಪಾದ್ರಿಯು ಮಲಯಾಳಂ ಅಕ್ಷರ ಮೊಳೆಗಳನ್ನು ತಯಾರಿಸಿದ. ಪೋರ್ಚುಗೀಸರು ಕೊಚ್ಚಿ ಮತ್ತು ವೈಪ್ಪಿನ್‌ಕೋಟೆಗಳಲ್ಲಿ ಮೊತ್ತ ಮೊದಲ ಮುದ್ರಣಾಲಯಗಳನ್ನು ಸ್ಥಾಪಿಸಿದರು. ಇವು ಭಾರತದಲ್ಲಿಯೇ ಮೊತ್ತ ಮೊದಲ ಮುದ್ರಣಾಲಯಗಳೆಂದು ತಿಳಿಯಲಾಗಿದೆ. ಕ್ರಿಸ್ತೀಯ ಮತತತ್ವಂ, ಕ್ರಿಸ್ತೀಯ ವಣಕ್ಕಂ ಎಂಬಿತ್ಯಾದಿ ಕೃತಿಗಳು ಮೊದಲ ಬಾರಿಗೆ ಮುದ್ರಣಗೊಂಡವು. ಕೇರಳದ ಕುರಿತು ಮೊದಲು ಸಂಶೋಧನೆಗಳನ್ನು ಮಾಡಲು ತೊಡಗಿದವರು ಪೋರ್ಚುಗೀಸರು. ಕೇರಳದ ಔಷಧಿ ಸಸ್ಯಗಳ ಬಗೆಗೆ ಅಧ್ಯಯನ ಮಾಡಿ ಗ್ರಂಥ ರಚಿಸಿದವರೂ ಅವರೇ. ಕೇರಳದ ಸಂಸ್ಕೃತಿಯ ಕುರಿತು ಬಿಡಿ ಲೇಖನಗಳನ್ನು ಪ್ರಕಟಿಸಿದ್ದಾರೆ. ವೇದಗಳನ್ನು ಕುರಿತ ವ್ಯಾಖ್ಯಾನಗಳನ್ನು ಮಲಯಾಳಂಗೆ ಭಾಷಾಂತರ ಮಾಡಿ ಮೊತ್ತ ಮೊದಲು ಪ್ರಕಟಿಸಿದವರೂ ಪೋರ್ಚುಗೀಸರೇ.

ಪೋರ್ಚುಗೀಸರ ತರುವಾಯ ಬಂದ ಡಚ್ಚರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಆಸಕ್ತರಾಗಿರಲಿಲ್ಲ. ಅವರು ಪೋರ್ಚುಗೀಸರು ಆರಂಭಿಸಿದ ಸಂಶೋಧನೆಗಳನ್ನು ಮುಂದು ವರಿಸಿದರು. ಭಾರತೀಯ ಸಂಸ್ಕೃತಿ ಬಗೆಗೆ ಅನೇಕ ತೆರನ ಸಂಶೋಧನೆಗಳಲ್ಲಿ ತೊಡಗಿಸಿ ಕೊಂಡರು. ಭಾರತದಲ್ಲಿ ಬೆಳೆಯುವ ಔಷಧಿ ಸಸ್ಯಗಳ ಸ್ವಭಾವ ಲಕ್ಷಣಗಳನ್ನು ವಿವರಿಸುವ ಗ್ರಂಥ ‘ಹೋರ್ಟಸ್ ಇಂಡಿಕಸ್ ಮಲಬಾರಿಕಸ್’ ಡಚ್ಚರ ಪ್ರಮುಖ ಕೊಡುಗೆಗಳಲ್ಲೊಂದು. ಹನ್ನೆರಡು ಅಧ್ಯಾಯಗಳಲ್ಲಿ ೭೯೪ ಚಿತ್ರಗಳಿರುವ ಈ ಗ್ರಂಥ ೧೬೭೮-೧೭೦೩ರ ನಡುವೆ ಆರ್ಮ್‌ಸ್ಟರ್‌ಡಾಮಿನಲ್ಲಿ ಪ್ರಕಟವಾಯಿತು. ಡಚ್ಚ್ ಆಡಳಿತಾಧಿಕಾರಿಯಾದ ವಾನ್‌ರೀಡ್‌ನ ನೇತೃತ್ವದಲ್ಲಿ ಈ ಗ್ರಂಥ ಸಿದ್ಧಗೊಂಡಿತ್ತು. ಈ ಗ್ರಂಥರಚನೆಯ ಸಂದರ್ಭದಲ್ಲಿ ಕೇರಳದ ಪಂಡಿತರಾದ ರಂಗಭಟ್ಟ, ಅಪ್ಪುಭಟ್ಟ, ವಿನಾಯಕಭಟ್ಟ ಎಂಬ ಕೊಂಕಣಿ ಬ್ರಾಹ್ಮಣರು ಹಾಗೂ ಇಟ್ಟಿ ಅಚ್ಚುತನ್ ಎಂಬ ಈಳವ ವೈದ್ಯರು ನೆರವು ನೀಡಿದ್ದರು. ಕೇರಳವನ್ನು ಆಧರಿಸಿದ ಸಂಶೋಧನೆಗಳಿಗೆ, ಅಧ್ಯಯನಗಳಿಗೆ ನಾಂದಿ ಹಾಡಿದವರು ಪೋರ್ಚುಗೀಸರು ಹಾಗೂ ಡಚ್ಚರು. ಆ ನಂತರ ಬ್ರಿಟಿಷರು ಆ ದಾರಿಯಲ್ಲಿ ಬಹುದೂರ ಸಾಗಿದರು.

ಕ್ರಿಶ್ಚಿಯನ್ ಮಿಷನರಿಗಳ ಕೊಡುಗೆ

೧೮ನೆಯ ಶತಮಾನದಲ್ಲಿ ಕೇರಳದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಚಟುವಟಿಕೆ ವ್ಯಾಪಕ ವಾಗಿತ್ತು. ವ್ಯಾಕರಣ, ನಿಘಂಟು, ಮೊದಲಾದ ಕ್ಷೇತ್ರಗಳಲ್ಲಿ ಅವರ ಸಾಧನೆ ಆರಂಭದಲ್ಲಿಯೇ ಗಮನಾರ್ಹವೆನಿಸಿತ್ತು. ೧೬೯೯ರಲ್ಲಿ ಕೆರಳಕ್ಕೆ ಬಂದ ಜರ್ಮನ್ ಮಿಷನರಿ ಅರ್‌ಣೋಸ್ ಪಾದ್ರಿ ಮಲಯಾಳಂ ವ್ಯಾಕರಣ ಗ್ರಂಥವನ್ನು ಹಾಗೂ ಮಲಯಾಳಂ ನಿಘಂಟನ್ನು ರಚಿಸಿದ. ಕೇರಳದಲ್ಲಿರುವ ಮಿಷನರಿಗಳ ಸಲುವಾಗಿ ಮಲಯಾಳಂ ನಿಘಂಟೊಂದನ್ನು ಪಾದರ್ ಕ್ಲೆಮಂಟ್ ಸಿದ್ಧಪಡಿಸಿದ. ೧೭೭೨ರಲ್ಲಿ ಅದು ರೋಮ್‌ನಲ್ಲಿ ಪ್ರಕಟವಾಯಿತು.

