ತೀಯಾಟ್ಟಂನಲ್ಲಿ ಬಹುಮುಖ್ಯವಾದದ್ದು ವಿಷ್ಣುಮೂರ್ತಿ ದೈವದ ತೀಯಾಟಂ. ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಹಾಗೂ ಉತ್ತರ ಕೇರಳದಲ್ಲಿ ಆಚರಣೆಯಲ್ಲಿರುವ ಗ್ರಾಮೀಣ ಆರಾಧನ ಪದ್ಧತಿಯಿದು. ಇದನ್ನು ‘ಒತ್ತೆಕೋಲ’ ಎಂದೂ ಕರೆಯುತ್ತಾರೆ. ಶ್ರೀಹರಿಯ ಹತ್ತು ಅವತಾರಗಳಲ್ಲಿ ಒಂದಾದ ನರಸಿಂಹ ಅವತಾರಕ್ಕೆ ಸಂಬಂಧಿಸಿದ ಆರಾಧನೆಯಿದು. ಹಿರಣ್ಯಾಕ್ಷನನ್ನು ವಧಿಸಿದ ಬಳಿಕ ಅವನು ಮಾಡಿದ ಅನ್ಯಾಯದಿಂದ ಕೆರಳಿ ಕೋಪಗೊಂಡ ನರಸಿಂಹನು ರಾಕ್ಷಸರಿಗೆ ವರವನ್ನೀಯುವ ಹರ, ಬ್ರಹ್ಮ, ಇಂದ್ರಾದಿಗಳ ಮೇಲೂ ಧಾಳಿ ಮಾಡುತ್ತಾನೆ. ಆತ ಕೈಲಾಸಕ್ಕೆ ಧಾಳಿಯಿಟ್ಟಾಗ ಆತನ ಉಗ್ರ ಸ್ವರೂಪವನ್ನು ಕಂಡು ಬೆದರಿದ ಶಿವನು ಆತನ ದಾರಿಗಡ್ಡವಾಗಿ ತನ್ನ ಹಣೆಗಣ್ಣಿನಿಂದ ಕೆಂಡದ ರಾಶಿಯನ್ನು ಸೃಷ್ಟಿಸಿ ತಪ್ಪಿಸಿಕೊಳ್ಳುತ್ತಾನೆ. ಇದಿರಾಗಿ ಬಂದ ಕೆಂಡದ ರಾಶಿಯನ್ನು ವೈರಿಯೆಂದು ಬಗೆದು ನರಸಿಂಹನು ಅದನ್ನು ಸಂಪೂರ್ಣವಾಗಿ ನಾಶ ಮಾಡುವನು. ಈ ಕತೆಯನ್ನು ಸಂಕೇತಿಸುವ ರೀತಿ ಒತ್ತೆಕೋಲದ ಆರಾಧನಾ ಪದ್ಧತಿಯಿರುತ್ತದೆ.

ವಿಷ್ಣುಮೂರ್ತಿಯಾಗಿ ವೇಷ ಧರಿಸಿದ ವ್ಯಕ್ತಿ ಕೆಂಡದ ರಾಶಿಯನ್ನು ತುಳಿಯುವ ಅದನ್ನು ನಾಶ ಮಾಡುವ ಆಟದ ರೂಪದಲ್ಲಿ ಕುಣಿತವಿರುತ್ತದೆ. ಹಾಲು ಒಸರುವ ಮರದ ಕಟ್ಟಿಗೆಯನ್ನು ಕೂಡಿ ಹಾಕಿ ಬೆಂಕಿ ಉರಿಸಿ ಬೃಹದಾಕಾರದ ಕೆಂಡದ ರಾಶಿಯನ್ನು ಸಿದ್ಧಪಡಿಸುತ್ತಾರೆ. ನಿಗಿ ನಿಗಿ ಉರಿಯುವ ಕೆಂಡದ ರಾಶಿಯ ಮೇಲೆ ವಿಷ್ಣುಮೂರ್ತಿ ವೇಷ ಧರಿಸಿದ ವ್ಯಕ್ತಿ ಹತ್ತುವುದು, ಹಾರುವುದು, ಬೀಳುವುದು ಇತ್ಯಾದಿಗಳನ್ನು ಮಾಡುತ್ತಾನೆ. ಒಂದು ರೀತಿಯಲ್ಲಿ ಬೆಂಕಿಯ ಜೊತೆಗಿನ ಆಟ. ಅದಕ್ಕೆ ತೀಯಾಟ  (ಬೆಂಕಿಯಾಟ) ಎಂದು ಹೆಸರು ಬಂದಿರಬೇಕು. ಬೆಂಕಿ ವೇಷ ಧರಿಸಿದವನನ್ನು ಸುಡದೇ ಇರುವುದನ್ನು ನೋಡಿದ ಭಕ್ತರು ತನ್ಮಯತೆಯಿಂದ ನೋಡಿ ಕೃತಾರ್ಥ ಭಾವವನ್ನು ಪಡೆಯುತ್ತಾರೆ. ವೈಷ್ಣವರ ಆರಾಧನಾ ಪದ್ಧತಿಗಿಂತ ತೀರಾ ಭಿನ್ನವಾದ ಇದು ಪ್ರಾಚೀನ ದೇಸೀ ರೂಪದ ಆರಾಧನಾ ಪದ್ಧತಿ ಎಂದು ಹೇಳಬಹುದು.

ಭದ್ರಕಾಳಿಪಾಟ್

ದೇವರ ಸಂತೃಪ್ತಿಗಾಗಿ ಬ್ರಾಹ್ಮಣರ ಹಾಗೂ ಕ್ಷತ್ರಿಯರ ಕುಟುಂಬಗಳಲ್ಲಿ ಕೆಲವು ದೇವಾಲಯಗಳಲ್ಲಿ ನಡೆಸುವ ಒಂದು ಕಾಳಿ ಸೇವೆ ಭದ್ರಕಾಳಿಪಾಟ್. ಅನೇಕ ದಿನಗಳ ಕಾಲ ನಡೆಯುವ ಈ ಸೇವೆಯ ಅಂತ್ಯ ನೃತ್ಯದ ಮೂಲಕವೇ. ವೀಳ್ಯೆದೆಲೆ, ಅಕ್ಕಿಹಿಟ್ಟು, ಹೂ ಮೊದಲಾದವುಗಳಿಂದ ನೆಲದಲ್ಲಿ ಕಾಳಿಯ ರೂಪವನ್ನು ಬರೆಯುವರು. ಪ್ರತಿದಿನ ಪೂಜೆಯ ಕೊನೆಗೆ ಬರೆದುದನ್ನು ಮಾಯಿಸಿ ತೀಯಾಟ (ಬೆಂಕಿಯಾಟ)ವನ್ನು ನಡೆಸುವರು. ತೀಯಾಟ ವನ್ನು ನಡೆಸಿಕೊಡುವವನು ದೇಹಕ್ಕೆ ಮಸಿಯನ್ನು ಬಳಿದುಕೊಳ್ಳುವನು. ತಲೆಯಲ್ಲಿ ಗೂಳಿಯ ಚಿತ್ರವಿರುವ ಕಿರೀಟವನ್ನು, ಕೂದಲನ್ನು ಕಟ್ಟಿಕೊಳ್ಳುವನು. ಕಾಳಿ ದಾರಿಕಾಸುರನನ್ನು ವಧಿಸಿದ ಕತೆಯನ್ನು ನೃತ್ಯದ ಮೂಲಕ ಆಡಿ ತೋರಿಸುವನು. ಕಾಳಿ ಸೇವೆ ಮಾಡುವ ಇತರ ಎರಡು ರೂಪಗಳು ಪಾನ ಮತ್ತು ಕಣ್ಯಾರ್‌ಕಳಿ. ಕಣ್ಯಾರ್ ಕಳಿಯಲ್ಲಿ ನರ್ತಕನು ದೀಪದ ಸುತ್ತಲೂ ಮೂರು ದಿವಸ ಸಂಗೀತದೊಡನೆ ನೃತ್ತ ಮಾಡುವನು.

ಪಡೇನಿ

ದಕ್ಷಿಣ ಕೇರಳ ಹಾಗೂ ಮಧ್ಯ ತಿರುವಿದಾಂಕೂರು ಪ್ರದೇಶಗಳಲ್ಲಿ ಪ್ರಚಲಿತವಿರುವ ಒಂದು ಆರಾಧನ ಕಲೆಯಿದು. ‘ಪಡಶ್ರೇಣಿ’ ಎಂಬ ಪದವೇ ಪಡಯಣಿ, ಪಡಯನಿ ಆಗಿ ಪಡೇನಿ ಆಗಿರಬಹುದು ಎಂಬ ಅಭಿಪ್ರಾಯವೂ ಇದೆ (ವಿಷ್ಣುನಂಬೂದಿರಿ ಎಂ.ವಿ., ೨೦೦೦:೩೯೯). ಭದ್ರಕಾಳಿ ದೇವಾಲಯಗಳಲ್ಲಿ ಈ ಕಲೆಯು ಆಚರಣಾ ರೂಪದಲ್ಲಿದೆ. ದಾರಿಕಾಸುರನನ್ನು ವಧಿಸಿಯೂ ದೇವಿಯ ಕೋಪ ಶಮನವಾಗದೆ ಉಳಿಯಲು, ಆಕೆಯನ್ನು ಸಾಂತ್ವನ ಪಡಿಸಲು ಪರಮೇಶ್ವರ ಹಾಗೂ ಆತನ ಗಣಗಳು ವೇಷಕಟ್ಟಿ ಕುಣಿದುದರ ನೆನಪಿಗಾಗಿ ಈ ಕಲಾ ರೂಪ ಆಚರಣೆಗೆ ಬಂತೆಂಬುದು ಐತಿಹ್ಯ. ಕಂಗಿನ ಹಾಳೆಗಳ ಮುಖವಾಡ ವನ್ನು ಧರಿಸಿದ ವೇಷಗಳು ಕುಣಿದು ಮನರಂಜನೆ ನೀಡುತ್ತವೆ. ದೇವಿಯ ಪ್ರೀತ್ಯರ್ಥವಾಗಿ ಹಾಗೂ ಪಿಶಾಚಿಗಳ ಉಚ್ಛಾಟನೆಗಾಗಿ ಈ ಆಚರಣೆಯನ್ನು ನೆರವೇರಿಸಲಾಗುತ್ತದೆ. ಇದರಲ್ಲಿ ಭೀಕರ ರೂಪದ ವೇಷವಿಧಾನಗಳಿರುತ್ತವೆ. ಕಾಲನವೇಷ, ಭೈರವಿವೇಷ ಇತ್ಯಾದಿಗಳು ಭೀಕರವಾಗಿರುತ್ತವೆ. ಪರದೇಶಿಯಂತಹ ವೇಷಗಳು ಹಾಸ್ಯವನ್ನು ಪ್ರಕಟಿಸಿ ಮನರಂಜನೆಯನ್ನು ಒದಗಿಸುತ್ತವೆ. ಆರಾಧನೆ ಮತ್ತು ರಂಗಕಲೆಗಳ ಸಂದರ್ಭದಲ್ಲಿ ಅತ್ಯಂತ ಪ್ರಾಚೀನವೆನ್ನ ಬಹುದಾದ ಕಲಾರೂಪವಿದು. ಯಕ್ಷಗಾನ, ಕಥಕಳಿ, ತೆಯ್ಯಂ ಮೊದಲಾದ ಕಲಾರೂಪಗಳ ಪ್ರಾಚೀನ ರೂಪವೇ ಪಡೇನಿ ಎಂಬ ಅಭಿಪ್ರಾಯವೂ ಇದೆ (ಕೆ.ಎಂ. ರಾಘವನಂಬಿಯಾರ್, ೨೦೦೨ : ೬೬).

