ಕೇರಳದ ಆದಿವಾಸಿಗಳೆಂದು ಹೇಳಲಾಗುವ ಸುಮಾರು ಎರಡು ಲಕ್ಷಕ್ಕೂ ಮಿಕ್ಕಿದ ಜನರು ಕೇರಳದ ಗುಡ್ಡಗಾಡುಗಳಲ್ಲಿ ವಾಸಿಸುತ್ತಾರೆ. ಬುಡಕಟ್ಟು ಜನರೆಂದು ಗುರುತಿಸಲಾದ ಇವರು ಕೇರಳದ ಗುಡ್ಡಗಾಡು ಪ್ರದೇಶಗಳಾದ ಮಲಬಾರು, ಕೊಚ್ಚಿ, ತಿರುವಾಂಕೂರು ಪ್ರದೇಶದ ಬೆಟ್ಟ ಗುಡ್ಡಗಳಲ್ಲಿ ವಾಸವಾಗಿದ್ದಾರೆ. ಇವರಲ್ಲಿ ಸುಮಾರು ಮೂವತ್ತೈದು ಬುಡಕಟ್ಟುಗಳಿಗೆ ಸೇರಿದ ಜನರಿದ್ದಾರೆ ಎಂದು ಭಾವಿಸಲಾಗಿದೆ. ಅವರಲ್ಲಿ ಪ್ರಮುಖರಾದವರೆಂದರೆ ಕುರಿಚಿಯರು, ನಾಯಾಡಿಗಳು, ಮುಳ್ಳು ಕುರುಂಬರು, ಊರಾಳಿ ಕುರುಂಬರು, ಇರುಳರು, ಮುದಗರು, ಪಣಿಯರು, ಎರ್ನಾಡರ್, ಕಾಡರು, ಮುತುವಾಣರು, ಕಣಿಕ್ಕರು, ಊರಾಳರು, ಪಲಿಯನರು, ಮಲವೇಡರು, ವೇಟ್ಟುವರು, ಇರವಲ್ಲನರು, ವೇಡರು ಮಲಯನರು ಮತ್ತು ಕೊರಗರು. ಶತಮಾನಗಳು ಕಳೆದರೂ ಬುಡಕಟ್ಟು ಜನವರ್ಗದವರ ಮೂಲಭೂತ ಸಂಸ್ಕೃತಿ ಬದಲಾಗಿಲ್ಲ. ನಾಗರಿಕ ಬದುಕಿನಿಂದ ದೂರವಾಗಿ ಬದುಕುವ ಈ ಜನವರ್ಗದವರು ತಮ್ಮದೇ ಆದ ಆಚರಣೆಗಳು, ಜೀವನ ವಿಧಾನಗಳು, ಸಂಸ್ಕಾರಗಳು ಇತ್ಯಾದಿಗಳಿಂದಾಗಿ ಪ್ರತ್ಯೇಕವಾದ ಅಸ್ತಿತ್ವವನ್ನು ಉಳಿಸಿಕೊಡಿದ್ದಾರೆ. ಹಾಗಾಗಿ ಅವರು ಮಾತನಾಡುವ ಮಲಯಾಳಂನ ಉಪಭಾಷೆ, ಸಾಮಾಜಿಕ ರಚನೆ, ಸ್ವಭಾವ ಇತ್ಯಾದಿಗಳಲ್ಲಿ ಕೇರಳದ ಪ್ರಮುಖ ಸಂಸ್ಕೃತಿಯಿಂದ ಭಿನ್ನವಾದ ಗುಡ್ಡಗಾಡು ಸಂಸ್ಕೃತಿಯ ಅವಶಿಷ್ಟ್ಯಗಳನ್ನು ಇಂದಿಗೂ ಕಾಣಬಹುದು.

ಪ್ರತಿಯೊಂದು ಬುಡಕಟ್ಟು ಜನರು ವ್ಯತ್ಯಸ್ಥವಾದ ಪದ್ಧತಿಗಳನ್ನು, ಕುಣಿತಗಳನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಅವರ ಕುಣಿತಗಳು ಕೇವಲ ಕಲೆಗಳಷ್ಟೇ ಅಲ್ಲದೆ ಬದುಕಿನ ರೀತಿಯೊಂದಿಗೆ ಹಾಸುಹೊಕ್ಕಾಗಿವೆ. ಅವರ ಬದುಕಿನ ಗುರಿಗಳನ್ನು ಸಾಧಿಸುವ ದೈನಂದಿನ ಬದುಕಿನ ಮುಖ್ಯ ಲಯದಲ್ಲಿ ಇವು ಮಿಳಿತಗೊಂಡಿವೆ. ಬುಡಕಟ್ಟು ಜನರ ಉತ್ಸಾಹ, ಭರವಸೆ, ಭಯ, ನಿರೀಕ್ಷೆಗಳು ಭೌತಿಕ ಅಭಿವ್ಯಕ್ತಿಯ ಮೂಲಕ ಹೊರಹೊಮ್ಮುವ ಅನೇಕ ಕುಣಿತಗಳು ಕೇರಳ ಸಂಸ್ಕೃತಿಯ ಬಹುಮುಖ್ಯ ಭಾಗವೇ ಆಗಿದೆ.

ಸಾಮಾನ್ಯವಾಗಿ ಮೇಲ್ನೋಟಕ್ಕೆ ಇವರ ಕುಣಿತಗಳು ಸರಳ. ಅರ್ಥವಿಲ್ಲದ ಅಂಗಾಂಗಗಳ ಚಲನೆಯ ಮೂಲಕ ಅಭಿವ್ಯಕ್ತಿಗೊಳ್ಳುತ್ತದೆ. ಕೆಲವೊಮ್ಮೆ ದೇಹವನ್ನು ಅಲುಗಾಡಿಸುತ್ತಾ, ಕೈ ಚಪ್ಪಾಳೆ ತಟ್ಟುತ್ತಾ, ವಾದ್ಯ ಪರಿಕರಗಳನ್ನು ಬಾರಿಸುತ್ತಾ ಕುಣಿಯುವುದೂ ಇದೆ. ಕೆಲವೊಮ್ಮೆ ಒಂದೇ ರೀತಿಯಲ್ಲಿ ಕೈ, ಕಾಲುಗಳನ್ನು ಚಲಿಸುವ ಏಕತಾನತೆಯಿಂದ ಕೂಡಿರುವುದೂ ಇದೆ. ಕೆಲವೊಂದು ಚಲನೆಗಳಲ್ಲಿ ದೇಹದ ಎಲ್ಲಾ ಅಂಗಗಳನ್ನೂ ಒಳಗೊಳ್ಳುವಂತೆ ಅಂದರೆ ತಲೆ, ಸೊಂಟ, ತೋಳು, ಬೆರಳು, ಕಾಲು ಇತರ ಮಾಂಸಖಂಡಗಳನ್ನು ಚಲನೆಗೆ ಗುರಿಪಡಿಸುತ್ತಾ ಕುಣಿಯುವ ಕುಣಿತಗಳೂ ಇವೆ.

ಸಂಕೀರ್ಣವಾದ ಕೆಲವು ಕುಣಿತಗಳಲ್ಲಿ ಸೌಹಾರ್ದದ ಸಂಕೇತಗಳು, ಸಮೂಹದ ಭಾವನೆಗಳ ಲಯವನ್ನೇ ದೇಹದ ಚಲನೆಗಳಲ್ಲಿ ಅಭಿವ್ಯಕ್ತಿಸುತ್ತಾರೆ ಎಂದು ವ್ಯಾಖ್ಯಾನಿಸಿ ಕೊಳ್ಳುವುದಕ್ಕೂ ಆಸ್ಪದವಿದೆ. ಸಾಮಾನ್ಯವಾಗಿ ಕುಣಿತಗಳು ನಿಧಾನಗತಿಯಲ್ಲಿ ಪ್ರಾರಂಭವಾಗಿ ತಾಳ ವಾದ್ಯಗಳ ಸಂಗೀತದ ಲಯದ ನಡೆ ವೇಗವನ್ನು ಪಡೆಯುವುದರೊಂದಿಗೆ ಕುಣಿತದ ಉತ್ಕೃಷ್ಟ ಸ್ಥಿತಿಯೊಂದನ್ನು ತಲುಪುವ ರೀತಿಯಲ್ಲಿಯೂ ಇರುತ್ತದೆ. ಹೆಚ್ಚಾಗಿ ಶೌರ್ಯ ಸಾಹಸಗಳ ಭಾವಗಳನ್ನು ಅಭಿವ್ಯಕ್ತಿಸುವ ಕಲಾರೂಪವಿದು ಎಂದು ಸ್ಥೂಲವಾಗಿ ಹೇಳ ಬಹುದು.