ವಿದ್ಯಾಭ್ಯಾಸದ ಪ್ರಚಾರಕ್ಕಾಗಿ ಇಂಗ್ಲಿಷ್ ಮಿಷನರಿಗಳು ಅಮೂಲ್ಯ ಕೊಡುಗೆಗಳನ್ನು ಸಲ್ಲಿದ್ದಾರೆ. ೧೭೯೯ರಲ್ಲಿ ರೋಬರ್ಟ್ ಡ್ರಮ್ಮಂಡ್ಸ್ ಮುಂಬಯಿಯಲ್ಲಿ ಮಲಯಾಳ ಭಾಷಾ ವ್ಯಾಕರಣ ಗ್ರಂಥವನ್ನು ಪ್ರಕಟಿಸಿದ. ೧೮೪೬ರಲ್ಲಿ ಒಂದು ಇಂಗ್ಲಿಷ್-ಮಲಯಾಳಂ ನಿಘಂಟು ಪ್ರಕಟವಾಯಿತು. ಅಲ್ಲದೆ ಇಂಗ್ಲಿಷರಿಗಾಗಿ ಒಂದು ಮಲಯಾಳಂ ವ್ಯಾಕರಣ ಗ್ರಂಥವೂ ಇದೇ ಕಾಲದಲ್ಲಿ ಪ್ರಕಟವಾಯಿತು.

ಮಿಷನರಿಗಳ ಕೊಡುಗೆಗಳನ್ನು ಹೇಳುವಾಗ ಮುಖ್ಯವಾಗಿ ಗಮನಿಸಬೇಕಾದ ಹೆಸರು ಡಾ. ಹರ್ಮನ್ ಗುಂಡರ್ಟನದು. ಜರ್ಮನಿಯವನಾದ ಈತ ೧೮೭೨ರಲ್ಲಿ ಮಲಯಾಳಂ- ಇಂಗ್ಲಿಷ್ ನಿಘಂಟನ್ನು ಪ್ರಕಟಿಸಿದ. ಇದಲ್ಲದೆ ವ್ಯಾಕರಣ, ಚರಿತ್ರೆ, ವೇದಶಾಸ್ತ್ರ ಮೊದಲಾದ ವಿಷಯಗಳಲ್ಲಿ ಆತ ಗ್ರಂಥ ರಚಿಸಿದ. ಶಾಲಾ ವಿದ್ಯಾರ್ಥಿಗಳಿಗಾಗಿ ಅನೇಕ ಪಠ್ಯಗಳನ್ನು ಆತ ಪ್ರಕಟಿಸಿದ. ಅಲ್ಲದೆ ರಾಜ್ಯ ಸಮಾಚಾರ ಮತ್ತು ಪಶ್ಚಿಮೋದಯ ಎಂಬ ನಿಯತಕಾಲಿಕೆಗಳನ್ನು ಹೊರ ತರುತ್ತಿದ್ದ. ಮಲಯಾಳಂ ಸಾಹಿತ್ಯ ಕ್ಷೇತ್ರದಲ್ಲಿ ಡಾ. ಗುಂಡರ್ಟ್‌ನ ಕೊಡುಗೆ ಎಂದೆಂದೂ ಅವಿಸ್ಮರಣೀಯ.

ಕ್ರಿಶ್ಚಿಯನ್ ಮಿಷನರಿಗಳ ಕೆಲಸಗಳು ಸ್ಥಳೀಯ ವಿದ್ವಾಂಸರನ್ನು ಪ್ರಚೋದಿಸಿದುವು. ಅವರು ಮಲಯಾಳಂ ಭಾಷೆಯಲ್ಲಿ ಕೃತಿ ರಚನೆ ಮಾಡತೊಡಗಿದರು. ಈ ಕಾಲಘಟ್ಟದಲ್ಲಿ ಶಿಕ್ಷಣವು ಹೆಚ್ಚು ವ್ಯಾಪಕವಾಯಿತು. ಅನೇಕ ವಿಷಯಗಳಲ್ಲಿ ಉತ್ತಮ ಪಠ್ಯಗಳು ಮಲಯಾಳಂ ಭಾಷೆಯಲ್ಲಿ ಸಿದ್ಧವಾದವು.

ಪಾಶ್ಚಾತ್ಯ ಶಿಕ್ಷಣದ ಪ್ರಾರಂಭ

ಕೇರಳದಲ್ಲಿ ಪಾಶ್ಚಾತ್ಯ ವಿದ್ಯಾಭ್ಯಾಸವನ್ನು ಕ್ರಿಶ್ಚಿಯನ್ ಮಿಷನರಿಗಳು ಪ್ರಾರಂಭಿಸಿದರು. ಇವರಲ್ಲಿ ಪ್ರೊಟೆಸ್ಟಂಟ್ ಮಿಷನರಿಗಳು ಮೊದಲಿಗರು. ರಿಂಕಿಲ್‌ಟಾಬ್ ಎಂಬ ಪ್ರಷ್ಯನ್ ಮಿಷನರಿ ೧೮೦೬ ರಿಂದ ೧೮೧೬ರವರೆಗೆ ತಿರುವನಂತಪುರಂ- ನಾಗರಕೋವಿಲ್ ಪ್ರದೇಶಗಳಲ್ಲಿ ಅನೇಕ ಶಾಲೆಗಳನ್ನು ಆರಂಭಿಸಿದ. ಜಾತಿಮತ ಭೇದವಿಲ್ಲದೆ ಉಚಿತವಾಗಿ ಶಿಕ್ಷಣವನ್ನು ನೀಡುವ ವ್ಯವಸ್ಥೆಯನ್ನು ಮಾಡಿದ. ಈ ವಿಷಯದಲ್ಲಿ ಇನ್ನಷ್ಟು ಕೊಡುಗೆಗಳನ್ನು ನೀಡಿದವ ಲಂಡನ್ ಮಿಷನ್ ಸೊಸೈಟಿಯ ಡಾ. ಮೀಡ್. ೧೮೧೭ರಲ್ಲಿ ಈತ ಕೇರಳಕ್ಕೆ ಬಂದು, ೧೮೭೩ರಲ್ಲಿ ಮರಣ ಹೊಂದುವವರೆಗೆ ಶಿಕ್ಷಣ ಪ್ರಚಾರಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿರಿಸಿದ್ದ. ಸಾಮಾನ್ಯ ಶಿಕ್ಷಣಕ್ಕಿಂತಲೂ ವೃತ್ತಿಪರ ಶಿಕ್ಷಣಕ್ಕೆ ಈತ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದ. ಸ್ತ್ರೀಯರಿಗೆ ಶಿಕ್ಷಣ ನೀಡುವಲ್ಲಿಯೂ ಆತ ಶ್ರಮವಹಿಸಿದ.