ಇತರ ಆರಾಧನಾ ಕಲೆಗಳು

ಮೇಲೆ ವಿವರಿಸಿದ ಕಲಾ ಪ್ರಕಾರಗಳಲ್ಲದೆ ಇನ್ನು ಅನೇಕ ಆರಾಧನಾ ಕಲೆಗಳು ಕೇರಳದ ದೇವಾಲಯಗಳಲ್ಲಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಗಮನಿಸಬಹುದು. ಪ್ರೋತ್ಸಾಹ ಅನೇಕ ಕಲೆಗಳು ಶಿಥಿಲಗೊಂಡು ಕಣ್ಮರೆಯಾಗಿವೆ. ಇನ್ನು ಕೆಲವು ಪಳೆಯುಳಿಕೆಗಳ ರೂಪದಲ್ಲಿ ಉಳಿದುಕೊಂಡಿವೆ. ಅಂತಹ ಕಲೆಗಳಲ್ಲಿ ಪಾಠಕಂ ಕೂಡಾ ಒಂದು. ಇದನ್ನು ಕೂತ್ತಿನ ಸರಳ ರೂಪ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಒಬ್ಬ ಕಲಾವಿದ ಪುರಾಣ ಕತೆಗಳನ್ನು ವ್ಯಾಖ್ಯಾನಿಸುವನು. ಇತ್ತೀಚಿನ ದಿನಗಳಲ್ಲಿ ಈ ಕಲೆಯ ಸಂಗೀತಾತ್ಮಕ ಗುಣವನ್ನು ಹರಿಕತೆ ಎಂಬ ಕಲಾ ಪ್ರಕಾರ ಸ್ವೀಕರಿಸಿದೆ. ಈ ಪ್ರಾಚೀನ ಕಲಾ ರೂಪದ ಆಧುನಿಕ ರೂಪವೇ ಕಥಾ ಪ್ರಸಂಗ. ಇದರಲ್ಲಿ ಕತೆಯನ್ನು ವ್ಯಾಖ್ಯಾನಿಸುವವನು ವಿವಿಧ ಮೂಲಗಳಿಂದ ಹಾಡುಗಳನ್ನು ಸಂಗ್ರಹಿಸಿ ಕತೆಯನ್ನು ವರ್ಣಿಸುವನು. ಪುರಾಣೇತರ ವಿಷಯಗಳೂ ಇಂದಿನ ಕಥಾಪ್ರಸಂಗಕ್ಕೆ ವಿಷಯಗಳಾಗಿವೆ.

ಮಧ್ಯಕಾಲೀನ ಕೇರಳದಲ್ಲಿ ದೇವಸ್ಥಾನದ ಜಾತ್ರೆ ಮೊದಲಾದ ಸಂದರ್ಭಗಳಲ್ಲಿ ನಡೆಸುವ ಒಂದು ನೃತ್ಯ ಕಲೆಯೇ ಕುರತ್ತಿಯಾಟಂ. ಶಿವ ಪಾರ್ವತಿಯರನ್ನು ಕುರಿತ ಕತೆಯನ್ನು ಇಬ್ಬರು ಕಲಾವಿದರು ಹಾಡು ಮತ್ತು ನೃತ್ಯಗಳ ಮೂಲಕ ಪ್ರದರ್ಶಿಸುವರು. ತಮ್ಮ ದೇವರುಗಳ ಗುಣಗಾನವನ್ನು ಇಬ್ಬರೂ ಸ್ಪರ್ಧಾತ್ಮಕವಾಗಿ ವರ್ಣಿಸುವರು. ಪೂರ್ವದಲ್ಲಿ ಕುರತ್ತಿಯ ಸ್ತ್ರೀಯರು ಮಾತ್ರ ಪ್ರದರ್ಶಿಸುತ್ತಿದ್ದ ಕಲಾ ರೂಪವಾಗಿದ್ದಿರಬೇಕು. ಈಗ ಪುರುಷರು ಸ್ತ್ರೀ ವೇಷ ಧರಿಸಿ ಶಿವನ ಮತ್ತು ವಿಷ್ಣುವನ್ನು ಪ್ರತಿನಿಧಿಸುವರು.

ವಾದ್ಯೋಪಕರಣಗಳನ್ನೇ ಮುಖ್ಯವಾಗಿರಿಸಿದ ಅನೇಕ ಆರಾಧನಾ ಕಲೆಗಳೂ ಕೇರಳ ದಲ್ಲಿವೆ. ಗೀತೆ, ಚೆಂಡೆಮೇಳ, ಪಂಚವಾದ್ಯ, ಪರಿಷವಾದ್ಯ, ತಾಯಂಬಕ, ನಾದಸ್ವರ ಮೇಳ ಮೊದಲಾದವುಗಳನ್ನು ಹೆಸರಿಸಬಹುದು. ದೇವವಾದ್ಯವಾದ ಢಕ್ಕೆಯನ್ನು ಬಾರಿಸುತ್ತಾ ದೇವರ ಮುಂದೆ ಆಲಾಪನೆ ಮಾಡವುದೇ ಗೀತೆ. ಈಗ ಗೀತಗೋವಿಂದದ ಶ್ಲೋಕಗಳನ್ನು, ಮುತ್ತು ಸ್ವಾಮಿ ದೀಕ್ಷಿತರ ಹಾಗೂ ತ್ಯಾಗರಾಜನ ಕೀರ್ತನೆಗಳನ್ನು ಆಲಾಪಿಸುವರು. ಸ್ವಾತಿತಿರುನಾಳರ ರಚನೆಗಳಿಗೂ ಇಲ್ಲಿ ಅವಕಾಶವಿದೆ. ಚೆಂಡೆ, ಕೊಂಬು, ವಾದ್ಯ, ಕೊಳಲು ಮೊದಲಾದ ವಾದ್ಯಗಳನ್ನು ಬಳಸಿದ ಮೇಳವು ತ್ರಿಶ್ಶೂರ್‌ಪೂರಂನಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ದೈವೀಶಕ್ತಿಯ ಪ್ರಕಟಣೆಯಾಗಿ ಈ ಮೇಳ ವಾದ್ಯವನ್ನು ಪರಿಗಣಿಸಲಾಗುತ್ತದೆ. ಇಗರ್ಜಿಗಳಲ್ಲಿ ಹುಟ್ಟು ಹಬ್ಬವನ್ನು ಆಚರಿಸುವಾಗ ಚೆಂಡೆ ಮೇಳವನ್ನು ಏರ್ಪಡಿಸುವುದಿದೆ. ಐದು ವಾದ್ಯ ಪರಿಕರಗಳನ್ನು ಉಪಯೋಗಿಸುವುದೇ ಪಂಚ ವಾದ್ಯಮೇಳ. ಅನೇಕ ಗಂಟೆಗಳವರೆಗೆ ಮೇಳಗಳ ವಾದನ ನಡೆಯುತ್ತಿರುತ್ತದೆ. ಆರೋಹಣ, ಅವರೋಹಣಗಳಲ್ಲಿ ಬಾರಿಸುತ್ತಾ ಈ ಚಂಡೆಮೇಳ ಸುದೀರ್ಘ ಅವಧಿಯವರೆಗೂ ಮುಂದುವರೆಯುತ್ತದೆ. ವೈಕಂದೇವಾಲಯದಲ್ಲಿ ಅಷ್ಟಮಿ ಮಹೋತ್ಸವದ ಹತ್ತನೆಯ ದಿವಸ ಪಂಚವಾದ್ಯವನ್ನು ಕೇಳಿದರೆ ಪಾಪ ವಿಮೋಚನೆ ಯಾಗುತ್ತದೆಂದು ನಂಬಿಕೆಯಿದೆ. ಇದಕ್ಕೆ ಸ್ವರ್ಗದಿಂ ದೇವತೆಗಳೂ ಇಳಿದು  ಬರುತ್ತಾ ರೆಂಬುದು ನಂಬಿಕೆ.

ದ್ವಾರಪಾಲಕರು, ದಿಕ್ಪಾಲಕರು, ಭೂತಗಣಗಳು ಮೊದಲಾದ ಉಪದೇವತೆಗಳಿಗಾಗಿ ರುವುದೇ ಪರಿಷವಾದ್ಯಮೇಳ, ತಾಯಂಬಕಂ ಕೇರಳದ ವಿಶಿಷ್ಟವಾದ ಒಂದು ವಾದ್ಯ ಪದ್ಧತಿ. ಪಂಚವಾದ್ಯಗಳಂತೆ ತಾಯಂಬಕ ಕೂಡಾ ದೀರ್ಘ ಕಾಲ ನಡೆಯುತ್ತದೆ. ದೇವಾಲಯಗಳ ಪೂಜೆಯ ವೇಳೆಗೆ ನಾದಸ್ವರ ಮೇಳ ನಡೆಯುತ್ತದೆ. ವಿವಾಹ ಸಂದರ್ಭಗಳಲ್ಲಿ ನಾದಸ್ವರ ಮೇಳ ನಡೆಸುವುದು ಮಂಗಳಕರವೆಂದು ಭಾವಿಸಲಾಗುತ್ತದೆ. ಮುಸಲ್ಮಾನರೂ ವಿಶೇಷ ಸಂದರ್ಭಗಳಲ್ಲಿ ನಾದಸ್ವರವನ್ನು ಏರ್ಪಡಿಸುವುದಿದೆ. ನಾದಸ್ವರ ಎಲ್ಲಾ ಜನವರ್ಗದವರಲ್ಲೂ ಪ್ರಚಾರದಲ್ಲಿರುವ ಕಲಾರೂಪ.