ಕೆಲವೊಂದು ಬುಡಕಟ್ಟುಗಳಲ್ಲಿ ಕುಣಿತದ ಜೊತೆಗೆ ಲಯಬದ್ಧವಾದ ಹಾಡೂ ಇರುತ್ತದೆ. ಕೆಲವೊಮ್ಮೆ ಕುಣಿವವರೇ ಹಾಡುವ ರೀತಿಯಲ್ಲಿದ್ದರೆ ಮತ್ತೆ ಕೆಲವು ಕುಣಿತಗಳಲ್ಲಿ ಕುಣಿವ ಹಾಗೂ ಹಾಡುವ ಪ್ರತ್ಯೇಕ ಜನವರ್ಗದವರಿರುವುದೂ ಇದೆ. ಕೆಲವು ಕುಣಿತಗಳಿಗೆ ವಿಶೇಷವಾದ ವಾದ್ಯ ಪರಿಕರಗಳೇ ಇರುತ್ತವೆ. ಆದರೆ ‘ಚೆಂಡೆ’ ಸಾಮಾನ್ಯವಾಗಿ ಹೆಚ್ಚಿನ ಕುಣಿತಗಳಲ್ಲೂ ಬಿಟ್ಟಿರಲಾರದ ಒಂದು ವಾದ್ಯವೆನಿಸಿದೆ. ಕುಣಿತಗಾರರ ವೇಷಭೂಷಣಗಳು ನಗ್ನತೆಯಿಂದ ತೊಡುಗೆಯವರೆಗೂ ಇರುತ್ತದೆ. ಆಭರಣಗಳು ಬಣ್ಣಗಳಿಂದ ಆರಂಭವಾಗಿ ಥಳುಕಿನ ವಸ್ತುಗಳ ವರೆಗೂ ಇರುತ್ತದೆ.

ಎಲ್ಲಾ ಬುಡಕಟ್ಟು ಕಲಾ ರೂಪಗಳಂತೆ ಕೇರಳದ ಬುಡಕಟ್ಟು ಕಲಾರೂಪಗಳೂ ಸಹ ಅಪ್ರಜ್ಞಾಪೂರ್ವಕ ಹಾಗೂ ಆತ್ಮಸಂತೋಷದ ಪ್ರತೀಕಗಳಾಗಿವೆ. ಇದು ಸಹಜವಾದ ಮಾನವ ಸ್ವಭಾವದ ಅಂತರಂಗದ ನೇರ ಪ್ರಕಟಣೆಯಾಗಿರುತ್ತದೆ. ಕೇರಳದ ಪ್ರಮುಖ ಬುಡಕಟ್ಟು ನೃತ್ಯಗಳೆಂದರೆ ಎಲೆಲಕ್ಕರಡಿ, ಕಾಡರಂಕಳಿ, ಕುರುಂಬರ ಕಳಿ, ಪಣಿಯರ್‌ಕಳಿ, ಇಡಯರ್‌ಕಳಿ, ಮುಡಿಯಾಟ್ಟಮ್, ವೇಡರ್‌ಕಳಿ ಮೊದಲಾದವುಗಳು. ಇಲ್ಲಿ ‘ಕಳಿ’ ಎಂದರೆ ಆಟ ಎಂದರ್ಥ.

ಎಲೇಲಕ್ಕರಡಿ

ಇದು ಒಂದು ಸಮೂಹ ನೃತ್ಯ. ಶೌರ್ಯ, ಸಾಹಸಗಳನ್ನು ಪ್ರಕಟಿಸುವ ಈ ನೃತ್ಯದಲ್ಲಿ ಹೆಣ್ಣು, ಗಂಡು ಹಾಗೂ ಮಕ್ಕಳು ಸಮಾನವಾಗಿ ಭಾಗವಹಿಸುತ್ತಾರೆ. ಇದು ಮುಖ್ಯವಾಗಿ ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ಪ್ರದೇಶದಲ್ಲಿ ನೆಲೆಸಿರುವ ‘ಇರುಳರ್’ ಬುಡಕಟ್ಟಿನಲ್ಲಿ ಪ್ರಚಲಿತದಲ್ಲಿರುವ ಕುಣಿತ. ಈ ಕುಣಿತವು ತಮ್ಮ ಗುಡಿಸಲುಗಳ ಮೇಲೆ ಆಕ್ರಮಣ ಮಾಡುವ ಕ್ರೂರ ಕರಡಿಯೊಂದಿಗೆ ಹೋರಾಡುವ ರೂಪದಲ್ಲಿರುತ್ತದೆ. ಲಯಬದ್ಧವಾಗಿ ಹೆಜ್ಜೆ ಹಾಕುತ್ತಾ, ಏರು ಸ್ವರದಲ್ಲಿ ಶಬ್ದ ಮಾಡುತ್ತಾ, ಯುದ್ಧದ ಕೂಗುಗಳೊಂದಿಗೆ ಚರ್ಮ ವಾದ್ಯವನ್ನು ಬಾರಿಸುತ್ತಾ ಕುಣಿಯುವ ನೃತ್ಯವಿದು. ಕರಡಿಯೊಂದಿಗೆ ಹೋರಾಡುವ ವಿವಿಧ ಆಯಾಮಗಳನ್ನು ಹಾಗೂ ವಿವಿಧ ಹಂತಗಳನ್ನು ಈ ಕುಣಿತದ ಮೂಲಕ ತೋರಿಸ ಲಾಗುತ್ತದೆ.

ಕಾಡರ್‌ನೃತ್ತಮ್

ಕೊಚ್ಚಿಯ ಕಾಡು ಪ್ರದೇಶದಲ್ಲಿ ನೆಲೆಸಿರುವ ‘ಕಾಡರ್’ ಬುಡಕಟ್ಟು ಮಹಿಳೆಯರು ಮಾತ್ರ ಭಾಗವಹಿಸುವ ನೃತ್ಯವಿದು. ಬಟ್ಟೆಯ ತುದಿಯನ್ನು ಹಿಡಿದುಕೊಂಡು ಕೈಗಳನ್ನು ಸೊಂಟಕ್ಕೆ ಸೇರಿಸಿ ಹಿಡಿದುಕೊಂಡು ಅರ್ಧವೃತ್ತಾಕೃತಿಯಲ್ಲಿ ಲಯಬದ್ಧವಾಗಿ ಕುಣಿಯುವ ನೃತ್ಯವಿದು. ಸರಳವಾದರೂ ನಿಧಾನ ನಡೆಯುಳ್ಳ ಸುಂದರ ನೃತ್ಯವಿದು.