೧೮೧೩ರಲ್ಲಿ ಸಿರಿಯನ್ ಪಾದ್ರಿಗಳು ಪುರೋಹಿತರಿಗೆ ತರಬೇತಿ ನೀಡಲು ಕೋಟ್ಟಯಂ ನಲ್ಲಿ ಒಂದು ‘ಸೆಮಿನರಿ’ಯನ್ನು ಸ್ಥಾಪಿಸಿದರು. ಇಲ್ಲಿ ಸಿ.ಎಂ.ಎಸ್ ಮಿಷನರಿಗಳು ಇದ್ದುದರಿಂದ ಅವರು ಧಾರ್ಮಿಕದ ಜೊತೆಗೆ ಧಾರ್ಮಿಕೇತರ ವಿಷಯಗಳನ್ನು ಬೋಧಿ ಸುತ್ತಿದ್ದರು. ೧೮೨೧ರಲ್ಲಿ ಅವರು ಕೋಟ್ಟಯಂನಲ್ಲಿ ಗ್ರಾಮೀಣ ಶಾಲೆಯನ್ನು ಸ್ಥಾಪಿಸಿದರು. ಅವರ ಹೆಂಡತಿಯರ ನೇತೃತ್ವದಲ್ಲಿ ಹೆಣ್ಣು ಮಕ್ಕಳ ಶಾಲೆಯನ್ನು ಸ್ಥಾಪಿಸಿದರು. ಬ್ರಿಟಿಷ್ ಮಿಷನರಿಗಳು ಹಾಗೂ ಬಾಸೆಲ್ ಮಿಷನ್‌ನವರೂ ಕೊಚ್ಚಿ ಹಾಗೂ ಮಲಬಾರು ಪ್ರದೇಶಗಳಲ್ಲಿ ಇಂಗ್ಲಿಷ್ ಶಾಲೆಗಳನ್ನು ಆರಂಭಿಸಿದರು.

ಮಿಷನರಿಗಳು ಆರಂಭಿಸಿದ ಇಂಗ್ಲಿಷ್ ಶಾಲೆಗಳ ಮೂಲಕ ಸರಕಾರವೂ ಶಾಲೆಗಳ ಸ್ಥಾಪನೆಯ ಅಗತ್ಯವನ್ನು ಕಂಡುಕೊಂಡಿತು. ೧೮೧೭ರಲ್ಲಿ ರಾಣಿ ಗೌರಿಪಾರ್ವತಿ ಬಾಯಿಯು ದಿವಾನರಾಗಿದ್ದ ಕರ್ನಲ್ ಮನ್ರೋನ ನೆರವಿನಿಂದ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದಳು. ನಾಡಿನ ಎಲ್ಲಾ ಭಾಗಗಳಲ್ಲಿಯೂ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿದ್ದಲ್ಲದೆ ಹತ್ತು ವರ್ಷದವರೆಗಿನ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹೋಗುವಂತೆ ನಿರ್ಬಂಧಿಸಲಾಯಿತು. ಅರ್ಹರಾದ ಅಧ್ಯಾಪಕರನ್ನು ಸರಕಾರದಿಂದಲೇ ನೇಮಿಸಿ ಅವರಿಗೆ ಮಾಸಿಕವಾಗಿ ವೇತನವನ್ನು ಕೊಡುವ ವ್ಯವಸ್ಥೆಯನ್ನು ಮಾಡಲಾಯಿತು. ಈ ಮೂಲಕ ಶಿಕ್ಷಣ ಪ್ರಚಾರ ಮಾಡುವ ಕೆಲಸ ಸರಕಾರದ್ದು ಎಂಬ ನಿಯಮವೊಂದು ಅಂಗೀಕಾರ ಪಡೆದಂತಾಯಿತು.

ಸ್ವಾತಿತಿರುನಾಳನ ಕಾಲದಲ್ಲಿ ೧೮೩೪ರಲ್ಲಿ ತಿರುವನಂತಪುರದಲ್ಲಿ ಮೊದಲ ಇಂಗ್ಲಿಷ್ ಶಾಲೆ ಸ್ಥಾಪನೆಯಾಯಿತು. ‘ಹಿಸ್ ಹೈನೆಸ್‌ದಿ  ಮಹಾರಾಜಾಸ್ ಫ್ರಿ ಸ್ಕೂಲ್’ ಎಂಬ ಹೆಸರಿನಿಂದ ಪ್ರಸಿದ್ಧವಾದ ಈ ಶಾಲೆಯನ್ನು ವರ್ಷದೊಳಗೆ ಸರಕಾರ ಸ್ವಾಧೀನಕ್ಕೆ ತೆಗೆದು ಕೊಂಡಿತ್ತು. ೧೮೬೬ರಲ್ಲಿ ಆ ಶಾಲೆಯೇ ಕಾಲೇಜಿನ ಮಟ್ಟಕ್ಕೆ ವಿಸ್ತರಿಸಿತು. ಕೊಚ್ಚಿ, ಮಲಬಾರು ಪ್ರದೇಶಗಳಲ್ಲಿಯೂ ಇದೇ ಮಾದರಿಯ ಶಾಲೆಗಳು ಆರಂಭವಾದವು. ೧೮೪೫ರಲ್ಲಿ ಎರ್ನಾಕುಳಂನಲ್ಲಿ ಮೊದಲ ಆಂಗ್ಲ ಹೈಸ್ಕೂಲ್ ಆರಂಭವಾಯಿತು. ಮಲಬಾರ್ ಬಾಸೆಲ್‌ಮಿಷನ್‌ನ ಸ್ಥಾಪಕನಾದ ಡಾ. ಗುಂಡರ್ಟ್‌ನನ್ನು ಮಲಬಾರಿನ ಹಾಗೂ ದಕ್ಷಿಣ ಕರ್ನಾಟಕದ ಶಾಲೆಗಳ ಇನ್ಸ್‌ಪೆಕ್ಟರನ್ನಾಗಿ ಸರಕಾರ ನೇಮಿಸಿತು. ತಲಶ್ಶೇರಿಯ ಬಾಸೆಲ್ ಮಿಷನ್ ೧೮೬೨ರಲ್ಲಿ ಬ್ರಣ್ಣನ್ ಶಾಲೆ ಸ್ಥಾಪಿಸಲಾಯಿತು. ಮಿಸ್ಟರ್ ಬ್ರಣ್ಣನ್ ನೀಡಿದ ೧೨೦೦೦ ರೂಪಾಯಿಗಳ ಕೊಡುಗೆಯಿಂದ ಇದನ್ನು ಸ್ಥಾಪಿಸಲಾಯಿತು. ಬಳಿಕ ಅದನ್ನು ಸರಕಾರ ಸ್ವಾಧೀನಪಡಿಸಿಕೊಂಡಿತಲ್ಲದೆ ಬ್ರಣ್ಣನ್ ಕಾಲೇಜಾಗಿ ಇಂದಿಗೂ ಪ್ರಸಿದ್ಧವಾಗಿದೆ.