ಪಾಂಡಿತ್ಯ ಪ್ರದರ್ಶನದ ಮನರಂಜನ ಕಲೆಗಳು

ಪಾಂಡಿತ್ಯವನ್ನು ತಿಳಿಯಪಡಿಸುವ ಉದ್ದೇಶಕ್ಕಾಗಿ ರೂಪುಗೊಂಡ ಅನೇಕ ಕಲೆಗಳಿವೆ. ಇದರಲ್ಲಿ ಅಕ್ಷರಶ್ಲೋಕ ಪ್ರಮುಖವಾದುದು. ಇದರಲ್ಲಿ ಭಾಗವಹಿಸುವವರ ನೆನಪಿನ ಶಕ್ತಿಯನ್ನು ಹಾಗೂ ಪಾಂಡಿತ್ಯವನ್ನು ಒರೆಗೆ ಹಚ್ಚುವ ಕಲಾ ರೂಪವಿದು. ಅಕ್ಷರ ಕ್ರಮವನ್ನು ಅನುಸರಿಸಿ ಬರುವ ಸ್ಪರ್ಧೆ ಇದು. ವೃತ್ತಾಕಾರವಾಗಿ ಕುಳಿತು ಒಬ್ಬರು ಹೇಳುವ ಶ್ಲೋಕದ ಮೂರನೆಯ ಪಾದದ ಮೊದಲ ಅಕ್ಷರದಿಂದ ಆರಂಭವಾಗುವ ಶ್ಲೋಕವನ್ನು ಮುಂದಿನವರು ಹೇಳಬೇಕು. ಹೀಗೆ ಸರದಿಯಲ್ಲಿ ಬಂದಾಗ ಶ್ಲೋಕ ಹೇಳುವಲ್ಲಿ ವಿಫಲರಾದವರು ಸೋಲೊಪ್ಪಿ ಕೊಂಡು ಸ್ಪರ್ಧೆಯಿಂದ ನಿರ್ಗಮಿಸಬೇಕು. ಕೊನೆಯವರೆಗೂ ಸೋಲದೆ ಶ್ಲೋಕ ಹೇಳುವವರು ಗೆದ್ದು ಬಹುಮಾನಕ್ಕೆ ಅರ್ಹರಾಗುವರು. ಮಲಯಾಳಂ ಮತ್ತು ಸಂಸ್ಕೃತ ಶ್ಲೋಕಗಳನ್ನು ನೆನಪಿನಲ್ಲಿರಿಸಿಕೊಳ್ಳುವವರ ನಡುವೆ ಪ್ರಚಾರದಲ್ಲಿರುವ ಒಂದು ಮನರಂಜನೆ ಕಲೆ ಅಕ್ಷರ ಶ್ಲೋಕ. ತೃಶ್ಯೂರನ್ನು ಕೇಂದ್ರವಾಗಿರಿಸಿದ ಒಂದು ಅಕ್ಷರ ಶ್ಲೋಕ ಪರಿಷತ್ತು ಸ್ಥಾಪನೆಯಾಗಿ ಕಾರ್ಯಪ್ರವೃತ್ತವಾಗಿದೆ.

ಚವಿಟ್ಟು ನಾಟಕಂ

ಕೇರಳದ ಇಗರ್ಜಿಗಳ ಪೋಷಕರಿಂದ ಸೃಷ್ಟಿಸಿದ ಕಲಾರೂಪವೇ ‘ಚವಿಟ್ಟು ನಾಟಕಂ’. ಕಥಕಳಿಗೆ ಪರ್ಯಾಯವಾಗಿ ಕ್ರಿಶ್ಚಿಯನ್ ಪ್ರೇಕ್ಷಕರಿಗಾಗಿಯೇ ಕ್ರಿಶ್ಚಿಯನ್ ಧರ್ಮಾಧಿಕಾರಿಗಳು ಇದನ್ನು ಹುಟ್ಟು ಹಾಕಿದರು. ೧೭-೧೮ನೆಯ ಶತಮಾನದಲ್ಲಿ ಆರಂಭವಾದ ಈ ಕಲಾ ರೂಪಕ್ಕೆ ಪಾಶ್ಚಾತ್ಯ ಮಿಷನರಿಗಳ ನೆರವು ಲಭ್ಯವಾಗಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಅನುಗುಣವಾದ ಬೈಬಲ್‌ನ ಕತೆಗಳನ್ನು ರಂಗಕ್ಕೆ ಅಳವಡಿಸಿದ ಕಲಾ ಪ್ರಕಾರವಿದು. ಕಥಕಳಿಯಲ್ಲಿ ಪ್ರದರ್ಶಿಸುವ ಹಿಂದೂ ಪುರಾಣಗಳಿಗೆ ಬದಲಾಗಿ ಇಲ್ಲಿ ಬೈಬಲ್‌ನ ಕತೆಗಳನ್ನು ಪ್ರದರ್ಶಿಸಲಾಗುತ್ತದೆ. ತಮಿಳುನಾಡಿನಿಂದ ಬಂದ ಕ್ರಿಶ್ಚಿಯನ್ ವಿದ್ವಾಂಸರಾದ ಚಿನ್ನತಂಬಿಪಿಳ್ಳೆ ಮತ್ತು ವೇದನಾಯಕಂಪಿಳ್ಳೆ ಇವರಿಬ್ಬರು ಸೇರಿ ಮಟ್ಟಾಂಚೇರಿಯಲ್ಲಿ ಈ ಕಲೆಯನ್ನು ಆರಂಭಿಸಿದರು. ಕಥಕಳಿಯನ್ನು ಆಧರಿಸಿಯೇ ಇದು ಹುಟ್ಟಿಕೊಂಡಿತಾದರೂ ಇದು ಪಾಶ್ಚಾತ್ಯರ ಒಪೆರಾಕ್ಕೆ ಹೆಚ್ಚು ಋಣಿಯಾಗಿದೆ. ಚವಿಟ್ಟು ನಾಟಕದಲ್ಲಿ ಸಂಭಾಷಣೆಯೂ ಇದೆ. ಅಲ್ಲದೆ ನಟರೂ ಹಾಡುತ್ತಾರೆ. ಕಂಠ ಸಂಗೀತ, ವಾದ್ಯ ಸಂಗೀತ, ಸಂಭಾಷಣೆ ಇವೆಲ್ಲಕ್ಕೂ ಚವಿಟ್ಟು ನಾಟಕದಲ್ಲಿ ಪ್ರಾಮುಖ್ಯವಿದೆ. ಹಾಡು ಮತ್ತು ತಾಳಕ್ಕೆ ಅನುಗುಣವಾಗಿ ಮರದಿಂದ ತಯಾರಿಸಿದ ವೇದಿಕೆಯಲ್ಲಿ ತುಳಿದು ತಾಳ ಹಿಡಿಯುವುದೇ ಒಂದು ವಿಶೇಷ. ತುಳಿಯುವುದು ಅಭಿನಯಿಸುವುದು ಈ ಕಲೆಯ ಮುಖ್ಯ ಅಂಶ. ಹಾಗಾಗಿ ಇದಕ್ಕೆ ಚವಿಟ್ಟು ನಾಟಕಂ (ತುಳಿಯುವ ನಾಟಕ) ಎಂಬ ಹೆಸರು ಅನ್ವರ್ಥವಾಗಿದೆ. ಹಲಗೆಯ ಮೇಲೆ ತುಳಿದು ಕರ್ಣ ಕಠೋರವಾದ ಶಬ್ದವನ್ನು ಹೊರಡಿಸುವುದರಿಂದ ತಟ್ಟು ಪೊಳಿಪ್ಪನ್ (ವೇದಿಕೆ ಮುರಿವವನು) ಎಂಬೊಂದು ಹೆಸರೂ ಇದಕ್ಕಿದೆ. ಪ್ರೋತ್ಸಾಹ ಕಡಿಮೆಯಾದದ್ದರಿಂದ ಈಗ ಈ ಕಲೆ ಬಹುತೇಕ ಅಪ್ರತ್ಯಕ್ಷವಾಗುತ್ತಾ ಸಾಗಿದೆ. ಆದರೂ ಕೊಚ್ಚಿನ್ ಪ್ರದೇಶಗಳಲ್ಲಿ ಕೆಲವು ಚವಿಟ್ಟು ನಾಟಕ ಸಂಘಗಳು ಇಂದಿಗೂ ಇವೆ.

ಯುದ್ಧ ಕಲೆಗಳು

ವೇಲಕಳಿ

ವೇಲಕಳಿ ನಾಯರ್ ಸಮುದಾಯದ ಒಂದು ಯುದ್ಧ ನೃತ್ಯ. ಇದು ಪ್ರಾಚೀನ ಕೇರಳದ ಯುದ್ಧಕಲೆಯಲ್ಲಿನ ಕ್ರೌರ್ಯ ಮತ್ತು ಭೀಕರತೆಯನ್ನು ಪ್ರತಿಬಿಂಬಿಸುವ ಒಂದು ಕಲೆ. ಕೈಯಲ್ಲಿ ಖಡ್ಗವನ್ನು ಹಿಡಿದು ಝಳಪಿಸುತ್ತಾ ಇನ್ನೊಂದು ಕೈಯಲ್ಲಿ ಗುರಾಣಿಯಿಂದ ಸಂರಕ್ಷಿಸಿಕೊಳ್ಳುತ್ತಾ ಶಕ್ತಿ ಹಾಗೂ ಸಾಮರ್ಥ್ಯಗಳನ್ನು ಈ ಕಲೆಯ ಮೂಲಕ ಪ್ರದರ್ಶಿ ಸುತ್ತಾರೆ. ಈ ನೃತ್ಯವು ದುಷ್ಟರ ಶಿಕ್ಷೆ ಹಾಗೂ ಶಿಷ್ಟ ರಕ್ಷೆಯ ಆಶಯದಲ್ಲಿ ಕೊನೆಯಾಗುತ್ತದೆ.

ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಾಲಯ, ಹರಿಪಾಡ್‌ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಅಂಬಲಪುೞದ ಶ್ರೀಕೃಷ್ಣಸ್ವಾಮಿ ದೇವಾಲಯ, ಚೇರ್ತಲದ ಭಗವತೀ ದೇವಾಲಯ ಮೊದಲಾದ ದೇವಾಲಯಗಳಲ್ಲಿ ಪ್ರಚಲಿತದಲ್ಲಿರುವ ಒಂದು ಯುದ್ಧಕಲೆ ‘ವೇಲಕಳಿ’. ಕುರುಕ್ಷೇತ್ರದಲ್ಲಿ ನಡೆದ ಕೌರವ ಪಾಂಡವರ ಯುದ್ದವನ್ನು ನೆನಪಿಸುವ ಕಲೆ ವೇಲಕಳಿ. ವೇಲಕಳಿಯಲ್ಲಿ ಆರಂಭದಿಂದ ಅಂತ್ಯವರೆಗೆ ಒಂದೇ ಲಯದಲ್ಲಿ ವಾದ್ಯ ಬಾರಿಸುವರು. ಕಲಾವಿದರು ಮುಂಡು ಉಟ್ಟು ಸೊಂಟಕ್ಕೆ ಕೆಂಪು ಬಟ್ಟೆಯನ್ನು ಕಟ್ಟಿಕೊಳ್ಳುವರು. ತಲೆಗೆ ಕೆಂಪು ಟೋಪಿ ಧರಿಸುವರು. ಎಡಕೈಯಲ್ಲಿ ಖಡ್ಗ ಬಲಗೈಯಲ್ಲಿ ಗುರಾಣಿಯನ್ನು ಧರಿಸಿ ಕುಣಿಯುವರು. ಕೊಂಬು ವಾದ್ಯ, ಕೊಳಲು ದಪ್ಪು, ಮದ್ದಳೆ ಎಂಬೀ ವಾದ್ಯ ಪರಿಕರಗಳನ್ನು ವೇಲಕಳಿಯಲ್ಲಿ ಬಳಸಲಾಗುತ್ತದೆ. ಮೇಳದಲ್ಲಿ ಕಿರಿಯರು ಮುಂದಿನ ಸಾಲಿನಲ್ಲಿಯು ಹೆಚ್ಚು ವಯಸ್ಸಿನವರು ಅನುಕ್ರಮವಾಗಿ ಹಿಂದಿನ ಸಾಲುಗಳಲ್ಲಿ ನಿಲ್ಲುವರು. ಗೂಳಿ, ಕೋಳಿ ಮೊದಲಾದವುಗಳ ವೇಷಗಳನ್ನು, ಕಲಾವಿದರು ಹಿಂದೆ ತೊಟ್ಟುಕೊಳ್ಳುತ್ತಿದ್ದರು. ಇದು ಪ್ರಾಚೀನ ಕಾಲದಲ್ಲಿ ಪ್ರಾಣಿಗಳನ್ನು ಯುದ್ಧಗಳಲ್ಲಿ ಬಳಸುತ್ತಿದ್ದುದರ ಕುರುಹಾಗಿರಬಹುದು. ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ಒಂದು ಪುಟ್ಟ ಯುದ್ಧದ ದೃಶ್ಯ ಮುಂದುವರಿಯುತ್ತದೆ. ನೃತ್ಯ, ಜಿಗಿತ, ಮುಂದಕ್ಕೆ ಹಿಂದಕ್ಕೆ ಸಾಗುವ ಚಲನೆ ಎಲ್ಲವೂ ಒಂದು ಆಕರ್ಷಕ ದೃಶ್ಯವನ್ನು ಸೃಷ್ಟಿಸುತ್ತದೆ. ವೇಲಕಳಿಯ ಕಲಾವಿದರು ಸ್ವತಹ ಖಡ್ಗ ಝಳಪಿಸಿ ಯುದ್ಧದ ಸಾಮರ್ಥ್ಯವನ್ನು ಪ್ರಕಟಿಸುವರು. ಶ್ರೀಪದ್ಮನಾಭಸ್ವಾಮಿ ದೇವಾಲಯದ ಪೂರ್ವ ದ್ವಾರದಲ್ಲಿ ಪಂಚ ಪಾಂಡವರ ರೂಪವನ್ನು ಇರಿಸಿರುವ ಎದುರು ಭಾಗಳಲ್ಲಿ ವೇಲಕಳಿ ನಡೆಯುತ್ತದೆ.