ಕುರುಂಬರ್ ನೃತ್ತಮ್

ವಯನಾಡು ಜಿಲ್ಲೆಯ ಗುಡ್ಡಗಾಡುಗಳಲ್ಲಿ ಬೇರೆ ಬೇರೆ ಬುಡಕಟ್ಟಿಗೆ ಸೇರಿದ ಜನವರ್ಗದವರಿದ್ದಾರೆ. ಅವರಲ್ಲಿ ಪ್ರಮುಖರಾದವರು ಕುರುಂಬರ್ ಮತ್ತು ಕಟ್ಟುನಾಯಕರ್. ಈ ಜನವರ್ಗದವರಲ್ಲಿ ಪ್ರಚಲಿತವಿರುವ ನೃತ್ಯವಿದು. ಇದೊಂದು ವಿಶಿಷ್ಟವಾದ ವಿವಾಹ ನೃತ್ಯ. ಮದುವೆಗೆ ಪೂರ್ವದಲ್ಲಿ ವಧು-ವರರ ಸಂಬಂಧಿಕರು ಸೇರಿ ನೃತ್ಯ ಮಾಡುತ್ತಾರೆ. ಮದುವೆಯ ಬಳಿಕ ವಧೂವರರು ಈ ನೃತ್ಯ ಆಡುತ್ತಾರೆ. ಮದುವೆಯ ಕಾರ್ಯಕ್ರಮಗಳು ಮುಗಿದು ವರ ವಧುವಿನೊಂದಿಗೆ ತನ್ನ ಮನೆಗೆ ಹೋದಾಗ ಮತ್ತೆ ಕುಟುಂಬದ ಸದಸ್ಯರೊಡನೆ ಈ ನೃತ್ಯವನ್ನು ಪುನರಾವರ್ತಿಸುವುದು ಪದ್ಧತಿ.

ಕಾಣಿಕ್ಕರ್ ನೃತ್ತಮ್

ಕಾಣಿಕ್ಕರ್ ಜನರ ಸಮೂಹ ನೃತ್ಯವಿದು. ಇದೊಂದು ಆಚರಣ ರೂಪದ ನೃತ್ಯ. ನೃತ್ಯ ಮಾಡುವವರ ಹೆಜ್ಜೆಗಳು, ಚರ್ಮ ವಾದ್ಯದ ಬಡಿತ ಹಾಗೂ ಕೈಯ ಚಲನೆಗಳು ಏಕಕಾಲದಲ್ಲಿ ನಡೆಯುವುದು ಇದರ ವೈಶಿಷ್ಟ್ಯ.

ಪಣಿಯರ್ ಕಳಿ

ಪಣಿಯರ್ ಎಂದರೆ ವಯನಾಡು ಜಿಲ್ಲೆಯ ಬೆಟ್ಟಗಾಡುಗಳಲ್ಲಿ ನೆಲೆಸಿರುವ ಇನ್ನೊಂದು ಜನವರ್ಗ. ಇವರಲ್ಲಿನ ಗಂಡಸರು ಮಾಡುವ ನೃತ್ಯ ವಿಧಾನವಿದು. ಇದರಲ್ಲಿ ಸುಮಾರು ಎಂಟರಿಂದ ಹತ್ತು ಮಂದಿ ಗಂಡಸರು ಭಾಗವಹಿಸುತ್ತಾರೆ. ಪರಸ್ಪರ ಕೈ ಹಿಡಿದುಕೊಂಡು ವೃತ್ತಾಕಾರದಲ್ಲಿ ನಿಂತುಕೊಳ್ಳುತ್ತಾರೆ. ಸುತ್ತ ಬರುತ್ತ ತಾಳವಾದ್ಯಗಳಿಗೆ ಅನುಗುಣವಾಗಿ ಶರೀರವನ್ನು ಬಾಗಿಸುತ್ತಾ ಕುಣಿಯುತ್ತಾರೆ. ಇದರಲ್ಲಿ ಮುಖ್ಯವಾಗಿ ಬಳಸುವ ತಾಳವಾದ್ಯ ಗಳೆಂದರೆ ಕರು, ಪಾರ, ಉಡಕ್ಕು ಮೊದಲಾದವುಗಳು. ನೃತ್ಯದ ಗತಿ ತೀವ್ರವಾದಂತೆ ವೃತ್ತವನ್ನು ಹಿಗ್ಗಿಸುತ್ತ ಮತ್ತು ಕುಗ್ಗಿಸುತ್ತ ವಿಶಿಷ್ಟ ಶಬ್ದವನ್ನು ಮಾಡುತ್ತಾ ವೇಗವಾಗಿ ಸುತ್ತುತ್ತಾರೆ.

ಮಾನ್‌ಕಳಿ

ಈ ಬುಡಕಟ್ಟು ನೃತ್ಯದಲ್ಲಿ ಎರಡು ರೀತಿಗಳಿವೆ. ಒಂದು ವಿಧದ ಪ್ರಕಾರ ರಾಮಾಯಣದ ಸ್ವರ್ಣ ಜಿಂಕೆಯ ಸನ್ನಿವೇಶವನ್ನು ಪ್ರದರ್ಶಿಸುತ್ತಾರೆ. ಸ್ವರ್ಣ ಜಿಂಕೆಯ ರೂಪದಲ್ಲಿ ಬಂದ ಮಾರೀಚನ ನೃತ್ಯ ಹಾಗೂ ಅದರಿಂದ ಆಕರ್ಷಿತಳಾಗುವ ಸೀತೆಯ ಚಲನವಲನಗಳನ್ನು ನೃತ್ಯದಲ್ಲಿ ಬಿಂಬಿಸುವ ಮೂಲಕ ಇದನ್ನು ಪ್ರದರ್ಶಿಸಲಾಗುತ್ತದೆ.

ಇನ್ನೊಂದು ರೀತಿಯಲ್ಲಿ ಒಬ್ಬ ಜಿಂಕೆಯ ಪಾತ್ರವನ್ನು ವಹಿಸಿದರೆ ಇನ್ನೊಬ್ಬ ಬೇಟೆಗಾರನ ಪಾತ್ರವನ್ನು ವಹಿಸುತ್ತಾನೆ. ಜಿಂಕೆ ಜಿಗಿಯುತ್ತಾ ಸುತ್ತು ಬರುತ್ತದೆ. ಬೇಟೆಗಾರ ಜಿಂಕೆಯನ್ನು ಲಕ್ಷ್ಯವಾಗಿರಿಸಿ ಹಿಂಬಾಲಿಸುತ್ತಾ ಕೈಯಲ್ಲಿ ಹಿಡಿದಿರುವ ಮರದ ತುಂಡೊಂದನ್ನು ಬಾಣದಂತೆ ಝಳಪಿಸುತ್ತಾನೆ. ಇಡೀ ನೃತ್ಯ ಕರ್ಕಶವಾದ ವಾದ್ಯ ಪರಿಕರಗಳ ಬಳಕೆಯೊಂದಿಗೆ ನಡೆಯುತ್ತದೆ.

ಪರ್ವಳ್ಳಿ ಕಳಿ

ತಿರುವಾಂಕೂರಿವ ದಟ್ಟಾರಣ್ಯ ಪ್ರದೇಶದಲ್ಲಿ ವಾಸವಾಗಿರುವ ಬುಡಕಟ್ಟು ಜನರ ಕುಣಿತವಿದು. ಇದರಲ್ಲಿ ಹೆಣ್ಣು ಗಂಡು ಸಮಾನವಾಗಿ ಭಾಗವಹಿಸುತ್ತಾರೆ. ಬೆನ್ನು, ಭುಜಗಳನ್ನು ಪರಸ್ಪರ ತಾಗಿಸಿ ಕೆ ಕೈ ಹಿಡಿದುಕೊಂಡ ಭಂಗಿಯಲ್ಲಿ ನೃತ್ಯ ಮಾಡುತ್ತಾರೆ. ನೃತ್ಯದ ಗತಿ ತೀವ್ರವಾಗುತ್ತಿದ್ದಂತೆ ಹೆಣ್ಣು ಗಂಡುಗಳು ತಮ್ಮ ಸ್ಥಾನಗಳನ್ನು ವಿಸ್ಮಯಕಾರಿ ಎನಿಸುವಷ್ಟು ತೀವ್ರಗತಿಯಲ್ಲಿ ಬದಲಾಯಿಸುತ್ತಾರೆ. ಗುಂಪಿನ ಎಲ್ಲರೂ ಹಾಡುತ್ತಾರೆ. ಹಿಡಿದ ಕೈಗಳನ್ನು ವಾದ್ಯಗಳ ಧ್ವನಿಗಳಿಗೆ ಹೊಂದಿಕೆಯಾಗುವಂತೆ ಚಲಿಸುವುದರ ಮೂಲಕ ನೃತ್ಯಕ್ಕೆ ಆಕರ್ಷಣೆ ಯನ್ನು ಒದಗಿಸುತ್ತಾರೆ.