ಸಾಮಾನ್ಯ ಶಿಕ್ಷಣವನ್ನು ನೀಡುವ ಈ ಎಲ್ಲಾ ಶಾಲೆಗಳು ಸಾರ್ವಜನಿಕವಾಗಿ ಎಲ್ಲಾ ಜನವರ್ಗದವರನ್ನು ಒಳಗೊಂಡು ಶಿಕ್ಷಣ ನೀಡಿದವು. ನಂತರದ ದಿನಗಳಲ್ಲಿ ನಿರ್ದಿಷ್ಟ ವಿಷಯಗಳಲ್ಲಿ ಉನ್ನತ ಶಿಕ್ಷಣದ ಅಗತ್ಯವನ್ನು ಮನಗಂಡು ಆ ನಿಟ್ಟಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾದವು. ಇವುಗಳಲ್ಲಿ ಲಾ ಕಾಲೇಜು, ಆಯುರ್ವೇದ ಕಾಲೇಜು, ಸಂಸ್ಕೃತ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಸ್ವಾತಿತಿರುನಾಳ್ ಸಂಗೀತ ಅಕಾಡೆಮಿ, ತೃಶ್ಯೂರ್ ವೆಟರ್ನರಿ ಕಾಲೇಜು ಹೀಗೆ ಅನೇಕ ಸಂಸ್ಥೆಗಳು ತರುವಾಯ ಅಸ್ತಿತ್ವಕ್ಕೆ ಬ೦ದವು.

ಕೇರಳದ ಕಾಲೇಜುಗಳು ಮದರಾಸು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದವು. ೧೯೩೭ರಲ್ಲಿ ತಿರುವಾಂಕೂರು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಅದು ತಿರುವಾಂಕೂರು ಪ್ರದೇಶದ ಕಾಲೇಜುಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು. ೧೯೪೯ರಲ್ಲಿ ಕೊಚ್ಚಿ-ತಿರುವಾಂಕೂರು ಸಂಸ್ಥಾನಗಳು ಒಂದುಗೂಡಿದಾಗ ಕೊಚ್ಚಿ ಸಂಸ್ಥಾನದ ಕಾಲೇಜುಗಳೂ ಅದರ ವ್ಯಾಪ್ತಿಗೆ ಬಂದವು. ಕೇರಳ ರಾಜ್ಯ ರೂಪಗೊಂಡಾಗ ೧೯೫೭ರಲ್ಲಿ ತಿರುವಾಂಕೂರು ವಿಶ್ವವಿದ್ಯಾಲಯವು ಕೇರಳ ವಿಶ್ವವಿದ್ಯಾಲಯವಾಗಿ ಬದಲಾಯಿತು. ಕೇರಳದಾದ್ಯಂತ ಎಲ್ಲಾ ಕಾಲೇಜುಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿತು. ಬಳಿಕ ಕ್ಯಾಲಿಕಟ್ ವಿಶ್ವವಿದ್ಯಾಲಯ ಕೊಚ್ಚಿನ್ ವಿಶ್ವವಿದ್ಯಾಲಯ, ಕೇರಳ ಕೃಷಿ ವಿಶ್ವವಿದ್ಯಾಲಯ, ಮಹಾತ್ಮಗಾಂಧಿ ವಿಶ್ವವಿದ್ಯಾಲಯ, ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ, ಕಣ್ಣೂರು ವಿಶ್ವವಿದ್ಯಾಲಯ ಗಳು ಸ್ಥಾಪನೆಯಾದವು. ಜೊತೆಗೆ ಅನೇಕ ಖಾಸಗೀ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾದ ಸೇವೆಯನ್ನು ಸಲ್ಲಿಸುತ್ತಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಕ್ರಿಶ್ಚಿಯನ್ ಮಿಷನ್‌ಗಳು, ಶ್ರೀನಾರಾಯಣಗುರು ಟ್ರಸ್ಟ್, ನಾಯರ್ ಸರ್ವೀಸ್ ಸೊಸೈಟಿ, ಮುಸ್ಲಿಂ ಎಜುಕೇಷನ್ ಸೊಸೈಟಿ ಮೊದಲಾದವುಗಳು. ಆದರೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಇಂದಿಗೂ ಸರಕಾರವೇ ತನ್ನ ಸುಪರ್ದಿಯಲ್ಲಿ ಉಳಿಸಿಕೊಂಡಿವೆ.