ಕಳರಿಪಯಟ್ಟ್

ಉತ್ತರ ಕೇರಳದಲ್ಲಿ ಪ್ರಚಲಿತದಲ್ಲಿದ್ದ ಒಂದು ಯುದ್ಧಕಲೆ ಕಳರಿಪಯಟ್. ಇದನ್ನು ತುಳುನಾಡಿನ ಕಲೆ ಎಂದೂ ಕರೆಯಲಾಗುತ್ತದೆ. ಕೇರಳದಲ್ಲಿ ಇದನ್ನು ‘ತುಳುನಾಡ ಕಳರಿ’ ಎಂದೇ ಹೇಳಲಾಗುತ್ತದೆ. ತುಳುನಾಡಿನಲ್ಲಿ ಅನೇಕ ಕಳರಿಗಳು ಇದ್ದ ಬಗೆಗೆ ಐತಿಹ್ಯಗಳಿವೆ. ಒಂದು ಐತಿಹ್ಯದ ಪ್ರಕಾರ ಉಡುಪಿಯ ಪಾಂಗಾಳದ ಸಮೀಪ ನಾನಾಯರ್ ಕಳರಿಯಿತ್ತು. ಇಂದಿಗೂ ಅದರ ಅವಶೇಷಗಳಿವೆ. ಇದರ ಮೂಲಸ್ಥಾನ ಉಡುಪಿಯ ಸಮೀಪದ ದ್ರೋಣಂಪಳ್ಳಿ ಎಂದು ಐತಿಹ್ಯಗಳ ಮೂಲಕ ತಿಳಿದುಬರುತ್ತದೆ. ಈ ಕಲೆಯನ್ನು ಕುರಿತಂತೆ ಅನೇಕ ಐತಿಹ್ಯಗಳು ಪ್ರಚಾರದಲ್ಲಿವೆ. ಕಳರಿಪಯಟ್ಟನ್ನು ಸಮಗ್ರವಾಗಿ ಕರಗತ ಮಾಡಿಕೊಂಡಿರುವ ವೀರರಲ್ಲಿ ೧೬ ನೆಯ ಶತಮಾನದಲ್ಲಿ ಜೀವಿಸಿದ್ದ ತಚ್ಚೋಳಿಮೇಪ್ಪದ ಕುಞಾದೇವನೂ ಒಬ್ಬ. ಅನೇಕ ವಡಕ್ಕನ್ ಪಾಟ್ಟುಗಳಲ್ಲಿ ಈತನೇ ನಾಯಕನೂ ಹೌದು. ಪ್ರಾಚೀನ ಕಾಲದಲ್ಲಿ ಎಲ್ಲಾ ಊರುಗಳಲ್ಲಿಯೂ ಈ ಯುದ್ಧ ಕಲೆಯನ್ನು ಹೇಳಿಕೊಡುವ ಕಳರಿ (ಗರಡಿಮನೆ )ಗಳಿದ್ದವು. ಕಳರಿಯನ್ನು ಕಾಪಾಡುವುದು ಪರದೈವವಾದ ಭಗವತಿ. ಮಧ್ಯಕಾಲೀನ ಕೇರಳದ ವೀರರೆಲ್ಲರೂ ಕಳರಿಗಳ ಸೃಷ್ಟಿಗಳೇ. ವಿದ್ಯಾರ್ಥಿಗಳಿಂದ ಭಕ್ತಿ ವಿಶ್ವಾಸಗಳನ್ನು ಗಳಿಸಿದ ಗುರುಗಳು ಕಳರಿಗಳಲ್ಲಿದ್ದರು. ಹುಡುಗರೂ ಹುಡುಗಿಯರೂ ಕಚ್ಚೆ ಬಿಗಿದು ಕಳರಿಗಳಲ್ಲಿ ಅಭ್ಯಾಸ ಮಾಡುತ್ತಿದ್ದರು. ಹುಡುಗರಿಗೆ ಹೇಳಿಕೊಡುತ್ತಿದ್ದ ಶಿಕ್ಷಣ ಅವರ ಆರೋಗ್ಯ ಪೂರ್ಣವಾದ ಅಂಗಸೌಷ್ಠವವನ್ನು ಕಾಪಾಡುವ ಉದ್ದೇಶವನ್ನು ಮಾತ್ರ ಹೊಂದಿತ್ತು. ಪಾರಂಪರಿಕ ಕಳರಿಪಯಟ್ ಶಿಕ್ಷಣವು ಕೇರಳದ ಕ್ರೀಡಾಪಟುಗಳಿಗೆ ಅತ್ಯಂತ ಉಪಯುಕ್ತವಾಗಿದೆ.

ಕಳರಿ ಅಭ್ಯಾಸಕ್ಕೆ ಅನೇಕ ಘಟ್ಟಗಳಿವೆ. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಎರಡು ವಾರಗಳ ಕಾಲ ಮಸಾಜು ನಡೆಯುತ್ತದೆ. ಆ ಬಳಿಕ ಯಾವ ತೆರನ ಆಕ್ರಮಣವನ್ನು ತಡೆಯಲು ಶಕ್ತವಾಗುವಂತೆ ಹನ್ನೆರಡು ವಿಧದ ಆಟಗಳ ಅಭ್ಯಾಸ ಮಾಡಿಸಲಾಗುತ್ತದೆ. ಇವುಗಳಿಂದ ವಿದ್ಯಾರ್ಥಿಗಳ ಶರೀರಕ್ಕೆ ಬೇಕಾದಂತೆ ಬಾಗುವ, ಬಳಕುವ ಸಾಮರ್ಥ್ಯ ಲಭ್ಯವಾಗುತ್ತದೆ. ಈ ಪ್ರಾಥಮಿಕ ಶಿಕ್ಷಣದ ಬಳಿಕ ಯುದ್ಧಾಕ್ರಮಣದಿಂದ ರಕ್ಷಿಸುವ ಕಠಿಣ ತೆರನ ಪಾಠಗಳನ್ನು ಹೇಳಿಕೊಡಲಾಗುತ್ತದೆ. ಕುರುವಡಿ, ಶರೀರವಡಿ, ಕೂಂದಂ, ವೇಲ್, ಖಡ್ಗ ಮೊದಲಾದ ಆಯುಧಗಳನ್ನು ಉಪಯೋಗಿಸುವ ವಿದ್ಯೆಯನ್ನು ಕಲಿಸಲಾಗುತ್ತದೆ. ಐದಡಿ ಉದ್ದವಿರುವ ಒಂದು ತೆರನ ಖಡ್ಗವೇ ಉರುಮಿ. ಇದು ಕಳರಿ ಪಯಟ್‌ನಲ್ಲಿ ಮಾತ್ರವೇ ಉಪಯೋಗಿಸುವ ಆಯುಧ. ಈ ಆಯುಧ ಪ್ರಯೋಗದಲ್ಲಿ ಒದೇನನು ಅಸಾಮಾನ್ಯವೆನಿಸಿದ್ದನು. ಸಮರ್ಥರಾದ ವಿದ್ಯಾರ್ಥಿಗಳಿಗೆ ಮರ್ಮ ವಿದ್ಯೆಗಳನ್ನು ಹೇಳಿಕೊಡಲಾಗುತ್ತದೆ. ಮರ್ಮವನ್ನು ಅರಿತವರು ಬೇಕಾದರೆ ಇದಿರಾಳಿಯನ್ನು ಸ್ಪರ್ಶ ಮಾತ್ರದಿಂದಲೇ ಸಾಯಿಸಬಲ್ಲರು. ಹೀಗಾಗಿ ಅದನ್ನು ಆತ್ಮರಕ್ಷಣೆಗಾಗಿ ಹೋರಾಟದ ಕೊನೆಯ ಹಂತದಲ್ಲಿ ಮಾತ್ರ ಪ್ರಯೋಗಿಸಲಾಗುತ್ತದೆ. ವಾಸ್ತವವಾಗಿ ಕಳರಿಪಯಟ್‌ನ ಮೂಲತತ್ವ ಶ್ರೇಷ್ಠ ಲಕ್ಷ್ಯವೇ ಹೊರತು ವೈಯಕ್ತಿಕ ಹಿತಾಸಕ್ತಿಗಳಲ್ಲ.

ನವೆಂಬರ್-ಡಿಸೆಂಬರ್ ತಿಂಗಳುಗಳಲ್ಲಿ ನಲವತ್ತೊಂದು ದಿವಸಗಳ ಕಾಲ ಕಳರಿಪಯಟ್‌ನ ಬೃಹತ್ ಪ್ರದರ್ಶನ ನಡೆಯುತ್ತದೆ. ಕಳರಿ ವಿದ್ಯಾರ್ಥಿಗಳು ಗುರುವಿಗೆ ಗುರುದಕ್ಷಿಣೆಯನ್ನು ಹಾಗೂ ಸ್ಥಳೀಯ ನಾಯಕರಿಗೆ ಕೊಡುಗೆಗಳನ್ನು ಸಮರ್ಪಿಸುವ ಸಂಪ್ರದಾಯವಿದೆ. ೧೭ನೆಯ ಶತಮಾನದವರೆಗೂ ಕೇರಳದಲ್ಲಿ ಕಳರಿಪಯಟ್‌ನ ಸುವರ್ಣ ಕಾಲವಾಗಿತ್ತು. ಮದ್ದು, ಗುಂಡುಗಳು, ಪಿರಂಗಿಗಳ ಪ್ರಯೋಗ ಆರಂಭವಾದ ಬಳಿಕ ಯುದ್ಧ ರಂಗಗಳಲ್ಲಿ ಕಳರಿಗೆ ಸ್ಥಾನವಿಲ್ಲದಾಯಿತು. ೨೦ನೆಯ ಶತಮಾನದ ಆರಂಭದ ದಶಕಗಳಿಂದ ಕೆಲವು ಆಸಕ್ತ ಗುರುಗಳು ಹಾಗೂ ಶಿಷ್ಯ ವರ್ಗದ ಶ್ರಮದ ಪರಿಣಾಮವಾಗಿ ಮತ್ತೆ ಕಳರಿಪಯಟ್ ಸಾಂಸ್ಕೃತಿಕ ರಂಗದಲ್ಲಿ ಸ್ಥಾನ ಪಡೆದಿದೆ. ಭಾರತದಾದ್ಯಂತ ಕಳರಿ ಸಂಪ್ರದಾಯವನ್ನು ಪ್ರಚಾರ ಮಾಡಿದ ‘ಕೇರಳ ಕಳರಿ ಸಂಘ’ದಂತಹ ಸಂಸ್ಥೆಗಳು ಹೆಸರು ಗಮನಾರ್ಹ. ಹಾಗೆಯೇ ಅನೇಕ ವ್ಯಕ್ತಿಗಳು ಈ ಸಂಪ್ರದಾಯದ ಉಳಿವಿಗಾಗಿ ಶ್ರಮಿಸಿದ್ದಾರೆ.