ಕೂರನ್‌ಕಳಿ

ಇದು ಮಾನ್‌ಕಳಿಯೊಡನೆ ಸಾದೃಶ್ಯವಿರುವ ಇನ್ನೊಂದು ನೃತ್ಯ. ಇಲ್ಲಿ ಒಬ್ಬ ಕರಡಿಯ ಪಾತ್ರವನ್ನು ನಿರ್ವಹಿಸಿದರೆ, ಮತ್ತೊಬ್ಬ ಅದನ್ನು ಬೇಟೆಯಾಡುವ ನಾಯಿಯ ಪಾತ್ರವನ್ನು ವಹಿಸುತ್ತಾನೆ. ಇಲ್ಲಿನ ಚಲನೆಗಳೆಲ್ಲ ತಾಳ ಲಯಬದ್ಧವಾಗಿರುತ್ತದೆ. ಇದು ನಡೆಯುತ್ತಿರುವಂತೆ ಇವರಿಬ್ಬರ ಸುತ್ತಲೂ ವೃತ್ತಾಕಾರದಲ್ಲಿ ನಿಂತು ಕೇಕೆ ಹಾಕುತ್ತಾ, ಕೈ ಚಪ್ಪಾಳೆ ತಟ್ಟುತ್ತಾ ಕುಣಿಯುತ್ತಿರುತ್ತಾರೆ.

ತವಳ ಕಳಿ

ಇದರಲ್ಲಿ ಬಹುಸಂಖ್ಯೆಯ ಹುಡುಗರು ಭಾಗವಹಿಸುತ್ತಾರೆ. ಕಪ್ಪೆಯಂತೆ ಕುಪ್ಪಳಿಸುತ್ತಾ ಸ್ಪರ್ಧಾತ್ಮಕವಾಗಿ ಆಡುವ ಆಟವಿದು.

ಎಡಯ ನೃತ್ತಮ್

ಕಾಡು ಕುರುಬರ ನೃತ್ಯವಿದು. ಇದರಲ್ಲಿ ಹೆಂಗಸರು ಹಾಗೂ ಗಂಡಸರು ಭಾಗವಹಿಸುತ್ತಾರೆ. ಒಬ್ಬ ಕುರುಬ ಹಾಡುತ್ತಾನೆ. ಅದನ್ನೇ ಇತರ ಹಿಮ್ಮೇಳದವರು ಅನುಕರಿಸುತ್ತಾರೆ. ಹಾಡು ಸಾಗುತ್ತಿರುವಂತೆ ಅವರಲ್ಲೊಬ್ಬ ಕುರುಬ ನಡುವೆ ಕುರಿಗಳನ್ನು ಓಡಿಸುವಂತೆ ವಿಶಿಷ್ಟ ಧ್ವನಿ ಮಾಡುತ್ತಾನೆ. ಅಷ್ಟರಲ್ಲಿ ಕುಣಿಯುವವರ ನಡುವಿನಿಂದ ಒಬ್ಬನು ಕ್ರೂರ ಪ್ರಾಣಿಯೊಂದರ ಧ್ವನಿಯನ್ನು ಜೋರಾಗಿ ಅನುಕರಿಸುತ್ತಾ ಕುರಿಯನ್ನು ಆಕ್ರಮಣ ಮಾಡುವಂತೆ ಸ್ವರ ಏರಿಸುತ್ತಾನೆ. ಗುಂಪಿನ ಇತರ ಕೆಲವು ಮಂದಿಗಳು ಕುರಿಯನ್ನು ಕದ್ದೊಯ್ಯಲು ಬಂದ ಕಳ್ಳರಂತೆ ಧ್ವನಿ ಮಾಡುತ್ತಾರೆ. ಗುಂಪಿನ ಇತರ ಕೆಲವು ಮಂದಿ ಕುರಿಯ ಭಯವನ್ನು, ರಕ್ಷಣೆಗಾಗಿ ಅದು ಅಳುವ ಧ್ವನಿಯನ್ನು ಅನುಕರಿಸುತ್ತಾ ಕುಣಿಯುತ್ತಾರೆ.

ಮುಡಿಯಾಟ್ಟಮ್

ಮುಡಿಯಾಟ್ಟಮನ್ನು ನೀಲಿಲ್ಯಾಟ್ಟಮ್ ಎಂದು ಕರೆಯಲಾಗುತ್ತದೆ. ಇದು ಹೆಂಗಸರು ಮಾತ್ರ ಭಾಗವಹಿಸುವ ನೃತ್ಯ ವಿಧಾನ. ನೃತ್ಯ ಮಾಡುವ ಹೆಂಗಸರು ಪುಟ್ಟ ಮರದ ತುಂಡೊಂದರ ಮೇಲೆ ನಿಂತಿರುತ್ತಾರೆ. ನಿಧಾನ ಗತಿಯಲ್ಲಿ ಚಲನೆ ಆರಂಭಿಸುತ್ತಾ ಸರಳವಾದ ದೈಹಿಕ ಚಲನೆಗಳನ್ನು ಮಾಡುತ್ತಾರೆ. ನೃತ್ಯವು ಉಚ್ಛ್ರಾಯ ಸ್ಥಿತಿಗೇರುತ್ತಿದ್ದಂತೆ ತಲೆಯನ್ನು ಆಕರ್ಷಕವಾಗಿ ಚಲಿಸುತ್ತಾರೆ. ಬಿಚ್ಚಿದ ಕೂದಲುಗಳನ್ನು ಕೆಳಗೆ ಹಾರಿ ಬಿಡುತ್ತಾ ಲಯಬದ್ಧ ವಾಗಿ ವೃತ್ತಾಕಾರವಾಗಿ ಸುತ್ತುತ್ತಾರೆ. ಈ ನೃತ್ಯಕ್ಕೆ ಕರು, ಮರಮ್, ಪಾರ, ಕೊಕ್ಕರೇ ಮೊದಲಾದ ವಾದ್ಯ ಪರಿಕರಗಳನ್ನು ಬಳಸುತ್ತಾರೆ.

ನಾಯರ್‌ಕಳಿ

ಇದು ಮಲಬಾರ್ ಮತ್ತು ವಯನಾಡ್ ಜಿಲ್ಲೆಗಳ ಬುಡಕಟ್ಟು ಜನರಲ್ಲಿ ಪ್ರಸಿದ್ಧ ವಾಗಿರುವ ನೃತ್ಯ. ಇದು ಮನರಂಜನೆಗಿಂತಲೂ ಹೆಚ್ಚು ಆಚರಣಾ ಸಂಬಂಧಿಯಾದ ನೃತ್ಯ. ಇದನ್ನು ಸಾಮಾನ್ಯವಾಗಿ ಮದುವೆ ಮೊದಲಾದ ಸಂದರ್ಭಗಳಲ್ಲಿ ಕುಲ ದೇವತೆಗಳಿಗೆ ಪೂಜೆಯ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ.

ದಪ್ಪು ಬಾರಿಸುವ ಕೊಳಲು ವಾದನ ಮಾಡುವ ಮೂಲಕ ನಾಯರ್‌ಕಳಿ ಪ್ರದರ್ಶನ ಆರಂಭಿಸುತ್ತಾರೆ. ಗಿಜಿಗುಡುವ ಕಾಲ್ಗೆಜ್ಜೆ ಕಟ್ಟಿ ಪ್ರದಕ್ಷಿಣಾಕಾರದಲ್ಲಿ ಹಾಗೂ ಅಪ್ರದಕ್ಷಿಣಾಕಾರ ವಾಗಿ ಚಲಿಸುತ್ತಾ ನೃತ್ಯ ಮಾಡುತ್ತಾರೆ. ಇದರ ನಡುವೆ ಆಗಾಗ ‘ಹೊಯ್ ಹೊಯ್’ ಎಂದು ಸದ್ದು ಮಾಡುತ್ತಾರೆ. ದಪ್ಪು ಮತ್ತು ಕೊಳಲನ್ನು ಮುಖ್ಯ ವಾದ್ಯೋಪಕರಣಗಳಾಗಿ ಬಳಸುತ್ತಾರೆ.