ಸಾಂಸ್ಕೃತಿಕ ಸಂಸ್ಥೆಗಳು

ಕೇರಳದ ಕಲೆ, ಸಂಸ್ಕೃತಿಗಳ ಪೋಷಣೆಗಾಗಿ ಅನೇಕ ಸಂಘ-ಸಂಸ್ಥೆಗಳು ಸ್ಥಾಪನೆಗೊಂಡಿವೆ. ತಿರುವಾಂಕೂರಿನಲ್ಲಿ ಸ್ವಾತಿತಿರುನಾಳರ ಕಾಲದಲ್ಲಿ ಅನೇಕ ಸಂಸ್ಥೆಗಳು ಕಾರ್ಯಾರಂಭಿಸಿದವು. ೧೮೩೬ರಲ್ಲಿ ತಿರುವನಂತಪುರಂನ ನಕ್ಷತ್ರ ಬಂಗಲೆಯಲ್ಲಿ ಶ್ರೀ ಮೂಲಂ ತಿರುನಾಳರ ಆಡಳಿತದ ಕಾಲದಲ್ಲಿ (೧೮೮೫-೧೯೨೪) ಸಾಂಸ್ಕೃತಿಕವಾಗಿ ಅನೇಕ ಕೆಲಸಗಳು ನಡೆದವು. ಪ್ರಾಚೀನ ಹಸ್ತಪ್ರತಿಗಳನ್ನು ಶೋಧಿಸಿ ಪ್ರಕಟಿಸಲು ಹೊಸ ಇಲಾಖೆಯೊಂದು ಕಾರ್ಯಾರಂಭಿಸಿತ್ತು. ಇದು ಈಗ ತಿರುವನಂತಪುರಂನ ಕಾರ್ಯವಟ್ಟಂನಲ್ಲಿ ಕಾರ್ಯ ನಿರ್ವಹಿಸುವ ‘ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನ್‌ಸ್ಕ್ರಿಪ್ಟ್ ಲೈಬ್ರರಿ’ ಎಂಬ ಹೆಸರಿನಿಂದ ಪ್ರಸಿದ್ಧ ವಾಗಿದೆ. ಇದು ಕೇರಳ ವಿಶ್ವವಿದ್ಯಾಲಯದ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿದೆ. ಪ್ರಾಚೀನ ಹಸ್ತಪ್ರತಿಗಳನ್ನು ಹುಡುಕಿ ತೆಗೆದು ಪ್ರಕಟಿಸುವ ಮೂಲಕ ಈ ಸಂಸ್ಥೆ ಹೆಸರು ಮಾಡಿದೆ. ಇದೇ ತೆರನ ಇನ್ನೊಂದು ಸಂಸ್ಥೆ ತಿರುವಾಂಕೂರಿನ ‘ಆರ್ಕಿಯೋಲಜಿಕಲ್ ಸೀರೀಸ್’ ಇತಿಹಾಸ ವಿದ್ಯಾರ್ಥಿಗಳಿಗೆ ಅಮೂಲ್ಯ ಮಾಹಿತಿಗಳನ್ನು ಒದಗಿಸುತ್ತಿದೆ. ೧೯೩೦ ರಲ್ಲಿ ಮಹಾಕವಿ ವಳ್ಳತ್ತೋಳ್ ಸ್ಥಾಪಿಸಿದ ‘ಕೇರಳ ಕಲಾ ಮಂಡಲಂ’ನಲ್ಲಿ ಕಥಕಳಿ ಮೊದಲಾದ ಕಲೆಗಳಿಗೆ ಅಧಿಕೃತ ಮಾರ್ಗದರ್ಶನ ನೀಡುತ್ತಾರೆ. ಇದನ್ನು ಇಷ್ಟರಲ್ಲೆ ವಿಶ್ವವಿದ್ಯಾಲಯವಾಗಿ ಉನ್ನತೀಕರಿಸಲು ವಿಶ್ವವಿದ್ಯಾಲಯದ ಧನಸಹಾಯ ಆಯೋಗವು ಪರಿಶೀಲಿಸುತ್ತಿದೆ. ಇವಲ್ಲದೆ ಸರಕಾರದ ಅಧೀನದಲ್ಲಿರುವ ಕೇರಳ ಸಾಹಿತ್ಯ ಅಕಾಡೆಮಿ, ಸಂಗೀತ ನಾಟಕ ಅಕಾಡೆಮಿ, ಲಲಿತಕಲಾ ಅಕಾಡೆಮಿ ಮೊದಲಾದ ಸಂಸ್ಥೆಗಳನ್ನು ಇಲ್ಲಿ ಹೆಸರಿಸಬಹುದು.

ಗ್ರಂಥಾಲಯಗಳು

ಕೇರಳದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣವನ್ನು ಪ್ರಚಾರಪಡಿಸುವಲ್ಲಿ ಗ್ರಂಥಾಲಯಗಳಿಗೆ ಮಹತ್ವದ ಪಾತ್ರವಿದೆ. ಮಹಾಭಾರತ ಪಟ್ಟತ್ತಾನುವಿನಂತಹ ಕಾರ್ಯಕ್ರಮಗಳು ಪಂಡಿತವರ್ಗದಲ್ಲಿ ಪ್ರಚಾರದಲ್ಲಿದ್ದಂತೆ ಜನಸಾಮಾನ್ಯರ ನಡುವೆ ಕಥಕಳಿ, ಕೂತ್ತ್ ಮೊದಲಾದ ಮನರಂಜನ ಕಲೆಗಳು ಪ್ರಚಾರದಲ್ಲಿದ್ದವು. ಜನ ಸಾಮಾನ್ಯರಿಗೆ ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಯಪಡಿಸುವಲ್ಲಿ ಇವುಗಳಿಗೆ ಮಹತ್ವದ ಪಾತ್ರವಿದೆ. ಇವುಗಳ ಪ್ರಸಕ್ತಿ ಕಡಿಮೆಯಾಗುತ್ತಿದ್ದಂತೆ ಗ್ರಂಥಾಲಯಗಳು ಜ್ಞಾನ ಪ್ರಸಾರದಲ್ಲಿ ಪ್ರಾಶಸ್ತ್ಯ ಪಡೆದವು.

ಆಧುನಿಕ ಮಾದರಿಯ ಗ್ರಂಥಾಲಯಗಳು ಕೇರಳದಲ್ಲಿ ಆರಂಭವಾದುದು ಹತ್ತೊಂಭತ್ತನೆಯ ಶತಮಾನದ ಆರಂಭದಲ್ಲಿ. ಭಾರತದಲ್ಲಿಯೇ ಅತ್ಯಂತ ಹಳೆಯದಾದ ತಿರುವನಂತಪುರಂನ ಪಬ್ಲಿಕ್ ಲೈಬ್ರರಿ ೧೮೨೯ರಲ್ಲಿ ಮತ್ತು ಕೋಟ್ಟಯಂನಲ್ಲಿ ಪಬ್ಲಿಕ್ ಲೈಬ್ರರಿಗಳು ಕಾರ್ಯಾರಂಭಿಸಿದವು. ತರುವಾಯ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿ ಗ್ರಂಥಾಲಯ ಸಂಘ ಎಂಬ ಜನಪರ ಸಂಘಟನೆಯೊಂದು ಆರಂಭವಾಯಿತು. ಈ ಸಂಘವು ಸರಕಾರದ ನೆರವು ಪಡೆದ ಅನೇಕ ಗ್ರಂಥಾಲಯಗಳನ್ನು ತೆರೆದುದುಲ್ಲದೆ ಜೀರ್ಣಗೊಂಡ ಅನೇಕ ಗ್ರಂಥಾಲಯಗಳಿಗೆ ಪುನರ್ಜೀವ ಕೊಟ್ಟಿತು. ಈ ಸಂಘದ ಹೊರತಾಗಿ ಮಲಬಾರ್ ಪ್ರದೇಶದಲ್ಲಿ ಲೋಕಲ್ ಲೈಬ್ರರಿ ಅಥೋರಿಟಿ ಎಂಬ ಹೆಸರಿನ ಖಾಸಗೀ ಸಂಸ್ಥೆಯೂ ರೂಪ ಪಡೆಯಿತು.