ಪರಿಚಕಳಿ

ಹತ್ತು ಹನ್ನೆರಡು ಜನರು ಸೇರಿ ಆಡುವ ಯುದ್ಧ ವಿದ್ಯೆಯಿದು. ಗರಡಿಗಳಲ್ಲಿ ಇದಕ್ಕೆ ತರಬೇತಿಗಳನ್ನು ಕೊಡಲಾಗುತ್ತಿತ್ತು. ಸೊಂಟದಲ್ಲಿ ಕಚ್ಚೆ ಬಿಗಿದು, ತಲೆಗೆ ಬಟ್ಟೆ ಬಿಗಿದು, ಕಾಲಿಗೆ ಗೆಜ್ಜೆಕಟ್ಟಿ ಕೈಯಲ್ಲಿ ಕತ್ತಿ ಮತ್ತು ಗುರಾಣಿ ಹಿಡಿದು ಪ್ರದರ್ಶಿಸುವ ಕಲೆಯಿದು. ಕೇರಳಾದ್ಯಂತ ಪ್ರಚಲಿತದಲ್ಲಿರುವ ಈ ಕಲೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳನ್ನು ಕಾಣಬಹುದು. ದಕ್ಷಿಣ ಕೇರಳದಲ್ಲಿ ಪುಲಯರು, ಚೆರುಮರು ಹಾಗೂ ಉತ್ತರ ಕೇರಳದಲ್ಲಿ ಅರಯರು ಮೊದಲಾದ ಜನಸಮುದಾಯಗಳಲ್ಲಿ ಇದು ಪ್ರಚಲಿತದಲ್ಲಿದೆ. ಪಾಲಕ್ವಾಡ್ ಜಿಲ್ಲೆಯಲ್ಲಿ ‘ವಟ್ಟಕಳ’ ಎಂಬ ಹೆಸರಿನಿಂದ ಇದನ್ನು ಕರೆಯುತ್ತಾರೆ. ಮಲಬಾರು ಪ್ರದೇಶಗಳಲ್ಲಿ ಸ್ವಲ್ಪ ಭಿನ್ನವಾದ ರೂಪದಲ್ಲಿರುವ ಕಲೆಗೆ ‘ಪರಿಶಕಳಿ’ ಎಂದು ಕರೆಯಲಾಗುತ್ತದೆ.

ಉತ್ತರ ಕೇರಳದ ಮಾಪಿಳ್ಳೆಯರಲ್ಲಿ ಪ್ರಚಲಿತದಲ್ಲಿದ್ದ ಕಲೆ ಪರಿಶಕಳಿ. ಇದು ಬಹುತೇಕ ಇಂದು ನಾಮಾವಶೇಷವಾಗಿದೆ. ಗರಡಿ ಮನೆಗಳಲ್ಲಿ ಗುರುಗಳಿಂದ ಪರಿಶಕಳಿಯ ಶಿಕ್ಷಣವನ್ನು ಪಡೆಯಲಾಗುತ್ತಿತ್ತು. ಕೆಂಪು ಬಣ್ಣದ ಬಯಟ್‌ಗಳಿಂದ ನಿರ್ಮಿಸಿದ ಗುರಾಣಿ ಹಾಗೂ ಚಿಕ್ಕ ಕೋಲು ಪರಿಶಕಳಿಯಲ್ಲಿ ಉಪಯೋಗಿಸುವ ಆಯುಧಗಳು. ಖಡ್ಗ ಹಾಗೂ ಈಟಿಗಳನ್ನು ಮೇಲಕ್ಕೆಸೆದು ಹಿಡಿಯುವ ಕ್ರಿಯೆಗಳನ್ನು ವಾಳೇರ್, ಕುಂದಮೇರ್ ಮೊದಲಾದ ವಿದ್ಯೆಗಳಲ್ಲಿ ಕಾಣಬಹುದು. ಒಬ್ಬಾತ ಖಡ್ಗವನ್ನು ಎಸೆಯುವುದು ಮತ್ತೊಬ್ಬ ಹಿಡಿಯುವುದು ಹೀಗೆ ಇತ್ತಂಡದವರು ನಡೆಸುವ ಸ್ಪರ್ಧೆಯ ರೀತಿಯಲ್ಲಿಇದು ಏರ್ಪಡುತ್ತದೆ.

ಸಂಗೀತ

ದೇವತೆಗಳನ್ನು ನೃತ್ಯದ ಮೂಲಕ ತೃಪ್ತಿಪಡಿಸುವಂತೆ ಸಂಗೀತದ ಮೂಲಕ ಆರಾಧಿಸುವ  ಪದ್ಧತಿ ಕೇರಳದಲ್ಲಿ ಆಚರಣೆಯಲ್ಲಿತ್ತು. ಸಂಘ ಕಾಲದಲ್ಲಿ ಕವಿಗಳು ರಾಜರನ್ನು ಹೊಗಳುವ ಸಲುವಾಗಿ ಹಾಡುಗಳನ್ನು ರಚಿಸಿ ಹಾಡಿ ಕವಿಗಳಾಗಿದ್ದರು. ಮತ್ತೆ ಕೆಲವರು ಸಂಚಾರಿ ಕವಿಗಳಾಗಿದ್ದರು. ಕೊಳಲು, ಚಂಡೆ ಮೊದಲಾದ ವಾದ್ಯೋಪಕರಣಗಳನ್ನು ಉಪಯೋಗಿಸ ಲಾಗುತ್ತಿತ್ತು. ಕ್ಷುದ್ರ ದೇವತೆಗಳ ಉಚ್ಛಾಟನೆಗಾಗಿ ವೀಣೆ, ಕೊಳಲು ಮೊದಲಾದ ವಾದ್ಯೋಪಕರಣಗಳೊಡನೆ ಸಂಗೀತವನ್ನು ಆಲಾಪಿಸಲಾಗುತ್ತಿತ್ತೆಂದು ‘ಪುರನಾನೂರು’ ತಿಳಿಸುತ್ತದೆ. ಕುಲಶೇಖರ ಸಾಮ್ರಾಜ್ಯದ ಕಾಲದಲ್ಲಿ (ಕ್ರಿ.ಶ. ೮೦೦-೧೧೦೨) ಸಂಗೀತಕ್ಕೆ ಹೆಚ್ಚಿನ ಪ್ರಾಶಸ್ತ್ಯ ಲಭಿಸಿತ್ತು. ಭಕ್ತಿ ಪಂಥದ ಸಂದರ್ಭದಲ್ಲಿ ಭಕ್ತಿ, ಸಾಹಿತ್ಯ, ಹಾಗೂ ಭಜನೆಯ ಹಾಡುಗಳ ರಚನೆಗಳು ಯಥೇಚ್ಛವಾಗಿ ನಡೆದವು. ದೇವಾಲಯಗಳಲ್ಲಿ ಭಕ್ತರ ಭಜನೆಯ ಸಂಗೀತ ಸಾಮಾನ್ಯವಾಗಿತ್ತು. ಆ ಕಾಲಘಟ್ಟದಲ್ಲಿ ಕೂತ್ತು, ಕೂಡಿಯಾಟಂಗಳು ಸಂಗೀತ ಪರಂಪರೆಯನ್ನು ವಿಸ್ತರಿಸಿದವು. ವೆನ್ನಾಡಿನ ರಾಜನಾಗಿದ್ದ ರವಿವರ್ಮ ಕುಲಶೇಖರನ್ (೧೨೯೯-೧೩೧೪) ಸಂಗೀತ ಕಲೆಯಲ್ಲಿ ಪ್ರಾವೀಣ್ಯವನ್ನು ಪಡೆದಿದ್ದನು. ತಿರುವನಂತಪುರಂನ ಶಾಸನ ಒಂದರಲ್ಲಿ ಈತನನ್ನು ಅರುವತ್ತ್ನಾಲ್ಕು ಕಲೆಗಳಲ್ಲಿಯೂ ಪ್ರಸಿದ್ಧನೆಂದು ಹೊಗಳಿದೆ. ಜಯದೇವನ ಗೀತಗೋವಿಂದವನ್ನು ಬಂಗಾಳದಿಂದ ಕೇರಳಕ್ಕೆ ತಂದು ಅದನ್ನು ಆಧರಿಸಿ ದೇವಾಲಯಗಳಲ್ಲಿ ಅಷ್ಟಪದಿ ಹಾಡನ್ನು ಪ್ರಚಾರಕ್ಕೆ ತರಲಾಯಿತು.

೧೭ನೆಯ ಶತಮಾನದಲ್ಲಿ ತಿರುವನಂತಪುರಂನ ಉಮಯಮ್ಮ ರಾಣಿಗೆ ನೆರವಾಗಲು ಬಂದ ಕೋಟ್ಟಯಂ ರಾಜ ಕೇರಳವರ್ಮನು ರಾಮಾಯಣದ ಅನುವಾದದ ಮೂಲಕ ಪ್ರಸಿದ್ಧನಾದವ. ಆತ ಶ್ರೀಪದ್ಮನಾಭಪಾದದಿಂದ ಇಪ್ಪತ್ನಾಲ್ಕು ರಾಗಗಳ ಎಂಟು ಶ್ಲೋಕ ಗಳನ್ನು ಭಗವಂತನ ಸ್ತುತಿಗಾಗಿ ರಚಿಸಿದ. ಮಾರ್ತಾಂಡವರ್ಮನ ಕಾಲ (೧೭೨೯-೧೭೫೮)ದಲ್ಲಿ ರಾಜನ ಆಸ್ಥಾನ ವಿದ್ವಾಂಸನಾಗಿದ್ದ ರಾಮಪುರತ್ತು ವಾರಿಯರ್ ಗೀತಗೋವಿಂದವನ್ನು ಮಲಯಾಳಂಗೆ ಭಾಷಾಂತರಿಸಿದ. ಮೂಲ ಕೃತಿಯ ರಾಗ, ತಾಳಗಳನ್ನು ಹಾಗೆಯೇ ಉಳಿಸಿಕೊಳ್ಳುವುದರೊಂದಿಗೆ ಹೊಸ ರಾಗಗಳನ್ನು ಪರಿಚಯಿಸಿದ. ಉಣ್ಣಾಯಿಯ ‘ನಳಚರಿತಂ’, ‘ಆಟಕತೆ’ ಕೇರಳದ ಸಂಗೀತ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಯಾಗಿದೆ. ಕುಂಜನ್ ನಂಬ್ಯಾರರ ತುಳ್ಳಲ್ ಹಾಡುಗಳು, ಕಥಕಳಿ ಸಾಹಿತ್ಯ ಕೇರಳದ ಸಂಗೀತ ಪರಂಪರೆಯ ಆರಂಭ ಘಟ್ಟಗಳಾಗಿವೆ. ಕೇರಳದ ಸಂಗೀತ ಕ್ಷೇತ್ರದಲ್ಲಿ ಉಜ್ವಲವಾದ ಇನ್ನೊಂದು ಹೆಸರು ಇರಯಿಮ್ಮನ್‌ತಂಬಿಯವರು (೧೭೮೨-೧೮೮೬). ಆತ ಸ್ವಾತಿತಿರುನಾಳನ ಸಮಕಾಲೀನ ವಾಗಿದ್ದ. ಅವನ ಕೀಚಕವಧಂ, ಉತ್ತರ ಸ್ವಯಂವರ, ದಕ್ಷಯಾಗಂ ಎಂಬೀ ಮೂರು ಆಟಕತೆಗಳು ಸುಪ್ರಸಿದ್ಧವಾಗಿವೆ. ಕೀರ್ತನಂ, ವರ್ಣನಂ, ಪದಂ ಮೊದಲಾದ ಸಂಗೀತ ವಿಭಾಗಗಳಿಗೆ ತಂಬಿ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾನೆ.