ಗಧಿಕ

ಇದು ವಯನಾಡು ಜಿಲ್ಲೆಯ ಅಡಿಯ ಬುಡಕಟ್ಟುಗಳು ಪ್ರದರ್ಶಿಸುವ ಒಂದು ಆರಾಧನಾ ನೃತ್ಯ. ಇದು ರೋಗ ನಿವಾರಣೆಗಾಗಿ ಮಾಡುವ ಆಚರಣೆ. ಸುಖ ಪ್ರಸವಕ್ಕಾಗಿಯೂ ಈ ನೃತ್ಯವನ್ನು ಪ್ರದರ್ಶಿಸುವುದಿದೆ.

ಗಧಿಕದ ಮುಖ್ಯ ಕಲಾವಿದ ಶಿವನನ್ನು ರೋಗ ನಿವಾರಣೆಗಾಗಿ ಮೊದಲು ಪ್ರಾರ್ಥಿಸುತ್ತಾನೆ. ದೇವರು ಸಿಟ್ಟಾಗಿರುವುದರಿಂದ ರೋಗಿ ಕಾಯಿಲೆಗೆ ತುತ್ತಾಗಿದ್ದಾನೆ ಎಂಬ ಕೇಂದ್ರ ಆಶಯದ ನೆಲೆಯಿಂದ ಈ ನೃತ್ಯ ಪ್ರದರ್ಶಿತವಾಗುತ್ತದೆ. ಇವರು ಪ್ರಾರ್ಥಿಸುವುದು ವಿಶಿಷ್ಟವಾದ ಉಪಭಾಷೆಯೊಂದರಲ್ಲಿ. ಇದು ಕನ್ನಡಕ್ಕೆ ಸಮೀಪವಾದ ಭಾಷೆ.

ಒಮ್ಮೆ ಶಿವ ಭೂಮಿಗೆ ಬಂದ. ಅವನನ್ನು ಭಕ್ತರು ಸುತ್ತುವರಿದರು. ಇತರ ದೇವ, ದೇವತೆಗಳು ಶಿವನ ಸಂಗಡ ಸೇರಿಕೊಂಡರು. ಅವರಲ್ಲಿ ಚಾಮುಂಡಿ, ಮಾಣಿಯಮ್ಮ, ಮಲಂಕಾಳಿ (ಶಿವೆ) ಮತ್ತು ಕರಿಮ್‌ಕಾಳಿ ಇದ್ದರು. ಅದೇ ವೇಳೆಗೆ ಇತರ ಕಲಾವಿದರು ವರ್ಣರಂಜಿತ ಉಡುಗೆಗಳನ್ನು ಧರಿಸಿ ವೃತ್ತಾಕಾರವಾಗಿ ನಿಂತು ದೇವಾಲಯದ ಆಕೃತಿ ರೂಪುಗೊಳ್ಳುವಂತೆ ಮಾಡುತ್ತಾರೆ. ಹೆಣ್ಣಿನ ವೇಷ ಧರಿಸಿದ ಪುರುಷರೂ ಶಿವನ ಅಪ್ಪಣೆಯ ಮೇರೆಗೆ ದೇವದೇವತೆಗಳನ್ನು ಸ್ವಾಗತಿಸುವರಂತೆ ನೃತ್ಯವಾಡುತ್ತಾರೆ.

ಗಧಿಕವನ್ನು ಸಾಮಾನ್ಯವಾಗಿ ಜೂನ್, ಜುಲೈ ತಿಂಗಳಲ್ಲಿ ಆಚರಿಸಲಾಗುತ್ತದೆ. ಕಲಾವಿದರನ್ನು ಮನೆ ಮನೆಗಳಿಗೆಲ್ಲ ಆಮಂತ್ರಿಸಿ ನೃತ್ಯವಾಡಿಸುತ್ತಾರೆ. ಹೀಗೆ ಆಹ್ವಾನದ ಮೇರೆಗೆ ನಡೆಯುವ ಈ ನೃತ್ಯಾಚರಣೆ ಸಾಮಾನ್ಯವಾಗಿ ನದಿಯ ತೀರದಲ್ಲಿ ನಡೆಯುತ್ತದೆ.

ಗೋದಾಮುರಿ

ಕೇರಳದ ಬುಡಕಟ್ಟು ಜನರು ಪೋಷಿಸಿಕೊಂಡು ಬಂದ ಅನೇಕ ಜಾನಪದ ಕಲೆಗಳಿವೆ. ಅವರು ಹೊಲಗಳಲ್ಲಿ ದುಡಿಮೆಯ ಸಂದರ್ಭದಲ್ಲಿ, ಮನೆಗಳಲ್ಲಿ ವಿರಾಮದ ವೇಳೆಯಲ್ಲಿ ಹಾಗೂ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಕುಣಿದು, ನೃತ್ಯವಾಡುವರು. ಉತ್ತರ ಕೇರಳದ ಮಲಯ ಜನವರ್ಗದವರಲ್ಲಿ ಪ್ರಚಲಿತವಿರುವ ನೃತ್ಯವೇ ‘ಗೋದಾಮುರಿ’. ಹಸುವಿನದೋ ಅಥವಾ ಇತರ ಯಾವುದಾದರೂ ರೂಪವನ್ನು ಕಂಗಿನ ಹಾಳೆಯಿಂದ ರಚಿಸಿ ಅದರ ಒಳಗೆ ಹೆಣ್ಣು ವೇಷ ತೊಟ್ಟ ಯುವಕ ಕುಳಿತುಕೊಳ್ಳುವನು. ಅವನ ಕುಣಿತಗಳಿಗೆ ಅನುಗುಣವಾಗಿ ಚೆಂಡೆ ಬಾರಿಸುವವನೂ ಭಸ್ಮ ಲೇಪಿಸಿದ ಒಂದಷ್ಟು ಮಂದಿ ಅವನ ಜೊತೆಗಿರುತ್ತಾರೆ. ಹಸು ಮನುಷ್ಯನಿಗೆ ಮಾಡುವ ಉಪಕಾರಗಳನ್ನು ಕುರಿತು ಹಾಡು ಹಾಡುವರು, ‘ಗೋದಾಮುರಿ’ ಆಡುವವರು ಕೃಷಿಕರ ಮನೆಗಳಿಗೆ ಮಾತ್ರವೇ ಹೋಗುವರು. ಇದು ಕೃಷಿ ಸಂಬಂಧಿಯಾದ ಒಂದು ಆಚರಣೆಯಾಗಿದೆ.