೧೯೮೯ರಲ್ಲಿ ಕೇರಳ ವಿಧಾನಸಭೆಯು ಕೇರಳ ಪಬ್ಲಿಕ್ ಲೈಬ್ರರೀಸ್ ಆಕ್ಟ್ ಪ್ರಕಾರ ಕೇರಳದ ಎಲ್ಲಾ ಗ್ರಂಥಾಲಯಗಳನ್ನು ರಾಜ್ಯದ ಲೈಬ್ರರಿ ಕೌನ್ಸಿಲ್‌ನ ನಿಯಂತ್ರಣಕ್ಕೆ ತಂದಿತು. ಈ ಕೌನ್ಸಿಲಿನ ಅಧೀನದಲ್ಲಿ ನಗರ, ಗ್ರಾಮೀಣ ಪ್ರದೇಶ ಹಾಗೂ ಪಂಚಾಯತ್ ಮಟ್ಟಗಳಲ್ಲೂ ಅನೇಕ ಗ್ರಂಥಾಲಯಗಳನ್ನು ಸ್ಥಾಪಿಸಿದೆ. ಸುಮಾರು ಐದು ಸಾವಿರಕ್ಕೆ ಮಿಕ್ಕ ಗ್ರಂಥಾಲಯಗಳು ಕೇರಳದಲ್ಲಿ ಇಂದು ಕಾರ್ಯ ನಿರ್ವಹಿಸುತ್ತಿವೆ.

ಪತ್ರಿಕೆಗಳು

ಇಂಗ್ಲಿಷ್ ಶಿಕ್ಷಣದ ಪರಿಣಾಮವಾಗಿ ರಾಜಕೀಯ ಒತ್ತಾಸೆಯಿಂದ ಪತ್ರಿಕೋದ್ಯಮ ಕೇರಳದಲ್ಲಿ ಆರಂಭವಾಯಿತು. ಕಲ್ಕತ್ತದಿಂದ ಪ್ರಕಟವಾಗುತ್ತಿದ್ದ ‘ಅಮೃತ್ ಬಜಾರ್ ಪತ್ರಿಕೆ’ಯ ಪ್ರೇರಣೆಯಿಂದ ೧೮೮೪ರಲ್ಲಿ ಮಲಬಾರಿನ ಮೊದಲ ವೃತ್ತಪತ್ರಿಕೆ ಎಂಬ ಕೀರ್ತಿಗೆ ಪಾತ್ರವಾದ ‘ಕೇರಳ ಪತ್ರಿಕೆ’ ಕೋಳಿಕೋಡಿನಲ್ಲಿ ಪ್ರಾರಂಭವಾಯಿತು. ೧೮೮೬ರಲ್ಲಿ ತಿರುವನಂತಪುರಂನಿಂದ ಪ್ರಕಟಣೆ ಆರಂಭಿಸಿದ ‘ಮಲಯಾಳಿ’ಯು ತಿರುವಾಂಕೂರಿನಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ೧೮೮೭ರಲ್ಲಿ ಕೋಟ್ಟಯಂನಲ್ಲಿ ಆರಂಭವಾದ ನಸ್ರಾಣಿ ದೀಪಿಕ ೧೯೩೯ರಲ್ಲಿ ‘ದೀಪಿಕ’ ಎಂಬ ಹೆಸರಿನ ದಿನಪತ್ರಿಕೆಯಾಗಿ ರೂಪು ಪಡೆಯಿತು. ಜೊತೆ ಜೊತೆಗೆ ನಡೆದ ಗ್ರಂಥಾಲಯ ಚಳುವಳಿಯು ಇವುಗಳನ್ನು ಜನರಿಗೆ ತಲುಪಿಸುವಲ್ಲಿ ನೆರವಾದುವು. ಗ್ರಂಥಾಲಯಗಳ ಮೂಲಕ ಅನೇಕ ಉಪಯುಕ್ತ ಗ್ರಂಥಗಳನ್ನು ದಿನಪತ್ರಿಕೆಗಳನ್ನು ವಾರಪತ್ರಿಕೆಗಳನ್ನು ಒದಗಿಸಲಾಗುತ್ತಿತ್ತು. ಗ್ರಾಮೀಣ ಪ್ರದೇಶದ ಅನೇಕ ಜನರು ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದರು. ಇದು ಒಂದು ರೀತಿಯ ಜನರ ಓದಿನ ಆಸಕ್ತಿಯನ್ನು ಹೆಚ್ಚಿಸಿದೆ. ರೇಡಿಯೋ, ಟಿ.ವಿ. ಮೊದಲಾದ ಪ್ರಚಾರ ಮಾಧ್ಯಮಗಳಿದ್ದರೂ ಕೇರಳದಲ್ಲಿ ಇಂದಿಗೂ ಪುಸ್ತಕ, ಪತ್ರಿಕೆಗಳನ್ನು ಕೊಂಡು ಓದುವ ಜನರಿದ್ದಾರೆ. ಈ ಕಾರಣಕ್ಕಾಗಿಯೇ ಮಲಯಾಳಂ ಮನೋರಮ ಪತ್ರಿಕೆ ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಸಾರವುಳ್ಳ ಪ್ರಾದೇಶಿಕ ಭಾಷಾ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಮಲಯಾಳ ಮನೋರಮ’ ಪತ್ರಿಕೆ ಆರಂಭವಾದುದು ೧೮೯೦ರಲ್ಲಿ. ಕೇರಳ ದಲ್ಲಿ ಮೊದಲ ‘ಜೋಯಿಂಟ್ ಸ್ಟಾಕ್ ಕಂಪನಿ’ (೧೮೮೮)ಯನ್ನು ಆರಂಭ ಮಾಡಿದ ವರ್ಗೀಸ್ ಮಾಪ್ಪಿಳನ ನೇತೃತ್ವದಲ್ಲಿ ಇದು ಪ್ರಕಟವಾಯಿತು. ಅಂದಿನ ರಾಜ, ಮಹಾರಾಜರು ಗಳ ನೆರವಿನಿಂದ ಮಲಯಾಳ ಮನೋರಮ ಕ್ಷಿಪ್ತಬೆಳವಣಿಗೆ ಕಂಡಿತು. ೧೯೨೮ರಲ್ಲಿ ಮನೋರಮ ದಿನಪತ್ರಿಕೆಯಾಗಿ ರೂಪುಗೊಂಡಿತು.