ಕೇರಳದ ಸಂಗೀತ ಚರಿತ್ರೆಯಲ್ಲಿ ಅಗ್ರಗಣ್ಯನೆನಸಿದವ ಸ್ವಾತಿತಿರುನಾಳ್ (೧೮೨೯-೪೭). ಆತನ ಆಡಳಿತಾವಧಿ ಕೇರಳ ಸಂಗೀತದ ಸುವರ್ಣ ಯುಗವಾಗಿತ್ತು. ಆತ ಸಂಸ್ಕೃತ, ಹಿಂದಿ, ತಮಿಳು, ತೆಲುಗು, ಕನ್ನಡ ಮೊದಲಾದ ಭಾಷೆಗಳಲ್ಲೆಲ್ಲಾ ಒಟ್ಟು ಐದು ನೂರಕ್ಕೂ ಹೆಚ್ಚಿನ ರಚನೆಗಳನ್ನು ಮಾಡಿದ್ದಾನೆ. ಸಂಗೀತದ ಎಲ್ಲಾ ವಿಭಾಗಗಳಲ್ಲಿಯೂ ವಿದ್ವಾಂಸ ನೆನಿಸಿದ್ದ ಸ್ವಾತಿತಿರುನಾಳ್ ಸ್ವರಜತಿ, ವರ್ಣಂ, ಕೀರ್ತನಂ, ಪದಂ, ತಿಲ್ಲಾನ ಮೊದಲಾದವು ಗಳನ್ನೆಲ್ಲಾ ರಚಿಸಿದ. ಭಾರತಾದ್ಯಂತ ಇದ್ದ ಗಾಯಕರನ್ನು ವಾಗ್ಗೇಯಕಾರರನ್ನು ಆತ ತನ್ನ ಆಸ್ಥಾನಕ್ಕೆ ಆಹ್ವಾನಿಸಿದ್ದ. ಅವರಲ್ಲಿ ತಂಜಾವೂರಿನವರಾದ ನಡಿವೇಲು, ಶಿವಾನಂದ, ಚಿನ್ನಯ್ಯ, ಪೊನ್ನಯ್ಯ, ಪಾಲಕ್ಕಾಡ್ ಪರಮೇಶ್ವರ ಭಾಗವತರ್, ಗ್ವಾಲಿಯರ್ ಲಕ್ಷ್ಮಣದಾಸ್, ಲಾಹೋರಿನ ಇಮಾ ಫಕೀರ್, ಔಧಿಯ ಹರಿದಾಸ್ ಗೋಸಾಯಿ, ಷಟ್‌ಕಾಲ ಗೋವಿಂದ ಮಾರಾರ್, ಕೃಷ್ಣ ಮಾರಾರ್ ಮೊದಲಾದವರು ಪ್ರಮುಖರು. ಎರ್ನಾಕುಳಂ ಜಿಲ್ಲೆಯ ರಾಮಲಿಂಗಂ ಎಂಬಲ್ಲಿ ನೆಲೆಸಿದ್ದ ಷಟ್‌ಕಾಲ ಗೋವಿಂದ ಮಾರಾರರು ಗೀತಗೋವಿಂದದ ‘ಚಂದನಾರ್ಚಿತ ನೀಲ ಕಳೇಬರ’ ಎಂಬ ಪಲ್ಲವಿಯನ್ನು ಆರು ಕಾಲಗಳಲ್ಲಿ ರಾಗಮಾಲಿಕೆ ಯಾಗಿ ಹಾಡಿ ಶ್ರೀತ್ಯಾಗರಾಜರ ಪ್ರಶಂಸೆಗೆ ಪಾತ್ರರಾಗಿದ್ದರು. ಆರು ಕಾಲಗಳಲ್ಲಿ ಹಾಡಿದ್ದ ರಿಂದಲೇ ಇವರು ಷಟ್‌ಕಾಲ ಗೋವಿಂದಮಾರಾರ್ ಎಂಬ ವಿಶೇಷಣವನ್ನು ಪಡೆದರು. ತಂಜಾವೂರಿನಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಇದನ್ನು ಹಾಡಿದಾಗ ‘ಇಂತಹ ಮಹಾನುಭಾವರು ಎಷ್ಟು ಜನರಿದ್ದಾರೆ’ ಎಂದು ತ್ಯಾಗರಾಜರು ಉದ್ಗರಿಸಿದರಂತೆ. ಅವರ ಗೌರವಸೂಚಕವಾಗಿ ‘ಎಂದರೋ ಮಹಾನುಭಾವುಲು’ ಎಂದು ಹಾಡಿದರಂತೆ. ಗೋವಿಂದ ಸ್ವಾಮಿ ವರ್ಣಙಳ್ ಎಂದು ಹೆಸರುಳ್ಳ ಕೃತಿಗಳೆಲ್ಲ ಗೋವಿಂದಮಾರಾರದು. ಆದರೆ ಅವುಗಳು ಲಭ್ಯವಿಲ್ಲ. ಮಾರಾರರು ಬಳಸುತ್ತಿದ್ದ ತಂಬೂರಿಯು ವಿಶಿಷ್ಟವಾದುದಾಗಿತ್ತು. ಕರ್ನಾಟಕ ಸಂಗೀತದಲ್ಲಿ ಇವರ ಹೆಸರು ಚಿರಸ್ಥಾಯಿಯಾದುದು (ಅಚ್ಯುತವಾರ್ಯರ್ ಎಸ್., ೨೦೦೨ : ೨೬೩).

ಶಾಸ್ತ್ರೀಯ ಸಂಗೀತದಲ್ಲಷ್ಟೇ ಅಲ್ಲ, ಕೇರಳವು ಜಾನಪದ ಸಂಗೀತ ಕ್ಷೇತ್ರದಲ್ಲಿಯೂ ಶ್ರೀಮಂತವಾಗಿತ್ತು. ಕೇರಳದ ರಾಬಿನ್‌ಹುಡ್ ಎಂದೇ ಗುರುತಿಸಲಾಗುವ ತಚ್ಚೋಳಿ ಒದೇನನ್ ಮೊದಲಾದ ವೀರರನ್ನು ಕುರಿತಾದ ವಡಕ್ಕನ್ ಪಾಟುಗಳಿಗೆ ಜಾನಪದ ಸಂಗೀತ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವಿತ್ತು. ಇದೇ ಮಾದರಿಯಲ್ಲಿ ತೆಕ್ಕನ್ ಪಾಟುಗಳೂ ಇವೆ. ಕುಞಾಲಿ ಮರಕ್ಕಾರ್, ಪಳಶ್ಯಿರಾಜ ಮೊದಲಾದವರ ವೀರಗಾಥೆಗಳನ್ನು ಕುರಿತಾದ ಹಾಡುಗಳು, ಟಿಪ್ಪು ಸುಲ್ತಾನನ ಆಕ್ರಮಣ ಮೊದಲಾದವುಗಳನ್ನು ವರ್ಣಿಸುವ ಜಾನಪದ ಲಾವಣಿಗಳೂ ಇವೆ. ಹೆಚ್ಚಿನವು ಇಂದಿಗೂ ಜನಪದರಲ್ಲಿ ಬಳಕೆಯಲ್ಲಿವೆ. ವಿವಿಧ ವಿಷಯ ಗಳನ್ನು ಕುರಿತಾದ ಮಾಪ್ಪಿಳ್ಳ ಪಾಟ್ಟುಗಳು ವಿಶಿಷ್ಟ ಗಾನಶೈಲಿಯವು. ಮಾಪಿಳ್ಳ ಪಾಟುಗಳು ಅರೆಬಿಕ್-ಮಲಯಾಳಂ ಮಿಶ್ರಿತ ಭಾಷೆಯಲ್ಲಿವೆ. ದೋಣಿ ಹಾಡು (ವಂಚಿಪಾಟ್) ದೋಣಿಗೆ ಹುಟ್ಟು ಹಾಕುವ ಲಯಕ್ಕನುಗುಣವಾಗಿ ರಚನೆಗೊಂಡ ಹಾಡುಗಳು. ಮಧ್ಯ ತಿರುವಿದಾಂಕೂರು ಪ್ರದೇಶದಲ್ಲಿ ಅತ್ಯಧಿಕ ಪ್ರಚಾರದಲ್ಲಿರುವ ಗಾನಶೈಲಿ ದೋಣಿ ಹಾಡು. ಪ್ರಸಿದ್ಧವಾದ ದೋಣಿಯಾಟವೂ ಅಲ್ಲಿಯೇ ನಡೆಯುತ್ತದೆ. ದೋಣಿಯಾಟದಲ್ಲಿ ಉತ್ಸಾಹಭರಿತರಾಗಿ ಹುಟ್ಟು ಹಾಕುವಾಗ ದೋಣಿ ಹಾಡನ್ನು ಹಾಡುತ್ತಾರೆ. ಇವೇ ಅಲ್ಲದೆ ಓಣಂ, ವಿಷು ಮೊದಲಾದ ಆಚರಣೆಗಳ ಸಂದರ್ಭದಲ್ಲಿ ಹಾಗೂ ಬುಡಕಟ್ಟು ಜನರಲ್ಲಿ ಅನೇಕ ರೀತಿಯ ಜಾನಪದ ಹಾಡುಗಳು ಬಳಕೆಯಲ್ಲಿವೆ.