ವೇಡನ್‌ಪಾಡಲ್

ಜುಲೈ ಆಗಸ್ಟ್ ತಿಂಗಳುಗಳಲ್ಲಿ ಅಂದರೆ ಕರ್ಕಾಟಕ ಮಾಸದಲ್ಲಿ ಉತ್ತರ ಕೇರಳದಲ್ಲಿ ನಡೆಯುವ ಒಂದು ಆಚರಣೆ ‘ವೇಡನ್‌ಪಾಡಲ್’. ಒಬ್ಬ ಹುಡುಗ ಬೇಡನ ವೇಷ ತೊಟ್ಟು ಕೈಯಲ್ಲಿ ಬಿಲ್ಲು ಬಾಣಗಳನ್ನು ಹಿಡಿದುಕೊಂಡು ಮನೆ ಮನೆಗೆ ಬರುವನು. ಜೊತೆಗೆ ಕೊರಳಿಗೆ ಪುಟ್ಟದೊಂದು ಚೆಂಡೆಯನ್ನು ನೇತುಹಾಕಿಕೊಂಡು ಇನ್ನೊಬ್ಬನಿರುತ್ತಾನೆ. ಎಲ್ಲಾ ಮನೆಗಳವರು ಬೇಡನನ್ನು ಸ್ವಾಗತಿಸುವರು. ಕಾಡಿನಲ್ಲಿ ಬೇಡನು ಅನುಭವಿಸಬೇಕಾದ ಕಷ್ಟಗಳನ್ನು ವರ್ಣಿಸುವ ಹಾಡನ್ನು ಹಾಡುತ್ತಾ ಬರುವನು. ಬೇಡನು ಕಾಡು ಹಂದಿಯನ್ನು ಹುಡುಕುತ್ತಾ ಬಂದುದನ್ನು, ಅರ್ಜುನನ ಜೊತೆ ಯುದ್ಧ ಮಾಡಿ ಗೆದ್ದ ವಿಜಯಗಾಥೆಯನ್ನು, ಕೊನೆಗೆ ಶಿವನೇ ಬೇಡನ ರೂಪದಲ್ಲಿ ಬಂದುದನ್ನು ಹಾಡಿನ ರೂಪದಲ್ಲಿ ವರ್ಣಿಸುತ್ತಾ ನರ್ತಿಸುವನು. ಪುರಾಣೋಕ್ತವಾದ ‘ಕಿರಾತಾರ್ಜುನೀಯ’ ಪ್ರಸಂಗವೇ ಹಾಡಿನಲ್ಲಿರುವುದು ಸ್ಪಷ್ಟ. ಮನೆಗಳವರು ಊಟ ಹಾಗೂ ಇನ್ನಿತರ ಅಡುಗೆ ಸಾಮಾಗ್ರಿಗಳನ್ನು ದಾನವಾಗಿ ನೀಡುವರು. ಕರ್ಕಾಟಕ ತಿಂಗಳ ಮಳೆಗಾಲವು ಅತ್ಯಂತ ಕಷ್ಟದ ಹಾಗೂ ಬರಗಾಲದ ದಿನಗಳು. ಈ ಸಂದರ್ಭದಲ್ಲಿ ಸಂಪತ್ತು, ಸಮೃದ್ದಿಗಳನ್ನು ಹಾರೈಸುತ್ತಾ ಬೇಡನ ವೇಷದ ಹಾಡುಗಾರ ಮನೆ ಮನೆಗಳಿಗೆ ಭೇಟಿ ನೀಡುವನು. ದಕ್ಷಿಣ ಕನ್ನಡದಲ್ಲಿ ಆಷಾಢ ಮಾಸದಲ್ಲಿ ಮನೆ ಮನೆಗಳಿಗೆ ಭೇಟಿ ನೀಡುವ ಆಟಕಳಿಂಜವನ್ನು ಹೋಲುವ ಸಂಪ್ರದಾಯವಿದು.

ಪ್ರತಿಯೊಂದು ಬುಡಕಟ್ಟು ಜನವರ್ಗಕ್ಕೂ ಅವರವರದಾದ ಕಲಾರೂಪಗಳಿವೆ. ವಿವಿಧ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಅವು  ಪ್ರದರ್ಶಿತಗೊಳ್ಳುತ್ತವೆ. ಪ್ರೇತ, ಪಿಶಾಚಿಗಳ ಪೀಡನೆಯಿಂದ ರಕ್ಷಣೆ ಪಡೆಯಲು, ದೋಷಗಳ ಪರಿಹಾರಾರ್ಥವಾಗಿ ಅನೇಕ ನೃತ್ಯಾಚರಣೆಗಳು ಪ್ರಚಲಿತದಲ್ಲಿವೆ. ಸಾಮಾನ್ಯವಾಗಿ ನೃತ್ಯಗಳಲ್ಲಿ ಭಾಗವಹಿಸುವವರು ಪುರುಷರು. ಮಹಿಳೆಯರು ಹಿಮ್ಮೇಳ ವಾದ್ಯಗಳಲ್ಲಿ ಹಾಗೂ ಹಾಡುಗಳಲ್ಲಿ ಸಹಕರಿಸುವರು.

ಜಾನಪದ ನೃತ್ಯ ಪ್ರಕಾರಗಳು

ಕೇರಳದಲ್ಲಿ ಅನೇಕ ಜನಪದ ನೃತ್ಯ ಪ್ರಕಾರಗಳಿವೆ. ಅವುಗಳಲ್ಲಿ ಕೆಲವು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿವೆ. ಏನಿದ್ದರೂ ಅವುಗಳಲ್ಲಿ ಬಳಸುವ ಸಂಗೀತ, ವೇಷ ಭೂಷಣಗಳಲ್ಲಿ ಪ್ರಾದೇಶಿಕವಾಗಿ ಜನರ ಮನೋಭಾವ ಹಾಗೂ ವೈಲಕ್ಷಣಗಳು ಪ್ರತಿಬಿಂಬಿ ಸುವುದನ್ನು ಕಾಣಬಹುದು. ಪ್ರಕೃತಿ ಮೌನವಾಗಿ ನುಗ್ಗಿಬಂದು ಈ ಕಲಾರೂಪಗಳಿಗೆ ಒಂದು ಆಕಾರವನ್ನು ಕೊಡುತ್ತದೆ. ಹಾಗೆಯೇ ಈ ಕಲೆಗಳಲ್ಲಿಯೇ ಬದುಕಿಗೂ ಒಂದು ಅಸ್ತಿತ್ವವನ್ನು ಕೊಡುತ್ತದೆ. ಸಾಮಾನ್ಯವಾಗಿ ಎಲ್ಲಾ ಜಾನಪದ ಕಲಾರೂಪಗಳು ಆರಾಧನೆಯ ಭಾಗ ವಾಗಿಯೋ, ಕೃಷಿ ಸಂಬಂಧಿಯಾಗಿಯೋ, ಹಬ್ಬ ಹರಿದಿನಗಳಲ್ಲೋ ಆಚರಣೆಯ ರೂಪದಲ್ಲಿ ಉಳಿದುಕೊಂಡು  ಬಂದಿವೆ. ಅವುಗಳ ಲೌಕಿಕ ದೃಷ್ಟಿಗಳೂ ಕೂಡಾ ಸಂದೇಹಾಸ್ಪದವಾಗಿಯೇ ಇವೆ. ಅವುಗಳನ್ನು ಸ್ಪಷ್ಟವಾಗಿ ಸಾಮಾಜಿಕ, ಧಾರ್ಮಿಕ, ರಾಜಕೀಯ ಇತ್ಯಾದಿಗಳ ನೆಲೆಯಿಂದ ವರ್ಗೀಕರಿಸುವುದು ಕಷ್ಟ. ಕೆಲವು ನೃತ್ಯ ರೂಪಗಳು ಗಂಡಸರಿಗೆ ಮಾತ್ರ ಸೀಮಿತವಾದರೆ ಮತ್ತೆ ಕೆಲವು ಮಹಿಳೆಯರಿಗೆ ಮಾತ್ರ ಸೀಮಿತವಾಗಿವೆ. ಹೆಣ್ಣು ಗಂಡು ಪರಸ್ಪರ ಜೊತೆಗೂಡಿ ಮಾಡುವ ಜಾನಪದ ನೃತ್ಯಗಳೂ ಇವೆ. ಹೆಚ್ಚಿನ ಜಾನಪದ ನೃತ್ಯಗಳು ಹಾಡಿನೊಂದಿಗೆ ಪ್ರದರ್ಶನಗೊಳ್ಳುತ್ತವೆ. ನೃತ್ಯ ಮಾಡುವ ಕಲಾವಿದರೇ ಹಾಡುವ ಕಲಾರೂಪಗಳೂ ಇವೆ. ಹಾಡುಗಾರರಾಗಿ ಪ್ರತ್ಯೇಕ ಗುಂಪು ಇರುವುದೂ ಇದೆ. ಕೆಲವು ನೃತ್ಯ ಪ್ರಕಾರಗಳಲ್ಲಿ ವಾದ್ಯ ಪರಿಕರಗಳನ್ನು ಮಾತ್ರ ಬಾಜಿಸಲಾಗುತ್ತದೆ. ಬಹುತೇಕ ನೃತ್ಯಗಳು ವೃತ್ತಾಕಾರದಲ್ಲಿ ನಿಂತು ಕೈ ಚಪ್ಪಾಳೆ ತಟ್ಟುವುದರ ಮೂಲಕ ಪ್ರದರ್ಶಿಸಲಾಗುತ್ತದೆ. ಕೆಲವೊಂದು ನೃತ್ಯಗಳಲ್ಲಿ ಕೈ ಚಪ್ಪಾಳೆಗೆ ಬದಲು ಪುಟ್ಟ ಕೋಲುಗಳನ್ನು ಹಿಡಿದುಕೊಂಡು ಬಡಿಯುವುದೂ ಇದೆ. ಪ್ರತಿಯೊಂದು ಜಾನಪದ ನೃತ್ಯಗಳಲ್ಲಿ ಬಳಸುವ ವೇಷಭೂಷಣಗಳು ಪ್ರಾದೇಶಿಕವಾಗಿ ಭಿನ್ನವಾಗಿರುತ್ತವೆ. ಕಲಾವಿದರ ವಾಕ್ಚಾತುರ್ಯ, ಅನಾಯಾಸವಾಗಿ ನೆರವೇರಿಸುವ ದೈಹಿಕ ಚಲನೆಗಳಲ್ಲಿ ಹೊರಹೊಮ್ಮುವ ಉತ್ಸಾಹ ನಿಜಕ್ಕೂ ಅದ್ಭುತವಾಗಿರುತ್ತದೆ. ಇಂತಹ ಅನೇಕ ಕಲಾರೂಪಗಳಲ್ಲಿ ಕಲಾವಿದರೆಂದು, ಪ್ರೇಕ್ಷಕರೆಂದು ಪ್ರತ್ಯೇಕ ಜನವರ್ಗವಿರುವುದಿಲ್ಲ. ಹೆಚ್ಚು ಕಡಿಮೆ ಎಲ್ಲಾ ಜಾನಪದ ನೃತ್ಯಗಳೂ ಸರಳ. ಆದರೆ ಆ ಸರಳತೆಯ ತಳದಲ್ಲಿಯೂ ಗಂಭೀರವಾದ ಕಲ್ಪನೆ ಮತ್ತು ನೇರವಾದ ಅಭಿವ್ಯಕ್ತಿಗೆ ಕಲಾತ್ಮಕ ಲೇಪವಿರುತ್ತದೆ. ಸುಮಾರು ಐವತ್ತಕ್ಕೂ ಮಿಕ್ಕಿದ ಸಂಖ್ಯೆಯ ಪ್ರಸಿದ್ದ ಜಾನಪದ ನೃತ್ಯ ಪ್ರಕಾರಗಳು ಕೇರಳದಲ್ಲಿವೆ. ಅವುಗಳಲ್ಲಿ ಕಳಿಯಾಟ್ಟಮ್, ಮುಡಿಯೇಟ್ಟ್, ಕೊಲಮ್‌ತುಳ್ಳಲ್, ಕೋಲ್ಕಳಿ, ರೂಪಕಳಿ, ವೇಲಕಳಿ, ಕಾಮಪಡವುಕಳಿ, ಕನ್ನಿಯಾರ್‌ಕಳಿ, ಪರಿಚುಮುಟ್ಟಂ ಕಳಿ, ಡಪ್ಪುಕಳಿ, ತುರುವಾಕಳಿ, ತಿರುವಾದಿರಕಳಿ ಮೊದಲಾದವು ಹೆಚ್ಚು ಪ್ರಸಿದ್ಧವಾದವುಗಳು.