೧೯೦೬ರಲ್ಲಿ ಕೆ. ರಾಮಕೃಷ್ಣ ಪಿಳ್ಳೆಯವರ ಸಂಪಾದಕತ್ವದಲ್ಲಿ ತಿರುವನಂತಪುರದಿಂದ ‘ಸ್ವದೇಶಾಭಿಮಾನಿ’ ಎಂಬ ಪತ್ರಿಕೆ ಪ್ರಕಟವಾಗಲಾರಂಭಿಸಿತು. ಆಡಳಿತಾಧಿಕಾರಿಗಳ ಭ್ರಷ್ಟಾಚಾರಗಳನ್ನು, ಸಾಮಾಜಿಕ ಅನ್ಯಾಯಗಳ ವಿರುದ್ಧ ಹೋರಾಟಕ್ಕಿಳಿದ ಹೆಗ್ಗಳಿಕೆ ಈ ಪತ್ರಿಕೆಯದು. ಮಹಾತ್ಮಾಗಾಂಧೀಜಿಯವರ ‘ಯಂಗ್ ಇಂಡಿಯಾ’ ಮಾದರಿಯಲ್ಲಿ ಕೋಳಿಕೋಡಿನಲ್ಲಿ ‘ಮಾತೃಭೂಮಿ’ ಎಂಬ ಪತ್ರಿಕೆ ೧೯೨೩ರಲ್ಲಿ ಪ್ರಾರಂಭವಾಯಿತು. ಮಲಯಾಳಿಗರ ರಾಷ್ಟ್ರೀಯ ಪ್ರಜ್ಞೆಯನ್ನು ಕೆರಳಿಸುವಲ್ಲಿ ಈ ಪತ್ರಿಕೆಯ ಪಾತ್ರ ತುಂಬಾ ಮಹತ್ವದ್ದಾಗಿದೆ. ಸಾಮಾಜಿಕ ಸಮಸ್ಯೆಗಳ ವಿರುದ್ಧವೂ ಪತ್ರಿಕೆ ಧ್ವನಿಯೆತ್ತಿದೆ. ಸಂಪಾದಕ ರಾಗಿದ್ದ ಕೆ.ಪಿ. ಕೇಶವ ಮೇನೋನ್ ಸ್ವತಹ ವೈಕಂ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು ಇದಕ್ಕೆ ಉತ್ತಮ ನಿದರ್ಶನ. ಮಾತೃಭೂಮಿಯನ್ನು ಆರಂಭಿಸಿದ ವೇಳೆಗೆ ರಾಷ್ಟ್ರೀಯ ಚಳುವಳಿ ಯನ್ನು ಬೆಂಬಲಿಸಿದ ಎರಡು ಪತ್ರಿಕೆಗಳು ಮಲಯಾಳಂನಲ್ಲಿ ಪ್ರಕಟವಾಗುತ್ತಿದ್ದುವು. ಅವೆಂದರೆ ಎ.ಕೆ. ಪಿಳ್ಳೆಯವರ ಸಂಪಾದಕತ್ವದಲ್ಲಿ ಕೊಲ್ಲಂನಿಂದ ಪ್ರಕಟವಾಗುತ್ತಿದ್ದ ‘ಸ್ವರಾಟ್’ ಮತ್ತು ಪಾಲಕ್ಕಾಡ್‌ನಿಂದ ಕೃಷ್ಣಸ್ವಾಮಿ ಅಯ್ಯರ್ ಅವರು ಪ್ರಕಟಿಸುತ್ತಿದ್ದ ‘ಯುವ ಭಾರತ’. ಇದಲ್ಲದೆ ಕೇರಳ ಕೌಮುದಿ (೧೯೪೦), ದೇಶಾಭಿಮಾನಿ (೧೯೪೫), ಜನಯುಗಂ (೧೯೪೮) ಮೊದಲಾದ ರಾಜ್ಯಮಟ್ಟದ ಪತ್ರಿಕೆಗಳು ಇಂದಿಗೂ ಇವೆ. ಇವುಗಳಲ್ಲದೆ ರಾಜ್ಯದ ವಿವಿಧ ಪ್ರಮುಖ ಕೇಂದ್ರಗಳಲ್ಲಿ ಅಲ್ಲದೆ ಹೊರನಾಡುಗಳಲ್ಲಿಯೂ ಆವೃತ್ತಿಗಳಿವೆ. ಈ ಪತ್ರಿಕೆಗಳನ್ನು ಹೊರತುಪಡಿಸಿ ಸ್ಥಳೀಯವಾಗಿ ಅನೇಕ ಸಣ್ಣ ಪುಟ್ಟ ಪತ್ರಿಕೆಗಳು ಪ್ರಕಟವಾಗುತ್ತಿವೆ. ಬಹುಭಾಷಿಕರಿರುವ ಕಾಸರಗೋಡು ಜಿಲ್ಲೆಯಲ್ಲಿಯೇ ಉತ್ತರದೇಶಂ, ಕಾರವಲ್ ಮೊದಲಾದ ಮಲಯಾಳಂ ಪತ್ರಿಕೆಗಳು ಪ್ರಕಟವಾಗುತ್ತಿವೆ. ಅಲ್ಲದೆ ಕನ್ನಡದಲ್ಲಿಯೂ ಪ್ರತಿಸೂರ್ಯ, ಗಡಿನಾಡು, ಕಾಸರಗೋಡು ಸಮಾಚಾರ, ಬಯ್ಯಮಲ್ಲಿಗೆ ಮೊದಲಾದ ಪತ್ರಿಕೆಗಳು ಪ್ರಕಟವಾಗುತ್ತಿದ್ದವು. ಏಕಕಾಲಕ್ಕೆ ಕನ್ನಡ ಮಲಯಾಳಂ ಸೇರಿ ಆರು ಪತ್ರಿಕೆಗಳು ಒಂದೇ ನಗರದಲ್ಲಿ ಪ್ರಕಟವಾಗುತ್ತಿರುವುದನ್ನು ನೋಡಿದರೆ ಕೇರಳೀಯರ ವಾಚನಾಭಿರುಚಿಯನ್ನು ಅರಿತುಕೊಳ್ಳಬಹುದು. ಈಗ ‘ಕಾರವಲ್’ ಮತ್ತು ‘ಉತ್ತರದೇಶಂ’ ಎಂಬೆರೆಡು ಪತ್ರಿಕೆಗಳು ಕನ್ನಡ ಮತ್ತು ಮಲಯಾಳಂ ಆವೃತ್ತಿಗಳನ್ನು ಪ್ರಕಟಿಸುತ್ತಿವೆ.