ಕೇರಳದ ಸಂಗೀತವನ್ನು ಕುರಿತಂತೆ ಅನೇಕ ಗ್ರಂಥಗಳು ಪ್ರಕಟವಾಗಿವೆ. ರಾಮಚರಿತಂ, ರಾಮಕಥಾಪಾಟ್ಟ್, ಕೃಷ್ಣಗಾಥ ಮೊದಲಾದ ಕೃತಿಗಳಲ್ಲಿ ಸಂಗೀತದ ಕುರಿತು ಉಲ್ಲೇಖಗಳಿವೆ. ಹದಿನಾಲ್ಕನೆಯ ಶತಮಾನದ ‘ಉಣ್ಣಿನೀಲಿ ಸಂದೇಶ’ ಕಾವ್ಯದಲ್ಲಿ ಗಂಧರ್ವ ಸಂಗೀತದ ಹಾಗೂ ವಾದ್ಯಗಳ ಕುರಿತು ವಿವರಣೆಗಳು ಬರುತ್ತವೆ. ತಿರುವನಂತಪುರಂನ ಓರಿಯಂಟಲ್ ಮ್ಯಾನ್‌ಸ್ಕ್ರಿಪ್ ಲೈಬ್ರರಿಯು ಪ್ರಕಟಿಸಿದ ಸಂಗೀತ ಶಾಸ್ತ್ರಂ, ಸಂಗೀತ ಚೂಡಾಮಣಿ, ಸಂಗೀತ ಮಂಜರಿ, ಸ್ವರತಾಳಾದಿ ಲಕ್ಷಣಂ, ಸಂಗೀತ ವಿಧಿಗಳ್ ಮೊದಲಾದವು ಹೆಸರಿಸಬಹುದಾದ ಇತರೇ ಪ್ರಮುಖ ಗ್ರಂಥಗಳು. ಸಂಗೀತ ಚೂಡಾಮಣಿಯಲ್ಲಿ ತೊಂಬತ್ತು ರಾಗಗಳನ್ನು ನೂರಾ ಒಂದು ತಾಳಗಳನ್ನು ಕುರಿತು ವಿವರಿಸಲಾಗಿದೆ. ಸಂಗೀತ ಕಚೇರಿಯನ್ನು ಕುರಿತ ವಿಚಾರಗಳೂ ಇದರಲ್ಲಿವೆ. ಸಂಗೀತ ಕಲೆ, ಪ್ರಯೋಗ, ಸಿದ್ಧಾಂತ ಮೊದಲಾದವುಗಳಿಗೆ ಸಂಬಂಧಿಸಿದಂತೆ ಕೇರಳದ ಕೊಡುಗೆ ಗಮನಾರ್ಹವಾಗಿದೆ.

ಸರ್ಕಸ್

ಕೇರಳದ ಪ್ರಾತಿನಿಧಿಕವೆನ್ನಬಹುದಾದ ಕಲೆಗಳಲ್ಲಿ ಸರ್ಕಸ್‌ಗೆ ಪ್ರಮುಖ ಸ್ಥಾನವಿದೆ. ಇದು ಕೇರಳದ್ದೇನಲ್ಲ. ಆದರೆ ಭಾರತದ ಸರ್ಕಸ್ ಪರಂಪರೆಗೆ ನಾಂದಿ ಹಾಡಿದುದೇ ಕೇರಳದ ಕಣ್ಣೂರು ಮತ್ತು ತಲಶ್ಶೇರಿಗಳಲ್ಲಿ. ೧೮೮೦ರಲ್ಲಿ ವಿಷ್ಣುಪಂತ್ ಛತ್ರ ಅವರು ‘ನ್ಯೂ ಇಂಡಿಯನ್ ಸರ್ಕಸ್’ ಆರಂಭಿಸುವುದರ ಮೂಲಕ ಭಾರತದಲ್ಲಿ ಸರ್ಕಸ್ ಜನ್ಮ ತಾಳಿತು. ಸರ್ಕಸ್ ಆರಂಭಿಸುವುದ ಮೂಲಕ ೨೦ ನೆಯ ಶತಮಾನದ ಆರಂಭದಲ್ಲಿ ಜನ ಜೀವನದಲ್ಲಿ ಹೊಸ ಚೈತನ್ಯ ಕಾಣಿಸಿಕೊಂಡಿತು. ಸರ್ಕಸ್‌ನ ಆಚಾರ್ಯ ಪುರುಷರೆನಿಸಿದ ಕೀಲೇರಿ ಕುಞಾಕಣ್ಣನ್ ಟೀಚರ್ (೧೮೫೮). ಬಾಲ್ಯದಲ್ಲಿ ಕಳರಿ ಪಯಟ್‌ನಲ್ಲೂ ಮುಷ್ಟಿ ಯುದ್ಧ ದಲ್ಲೂ ಪ್ರಾವೀಣ್ಯ ಪಡೆದಿದ್ದರು. ತಲಶ್ಶೇರಿಯಲ್ಲಿ ನೆಲೆಸಿದ್ದ ಬ್ರಿಟಿಷ್ ಅಧಿಕಾರಿಗಳ ಕ್ರೀಡಾ ಚಟುವಟಿಕೆಗಳನ್ನು ಕಣ್ಣಾರೆ ಕಾಣುವ ಅವಕಾಶ ಕುಞಾಕಣ್ಣನಿಗೆ ಲಭ್ಯವಾಯಿತು. ಕ್ರಮೇಣ ಸರ್ಕಸ್ ವಿದ್ಯೆಯಲ್ಲಿ ಮುಳುಗಿದ ಕುಞಾಕಣ್ಣನ್ ಸರ್ಕಸ್ ಕಲೆಗೆ ಹೊಸ ಜನರನ್ನು ಸಿದ್ಧಗೊಳಿಸಿದ. ಹೊಸ ರೂಪವನ್ನು ನೀಡಿದ. ಗ್ರಾಮೀಣ ಪ್ರದೇಶಗಳಲ್ಲಿನ ಅನಾಥ ಹುಡುಗರನ್ನು ಕರೆತಂದು ಸರ್ಕಸ್ ಕಲೆಯನ್ನು ಕಲಿಸಿಕೊಟ್ಟ. ಭಾರತದ ಎರಡನೆಯ ಹಾಗೂ ಕೇರಳದ ಮೊದಲ ಸರ್ಕಸ್ ಇನ್‌ಸ್ಟಿಟ್ಯೂಟನ್ನು ೧೯೦೧ರಲ್ಲಿ ಆತ ಆರಂಭಿಸಿದ. ಇಲ್ಲಿ ಶಿಕ್ಷಣ ಪಡೆದವರು ಆರಂಭಿಸಿದ ಮೊದಲ ಸರ್ಕಸ್ ಕಂಪನಿಯಾದ ‘ಮಲಬಾರ್ ಸರ್ಕಸ್ ಕಂಪೆನಿ’ ಸರ್ಕಸ್ ಕ್ಷೇತ್ರದಲ್ಲಿ ಹೊಸ ಯುಗವನ್ನೇ ಸೃಷ್ಟಿಸಿತು.

ಸ್ವಾರಸ್ಯಕರವಾದ ಅನೇಕ ಕಸರತ್ತುಗಳು ಮಲಬಾರ್ ಸರ್ಕಸ್ಸಿನಲ್ಲಿದ್ದವು. ಮೊದಲ ಮಲಯಾಳಿ ಸರ್ಕಸ್ ಮಹಿಳೆ ಮಿಸ್ ಯಶೋಧ ಮಲಬಾರ್ ಸರ್ಕಸ್‌ನ ಸದಸ್ಯೆ ಯಾಗಿದ್ದಳು. ‘ಮಲಬಾರ್ ಸಾನ್‌ಡೊ’, ಎಂದೇ ಖ್ಯಾತನಾದ ಪೂವಾಂಡನ್ ಕುಞಾಂಬು ಮಲಬಾರ್ ಸರ್ಕಸಿನಲ್ಲಿ ಪ್ರಖ್ಯಾತ ಕಲಾವಿದನಾಗಿದ್ದ. ಈ ಸರ್ಕಸ್ ಕಂಪೆನಿ ತುಂಬಾ ದಿವಸಗಳ ಕಾಲ ನಡೆದರೂ ಬಳಿಕ ಶಿಥಿಲಗೊಂಡಿತು. ರೇಮಂಡ್ ಸರ್ಕಸ್, ವೈಟ್‌ವೇ ಸರ್ಕಸ್ ಮೊದಲಾದ ಕಂಪೆನಿಗಳು ದೀರ್ಘಕಾಲ ಬಾಳಿದವು. ಇವು ವಿಶ್ವವಿಖ್ಯಾತವಾದ ಸರ್ಕಸ್ ಕಂಪೆನಿಗಳ ಜೊತೆಗೆ ಸ್ಪರ್ಧೆ ನಡೆಸಿ ಪ್ರಶಸ್ತಿಗಳನ್ನು ಪಡೆದವು. ವೈಟ್‌ವೇ ಸರ್ಕಸ್ ಕಂಪೆನಿಯ ಪ್ರಖ್ಯಾತ ಕಲಾವಿದನಾದ ಕಣ್ಣನ್ ರೋಪ್ ಡ್ಯಾನ್ಸ್‌ನಲ್ಲಿ ವಿಜಯಿಯಾದವ. ಆತ ೧೯೨೮ರಲ್ಲಿ ಆ ಕಂಪೆನಿಯನ್ನು ಬಿಟ್ಟು ವಿದೇಶಿ ಕಂಪೆನಿಗಳನ್ನು ಸೇರಿ ಪ್ರದರ್ಶನ ನಡೆಸಿದ. ರೋಪ್ ಡ್ಯಾನ್ಸಿನಲ್ಲಿ ಸೋಮರ್ ಸಾಲ್ಟ್ ತೋರಿಸಿದ್ದರಿಂದ ಹಿಟ್ಲರನು ‘ಜಂಪಿಂಗ್ ಡೆವಿಲ್’ ಎಂದು ಹೆಸರು ನೀಡಿ ಗೌರವಿಸಿದ. ಕಣ್ಣನು ಕರಗತ ಮಾಡಿದ ರೋಪ್ ಡ್ಯಾನ್ಸ್ ಕೇರಳೀಯರ ವಿಶಿಷ್ಟ ಕೊಡುಗೆ. ಇದು ಕುರವರು (ಹಾವಾಡಿಗರು) ಎಂಬ ಬುಡಕಟ್ಟು ಜನರಿಂದ ಕಲಿತ ಕಲೆಯಾಗಿತ್ತು.

ವೈಟ್‌ವೇ ಸರ್ಕಸ್ ಆರಂಭಿಸಿದಾಗ ಕೇರಳದಲ್ಲಿ ಕಮಲಾ ಸರ್ಕಸ್, ದಿ ಗ್ರೆಂಡ್ ಫಯರಿ ಸರ್ಕಸ್, ದಿ ಗ್ರೇಟ್ ಈಸ್ಟರ್ನ್ ಸರ್ಕಸ್ ಮೊದಲಾದ ಹಲವು ಕಂಪೆನಿಗಳು ಆರಂಭವಾದವು. ಬ್ರಾಹ್ಮಣ ಸಮುದಾಯದಿಂದ ಮೊದಲ ಬಾರಿಗೆ ಸರ್ಕಸ್ ಕ್ಷೇತ್ರ ಪ್ರವೇಶಿಸಿದ ವಿ.ಆರ್. ಕೃಷ್ಣಯ್ಯರ್ ಸರ್ಕಸ್ ಅಧ್ಯಾಪಕರೂ ಆಗಿ ಹೆಸರುವಾಸಿಯಾಗಿದ್ದರು. ೧೯೦೪ರ ವೇಳೆಗೆೆ ಇವರು ರಾಮಮೂರ್ತಿ ಎಂಬವರ ಗ್ರ್ಯಾಂಡ್ ಇಂಡಿಯನ್ ಸರ್ಕಸ್‌ಗೆ ಸೇರಿದರು. ಮೂರ್ ಆರಂಭಿಸಿದ ಈ ಸರ್ಕಸ್ ಕಂಪೆನಿಯ ಯಜಮಾನರೂ ಆದರು. ಭಾರತದಲ್ಲಿಯೂ ವಿದೇಶಗಳಲ್ಲಿಯೂ ಕೇರಳ ಸರ್ಕಸ್‌ಗೆ ಕೀರ್ತಿಗಳಿಸಿಕೊಡುವಲ್ಲಿ ಈ ಕಂಪೆನಿಯ ಪಾತ್ರ ಮಹತ್ವದ್ದಾಗಿದೆ. ಭಾರತದಲ್ಲಿರುವ ಸುಮಾರು ಐವತ್ತರಷ್ಟು ಸರ್ಕಸ್ ಕಂಪೆನಿಗಳಲ್ಲಿ ಎರಡು ಮೂರನ್ನು ಹೊರತುಪಡಿಸಿದರೆ ಎಲ್ಲಾ ಕಂಪೆನಿಗಳ ಯಜಮಾನಿಕೆ ಕೇರಳೀಯರದೇ. ಬಹುತೇಕ ಕಲಾವಿದರೂ ಮಲಯಾಳಿಗಳೇ ಎಂಬುದೂ ಗಮನಾರ್ಹ. ಹೀಗೆ ಭಾರತೀಯ ಸರ್ಕಸ್ ಇತಿಹಾಸದಲ್ಲಿ ಕೇರಳದ ಕೊಡುಗೆ ಅವಿಸ್ಮರಣೀಯವಾದುದು.

ಚಲನಚಿತ್ರ

ಭಾರತೀಯ ಚಿತ್ರರಂಗದಲ್ಲಿ ಮಲಯಾಳಂ ಚಿತ್ರಗಳಿಗೆ ವಿಶಿಷ್ಟ ಸ್ಥಾನವಿದೆ. ಕಲಾತ್ಮಕತೆಯ ದೃಷ್ಟಿಯಿಂದ ಬಂಗಾಳಿ ಚಿತ್ರಗಳಿಗೆ ಸರಿಮಿಗಿಲೆನಿಸಿದ ಮಲಯಾಳಂ ಚಿತ್ರಗಳು ಗಮನ ಸೆಳೆದಿವೆ. ತಮಿಳುನಾಡಿನ ಸೇಲಂನಲ್ಲಿ ೧೯೩೮ರಲ್ಲಿ ನಿರ್ಮಿಸಿದ ‘ಬಾಲನ್’ ಮೊದಲ ಮಲಯಾಳಂ ಚಲನಚಿತ್ರ. ಆಲಪ್ಪುೞದ ಉದಯ ಸ್ಟುಡಿಯೋ, ತಿರುವನಂತಪುರಂನ ಮೆರಿಲಾಂಡ್ ಸ್ಟುಡಿಯೋಗಳು ಆರಂಭವಾಗುವುದಕ್ಕೆ ಎಷ್ಟೋ ವರ್ಷ ಮೊದಲೇ ಬಾಲನ್ ಚಲನಚಿತ್ರ ನಿರ್ಮಾಣಗೊಂಡಿದೆ. ಉದಯ ಸ್ಟುಡಿಯೋ ರೂಪು ಪಡೆದುದು ೧೯೪೭ರಲ್ಲಿ. ಸಾಮಾಜಿಕ ವಿಷಯಗಳನ್ನು ಚಲನಚಿತ್ರಗಳಲ್ಲಿ ಆಯ್ದುಕೊಂಡು ಜನ ಸಮುದಾಯಗಳ ಭಾವನೆಗಳನ್ನು ವೈಚಾರಿಕವಾಗಿ ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ವಿವಿಧ ಸಮುದಾಯ ಗಳಿಗೆ ಸೇರಿದ ನಟ ನಟಿಯರು ಎಲ್ಲಾ ಜನ ವಿಭಾಗದ ಪ್ರೀತಿ ಪಾತ್ರರಾಗಿದ್ದಾರೆ. ಕೇಶವದೇವ್, ತಗಳಿ ಶಿವಶಂಕರ ಪಿಳ್ಳೆ, ಎಂ.ಟಿ. ವಾಸುದೇವನ್ ನಾಯರ್, ಜಿ. ವಿವೇಕಾನಂದನ್, ಮಲಯಾಟ್ಟೂರ್ ರಾಮಕೃಷ್ಣನ್ ಮೊದಲಾದ ಪ್ರಸಿದ್ಧ ಕಾದಂಬರಿಕಾರರ ಕೃತಿಗಳು ಚಲನಚಿತ್ರದ ಮೂಲಕ ಜನರ ಶ್ರದ್ಧೆಯನ್ನು ಆಕರ್ಷಿಸಿದೆ. ಕೃಷಿಕರು, ಕಾರ್ಮಿಕರು, ತೋಟಿ ಜನರು, ರಿಕ್ಷಾವಾಲರು, ಅಧ್ಯಾಪಕರು ಮೊದಲಾದ ಜನ ಸಮುದಾಯವನ್ನು ಪ್ರತಿನಿಧಿಸುವ ಉತ್ತಮ ಚಲನಚಿತ್ರಗಳು ಮಲಯಾಳಂನಲ್ಲಿ ತೆರೆ ಕಂಡಿವೆ. ಭಾರತ ಸರಕಾರದಿಂದ ಚಿನ್ನದ ಪದಕ ಪಡೆದ ಚೆಮ್ಮೀನ್, ಸ್ವಯಂವರಂ, ನಿರ್ಮಾಲ್ಯಂ, ಚಿದಂಬರಂ ಮೊದಲಾದ ಮಲಯಾಳಂ ಚಲನಚಿತ್ರಗಳು ರಾಷ್ಟ್ರಮಟ್ಟದಲ್ಲಿ ಕೀರ್ತಿ ತಂದುಕೊಟ್ಟ ಚಿತ್ರಗಳಾಗಿವೆ.

ಕೇರಳೀಯರ ಜೀವನ ವಿಧಾನಗಳನ್ನು, ಸಂಸ್ಕಾರಗಳನ್ನು ಕೇರಳದ ಹೊರಗಡೆಯವರಿಗೆ ತಿಳಿಯಪಡಿಸುವ ಪ್ರಮುಖ ಮಾಧ್ಯಮ ಚಲನಚಿತ್ರ. ಸಾಮಾಜಿಕ ವಿಷಯಗಳಷ್ಟೇ ಅಲ್ಲ ಧಾರ್ಮಿಕ ವಿಷಯಗಳು ಚಲನಚಿತ್ರದಲ್ಲಿ ಜಾಗ ಪಡೆದಿದೆ. ಗುರುವಾಯೂರಪ್ಪನ್, ಚೋಟ್ಟಾನಿಕ್ಕರ ಅಮ್ಮ, ಸ್ವಾಮಿ ಅಯ್ಯಪ್ಪನ್ ಮೊದಲಾದವುಗಳನ್ನು ಇಲ್ಲಿ ಹೆಸರಿಸಬಹುದು. ಜಗದ್ಗುರು ಆದಿಶಂಕರನ್ ಶಂಕರಾಚಾರ್ಯರ ಕತೆಯನ್ನು ಆಧರಿಸಿದೆ. ದೇಶ ವಿದೇಶಗಳಲ್ಲಿ ಭಾರತೀಯ ಧಾರ್ಮಿಕ ತತ್ವಗಳನ್ನು ಪ್ರಚುರ ಪಡಿಸುವಲ್ಲಿ ಈ ಚಲನಚಿತ್ರದ ಸಾಧನೆ ಮಹತ್ವದ್ದಾಗಿದೆ. ಅಡೂರು ಗೋಪಾಲಕೃಷ್ಣನ್, ಜಿ. ಅರವಿಂದನ್ ಮೊದಲಾದ ನಿರ್ದೇಶಕರು ರಾಷ್ಟ್ರಮಟ್ಟದಲ್ಲಿ ಹಾಗೂ ಅಂತರ್‌ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ರಾಜ್ಯ ಮಟ್ಟದಲ್ಲಿ ಚಲನಚಿತ್ರಗಳಿಗೆ  ಪ್ರಶಸ್ತಿಗಳನ್ನು ಏರ್ಪಡಿಸಿ ಪ್ರೋತ್ಸಾಹ ಕೇರಳ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಒಂದು ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೋರೇಷನ್‌ನ್ನು ತಿರುವನಂತಪುರಂನಲ್ಲಿ ಆರಂಭಿಸಿದೆ. ತಿರುವೆಲ್ಲಾದಲ್ಲಿ ಒಂದು ಸ್ಟುಡಿಯೋವನ್ನು ಸಹ ಪ್ರಾರಂಭಿಸಿದೆ.

ಕೇರಳದ ಹೊರಗಿನವರಿಗೆ ಮಲಯಾಳಂ ಸಿನಿಮಾ ಎಂದರೆ ಅಶ್ಲೀಲ ಸಿನಿಮಾಗಳು. ಆದರೆ ಸಿನಿಮಾಗಳು ಹಣ ಮಾಡುವ ಉದ್ದೇಶದಿಂದ ಕೇರಳದ ಹೊರಗಿನವರಿಗಾಗಿ ತಯಾರಿಸಿದವುಗಳು. ಕೇರಳೀಯರು ಕಲಾತ್ಮಕವಾದ ಚಿತ್ರಗಳನ್ನೇ ಹೆಚ್ಚಾಗಿ ನೋಡುತ್ತಾರೆ. ಹೆಚ್ಚು ವಾಸ್ತವಿಕವಾದ ದೃಶ್ಯಗಳುಳ್ಳ ಸಿನಿಮಾಗಳು ಪ್ರೇಕ್ಷಕರನ್ನು ವೈಚಾರಿಕವಾಗಿಯೂ ಹೃದಯ ತಟ್ಟುವಂತೆ ಇಲ್ಲಿಯ ನಿರ್ದೇಶಕರು ಚಿತ್ರವನ್ನು ರೂಪಿಸುತ್ತಾರೆ. ಹಾಸ್ಯ ಮಿಶ್ರಿತವಾದ ವಿನೋದ ಚಿತ್ರಗಳು ಪ್ರೇಕ್ಷಕರ ಭಾವವನ್ನು ಪ್ರಚೋದಿಸುವುದಕ್ಕೆ ಬದಲಾಗಿ ಬುದ್ದಿಯನ್ನು ಸ್ಪರ್ಶಿಸುತ್ತವೆ. ಈ ತೆರನ ಚಿತ್ರಗಳನ್ನೇ ಕೇರಳದ ಪ್ರೇಕ್ಷಕರು ಹೆಚ್ಚಾಗಿ ಬಯಸುತ್ತಾರೆ. ಇದನ್ನರಿತ ಚಿತ್ರ ನಿರ್ಮಾಪಕರು ಉತ್ತಮ ಅಭಿರುಚಿಯ ಪ್ರೇಕ್ಷಕರಿಗಾಗಿ ನಿರ್ಮಿಸಿದ ಚಿತ್ರಗಳು ರಾಷ್ಟ್ರಮಟ್ಟದಲ್ಲಿಯೂ ಗಮನ ಸೆಳೆದಿವೆ. ಈ ಹಿನ್ನೆಲೆಯಲ್ಲಿ ಮಲಯಾಳಂ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಗಮನಾರ್ಹ ಎನಿಸಿವೆ.