ಸಂಘಕಳಿ

ಇದನ್ನು ಶಾಸ್ತ್ರಕಳಿ, ಚದಿರಕಳಿ, ವಟ್ರಕಳಿ ಎಂಬಿತ್ಯಾದಿ ಹೆಸರುಗಳಿಂದಲೂ ಕರೆಯಲಾ ಗುತ್ತದೆ. ಇದು ರಸಿಕತೆಗೆ ಹೆಸರಾದ ನಂಬೂದಿರಿ ಬ್ರಾಹ್ಮಣರು ಹರಕೆಯ ರೂಪದಲ್ಲಿ ನೆರವೇರಿಸುವ ಒಂದು ಸಮಾಜೋ ಧಾರ್ಮಿಕ ನೃತ್ಯ. ಪ್ರಾಚೀನ ಕೇರಳದ ಯುದ್ಧ ಕಸರತ್ತು ಹಾಗೂ ತರಬೆೇತಿಗಳೊಂದಿಗೆ ಸಂಘಕ್ಕಳಿ ನೇರ ಸಂಬಂಧ ಹೊಂದಿದಂತಿದೆ. ಇದರಲ್ಲಿ ಶಸ್ತ್ರಾಸ್ತ್ರಗಳ ಕೈಚಳಕ ಇತ್ಯಾದಿಗಳಿಗೆ ಪ್ರಾಮುಖ್ಯತೆಯಿದೆ. ಹೋರಾಟದ ಹಲವು ತಂತ್ರಗಳನ್ನು ಇದರಲ್ಲಿ ಕಾಣಬಹುದು.

ನಂಬೂದಿರಿ ಬ್ರಾಹ್ಮಣರಲ್ಲಿ ಸಂಘಕ್ಕಳಿಗೆ ಮಹತ್ವದ ಸ್ಥಾನವಿದೆ. ಶಸ್ತ್ರ, ಶಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡೇ ಕೇರಳವನ್ನು ಪ್ರವೇಶಿಸಿದ ನಂಬೂದಿರಿ ಬ್ರಾಹ್ಮಣರು ರಾಜ್ಯಾಧಿಕಾರ ಮತ್ತು ಧಾರ್ಮಿಕಾಧಿಕಾರಗಳನ್ನು ಸ್ವಾಧೀನಪಡಿಸಿಕೊಂಡರು. ಈ ಅಧಿಕಾರದ ರಕ್ಷಣೆಗಾಗಿ ಅವರು ಯುದ್ಧ ವಿದ್ಯೆಯಲ್ಲಿ ಪಳಗಿದ ಬ್ರಾಹ್ಮಣ ಯುವಕರನ್ನು ಸೇರಿಸಿ ಸಂಘಗಳನ್ನು ರಚಿಸಿದರು. ಅಂದು ದೇಶ ರಕ್ಷಣೆ ಹಾಗೂ ನಾಡಿನ ಕಾನೂನು ಪಾಲನೆಯೂ ಇದೇ ಸಂಘಗಳ ಜವಾಬ್ದಾರಿಯಾಗಿತ್ತು. ನಂಬೂದಿರಿಗಳ ಸಮಾಜ ರಕ್ಷಣೆ, ಅವರ ಮನೆಗಳಲ್ಲಿ ವಿಶೇಷ ಸಮಾರಂಭಗಳನ್ನು ನಡೆಸಿಕೊಡುವುದು, ವಿವಿಧ ವಿನೋದ ಕಾರ್ಯಕ್ರಮಗಳನ್ನು ನಡೆಸುವುದು ಇತ್ಯಾದಿಗಳೆಲ್ಲ ಈ ಸಂಘಗಳ ಅಧಿಕಾರ ವ್ಯಾಪ್ತಿಯಲ್ಲಿದ್ದವು. ಅನ್ನಪ್ರಾಶನ, ಉಪನಯನ, ಮದುವೆ, ಶ್ರಾದ್ಧ ಮೊದಲಾದ ಧಾರ್ಮಿಕ ಸಂದರ್ಭಗಳಷ್ಟೇ ಅಲ್ಲದೆ ಹುಟ್ಟುಹಬ್ಬ, ಷಷ್ಠ್ಯಬ್ದ, ದೇವಾಲಯಗಳ ಜಾತ್ರೆ ಮೊದಲಾದ ಸಂದರ್ಭಗಳಲ್ಲಿ ಸಂಘಗಳು ವಿನೋದ ಕಾರ್ಯಕ್ರಮ ಗಳನ್ನು ನಡೆಸಿಕೊಡುತ್ತಿದ್ದವು. ಸಂಘಗಳು ನಡೆಸಿಕೊಡುತ್ತಿದ್ದ ಒಂದು ನಿರ್ದಿಷ್ಟ ರೂಪದ ಈ ನೃತ್ಯ ಕಲೆಯೇ ಮುಂದೆ ಸಂಘಕಳಿ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಇಷ್ಟಾರ್ಥ ಸಿದ್ದಿಗಾಗಿ ಹರಕೆಯ ರೂಪದಲ್ಲಿ ಸಂಘಕಳಿ ನಡೆಸಲಾಗುತ್ತದೆ. ಹರಕೆಯಿಂದ ಕಾರ್ಯ ಕೈಗೂಡಿದಾಗಲೂ, ದೇವರಿಗೆ ಕೃತಜ್ಞತೆಯ ರೂಪದಲ್ಲಿಯೂ ಸಂಘಕಳಿ ನಡೆಯುತ್ತದೆ.

ತುಂಬಾ ಜನರು ಕೆಂಪು ರುಮಾಲನ್ನು ತಲೆಗೆ ಕಟ್ಟಿಕೊಂಡು ತೋಳಿಗೆ ಕೆಂಪು ಬಟ್ಟೆಯನ್ನು ಕಟ್ಟಿ ವೀರಾವೇಶದಿಂದ ಚೆಂಡೆ, ಮದ್ದಳೆ, ಜಾಗಟೆ ಮತ್ತು ಚಕ್ರತಾಳಗಳನ್ನು ಬಾರಿಸುತ್ತಾ ಮೆರವಣಿಗೆ ಹೊರಡುವುದರೊಂದಿಗೆ ಸಂಘಕಳಿ ಆರಂಭವಾಗುತ್ತದೆ. ನೃತ್ಯದಲ್ಲಿ ಅನೇಕ ಆಚರಣೆಗಳಿವೆ. ಪೂಜೆ, ದೇವತಾ ಸ್ತುತಿ, ನೃತ್ಯ, ವಿನೋದ ಮೊದಲಾದ ಹಂತಗಳಿವೆ. ಅವು ಗಳನ್ನು ಕೊಟ್ಟಿಚ್ಚಗಂಪೂಗಳ್, ಕೊಟ್ಟಯಾರ್ಕಲ್, ಪಾನ, ವೆಳಚ್ಚಪಾಡ್, ನಲುಪಾಚಮ್, ಸ್ಲೋಕಮ್, ನೀತುವಾಯಿನಂ, ಕಂಡಪ್ಪಾನ್‌ಪ್ಪುರಪ್ಪಾಡ್, ಪೊಲಿ ಕೈಮನೋತಿಕ ಸಂವಾದಮ್, ಪರದೇಸಿಪ್ಪರಪ್ಪ್ರಾಡ್ ಹೀಗೆ ಅನೇಕ ಹೆಸರಿನ ಆಚರಣಾ ಹಂತಗಳಿವೆ. ಕುಡಮೆಡುಪ್ಪು ನೃತ್ಯದ ಕೊನೆಯ ಹಂತ. ಇದು ಹೋರಾಟದ ಸಾಮರ್ಥ್ಯವನ್ನು ಪ್ರಕಟಿಸುವ ನೃತ್ಯದ ಭಾಗ. ಇಬ್ಬಿಬ್ಬರು ವೇದಿಕೆಗೆ ಬಂದು ನಮಸ್ಕರಿಸಿ ಖಡ್ಗ ಝಳಪಿಸುವುದು ಹಾಗೂ ಇನ್ನಿತರ ಆಯುಧಗನ್ನು ಬಳಸುವ ತಂತ್ರಗಾರಿಕೆಯನ್ನು ಪ್ರದರ್ಶಿಸುವರು.

ಮನೆಯ ಮುಂಭಾಗದಲ್ಲಿ ಸಂಘಕ್ಕಳಿ ನಡೆಯುವ ಪ್ರತ್ಯೇಕ ಜಾಗವನ್ನು ನಿರ್ಮಿಸುತ್ತಾರೆ. ಅದರ ಸುತ್ತಲೂ ನೋಡುಗರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಸಂಘಕ್ಕಳಿ ನಡೆಯುವ ಜಾಗದಲ್ಲಿ ಸ್ವಲ್ಪ ಎತ್ತರವಾಗಿ ನಿರ್ಮಿಸಿದ ವೇದಿಕೆಯಲ್ಲಿ ಭತ್ತ ತುಂಬಿದ ಕಳಸಿಗೆ (ನಿರಪರ)ಯನ್ನಿಟ್ಟು ಅದರಲ್ಲಿ ತೆಂಗಿನ ಹೂವಿನ ಗೊನೆಯನ್ನು ಇರಿಸುತ್ತಾರೆ. ಅದರ ಸಮೀಪದಲ್ಲಿಯೇ ಅಷ್ಟಮಂಗಲ್ಯಂ ಇರಿಸುತ್ತಾರೆ. ಅಷ್ಟಮಂಗಲ್ಯಂ ಎಂದರೆ ಎಂಟು ಬಗೆೆಯ ಮಂಗಳ ವಸ್ತುಗಳು – ಅಂದರೆ ಅಕ್ಕಿ, ಭತ್ತ, ಮಡಿಬಟ್ಟೆ, ಕನ್ನಡಿ, ಕುಂಕುಮ, ಕಾಡಿಗೆ, ಗ್ರಂಥ ಮತ್ತು ಚಿನ್ನ. ಇವುಗಳ ಜೊತೆಗೆ ದಶಪುಷ್ಪಗಳನ್ನು ಇರಿಸುತ್ತಾರೆ. ದಶಪುಷ್ಪಗಳೆಂದರೆ ಕರುಗ (ಗರಿಕೆ), ಕೃಷ್ಣ ಕಾಂತಿ, ಪೂವಕುರಂನಿಲ, ಕೈದೋನ್ನಿ, ಮುಯಲ್ ಚೆವಿಯನ್, ಮೂಕ್ಕೂಟ್ಟಿ, ನೀಲಪುವ, ಉಳಿಂದ್, ಚರೂಳ್, ತಿರುಂತಳಿ. ಅಲ್ಲದೆ ಬಾಳೆಹಣ್ಣಿನ ಗೊನೆ, ವೀಳ್ಯೆದೆಲೆ, ಅಡಿಕೆ, ತೆಂಗಿನಕಾಯಿ, ಹಾಲೆಮರದ ಕೊಂಬೆ ಇತ್ಯಾದಿಗಳನ್ನು ಇರಿಸುವರು. ಜರಿವಸ್ತ್ರ ಮತ್ತು ತೋರಣಗಳಿಂದ ವೇದಿಕೆಯನ್ನು ಅಲಂಕರಿಸುತ್ತಾರೆ. ವೇದಿಕೆಯ ಇಕ್ಕೆಲಗಳಲ್ಲಿ ಹಾಡುಗಾರರು ಕುಳಿತುಕೊಳ್ಳುವರು.

ಹಿಂದೆ ಸಂಘಕ್ಕಳಿಯ ಸಂಘಗಳು ಹದಿನೆಂಟು ಇದ್ದವು ಎಂದು ಮಣಿಪ್ರವಾಳ ಸಾಹಿತ್ಯ ಕೃತಿಯಾದ ಚಂದ್ರೋತ್ಸವದಲ್ಲಿ ಹೇಳಿದೆ. ಆ ಹದಿನೆಂಟು ಸಂಘಗಳು ಮುಂದೆ ಮೂವತ್ತೆರಡಾದವು. ಆದರೆ ಇಂದು ಒಂದೇ ಸಂಘಕ್ಕೆ ಸಂಘಕಳಿ ನಡೆಸಲು ಸಾಧ್ಯವಿಲ್ಲದ ಸ್ಥಿತಿ ಇದೆ. ಬೇರೆ ಬೇರೆ ಸಂಘಗಳ ಕಲಾವಿದರನ್ನು ಸೇರಿಸಿ ಸಂಘಕಳಿಗಳು ಅಪರೂಪವಾಗಿ ನಡೆಸುವುದಿದೆ. ನಂಬೂದಿರಿ ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿದ್ದ ಈ ಕಲೆಯು ಇಂದು ಕ್ಷತ್ರಿಯರನ್ನು ನಾಯನ್ಮಾರರನ್ನೂ ಸೇರಿಸಿ ಪ್ರದರ್ಶಿಸಲಾಗುತ್ತದೆ.