ಆರ್ಯುವೇದ

ಆಯುರ್ವೇದದ ವೈದ್ಯ ಪದ್ಧತಿಯಲ್ಲಿ ಕೇರಳೀಯರಿಗೆ ವಿಶಿಷ್ಟ ಸ್ಥಾನವಿದೆ. ಜೈನ ಬೌದ್ಧ ಮತೀಯರು ಇದನ್ನು ಕೇರಳದಲ್ಲಿ ಪ್ರಚಾರ ಮಾಡಿದರು. ಬೌದ್ಧ ವಿಹಾರಗಳ ಜೊತೆಗೆ ಅವರು ಔಷಧ ಶಾಲೆಗಳನ್ನು ಸ್ಥಾಪಿಸಿದರು. ಅಷ್ಟಾಂಗ ಹೃದಯ, ಸುಶ್ರುತ ಸಂಹಿತೆ, ಚರಕ ಸಂಹಿತೆ ಮೊದಲಾದ ಆಯುರ್ವೇದ ಗ್ರಂಥಗಳನ್ನು ಕೇರಳದೆಲ್ಲೆಡೆ ಪ್ರಚಾರ ಮಾಡಿದರು. ವಾಗ್ಭಟನ ಅಷ್ಟಾಂಗ ಹೃದಯ ಸಂಪ್ರದಾಯವೇ ಇಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದು. ನಂಬೂದಿರಿ ಬ್ರಾಹ್ಮಣರು ಮತ್ತು ಈಳವ ಸಮುದಾಯದವರು ಆಯುರ್ವೇದದಲ್ಲಿ ಪಾಂಡಿತ್ಯವನ್ನು ಪಡೆದಿದ್ದರು. ‘ಹೋರ್ಟಸ್ ಇಂಡಿಕಸ್ ಮಲಬಾರಿಕಸ್’ ಎಂಬ ಗ್ರಂಥ ರಚನೆಯಲ್ಲಿ ಈಳವ ಸಮುದಾಯದ ವಿದಗ್ಧರು ನೆರವು ನೀಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳ ಬಹುದು.

ಆಯುರ್ವೇದವನ್ನು ಕುರಿತಂತೆ ಕೇರಳದಲ್ಲಿ ಅನೇಕ ಗ್ರಂಥಗಳು ರಚನೆಯಾಗಿವೆ. ವಿಷ ವೈದ್ಯ, ಬಾಲಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ಕ್ಷಯ, ಕುಷ್ಠ, ಪ್ರಮೇಹಂ ಮೊದಲಾದ ರೋಗ ಚಿಕಿತ್ಸೆಗಳ ಬಗೆಗೆ ಆ ಗ್ರಂಥಗಳಲ್ಲಿ ವಿವರಿಸಲಾಗಿದೆ. ಅನೇಕರು ಈ ಗ್ರಂಥಗಳ ಜ್ಞಾನವನ್ನು ಪಡೆದು ಪರಂಪರಾಗತವಾಗಿ ಚಿಕಿತ್ಸೆ ಮುಂದುವರಿಸಿಕೊಂಡು ಬಂದವರಿದ್ದಾರೆ. ಕೆಲವು ಗ್ರಾಮೀಣ ಪ್ರದೇಶದ ಕುಟುಂಬಗಳೂ ಆಯುರ್ವೇದದ ಚಿಕಿತ್ಸೆಯನ್ನು ಕಂಠಗತ ಮಾಡಿ ಕೊಂಡಿದ್ದು ಕುಟುಂಬದ ಆಸ್ತಿರೂಪದ ಆ ವಿದ್ಯೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಸರಕಾರಗಳು ಆಯರ್ವೇದ ಆಸ್ಪತ್ರೆಗಳನ್ನು ಕೇರಳದೆಲ್ಲೆಡೆ ಸ್ಥಾಪಿಸಿ ಈ ಔಷಧ ಪದ್ಧತಿಗೆ ಹೆಚ್ಚಿನ ಪ್ರಚಾರ ನೀಡಿದೆ. ನಾಟಿ ಔಷಧಿ ಎಂಬ ನೆಲೆಯಲ್ಲಿ ರೋಗಗಳಿಗೆ ಔಷಧಿ ನೀಡುವ ಅನೇಕ ಖಾಸಗೀ ಸಂಸ್ಥೆಗಳೂ ಇವೆ.

ಆಯುರ್ವೇದವನ್ನು ತಾತ್ವಿಕವಾಗಿಯೂ ಪ್ರಯೋಗಿಕವಾಗಿಯೂ ಚಾಲ್ತಿಗೆ ತಂದು ಯಶಸ್ವಿಯಾದ ಅನೇಕ ಸಂಸ್ಥೆಗಳಿವೆ. ಇವುಗಳಲ್ಲಿ ಕೋಟಯ್ಕಲ್ ವೈದ್ಯಶಾಲಾ ಪ್ರಸಿದ್ಧವಾದುದು. ಇದನ್ನು ಸ್ಥಾಪಿಸಿದವರು ಪಿ.ಎಸ್. ವಾರಿಯರ್. ಇದಕ್ಕೆ ಕೇರಳ ಕರ್ನಾಟಕಗಳಲ್ಲದೆ ದೇಶದ ಅನೇಕ ರಾಜ್ಯಗಳಲ್ಲಿ ಶಾಖೆಗಳಿವೆ. ಸ್ಥಾಪಕನಾದ ಪಿ.ಎಸ್. ವಾರಿಯರ್ ರಚಿಸಿದ ಅಷ್ಟಾಂಗಶರೀರಂ, ಬೃಹತ್‌ಶರೀರಂ ಮೊದಲಾದ ಗ್ರಂಥಗಳು ಪ್ರಸಿದ್ಧವಾಗಿವೆ. ಪಂಚಕರ್ಮ ಚಿಕಿತ್ಸೆ, ಕೇರಳದ ಆಯುರ್ವೇದ ವೈದ್ಯರ ಒಂದು ವಿಶಿಷ್ಟ ಪದ್ಧತಿ. ‘ಧಾರ’, ‘ಪಿೞಿಚ್ಚಿಲ್’, ‘ಞವರಕಿಳಿ’, ‘ಉಳಿಚ್ಚಿಲ್’, ‘ಶಿರೋವಸ್ತಿ’ ಮೊದಲಾದವುಗಳಲ್ಲಿ ಕೇರಳೀಯರು ಪ್ರಸಿದ್ಧರು. ಈ ಎಲ್ಲಾ ಚಿಕಿತ್ಸಾ ವಿಧಾನಗಳ ಮೂಲಕವೇ ಕೋಟಯ್ಕಲ್ ವೈದ್ಯ ಶಾಲೆಯು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದೆ.